ಜಾನಪದ ವಿದ್ವಾಂಸರಾದ ಡಾ. ಗದ್ದಗಿಮಠ ಅವರಿಗೆ ಜಾನಪದ ಸಾಹಿತ್ಯ ಸಂಗ್ರಹಿಸುವ ತೃಷೆ ಅಪಾರವಾಗಿತ್ತು. ಜಾನಪದ ಗೀತೆಗಳನ್ನು ಸಂಗ್ರಹಿಸುವ ವೇಳೆಯಲ್ಲಿ ಸ್ತ್ರೀ ಪುರುಷರ ಜೊತೆಗೆ ತಾವೂ ದನಿಗೂಡಿಸಿ ಹಾಡಿ ಹಾಡುವವರ ಪ್ರೀತಿ ವಿಶ್ವಾಸಗಳನ್ನು ಗಳಿಸುತ್ತಿದ್ದರು. ಕೆಲವು ಸಲ ಹಳ್ಳಿಯ ಹೆಣ್ಣುಮಕ್ಕಳು ಹಾಡು ಹೇಳಲು ನಾಚಿಕೊಂಡು ಸರಿಯಾಗಿ ಹೇಳದೆ ಇರುವುದರಿಂದ ಅಂತಹವರ ಮನೆಯನ್ನು ಗುರುತಿಸಿಕೊಂಡು ನಸುಕಿನಲ್ಲೆದ್ದು ಅವರವರ ಮನೆಗೆ ಹೋಗಿ ಬೆಳಗಿನ ಜಾವದಲ್ಲಿ ಮಹಿಳೆಯರು ಬೀಸುವಾಗ ಕುಟ್ಟುವಾಗ ಸ್ವಯಂ ಸ್ಪೂರ್ತಿಯಿಂದ ಹಾಡುತ್ತಿರುವುದನ್ನು ಕೇಲಿ ಮರೆಯಲ್ಲಿ ನಿಂತುಕೊಂಡು ಉತ್ಕೃಷ್ಟ ಹಾಡುಗಳನ್ನು ಪರಿಪೂರ್ಣವಾಗಿ ಸಂಗ್ರಹಿಸುತ್ತಿದ್ದರು. ನಾಚಿಕೆಯ ಸ್ವಭಾವದ ಕರ್ನಾಟಕ ಸ್ತ್ರೀಯರು ನೇರವಾಗಿ ಹಾಡುಹೇಳಲು ಸಂಕೋಚಪಡುತ್ತಿದ್ದುದರಿಂದ ಗದ್ದಗಿಮಠ ಅವರು ಪಟ್ಟುಬಿಡದೆ ಅಷ್ಟೆ ಕಷ್ಟಪಟ್ಟು ಸಂಗ್ರಹಿಸುವ ಸ್ಥಿತಿ ಎದುರಿಸುತ್ತಿದ್ದರು. ಮಹತ್ವದ ವಿಷಯಗಳನ್ನು ಸದಾ ಗುರುತು ಹಾಕಿಕೊಳ್ಳುವ ವಿಶಿಷ್ಟ ಹವ್ಯಾಸ ಬೆಳೆಸಿಕೊಂಡಿದ್ದರು. ಸಂಗ್ರಹ ಮಾಡಿದ ಸಾಹಿತ್ಯಗಳನ್ನು ಮತ್ತು ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡುವುದರಲ್ಲಿ ಹಾಗೂ ಅವುಗಳನ್ನು ಪರಿಶೀಲಿಸುವ ಕಾರ್ಯದಲ್ಲಿ ಹೆಚ್ಚಿನ ವೇಳೆಯನ್ನು ಕಳೆಯುತಿದ್ದರು. ದುಡಿಮೆಯೇ ದೇವರು ಎಂದು ಭಾವಿಸಿದ ಗದ್ದಗಿಮಠರು ಸರಳತೆ ಸಹೃದಯತೆಗಳಿಂದ ಸರ್ವರನ್ನು ಚುಂಬಕದಂತೆ ತಮ್ಮೆಡೆಗೆ ಆಕರ್ಷಿಸುವಂತಹ ನಡೆ ನುಡಿಯುಳ್ಳವರಾಗಿದ್ದರು.

ಸ್ವಾತಂತ್ಯ್ರೋತ್ತರ ಜಾನಪದ ಸಾಹಿತ್ಯ ಸಂಗ್ರಹವನ್ನು ಪರಿಶೀಲಿಸುವ ಸಂದರ್ಭದಲ್ಲಿ ಪ್ರಮುಖವಾಗಿ ಎದ್ದು ಕಾಣುವ ಎರಡು ಕಣ್ಣುಗಳಂತೆ ಕಂಗೊಳಿಸುವ ವ್ಯಕ್ತಿಗಳೆಂದರೆ ಡಾ. ಬಿ.ಎಸ್‌. ಗದ್ದಗಿಮಠ ಮತ್ತು ಶ್ರೀ ಕ.ರಾ.ಕೃ. ಅವರಾಗಿದ್ದಾರೆ. ಕೃತಿ ಸಮೃದ್ಧಿಯ ದೃಷ್ಟಿಯಿಂದ ಇವರಿಬ್ಬರೂ ಆ ಅವಧಿಯಲ್ಲಿ ಅಗ್ರಗಣ್ಯರಾಗಿದ್ದಾರೆ. ಗದ್ದಗಿಮಠ ಅವರ ಕಾರ್ಯಕ್ಷೇತ್ರ ಉತ್ತರ ಕರ್ನಾಟಕವಾದರೆ ಕರಾಕೃ ಅವರದು ಹಳೆಯ ಮೈಸೂರು.

ಡಾ. ಗದ್ದಗಿಮಠ ಅವರು ಅನೇಕ ಗೀತಸಂಕಲನಗಳನ್ನು ಪ್ರಕಟಿಸಿದ್ದಾರೆ. ತಮ್ಮ ಜಾನಪದ ಕವ್ಯಮಾಲೆಯ ಮುಖಾಂತರ ಪ್ರಕಟಿಸಿದ ಪ್ರಥಮ ಜನಪದ ಗೀತಸಂಗ್ರಹ ನಾಲ್ಕು ನಾಡಪದಗಳು. ಇದು ಅವರ ಮೊದಲ ಕಾವ್ಯ ಪುಷ್ಪವಾಗಿರುತ್ತದೆ. ಈ ಕೃತಿಯು ಉತ್ತಮ ಜನಪದ ಕಥನಗೀತವಾಗಿರುತ್ತದೆ. ಇದು ೧೯೫೨ರಲ್ಲಿ ಪ್ರಕಟವಾಗಿರುತ್ತದೆ. ಇದಕ್ಕಿಂತ ಪೂರ್ವದಲ್ಲಿ ಅಂದರೆ ೧೯೪೩ ರಿಂದ ಬಿ.ಎ. ಪದವಿಯಲ್ಲಿ ತೇರ್ಗಡೆ ಹೊಂದಿದನಂತರ ತಮ್ಮ ೨೨ನೆಯ ವಯಸ್ಸಿನಿಂದಲೇ ಈ ಕ್ಷೇತ್ರದಲ್ಲಿ ಕೃಷಿಗೈಯುತ್ತಿದ್ದರೆಂಬುದು ತಿಳಿದುಬರುತ್ತದೆ. ೧೯೫೦ ಕ್ಕಿಂತ ಮೊದಲೇ ಜಾನಪದ ಅಧ್ಯಯನಕ್ಕೆ ಬಲವಾಗಿ ಅಂಟಿಕೊಂಡು ಅಸಂಖ್ಯಾತ ಜನಪದ ಗೀತೆಗಳನ್ನು ಸಂಗ್ರಹಿಸುವ ವಿಷಯ ತಿಳಿದುಬರುತ್ತದೆ. ಗದ್ದಗಿಮಠ ಅವರು ಬರೆದಿರುವ ಜಾನಪದ ಮಹಾಭಾರತ, ರಾಮಾಯಣ, ಜಾನಪದ ಕೋಶ, ನಾಣ್ಣುಡಿಗಳ ಕೋಶಗಳನ್ನು ಕರ್ನಾಟಕ ವಿಶ್ವವಿದ್ಯಾಲಯದವರು ಹಸ್ತಪ್ರತಿಗಳನ್ನು ಪ್ರಕಟಿಸುವ ಸಲುವಾಗಿ ಪಡೆದುಕೊಂಡಿದ್ದಾರೆ ಎಂಬ ಪ್ರತೀತಿಯೂ ಇದೆ. ಅಲ್ಪ ಆಯುಷ್ಯ ಪಡೆದು ಬಂದಿದ್ದರೂ ಅಮೋಘ ಸೇವೆಗೈದು ಅತ್ಯಮೂಲ್ಯ ಸಾಹಿತ್ಯವನ್ನು ಕನ್ನಡಿಗರಿಗೆ ಕೊಡುಗೆಯಾಗಿ ಕೊಟ್ಟಿರುವರೆಂಬುದಕ್ಕೆ ಗದ್ದಗಿಮಠ ಅವರ ಸಾಗರದಂತಿರುವ ಸಾಹಿತ್ಯವೇ ನಿದಶ್ನವಾಗಿರುತ್ತದೆ.