ಗರ್ಭಾಶಯ ಎಂಬುದು ಸ್ತ್ರೀ ಜನನಾಂಗ ವ್ಯವಸ್ಥೆಯ ಅವಿಭಾಜ್ಯ ಭಾಗ. ಫಲಿತಗೊಂಡ ಅಂಡಾಣು –ಭ್ರೂಣ –ಗರ್ಭಾಶಯಕ್ಕೆ ಬಂದು ಅದರ ಒಳಗೋಡೆಯ ಮೇಲೆ ನೆಲೆ ನಿಲ್ಲುತ್ತದೆ.  ಗರ್ಭಾಶಯವು, ಗರ್ಭಧರಿಸಿದ ಹೆಣ್ಣಿನಲ್ಲಿ, ಸುಮಾರು 7.5ಸೆಂ.ಮೀ. ಉದ್ದವಿರುವ ಪೇರುಹಣ್ಣಿನಾಕಾರದ ಅಂಗ. ಇದು ಮಾಂಸಖಂಡಗಳು, ಲಿಗಮೆಂಟುಗಳು ಮತ್ತು ನಾರುಕಟ್ಟುಗಳ (ಫೈಬರ್‌ಗಳು)ನೆರವಿನಿಂದ ವಸ್ತಿಕುಹರದೊಳಗೆ ಅರ್ಥಾತ್ ಪೆಲ್ವಿಸ್ಸಿನೊಳಗೆ ನಿಲಂಬಿತವಾಗಿರುವ ಭಾಗ. ಗರ್ಭಾಶಯದ ಮೇಲ್ಭಾಗವು ಫೆಲೋಪಿಯನ್ ನಾಳಗಳೊಂದಿಗೆ ಸಂಪರ್ಕದಲ್ಲಿರುತ್ತದೆ. ಅದರ ಕೆಲಭಾಗ ಗ್ರೀವ ಅರ್ಥಾತ್ ಸರ್ವಿಕ್ಸ್ ಬಳಿ (ಗರ್ಭಾಶಯದ ಕಂಠದ ಬಳಿ) ಯೋನಿಯೊಂದಿಗೆ ಜೋಡಣೆಗೊಂಡಿರುತ್ತದೆ. ಫಲೀಕೃತ ಅಂಡಾಣು ಗರ್ಭಾಶಯದೊಳಗೆ ಬಂದು ನೆಲೆ ನಿಂತ ಅನಂತರ ಪ್ರಸವ ಆಗುವವರೆಗೆ ಇಲ್ಲಿಯೇ ಇದ್ದು ಕಾಲಾಂತರದಲ್ಲಿ ಶಿಶುವಾಗಿ ರೂಪುಗೊಳ್ಳುತ್ತದೆ.

ಕೆಲವೂಮ್ಮೆ ಗರ್ಭಾಶಯ ತನ್ನ ಸ್ವಸ್ಥಾನದಿಂದ ಯೋನಿಯ ಕಡೆಗೆ ಜಾರಿ ಸ್ಥಾನಪಲ್ಲಟಗೊಳ್ಳುವುದು ಸಾಧ್ಯ. ಹೀಗಾಗುವುದು ಅಪರೂಪವೇನಲ್ಲ. ಗರ್ಭಾಶಯ ತನ್ನ ಸ್ವಸ್ಥಾನದಿಂದ ಪಲ್ಲಟಗೊಳ್ಳುವ ಈ ಪರಿಸ್ಥಿತಿಯನ್ನು, ಗರ್ಭಾಶಯದ ಹರ್ನಿಯ ಎನ್ನಬಹುದು. ಇದನ್ನೇ ನಾವು ಗರ್ಭಾಶಯದ ಜಾರುವಿಕೆ ಅರ್ಥಾತ್ ಜಾರಿದ ಗರ್ಭಾಶಯ ಎನ್ನುತ್ತೇವೆ. ಇಂಗ್ಲಿಷಿನಲ್ಲಿ ಇದಕ್ಕೆ Uterine prolapseಇಲ್ಲವೇ Prolapsed uterusಎಂದೂ ಕರೆಯುತ್ತಾರೆ. ಕೆಲವೊಮ್ಮೆ ಗರ್ಭಾಶಯ ದೇಹದಿಂದ ಹೊರಕ್ಕೆ ಚಾಚಿಕೊಳ್ಳುವುದೂ ಮತ್ತು ದೇಹದಿಂದ ಹೊರಕ್ಕೆ ಬಂದುಬಿಡುವುದೂ ಸಾಧ್ಯ.

ಗರ್ಭಾಶಯ ಜಾರುವುದಕ್ಕೆ ಕಾರಣಗಳು

ಗರ್ಭಾಶಯ ಜಾರುವುದಕ್ಕೆ ಕಾರಣಗಳೇನು?ಗರ್ಭಾಶಯವನ್ನು ಅದರ ಸ್ವಸ್ಥಾನದಲ್ಲಿ ಹಿಡಿದಿಟ್ಟಿರುವ ಮಾಂಸಖಂಡಗಳು, ಸ್ನಾಯುಗಳು ಮತ್ತು ಲಿಗಮೆಂಟುಗಳು ದುರ್ಬಲಗೊಳ್ಳಬಹುದು ಇಲ್ಲವೇ ಅವು ತಮ್ಮ ತುಯ್ತವನ್ನು ಕಳೆದುಕೊಳ್ಳಬಹುದು. ಹೀಗಾಗುವುದಕ್ಕೆ ಹಲವು ಕಾರಣಗಳು ಇವೆ. ಆ ಕಾರಣಗಳಲ್ಲಿ ಪ್ರಮುಖವಾದುವು ಇವು:

  • ಕಷ್ಟಕರವಾದ ಹೆರಿಗೆಯಿಂದಾಗಿ, ಇಲ್ಲವೇ ಹಲವು ಮಕ್ಕಳನ್ನು ಹಡೆಯುವ ಹೆಣ್ಣುಮಕ್ಕಳಲ್ಲಿ ಮಾಂಸಖಂಡಗಳು ಮತ್ತು ಲಿಗಮೆಂಟುಗಳು ದುರ್ಬಲಗೊಳ್ಳಬಹುದು. ಇದು ಸಾಮಾನ್ಯವಾಗಿ ಯೋನಿದ್ವಾರದ ಮೂಲಕ ಆಗುವ ಹೆರಿಗೆಗಳಲ್ಲಿ ಸಂಭವಿಸುವ ಸಾಧ್ಯತೆ ಹೆಚ್ಚು.
  • ವಯಸ್ಸಾಗುತ್ತಾ ಹೋದಂತೆ ಸಂಬಂಧಪಟ್ಟ ಸ್ನಾಯುಗಳು ಮತ್ತು ಇತರ ಮಾಂಸಖಂಡಗಳು ದುರ್ಬಲಗೊಳ್ಳುವುದು ಸಾಧ್ಯ.
  • ವಯಸ್ಸಾದ ಮಹಿಳೆಯರಲ್ಲಿ ಈಸ್ಟ್ರೊಜನ್ ಹಾರ್ಮೋನಿನ ಉತ್ಪಾದನೆ ಸಹಜವಾಗಿ ಕಡಿಮೆ ಆಗುವುದರಿಂದ ಗರ್ಭಾಶಯವನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಯ ಸಾಮರ್ಥ್ಯ ಕಡಿಮೆ ಆಗಬಹುದು.
  • ಋತುಬಂಧ ಅರ್ಥಾತ್ ಮೆನೊಪಾಸ್ ಸಮಯದಲ್ಲಿ ಗರ್ಭಾಶಯವನ್ನು ಹಿಡಿದಿಟ್ಟುಕೊಳ್ಳುವ ಮಾಂಸಖಂಡಗಳು ದುರ್ಬಲವಾಗುವ ಸಾಧ್ಯತೆ ಇರುತ್ತದೆ.
  • ಅತಿಯಾದ ಬೊಜ್ಜು ಸಹ ಗರ್ಭಾಶಯವನ್ನು ಹಿಡಿದಿಟ್ಟುಕೊಳ್ಳುವ ಮಾಂಸಖಂಡಗಳ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡ ಹಾಕುವುದರಿಂದ ಗರ್ಭಾಶಯ ಜಾರಬಹುದು.
  • ವಸ್ತಿಕುಹರ ಅರ್ಥಾತ್ ಪೆಲ್ವಿಸ್ ಭಾಗದಲ್ಲಿ ಪ್ರಮುಖ ಶಸ್ತ್ರಚಿಕಿತ್ಸೆ ಮಾಡಬೇಕಾದ ಸಂದರ್ಭಗಳು ಇರುತ್ತವೆ. ಶಸ್ತ್ರಚಿಕಿತ್ಸೆಯ ಅನಂತರದಲ್ಲಿ ಗರ್ಭಾಶಯವನ್ನು ಹಿಡಿದಿಡುವ ಸ್ನಾಯು ವ್ಯವಸ್ಥೆಯ ಸಾಮರ್ಥ್ಯ ಕುಂದಬಹುದು.
  • ದೊಡ್ಡ ದೊಡ್ಡ ಫೈಬ್ರಾಯ್ಡಾಗಳು ಇಲ್ಲವೇ ವಸ್ತಿಕುಹರದೊಳಗೆ ಗಂತಿಗಳು ಇರುವ ಮಹಿಳೆಯರಲ್ಲಿ ಗರ್ಭಾಶಯ ಜಾರುವಿಕೆಯ ಸಂಭವ ಹೆಚ್ಚು.
  • ಬೇರೆ ಕಾರಣಗಳೊಂದಿಗೆ, ಅತಿ ತೂಕ, ದೀರ್ಘಕಾಲದವರೆಗೆ ನಿಲ್ಲದ ಕೆಮ್ಮು, ಮಲಬದ್ಧತೆ, ಅತಿಯಾದ ಭಾರ ಎತ್ತುವ ಕೆಲಸೊ–ೊಇವೇ ಮೊದಲಾದ ಕೆಲವು ಪರಿಸ್ಥಿತಿಗಳು ಗರ್ಭಾಶಯದ ಜಾರುವಿಕೆಯ ಅಪಾಯವನ್ನು ಅಧಿಕಗೊಳಿಸುತ್ತವೆ.

ಗರ್ಭಾಶಯ ಜಾರುವಿಕೆಯ ಹಂತಗಳು

ಗರ್ಭಾಶಯ ಎಷ್ಟು ಜಾರಿದೆ, ಎಲ್ಲಿಯವರೆಗೆ ಜಾರಿದೆ ಎಂಬುದನ್ನು ಆಧರಿಸಿ ಗರ್ಭಾಶಯ ಜಾರುವಿಕೆಯಲ್ಲಿ ನಾಲ್ಕು ಹಂತಗಳನ್ನು ಗುರುತಿಸುತ್ತಾರೆ. ಗರ್ಭಕೋಶದ ಕಂಠ (ಸರ್ವಿಕ್ಸ್), ಯೋನಿನಾಳದ ಕಡೆಗೆ ಚಾಚಿಕೊಳ್ಳುವುದು ಮೊದಲನೇ ಹಂತ. ಈ ಚಾಚುವಿಕೆ ಮುಂದುವರೆದು ಗರ್ಭಕೋಶದ ಕಂಠವು ಯೋನಿಯ ಭಾಗದೊಳಕ್ಕೆ ತುಸು ಜಾರುತ್ತದೆ. ಇದು ಎರಡನೇ ಹಂತ. ಗರ್ಭಕೋಶದ ಕಂಠ ಯೋನಿಯಿಂದ ಹೊರಕ್ಕೆ ಚಾಚಿಕೊಳ್ಳುವ ಸಂದರ್ಭವನ್ನು ಮೂರನೇ ಹಂತದ ಜಾರುವಿಕೆ ಎನ್ನುತ್ತಾರೆ. ಜಾರುವಿಕೆಯ ನಾಲ್ಕನೇ ಹಂತದಲ್ಲಿ ಗರ್ಭಾಶಯ ಸಂಪೂರ್ಣವಾಗಿ ಯೋನಿಯಿಂದ ಹೊರಕ್ಕೆ ಬಂದುಬಿಡುತ್ತದೆ. ಈ ಸಂದರ್ಭವನ್ನು ವೈದ್ಯಕೀಯ ಭಾಷೆಯಲ್ಲಿ ಪ್ರೊಸಿಡೆನ್‌ಷಿಯಾ [Procidentia]ಎನ್ನುತ್ತಾರೆ. ಗರ್ಭಾಶಯಕ್ಕೆ ಆಸರೆಯಾಗಿರುವ ಎಲ್ಲ ಸ್ನಾಯುಗಳು ದುರ್ಬಲಗೊಂಡಾಗ ಉದ್ಭವಿಸುವ ಪರಿಸ್ಥಿತಿ ಇದು.

ಜಾರಿದ ಗರ್ಭಾಶಯದ ಲಕ್ಷಣಗಳು

ವಸ್ತಿಕುಹರ (ಪೆಲ್ವಿಸ್)ದಲ್ಲಿ ಏನೋ ತುಂಬಿಕೊಂಡಿದೆ ಇಲ್ಲವೇ ಅಲ್ಲಿ ಒತ್ತಡ ಜಾಸ್ತಿ ಆಗಿದೆ ಎಂದು ಅನಿಸಬಹುದು. ಕೆಳಬೆನ್ನು, ವಸ್ತಿಕುಹರ ಮತ್ತು ಉದರ ಭಾಗದಲ್ಲಿ ನೋವು, ಯೋನಿಯಿಂದ ಏನೋ ಹೊರಕ್ಕೆ ಬರುತ್ತಿದೆ ಎಂಬ ಭಾವನೆ, ಮೂತ್ರ ವಿಸರ್ಜನೆ ಮತ್ತು ಮಲವಿಸರ್ಜನೆಗಳಲ್ಲಿ ತೊಂದರೆಗಳು, ಆಗಾಗ್ಗೆ ಮರುಕಳಿಸುವ ಮೂತ್ರನಾಳದ ಸೋಂಕು, ನಡೆಯುವುದು ಕಷ್ಟಕರವಾಗುವುದು, ಬಹಳ ಕಾಲ ನಿಂತುಕೊಳ್ಳಲು ಆಗದಿರುವುದು, ಮೂತ್ರ ಸೋರುವಿಕೆ, ಅಪಸಾಮಾನ್ಯ ಯೋನಿಸ್ರಾವ –ಇವು ಗರ್ಭಾಶಯ ಜಾರುವಿಕೆಯ ಕೆಲವು ಪ್ರಮುಖ ಲಕ್ಷಣಗಳು.

ಜಾರಿದ ಗರ್ಭಾಶಯಕ್ಕೆ ಚಿಕಿತ್ಸೆ

ಗರ್ಭಾಶಯದ ಜಾರುವಿಕೆಯ ಆರಂಭಿಕ ಹಂತದಲ್ಲಿ ವಸ್ತಿಕುಹರ [ಪೆಲ್ವಿಸ್]ಸ್ನಾಯುಗಳನ್ನು ಸದೃಢಗೊಳಿಸಬಲ್ಲ ಕೆಲವು ವ್ಯಾಯಾಮಗಳನ್ನು ವೈದ್ಯರು ಹೇಳಿಕೊಡುತ್ತಾರೆ. ಈ ವ್ಯಾಯಾಮಕ್ಕೆ ಕೆಗಲ್ ವ್ಯಾಯಾಮಗಳು (Kegal Exercises)ಎನ್ನುತ್ತಾರೆ. ಈ ವ್ಯಾಯಾಮಗಳು ವಸ್ತಿಕುಹರದ ಭಾಗಗಳನ್ನು ಬಿಗಿಹಿಡಿಯುವುದು ಮತ್ತು ಸಡಿಲಗೊಳಿಸುವ ಚಟುವಟಿಕೆಗಳನ್ನು ಒಳಗೊಳ್ಳುತ್ತವೆ.

ಗರ್ಭಾಶಯಕ್ಕೆ ಆಸರೆಯಾಗಿರುವ ಸ್ನಾಯುಗಳ ಶಕ್ತಿಯನ್ನು ಹೆಚ್ಚು ಮಾಡುವುದಕ್ಕಾಗಿ ವೈದ್ಯರು ಕೆಲವೊಮ್ಮೆ ಕೆಲವು ಮುಲಾಮುಗಳನ್ನು ಉಪಯೋಗಿಸುವಂತೆ ಹೇಳುತ್ತಾರೆ. ಈ ಮುಲಾಮುಗಳಲ್ಲಿ ಈಸ್ಟ್ರೊಜನ್ ಹಾರ್ಮೋನು ಇರುತ್ತದೆ. ಈ ರೀತಿಯ ಮುಲಾಮುಗಳು ಸಾಮಾನ್ಯವಾಗಿ ಋತುಬಂಧದ ಅನಂತರದ ದಿನಗಳಲ್ಲಿ ಕೆಲವು ಮಹಿಳೆಯರಿಗೆ ಮಾತ್ರ ಉಪಯುಕ್ತವಾಗಬಲ್ಲವು. ಕೆಲವೊಮ್ಮೆ ನೇರ ಈಸ್ಟ್ರೊಜನ್ ಹಾರ್ಮೋನ್ ಚಿಕಿತ್ಸೆಯ ಸಾಧ್ಯತೆಯನ್ನೂ ವೈದ್ಯರು ಪರಿಶೀಲಿಸುತ್ತಾರೆ.

ಕೆಗಲ್ ವ್ಯಾಯಾಮಗಳು ಮತ್ತು ಮುಲಾಮುಗಳು ಪ್ರಯೋಜನಕ್ಕೆ ಬಾರದಿದ್ದಾಗ, ಗರ್ಭಾಶಯ ಜಾರದಂತೆ ಆಸರೆ ನೀಡುವ ಸಾಧನಗಳನ್ನು ಯೋನಿಯ ಮೂಲಕ ಅಳವಡಿಸಿಕೊಳ್ಳುವುದು ಒಂದು ಪರ್ಯಾಯ ಮಾರ್ಗ. ಪ್ಲಾಸ್ಟಿಕ್, ರಬ್ಬರ್ ಇಲ್ಲವೇ ಲೋಹದಿಂದ ಮಾಡಿರುವ ಮತ್ತು ಸಾಮಾನ್ಯವಾಗಿ ಉಂಗುರಾಕೃತಿಯಲ್ಲಿರುವ ಇಂಥ ಸಾಧನಗಳಿಗೆ ಪೆಸರಿ [Pessary]ಎಂದು ಕರೆಯುತ್ತಾರೆ. ಈ ಸಾಧನಗಳನ್ನು ತಾತ್ಕಾಲಿಕವಾಗಿ ಇಲ್ಲವೇ ಶಾಶ್ವತವಾಗಿ ಯೋನಿನಾಳದಲ್ಲಿ ಕೂರಿಸಿ ಗರ್ಭಾಶಯದ ಜಾರುವಿಕೆಯನ್ನು ತಡೆಗಟ್ಟಬಹುದು. ಈ ಸಾಧನಗಳನ್ನು ಅಳವಡಿಸಿಕೊಂಡವರಲ್ಲಿ ಯೋನಿಯೊಳಗೆ ಕಿರಿಕಿರಿ ಉಂಟಾಗಬಹುದು ಮತ್ತು ದುರ್ವಾಸನೆಯ ದ್ರವದ ಸ್ರವಿಕೆ ಆಗಲೂಬಹುದು. ಹಾಗಿದ್ದಾಗ್ಯೂ ಶಸ್ತ್ರಚಿಕಿತ್ಸೆ ಒಲ್ಲದ ಬಹುಪಾಲು ಮಹಿಳೆಯರಿಗೆ ಈ ವಿಧಾನ ಯುಕ್ತವಾದದ್ದು. ಗರ್ಭಾಶಯದ ಜಾರುವಿಕೆ ಗಂಭೀರ ಸ್ವರೂಪದ್ದಾಗಿದ್ದರೆ, ಪೆಸರಿಯ ಅಳವಡಿಕೆಯಿಂದ ಪ್ರಯೋಜನ ಆಗುವುದಿಲ್ಲ.

ಮೇಲೆ ತಿಳಿಸಿದ ಯಾವುದೂ ಪ್ರಯೋಜನಕ್ಕೆ ಬಾರದಿದ್ದಲ್ಲಿ, ಶಸ್ತ್ರಚಿಕಿತ್ಸೆಯೇ ಪರ್ಯಾಯ. ಈ ವಿಧಾನದಲ್ಲಿ ಜಾರಿದ ಗರ್ಭಾಶಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ಸ್ವಸ್ಥಾನದಲ್ಲಿ ನೆಲೆಗೊಳಿಸುತ್ತಾರೆ. ಜೊತೆಗೆ ಗರ್ಭಾಶಯಕ್ಕೆ ಆಸರೆ ಒದಗಿಸುವ ಸ್ನಾಯುಗಳನ್ನು ರಿಪೇರಿ ಮಾಡುತ್ತಾರೆ. ವೈದ್ಯರು ಈ ರೀತಿಯ ಶಸ್ತ್ರಚಿಕಿತ್ಸೆ ಮಾಡುವುದು ಅಪರೂಪವಾದರೂ ಇದು ಕಾರ್ಯಸಾಧ್ಯವಾದ ಶಸ್ತ್ರಚಿಕಿತ್ಸೆ. ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಾಶಯದ ರಿಪೇರಿಯನ್ನು ಯೋನಿದ್ವಾರದ ಮೂಲಕ, ಉದರದ ಮೂಲಕ ಇಲ್ಲವೇ ಉದರದರ್ಶಕ ಅರ್ಥಾತ್ ಲ್ಯಾಪರೊಸ್ಕೋಪೀಯ ವಿಧಾನದ ಮೂಲಕ ಮಾಡುವುದು ಸಾಧ್ಯ. ಗರ್ಭಾಶಯದ ಜಾರುವಿಕೆ ಗಂಭೀರವಾಗಿದ್ದು ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳು ಫಲ ಕೊಡದಿದ್ದಾಗ, ವೈದ್ಯರು ಗರ್ಭಾಶಯವನ್ನು ನಿವಾರಿಸಿಕೊಳ್ಳುವ ನಿರ್ಣಯ ಕೈಗೊಳ್ಳುವಂತೆ, ಸಂಬಂಧಪಟ್ಟವರ ಮನವೊಲಿಸಿ ಗರ್ಭಾಶಯವನ್ನು ತೆಗೆದುಬಿಡುತ್ತಾರೆ. ಈ ಶಸ್ತ್ರಚಿಕಿತ್ಸೆಗೆ Hysterectomyಎನ್ನುತ್ತಾರೆ. ಈ ಸರ್ಜರಿಯನ್ನು ಸಾಮಾನ್ಯವಾಗಿ ಯೋನಿಯ ಮೂಲಕ ಇಲ್ಲವೇ ಉದರದ ಮೂಲಕ ಮಾಡುತ್ತಾರೆ.

 

ಗರ್ಭಾಶಯವೆಂಬ ಆವಾಸ

ಮಾನವನ ಜನನಪೂರ್ವ ಬದುಕು ತಾಯಿಯ ಗರ್ಭಾಶಯದಲ್ಲಿ. ಚೀನಾದಲ್ಲಿ ಮಗು ಹುಟ್ಟಿದೊಡನೆ ಒಂದು ವರ್ಷವಾಯಿತು ಎನ್ನುತ್ತಾರೆ. ಏಕೆಂದರೆ ಸುಮಾರು 270 ದಿನಗಳ ಕಾಲ ಭ್ರೂಣವು ಬೆಳೆದು, ಶಿಶುವಿನ ರೂಪ ತಳೆದು, ತಾಯಿಯ ಗರ್ಭಾಶಯದಲ್ಲಿ ವಾಸಮಾಡುತ್ತದೆ.

ಗರ್ಭಧಾರಣೆಯಾದ ಸುಮಾರು 7ನೇ ದಿನದಂದು ಫಲಿತ ಅಂಡಾಣು ಗರ್ಭಾಶಯದ ಗೋಡೆಯೊಳಕ್ಕೆ ಇಳಿದಾಗ, ವಿಲ್ಲೈ ಎಂಬ ಬೆರಳಿನಂತಹ ಭಾಗಗಳು ಉಂಟಾಗಿ, ಅದು ಅಲ್ಲಿ ಭದ್ರವಾಗಿ ನೆಲೆಯೂರುವುದಕ್ಕೆ ನೆರವಾಗುತ್ತವೆ. ವಿಲ್ಲೈ ಮುಂದೆ ಜರಾಯುವಾಗಿ ಬೆಳೆದು, ಜನನದ ವರೆಗೆ ಗರ್ಭಾಶಯದಲ್ಲಿ ತಾಯಿ ಮತ್ತು ಮಗುವಿನ ಸಂಬಂಧಕ ಭಾಗವಾಗಿ ಉಳಿಯುತ್ತದೆ.

ನಾಲ್ಕುವಾರಗಳ ವೇಳೆಗೆ ಭ್ರೂಣವು ತನ್ನದೇ ರಕ್ತಸಂಚಾರ ವ್ಯವಸ್ಥೆ ಬೆಳೆಸಿಕೊಳ್ಳುತ್ತದೆ.  ಸುಮಾರು 2 ತಿಂಗಳೊಳಗೆ ಉಸಿರಾಟ ಆರಂಭವಾಗುತ್ತದೆ ಸಂತಾನೋತ್ಪತ್ತಿ ಅಂಗಗಳು ರೂಪುಗೊಳ್ಳುತ್ತವೆ. ಮುಂದೆ ಕೈ, ಪಾದಗಳು, ಕಣ್ಣು, ಕಿವಿಗಳು ಬರುತ್ತವೆ. ಮುಖಕ್ಕೆ ರೂಪ ಬರುತ್ತದೆ. ಶಿಶುವಿನ ರೂಪ ಉಂಟಾಗುತ್ತದೆ. ನಾಲ್ಕನೆಯ ತಿಂಗಳಾದ ಮೇಲೆ ಶಿಶುವಿನ ಗಾತ್ರ ಹೆಚ್ಚುತ್ತಾ ಹೋಗುತ್ತದೆ.

ಹೀಗೆ, ಕೇವಲ ಎರಡು ಪ್ರಜನನ ಜೀವಕೋಶಗಳು ಒಂದುಗೂಡಿ, ಫಲಿತ ಅಂಡಾಣುವಾಗಿ ಆಮೇಲೆ ಸುಮಾರು 2000 ಕೋಟಿ ಕೋಶಗಳಾಗಿ, ಮಾನವ ಶಿಶುವಿನ ರೂಪ ಪಡೆದು ಮಗು ಹುಟ್ಟುತ್ತದೆ. ಇಷ್ಟು ಅಲ್ಪಕಾಲದಲ್ಲಿ, ಇಷ್ಟು ನಾನಾಮುಖ ಬೆಳವಣಿಗೆಯು ಮಾನವ ಜೀವನದ ಇನ್ನಾವ ಘಟ್ಟದಲ್ಲಿಯೂ ಇಲ್ಲ. ಈ ದೃಶ್ಯಾಂತರ ಸರಣಿ ಗರ್ಭಾಶಯದಲ್ಲಿ ನಡೆಯುತ್ತದೆ ಎಂದು ಬೇರೆ ಹೇಳಬೇಕಿಲ್ಲ.