ಅವಳ ಸಿರಿಮುಡಿಯಿಂದ ಕೆಳಗೆ ಉರುಳಿತು ಹೂವು
ಯಾಮಿನಿಯ ಮುಡಿಯಿಂದ ನಕ್ಷತ್ರದಂತೆ !
ಹಿಂದೆ ನಡೆದವ ನಾನು, ಕೈಗೆತ್ತಿಕೊಂಡೆನದ
ಏನು ಸೊಗಸಾಗಿತ್ತು ಮಲ್ಲಿಗೆಯ ಹೂವು !

ಅವಳ ಕೇಶದ ಕಂಪು ಹೂಗಂಪಿನೊಡವೆರೆದು
ಘಮಘಮಿಸುತಿತ್ತದರ ಹೃದಯದಲ್ಲಿ.
ಎಂಥ ಕಲ್ಲೆದೆಯವಳೊ, ಇಂಥ ಹೂವನು ಮರೆತು
ನಡೆದಳಲ್ಲಾ ಅವಳು ಅತಿ ಬಿಂಕದಲ್ಲಿ !

ಇದ ಮುಡಿದ ತರುಣಿಯದೊ ನಡೆಯುವಳು ದೂರದಲಿ
ಹೂವು ಜಾರಿದುದೆಂಬ ಅರಿವಿಲ್ಲದೆ.
ಅಪ್ಸರೆಯ ತೊರೆದೊಂದು ಮರ್ತ್ಯಾಮರ್ತ್ಯ ಶಿಶು-
ವಿನ ತೆರದಿ ಹೂವಿಹುದು ದಿಕ್ಕಿಲ್ಲದೆ !

ಮನೆಯ ತಲುಪಿದ ಮೇಲೆ ಕೊರಗುವಳೆ ಆ ತರುಣಿ
ಹೂಜಾರಿ ಹೋದುದಕೆ ? ನಾನರಿಯೆನು.
ನಾನಿದಕೆ ಮರುಗುವೆನು ; ಯಾವ ವಸ್ತುವೊ ಏನೊ
ಸೆಳೆವುದಚ್ಚರಿಯಲ್ತೆ ನಮ್ಮದೆಯನು !