ಒಂದು ದೇಶ ಬಳಸುವ ಶಕ್ತಿಯ ಪ್ರಮಾಣದ ಮೇಲೆ ಅದರ ಪ್ರಗತಿಯನ್ನು ಅಳೆಯುವ ಅಪಾಯಕಾರಿ ವಾಡಿಕೆ ಇನ್ನೂ ಚಾಲ್ತಿಯಲ್ಲಿದೆ. ಇದೇ ಕಾಲಕ್ಕೆ, ‘ಅಧಿಕ ಶಕ್ತಿ, ಅಧಿಕ ಮಾಲಿನ್ಯ’ ಎಂಬ ಮಾತಿಗೂ ಮಾನ್ಯತೆ ದೊರೆಯುತ್ತಿದೆ. ಏಕೆಂದರೆ, ಶಕ್ತಿಯೇ ಪರಿಸರದ ಮೊದಲ ವೈರಿ. ಈ ದ್ವಂದ್ವದ ಸಂಘರ್ಷದಲ್ಲಿ ಇಂದು ಜಗತ್ತಿನ ‘ಮಾಡರ್ನಿಟಿ’ ನರಳುತ್ತಿದೆ. ಇಂಥ ಸಂದರ್ಭದಲ್ಲಿ ಪರಿಸರಕ್ಕೆ ವೈರಿಯಲ್ಲದ ಅಕ್ಷಯ ಶಕ್ತಿಮೂಲವೊಂದು ಮನುಷ್ಯನ ಕೈಗೆಟುಕಿದರೆ ಈ ಜಗತ್ತಿನ ಮುಖವೇ ಬದಲಾಗಿಬಿಡುತ್ತದೆ; ಸಚ್ಛ – ಸುಂದರ – ಸಮೃದ್ಧ ಜಗತ್ತು ಸಾಕಾರಗೊಳ್ಳುತ್ತದೆ.

ವಿಜ್ಞಾನದಲ್ಲಿ ಅನೇಕ ಸಂಶೋಧನೆಗಳು ಸಾಕ್ಷಾತ್ಕಾರಗೊಳ್ಳುವ ಬಗ್ಗೆ ತಮ್ಮ ವೈಜ್ಞಾನಿಕ ಕಾದಂಬರಿಗಳಲ್ಲಿ ಮುನ್ನುಡಿದಿದ್ದ ಅರ್ಥರ್ ಸಿ. ಕ್ಲರ್ಕ್‌ರ ದೃಢ ಹೇಳಿಕೆಯಂತೆ ಮುಂಬರುವ ಸಹಸ್ರಮಾನದಲ್ಲಿ ಶೀತಲ ಸಮ್ಮಿಳನವು ಜಾಲರಹಿತ ಶಕ್ತಿಯನ್ನು ಸರಬರಾಜು ಮಾಡುವ ಮೂಲಕ ಹೊಸ ಯುಗವೊಂದನ್ನು ತೆರೆಯಲು ಸಜ್ಜಾಗಿದೆ. ಬಹುಶಃ ತಣ್ಣನೆಯ ಸಾದಾ ನೀರಿನಿಂದ ಕೆಲಸ ಮಾಡುವ, ಮೇಜಿನ ಮೇಲೆ ಇಟ್ಟುಕೊಳ್ಳಬಹುದಾದ, ನ್ಯೂಕ್ಲಿಯರ್ ಶಕ್ತಿ ಆಕರಗಳು ಪ್ರತಿ ಮನೆಗೂ ಪರಿಸರ ಸ್ನೇಹಿ ಶಕ್ತಿಯನ್ನು ಒದಗಿಸುತ್ತದೆ.

ಮಾರ್ಚ್ ೨೩, ೧೯೮೯ರಂದು ವಿಜ್ಞಾನ ಪ್ರಪಂಚದಲ್ಲೊಂದು ‘ಶೀತಲ ಬಾಂಬ್’ ಸಿಡಿಯಿತು – ‘ಸೀಸೆಯಲ್ಲಿ ಸಮ್ಮಿಲನ’.

ಸೀಸೆಯಲ್ಲಿ ಸಮ್ಮಿಳನವೇ?’ ವಿಜ್ಞಾನಿಗಳು ಹುಬ್ಬೇರಿಸಿದರು. ‘ಛೆ, ಛೆ, ಸಾಧ್ಯವಿಲ್ಲ’ ಎಂದು ತಲೆ ಕೊಡವಿದರು. ವಿಜ್ಞಾನ ವಲಯದಲ್ಲಿ ಕೊಂಚ ಕಾಲ ಕಾವೆಬ್ಬಿಸಿದ ಈ ಸುದ್ದಿ ಕ್ರಮೇಣ ಶೀತಲ ಪಟ್ಟಿಗೆ ಸೇರಿತು. ‘ಶೀತಲ ಸಮ್ಮಿಲನ’ ೨೦ನೇ ಶತಮಾನದ ಅತ್ಯಂತ ವಿವಾದಾತ್ಮಕ, ಭೌತವಿಜ್ಞಾನದ ಒಪ್ಪಿತ ಮಾದರಿಯ ಮೂಲಕ್ಕೆ ಮರ್ಮಾಘಾತ ನೀಡಿದ ಸಂಶೋಧನೆಯಾಗಿತ್ತು. ಈ ಸಂಶೋಧನೆಯ ಪಿತೃಗಳು ಇಬ್ಬರು ರಸಾಯನಶಾಸ್ತ್ರದ ಪ್ರೊಫೆಸರ್‌ಗಳು: ಮಾರ್ಟಿನ್ ಫ್ಲೀಷ್‌ಮನ್ ಹಾಗೂ ಸ್ಟ್ಯಾನ್ಲಿ ಪಾನ್ಸ್. ಸರಳವಾದ ‘ಬ್ಯಾಟರಿ ಮತ್ತು ಬಾಟಲ್’ಗಳನ್ನು ಉಪಯೋಗಿಸಿ ನ್ಯೂಕ್ಲಿಯರ್ ಸಮ್ಮಿಳನ ಶಕ್ತಿಯನ್ನು ಬಿಡುಗಡೆಗೊಳಿಸುವ ವಿಧಾನವನ್ನು ಕಂಡುಹಿಡಿದಿರುವುದಾಗಿ ಪ್ರಕಟಿಸಿ ಅವರು ಜೇನುಗೂಡಿಗೆ ಕೊಳ್ಳಿ ಇಟ್ಟರು. ವಿಜ್ಞಾನಿಗಳ ಮಿದುಳು ಕೊರೆವಷ್ಟು ಸರಳವಾಗಿದ್ದ ‘ಬಿ ಮತ್ತು ಬಿ’ ಪ್ರಯೋಗದಲ್ಲಿ ಪೆಲೇಡಿಯಮ್ ವಿರಳ ಲೋಹದ ಕ್ಯಾಥೋಡ್ ಇತ್ತು. ಲೀಥಿಯಮ್ ಡ್ಯುಟರಾಕ್ಸೈಡನ್ನು ಕರಗಿಸಿದ ಭಾರಜಲ ವಿದ್ಯುದ್ರಾವಣವಾಗಿತ್ತು. ಈ ವ್ಯವಸ್ಥೆಯಲ್ಲಿ ವಿದ್ಯುದ್ವಿಭಜನೆಯಾದಾಗ ಡ್ಯುಟೀರಿಯಮ್ ಪರಮಾಣುಗಳ ನಡುವೆ ಸಮ್ಮಿಳನ ಸಾಧಿತವಾಗುತ್ತದೆ ಮತ್ತು ಇದರಿಂದ ಬಿಡುಗಡೆಯಾದ ಶಕ್ತಿಯನ್ನು ‘ಅಧಿಕ ಉಷ್ಣತೆ’ಯಾಗಿ ನಾವು ಅಳೆದಿದ್ದೇವೆ ಎಂದು ಫ್ಲೀಷ್‌ಮನ್ ಮತ್ತು ಪಾನ್ಸ್ ಹೇಳಿಕೊಂಡಿದ್ದರು. ಈ ಕ್ರಿಯೆ ನಡೆಯುವುದು ಪ್ರಯೋಗಾಲಯದ ಸಾಮಾನ್ಯ ಉಷ್ಣತೆಯಲ್ಲಾದ್ದರಿಂದ ಇದನ್ನು ‘ಶೀತಲ ಸಮ್ಮಿಳನ’ ಎಂದು ಕರೆಯಲಾಯಿತು. ಇದು ನಿಜವೇ ಆಗಿದ್ದಲ್ಲಿ ಮನುಕುಲಕ್ಕೆ ಮಿತಿಯಿಲ್ಲದ ಶಕ್ತಿ ಸರಬರಾಜಿನ ಹೊಸದೊಂದು ಮಾರ್ಗ ತೆರೆದುಕೊಳ್ಳುತ್ತಿತ್ತು. ಏಕೆಂದರೆ ನಮ್ಮ ನದಿ ಮತ್ತು ಸಾಗರಗಳಲ್ಲಿ ಡ್ಯುಟೀರಿಯಮ್ ಯಥೇಚ್ಛವಾಗಿರುತ್ತದೆ.

ಯಾವುದೇ ಪರಮಾಣುವಿನ ಬೀಜದಲ್ಲಿ ನಿವ್ವಳ ಧನಾವೇಶವಿರುತ್ತದೆ. ಧನಾವೇಶವುಳ್ಳ ಎರಡು ಬೀಜಗಳ ನಡುವೆ ವಿಕರ್ಷಣ ಬಲವಿರುತ್ತದೆ. ಈ ವಿಕರ್ಷಣ ಬಲವನ್ನು ಮೀರಿ ಎರಡು ಪರಮಾಣುಗಳನ್ನು ಬೆಸೆಯಲು ಅಗಾಧವಾದ ಶಕ್ತಿ ಬೇಕಾಗುತ್ತದೆ. ಇಂಥ ಶಕ್ತಿ ಸೂರ್ಯಗರ್ಭದಲ್ಲಿದೆ. ಸೂರ್ಯಗರ್ಭದ ಅತ್ಯಧಿಕ ಉಷ್ಣತೆ (ಸುಮಾರು ೨೦ ದಶಲಕ್ಷ ಡಿಗ್ರಿ ಸೆಲ್ಸಿಯಸ್) ಯಲ್ಲಿ ಎರಡು ಹಗುರ ಪರಮಾಣುಗಳು ಸಮ್ಮಿಳನಗೊಂಡು ಶಕ್ತಿ ಬಿಡುಗಡೆಯಾಗುತ್ತದೆ. ಇದನ್ನು ಉಷ್ಣಬೈಜಿಕಕ್ರಿಯೆ ಎಂದೂ ಕರೆಯತ್ತಾರೆ. ಇದೇ ಸೂರ್ಯನ ಅಪಾರವಾದ ಮತ್ತು ನಿರಂತರವಾದ ಶಕ್ತಿಯ ಮೂಲ ಎಂಬ ಸತ್ಯ ೨೦ರ ದಶಕದಲ್ಲಿ ಗೊತ್ತಾದ ದಿನದಿಂದ ಅಂಥದೇ ಪ್ರಕ್ರಿಯೆಯನ್ನು ಪ್ರಯೋಗಾಲಯದಲ್ಲಿ ನಕಲು ಮಾಡಲು ವಿಜ್ಞಾನಿಗಳು ಶ್ರವಿಸುತ್ತಿದ್ದಾರೆ. ಅತ್ಯಧಿಕ ಉಷ್ಣತೆಯನ್ನು ತಾಳಿಕೊಳ್ಳುವ ಕುಲುಮೆಗಳು ಇಲ್ಲದ್ದರಿಂದ ‘ಕಾಂತೀಯ ಸೀಸೆ’ಗಳನ್ನು ಉಪಯೋಗಿಸಿ ಬಿಸಿ ಹೈಡ್ರೋಜನ್ ಪ್ಲಾಸ್ಮ (ಡ್ಯುಟೀರಿಯಮ್ ಟ್ರೈಟೀಯಮ್ ಮಿಶ್ರಣ. ಇವೆರಡೂ ಹೈಡ್ರೋಜನ್ ಸಮಸ್ಥಾನಿಗಳು) ವನ್ನು ‘ಬಂಧಿಸು’ವ ಜಾಣ ಉಪಾಯವನ್ನು ರೂಪಿಸುವ ಯತ್ನ ವಿಜ್ಞಾನಿಗಳ ಸಮೂಹದಲ್ಲಿ ನಡೆಯುತ್ತಿದೆ. ‘ಸಮ್ಮಿಳನವನ್ನು ಪಳಗಿಸುವ’ ಸಂಶೋಧನೆಗಳು ಈವರೆಗೆ ಬಿಲಿಯಾಂತರ ಡಾಲರ್‌ಗಳನ್ನು ನುಂಗಿವೆ. ಇದು ವಿಜ್ಞಾನಿಗಳ ಪಾಲಿಗೆ ಇನ್ನೂ ದುಸ್ಸಾಧ್ಯವಾದ ಕೆಲಸವೆಂಬಂತೆ ಅವರನ್ನು ಅಣಕಿಸುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ ಫ್ಲೀಷ್‌ಮನ್ ಮತ್ತು ಪಾನ್ಸ್ ‘ಶೀತಲ ಸಮ್ಮಿಳನ”ವನ್ನು ಸ್ಪೋಟಿಸಿದ್ದು ವಿಜ್ಞಾನಿಗಳಿಗೆ ಆಘಾತವನ್ನುಂಟುಮಾಡಿತು. ಅದರಲ್ಲೂ ಈ ಕ್ಷೇತ್ರ ಪೂರ್ಣವಾಗಿ ತಮಗಷ್ಟೆ ಮೀಸಲಾಗಿದ್ದು ಎಂದು ಭಾವಿಸಿದ್ದ ಭೌತವಿಜ್ಞಾನಿಗಳಿಗೆ ‘ಬರಿ ರಸಾಯನಶಾಸ್ತ್ರ’ದ ಇಬ್ಬರು ವ್ಯಕ್ತಿಗಳು ಪರಿಹಾರ ಸೂಚಿಸಿದ್ದು ಪಥ್ಯವಾಗಲಿಲ್ಲ.

ಸಾಮಾನ್ಯ ಉಷ್ಣತೆಯಲ್ಲಿ ಸಮ್ಮಿಳನ ಅಸಾಧ್ಯ. ಒಂದೊಮ್ಮೆ ರಸಾಯನಶಾಸ್ತ್ರಜ್ಞರ ಕೋಶದಲ್ಲಿ ಅವರು ವರದಿ ಮಾಡಿದ್ದಷ್ಟು ‘ಅಧಿಕ ಶಾಖ’ವು ಡ್ಯುಟೀರಿಯಮ್ ಪರಮಾಣುಗಳ ಸಮ್ಮಿಳನದಿಂದಲೇ ಬಿಡುಗಡೆಯಾಗಿತ್ತು ಎಂದು ಭಾವಿಸಿದರೆ ಅಲ್ಲಿ ಆ ಇಬ್ಬರು ರಾಸಾಯನಶಾಸ್ತ್ರಜ್ಞರನ್ನೂ ಕೊಲ್ಲುವಷ್ಟು ಅತ್ಯಧಿಕ ಸಂಖ್ಯೆಯ ನ್ಯೂಟ್ರಾನುಗಳು ಉತ್ಸರ್ಜನೆಗೊಳ್ಳುತ್ತಿದ್ದವು. ಆದ್ದರಿಂದ ರಸಾಯನಶಾಸ್ತ್ರಜ್ಞರು ತಾವು ಅಳೆದೆವೆಂದು ಹೇಳುತ್ತಿದ್ದ ‘ಅಧಿಕ ಶಾಖ’ವು ದೋಷಯುಕ್ತ ಪ್ರಯೋಗದ ಪರಿಣಾಮವಾಗಿದೆ ಎಂದು ಭೌತವಿಜ್ಞಾನಿಗಳು ಸಾರಿದರು.

ಶೀತಲ ಸಮ್ಮಿಳನದ ಕಥೆ ಮುಗಿದಿದೆ ಎಂದು ಭಾವಿಸಿದ್ದ ಭೌತವಿಜ್ಞಾನಿಗಳ ಬಗಲಲ್ಲೇ ಅದು ಇನ್ನೂ ಜೀವಂತ ಕುಳಿತಿತ್ತು. ಫ್ಲೀಷ್‌ಮನ್ ಮತ್ತು ಪಾನ್ಸ್‌ರ ಕ್ಲೈಮನ್ನು ಪರಿಶೀಲಿಸಲು ಕೈಹಾಕಿದ್ದ ನೂರಾರು ವಿಜ್ಞಾನಿಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ರಸಾಯನಶಾಸ್ತ್ರಜ್ಞರ ಬೆಂಬೆಲಕ್ಕೆ ನಿಂತರು. ಸ್ಪಷ್ಟವಾಗಿ ಅದು ಪ್ರಪಂಚದ ವಿಜ್ಞಾನಿಗಳನ್ನು ‘ನಂಬುವವರು’ ಮತ್ತು ‘ನಂಬದಿರುವವರು’ ಎಂದು ಎರಡು ಗುಂಪುಗಳಾಗಿ ಒಡೆಯಿತು. ಅಮೆರಿಕ ಸರ್ಕಾರ ಈ ವಿವಾದವನ್ನು ಬಗೆಹರಿಸಲು ಮಧ್ಯೆ ಪ್ರವೇಶಿಸಬೇಕಾಯಿತು. ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಎನರ್ಜಿ (ಡಿಓಇ) ಪ್ರಸಿದ್ಧ ವಿಜ್ಞಾನಿಗಳ ಒಂದು ಸಮಿತಿ ರಚಿಸಿತು. ಆಗ್ಗೆ ಲಭ್ಯವಿದ್ದ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಸಮಿತಿ, ರಸಾಯನಶಾಸ್ತ್ರಜ್ಞರ ಕ್ಲೈಮನ್ನು ಬೆಂಬಲಿಸುವ ಸಾಕ್ಷ್ಯಾಧಾರಗಳು ಯಾವುವೂ ಇಲ್ಲ ಎಂದು ವರದಿ ಮಾಡಿತು.

ಇಷ್ಟಾಗಿ, ತಮ್ಮದೇ ಪ್ರಯೋಗ ಫಲಿತಾಂಶಗಳ ಮೂಲಕ ಶೀತಲ ಸಮ್ಮಿಳನದ ಸಾಧ್ಯತೆಯಲ್ಲಿ ನಂಬಿಕೆ ಬೆಳೆಸಿಕೊಂಡಿದ್ದ ಕೆಲವೇ ಮಂದಿ ವಿಜ್ಞಾನಿಗಳು ಅಧಿಕಾರಶಾಹಿ ತೀರ್ಮಾನಕ್ಕೆ ವಿರುದ್ಧವಾಗಿ ತಮ್ಮ ಸಂಶೋಧನೆಗಳನ್ನು ಮುಂದುವರಿಸಿ ಈ ಕ್ಷೇತ್ರವನ್ನು ಜೀವಂತವಾಗಿಟ್ಟರು. ಈವರೆಗೆ ಶೀತಲ ಸಮ್ಮಿಳನ ಕುರಿತು ಏಳು ಅಂತಾರಾಷ್ಟ್ರೀಯ ಸಮ್ಮೇಳನಗಳು ನಡೆದಿವೆ. ವಿವಾದದ ಎರಡೂ ಮುಖಗಳನ್ನು ಪರಿಚಯಿಸುವ ಕನಿಷ್ಠ ಹತ್ತು ಪುಸ್ತಕಗಳು ಪ್ರಕಟವಾಗಿವೆ. ಈ ಕ್ಷೇತ್ರದ ಬೆಳವಣಿಗೆಗೆ ಸಂಬಂಧಿಸಿದ ವಿಚಾರಗಳನ್ನು ಪ್ರಸಾರಮಾಡಲೆಂದೇ ಮೀಸಲಾದ ನಾಲ್ಕು ನಿಯತಕಾಲಿಕೆಗಳಿವೆ. ಇವುಗಳಲ್ಲಿ ಡಾ|| ಯೂಜಿನ್ ಮಲ್ಲೊ ಸಂಪಾದಿಸಿ ಪ್ರಕಟಿಸುತ್ತಿರುವ ‘ಇನ್‌ಫೈನೈಟ್ ಎನರ್ಜಿ’ ಅತಿ ಹೆಚ್ಚು ಪ್ರಸಾರ ಹೊಂದಿದೆ.

ಪ್ರೊ | ಪೀಟರ್ ಹೆಗಲ್‌ಸ್ಟೀನ್ ಎಂಐಟಿಯಲ್ಲಿ ಸೈದ್ಧಾಂತಿಕ ಭೌತವಿಜ್ಞಾನಿಯಾಗಿದ್ದರು. ಅವರು ಸಾಮಾನ್ಯ ಉಷ್ಣತೆಯಲ್ಲಿ ಬೈಜಿಕ ಕ್ರಿಯೆ ಘಟಿಸುವುದನ್ನು ಕುರಿತು ಸಂಭಾವ್ಯ ವಿವರಣೆಯನ್ನು ಪ್ರಕಟಿಸಲು ಪ್ರಾರಂಭಿಸಿದರು. ಕೂಡಲೇ ಎಂಐಟಿಯಿಂದ ಬೆದರಿಕೆ ಬಂದಿತು: ಶೀತಲ ಸಮ್ಮಿಳನದಲ್ಲಿ ಸಂಶೋಧನೆಯನ್ನು ಮುಂದುವರಿಸಿದ್ದೇ ಆದರೆ ನಿಮ್ಮ ಸೇವೆಯನ್ನು ಮೊಟಕುಗೊಳಿಸಲಾಗುವುದು.

ಈ ಮಧ್ಯೆ, ಅಮೆರಿಕದ ಡಾ| ರಾನ್‌ಡೆಲ್ ಮಿಲ್ ಈವರೆಗೆ ಗೊತ್ತಿರದ ಹೊಸ ಪ್ರಕ್ರಿಯೆಯೊಂದನ್ನು ಕಂಡುಹಿಡಿದಿರುವುದಾಗಿ ವರದಿ ಮಾಡಿದ್ದಾರೆ. ‘ಬ್ಲಾಕ್‌ಲೈಟ್ ಪ್ರೋಸೆಸ್’ ಎಂಬ ಹೆಸರಿನಲ್ಲಿ ಪೇಟೆಂಟನ್ನು ಪಡೆದಿರುವ ಅವರು ಈ ಹೊಸ ಪ್ರಕ್ರಿಯೆಯನ್ನು ಆಧರಿಸಿ ಕೇವಲ ವಿದ್ಯುತ್ ಉತ್ಪಾದನೆಯನ್ನಷ್ಟೇ ಅಲ್ಲದೆ ಅಧಿಕ ದಕ್ಷತೆಯುಳ್ಳ ಆಟೋಮೊಬೈಲ್ ಬ್ಯಾಟರಿಗಳನ್ನು ತಯಾರಿಸುವ ಗುರಿಯನ್ನು ಹೊಂದಿದ್ದಾರೆ. ಇದಕ್ಕೆ ಅವರು ಈಗಾಗಲೇ ಒಂದು ಕಂಪನಿಯನ್ನು ಸ್ಥಾಪಿಸಿ ನ್ಯೂಜೆರ್ಸಿಯ ಬಳಿ ೧೧ ಎಕರೆಯಷ್ಟು ವಿಶಾಲವಾದ ಕ್ಯಾಂಪಸ್ಸನ್ನು ಸಜ್ಜುಗೊಳಿಸಿದ್ದಾರೆ. ಮಿಲ್‌ರ ಪ್ರಕಾರ ಅವರ ಪ್ರಕ್ರಿಯೆಯಲ್ಲಿ ಒಂದು ಲೀಟರ್ ಗ್ಯಾಸೊಲಿನ್ ಉತ್ಪಾದಿಸುವುದಕ್ಕಿಂತ ಒಂದು ನೂರು ಪಟ್ಟು ಹೆಚ್ಚು ಶಕ್ತಿಯನ್ನು ಒಂದು ಲೀಟರ್ ನೀರಿನಿಂದ ಉತ್ಪಾದಿಸಬಹುದು!

ಶೀತಲ ಸಮ್ಮಿಳನದ ಯಶಸ್ಸು ಮನುಕುಲದ ಸೇವೆಗೆ ಸಜ್ಜಾಗುವುದು ಯಾವಾಗ? ಯಾರೂ ಖಚಿತವಾಗಿ ಹೇಳುವ ಸ್ಥಿತಿಯಲ್ಲಿಲ್ಲ. ಆರ್ಥರ್ ಸಿ. ಕ್ಲರ್ಕ್ ಕೂಡ ಶೀತಲ ಸಮ್ಮಿಳನ ‘ಸಹಸ್ರಮಾನ’ ದಲ್ಲಿ ಯಾವಾಗಲಾದರೂ ಆಗಬಹುದು ಎಂದಿದ್ದಾರೆ. ಸಹಸ್ರಮಾನ ಬಹುದೀರ್ಘ ಕಾಲ…ಅಲ್ಲಿಯವರೆಗೆ ಪಳೆಯುಳಿಕೆ ಇಂಧನಗಳು ಕಾಯುವುದಿಲ್ಲ. ಇಲ್ಲಿಯೇ ವಿಜ್ಞಾನ ಶೋಧದ ‘ಅನಿಶ್ಚಿತತೆ’ ಪ್ರಾಮುಖ್ಯವನ್ನು ಪಡೆಯುತ್ತದೆ; ಮತ್ತು, ಇದು ವಿಜ್ಞಾನದ ಮಿತಿ ಮತ್ತು ದೌರ್ಬಲ್ಯವಾಗಿಯೂ ಕಾಣಿಸಿಕೊಂಡು ವಿಜ್ಞಾನ ತಾನು ಹುಟ್ಟು ಹಾಕಿದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಹಿಡಿಯುವ ಶಕ್ತಿ ಪಡೆದಿದೆ ಎಂಬ ಅಹಂಕಾರವನ್ನು ಕಿವುಚಿ ಹಾಕುತ್ತದೆ. ವಿಜ್ಞಾನ ಸರ್ವಶಕ್ತ ಅಲ್ಲ… ಆದ್ದರಿಂದ, ಈ ಜಗತ್ತನ್ನು ಒಂದಿಷ್ಟು ಸಹ್ಯಗೊಳಿಸಲು ಮತ್ತು ಒಂದಿಷ್ಟು ಹೆಚ್ಚು ಕಾಲ ನಡೆಸಿಕೊಂಡು ಹೋಗಲು ಸಧದ ಸಾಂಪ್ರದಾಯಿಕ ಶಕ್ತಿಮೂಲಗಳ ಬಳಕೆಯಲ್ಲಿ ನಾವು ಸಂಯಮ ತೋರಬೇಕಾದ್ದು ಅತ್ಯಂತ ಆವಶ್ಯಕ.