ಗದಗ ಜಿಲ್ಲೆ ರೂಪುಗೊಂಡು ಎರಡು ವರ್ಷಗಳು ಮುಗಿಯುತ್ತಾ ಬಂದಿದೆ. ಜಿಲ್ಲೆಯ ಜನರ ಬದುಕು ತೀವ್ರ ಬದಲಾದಂತೆ ಕಾಣಲಿಲ್ಲ. ನಿಜವಾಗಿ ಹೇಳಬೇಕೆಂದರೆ ಕಳೆದ ೪೦ – ೫೦ ವರ್ಷಗಳಿಂದ ಗದಗ ಜಿಲ್ಲೆಯಲ್ಲಿ ಜನರ ಬದುಕು ಯಥಾಸ್ಥಿತಿಯಲ್ಲಿ ಮುಂದುವರಿದಂತೆ ಕಾಣುತ್ತದೆ. ಬದಲಾವಣೆಗಳು ಆಗಿಲ್ಲವೆಂದು ಹೇಳಲು ಸಾಧ್ಯವಿಲ್ಲ. ಆದರೆ ಜಿಲ್ಲೆಯ ಆರ್ಥಿಕತೆಯ ಮೂಲ ಆಕೃತಿ ತೀವ್ರ ಬದಲಾಗಿಲ್ಲ. ಕೃಷಿಯನ್ನು ಅವಲಂಬಿಸಿಕೊಂಡಿರುವ ಜನರ ಪ್ರಮಾಣ ಕಳೆದ ೪ – ೫ ದಶಕಗಳಲ್ಲಿ ಬದಲಾಗಿಲ್ಲ. ಅದು ಶೇ.೫೦ರ ಆಸುಪಾಸುವಿನಲ್ಲಿದೆ. ಇದೊಂದು ಕೃಷಿ ಪ್ರಧಾನ ಜಿಲ್ಲೆ. ಜಿಲ್ಲೆಯ ನರಗುಂದ ತಾಲೂಕನ್ನು ಬಿಟ್ಟರೆ ಉಳಿದ ನಾಲ್ಕು ತಾಲೂಕುಗಳು ಮಳೆಯನ್ನು ಆಶ್ರಯಿಸಿದ ಕೃಷಿಯನ್ನು ಹೊಂದಿವೆ. ಈ ಜಿಲ್ಲೆಯ ರೈತಾಪಿ ಜನರ ಬದುಕು ಮಳೆ ಬಂದರೆ ಹಸನಾಗಿರುತ್ತದೆ, ಮಳೆಯಾಗದಿದ್ದರೆ ಬರಡಾಗುತ್ತದೆ. ಕೃಷಿಯೇತರ ಚಟು ವಟಿಕೆಗಳ ಪ್ರಮಾಣ ಸಾಧಾರಣವಾಗಿದೆ. ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ (ಶೇ.೫೫.೮೮) ಸಾಧಾರಣವಾಗಿದೆ. ನಾಲ್ಕಾರು ನೂಲು ಮತ್ತು ಬಟ್ಟೆ ಮಾಡುವ ಗಿರಣಿಗಳನ್ನು ಬಿಟ್ಟರೆ ಬೃಹತ್ ಉದ್ದಿಮೆಗಳು ಜಿಲ್ಲೆಯಲ್ಲಿ ಇಲ್ಲ. ತೃತೀಯ ವಲಯವು ವೇಗವಾಗಿ ಬೆಳೆಯುತ್ತಿದೆ.

ಈ ಜಿಲ್ಲೆಯ ಆರ್ಥಿಕ ರಚನೆ ವರಮಾನದ ತ್ರಿವಲಯವಾರು ಸ್ವರೂಪ ತೀವ್ರ ಬದಲಾಗುತ್ತಿದೆ. ಆದರೆ ಆರ್ಥಿಕ ರಚನೆಯ ದುಡಿಮೆಗಾರ ವರ್ಗದ ತ್ರಿವಲಯವಾರು ಸ್ವರೂಪ ಬದಲಾಗುತ್ತಿಲ್ಲ. ಈ ಬಗೆಯ ಬದಲಾವಣೆಯ ಜಿಲ್ಲೆಯಲ್ಲಿ ಆರ್ಥಿಕ ಅಸಮಾನತೆಯನ್ನು ಉಲ್ಬಣಗೊಳಿಸುತ್ತಿದೆ. ಉದಾಹರಣೆಗೆ ೧೯೯೧ರಲ್ಲಿ ಜಿಲ್ಲೆಯ ದುಡಿಮೆಗಾರ ವರ್ಗದ ಶೇ.೭೩.೯೫ರಷ್ಟು ಜನರು ಜಿಲ್ಲೆಯ ಆದಾಯದಲ್ಲಿ ಕೇವಲ ಶೇ.೩೧.೯ರಷ್ಟು ಪಾಲು ಪಡೆದಿದ್ದರೆ, ಶೇ.೨೬.೦೫ರಷ್ಟು ದುಡಿಮೆಗಾರ ವರ್ಗ ಜಿಲ್ಲೆಯ ಆದಾಯ ಶೇ.೬೮.೧ರಷ್ಟು ಪಾಲನ್ನು ಅನುಭವಿಸುತ್ತಿದೆ.

ಜಿಲ್ಲೆಯಲ್ಲಿನ ಭೂಮಾಲೀಕತ್ವದಲ್ಲಿ ತೀವ್ರ ಅಸಮಾನತೆ ಇರುವುದನ್ನು ಹಿಂದೆ ನೋಡಿದ್ದೇವೆ. ಜಿಲ್ಲೆಯಲ್ಲಿ ಶೇ.೭೬.೫೨ ರಷ್ಟಿರುವ ರೈತಾಪಿ ವರ್ಗವು ಭೂ ಹಿಡುವಳಿಗಳ ವಿಸ್ತೀರ್ಣದಲ್ಲಿ ಕೇವಲ ಶೇ.೪೧.೭೦ ಪಾಲು ಪಡೆದಿದ್ದರೆ ಶೇ.೩೨.೪೮ ರಷ್ಟಿರುವ ಜಮೀನ್ದಾರರು ಭೂ ಹಿಡುವಳಿಗಳ ವಿಸ್ತೀರ್ಣದ ಶೇ.೫೮.೩೦ರಷ್ಟು ಪಾಲು ಪಡೆದಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಯ ಸ್ವರೂಪ ಅಸಮಾನತೆಯಿಂದ ಕೂಡಿದೆ. ಅಭಿವೃದ್ಧಿಯು ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ಅಸಮಾನತೆಯನ್ನು ಗಟ್ಟಿಗೊಳಿಸುತ್ತದೆಯೆ ವಿನಾ ಅದನ್ನು ಮುರಿಯು ಕೆಲಸವನ್ನು ಮಾಡುತ್ತಿಲ್ಲ. ಈ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಅಭಿವೃದ್ಧಿಯು ತುಂಬಾ ದುರ್ಬಲ ನೆಲೆಗಟ್ಟಿನ ಮೇಲೆ ನಿಂತಿದೆ. ಏಕೆಂದರೆ ಉತ್ಪನ್ನಕಾರಕ ವಲಯಗಳಾದ ಕೃಷಿ ಮತ್ತು ಉದ್ದಿಮೆ ಚಟು ವಟಿಕೆಗಳು ಸ್ಥಿರವಾಗಿದ್ದು ಸೇವಾವಲಯವು ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಏಕೆಂದರೆ ತೃತೀಯ ಸೇವಾವಲಯವು ವರಮಾನವನ್ನು ಗಳಿಸವ ವಲಯವೇ ವಿನಾ ಉತ್ಪಾದಿಸುವ ವಲಯವಲ್ಲ. ವರಮಾನವನ್ನು ಉತ್ಪಾದಿಸುವ ಪ್ರಾಥಮಿಕ ಮತ್ತು ದ್ವಿತೀಯ ವಲಯಗಳ ಚಟುವಟಿಕೆಗಳು ಸ್ಥಿರಗತಿಯಲ್ಲಿ ಬೆಳೆಯುತ್ತಿವೆ.

ಈ ಜಿಲ್ಲೆಯ ಅಭಿವೃದ್ಧಿಯ ಲಿಂಗ ಸಂಬಂಧಿ ಆಯಾಮಗಳು ರಾಜ್ಯದ ಉಳಿದೆಲ್ಲ ಜಿಲ್ಲೆಗಳಿಗಿಂತ ಭಿನ್ನವಾಗಿಲ್ಲ. ಈ ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ೧/೩ಕ್ಕಿಂತ ಅಧಿಕ ಮಹಿಳೆಯರಿದ್ದಾರೆ. ಇದು ಅವರ ಸುವ್ಯಕ್ತ ದುಡಿಮೆಯ ಪ್ರಮಾಣ. ಮಹಿಳೆಯರ ದುಡಿಮೆಯ ಸಿಂಹಪಾಲು ಅವ್ಯಕ್ತವು, ಅದೃಶ್ಯವೂ ಆಗಿರುತ್ತದೆ. ಅದನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅವರ ದುಡಿಮೆಯ ಪ್ರಮಾಣವು ಪುರುಷರ ದುಡಿಮೆಗೆ ಸಮನಾಗಿ ಬಿಡುತ್ತದೆ. ಈ ಜಿಲ್ಲೆಯ ಕೃಷಿಯ ಬೆನ್ನೆಲುಬು ಮಹಿಳಿಯರಾ ಗಿದ್ದಾರೆ. ಈ ಜಿಲ್ಲೆಯ ಕೃಷಿ ಕಾರ್ಮಿಕ ವರ್ಗದ ಗಾತ್ರ ೧,೪೮,೦೦೧. ಇದರಲ್ಲಿ ಸರಿಸುಮಾರು ಶೇ.೫೩.೪ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ.೩೯.೬೮. ಗದಗ ಜಿಲ್ಲೆಯ ಗ್ರಾಮೀಣ ಮಹಿಳೆಯರ ಸಾಕ್ಷರತೆ ಪ್ರಮಾಣ ಕೇವಲ ಶೇ.೩೪.೬೫.

ಮಾನವ ಅಭಿವೃದ್ಧಿ

ಕರ್ನಾಟಕ ಸರ್ಕಾರವು ಇತ್ತೀಚೆಗೆ ‘ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ೧೯೯೯’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕರ್ನಾಟಕದ ಹಳೆಯ ೨೦ ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕ (HDI)ಗಳನ್ನು ಗಣನೆ ಮಾಡಿ ನೀಡಲಾಗಿದೆ. ಹೊಸ ಜಿಲ್ಲೆಗಳನ್ನು ವರದಿಯಲ್ಲಿ ಪರಿಗಣಿಸಲು ಸಾಧ್ಯವಾಗಿಲ್ಲ. ಗದಗ ಜಿಲ್ಲೆಯು ಪೂರ್ವದಲ್ಲಿ ಧಾರವಾಡ ಜಿಲ್ಲೆಯ ಭಾಗವಾಗಿದ್ದರಿಂದ ನಾವು ಧಾರವಾಡ ಜಿಲ್ಲೆಯ ‘ಮಾನವ ಅಭಿವೃದ್ಧಿ ಸೂಚ್ಯಂಕ’ವನ್ನು ಗದಗ ಜಿಲ್ಲೆಗೂ ಅನ್ವಯಿ ಸಬಹುದಾಗಿದೆ. ಧಾರವಾಡ ಜಿಲ್ಲೆಯ ಮಾನವ ಅಭಿವೃದ್ಧಿ ಸೂಚ್ಯಂಕ ೦.೪೫೯. ಕರ್ನಾಟಕ ರಾಜ್ಯದ ಮಾನವ ಅಭಿ ವೃದ್ಧಿ ಸೂಚ್ಯಂಕಕ್ಕಿಂತ (೦.೪೪೮) ಧಾರವಾಡ ಜಿಲ್ಲೆಯ ಮಾನವ ಅಭಿವೃದ್ಧಿ ಸೂಚ್ಯಂಕ ಉತ್ತಮವಾಗಿದೆ. ರಾಜ್ಯದಲ್ಲಿ ಧಾರವಾಡಕ್ಕೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ೭ನೆಯ ಸ್ಥಾನವಿದೆ. ಇದೊಂದು ಉತ್ತಮ ಸಾಧನೆಯಾಗಿದೆ.

ಈ ಮೊದಲು ನಾವು ಹೇಳಿದಂತೆ ಗದಗ ಜಿಲ್ಲೆಯ ಅಭಿವೃದ್ಧಿಯು ಮಧ್ಯಮ ಗತಿ ಸ್ವರೂಪದ್ದಾಗಿದೆ. ಈ ಜಿಲ್ಲೆಯ ಅಭಿವೃದ್ಧಿ ಸ್ವರೂಪ ಮತ್ತು ಮಟ್ಟವು ಹೈದರಾಬಾದ್‌ – ಕರ್ನಾಟಕ ಪ್ರದೇಶದ ಜಿಲ್ಲೆಗಳಿಗಿಂತ ಉತ್ತಮವಾಗಿದೆ. ಇದರ ಮಾನವ ಅಭಿವೃದ್ಧಿ ಸೂಚ್ಯಂಕವು ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳಿಗಿಂತ ಉತ್ತಮವಾಗಿದೆ. ಈ ಹಿನ್ನಲೆಯಲ್ಲಿ ನಾವು ಗದಗ ಜಿಲ್ಲೆಯ ಅಭಿವೃದ್ಧಿಯನ್ನು ಪರಿಗಣಿಸಬೇಕಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಜಿಲ್ಲೆಯ ಸ್ಥಾನ ಉತ್ತಮವಾಗಿ ದ್ದರೂ, ವರಮಾನ ಮತ್ತು ಬಡತನದ ದೃಷ್ಟಿಯಿಂದ ಜಿಲ್ಲೆಯ ಸ್ಥಾನ ತೀವ್ರ ಕೆಳಮಟ್ಟದಲ್ಲಿದೆ. ಧಾರವಾಡ ಜಿಲ್ಲೆಯಲ್ಲಿ ಬಡತನದ ರೇಖೆಯ ಕೆಳಗೆ ಜೀವಿಸುತ್ತಿರುವ ಜನರ ಪ್ರಮಾಣ ಶೇ.೪೯.೭೫. ಇದೆ ಪ್ರಮಾಣವನ್ನು ಗದಗ ಜಿಲ್ಲೆಗೂ ಅನ್ವಯಿಸಿದರೆ, ಆ ಜಿಲ್ಲೆಯ ಬಡವರ ಸಂಖ್ಯೆ ೪.೨೫ ಲಕ್ಷವಾಗುತ್ತದೆ.ಇದು ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ. ರಾಜ್ಯ ಮಟ್ಟದಲ್ಲಿ ಬಡತನದ ಪ್ರಮಾಣ ಶೇ.೩೩.೧೬. ಇಡೀ ರಾಜ್ಯದಲ್ಲಿರುವ ಬಡವರ ಸಂಖ್ಯೆ ೧೫೬.೪೫ ಲಕ್ಷ. ಇದರಲ್ಲಿ ಗದಗ ಜಿಲ್ಲೆಯ ಬಡವರ ಪ್ರಮಾಣ ಶೇ.೨.೭೨ ರಷ್ಟಾಗುತ್ತದೆ. ರಾಜ್ಯದ ಜನಸಂಖ್ಯೆಯಲ್ಲಿ ಗದಗ ಜಿಲ್ಲೆಯ ಜನಸಂಖ್ಯೆ ಯ ಪ್ರಮಾಣ ಶೇ.೧.೯೧. ಆದರೆ ರಾಜ್ಯದ ಬಡವರ ಸಂಖ್ಯೆಯಲ್ಲಿ ಗದಗ ಜಿಲ್ಲೆಯ ಬಡವರ ಪ್ರಮಾಣ ಶೇ.೨.೭೨ ರಷ್ಟಾಗುತ್ತದೆ. ಇದು ಆತಂಕಕ್ಕೆ ಕಾರಣವಾಗುವ ಸಂಗತಿಯಾಗಿದೆ.

ನಮ್ಮ ಅಧ್ಯಯನದಿಂದ ಕಂಡುಕೊಂಡ ತಥ್ಯಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಮಂಡಿಸಲಾಗಿದೆ.

೧. ಗದಗ ಜಿಲ್ಲೆ ಮೂಲಭೂತವಾಗಿ ಪ್ರಾಥಮಿಕ ವಲಯವನ್ನು ಪ್ರಧಾನವಾಗಿ ಹೊಂದಿರುವ ಆರ್ಥಿಕತೆಯಾಗಿದೆ. ಇದು  ದುಡಿಮೆಗಾರ ವರ್ಗದ ದೃಷ್ಟಿಯಿಂದ ಮಾತ್ರ ಪ್ರಾಪ್ತವಾಗುವ ಸಂಗತಿಯಾಗಿದೆ. ಜಿಲ್ಲೆಯ ವರಮಾನದ ತ್ರಿವಲಯ  ಸ್ವರೂಪವನ್ನು ನೋಡಿದಾಗ ನಮಗೆ ಬೇರೆಯೇ ಚಿತ್ರ ಕಂಡುಬರುತ್ತದೆ. ಈ ಜಿಲ್ಲೆಯ ವರಮಾನದಲ್ಲಿ ಅರ್ಧಕ್ಕಿಂತ  ಹೆಚ್ಚಿಗೆ ಪ್ರಾಥಮಿಕೇತರ ವಲಯದಿಂದ ಹರಿದು ಬಂದರೆ ಪ್ರಾಥಮಿಕ ವಲಯದಿಂದ ಹರಿದು ಬರುವ ವರಮಾನದ  ಪ್ರಮಾಣ ಕಡಿಮೆಯಾಗಿದೆ. ಗದಗ ಜಿಲ್ಲೆಯ ಆರ್ಥಿಕ ರಚನೆಯು ಈ ಬಗೆಯ ಸ್ವರೂಪವನ್ನು ಎಚ್ಚರಿಕೆಯಿಂದ ನೋಡಬೇಕಾಗಿದೆ.

೨. ಗದಗ ಜಿಲ್ಲೆಯ ಆರ್ಥಿಕತೆಯು ತೀವ್ರ ಅಸಮಾನತೆಗಳಿಂದ ಕೂಡಿದೆ. ಪ್ರಾಥಮಿಕ ವಲಯದಲ್ಲಿರುವ ದುಡಿಮೆಗಾರ  ವರ್ಗದ ತಲಾ ಉತ್ಪನ್ನದ ಪ್ರಮಾಣ ಕೇವಲ ರೂ.೧೦೭.೧೨. ಆದರೆ ಪ್ರಾಥಮಿಕೇತರ ವಲಯದಲ್ಲಿನ ದುಡಿಮೆಗಾರ  ವರ್ಗದ ತಲಾ ಉತ್ಪನ್ನದ ಪ್ರಮಾಣ ರೂ.೫೦೪. ಪ್ರಾಥಮಿಕ ವಲಯದಲ್ಲಿರುವ ದುಡಿಮೆಗಾರ ವರ್ಗದಲ್ಲಿ ಅರ್ಧಕ್ಕಿಂತ ಹೆಚ್ಚಿಗೆ ಭೂರಹಿತ ಕೃಷಿ ಕಾರ್ಮಿಕರಿದ್ದಾರೆ. ಭೂಮಾಲೀಕತ್ವದಲ್ಲಿ ತೀವ್ರ ಸ್ವರೂಪದ ಅಸಮಾನತೆ ಇದೆ. ಈ ಅಸಮಾನತೆಯ ತೀವ್ರತೆಯು ಕಡಿಮೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ.

೩. ಈ ಜಿಲ್ಲೆಯ ಅಭಿವೃದ್ಧಿಯ ಮೂಲದ್ರವ್ಯ ಮಹಿಳೆಯರಾಗಿದ್ದಾರೆ. ಈ ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ಮಹಿಳೆಯರ  ಪ್ರಮಾಣ ಶೇ. ೩೪.೬೭ರಷ್ಟಿದೆ. ಇದು ರಾಜ್ಯ ಮಟ್ಟದಲ್ಲಿ ಕೇವಲ ಶೇ.೨೮.೯೫. ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ೧/೩ ಭಾಗ ಮಹಿಳೆಯರಿದ್ದಾರೆ. ಮಹಿಳೆಯರ ಅವ್ಯಕ್ತ ದುಡಿಮೆಯನ್ನು ಪರಿಗಣಿಸಿದರೆ, ಅವರ ದುಡಿಮೆಯ ಪ್ರಮಾಣವು ಪುರುಷರ ದುಡಿಮೆಯ ಪ್ರಮಾಣಕ್ಕಿಂತ ಅಧಿಕವೆನ್ನುವುದು ಮನದಟ್ಟಾಗುತ್ತದೆ. ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯ ಮಹಿಳೆಯರ ದುಡಿಮೆಯು ಪುರುಷರ ದುಡಿಮೆಗೆ ಸರಿಸಮಾನವಾಗಿದೆ. ದುಡಿಮೆಯಲ್ಲಿ ಪ್ರಧಾನವಾದುದು ಪುರುಷರ ಕಾಣಿಕೆ ಎಂದೂ, ಮಹಿಳೆಯರ ಪಾತ್ರ ಕೇವಲ ಆನುಷಂಗಿಕವಾದುದು ಎಂಬುದನ್ನು ನಮ್ಮ ಈ ಅಧ್ಯಯನವು ಹುಸಿ ಗೊಳಿಸಿದೆ. ಗದಗ ಜಿಲ್ಲೆಯ ಅಭಿವೃದ್ಧಿಯ ಮೂಲ ದ್ರವ್ಯ ಮಹಿಳಾ ದುಡಿಮೆಗಾರರಾಗಿದ್ದಾರೆ.

೪. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿರುವ ಮೂರು ಸಂಗತಿಗಳಲ್ಲಿ ಬಹು ಮುಖ್ಯವಾದುದು ಸಾಕ್ಷರತೆ ಸಂಬಂಧಿ  ಸೂಚಿಯಾಗಿದೆ. ಸಾಕ್ಷರತೆ ದೃಷ್ಟಿಯಿಂದ ರಾಜ್ಯದಲ್ಲಿ ಗದಗ ಜಿಲ್ಲೆಗೆ ಮಧ್ಯಮ ದರ್ಜೆಯ ಸ್ಥಾನವಿದೆ. ಸಾಕ್ಷರತೆಯಲ್ಲಿ,  ರಾಜ್ಯದಲ್ಲಿ, ಗದಗಜಿಲ್ಲೆ ೧೩ನೆಯ ಸ್ಥಾನ ಪಡೆದಿದೆ. ಈ ಜಿಲ್ಲೆಯ ಒಟ್ಟು ಸಾಕ್ಷರತೆ ಪ್ರಮಾಣ ಶೇ.೫೫.೮೮. ಆದರೆ ಇದು ರಾಜ್ಯಮಟ್ಟದ ಸಾಕ್ಷರತೆ ಪ್ರಮಾಣಕ್ಕಿಂತ ಕಡಿಮೆ ಇದೆ. ರಾಜ್ಯದ ಜನಸಂಖ್ಯೆಯಲ್ಲಿ ಗದಗ ಜಿಲ್ಲೆಯ ಜನಸಂಖ್ಯೆಯ ಪಾಲು ಶೇ.೧.೯೧. ಆದರೆ ರಾಜ್ಯದ ಒಟ್ಟು ಅಕ್ಷರಸ್ಥರಲ್ಲಿ ಗದಗ ಜಿಲ್ಲೆಯ ಪಾಲು ಕೇವಲ ಶೇ.೧.೮೮. ಗದಗ ಜಿಲ್ಲೆಯ ಸಾಕ್ಷರತೆ ದೃಷ್ಟಿಯಿಂದ ಇನ್ಣು ಬಹಳ ದೂರ ಸಾಗಬೇಕಾಗಿದೆ ಎಂಬುದನ್ನು ಮೇಲಿನ ವಿಶ್ಲೇಷಣೆ ತೋರಿಸುತ್ತದೆ.

ಈ ಜಿಲ್ಲೆಯ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ.೩೯.೬೮. ಇದು ರಾಜ್ಯ ಮಟ್ಟದ ಮಹಿಳಾ ಸಾಕ್ಷರತೆ ಪ್ರಮಾಣ ಕ್ಕಿಂತ ಶೇ.೪.೬೬ ಅಂಶಗಳಷ್ಟು ಕಡಿಮೆ ಇದೆ. ಒಟ್ಟು ಸಾಕ್ಷರತೆಯಲ್ಲಿ, ರಾಜ್ಯದಲ್ಲಿ ಜಿಲ್ಲೆಯ ಸ್ಥಾನವು ೧೩. ಆದರೆ ಮಹಿಳೆಯರ ಸಾಕ್ಷರತೆಯಲ್ಲಿ ಜಿಲ್ಲೆಯ ಸ್ಥಾನ ಕೇವಲ ೧೫. ಈ ಜಿಲ್ಲೆಯ ಗ್ರಾಮೀಣ ಮಹಿಳೆಯರ ಸಾಕ್ಷರತೆ ಕೇವಲ ಶೇ.೩೨.೬೫. ಸಾಕ್ಷರತೆಯಲ್ಲಿ ಲಿಂಗವಾರು ಅಸಮಾನತೆ ತೀವ್ರವಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಜಿಲ್ಲೆಯ ಸಾಕ್ಷರತೆಯನ್ನು ಉತ್ತಮಪಡಿಸುವ ದಿಶೆಯಲ್ಲಿ ತೀವ್ರ ಗಮನಹರಿಸಬೇಕಾಗಿದೆ. ಮಹಿಳೆಯರ ಸಾಕ್ಷರತೆಯನ್ನು ಉತ್ತಮ ಪಡಿಸುವ ದಿಶೆಯಲ್ಲಿ ಹೆಚ್ಚಿನ ಗಮನ ನೀಡುವ ಅವಶ್ಯಕತೆ ಇದೆ.

೫. ಜನಸಂಖ್ಯೆ ಹಾಗೂ ಆರೋಗ್ಯ ಸಂಬಂಧಿ ವಿಷಯಗಳಲ್ಲು ಗದಗ ಜಿಲ್ಲೆಯು ರಾಜ್ಯದಲ್ಲಿ ಮಧ್ಯಮ ಸ್ಥಾನವನ್ನು ಪಡೆದಿದೆ. ಈ ಜಿಲ್ಲೆಯ ಜನಸಂಖ್ಯೆಯ ಗತಿಶೀಲ ನೆಲೆಗಳ ಮಾಹಿತಿ ಹಾಗೂ ಆರೋಗ್ಯ ಸಂಬಂಧಿ ಸೂಚಿಗಳು ದೊರೆಯುವುದಿಲ್ಲ. ಧಾರವಾಡ ಜಿಲ್ಲೆಯ ಸೂಚಿಗಳನ್ನೇ ಗದಗ ಜಿಲ್ಲೆಗೂ ಅನ್ವಯಿಸಿ ವಿಶ್ಲೇಷಣೆ ನಡೆಸಬೇಕಾಗಿದೆ.

ಜಿಲ್ಲೆಯಲ್ಲಿ ಜನರ ಆರ್ಯುಮಾನವು ರಾಜ್ಯ ಮಟ್ಟದ ಆರ್ಯುಮಾನಕ್ಕಿಂತ ಅಧಿಕವಾಗಿದೆ. ಜನಸಂಖ್ಯೆಯ ವಾರ್ಷಿಕ ಬೆಳವಣಿಗೆ ಪ್ರಮಾಣವು ರಾಜ್ಯಮಟ್ಟದ ಪ್ರಮಾಣಕ್ಕಿಂತ ಕಡಿಮೆ ಇದೆ. ಆದರೆ ವೈದ್ಯಕೀಯ ಸೌಲಭಗಳ ದೃಷ್ಟಿಯಿಂದ ಜಿಲ್ಲೆಯು ಬಹಳ ಹಿಂದುಳಿದಿದೆ. ಪ್ರಾಥಮಿಕ ಶಿಕ್ಷಣದಂತೆ ಪ್ರಾಥಮಿಕ ಆರೋಗ್ಯವು ಜನರ ಧಾರಣಶಕ್ತಿಯನ್ನು ಸಂವರ್ಧಿಸುವ ಒಂದು ಸಂಗತಿಯಾಗಿದೆ. ಆರೋಗ್ಯಕ್ಕೆ ಅಂತಸ್ಥವಾದಿ ಮಹತ್ವವಿದೆ. ಈ ಕಾರಣಗಳಿಂದ ಗದಗ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಸೌಲಭ್ಯಗಳನ್ನು ಉತ್ತಮಪಡಿಸಬೇಕಾಗಿದೆ.

೬. ಕೈಗಾರಿಕೆಗಳ ದೃಷ್ಟಿಯಿಂದಲೂ ಗದಗ ಜಿಲ್ಲೆಯು ರಾಜ್ಯದಲ್ಲಿ ಮಧ್ಯಮ ಮಟ್ಟದ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ  ದ್ವಿತೀಯ ವಲಯವನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರ ವರ್ಗದ ಪ್ರಮಾಣವು ರಾಜ್ಯಮಟ್ಟದ ಪ್ರಮಾಣಕ್ಕಿಂತ ಕಡಿಮೆ ಇದೆ. ಈ ಜಿಲ್ಲೆಯಲ್ಲಿರುವ ಉದ್ದಿಮೆಗಳೆಲ್ಲ ಗದಗ ನಗರದಲ್ಲಿ ಕೇಂದ್ರೀಕೃತಗೊಂಡಿವೆ. ಈ ಜಿಲ್ಲೆಯಲ್ಲಿ ಮುಖ್ಯವಾಗಿ ಬಟ್ಟೆ ಉದ್ಯಮ ದೊಡ್ಡದಾಗಿದೆ. ಈ ಜಿಲ್ಲೆಯಲ್ಲಿರುವ ದೊಡ್ಡ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಂಖ್ಯೆಯು ಎರಡಂಕಿಯನ್ನು ದಾಟಿಲ್ಲ. ಉದ್ದಿಮೆಗಳ ಮೇಲೆ ತೊಡಗಿಸಿರುವ ಬಂಡವಾಳ ಕೇವಲ ೩೫ ರಿಂದ ೪೦ ಕೋಟಿ ರೂಪಾಯಿಗಳಷ್ಟಿದೆ. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಕೈಗಾರಿಕಾಭಿವೃದ್ಧಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸುವ ಅಗತ್ಯವಿದೆ. ಬಟ್ಟೆ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಯೋಚಿಸಬೇಕಾಗಿದೆ.

೭. ಈಗಾಗಲೇ ತಿಳಿಸಿರುವಂತೆ ಜಿಲ್ಲೆಯ ಅಭಿವೃದ್ಧಿಯು ಅಸಮಾನತೆಯಿಂದ ಕೂಡಿದೆ. ಉನ್ನತ ಜಾತಿ/ವರ್ಗಗಳ  ಹಿತಾಸಕ್ತಿಗಳನ್ನು ಪೂರೈಸುವ ದಿಶೆಯಲ್ಲಿ ಅದು ಕ್ರಿಯಾಶೀಲವಾಗಿದೆ. ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದಿರುವ ಮತ್ತು  ಬಡತನದ ತೀವ್ರತೆಯಿಂದ ನರಳುತ್ತಿರುವ ಜನವರ್ಗವೆಂದರೆ ಪರಿಶಿಷ್ಟ ಜನವರ್ಗ. ಜಿಲ್ಲೆಯ ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಶೇ.೧೬.೨೩. ಇದು ರಾಜ್ಯಮಟ್ಟದ ಪ್ರಮಾಣಕ್ಕಿಂತ ಕಡಿಮೆ ಇದೆ.

ಪರಿಶಿಷ್ಟರಲ್ಲಿ ಸಾಕ್ಷರತೆ ಪ್ರಮಾಣ ಕೇವಲ ಶೇ.೩೫.೪೦. ಇದು ಒಟ್ಟು ಜಿಲ್ಲೆಯ ಸಾಕ್ಷರತೆ ಪ್ರಮಾಣಕ್ಕಿಂತ ಶೇ. ೨೦.೪೮ ಅಂಶಗಳಷ್ಟು ಕಡಿಮೆ ಇದೆ. ಪರಿಶಿಷ್ಟ ಮಹಿಳೆಯ ಸಾಕ್ಷರತೆ ಪ್ರಮಾಣ ಶೇ.೨೦.೩೬ರಷ್ಟಿದೆ. ಜಿಲ್ಲೆಯ ಜನ ಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಶೇ.೧೬.೨೩ರಷ್ಟಿದ್ದರೆ, ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ಇವರ ಪ್ರಮಾಣ ಶೇ. ೧೭.೨೮ರಷ್ಟಿದೆ. ಜಿಲ್ಲೆಯ ಕೃಷಿ ಕಾರ್ಮಿಕ ವರ್ಗದಲ್ಲಿ ಇವರ ಪ್ರಮಾಣ ಶೇ.೨೪.೯೨ರಷ್ಟಿದೆ.

ದುಡಿಮೆಯಲ್ಲಿ ಪರಿಶಿಷ್ಟರ ಕಾಣಿಕೆ ಅಪಾರವಾಗಿದೆ. ಆದರೆ ಅಭಿದ್ಧಿಯಲ್ಲಿ ಇವರ ಪಾಲು ವಿಶಿಷ್ಟವಾಗಿದೆ. ಈ ಎಲ್ಲ ವಿಕೃತಿಗಳನ್ನು ಸರಿಪಡಿಸುವ ದಿಶೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ.

ಇವಿಷ್ಟು ನಮ್ಮ ಅಧ್ಯಯನದಿಂದ ಕಂಡುಕೊಂಡ ಮುಖ್ಯ ತಥ್ಯಗಳಾಗಿವೆ. ಕಳೆದ ಅನೇಕ ದಶಕಗಳಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿಯ ಮಟ್ಟ ಉತ್ತಮಗೊಂಡಿದೆ. ಆದರೆ ಇದು ಸಾಕಾಗುವುದಿಲ್ಲ. ಜಿಲ್ಲೆಯ ಮಹಿಳೆಯರ ಹಾಗೂ ಪರಿಶಿಷ್ಟರ ಜೀವನಮಟ್ಟವು ಅತ್ಯಂತ ಕೆಳಮಟ್ಟದಲ್ಲಿದೆ. ಗದಗ ಜಿಲ್ಲಾ ಪಂಚಾಯತಿಯು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯೋಚಿಸುವಾಗ ಇವೆಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಭಿವೃದ್ಧಿಯನ್ನು ಲಿಂಗೀಕರಣಗೊಳಿಸುವ ದಿಶೆಯಲ್ಲಿ ಜಿಲ್ಲೆ ಕಾರ್ಯೋನ್ಮುಖವಾಗಬೇಕು.