ಒಂದು ಮುನ್ನೋಟ

ಪ್ರಸ್ತುತ ಅಧ್ಯಯನದಲ್ಲಿ ಗದಗ ಜಿಲ್ಲೆಯ ಅಭಿವೃದ್ಧಿಯ ವಿವಿಧ ಆಯಾಮಗಳನ್ನು ಗುರುತಿಸಲಾಗಿದೆ. ಪ್ರಸ್ತುತ ಅಧ್ಯಯನಕ್ಕಾಗಿಯೇ ನಾವು ಗದಗ ಜಿಲ್ಲೆಯ ‘ಆರ್ಥಿಕ ರಚನೆ’ಯನ್ನು ರೂಪಿಸಿದ್ದೇವೆ. ಜಿಲ್ಲೆಯ ವರಮಾನ ಹಾಗೂ ದುಡಿಯುವ ವರ್ಗಗಳನ್ನು ಒಳಗೊಂಡ ತ್ರಿವಲಯವಾರು ಆರ್ಥಿಕ ರಚನೆಯ ವಿಶಿಷ್ಟತೆಯನ್ನು ಐದನೆಯ ಅಧ್ಯಾಯದಲ್ಲಿ ಕೂಲಂಕುಷವಾಗಿ ಚರ್ಚಿಸಿದ್ದೇವೆ. ಸಾಕ್ಷರತೆ, ಆರೋಗ್ಯ, ಪ್ರಾಥಮಿಕ ಶಿಕ್ಷಣ, ಜನಸಂಖ್ಯೆ, ಕೃಷಿ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಜಿಲ್ಲೆ ಸಾಧಿಸಿರುವ ಸಾಧನೆಗಳನ್ನು ಗುರುತಿಸಲಾಗಿದೆ. ಜಿಲ್ಲೆಯ ದುಡಿಮೆಗಾರ ವರ್ಗದ ಸಾಮಾಜಿಕ ಸ್ವರೂಪ ಹಾಗೂ ಲಿಂಗಸಂಬಂಧಿ ಆಯಾಮಗಳನ್ನು ವಿವರವಾಗಿ ಪರಿಶೀಲಿಸಲಾಗಿದೆ. ಜಿಲ್ಲೆಯ ಪ್ರಸ್ತುತ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಸ್ಥಾನಮಾನ ಹಾಗೂ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಅದರ ಅಭಿವೃದ್ಧಿಯ ಸ್ವರೂಪ ಮುಂದಿನ ವರ್ಷಗಳಲ್ಲಿ ಹೇಗಿರಬಹುದು? ಎಂಬುದನ್ನು ಗುರುತಿಸುವ ಪ್ರಯತ್ನವನ್ನು ಸದ್ಯ ಮಾಡಲಾಗಿದೆ. ಮುಂದಿನ ವರ್ಷಗಳಲ್ಲಿ ಜಿಲ್ಲೆ ಎದುರಿಸಬೇಕಾಗುವ ಸಮಸ್ಯೆ – ಸವಾಲುಗಳಾವುವು? ಅಭಿವೃದ್ಧಿಯು ಜನಮುಖಿಯೂ, ಸಮಾಜಮುಖಿಯೂ ಆಗಬೇಕಾದರೆ ಅದು ಯಾವ ವರ್ಗದ ಹಿತಾಸಕ್ತಿಗಳನ್ನು ಕಾಪಾಡಬೇಕು? ಇವೇ ಮುಂತಾದ ಪ್ರಶ್ನೆಗಳನ್ನು ಪ್ರಸ್ತುತ ಅಧ್ಯಯನದಲ್ಲಿ ವಿಶ್ಲೇಷಿಸಲಾಗಿದೆ.

ಹೊಸದಾಗಿ ೧೯೭೭ರಲ್ಲಿ ಅಸ್ತಿತ್ವಕ್ಕೆ ಬಂದ ಗದಗ ಜಿಲ್ಲೆ ಮೂಲತ: ಧಾರವಾಡ ಜಿಲ್ಲೆಯ ಭಾಗವಾಗಿತ್ತು.ಅವಿಭಜಿತ ಧಾರವಾಡ ಜಿಲ್ಲೆಯ ಐದು ತಾಲೂಕುಗಳನ್ನು ಬೇರ್ಪಡಿಸಿ ಗದಗ ಜಿಲ್ಲೆಯನ್ನು ರೂಪಿಸಲಾಗಿದೆ. ಧಾರವಾಡ ಜಿಲ್ಲೆ ಯಂತೆ ಗದಗ ಜಿಲ್ಲೆಯು ‘ಬಾಂಬೆ ಕರ್ನಾಟಕ’ದ ಭಾಗವಾಗಿದೆ. ಬ್ರಿಟಿಷರ ಕಾಲದಲ್ಲಿ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟಿದ್ದ ಗದಗ ಜಿಲ್ಲೆಯ ಪ್ರದೇಶ ಅಂದು ಅನೇಕ ಬಗೆಯ ಅನುಕೂಲಗಳನ್ನು ಪಡೆದುಕೊಂಡಿತು. ಈ ಬಗೆಯ ವಸಾ ಹತುಶಾಹಿ ಆಡಳಿತದ ಅನುಕೂಲ – ಲಾಭ ಹೈದರಾಬಾದ್ – ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ದೊರೆಯಲಿಲ್ಲ. ವಸಾ ಹತುಶಾಹಿ ಆಡಳಿತದಿಂದಾಗಿ ಬಾಂಬೆ ಕರ್ನಾಟಕ ಪ್ರದೇಶಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಿ ಕೊಳ್ಳುವುದು ಸಾಧ್ಯವಾಯಿತು.

ವಿಸ್ತೀರ್ಣದ ದೃಷ್ಟಿಯಿಂದ ರಾಜ್ಯದಲ್ಲಿ ಗದಗ ಜಿಲ್ಲೆಗೆ ೨೫ನೆಯ ಸ್ಥಾನವಿದ್ದರೆ ಜನಸಂಖ್ಯೆಯಲ್ಲಿ ಜಿಲ್ಲೆಗೆ ರಾಜ್ಯದಲ್ಲಿ ೨೬ನೆಯ ಸ್ಥಾನವಿದೆ. ಜನಸಂಖ್ಯೆಯ ದೃಷ್ಟಿಯಿಂದ ರಾಜ್ಯದಲ್ಲಿ ಗದಗ ಜಿಲ್ಲೆಯು ಎರಡನೆಯ ಸಣ್ಣ ಜಿಲ್ಲೆಯಾಗಿದೆ. ರಾಜ್ಯದ ಭೌಗೋಳಿಕ ವಿಸ್ತೀರ್ಣದಲ್ಲಿ ಗದಗ ಜಿಲ್ಲೆಯ ಪಾಲು ಶೇ.೨.೪೨. ರಾಜ್ಯದ ಜನಸಂಖ್ಯೆಯಲ್ಲಿ ಜಿಲ್ಲೆಯ ಪಾಲು ಶೇ.೧.೯೧. ಕೈಗಾರಿಕಾ ಅಭಿವೃದ್ಧಿ ದೃಷ್ಟಿಯಿಂದ ಗದಗ ಜಿಲ್ಲೆಯ ಚಾರಿತ್ರಿಕ ಹಿನ್ನಲೆಯನ್ನು ಹೊಂದಿದೆ.

ಗದಗವು ಉತ್ತರ ಕರ್ನಾಟಕ ಪ್ರದೇಶದ ಒಂದು ಪ್ರಮುಖ ಜಿಲ್ಲೆಯಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಗದಗದ ಪಾಲು ಶೇ.೧.೯ರಷ್ಟಾದರೆ ರಾಜ್ಯದಲ್ಲಿನ ಅಕ್ಷರಸ್ಥರಲ್ಲಿ ಜಿಲ್ಲೆಯ ಪಾಲು ಶೇ.೧೮೮ರಷ್ಟಿದೆ. ಇದೇನು ದೊಡ್ಡ ಸಾಧನೆಯಲ್ಲ. ಕರ್ನಾಟಕದ ಬಹುಪಾಲು ಜಿಲ್ಲೆಗಳ ಹಾಗೆ ಗದಗವು ಕೃಷಿಪ್ರಧಾನ ಜಿಲ್ಲೆಯಾಗಿದೆ. ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ಶೇ.೭೨.೧೬ರಷ್ಟು ದುಡಿಮೆಗಾರರು ಕೃಷಿಯನ್ನು ಅವಲಂಬಿಸಿ ಕೊಂಡಿದ್ದಾರೆ. ಜಿಲ್ಲೆಯ ಒಟ್ಟು ದುಡಿಮೆಗಾರ (೩೪೯೪೭೭) ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಶೇ.೪೨.೩೫. ಈ ಒಂದು ಅಂಶದಿಂದ ಜಿಲ್ಲೆಯಲ್ಲಿ ಬಡತನದ ಒತ್ತಡ ಹಾಗೂ ತೀವ್ರತೆ ಉಳಿದ ಜಿಲ್ಲೆಗಳಿಗಿಂತ ಅಧಿಕವಾಗಿದೆಯೆಂದು ಹೇಳಬಹುದು. ಕರ್ನಾಟಕದಲ್ಲಿ ಒಟ್ಟು ದುಡಿಮೆಗಾರ ವರ್ಗದಲ್ಲಿ ಶೇ.೪೦ಕ್ಕಿಂತ ಅಧಿಕ ಕೃಷಿ ಕಾರ್ಮಿಕರನ್ನು ಹೊಂದಿರುವ ಜಿಲ್ಲೆಗಳ ಸಂಖ್ಯೆ ಒಂಬತ್ತು. ಗದಗ ಜಿಲ್ಲೆಯಲ್ಲಿ ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಶೇ.೪೨.೩೫. ಕರ್ನಾಟಕದ ೧೦ ಜಿಲ್ಲೆಗಳಲ್ಲಿ ಮಾತ್ರ ಕೃಷಿ ಕಾರ್ಮಿಕರಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಮಾಣ ಅಧಿಕವಾಗಿದೆ. ಗದಗ ಜಿಲ್ಲೆಯಲ್ಲಿನ ಒಟ್ಟು ಕೃಷಿ ಕಾರ್ಮಿ ಕರಲ್ಲಿ (೧,೪೮,೦೦೧) ಮಹಿಳೆಯರ ಪ್ರಮಾಣ ಶೇ.೫೩.೪೦.

ಜಿಲ್ಲೆಯಲ್ಲಿನ ದುಡುಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣವು ಅಧಿಕವಾಗಿರುವುದು ಒಂದು ಮುಖ್ಯ ಸಂಗತಿಯ ಕಡೆಗೆ ಕೈಬೆರಳು ತೋರಿಸುತ್ತದೆ. ಪ್ರಸ್ತುತ ಅಧ್ಯಯನದ ಏಳನೆಯ ಅಧ್ಯಾಯದಲ್ಲಿ ತೋರಿಸಿರುವಂತೆ ಗದಗ ಜಿಲ್ಲೆಯ ಭೂಮಾಲೀಕತ್ವದಲ್ಲಿ ತೀವ್ರ ಸ್ವರೂಪದ ಅಸಮಾನತೆಗಳಿವೆ. ರಾಜ್ಯಮಟ್ಟದಲ್ಲಿ ಜಮೀನ್ದಾರಿ ಹಿಡುವಳಿಗಳ ಪ್ರಮಾಣ ಶೇ.೧೩.೨೪ರಷ್ಟಿದ್ದು, ಅವರು ಹಿಡುವಳಿ ವಿಸ್ತೀರ್ಣದಲ್ಲಿ ಶೇ.೪೬.೫೦ರಷ್ಟು ಭೂಮಿಯ ಮೇಲೆ ಮಾಲೀಕತ್ವ ಪಡೆ ದಿದ್ದಾರೆ. ಆದರೆ ಗದಗ ಜಿಲ್ಲೆಯಲ್ಲಿ ಶೇ.೩೨.೪೮ ರಷ್ಟಿರುವ ಜಮೀನ್ದಾರಿ ಹಿಡುವಳಿಗಾರರು ಜಿಲ್ಲೆಯ ಭೂ ಹಿಡುವಳಿ ವಿಸ್ತೀರ್ಣದಲ್ಲಿ ಶೇ.೫೮.೩೦ರಷ್ಟು ಪ್ರದೇಶದ ಮೇಲೆ ಮಾಲೀಕತ್ವ ಸಾಧಿಸಿಕೊಂಡು ಬಿಟ್ಟಿದೆ ಈ ಬಗೆಯ ಭೂ ಹಿಡುವಳಿ ಗಳ ಮಾಲೀಕತ್ವದಲ್ಲಿನ ಅಸಮಾನತೆಯಿಂದಾಗಿಯೆ ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಅಗಾಧವಾಗಿದೆ.

ಅಭಿವೃದ್ಧಿಯ ಲಿಂಗಸಂಬಂಧಗಳು

ತನ್ನ ತಾಯಿ ಜಿಲ್ಲೆ ಧಾರವಾಡಕ್ಕೆ ಹೋಲಿಸಿದರೆ ಗದಗ ಜಿಲ್ಲೆಯ ಲಿಂಗಪರಿಮಾಣ ಉತ್ತಮವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಲಿಂಗ ಪರಿಮಾಣ ೯೩೫ರಷ್ಟಿದ್ದರೆ ಗದಗ ಜಿಲ್ಲೆಯಲ್ಲಿ ಅದು ೯೬೯ರಷ್ಟಿದೆ. ಗದಗ ಜಿಲ್ಲೆಯ ಲಿಂಗಪರಿಮಾಣವು ರಾಜ್ಯಮಟ್ಟದ ಲಿಂಗಪರಿಮಾಣಕ್ಕಿಂತ ಅಧಿಕವಾಗಿದೆ. ಇದಕ್ಕೆ ಒಂದು ಕಾರಣವೆಂದರೆ ರಾಜ್ಯದಲ್ಲಿ ಲಿಂಗಪರಿಮಾಣ ಅತ್ಯಧಿಕವಿರುವ ರೋಣ ತಾಲ್ಲೂಕು ಗದಗ ಜಿಲ್ಲೆಯಲ್ಲಿದೆ. ರಾಜ್ಯಮಟ್ಟದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣವು ಶೇ.೪೮.೯೭ರಷ್ಟಿದ್ದರೆ ಗದಗ ಜಿಲ್ಲೆಯಲ್ಲಿ ಮಹಿಳೆಯರ ಪ್ರಮಾಣವು ಶೇ.೪೯.೨೧ರಷ್ಟಿದೆ. ರಾಜ್ಯದಲ್ಲಿನ ದುಡಿಮೆಗಾರ ವರ್ಗದಲ್ಲಿ ಮಹಿಳೆಯರ ಪ್ರಮಾಣ ಶೇ.೨೮.೯೫ರಷ್ಟಿದ್ದರೆ ಗದಗ ಜಿಲ್ಲೆಯಲ್ಲಿನ ದುಡಿಮೆಗಾರ ವರ್ಗದಲ್ಲಿ ಮಹಿಳೆಯರ ಪ್ರಮಾಣ ಶೇ.೩೪.೫೦.

ಒಟ್ಟಾರೆ ಗದಗ ಜಿಲ್ಲೆಯ ಅಭಿವೃದ್ಧಿಯ ಮೂಲದ್ರವ್ಯ ಮಹಿಳೆಯರಾಗಿದ್ದಾರೆ. ಕೃಷಿಯು ನಮ್ಮ ಸಮಾಜದ – ಆರ್ಥಿಕತೆಯ ‘ಬೆನ್ನೆಲುಬು’ ಎನ್ನುವುದು ವಾಡಿಕೆಯಲ್ಲಿದೆ. ಇದನ್ನು ಮುಂದುವರಿಸಿ ‘ಮಹಿಳಾ ದುಡಿಮೆಗಾರ ವರ್ಗವು ಕೃಷಿಯ ಬೆನ್ನೆಲುಬಾಗಿದೆ’ ಎಂದು ಹೇಳಬಹುದು. ಆದರೆ ಈ ಜಿಲ್ಲೆಯ ಮಹಿಳೆಯರಿಗೆ ಅಭಿವೃದ್ಧಿಯಲ್ಲಿ ಸಮಪಾಲು ದೊರೆಯುತ್ತಿಲ್ಲ ಉದಾಹರಣೆಗೆ ಇಡೀ ರಾಜ್ಯದಲ್ಲಿ ಗಂಡು – ಹೆಣ್ಣುಗಳ ನಡುವಿನ ಸಾಕ್ಷರತಾ ಅಂತರ ಗದಗ ಜಿಲ್ಲೆಯಲ್ಲಿ ಅತ್ಯಧಿಕ ಶೇ. ೩೧.೯೪ ಅಂಶಗಳಷ್ಟಿದೆ. ರಾಜ್ಯಮಟ್ಟದಲ್ಲಿ ಗಂಡು – ಹೆಣ್ಣುಗಳ ನಡುವಿನ ಸಾಕ್ಷರತಾ ಅಂತರ ಕೇವಲ ಶೇ.೨೨.೯೨. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಅವರ ಪಾತ್ರ ನಿರ್ಣಾಯಕವಾದುದಾಗಿದೆ. ಆದರೆ ಸಮಾಜದಲ್ಲಿ ಅವರ ದುಡಿಮೆಗಾಗಲಿ, ನಿರ್ಣಾಯಕ ಪಾತ್ರಕ್ಕಾಗಲಿ ಮನ್ನಣೆ ದೊರೆಯುತ್ತಿಲ್ಲ. ಉದಾಹರಣೆಗೆ ಅಕ್ಷರಸ್ಥರ ಸಂಖ್ಯೆಯನ್ನು ನೋಡಬಹುದು. ಗದಗ ಜಿಲ್ಲೆಯ ಜನಸಂಖ್ಯೆಯಲ್ಲಿ ಮಹಿಳೆಯರ ಪಾಲು ಶೇ.೪೯.೨೧ರಷ್ಟಿದ್ದರೆ ಜಿಲ್ಲೆಯ ಒಟ್ಟು ಅಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇ.೩೫. ಆದರೆ ಜಿಲ್ಲೆಯಲ್ಲಿರುವ ಅನಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣ ಶೇ.೬೭.೩೮. ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಜಿಲ್ಲೆಯಲ್ಲಿ ಮಹಿಳೆಯರ ಸ್ಥಿತಿಗತಿಗಳು ದಾರುಣವಾಗಿವೆ. ಜಿಲ್ಲೆಯಲ್ಲಿ ೬ರಿಂದ ೧೪ವರ್ಷ ವಯೋಮಾನದ ಮಕ್ಕಳಲ್ಲಿ ಶಾಲೆ ಪ್ರವೇಶಿಸದ ಮಕ್ಕಳ ಪ್ರಮಾಣ ರಾಜ್ಯಮಟ್ಟದಲ್ಲಿ ಶೇ.೨೭.೭೨ರಷ್ಟಿದ್ದರೆ ಗದಗದಲ್ಲಿ ಅದು ಶೇ.೩೧.೪೩ರಷ್ಟಿದೆ. ಜಿಲ್ಲೆಯಲ್ಲಿ ಶಾಲೆಗೆ ಹೋಗದ ಬಾಲಕರ ಪ್ರಮಾಣ ಶೇ.೨೬.೬೯ರಷ್ಟಿದ್ದರೆ ಬಾಲಕಿಯರ ಪ್ರಮಾಣ ಶೇ.೩೬.೩೧ರಷ್ಟಿದೆ. ಒಂದನೆಯ ತರಗತಿಯಿಂದ ಏಳನೆಯ ತರಗತಿಯವರೆಗೆ ಶಾಲಾ ದಾಖಲಾತಿಯಲ್ಲಿ ಬಾಲಕಿಯರ ಪ್ರಮಾಣ ಕೇವಲ ಶೇ.೪೭.೬೮ರಷ್ಟಿದ್ದರೆ ಹಾಜರಾತಿಯಲ್ಲಿ ಅವರ ಪ್ರಮಾಣ ಶೇ.೫೦ರಷ್ಟಿದೆ.

ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಲಿಂಗಸಂಬಂಧಗಳು ತೀವ್ರಸ್ವರೂಪದ ಅಸಮಾನತೆಗಳಿಂದ ಕೂಡಿದೆ. ದುಡಿಮೆಯಲ್ಲಿ ಅವರ ಕಾಣಿಕೆ ಅಪಾರವಾಗಿದ್ದರೂ ಅಭಿವೃದ್ಧಿಯ ಫಲಗಳಲ್ಲಿ ಅವರ ಪಾಲು ನಿಕೃಷ್ಟವಾದುದಾಗಿದೆ. ಗದಗ ಜಿಲ್ಲೆಯ ಅಭಿವೃದ್ಧಿಯ ಮೂಲದಲ್ಲಿರುವ ಲಿಂಗತಾರಮ್ಯದ ಸಂಗತಿಗಳನ್ನು ತೊಡೆದುಹಾಕಲು ಪ್ರಯತ್ನಿಸಬೇಕಾಗಿದೆ. ಜಿಲ್ಲೆಯು ಪ್ರಜ್ಞಾಪೂರ್ವಕವಾಗಿ ಲಿಂಗತಾರಮ್ಯವನ್ನು ತೊಡೆದುಹಾಕಬೇಕಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳು ಲಿಂಗಪ್ರಜ್ಞೆಯಿಂದ ಮೆರೆಯುವಂತಾಗಬೇಕು.

ಮೌಲ್ಯ ನಿರಪೇಕ್ಷ ಧೋರಣೆ

ವರಮಾನ ಕೇಂದ್ರಿತ ಸಾಂಪ್ರದಾಯಿಕ ಅಭಿವೃದ್ಧಿ ವಿಚಾರ ಪ್ರಣಾಲಿಕೆಯಲ್ಲಿನ ಬಹುಮುಖ್ಯ ಸಮಸ್ಯೆಯೆಂದರೆ ಅದರ ಮೌಲ್ಯ ನಿರಪೇಕ್ಷ ಧೋರಣೆ. ಮೌಲ್ಯ ನಿರಪೇಕ್ಷತೆಯು ಒಂದು ದೊಡ್ಡ ಸದ್ಗುಣವೆನ್ನುವಂತೆ ಅದಕ್ಕೆ ಉನ್ನತ ಮನ್ನಣೆ ನೀಡಲಾಗುತ್ತಿದೆ. ಅದೊಂದು ಅಪೇಕ್ಷಣೀಯ ಗುಣವೆನ್ನುವಂತೆ ನೋಡುತ್ತಾ ಬರಲಾಗಿದೆ. ಸಮಾಜದ ಎಲ್ಲ ವರ್ಗಗಳನ್ನು ಅಭಿವೃದ್ಧಿ ಒಳಗೊಳ್ಳುತ್ತದೆ. ಅಂತರ್ಗತ ಮಾಡಿಕೊಳ್ಳುತ್ತದೆ ಎಂಬ ನಂಬಿಕೆಯೇ ಮೌಲ್ಯ ನಿರಪೇಕ್ಷತೆ. ವಾಸ್ತವವಾಗಿ ಅಭಿವೃದ್ಧಿ ಎಂಬುದು ನಿರ್ವಾತದಲ್ಲಿ ಸಂಭವಿಸುವ ಕ್ರಿಯೆಯಲ್ಲ. ಅದು ಸಾಮಾಜಿಕ ಚೌಕಟ್ಟಿನೊಳಗೆ ಸಂಭವಿಸಬೇಕು. ಒಂದು ದೇಶ/ಪ್ರದೇಶದ ಸಾಮಾಜಿಕ ವ್ಯವಸ್ಥೆಯ ಸ್ವರೂಪಕ್ಕನುಗುಣವಾದ ಪರಿಯಲ್ಲಿ ಅಭಿವೃದ್ಧಿ ಸಂಭವಿಸುತ್ತದೆ. ಈ ಬಗ್ಗೆ ಅಮರ್ತ್ಯಸೇನ್‌ ಹೀಗೆ ಬರೆಯುತ್ತಾರೆ. “ವಿವಿಧ ಬಗೆಯ ಅಸಮಾನತೆ ತಾರತಮ್ಯಗಳು ಸಮಾಜದ ಮೂಲದಲ್ಲಿ ರುವ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಗಳ ಅಸೌಷ್ಟವತೆಯ ಅಭಿವ್ಯಕ್ತಿಯಾಗಿರುತ್ತವೆ” (೧೯೯೪). ಒಟ್ಟಿನಲ್ಲಿ ಅಭಿವೃದ್ಧಿ ಪ್ರಕ್ರಿಯೆಯು ಸಾಮಾಜಿಕ ವ್ಯವಸ್ಥೆಯಿಂದ ಅತೀತವಾಗಿರುವುದಿಲ್ಲ. ಏಣಿಶ್ರೇಣಿ, ಲಿಂಗತಾರತಮ್ಯ, ಜಾತಿಭೇದಗಳಿಂದ ಕೂಡಿರುವ ನಮ್ಮ ಸಮಾಜದ ಸಂದರ್ಭದಲ್ಲಿ ಅಭಿವೃದ್ಧಿಯು ಉನ್ನತವರ್ಗದ ಪ್ರತಿಷ್ಠಿತರ ಹಿತಾಸಕ್ತಿಗಳನ್ನು ಮಾತ್ರ ಪೂರೈಸುತ್ತಿರುತ್ತದೆ. ಉನ್ನತ ವರ್ಗದ, ಪ್ರತಿಷ್ಠಿತ ವರ್ಗದ, ಎಲೈಟ್ ವರ್ಗದ, ಪುರುಷ ವರ್ಗದ ಹಿತಾಸಕ್ತಿಗಳು, ಸಮಸ್ಯೆಗಳು ಇಡೀ ಸಮಾಜದ ಹಿತಾಸಕ್ತಿಗಳು, ಸಮಸ್ಯೆಗಳು ಎನ್ನುವಂತೆ ಪ್ರತಿಪಾದಿಸಲಾಗುತ್ತಿದೆ. ಈ ಬಗೆಯ ‘ಅಪ್ರೋಚ್ ಬಯಾಸ್’ ಅಭಿವೃದ್ಧಿ ಪ್ರಕ್ರಿಯೆಯ ಮೂಲದಲ್ಲಿ ಕೆಲಸ ಮಾಡುತ್ತಿರುತ್ತದೆ.

ಈ ನಿರಪೇಕ್ಷತಾ ಧೋರಣೆಯನ್ನು ಕೈಬಿಡಬೇಕಾಗುತ್ತದೆ. ಸಮಾಜದಲ್ಲಿರುವ ದುರ್ಬಲರ, ದಲಿತರ, ದಮನಕ್ಕೆ ಒಳಗಾದವರ, ಮಹಿಳೆಯರ ಹಿತಾಸಕ್ತಿಗಳನ್ನು ಅಭಿವೃದ್ಧಿ ಆದ್ಯತೆಯಾಗಿ ಪರಿಗಣಿಸಬೇಕು. ಇದನ್ನು ಪ್ರಜ್ಞಾಪೂರ್ವಕ ವಾಗಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಅಳವಡಿಸಬೇಕಾಗುತ್ತದೆ. ಗದಗ ಜಿಲ್ಲೆಯ ಸಂದರ್ಭದಲ್ಲಿ ಅಭಿವೃದ್ಧಿಯು ೧.೪೮ ಲಕ್ಷದಷ್ಟಿರುವ ಕೃಷಿ ಕಾರ್ಮಿಕರ ಹಾಗೂ ೪.೨೨ ಲಕ್ಷದಷ್ಟಿರುವ ಮಹಿಳೆಯರ ಹಿತಾಸಕ್ತಿಗಳನ್ನು ಪೂರೈಸುವ ವ್ರತವನ್ನು ಕೈಗೊಳ್ಳಬೇಕಾಗುತ್ತದೆ. ಜಿಲ್ಲೆಯಲ್ಲಿರುವ ಒಟ್ಟು ಪರಿಶಿಷ್ಟ ಜನಸಂಖ್ಯೆ ೨.೨೮ ಲಕ್ಷ. ಒಟ್ಟು ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇ.೧೬.೨೩. ಈ ವರ್ಗದ ಹಿತಾಸಕ್ತಿಗಳನ್ನು ಪೂರೈಸುವ, ಈ ವರ್ಗದ ಜನರ ಬದುಕನ್ನು ಉತ್ತಮ ಪಡಿಸುವ ದೀಕ್ಷೆಯನ್ನು ಅಭಿವೃದ್ಧಿ ತೊಡಬೇಕಾಗುತ್ತದೆ. ಮೌಲ್ಯ ನಿರಪೇಕ್ಷತೆ ಎಂಬುದೇನು ಅಪೇಕ್ಷಣೀಯ ಗುಣವಲ್ಲ. ನಿರ್ದಿಷ್ಟ ಧೋರಣೆಯನ್ನು ತಳೆಯಬೇಕಾದುದು ಅಭಿವೃದ್ಧಿಯ ಗುಣವಾಗಬೇಕು.

ಉತ್ತಮ ಬದುಕೊ ಅಥವಾ ಉನ್ನತ ವರಮಾನವೋ?

ವರಮಾನವು ಅಭಿವೃದ್ಧಿಯ ಮಟ್ಟವನ್ನು ಮಾಪನ ಮಾಡುವ ಅಳತೆಗೋಲಾಗಿದೆ. ಓಂದು ದೇಶ/ಪ್ರದೇಶದ ವರಮಾನದಲ್ಲಾಗುವ ವೃದ್ಧಿಯನ್ನೇ ಅಭಿವೃದ್ಧಿ ಎಂದು ಕರೆಯಲಾಗಿದೆ. ವರಮಾನದಲ್ಲಿನ ಏರಿಕೆಯನ್ನು ಅಭಿವೃದ್ಧಿಗೆ ಸಂವಾದಿಯನ್ನಾಗಿ ಮಾಡಲಾಗಿದೆ. ವರಮಾನದಲ್ಲಿನ ಏರಿಕೆಯನ್ನು ಉಂಟುಮಾಡುವುದೇ ಅಭಿವೃದ್ಧಿಯ ಗುರಿಯಾಗಿದೆ. ಈ ಬಗೆಯ ಅಭಿವೃದ್ಧಿ ವಿಚಾರಧಾರೆಯಲ್ಲಿ ಜನರ ಬದುಕಿಗೆ ಸಂಬಂಧಪಟ್ಟ ಅನೇಕ ಸಂಗತಿಗಳು ಆರೋಗ್ಯ, ಅಕ್ಷರ, ಆಹಾರ, ಆವಾಸ ಮುಂತಾದವು ಅಪ್ರಧಾನವಾಗಿ ಬಿಡುತ್ತವೆ. ಆದರೆ ಜನರ ಬದುಕು ಉತ್ತಮಗೊಳಿಸುವುದು ಆರೋಗ್ಯ ಅಕ್ಷರ, ಆಹಾರ, ಆವಾಸ ಮುಂತಾದವುಗಳ ಲಭ್ಯತೆ ಹಾಗೂ ಬಳಕೆಯನ್ನು ಅವಲಂಬಿಸಿಕೊಂಡಿರುತ್ತದೆ. ವಾಸ್ತವವಾಗಿ ಆರೋಗ್ಯ – ಅಕ್ಷರ, ಭದ್ರತೆ ಮುಂತಾದವು ಉತ್ತಮ ಬದುಕಿನ ಅಂತರ್ಗತ ಭಾಗಗಳೇ ಆಗಿವೆ. ಉತ್ತಮ ಬದುಕು ಎಂದರೆ ಆರೋಗ್ಯವಂತ ಬದುಕು. ದೀರ್ಘಕಾಲ ಬದುಕುವ ಬದುಕು, ಅಕ್ಷರ ವಿದ್ಯೆಯನ್ನು ಒಳಗೊಂಡ ಬದುಕು, ವರಮಾನವು ಅಭಿವೃದ್ಧಿಯ ಸಾಧನವೇ ವಿನಾ ಅದೇ ಅಭಿವೃದ್ಧಿಯಲ್ಲ. ಆದರೆ ಆರೋಗ್ಯ – ಅಕ್ಷರ ವಿದ್ಯೆಗಳು ಅಭಿವೃದ್ಧಿಯ ಸಾಧನ ಗಳೂ ಹೌದು ಮತ್ತು ಅವು ಅಭಿವೃದ್ಧಿಯ ಅಂರ್ತಗತ ಭಾಗಗಳೂ ಆಗಿವೆ. ಆದರೆ ಸಾಂಪ್ರದಾಯಿಕ ಅಭಿವೃದ್ಧಿ ವಿಚಾರ ಪ್ರಣಾಳಿಕೆಯಲ್ಲಿ ‘ವರಮಾನ’ವೇ ಅಭಿವೃದ್ಧಿ ಎನ್ನುವಂತಾಗಿಬಿಟ್ಟಿದೆ. ಅಮರ್ತ್ಯಸೇನ್ ಹೇಳುತ್ತಾರೆ – ವರಮಾನವು ಅಭಿವೃದ್ಧಿಯ ಉಪಕರಣವಾಗಿದೆ. ಜನರ ಬದುಕು ಉತ್ತಮಗೊಳ್ಳುವ ಪರಿಯೇ ಅಭಿವೃದ್ಧಿ. ಜನರು ಜನರ ಬದುಕು ಅಭಿವೃದ್ಧಿಯ ಸಾಧನವೂ ಹೌದು ಮತ್ತು ಸಾಧ್ಯವೂ ಹೌದು. ಅಮರ್ತ್ಯಸೇನ್ ಪ್ರಕಾರ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಆರೋಗ್ಯ – ಅಕ್ಷರಗಳು ತಮ್ಮ ಅಂತಸ್ಥವಾದಿ ಪಾತ್ರದಿಂದಾಗಿ ತುಂಬಾ ಮುಖ್ಯವಾಗುತ್ತವೆ. ಆರೋಗ್ಯ ಭಾಗ್ಯ, ಸಾಕ್ಷರತೆ ಮುಂತಾದವು ತಮ್ಮಷ್ಟಕ್ಕೆ ತಾವು ಮಹತ್ವದ್ದಾಗಿವೆ. ಅವುಗಳು ಜನರ ಬದುಕಿನ ಅಂತಸ್ಥ ಭಾಗಗಳಾಗಿವೆ. ಅವು ಅಭಿವೃದ್ಧಿಯ ಉಪಕರಣಗಳು ಹೌದು ಮತ್ತು ಅಭಿವೃದ್ಧಿಯ ಅಂತಸ್ಥ ಭಾಗಗಳೂ ಹೌದು.

ಅಂದ ಮೇಲೆ ಅಭಿವೃದ್ಧಿಯ ಗುರಿ ಕೇವಲ ವರಮಾನದ ಏರಿಕೆಯಾಗಿ ಬಿಡಬಾರದು. ಜನರ ಬದುಕು ಉತ್ತಮಗೊಳ್ಳುವ ಪರಿಯೇ ಅಭಿವೃದ್ಧಿ. ಬದುಕನ್ನು ಉತ್ತಮಪಡಿಸಿಕೊಳ್ಳಲು ಲಭ್ಯವಿರುವ ಅವಕಾಶಗಳನ್ನು ತನ್ನದಾಗಿಸಿಕೊಳ್ಳುವ ‘ಸಾಮರ್ಥ್ಯ’ ಹಾಗೂ ಲಭ್ಯವಿರುವ ಅವಕಾಶಗಳಲ್ಲಿ ಜನರು ತಮಗೆ ಅಗತ್ಯವಾದುದನ್ನು ಆಯ್ಕೆ ಮಾಡಿಕೊಳ್ಳುವ ‘ಸ್ವಾತಂತ್ರ್ಯ’ಗಳನ್ನು ಅಮರ್ತ್ಯಸೇನ್ ‘ಧಾರಣಶಕ್ತಿ’ ಎಂದು ಕರೆದಿದ್ದಾರೆ. ಈ ಧಾರಣಶಕ್ತಿಯ ಸಂವರ್ಧನೆಯೇ ಅಭಿವೃದ್ಧಿ. ಧಾರಣಶಕ್ತಿಯ ದುಸ್ಥಿತಿಯೇ ಬಡತನ.

ಗದಗ ಜಿಲ್ಲೆಯ ಸಂದರ್ಭದಲ್ಲಿ ಜನರ ಬದುಕು ತೀವ್ರ ದುಸ್ಥಿತಿಯಿಂದ ನರಳುತ್ತಿದೆ. ಆರೋಗ್ಯ ಸೌಲಭ್ಯಗಳು ಉತ್ತಮವಾಗಿಲ್ಲ. ಅನಕ್ಷರತೆ ತಾಂಡವಾಡುತ್ತಿವೆ. ಲಿಂಗತಾರತಮ್ಯವು ತೀವ್ರವಾಗಿದೆ. ಇದರಿಂದಾಗಿ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಸಾಕ್ಷರತೆ, ಅಕ್ಷರವಿದ್ಯೆ, ಆಹಾರಭದ್ರತೆಗಳನ್ನು ಉತ್ತಮಪಡಿಸುವ ಅಗತ್ಯವಿದೆ.

ವರಮಾನದಲ್ಲಿ ಅಸಮಾನತೆಯ ಸ್ವರೂಪ

ಈಗಾಗಲೇ ನೋಡಿರುವಂತೆ ಜಿಲ್ಲೆಯಲ್ಲಿ ಪ್ರಾಥಮಿಕ ವಲಯವನ್ನು ಅವಲಂಬಿಸಿ ಕೊಂಡಿರುವ ದುಡಿಮೆಗಾರ ವರ್ಗದ ಪ್ರಮಾಣ ಶೇ.೭೩.೯೫. ಈ ಪ್ರಮಾಣದ ದುಡಿಮೆಗಾರ ವರ್ಗವು ಜಿಲ್ಲೆಯ ವರಮಾನದಲ್ಲಿ ಕೇವಲ ಶೇ.೩೭.೬೦ರಷ್ಟು ಪಾಲು ಪಡೆದಿದೆ. ಈ ವಲಯದಲ್ಲಿನ ದುಡಿಮೆಗಾರ ವರ್ಗದ ತಲಾ ಉತ್ಪನ್ನ ಕೇವಲ ರೂ.೧೦೭.೧೨. ಆದರೆ ಪ್ರಾಥಮಿ ಕೇತರ ವಲಯದಲ್ಲಿರುವ ಶೇ.೨೬.೦೫ರಷ್ಟು ದುಡಿಮೆಗಾರ ವರ್ಗವು ಜಿಲ್ಲೆಯ ವರಮಾನದ ಶೇ.೬೪.೪೦ರಷ್ಟನ್ನು ಅನುಭವಿಸುತ್ತಿದೆ. ಈ ವಲಯದಲ್ಲಿನ ದುಡಿಮೆಗಾರ ವರ್ಗದ ತಲಾ ಉತ್ಪನ್ನ ರೂ.೫೦೪. ಸಮಾಜದ ಉನ್ನತ ಜಾತಿ/ ವರ್ಗದ ಜನರು ಮಾತ್ರ ಪ್ರಾಥಮಿಕೇತರ ವರ್ಗವನ್ನು ಪ್ರವೇಶಿಸಬಹುದು. ಕೆಳಜಾತಿ/ವರ್ಗದ ಜನತೆಯು ಪ್ರಾಥಮಿಕೇತರ ವಲಯವನ್ನು ಪ್ರವೇಶಿಸುವುದು ಕಷ್ಟ ಸಾಧ್ಯ. ಪ್ರಾಥಮಿಕೇತರ ವಲಯದಲ್ಲಿರುವ ಕಡಿಮೆ ಸಂಖ್ಯೆಯ ದುಡಿಮೆಗಾರ ವರ್ಗ ವರಮಾನದಲ್ಲಿ ಸಿಂಹಪಾಲು ಪಡೆಯುತ್ತಿದ್ದರೆ ಪ್ರಾಥಮಿಕ ವಲಯದಲ್ಲಿರುವ ಬೃಹತ್ ಜನವರ್ಗವು ಜಿಲ್ಲೆಯ ವರಮಾನದಲ್ಲಿ ಅತಿ ಕಡಿಮೆ ಪಾಲು ಪಡೆದಿದೆ. ಈ ವಿವರಗಳಿಂದ ಗದಗ ಜಿಲ್ಲೆಯಲ್ಲಿರುವ ಆರ್ಥಿಕ ಅಸಮಾನತೆಯ ಸ್ಪಷ್ಟ ಚಿತ್ರ ಮೂಡುತ್ತದೆ.

ಪ್ರಾಥಮಿಕ ವಲಯದಲ್ಲಿ ಭೂಮಾಲೀಕತ್ವದಲ್ಲಿನ ಅಸಮಾನತೆ ಸ್ವರೂಪವನ್ನು ಹಿಂದೆ ಚರ್ಚಿಸಲಾಗಿದೆ. ಇದರಿಂದಾಗಿ ಗದಗ ಜಿಲ್ಲೆಗೆ ಸಂಬಂಧಿಸಿದಂತೆ ಅಭಿವೃದ್ಧಿಯನ್ನು ಹೇಗೆ ಸಮಾಜಮುಖಿಯನ್ನಾಗಿಸುವುದು? ಜನಮುಖಿಯನ್ನಾಗಿಸು ವುದು? ಲಿಂಗೀಕರಣಗೊಳಿಸುವುದು? ಎಂಬ ಪ್ರಶ್ನೆಗಳು ಮುಂದಿನ ಶತಮಾನದಲ್ಲಿ ಮುಖ್ಯವಾಗುತ್ತವೆ – ಮುಖ್ಯವಾಗಬೇಕು.

ಬಹುರೂಪಿ ಅಭಿವೃದ್ಧಿ

ಗದಗ ಜಿಲ್ಲೆಯ ಆರ್ಥಿಕತೆಯ ಮೂಲ ಲಕ್ಷಣ ಏಕರೂಪತೆ. ಈ ಜಿಲ್ಲೆಯ ದುಡಿಮೆಗಾರರಲ್ಲಿ ಶೇ.೭೩.೯೫ರಷ್ಟು ಜನರು ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿದ್ದಾರೆ. ಇದೊಂದು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಈ ಏಕರೂಪಿ ಸ್ವರೂಪವನ್ನು ಬದಲಾಯಿಸಿ ಬಹುರೂಪಿ ಆರ್ಥಿಕತೆಯನ್ನಾಗಿಸಬೇಕಾಗಿದೆ. ಪ್ರಾಥಮಿಕೇತರ ಚಟುವಟಿಕೆಗಳನ್ನು ತೀವ್ರಗತಿಯಲ್ಲಿ ಬೆಳಸಬೇಕಾಗಿದೆ.

ಪ್ರಾಥಮಿಕೇತರ ಚಟುವಟಿಕೆಗಳನ್ನು ಬೆಳಸಬೇಕು – ಬಹುರೂಪಿ ಆರ್ಥಿಕತೆಯನ್ನಾಗಿಸಬೇಕು ಎಂದರೆ ನಗರೀಕರಣವಲ್ಲ. ಗ್ರಾಮೀಣ ಪ್ರದೇಶದಲ್ಲೇ ಕೃಷಿಯೇತರ ಗ್ರಾಮೀಣ ಚಟುವಟಿಕೆಗಳನ್ನು ಬೆಳಸಬೇಕಾಗಿದೆ. ಕರಕುಶಲ, ಕೈಮಗ್ಗ, ಸಣ್ಣ ಪುಟ್ಟ ಯಂತ್ರಗಳ ತಯಾರಿಕೆ, ರಿಪೇರಿ, ಸಣ್ಣ ಪುಟ್ಟ ಅಂಗಡಿ, ಹೋಟೆಲು, ಹಣಕಾಸು ಸೇವೆ ಮುಂತಾದ ಚಟುವಟಿಕೆ ಗಳನ್ನು ಬೆಳಸುವುದರ ಮೂಲಕ ಜನರಿಗೆ ಉದ್ಯೋಗವನ್ನು ಒದಗಿಸಬಹುದು. ಬಹುರೂಪಿ ಆರ್ಥಿಕತೆಯೆಂದರೆ Diversified economy ಎಂದರೆ ವೃತ್ತಿಗಳ ಬಹುರೂಪತೆಯಾಗಿದೆ. ಏಕರೂಪಿ ಆರ್ಥಿಕತೆಗಳು ದಿಢೀರನೆ ಉಂಟಾಗುವ ಆರ್ಥಿಕ ಕುಸಿತವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಬಹುರೂಪಿ ಆರ್ಥಿಕತೆಗಳು ಆರ್ಥಿಕ ಕುಸಿತವನ್ನು ತಡೆದುಕೊಳ್ಳಬಲ್ಲವು. ಏಕೆಂದರೆ ಇಲ್ಲಿ ಒಂದು ವೃತ್ತಿಗೆ ಸಂಬಂಧಿಸಿದಂತೆ ಸಂಕಷ್ಟ ಉಂಟಾದಾಗ ಆರ್ಥಿಕತೆಯು ಇಂಥ ಹೊಡೆತಗಳನ್ನು ಇನ್ನೊಂದು ವೃತ್ತಿಯ ಸಮೃದ್ಧತೆಯಿಂದ ತಡೆದುಕೊಳ್ಳಬಲ್ಲದು. ಆದ್ದರಿಂದ ಜಿಲ್ಲಾಮಟ್ಟದಲ್ಲಿ ಪ್ರಾಥಮಿ ಕೇತರ ಚಟುವಟಿಕೆಗಳನ್ನು ಬೆಳಸಲು ಸಾಧ್ಯವಾಗುವ ಅಭಿವೃದ್ಧಿ ಯೋಜನೆಯನ್ನು ರೂಪಿಸಬೇಕಾಗಿದೆ.