ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗವು ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ ಎಂಬ ಯೋಜನೆಯನ್ನು ೧೯೯೮ರಲ್ಲಿ ಪ್ರಾರಂಭಿಸಿದೆ. ಅಭಿವೃದ್ಧಿ ಅಧ್ಯಯನಗಳನ್ನು ಸಿದ್ಧಪಡಿಸಲಾಗುವುದು. ಈಗಾಗಲೆ ಈ ಅಧ್ಯಯನದ ಒಂದು ಭಾಗವಾಗಿ ಕರ್ನಾಟಕದ ೨೭ ಜಿಲ್ಲೆಗಳ ಅಭಿವೃದ್ಧಿ ಸಂಬಂಧಿ ವಿಷಯಗಳನ್ನು ಒಳಗೊಂಡ ‘ಮಾಹಿತಿ ಕೋಶ’ವನ್ನು ವಿಭಾಗವು ಪ್ರಕಟಿಸಿದೆ. ಜಿಲ್ಲಾ ಅಭಿವೃದ್ಧಿ ಅಧ್ಯಯನವೆಂದರೇನು? ಅದರ ವ್ಯಾಪ್ತಿ, ಉದ್ದೇಶ ಮುಂತಾದವುಗಳನ್ನು ಮುಂದೆ ವಿವರಿಸಿದೆ. ಈ ಅಧ್ಯಯನ ಯೋಜನೆಯ ಮೊದಲ ಹಂತದಲ್ಲಿ ೧೯೯೭ರಲ್ಲಿ ಅಸ್ತಿತ್ವಕ್ಕೆ ಬಂದ ಏಳು ಹೊಸ ಜಿಲ್ಲೆಗಳ ಅಭಿವೃದ್ಧಿ ಅಧ್ಯಯನವನ್ನು ವಿಭಾಗವು ಕೈಗೆತ್ತಿಕೊಂಡಿದೆ. ಮುಂದಿನ ಹಂತದಲ್ಲಿ ಉಳಿದ ೨೦ ಜಿಲ್ಲೆಗಳ ಅಭಿವೃದ್ಧಿ ಅಧ್ಯಯನಗಳನ್ನು ಸಿದ್ಧಪಡಿಸಲಾಗುವುದು. ಈಗಾಗಲೇ ಈ ಅಧ್ಯಯನದ ಒಂದು ಭಾಗವಾಗಿ ಕರ್ನಾಟಕದ ೨೭ ಜಿಲ್ಲೆಗಳ ಅಭಿವೃದ್ಧಿ ಸಂಬಂಧಿ ವಿಷಯಗಳನ್ನು ಒಳಗೊಂಡ ‘ಮಾಹಿತಿ ಕೋಶ’ವನ್ನು ವಿಭಾಗವು ಪ್ರಕಟಿಸಿದೆ.

೧೯೮೮ರಲ್ಲಿ ಬೆಂಗಳೂರು ಜಿಲ್ಲೆಯನ್ನು ವಿಭಜಿಸಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಎಂಬ ಜಿಲ್ಲೆಗಳನ್ನು ರೂಪಿಸಲಾಯಿತು. ಅದನ್ನು ಬಿಟ್ಟರೆ ರಾಜ್ಯದಲ್ಲಿ ಜಿಲ್ಲೆಗಳ ಪುನರ್ವಿಂಗಡಣೆ ನಡೆದಿರಲಿಲ್ಲ. ೧೯೯೭ರಲ್ಲಿ ನಡೆದ ಜಿಲ್ಲೆಗಳ ಪುನರ್ವಿಂಗಡಣೆಯನ್ನು ಸಮಗ್ರವೆಂದು ಹೇಳಲು ಸಾಧ್ಯವಿಲ್ಲ. ಜಿಲ್ಲೆಗಳ ಪುನರ್ವಿಂಗಡಣೆ ಕೆಲಸವು ಅಪೂರ್ಣವಾಗಿ ಉಳಿದಿದೆ. ಜಿಲ್ಲೆಗಳ ಪುನರ್‌ಸಂಘಟನೆಗಾಗಿ ಸಲಹೆ ನೀಡಲು, ಅಧ್ಯಯನ ನಡೆಸಲು ಸರ್ಕಾರವು ನೇಮಿಸಿದ್ದ ಸಮಿತಿಯ ಸಲಹೆ – ಶಿಫಾರಸ್ಸುಗಳು ಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಉದಾಹರಣೆಗೆ ಕರ್ನಾಟಕದ ಜಿಲ್ಲೆಗಳ ಮತ್ತು ತಾಲ್ಲೂಕುಗಳ ಪುನರ್‌ಸಂಘಟನೆಗಾಗಿ ನೇಮಿಸಿದ್ದ ವಾಸುದೇವರಾವ್ ಏಕಸದಸ್ಯ ಸಮಿತಿಯು ನೀಡಿದ್ದ ಸಲಹೆಗಳು ಜಾರಿಗೊಂಡಿಲ್ಲ. ಆ ಸಮಿತಿಯು ಕೇವಲ ಎರಡು ಹೊಸ ಜಿಲ್ಲೆಗಳನ್ನು ರಚಿಸಲು ಸಲಹೆ ನೀಡಿತ್ತು. ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಕೂಡ ಅನೇಕ ಬದಲಾವಣೆಗಳನ್ನು ಸಲಹೆ ಮಾಡಿತ್ತು. ಆದರೆ ಅವುಗಳು ಯಾವುವು ಜಾರಿಗೆ ಬಂದಿಲ್ಲ ರಾವ್ ಸಮಿತಿಯು ಸಲಹೆ ಮಾಡಿದ್ದ ಎರಡು ಹೊಸ ಜಿಲ್ಲೆಗಳೆಂದರೆ ಗದಗ ಮತ್ತು ಶಹಪುರ. ಧಾರವಾಡ ಜಿಲ್ಲೆಯನ್ನು ವಿಭಜಿಸಿ ಗದಗವನ್ನು ಹೊಸ ಜಿಲ್ಲೆಯಾಗಿ ನಿರ್ಮಾಣ ಮಾಡಲಾಗಿದೆ. ಆದರೆ ‘ಗುಲಬರ್ಗಾ’ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆಯೊಂದನ್ನು ರೂಪಿಸುವ ಕೆಲಸ ಇನ್ನೂ ನಡೆದಿಲ್ಲ. ಗುಲಬರ್ಗಾಕ್ಕೆ ಸಂಬಂಧಿಸಿದಂತೆ ಹೊಸ ಜಿಲ್ಲೆಯ ಕೇಂದ್ರ ಯಾವುದಿರಬೇಕು ಎಂಬುದರ ಬಗ್ಗೆ ಒಮ್ಮತದ ತೀರ್ಮಾನ ಸಾಧ್ಯವಾಗಿಲ್ಲ. ಸದ್ಯ ಈ ವಿಷಯ ನೆನೆಗುದಿಗೆ ಬಿದ್ದಿದೆ.

ಜಿಲ್ಲಾ ಪುನರ್ವಿಂಗಡಣೆಗೆ ಯಾವುದು ಮಾನದಂಡ ?

೧೯೯೭ರಲ್ಲಿ ಕರ್ನಾಟಕ ಸರ್ಕಾರವು ಏಳು ಹೊಸ ಜಿಲ್ಲೆಗಳನ್ನು ರೂಪಿಸಿತು. ಅವುಗಳಲ್ಲಿ ನಾಲ್ಕು ಉತ್ತರ ಕರ್ನಾಟಕ ಪ್ರದೇಶದಲ್ಲಿವೆ ಮತ್ತು ಮೂರು ದಕ್ಷಿಣ ಕರ್ನಾಟಕದಲ್ಲಿವೆ. ದಕ್ಷಿಣ ಕನ್ನಡ, ಬಿಜಾಪುರ, ಮೈಸೂರು ಮತ್ತು ರಾಯಚೂರು ಜಿಲ್ಲೆಗಳನ್ನು ವಿಭಜಿಸಿ ಕ್ರಮವಾಗಿ ಉಡುಪಿ, ಬಾಗಲಕೋಟೆ, ಚಾಮರಾಜನಗರ ಮತ್ತು ಕೊಪ್ಪಳ ಎಂಬ ಹೊಸ ಜಿಲ್ಲೆ ಗಳನ್ನು ರಚಿಸಲಾಗಿದೆ. ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದ ಧಾರವಾಡ ಜಿಲ್ಲೆಯನ್ನು ವಿಭಜಿಸಿ ಗದಗ ಮತ್ತು ಹಾವೇರಿ ಎಂಬ ಎರಡು ಹೊಸ ಜಿಲ್ಲೆಗಳಾಗಿ ರೂಪಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳನ್ನು (ಜಗಳೂರು,ದಾವಣಗೆರೆ ಮತ್ತು ಹರಿಹರ), ಶಿವಮೊಗ್ಗ ಜಿಲ್ಲೆಯ ಎರಡು ತಾಲ್ಲೂಕುಗಳನ್ನು (ಚನ್ನಗಿರಿ ಮತ್ತು ಹೊನ್ನಾಳಿ) ಮತ್ತು ಬಳ್ಳಾರಿ ಜಿಲ್ಲೆಯ ಒಂದು ತಾಲ್ಲೂಕನ್ನು (ಹರಪನಹಳ್ಳಿ) ಕೂಡಿಸಿ ದಾವಣಗೆರೆ ಜಿಲ್ಲೆಯನ್ನು ಹೊಸದಾಗಿ ರಚಿಸಲಾಗಿದೆ. ಹೀಗೆ ಏಳು ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದಿವೆ. ಈ ಏಳು ಜಿಲ್ಲೆಗಳನ್ನು ಹೊಸದಾಗಿ ನಿರ್ಮಾಣ ಮಾಡಿದ್ದರಿಂದ ಅವುಗಳ ಎಂಟು ತಾಯಿ ಜಿಲ್ಲೆಗಳ ವಿಸ್ತೀರ್ಣ ಹಾಗೂ ಜನಸಂಖ್ಯೆ ಪ್ರಮಾಣ ಬದಲಾವಣೆಗೆ ಒಳಗಾಗಿವೆ. ಈಗ ರಾಜ್ಯದಲ್ಲಿ ೨೭ ಜಿಲ್ಲೆಗಳಿವೆ. ತಾಲ್ಲೂಕುಗಳ ಸಂಖ್ಯೆ ೧೭೫. ಹೊಸ ಜಿಲ್ಲೆಗಳು ತಮ್ಮ ಜಿಲ್ಲೆಗಳನ್ನು ಕಟ್ಟುವ ಕೆಲಸ ಪ್ರಾರಂಭಿಸಿವೆ. ೧೯೯೮ರಲ್ಲಿ ಏಳು ಹೊಸ ಜಿಲ್ಲೆಗಳು ತಮ್ಮ ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಿವೆ.

ರಾಜ್ಯದಲ್ಲಿ ಜಿಲ್ಲೆಗಳ ಪುನರ್ವಿಂಗಡಣೆಗೆ ಪೂರ್ವದಲ್ಲಿ ಅಂದರೆ ಜಿಲ್ಲೆಗಳ ಸಂಖ್ಯೆ ೨೦ ಇದ್ದಾಗ ಜಿಲ್ಲೆಗಳ ಸರಾಸರಿ ವಿಸ್ತೀರ್ಣ ೯೫೮೯.೫೫ ಚದರ ಕಿಲೋಮೀಟರ್ (ಚ.ಕಿ.ಮೀ) ಇತ್ತು. ಆಗ ೧೦ ಜಿಲ್ಲೆಗಳ ವಿಸ್ತೀರ್ಣವು ಜಿಲ್ಲೆಗಳ ಸರಾಸರಿ ವಿಸ್ತೀರ್ಣಕ್ಕಿಂತ ಅಧಿಕವಿತ್ತು. ಜಿಲ್ಲೆಗಳ ಪುನರ್ವಿಂಗಡಣೆ ನಂತರ ರಾಜ್ಯದಲ್ಲಿ ಜಿಲ್ಲಾ ಸರಾಸರಿ ವಿಸ್ತೀರ್ಣವು ೭೧೦೩.೩೩ ಚ.ಕಿ.ಮೀ. ಆಗಿದೆ. ಈಗಲೂ ೧೧ ಜಿಲ್ಲೆಗಳ ವಿಸ್ತೀರ್ಣವು ಜಿಲ್ಲಾ ಸರಾಸರಿ ವಿಸ್ತೀರ್ಣಕ್ಕಿಂತ ಅಧಿಕವಾಗಿದೆ. ವಿಸ್ತೀರ್ಣದ ದೃಷ್ಟಿಯಿಂದ ಗುಲಬರ್ಗಾ (೧೬೨೨೪ ಚ.ಕಿ.ಮೀ.) ಮತ್ತು ಬೆಳಗಾವಿ (೧೩೪೨೫ ಚ.ಕಿ.ಮೀ.) ಜಿಲ್ಲೆಗಳು ಅತಿ ದೊಡ್ಡ ಜಿಲ್ಲೆಗಳಾಗಿವೆ. ಜನಸಂಖ್ಯೆಯ ದೃಷ್ಟಿಯಿಂದಲೂ ಅವು ಬೃಹತ್ ಜಿಲ್ಲೆಗಳಾಗಿವೆ. ಬೆಳಗಾವಿ ಜಿಲ್ಲೆಯ ಜನ ಸಂಖ್ಯೆ ೩೫.೮೩ ಲಕ್ಷ ಮತ್ತು ಗುಲಬರ್ಗಾ ಜಿಲ್ಲೆಯ ಜನಸಂಖ್ಯೆ ೨೫.೮೭ ಲಕ್ಷ. ರಾಜ್ಯದಲ್ಲಿ ಈಗಿರುವ ಜಿಲ್ಲಾ ಸರಾಸರಿ ಜನಸಂಖ್ಯೆ ೧೬.೬೬ ಲಕ್ಷ.

ವಿಸ್ತೀರ್ಣವನ್ನಾಗಲಿ ಅಥವ ಜನಸಂಖ್ಯೆಯನ್ನಾಗಲಿ ಆಧಾರವನ್ನಾಗಿಟ್ಟುಕೊಂಡು ಹೊಸ ಜಿಲ್ಲೆಗಳನ್ನು ರೂಪಿಸಿಲ್ಲ ಎಂಬುದು ಮೇಲಿನ ಚರ್ಚೆಯಿಂದ ಸ್ಪಷ್ಟವಾಗುತ್ತದೆ. ಈಗ ರಚಿಸಲಾಗಿರುವ ಹೊಸ ಏಳು ಜಿಲ್ಲೆಗಳ ಸರಾಸರಿ ವಿಸ್ತೀರ್ಣ ೫೩೦೨ ಚ.ಕಿ.ಮೀ. ಈಗಿರುವ ಜಿಲ್ಲಾ ಸರಾಸರಿ ವಿಸ್ತೀರ್ಣಕ್ಕಿಂತ ಕಡಿಮೆಯಾಗಿದೆ. ಬೆಂಗಳೂರು ಜಿಲ್ಲೆಯನ್ನು ‘ಅಪವಾದ’ವೆಂದು ಕೈಬಿಟ್ಟರೆ ಇಂದು ರಾಜ್ಯದಲ್ಲಿರುವ ಅತ್ಯಂತ ಚಿಕ್ಕ ಜಿಲ್ಲೆಯೆಂದರೆ ಉಡುಪಿ (೩೮೫೧ ಚ.ಕಿ,ಮೀ.) ಇದರ ನಂತರ ಕೊಡಗು (೪೧೦೨ ಚ.ಕಿ.ಮೀ.) ಮತ್ತು ಧಾರವಾಡ (೪೨೪೯ ಚ.ಕಿ.ಮೀ.) ಜಿಲ್ಲೆಗಳು ಬರುತ್ತವೆ.

ಕರ್ನಾಟಕದಲ್ಲಿ ಜಿಲ್ಲೆಗಳನ್ನು ಹಾಗೂ ತಾಲ್ಲೂಕುಗಳನ್ನು ಪುನರ್‌ಸಂಘಟಿಸಲು ೧೯೭೩ರಲ್ಲಿ ಸರ್ಕಾರವು ನೇಮಿಸಿದ್ದ ಏಕಸದಸ್ಯ ಸಮಿತಿಯು ‘ಆದರ್ಶ ಜಿಲ್ಲೆ’ಯೊಂದರ ಗಾತ್ರ ಎಷ್ಟಿರಬೇಕು? ಎಂಬ ಪ್ರಶ್ನೆಯನ್ನು ಪರಿಶೀಲಿಸಿದೆ. ಆದರ್ಶ ಜಿಲ್ಲೆಯ ವಿಸ್ತೀರ್ಣ ೪೦೦೦ ಚ.ಕಿ.ಮೀ. ಮತ್ತು ಜನಸಂಖ್ಯೆ ೧೦ ಲಕ್ಷ ಇರಬೇಕು ಎಂಬ ಮಾನದಂಡವನ್ನು ಸಮಿತಿಯು ಪರಿಶೀಲಿಸಿದೆ. ಆದರೆ ಅಂತಿಮವಾಗಿ ಇಂತಹ ಮಾನದಂಡವನ್ನು ಎಲ್ಲ ಪ್ರದೇಶಗಳಿಗೂ ಅನ್ವಯಿಸುವುದು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಸಮಿತಿಯು ಬಂದು ಮುಟ್ಟಿದೆ. ಹೊಸ ಜಿಲ್ಲೆಗಳನ್ನು ರಚಿಸಿದಾಗ ನಿರ್ದಿಷ್ಟವಾಗಿ ಯಾವುದೇ ಸಂಗತಿಯನ್ನು ಮಾನದಂಡವಾಗಿ ಬಳಸಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿಬಿಡಬಹುದು.

ಜಿಲ್ಲಾ ಆಡಳಿತಒಂದು ಚಾರಿತ್ರಿಕ ನೋಟ

ಜಿಲ್ಲೆಯನ್ನು ಆಡಳಿತದ ಒಂದು ಮೂಲ ಘಟಕವನ್ನಾಗಿ ಬ್ರಿಟಿಷರು ರೂಪಿಸಿದರು. ‘ಜಿಲ್ಲಾಧಿಕಾರಿ’ ಎಂಬ ಪ್ರತಿಷ್ಟಿತ ಹುದ್ದೆಯನ್ನು ೧೭೭೨ರಲ್ಲಿ ರೂಪಿಸಲಾಯಿತು. ನಮ್ಮಲ್ಲಿ ಈಗಿರುವ ಜಿಲ್ಲಾ ಆಡಳಿತ ವ್ಯವಸ್ಥೆಗೆ ಸುಮಾರು ೨೦೦ ವರ್ಷ ಗಳಿಗೂ ಮಿಕ್ಕು ಇತಿಹಾಸವಿದೆ ಎಂದು ಹೇಳಬಹುದು. ವಸಾಹತುಶಾಹಿ ಕಾಲದಲ್ಲಿ ‘ರೆವಿನ್ಯೂ, ಪೊಲೀಸು ಮತ್ತು ನ್ಯಾಯಾಂಗ’ ಹೀಗೆ ಮೂರು ಅಧಿಕಾರಗಳನ್ನು ಜಿಲ್ಲಾಧಿಕಾರಿಗೆ ವಹಿಸಿಕೊಡುವ ಪದ್ಧತಿ ಜಾರಿಗೆ ಬಂತು. ಇಂದಿಗೂ ಈ ಪದ್ಧತಿಯು ಮುಂದುವರಿದಿರುವುದನ್ನು ನಾವು ನೋಡಬಹುದಾಗಿದೆ.

ಬ್ರಿಟಿಷರ ಆಳ್ವಿಕೆಯ ಪೂರ್ವದಲ್ಲಿ ಆಡಳಿತ ಘಟಕಗಳು ಇರಲಿಲ್ಲವೆಂದು ಹೇಳಲು ಸಾಧ್ಯವಿಲ್ಲ. ವಾಸ್ತವವಾಗಿ ಅಂದು ಅಸ್ತಿತ್ವದಲ್ಲಿದ್ದ ಆಡಳಿತ ಘಟಕಗಳನ್ನು ಆಧರಿಸಿಯೇ ಬ್ರಿಟಿಷರು ಜಿಲ್ಲೆಗಳನ್ನು ರೂಪಿಸಿದರು. ಬ್ರಿಟಿಷರು ರೂಪಿಸಿದ ಜಿಲ್ಲೆಗಳಿಗೆ ಆಡಳಿತ ಘಟಕವೆಂಬ ರೂಪ ಅವು ಜಿಲ್ಲೆಗಳಾಗಿ ರೂಪುಗೊಂಡ ಪೂರ್ವದಲ್ಲೆ ಇತ್ತು ಎಂಬುದನ್ನು ಗುರುತಿಸಬಹುದಾಗಿದೆ. ‘ಜಿಲ್ಲೆ’ಯೆಂಬ ಹೆಸರು ಬ್ರಿಟಿಷರ ಕಾಲದಲ್ಲಿ ಚಾಲ್ತಿಗೆ ಬಂದಿರಬಹುದು.

೧೯ನೆಯ ಶತಮಾನದ ಮಧ್ಯ ಭಾಗದಲ್ಲಿ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ‘ಜಿಲ್ಲಾ ಆಡಳಿತ’ವೆನ್ನುವುದು ಸುವ್ಯವಸ್ಥಿತ ರೂಪು ತಳೆಯಿತು. ರೆವಿನ್ಯೂ, ಪೊಲೀಸು, ನ್ಯಾಯಾಂಗ, ಜೈಲು, ನೀರಾವರಿ, ಶಿಕ್ಷಣ, ಆರೋಗ್ಯ ಮುಂತಾದ ಇಲಾಖೆ ಗಳನ್ನು ಜಿಲ್ಲಾಮಟ್ಟದಲ್ಲಿ ೧೮೪೩ – ೫೩ರ ದಶಕದಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಅಂದು ಅಸ್ತಿತ್ವಕ್ಕೆ ಬಂದ ಜಿಲ್ಲಾ ಆಡಳಿತ, ಬಹಳಷ್ಟುಮಟ್ಟಿಗೆ, ಅದೇ ರೂಪದಲ್ಲಿ ಇಂದಿಗೂ ಮುಂದುವರಿದಿದೆ.

ವಸಾಹತುಶಾಹಿ ಕಾಲದಲ್ಲಿ ‘ಜಿಲ್ಲಾಧಿಕಾರಿ’ಯು ಸರ್ಕಾರದ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದನು. ಅವನು ಸರ್ಕಾರದ ‘ಕಣ್ಣು – ಕಿವಿ’ಯಾಗಿ ಕಾರ್ಯ ನಿರ್ವಹಿಸಬೇಕಾಗಿತ್ತು. ಜಿಲ್ಲಾಧಿಕಾರಿಯ ‘ಸಲಹೆ – ಸೂಚನೆ’ ಮೇರೆಗೆ ಸರ್ಕಾರವು ನೀತಿಗಳನ್ನು ರೂಪಿಸುತ್ತಿತ್ತು. ಜಿಲ್ಲೆಯ ‘ದೊರೆ – ಪ್ರಭು’ ಎಂಬ ಅಭಿದಾನ ಜಿಲ್ಲಾಧಿಕಾರಿಗಿತ್ತು.

ಜಿಲ್ಲಾ ಆಡಳಿತಸ್ವಾತಂತ್ರ್ಯಾನಂತರ

ಬ್ರಿಟಿಷರು ಯಶಸ್ವಿಯಾಗಿ ಉಪಯೋಗಿಸಿದ್ದ, ಸಮರ್ಥವಾಗಿ ಸಂಘಟಿಸಿದ್ದ ಜಿಲ್ಲಾ ಆಡಳಿತ ವ್ಯವಸ್ಥೆ ಸ್ವಾತಂತ್ರ್ಯಾನಂತರ ಭಾರತದಲ್ಲಿ ಮುಂದುವರೆದಿದೆ. ಸಣ್ಣ – ಪುಟ್ಟ ಕೆಲವು ಬದಲಾವಣೆಗಳಾಗಿರಬಹುದು. ಜಿಲ್ಲಾಧಿಕಾರಿಯೆಂದರೆ ಜಿಲ್ಲೆಯ ‘ಪ್ರಭು’ – ‘ದೊರೆ’ ಎಂಬ ನಂಬಿಕೆಯೇ ಇಂದಿಗೂ ಮುಂದುವರಿದಿದೆ. ಇಂದಿಗೂ ಜಿಲ್ಲಾಧಿಕಾರಿ ಸರ್ಕಾರದ ‘ಕಣ್ಣು’ ‘ಕಿವಿ’ ಯಾಗಿದ್ದಾನೆ/ಳೆ. ಜಿಲ್ಲೆಯಲ್ಲಿ ಕಾನೂನು – ಶಾಂತಿ – ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಜಿಲ್ಲಾಧಿಕಾರಿಯದಾಗಿದೆ.

ಬ್ರಿಟಿಷರು ಜಿಲ್ಲೆಯನ್ನು ಒಂದು ಆಡಳಿತ ಘಟಕವಾಗಿ ಪರಿಭಾವಿಸಿಕೊಂಡಿದ್ದರು. ಆಡಳಿತದ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ವಹಿಸಿದ್ದರು. ‘ಅಭಿವೃದ್ಧಿ’ಯೆನ್ನುವುದು ವಸಾಹತುಶಾಹಿ ಆಳ್ವಿಕೆಯ ಅಜೆಂಡಾದಲ್ಲಿ ಇರಲಿಲ್ಲ. ಅದೊಂದು ಆನುಷಂಗಿಕ ಸಂಗತಿಯಾಗಿತ್ತು. ಅಭಿವೃದ್ಧಿಯೆನ್ನುವುದು ಸರ್ಕಾರದ ಜವಾಬ್ದಾರಿಯಾಗಿರಲಿಲ್ಲ. ಆರ್ಥಿಕ ಚಟುವಟಿಕೆ ಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂಬ ನೀತಿಯನ್ನು ಬ್ರಿಟಿಷರು ಅನುಸರಿಸುತ್ತಿದ್ದರು. ಇದರಿಂದಾಗಿ ಜಿಲ್ಲೆಯ ಮಟ್ಟದಲ್ಲಿ ‘ಆಡಳಿತ’ವೇ ಪ್ರಧಾನವಾಗಿ ‘ಅಭಿವೃದ್ಧಿ’ ಆನುಷಂಗಿಕವಾಗಿತ್ತು.

ಸ್ವಾತಂತ್ರ್ಯಾನಂತರ ಜಿಲ್ಲಾ ಆಡಳಿತಕ್ಕೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳಾದವು. ಜಿಲ್ಲಾ ಆಡಳಿತವನ್ನು ಅಭಿವೃದ್ಧಿ ಮುಖಿಯನ್ನಾಗಿಸುವ ಪ್ರಯತ್ನ – ಪ್ರಯೋಗ ನಡೆಯಿತು. ಈ ಪ್ರಯೋಗ – ಪ್ರಯತ್ನ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ‘ಜನರಿಗೆ – ಪ್ರಜೆಗಳಿಗೆ ಏನೂ ತಿಳಿಯುವುದಿಲ್ಲ. ಆದ್ದರಿಂದ ಅವರನ್ನು ಆಡಳಿತಕ್ಕೆ ಒಳಪಡಿಸಬೇಕು. ಅವರ ಮೇಲೆ ಆಡಳಿತ ನಡೆಸಬೇಕು’. ಈ ಬಗೆಯ ವಸಾಹತುಶಾಹಿ ಮನೋಭಾವ ಸಂಪೂರ್ಣವಾಗಿ ಮಾಯವಾಗಿದೆ ಎಂದು ಧೈರ್ಯದಿಂದ ಹೇಳಲು ಸಾಧ್ಯವಿಲ್ಲ.

ಸಂವಿಧಾನದ ೭೩ ಮತ್ತು ೭೪ನೆಯ ತಿದ್ದುಪಡಿಗಳು

ಜಿಲ್ಲೆಗಳ ಮಟ್ಟದಲ್ಲಿ ‘ಅಭಿವೃದ್ಧಿ’ಗೆ ಅಗ್ರಸ್ಥಾನ ನೀಡುವ ಒಂದು ಗಂಭೀರ ಪ್ರಯತ್ನ ೧೯೯೦ ದಶಕದ ಆರಂಭದಲ್ಲಿ ನಡೆಯಿತು. ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಇಂದು ಸಂವಿಧಾನಾತ್ಮಕ ಮನ್ನಣೆ ದೊರೆತಿದೆ. ಜಿಲ್ಲೆಗಳ ಮಟ್ಟದಲ್ಲಿ ‘ಆಡಳಿತ – ಅಭಿವೃದ್ಧಿ’ಗಳನ್ನು ಪ್ರತ್ಯೇಕಗೊಳಿಸುವ ಒಂದು ಸಣ್ಣ ಪ್ರಯತ್ನ ನಡೆದಿದೆ. ಈಗ ಆಡಳಿತ ನಿರ್ವಹಣೆಯ ಜವಾಬ್ದಾರಿ ಜಿಲ್ಲಾಧಿಕಾರಿಯದಾಗಿದ್ದರೆ ಅಭಿವೃದ್ಧಿ ನಿರ್ವಹಣೆಯ ಜವಾಬ್ದಾರಿ ಜಿಲ್ಲಾ ಪಂಚಾಯತ್‌ದಾಗಿದೆ. ವಸಾಹತು ಶಾಹಿ ಕಾಲದಲ್ಲಿ ಜಿಲ್ಲಾ ಆಡಳಿತದಲ್ಲಿ ಒಂದು ಆನುಷಂಗಿಕ ಭಾಗವಾಗಿದ್ದ ‘ಅಭಿವೃದ್ಧಿ’ ಕಾರ್ಯಭಾರಕ್ಕೆ ಇಂದು ಪ್ರತ್ಯೇಕ – ಪ್ರತಿಷ್ಟಿತ ಸ್ಥಾನ ದೊರೆತಿದೆ.

ಇಲ್ಲಿ ಒಂದು ಪ್ರಶ್ನೆ ಉದ್ಭವಿಸಬಹುದು. ಅಭಿವೃದ್ಧಿಗೆ ಸಂಬಂಧಿಸಿದಂತೆ ‘ಆಡಳಿತ’ದ ಅವಶ್ಯಕತೆ ಇಲ್ಲವೆ? ಅಭಿವೃದ್ಧಿ ಕಾರ್ಯಕ್ರಮಗಳ ಆಡಳಿತವು ನಡೆಯಬೇಕಲ್ಲ! ಇದು ಸರಿ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆಡಳಿತದ ಅಗತ್ಯವಿದೆ. ಆದರೆ ಇಲ್ಲಿ ‘ಆಡಳಿತ’ವನ್ನು ‘ರೆವಿನ್ಯೂ – ಕಾನೂನು – ಶಾಂತಿ – ಸುವ್ಯವಸ್ಥೆ – ಪೊಲೀಸು’ ಮುಂತಾದವುಗಳ ನಿರ್ವಹಣೆಗೆ ಸೀಮಿತಗೊಳಿಸಿಕೊಳ್ಳಲಾಗಿದೆ. ಆಡಳಿತವೆಂದರೆ ಕಾನೂನು, ಶಾಂತಿಪಾಲನೆ ಎಂದೂ, ರೆವಿನ್ಯೂ ಜವಾಬ್ದಾರಿ ಎಂದೂ, ಪೊಲೀಸು ವ್ಯುವಸ್ಥೆ ಎಂದೂ ತಿಳಿಯಲಾಗಿದೆ.

ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆಯೂ ಆಡಳಿತದ ಅಗತ್ಯವಿದೆ. ‘ಆಡಳಿತ ಯಂತ್ರ’ವೆನ್ನವುದು ಅಭಿವೃದ್ಧಿಯ ಅನುಷ್ಠಾನಕ್ಕೆ ಅಗತ್ಯವಾಗಿದೆ. ವಾಸ್ತವವಾಗಿ ‘ಅಭಿವೃದ್ಧಿ ಆಡಳಿತಗಾರರು’ ಎಂಬ ಒಂದು ಪರಿಭಾವನೆಯೇ ರೂಪುಗೊಂಡಿದೆ. ಇಲ್ಲಿ ಆಡಳಿತ ಎಂಬುದನ್ನು ಸೀಮಿತ ನೆಲೆಯಲ್ಲಿ ರೆವಿನ್ಯೂ ವಿಷಯಗಳ ನಿರ್ವಹಣೆಗೆ ಮಾತ್ರ ಪರಿಮಿತ ಗೊಳಿಸಿಕೊಳ್ಳಲಾಗಿದೆ.

ಅಭಿವೃದ್ಧಿ ಮತ್ತು ಆಡಳಿತ: ನಂಜುಂಡಪ್ಪನವರ ನಿಲುವು

ಜಿಲ್ಲೆಯ ಅಭಿವೃದ್ಧಿ ಹಾಗೂ ಆಡಳಿತ – ಎರಡರ ಮುಖ್ಯಸ್ಥರು ಒಬ್ಬರಾಗಿರಬೇಕೊ ಅಥವಾ ಈ ಜವಾಬ್ದಾರಿಗಳು ಬೇರೆ ಬೇರೆಯಾಗಿರಬೇಕೊ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಬ್ರಿಟಿಷರ ಕಾಲದಿಂದಲೂ ಇವೆರಡೂ ಜವಾಬ್ದಾರಿಯನ್ನು ಕಲೆಕ್ಟರ್/ಜಿಲ್ಲಾಧಿಕಾರಿಗಳೇ ನೋಡಿಕೊಳ್ಳುತ್ತಿದ್ದರು. ಸ್ವಾತಂತ್ರ್ಯಾನಂತರವೂ ಇದೇ ಪದ್ಧತಿ ಮುಂದುವರೆಯಿತು. ಆದರೆ ಈಗ ಬದಲಾಗುವ ಅಗತ್ಯದ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಭಾರತದ ಸಂವಿಧಾನಕ್ಕೆ ಮಾಡಿದ ೭೩ ಮತ್ತು ೭೪ನೆಯ ತಿದ್ದುಪಡಿಯಿಂದಾಗಿ ಈ ಚರ್ಚೆಗೆ ಹೆಚ್ಚು ತೀವ್ರತೆ ಬಂದಿದೆ.

ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಅಭಿವೃದ್ಧಿ ಕಾರ್ಯಗಳು ಪರಸ್ಪರ ಅವಲಂಬಿಯಾಗಿವೆ ಎನ್ನಲಾಗಿದೆ. ಇವೆರಡೂ ಪರಸ್ಪರ ಅವಲಂಬಿಸಿಕೊಂಡಿರುವುದರಿಂದ ಜಿಲ್ಲಾಧಿಕಾರಿ ಅಥವ ಕಲೆಕ್ಟರ್ ಅವರ ಪಾತ್ರ ಮಹತ್ವವಾದುದು ಎಂದು ಹೇಳಲಾಗಿದೆ. ಈ ದಿಶೆಯಲ್ಲಿ ಜಿಲ್ಲಾಧಿಕಾರಿ ಸಕ್ರಿಯವಾಗಿ ಭಾಗವಹಿಸದಿದ್ದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು ವಾದಿಸಲಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿ ಯೋಜನೆ ರೂಪಿಸುವ ಕಾರ್ಯದಲ್ಲಿ ಜಿಲ್ಲಾಧಿಕಾರಿಯು ಸಮನ್ನಯ ಅಧಿಕಾರಿಯಾಗಿ ಕೆಲಸ ನಿರ್ವಹಿಸಬೇಕು ಎಂದೂ ಹೇಳಲಾಗುತ್ತಿದೆ. ವಾಸ್ತವವಾಗಿ ಜಿಲ್ಲಾಕಲೆಕ್ಟರ್/ಜಿಲ್ಲಾಧಿಕಾರಿಯ ಮುಖ್ಯ ಜವಾಬ್ದಾರಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು, ಶಾಂತಿಯನ್ನು ಕಾಪಾಡುವುದು. ಇದಕ್ಕಾಗಿಯೇ ಅವರು ನಿಯೋಜಿತರಾಗಿರುತ್ತಾರೆ. ಇವರ ಕಾರ್ಯವ್ಯಾಪ್ತಿ ಜಿಲ್ಲಾ ಪಂಚಾಯತ್‌ನಿಂದ ಹೊರಗಿರುತ್ತದೆ. ಈಗ ಜಿಲ್ಲಾ ಪಂಚಾಯತ್‌ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇರುತ್ತಾರೆ. ಈ ರೀತಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ಗಳ ನಡುವೆ ಅಧಿಕಾರ – ಜವಾಬ್ದಾರಿಗಳನ್ನು ಪ್ರತ್ಯೇಕಗೊಳಿಸುವುದು ಅಪೇಕ್ಷಣೀಯವೆ ಎಂಬ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅನೇಕ ಬಗೆಯ ಚರ್ಚೆಗಳು ನಡೆದಿವೆ. ಜಿಲ್ಲಾಧಿಕಾರಿಯು ಜಿಲ್ಲಾ ಅಭಿವೃದ್ಧಿ ಕಾರ್ಯದಲ್ಲಿ ಸಮನ್ವಯಾಧಿಕಾರಿಯಾಗಿರಬೇಕು ಎಂಬುದರ ಬಗ್ಗೆ ಒಮ್ಮತ ಏರ್ಪಟ್ಟಂತೆ ಕಾಣುತ್ತಿದೆ. ಅಭಿವೃದ್ಧಿ ಹಾಗೂ ಕಾನೂನು – ಸುವ್ಯವಸ್ಥೆ – ಶಾಂತಿ ಕಾಪಾಡುವ ಜವಾಬ್ದಾರಿಗಳು ಜಿಲ್ಲಾಧಿಕಾರಿಯ ವಶದಲ್ಲಿರಬೇಕು ಎಂಬುದರ ಬಗ್ಗೆ ಚರ್ಚೆ ಸಾಧ್ಯ.

ಏಕೆಂದರೆ ಡಿ.ಎಂ. ನಂಜುಂಡಪ್ಪನವರ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಬಹಳಷ್ಟು ಕಾರ್ಯಬಾರ ಇರುತ್ತದೆ. ಈ ಕಾರಣದಿಂದಾಗಿ ಅವರಿಗೆ ಜಿಲ್ಲಾ ಅಭಿವೃದ್ಧಿ ಯೋಜನೆ ರೂಪಿಸಲು, ಅದನ್ನು ಸಂಯೋಜಿಸಲು, ಅನುಷ್ಠಾನದ ಮೇಲ್ವಿಚಾರಣೆ ನೋಡಿಕೊಳ್ಳಲು ಸಮಯವೆ ಇರುವುದಿಲ್ಲ. ಮುಖ್ಯ ಸಮನ್ವಯಾಧಿಕಾರಿಯೆಂದರೆ ಅವರ ಜವಾಬ್ದಾರಿ ಕೇವಲ ‘ನಾಮಕಾವಾಸ್ತೆ’ ಯಾಗಬಾರದು. ಅವರಿಗೆ, ಜಿಲ್ಲಾ ಅಭಿವೃದ್ಧಿ ಯೋಜನೆ ಬಗ್ಗೆ ವಿವರವಾಗಿ ಸಂಬಂಧಪಟ್ಟವ ರೊಂದಿಗೆ ಚರ್ಚಿಸಲು, ಮಾರ್ಗದರ್ಶನ ನೀಡಲು ಮತ್ತು ಮೇಲ್ವಿಚಾರಣೆ ನಡೆಸಲು ಬಿಡುವು ಇರಬೇಕು. ಕಾನೂನು ಜಾರಿಗೊಳಿಸುವುದು ಮತ್ತು ಅಭಿವೃದ್ದಿ ಕಾರ್ಯಗಳನ್ನು ನಿಭಾಯಿಸುವುದು – ಇವೆರಡೂ ಜವಾಬ್ದಾರಿಗಳನ್ನು ನಿರ್ವಹಿಸುವುದು ತುಂಬಾ ಕಷ್ಟ. ಅಭಿವೃದ್ಧಿ ಕಾರ್ಯ ಈಗ ಹೆಚ್ಚು ಸಂಕೀರ್ಣವಾಗಿದೆ. ನಂಜುಂಡಪ್ಪನವರ ಪ್ರಕಾರ ಆಡಳಿತ ಮತ್ತು ಅಭಿವೃದ್ಧಿ ಪರಸ್ಪರ ಪ್ರತ್ಯೇಕವಾಗಿರುವುದು ಲೇಸು. (ಡಿ.ಎಂ. ನಂಜುಂಡಪ್ಪ, ೧೯೯೬ ಪು:೨೩), ಜಿಲ್ಲೆಯ ಅಭಿವೃದ್ಧಿ ಜವಾಬುದಾರಿ ಜಿಲ್ಲಾ ಪಂಚಾಯತಿ ವಶದಲ್ಲಿರುವುದು ಅಪೇಕ್ಷಣೀಯ. ಅಭಿವೃದ್ಧಿ ಯೋಜನೆ ರೂಪಿಸುವುದು ಅತ್ಯಂತ ಕ್ಲಿಷ್ಟವಾದ ಹಾಗೂ ಸಂಕೀರ್ಣವಾದ ಕಾರ್ಯವಾಗಿದೆ. ಆಡಳಿತ ಹಾಗೂ ಅಭಿವೃದ್ಧಿ ಎರಡರ ಜವಾಬ್ದಾರಿಗಳನ್ನು ಒಬ್ಬನೇ ವ್ಯಕ್ತಿ ನಿಭಾಯಿಸುವುದು ಕಷ್ಟ ಸಾಧ್ಯ. ಇದಕ್ಕಿಂತ ಮುಖ್ಯವಾಗಿ ಅಭಿವೃದ್ಧಿಯು ಇಂದು ಜನರ ಸಹಭಾಗಿತ್ವದಲ್ಲಿ ನಡೆಯಬೇಕು. ಈ ಎಲ್ಲ ಕಾರಣಗಳಿಂದ ನಂಜುಂಡಪ್ಪನವರು ಹೇಳಿರುವಂತೆ ಜಿಲ್ಲಾ ಅಭಿವೃದ್ಧಿಯ ಜವಾಬ್ದಾರಿ ಜಿಲ್ಲಾ ಪಂಚಾಯತ್‌ನ ವಶದಲ್ಲಿರುವುದು ವಿಹಿತ.

ಹೊಸ ಜಿಲ್ಲೆಗಳು : ಆಡಳಿತ ಮತ್ತು ಅಭಿವೃದ್ಧಿ

ಅಭಿವೃದ್ಧಿ ಮತ್ತು ಆಡಳಿತಗಳ ದೃಷ್ಟಿಯಿಂದ ಹೊಸ ಜಿಲ್ಲೆಗಳ ರಚನೆಯು ಮಹತ್ವಪೂರ್ಣ ಸಂಗತಿಯಾಗಿದೆ. ಅಭಿವೃದ್ಧಿ ಮತ್ತು ಆಡಳಿತಗಳಿಗೆ ಸಂಬಂಧಪಟ್ಟ ಸಂಗತಿಗಳು ಹೊಸ ಜಿಲ್ಲೆಯ ರಚನೆಯ ಹಿಂದೆ ಚಾಲಕ ಶಕ್ತಗಳಾಗಿ ಕೆಲಸ ಮಾಡಿವೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಜಿಲ್ಲೆಗಳ ಗಾತ್ರ ಚಿಕ್ಕದಾಗಿದ್ದರೆ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಆಡಳಿತ ನಿರ್ವಹಣೆ ಸುಲಭಸಾಧ್ಯ ಎಂದು ತಿಳಿಯಲಾಗಿದೆ. ಪ್ರಜಾವಾಣಿ ದಿನಪತ್ರಿಕೆ ಈ ಬಗ್ಗೆ ನಡೆಸಿದ ಒಂದು ಸಮೀಕ್ಷೆ ಸಂದರ್ಭದಲ್ಲಿ ಹಾವೇರಿಯ ಜಿಲ್ಲಾಧಿಕಾರಿ ರಮೇಶ ಝಳಕಿ ಅವರು ಹೀಗೆ ನುಡಿದಿದ್ದಾರೆ.

ಜಿಲ್ಲೆ ಚಿಕ್ಕದಾಗಿರುವುದರಿಂದ ಕಾನೂನು ಸುವ್ಯವಸ್ಥೆ ಮತ್ತು ಆಡಳಿತ ಸುಲಭವಾಗಿದೆ. ಎಲ್ಲಿ ಏನೇ ಘಟನೆ ಸಂಭವಿಸಿದರೂ ಅರ್ಧಗಂಟೆಯೊಳಗಾಗಿ ಘಟನೆ ನಡೆದ ಸ್ಥಳ ತಲುಪಿ ¸ಸಂಭವಿಸಬಹುದಾದ ಅನಾಹುತ ತಪ್ಪಿಸಬಹುದಾಗಿದೆ “. (ಪ್ರಜಾವಾಣಿ: ೧೧೦೨.೧೯೯೯).

ಆಡಳಿತ ವಿಷಯ ಬಿಟ್ಟು ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರು ಏನೂ ಹೇಳುವುದಿಲ್ಲ ಎಂಬುದು ಇಲ್ಲಿ ಅಪ್ರಸ್ತುತವಾದರೂ ಗಮನಿಸಬೇಕಾದ ಸಂಗತಿಯಾಗಿದೆ. ಜಿಲ್ಲೆಗಳ ಗಾತ್ರ ಚಿಕ್ಕದಾಗಿರುವುದರಿಂದ ‘ಆಡಳಿತ’ವು ಜನರ ಹತ್ತಿರಕ್ಕೆ ಬರುತ್ತದೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕಾರ್ಯಕ್ಷಮತೆ ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. ಜನರ ಹತ್ತಿರಕ್ಕೆ ಬರುವುದರಿಂದ ಆಡಳಿತವು ಹೆಚ್ಚು ಪಾರದರ್ಶಕವೂ, ವಿಳಂಬರಹಿತವೂ ಆಗುತ್ತದೆ ಎಂದು ಹೇಳಲಾಗಿದೆ. (ರಾವ್ : ೧೯೭೫ : ಪು: ೫). ಜಿಲ್ಲೆಯ ಗಾತ್ರ ಚಿಕ್ಕದಾಗಿರುವುದರಿಂದ ಅಭಿವೃದ್ಧಿಯು ‘ಜನಸ್ಪಂದಿ’ಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಜಿಲ್ಲೆಯ ವಿಸ್ತೀರ್ಣ – ಗಾತ್ರ ಪರಿಮಿತವಾಗಿದ್ದರೆ ಜಿಲ್ಲೆಯ ಯಾವುದೇ ಮೂಲೆಕಟ್ಟಿನ ಹಳ್ಳಿಯಿಂದಲಾದರೂ ಜನರು ಜಿಲ್ಲಾ ಕೇಂದ್ರಕ್ಕೆ ಬಂದು ಹೋಗಲು ಸುಲಭವಾಗುತ್ತದೆ. ಜಿಲ್ಲಾ ಮಟ್ಟದ ಸರ್ಕಾರಿ ಇಲಾಖೆಗಳಿಗೆ ಎಡತಾಕುವುದು ಸುಲಭವಾಗುತ್ತದೆ. ಜಿಲ್ಲಾ ಕೇಂದ್ರಕ್ಕೆ ಹಳ್ಳಿಗಳಿಂದ ಬಂದು ಹೋಗಲು ತಗಲುವ ಖರ್ಚು ಕಡಿಮೆಯಾಗುತ್ತದೆ. ಉದಾಹರಣೆಗೆ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಗದಗ ತಾಲ್ಲೂಕಿನ ಮೂಲೆಕಟ್ಟಿನ ಕುಗ್ರಾಮವೊಂದರಿಂದ ಜಿಲ್ಲಾ ಕೇಂದ್ರ ಧಾರವಾಡ ಸುಮಾರು ೨೦೦ ಕಿ,ಮಿ.ನಷ್ಟು ದೂರವಿತ್ತು. ಇದರಿಂದ ಎರಡು ರೀತಿಯ ತೊಂದರೆಗಳಿದ್ದವು.

ಮೊದಲನೆಯದಾಗಿ ಜಿಲ್ಲಾ ಕೇಂದ್ರವು ಅನೇಕ ಹಳ್ಳಿಗಳಿಂದ ಬಹಳ ದೂರವಿದ್ದುದರಿಂದ ಅಲ್ಲಗೆ ಹೋಗಿ ಬರಲು ತಗಲುವ ಪ್ರಯಾಣ ವೆಚ್ಚ ದುಬಾರಿಯಾಗಿತ್ತು. ಬಡ ಕುಟುಂಗಳಿಗೆ ಇದನ್ನು ಭರಿಸುವುದು ಸಾಧ್ಯವಿರಲಿಲ್ಲ. ಇದರ ಪರಿಣಾಮವಾಗಿ ಜನರು ಮತ್ತು ಆಡಳಿತಗಳ ನಡುವೆ ಕಂದಕವೇ ಏರ್ಪಟ್ಟಿತ್ತು. ಸಹಜವಾಗಿ ಆಡಳಿತವು ಜನರಿಂದ ದೂರವೇ ಉಳಿದು ಬೆಟ್ಟಿತ್ತು.

ಎರಡನೆಯದಾಗಿ ದೂರದ ಹಳ್ಳಿಗಳಿಂದ ಜಿಲಾ ಕೇಂದ್ರಕ್ಕೆ ೨೦೦ ಕಿ,ಮೀ. ಪ್ರಯಾಣ ಮಾಡಿ ಸರ್ಕಾರಿ ಇಲಾಖೆಗಳಲ್ಲಿ ಒಂದು ದಿನದಲ್ಲಿ ಕೆಲಸಮುಗಿಸಿಕೊಂಡು ಮರಳಿ ತನ್ನ ಊರು ಸೇರಿಕೊಳ್ಳುವುದು ಜನರಿಗೆ ಸಾಧ್ಯವಿದ್ದರಲಿಲ್ಲ. ಇದರಿಂದ ಅಭಿವೃದ್ಧಿಯು ‘ಜನವಿಮುಖಿ’ಯಾಗಿತ್ತು.

ಹೊಸಜಿಲ್ಲೆಗಳ ರಚನೆಯಿಂದ ಇವೆರಡು ತೊಂದರೆಗಳು ಬಗೆಹರಿದಂತಾಗಿದೆ. ಜಿಲ್ಲೆಯ ಗಾತ್ರವು ಚಿಕ್ಕದಾಗಿರುವು ದರಿಂದ ಆಡಳಿತದ ದೃಷ್ಟಿಯಿಂದ ಎಷ್ಟು ಅನುಕೂಲಗಳು ಪ್ರಾಪ್ತವಾಗಿವೆಯೋ ಅಷ್ಟೇ ಅನುಕೂಲಗಳು, ಒಂದು ದೃಷ್ಟಿಯಿಂದ ಅದಕ್ಕಿಂತ ಅಧಿಕ ಪ್ರಮಾಣದ ಅನುಕೂಲಗಳು ಅಭಿವೃದ್ಧಿ ಸಂಗತಿಯಲ್ಲೂ ಪ್ರಾಪ್ತವಾಗಿವೆ. ಹೊಸ ಜಿಲ್ಲೆಗಳ ರಚನೆಯಿಂದಾಗಿ ಅಲ್ಲಿ ಆಡಳಿತ ಜನರ ಹತ್ತಿರಕ್ಕೆ ಬಂದಿದೆ ಮತ್ತು ಅಭಿವೃದ್ಧಿ ಜನಸ್ಪಂದಿಯಾಗಿದೆ.

ಸಂವಿಧಾನದ ೭೩ ಮತ್ತು ೭೪ನೆಯ ತಿದ್ದುಪಡಿಗಳಿಂದಾಗಿ ಆಡಳಿತ ಮತ್ತು ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ವಿಕೇಂದ್ರಿಕರಣಕ್ಕೆ ಸಂವಿಧಾನಬದ್ಧ ಮನ್ನಣೆ ದೊರಕಿದಂತಾಗಿದೆ. ನಿಜವಾದ ಅರ್ಥದಲ್ಲಿ ಜಿಲ್ಲೆಯು ಈಗ ಅಭಿವೃದ್ಧಿಯ ಘಟಕವಾಗಿ ರೂಪುಗೊಂಡಿದೆ. ಜಿಲ್ಲೆಯ ಆಡಳಿತ ಸೂತ್ರಗಳು – ರೆವಿನ್ಯೂ ವಿಷಯಗಳು, ಕಾನೂನು – ಶಾಂತಿಪಾಲನೆ ಜವಾಬ್ದಾರಿಗಳು ಜಿಲ್ಲಾಧಿಕಾರಿಯ, ಕರ್ನಾಟಕದ ಸಂದರ್ಭದಲ್ಲಿ ಡೆಪ್ಯೂಟಿ ಕಮಿಷನರ್ ಅವರ ವಶದಲ್ಲಿ ಇದ್ದರೆ ಜಿಲ್ಲೆಯ ಅಭಿವೃದ್ಧಿ ನಿರ್ವಹಣೆ – ಜವಾಬ್ದಾರಿ ಜಿಲ್ಲಾ ಪಂಚಾಯತಿಯ ವಶದಲ್ಲಿದೆ. ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಗ್ರಗಣ್ಯ ಅಧಿಕಾರಿಯಾಗಿರಬೇಕೋ ಅಥವ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅಗ್ರಗಣ್ಯರಾಗಿರಬೇಕೋ ಎಂಬುದರ ಚರ್ಚೆ – ಸಂವಾದ ಇನ್ನೂ ನಡೆಯುತ್ತಲೇ ಇದೆ. ವಸಾಹತುಶಾಹಿ ಆಳ್ವಿಕೆಯಲ್ಲಿ ಜಿಲ್ಲಾಧಿಕಾರಿಯು ಜಿಲ್ಲೆಯ ಅಗ್ರಗಣ್ಯ ಅಧಿಕಾರಿಯಾಗಿದ್ದನು. ಆಡಳಿತ ನಿರ್ವಹಣೆಯೊಂದೆ ಅವನ ಏಕೈಕ ಜವಾಬ್ದಾರಿ ಯಾಗಿತ್ತು. ಅಭಿವೃದ್ಧಿಯು ಆನುಷಂಗಿಕವಾಗಿತ್ತು. ಸ್ವಾತಂತ್ರ್ಯಾನಂತರ ಇದು ಬದಲಾಗಬೇಕಾಗಿತ್ತು. ಕಾನೂನಿನ ದೃಷ್ಟಿಯಿಂದ ಅನೇಕ ಬದಲಾವಣೆಗಳಾಗಿವೆ. ಆದರೆ ‘ಆಡಳಿತ ವ್ಯಸನ’ದಿಂದ ಸರ್ಕಾರ ಮುಕ್ತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ.

ಸಂವಿಧಾನದ ೨೩ ಮತ್ತು ೭೪ನೆಯ ತಿದ್ದುಪಡಿಯ ನಂತರ, ವಿಕೇಂದ್ರೀಕರಣ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ಮೇಲೆ ಅಧಿಕಾರವು ಜಿಲ್ಲೆಯ, ತಾಲ್ಲೂಕಿನ ಮತ್ತು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹರಿದು ಬಂದದ್ದರಿಂದ ವಸಾಹತು ಶಾಹಿಕಾಲದ ‘ಆಡಳಿತ ವ್ಯಸನ’ದಲ್ಲಿ ಅಲ್ಪ – ಸ್ವಲ್ಪ ಬದಲಾವಣೆ ಉಂಟಾದಂತೆ ಕಾಣುತ್ತದೆ. ಜಿಲ್ಲೆಯ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಬಾರಕ್ಕೆ ಆದ್ಯತೆ ನೀಡುವ ಒಂದು ಕ್ರಮ ನಿಧಾನವಾಗಿಯಾದರು ದೇಶದಲ್ಲಿ ರೂಪುಗೊಳ್ಳುತ್ತಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ಕಚೇರಿಗಳಿಗಿಂತ ಹೆಚ್ಚಿನದಾದ ಪ್ರಾಮುಖ್ಯತೆ ಜಿಲ್ಲಾ ಪಂಚಾಯತಿ ಕಚೇರಿಗೆ ಸಲ್ಲುವಂತಾಗಿದೆ. ಆಡಳಿತಕ್ಕೆ ಸಲ್ಲುತ್ತಿದ್ದ ಅಗ್ರಪೂಜೆ ಈಗ ಅಭಿವೃದ್ಧಿಗೆ ಸಲ್ಲುವಂತಾಗಿದೆ. ಆದರೂ ವಸಾಹತುಶಾಹಿ ಕಾಲದಿಂದ ಕಾಡುತ್ತಾ ಬಂದಿರುವ ‘ಆಡಳಿತ ವ್ಯಸನ’ ಪೂರ್ಣವಾಗಿ ಮಾಯವಾಗಿಲ್ಲ.

ಹೊಸ ಜಿಲ್ಲೆಗಳಲ್ಲಿ ಏನಾಗಿದೆ?

ವಸಾಹತುಶಾಹಿ ಮನೋಭಾವ, ಆಡಳಿತಕ್ಕೆ ಅಗ್ರಪೂಜೆ ನೀಡುವ ವಾಡಿಕೆ ಪೂರ್ಣವಾಗಿ ಮಾಯವಾಗಿಲ್ಲ, ಎಂಬುದಕ್ಕೆ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಜಿಲ್ಲೆಗಳನ್ನು ಸರ್ಕಾರ ನಿರ್ವಹಿಸುತ್ತಿರುವ ಬಗೆಯಿಂದ ತಿಳಿದುಕೊಳ್ಳಬಹುದು. ಆಡಳಿತ ವ್ಯವಸ್ಥೆಯನ್ನು ರೂಪಿಸುವ ಕಾರ್ಯಕ್ಕೆ ಹೊಸ ಜಿಲ್ಲೆಗಳಲ್ಲಿ ಆದ್ಯತೆ ನೀಡಲಾಗಿದೆ, ಇದು ಅನಿವಾರ್ಯ. ಈ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸು ವರಿಷ್ಠಾಧಿಕಾರಿಗಳ ಕಚೇರಿಗಳನ್ನು ಸಂಘಟಿಸುವ ಕಾರ್ಯ ಅತ್ಯಂತ ಮಹತ್ವ ಪಡೆದುಕೊಂಡು ಬಿಟ್ಟಿವೆ. ‘ಪ್ರಜಾವಾಣಿ’ ದಿನಪತ್ರಿಕೆ ಹೊಸ ಜಿಲ್ಲೆಗಳ ಬಗ್ಗೆ ನಡೆಸಿದ ಒಂದು ಸಮೀಕ್ಷೆಯಲ್ಲಿ ಹೊಸ ಜಿಲ್ಲೆಯ ಒಬ್ಬ ನಾಗರಿಕ ಹೀಗೆ ಉದ್ಗಾರ ತೆಗೆದಿದ್ದಾನೆ.

ಜಿಲ್ಲಾಧಿಕಾರಿ ಮತ್ತು ಪೊಲೀಸು ವರಿಷ್ಠಾಧಿಕಾರಿಗಳು ಮಾತ್ರ ನಮ್ಮ ಸಮೀಪ ಇರುತ್ತಾರೆ. ದೂರದ ಧಾರವಾಡಕ್ಕೆ ಹೋಗುವ ಬದಲು ಹತ್ತಿರದ ಹಾವೇರಿಗೆ ತೆರಳಿ ಮನವಿ ಸಲ್ಲಿಸಬಹುದಾಗಿದೆ ಎಂಬುದನ್ನು ಬಿಟ್ಟರೆ ಹೆಚ್ಚಿನ ಅನುಕೂಲಗಳು ಇಂದಿಗೂ ಆಗಿಲ್ಲ“. (ಪ್ರಜಾವಾಣಿ ೧೧೯೯)

ಆಡಳಿತ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ಜಿಲ್ಲೆಗಳಲ್ಲಿ ಏನು ನಡೆಯುತ್ತಿದೆ ಎಂಬುದರ ಪೂರ್ಣ ಚಿತ್ರ ಹಾವೇರಿ ಜಿಲ್ಲೆಗೆ ಸೇರಿದ ನಾಗರಿಕರೊಬ್ಬರ ಮೇಲಿನ ಉದ್ಗಾರದಿಂದ ದೊರೆಯುತ್ತದೆ. ಹೊಸ ಜಿಲ್ಲೆಗಳನ್ನು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿ.ಈ.ಒ) ಹುದ್ದೆಗಳು ಮೊನ್ನೆ ಮೊನ್ನೆವರೆಗೆ ಖಾಲಿ ಇದ್ದವು. ಈ ಹುದ್ದೆಗೆ ಬರಲು ಐ.ಎ.ಎಸ್. ಅಧಿಕಾರಿಗಳು ಸಿದ್ಧರಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಹೊಸ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತಿಯನ್ನು ಸಂಘಟಿಸಲಾಗಿದೆ. ಆದರೆ ಅದರ ಕಾರ್ಯ ಚಟುವಟಿಕೆಗಳು ಆದ್ಯತೆ ಪಡೆದುಕೊಂಡಿಲ್ಲ. ಜಿಲ್ಲೆಗಳ ಮಟ್ಟದಲ್ಲಿ ಆಡಳಿತ ಮತ್ತು ಅಭಿವೃದ್ಧಿ ನಡುವಿನ ಭಿನ್ನತೆಯನ್ನು ಸರ್ಕಾರವು ಅರ್ಥಮಾಡಿಕೊಂಡಂತೆ ಕಾಣಲಿಲ್ಲ. ವಸಾಹತುಶಾಹಿ ಆಳ್ವಿಕೆ ಕಾಲದಲ್ಲಿ ಆಡಳಿತವು ಪ್ರಧಾನವಾಗಿ ಅಭಿವೃದ್ದಿಯು ಆನುಷಂಗಿಕವಾಗಿತ್ತು. ಇಂದೂ ಸಹ ಅದೇ ಬಗೆ ಮುಂದುವರಿಯಬೇಕಾಗಿಲ್ಲ. ಇದು ಬದಲಾಗಬೇಕು. ಜಿಲ್ಲೆಗಳು ಮೂಲಭೂತವಾಗಿ ಅಭಿವೃದ್ಧಿಯ ಘಟಕ ಗಳಾಗಬೇಕು. ಜಿಲ್ಲೆಯ ಅಭಿವೃದ್ಧಿಯ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯತಿಯು ನಿರ್ವಹಿಸಬೇಕು. ಹೊಸ ಜಿಲ್ಲೆಗಳಲ್ಲಿ ಜನರು ಏನನ್ನು ನಿರೀಕ್ಷಿಸುತ್ತಿದ್ದಾರೆ? ಉತ್ತಮ ಕುಡಿಯುವ ನೀರಿನ ಸರಬರಾಜು, ಒಳಚರಂಡಿ – ರಸ್ತೆ – ಸಾರಿಗೆ ವ್ಯವಸ್ಥೆ, ಸುಸಜ್ಜಿತ ಆಸ್ಪತ್ರೆ – ಇವು ಜನರ ನಿರೀಕ್ಷೆಗಳು ಎಂದು ‘ಪ್ರಜಾವಾಣಿ’ ಸಮೀಕ್ಷೆ ತಿಳಿಸಿದೆ.

ಜಿಲ್ಲೆಯ ವೈಶಿಷ್ಟ್ಯ

ಪ್ರತಿಯೊಂದು ಜಿಲ್ಲೆಗೂ ತನ್ನದೇ ಆದ ವಿಶಿಷ್ಟತೆ – ಅನನ್ಯತೆ – ವ್ಯಕ್ತಿತ್ವ ಇರುತ್ತದೆ. ಅದಕ್ಕೊಂದು ಚಾರಿತ್ರಿಕ ಪರಂಪರೆ ಇರುತ್ತದೆ. ಕರ್ನಾಟಕದ ಜಿಲ್ಲೆಗಳಿಗೆ ಕನಿಷ್ಠ ಪಕ್ಷ ೨೦೦ ವರ್ಷಗಳ ಇತಿಹಾಸವಿದೆ. ಪ್ರತಿಯೊಂದು ಜಿಲ್ಲೆಯು ತನ್ನ ಭೌಗೋಳಿಕ ವ್ಯಾಪ್ತಿಯಲ್ಲಿರುವ ಒಂದಲ್ಲ ಒಂದು ವಿಶಿಷ್ಟತೆಯೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುವುದು ರೂಢಿ. ಉದಾಹರಣೆಗೆ ಮೈಸೂರು ಜಿಲ್ಲೆಗೆ ದಸರಾ ಉತ್ಸವ ಇದೆ, ಅರಮನೆ ಇದೆ. ಹಾಸನಕ್ಕೆ ಶ್ರವಣಬೆಳಗೊಳವಿದೆ. ಬಳ್ಳಾರಿ ಜಿಲ್ಲೆಗೊಂದು ಹಂಪೆ ಇದೆ. ಹೀಗೆ ಪ್ರತಿಯೊಂದು ಜಿಲ್ಲೆಗೂ ವಿಶೀಷ್ಟತೆ ಇರುತ್ತದೆ. ‘ಗುರುತು’ ಇರುತ್ತದೆ. ಇದಕ್ಕೆ ಬಹಳ ಪ್ರಸ್ತುತವಾದ ಉದಾಹರಣೆಯೆಂದರೆ ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳು. ಕೊಡಗು ಜಿಲ್ಲೆಯು ತನ್ನನ್ನು ತಾನು ‘ಮಿಲಿಟರಿ’ ಜೊತೆ ಸಮೀಕರಿಸಿ ಕೊಂಡುಬಿಟ್ಟಿದೆ.

ಹೊಸ ಜಿಲ್ಲೆಗಳು ಇಂತಹ ವ್ಯಕ್ತಿತ್ವ – ಗುರುತು – ಪರಂಪರೆಯನ್ನು ಹುಡುಕಿಕೊಳ್ಳಬೇಕಾಗುತ್ತದೆ. ‘ಗುರುತ’ನ್ನು ಹುಡುಕಿಕೊಳ್ಳುವುದರಿಂದ ಅನೇಕ ಅನುಕೂಲಗಳು ಪ್ರಾಪ್ತವಾಗುತ್ತವೆ. ಜನತೆ ತಮ್ಮ ‘ಜಿಲ್ಲೆ’ ಎಂಬ ಅಭಿಮಾನ ಬೆಳಸಿಕೊಳ್ಳಬೇಕಾಗುತ್ತದೆ.

ಜಿಲ್ಲಾ ಅಭಿವೃದ್ಧಿ ಅಧ್ಯಯನ

ಕರ್ನಾಟಕದಲ್ಲಿ ೧೯೯೭ರಲ್ಲಿ ಅಸ್ತಿತ್ವಕ್ಕೆ ಬಂದ ಏಳು ಹೊಸ ಜಿಲ್ಲೆಗಳ ಅಭಿವೃದ್ಧಿ ಸ್ವರೂಪವನ್ನು ಗುರುತಿಸುವ ಅಧ್ಯಯನವನ್ನು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಕೈಗೊಂಡಿದೆ. ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ವೆಂಬ ಒಂದು ಪ್ರತ್ಯೇಕ ಅಧ್ಯಯನ ನೆಲೆಯನ್ನು ಕಂಡುಕೊಳ್ಳಲು ಇಲ್ಲಿ ಪ್ರಯತ್ನಿಸಲಾಗಿದೆ. ಸಂವಿಧಾನದ ೨೩ ಮತ್ತು ೨೪ನೆಯ ತಿದ್ದುಪಡಿಯ ತರುವಾಯ ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ಕ್ಕೆ ವಿಶೇಷ ಮಹತ್ವ ಬಂದಿದೆ. ಆಡಳಿತ ಮತ್ತು ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ವಿಕೇಂದ್ರೀಕರಣಕ್ಕೆ ಸಂವಿಧಾನಬದ್ಧ ಮನ್ನಣೆ ದೊರೆತಂತಾಗಿದೆ. ಇಂದು ನಿಜವಾದ ಅರ್ಥದಲ್ಲಿ ಜಿಲ್ಲೆಯ ಅಭಿವೃದ್ಧಿ ಘಟಕವಾಗಿ ರೂಪು ತಳೆದಿದೆ. ಜಿಲ್ಲೆಯನ್ನು ಆಡಳಿತ ಘಟಕವಾಗಿ ಪರಿಭಾವಿಸುವುದು ವಾಡಿಕೆಯಲ್ಲಿತ್ತು. ಆದರೆ ಇಂದು ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಯೋಜನೆಗಳು ಸಿದ್ಧವಾಗಬೇಕಾಗಿದೆ. ಈ ಬದಲಾದ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ನಾವು ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ವನ್ನು ರೂಪಿಸಿದ್ದೇವೆ. ಜಿಲ್ಲೆಯ ಅಭಿವೃದ್ಧಿಯ ಗತಿಶೀಲತೆಯನ್ನು ಶೋಧಿಸುವ ಪರಿಯನ್ನೇ ಜಿಲ್ಲಾ ಅಭಿವೃದ್ಧಿ ಅದ್ಯಯನ ಎಂದು ಕರೆಯಲಾಗಿದೆ. ಅಭಿವೃದ್ಧಿಯನ್ನು ಕುರಿತಂತೆ ಜಿಲ್ಲೆಯಲ್ಲಿ ಸಂವಾದವನ್ನು – ಚರ್ಚೆಯನ್ನು ಹುಟ್ಟುಹಾಕುವುದು ನಮ್ಮ ಅಧ್ಯಯನದ ಮೂಲ ಉದ್ದೇಶವಾಗಿದೆ.

ಅಭಿವೃದ್ಧಿಯ ನೆಲೆಗಳ ಶೋಧ

‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ವನ್ನು ಒಂದು ನಿರ್ದಿಷ್ಟ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಚೌಕಟ್ಟಿನಲ್ಲಿ ರೂಪಿಸಲಾಗಿದೆ. ವರಮಾನ, ಉತ್ಪನ್ನ, ಉಳಿತಾಯ, ಬಂಡವಾಳ ಹೂಡಿಕೆ ಮುಂತಾದ ಗಾತ್ರನಿಷ್ಠ ಆರ್ಥಿಕ ಸೂಚಿಗಳ ನೆಲೆಯಿಂದ ಅಭಿವೃದ್ಧಿಯನ್ನು ಪರಿಭಾವಿಸುವ ಸಾಂಪ್ರದಾಯಿಕ ಅಭಿವೃಧ್ಧಿ ಪ್ರಣಾಳಿಕೆಗೆ ಪ್ರತಿಯಾಗಿ ಇಲ್ಲಿ ನಾವು ಅಭಿವೃದ್ಧಿಯನ್ನು ಅಮರ್ತ್ಯಸೇನ್ ರೂಪಿಸಿರುವ ಮಾನವಮುಖಿ ಅಭಿವೃದ್ಧಿ ವಿಚಾರ ಪ್ರಣಾಳಿಕೆ ನೆಲೆಯಿಂದ ಪರಿಭಾವಿಸಲು ಪ್ರಯತ್ನಿ ಸಿದ್ದೇವೆ. ಅಭಿವೃದ್ಧಿಯನ್ನು ವರಮಾನದ ನೆಲೆಯಿಂದ ಪರಿಭಾವಿಸುವ ಪರಿಯೊಂದು ವಾಡಿಕೆಯಲ್ಲಿದೆ. ಇದನ್ನು ‘ಸಾಂಪ್ರದಾಯಿಕ ಅಭಿವೃದ್ಧಿ ವಿಚಾರ ಪ್ರಣಾಳಿಕೆ’ ಎಂದು ಕರೆಯಬಹುದು. ಒಂದು ಆರ್ಥಿಕತೆಯ ರಾಷ್ಟ್ರೀಯ ಉತ್ಪನ್ನದಲ್ಲಿನ ಬೆಳವಣಿಗೆ ಗತಿಯನ್ನು ಅಭಿವೃದ್ಧಿ ಎಂದು ನಿರ್ವಚಿಸಲಾಗಿದೆ. ವರಮಾನದ ಏರಿಕೆಯ ಗತಿಯೇ ಅಭಿವೃದ್ಧಿಯನ್ನು ಅಳತೆ ಮಾಡುವ ಮಾನದಂಡ. ಈ ಕಾರಣದಿಂದಾಗಿಯೆ ಆರ್ಥಿಕತೆಯ ಉತ್ಪಾದನಾ ಮಟ್ಟವನ್ನು, ಉತ್ಪಾದನಾ ಸಾಮರ್ಥ್ಯವನ್ನು ಉತ್ತಮ ಪಡಿಸುವ ಮಾರ್ಗಗಳ ಶೋಧವೇ ಅಭಿವೃದ್ಧಿ ಅಧ್ಯಯನದ ಮೂಲ ಹೇತುವಾಗಿಬಿಟ್ಟಿತು. ಬಡತನ, ಹಸಿವು, ನಿರುದ್ಯೋಗ – ಹೀಗೆ ಎಲ್ಲ ಬಗೆಯ ದುಸ್ಥಿತಿಗೂ ಕಾರಣವನ್ನು ಉತ್ಪನ್ನದ – ಆಹಾರದ ಕೊರತೆಯಲ್ಲಿ ಗುರುತಿಸಲಾಯಿತು. ಈ ವಿಚಾರ ಪ್ರಣಾಳಿಕೆಯಲ್ಲಿ ಉತ್ಪನ್ನ – ಆಹಾರ ಮುಂತಾದವು ‘ಇರುವುದು’ ಪ್ರಧಾನವಾಗಿ, ಅವು ಜನರಿಗೆ ‘ದೊರೆಗೊಳ್ಳುವುದು’ ಆನುಷಂಗಿಕವಾಗಿ ಬಿಟ್ಟಿತು.

ಈ ಬಗೆಯ ವರಮಾನ ಕೇಂದ್ರಿತ, ಮೌಲ್ಯ, ನಿರಪೇಕ್ಷ, ಏಕಲಿಂಗಿ ಅಭಿವೃದ್ಧಿ ಪ್ರಣಾಳಿಕೆಯು ಇತ್ತೀಚೆಗೆ ತೀವ್ರತರವಾದ ಟೀಕೆ – ವಿಮರ್ಶೆ – ಸವಾಲುಗಳನ್ನು ಎದರಿಸುತ್ತಿದೆ. ಅಮರ್ತ್ಯಸೇನ್ ಅವರು ಸಾಂಪ್ರದಾಯಿಕ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಬಗ್ಗೆ ಅನೇಕ ಸೂಕ್ಷ್ಮ ಪ್ರಶ್ನೆಗಳನ್ನು ಎತ್ತಿದ್ದಾರೆ. ಯುಎನ್‌ಡಿಪಿಯು ಸಿದ್ಧಪಡಿಸುತ್ತಿರುವ ‘ಮಾನವಮುಖಿ ಅಭಿವೃದ್ಧಿ ವರದಿ’ಗಳಲ್ಲೂ ವರಮಾನ ಕೇಂದ್ರಿತ ಅಭಿವೃದ್ಧಿ ತಂತ್ರ ಟೀಕೆಯನ್ನು ಎದರಿಸುತ್ತಿದೆ.

ಅಮರ್ತ್ಯಸೇನ್ ಮತ್ತು ಮೆಹಬೂಬ್ ಉಲ್ ಹಕ್ ಅವರು ಸಾಂಪ್ರದಾಯಿಕ ವಿಚಾರ ಪ್ರಣಾಳಿಕೆಯಲ್ಲಿ ಆನುಷಂಗಿಕವಾಗಿದ್ದ ‘ಜನರು’, ‘ಜನರ ಬದುಕು’ ಇವುಗಳನ್ನು ತಮ್ಮ ಅಭಿವೃದ್ಧಿ ವಿಚಾರ ಪ್ರಣಾಳಿಕೆಯ ಹೃದ್ಯ ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ವರಮಾನವು ಆನುಷಂಗಿಕವೆಂದು, ಜನರ ಬದುಕು ಪ್ರಧಾನವೆಂದು ಇವರು ವಾದಿಸಿದರು. ಅಭಿವೃದ್ಧಿ ಪ್ರಕ್ರಿಯೆಯನ್ನು ಸಾಮಾಜಿಕ ನೆಲೆಯಿಂದಲೆ ಪರಿಭಾವಿಸಬೇಕು ಎಂದು ಇವರಿಬ್ಬರು ಪ್ರತಿಪಾದಿಸಿದರು. ಜನರು ಅಭಿವೃದ್ಧಿಯ ‘ಸಾಧನ’ವೂ ಹೌದು ಮತ್ತು ‘ಸಾಧ್ಯ’ವೂ ಹೌದು ಎಂಬುದನ್ನು ಸೇನ್ ಮತ್ತು ಹಕ್ ತೋರಿಸಿಕೊಟ್ಟರು.

ಅಮರ್ತ್ಯಸೇನ್ ಮತ್ತು ಮೆಹಬೂಬ್ ಉಲ್ ಹಕ್ ಅವರು ರೂಪಿಸಿರುವ ಅಭಿವೃದ್ಧಿ ವಿಚಾರ ಪ್ರಣಾಳಿಕೆ ಪ್ರಕಾರ ‘ಜನರ ಬದುಕು ಉತ್ತಮಗೊಳ್ಳುವ ಪರಿಯೇ’ ಅಭಿವೃದ್ಧಿ, ವರಮಾನ, ಉತ್ಪನ್ನ, ಆಹಾರ, ಉದ್ಯೋಗ – ಮುಂತಾದವು ಅಭಿವೃದ್ಧಿಯ ದೃಷ್ಟಿಯಿಂದ ಮುಖ್ಯ. ಆದರೆ ಸೇನ್ ಪ್ರಕಾರ ಅವುಗಳ ಮೇಲೆ ಜನರಿಗಿರುವ ‘ಹಕ್ಕುದಾರಿಕೆ’ ಹೆಚ್ಚು ಮುಖ್ಯ. ಅಮರ್ತ್ಯಸೇನ್ ಅವರು ತಮ್ಮ ಪ್ರಸಿದ್ಧ ಗ್ರಂಥ ‘ಪಾವರ್ಟಿ ಅಂಡ್ ಫ್ಯಾಮೈನ್’ನಲ್ಲಿ ಈ ಬಗ್ಗೆ ಹೀಗೆ ನುಡಿದಿದ್ದಾರೆ. (ಸೇನ್ – ೧೯೮೧).

“Starvation is the characteristic of some people not having enough food to eat. It is not the characteristic of there being not enough food to eat”

ಅಮರ್ತ್ಯಸೇನ್ ಪ್ರಕಾರ ವರಮಾನ – ಉತ್ಪನ್ನ – ಆಹಾರ ಇವುಗಳು ಇರುವುದು (there being) ಮುಖ್ಯವಾದರೂ ಸಹ ಅವು ಜನರಿಗೆ ‘ದೊರೆಗೊಳ್ಳುವುದು’ (having enough) ಹೆಚ್ಚು ನಿರ್ಣಾಯಕವಾದುದು. ಅವು ಜನರಿಗೆ ದೊರೆಗೊಂಡಾಗ ಮಾತ್ರ ಉತ್ತಮವಾಗಲು ಸಾಧ್ಯ. ಆದ್ದರಿಂದಲೇ ಮೆಹಬೂಬ್ ಉಲ್ ಹಕ್ ಅವರು ‘ಬದುಕನ್ನು ಉತ್ತಮ ಪಡಿಸಿಕೊಳ್ಳಲು ಜನರಿಗೆ ಇರುವ ಅವಕಾಶಗಳ ವರ್ಧನೆಯೇ ಅಭಿವೃದ್ಧಿ’ ಎಂದಿದ್ದಾರೆ. ಅವಕಾಶಗಳನ್ನು ದಕ್ಕಿಸಿಕೊಳ್ಳುವ ಸಾಮರ್ಥ್ಯ ಜನರಿಗೆ ಇರಬೇಕು. ಇದರ ಜೊತೆಗೆ ಅವಕಾಶಗಳ ಕೂಟದಲ್ಲಿ ತನಗೆ ಬೇಕಾದುದ್ದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ವಿರಬೇಕು. ಈ ಸಾಮರ್ಥ್ಯ ಮತ್ತು ಸ್ವಾತಂತ್ರ್ಯಗಳನ್ನು ಸಂಯೋಜಿಸಿ ಅಮರ್ತ್ಯಸೇನ್ ಅವರು ‘ಧಾರಣ ಶಕ್ತಿ’ ಎಂಬ ಪರಿಭಾವನೆ ರೂಪಿಸಿದ್ದಾರೆ. ಧಾರಣ ಶಕ್ತಿಯನ್ನು “ability to achieve well – being and freedom to achieve well – being” ಎಂದು ನಿರ್ವಚಿಸಿದ್ದಾರೆ.

‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ವನ್ನು ಸೆನ್ ಅವರು ರೂಪಿಸಿರುವ ‘ಧಾರಣ ಶಕ್ತಿ’ ಪರಿಭಾವನೆ ಹಾಗೂ ಯುಎನ್‌ಡಿಪಿ ಮೂಲಕ ಮೆಹಬೂಬ್ ಉಲ್ ಹಕ್ ಅವರು ರೂಪಿಸಿರುವ ‘ಮಾನವ ಅಭಿವೃದ್ಧಿ’ ವಿಚಾರ ಪ್ರಣಾಳಿಕೆ ನೆಲೆಯಿಂದ ನಡೆಸುವ ಉದ್ದೇಶವಿದೆ. ಬಡತನ, ಹಸಿವು, ನಿರುದ್ಯೋಗ ಮುಂತಾದ ದುಸ್ಥಿತಿಗಳಿಗೆ ಉತ್ತರವನ್ನು ಆಹಾರೋತ್ಪಾದನೆಯಲ್ಲಿ ಕಂಡುಕೊಳ್ಳುವುದಕ್ಕೆ ಪ್ರತಿಯಾಗಿ ಆಹಾರೋತ್ಪನ್ನದ ಮೇಲೆ ಜನರಿಗಿರುವ ‘ಹಕ್ಕುದಾರಿಕೆ’ (entitlement) ಕಂಡುಕೊಳ್ಳಲು ಇಲ್ಲಿ ಪ್ರಯತ್ನಿಸಲಾಗಿದೆ. ಅಭಿವೃದ್ಧಿಯ ರಾಜಕೀಯಾರ್ಥಿಕತೆ ನೆಲೆಗಳನ್ನು ಗುರುತಿಸುವ ಉದ್ದೇಶ ಜಿಲ್ಲಾ ಅಭಿವೃದ್ಧಿ ಅಧ್ಯಯನದ ಮೂಲದಲ್ಲಿದೆ. ಆದ್ದರಿಂದಲೇ ಪ್ರಸ್ತುತ ಜಿಲ್ಲಾ ಅಭಿವೃದ್ಧಿ ಅಧ್ಯಯನದಲ್ಲಿ ಜನರ ಅಕ್ಷರ ಸಂಪತ್ತು, ಆರೋಗ್ಯ ಭಾಗ್ಯ, ಬದುಕು – ಸಾವುಗಳ ವಿವರ, ಆರ್ಯುಮಾನ, ದುಡಿಮೆಗಾರರು, ಮಹಳಾ ದುಡಿಮೆಗಾರರು – ಮುಂತಾದ ಸಂಗತಿಗಳಿಗೆ ಅಗ್ರಗಣ್ಯ ಸ್ಥಾನ ನೀಡಲಾಗಿದೆ. ಅಭಿವೃದ್ಧಿಯ ಲಿಂಗಸಂಬಂಧಿ ಆಯಾಮಗಳನ್ನು ಗುರುತಿಸುವುದು ಜಿಲ್ಲಾ ಅಭಿವೃದ್ಧಿ ಅಧ್ಯಯನದ ಬಹು ಮುಖ್ಯ ಪ್ರಣಾಳಿಕೆಯಾಗಿದೆ. ಆದರೆ ಇಲ್ಲಿನ ಅಧ್ಯಯನದಲ್ಲಿ ಔದ್ಯಮಿಕ ರಂಗದ ಪಾತ್ರ – ಗಾತ್ರವನ್ನು ಕಡೆಗಣಿಸಿಲ್ಲ.

ಜಿಲ್ಲಾ ಅಭಿವೃದ್ಧಿ ಅಧ್ಯಯನವೆಂದರೆ ಕೇವಲ ಅಂಕಿ – ಅಂಶಗಳ ಕೋಶವಲ್ಲ. ಮಾರ್ಗದರ್ಶನ ಮಾಡುವುದು ಇದರ ಕೆಲಸವಲ್ಲ. ಅಭಿವೃದ್ಧಿ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ಸಂಕಥನವೊಂದನ್ನು ಕಟ್ಟುವ ಉದ್ದೇಶ ಜಿಲ್ಲಾ ಅಭಿವೃದ್ಧಿ ಅಧ್ಯಯನದ ಮೂಲದಲ್ಲಿದೆ.

ಅಧ್ಯಯನದ ಉದ್ದೇಶಗಳು

ಈಗಾಗಲೆ ಪ್ರಸ್ತಾವನೆಯಲ್ಲಿ ಪ್ರತಿಪಾದಿಸಿರುವಂತೆ ಹೊಸ ಜಿಲ್ಲೆಗಳ ಅಭಿವೃದ್ಧಿ ಸ್ಥಿತಿ – ಗತಿಗಳನ್ನು, ಅದರ ಚಲನ ಶೀಲತೆಯನ್ನು ಪರಿಶೋಧಿಸುವ ಆಧ್ಯಯನ ಇದಾಗಿದೆ. ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ ಎಂಬ ಯೋಜನೆಯಡಿಯಲ್ಲಿ ಪ್ರಸ್ತುತ ಯೋಜನೆ ಪ್ರಾರಂಭವಾಗಿದೆ. ಹೊಸ ಜಿಲ್ಲೆಗಳ ಅಭಿವೃದ್ಧಿ ಸ್ವರೂಪ, ಸ್ಥಿತಿಗತಿ, ಅಭಿವೃದ್ಧಿ ಆದ್ಯತೆಗಳು, ಉತ್ಪಾದನಾ ಸಂಬಂಧಗಳು ಮುಂತಾದವುಗಳನ್ನು ಕುರಿತ ಅನುಸಂಧಾನವೇ ಪ್ರಸ್ತುತ ಅಧ್ಯಯನ. ಈ ಬಗೆಯ ಅಧ್ಯಯನವು ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಯೋಜನೆ ರಚಿಸುವಲ್ಲಿ ಸಹಾಯಕವಾಗುತ್ತವೆ ಎಂದು ನಂಬಲಾಗಿದೆ.

ನಿರ್ದಿಷ್ಟವಾಗಿ ಈ ಅಧ್ಯಯನದ ಉದ್ಧೇಶಗಳು ಹೀಗಿವೆ

೧. ಮೊದಲನೆಯದಾಗಿ ಹೊಸ ಜಿಲ್ಲೆಗಳಲ್ಲಿ ಅಭಿವೃದ್ಧಿ ಕುರಿತಂತೆ ಸಂವಾದವೊಂದನ್ನು – ಸಂಕಥನವೊಂದನ್ನು ಹುಟ್ಟು  ಹಾಕುವುದು ಇಲ್ಲಿನ ಬಹುಮುಖ್ಯ ಉದ್ದೇಶವಾಗಿದೆ. ರಾಜ್ಯ ಮಟ್ಟದಲ್ಲಿ, ಪ್ರಾದೇಶಿಕ ಮಟ್ಟದಲ್ಲಿ, ವಿಭಾಗಗಳ  ಮಟ್ಟದಲ್ಲಿ ಹೊಸ ಜಿಲ್ಲೆ ಯಾವ ಸ್ಥಾನದಲ್ಲಿದೆ ಎಂಬುದನ್ನು ಇಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ.

೨. ಎರಡನೆಯದಾಗಿ ಹೊಸ ಜಿಲ್ಲೆಯ ಜನಸಂಖ್ಯೆಯ ಗಾತ್ರ, ಬೆಳವಣಿಗೆ, ಗುಣಶೀಲತೆ, ಆರೋಗ್ಯ, ಮರಣ ಪ್ರಮಾಣ, ಜನನ ಪ್ರಮಾಣ ಮುಂತಾದವುಗಳನ್ನು ಗುರುತಿಸುವ ಕೆಲಸವು ಇಲ್ಲಿ ನಡೆದಿದೆ.

೩. ಮೂರನೆಯದಾಗಿ ಮತ್ತು ಬಹು ಮುಖ್ಯವಾಗಿ ಹೊಸ ಜಿಲ್ಲೆಯ ದುಡಿಮೆಗಾರ ವರ್ಗದ ಸಾಮಾಜಿಕ ಸ್ವರೂಪ ಹಾಗೂ  ಲಿಂಗಸ್ವರೂಪವನ್ನು ಸೂಕ್ಷ್ಮ ವಿಶ್ಲೇಷಣೆಗೆ ಒಳಪಡಿಸುವ ಉದ್ದೇಶವು ಪ್ರಸ್ತುತ ಅಧ್ಯಯನಕ್ಕಿದೆ. ಜನಸಂಖ್ಯೆಯಲ್ಲಿ  ದುಡಿಯುವ ವರ್ಗ, ದುಡಿಮೆಗಾರರಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಮುಂತಾದವುಗಳ ಮೂಲಕ ಹೊಸ ಜಿಲ್ಲೆಗಳಲ್ಲಿನ  ಬಡತನದ ತೀವ್ರತೆಯನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ.

೪. ನಾಲ್ಕನೆಯದಾಗಿ, ವರಮಾನ ಹಾಗೂ ದುಡಿಮೆಗಾರರು, ಹೊಸ ಜಿಲ್ಲೆಯ ಪ್ರಾಥಮಿಕ ವಲಯ, ದ್ವಿತೀಯ ವಲಯ  ಹಾಗೂ ತೃತೀಯ ವಲಯಗಳಲ್ಲಿ ಹೇಗೆ ವಿತರಣೆಯಾಗಿದ್ದಾರೆ ಎಂಬುವುದನ್ನು ಗುರುತಿಸುವುದರ ಮೂಲಕ ಹೊಸ  ಜಿಲ್ಲೆಯ ‘ಆರ್ಥಿಕ ರಚನೆ’ಯನ್ನು ಕಟ್ಟುವ ಉದ್ದೇಶ ಇಲ್ಲಿದೆ.  

. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಉಪಕರಣವಾದಿ ಹಾಗೂ ಅಂತಸ್ಥವಾದಿ ಮಹತ್ವಗಳೆರಡನ್ನು ಪಡೆದಿರುವ ಸಾಕ್ಷರತೆ,  ಆರೋಗ್ಯ ಮುಂತಾದವುಗಳನ್ನು ವಿವರವಾಗಿ ಪರಿಶೀಲಿಸುವ ಉದ್ದೇಶವಿದೆ. ಸಾಕ್ಷರತೆಗೆ ಸಂಬಂಧಿಸಿದ ವಿವಿಧ  ಮುಖಗಳನ್ನು – ನೆಲೆಗಳನ್ನು ಇಲ್ಲಿ ಅನುಸಂಧಾನಕ್ಕೆ ಒಳಪಡಿಸಲಾಗಿದೆ. ೬ ರಿಂದ ೧೪ ವಯೋಮಾನದಲ್ಲಿ  ಶಾಲೆಗಳಲ್ಲಿರುವ ಮಕ್ಕಳ ಸಂಖ್ಯೆ ಎಷ್ಟು, ಶಾಲೆಯ ಹೊರಗೆ ಉಳಿದ ಹತಭಾಗ್ಯ ಮಕ್ಕಳ ಪ್ರಮಾಣ ಎಷ್ಟು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನತೆಯ ಸಾಕ್ಷರತೆ ಪ್ರಮಾಣ ಎಷ್ಟು? ಮುಂತಾದ ಸೂಕ್ಷ್ಮ ಸಂಗತಿಗಳನ್ನು ಇಲ್ಲಿ ವಿವರಿಸಲಾಗಿದೆ.

೬. ಕೃಷಿಗೆ ಸಂಬಂಧಿಸಿದಂತೆ ಬೆಳೆ ಬೆಳೆಯುವ ಪ್ರದೇಶ ಎಷ್ಟು? ನೀರಾವರಿ ಪ್ರಮಾಣ ಎಷ್ಟು? ಅರಣ್ಯ ಪ್ರಮಾಣ  ಎಷ್ಟಿದೆ? ಬೀಳು ಭೂಮಿ ಎಷ್ಟು? ಮುಂತಾದ ಸಂಗತಿಗಳನ್ನು ಸುಸ್ಥಿರಗತಿ ಬೆಳವಣಿಗೆಯ ನೆಲೆಯಲ್ಲಿ ನಡೆಸುವ  ಉದ್ದೇಶವನ್ನು ಪ್ರಸ್ತುತ ಅಧ್ಯಯನ ಇಟ್ಟುಕೊಂಡಿದೆ.

೭. ರಸ್ತೆಗಳು, ಬ್ಯಾಂಕಿಂಗ್ – ಮುಂತಾದ ಸೇವಾವಲಯಕ್ಕೆ ಸಂಬಂಧಿಸಿದಂತೆ ಹೊಸ ಜಿಲ್ಲೆಗಳ ಸ್ಥಾನ ಯಾವುದು?  ಎಂಬುದನ್ನು ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ.    

೮. ಹೊಸ ಜಿಲ್ಲೆಗಳಲ್ಲಿ ಔದ್ಯಮಿಕ ರಂಗದ ಸ್ಥಾನಮಾನ ಯಾವುದು? ಔದ್ಯಮಿಕ ರಂಗದಲ್ಲಿ ತೊಡಗಿಸಿರುವ ಬಂಡವಾಳ, ಅಲ್ಲಿ ದುಡಿಮೆಯಲ್ಲಿ ನಿರತವಾಗಿರುವ ಕಾರ್ಮಿಕ ವರ್ಗ ಮುಂತಾದವುಗಳನ್ನು ಗುರುತಿಸುವ ಉದ್ದೇಶವು ಅಧ್ಯಯನಕ್ಕಿದೆ. ಕೈಗಾರಿಕಾ ಬೆಳವಣಿಗೆಯ ಒಂದು ಮುನ್ನೋಟವನ್ನು ನೀಡಲು ಇಲ್ಲಿ ಪ್ರಯತ್ನಿಸಲಾಗಿದೆ.

. ಇಡೀ ಅಧ್ಯಯನದ ಒಳನೋಟಗಳಿಂದ ಹೊಸ ಜಿಲ್ಲೆಗಳ ಅಭಿವೃದ್ಧಿಯ ಒಂದು ಮುನ್ನೋಟವನ್ನು ನೀಡಲು ಇಲ್ಲಿ  ಪ್ರಯತ್ನಿಸಲಾಗಿದೆ. ಈ ಜಿಲ್ಲೆಗಳ ಅಭಿವೃದ್ಧಿಯ ಭಾವಿ ಸ್ವರೂಪ ಹೇಗಿರಬಹುದು? ಭವಿಷ್ಯ ಉಜ್ವಲವಾಗಿದೆಯೆ? ಅಥವಾ ನಿರಾಶಾದಾಯಕವಾಗಿವೆಯೆ? ಎಂಬುದನ್ನು ಗುರುತಿಸುವ ಉದ್ದೇಶವೂ ನಮ್ಮ ಅಧ್ಯಯನಕ್ಕಿದೆ.

೧೦.ಈ ಅಧ್ಯಯನದ ಮೂಲಕ ನಾವು ಕರ್ನಾಟಕದ ೨೭ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಒಂದು ಮಾಹಿತಿ ಕೋಶವನ್ನು ಸಿದ್ಧಪಡಿಸಿದ್ದೇವೆ. ಹೊಸ ಜಿಲ್ಲೆಗಳು ವಿಭಾಗ ಮಟ್ಟದಲ್ಲಿ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಯಾವ ಸ್ಥಾನದಲ್ಲಿವೆ ಎಂಬುದನ್ನು ಗುರುತಿಸಲು ನಮ್ಮ ಮಾಹಿತಿ ಕೋಶ ನೆರವಾಗುತ್ತದೆ. ಕರ್ನಾಟಕದ ಜಿಲ್ಲಾ ಅಭಿವೃದ್ಧಿ ಅಧ್ಯಯನದ ಮೊದಲ ಹಂತವಾಗಿ ‘ಮಾಹಿತಿ ಕೋಶ’ವನ್ನು ಸಿದ್ಧಪಡಿಸುವ ಉದ್ದೇಶವನ್ನು ಪ್ರಸ್ತುತ ಅಧ್ಯಯನವು ಇಟ್ಟುಕೊಂಡಿದೆ. (ಈ ಮಾಹಿತಿ ಕೋಶವು ಈಗಾಗಲೆ ಪ್ರತ್ಯೇಕವಾಗಿ ಪ್ರಕಟಗೊಂಡಿದೆ).

ಅಧ್ಯಯನ ವಿಧಾನ

ಮೂಲಭೂತವಾಗಿ ಇದೊಂದು ಎಂಪರಿಕಲ್ ಸ್ವರೂಪದ ಅಧ್ಯಯನದಂತೆ ಕಂಡರೆ ಆಶ್ಚರ್ಯವಿಲ್ಲ. ನಿಜ, ಇದು ಎಂಪರಿಕಲ್ ಸ್ಚರೂಪ ಪ್ರಧಾನವಾಗಿದೆ. ಆದರೆ ಈ ಅಧ್ಯಯನದಲ್ಲಿ ಸ್ಯೆದ್ಧಾಂತಿಕ ಸಂಗತಿಗಳು ಕೆಲಸ ಮಾಡಿವೆ. ಪ್ರಜ್ಞಾಪೂರ್ವಕವಾಗಿ ಅಧ್ಯಯನವನ್ನು ಲಿಂಗಸಂವೇದಿಯನ್ನಾಗಿ ಮಾಡಲಾಗಿದೆ. ದುಡಿಮೆಗಾರ ವರ್ಗ ಹಾಗೂ ವರಮಾನ ಇವುಗಳು ಜಿಲ್ಲೆಯ ಮೂರು ವಲಯಗಳಲ್ಲಿ ಹಂಚಿಕೆಯಾಗಿರುವ ಬಗೆಯನ್ನು ಆಧರಿಸಿ ಜಿಲ್ಲೆಯ ‘ಆರ್ಥಿಕ’ ರಚನೆಯನ್ನು ಕಟ್ಟಲು ಇಲ್ಲಿ ಪ್ರಯತ್ನಿಸಲಾಗಿದೆ. ವಾಸ್ತವವಾಗಿ ಕರ್ನಾಟಕದ ಹೊಸ ಜಿಲ್ಲೆಗಳಿಗೆ ಸಂಬಂಧಿಸಿದ ವರಮಾನ ವಿವರಗಳು ದೊರೆಯುವುದಿಲ್ಲ. ನಮ್ಮ ಅಧ್ಯಯನದ ಅನುಕೂಲಕ್ಕಾಗಿ ಹೊಸ ಜಿಲ್ಲೆಗಳ ನಿವ್ವಳ ಆಂತರಿಕ ಉತ್ಪನ್ನವನ್ನು ಒಂದು ವಿಷೇಶ ವಿಧಾನದಿಂದ ಗಣನೆ ಮಾಡಲಾಗಿದೆ. ಈ ಅಧ್ಯಯನವನ್ನು ಅಮರ್ತ್ಯಸೇನ್‌ರ ಧಾರಣಶಕ್ತಿ ಪರಿಭಾವನೆ ಮತ್ತು ಮೆಹಬೂಬ್ ಉಲ್ ಹಕ್ ಅವರ ಮಾನವಮುಖಿ ಅಭಿವೃದ್ಧಿ ವಿಚಾರ ಪ್ರಣಾಳಿಕೆಯನ್ನು ಆಧರಿಸಿ ರಚಿಸಲಾಗಿದೆ.

ಒಟ್ಟಾರೆ ಲಿಂಗಸಂಬಂಧಿ ವಿಚಾರಗಳು ಮಾನವಮುಖಿ ಅಭಿವೃದ್ಧಿ ವಿಚಾರ ಪ್ರಣಾಳಿಕೆ, ಪೊಲಿಟಿಕಲ್ ಎಕಾನಮಿ ಪ್ರಶ್ನೆಗಳು ನಮ್ಮ ಅಧ್ಯಯನದ ಹಿಂದೆ ಕ್ರಿಯಾಶೀಲವಾಗಿ ಕೆಲಸ ಮಾಡಿವೆ. ಇದೊಂದು ‘ನೀತಿ – ನಿರೂಪಣಾ ಸಂವೇದಿ’ ಅಧ್ಯಯನವಾಗಿದೆ. ಜಿಲ್ಲೆಯ ಮಟ್ಟದಲ್ಲಿ ಅಭಿವೃದ್ಧಿ ಯೋಜನೆಯನ್ನು ರೂಪಿಸುವ ಕೆಲಸದಲ್ಲಿ ನಿರತರಾಗಿರುವ ಎಲ್ಲರಿಗೂ ಇದೇ ಮಾರ್ಗದರ್ಶಿ ಕೈಪಿಡಿಯಾಗಬಲ್ಲದು.

ಮಾಹಿತಿ ಸಂಗ್ರಹ

ಈ ಅಧ್ಯಯನಕ್ಕೆ ಅಗತ್ಯವಾದ ಎಲ್ಲ ಮಾಹಿತಿಯನ್ನು ಆನುಷಂಗಿಕ ಮೂಲಗಳಿಂದ ಸಂಗ್ರಹಿಸಿಕೊಳ್ಳಲಾಗಿದೆ. ಜನಗಣತಿ ನಿರ್ದೇಶನಾಲಯ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಎಂಜಿನಿಯರ್ ಅವರ ಕಚೇರಿ, ಶಿಕ್ಷಣ ಇಲಾಖೆ, ಕೈಗಾರಿಕೆ, ಮತ್ತು ವಾಣಿಜ್ಯ ಇಲಾಖೆ – ಹೀಗೆ ಅನೇಕ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿಕೊಂಡಿದ್ದೇವೆ. ಹೊಸ ಜಿಲ್ಲೆಗಳಿಗೆ ಭೇಟಿಕೊಟ್ಟು ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಧಿಕಾರಿ ಕಚೇರಿಗಳಿಂದ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದೇವೆ.

ಮಾಹಿತಿ ಸಂಗ್ರಹದ ಸಂದರ್ಭದಲ್ಲಿ ನಮಗೆ ಎದುರಾದ ಕೆಲವು ತೊಂದರೆಗಳನ್ನು ಇಲ್ಲಿ ವಿವರಿಸುವುದು ಅಪ್ರಸ್ತುತವಾಗಲಾರದು. ಹೊಸ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮಾಹಿತಿಯು ಲಭ್ಯವಿಲ್ಲ. ಹೊಸ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕುಗಳ ಮಾಹಿತಿಯನ್ನು ಒಟ್ಟುಗೂಡಿಸಿ ಜಿಲ್ಲಾ ಮಟ್ಟದ ಸೂಚಿಗಳನ್ನು ಸಿದ್ಧಪಡಿಸ

ಬೇಕಾಗಿದೆ. ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ, ಜಿಲ್ಲಾ ಮಟ್ಟದಲ್ಲಿ ನೀಡುವ ಜವಾಬ್ದಾರಿಯನ್ನು ಬೆಂಗಳೂರಿನ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು ಹೊತ್ತಿದೆ. ಆದರೆ ಈ ನಿರ್ದೇಶನಾಲಯವು ಇದು ವರೆಗೂ ಹೊಸ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಅಂಕಿ – ಅಂಶಗಳನ್ನು ಸಿದ್ಧಪಡಿಸಿಲ್ಲ.

ಹೊಸ ಜಿಲ್ಲೆಗಳ ವಿಸ್ತೀರ್ಣ

ಜಿಲ್ಲಾ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಬಹಮುಖ್ಯವಾದ ತೊಡಕಿದೆ. ಜನಗಣತಿ ವರದಿಗಳಲ್ಲಿ ಜಿಲ್ಲಾವಾರು ಹಾಗೂ ತಾಲ್ಲೂಕುವಾರು ವಿಸ್ತೀರ್ಣದ ವಿವರ ದೊರೆಯುತ್ತದೆ. ಸದರಿ ವರದಿಗಳಲ್ಲಿ ತಿಳಿಸಿರುವಂತೆ ಜಿಲ್ಲೆಗಳ ವಿಸ್ತೀರ್ಣವು ಆ ಜಿಲ್ಲೆಯ ತಾಲ್ಲೂಕುಗಳ ವಿಸ್ತೀರ್ಣವನ್ನು ಕೂಡಿಸಿದ ಮೊತ್ತಕ್ಕೆ ಸಮನಾಗುವುದಿಲ್ಲ. ಏಕೆಂದರೆ ಇಲ್ಲಿ ಬಳಸಿರುವ ಮಾಹಿತಿ ಮೂಲಗಳು ಬೇರೆ ಬೇರೆಯಾಗಿವೆ. ಜಿಲ್ಲಾ ವಿಸ್ತೀರ್ಣವನ್ನು ಸರ್ವೇ ಇಲಾಖೆಯ ಮಾಹಿತಿ ಆಧಾರದಿಂದ ಗಣನೆ ಮಾಡಿದ್ದರೆ ತಾಲ್ಲೂಕು ಮಟ್ಟದ ವಿಸ್ತೀರ್ಣವನ್ನು ಗ್ರಾಮ ಹಾಗೂ ತಾಲ್ಲೂಕು ರೆವಿನ್ಯೂ ಇಲಾಖೆಯಿಂದ ಸಂಗ್ರಹಿಸಿ ಕೊಳ್ಳಲಾಗಿದೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವಲ್ಲಿ ನಾವು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದೇವೆ. ಹೊಸ ಜಿಲ್ಲೆಗಳಿಗೆ ಸಂಬಂಧಿಸಿದ ೩೫ ತಾಲ್ಲೂಕುಗಳ ವಿಸ್ತೀರ್ಣವನ್ನು ಮಾತ್ರ ಇಲ್ಲಿ ಗಣನೆ ಮಾಡಿದ್ದೇವೆ. ಉಳಿದಂತೆ ಜಿಲ್ಲಾ ಮಟ್ಟದ ವಿಸ್ತೀರ್ಣವನ್ನೇ ಗಣನೆ ಮಾಡಿದ್ದೇವೆ. ಇದರಿಂದಾಗಿ ‘ಎರರ್‌’ನ ಪ್ರಮಾಣ ಕಡಿಮೆಯಾಗಿದೆ.

ಜಿಲ್ಲಾ ನಿವ್ವಳ ಆಂತರಿಕ ವರಮಾನ

ಕರ್ನಾಟಕದಲ್ಲಿ ನಿವ್ವಳ ಆಂತರಿಕ ಉತ್ಪನ್ನದ ವಿವರಗಳು ಜಿಲ್ಲಾ ಮಟ್ಟದಲ್ಲಿ ಮಾತ್ರ ಲಭ್ಯವಾಗುತ್ತವೆ. ತಾಲ್ಲೂಕು ಮಟ್ಟದಲ್ಲಿ ಅವು ದೊರೆಯುವುದಿಲ್ಲ. ಈ ಕಾರಣದಿಂದಾಗಿ ಹೊಸ ಜಿಲ್ಲೆಗಳಿಗೆ ಸಂಬಂಧಿಸಿದ ವರಮಾನದ ವಿವರ ನಮಗೆ ದೊರೆಯುವುದಿಲ್ಲ. ನಮ್ಮ ಅಧ್ಯಯನದ ಸಲುವಾಗಿ ಹೊಸ ಜಿಲ್ಲೆಗಳ ವರಮಾನವನ್ನು ಒಂದು ವಿಶಿಷ್ಟ ವಿಧಾನವನ್ನು ಅನುಸರಿಸಿ ಗಣನೆ ಮಾಡಿದ್ದೇವೆ. ವರಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೀಗೆ ಕಂಡುಕೊಂಡಿದ್ದರಿಂದ ಹೊಸ ಜಿಲ್ಲೆಗಳ ವಲಯವಾರು ಆರ್ಥಿಕ ರಚನೆಯನ್ನು ಕಟ್ಟಿ ಕೊಳ್ಳುವುದು ಇಲ್ಲಿ ಸಾಧ್ಯವಾಗಿದೆ.

ಸಾಕ್ಷರತೆ ವಿವರಗಳು

ಈ ಅಧ್ಯಯನದ ಮೂಲಕ ಪ್ರಥಮ ಬಾರಿಗೆ ಕರ್ನಾಟಕದ ೨೭ ಜಿಲ್ಲೆಗಳ ಸಾಕ್ಷರತೆಗೆ ಸಂಬಂಧಿಸಿದಂತೆ ವಿವರಗಳನ್ನು ನಾವು ಸಿದ್ಧಪಡಿಸಿದ್ದೇವೆ. ಸಾಕ್ಷರತೆ ವಿವರಗಳ ಜೊತೆಗೆ ಅನಕ್ಷರಸ್ತರ ಪ್ರಮಾಣದ ವಿವರಗಳನ್ನು ಇಲ್ಲಿ ನೀಡಲಾಗಿದೆ. ಸಾಕ್ಷರತೆಗೆ ಸಂಬಂಧಿಸಿದ ಲಿಂಗವಾರು ಆಯಾಮಗಳನ್ನು ವಿವರವಾಗಿ ಇಲ್ಲಿ ಚರ್ಚಿಸಲಾಗಿದೆ. ಸಾಕ್ಷರತೆಯ ಅಂಕಿ – ಸಂಖ್ಯೆಗಳನ್ನು ನಮ್ಮ ಅಧ್ಯಯನದಲ್ಲಿ ಅತ್ಯಂತ ಸೂಕ್ಷ್ಮ ಅನುಸಂಧಾನಕ್ಕೆ ಒಳಪಡಿಸಲಾಗಿದೆ. ಸಾಕ್ಷರರಲ್ಲಿ ಮಹಿಳೆಯರ ಪಾಲು, ಸಾಕ್ಷರರಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗದ ಜನತೆಯ ಪಾಲು ಮುಂತಾದ ಸಂಗತಿಗಳನ್ನು ಪ್ರಸ್ತುತ ಅಧ್ಯಯನಕ್ಕಾಗಿ ಸಿದ್ಧಪಡಿಸಲಾಗಿದೆ. ಸಾಕ್ಷರತೆಯನ್ನು ಕೇವಲ ಶೇಕಡ ಪ್ರಮಾಣದಲ್ಲಿ ವಿಶ್ಲೇಷಿಸುವುದರ ಜೊತೆಗ ಪೂರ್ಣ ಅಂಕಿಗಳ ರೂಪದಲ್ಲೂ ವಿಶ್ಲೇಷಿಸಲಾಗಿದೆ.

ಜಿಲ್ಲಾ ಅಭಿವೃದ್ಧಿ ಅಧ್ಯಯನ ವರದಿ

‘ಅಭಿವೃದ್ಧಿ ವರದಿ’ಗಳನ್ನು ಸಿದ್ಧಪಡಿಸುವ – ಪ್ರಕಟಿಸುವ ಒಂದು ವಿಶಿಷ್ಟ ಪದ್ಧತಿ ಪ್ರಚಲಿತದಲ್ಲಿದೆ. ೧೯೯೦ರಿಂದ ಯುಎನ್‌ಡಿಪಿಯು ‘ಮಾನವಮುಖಿ ಅಭಿವೃದ್ಧಿ ವರದಿ’ಗಳನ್ನು ಪ್ರತಿವರ್ಷವೂ ಪ್ರಕಟಿಸುತ್ತಿದೆ. ‘ಇಂದಿರಾ ಗಾಂಧಿ ಇನಸ್ಟಿಟ್ಯೂಟ್‌ ಆಫ್‌ ಡೆವಲಪ್‌ಮೆಂಟ್‌ ರೀಸರ್ಚ್‌’ನ ಕೀರ್ತಿ ಎಸ್. ಪಾರೀಖ್ ಮತ್ತು ಅವರ ಸಹೋದ್ಯೋಗಿಗಳು ಸೇರಿಕೊಂಡು ‘ಇಂಡಿಯಾ ಡೆವಲಪ್‌ಮೆಂಟ್ ರೆಪೊರ್ಟ್‌’ ಪ್ರಕಟಿಸುತ್ತಿದ್ದಾರೆ. ಇದು ‘ಅಭಿವೃದ್ಧಿ ವರದಿ’ಗಳ ಕಾಲ. ಇದೇ ಮಾದರಿಯಲ್ಲಿ, ಆದರೆ ಅವುಗಳಿಗಿಂತ ಭಿನ್ನವಾದ ರೀತಿಯಲ್ಲಿ ನಾವು ಕರ್ನಾಟಕಕ್ಕೆ ಸಂಬಂಧಿಸಿದಂತೆ ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ಗಳನ್ನು ಸಿದ್ಧಪಡಿಸುತ್ತಿದ್ದೇವೆ. ಸದ್ಯ, ಈ ಯೋಜನೆಯಡಿಯಲ್ಲಿ ೧೯೯೭ರಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಏಳು ಜಿಲ್ಲೆಗಳ ‘ಅಭಿವೃದ್ಧಿ ಅಧ್ಯಯನ ವರದಿ’ಗಳನ್ನು ಪ್ರಕಟಿಸುತ್ತಿದ್ದೇವೆ. ಮೊದಲೆ ತಿಳಿಸಿರುವಂತೆ ನಮ್ಮ ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ ವರದಿಯು ‘ಮಾನವ ಅಭಿವೃದ್ಧಿ ವರದಿ’ ಹಾಗೂ ‘ಇಂಡಿಯಾ ಅಭಿವೃದ್ಧಿ ವರದಿ’ ಗಳಿಗಿಂತ ಭಿನ್ನವಾಗಿದೆ. ಮಾನವ ಅಭಿವೃದ್ಧಿ ವರದಿಯಂತೆ ನಮ್ಮ ವರದಿಯು ಕೇವಲ ಶಿಕ್ಷಣ, ಸಾಕ್ಷರತೆ, ಆರೋಗ್ಯ ಮುಂತಾದ ಸಾಮಾಜಿಕ ವಲಯಗಳ ಪರಿಶೀಲನೆಗೆ ಮೀಸಲಾಗಿಲ್ಲ. ಇಂಡಿಯಾ ಅಭಿವೃದ್ಧಿ ವರದಿಯಂತೆ ನಮ್ಮ ವರದಿಯು ‘ವಲಯವಾರು’ ಅಧ್ಯಯನವಾಗಿಲ್ಲ. ಇವೆರಡನ್ನೂ ಸಮನ್ವಯಗೊಳಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ನಮ್ಮ ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ ವರದಿಯಲ್ಲಿ ದುಡಿಯುವ ವರ್ಗದ ಸ್ವರೂಪವನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ವಿವಿಧ ಆಯಾಮಗಳಲ್ಲಿ ಹಿಡಿದಿಡಲು ಪ್ರಯತ್ನಿಸಲಾಗಿದೆ. ದುಡಿಮೆಗಾರರ ವಲಯವಾರು ಹಂಚಿಕೆಯನ್ನು ಗುರುತಿಸುವ ಮೂಲಕ ಆರ್ಥಿಕ ರಚನೆಯನ್ನು ಇಲ್ಲಿ ರೂಪಿಸಿಕೊಳ್ಳಲು ಸಾಧ್ಯವಾಗಿದೆ. ದುಡಿಮೆಗಾರ ವರ್ಗದ ಲಿಂಗ ಸ್ವರೂಪವನ್ನು ಇಲ್ಲಿ ಸೂಕ್ಷ್ಮ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಈ ಕಾರಣಗಳಿಂದ ನಮ್ಮ ವರದಿಯು ಮೇಲೆ ತಿಳಿಸಿದ ಅಭಿವೃದ್ಧಿ ವರದಿಗಳಿಗಿಂತ ಗುಣಾತ್ಮಕವಾಗಿ ಭಿನ್ನವಾಗಿದೆ.

ನಮ್ಮ ಅಧ್ಯಯನ ವರದಿಯು ಅಮರ್ತ್ಯಸೇನ್ ಅವರ ವಿಚಾರಗಳಿಂದ ಹೆಚ್ಚು ಪ್ರಭಾವಿತಗೊಂಡಿದೆ. ಇದು ಮಾನವಮುಖಿ ವಿಚಾರ ಪ್ರಣಾಳಿಕೆಯಿಂದ ಪ್ರಭಾವಿತಗೊಂಡಿದೆ. ಇದು ಮಾನವಮುಖಿ ಅಭಿವೃದ್ಧಿ ವಿಚಾರ ಪ್ರಣಾಳಿಕೆಗೆ ಹೆಚ್ಚು ಸಂವೇದಿಯಾಗಿದೆ. ಆದರೆ ನಮ್ಮ ವರದಿ ಅನೇಕ ಇತಿಮಿತಿಗಳನ್ನು ಹೊಂದಿದೆ. ನಮ್ಮ ಜಿಲ್ಲಾ ಅಭಿವೃದ್ಧಿ ಅಧ್ಯಯನ ವರದಿಗಳನ್ನು ಮಮಾನವಮುಖಿ ಅಭಿವೃದ್ಧಿ ವರದಿ ಮತ್ತು ಇಂಡಿಯಾ ಅಭಿವೃದ್ಧಿ ವರದಿಗಳಿಗೆ ಹೋಲಿಸುತ್ತಿರುವ ಕ್ರಮವನ್ನು ‘ದಾರ್ಷ್ಟ್ಯತನ’ವೆಂದು ಭಾವಿಸಬೇಕಾಗಿಲ್ಲ. ತಾಂತ್ರಿಕವಾಗಿ ನಮ್ಮ ವರದಿಗಳನ್ನು ಯುಎನ್‌ಡಿಪಿಯ ಅಭಿವೃದ್ಧಿ ವರದಿಗೆ ಹೋಲಿಸಲು ಸಾಧ್ಯವಿಲ್ಲ. ನಮ್ಮ ಅಧ್ಯಯನವು ತನ್ನದೇ ಆದ ಮಹತ್ವ ಪಡೆದಿದೆ ಎಂಬುದನ್ನು ಹೇಳಲು ಹೋಲಿಕೆಗಳನ್ನು ಮಾಡಲಾಗಿದೆ.

ಅಧ್ಯಯನದ ವ್ಯಾಪ್ತಿ

ಈ ಅಧ್ಯಯನವು ಮೊದಲ ಹಂತದಲ್ಲಿ ಕರ್ನಾಟಕದ ಏಳು ಹೊಸ ಜಿಲ್ಲೆಗಳನ್ನು ಒಳಗೊಂಡಿದೆ. ಈ ಹೊಸ ಏಳು ಜಿಲ್ಲೆಗಳು ಹಳೆಯ ೮ ಜಿಲ್ಲೆಗಳನ್ನು ವಿಭಜಿಸಿ ರಚಿತಗೊಂಡಿದೆ. ಇದರಿಂದಾಗಿ ಇಂದು ಕರ್ನಾಟಕದ ೧೫ ಜಿಲ್ಲೆಗಳ ವಿಸ್ತೀರ್ಣ. ಜನಸಂಖ್ಯೆ, ಗಡಿರೇಖೆಗಳು ಬದಲಾವಣೆಗೊಂಡಿವೆ. ಈ ಕಾರಣದಿಂದಾಗಿ ನಮ್ಮ ಅಧ್ಯಯನವು ಕರ್ನಾಟಕದ ೧೫ ಜಿಲ್ಲೆಗಳನ್ನು – ೭ ಹೊಸ ಜಿಲ್ಲೆಗಳು ಮತ್ತು ಹಳೆಯ ೮ ಜಿಲ್ಲೆಗಳು – ವ್ಯಾಪ್ತಿಯಲ್ಲಿ ಒಳಗೊಂಡಿದೆ. ಈ ಏಳು ಹೊಸ ಜಿಲ್ಲೆಗಳು ಹಾಗೂ ವಿಭಜಿತ ೮ ಜಿಲ್ಲೆಗಳು – ಹೀಗೆ ಒಟ್ಟು ೧೫ ಜಿಲ್ಲೆಗಳು ತಮ್ಮ ತಮ್ಮ ವಿಭಾಗಗಳಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಯಾವ ಸ್ಥಾನದಲ್ಲಿವೆ ಎಂಬುದನ್ನು ತಿಳಿಯಲು ನಾವು ರಾಜ್ಯದ ಒಟ್ಟು ೨೭ ಜಿಲ್ಲೆಗಳನ್ನು ಪರಿಗಣಿಸಬೇಕಾಯಿತು. ಹೀಗೆ ನಮ್ಮ ಜಿಲ್ಲಾ ಅಭಿವೃದ್ಧಿ ಅಧ್ಯಯನವು ಹೊಸ ಏಳು ಜಿಲ್ಲೆಗಳಿಂದ ಪ್ರಾರಂಭಿಸಿ, ವಿಭಜಿತ ೮ ಜಿಲ್ಲೆಗಳನ್ನು ಸೇರಿಸಿಕೊಂಡು ಕೊನೆಗೆ ೨೭ ಜಿಲ್ಲೆಗಳ ಅಧ್ಯಯನವಾಗಿ ರೂಪು ತಳೆದಿದೆ.

ಕಾಲಾವಧಿಯ ದೃಷ್ಟಿಯಿಂದ ಈ ಅಧ್ಯಯನವು ‘೧೯೯೧’ನ್ನು ಮೂಲವರ್ಷವನ್ನಾಗಿ ಇಟ್ಟುಕೊಂಡಿದೆ. ಜನಸಂಖ್ಯೆ, ಸಾಕ್ಷರತೆ, ದುಡಿಮೆಗಾರರು ಮುಂತಾದವುಗಳಿಗೆ ಸಂಬಂಧಿಸಿದಂತೆ ಮಾಹಿತಿ ದೊರೆಯದಿದ್ದಾಗ, ಯಾವ ವರ್ಷಕ್ಕೆ ಅದು ಸಂಬಂಧಪಟ್ಟಿದೆ ಎಂಬುದನ್ನು ಸೂಚಿಸಲಾಗಿದೆ.

ಅಧ್ಯಯನದ ಮಹತ್ವ

ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ವಿಭಾಗವು ಆರಂಭಿಸಿರುವ ಮಹತ್ವಾಕಾಂಕ್ಷೆಯ ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ ಅನೇಕ ದೃಷ್ಟಿಯಿಂದ ಮಹತ್ವದ್ದಾಗಿದೆ.

೧. ಈ ಅಧ್ಯಯನದ ಮೂಲಕ ಅಭಿವೃದ್ಧಿ ಅಧ್ಯಯನ ವಿಭಾಗವು ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ ಎಂಬ ಹೊಸ ಅಧ್ಯಯನ  ಮಾರ್ಗವೊಂದನ್ನು ಆವಿಷ್ಕಾರಗೊಳಿಸಿದೆ. ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ ಎಂಬುದು ಅಭಿವೃದ್ಧಿ ಅಧ್ಯಯನ ಕ್ಷೇತ್ರಕ್ಕೆ  ನಮ್ಮ ವಿಭಾಗವು ನೀಡಿದ ಕಾಣಿಕೆಯಾಗಿದೆ. ಜಿಲ್ಲಾ ಅಭಿವೃದ್ಧಿ ಅಧ್ಯಯನಕ್ಕೆ ಒಂದು ನಿರ್ದಿಷ್ಟ ವ್ಯಾಖ್ಯೆಯನ್ನು  ನೀಡಲು ಇಲ್ಲಿ ಪ್ರಯತ್ನಿಸಲಾಗಿದೆ.

೨. ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ವೆನ್ನುವುದು ಕೇವಲ ಅಂಕಿ – ಅಂಶಗಳ ಕೋಶವಲ್ಲ. ನಾವು ಪರಿಭಾವಿಸಿಕೊಂಡಿರುವ  ಜಿಲ್ಲಾ ಅಭಿವೃದ್ಧಿ ಅಧ್ಯಯನವು ‘ಅನುಸಂಧಾನ’ ಸ್ವರೂಪದ್ದಾಗಿದೆ. ಈ ಅಧ್ಯಯನವನ್ನು ಸಂಕಥನದ ರೂಪದಲ್ಲಿ  ಕಟ್ಟಲಾಗಿದೆ. ಈ ಸಂಕಥನ ಸ್ವರೂಪದ ಜಿಲ್ಲಾ ಅಭಿವೃದ್ಧಿ ಅಧ್ಯಯನವು ಸಂಬಂಧಿಸಿದ ಜಿಲ್ಲೆಯಲ್ಲಿ ಅಭಿವೃದ್ಧಿಗೆ  ಸಂಬಂಧಿಸಿದಂತೆ ‘ಸಂವಾದ’ವೊಂದನ್ನು – ಚರ್ಚೆಯೊಂದನ್ನು ಪ್ರಚೋದಿಸ ಬಲ್ಲುದಾಗಿದೆ. ಈ ಕಾರಣದಿಂದಾಗಿ ಈ ಅಧ್ಯಯನ ಮಹತ್ವದ್ದಾಗಿದೆ.

೩. ಪ್ರತಿಯೊಂದು ಜಿಲ್ಲೆಗೂ ಒಂದು ವಿಶಿಷ್ಟತೆ ಇರುತ್ತದೆ. ಅದಕ್ಕೆ ಅನನ್ಯ ಗುರುತು ಇರುತ್ತದೆ. ಕರ್ನಾಟಕದಲ್ಲಿ ಹೊಸ  ದಾಗಿ ಅಸ್ತಿತ್ವಕ್ಕೆ ಬಂದ ಜಿಲ್ಲೆಗಳು ಇಂತಹ ವ್ಯಕ್ತಿತ್ವ – ವಿಶಿಷ್ಟತೆಯನ್ನು ಗುರುತಿಸಿಕೊಳ್ಳಬೇಕಾಗಿದೆ. ಈ ದಿಶೆಯಲ್ಲಿ  ನಮ್ಮ ಅಧ್ಯಯನವು ಒಂದು ಪ್ರಯತ್ನವಾಗಿದೆ. ಈ ದೃಷ್ಟಿಯಿಂದ ನಮ್ಮ ಅಧ್ಯಯನವು ‘ಉಪಯೋಗಿ ಮಹತ್ವ’ ಪಡೆದಿದೆ.

೪. ಇದೊಂದು ‘ನೀತಿ – ನಿರೂಪಣಾ ಸಂವೇದಿ’ ಅಧ್ಯಯನವಾಗಿದೆ. ಜಿಲ್ಲೆಯ ಅಭಿವೃದ್ಧಿ ಅಧ್ಯಯನ ರೂಪಿಸಲು ನಮ್ಮ  ಅಧ್ಯಯನವು ಮಾರ್ಗದರ್ಶಿ ಕೈಪಿಡಿಯಾಗಬಲ್ಲದು. ಜಿಲ್ಲೆಯ ಒಂದು ನಿರ್ದಿಷ್ಟವರ್ಗದ ಹಿತಾಸಕ್ತಿಗಳನ್ನು ‘ಪ್ರಧಾನ’  ವೆಂದು ನಮ್ಮ ಅಧ್ಯಯನವು ಘೋಷಿಸಿಕೊಂಡಿರುವುದರಿಂದ ಈ ಅಧ್ಯಯನ ‘ಮೌಲ್ಯ ನಿರಪೇಕ್ಷ’ವಾಗಿರಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಅಧ್ಯಯನ ಮಹತ್ವವನ್ನು ಪಡೆದುಕೊಂಡು ಬಿಡುತ್ತದೆ.

೫. ಈ ಅಧ್ಯಯನದಲ್ಲಿ ಜಿಲ್ಲೆಯ ಅಭಿವೃದ್ಧಿ ಮಟ್ಟವನ್ನು ವಿಭಾಗ, ಪ್ರದೇಶ ಹಾಗೂ ರಾಜ್ಯಕ್ಕೆ ಸಾಪೇಕ್ಷವಾಗಿ  ಗುರುತಿಸಿರುವುದರಿಂದ ಈ ಅಧ್ಯಯನವು ‘ಪ್ರಾದೇಶಿಕ ಅಧ್ಯಯನ’ ಮಹತ್ವವನ್ನು ಪಡೆದಿದೆ. ಪ್ರಾದೇಶಿಕ ಅಸಮಾನತೆ ಕುರಿತಂತೆ ಆಸಕ್ತಿವುಳ್ಳವರಿಗೆ ನಮ್ಮ ಅಧ್ಯಯನವು ಸೂಕ್ಷ್ಮ ಒಳನೋಟಗಳನ್ನು ನೀಡಬಲ್ಲುದಾಗಿದೆ.

೬. ಇದೊಂದು ಮೌಲ್ಯ ವಿವೇಚನೆಯುಳ್ಳ ಅಧ್ಯಯನವಾಗಿದೆ ಎಂಬುದನ್ನು ಈಗಾಗಲೆ ಹೇಳಲಾಗಿದೆ. ಇದೇ ನೆಲೆಯಲ್ಲಿ  ಹೇಳುವುದಾದರೆ ಇದೊಂದು ‘ಲಿಂಗಸಂವೇದಿ’ ಅಧ್ಯಯನವಾಗಿದೆ. ಅಭಿವೃದ್ಧಿಯು ಲಿಂಗಸಂವೇದಿ ಆಯಾಮಗಳನ್ನು  ಗುರುತಿಸಲು ಇಲ್ಲಿ ಆದ್ಯಗಮನ ನೀಡಲಾಗಿದೆ. ಈ ದೃಷ್ಟಿಯಿಂದಲೂ ನಮ್ಮ ಅಧ್ಯಯನವು ಉಪಯುಕ್ತವೂ, ಮಹತ್ವವೂ ಆಗಿದೆ.

೭. ಇದೊಂದು ‘ಅಭಿವೃದ್ಧಿ ವಿಶಿಷ್ಟ’ ಅಧ್ಯಯನವಾಗಿದೆ. ಗ್ರಾಮ, ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು  ಜಿಲ್ಲೆಗಳ ಮಟ್ಟದಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕಾದ ಪ್ರಮೇಯ ಈಗ ನಿರ್ಮಾಣವಾಗಿದೆ. ವಿಕೇಂದ್ರಿಕರಣವು ಕೇವಲ ಆಡಳಿತಾತ್ಮಕ ರಾಜಕೀಯ ಪ್ರಾತಿನಿಧ್ಯಕ್ಕೆ ಮೀಸಲಾಗಿದ್ದ ಕಾಲ ಮುಗಿದು ಹೋಗಿದೆ. ಈಗ ಅದು ಅತ್ಯಂತ ಗಂಭೀರವಾದ ರೀತಿಯಲ್ಲಿ ‘ಅಭಿವೃದ್ಧಿಮುಖಿ’ಯಾಗುತ್ತಿದೆ. ವಿಕೇಂದ್ರಿಕೃತ ಮತ್ತು ಸಹಭಾಗಿತ್ವವಾದಿ  ಅಭಿವೃದ್ಧಿಯು ಪ್ರಚಲಿತದಲ್ಲಿರುವ ಇಂದಿನ ಸಂದರ್ಭದಲ್ಲಿ ನಮ್ಮ ಅಧ್ಯಯನವು ತುಂಬಾ ಮಹತ್ವ ಪಡೆದಿದೆ.

೮. ಅಭಿವೃದ್ಧಿ ಆಡಳಿತಗಾರರಿಗೆ, ಜನಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ ಮತ್ತು ಮುಖ್ಯವಾಗಿ ಜಿಲ್ಲಾ ಪಂಚಾಯತಿ ಸದಸ್ಯರಿಗೆ ಈ ಅಧ್ಯಯನವು ತುಂಬಾ ಉಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ. ಅಭಿವೃದ್ಧಿ ಕುರಿತಂತೆ ಸಂವಾದಕ್ಕೆ – ಸಂಕಥನಕ್ಕೆ ಒಂದು ನೆಲೆಗಟ್ಟನ್ನು ನಮ್ಮ ಅಧ್ಯಯನವು ಒದಗಿಸುತ್ತದೆ. ಇದರಿಂದಾಗಿ ಇದು ಮಹತ್ವ ದ್ದಾಗಿದೆ.

ಅಧ್ಯಯನದ ಮಿತಿಗಳು

ಇದೊಂದು ಮಹತ್ವಾಕಾಂಕ್ಞೆಯ ಅಧ್ಯಯನವಾಗಿದೆ. ಈ ಅಧ್ಯಯನವು ನಿರ್ದಿಷ್ಟವಾದ ಸೈದ್ಧಾಂತಿಕ ನೆಲೆಯನ್ನು ಹೊಂದಿದೆ ಮತ್ತು ಸುಸ್ಪಷ್ಟವಾದ ಅಧ್ಯಯನ ವಿಧಾನವನ್ನು ಇಲ್ಲಿ ರೂಪಿಸಿಕೊಂಡಿದ್ದೇವೆ. ಇಂತಹ ಅಧ್ಯಯನಗಳನ್ನು ಕೈಗೊಂಡಾಗ ಕೆಲವು ಮಿತಿಗಳು ಅಂತರ್ಗತಗೊಂಡಿರುತ್ತವೆ. ಈ ಮಿತಿಗಳ ಚೌಕಟ್ಟಿನಲ್ಲಿ ನಮ್ಮ ಅಧ್ಯಯನವನ್ನು ಪರಿಭಾವಿಸಬೇಕಾಗಿದೆ.

ಈ ಅಧ್ಯಯನದ ಬಹು ಮುಖ್ಯವಾದ ಮಿತಿಯೆಂದರೆ ಈ ಅಧ್ಯಯನವು ಸಂಪೂರ್ಣವಾಗಿ ಆನುಷಂಗಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ಪ್ರಾಥಮಿಕ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದಕ್ಕೆ ಕ್ಷೇತ್ರಕಾರ್ಯ ಕೈಗೊಳ್ಳಬೇಕು. ಸಮಯದ ಅಭಾವದಿಂದ ಅದನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಹೊಸ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದಲ್ಲಿ ಸಮಾಜದ ವಿವಿಧ ವರ್ಗಗಳೊಂದಿಗೆ ಚರ್ಚೆ – ಸಂವಾದ – ಸಂದರ್ಶನ ನಡೆಸುವ ಉದ್ದೇಶವಿತ್ತು. ಆದರೆ ಅದು ಕೈಗೂಡಲಿಲ್ಲ. ಮುಂದೆ ಅಂತಹ ‘ಸಮಗ್ರ’ವಾದ ಅಧ್ಯಯನ ಕೈಗೊಳ್ಳುವ ಉದ್ದೇಶ ನಮ್ಮದಾಗಿದೆ. ಈಗ ನಾವು ತಯಾರಿಸಿರುವ ಅಧ್ಯಯನ ವರದಿಯನ್ನು ಪೂರ್ವಭಾವಿ ಪ್ರಯತ್ನವೆಂದರೂ ಸರಿ! ಈ ಅಧ್ಯಯನದ ಉಪ ಉತ್ಪನ್ನವಾದ ಕರ್ನಾಟಕದ ೨೭ಜಿಲ್ಲೆಗಳನ್ನು ಕುರಿತಂತೆ ಆನುಷಂಗಿಕ ಮೂಲಗಳಿಂದ ಸಂಗ್ರ ಹಿಸಿದ ಅಂಕಿ – ಅಂಶಗಳನ್ನೆಲ್ಲ ಒಪ್ಪಮಾಡಿ ‘ಮಾಹಿತಿ ಕೋಶ’ವೊಂದನ್ನು ಸಿದ್ಧಪಡಿಸಿದ್ಧೇವೆ. ನಮ್ಮ ಅಧ್ಯಯನದ ಮೂಲದಲ್ಲಿ ‘ಜಿಲ್ಲಾಮಟ್ಟ’ದಲ್ಲಿ ಅಭಿವೃದ್ಧಿ ಕುರಿತಂತೆ ಸಂವಾದ – ಸಂಕಥನವೊಂದನ್ನು ಹುಟ್ಟು ಹಾಕುವ ಉದ್ಧೇಶ ಇತ್ತು. ಈ ದಿಶೆಯಲ್ಲಿ ನಮ್ಮ ಅಧ್ಯಯನ ಯಶಸ್ವಿಯಾಗಿದೆ ಎಂದು ನಾವು ಭಾವಿಸಿದ್ಧೇವೆ. ನಮ್ಮ ಅಧ್ಯಯನದ ಇನ್ನೊಂದು ಬಹು ಮುಖ್ಯವಾದ ಮಿತಿಯೆಂದರೆ ಜಿಲ್ಲೆಯ ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಈ ಅಧ್ಯಯನವು ಏನನ್ನು ಹೇಳುವುದಿಲ್ಲ. ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸಂಬಂಧಿ ವಿಷಯವನ್ನು ಮಾತ್ರ ಇಲ್ಲಿ ಅಧ್ಯಯನಕ್ಕೆ ಹಚ್ಚಲಾಗಿದೆ.

ಗದಗ ಜಿಲ್ಲೆಯ ಅಭಿವೃದ್ಧಿ ಅಧ್ಯಯನ ವರದಿ

ಅವಿಭಜಿತ ಧಾರವಾಡ ಜಿಲ್ಲೆಯ ಐದು ತಾಲ್ಲೂಕುಗಳನ್ನು ಪ್ರತ್ಯೇಕಗೊಳಿಸಿ ಗದಗ ಜಿಲ್ಲೆಯನ್ನು ರಚಿಸಲಾಗಿದೆ. ಪ್ರಾದೇಶಿಕವಾಗಿ ಗದಗವು ‘ಬಾಂಬೆ – ಕರ್ನಾಟಕ’ ಪ್ರದೇಶಕ್ಕೆ ಸೇರಿದ ಜಿಲ್ಲೆಯಾಗಿದೆ. ಬಾಂಬೆ ಕರ್ನಾಟಕದಲ್ಲಿ ನಾಲ್ಕು ಜಿಲ್ಲೆಗಳಿದ್ದವು. ಈಗ ಮೂರು ಹೊಸ ಜಿಲ್ಲೆಗಳನ್ನು ರಚಿಸಿದ್ದರಿಂದ ಅಲ್ಲಿ ಏಳು ಜಿಲ್ಲೆಗಳಾಗಿವೆ. ಈ ಬಗೆಯ ಹೊಸ ಜಿಲ್ಲೆಗಳಲ್ಲಿ ಗದಗವೂ ಒಂದಾಗಿದೆ. ಬಾಂಬೆ ಕರ್ನಾಟಕ ಪ್ರದೇಶವು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದರಿಂದ ಅದಕ್ಕೆ ವಸಾಹತುಶಾಹಿಯ ಅನೇಕ ಅನುಕೂಲಗಳನ್ನು ಪಡೆದುಕೊಳ್ಳುವುದು ಸಾಧ್ಯವಾಯಿತು. ಬಾಂಬೆ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗಗಳೆರಡನ್ನು ಸೇರಿಸಿ ಉತ್ತರ ಕರ್ನಾಟಕ ಪ್ರದೇಶವೆಂದು ಕರೆಯುವುದು ರೂಢಿಯಲ್ಲಿದೆ. ಈ ಪ್ರದೇಶದಲ್ಲಿರುವ ಅನೇಕ ಜಿಲ್ಲೆಗಳು ಅತ್ಯಂತ ಮುಂದುವರಿದಿವೆ. ಹೀಗೆ ವಸಾಹತು ಶಾಹಿಯ ಅನುಕೂಲಗಳನ್ನು ಪಡೆದುಕೊಂಡು ಅಭಿವೃದ್ಧಿಯನ್ನು ಸಾಧಿಸಿಕೊಂಡ ಪ್ರದೇಶಕ್ಕೆ ಗದಗ ಜಿಲ್ಲೆ ಸೇರಿದೆ.

ಗದಗ ಜಿಲ್ಲೆಯು ರಾಜ್ಯದಲ್ಲಿ ಮಧ್ಯಮ ಸ್ಥಾನ ಪಡೆದಿರುವ ಜಿಲ್ಲೆಯಾಗಿದೆ. ರಾಜ್ಯದ ಸಾಕ್ಷರತೆಯಲ್ಲಿ ಗದಗಕ್ಕೆ ೧೩ನೆಯ ಸ್ಥಾನವಿದೆ. ತಲಾವರಮಾನದಲ್ಲಿ ಗದಗ ಜಿಲ್ಲೆಗೆ ೧೪ನೆಯ ಸ್ಥಾನವಿದೆ. ಆರೋಗ್ಯ ದೃಷ್ಟಿಯಿಂದಲೂ ಗದಗ ಸ್ಥಾನ ಮಧ್ಯಮ ಮಟ್ಟದ್ದಾಗಿದೆ. ಇನ್ನು ಮುಂದೆ ಜಿಲ್ಲೆಯ ಅಭಿವೃದ್ಧಿ ಯಾವ ದಿಕ್ಕು ಹಿಡಿಯಬಹುದು? ಜಿಲ್ಲೆಯಲ್ಲಿನ ಅಭಿವೃದ್ಧಿ ಲಿಂಗ ಸಂಬಂಧಿ ನೆಲೆಗಳಲ್ಲಿ ಯಾವ ರೀತಿಯ ಬದಲಾವಣೆಗಳಾಗಬಹುದು? ಇವೆ ಮೊದಲಾದ ಪ್ರಶ್ನೆಗಳಿಗೆ ಉತ್ತರಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಅಧ್ಯಾಯಗಳ ವಿನ್ಯಾಸ

ಜಿಲ್ಲಾ ಅಭಿವೃದ್ಧಿ ಅಧ್ಯಯನವು ಒಟ್ಟು ಹನ್ನೊಂದು ಅಧ್ಯಾಯಗಳನ್ನು ಒಳಗೊಂಡಿದೆ. ಒಂದೊಂದು ಅಧ್ಯಾಯಗಳಲ್ಲಿರುವ ವಿಷಯ – ವಿಶ್ಲೇಷಣೆ ವಿವರವನ್ನು ಇಲ್ಲಿ ಸ್ಥೂಲವಾಗಿ ನೀಡಲಾಗಿದೆ. ಮೊದಲನೆಯ ಪ್ರಸ್ಥಾವನೆ ಅಧ್ಯಾಯದಲ್ಲಿ ಜಿಲ್ಲೆಗಳ ಬಗ್ಗೆ ಚಾರಿತ್ರಿಕ ವಿವರ, ಕಾಲಾನಂತರ ಉಂಟಾದ ಬದಲಾವಣೆ, ಆಡಳಿತ ಮತ್ತು ಅಭಿವೃದ್ಧಿ ಪ್ರಾಧಾನ್ಯತೆ ಮುಂತಾದ ಪ್ರಾಥಮಿಕ ಮಾಹಿತಿಯ ಜೊತೆಗೆ ಪ್ರಸ್ತುತ ‌ಅಧ್ಯಯನದ ರೂಪರೇಷೆ, ಉದ್ದೇಶ, ಅಧ್ಯಯನ ವಿಧಾನ, ಅಧ್ಯಯನದ ವ್ಯಾಪ್ತಿ, ಮಹತ್ವ ಮತ್ತು ಮಿತಿಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ. ಈ ಅಧ್ಯಾಯದ ಕೊನೆಯ ಭಾಗದಲ್ಲಿ ಪ್ರಸ್ತತ ಅಧ್ಯಯನ ವರದಿಯಲ್ಲಿನ ಅಧ್ಯಾಯಗಳ ವಿನ್ಯಾಸವನ್ನು ನೀಡಲಾಗಿದೆ.

ಎರಡನೆ ಅಧ್ಯಾಯವು ಗದಗ ಜಿಲ್ಲೆಯು ಚಾರಿತ್ರಿಕ ಹಿನ್ನಲೆ, ಅದರ ಭೌಗೋಳಿಕ ವಿಸ್ತೀರ್ಣ, ರಾಜ್ಯದಲ್ಲಿ ಅದರ ಸ್ಥಾನ ಮುಂತಾದವುಗಳ ಮಾಹಿತಿಯನ್ನು ಒಳಗೊಂಡಿದೆ.

ಮೂರನೆಯ ಅಧ್ಯಾಯದಲ್ಲಿ ಜನಸಂಖ್ಯೆಯ ಬೆಳವಣಿಗೆಯ ಗತಿಶೀಲತೆಯನ್ನು ಅದರ ಗುಣಶೀಲತೆಯನ್ನು, ಅರೋಗ್ಯ ಸ್ವರೂಪವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ನಾಲ್ಕನೆಯ ಅಧ್ಯಾಯದಲ್ಲಿ ಜಿಲ್ಲೆಯ ದುಡಿಮೆಗಾರವರ್ಗದ ಸಾಮಾಜಿಕ ಸ್ವರೂಪ, ಮತ್ತು ಲಿಂಗಸ್ವರೂಪವನ್ನು ಸೂಕ್ಷ್ಮವಾಗಿ ವಿವರಿಸಲಾಗಿದೆ. ಈ ಜಿಲ್ಲೆಯಲ್ಲಿನ ಬಡತನದ ತೀವ್ರತೆಯನ್ನು ಇಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ.ಈ ಜಿಲ್ಲೆಯಲ್ಲಿ ಬಡತನವು ಹೇಗೆ ಲಿಂಗೀಕರಣವು ಪ್ರಕ್ರಿಯೆಗೆ ಒಳಗಾಗಿದೆ ಎಂಬುದನ್ನು ವಿವರಿಸಲಾಗಿದೆ.

ಐದನೆಯ ಅಧ್ಯಾಯವು ಜಿಲ್ಲೆಯ ವರಮಾನ ಹಾಗೂ ದುಡಿಮೆಗಾರವರ್ಗದಲ್ಲಿ ಮೂರು ವಲಯಗಳು ಯಾವ ಪಾಲು ಪಡೆದಿವೆ ಎಂಬುದನ್ನು ಗುರುತಿಸುವುದರ ಮೂಲಕ ಜಿಲ್ಲೆಯ ಆರ್ಥಿಕ ರಚನೆಯನ್ನು ಕಟ್ಟಲು ಇಲ್ಲಿ ಪ್ರಯತ್ನಿಸಲಾಗಿದೆ. ಆರ್ಥಿಕ ರಚನೆಯಲ್ಲಾಗುತ್ತಿರುವ ಬದಲಾವಣೆಗಳನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ.

ಸಾಕ್ಷರತೆಗೆ ಸಂಬಂಧಿಸಿದ ವಿವರಗಳನ್ನು ಆರನೆಯ ಅಧ್ಯಾಯ ಒಳಗೊಂಡಿದೆ. ಅಕ್ಷರಸ್ಥರ ಸಂಖ್ಯೆಯ ವಿವರಗಳ ಜೊತೆಗೆ ಅನಕ್ಷರಸ್ಥರ ವಿವರಗಳನ್ನು ನೀಡಿ ಸಾಕ್ಷರತೆಯ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ಜಿಲ್ಲೆಯ ಸಾಕ್ಷರರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪಾಲನ್ನು ಗುರುತಿಸಲಾಗಿದೆ.

ಏಳು, ಎಂಟು ಮತ್ತು ಒಂಬತ್ತನೆಯ ಅಧ್ಯಾಯಗಳಲ್ಲಿ ಕ್ರಮವಾಗಿ ಕೃಷಿ, ಔದ್ಯಮಿಕರಂಗ, ಬ್ಯಾಂಕಿಂಗ್, ರಸ್ತೆಗಳು ದವುಗಳ ವಿವರ ನೀಡಿದ್ದೇವೆ.

ಹತ್ತನೆಯ ಅಧ್ಯಾಯದಲ್ಲಿ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಯ ಒಂದು ಮುನ್ನೋಟವನ್ನು ನೀಡಲು ಪ್ರಯತ್ನಿಸಲಾಗಿದೆ. ಕೊನೆಯ ಅಧ್ಯಾಯವು ಸಾರಾಂಶವಾಗಿದೆ.