ಒಂದು ದೇಶ ಯಾ ಪ್ರದೇಶದ ಆರ್ಥಿಕ ರಚನೆಯು ಮೂರು ವಲಯಗಳನ್ನು ಹೊಂದಿರುತ್ತದೆ. ಅವುಗಳನ್ನು ಪ್ರಾಥಮಿಕ ವಲಯ, ದ್ವಿತೀಯ ವಲಯ ಮತ್ತು ತೃತೀಯ ವಲಯಗಳು ಎಂದು ವರ್ಗೀಕರಿಸಲಾಗಿದೆ. ಒಂದು ಆರ್ಥಿಕತೆಯ ಒಟ್ಟು ವರಮಾನ ಹಾಗೂ ಒಟ್ಟು ದುಡಿಮೆಗಾರ ವರ್ಗಗಳು ಮೂರು ವಲಯಗಳ ನಡುವೆ ಯಾವ ಪ್ರಮಾಣದಲ್ಲಿ ವಿತರಿಸ ಲ್ಪಟ್ಟಿದೆ ಎಂಬುದು ಅಭಿವೃದ್ಧಿಯ ದೃಷ್ಟಿಯಿಂದ ತುಂಬಾ ಮುಖ್ಯವಾದ ಸಂಗತಿಯಾಗಿದೆ. ಈ ಮೂರೂ ವಲಯಗಳು ವರಮಾನ ಮತ್ತು ದುಡಿಮೆಗಾರ ವರ್ಗಗಳಿಗೆ ಸಂಬಂಧಿಸಿದಂತೆ ಪಡೆದಿರುವ ಸಾಪೇಕ್ಷ ಸ್ಥಾನದ ಮೇಲೆ ಅಭಿವೃದ್ಧಿಯ ಮಟ್ಟ ಹಾಗೂ ಸ್ವರೂಪ ನಿಂತಿದೆ. ಆರ್ಥಿಕ ರಚನೆಯಲ್ಲಿನ ಮೂರು ವಲಯಗಳ ಸಾಪೇಕ್ಷ ಸ್ಥಾನಮಾನಗಳಲ್ಲಿನ ಬದಲಾವಣೆ ಹಾಗೂ ಅಭಿವೃದ್ಧಿ ಪ್ರಕ್ರಿಯೆ ನಡುವೆ ಇರುವ ಸಂಬಂಧವನ್ನು ಮತ್ತು ಸಂಬಂಧದ ಸ್ವರೂಪವನ್ನು ಅರ್ಥಶಾಸ್ತ್ರಜ್ಞರು ಗುರುತಿಸಿದ್ದಾರೆ. ಸೈಮನ್ ಕುಜ್ನೆಟ್ಸ್, ಕೊಲಿನ್ ಕ್ಲಾರ್ಕ್, ಆರ್ಥರ್ ಲಿವೀಸ್ ಮುಂತಾದವರು ಅಭಿವೃದ್ಧಿ ಪ್ರಕ್ರಿಯೆ ಮತ್ತು ಆರ್ಥಿಕ ರಚನೆಯ ಸ್ವರೂಪಗಳ ನಡುವಿನ ಸಂಬಂಧ ಕುರಿತಂತೆ ಪ್ರಮೇಯಗಳನ್ನು ರೂಪಿಸಿದ್ದಾರೆ. (ವಿವರಗಳಿಗೆ ನೋಡಿ: ಬಿ. ಶೇಷಾದ್ರಿ, ೧೯೯೧, ಪು.೪).

ವಲಯಗಳ ವಿವರಣೆ

ದುಡಿಮೆಗಾರ ವರ್ಗ ಹಾಗೂ ವರಮಾನಗಳೆರಡರ ದೃಷ್ಟಿಯಿಂದ ಪ್ರಾಥಮಿಕ ವಲಯವು ಕೃಷಿ (ಸಾಗುವಳಿದಾರರು ಮತ್ತು ಕೃಷಿ ಕಾರ್ಮಿಕರು) ಪಶು ಪಾಲನೆ, ಹೈನುಗಾರಿಕೆ, ಗಣಿಗಾರಿಕೆ, ಮೀನುಗಾರಿಕೆ, ಅರಣ್ಯಗಾರಿಕೆ ಮುಂತಾದ ಚಟುವಟಿಕೆಗಳನ್ನು ಒಳಗೊಂಡಿದೆ. ಈ ಚಟುವಟಿಕೆಗಳಲ್ಲಿ ತೊಡಗಿರುವ ದುಡಿಮೆಗಾರ ವರ್ಗವನ್ನು ಪ್ರಾ.ವ.ದಲ್ಲಿರುವ ದುಡಿಮೆಗಾರ ವರ್ಗವೆಂದೂ, ಈ ಚಟುವಟಿಕೆಗಳಿಂದ ಹರಿದುಬರುವ ವರಮಾನವನ್ನು ಪ್ರಾಥಮಿಕ ವಲಯದ ವರಮಾನವೆಂದು ಕರೆಯಲಾಗಿದೆ.

ದುಡಿಮೆಗಾರ ವರ್ಗ ಹಾಗೂ ವರಮಾನಗಳೆರಡರ ದೃಷ್ಟಿಯಿಂದ ಕೌಟುಂಬಿಕ ಕೈಗಾರಿಕಾ ಚಟುವಟಿಕೆಗಳು, ಕುಟುಂಬೇತರ ಕೈಗಾರಿಕಾ ಚಟುವಟಿಕೆಗಳು ಹಾಗೂ ನಿರ್ಮಾಣ ಚಟುವಟಿಕೆಗಳನ್ನು ದ್ವಿತೀಯ ವಲಯವು ಒಳಗೊಂಡಿದೆ. ಈ ಚಟುವಟಿಕೆಗಳಲ್ಲಿ ತೊಡಗಿರುವ ದುಡಿಮೆಗಾರ ವರ್ಗವನ್ನು ದ್ವಿತೀಯ ವಲಯದ ದುಡಿಮೆಗಾರ ವರ್ಗವೆಂದು ಮತ್ತು ಈ ವಲಯದಲ್ಲಿ ಪ್ರಾಪ್ತವಾಗುವ ವರಮಾನವನ್ನು ದ್ವಿತೀಯ ವಲಯದ ವರಮಾನವೆಂದು ಪರಿಗಣಿಸಲಾಗಿದೆ.

ತೃತೀಯ ವಲಯವನ್ನು ಸೇವಾವಲಯವೆಂದು ಕರೆಯಲಾಗಿದೆ. ಈ ವಲಯವು ವ್ಯಾಪಾರ, ವಾಣಿಜ್ಯ, ಸಾರಿಗೆ, ಸಂಪರ್ಕ, ಸಂಗ್ರಹ, ಪ್ರವಾಸೋದ್ಯಮ, ಹೋಟೆಲು ಉದ್ಯಮ, ಬ್ಯಾಂಕಿಂಗ್ ಮುಂತಾದ ಸೇವಾ ಚಟುವಟಿಕೆಗಳನ್ನು ಒಳಗೊಂಡಿದೆ. ಈ ಚಟುವಟಿಕೆಗಳಲ್ಲಿ ತೊಡಗಿರುವ ದುಡಿಮೆಗಾರ ವರ್ಗವನ್ನು ತೃತೀಯ ವಲಯದ ದುಡಿಮೆಗಾರ ವರ್ಗವೆಂದು, ಈ ಚಟುವಟಿಕೆಗಳಲ್ಲಿ ಉತ್ಪತ್ತಿಯಾಗುವ ವರಮಾನವನ್ನು ತೃತೀಯ ವಲಯದ ವರಮಾನವೆಂದು ತಿಳಿಯಲಾಗಿದೆ.

ಆರ್ಥಿಕ ರಚನೆಯ ಪರಿವರ್ತನೆಯ ಸ್ವರೂಪ

ಒಂದು ಆರ್ಥಿಕತೆಯು ಸಾಧಿಸುವ ಅಭಿವೃದ್ಧಿ ಮಟ್ಟ – ಸ್ವರೂಪಕ್ಕನುಗುಣವಾಗಿ ಆರ್ಥಿಕ ರಚನೆಯಲ್ಲಿ ಬದಲಾವಣೆ ಯಾಗುತ್ತಿರುತ್ತದೆ. ಈ ಕುರಿತು ಅರ್ಥಶಾಸ್ತ್ರಜ್ಞರು ಅನೇಕ ಪ್ರಮೇಯಗಳನ್ನು ರೂಪಿಸಿದ್ದಾರೆ. ಈ ಕುರಿತು ಕೋಲಿನ್ ಕ್ಲಾರ್ಕ್‌ ಹೀಗೆ ಹೇಳುತ್ತಾನೆ.

ಕಾಲಾನುಗತವಾಗಿ ಜನತೆಯು ಆರ್ಥಿಕವಾಗಿ ಹೆಚ್ಚು ಮುಂದುವರಿದಂತೆ ಪ್ರಾಥಮಿಕ ವಲಯದಲ್ಲಿ ಅಂದರೆ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ನಿರತವಾಗಿರುವುದರ ಸಂಖ್ಯೆಯು ದ್ವಿತೀಯ ವಲಯದಲ್ಲಿರುವ ದುಡಿಮೆಗಾರ ವರ್ಗದ ಸಂಖ್ಯೆಗೆ ಸಾಪೇಕ್ಷವಾಗಿಯೂ, ದ್ವಿತೀಯ ವಲಯದಲ್ಲಿರುವ ದುಡಿಮೆಗಾರ ವರ್ಗದ ಸಂಖ್ಯೆಯು ತೃತೀಯ ವಲಯದಲ್ಲಿನ ದುಡಿಮೆಗಾರ ವರ್ಗದ ಸಂಖ್ಯೆಗೆ ಸಾಪೇಕ್ಷವಾಗಿ ಇಳಿಮುಖವಾಗುವುದು“.

ಅಭಿವೃದ್ಧಿ ಮಟ್ಟ ಉತ್ತಮಗೊಂಡಂತೆ, ಉನ್ನತಗೊಂಡಂತೆ, ಪ್ರಾಥಮಿಕ ವಲಯದಲ್ಲಿನ ತಲಾ ಉತ್ಪನ್ನವು   ವಲಯದಲ್ಲಿರುವ ದುಡಿಮೆಗಾರ ವರ್ಗದ ತಲಾ ಅನುಭೋಗಕ್ಕಿಂತ ವೇಗವಾಗಿ ಅಧಿಕಗೊಳ್ಳುವುದರಿಂದ ವರಮಾನವು ಅಧಿಕಗೊಂಡಂತೆ ದ್ವಿತೀಯ ವಲಯದ ಉತ್ಪನ್ನಗಳಿಗೆ ಹಾಗೂ ಸೇವಾ ವಲಯದ ಚಟುವಟಿಕೆಗಳಿಗೆ ಬೇಡಿಕೆ ಅಧಿಕಗೊಳ್ಳುವುದರಿಂದ, ಅಭಿವೃದ್ಧಿ ಪ್ರಕ್ರಿಯೆಯೊಂದಿಗೆ ಆರ್ಥಿಕತೆಯ ಮೂರು ವಲಯಗಳ ಸಾಪೇಕ್ಷ ಸ್ಥಾನಮಾನಗಳು ಮೇಲೆ ತಿಳಿಸಿರುವ ಪರಿಯಲ್ಲಿ ಬದಲಾಗುತ್ತವೆ ಎಂದು ಆರ್ಥರ್ ಲಿವೀಸ್  ಹೇಳುತ್ತಾನೆ.

ಅಭಿವೃದ್ಧಿಯ ಗತಿ ಹಾಗೂ ಮಟ್ಟ ಉನ್ನತಗೊಂಡಂತೆ ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳಿಂದ ಪ್ರಾಪ್ತವಾಗುವ ತಲಾ ಉತ್ಪನ್ನವು ಅಧಿಕಗೊಳ್ಳುತ್ತದೆ. ಆದರೆ ಆರ್ಥಿಕತೆಯಲ್ಲಿ ಅದರ ಸಾಪೇಕ್ಷ ಸ್ಥಾನಮಾನವು ಮಾತ್ರ ಕಡಿಮೆಯಾಗುತ್ತಾ ಹೋಗುತ್ತದೆ. ಕಾಲಾನುಗತವಾಗಿ ಈ ವಲಯವನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರ ವರ್ಗದ ಪ್ರಮಾಣವು ಕಡಿಮೆಯಾಗುತ್ತದೆ. ಅಭಿವೃದ್ಧಿ ಪ್ರಕ್ರಿಯೆಯೊಂದಿಗೆ ಪ್ರಾ.ವ. ದಲ್ಲಿರುವ ದುಡಿಮೆಗಾರರು ದ್ವಿತೀಯ ವಲಯಕ್ಕೆ, ತದನಂತರ ತೃತೀಯ ವಲಯಕ್ಕೆ ವರ್ಗಾವಣೆಯಾಗುತ್ತಾರೆ. ಅದೇ ರೀತಿ ಅಭಿವೃದ್ಧಿ ಪ್ರಕ್ರಿಯೆಯೊಂದಿಗೆ ಪ್ರಾಥಮಿಕ ವಲಯದಿಂದ ಪ್ರಾಪ್ತವಾಗುವ ವರಮಾನದ ಪ್ರಮಾಣವು ಕಡಿಮೆಯಾಗಿ ದ್ವಿತೀಯ ವಲಯ, ತದನಂತರ ತೃತೀಯ ವಲಯದಿಂದ ಹರಿದು ಬರುವ ವರಮಾನದ ಪ್ರಮಾಣವು ಅಧಿಕಗೊಳ್ಳುತ್ತ ಹೋಗುತ್ತದೆ.

ಅಭಿವೃದ್ಧಿ ಶೈಶಾವಸ್ಥೆಯಲ್ಲಿದ್ದಾಗ ದುಡಿಮೆಗಾರ ವರ್ಗದ ಸರಿ ಸುಮಾರು ಶೇ.೭೫ರಿಂದ ೮೦ರಷ್ಟು ಪ್ರಾ.ವ.ದಲ್ಲಿರುತ್ತದೆ. ವರಮಾನದ ಸಿಂಹಪಾಲು ಸದರಿ ವಲಯದಿಂದಲೇ ಪ್ರಾಪ್ತವಾಗುತ್ತದೆ. ಅಭಿವೃದ್ಧಿಯು ಪ್ರೌಢಾವಸ್ಥೆ ತಲುಪಿದಾಗ ದುಡಿಮೆಗಾರರು ಪ್ರಾ.ವ.ದಿಂದ ದ್ವಿ.ವ.ಕ್ಕೆ ವರ್ಗಾವಣೆಯಾಗುವುದನ್ನು ಅರ್ಥಶಾಸ್ತ್ರಜ್ಞರು ಗುರುತಿಸಿದ್ದಾರೆ. ಈ ಬಗೆಯ ಬದಲಾಣೆಯಿಂದಾಗಿ ವರಮಾನವು ಹೆಚ್ಚು ಹೆಚ್ಚಾಗಿ ದ್ವಿ.ವ. ದಿಂದ ಹರಿದು ಬರಲು ತೊಡಗುತ್ತದೆ. ಆರ್ಥಿಕತೆಯ ಅಭಿವೃದ್ಧಿಯು ಉನ್ನತ ಮಟ್ಟ ತಲುಪಿದಾಗ ದುಡಿಮೆಗಾರ ವರ್ಗದ ಸಿಂಹ ಪಾಲು ತೃತೀಯ ವಲಯ ಪ್ರವೇಶಿಸುತ್ತದೆ. ವರಮಾನದಲ್ಲಿ ಹೆಚ್ಚಿನ ಭಾಗ ಈ ವಲಯದಿಂದ ಪ್ರಾಪ್ತವಾಗತೊಡುಗುತ್ತದೆ. ಹೀಗೆ ಅಭಿವೃದ್ಧಿ ಪ್ರಕ್ರಿಯೆಯೊಂದಿಗೆ ಆರ್ಥಿಕತೆಯ ಮೂರು ವಲಯಗಳಲ್ಲಿನ ದುಡಿಮೆಗಾರ ವರ್ಗ ಹಾಗೂ ವರಮಾನಗಳ ಸಾಪೇಕ್ಷ ಸ್ಥಾನಮಾನಗಳು ಬದಲಾಗುವುದನ್ನು ನೋಡಬಹುದು. ಈ ಬಗೆಯ ಆರ್ಥಿಕ ರಚನೆಯಲ್ಲಿನ ಬದಲಾವಣೆಯನ್ನು ‘ಅಭಿವೃದ್ಧಿ’ ಎಂದು ಕರೆಯಲಾಗಿದೆ.

ಗದಗ ಜಿಲ್ಲೆಯ ಆರ್ಥಿಕ ರಚನೆ ಸ್ವರೂಪ

ಒಂದು ದೇಶ/ಪ್ರದೇಶದ ಆರ್ಥಿಕ ರಚನೆಯ ಸ್ವರೂಪವನ್ನು ಗುರುತಿಸಲು ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಬೇಕಾಗುತ್ತದೆ. ಮೊದಲನೆಯದಾಗಿ ತ್ರಿವಲಯ ದುಡಿಮೆಗಾರ ವರ್ಗದ ಸ್ಥಾನಮಾನಗಳ ಬಗ್ಗೆ ಮಾಹಿತಿಯ ಅಗತ್ಯವಿದೆ. ಇದು ಗದಗ ಜಿಲ್ಲೆಗೆ ಸಂಬಂಧಿಸಿದಂತೆ ಜನಗಣತಿ ವರದಿಯಲ್ಲಿ ನಮಗೆ ದೊರೆಯುತ್ತದೆ. ಎರಡನೆಯದಾಗಿ ವಲಯವಾರು ವರಮಾನ ವಿತರಣೆಯ ವಿವರ ಬೇಕಾಗುತ್ತದೆ. ಆದರೆ ಗದಗ ಜಿಲ್ಲೆಗೆ ಸಂಬಂಧಿಸಿದಂತೆ ವರಮಾನದ ವಿವರಗಳು ಲಭ್ಯವಿಲ್ಲ. ಕರ್ನಾಟಕದಲ್ಲಿ ‘ಜಿಲ್ಲಾ ಆಂತರಿಕ ನಿವ್ವಳ ಉತ್ಪನ್ನ’ ವನ್ನು ಅಳತೆ ಮಾಡುವ ಕಾರ್ಯವನ್ನು ಕರ್ನಾಟಕ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು ಮಾಡುತ್ತಿದೆ. ಆದರೆ ಈ ನಿರ್ದೇಶನಾಲಯವು ಹೊಸ ಜಿಲ್ಲೆಗಳ ಆಂತರಿಕ ಉತ್ಪನ್ನದ ವಿವರಗಳನ್ನು ಇನ್ಣೂ ಪ್ರಕಟಿಸಿಲ್ಲ.

ಗದಗ ಜಿಲ್ಲೆಯಜಿಲ್ಲಾ ಆಂತರಿಕ ನಿವ್ವಳ ಉತ್ಪನ್ನ

ಗದಗ ಜಿಲ್ಲೆಯ ‘ಜಿಲ್ಲಾ ನಿವ್ವಳ ಉತ್ಪನ್ನ’ವನ್ನು ಒಂದು ವಿಶೇಷ ವಿಧಾನದಿಂದ ನಮ್ಮ ಅಧ್ಯಯನಕ್ಕಾಗಿ ಕಂಡು ಕೊಳ್ಳಲಾಗಿದೆ. ೧೯೯೫ – ೯೬ರ ಸಾಲಿನ ಧಾರವಾಢ ಜಿಲ್ಲೆಯ ತಲಾವರಮಾನ ರೂ. ೭೯೫೩ (ಚಾಲ್ತಿ ಜಿಲ್ಲೆಗಳಲ್ಲಿ). ಧಾರವಾಡ ಜಿಲ್ಲೆಗೆ ಸೇರಿದ್ದ ೫ ತಾಲ್ಲೂಕುಗಳನ್ನು ಪ್ರತ್ಯೇಕಿಸಿ ಗದಗ ಜಿಲ್ಲೆಯನ್ನು ರೂಪಿಸುವುದರಿಂದ ಧಾರವಾಡ ಜಿಲ್ಲೆಯ ತಲಾವರಮಾನವನ್ನೇ ಗದಗ ಜಿಲ್ಲೆಗೂ ಅನ್ವಯಿಸಬಹುದಾಗಿದೆ. ೧೯೯೫ರ ಗದಗ ಜಿಲ್ಲೆಯ ನಿರೀಕ್ಷಿತ ಜನಸಂಖ್ಯೆಯ ಪ್ರಮಾಣವನ್ನು ಲೆಕ್ಕ ಹಾಕಲಾಗಿದೆ. ೧೯೯೫ರ ಗದಗ ಜಿಲ್ಲೆಯ ನಿರೀಕ್ಷಿತ ಜನಸಂಖ್ಯೆಯನ್ನು ಅದರ ತಲಾವರಮಾನ ರೂ. ೭೫೯೩ರಿಂದ ಗುಣಿಸಿ ಗದಗ ಜಿಲ್ಲೆಯ ‘ಜಿಲ್ಲಾ ಆಂತರಿಕ ನಿವ್ವಳ ಉತ್ಪನ್ನ’ನ್ನು ಲೆಕ್ಕ ಹಾಕಲಾಗಿದೆ. ಇದರ ಪ್ರಕಾರ ೧೯೯೫ – ೯೬ರ ಗದಗ ಜಿಲ್ಲೆಯ ಆಂತರಿಕ ಉತ್ಪನ್ನದ ಪ್ರಮಾಣ ರೂ. ೭೩೫ ಕೋಟಿ. ಕರ್ನಾಟಕದಲ್ಲಿ ವರಮಾನದ ದೃಷ್ಟಿಯಿಂದ ಗದಗವು ೨೭ನೆಯ ಸ್ಥಾನದಲ್ಲಿದೆ. ಗದಗ ಜಿಲ್ಲೆಯ ತಲಾ ವರಮಾನವು ರಾಜ್ಯ ತಲಾ ವರಮಾನಕ್ಕಿಂತ ಕಡಿಮೆ ಇದೆ. ರಾಜ್ಯದ ಆತಂರಿಕ ನಿವ್ವಳ ಉತ್ಪನ್ನದಲ್ಲಿ ಗದಗ ಜಿಲ್ಲೆಯ ಪಾಲು ಶೇ.೧.೯೧ ಮತ್ತು ವಿಸ್ತೀರ್ಣದಲ್ಲಿ ಜಿಲ್ಲೆಯ ಪಾಲು ಶೇ.೪.೪೨. ಜನಸಂಖ್ಯೆ ಮತ್ತು ಪ್ರದೇಶಗಳಲ್ಲಿ ಜಿಲ್ಲೆಯು ಯಾವ ಪ್ರಮಾಣದ ಪಾಲು ಪಡೆದಿದೆಯೋ ಅದಕ್ಕಿಂತ ಕಡಿಮೆ ಪಾಲನ್ನು ವರಮಾನದಲ್ಲಿ ಪಡೆದಿದೆ. ಗದಗ ಜಿಲ್ಲೆಯ ತಲಾ ವರಮಾನವು ರಾಜ್ಯದ ರಾಜ್ಯದ ತಲಾ ವರಮಾನದ ಶೇ. ೮೪.೨೬ರಷ್ಟಿದೆ. ಅಂದರೆ ಜಿಲ್ಲೆಯ ತಲಾವರಮಾನವು ರಾಜ್ಯದ ತಲಾವರಮಾನಕ್ಕಿಂತ ಶೇ.೧೫.೭೪ರಷ್ಟು ಕಡಿಮೆ ಇದೆ.

ಗದಗ ಜಿಲ್ಲೆಯ ಆರ್ಥಿಕ ರಚನೆ

ಕೋಷ್ಟಕ ೫.೧ರಲ್ಲಿ ಗದಗ ಜಿಲ್ಲೆಯ ಆರ್ಥಿಕ ರಚನೆಯ ಸ್ವರೂಪವನ್ನು ನೀಡಲಾಗಿದೆ. ಈ ಕೋಷ್ಟಕದಲ್ಲಿ ಗದಗ ಜಿಲ್ಲೆಯ ಆರ್ಥಿಕತೆಯ ಮೂರು ವಲಯಗಳ ನಡುವೆ ದುಡಿಮೆಗಾರರ ವರ್ಗ ಹಾಗೂ ವರಮಾನಗಳು ಹೇಗೆ ಹಂಚಿಕೆಯಾಗಿದೆ ಎಂಬುದನ್ನು ತೋರಿಸಿದೆ. ಅಭಿವೃದ್ಧಿಯ ಸೂಕ್ಷ್ಮ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

ಕೋಷ್ಟಕ .೧: ಗದಗ ಜಿಲ್ಲೆಯ ಆರ್ಥಿಕ ರಚನೆ

ಜಿಲ್ಲೆ

ಪ್ರಾಥಮಿಕ ವಲಯ

ದ್ವಿತೀಯ ವಲಯ

ತೃತೀಯ ವಲಯ

ವರಮಾನ

ದುಡಿಮೆಗಾರ ವರ್ಗ

ವರಮಾನ

ದುಡಿಮೆಗಾರ ವರ್ಗ

ವರಮಾನ

ದುಡಿಮೆಗಾರ ವರ್ಗ

ಗದಗ ೨೭೬.೩೬
(೩೭.೬೦)
೨,೫೮,೪೩೮
(೭೩.೯೫)
೧೭೦.೫೨
(೨೩.೨೦)
೩೬,೧೩೬
(೧೦.೩೪)
೨೮೮.೧೨
(೩೯.೨೦)
೫೪೯೦೩
(೧೫.೦೭)

(ವರಮಾನ: ಕೋಟಿ ರೂಪಾಯಿಗಳಲ್ಲಿ. ಆವರಣದಲ್ಲಿರುವ ಸಂಖ್ಯೆಗಳು ಶೇಕಡ ಪ್ರಮಾಣ)

ಆರ್ಥಿಕ ರಚನೆಯ ಎರಡು ಮುಖ್ಯ ಸೂಚಿಗಳೆಂದರೆ ವರಮಾನ ಮತ್ತು ದುಡಿಮೆಗಾರ ವರ್ಗ ಎಂಬುದನ್ನು ಈಗಾಗಲೆ ಹೇಳಲಾಗಿದೆ. ವರಮಾನದ ವಲಯವಾರು ಹಂಚಿಕೆ ದೃಷ್ಟಿಯಿಂದ ಗದಗ ಜಿಲ್ಲೆಯ ಆರ್ಥಿಕತೆ ತೀವ್ರ ರೀತಿಯ ಬದಲಾವಣೆಗೆ ಒಳಗಾಗಿರುವಂತೆ ಕಾಣುತ್ತದೆ. ಏಕೆಂದರೆ ಜಿಲ್ಲೆಯ ಒಟ್ಟು ವರಮಾನದಲ್ಲಿ ಪ್ರಾ.ವ. ಯದ ಪಾಲು ಕೇವಲ ಶೇ. ೩೭.೬೦. ದ್ವಿತೀಯ ಮತ್ತು ತೃತೀಯ ವಲಯಗಳು ಒಟ್ಟಿಗೆ ವರಮಾನದಲ್ಲಿ ಶೇ. ೬೨.೪೦ರಷ್ಟು ಪಾಲು ಪಡೆದಿವೆ. ವರಮಾನದ ವಲಯವಾರು ಹಂಚಿಕೆ ದೃಷ್ಟಿಯಿಂದ ಗದಗವು ಪ್ರಾಥಮಿಕ ವಲಯವನ್ನೂ ಪ್ರಧಾನವಾಗಿ ಹೊಂದಿರುವ ಜಿಲ್ಲೆಯಾಗಿ ಉಳಿದಿಲ್ಲ. ಕರ್ನಾಟಕದಲ್ಲಿ ಜಿಲ್ಲೆಯ ವರಮಾನದಲ್ಲಿ ಪ್ರಾ.ವ. ಯದ ಪಾಲು ಶೇ.೪೦ಕ್ಕಿಂತ ಕಡಿಮೆ ಹೊಂದಿರುವ ಜಿಲ್ಲೆಗಳು ಕೇವಲ ಐದು. ಅದರಲ್ಲಿ ಗದಗ ಜಿಲ್ಲೆಯೂ ಒಂದಾಗಿದೆ.

ಗದಗ ಜಿಲ್ಲೆಯ ಒಟ್ಟು ವರಮಾನದಲ್ಲಿ ಶೇ.೨೩.೨೦ರಷ್ಟು ದ್ವಿತೀಯ ವಲಯದಿಂದ ಹರಿದು ಬಂದರೆ ಶೇ.೩೯.೨೦ರಷ್ಟು ತೃತೀಯ ವಲಯದಿಂದ ಹರಿದು ಬರುತ್ತಿದೆ. ವರಮಾನದ ದೃಷ್ಟಿಯಿಂದ ತೃತೀಯ ವಲಯವು ಮೊದಲನೆಯ ಸ್ಥಾನ ದಲ್ಲಿದ್ದರೆ ಪ್ರಾಥಮಿಕ ವಲಯವು ಎರಡನೆಯ ಸ್ಥಾನದಲ್ಲಿದೆ. ದ್ವಿತೀಯ ವಲಯದ ಸ್ಥಾನವು ಮೂರನೆಯದಾಗಿದೆ.

ರಾಜ್ಯದ ವರಮಾನದಲ್ಲಿ ಅತಿ ಹೆಚ್ಚಿನ ಭಾಗವು ತೃತೀಯ ವಲಯದಿಂದ ಹರಿದು ಬರುತ್ತಿರುವ ಜಿಲ್ಲೆಗಳ ಸಂಖ್ಯೆ ಏಳು. ಅದರಲ್ಲಿ ಗದಗವೂ ಒಂದು. ಅದೇ ರೀತಿ ಶೇ.೨೦ಕ್ಕಿಂತಲೂ ಅಧಿಕ ಪ್ರಮಾಣದ ವರಮಾನವು ದ್ವಿತೀಯ ವಲಯದಿಂದ ಪಡೆಯುತ್ತಿರುವ ಜಿಲ್ಲೆಗಳ ಸಂಖ್ಯೆ ಎಂಟು. ಅದರಲ್ಲಿ ಗದಗವೂ ಒಂದು.

ವರಮಾನದ ದೃಷ್ಟಿಯಿಂದ ಗದಗ ಜಿಲ್ಲೆಯ ಆರ್ಥಿಕ ರಚನೆಯು ತೀವ್ರಗತಿಯ ಬದಲಾವಣೆ ಕಂಡಿದೆ. ಆದರೆ ಈ ಬಗೆಯ ಬದಲಾವಣೆ ಎಷ್ಟರ ಮಟ್ಟಿಗೆ ಅಪೇಕ್ಷಣೀಯ ಎಂಬ ಪ್ರಶ್ನೆ ಸಹಜವಾಗಿ ನಮ್ಮ ಮುಂದೆ ದುತ್ತನೆ ಬಂದು ನಿಲ್ಲುತ್ತದೆ. ಏಕೆಂದರೆ ತೃತೀಯ ವಲಯವು ಕೇವಲ ವರಮಾನಗಳಿಸುವ ವಲಯವೇ ವಿನಾ ವರಮಾನವನ್ನು ಉತ್ಪಾದಿಸುವ ವಲಯವಲ್ಲ. ವರಮಾನವನ್ನು ಉತ್ಪಾದಿಸುವ ವಲಯಗಳು ಪ್ರಾಥಮಿಕ ವಲಯ ಮತ್ತು ದ್ವಿತೀಯ ವಲಯ. ಭೌತಿಕ ಬಂಡವಾಳಕ್ಕೆ ಪ್ರತಿಯಾಗಿ ಹಣಕಾಸು ಬಂಡವಾಳ ಅಧಿಕಗೊಳ್ಳುತ್ತಿರುವುದನ್ನು ತೃತೀಯ ವಲಯದ ಪ್ರಧಾನತೆಯು ತೋರಿಸುತ್ತದೆ. ಈ ಬಗೆಯ ಬೆಳವಣಿಗೆಯು ಆರ್ಥಿಕತೆಯ ದೀರ್ಘಾವಧಿ ಬೆಳವಣಿಗೆ ದೃಷ್ಟಿಯಿಂದ ಆರೋಗ್ಯಕಾರಿ ಸಂಗತಿಯಾಗಿ ಕಂಡುಬರುವುದಿಲ್ಲ. ಪ್ರಾಥಮಿಕ ಹಾಗೂ ದ್ವಿತೀಯ ವಲಯಗಳು ವಸ್ತುರೂಪಿ ಉತ್ಪನ್ನಗಳನ್ನು ಅಂದರೆ ವರಮಾನ – ಬಂಡವಾಳ ಸರುಕುಗಳನ್ನು ಉತ್ಪಾದಿಸುವ ವಲಯಗಳಾಗಿವೆ. ಆರ್ಥಿಕತೆಯ ದೀರ್ಘಾವಧಿ ಬೆಳವಣಿಗೆ ದೃಷ್ಟಿಯಿಂದ ಇದು ತುಂಬಾ ಮುಖ್ಯವಾದು ದಾಗಿದೆ. ತೃತೀಯ ವಲಯವು ಅಮೂರ್ತ ರೂಪದ ಸೇವೆಗಳನ್ನು ರೂಪಿಸುವ ವಲಯವಾಗಿದೆ. ಈ ವಲಯವು ಮುಖ್ಯವಾಗಿ ವರಮಾನವನ್ನು ‘ಸ್ವೀಕರಿಸುವ’, ‘ಗಳಿಸುವ’ ವಲಯ ಮಾತ್ರವಾಗಿದೆ. ಗದಗ ಜಿಲ್ಲೆಯ ತೃತೀಯ ವಲಯವು ಉಳಿದೆರಡೂ ವಲಯಗಳಿಗಿಂತ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ೧೯೮೦ – ೮೧ರಿಂದ ೧೯೯೦ – ೯೧ರ ಕಾಲಾವಧಿಯಲ್ಲಿ ಜಿಲ್ಲಾ ವರಮಾನದಲ್ಲಿ ಪ್ರಾಥಮಿಕ ವಲಯದ ಪಾಲು ಶೇ.೯.೧ ಅಂಶಗಳಷ್ಟು ಕಡಿಮೆಯಾಗಿದೆ. ಹೀಗೆ ಕಡಿಮೆಯಾದ ಪ್ರಮಾಣದಲ್ಲಿ ಶೇ.೪.೦ ರಷ್ಟು ದ್ವಿತೀಯ ವಲಯಕ್ಕೂ ಮತ್ತು ಶೇ. ೫.೧ರಷ್ಟು ತೃತೀಯ ವಲಯಕ್ಕೂ ವರ್ಗಾವಣೆಯಾಗಿದೆ. ಅಂದರೆ ೧೯೮೦ – ೮೧ರಿಂದ ೧೯೯೦ – ೯೧ರ ಕಾಲಾವಧಿಯಲ್ಲಿ ಅತ್ಯಂತ ವೇಗವಾಗಿ ಬೆಳೆದ ವಲೆಯವೆಂದರೆ ತೃತೀಯ ವಲಯವಾಗಿದೆ. ಆದರೆ ಈ ವಲಯದ ಬೆಳವಣಿಗೆ ಕೇವಲ ‘ಹುಸಿ’ ರೂಪದ ಬೆಳವಣಿಗೆ ವಿನಾ ಗಟ್ಟಿಯಾದ ಬೆಳವಣಿಗೆಯಲ್ಲ.

ಕೋಷ್ಟಕ ೫.೨ರಲ್ಲಿ ೧೯೮೦ – ೮೧ರ ಧಾರವಾಡ ಜಿಲ್ಲೆಯ ಆರ್ಥಿಕ ರಚನೆಯ ಚಿತ್ರವನ್ನು ನೀಡಲಾಗಿದೆ. ತುಲನಾತ್ಮಕ ಅಧ್ಯಯನಕ್ಕೆ ಇದು ಅನುಕೂಲವಾಗುತ್ತದೆ. ೧೯೮೦ – ೮೧ರ ಧಾರವಾಡ ಜಿಲ್ಲೆಯ ಆರ್ಥಿಕ ರಚನೆಯ ಸ್ವರೂಪವನ್ನು ಗದಗ ಜಿಲ್ಲೆಗೆ ಸಂಬಂಧಿಸಿದಂತೆಯೂ ಅನ್ವಯಿಸಬಹುದಾಗಿದೆ.

ಕೋಷ್ಟಕ .: ಧಾರವಾಡ ಜಿಲ್ಲೆಯ ಆರ್ಥಿಕ ರಚನೆ ೧೯೮೦೮೧

ಜಿಲ್ಲೆ

ಪ್ರಾಥಮಿಕ ವಲಯ

ದ್ವಿತೀಯ ವಲಯ

ತೃತೀಯ ವಲಯ

ವರಮಾನ

ದುಡಿಮೆಗಾರ ವರ್ಗ

ವರಮಾನ

ದುಡಿಮೆಗಾರ ವರ್ಗ

ವರಮಾನ

ದುಡಿಮೆಗಾರ ವರ್ಗ

ಧಾರವಾಡ/

ಗದಗ

 ೪೬.೭

 

 ೭೧.೧  ೧೯.೨  ೧೧.೯  ೩೪.೧  ೧೭.೦

ದುಡಿಮೆಗಾರ ವರ್ಗದ ತ್ರಿವಲಯ ಸ್ವರೂಪ

ಗದಗ ಜಿಲ್ಲೆಯ ಆರ್ಥಿಕತೆಯ ಮೂರು ವಲಯಗಳ ನಡುವೆ ವರಮಾನ ಹೇಗೆ ವಿತರಣೆಯಾಗಿದೆ ಮತ್ತು ಅದು ಹೇಗೆ ಬದಲಾವಣೆಗೊಂಡಿದೆ ಎಂಬುದನ್ನು ನೋಡಿದ್ದೇವೆ. ಅದೇ ರೀತಿ ಈಗ ಮೂರು ವಲಯಗಳ: ನಡುವೆ ದುಡಿಮೆಗಾರ ವರ್ಗ ಹೇಗೆ ವಿತರಣೆಗೊಂಡಿದೆ ಎಂಬುದನ್ನು ನೋಡೋಣ. ಕೋಷ್ಟಕ ೫.೨ರಲ್ಲಿ ತೋರಿಸಿರುವಂತೆ ಗದಗ ಜಿಲ್ಲೆಯಲ್ಲಿ ದುಡಿಮೆಗಾರ ವರ್ಗದಲ್ಲಿ ದುಡಿಮೆಗಾರ ವರ್ಗದಲ್ಲಿ ಶೇ.೭೩.೯೫ರಷ್ಟು ಪ್ರಾಥಮಿಕ ವಲಯವನ್ನು ಅವಲಂಭಿಸಿದ್ದರೆ ಶೇ.೧೦೩೪ ರಷ್ಟು ದ್ವಿತೀಯ ವಲಯವನ್ನೂ ಅವಲಂಬಿಸಿದೆ. ತೃತೀಯ ವಲಯದಲ್ಲಿರುವ ದುಡಿಮೆಗಾರ ವರ್ಗದ ಪ್ರಮಾಣ ಶೇ.೧೫.೭೧ ವರಮಾನಕ್ಕೆ ಸಂಬಂಧಿಸಿದಂತೆ ಮೂರು ವಲಯಗಳ ಸ್ವರೂಪ ಯಾವ ಬಗೆಯಲ್ಲಿದೆಯೋ ಅದೇ ಸ್ವರೂಪ ದಡಿಮೆಗಾರ ವರ್ಗದ ತ್ರಿವಲಯ ಸ್ವರೂಪ ಇಲ್ಲ. ವರಮಾನಕ್ಕೆ ಸಂಬಂಧಿಸಿದಂತೆ ತೃತೀಯ ವಲಯವು ಪ್ರಥಮ ಸ್ಥಾನದಲ್ಲಿದ್ದರೆ ದುಡಿಮೆಗಾರ ವರ್ಗಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವಲಯವು ಪ್ರಥಮ ಸ್ಥಾನದಲ್ಲಿದೆ. ಉದ್ದಿಮೆ, ಕಾರ್ಖಾನೆ, ಕೈಗಾರಿಕೆಗಳನ್ನು ಒಳಗೊಂಡಿರುವ ದ್ವಿತೀಯ ವಲಯವನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರ ವರ್ಗದ ಪ್ರಮಾಣ ಕೇವಲ ಶೇ.೧೦.೩೪.

ಅತ್ಯಂತ ವಿಚಿತ್ರವೂ ಮತ್ತು ಆತಂಕಕಾರಿಯೂ ಆದ ಸಂಗತಿಯೆಂದರೆ ೧೯೮೦ – ೮೧ರಿಂದ ೧೯೯೦ – ೯೧ರ ಅವಧಿಯಲ್ಲಿ ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರ ವರ್ಗದ ಪ್ರಮಾಣ ಶೇ.೭೧.೧ರಿಂದ ಶೇ.೭೩.೯೫ಕ್ಕೆ ಏರಿಕೆ ಯಾಗಿದೆ. ಇದು ಒಂದು ರೀತಿಯಲ್ಲಿ ‘ಪ್ರತಿಗಾಮಿ’ ಬೆಳವಣಿಗೆಯಾಗಿದೆ. ಆರ್ಥಿಕ ರಚನೆ ಮತ್ತು ಅಭಿವೃದ್ಧಿಗಳ ನಡುವಿನ ಸಂಬಂಧ ಕುರಿತ ಸಿದ್ಧಾಂತಗಳು ಹೇಳುವಂತೆ ಅಭಿವೃದ್ಧಿಯ ಗತಿ ಹಾಗೂ ಮಟ್ಟ ಉತ್ತಮಗೊಂಡಂತೆ ಪ್ರಾಥಮಿಕ ವಲಯದಲ್ಲಿರುವ ದುಡಿಮೆಗಾರ ವರ್ಗ ದ್ವಿತೀಯ ವಲಯಕ್ಕೂ ಮತ್ತು ತೃತೀಯ ವಲಯಕ್ಕೂ ವರ್ಗಾವಣೆಯಾಗಬೇಕು. ಆದರೆ ಗದಗ ಜಿಲ್ಲೆಯಲ್ಲಿ ಇದು ತಿರುವು ಮುರುವು ಆಗಿದೆ. ೧೯೮೦ – ೮೧ರಲ್ಲಿ ಧಾರವಾಡ ಜಿಲ್ಲೆಯಲ್ಲಿ ದ್ವಿತೀಯ ವಲಯವನ್ನು ಅವಲಂಬಿಸಿಕೊಂಡಿದ್ದ ದುಡಿಮೆಗಾರ ವರ್ಗದ ಪ್ರಮಾಣ ಶೇ.೧೧.೯. ೧೯೯೦ – ೯೧ರಲ್ಲಿ ಇದರ ಪ್ರಮಾಣ ಶೇ.೧೦.೩೪ಕ್ಕೆ ಇಳಿದಿದೆ. ಇದೇ ರೀತಿ ಇದೇ ಕಾಲಾವಧಿಯಲ್ಲಿ ತೃತೀಯ ವಲಯವನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರ ವರ್ಗದ ಪ್ರಮಾಣವು ಶೇ.೧೭.೦ ರಿಂದ ಶೇ.೧೫.೭೧ಕ್ಕೆ ಇಳಿದಿದೆ.

ವರಮಾನದ ದೃಷ್ಟಿಯಲ್ಲಿ ಆರ್ಥಿಕ ರಚನೆಯಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತಿದ್ದವೋ ಅದೇ ರೀತಿಯ ಬದಲಾವಣೆಗಳು ದುಡಿಮೆಗಾರ ವರ್ಗದ ರಚನೆಗೆ ಸಂಬಂಧಿಸಿದಂತೆ ನಡೆಯುತ್ತಿಲ್ಲ. ಇದು ಅಪೇಕ್ಷಣೀಯವಾದ ಬೆಳವಣಿಗೆಯಲ್ಲ. ಜಿಲ್ಲೆಯ ವರಮಾನದಲ್ಲಿ ಪ್ರಾಥಮಿಕ ವಲಯದ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ಪ್ರಾಥಮಿಕ ವಲಯದ ಪಾಲು ಅಧಿಕವಾಗುತ್ತಿದೆ. ಇದರ ಇಂಪ್ಲಿಕೇಷನ್ ಏನು? ಪ್ರಾಥಮಿಕ ವಲಯದಲ್ಲಿ ತಲಾ ಉತ್ಪನ್ನ ಕಡಿಮೆ ಯಾಗುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ. ಆದರೆ ದ್ವಿತೀಯ ವಲಯ ಹಾಗೂ ತೃತೀಯ ವಲಯಗಳಲ್ಲಿ ತಲಾ ಉತ್ಪನ್ನ ಏರಿಕೆಯಾಗುತ್ತಿದೆ. ಬಡತನದ ಒತ್ತಡವು ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿರುವ ಜನತೆಯಲ್ಲಿ ಅಧಿಕ ವಾಗಿರುವುದನ್ನು ಇದರಿಂದ ತಿಳಿಯಬಹುದಾಗಿದೆ. ವರಮಾನದ ದೃಷ್ಟಿಯಿಂದ ಆರ್ಥಿಕ ರಚನೆಯಲ್ಲಿ ಪ್ರಗತಿಗಾಮಿ ಬದಲಾವಣೆಗಳಾಗುತ್ತಿದ್ದರೆ ದುಡಿಮೆಗಾರ ವರ್ಗದ ದೃಷ್ಟಿಯಿಂದ ಆರ್ಥಿಕ ರಚನೆಯಲ್ಲಿನ ಬದಲಾವಣೆಗಳು ಪ್ರಗತಿಗಾಮಿಯಾಗಿವೆ. ಇದು ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಆರೋಗ್ಯಕಾರಿ ಬೆಳವಣಿಗೆಯಲ್ಲ.

ಏಕರೂಪಿ (Non – Diversified) ಆರ್ಥಿಕ ರಚನೆ

ಗದಗ ಜಿಲ್ಲೆಯ ಆರ್ಥಿಕ ರಚನೆಯು ವರಮಾನದ ದೃಷ್ಟಿಯಿಂದ ಮಾತ್ರ ಬದಲಾವಣೆಗೆ ಒಳಗಾಗಿದೆ. ದುಡಿಮೆಗಾರ ವರ್ಗದ ತ್ರಿವಲಯವಾರು ರಚನೆಯು ಮಾತ್ರ ತೀವ್ರಗತಿಯಲ್ಲಿ ಬದಲಾಗುತ್ತಿಲ್ಲ. ದುಡಿಮೆಗಾರ ವರ್ಗದ ತ್ರಿವಲಯವಾರು ಸಾಪೇಕ್ಷ ಸ್ಥಾನಮಾನದ ದೃಷ್ಟಿಯಿಂದ ಗದಗ ಜಿಲ್ಲೆಯು ಏಕರೂಪಿ ಆರ್ಥಿಕ ರಚನೆಯನ್ನು ಹೊಂದಿದೆ ಎಂದು ಹೇಳ ಬಹುದು. ಈ ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರ ವರ್ಗದ ಪ್ರಮಾಣ ಕೇವಲ ಶೇ.೨೭.೮೪. ಉಳಿದಂತೆ ಶೇ.೭೨.೧೬ರಷ್ಟು ಕೃಷಿ ಚಟುವಟಿಕೆಗಳನ್ನು ಅವಲಂಬಿಸಿಕೊಂಡಿದ್ದಾರೆ. ಕೃಷಿ ಯನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರ ವರ್ಗದ ಸಂಖ್ಯೆ ೨,೫೭,೧೮೭. ಇವರಲ್ಲಿ ಸಾಗುವಳಿದಾರರ ಸಂಖ್ಯೆ

೧,೦೪,೧೮೬ರಷ್ಟಾದರೆ ಕೃಷಿ ಕಾರ್ಮಿಕರ ಸಂಖ್ಯೆ ೧,೪೮,೦೦೧. ಒಟ್ಟು ದುಡಿಮೆಗಾರರಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಶೇ.೪೨.೩೪. ಕರ್ನಾಟಕದಲ್ಲಿ ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರನ್ನು ಶೇ.೪೦ಕ್ಕಿಂತ ಅಧಿಕವಾಗಿ ಪಡೆದಿರುವ ಜಿಲ್ಲೆಗಳ ಸಂಖ್ಯೆ ಒಂಬತ್ತು. ಅವುಗಳಲ್ಲಿ ಗದಗವೂ ಒಂದಾಗಿದೆ. ಈ ಬಗೆಯಲ್ಲಿ ಕೃಷಿ ಪ್ರಧಾನವಾದ ಆರ್ಥಿ ಕತೆಯನ್ನು ‘ಏಕ ರೂಪಿ ಆರ್ಥಿಕ ರಚನೆ’ ಎಂದು ಕರೆಯಬಹುದು. ಇಂತಹ ಏಕ ರೂಪಿ ಆರ್ಥಿಕ ರಚನೆಯ ಅಸ್ತಿತ್ವವು ಜಿಲ್ಲೆಯ ಅಭಿವೃದ್ಧಿಯು ಮಂದಗತಿಯಲ್ಲಿ ನಡೆಯುತ್ತಿರುವುದನ್ನು ತೋರಿಸುತ್ತದೆ. ಈ ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಗಳು ತೀವ್ರವಾಗಿ ವಿಸತ್ತರಣೆಯಾಗುತ್ತಿಲ್ಲ. ಸ್ವಲ್ಪ ಮಟ್ಟಿಗೆ ತೃತೀಯ ವಲಯವು ವಿಸ್ತೀರ್ಣವಾಗುತ್ತಿದೆ.

ಆರ್ಥಿಕ ರಚನೆಯಲ್ಲಿನ ಬದಲಾವಣೆ ಪರಿಯ ಬಗ್ಗೆ ರೂಪುಗೊಂಡಿರುವ ಸಿದ್ಧಾಂತಗಳೆಲ್ಲವೂ ಪಾಶ್ಚಿಮಾತ್ಯ ದೇಶಗಳ ಆರ್ಥಿಕ ಬೆಳವಣಿಗೆಯ ಅನುಭವದ ಆಧಾರವನ್ನು ಅವಲಂಬಿಸಿದೆ. ಈ ಸಿದ್ಧಾಂತಗಳು ರೂಪುಗೊಳಿಸಿರುವ ಪ್ರಮೇಯದ ರೀತಿಯಲ್ಲಿಯೇ ಕರ್ನಾಟಕ ಜಿಲ್ಲೆಗಳ ಆರ್ಥಿಕ ರಚನೆಯಲ್ಲಿ ಬದಲಾವಣೆಗಳು ನಡೆಯುತ್ತಿಲ್ಲ. ಕರ್ನಾಟಕದಲ್ಲಿ ಕೃಷಿ ಕಾರ್ಮಿಕರ ಪ್ರಮಾಣದ ದೃಷ್ಟಿಯಿಂದ ರಾಜ್ಯದಲ್ಲಿ ಗದಗ ಜಿಲ್ಲೆಯು ೭ನೆಯ ಸ್ಥಾನ ಪಡೆದಿದೆ. ಕರ್ನಾಟಕದಲ್ಲಿ ಕೃಷಿ ಕಾರ್ಮಿಕರಲ್ಲಿ ಪುರಷರಿಗಿಂತ ಮಹಿಳೆಯರನ್ನು ಅಧಿಕವಾಗಿ ಪಡೆದಿರುವ ೧೨ ಜಿಲ್ಲೆಗಳ ಪೈಕಿ ಗದಗ ಜಿಲ್ಲೆಯು ಒಂದಾ ಗಿದೆ. ಗದಗ ಜಿಲ್ಲೆಯು ಆರ್ಥಿಕ ರಚನೆಯ ದೃಷ್ಟಿಯಿಂದ ಎರಡು ಸಂಗತಿಗಳು ಬಹಳ ಮುಖ್ಯವಾಗಿವೆ. ಮೊದಲನೆಯ ದಾಗಿ ಈ ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಅಧಿಕವಾಗಿದೆ. ಎರಡನೆಯದಾಗಿ ಕೃಷಿ ಕಾರ್ಮಿಕರ ಮಹಿಳೆಯರ ಪ್ರಮಾಣವು ಪುರುಷರ ಪ್ರಮಾಣವು ಅಧಿಕವಾಗಿದೆ. ಈ ಸಂಗತಿಗಳು ತೋರಿಸುತ್ತಿರುವ ಸಂಗತಿಯೇನೆಂದರೆ ಈ ಜಿಲ್ಲೆ ಯಲ್ಲಿನ ಬಡತನವು ‘ರಾಚನಿಕ’ವಾದುದಾಗಿದೆ. ಆರ್ಥಿಕ ರಚನೆಯಲ್ಲಿ ಉಂಟಾಗುತ್ತಿರುವ ಬದಲಾವಣೆಗಳು ‘ಪ್ರಗತಿ ಗಾಮಿ’ಯಾಗಿವೆ.

ಆರ್ಥಿಕ ರಚನೆ ಮತ್ತು ಆರ್ಥಿಕ ಅಸಮಾನತೆ               

ಆರ್ಥಿಕ ಅಸಮಾನತೆಯನ್ನು ನೇರವಾಗಿ ತೋರಿಸಲು ಅಗತ್ಯವಾದ ಅಂಕಿ – ಅಂಶಗಳು ಲಭ್ಯವಿಲ್ಲ. ಆದ್ದರಿಂದ ಇಲ್ಲಿ ಆರ್ಥಿಕ ರಚನೆಯ ಸ್ವರೂಪವನ್ನು ಆಧಾರವಾಗಿಟ್ಟುಕೊಂಡು ಗದಗ ಜಿಲ್ಲೆಯಲ್ಲಿನ ಆರ್ಥಿಕ ಅಸಮಾನತೆಯ ನೆಲೆಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಕೋಷ್ಟಕ ೫.೩ರಲ್ಲಿ ಗದಗ ಜಿಲ್ಲೆಯ ತ್ರಿವಲಯ ರೂಪಿ ಆರ್ಥಿಕ ರಚನೆಯ ಸ್ವರೂಪವನ್ನು ನೀಡಲಾಗಿದೆ. ಇಲ್ಲಿ ದುಡಿಮೆಗಾರ ವರ್ಗ ಹಾಗೂ ಜಿಲ್ಲಾ ವರಮಾನದ ವಲಯವಾರು ಸ್ಥಾನಮಾನವನ್ನು ನೀಡಿದ್ದೇವೆ.

೧೯೯೧ರ ಜನಗಣತಿ ಅಂಕಿ – ಅಂಶಗಳ ಪ್ರಕಾರ ಜಿಲ್ಲೆಯಲ್ಲಿನ ಪ್ರಾಥಮಿಕ ವಲಯದಲ್ಲಿರುವ ಶೇ.೭೩.೯೫ರಷ್ಟು ದುಡಿಮೆಗಾರ ವರ್ಗವು ಜಿಲ್ಲಾ ವರಮಾನದಲ್ಲಿ ಶೇ. ೩೭.೬೦ರಷ್ಟನ್ನು ಮಾತ್ರ ಅನುಭವಿಸುತ್ತಿದ್ದರೆ ಪ್ರಾಥಮಿಕೇತರ ವಲಯದಲ್ಲಿರುವ ಶೇ.೨೬.೦೫ರಷ್ಟು ದುಡಿಮೆಗಾರವರ್ಗ ಜಿಲ್ಲಾ ವರಮಾನದ ಸಿಂಹಪಾಲನ್ನು, ಅಂದರೆ ಶೇ.೬೨.೪೦ ರಷ್ಟನ್ನು ಅನುಭವಿಸುತ್ತಿದೆ. ಕಡಿಮೆ ಸಂಖ್ಯೆಯಲ್ಲಿರುವ ಪ್ರಾಥಮಿಕೇತರ ವಲಯವನ್ನು ಅವಲಂಬಿಸಿರುವ ದುಡಿಮೆಗಾರ ವರ್ಗವು ಜಿಲ್ಲಾ ವರಮಾನದ ಸಿಂಹಪಾಲನ್ನು ಅನುಭವಿಸುತ್ತಿದ್ದರೆ, ಅಧಿಕ ಸಂಖ್ಯೆಯಲ್ಲಿ ಪ್ರಾಥಮಿಕ ವಲಯ ಅವಲಂಭಿಸಿರುವ ದುಡಿಮೆಗಾರ ವರ್ಗವು ಜಿಲ್ಲಾ ವರಮಾನದಲ್ಲಿ ಅತ್ಯಂತ ಅಲ್ಪ ಪ್ರಮಾಣವನ್ನು ಅನುಭವಿಸುತ್ತಿದೆ. ಇದು ವಿಪರ್ಯಾಸ.

ಸಾಮಾನ್ಯವಾಗಿ ಜಿಲ್ಲೆಯ ಉನ್ನತ ಜಾತಿ ಮತ್ತು ಉನ್ನತ ವರಮಾನವಿರುವ ವರ್ಗ ಮಾತ್ರ ಪ್ರಾಥಮಿಕೇತರ ವಲಯ ಪ್ರವೇಶಿಸಬಹದು. ಈ ವಲಯ ಪ್ರವೇಶಿಸಲು ಅಗತ್ಯವಾದ ಒಂದು ಸಂಗತಿಯೆಂದರೆ ಶಿಕ್ಷಣ. ಈ ವಲಯದಲ್ಲಿ ಜನ ವರ್ಗಕ್ಕೆ ಹಣಕಾಸು ಸೌಲಭ್ಯ ಸುಲಭವಾಗಿ ದೊರೆಯುತ್ತದೆ. ಸರ್ಕಾರಿ ಅಧಿಕಾರಿಗಳ ಜೊತೆ ಸನಿಹದ ಸಂಬಂಧ ವಿರುತ್ತದೆ. ಆದರೆ ಪ್ರಾಥಮಿಕ ವಲಯದಲ್ಲಿನ ದುಡಿಮೆಗಾರ ವರ್ಗ ಅನಕ್ಷರತೆಯಿಂದ ನರಳುತ್ತಿರುತ್ತದೆ ಈ ವಲಯದ ದುಡಿಮೆಗಾರ ವರ್ಗದಲ್ಲಿರುವ ಬಹುದೊಡ್ಡ ಗುಂಪೆಂದರೆ ಭೂ ರಹಿತ ಕೃಷಿ ಕಾರ್ಮಿಕರು. ಪ್ರಾಥಮಿಕ ವಲಯದಲ್ಲಿರುವ ದುಡಿಮೆಗಾರ ವರ್ಗ ಅನುಭವಿಸುತ್ತಿರುವ ವರಮಾನದ ಪ್ರಮಾಣವು ಪ್ರಾಥಮಿಕೇತರ ವಲಯದ ದುಡಿಮೆಗಾರವರ್ಗ ಅನುಭಿವಸುತ್ತಿರುವ ವರಮಾನದ ಪ್ರಮಾಣವು ಪ್ರಾಥಮಿಕೇತರ ವಲಯದ ದುಡಿಮೆಗಾರ ವರ್ಗ ಅನುಭವಿಸುತ್ತಿರುವ ವರಮಾನದ ಪ್ರಮಾಣಕ್ಕಿಂತ ಸಾಪೇಕ್ಷವಾಗಿ ಕಡಿಮೆ ಇದೆ.

ದುಡಿಮೆಗಾರ ವರ್ಗದಲ್ಲಿರುವ ಶೇ.೨೬.೦೫ರಷ್ಟಿರುವ ಪ್ರಾಥಮಿಕೇತರ ವಲಯದಲ್ಲಿನ ದುಡಿಮೆಗಾರ ವರ್ಗವು ರೂ.೫೦೪ ತಲಾ ಉತ್ಪನ್ನವನ್ನು ಅನಭವಿಸುತ್ತಿದ್ದರೆ ಪ್ರಾಥಮಿಕ ವಲಯದಲ್ಲಿರುವ ಶೇ.೭೩.೯೫ರಷ್ಟು ಜನರು ಕೇವಲ ರೂ. ೧೦೭.೧೨ರಷ್ಟು ತಲಾ ಉತ್ಪನ್ನವನ್ನು ಅನುಭವಿಸುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ ಉನ್ನತ ವರಮಾನ ಮತ್ತು

ಕೋಷ್ಟಕ .: ಗದಗ ಜಿಲ್ಲೆಯ ಆರ್ಥಿಕ ರಚನೆ ೧೯೯೦೯೧                    

ಜಿಲ್ಲೆ

ಪ್ರಾಥಮಿಕ ವಲಯ

ಪ್ರಾಥಮಿಕೇತರ ವಲಯ

ವರಮಾನ
(ಕೋಟಿಗಳಲ್ಲಿ)

ದುಡಿಮೆಗಾರ
ವರ್ಗ

ವರಮಾನ
(ಕೋಟಿಗಳಲ್ಲಿ)

ದುಡಿಮೆಗಾರ
ವರ್ಗ

ಗದಗ ರೂ, ೨೭೬.೩೬
(ಶೇ. ೩೭.೬೦)
೨,೫೮,೪೩೮
(ಶೇ. ೭೩.೯೫)
ರೂ.೪೫೮.೬೪
(ಶೇ. ೬೨.೪೦)
೯೧.೦೩೯
(ಶೇ. ೨೬.೦೫)

ಕಡಿಮೆ ವರಮಾನವಿರುವ ವರ್ಗಗಳ ನಡುವಿನ ಅಸಮಾನತೆಯ ಸ್ಥೂಲ ಚಿತ್ರವನ್ನು ಇದರಿಂದ ರೂಪಿಸಬಹುದು.

ಪ್ರಾಥಮಿಕ ವಲಯದಲ್ಲಿನ ತಲಾ ಉತ್ಪನ್ನ ರೂ.೧೦೭.೧೨. ಆದರೆ ಈ ವಲಯದಲ್ಲಿನ ದುಡಿಮೆಗಾರ ವರ್ಗದಲ್ಲಿ ಶೇ.೫೭.೨೭ರಷ್ಟು ಜನರು ಕೃಷಿ ಕಾರ್ಮಿಕರಾಗಿದ್ದಾರೆ. ಈ ವರ್ಗದ ತಲಾ ಉತ್ಪನ್ನವು ಇಡೀ ಪ್ರಾಥಮಿಕ ವಲಯದ ದುಡಿಮೆಗಾರ ವರ್ಗದ ತಲಾ ಉತ್ಪನ್ನಕ್ಕಿಂತ ಕಡಿಮೆ ಇರುತ್ತದೆ. ಈ ಎಲ್ಲ ವಿವರಣೆ ಮತ್ತು ವಿಶ್ಲೇಷಣೆಯಿಂದ ಗದಗ ಜಿಲ್ಲೆಯಲ್ಲಿ ಆಸ್ತಿ ಮಾಲೀಕತ್ವ ಹಾಗೂ ವರಮಾನ ಗಳಿಕೆಯಲ್ಲಿ ತೀವ್ರ ಅಸಮಾನತೆ ಇರುವುದನ್ನು ಗುರುತಿಸ ಬಹುದಾಗಿದೆ.