ಆರ್ಥಿಕ ಸ್ವರೂಪದ ಉತ್ಪನ್ನಕಾರಕ ಚಟುವಟಿಕೆಗಳನ್ನು ಜನಗಣತಿಯಲ್ಲಿ ‘ದುಡಿಮೆ’ಯೆಂದು ನಿರ್ವಚಿಸಲಾಗಿದೆ. ಅದು ಭೌತಿಕವಾದುದಾಗಿರಬಹುದು ಅಥವ ಭೌದ್ಧಿಕವಾಗಿರಬಹುದು. ಕೂಲಿ – ಸಂಭಾವನೆ – ಸಂಬಳ ಪಡೆಯುತ್ತಿರುವ ಸಂಭಾ ವನೆ ಯಾಗಿರಬಹುದು ಅಥವ ದುಡಿಮೆಗಾರರು ತಮ್ಮದೇ ಹೊಲ – ಗದ್ದೆ – ತೋಟ – ಮನೆಗಳಲ್ಲಿ ನಡೆಸುವ ಪರಿಶ್ರಮವೂ ಆಗಿರಬಹುದು. ಆಭಿವೃದ್ಧಿಯ ಮೂಲ ದ್ರವ್ಯ ದುಡಿಮೆ. ಜನಗಣತಿ ವರದಿಗಳಲ್ಲಿ ಯಾವ ವರ್ಗವನ್ನು ಮೇನ್ ವರ್ಕರ್ಸ್ ಎಂದು ಕರೆಯಲಾಗಿದೆಯೋ ಆ ವರ್ಗವನ್ನು ಇಲ್ಲಿ ದುಡಿಮೆಗಾರ ವರ್ಗವೆಂದು ಕರೆಯಲಾಗಿದೆ.

ಕಾರ್ಲ್‌‌ಮಾರ್ಕ್ಸ್ ನ ಪ್ರಕಾರ ಮೌಲ್ಯದ ಉತ್ಪಾದಕರು ದುಡಿಮೆಗಾರರು. ಪ್ರತಿಯೊಂದು ವಸ್ತು ಸೇವೆಯ ಉತ್ಪಾದನೆಯ ಮೂಲದಲ್ಲಿ ದುಡಿಮೆಗಾರರು ಇರುತ್ತಾರೆ. ಈ ಹಿನ್ನಲೆಯಲ್ಲಿ ದುಡಿಮೆಗಾರರನ್ನು ಸಂಪನ್ಮೂಲವೆಂದು, ಉತ್ಪಾದನೆಯ ಸಾಧನವೆಂದೂ, ಉತ್ಪಾದನಾ ಕತೃಗಳೆಂದು ಪರಿಗಣಿಸಿಕೊಂಡು ಬರಲಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ದುಡಿಮೆಗಾರರು ಉತ್ಪಾದನಾ ಕತೃಗಳೂ ಹೌದು ಮತ್ತು ಉತ್ಪಾದಿಸಿದ ವಸ್ತು ಮತ್ತು ಸೇವೆಗಳ ಅನುಭೋಗಿಗಳೂ ಹೌದು. ಅಭಿವೃದ್ಧಿಯನ್ನು ಕುರಿತ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಚರ್ಚೆಗಳಲ್ಲಿ ದುಡಿಮೆಗಾರರನ್ನು ಕೇವಲ ಉಪಕರಣ – ಸಂಪನ್ಮೂಲವೆಂದು ಪರಿಗಣಿಸಿಕೊಂಡು ಬಂದಿರುವ ಸಂಗತಿ ತಿಳಿದುಬರುತ್ತದೆ. ದುಡಿಮೆಗಾರರ ಅಂತಸ್ಥವಾದಿ ಮಹತ್ವವು ಅಲಕ್ಷ್ಯಕ್ಕೆ ಗುರಿಯಾಗಿಬಿಟ್ಟಿದೆ. ದುಡಿಮೆಯ ಫಲವನ್ನು ದುಡಿಮೆಗಾರರು ಅನುಭವಿಸಬೇಕು. ದುಡಿಮೆ ಫಲ ದುಡಿಮೆಗಾರರಿಗೆ ಎಷ್ಟರ ಮಟ್ಟಿಗೆ ಸಲ್ಲುತ್ತಿದೆ ಎಂಬುದು ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಆನುಷಂಗಿಕವಾಗಿ ಬಿಟ್ಟಿದೆ. ಈ ಕುರಿತ ಚರ್ಚೆ ಇಲ್ಲಿ ಅಪ್ರಸ್ತುತ.

‘ದುಡಿಮೆಗಾರರು’ ಎಂಬ ವರ್ಗ ಒಂದು ಅಖಂಡ, ಏಕರೂಪಿ ಗುಂಪಾಗಿರುವುದಿಲ್ಲ. ಆದರೆ ಅದನ್ನು ಒಂದು ಅಖಂಡ ಗುಂಪಾಗಿ ಪರಿಭಾವಿಸುವ ಪದ್ಧತಿ ವಾಡಿಕೆಯಲ್ಲಿದೆ. ನಮ್ಮ ಸಮಾಜದ ಸಂದರ್ಭದಲ್ಲಿ, ಏಣಿಶ್ರೇಣಿಗಳಿಂದ ಕೂಡಿರುವ ವ್ಯವಸ್ಥೆಯಲ್ಲಿ ದುಡಿಮೆಗಾರರು ಏಕರೂಪಿ ವರ್ಗವಾಗಿ ಇರುವುದಿಲ್ಲ.

ದುಡಿಮೆ, ದುಡಿಮೆಗಾರರು, ಅಭಿವೃದ್ಧಿ ಮುಂತಾದ ಸಂಗತಿಗಳನ್ನು ‘ಆರ್ಥಿಕ’ವೆಂದು ವರ್ಗೀಕರಿಸಿ, ಸಾಮಾಜಿಕ ಚೌಕಟ್ಟಿನಿಂದ ಬೇರ್ಪಡಿಸಿ, ಅವಗಳನ್ನು ಛೇಧಗೊಳಿಸಿ ನೋಡುವ ಪರಿಯೊಂದು ಪ್ರಚಲಿತದಲ್ಲಿದೆ. ಈ ಬಗೆಯ ದೃಷ್ಟಿ ಕೋನವನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ದುಡಿಮೆ – ದುಡಿಮೆಗಾರ ವರ್ಗ – ಇವುಗಳನ್ನು ಸಾಮಾಜಿಕ ನೆಲೆಯಲ್ಲೇ ಪರಿ ಭಾವಿಸಿಕೊಳ್ಳಬೇಕು. ಈ ಅಧ್ಯಾಯದಲ್ಲಿ ದುಡಿಮೆಗಾರ ವರ್ಗವನ್ನು ಎರಡು ನೆಲೆಯಿಂದ ನೋಡಲು ಪ್ರಯತ್ನಿಸಲಾಗಿದೆ. ದುಡಿಮೆಗಾರ ವರ್ಗದಲ್ಲಿ ಶಿಷ್ಟ – ಪರಿಶಿಷ್ಟ ನೆಲೆಗಳನ್ನು ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಎರಡನೆಯದಾಗಿ ದುಡಿಮೆಗಾರ ವರ್ಗದ ಲಿಂಗಸಂಬಂಧಿ ನೆಲೆಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಈ ಬಗೆಯ ಅಧ್ಯಯನದಿಂದ ಜಿಲ್ಲಾಮಟ್ಟದಲ್ಲಿ ಉತ್ಪಾದನಾ ಸಂಬಂಧಗಳ ಸ್ವರೂಪ ಮತ್ತು ಉತ್ಪಾದನಾ ಶಕ್ತಿಗಳ ನೆಲೆಗಳನ್ನು ಗುರುತಿಸುವುದು ಸಾಧ್ಯ ಎಂದು ನಂಬಲಾಗಿದೆ. ಗದಗ ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ವಿವಿಧ ಸಾಮಾಜಿಕ ಗುಂಪುಗಳ ಪ್ರಮಾಣ ಎಷ್ಟು? ದುಡಿಮೆಗಾರ ವರ್ಗದಲ್ಲಿ ಮಹಿಳೆಯರ ಪ್ರಮಾಣ ಎಷ್ಟಿದೆ? ಪರಿಶಿಷ್ಟ ಜನಸಂಖ್ಯೆಯು ನಿಭಾಯಿಸುವ ದುಡಿಮೆಯ ಭಾರವು ಪರಿಶಿಷ್ಟೇತರ ಜನಸಂಖ್ಯೆಯು ನಿಭಾಯಿಸುವ ದುಡಿಮೆಯ ಭಾರಕ್ಕಿಂತ ಅಧಿಕವಾಗಿರುತ್ತದೆ ಏಕೆ? ಈ ಪ್ರಶ್ನೆಗಳನ್ನು ಇಲ್ಲಿ ವಿಶ್ಲೇಷಣೆಗೆ ಹಚ್ಚಲಾಗಿದೆ.

ಭಾಗದುಡಿಮೆಗಾರವರ್ಗದಸ್ಥಿತಿಗತಿಗಳು

ಕೋಷ್ಟಕ – ೪.೧ರಲ್ಲಿ ಗದಗ ಜಿಲ್ಲೆಯ ದುಡಿಮೆಗಾರ ವರ್ಗದ ವಿವಿಧ ಆಯಾಮಗಳನ್ನು ಗುರುತಿಸಿದೆ. ದುಡಿಮೆಗಾರ ವರ್ಗದ ತ್ರಿವಲಯವಾರು ಪ್ರಮಾಣವನ್ನು ಕೋಷ್ಟಕದಲ್ಲಿ ತೋರಿಸಿದೆ. ಗದಗ ಜಿಲ್ಲೆಯ ಒಟ್ಟು ದುಡಿಮೆಗಾರವರ್ಗದ ಸಂಖ್ಯೆ ೩,೪೯,೪೭೭. ಒಟ್ಟು ದುಡಿಮೆಗಾರ ವರ್ಗದಲ್ಲಿ ಶೇ.೭೩.೯೫ರಷ್ಟು ಪ್ರಾಥಮಿಕ ವಲಯದಲ್ಲಿದ್ದರೆ ತೃತೀಯ ವಲಯದಲ್ಲಿರುವ ದುಡಿಮೆಗಾರ ವರ್ಗದ ಪ್ರಮಾಣ ಶೇ.೧೫.೭೧.

ಜಿಲ್ಲೆಯ ಒಟ್ಟು ದುಡಿಮೆಗಾರ ವರ್ಗದಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವ ವರ್ಗದ ಪ್ರಮಾಣ ಶೇ.೭೨.೧೬ (೨,೫೨,೧೮೭) ರಾಜ್ಯಮಟ್ಟದಲ್ಲಿ ಇದರ ಪ್ರಮಾಣ ಶೇ.೬೩.೧೨. ಗದಗ ಜಿಲ್ಲೆಯು ಮೂಲಭೂತವಾಗಿ ಕೃಷಿ ಪ್ರಧಾನ ಜಿಲ್ಲೆಯಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ನಿರತರಾಗಿರುವ ದುಡಿಮೆಗಾರ ವರ್ಗದ ಪ್ರಮಾಣ ಶೇ.೨೭.೮೪. ಕರ್ನಾಟಕದಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ದುಡಿಮೆ ಗಾರರನ್ನು ಹೊಂದಿರುವ ಜಿಲ್ಲೆಗಳ ಸಂಖ್ಯೆ ಕೇವಲ ೯.

ಜಿಲ್ಲೆಯಲ್ಲಿನ ಒಟ್ಟು ಸಂಖ್ಯೆಯಲ್ಲಿ ದುಡಿಮೆಗಾರ ವರ್ಗದ ಪ್ರಮಾಣ ಶೇ.೪೦.೬೮. ಆದರೆ ಇದು ರಾಜ್ಯ ಮಟ್ಟದಲ್ಲಿ ಕೇವಲ ಶೇ.೩೮.೪೫. ಒಟ್ಟು ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕ ಪ್ರಮಾಣ ಗದಗ ಜಿಲ್ಲೆಯಲ್ಲಿ ಶೇ.೪೨.೩೫ ರಷ್ಟಿದೆ. ಆದರೆ ರಾಜ್ಯಮಟ್ಟದಲ್ಲಿ ಇದರ ಪ್ರಮಾಣ ಕೇವಲ ಶೇ.೨೯.೯೧. ಗದಗ ಜಿಲ್ಲೆಯಲ್ಲಿ ದುಡಿಮೆಯಲ್ಲಿ ನಿರತರಾಗಿರುವ ಜನರ ಪ್ರಮಾಣವು ಸಾಪೇಕ್ಷವಾಗಿ ರಾಜ್ಯ ಮಟ್ಟದಲ್ಲಿರುವುದಕ್ಕಿಂತ ಅಧಿಕವಾಗಿದೆ.

ಕೋಷ್ಟಕ .ಗದಗ ಜಿಲ್ಲೆಯ ದುಡಿಮೆಗಾರವರ್ಗ

ವಿವರಗಳು

ಮಹಿಳೆಯರು

ಪುರುಷರು

ಒಟ್ಟು

೧. ಸಾಗುವಳಿದಾರರು ೨೬೦೯೫(೨೧.೬೪) ೭೮೦೯೧(೩೪.೧೧) ೧೦೪೧೮೬(೨೯.೮೧)
೨. ಕೃಷಿಕಾರ್ಮಿಕರು ೨೯೦೩೬
(೬೫.೫೬)
೬೮೯೬೫
(೩೦.೧೩)
೧೪೮೦೦೧
(೪೨.೩೫)
೩. ಕೃಷಿ ಅವಲಂಬಿತರು (೧+೨) ೧೫೧೩೧
(೮೭.೨೦)
೧೪೭೦೫೬
(೬೪.೨೪)
೨೫೨೧೮೭
(೭೨.೧೬)
೪. ಪಶುಪಾಲನೆ – ಅರಣ್ಯಗಾರಿಕೆ ೪೦೮
(೦.೩೪)
೫೧೮೫
(೨.೨೬)
೫೫೯೩
(೧.೬೦)
೫. ಗಣಿಗಾರಿಕೆ ೧೧೩
(೦.೦೮)
೫೪೭
(೦.೨೪)
೬೫೨
(೦.೧೯)
I. ಪ್ರಾಥಮಿಕ ವಲಯ ೧೦೫೬೪೨
(೮೨.೬೨)
೧೫೨೭೯೦
(೬೬.೭೪)
೨೫೮೪೩೨
(೭೩.೯೫)
೬. ಕೌಟುಂಬಿಕ ಕೈಗಾರಿಕೆ ೩೩೬೪
(೨.೭೯)
೭೫೫೩
(೩.೩೦)
೧೦೯೧೭
(೩.೧೨)
೭. ಕುಟುಂಬೇತರ ಕೈಗಾರಿಕೆ ೩೭೫೨
(೩.೧೧)
೧೬೦೭೩
(೭.೦೨)
೧೯೮೨೫
(೫.೬೭)
೮. ನಿಮಾಣ ಚಟುವಟಿಕೆ ೨೩೩
(೦.೧೯)
೫೧೬೨
(೨.೨೫)
೫೩೯೫
(೧.೫೪)
II. ದ್ವಿತೀಯ ವಲಯ ೭೩೪೯
(೬.೦೯)
೨೮೭೮೮
(೧೨.೫೭)
೩೬೧೩೭
(೧೦.೩೪)
೯. ವ್ಯಾಪಾರ – ವಾಣಿಜ್ಯ ೨೩೮೫
(೧.೯೮)
೨೨೪೬೨
(೯.೮೧)
೨೪೮೪೭
(೭.೧೨)
೧೦.ಸಾರಿಗೆ – ಸಂಪರ್ಕ – ಸಂಗ್ರಹ ೧೧೦
(೦.೦೯)
೭೨೯೬
(೩.೧೯)
೭೪೦೬
(೨.೧೨)
೧೧.ಇತರೆ ಸೇವೆಗಳು ೫೦೭೭
(೪.೨೧)
೧೭೫೭೮
(೭.೬೮)
೨೨೬೫೫
(೬.೪೮)
III. ತೃತೀಯ ವಲಯ ೭೫೭೨
(೬.೨೮)
೪೭೩೩೬
(೨೦.೬೮)
೫೪೯೦೮
(೧೫.೭೧)
ಒಟ್ಟು ದುಡಿಮೆಗಾರರು ೧೨೦೫೬೩
(೧೦೦.೦೦)
೨೨೮೯೧೪
(೧೦೦.೦೦)
೩೪೯೪೭೭
(೧೦೦.೦೦)

ಬಡತನದ ತೀವ್ರತೆಯ ಸೂಚಿ

ಗದಗ ಜಿಲ್ಲೆಯಲ್ಲಿನ ಜನಸಂಖ್ಯೆಯಲ್ಲಿ ದುಡಿಯುವ ವರ್ಗದ ಪ್ರಮಾಣ ಹಾಗೂ ದುಡಿಯುವ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ರಾಜ್ಯ ಮಟ್ಟದಲ್ಲಿರುವುದಕ್ಕಿಂತ ಸಾಪೇಕ್ಷವಾಗಿ ಅಧಿಕವಾಗಿರುವುದನ್ನು ನೋಡಲಾಗಿದೆ. ಇದರ ಆಧಾರದ ಮೇಲೆ ಗದಗ ಜಿಲ್ಲೆಯಲ್ಲಿ ಬಡತನದ ಪ್ರಮಾಣ ಹಾಗೂ ಬಡತನದ ತೀವ್ರತೆಯು ರಾಜ್ಯಮಟ್ಟಕ್ಕಿಂತ ಅಧಿಕವಾಗಿದೆ ಎಂದು ಹೇಳಬಹುದು. ದುಡಿಯುವ ವರ್ಗ ಹಾಗೂ ಕೃಷಿ ಕಾರ್ಮಿಕರ ಪ್ರಮಾಣದ ಅಗಾಧತೆಯನ್ನು ಬಡತನದ ಸೂಚಿಯಾಗಿ ಬಳಸಬಹುದಾಗಿದೆ. (ಶೇರ್ ಗಿಲ್, ಎಚ್.ಎಸ್., ೧೯೮೯, ಕಲ್ಪನಾ ಬಾರ್ದನ್, ೧೯೮೯).

ಇದರ ಇಂಪ್ಲಿಕೇಷನ್ ಏನು? ಆರ್ಥಿಕವಾಗಿ ಹಿಂದುಳಿದಿರುವ, ಅಭಿವೃದ್ಧಿ ದೃಷ್ಟಿಯಿಂದ ಕೆಳಮಟ್ಟದಲ್ಲಿರುವ ಗದಗ ಜಿಲ್ಲೆಯಲ್ಲಿ ಜನರಿಗೆ ದುಡಿಮೆ ಅನಿವಾರ್ಯವಾಗಿದೆ. ಇಲ್ಲಿ ದುಡಿಮಯೇ ಬದುಕಾಗಿದೆ. ದುಡಿಮೆಯನ್ನು ಬದುಕಿಗೆ ಸಂವಾದಿಯನ್ನಾಗಿ ಇಲ್ಲಿ ಬಳಸಲಾಗುತ್ತಿದೆ. ದುಡಿಮೆಗಾರ ವರ್ಗದ ಪ್ರಮಾಣ ಮತ್ತು ಕೃಷಿ ಕಾರ್ಮಿಕರ ಪ್ರಮಾಣಗಳು ಸಾಪೇಕ್ಷವಾಗಿ ಅಧಿಕವಾಗಿದ್ದ ಮಾತ್ರಕ್ಕೆ ಜಿಲ್ಲೆಯಲ್ಲಿ ಬಡತನದ ಒತ್ತಡ ತೀವ್ರವಾಗಿದೆ ಎಂದು ಹೇಗೆ ಹೇಳುವುದು? ಗದಗ ಜಿಲ್ಲೆಯಲ್ಲಿ ಬಡತನವು ರಾಜ್ಯಮಟ್ಟದ ಸರಾಸರಿಗಿಂತ ಅಧಿಕವಾಗಿವೆ ಎಂದು ಹೇಳಲು ಅನೇಕ ಕಾರಣಗಳಿವೆ.

ಕರ್ನಾಟಕದಲ್ಲಿ ಒಂಬತ್ತು ಜಿಲ್ಲೆಗಳಲ್ಲಿ ಮಾತ್ರ ದುಡಿಮೆಗಾರ ವರ್ಗದ ಪ್ರಮಾಣವು ಜನಸಂಖ್ಯೆಯಲ್ಲಿ ಶೇ.೪೦ ಮತ್ತು ಅದಕ್ಕೂ ಅಧಿಕ ಮಟ್ಟದಲ್ಲಿದೆ. ಇದನ್ನು ಕೋಷ್ಟಕ ೪.೨ರಲ್ಲಿ ತೋರಿಸಿದೆ.

ಕೋಷ್ಟಕ ೪.೨ರಲ್ಲಿ ತೋರಿಸಿರುವಂತೆ ಕರ್ನಾಟಕದ ಒಂಬತ್ತು ಜಿಲ್ಲೆಗಳಲ್ಲಿ ದುಡಿಮೆ ಸಹಭಾಗಿತ್ವ ಪ್ರಮಾಣವು ರಾಜ್ಯ ಸರಾಸರಿಗಿಂತ ಅಧಿಕವಾಗಿದೆ. ಈ ಒಂಬತ್ತು ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ಒಂದು ಗುಂಪಿಗೆ ಸೇರಿದರೆ, ಉಳಿದ ೬ ಜಿಲ್ಲೆಗಳು ಇನ್ನೊಂದು ಗುಂಪಿಗೆ ಸೇರುತ್ತದೆ. ಮೊದಲನೆಯ ಗುಂಪಿಗೆ ಸೇರಿದ ಜಿಲ್ಲೆಗಳು ಆರ್ಥಿಕವಾಗಿ ಮುಂದುವರೆದಿದ್ದರೆ ಉಳಿದ ೬ ಎರಡನೆಯ ಗುಂಪಿನ ಜಿಲ್ಲೆಗಳು ಆಥಿಕವಾಗಿ ಹಿಂದುಳಿದಿವೆ. ಈ ಎರಡು ಗುಂಪಿನ ಜಿಲ್ಲೆಗಳಲ್ಲಿ ದುಡಿಮೆ ಸಹಭಾಗಿತ್ವ ಪ್ರಮಾಣ ಅಧಿಕವಾಗಿದೆ. ಈ ವಿಚಿತ್ರವನ್ನು ವಿವರಿಸುವುದು ಹೇಗೆ?

ಕೋಷ್ಟಕ .: ದುಡಿಮೆಯಲ್ಲಿ ಸಹಭಾಗಿತ್ವ ಪ್ರಮಾಣ

ಕ್ರಮ ಸಂಖ್ಯೆ

ಜಿಲ್ಲೆಗಳು

ದುಡಿಮೆಯಲ್ಲಿ ಸಹಭಾಗಿತ್ವ ಪ್ರಮಾಣ (ಜನಸಂಖ್ಯೆಯಲ್ಲಿ ದುಡಿಮೆಗಾರ ವರ್ಗದ ಪ್ರಮಾಣ) ಶೇಕಡ

ಚಾಮರಾಜನಗರ ೪೦.೮೫
ದಕ್ಷಿಣ ಕನ್ನಡ ೪೨.೭೮
ಚಿಕ್ಕಮಗಳೂರು ೪೦.೫೨
ಕೊಡಗು ೪೫.೦೯
ಗದಗ ೪೦.೬೮
ಗುಲಬರ್ಗಾ ೪೦.೨೭
ಬಳ್ಳಾರಿ ೪೨.೭೭
ರಾಯಚೂರು ೪೧.೦೯
ಕೊಪ್ಪಳ ೪೩.೩೬
ಕರ್ನಾಟಕ ರಾಜ್ಯ ೩೮.೪೫

ಇವೆರಡೂ ಗುಂಪಿನ ಜಿಲ್ಲೆಗಳಲ್ಲಿನ ದುಡಿಮೆಗಾರ ವರ್ಗದ ಸಾಮಾಜಿಕ ಮತ್ತು ಆರ್ಥಿಕ ಸ್ವರೂಪ ಭಿನ್ನವಾಗಿದೆ. ಮೊದಲನೆಯ ಗುಂಪಿನ ಮುಂದುವರಿದ ಜಿಲ್ಲೆಗಳಲ್ಲಿನ ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಬಹಳ ಕಡಿಮೆ ಇದೆ. ಅದರ ಪ್ರಮಾಣ ಸರಾಸರಿ ಶೇ.೧೮.೬೨. ಆದರೆ ಎರಡನೆಯ ಗುಂಪಿನ ಹಿಂದುಳಿದ ಜಿಲ್ಲೆಗಳಲ್ಲಿನ ದುಡಿಮೆಗಾರ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣ ಸರಾಸರಿ ಶೇ.೪೪.೨೯. ಮೊದಲನೆಯ ಗುಂಪಿನ ಜಿಲ್ಲೆಗಳಲ್ಲಿನ ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇ.೪೨.೧೮. ಆದರೆ ಎರಡನೆಯ ಗುಂಪಿನ ಜಿಲ್ಲೆಗಳಲ್ಲಿನ ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣ ಶೇ.೫೩.೩೦.

ಗದಗ ಜಿಲ್ಲೆಯಲ್ಲಿ ಬಡತನದ ಪ್ರಮಾಣ ಹಾಗೂ ಅದರ ತೀವ್ರತೆಯ ರಾಜ್ಯಮಟ್ಟದ ಸರಾಸರಿಗಿಂತ ಅಧಿಕವಾಗಿದೆ ಯೆಂದು ಹೇಳಲು ಮೂರು ಮುಖ್ಯ ಸಂಗತಿಗಳನ್ನು ಆಧಾರವಾಗಿ ನೀಡಬಹುದು.

೧. ಈ ಜಿಲ್ಲೆಯಲ್ಲಿ ದುಡಿಮೆಗಾರ ವರ್ಗದ ಪ್ರಮಾಣವು ರಾಜ್ಯಮಟ್ಟದ ಸರಾಸರಿಗಿಂತ ಅಧಿಕವಾಗಿದೆ.

೨. ಈ ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ಕೃಷಿಕಾರ್ಮಿಕರ ಪ್ರಮಾಣವು ರಾಜ್ಯ ಸರಾಸರಿಗಿಂತ ಅಧಿಕವಾಗಿದೆ.

೩. ಈ ಜಿಲ್ಲೆಯ ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣವು ಪುಷರ ಪ್ರಮಾಣಕ್ಕಿಂತ ಅಧಿಕವಾಗಿದೆ.

ಈ ಮೂರು ಸಂಗತಿಗಳು ಏಕಕಾಲದಲ್ಲಿ ಅಸ್ತಿತ್ವದಲ್ಲಿದ್ದರೆ ಆ ಜಿಲ್ಲೆಯಲ್ಲಿ ಬಡತನವು ತೀವ್ರವಾಗಿರುತ್ತದೆ ಎಂದು ಹೇಳಬಹುದು.

ಕೃಷಿ ಮತ್ತು ಕೃಷಿಯೇತರ ಕಸುಬುಗಳು

ಗದಗ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದೆ ಎಂಬ ಸಂಗತಿಯನ್ನು ಈಗಾಗಲೇ ಹೇಳಿಯಾಗಿದೆ. ರಾಜ್ಯಮಟ್ಟದಲ್ಲಿ ಕೃಷಿ ಯನ್ನು ಅವಲಂಬಿಸಿಕೊಂಡಿರುವವರ ಪ್ರಮಾಣವು ಶೇ.೬೩.೧೨ರಷ್ಟಿದ್ದರೆ ಗದಗ ಜಿಲ್ಲೆಯಲ್ಲಿ ಅದು ಶೇ.೭೨.೧೬. ಕೃಷಿ ಯೇತರ ಚಟುವಟಿಕೆಗಳು ಇಲ್ಲವೆಂದು ಹೇಳುವಂತಿಲ್ಲ. ಆದರೆ ಅವು ಅತ್ಯಂತ ಮಂದಗತಿಯಲ್ಲಿ ಬೆಳೆಯುತ್ತಿವೆ. ಕೃಷಿ ಯೇತರ ಚಟುವಟಿಕೆಗಳಲ್ಲಿ ನಿರತರಾಗಿರುವ ದುಡಿಮೆಗಾರರ ಸಂಖ್ಯೆ ೯೭೨೯೦. ಇದರಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇ.೧೫.೮೬. ಆದರೆ ಕೃಷಿಯನ್ನು ಅವಲಂಬಿಸಿಕೊಂಡಿರುವವರಲ್ಲಿ ಮಹಿಳೆಯರ ಪ್ರಮಾಣ ಶೇ.೪೧.೬೯.

ಕೃಷಿ ವಲಯ ಅದರಲ್ಲೂ ಬೆಳೆ – ಸಾಗುವಳಿ ಕೃಷಿಯು ಎಷ್ಟು ಜನರಿಗೆ ಉದ್ಯೋಗ ಕೊಟ್ಟೀತು? ಅದರ ಉದ್ಯೋಗ ಸಾಮರ್ಥ್ಯ ಸೀಮಿತವಾದುದು. ಕೃಷಿಯೇತರ ಚಟುವಟಿಕೆಗಳು ಗದಗ ಜಿಲ್ಲೆಯಲ್ಲಿ ಸೃಷ್ಟಿಯಾಗುತ್ತಿವೆ. ಆದರೆ ಅದು ಮಂದಗತಿಯಲ್ಲಿ ಬೆಳೆಯುತ್ತಿದೆ. ಕೃಷಿಯೇತರ ಚಟುವಟಿಕೆಗಳು ಬಹಳಷ್ಟು ಮಟ್ಟಿಗೆ ನಗರ ಪ್ರದೇಶಗಳಲ್ಲಿ ಮಡುಗಟ್ಟಿ ಕೊಂಡು ಬಿಟ್ಟಿವೆ. ಕೃಷಿಯೇತರ ಚಟುವಟಿಕೆಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ಹೇಗೆ ಹೆಚ್ಚಿಸಬೇಕು ಎಂಬುದರ ಬಗ್ಗೆ ಹೆಚ್ಚು ಚಿಂತನ – ಮಂಥನ ನಡೆಯಬೇಕಾಗಿದೆ.

ಯಾವ ವರ್ಗದ ಅಭಿವೃದ್ಧಿ ?

ಈ ಹಿಂದೆ ಹೇಳಿರುವಂತೆ ಗದಗ ಜಿಲ್ಲೆಯಲ್ಲಿ ಪ್ರಾಥಮಿಕೇತರ ಚಟುವಟಿಕೆಗಳನ್ನು ಅವಲಂಬಿಸಿಕೊಂಡಿರುವವರ ಪ್ರಮಾಣ ಬಹಳ ಕಡಿಮೆ. ಇಂದು ನಡೆದಿರುವ ಅಭಿವೃದ್ಧಿಯ ಸ್ವರೂಪವನ್ನು ನೋಡಿದರೆ ಅದು ಪ್ರಾಥಮಿಕೇತರ ವಲಯದಲ್ಲಿನ ದುಡಿಮೆಗಾರ ವರ್ಗದ ಹಿತಾಸಕ್ತಿಗಳನ್ನು ಪೋಷಿಸುತ್ತಿರುವಂತೆ ಕಾಣುತ್ತದೆ. ಗದಗದಲ್ಲಿನ ೧.೪೮ ಲಕ್ಷ ಕೃಷಿ ಕಾರ್ಮಿಕರ ಹಿತಾಸಕ್ತಿಗಳನ್ನು ಗುರಿಯಾಗಿಟ್ಟುಕೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ಕಣ್ಣಿಗೆ ಕಾಣುತ್ತಿಲ್ಲ. ಕೃಷಿ ಕಾರ್ಮಿಕರಲ್ಲಿ ೭೯೦೩೬ ರಷ್ಟಿರುವ ಮಹಿಳಾ ಕೃಷಿ ಕಾರ್ಮಿಕರ ಹಿತವನ್ನು ಕಾಪಾಡುವ, ಅವರ ಬದುಕನ್ನು ಉತ್ತಮ ಪಡಿಸಬಲ್ಲ ಕಾರ್ಯಕ್ರಮಗಳು ಇಲ್ಲವೆ ಇಲ್ಲ. ಆರೋಗ್ಯ ಭಾಗ್ಯವನ್ನಾಗಲಿ, ಅಕ್ಷರ ಸೌಲಭ್ಯವನ್ನಾಗಲಿ ಕಾಣದಿರುವ ೧.೪೮ ಲಕ್ಷ ಕೃಷಿ ಕಾರ್ಮಿಕರ ಬದುಕು ತೀವ್ರ ದುಸ್ಥಿಯಲ್ಲಿದೆ.

ಧಾರಣ ಶಕ್ತಿಯ ದುಸ್ಥಿತಿಯನ್ನು ಅಮರ್ತ್ಯಸೇನ್ ಅವರು ‘ಬಡತನ’ ವೆಂದು ಕರೆದಿದ್ದಾರೆ. ಧಾರಣ ಶಕ್ತಿಯು ಎರಡು ಶಕ್ತಿಗಳನ್ನು ಒಳಗೊಂಡಿದೆ. ಮೊದಲನೆಯದು, ಬದುಕನ್ನು ಉತ್ತಮಪಡಿಸಿಕೊಳ್ಳಲು ಲಭ್ಯವಿರುವ – ಹರಿದುಬರುತ್ತಿರುವ ‘ಅವಕಾಶ’ಗಳನ್ನು ತನ್ನದಾಗಿಸಿಕೊಳ್ಳುವ – ದಕ್ಕಿಸಿಕೊಳ್ಳುವ ಸಾಮರ್ಥ್ಯ ಮತ್ತು ಎರಡನೆಯದು ಲಭ್ಯವಿರುವ – ಹರಿದುಬರುತ್ತಿರುವ ‘ಅವಕಾಶ’ ಗಳಲ್ಲಿ ತನಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ. ಇವೆರಡು ಗುಣಗಳ ಸಂಯುಕ್ತ ಸ್ಥಿತಿಯನ್ನು ಧಾರಣ ಶಕ್ತಿ ಎಂದು ಸೆನ್ ಕರೆಯುತ್ತಾರೆ. ಈ ಧಾರಣಶಕ್ತಿಯ ದುಸ್ಥಿತಿಯೇ ಬಡತನ. ಬಡತನದ ನಿವಾರಣೆಯೆಂದರೆ ಅಮರ್ತ್ಯಸೇನ್ ಪ್ರಕಾರ ಧಾರಣಶಕ್ತಿಯ ಸಂವರ್ಧನೆ. ಧಾರಣಶಕ್ತಿ ಹೇಗೆ ಪ್ರಾಪ್ತವಾಗುತ್ತದೆ? ಅದು ಅಕ್ಷರಜ್ಙಾನದಿಂದ ಪ್ರಾಪ್ತವಾಗುತ್ತದೆ. ಆರೋಗ್ಯಭಾಗ್ಯದಿಂದ ಪ್ರಾಪ್ತವಾಗುತ್ತದೆ. ಆಸ್ತಿ – ಸಂಪತ್ತಿನಿಂದ ಪ್ರಾಪ್ತವಾಗುತ್ತದೆ. ಜಾತಿ ಸ್ವರೂಪದಿಂದಲೂ ಅದು ಪ್ರಾಪ್ತವಾಗಬಹುದು. ಈ ಮೂರೂ ಸಂಪತ್ತಿನಿಂದ ಪ್ರಾಪ್ತವಾದ ಗದಗ ಜಿಲ್ಲೆಯ ೧.೪೮ ಲಕ್ಷ ಕೃಷಿ ಕಾರ್ಮಿಕರ ಹಾಗೂ ೧.೨೦ ಲಕ್ಷ ದಷ್ಟಿರುವ ಮಹಿಳಾ ದುಡಿಮೆಗಾರ ವರ್ಗದ ಬದುಕು ಕಂಗಾಲಾಗಿದೆ.

ಭಾಗ – ದುಡಿಮೆಗಾರವರ್ಗದಸಾಮಾಜಿಕಸ್ವರೂಪ

‘ದುಡಿಮೆಗಾರರು’ ಒಂದು ಅಖಂಡವಾದ ವರ್ಗವಲ್ಲ. ದುಡಿಮೆಗಾರ ವರ್ಗವನ್ನು ವಿವಿಧ ಸಾಮಾಜಿಕ ಗುಂಪುಗಳಾಗಿ ವರ್ಗೀಕರಿಸಬಹುದು. ಹೀಗೆ ವರ್ಗೀಕರಿಸುವ ಮೂಲಕ ಸಮಾಜದ ಯಾವ ವರ್ಗದ ಮೇಲೆ ದುಡಿಮೆಯ ಒತ್ತಡ ಹೆಚ್ಚು ಬೀಳುತ್ತದೆ, ಸಮಾಜದ ಯಾವ ವರ್ಗವು ಅಭಿವೃದ್ಧಿಯ ಫಲದ ಮೇಲೆ ಹೆಚ್ಚಿನ ಅಧಿಕಾರ ಪಡೆದಿದೆ ಎಂಬುದನ್ನು ತಿಳಿದುಕೊಳ್ಳಬಹುದು. ದುಡಿಮೆಗಾರ ವರ್ಗವನ್ನು ಅಖಂಡವಾಗಿ ಪರಿಗಣಿಸಿದಾಗ ಅನೇಕ ಸೂಕ್ಷ್ಮ ಸಂಗತಿಗಳು ನಮ್ಮ ಗಮನಕ್ಕೆ ಬರುವುದಿಲ್ಲ.

ಸಾಂಪ್ರದಾಯಿಕ ಅಭಿವೃದ್ಧಿ ವಿಚಾರಧಾರೆಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಸಂಗತಿಗಳನ್ನು ಅಖಂಡವಾಗಿ ನೋಡುವ ಪದ್ಧತಿ ರೂಢಿಯಲ್ಲಿದೆ. ವರಮಾನ, ಸಾಕ್ಷರತೆ, ದುಡಿಯುವ ವರ್ಗ, ಸಾಗುವಳಿದಾರರು ಮುಂತಾದ ವುಗಳನ್ನು ಹೀಗೆ ಅಖಂಡವಾಗಿ ಪರಿಭಾವಿಸಿಕೊಂಡು ಬರಲಾಗಿದೆ. ಈ ಬಗೆಯ ಅಖಂಡ ಸ್ವರೂಪ ಅಧ್ಯಯನ ವಿಧಾನವು ಸಮಸ್ಯೆಯ ಸೂಕ್ಷ್ಮ ಹಾಗೂ ಸಂಕೀರ್ಣವಾದ ಒಳ ಸಂಬಂಧಗಳ ನೆಲೆಗಳನ್ನು ತೋರಿಸಲು ಸಾಧ್ಯವಿಲ್ಲ. ಅಖಂಡ ಸ್ವರೂಪ ಅಧ್ಯಯನ ವಿಧಾನವು ಅನೇಕ ಬಗೆಯ ಮಿತಿಗಳಿಂದ ಕೂಡಿದೆ. ಹೇಳಿಕೇಳಿ ನಮ್ಮ ಸಮಾಜವೇ ಖಂಡ ಸ್ವರೂಪಿಯಾದದ್ದು. ವರ್ಣ, ವರ್ಗ, ಜಾತಿ, ಲಿಂಗ, ಪ್ರದೇಶ ಮುಂತಾದ ಸಂಗತಿಗಳನ್ನು ಆಧರಿಸಿದ ವಿಚ್ಛಿದ್ರತೆಗಳಿಂದ, ಖಂಡ ತುಂಡವಾಗಿ ಹೋಗೆದೆ. ಇಂತಹ ಒಂದು ವ್ಯವಸ್ಥೆಯಲ್ಲಿ ಅಭಿವೃದ್ಧಿಯನ್ನು ಅಖಂಡನೆಲೆಯಲ್ಲಿ ಪರಿಭಾವಿಸುವುದು ಸಾಧುವಲ್ಲ.

ಕರ್ನಾಟಕದ ಸಂದರ್ಭದಲ್ಲಿ ಜನಸಂಖ್ಯೆಯನ್ನು ಪರಿಶಿಷ್ಟಜಾತಿ (ಪ.ಜಾ), ಪರಿಶಿಷ್ಟ ಪಂಗಡ (ಪ.ಪಂ), ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು ಮತ್ತು ಇತರ ವರ್ಗ ಎಂಬ ಸಾಮಾಜಿಕ ಗುಂಪುಗಳಾಗಿ ವರ್ಗೀಕರಿಸಬಹುದು. ಈ ಎಲ್ಲ ಸಾಮಾಜಿಕ ಗುಂಪುಗಳ ಸಾಮಾಜಿಕ ಸ್ಥಾನಮಾನ, ಆರ್ಥಿಕ ಸ್ಥಿತಿ ಗತಿಗಳು ಸಮನಾಗಿರುವುದಿಲ್ಲ. ನಮ್ಮ ಅಧ್ಯಯನದಲ್ಲಿ ಮಾಹಿತಿಯ ಕೊರತೆಯಿಂದಾಗಿ ವಿಶ್ಲೇಷಣೆಯನ್ನು ಕೇವಲ ಎರಡು ಗುಂಪುಗಳಿಗೆ, ಅಂದರೆ ಪರಿಶಿಷ್ಟರು (ಪ.ಜಾ+ಪ,ಪಂ) ಮತ್ತು ಪರಿಶಿಷ್ಠೇ ತರ (ಹಿಂದುಳಿದವರು + ಅಲ್ಪಸಂಖ್ಯಾತರು + ಇತರೆ ವರ್ಗ) ಎಂಬ ಎರಡು ಸಾಮಾಜಿಕ ಗುಂಪುಗಳಿಗೆ ಮಾತ್ರ ಮಿತಿಗೊಳಿಸಿಕೊಳ್ಳಲಾಗಿದೆ.

ಕರ್ನಾಟಕ ರಾಜ್ಯದಲ್ಲಿನ ಜನಸಂಖ್ಯೆಯಲ್ಲಿ ಪರಿಶಿಷ್ಟರ (ಪ.ಜಾ + ಪ.ಪಂ) ಜನಸಂಖ್ಯೆಯ ಪ್ರಮಾಣ ಶೇ. ೨೦.೬೪. ಆದರೆ ದುಡಿಮೆಗಾರ ವರ್ಗದಲ್ಲಿ ಅವರ ಪ್ರಮಾಣ ಶೇ. ೨೨.೪೬ ರಷ್ಟಿದೆ. ಕೃಷಿ ಕಾರ್ಮಿಕರಲ್ಲಿ ಅವರ ಪ್ರಮಾಣ ಶೇ.೩೭ ರಷ್ಟಿದೆ. ಆದರೆ ಸಾಗುವಳಿದಾರರಲ್ಲಿ ಮತ್ತು ಅಕ್ಷರಸ್ಥರಲ್ಲಿ ಮಾತ್ರ ಪರಿಶಿಷ್ಟರ ಪ್ರಮಾಣ ಕ್ರಮವಾಗಿ ಶೇ. ೧೭.೩೧ ಮತ್ತು ಶೇ. ೧೩.೪೩ ರಷ್ಟಿದೆ. ಅಭಿವೃದ್ಧಿಯ ಖಂಡ ಸ್ವರೂಪವನ್ನು ಇಲ್ಲಿ ನೋಡಬಹುದು.

ಜನಸಂಖ್ಯೆಯಲ್ಲಿ ೧/೫ ರಷ್ಟಿರುವ ಪರಿಶಿಷ್ಟರು ದುಡಿಮೆಗಾರವರ್ಗದಲ್ಲಿ ಮತ್ತು ಕೃಷಿ ಕಾರ್ಮಿಕ ವರ್ಗದಲ್ಲಿ ೧/೫ಕ್ಕಿಂತ ಅಧಿಕ ಪಾಲು ಪಡೆದಿದ್ದರೆ ಸಾಗುವಳಿದಾರರಲ್ಲಿ ಮತ್ತು ಅಕ್ಷರಸ್ಥರಲ್ಲಿ ಕ್ರಮವಾಗಿ ೧/೫ಕ್ಕಿಂತ ಕಡಿಮೆ ಮತ್ತು ೧/೭ಕ್ಕಿಂತ ಕಡಿಮೆ ಪಾಲು ಪಡೆದಿದ್ದಾರೆ. ಅಭಿವೃದ್ಧಿಗೆ ಸಂದ ದುಡಿಮೆಯಲ್ಲಿ ಪರಿಶಿಷ್ಟರ ಪಾಲು ಜನಸಂಖ್ಯೆಯಲ್ಲಿನ ಅವರ ಪಾಲಿಗಿಂತ ಅಧಿಕವಾಗಿದೆ. ಆದರೆ ಅಭಿವೃದ್ಧಿಯು ಪಡೆಯುವ ಫಲಗಳಲ್ಲಿ ಮಾತ್ರ ಅವರ ಪಾಲು ಜನಸಂಖ್ಯೆಯಲ್ಲಿನ ಅವರ ಪಾಲಿಗಿಂತ ಕಡಿಮೆ ಇದೆ. ಸಮಾಜಕ್ಕೆ ಪರಿಶಿಷ್ಟರ ಕಾಣಿಕೆ ಅಪಾರವಾಗಿದೆ. ಆದರೆ ಸಮಾಜದಿಂದ ಅವರಿಗೆ ದೊರೆಯುವ ಪ್ರತಿಫಲ ನಿಕೃಷ್ಟವಾಗಿದೆ. ಅಖಂಡ ಸ್ವರೂಪ ಅಧ್ಯಯನಗಳು ಇಂತಹ ಸೂಕ್ಷ್ಮ ಸಂಗತಿಗಳನ್ನು ಮುಚ್ಚಿರುತ್ತವೆ. ಆದ್ದರಿಂದ ಅಭಿವೃದ್ಧಿಯನ್ನು, ಅದರ ವಿವಿಧ ಮುಖಗಳನ್ನು ಅಖಂಡವಾಗಿ ಪರಿಭಾವಿಸದೆ, ವಿವಿಧ ಸಾಮಾಜಿಕ ಗುಂಪುಗಳ ನೆಲೆಯಲ್ಲಿ ನೋಡುವುದು ವಿಹಿತ.

ಗದಗ ಜಿಲ್ಲೆಯ ದುಡಿಮೆಗಾರ ವರ್ಗವನ್ನು ಪರಿಶಿಷ್ಟರು (ಪ.ಜಾ + ಪ.ಪಂ) ಮತ್ತು ‘ಪರಿಶಿಷ್ಠೇತರು’ ಎಂದು ವರ್ಗೀಕರಿಸಬಹುದು. ಅಭಿವೃದ್ಧಿಗೆ ಸಂಬಂಧಿಸಿದ ಸೂಚಿಗಳನ್ನು ಅಖಂಡವಾಗಿ ನೋಡುವುದಕ್ಕೆ ಪ್ರತಿಯಾಗಿ ಖಂಡ ಸ್ವರೂಪದಲ್ಲಿ, ವಿವಿಧ ಸಾಮಾಜಿಕ ಗುಂಪುಗಳಾಗಿ ಪರಿಭಾವಿಸುವುದು ಅಗತ್ಯವೆಂದು ಅಮರ್ತ್ಯಸೇನ್ ಹೇಳುತ್ತಾರೆ. ‘ಅಖಂಡ ಸ್ವರೂಪ’ ಅಧ್ಯಯನ ವಿಧಾನಕ್ಕೆ ಪ್ರತಿಯಾಗಿ ಇಲ್ಲಿ ನಾವು ‘ಖಂಡ ಸ್ವರೂಪಿ’ ಅಧ್ಯಯನ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ.

ಕೋಷ್ಟಕ . – ಗದಗ ಜಿಲ್ಲೆಯ ದುಡಿಮೆಗಾರ ವರ್ಗದ ಸಾಮಾಜಿಕ ಸ್ವರೂಪ

೧. ಒಟ್ಟು ಜನಸಂಖ್ಯೆ
೨. ಪರಿಶಿಷ್ಟರ ಜನಸಂಖ್ಯೆ (ಪ.ಜಾ + ಪ.ಪಂ)
೩. ಪರಿಶಿಷ್ಟೇತರ ಜನಸಂಖ್ಯೆ
೮,೫೯,೦೪೨
೧,೩೯,೩೮೪ (೧೬.೨೩)
೭,೧೯,೬೫೮ (೮೬.೭೭)
೧. ಒಟ್ಟು ದುಡಿಮೆಗಾರವರ್ಗ
೨. ಪರಿಶಿಷ್ಟ ದುಡಿಮೆಗಾರವರ್ಗ
೩. ಪರಿಶಿಷ್ಟೇತರ ದುಡಿಮೆಗಾರವರ್ಗ
೩,೪೯,೪೭೭
೬೦,೪೦೦ (೧೭.೨೮)
೨,೮೯,೦೭೭ (೮೨.೭೨)
೧. ಒಟ್ಟು ಸಾಗುವಳಿದಾರರು
೨. ಪರಿಶಿಷ್ಟ ಸಾಗುವಳಿದಾರರು
೩. ಪರಿಶಿಷ್ಟೇತರ ಸಾಗುವಳಿದಾರರು
೧,೦೪,೧೮೬
೧೧,೩೬೯ (೧೦.೯೧)
೯೩,೮೧೭ (೮೯.೦೯)
೧. ಒಟ್ಟು ಕೃಷಿ ಕಾರ್ಮಿಕರು
೨. ಪರಿಶಿಷ್ಟ ಕೃಷಿ ಕಾರ್ಮಿಕರು
೩. ಪರಿಶಿಷ್ಟೇತರ ಕೃಷಿ ಕಾರ್ಮಿಕರು
೧,೪೮,೦೦೧
೩೬,೮೯೦ (೨೪.೯೩)
೧,೧೧,೧೧೧ (೭೫.೦೭)
೧. ಒಟ್ಟು ದುಡಿಮೆಗಾರವರ್ಗದ ದುಡಿಮೆ ಸಹಭಾಗಿತ್ವದ ಪ್ರಮಾಣ
೨. ಪರಿಶಿಷ್ಟ ದುಡಿಮೆಗಾರವರ್ಗದ ದುಡಿಮೆ ಸಹಭಾಗಿತ್ವ ಪ್ರಮಾಣ
೩. ಪರಿಶಿಷ್ಟೇತರ ದುಡಿಮೆಗಾರವರ್ಗದ ದುಡಿಮೆ ಸಹಭಾಗಿತ್ವ ಪ್ರಮಾಣ
ಶೇ. ೪೦.೬೮ಶೇ. ೪೩.೩೩

ಶೇ.೪೦.೧೭

೧. ಒಟ್ಟು ಕೃಷಿ ಕಾರ್ಮಿಕರ ದುಡಿಮೆ ಸಹಭಾಗಿತ್ವ ಪ್ರಮಾಣ
೨. ಪರಿಶಿಷ್ಟ ಕೃಷಿ ಕಾರ್ಮಿಕರ ದುಡಿಮೆ ಸಹಭಾಗಿತ್ವ ಪ್ರಮಾಣ
೩. ಪರಿಶಿಷ್ಟೇತರ ಕೃಷಿ ಕಾರ್ಮಿಕರ ದುಡಿಮೆ ಸಹಭಾಗಿತ್ವ ಪ್ರಮಾಣ
ಶೇ. ೪೨.೩೫ಶೇ. ೬೧.೦೭

ಶೇ. ೩೮.೪೪

ಸೂಚನೆ: ಆವರಣದಲ್ಲಿ ಕೊಟ್ಟಿರುವ ಸಂಖ್ಯೆಗಳ ಶೇಕಡ ಪ್ರಮಾಣ        

ಗದಗ ಜಿಲ್ಲೆಯ ಜನಂಖ್ಯೆಯ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳನ್ನು ಕೋಷ್ಟಕ ೪.೩ರಲ್ಲಿ ವಿವರವಾಗಿ ನೀಡಲಾಗಿದೆ. ಗದಗ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣವು ಶೇ.೧೬.೨೩ರಷ್ಟಿದೆ. ಇದು ರಾಜ್ಯಮಟ್ಟದ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ಗದಗ ಜಿಲ್ಲೆಯ ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಶೇ.೧೬.೨೩ರಷ್ಟಿದ್ದರೆ ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ಪರಿಶಿಷ್ಟ ದುಡಿಮೆಗಾರ ವರ್ಗದ ಪ್ರಮಾಣ ಶೇ.೧೭.೨೮. ಇದೇ ರೀತಿ ಜಿಲ್ಲೆಯ ಸಾಗುವಳಿದಾರರಲ್ಲಿ ಪರಿಶಿಷ್ಟರ ಪ್ರಮಾಣ ಕೇವಲ ಶೇ. ೧೦.೯೧ರಷ್ಟಿದೆ. ಕೃಷಿ ಕಾರ್ಮಿಕರಲ್ಲಿ ಅವರ ಪ್ರಮಾಣ ಶೇ.೨೪.೯೩.

ಪರಿಶಿಷ್ಟ ಜನಸಂಖ್ಯೆಗೆ ಸಂಬಂಧಿಸಿದಂತೆ ದುಡಿಮೆ ಸಹಭಾಗಿತ್ವ ಪ್ರಮಾಣ ಶೇ.೪೩.೩೩ ರಷ್ಟಿದ್ದರೆ ಪರಿಶಿಷ್ಟೇತರ ಜನಸಂಖ್ಯೆಗೆ ಸಂಬಂಧಿಸಿದಂತೆ ಅದು ಕೇವಲ ಶೇ. ೪೦.೧೭. ಪರಿಶಿಷ್ಟ ಜನಸಂಖ್ಯೆಯಲ್ಲಿ ಕೃಷಿ ಕಾರ್ಮಿಕರ ದುಡಿಮೆ ಸಹಭಾಗಿತ್ವ ಪ್ರಮಾಣ ಶೇ. ೬೧.೦೭ರಷ್ಟಿದ್ದರೆ ಪರಿಶಿಷ್ಟೇತರರಲ್ಲಿ ಅದು ಕೇವಲ ಶೇ.೩೮.೪೪.

ಮೇಲಿನ ಎಲ್ಲ ವಿವರಗಳ ತಥ್ಯವೇನು ? ಇದರ ಇಂಪ್ಲಿಕೇಶನ್‌ಗಳೇನು ?

ದುಡಿಮೆಗಾರ ವರ್ಗದ ಪ್ರಮಾಣವು ಕಡಿಮೆ ಇರುವ ಪ್ರದೇಶಕ್ಕಿಂತ ಅದು ಅಧಿಕವಿರುವ ಪ್ರದೇಶದಲ್ಲಿ ಮತ್ತು ಕೃಷಿ ಕಾರ್ಮಿಕ ಪ್ರಮಾಣವು ಕಡಿಮೆಯಿರುವ ಪ್ರದೇಶಕ್ಕಿಂತ ಸಾಪೇಕ್ಷವಾಗಿ ಅಧಿಕವಾಗಿರುವ ಪ್ರದೇಶದಲ್ಲಿ ಬಡತನದ ತೀವ್ರತೆ ಅಧಿಕವಾಗಿರುತ್ತದೆ ಎಂಬುದನ್ನು ಈ ಹಿಂದೆ ತಿಳಿಸಲಾಗಿದೆ. ಇದೇ ಪ್ರಮೇಯವನ್ನು ಗದಗ ಜಿಲ್ಲೆಯ ಪರಿಶಿಷ್ಟ ಜನಸಂಖ್ಯೆ ಮತ್ತು ಪರಿಶಿಷ್ಟೇತರ ಜನಸಂಖ್ಯೆಗೆ ಅನ್ವಯಿಸಿದರೆ ನಮಗೆ ಮೇಲೆ ವಿವರಿಸಿರುವ ಚಿತ್ರವೇ ಗೋಚರಿ ಸುತ್ತದೆ. ಪರಿಶಿಷ್ಟ ಜನರ ಬದುಕು ಪರಿಶಿಷ್ಟೇತರ ಜನರ ಬದುಕಿಗಿಂತ ಹೆಚ್ಚಿನ ದುಸ್ಥಿತಿಯಿಂದ ಕೂಡಿದೆಯೆಂದು ಹೇಳಬಹುದು. ಇದನ್ನು ಹೇಳಲು ಅಂಕಿ – ಅಂಶಗಳ ಅಗತ್ಯ ಬೇಕಾಗಿಲ್ಲ. ಆದರೆ ಇಂತಹ ತೀರ್ಮಾನಗಳು ‘ಪಾಲಿಸಿ’ ದೃಷ್ಟಿಯಿಂದ ಮುಖ್ಯವಾಗಬೇಕಾದರೆ ಪುರಾವೆಗಳು ಬೇಕಾಗುತ್ತವೆ. ಅಂತಹ ಪುರಾವೆಗಳ ಆಧಾರದ ಮೇಲೆ ನಾವು ಗದಗ ಜಿಲ್ಲೆಯಲ್ಲಿ ಪರಿಶಿಷ್ಟರ ಬದುಕು ಸಾಮೇಕ್ಷವಾಗಿ ಹೆಚ್ಚಿನ ದುಸ್ಥಿತಿಯಿಂದ ಕೂಡಿದೆಯೆಂದು ಹೇಳಬಹುದು.

ದುಡಿಮೆಗಾರ ತ್ರಿವಲಯವಾರು ಪ್ರಮಾಣ

ಕೋಷ್ಟಕ ೪.೪ರಲ್ಲಿ ಪರಿಶಿಷ್ಟ ಜನಸಂಖ್ಯೆ ಹಾಗೂ ಒಟ್ಟು ಜನಸಂಖ್ಯೆಗೆ ಸೇರಿದ ದುಡಿಮೆಗಾರ ತ್ರಿವಲಯವಾರು ಸ್ವರೂಪವನ್ನು ತೋರಿಸಲಾಗಿದೆ. ಈ ಕೋಷ್ಟಕವು ಅನೇಕ ರೀತಿಯಲ್ಲಿ ಮಹತ್ವದ್ದಾಗಿದೆ. ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ದುಡಿಮೆ ಗಾರರ ಪ್ರಾಥಮಿಕ ವಲಯದ ಅವಲಂಬನೆ ಶೇ. ೭೩.೯೫ರಷ್ಟಿದ್ದರೆ ಪರಿಶಿಷ್ಟ ಜನಸಂಖ್ಯೆಯ ದುಡಿಮೆಗಾರರಲ್ಲಿ ಅದು ಶೇ. ೮೦.೩೨ರಷ್ಟಿದೆ.

ಕೋಷ್ಟಕ .೪: ದುಡಿಮೆಗಾರ ವರ್ಗದ ತ್ರಿವಲಯವಾರು ಸ್ವರೂಪ

 

ವರ್ಗ

ಪ್ರಾಥಮಿಕ ವಲಯ

ದ್ವಿತೀಯ ವಲಯ

ತೃತೀಯ ವಲಯ

ಪರಿಶಿಷ್ಟರು (ಪ.ಜಾ+ಪ.ಪಂ)
ಒಟ್ಟು ಜನಸಂಖ್ಯೆ
ಶೇ. ೮೦.೩೨
ಶೇ. ೭೩.೯೫
ಶೇ. ೯.೯೪
ಶೇ. ೧೦.೩೪
ಶೇ. ೯.೭೪
ಶೇ. ೧೫.೭೧

ಒಟ್ಟು ಜನಸಂಖ್ಯೆಯಲ್ಲಿ ಪ್ರಾಥಮಿಕೇತರ ವಲಯದ ಅವಲಂಬನೆ ಶೇ. ೨೬.೦೫ರಷ್ಟಿದ್ದರೆ ಪರಿಶಿಷ್ಟರಲ್ಲಿ ಅದು ಕೇವಲ ಶೇ.೧೯.೬೮ರಷ್ಟಿದೆ. ತ್ರಿವಲಯವಾರು ರಚನೆಯಲ್ಲಿ ಪರಿಶಿಷ್ಟ ಜನಸಂಖ್ಯೆಗೆ ಸಂಬಂಧಿಸಿದಂತೆ ಬದಲಾವಣೆಯು ಅತ್ಯಂತ ಮಂದಗತಿಯಲ್ಲಿ ನಡೆಯುತ್ತಿದೆ. ಈ ಬಗೆಯ ತ್ರಿವಲಯವಾರು ಸ್ವರೂಪದ ಆಧಾರದ ಮೇಲೆ ಬಡತನದ ತೀವ್ರತೆಯು ಪರಿಶಿಷ್ಟ ಜನಸಂಖ್ಯೆಯಲ್ಲಿ ಸಾಪೇಕ್ಷವಾಗಿ ಅಧಿಕವಾಗಿದೆಯೆಂದು ಹೇಳಬಹುದು. ಪ್ರಾಥಮಿಕೇತರ ವಲಯ ಗಳನ್ನು ಪ್ರವೇಶಿಸಲು ಪರಿಶಿಷ್ಟ ಜನಸಂಖ್ಯೆಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಪ್ರಾಥಮಿಕೇತರ ವಲಯ ಪ್ರವೇಶಿಸಲು ಶಿಕ್ಷಣದ ಅವಶ್ಯಕತೆಯಿದೆ. ಗದಗ ಜಿಲ್ಲೆಯಲ್ಲಿ ಪರಿಶಿಷ್ಟ ಜನಸಂಖ್ಯೆಯಲ್ಲಿ ಸಾಕ್ಷರತೆ ಪ್ರಮಾಣ ಕೇವಲ ಶೇ. ೩೩.೮೯. ಆದರೆ ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಸಾಕ್ಷರತೆ ಪ್ರಮಾಣ ಗದಗ ಜಿಲ್ಲೆಯಲ್ಲಿ ಶೇ. ೫೫.೮೮.

ಭಾಗ – ದುಡಿಮೆಗಾರವರ್ಗದಲಿಂಗಸ್ವರೂಪ

“….enlightened government action is essential to help realise the full potential of Indian female labour force. This challenge has to be met by policy makers, planners and administrators. Otherwise not only will the desired rate of economic growth fail to be realized, but over all social development will be adversely affected”.
T. Scarlett Epstein (1996)
‘Culture, Women and Indian Development’(P.53)

“The suppression of women from participation in social, political and economic life hurts the people as a whole, not just women”.
Jean Dreze and Amartya Sen (1995)
 India, Economic Development and a Social opportunity, (P.178)

ಜಿಲ್ಲಾ ಅಭಿವೃದ್ಧಿ ಅಧ್ಯಯನವನ್ನು ಲಿಂಗಸಂವೇದಿಯನ್ನಾಗಿ ರೂಪಿಸಲು ಪ್ರಯತ್ನಿಸಲಾಗಿದೆ ಎಂಬ ಮಾತನ್ನು ಮೊದಲೆ ತಿಳಿಸಲಾಗಿದೆ. ಈ ಅಧ್ಯಯನದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಯ ಲಿಂಗ ಸ್ವರೂಪವನ್ನು ಹಿಡಿದಿಡಲು ಪ್ರಯತ್ನಿಸ ಲಾಗಿದೆ. ಪ್ರಸ್ತುತ ಭಾಗಲದಲ್ಲಿ ದುಡಿಮೆಗಾರವರ್ಗದ ಲಿಂಗಸ್ವರೂಪವನ್ನು ಹಿಡಿದಿಡಲು ಪ್ರಯತ್ನಿಸಲಾಗಿದೆ. ಜನಸಂಖ್ಯೆ ಯಲ್ಲಿ ಮತ್ತು ಮತದಾರರಲ್ಲಿ ಸರಿ ಸುಮಾರು ಅರ್ದದಷ್ಟಿರುವ ಮಹಿಳೆಯರ ದುಡಿಮೆಯಲ್ಲಿನ ಸಹಭಾಗಿತ್ವ ಅಭಿವೃದ್ಧಿಯ ದೃಷ್ಟಿಯಿಂದ ತುಂಬ ಮಹತ್ವದ್ದಾಗಿದೆ. ಸಮಾಜವು ಪುರುಷಶಾಹಿಯಿಂದ ಮೆರೆಯುತ್ತಿದೆ. ಅದೇ ರೀತಿ ಅಭಿವೃದ್ಧಿಯ ‘ಏಕ ಲಿಂಗಿ’ಯೂ, ಲಿಂಗತಾರಮ್ಯವಾದಿಯೂ ಆಗಿರುವ ದುರಂಪ ನಮ್ಮ ಎದುರಿಗಿದೆ. ಅಭಿವೃದ್ಧಿಯನ್ನು ಕುರಿತ ಸಿದ್ಧಾಂತಗಳು ಪುರುಷಶಾಹಿತ್ವದಿಂದ ಮುಕ್ತವಾಗಿಲ್ಲ.

ನಮ್ಮ ಸಮಾಜದ ಸಂದರ್ಭದಲ್ಲಿ ಮಹಿಳೆಯರ ಕರ್ತೃತ್ವ ಶಕ್ತಿಯನ್ನು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಒಳಗು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಏಕೆಂದರೆ ಮಹಿಳೆಯರು ಸಮಾಜದಲ್ಲಿ ತಾರತಮ್ಯಕ್ಕೆ, ಪಕ್ಷಪಾತಕ್ಕೆ ಮತ್ತು ದಮನಕ್ಕೆ ಒಳಗಾಗಿದ್ದಾರೆ. ಮಹಿಳೆಯರ ದುಡಿಮೆಯನ್ನು ದುಡಿಮೆಯೆಂದು ಪರಿಗಣಿಸಲು ಸಮಾಜ ಮತ್ತು ಪುರುಷ ವರ್ಗ ಸಿದ್ಧವಿಲ್ಲ. ಜನಸಂಖ್ಯೆಯಲ್ಲಿ ಸರಿ ಸುಮಾರು ಅರ್ಧದಷ್ಟಿರುವ ಮಹಿಳೆಯರ ಅಭಿವೃದ್ಧಿ ಸಾಮರ್ಥ್ಯವು ಪೋಲಾಗಿ ಹೋಗುತ್ತಿದೆ. ಇದರಿಂದ ಇಡೀ ಸಮಾಜಕ್ಕೆ ಧಕ್ಕೆ ತಟ್ಟಿದೆ. ನಮ್ಮ ಸಮಾಜದ ಅಭಿವೃದ್ಧಿಯು ಕುಂಟಿತ ಕೊಂಡಿದ್ದರೆ, ಅದಕ್ಕೆ ಒಂದು ಮುಖ್ಯ ಕಾರಣವೆಂದರೆ ಮಹಿಳೆಯರ ಅಭಿವೃದ್ಧಿ ಸಾಮರ್ಥ್ಯವು ಬಳಕೆಯಾಗದಿರುವುದು ಎನ್ನುವುದು ಅನೇಕ ಅಧ್ಯಯನ ಗಳು ಗುರುತಿಸಿವೆ. ಮಹಿಳೆಯರ ಅಭಿವೃದ್ಧಿ ಸಾಮರ್ಥ್ಯವನ್ನು ಅವರ ದುಡಿಮೆಯನ್ನು ಒಳಮಾಡಿಕೊಳ್ಳದಿರುವುದರಿಂದ ಮಹಿಳೆಯರಿಗೆ ಉಂಟಾಗುವ ಹಾನಿಗಿಂತ ಆರ್ಥಿಕತೆಗೆ ಉಂಟಾಗುವ ಧಕ್ಕೆ ಅಪಾರವಾದುದು. ಈ ಬಗ್ಗೆ ಜೀನ್ ಡ್ರೀಜ್ ಮತ್ತು ಅಮರ್ತ್ಯಸೇನ್ ಹೀಗೆ ಬರೆಯುತ್ತಾರೆ.

“The emancipation of women is an integral part of social progress, not just a women’s issue” (1995; p. 178)

ಅವರು ಲಿಂಗ ಸಂಬಂಧಿ ಅಸಮಾನತೆ, ತಾರತಮ್ಯ, ಮಹಿಳೆಯರ ದಮನ ಮುಂತಾದವುಗಳನ್ನು ‘ಸಾಮಾಜಿ ವೈಫಲ್ಯ’ ಎಂದು ಕರೆದಿದ್ದಾರೆ.

ಲಿಂಗ ಸಂಬಂಧಿ ತಾರತಮ್ಯಗಳಿಂದ, ಅಸಮಾನತೆಗಳಿಂದ ಹಾಗೂ ದಮನದಿಂದ ಮಹಿಳೆಯರು ಒಂದು ರೀತಿಯ ಅಧೀನ ಸ್ಥಿತಿಯಲ್ಲಿದ್ದಾರೆ. ಈ ಬಗೆಯ ತಾರತಮ್ಯ ಪಕ್ಷಪಾತ ಮತ್ತು ದಮನ ನಮ್ಮ ಸಮಾಜದ ಮೂಲದಲ್ಲಿ ಗಟ್ಟಿಯಾಗಿ ನೆಲೆಯೂರಿ ಬಿಟ್ಟಿದೆ. ಈ ಲಿಂಗ ತಾರತಮ್ಯಗಳು, ಲಿಂಗ ಅಸಮಾನತೆಗಳು ಎಷ್ಟು ತೀವ್ರವಾಗಿದೆಯೆಂದರೆ ಭಾರತದ ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣವು ಸಾಪೇಕ್ಷವಾಗಿ ಕಡಿಮೆಯಾಗುತ್ತ ನಡೆದಿದೆ. ೧೯೬೧ರಲ್ಲಿ ಕರ್ನಾಟಕದಲ್ಲಿ ಲಿಂಗಪರಿಮಾಣವು (Sex Ratio) ೯೫೯ ಇತ್ತು. ೧೯೯೧ರಲ್ಲಿ ಇದು ೯೬೦ಕ್ಕೆ ಇಳಿದಿದೆ. ನಮ್ಮ ಸಮಾಜದ ಸಂದರ್ಭ ದಲ್ಲಿ ಲಿಂಗ ತಾರತಮ್ಯವು ಉಂಟುಮಾಡುತ್ತಿರುವ ಹಾನಿಗಳಿಗೆ ಮಹಿಳೆಯರ ಪ್ರಮಾಣ ಜನಸಂಖ್ಯೆಯಲ್ಲಿ ಸಾಪೇಕ್ಷವಾಗಿ ಕಡಿಮೆಯಾಗುತ್ತಿರುವುದೆ ಸಾಕ್ಷಿ, ಎನ್ನುತ್ತಾರೆ ಅಮರ್ತ್ಯಸೇನ್.

ಕರ್ನಾಟಕದ ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ೧೯೯೧ರಲ್ಲಿ ಶೇ.೪೮.೯೭ರಷ್ಟಿತ್ತು. ಆದರೆ ರಾಜ್ಯದ ಒಟ್ಟು ಅಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣ ಕೇವಲ ೩೮.೭೫. ರಾಜ್ಯದ ಒಟ್ಟು ದುಡಿಮೆಗಾರ ವರ್ಗದಲ್ಲಿ ಮಹಿಳೆಯರ ಪ್ರಮಾಣ ಶೇ.೮೫.೯೫. ಈ ದುಡಿಮೆಗಾರ ವರ್ಗದಲ್ಲಿ ಕೃಷಿಯಲ್ಲಿ ದುಡಿಯುವ ಮಹಿಳೆಯರ ಪ್ರಮಾಣ ಶೇ.೭೫.೪೦. ಕರ್ನಾಟಕದಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ಅವಲಂಬಿಸಿಕೊಂಡಿರುವ ಪಹಿಳೆಯರ ಪ್ರಮಾಣ ಶೇ.೧೯.೩೧. ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣ ಶೇ.೨೨.೭೩. ಮಹಿಳೆಯರು ಪೂರ್ಣ ಪ್ರಮಾಣದಲ್ಲಿ ದುಡಿಮೆಯಲ್ಲಿ ತೊಡಗಿದ್ದರೂ ಅವರ ದುಡಿಮೆ ಸಹಭಾಗಿತ್ವ ಪ್ರಮಾಣ ಶೇ.೨೨.೭೩. ಮಹಿಳೆಯರ ಅನೇಕ ಬಗೆಯ ದುಡಿಮೆಯನ್ನು ದುಡಿಮೆಯೆಂದು ಪರಿಗಣಿಸದೆ ಇರುವುದು ಇದಕ್ಕೆ ಕಾರಣವಾಗಿದೆ. ಈ ಬಗೆಯ ಲಿಂಗ ತಾರತಮ್ಯ, ಲಿಂಗ ಅಸಮಾನತೆ ಯನ್ನು ಜಿಲ್ಲಾ ಮಟ್ಟದಲ್ಲೂ ನೋಡಬಹುದು.

ಗದಗ ಜಿಲ್ಲೆಯ ಜನಸಂಖ್ಯೆ ೮.೫೯ ಲಕ್ಷ, ಇದರಲ್ಲಿ ಮಹಿಳೆಯರ ಸಂಖ್ಯೆ ೪.೨೩ ಲಕ್ಷ (ಶೇ.೪೯.೨೧). ಈ ಜಿಲ್ಲೆಯಲ್ಲಿನ ದುಡಿಮೆಗಾರ ವರ್ಗದ ಸಂಖ್ಯೆ ೩.೪೯ ಲಕ್ಷ. ಇವರಲ್ಲಿ ಮಹಿಳೆಯರ ಸಂಖ್ಯೆ ೧.೨೧ ಲಕ್ಷ (ಶೇ.೩೪.೫೦). ಗದಗ ಜಿಲ್ಲೆಯಲ್ಲಿನ ಕೃಷಿ ಕಾರ್ಮಿಕರ ಸಂಖ್ಯೆ ೧.೪೮ ಲಕ್ಷ. ಇವರಲ್ಲಿ ಮಹಿಳೆಯರ ಪ್ರಮಾಣ ಶೇ.೫೩.೪.

ಇದರಿಂದ ಸ್ಪಷ್ಟವಾಗುವ ಸಂಗತಿಯೇನೆಂದರೆ ಗದಗ ಜಿಲ್ಲೆಯ ದುಡಿಮೆಗಾರ ವರ್ಗದಲ್ಲಿ ಮಹಿಳೆಯರ ಪಾಲು ಮತ್ತು ಪಾತ್ರ ಗಣನೀಯವಾದುದಾಗಿದೆ. ದುಡಿಮೆಗಾರ ವರ್ಗದಲ್ಲಿ ಮಹಿಳೆಯರ ಪಾಲು ೧/೩ಕ್ಕಿಂತ ಅಧಿಕವಾಗಿದೆ. ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣವು ಅರ್ಧಕ್ಕಿಂತ ಅಧಿಕವಾಗಿದೆ. ಇದಲ್ಲದೆ ಮಹಿಳೆಯರ ದುಡಿಮೆಯಲ್ಲಿ ಬಹಪಾಲು ಕ್ರಮರಹಿತವೂ, ಅಗೋಚರವೂ, ಅವ್ಯಕ್ತವೂ ಆಗಿರುತ್ತದೆ.

ಮೂರು ಬಗೆಯ ದುಡಿಮೆ

ಮಹಿಳೆಯರು ನಿರ್ವಹಿಸುತ್ತಿರುವ ದುಡಿಮೆಯು ಮೂರು ಬಗೆಯದಾಗಿರುತ್ತದೆ. ಮೊದಲನೆಯದು ಉತ್ಪಾದನಾ ದುಡಿಮೆ. ಎರಡನೆಯದು ಕೌಟುಂಬಿಕ ದುಡಿಮೆ ಮತ್ತು ಮೂರನೆಯದು ಸಂತಾನೋತ್ಪತ್ತಿ ದುಡಿಮೆ.ಈ ಮೂರು ಬಗೆಯ ದುಡಿಮೆ ಗಳಲ್ಲಿ ಮೊದಲನೆಯದು ಸ್ತ್ರೀ – ಪುರಷರಿಬ್ಬರಿಗೂ ಸಮಾನವಾದುದು.ಆದರೂ ಇಲ್ಲಿ ಕೂಲಿಯಲ್ಲಿ ಲಿಂಗ ತಾರತಮ್ಯ ವಿರುತ್ತದೆ. ಎರಡನೆಯದರಲ್ಲಿ ಮಹಿಳೆಯ ದುಡಿಮೆಯ ಪ್ರಮಾಣವು ಪುರುಷರ ದುಡಿಮೆ ಪ್ರಮಾಣಕ್ಕಿಂತ ಅಧಿಕವಾಗಿರು ತ್ತದೆ. ಮೂರನೆಯ ಬಗೆಯ ದುಡಿಮೆ – ಇದನ್ನು ಎಮೂಷನಲ್ ದುಡಿಮೆ ಎಂದೂ ಕರೆಯುತ್ತಾರೆ. ಇದು ಸಂಪೂರ್ಣವಾಗಿ ಮಹಿಳೆಯ ಕರ್ಮಕ್ಷೇತ್ರವಾಗಿದೆ. ಹೀಗೆ ದುಡಿಮೆಯಲ್ಲಿ ಸ್ತ್ರೀ – ಪುರುಷರ ನಡುವೆ ಅಪಾರ ಅಂತರಗಳಿವೆ. ಮೂರು ಬಗೆಯ ದುಡಿಮೆಯನ್ನು ನಿರ್ವಹಿಸಬೇಕಾಗಿರುವುದರಿಂದ ನಮ್ಮ ಸಮಾಜದ ಸಂದರ್ಭದಲ್ಲಿ ಮಹಿಳೆಯರು ಪ್ರತಿದಿನ ‘ಎರಡು ದುಡಿಮೆ’ ದಿನಗಳಲ್ಲಿ ಬದುಕುತ್ತಿದ್ದಾರೆ. ವ್ತಕ್ತ ಹಾಗೂ ಅವ್ಯಕ್ತ ದುಡಿಮೆಯನ್ನುಮ ಪರಿಗಣಿಸಿದ್ದಾರೆ. ಅಭಿವೃದ್ಧಿಗೆ ಮಹಿಳೆ ಯರ ಕಾಣಿಕೆ ಅಪಾರವಾಗಿರುವುದು ಕಂಡು ಬರುತ್ತದೆ. ಗದಗ ಜಿಲ್ಲೆಯಲ್ಲಿ ವ್ಯಕ್ತವಾಗಿ ದುಡಿಮೆಯಲ್ಲಿ ೧/೩ರಷ್ಟು ಪಾಲು ಮಹಿಳೆಯರು ನೀಡುತ್ತಿದ್ದಾರೆ. ಅವರ ಅವ್ಯಕ್ತ ದುಡಿಮೆ, ಸಂತಾನೋತ್ಪತ್ತಿ ದುಡಿಮೆಯನ್ನು ಗಣನೆ ಮಾಡಿದರೆ ದುಡಿಮೆ ಯಲ್ಲಿ ಅವರ ಪಾಲು ಜನಸಂಖ್ಯೆಯಲ್ಲಿ ಅವರ ಪಾಲು ಎಷ್ಟಿದೆಯೋ ಅದಕ್ಕೆ ಸರಿಸಮವಾಗಿದೆಯೆಂದು ಹೇಳಬಹುದು.

ಮಹಿಳಾ ಕೃಷಿ ಕಾರ್ಮಿಕರು

ಪುರುಷವರ್ಗಕ್ಕಿಂತಲೂ ಮಹಿಳಾ ವರ್ಗದಲ್ಲಿ ಕೃಷಿಯ ಅವಲಂವನೆ ಅಧಿಕವಾಗಿದೆ. ಕರ್ನಾಟಕವು ೧೨ ಜಿಲ್ಲೆಗಳಲ್ಲಿ ಮಾತ್ರ ಕೃಷಿ ಕಾರ್ಮಿಕರಲ್ಲಿ ಪುರುಷರ ಪ್ರಮಾಣಕ್ಕಿಂತ ಮಹಿಳೆಯರ ಪ್ರಮಾಣವು ಅಧಿಕವಾಗಿದೆ. ಕೃಷಿಕಾರ್ಮಿಕ ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣ ಗದಗ ಜಿಲ್ಲೆಯಲ್ಲಿ ಶೇ.೬೫.೫೫. ರಾಜ್ಯಮಟ್ಟದಲ್ಲಿ ಇದು ಕೇವಲ ಶೇ.೪೯.೬೮. ಗದಗ ಜಲ್ಲೆಯಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವ ಮಹಿಳಾ ದುಡಿಮೆಗಾರರ ಪ್ರಮಾಣ ಶೇ.೮೭.೨೦. ಆದರೆ ಪುರುಷರಲ್ಲಿ ಅದು ಕೇವಲ ಶೇ.೬೪.೨೪.

ಬಡತನದ ಪ್ರಮಾಣ ಹಾಗೂ ತೀವ್ರತೆಯು ಕೃಷಿ ಕಾರ್ಮಿಕ ವರ್ಗದಲ್ಲಿ ಮಡುಗಟ್ಟಿಕೊಂಡಿದೆ ಎಂದು ಹೇಳಬಹುದು. ಎಲ್ಲಿಯವರೆಗೆ ಕೃಷಿ ಮೇಲೆ ಅತಿಯಾದ ಅವಲಂಬನೆ ಕಡಿಮೆಯಾಗುವುದಿಲ್ಲವೊ ಅಲ್ಲಿಯವರೆಗೆ ಮಹಿಳೆಯರ ಬದುಕು ಉತ್ತಮಗೊಳ್ಳುವುದು ಸಾಧ್ಯವಿಲ್ಲ. ಇದರ ಇಂಪ್ಲಿಕೇಷನ್ ಏನೆಂದರೆ ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಸಬೇಕಾಗಿದೆ. ಪ್ರಾಥಮಿಕ ವಲಯದ ಅತಿಯಾದ ಅವಲಂಬನೆಯು ಕಡಿಮೆಯಾಗುವಂತೆ ಮಾಡಬೇಕು.