ಗದಗ ಜಿಲ್ಲೆಯು ಪೌರಾಣಿಕವಾಗಿ ಹಾಗೂ ಚಾರಿತ್ರಿಕವಾಗಿ ಬಹಳ ಪ್ರಸಿದ್ಧವಾದ ಜಿಲ್ಲೆಯಾಗಿದೆ. ಪ್ರಾಚೀನ ಕಾಲದಿಂದಲೂ ವಿಶಿಷ್ಟ ಸ್ಥಾನ ಪಡೆದುಕೊಂಡು ಬಂದಿರುವ ಈ ಜಿಲ್ಲೆಯು ಯಾವ ಅರಸು ಮನೆತನಗಳ ಖಾಯಂ ರಾಜಧಾನಿಯಾಗದಿದ್ದರೂ ಸಾಮ್ರಾಜ್ಯಗಳ ತಿರುಳುನಾಡಾಗಿ ರಾಜಕೀಯ, ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿ ಚರಿತ್ರೆಯಲ್ಲಿ ವಿಜೃಂಭಿಸಿದೆ. ಇಲ್ಲಿ ಅನೇಕ ದೇವಾಲಯಗಳು, ಅಗ್ರಹಾರಗಳು, ಕೆರೆಗಳು ರೂಪ ತಾಳಿದವು. ಹೀಗಾಗಿ ಗದಗ ಜಿಲ್ಲೆಯು ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಜೀವಂತ ಜಿಲ್ಲೆಯಾಗಿ ರೂಪಗೊಂಡಿದೆ. ಗದಗ ಮತ್ತು ಬೆಟಗೇರಿ ಎಂಬ ಎರಡು ಊರುಗಳಿಂದ ಅಸ್ತಿತ್ವಕ್ಕೆ ಬಂದಿರುವ ಈ ಜಿಲ್ಲೆಯ ಕೇಂದ್ರ ಸ್ಥಾನ ಅತ್ಯಂತ ಪುರಾತನವಾದ ಸ್ಥಳವಾಗಿದೆ. ಹಲವು ಶಾಸನಗಳಲ್ಲಿ, ಗದಗವನ್ನು ‘ಗಲದುರ್ಗ’ ಕಲ್‌ದರ್ಗ, ಗರದುರ್ಗ, ಕರ್ತಕ, ಕೃತಪುರ ಹಾಗೂ ಗದಗು ಎಂದು ವಿಧವಿಧವಾಗಿ ವಿವರಿಸಲಾಗಿದೆ. ಕ್ರಿ.ಶ.೧೦೦೨ರ ಅಹವಮಲ್ಲನ ತ್ರಿಕೂಟೇಶ್ವರ ದೇವಾಲಯದಲ್ಲಿನ ಶಾಸನಗಳಲ್ಲಿ ‘ಕದ್ಬುರ್ಗಿಗೆ’ ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ. ಗದುಗಿನ ಭಾಗವಾಗಿರುವ ಬೆಟಗೇರಿಯು ‘ಬಟ್ಟಗೆರೆ’ ಎಂದು ರಾಷ್ಟ್ರಕೂಟರ ಇಂದ್ರನ ಕ್ರಿ.ಶ.೯೧೮ರ ಶಾಸನದಲ್ಲಿ ಉಲ್ಲೇಖಗೊಂಡಿದೆ. ಈ ಶಾಸನದ ಕಲ್ಲು ಗದುಗಿನ ವೀರನಾರಾಯಣ ದೇವಾಲಯದ ಉತ್ತರ ಪ್ರಾಕಾರದ ಗೋಡೆಯಲ್ಲಿ ಕಂಡು ಬಂದಿದೆ. ಗದಗ ಜಿಲ್ಲೆಯು ಪೌರಾಣಿಕವಾಗಿಯೂ ಪ್ರಸಿದ್ಧವಾಗಿದೆ. ಲಕ್ಕುಂಡಿಯನ್ನು ಶ್ರೀರಾಮ ನಿರ್ಮಿತ ಮಹಾ ಗ್ರಾಮವೆಂದು ರಾಮಾಯಣದ ಶ್ರೀರಾಮನ ಜೊತೆ ಸೇರಿಸಿ ೧೧ – ೧೨ನೆಯ ಶತಮಾನದ ಶಾಸನಗಳು ಹೇಳುತ್ತವೆ. ರೋಣವು ದ್ರೋಣಪುರವಾಗಿತ್ತೆಂದು ನಂಬಲಾಗಿದೆ. ದ್ರೋಣನದೆನ್ನಲಾದ ಒಂದು ಪ್ರತಿಮೆಯೂ ಅಲ್ಲಿನ ಬಸವ ದೇವಾಲಯದಲ್ಲಿದೆ ದ್ರೋಣ ಎಂಬ ಹೆಸರಿನಿಂದ ರೋಣ ನಿಷ್ಪತ್ತಿಯಾಯಿತೆಂದು ಅಭಿಪ್ರಾಯವಿದೆ. ಗದಗವನ್ನು ಕೃತಪುರವೆಂದೂ ಜನಮೇಜಯನು ಯಜ್ಞ ಮಾಡಿದ ಸ್ಥಳವೆಂದೂ ಅವನೆ ಅಲ್ಲಿನ ಅಗ್ರಹಾರವನ್ನು ಸ್ಥಾಪಿಸಿದನೆಂದು ಹೇಳಿಕೆಗಳಿವೆ. ಗದಗ ಜಿಲ್ಲೆಯಲ್ಲಿ ಇತಿಹಾಸ ಪೂರ್ವದಲ್ಲಿನ ಜನರು ಬಳಸುತ್ತಿದ್ದ ವಸ್ತುಗಳ ಅವಶೇಷಗಳು ದೊರಕಿವೆ. ಶಿಲಾಯುಗದ ಮಾನವರ ಅಲೆಮಾರಿ ಜೀವನ ಕೊನೆಯಾಗಿ ಕೃಷಿ ಪಶುಪಾಲನೆ ಆರಂಭಿಸಿದಾಗ ಅವರು ಬಳಸುತ್ತಿದ್ದ ಕಪ್ಪು, ಬಿಳಿ, ಕೆಂಪು ಅಥವ ಬೂದು ಬಣ್ಣದ ಮಡಿಕೆ ಕುಡಿಕೆಗಳನ್ನೊಳಗೊಂಡ ಆ ಕಾಲದ ನಿವೇಶನಗಳು ನರಗುಂದ ಮತ್ತು ರೋಣ ತಾಲ್ಲೂಕುಗಳಲ್ಲಿ ದೊರೆತಿವೆ. ಶಿಲಾಯುಗದ ನಂತರ ಕಬ್ಬಿಣದ ಬೃಹತ್ ಶಿಲಾ ಸಂಸ್ಕೃತಿಯ ಕಾಲದ ತಿಳಿ ಬಿಳಿ ಬಣ್ಣದ ಚಿತ್ರಗಳನ್ನೊಳಗೊಂಡ ಮಡಕೆಗಳು, ಕಬ್ಬಿಣದ ಬಾಣ, ಚಾಕು, ಬರ್ಜಿ ಮುಂತಾದವುಗಳ ಜೊತೆಗೆ ಸಂಗೀತ ಸಾಧನಗಳು ರೋಣ ತಾಲೂಕಿನಲ್ಲಿ ದೊರತಿವೆ. ಗದಗ ಜಿಲ್ಲೆಯಲ್ಲಿ ಅನೇಕ ಅರಸು ಮನೆತನಗಳು ಆಡಳಿತ ನಡೆಸಿ ಹೋಗಿವೆ. ಗದುಗಿನ ಹೊರವಲಯದಲ್ಲಿ ಕಂಡು ಬಂದಿರುವ ೧೦೭೨ರ ಶಾಸನವು ಮುಳಗುಂದದಲ್ಲಿ ಕಲ್ಯಾಣದ ಚಾಲುಕ್ಯ ಅರಸ ಎರಡನೆ ಸೋಮೇಶ್ವರನ ರಾಣಿ ಕಾಂಚಲದೇವಿ ಆಡಳಿತ ನಿರ್ವಹಣೆ ಮಾಡುತ್ತಿದ್ದಳೆಂದು ತಿಳಿಸುತ್ತದೆ. ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಗದಗ ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿತ್ತು. ನಂತರ ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಕಲಚೂರಿಗಳು, ಹೊಯ್ಸಳರ ಆಡಳಿತ ಸಾಗಿಬಂದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವಿಶೇಷ ಖ್ಯಾತಿಯನ್ನು ಪಡೆಯಿತು. ಕೃಷ್ಣದೇವರಾಯನ ಕಾಲದ ಕ್ರಿ.ಶ.೧೬೧೫ರ ಶಾಸನದಲ್ಲಿ ವೀರನಾರಾಯಣ ದೇವರಿಗೆ ನೀಡಿದ ಹಲವಾರು ದತ್ತಿ – ದಾನಗಳ ಬಗ್ಗೆ ಉಲ್ಲೇಖವಿದೆ. ಇಲ್ಲಿನ ಮತ್ತೊಂದು ಶಾಸನದಲ್ಲಿ ವೀರನಾರಾಯಣ ದೇವರು ಕುಮಾರವ್ಯಾಸನಿಗೆ ಒಲಿದ ವನೆಂದು, ಇಲ್ಲಿ ವಿಜಯನಗರದ ಅಚ್ಯುತರಾಯ ಆನಂದನಿಧಿ ವಿಧಿಯನ್ನು ನೆರವೇರಿಸದನೆಂದು ತಿಳಿಸುತ್ತದೆ. ಕುಮಾರ ವ್ಯಾಸನ ಬಗೆಗೆ ಉಲ್ಲೇಖವಿರುವ ಪ್ರಥಮ ಶಾಸನ ಇದಾಗಿದೆ. ೧೭೬೬ರಲ್ಲಿ ಗದಗ ಬಿಜಾಪುರದ ವಶವಾಯಿತು. ವೆಲ್ಲೆಸ್ಲಿಯು ೧೭೯೯ರಲ್ಲಿ ಡಂಬಳಕೋಟೆಯನ್ನು ವಶಪಡಿಸಿಕೊಂಡ ನಂತರ ಆತನ ಆಳ್ವಿಕೆಗೆ ಒಳಪಟ್ಟಿದ್ದ ಡಂಬಳ ಗದಗ ಪ್ರದೇಶಗಳು ಪೇಶ್ವೆಯ ದಂಡಾಧಿಕಾರಿಗೆ ಮರಳಿ ನೀಡಲ್ಪಟ್ಟವು. ಕೊನೆಗೆ ಮರಾಠ ಯುದ್ಧದಲ್ಲಿ ಸರ್‌.ಥಾಮಸ್‌ ಮನ್ರೋ ಕ್ರಿ.ಶ.೧೮೧೮ರಲ್ಲಿ ಗದುಗಿನ ಮೇಲೆ ಎರಗಿದಾಗ ಅಲ್ಲಿನ ಕೋಟೆಯು ಅವನ ವಶವಾಯಿತು. ಅನಂತರ ಈ ಪ್ರದೇಶವು ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿತ್ತು. ಈಸ್ಟ್ ಇಂಡಿಯಾ ಕಂಪನಿ ಡೈರಕ್ಟರುಗಳ ತೀರ್ಮಾನದಂತೆ ೧೮೩೦ರಲ್ಲಿ ಧಾರವಾಡ ಜಿಲ್ಲೆಯನ್ನು ರಚಿಸಿ ಮುಂಬೈ ಪ್ರಾಂತಕ್ಕೆ ಸೇರಿಸಲಾಯಿತು. ಅಂದಿನ ಧಾರವಾಡ ಜಿಲ್ಲೆ ಬೆಳಗಾವಿ, ಬಿಜಾಪುರ, ಸೊಲ್ಲಾಪುರ ಜಿಲ್ಲೆಗಳ ಹಲವು ಜಿಲ್ಲೆಗಳನ್ನು ಒಳಗೊಂಡಿತ್ತು. ೧೮೬೬ರಲ್ಲಿ ಬೆಳಗಾವಿ ಜಿಲ್ಲೆಯು ಪ್ರತ್ಯೇಕಗೊಂಡಿತು. ನಂತರ ೧೮೫೭ರಲ್ಲಿ ನರ ಗುಂದಕ್ಕೆ ಸೇರಿದಮ ಕೆಲವು ಹಳ್ಳಿಗಳು ಬ್ರಿಟಿಷರ ವಶವಾದವು. ಅದೇ ಕಾಲದಲ್ಲಿ ಧಾರವಾಡ ಜಿಲ್ಲೆಯ ಮೂರು ಗ್ರಾಮಗಳನ್ನು ರಾಮದುರ್ಗ ತಾಲೂಕಿಗೂ ಹಾಗೂ ಹೈದರಾಬಾದು ರಾಜ್ಯಕ್ಕೆ ನಾಲ್ಕು ಗ್ರಾಮಗಳನ್ನು ವರ್ಗಾಯಿಸಲಾಯಿತು. ಹೈದರಾಬಾದು ರಾಜ್ಯದಿಂದ ೧೨ ಗ್ರಾಮಗಳನ್ನು ಧಾರವಾಡ ಜಿಲ್ಲೆಗೆ ಸೇರಿಸಲಾಯಿತು. ೧೯೬೨ರಲ್ಲಿ ಧಾರವಾಡ ಹುಬ್ಬಳ್ಳಿ ಪಟ್ಟಣಗಳನ್ನು ಸೇರಿಸಿ ಮಹಾನಗರವೆಂದು ಪರಿಗಣಿಸಲಾಯಿತು. ೧೯೫೧ರ ಜನಗಣತಿಯ ಪ್ರಕಾರ ಜಮಖಂಡಿ ಸಂಸ್ಥಾನಕ್ಕೆ ಸೇರಿದ್ದ ಕಮದೊಳ್ಳಿ, ಕುಂದಗೋಳು, ಸಂಶಿ ಮತ್ತು ೧೯೧೧ರ ಜನಗಣತಿಯಂತೆ ಪಟ್ಟಣವಾಗಿದ್ದ ಯಲವಾಳಿ ಕುಂದಗೋಳು ತಾಲೂಕಿನಲ್ಲಿವೆ. ೧೯೫೧ರ ವರೆಗೆ ಪಟ್ಟಣವಾಗಿದ್ದ ಕಿರೇಮಿರ್ಜಾದಲ್ಲಿದ್ದ ಗುಡಗೇರಿಯು ಸಹ ಕುಂದಗೋಳು ತಾಲೂಕಿಗೆ ಸೇರಿದೆ. ಹಿರೇ ಮಿರ್ಜಾ ಸಂಸ್ಥಾನಕ್ಕೆ ಸೇರಿದ್ದ ಶಿಗ್ಲಿ ಮತ್ತು ಈಗಲೂ ಪಟ್ಟಣವಾಗಿರುವ ಲಕ್ಷ್ಮೇಶ್ವರ ಮತ್ತು ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಶಿರಹಟ್ಟಿ ಪಟ್ಟಣಗಳು ಶಿರಹಟ್ಟಿ ತಾಲೂಕಿನಲ್ಲಿಯೇ ಇವೆ. ೧೭ ತಾಲೂಕುಗಳನ್ನೊಳಗೊಂಡಿದ್ದ ಧಾರವಾಡ ಜಿಲ್ಲೆಯನ್ನೂ ೧೯೯೭ರಲ್ಲಿ ವಿಭಜಿಸಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಾಗಿ ರಚಿಸಲಾಯಿತು. ಹೊಸದಾಗಿ ರಚನೆಯಾದ ಗದಗ ಜಿಲ್ಲೆಯು ಸಾಹಿತ್ಯ ಹಾಗೂ ನಾಟಕರಂಗಕ್ಕೆ ಮಹತ್ವವಾದ ಕೊಡುಗೆ ನೀಡಿದೆ. ಕುಮಾರವ್ಯಾಸನ ಸಾಹಿತ್ಯ ಸೃಷ್ಟಿ, ವೀರಶೈವ ಪಂಚಾಕ್ಷರಿ ಗವಾಯಿಗಳ ಪುಣ್ಯಾಶ್ರಮ, ಶ್ರೀ ತೋಂಟದಾರ್ಯ ಮಠದ ಜ್ಞಾನದಾಸೋಹ, ಪುಟ್ಟರಾಜ ಗವಾಯಿಗಳ ಸಂಗೀತ ಸೌರಭ, ಸಿದ್ಧಲಿಂಗ ಮಹಾಸ್ವಾಮಿಗಳ ವಿದ್ಯಾವಿಕಾಸ – ಗದುಗಿನ ಕೀರ್ತಿಗೆ ಕಿರೀಟದಂತಿವೆ. ಕನ್ನಡಿಗರಲ್ಲಿ ನಾಡ ಜಾಗೃತಿ ಮೂಡಿಸಿದ ಹುಯಿಲಗೋಳ ನಾರಾಯಣರಾಯರು, ಸಾಹಿತಿ ಕುಲಕರ್ಣಿ, ಭಾಷಾ ವಿದ್ವಾಂಸ ಡಾ. ಆರ್.ಸಿ. ಹಿರೇಮಠ, ನಾಟಕಕಾರ ಜಿ.ಬಿ. ಜೋಶಿ, ವಿಮರ್ಶಕ ಕೀರ್ತಿನಾಥ ಕುರ್ತು ಕೋಟಿ, ತ್ವರಿತ ಮುದ್ರಣದ ಫ.ಶಿ.ಬಾಂಡಗೆ ಇವರೆಲ್ಲಾ ಗದುಗಿನ ಸಾಹಿತ್ಯ ಪರಂಪರೆಗೆ ಕೊಡುಗೆ ನೀಡಿದ್ದಾರೆ. ರಂಗಭೂಮಿಯ ತವರು ಗದಗ. ಕನ್ನಡ ರಂಗಭೂಮಿಯ ತಾರೆಗಳಾದ ಶಾಂತಕವಿಗಳು, ಗರುಡ ಸದಾಶಿವರಾಯ, ಮಹಾಂತೇಶ ಶಾಸ್ತ್ರಿ, ಎಚ್.ಎಂ. ಹೂಗಾರ, ಸಂಗೀತ ಕ್ಷೇತ್ರದ ಪಂಡಿತ ಭೀಮಸೇನ ಜೋಶಿ, ಸಿದ್ಧರಾಮ ಜಂಬಲದಿನ್ನಿ ಮುಂತಾದವರು ಗದುಗಿಗೆ ಪ್ರಾಮುಖ್ಯತೆ ತಂದಿದ್ದಾರೆ. ಗದಗ ಜಿಲ್ಲೆಗೆ ಸೇರಿದ ಐದು ತಾಲೂಕುಗಳೂ ತಮ್ಮದೇ ಆದ ವೈಶಿಷ್ಟ್ಯ ಹೊಂದಿವೆ. ಗದಗ: ಇದು ಈಗ ಹೊಸ ಜಿಲ್ಲಾ ಕೇಂದ್ರವಾಗಿದೆ. ರಾಜ್ಯದಲ್ಲಿ ಚಾರಿತ್ರಿಕ ಹಾಗೂ ಪೌರಾಣಿಕ ಮಹತ್ವ ಹೊಂದಿರುವ ನಗರವಾಗಿದೆ. ಲಾಗಾಯ್ತಿನಿಂದಲೂ ಇದು ವ್ಯಾಪಾರ – ವಾಣಿಜ್ಯ ಕೇಂದ್ರವೂ ಆಗಿದೆ. ಸಾವಿರಾರು ವರ್ಷದ ಇತಿಹಾಸ ಈ ನಗರಕ್ಕಿದೆ. ಈ ನಗರದಲ್ಲಿರುವ ಪ್ರಮುಖ ದೇವಾಲಯಗಳೆಂದರೆ ತ್ರಿಕೂಟೇಶ್ವರ ದೇವಾಲಯ, ಸರಸ್ವತಿ ದೇವಾಲಯ, ಸೋಮೇಶ್ವರ ದೇವಾಲಯ ಮತ್ತು ವೀರನಾರಾಯಣ ದೇವಾಲಯ. ಇದೊಂದು ಪ್ರಸಿದ್ಧ ಸಾಂಸ್ಕೃತಿಕ ಕೇಂದ್ರವೂ ಆಗಿದೆ. ಸ್ವಾತಂತ್ರ್ಯಾನಂತರ ಇದೊಂದು ಕೈಗಾರಿಕಾ ಕೇಂದ್ರವಾಗಿಯೂ ಒಡಮೂಡುತ್ತಿದೆ. ಗದಗ – ಬೆಟಗೇರಿ ಎಂಬ ಎರಡು ಊರುಗಳಿಂದ ಕೂಡಿದ ಸಂಯುಕ್ತ ಪುರಸಭೆಯಿದೆ. ಗದಗದಂತೆ ಬೆಟಗೇರಿಯೂ ಪುರಾತನ ಸ್ಥಳವಾಗಿದೆ. ಶಿರಹಟ್ಟಿ: ತಾಲ್ಲೂಕು ಕೇಂದ್ರವಾಗಿರುವ ಶಿರಹಟ್ಟಿಯು ಚಾರಿತ್ರಿಕ ಮಹತ್ವ ಪಡೆದಿರುವ ಸ್ಥಳವಾಗಿದೆ. ಇದರ ಪ್ರಾಚೀನ ಹೆಸರು ‘ಶಿರಹಪುರ’. ಬಿಜಾಪುರದ ಸುಲ್ತಾನರ ಕಾಲದಲ್ಲಿ ಇದೊಂದು ಜಹಗೀರ್ ಆಗಿತ್ತು. ಇದನ್ನು ಲಕ್ಷ್ಮೇಶ್ವರದೊಂದಿಗೆ ಖಾನಗೌಡ ಎಂಬ ಶಿರಹಟ್ಟಿಯ ದೇಸಾಯಿಯು ೧೬೦೭ರಲ್ಲಿ ‘ದೇಸಗತಿ’ಯಾಗಿ ಪಡೆದನು.೧೭೫೬ರಲ್ಲಿ ಸವಣೂರ ನವಾಬನು ತನ್ನ ಸಂಸ್ಥಾನವನ್ನು ಮರಾಠ ಪೇಶ್ವೆಗಳಿಗೆ ಒಪ್ಪಿಸಿದಾಗಲೂ ಶಿರಹಟ್ಟಿಯ ದೇಸಾಯಿಗಳು ಮುಂದುವರಿದರು. ಕ್ರಿ.ಶ.೧೮೦೧ರಲ್ಲಿ ಇದು ಸಾಂಗ್ಲಿ ಸಂಸ್ಥಾನ ಭಾಗವಾಗಿ ಹೋಯಿತು. ಈ ಊರಿನಲ್ಲಿ ೧೯೭೮ರಲ್ಲಿ ಪುರಸಭೆ ಪ್ರಾರಂಭವಾಯಿತು. ಖಾನಗೌಡ ನಿರ್ಮಿಸಿದನೆಂದು ಹೇಳುವ ಶಿರಹಟ್ಟಿಯ ಶಿಥಿಲವಾದ ಕೋಟೆ ೧೯ ಅಡಿ ಎತ್ತರ, ೧೯ ಅಡಿ ದಪ್ಪವಿದ್ದು, ೧೯ ಬುರುಜುಗಳನ್ನು ಹೊಂದಿದ್ದವಂತೆ. ಈ ಊರಿನಲ್ಲಿರುವ ಅವ್ವಲಿಂಗಪ್ಪನ ಮಠ ಹಾಗೂ ಫಕೀರ ಸ್ವಾಮಿಗಳ ಮಠಗಳು ನೋಡತಕ್ಕ ಸ್ಥಳಗಳಾಗಿವೆ. ಅವ್ವಲಿಂಗವ್ವನ ಮಠವು ಸುಮಾರು ೩೦೦ ವರ್ಷಗಳಿಗೂ ಹಳೆಯದಾದ ಆಕರ್ಷಕ ಕಟ್ಟಡವಾಗಿದೆ. ರೋಣ: ರೋಣವು ಪ್ರಾಚೀನ ಕಾಲದಲ್ಲಿ ಪುಲಿಗೆರೆ ೩೦೦ಕ್ಕೆ ಸೇರಿದ್ದು ೧೦೪ ಮಹಾಜನರನ್ನು ಒಳಗೊಂಡಿದ್ದ ಅಗ್ರಹಾರವಾಗಿತ್ತು. ಈ ಊರಿನ ಪ್ರಾಚೀನ ಹೆಸರು ದ್ರೋಣಪುರ. ದ್ರೋಣರು ಇಲ್ಲಿಯೇ ಗುರುಕುಲ ನಡೆಸುತ್ತಿದ್ದರು. ಆದ್ದರಿಂದ ಈ ರೋಣ ಎಂಬ ಹೆಸರು ಬಂದಂತೆ ನಂಬಲಾಗಿದೆ. ಪ್ರಾಚೀನ ಶಿಲಾಶಾಸನಗಳು ದೊರೆತ ಈ ತಾಲೂಕಿ ನಲ್ಲಿ ಭಾವೈಕ್ಯತೆಯನ್ನು ಸಾರುವ ದೇವಾಲಯಗಳಿದ್ದು ಸೂಕಿ ಗ್ರಾಮದಲ್ಲಿ ನಾಣ್ಯಗಳನ್ನು ಮುದ್ರಿಸುವ ಟಂಕಸಾಲೆ ಇದ್ದುದು ಶಾಸನಗಳಿಂದ ತಿಳಿದು ಬಂದಿದೆ. ಮುಂಡರಗಿ: ಮುಂಡರಗಿಯ ಪ್ರಾಚೀನ ಹೆಸರು ಮೃಡಗಿರಿ. ಮುಂದೆ ಇದೆ ಮುಂಡರಗಿ ಆಯಿತೆಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿನ ನಮೀಪದ ಗುಡ್ಡವನ್ನೇ ಮೃಡಗಿರಿ ಎಂದು ಕರೆಯುತ್ತಾರೆ. ಡಾ. ಕಲ್ಬುರ್ಗಿಯವರು ಇದು ಜನಾಂಗ ವಾಚಿ ಎಂದು ಗುರುತಿಸಿ ಮುಂಡರ+ಕೆಯ್=ಮುಂಡರಗೆಯ್=ಮುಂಡರಗಿ ಆಯಿತೆಂದು ಅರ್ಥೈಸಿದ್ದಾರೆ. ಡಂಬಳ ಗ್ರಾಮವು ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ. ಇಲ್ಲಿರುವ ಚಾಲುಕ್ಯ ಶೈಲಿಯ ಕಲ್ಲೇಶ್ವರದ ದೇವಾಲಯ ಹಾಗೂ ದೊಡ್ಡ ಬಸಪ್ಪ ದೇವಾಲಯ, ದ್ರೋಣ ಗ್ರಾಮದ ಚಾಲುಕ್ಯರ ಶೈಲಿಯ ಸಿದ್ಧೇಶ್ವರಗುಡಿ, ಆಲೂರಿನ ನಾಗೇಶ್ವರ ಗುಡಿ ಪ್ರಸಿದ್ಧ ವಾದ ದೇವಾಲಯಗಳಾಗಿವೆ. ಕಪ್ಪತಗುಡ್ಡದಲ್ಲಿನ ರಾಜ್ಯದ ಮೊಟ್ಟಮೊದಲ ಪವನ ಶಕ್ತಿ ಯೋಜನೆಯು ರಾಜ್ಯದ ವಿದ್ಯುತ್ ಉತ್ಪಾದನೆಯ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ. ಗದಗ ಪಟ್ಟಣಕ್ಕೆ ಮುಂಡರಗಿ ತಾಲೂಕಿನಿಂದ ಕುಡಿಯುವ ನೀರು ಒದಗಿಸಲಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಭೀಮರಾಯನಿಂದಾಗಿ ಈ ಊರು ಪ್ರಸಿದ್ಧವಾಗಿದೆ. ಮುಂಡರಗಿ ಭೀಮರಾಯನ ವಂಶಸ್ಥರು ಇಂದಿಗೂ ಇಲ್ಲಿದ್ದಾರೆ. ನರಗುಂದ: ಗದಗ ಜಿಲ್ಲೆಯಲ್ಲಿಯೇ ಅತ್ಯಂತ ಚಿಕ್ಕ ತಾಲೂಕಾಗಿರುವ ನರಗುಂದವನ್ನು ಪಿರಿಯನರಗುಂದ ಎಂದು ಉಲ್ಲೇ ಖಿಸಲಾಗಿದೆ. ಕೃಷಿ ರಂಗದಲ್ಲಿ ಮಹತ್ವದ ಸಾಧನೆ ಮಾಡಿರುವ ಈ ತಾಲೂಕು ೧೯೮೦ರ ರೈತ ಚಳುವಳಿಯಿಂದಾಗಿ ಪ್ರಸಿದ್ಧಿ ಹೊಂದಿರುವುದಲ್ಲದೆ ಚಾರಿತ್ರಿಕ ಮಹತ್ವವನ್ನೂ ಪಡೆದಿವೆ. ಹಿಂದೆ ಚಿಕ್ಕ ಸಂಸ್ಥಾನದ ರಾಜಧಾನಿಯಾಗಿದ್ದು ಆಂಗ್ಲರ ವಿರುದ್ಧ ಸಿಡಿದೆದ್ದ ಬಾಬಾ ಸಾಹೇಬ ಭಾವೆಯವರು ಸ್ವಾತಂತ್ರ್ಯ ಕಹಳೆ ಊದಿದ ಕರ್ಮಭೂಮಿ. ಸಾಮಾಜಿಕ ಪರಿವರ್ತನೆಯ ಕಾಲಘಟ್ಟದಲ್ಲಿ ಸರ್ವವಿಧಿತದಿಂದ ವಿಕಾಸಗೊಂಡಿದ್ದು ಶಿಕ್ಷಣ, ಉದ್ದಿಮೆ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ನರಗುಂದ ಪ್ರದೇಶದಲ್ಲಿ ಅನೇಕ ಪ್ರಾಚೀನ ಶಿಲಾ ಶಾಸನಗಳು ದೊರೆತಿದ್ದು ಅಪರೂಪದ ಮಾದರಿಯ ದೇವಾಲಯಗಳನ್ನು ಹೊಂದಿದೆ. ಧರ್ಮಸಿರಿಯ ಬೆಂಗಾವಲಾಗಿರುವ ಮಠ, ಪೀಠಗಳು, ದೇವ ಮಂದಿರಗಳು, ಮಸೀದಿ ಗಳು, ಕೋಮು ಸೌಹಾರ್ದತೆಯ ಬೆಸುಗೆ ಹಾಕಿದಂತಿವೆ. ಅವಿಭಾಜ್ಯ ಧಾರವಾಡ ಜಿಲ್ಲೆ ಅಖಂಡ ಧಾರವಾಡ ಜಿಲ್ಲೆಯು ೧೩.೭೨೮ ಚ.ಕಿ.ಮೀ. ಭೌಗೋಳಿಕ ವಿಸ್ತೀರ್ಣವನ್ನು ಹೊಂದಿದ್ದು ಒಟ್ಟು ಜಿಲ್ಲೆಗಳ ಪೈಕಿ ಬಿಜಾಪುರ, ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆಗಳ ನಂತರದ ಸ್ಥಾನವನ್ನು ಪಡೆದುಕೊಂಡಿತ್ತು. ರಾಜ್ಯದ ಭೌಗೋಳಿಕ ವಿಸ್ತೀರ್ಣದಲ್ಲಿ ಶೇ ೭.೧೬ರಷ್ಟು ವಿಸ್ತೀರ್ಣ ಹೊಂದಿದ್ದು ೧೯೯೧ರ ಜನಗಣತಿಯ ಪ್ರಕಾರ ೩೫,೦೩,೧೫೦ ಜನರು ವಾಸಿಸುತ್ತಿದ್ದರು (ರಾಜ್ಯದ ಒಟ್ಟು ಜನಸಂಖ್ಯೆಗೆ ಶೇ.೭.೮೧ರಷ್ಟು) ಜಿಲ್ಲಾವಾರು ಜನಸಂಖ್ಯೆಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಬೆಳಗಾವಿ ನಂತರದ ಸ್ಥಾನ ಪಡೆದುಕೊಂಡಿತ್ತು. ೧೭ ತಾಲೂಕುಗಳನ್ನೊಳಗೊಂಡಿದ್ದ ಈ ಬೃಹತ್ ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಭಜಿಸುವುದರೊಂದಿಗೆ ಗದಗ ಮತ್ತು ಹಾವೇರಿ ಎಂಬ ಎರಡು ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದವು. ಗದಗ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ ಹೊಸದಾಗಿ ರಚನೆಯಾದ ಗದಗ ಜಿಲ್ಲೆಯು ಉತ್ತರಕ್ಕೆ ವಿಜಾಪುರ ಜಿಲ್ಲೆ, ದಕ್ಷಿಣಕ್ಕೆ ಹಾವೇರಿ, ಪೂರ್ವಕ್ಕೆ ಕೊಪ್ಪಳ ಹಾಗೂ ಪಶ್ಚಿಮಕ್ಕೆ ಧಾರವಾಡ ಮತ್ತು ಬೆಳಗಾಂ ಜಿಲ್ಲೆಗಳನ್ನು ಒಳಗೊಂಡಿದೆ. ಕರ್ನಾಟಕದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಗದಗ ಜಿಲ್ಲೆಯ ಪಾಲು ಶೇ.೨.೪೩ರಷ್ಟಿದ್ದರೆ ರಾಜ್ಯದ ಜನಸಂಖ್ಯೆಯಲ್ಲಿ ಇದರ ಪಾಲು ಶೇ.೧.೯೧ರಷ್ಟಿದೆ. ಕೋಷ್ಟಕ ೨.೧ರಲ್ಲಿ ಗದಗ ಜಿಲ್ಲೆಯ ವಿಸ್ತೀರ್ಣವನ್ನು ಹಾಗೂ ಜನಸಂಖ್ಯೆಯನ್ನು ತಾಲೂಕುವಾರು ನೀಡಿದೆ. ಕೋಷ್ಟಕ .೧ – ಗದಗ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ ಮತ್ತು ಜನಸಂಖ್ಯೆ

ಕ್ರಮ ಸಂಖ್ಯೆ

ತಾಲೂಕುಗಳು

ಭೌಗೋಳಿಕ ವಿಸ್ತೀರ್ಣ

[ಚ.ಕಿ.ಮೀ]

ಜನಸಂಖ್ಯೆ (ಲಕ್ಷಗಳಲ್ಲಿ)

ಗದಗ ೧೦೯೭ ೨೮೯೯೦೦
ಮುಂಡರಗಿ ೮೮೪ ೧೦೧೮೦೦
ನರಗುಂದ ೪೩೫ ೮೬೭೦೦
ರೋಣ ೧೨೯೧ ೨೨೦೯೦೦
ಶಿರಹಟ್ಟಿ ೯೪೯ ೧೫೯೭೦೦
ಗದಗ ಜಿಲ್ಲೆ ೪೬೫೭ ೮೫೯೦೦೦
[ಆಕರ: ಧಾರವಾಡ ಜಿಲ್ಲೆಯ ಅಂಕಿ – ಅಂಶಗಳ ನೋಟ] ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ೧೯೧೭೯೦ ಚ.ಕಿ.ಮೀ. ಕರ್ನಾಟಕದಲ್ಲಿ ಈಗಿರುವ ಜಿಲ್ಲೆಗಳ ಸಂಖ್ಯೆ ೨೭. ಜಿಲ್ಲಾವಾರು ಸರಾಸರಿ ವಿಸ್ತೀರ್ಣ ೭೧೦೩.೩೩ ಚ.ಕಿ.ಮೀ. ಗದಗ ಜಿಲ್ಲೆಯ ವಿಸ್ತೀರ್ಣವು ರಾಜ್ಯದ ಸರಾಸರಿ ವಿಸ್ತೀರ್ಣ ಕ್ಕಿಂತ ಕಡಿಮೆ ಇದೆ. ಇಂದು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಏಳು ಹೊಸ ಜಿಲ್ಲೆಗಳ ಸರಾಸರಿ ವಿಸ್ತೀರ್ಣ ಕೇವಲ ೫೩೦೨ ಚ.ಕಿ.ಮೀ. ಗದಗ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ ೪೬೫೭ ಚ.ಕಿ.ಮೀ.ಗಳಿದ್ದು ಹೊಸ ಜಿಲ್ಲೆಗಳ ಸರಾಸರಿ ವಿಸ್ತೀರ್ಣಕ್ಕಿಂತ ಕಡಿಮೆ ಇದೆ. ರೋಣ ತಾಲೂಕು ೧೨೯೧ ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು ಗದಗ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ತಾಲೂಕಾ ಗಿದ್ದರೆ ನರಗುಂದ ೪೩೫ ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು ಜಿಲ್ಲೆಯ ಅತ್ಯಂತ ಚಿಕ್ಕ ತಾಲೂಕಾಗಿದೆ. ಭೌಗೋಳಿಕ ವಿಸ್ತೀರ್ಣದ ದೃಷ್ಟಿಯಿಂದ ರಾಜ್ಯದಲ್ಲಿರುವ ಬೃಹತ್ ಜಿಲ್ಲೆಗಳೆಂದರೆ ಗುಲ್ಬರ್ಗ, ಬೆಳಗಾವಿ, ತುಮಕೂರು, ವಿಜಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳು. ರಾಜ್ಯದಲ್ಲಿನ ಏಳು ಹೊಸ ಜಿಲ್ಲೆಗಳ ಜನಸಂಖ್ಯೆಯು ರಾಜ್ಯದ ಸರಾಸರಿ ಜನಸಂಖ್ಯೆಗಿಂತ ಅಧಿಕವಿದೆ. ಬೆಂಗಳೂರು ನಗರ ಜಿಲ್ಲೆಯನ್ನು ಬಿಟ್ಟರೆ ಜನಸಂಖ್ಯಾ ದೃಷ್ಟಿಯಿಂದ ರಾಜ್ಯದಲ್ಲಿರುವ ಅತಿ ದೊಡ್ಡ ಜಿಲ್ಲೆಗಳೆಂದರೆ ಬೆಳಗಾವಿ, ಗುಲ ಬರ್ಗಾ, ತುಮಕೂರು. ಒಟ್ಟಾರೆ ರಾಜ್ಯದಲ್ಲಿ ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆ ನೆಲೆಯಿಂದ ನೋಡಿದಾಗ ಬೆಳಗಾವಿ ಮತ್ತು ಗುಲ ಬರ್ಗಾ ಎರಡು ಬೃಹತ್ ಜಿಲ್ಲೆಗಳಾಗಿಯೇ ಉಳಿದಿವೆ. ಹೊಸ ಜಿಲ್ಲೆಗಳ ಪೈಕಿ ಉಡುಪಿ ಜಿಲ್ಲೆಯ ನಂತರ ಗದಗ ಜಿಲ್ಲೆಯು ಸಣ್ಣ ಜಿಲ್ಲೆಯಾಗಿದೆ. ರಾಜ್ಯದಲ್ಲಿ ಇದರ ಸ್ಥಾನ ೨೩.