ಕರ್ನಾಟಕದ ‘ಜಿಲ್ಲಾ ಅಭಿವೃದ್ಧಿ ಅಧ್ಯಯನ’ ಎನ್ನುವುದು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗವು ಪ್ರಾರಂಭಿಸಿರುವ ಮಹತ್ವಾಕಾಂಕ್ಷೆಯ ಅಧ್ಯಯನ ಯೋಜನೆ. ಈ ಬಗೆಯ ಅಧ್ಯಯನವನ್ನು ಕೈಗೊಳ್ಳಲು ನಮ್ಮ ಪ್ರೀತಿಯ ಕುಲಪತಿಗಳಾದ ಡಾ.ಎಂ.ಎಂ. ಕಲಬುರ್ಗಿ ಅವರು ಪ್ರೇರಣೆ ನೀಡಿದ್ದಾರೆ. ಈ ಅಧ್ಯಯನದ ಒಂದು ಉಪ ಯೋಜನೆಯಾಗಿ ಕರ್ನಾಟಕದ ೨೭ ಜಿಲ್ಲೆಗಳನ್ನು ಒಳಗೊಂಡ ಮಾಹಿತಿ ಕೋಶವನ್ನು ಸಿದ್ಧಪಡಿಸಿದ್ದೇವೆ. ಈ ಅಧ್ಯಯನದ ಮುಖ್ಯ ಉದ್ದೇಶವೇನೆಂದರೆ ಜಿಲ್ಲಾ ಮಟ್ಟದಲ್ಲಿ ಸಾಧ್ಯವಾದರೆ ಅದಕ್ಕಿಂತಲೂ ಕೆಳಮಟ್ಟದಲ್ಲಿ ಅಭಿವೃದ್ಧಿ ಕುರಿತಂತೆ ಸಂಕಥನವೊಂದನ್ನು – ಸಂವಾದವೊಂದನ್ನು ಹುಟ್ಟು ಹಾಕುವುದಾಗಿದೆ. ಅಭಿವೃದ್ಧಿ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲೂ ಅವರು ಸಹಭಾಗಿಗಳಾಗಬೇಕಾದರೆ ಇಂಥಹ ಸಂಕಥನ – ಸಂವಾದದ ಅಗತ್ಯವಿದೆ. ಈ ಕಾರಣಕ್ಕೆ ಪ್ರಸ್ತುತ ಅಧ್ಯಯನವು ಲಿಂಗಸಂಬಂಧಗಳ ಬಗ್ಗೆ ಹೆಚ್ಚಿನ ಒಲವು ತೋರಿಸಿದೆ. ಅಭಿವೃದ್ಧಿಯ ಖಂಡ ಸ್ವರೂಪದ ಬಗ್ಗೆ ಹೆಚ್ಚಿನ ಅವಧಾರಣೆ ನೀಡಿದೆ.

ಈ ಅಧ್ಯಯನ ಯೋಜನೆಯನ್ನು ಸಿದ್ಧಪಡಿಸುವಾಗ ನಮ್ಮ ವಿಭಾಗದ ಎಲ್ಲ ಸಹೋದ್ಯೋಗಿ ಮಿತ್ರರು ಭಾಗಿಗಳಾಗಿದ್ದಾರೆ. ಇದೊಂದು ವಿಭಾಗದ ಉತ್ಪನ್ನವಾಗಿದೆ. ಈ ಸಂದರ್ಭದಲ್ಲಿ ನನ್ನ ಸಹೋದ್ಯೋಗಿ ಮಿತ್ರರೆಲ್ಲರಿಗೂ ಕೃತಜ್ಞತೆ ಸಲ್ಲಿಸಬೇಕಾದುದು ನನ್ನ ಕರ್ತವ್ಯವಾಗಿದೆ. ನಮ್ಮ ವಿಭಾಗದ ಸಂಶೋಧನ ವಿದ್ಯಾರ್ಥಿಗಳು ಅತ್ಯಂತ ಕ್ರಿಯಾಶೀಲರಾಗಿ ನಮ್ಮ ಅಧ್ಯಯನ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ನೆರವನ್ನು ನೆನೆಯ ಬೇಕಾದುದು ನನ್ನ ಕರ್ತವ್ಯವಾಗಿದೆ.

ಡಾ. ಬಿ. ಶೇಷಾದ್ರಿ ಅವರು ನಮ್ಮ ವಿಭಾಗವನ್ನು ಕಟ್ಟಿ ಬೆಳಸಿದವರು. ಅವರು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾದರೂ ಅಧ್ಯಯನ ಪ್ರವೃತ್ತಿಯಿಂದ ನಿವೃತ್ತರಾಗಿಲ್ಲ. ನಮ್ಮ ಅಧ್ಯಯನ ಯೋಜನೆಗಳನ್ನು ರೂಪಿಸುವಾಗ ಅವರ ಸಲಹೆ – ಮಾರ್ಗದರ್ಶನ ಇದ್ದೇ ಇರುತ್ತದೆ. ಅವರಿಗೆ ನಾನು ಈ ಸಂದರ್ಭದಲ್ಲಿ ವಂದನೆ ಸಲ್ಲಿಸಬೇಕಾದುದು ನನ್ನ ಜವಾಬ್ದಾರಿ. ಕುಲಸಚಿವರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ, ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎ.ವಿ. ನಾವಡ, ಅಕ್ಷರ ಜೋಡಣೆ ಮಾಡಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್, ಕಮಲಾಪುರ, ಪುಟವಿನ್ಯಾಸ ಕರಡು ತಿದ್ದಿಕೆ ಮುಂತಾದ ಕೆಲಸಗಳಲ್ಲಿ ನೆರವಾದ ಶ್ರೀ ಸುಜ್ಞಾನಮೂರ್ತಿ, ಮುಖಪುಟವನ್ನು ರೂಪಿಸಿಕೊಟ್ಟ ಕೆ.ಕೆ. ಮಕಾಳಿ, ಗ್ರಂಥಪಾಲಕರಾದ ಶ್ರೀ ಜಿ.ಆರ್. ರಾಮಮೂರ್ತಿ, ಇವರೆಲ್ಲರಿಗೂ ನನ್ನ ಕೃತಜ್ಞತೆಗಳು.

ಅಧ್ಯಯನ ಗ್ರಂಥದ ಪ್ರಕಟಣೆಗೆ ನೆರವು ನೀಡಿದ ಗದಗ ಜಿಲ್ಲಾಧಿಕಾರಿಗಳು ಮತ್ತು ಗದಗ ಜಿಲ್ಲಾ ಪಂಚಾಯತ್ ಸದಸ್ಯರಿಗೆ ನಾವು ಆಭಾರಿಯಾಗಿದ್ದೇವೆ.

ಟಿ.ಆರ್. ಚಂದ್ರಶೇಖರ
ವಿದ್ಯಾರಣ್ಯ