ಈ ಅಧ್ಯಾಯದ ಮುಖ್ಯ ಉದ್ಧೇಶ ಗದಗ ಜಿಲ್ಲೆಯ ಕೈಗಾರಿಕಾಭಿವೃದ್ಧಿ ಬಗ್ಗೆ ಒಂದು ಸ್ಥೂಲ ಚಿತ್ರವನ್ನು ನೀಡುವುದಾಗಿದೆ. ಕೈಗಾರಿಕಾ ವಲಯದ ದೃಷ್ಟಿಯಿಂದ ಗದಗ ಜಿಲ್ಲೆಯು ಬಹಳ ಮುಂದುವರಿದ ಜಿಲ್ಲೆಯೇನಲ್ಲ. ಇಂದಿಗೂ (೧೯೯೧) ಕೃಷಿಯೇತರ ಚಟುವಟಿಕೆಗಳನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರ ವರ್ಗದ ಸಂಖ್ಯೆ – ಪ್ರಮಾಣ ಗದಗ ಜಿಲ್ಲೆಯಲ್ಲಿ ಶೇ.೨೩.೬೪ ದಾಟಿಲ್ಲ. ರಾಜ್ಯಮಟ್ಟದಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ಅವಲಂಬಿಸಿ ಕೊಂಡಿರುವ ದುಡಿಮೆಗಾರ ವರ್ಗದ ಪ್ರಮಾಣ ಶೇ.೨೯.೮೮ ರಷ್ಟಿದೆ.

ಈ ಅಧ್ಯಾಯದಲ್ಲಿ ಮೊದಲು ಕೈಗಾರಿಕಾಭಿವೃದ್ಧಿಯ ಹಿಂದಿನ ಕೆಲವು ತಾತ್ವಿಕ ಪ್ರಶ್ನೆಗಳನ್ನು ಚರ್ಚಿಸಲಾಗಿದೆ. ಎರಡನೆ ಯದಾಗಿ ಗದಗ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಯ ಚಾರಿತ್ರಿಕ ಚಿತ್ರವನ್ನು ನೀಡಲಾಗಿದೆ. ಮೂರನಯೆ ಭಾಗದಲ್ಲಿ ಜಿಲ್ಲೆಯ ಸದ್ಯದ ಕೈಗಾರಿಕಾಭಿವೃದ್ಧಿಯ ಸ್ಥಾನವನ್ನು ಕುರಿತು ಚರ್ಚಿಸಲಾಗಿದೆ.

ಭಾಗ

ಸ್ವಾತಂತ್ರೋತ್ತರ ಭಾರತದಲ್ಲಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪ್ರಭುತ್ವದ ಪಾತ್ರವು ಪ್ರಧಾನವಾಗಿತ್ತು. ಈ ಪ್ರಭುತ್ವ – ಪ್ರಧಾನ ಕೈಗಾರಿಕಾ ನೀತಿಯು ಭಾರತದಲ್ಲಿ ೧೯೯೦ರ ವರೆಗೆ ಅನಿರ್ಬಂದಿತವಾಗಿ ಮುಂದುವರಿಯಿತು. ಈ ಅವಧಿಯಲ್ಲಿ ಕೈಗಾರಿಕಾ ವಲಯದಲ್ಲಿ ಒಂದು ಸುಭದ್ರವಾದ ಬುನಾದಿಯೊಂದು ನಿರ್ಮಾಣವಾಯಿತು. ಆದರೆ ಪ್ರಭುತ್ವ ಪಧಾನ ಕೈಗಾರಿಕಾಭಿವೃದ್ಧಿ ನೀತಿಯು ಸುಗಮವಾಗಿ ಮುಂದುವರಿಯಲಿಲ್ಲ. ಅದು ಅನೇಕ ಬಗೆಯ ಸಮಸ್ಯೆಯನ್ನು ಎದುರಿಸಿತು. ೧೯೯೧ರಲ್ಲಿ ಪ್ರಾರಂಭವಾದ ಉದಾರವಾದಿ ಪರ್ವದಲ್ಲಿ ಪ್ರಭುತ್ವದ ಪಾತ್ರವನ್ನು ಕಡಿಮೆ ಮಾಡಿ ಮಾರುಕಟ್ಟೆಯ ಪಾತ್ರವನ್ನು ವಿಸ್ತರಿಸಲಾಯಿತು. ಕೈಗಾರಿಕಾ ನೀತಿಯಲ್ಲಿ ಮೂಲಭೂತ ಬದಲಾವಣೆಯಾಗಿದೆ. ಆದರೆ ಅಭಿವೃದ್ಧಿಯ ಮೂಲ ಉದ್ಧೇಶ ಮಾತ್ರ ಬದಲಾಗಿಲ್ಲ. ಕೈಗಾರಿಕಾಭಿವೃದ್ಧಿಯ ಮೂಲ ಉದ್ದೇಶ ಸಮಾಜದಲ್ಲಿ ಪರಿವರ್ತನೆ ತರುವುದಾಗಿದೆ. ಈ ಸಮಾಜ ಪರಿವರ್ತನೆಯನ್ನು ಹೇಗೆ ತರಬೇಕು ಎಂಬುದರಲ್ಲಿ ಕೆಲವು ಪ್ರಮುಖ ಬದಲಾವಣೆಗಳಾಗಿವೆ. ಸ್ವಾತಂತ್ರ್ಯಾನಂತರದ ಮೊದಲ ೩ – ೪ ದಶಕಗಳಲ್ಲಿ ಕೈಗಾರಿಕಾಭಿವೃದ್ಧಿಯಲ್ಲಿ ಪ್ರಭುತ್ವವು ನೇರವಾಗಿ ಪಾಲ್ಗೊಳ್ಳುವ ನೀತಿಯನ್ನು ಪಾಲಿಸಿಕೊಂಡು ಬರಲಾಯಿತು. ಆದರೆ ಇಂದು ಪ್ರಭುತ್ವದ ಪಾತ್ರವು ಹಿಂದೆ ಸರಿದು ಮಾರುಕಟ್ಟೆಯ ಪಾತ್ರ ಹಿರಿದಾಗಿದೆ. ಪ್ರಸ್ತುತ ಕೈಗಾರಿಕಾ ನೀತಿಯು ಪ್ರಭುತ್ವದ ಪಾತ್ರವನ್ನು ವಿರೋಧಿಸುತ್ತದೆ. ಉದಾರೀಕರಣದ ಉದ್ಧೇಶ ಪ್ರಭುತ್ವದ ಪಾತ್ರವನ್ನು ಕ್ಷೀಣಿಸುವುದಲ್ಲ. ಆದರೆ ಅದರ ಪಾತ್ರವು ಕೇವಲ ಬಂಡವಾಳದ ನಿರ್ವಹಣೆಗೆ ಅಗತ್ಯವಾದ ವಾತಾವರಣ ಸೃಷ್ಟಿಸುವಲ್ಲಿಗೆ ಸೀಮಿತವಾಗಬೇಕು ಎಂಬುದು ಇಂದಿನ ರೀತಿಯಾಗಿದೆ. ಪ್ರಭುತ್ವದ ಪಾತ್ರವು ಕೈಗಾರಿಕಾಭಿವೃದ್ಧಿಗೆ ಪೂರಕವಾಗಿರಬೇಕೆ ವಿನಾ ಪ್ರಧಾನವಾಗಿರಬಾರದು. ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು, ಸಂಘಟಿತ ಕಾರ್ಮಿಕ ವರ್ಗದಿಂದ ಉಂಟಾಗುವ ವಿವಾದ – ತಂಟೆ – ತಕರಾರುಗಳನ್ನು ಪರಿಹರಿಸುವುದು. ಬಂಡವಾಳ ಸಂಚಲನೆ – ವಿನಿಯೋಜನೆಗೆ ಅನುವು ಮಾಡಿಕೊಡುವುದು ಹಾಗೂ ಹೂಡಿದ ಬಂಡವಾಳವನ್ನು ವಾಪಸ್ಸು ಹಿಂತೆಗೆದುಕೊಳ್ಳಲು ಅನುಕೂಲವಾಗುವಂತೆ ಕಾನೂನು ರಚಿಸುವುದು ಮುಂತಾದವು ಇಂದು ಪ್ರಭುತ್ವವು ನಿರ್ವಹಿಸಬೇಕಾದ ಕಾರ್ಯಗಳಾಗಿವೆ.

ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯು ಒಂದು ಘಟಕವಾಗಿ ರೂಪುಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ದೃಷ್ಟಿಯಿಂದ ತಾಲ್ಲೂಕನ್ನು ಅಭಿವೃದ್ಧಿ ಘಟಕವನ್ನಾಗಿ ಮಾಡಬೇಕೆಂಬ ವಾದವೂ ಇದೆ. ಏಕೆಂದರೆ ಜಿಲ್ಲೆಯೊಳಗೆ ತಾಲ್ಲೂಕುಗಳು ವಿವಿಧ ಮಟ್ಟದ ಅಭಿವೃದ್ಧಿ ಸಾಧಿಸಿಕೊಂಡಿರಬಹುದು. ಜಿಲ್ಲೆಯೊಳಗೆ ತಾಲ್ಲೂಕು – ತಾಲ್ಲೂಕುಗಳ ನಡುವೆ ಅಭಿವೃದ್ಧಿಯಲ್ಲಿ ಅಂತರಗಳಿರಬಹುದು. ರಾಜ್ಯಮಟ್ಟದಲ್ಲಿ ಅಥವಾ ರಾಷ್ಟ್ರಮಟ್ಟದಲ್ಲಿ ಜಿಲ್ಲೆಯೊಂದು ಹಿಂದುಳಿದಿರಬಹುದು. ಆದರೆ ಹಿಂದುಳಿದ ಜಿಲ್ಲೆಯೊಳಗೆ ಕೆಲವು ಮುಂದುವರಿದ ತಾಲ್ಲೂಕುಗಳಿರಬಹುದು. ಜಿಲ್ಲೆಯನ್ನು ಒಂದು ಅಭಿವೃದ್ಧಿ ಘಟಕವಾಗಿ ಪರಿಗಣಿಸಿದಾಗ ಸದರಿ ಜಿಲ್ಲೆಯೊಳಗಿರುವ ಮುಂದುವರಿದ ತಾಲ್ಲೂಕುಗಳು ಅಭಿವೃದ್ಧಿಯ ಎಲ್ಲ ಸವಲತ್ತುಗಳನ್ನು ಮನಾಪಲಿ ಮಾಡಿಕೊಂಡುಬಿಡಬಹುದು. ಸರ್ಕಾರವು ಕೈಗಾರಿಕೆಗಳಿಗೆ ನೀಡುವ ಸಹಾಯಧನ, ತೆರಿಗೆ ವಿನಾಯತಿ, ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ, ಸಬ್ಸಿಡಿ ಮುಂತಾದ ಸವಲತ್ತುಗಳನ್ನು ಮುಂದುವರಿದ ತಾಲ್ಲೂಕುಗಳು ಪಡೆದುಕೊಂಡು ಬಿಡುವ ಸಾಧ್ಯತೆ ಇದೆ. ಉದಾಹರಣೆಗೆ ಗದಗ ಜಿಲ್ಲೆಯನ್ನು ನೋಡಬಹುದು. ಒಟ್ಟಾರೆ ಜಿಲ್ಲೆ ಹಿಂದುಳಿದಿದೆ. ಆದರೆ ಈ ಜಿಲ್ಲೆಯೊಳಗೆ ‘ಗದಗ’ ತಾಲ್ಲೂಕು ಕೈಗಾರಿಕೆ ದೃಷ್ಟಿಯಿಂದ ಅತ್ಯಂತ ಮುಂದುವರಿದ ತಾಲ್ಲೂಕಾಗಿದೆ. ಈ ಬಗೆಯ ಜಿಲ್ಲೆಯೊಳಗೆ ನಡೆಯುವ ಅಭಿವೃದ್ಧಿಯ ಅಸಮ ಹಂಚಿಕೆಯನ್ನು ಸರಿಪಡಿಸಲು ತಾಲ್ಲೂಕನ್ನು ಅಭಿವೃದ್ಧಿಯ ಘಟಕವನ್ನಾಗಿ ಸಬೇಕೆಂಬ ವಾದ ಮಂಡಿತವಾಗುತ್ತಿದೆ. ಆದರೆ ಇದು ಕಷ್ಟ ಸಾಧ್ಯವಾದ ಸಂಗತಿಯಾಗಿದೆ. ಇಂದು ಜಿಲ್ಲೆಯನ್ನು ಅಭಿವೃದ್ಧಿ ಘಟಕವನ್ನಾಗಿ ಮಾಡಿಕೊಂಡು ಅಭಿವೃದ್ಧಿ ಕಾಯಾಕ್ರಮಗಳನ್ನು ರೂಪಿಸುವ ಕೆಲಸ ನಡೆದಿದೆ.

ಆರ್ಥಿಕ ಪ್ರಗತಿ – ಅಭಿವೃದ್ಧಿಗಳಿಂದಾಗಿ ಸಾಮಾಜಿಕ ಪರಿವರ್ತನೆ – ಜನರ ಜೀವನ ಉತ್ತಮಗೊಳ್ಳುವುದು ನಡೆಯುತ್ತಿಲ್ಲ. ಅಬಿವೃದ್ಧಿಯ ಮಟ್ಟ ಉತ್ತಮವಾಗಿರಲು ವರಮಾನವು ಉನ್ನತ ಮಟ್ಟದಲ್ಲಿರುವಾಗಲು ಜನರು ತೀವ್ರ ಬಡತನದಿಂದ ಕಡುಬಡತನದಿಂದ ನರಳುತ್ತಿರಬಹುದು. ಈ ಸಮಸ್ಯೆಗೆ ಪರಿಹಾರವನ್ನು ಒಂದು ಕಾಲದಲ್ಲಿ ಸಂಪತ್ತಿನ – ಆಸ್ತಿಯ ಮರು ವಿತರಣೆಯಲ್ಲಿ ಕಂಡುಕೊಳ್ಳಲಾಗಿತ್ತು. ಆದರೆ ಅದು ಇಂದು ಕಾರ್ಯಸಾಧ್ಯವಾಗಿ ಉಳಿದಿಲ್ಲ. ಈಗ ಚರ್ಚೆಯಲ್ಲಿರುವ ಮುಖ್ಯ ಸಂಗತಿಯೇನೆಂದರೆ ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಹೇಗೆ ಒದಗಿಸಬೇಕು? ಎಂಬುದಾಗಿದೆ. ಸಂಪತ್ತಿನ – ಆಸ್ತಿ – ಪಾಸ್ತಿಗಳ ಮರುವಿತರಣೆಯಿಲ್ಲದೆ ಅಸಮಾನತೆ – ಬಡತನ ದೂರವಾಗಬೇಕಾದರೆ ಸಮಾಜದ ಪ್ರತಿಯೊಬ್ಬನಿಗೂ ಆಧುನೀಕರಣ – ಉದಾರೀಕರಣ – ಪ್ರಕ್ರಿಯೆಯಲ್ಲಿ ಸಹಭಾಗಿಯಾಗಲು ಅವಕಾಶವಿರಬೇಕು. ಅದಕ್ಕಾಗಿ ಜನರಿಗೆ ಶಿಕ್ಣಣ, ಆರೋಗ್ಯ, ಆಹಾರ, ನೀರು, ಸಾರಿಗೆ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಸಂಗತಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಕೃಷಿಯೇತರ ಚಟುವಟಿಕೆಗಳನ್ನು, ಅವುಗಳ ಮೇಲೆ ಹೂಡುವ ಬಂಡವಾಳವನ್ನು ಅವು ಜನರಿಗೆ ಒದಗಿಸಬಹುದಾದ ಹಕ್ಕುದಾರಿಕೆ (Entitlement) ಮತ್ತು ಉದ್ಯೋಗಗಳ ದೃಷ್ಟಿಯಿಂದ ನೋಡುವ ಅಗತ್ಯವಿದೆ.

ಅಭಿವೃದ್ಧಿ ಕುರಿತಂತೆ ಪ್ರಭುತ್ವದ ನಾಯಕತ್ವಕ್ಕೆ ಪ್ರತಿಯಾಗಿ ಖಾಸಗಿ – ಸರ್ಕಾರೇತರ – ಮಾರುಕಟ್ಟೆ ಪ್ರಯತ್ನಗಳಿಗೆ ಮಹತ್ವ – ಪ್ರಧಾನತೆ ದೊರೆಯಬೇಕೆಂಬುದು ಇಂದಿನ ವಾದವಾಗಿದೆ. ಪ್ರಭುತ್ವವು ಪ್ರಧಾನವಾಗಿದ್ದರೆ ಕೇಂದ್ರೀಕೃತ ತೀರ್ಮಾನಗಳಿಗೆ ಅವಕಾಶವಾಗಿಬಿಡುತ್ತದೆ. ನಮ್ಮದು ಬಹು ವಿಸ್ತಾರವಾದ ಮತ್ತು ವೈವಿಧ್ಯತೆಯಿಂದ ಕೂಡಿದ ದೇಶ. ಇಲ್ಲಿ ಕೇಂದ್ರೀಕೃತ ತೀರ್ಮಾನಗಳು ಸಮಾಜದ ಎಲ್ಲ ವರ್ಗಗಳ ಆಶಯಕ್ಕೆ ಅನುಗುಣವಾಗಿ ಇರುವುದು ಸಾಧ್ಯವಿಲ್ಲ. ಅವು ಸ್ಥಳೀಯ ಸಮಸ್ಯೆಗಳಿಗೆ – ಸವಾಲುಗಳಿಗೆ ಪರಿಹಾರ ಒದಗಿಸುವುದು ಸಾಧ್ಯವಿಲ್ಲ. ಆದ್ದರಿಂದ ನಾವು ವಿಕೇಂದ್ರೀಕೃತ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಪಂಚಾಯತ್‌ರಾಜ್ ಸಂಸ್ಥೆಗಳು ಬಡತನ ನಿವಾರಣೆ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ಈಗ ಸಣ್ಣ ಉದ್ದಿಮೆ, ಕಸುಬುದಾರಿಕೆ, ಗುಡಿ ಕೈಗಾರಿಕೆ ಮುಂತಾದ ಕೃಷಿಯೇತರ ಚಟುವಟಿಕೆಗಳನ್ನು ಸೇರಿಸಿಕೊಂಡು ಅಭಿವೃದ್ಧಿಯನ್ನು ರೂಪಿಸುವ ಅಗತ್ಯವಿದೆ.

ಅಭಿವೃದ್ಧಿಯನ್ನು ಮಾನವಮುಖಿಯಾಗಿಸುವ ದಿಶೆಯಲ್ಲಿ ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಅಮರ್ತ್ಯಸೇನ್ ಅವರಿಗೆ ದೊರೆತ ನೊಬೆಲ್ ಪ್ರಶಸ್ತಿಯಿಂದ ಇದನ್ನು ತಿಳಿದುಕೊಳ್ಳಬಹುದು. ಅಭುವೃದ್ಧಿಯೆಂಬುದು ಕೇವಲ ಬಂಡವಾಳ ವಿನಿಯೋಜನೆ, ವರಮಾನ, ಉತ್ಪನ್ನ ಮುಂತಾದವುಗಳಿಗೆ ಮಾತ್ರ ಸೀಮಿತವಾದ ಸಂಗತಿಯಾಗಿ ಉಳಿದಿಲ್ಲ. ಆರೋಗ್ಯ, ಅಕ್ಷರ, ಆಹಾರ, ಆಶ್ರಯ ಮುಂತಾದ ಸಂಗತಿಗಳನ್ನು ಅಭಿವೃದ್ಧಿ ಒಳಗೊಳ್ಳಬೇಕಾಗಿದೆ ಎಂದು ಭಾವಿಸ ಲಾಗಿದೆ. ಕೃಷಿಯೇತರ ಚಟುವಟಿಕೆಗಳು, ಕೈಗಾರಿಕಾ ಚಟುವಟಿಕೆಗಳು ಸಮಾಜದ ಕೆಳವರ್ಗ ಜಾತಿಗಳಿಗೆ ಎಟುಕ ಬೇಕಾದರೆ ಆ ಜಾತಿಗಳ ಜನರ ಧಾರಣಶಕ್ತಿಯನ್ನು ಉತ್ತಮಪಡಿಸಬೇಕಾಗುತ್ತದೆ. ಯಾವ ಬಗೆಯ ಚಟುವಟಿಕೆಗಳು ಜನರ ಧಾರಣಶಕ್ತಿಯನ್ನು ಹಕ್ಕುದಾರಿಕೆಯನ್ನು ಉತ್ತಮಪಡಿಸಬಲ್ಲವೋ ಅಂತಹ ಕೃಷಿಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕಾಗುತ್ತದೆ.

ಕೇಂದ್ರೀಕೃತ ಮಾದರಿಗಿಂತ ವಿಕೇಂದ್ರೀಕೃತ ಮಾದರಿಯಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸ ಬೇಕಾಗಿದೆ. ಏಕೆಂದರೆ ಕೇಂದ್ರೀಕೃತ ಮಾದರಿಯಲ್ಲಿ ಸ್ಥಳೀಯ ಸಂಪನ್ಮೂಲಗಳ ಬಳಕೆ ಮತ್ತು ರಕ್ಷಣೆ ಕುರಿತಂತೆ ಹೆಚ್ಚು ಗಮನ ದೊರೆಯುವುದಿಲ್ಲ. ಸ್ಥಳೀಯ ಸಂಪನ್ಮೂಲ ಆಧರಿಸಿದ ಕೃಷಿಯೇತರ ಚಟುವಟಿಕೆಗಳನ್ನು ಬೆಳಸುವಂತಹ ವಿಕೇಂದ್ರೀಕೃತ ಮಾದರಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.

ಪ್ರಸ್ತುತ ಅಧ್ಯಯನದಲ್ಲಿ ಕೈಗಾರೀಕರಣವನ್ನು ಕೃಷಿಯೇತರ ಚಟುವಟಿಕೆಯೆಂದು ನಿರ್ವಚಿಸಿಕೊಳ್ಳಲಾಗಿದೆ. ಈ ಅರ್ಥದಲ್ಲಿ ಕೈಗಾರಿಕೀಕರಣದ ವ್ಯಾಪ್ತಿಯೊಳಗೆ ಆಧುನಿಕ ಸಣ್ಣ, ಮಧ್ಯಮ ಮತ್ತು ದೊಡ್ಡ ಉಧ್ಯಮಗಳು, ಗೃಹ/ಗುಡಿ ಕೈಗಾರಿಕೆಗಳು. ಸಾಂಪ್ರದಾಯಿಕ ಕಸುಬುದಾರಿಕೆ, ಪೆಟ್ಟಿಗೆ ಅಂಗಡಿಗಳು, ಕಿರಾಣಿ ಅಂಗಡಿಗಳು – ಇತ್ಯಾದಿ ಸೇರುತ್ತವೆ. ಈ ಬಗೆಯ ಕೃಷಿಯೇತರ ಚಟುವಟಿಕಗಳಿಗೆ ಮಹತ್ವ – ಆದ್ಯತೆ ಏಕೆ ನೀಡಬೇಕು ಎಂಬುದನ್ನು ಇಲ್ಲಿ ಸ್ವಲ್ಪ ವಿಸ್ತಾರ ವಾಗಿಯೇ ಚರ್ಚೆಮಾಡಬೇಕಾಗಿದೆ.

ನಮಗೆಲ್ಲ ತಿಳಿದಿರುವಂತೆ ಕೃಷಿ ಭೂಮಿಯ ಪೂರೈಕೆ ಸೀಮಿತವಾಗಿದೆ. ಗದಗ ಜಿಲ್ಲೆಯಲ್ಲಿನ ಸಾಗುವಳಿ ಭೂಮಿಯ ಗಾತ್ರ ೨,೮೮,೩೦೦ ಹೆಕ್ಟೇರುಗಳು. ಇದನ್ನು ಅವಲಂಬಿಸಿಕೊಂಡಿರುವವರ ಸಂಖ್ಯೆ ೨,೫೨,೧೮೭. ಸಾಗುವಳಿ ಭೂಮಿಯ ವಿಸ್ತೀರ್ಣ ಸ್ಥಿರವಾಗಿರುತ್ತದೆ. ಆದರೆ ಅದನ್ನು ಅವಲಂಬಿಸಿಕೊಂಡಿರುವವರ ಪ್ರಮಾಣ ಅಧಿಕಗೊಳ್ಳುತ್ತಿರುತ್ತದೆ ಇಂತಹ ಸಂದರ್ಭಗಳಲ್ಲಿ ಕೃಷಿಯ ವಿಸ್ತರಣೆಯೆನ್ನುವುದು ಸಾಂದ್ರ ಬೇಸಾಯ ಪದ್ಧತಿಯಿಂದ ಮಾತ್ರ ಸಾಧ್ಯ. ಹೆಚ್ಚು ಭೂಮಿಯನ್ನು ಸಾಗುವಳಿಗೆ ತೊಡಗಿಸುವುದು ಸಾಧ್ಯವಿಲ್ಲ.

ಕೃಷಿಯ ವಿಸ್ತರಣೆ – ಅಭಿವೃದ್ಧಿ ಯಾವ ವಿಧದಲ್ಲಿ ನಡೆದರು ಸಮಾಜದ ಕೆಳವರ್ಗ/ಜಾತಿ ಜನರಿಗೆ ಅನುಕೂಲ/ಬೆಂಬಲ ದೊರಕುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ೧೯೭೦ರ ದಶಕದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ಹಸಿರು ಕ್ರಾಂತಿಯಿಂದ ಇದು ಸ್ಪಷ್ಟವಾಗಿದೆ. ಆಧುನಿಕ ಕೃಷಿಯನ್ನು ಅಳವಡಿಸಿಕೊಳ್ಳಲು ಹಿಡುವಳಿಗಳ ಗಾತ್ರ ದೊಡ್ಡದಿರಬೇಕು. ಇದರಿಂದಾಗಿ ಆಧುನೀಕರಣದ ಲಾಭ ಬಹುತೇಕ ಸಂದರ್ಭದಲ್ಲಿ ದೊಡ್ಡ ಕೃಷಿಕರ ಪಾಲಾಗಿದೆ. ಇದರ ಜೊತೊಗೆ ಈ ಬಗೆಯ ಕೃಷಿ ಅಭಿವೃದ್ಧಿಯೂ ಹೆಚ್ಚು ಉದ್ಯೋಗ ಸೃಷ್ಟಿಸುತ್ತದೆ ಎಂದು ಭಾವಿಸುವುದ ಸಾಧ್ಯವಿಲ್ಲ. ಕೃಷಿ ಬೆಳವಣಿಗೆ ನಮ್ಮ ಗ್ರಾಮೀಣ ಪ್ರದೇಶದ ಜನರ ಎಲ್ಲ ಸಮಸ್ಯೆಗಳನ್ನು ನಿವಾರಿಸಿಬಿಡುತ್ತದೆ ಎಂದು ಹೇಳು ಸಾಧ್ಯವಿಲ್ಲ. ಒಂದು ಕಡೆ ಜನಸಂಖ್ಯೆ ಏರುತ್ತಿದೆ, ದುಡಿಮೆಗಾರ ವರ್ಗದ ಸಂಖ್ಯೆ ಅಧಿಕವಾಗುತ್ತಿದೆ. ಇನ್ನೊಂದು ಕಡೆ ಏರುತ್ತಿರುವ ದುಡಿಮೆಗಾರ ವರ್ಗವನ್ನು ಕೃಷಿಯು ಭರಿಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಕೃಷಿಯೇತರ ಚಟುವಟಿಕೆ ಗಳಿಗೆ ಮಹತ್ವ ಪ್ರಾಪ್ತವಾಗಿದೆ. ಯೋಜಿತ ಅಭಿವೃದ್ಧಿಯನ್ನು ಅಳವಡಿಸಿಕೊಂಡು ಆರಂಭದ ದಿನಗಳಲ್ಲಿ ಉದ್ದಿಮೆಗಳನ್ನು ಹೆಚ್ಚು ಹೆಚ್ಚಾಗಿ ಹಿಂದುಳಿದ ಪ್ರದೇಶಗಳಲ್ಲಿ ಸ್ಥಾಪಿಸಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂಬ ನಂಬಿಕೆಯಿತ್ತು. ಆದರೆ ಅಸು ಯಶಸ್ವಿಯಾಗಲಿಲ್ಲ. ವಾಸ್ತವವವಾಗಿ ಅದು ಬೇರೆ ರೀತಿಯ ಸಮಸ್ಯೆಗಳನ್ನು ಹುಟ್ಟು ಹಾಕಿತು. ವರಮಾನ – ಸಂಪತ್ತಿನ ಕೇಂದ್ರೀಕರಣ ಅತಿಯಾದ ಬಂಡವಾಳ ವಿನಿಯೋಜನೆ, ಉದ್ಯಮಗಳ ದಟ್ಟಣೆ ಮುಂತಾದ ಸಮಸ್ಯೆಗಳನ್ನು ಅದು ಹುಟ್ಟುಹಾಕಿತು. ಇದಕ್ಕೆ ಪರಿಹಾರವಾಗಿ ೧೯೭೦ರ ದಶಕದಲ್ಲಿ ಸಣ್ಣ ಉದ್ದಿಮೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ನಿರ್ಧರಿಸಿತ್ತು. ಸಣ್ಣ ಉದ್ದಮಿಗಳಿಗೆ ಮಹತ್ವ ನೀಡಬೇಕೆಂಬ ವಿಚಾರ ಬಹಳ ಹಿಂದಿನಿಂದಲೂ ಇತ್ತು. ಗಾಂಧೀವಾದಿಗಳು ಸಾಂಪ್ರದಾಯಿಕ ಗುಡಿ/ಗೃಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ವಾದಮಾಡುತ್ತಲೇ ಇದ್ದರು. ಆದರೆ ನೆಹರೂ ವಾದಿಗಳು ಆಧುನಿಕ ಸಣ್ಣ ಉದ್ದಿಮೆಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ಮಹತ್ವ ನೀಡಿದರು. ಈ ಎರಡು ಬಗೆಯ ಉದ್ಯಮಗಳಿಗೂ ಸಮಾನ ಅವಕಾಶ ನೀಡುತ್ತಾ ಬರಲಾಗಿದೆ.

ಈ ಕೆಳಗೆ ನೀಡಿರುವ ಕಾರಣಗಳಿಗಾಗಿ ಸಣ್ಣ ಉದ್ದಿಮೆಗಳಿಗೆ ಮಹತ್ವ ನೀಡಬೇಕಾಗಿದೆ ಎಂದು ಹೇಳಲಾಗುತ್ತಿದೆ.

೧. ಸಣ್ಣ ಉದ್ದಿಮೆಗಳನ್ನು ಕಡಿಮೆ ಬಂಡವಾಳದಿಂದ ನಿರ್ಮಿಸಬಹುದು.

೨. ಇದು ಶ್ರಮ ಆಧರಿತ ತಂತ್ರವನ್ನು ಬಳಸುತ್ತದೆ. ಆದ್ದರಿಂದ ಇದು ನಿರುದ್ಯೋಗವನ್ನು ಪರಿಹರಿಸಬಹುದು.

೩. ಈ ಉದ್ದಿಮೆಗಳನ್ನು ಯಾವುದೇ ಪರಿಸರದಲ್ಲಿ ನಿರ್ಮಿಸಬಹುದು

೪. ಇದು ವಿಕೇಂದ್ರೀಕೃತ ಕೈಗಾರೀಕರಣಕ್ಕೆ ಸೂಕ್ತವಾಗಿದೆ

೫. ಕಡಿಮೆ ಬಂಡವಾಳ ಮತ್ತು ಸರಳ ತಂತ್ರಜ್ಞಾನದಿಂದ ಇವುಗಳನ್ನು ಸ್ಥಾಪಿಸಬಹುದಾಗಿದೆ.

ಮೇಲೆ ತಿಳಿಸಿದ ಕಾರಣಗಳಿಂದ ಸಮಾಜದ ಎಲ್ಲ ವರ್ಗಗಳಲ್ಲು ಉದ್ಯಮಪತಿಗಳನ್ನು ಬೆಳಸುವುದು ಸಾಧ್ಯವೆಂಬ ನಂಬಿಕೆ ನೆಲೆಯೂರಿತು. ಸಂಪತ್ತಿನ ಮರು ವಿತರಣೆಯೂ ಇದರಿಂದ ಸಾಧ್ಯ ಎಂದೂ ನಂಬಲಾಯಿತು.

ಆದರೆ ಸಣ್ಣ ಉದ್ದಿಮೆಗಳ ಬೆಳವಣಿಗೆಯಿಂದ ಏನು ಲಾಭ – ಅನುಕೂಲ ಉಂಟಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತೋ ಅಂತಹ ಲಾಭ – ಅನುಕೂಲಗಳು ಸೃಷ್ಟಿಯಾಗಲಿಲ್ಲ. ನಿರೀಕ್ಷೆಗಳೆಲ್ಲ ಹುಸಿಯಾದವು. ವಾಸ್ತವವಾಗಿ ದೊಡ್ಡ ಉದ್ದಿಮೆಗಳು ಮತ್ತು ಸಣ್ಣ ಉದ್ದಿಮೆಗಳ ನಡುವಿನ ವ್ಯತ್ಯಾಸ ಇಂದು ತುಂಬಾ ತೆಳುವಾಗಿದೆ. ತಂತ್ರಜ್ಞಾನ, ಕಚ್ಚಾ ಸಾಮಗ್ರಿಗಳ ಉಪಯೋಗ, ಆಧುನಿಕ ವಾಣಿಜ್ಯ ವ್ಯವಸ್ಥೆಗಳ ಬಳಕೆ ಮುಂತಾದವುಗಳ ದೃಷ್ಟಿಯಿಂದ ಇವೆರಡು ಬಗೆಯ ಉದ್ದಿಮೆಗಳಲ್ಲಿ ವ್ಯತ್ಯಾಸಗಳು ಇಲ್ಲವಾಗಿವೆ. ಈ ಕಾರಣದಿಂದ ಅವು ‘ಶ್ರಮ ಸಾಂದ್ರ’ ಎನ್ನುವಂತಿಲ್ಲ. ಸಂಪತ್ತಿನ ಮರುವಿತರಣೆ ಅವುಗಳಿಂದ ಸಾಧ್ಯವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಅಭಿವೃದ್ಧಿಯಲ್ಲಿನ ಪ್ರಾದೇಶಿಕ ಅಸಮಾನತೆಯನ್ನು ತೊಡೆಯುವಲ್ಲಿ ಅವು ಯಶಸ್ವಿಯಾಗಿಲ್ಲ. ನಿಜವಾಗಲು ಉದ್ಯೋಗಗಳು ಸೃಷ್ಟಿಯಾದುದು ಅಸಂಘಟಿತ ವಲಯದಲ್ಲಿ! ಅಸಂಘಟಿತ ವಲಯ ಎರಡು ಮುಖ್ಯ ಲಕ್ಷಣ ಹೊಂದಿರುತ್ತದೆ. ಮೊದಲನೆಯದಾಗಿ ಈ ವಲಯದಲ್ಲಿನ ಕಾರ್ಮಿಕರು ಅಸಂಘಟಿತರು – ಎರಡನೆಯದಾಗಿ ಇದೊಂದು ಅನಧಿಕೃತ ವಲಯವಾಗಿದೆ. ಏಕೆಂದರೆ ಈ ವಲಯದಲ್ಲಿನ ಚಟುವಟಿಕೆ ಗಳಿಗೆ ಕಾನೂನು – ನೀತಿ – ನಿಯಮಗಳು ಅನ್ವಯವಾಗುವುದಿಲ್ಲ. ಜೊತೆಗೆ ಇವು ಆಧುನಿಕ ಪ್ರಭುತ್ವ ನೀಡುವ ಸೌಲಭ್ಯ – ಸವಲತ್ತುಗಳನ್ನು ಅಷ್ಟಾಗಿ ಬಳಸಿಕೊಳ್ಳುವುದಿಲ್ಲ. ಈ ಅಸಂಘಟಿತ ವಲಯದಲ್ಲಿ ಉದ್ದಿಮೆಗಳು ಕೌಟುಂಬಿಕ ಪರಿಶ್ರಮ ದಿಂದ ನಡೆಯುತ್ತವೆ. ಇಲ್ಲಿ ಉದ್ದಿಮೆ – ವ್ಯವಹಾರದ ಮುಖ್ಯ ಉದ್ದೇಶ ಲಾಭವಾಗಿರುವುದಿಲ್ಲ. ಇಲ್ಲಿನ ಮುಖ್ಯ ಉದ್ದೇಶ ಕುಟುಂಬದ ಸದಸ್ಯರಿಗೆ ಅನ್ನ – ಆಶ್ರಯ ಒದಗಿಸುವುದಾಗಿದೆ. ಈ ಕಾರಣದಿಂದ ಪ್ರಸ್ತುತ ಅಧ್ಯಯನದಲ್ಲಿ ಕೈಗಾರೀಕರಣ ಎಂಬುದನ್ನು ಕೃಷಿಯೇತರ ಚಟುವಟಿಕೆಗಳು ಎಂದು ನಿರ್ವಚಿಸಿಕೊಳ್ಳಲಾಗಿದೆ. ಇದರಲ್ಲಿ ಆಧುನಿಕ ಕೃಷಿಯೇತರ ಚಟುವ ಟಿಕೆಗಳು ಮತ್ತು ಸಾಂಪ್ರದಾಯಿಕ ಕೃಷಿಯೇತರ ಚಟುವಟಿಕೆಗಳು ಜೊತೆ ಜೊತೆಯಲ್ಲಿರುತ್ತವೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಗದಗ ಜಿಲ್ಲೆಯ ಕೈಗಾರೀಕರಣ – ಕೃಷಿಯೇತರ ಚಟುವಟಿಕೆಗಳು ಸ್ಥಿತಿ – ಸಾಧ್ಯತೆಗಳನ್ನು ಪರಿಶೀಲಿಸಬೇಕಾಗಿದೆ.

ಭಾಗ೨ – ಗದಗಜಿಲ್ಲೆಯಲ್ಲಿಕೈಗಾರೀಕರಣಚಾರಿತ್ರಿಕಹಿನ್ನೆಲೆ

ಈ ಜಿಲ್ಲೆಯಲ್ಲಿನ ಗದಗ ಮತ್ತು ನರಗುಂದ ತಾಲ್ಲೂಕುಗಳು ಪ್ರಮುಖ ಔದ್ಯಮಿಕ ಕೇಂದ್ರಗಳಾಗಿವೆ. ಈ ಜಿಲ್ಲೆಯಲ್ಲಿ ಖನಿಜ ನಿಕ್ಷೇಪಗಳು ಕಡಿಮೆ ಇರುವುದರಿಂದ ಖನಿಜ ಆಧಾರಿತ ಕೈಗಾರಿಕಾ ಬೆಳವಣಿಗೆಗೆ ಹೆಚ್ಚು ಅವಕಾಶವಿರುವುದಿಲ್ಲ ಕೃಷಿ ಉತ್ಪನ್ನಗಳಾದ ಹತ್ತಿ, ಉಣ್ಣೆ, ಎಣ್ಣೆ ಬೀಜಗಳು, ಬತ್ತ ಮುಂತಾದವುಗಳನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿರುವುದರಿಂದ ಇವುಗಳನ್ನು ಆಧರಿಸಿಕೊಂಡಿರುವ ಕೈಗಾರಿಕೆಗಳು ಜಿಲ್ಲೆಯಾದ್ಯಂತ ಹಬ್ಬಿವೆ.

ಚಾರಿತ್ರಿಕವಾಗಿ ಗದಗ ಜಿಲ್ಲೆಯು ಬಟ್ಟೆ ಉತ್ಪಾದಿಸುವ ಮತ್ತು ನೂಲು ತಯಾರಿಸುವ ಕೇಂದ್ರವಾಗಿತ್ತು. ಬಾದಾಮಿ ಚಾಲುಕ್ಯರ ಕಾಲದಲ್ಲೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ (೮ನೆಯ ಶತಮಾನ) ದಲ್ಲಿ ಪಟ್ಟೆಗಾರರ (ರೇಷ್ಮೆ ನೇಯ್ಗೆ) ಉದ್ಯೋಗ ಅಸ್ತಿತ್ವದಲ್ಲಿದ್ದುದನ್ನು ಶಾಸನಗಳು ತಿಳಿಸುತ್ತವೆ. (ಧಾರವಾಡ ಜಿಲ್ಲಾ ಗ್ಯಾಸೆಟಿಯರ್, ೧೯೯೫, ಪು: ೩೩೧). ೭೮೩ರ ಲಕ್ಷ್ಮೇಶ್ವರ ಶಾಸನದಲ್ಲಿ ಪಟ್ಟೇಗಾರರ ಶ್ರೇಣಿಯ ವಿಚಾರವಿದೆ. ಅಣ್ಣಗೇರಿಯಲ್ಲು ೧೧೭೫ರಲ್ಲಿ ಪಟ್ಟೆಗಾರ ಶ್ರೇಣಿ ಇತ್ತೆಂದು ಶಾಸನಗಳಿಂದ ತಿಳಿದು ಬರುತ್ತದೆ. ಅಣ್ಣಗೇರಿಯ ೧೨ನೆಯ ಶತಮಾನದ ಶಾಸನದಲ್ಲಿ ‘ಸಾಲೆಸಾನಿರ್ವರ’ (೧೦೦೦ ನೇಕಾರರು) ಶ್ರೇಣಿಯ ಉಲ್ಲೇಖವಿದೆ. ಮುಳಗುಂದದಲ್ಲಿ (೧೬೦೨) ‘ಸಾಲಿಗರಯ್ವದಿಂಬರು’ ಮತ್ತು ರೋಣ ದಲ್ಲಿ ೮೭೪ರಲ್ಲಿ ಪಟ್ಟೆಗಾರ ಸಮಯವಿತ್ತು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ. ೧೮ನೆಯ ಶತಮಾನದಲ್ಲಿ ಅಣ್ಣಗೇರಿಯು ನೂಲು ಉತ್ಪಾದನೆಗೆ ಪ್ರಸಿದ್ಧವಾಗಿತ್ತು.

೧೩ನೆಯ ಶತಮಾನದಲ್ಲಿ ಗದಗ ಜಿಲ್ಲೆ ಉಣ್ಣೆ ಕೈಗಾರಿಕೆಗೆ ಪ್ರಸಿದ್ಧವಾಗಿದ್ದು ಗಾಣಿಗರು ಶ್ರೀಮಂತ ವರ್ಗವಾಗಿದ್ದರು ಎಂದು ಡಾ. ಜಿ.ಆರ್. ಕುಮಾರಸ್ವಾಮಿ ತಿಳಿಸುತ್ತಾರೆ. ಗುಡಗೇರಿ ಮತ್ತು ಮುಳಗಂದಗಳ ತೆಲ್ಲಿಗರು ಶ್ರೀಮಂತರು, ಉದಾರಿಗಳು ಎಂದು ಶಾಸನಗಳು ಹೇಳಿದ್ದು ಅವರ ಶ್ರೇಣಿಗಳ ಅಲ್ಲೇಖವು ಇದೆ. ‘ತೆಲ್ಲಿಗರೈವತ್ತೊಕ್ಕಲು’ ಎಂಬ ಶ್ರೇಣಿಯ ಉಲ್ಲೇಖವು ಲಕ್ಷ್ಮೇಶ್ವರ, ಗುಡಗೇರಿ, ಡಂಬಳ, ಹತ್ತಿಮತ್ತೂರು ಮುಂತಾದ ಅನೇಕ ಊರುಗಳಲ್ಲಿ ಕಂಡು ಬರುತ್ತವೆ. ಲಕ್ಕುಂಡಿ ಹಾಗೂ ಸೂಡಿಗಳು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಾಣ್ಯಗಳ ಟಂಕಸಾಲೆಯನ್ನು ಹೊಂದಿದ್ದ ವಿಚಾರ ಶಾಸನಗಳಿಂದ ತಿಳಿದುಬರುತ್ತದೆ. ‘ಲೊಕ್ಕಿಗುಂಡಿ ಗದ್ಯಾಣ’ ಎಂಬ ನಾಣ್ಯದ ಹೆಸರು ಪದೇ ಪದೇ ಶಾಸನ ಗಳಲ್ಲಿ ಬರುತ್ತದೆ. ಗದಗವು ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಗದಗವು ಬೀಡಿ ಸುತ್ತುವ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಇದೊಂದು ಗೃಹಕೈಗಾರಿಕೆಯಾಗಿದೆ.

ಬ್ರಿಟಿಷರು ಬಂದನಂತರವೂ ಬಟ್ಟೆ ಉದ್ಯಮ ಜಿಲ್ಲೆಯಲ್ಲಿ ಬಲವಾಗಿತ್ತು. ಜಿಲ್ಲೆಯ ಗಜೇಂದ್ರಗಡ ಮತ್ತು ಬೆಟಗೇರಿಗಳು ಹತ್ತಿಬಟ್ಟೆ ತಯಾರಿಕಾ ಕೇಂದ್ರಗಳಾಗಿದ್ದವು. ಗದಗ ಮತ್ತು ಬೆಟಗೇರಿಗಳಲ್ಲಿ ಹುಬ್ಬಳಿಗಿಂತಲು ಉತ್ತಮವಾದ ಸೀರೆ ಗಳನ್ನು ತಯಾರಿಸುತ್ತಿದ್ದರು. ಗದಗದಲ್ಲಿ ೧೮೯೮ರಲ್ಲಿ ‘ಗದಗ ಕಾಟನ್ ಅಂಡ್ ಸ್ಪಿನ್ನಿಂಗ್ ಮಿಲ್’ ಎಂಬ ಉದ್ದಿಮೆ ಪ್ರಾರಂಭವಾಯಿತು. ಇದರಿಂದಾಗಿ ಗದಗಿನಲ್ಲಿ ಕೈಮಗ್ಗಗಳು ಕುಸಿಯಲಾರಂಭಿಸಿದವು.

ಧಾರವಾಡ ಜಿಲ್ಲೆಯ ಗ್ಯಾಸೆಟಿಯರ್‌ನಲ್ಲಿ ಉಲ್ಲೇಖಿಸಿರುವಂತೆ ಗದಗ ಜಿಲ್ಲೆಯಲ್ಲಿದ್ದ ಮಧ್ಯಮ ಮತ್ತು ದೊಡ್ಡ ಉದ್ಯಮ ಗಳು ಹೀಗಿವೆ. (೧೯೯೩ – ೯೪):

೧. ಗದಗ ಕೋಆಪರೇಟಿವ್ ಟೆಕ್ಸ್‌ಟೈಲ್ಸ್ ಮಿಲ್, ನಿಯಮಿತ, ಹುಲಕೋಟಿ, ಸ್ಥಾಪನೆ: ೧೯೭೨, ಬಂಡವಾಳ  ರೂ.೩೨೫.೩೪ ಲಕ್ಷ. ಉದ್ಯೋಗಿಗಳ ಸಂಖ್ಯೆ ೧೨೨೦.

೨. ಫಾರ್ಮರ್ಸ್ ಕೋಆಪರೇಟಿವ್ ಸ್ಪಿನ್ನಿಂಗ್ ಮಿಲ್, ಹುಲಕೋಟೆ (೧೯೮೨), ಬಂಡವಾಳ ರೂ.೭೬೩ ಲಕ್ಷ,  ಉದ್ಯೋಗಿಗಳ ಸಂಖ್ಯೆ ೧೬೪.

೩. ನಂದಿ ಟೆಕ್ಸಟೈಲ್ಸ್, ನರಗುಂದ, ಬಂಡವಾಳ ರೂ. ೧೬೬.೨೬ ಲಕ್ಷ. ಉದ್ಯೋಗಿಗಳ ಸಂಖ್ಯೆ ೫೮೫.

೪. ರೈತ ಟೆಕ್ಸಟೈಲ್ಸ್‌, ಹುಲಕೋಟಿ, ಬಂಡವಾಳ ರೂ.೨೩.೪ ಲಕ್ಷ. ಉದ್ಯೋಗಿಗಳ ಸಂಖ್ಯೆ ೨೫೦.

೫. ದಾವಣಗೆರೆ ಕಾಟನ್‌ ಮಿಲ್ಸ್, ಗದಗ (೧೯೩೬). ಬಂಡವಾಳ ರೂ.೮೮.೫೮ ಲಕ್ಷ. ಉದ್ಯೋಗಿಗಳ ಸಂಖ್ಯೆ ೬೬೦.

೬. ಫಾರ್ಮರ್ಸ್ ಆಯಿಲ್ ಸೀಡ್ ಪ್ರೋಸಸಿಂಗ್ ಸೊಸೈಟಿ, ಬಿಂಕದಕಟ್ಟಿ (೧೯೭೩), ಬಂಡವಾಳ ರೂ.೯೩.೭೦ ಲಕ್ಷ.  ಉದ್ಯೋಗಿಗಳ ಸಂಖ್ಯೆ ೧೦೦.

೭. ಗದಗ ಕೋಆಪರೇಟಿವ್ ಆಯಿಲ್ಸ್, ಗದಗ, ೧೯೫೯, ಬಂಡವಾಳ ರೂ.೧೪೧ ಲಕ್ಷ. ಉದ್ಯೋಗಿಗಳ ಸಂಖ್ಯೆ ೧೨೨.

೮. ಸೋಮೇಶ್ವರ ಸ್ಪಿನ್ನಿಂಗ್ ಮಿಲ್, ಲಕ್ಷ್ಮೇಶ್ವರ, ಬಂಡವಾಳ ರೂ.೧೦೫೦ ಲಕ್ಷ. ಉದ್ಯೋಗಿಗಳ ಸಂಖ್ಯೆ ೧೨೦೦.

೯. ವೆಂಕಟೇಶ್ ಕೋಆಪರೇಟಿವ್ ಟೆಕ್ಸ್‌ ಟೈಲ್ಸ್ ಮಿಲ್, ಅಣ್ಣಗೇರಿ, ಬಂಡವಾಳ ರೂ.೧೦೫೦ ಲಕ್ಷ. ಉದ್ಯೋಗಿಗಳ  ಸಂಖ್ಯೆ ೧೨೦೦.

೩೧.೩.೧೯೯೯ರಲ್ಲಿ ಗದಗ ಜಿಲ್ಲೆಯಲ್ಲಿ ಇದ್ದ ನೊಂದಾಯಿತ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಖ್ಯೆ ೩೭೪೧.

ಹೊಸ ಜಿಲ್ಲೆಯಾದ ಗದಗದ ಕೈಗಾರಿಕಾ ಚಟುವಟಿಕೆಗಳ ವಿವರವಾದ ಮಾಹಿತಿ ಲಭ್ಯವಿಲ್ಲ. ವಿವಿಧ ಮೂಲಗಳಿಂದ ಸಂಗ್ರಹಿಸಿರುವ ಮಾಹಿತಿಯನ್ನು ಆಧರಿಸಿ ಕೆಲವು ನಿರ್ಣಯಗಳನ್ನು ಇಲ್ಲಿ ಮಂಡಿಸಲು ಪ್ರಯತ್ನಿಸಲಾಗಿದೆ. ಜಿಲ್ಲೆಯಲ್ಲಿ ರುವ ಕೈಗಾರಿಕಾ ಘಟಕಗಳ ಸಂಖ್ಯೆ, ಕೈಗಾರಿಕಾ ಉದ್ಯೋಗಿಗಳ ಸಂಖ್ಯೆ ಮತ್ತು ಹೂಡಲಾದ ಬಂಡವಾಳದ ಪ್ರಮಾಣ ಮುಂತಾದವುಗಳ ವಿವರಗಳನ್ನು ಇಲ್ಲಿ ವಿಶ್ಲೇಷಣೆಗೆ ಬಳಸಲಾಗಿದೆ. ಕೈಗಾರಿಕೆ, ಗುಡಿ/ಗೃಹ ಕೈಗಾರಿಕೆ, ವ್ಯಾಪಾರ, ವಾಣಿಜ್ಯ, ಸಾರಿಗೆ ಮುಂತಾದ ಕ್ಷೇತ್ರಗಳಲ್ಲಿನ ಚಟುವಟಿಕೆಗಳನ್ನು ಕೃಷಿಯೇತರ ಚಟುವಟಿಕೆಗಳೆಂದು ನಿರ್ವಚಿಸಿಕೊಳ್ಳ ಲಾಗಿದೆ ಗದಗ ಜಿಲ್ಲೆಯ ಕೈಗಾರಿಕಾ ರಂಗದ ಬೆಳವಣಿಗೆಯನ್ಜು ರಾಜ್ಯಮಟ್ಟದ ಸರಾಸರಿಗೆ ಹೋಲಿಸಿ ನೋಡಲಾಗಿದೆ.

ಮಾಹಿತಿ – ಅಂಕಿ – ಅಂಶಗಳ ಕೊರತೆಯಿಂದಾಗಿ ಹಾಗೂ ಕ್ಷೇತ್ರಕಾರ್ಯ ಮಾಡಿ ಸಂಗ್ರಹಿಸಿದ ಮಾಹಿತಿ ಇಲ್ಲದೆ ಇರುವುದರಿಂದ ಗದಗ ಜಿಲ್ಲೆಯ ಕೈಗಾರಿಕಾವಲಯ ಕುರಿತಂತೆ ಮೂಲಭೂತವಾದ ನಿರ್ಣಯಗಳನ್ನು ರೂಪಿಸುವುದು ನಮಗೆ ಸಾಧ್ಯವಾಗಿಲ್ಲ. ಸ್ಥೂಲವಾದ ಕೆಲವು ತಥ್ಯೆಗಳನ್ನು ಇಲ್ಲಿ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ.

ಭಾಗಕೃಷಿಯೇತರಚಟುವಟಿಕಗಳು

ಕೃಷಿ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳನ್ನು ಕೃಷಿಯೇತರ ಚಟುವಟಿಕೆಗಳೆಂದು ವರ್ಗೀ ಕರಿಸಿಕೊಳ್ಳಲಾಗಿದೆ. ಪ್ರದಾನಧಾರೆ ಅರ್ಥಶಾಸ್ತ್ರದ ಪ್ರಕಾರ ಆರ್ಥಿಕ ಚಟುವಟಿಕೆಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಿಕೊಳ್ಳಬಹುದು. ಒಂದನೆಯದು ಪ್ರಾಥಮಿಕ ವಲಯ. ಇದರಲ್ಲಿ ಕೃಷಿ, ಗಣಿಗಾರಿಕೆ, ಮೀನುಗಾರಿಕೆ, ಅರಣ್ಯಮುಂತಾದ ಚಟುವಟಿಕೆಗಳು ಸೇರುತ್ತವೆ. ಎರಡನೆಯದು ಕೈಗಾರಿಕಾ ವಲಯ. ಮೂರನೆಯದು ಸಾರಿಗೆ, ಬ್ಯಾಂಕಿಂಗ್, ವಾಣಿಜ್ಯ ಮುಂತಾದ ಸೇವಾ ಚಟುವಟಿಕೆಗಳನ್ನು ಒಲಗೊಂಡ ತೃತೀಯ ಸೇವಾರಂಗ. ಕೃಷಿಯೇತರ ಚಟುವಟಿಕೆಗಳ ದೃಷ್ಟಿಯಿಂದ ಗದಗ ಜಿಲ್ಲೆಯು ರಾಜ್ಯದಲ್ಲಿ ಮಧ್ಯಮ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ದುಡಿಮೆಗಾರ ವರ್ಗದ ಪ್ರಮಾಣ ಶೇ. ೨೩.೬೪. ರಾಜ್ಯ ಮಟ್ಟದಲ್ಲಿ ಇದರ ಪ್ರಮಾಣ ಶೇ. ೨೯.೮೮. ಸಂಗತಿಯ ಆಧಾರದ ಮೇಲೆ ಗದಗ ಜಿಲ್ಲೆಯು ಇಂದಿಗೂ ದುಡಿಮೆಗಾರ ವರ್ಗದ ದೃಷ್ಟಿಯಿಂದ ಕೃಷಿ ಪ್ರಧಾನ ಆರ್ಥಿಕತೆಯಾಗಿದೆ.

ಕೃಷಿ ವಲಯವನ್ನು ಅವಲಂಬಿಸಿಕೊಂಡಿರುವ ಜನವರ್ಗದಲ್ಲಿ ಅತಿ ಹೆಚ್ಚಿನ ಜನರು ಕೃಷಿ ಕಾರ್ಮಿಕರಾಗಿದ್ದರೆ ಅವರ ಬದುಕು ಬಡತನದ ಬವಣೆಯಿಂದ ಸೊರಗುತ್ತಿದೆ. ಕೃಷಿ ಕೂಲಿ ಕೆಳಮಟ್ಟದಲ್ಲಿದೆ. ಕೃಷಿಯೇತರ ಚಟುವಟಿಕೆಗಳನ್ನು ತೀವ್ರಗತಿಯಲ್ಲಿ ಬೆಳಸದೆ ಕೃಷಿರಂಗದಲ್ಲಿ ಕೂಲಿದರವನ್ನು ಏರಿಸಲು ಸಾಧ್ಯವಿಲ್ಲ. ಇಂತಹ ವ್ಯವಸ್ಥೆಯಲ್ಲಿ ಬಡತನ, ಅಸಮಾನತೆ, ಹಸಿವು ಮುಂತಾದ ಸಮಸ್ಯೆಗಳನ್ನು ನಿವಾರಿಸಲು ಕೃಷಿಯೇತರ ಚಟುವಟಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳಸುವ ಅಗತ್ಯವಿದೆ.

ಗದಗ ಜಿಲ್ಲೆಯಲ್ಲಿರುವ ದೊಡ್ಡ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಂಖ್ಯೆ ಕೇವಲ . ಸಣ್ಣ ಉದ್ದಿಮೆಗಳ ಸಂಖ್ಯೆ ೩೭೪೧. ಉದ್ದಿಮೆಗಳ ಮೇಲೆ ತೊಡಗಿಸಿರುವ ಬಂಡವಾಳ ಸರಿಸುಮಾರು ರೂ.೩೫೨೫ ಲಕ್ಷ ಎನ್ನಲಾಗಿದೆ. ಉದ್ದಿಮೆ ರಂಗದಲ್ಲಿ ನೇರವಾಗಿ ಉದ್ಯೋಗಗಳಾಗಿರುವವರ ಸಂಖ್ಯೆ ೬೧೦೨. ಪ್ರಾಥಮಿಕೇತರ ವಲಯದಲ್ಲಿರುವ ದುಡಿಮೆಗಾರ ವರ್ಗ ೯೧,೯೪೫.

ಬಂಡವಾಳ ಮತ್ತು ಉದ್ಯೋಗ

ಬಂಡವಾಳ ಹೂಡಿಕೆ ಮತ್ತು ಉದ್ಯೋಗಗಳ ಸೃಷ್ಟಿಗಳ ನಡುವಿನ ಸಂಬಂಧದ ಬಗ್ಗೆ ವಿವಿಧ ತಾತ್ವಿಕ ನೆಲೆಗಳಿದ್ದಾವೆ. ಬಂಡವಾಳ ಸಾಂದ್ರ ಉದ್ದಿಮೆಗಳ ಸಂಖ್ಯೆಯನ್ನು ಅಭಿವೃದ್ಧಿಯ ಮಾನದಂಡವಾಗಿ ಬಳಸುವ ಪದ್ಧತಿ ರೂಢಿಯಲ್ಲಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಬಂಡವಾಳದ ಕೊರತೆ ಇದೆ. ಆದರೆ ಇಲ್ಲಿ ಶ್ರಮ ಶಕ್ತಿ ಅಪಾರವಾಗಿದೆ. ಬಗೆಯ ಉತ್ಪಾದನಾ ಕರ್ತೃಗಳ ಲಭ್ಯತೆಯಿಂದಾಗಿ ಉದ್ದಿಮೆಗಳಲ್ಲಿ ಬಂಡವಾಳ ಹೂಡಿಕೆಗೆ ಅನುಗುಣವಾಗಿ ಉದ್ಯೋಗಗಳ ಸೃಷ್ಟಿಯು ನಡೆಯಬೇಕಾಗುತ್ತದೆ. ಸಣ್ಣ ಉದ್ದಿಮೆಗಳು ಶ್ರಮಸಾಂದ್ರವಾಗಿರುತ್ತವೆ ಎಂದು ಅವುಗಳು ಗದಗದಂತಹ ಜಿಲ್ಲೆಗೆ ಹೆಚ್ಚು ಸೂಕ್ತ ಎಂದು ವಾದ ಮಾಡಲಾಗುತ್ತಿದೆ.

ಬೃಹತ್ ಉದ್ದಿಮೆಗಳು ಬಂಡವಾಳಸಾಂದ್ರತೆ, ಆಮದು ಅವಲಂಬನೆ ಮತ್ತು ಉಚ್ಛತಂತ್ರಜ್ಞಾನವನ್ನು ಬಯಸುತ್ತವೆ. ಆದರೆ ಸಣ್ಣ ಉದ್ದಿಮೆಗಳು ಶ್ರಮಸಾಂದ್ರವೂ, ಸ್ಥಳೀಯ ಸಂಪನ್ಮೂಲ ಅವಲಂಬಿತವೂ ಮತ್ತು ಸರಳ ತಂತ್ರಜ್ಞಾನವನ್ನು ಆಧರಿಸಿಕೊಂಡಿರುತ್ತವೆ. ನಿರುದ್ಯೋಗ ನಿವಾರಣೆ ದೃಷ್ಡಿಯಿಂದ ಸಣ್ಣ ಉದ್ದಿಮೆಗಳು ಹೆಚ್ಚು ಪ್ರಸ್ತುತವೆಂದು ಹೇಳಲಾಗಿದೆ.

ಇಂತಹ ನಂಬಿಕೆಗಳಿಗೆ ಗಟ್ಟಿಯಾದ ಆಧಾರವಿದ್ದಂತೆ ಕಾಣಲಿಲ್ಲ. ಬಡವಾಳ ಮತ್ತು ಉದ್ಯೋಗಗಳ ನಡುವಿನ ಸಂಬಂಧವು ಅತ್ಯಂತ ಸಂಕೀರ್ಣವಾದುದು. ಬಂಡವಾಳ ಪ್ರಮಾಣವು ಉತ್ಪಾದನಾ ವಿಧಾನವನ್ನು ಅವಲಂಬಿಸಿದೆ. ಉದ್ಯೋಗ ಸೃಷ್ಟಿಸಬೇಕು ಎಂಬ ಉದ್ಧೇಶದಿಂದ ಯಾರೂ ಬಂಡವಾಳ ಹೂಡುವುದಿಲ್ಲ. ಬಂಡವಾಳ ಹೂಡಿಕೆ ಹಿಂದಿನ ಚಾಲನಶಕ್ತಿಯೆಂದರೆ ಲಾಭದ ನಿರೀಕ್ಷೆ. ಶ್ರಮಸಾಂದ್ರ ತಂತ್ರದಿಂದ ಹೆಚ್ಚು ಲಾಭಗಳಿಸುವುದು ಸಾಧ್ಯವಾಗುವುದಾದರೆ ಬಂಡವಾಳಶಾಹಿಗಳು ಶ್ರಮಸಾಂದ್ರ ತಂತ್ರವನ್ನೇ ಅಳವಡಿಸಿ ಕೊಳ್ಳುತ್ತಾರೆ. ಯಾವ ಬಗೆಯ ಉತ್ಪಾದನಾ ಕರ್ತೃಗಳ ಕೂಟದಿಂದ ಉತ್ಪಾದನಾ ವೆಚ್ಚವು ಕನಿಷ್ಟವಾಗಿ ಮತ್ತು ಲಾಭ ಗರಿಷ್ಟವಾಗಿರುವುದೊ ಅಂತಹ ಕೂಟವನ್ನು ಬಂಡಾವಾಳ ಶಾಹಿಗಳು ಆಯ್ಕೆ ಮಾಡಿಕೊಳ್ಳುತ್ತಾರೆ.

ಗದಗ ಜಿಲ್ಲೆಯಲ್ಲಿ ಸಣ್ಣ ಉದ್ದಿಮಿಗಳಿಗೆ ಸಂಬಂಧಿಸಿದಂತೆ ಪ್ರತಿ ಒಂದು ಲಕ್ಷ ರೂಪಾಯಿ ಬಂಡವಾಳ ಹೂಡಿಕೆಗೆ ಸೃಷ್ಟಿಯಾಗುವ ಉದ್ಯೋಗಗಳು .೭೨. ಆದರೆ ಬೃಹತ್ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಲ್ಲಿ ಪ್ರತಿ ಒಂದು ಲಕ್ಷ ರೂಪಾಯಿ ಬಂಡವಾಳ ಹೂಡಿಕೆಯು .೫೦ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಗದಗ ಜಿಲ್ಲೆಯಲ್ಲಿ ಸಣ್ಣ ಉದ್ದಿಮೆಗಳು ಶ್ರಮಸಾಂದ್ರದಿಂದ ಕೂಡಿವೆ. ಬೃಹತ್ ಉದ್ದಿಮೆಗಳು ಬಂಡವಾಳ ಸಾಂದ್ರವಾಗಿವೆ. ದೃಷ್ಟಿಯಿಂದ ಗದಗ ಜಿಲ್ಲೆಯಲ್ಲಿ ಸಣ್ಣ ಉದ್ದಿಮೆಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ.