ಸಾಕ್ಷರತೆ ಮತ್ತು ಅಭಿವೃದ್ಧಿಗಳ ನಡುವಿನ ಸಂಬಂಧವನ್ನು ವಿವಧ ನೆಲೆಗಳಲ್ಲಿ ಚರ್ಚಿಸಲು ಸಾಧ್ಯ. ಸಾಕ್ಷರತೆಯನ್ನು ಅಭಿವೃದ್ಧಿಯ ಸಾಧನವೆಂದೂ, ಸಂಪನ್ಮೂಲವೆಂದೂ, ಮಾನವ ಬಂಡವಾಳವೆಂದೂ ಪರಿಭಾವಿಸುವ ಪರಿಯೊಂದು ಸಾಂಪ್ರದಾಯಿಕ ವರಮಾನ ಕೇಂದ್ರಿತ ಅಭಿವೃದ್ಧಿ ಸಂಕಥನದಲ್ಲಿ ರೂಢಿಯಲ್ಲಿದೆ. ಸಾಕ್ಷರತೆಯು ಜನರನ್ನು ಸುಶಿಕ್ಷರನ್ನಾಗಿಸುತ್ತದೆ. ಅವರ ಉತ್ಪಾದನಾ ಕ್ಷಮತೆಯನ್ನೂ ಅವರ ಕುಶಲತೆಯನ್ನೂ ಉತ್ತಮಪಡಿಸುತ್ತದೆ ಎಂದೆಲ್ಲಾ ವಾದಿಸಲಾಗುತ್ತಿದೆ. ಸಾಕ್ಷರತೆಯನ್ನು ‘ಆಧುನೀಕರಣ’ದ ಹರಿಕಾರನೆಂದೂ ಹೇಳಲಾಗುತ್ತಿದೆ. ಇವೆಲ್ಲವೂ ಒಂದು ನೆಲೆಯಲ್ಲಿ ಸರಿಯಾದ ವಿಚಾರಗಳೇ ಆಗಿವೆ. ಸಾಕ್ಷರತೆಯ ಮೇಲೆ ಹೇಳಿರುವ ನಿಯೋಗಗಳೆಲ್ಲವನ್ನೂ ನಿರ್ವಹಿಸುತ್ತಲೇ ಬಂದಿದೆ. ಆದರೆ ಇದು ಸಾಕ್ಷರತೆಯ ಒಂದು ಮುಖ ಮಾತ್ರವಾಗಿದೆ. ಸಾಂಪ್ರದಾಯಿಕ ಮೂಲಧಾರೆ ಅಭಿವೃದ್ಧಿ ವಿಚಾರ ಪ್ರಣಾಳಿಕೆಯಲ್ಲಿ ಸಾಕ್ಷರತೆಯನ್ನು ಹೀಗೆ ಸಾಧನವೆಂದು ಪರಿಗಣಿಸುತ್ತಾ ಬರಲಾಗಿದೆ.

ಅಂತಸ್ಥವಾದಿ ಗುಣ

೧೯೯೮ರಲ್ಲಿ ಆಲ್‌ಫ್ರೆಡ್‌ ನೊಬೆಲ್ ಸ್ಮಾರಕ ಬ್ಯಾಂಕ್ ಆಫ್ ಸ್ವೀಡನ್‌ನ ಅರ್ಥಶಾಸ್ತ್ರದ (ನೊಬೆಲ್) ಪ್ರಶಸ್ತಿಗಳಿಸಿರುವ ಅಮರ್ತ್ಯಸೇನ್‌ ಅವರು ಮೂಲಧಾರೆ ಅಭಿವೃದ್ಧಿ ಸಂಕಥನವು ಸಾಕ್ಷರತೆಯನ್ನು ಪರಿಭಾವಿಸಿಕೊಂಡಿರುವ ಪರಿಗೆ ಭಿನ್ನವಾದ ಕ್ರಮವೊಂದನ್ನು ಬೆಳೆಸಿದ್ದಾರೆ. ಅವರ ಪ್ರಕಾರ ಸಾಕ್ಷರತೆಯು ಅಭಿವೃದ್ಧಿಯ ‘ಸಾಧನ’ವೂ ಹೌದು ಮತ್ತು ಅದರ ‘ಸಾಧ್ಯ’ವೂ ಹೌದು. ಅದು ತನ್ನಷ್ಕ್ಕೆ ತಾನೆ ಮಹತ್ವದ್ದಾಗಿದೆ. ಅದು ಮನುಷ್ಯನ ಅಂತಸ್ಥವಾದಿ ಗುಣವಾಗಿದೆ. ಅದು ಮನುಷ್ಯನಿಗೆ ಸಮಾಜದಲ್ಲಿ ಗೌರವದ ಪ್ರತಿಷ್ಟೆಯ ಸ್ಥಾನವನ್ನು ಒದಗಿಸಿಕೊಡುತ್ತದೆ. ಅದು ಸ್ವಾಭಿಮಾನದ ಗುಣವನ್ನು ಬೆಳಸುತ್ತದೆ. ಸರೀಕರ ಮುಂದೆ ತಲೆ ಎತ್ತಿ ನಿಲ್ಲುವ ಒಂದು ಶಕ್ತಿಯನ್ನು – ಸಾಮರ್ಥ್ಯವನ್ನೂ ಅದು ನೀಡಬಲ್ಲುದಾಗಿದೆ. ಅಭಿವೃದ್ಧಿಯು ಅವ್ಯಕ್ತವಾಗುವ ಪರಿಯೇ ಸಾಕ್ಷರತೆ. ಕೇವಲ ಶ್ರಮ ಶಕ್ತಿಯ ಕಾರ್ಯಕ್ಷತೆಯನ್ನು ಸಾಕ್ಷರತೆ ಉತ್ತಮ ಪಡಿಸುತ್ತದೆ ಎಂಬ ಕಾರಣಕ್ಕೆ ಮಾತ್ರ ಅದು ಮಹತ್ವದ್ದಾಗಬೇಕಾಗಿಲ್ಲ. ಆದರೆ ವಾಸ್ತವದಲ್ಲಿ ಅದು ಶ್ರಮಶಕ್ತಿಯ ಕಾರ್ಯಕ್ಷಮತೆಯನ್ನು ಉತ್ತಮಪಡಿಸುತ್ತದೆ. ಕುಶಲತೆಯನ್ನು ನೀಡುತ್ತದೆ. ‘ಆಧುನಿಕ’ ಗುಣವನ್ನು ನೀಡುತ್ತದೆ ಎಂಬ ಕಾರಣಗಳಿಗೆ ಮಾತ್ರ ಮಹತ್ವದ್ದಾಗಿಬಿಟ್ಟಿದೆ. ಈ ಪರಿಯ ದೃಷ್ಟಿಕೋನವನ್ನು ಅಮರ್ತ್ಯಸೇನ್ ಟೀಕಿಸುತ್ತಾರೆ. ಅವರ ಪ್ರಕಾರ ಸಾಕ್ಷರತೆಯು ಮೂಲಭೂತವಾಗಿ ಮನುಷ್ಯನ ಒಂದು ಅಂತಸ್ಥವಾದಿ ಗುಣ. ಅದಕ್ಕೆ ಉಪಕರಣವಾದಿ (Instrumental) ಮಹತ್ವವೂ ಇದೆ ಮತ್ತು ಅಂತಸ್ಥವಾದಿ (Intrinsic) ಮಹತ್ವವೂ ಇದೆ. ಸಾಕ್ಷರತೆಯು ಒಂದು ಗುಣ. ಒಂದು ಶಕ್ತಿ. ಮನುಷ್ಯನಿಗೆ ಧಾರಣ ಶಕ್ತಿಯನ್ನು ಒದಗಿಸುವ ಒಂದು ಶಕ್ತಿ ಸಾಕ್ಷರತೆ. ಧಾರಣ ಶಕ್ತಿಯ ದುಸ್ಥಿತಿಯನ್ನು ಅಮರ್ತ್ಯಸೇನ್ ‘ಬಡತನವೆಂದು’ ನಿರ್ವಚಿಸಿದ್ದಾರೆ. ಅವರ ಪ್ರಕಾರ ಸಾಕ್ಷರತೆ ಇಲ್ಲದಿರುವುದು ಧಾರಣ ಶಕ್ತಿಯ ದುಸ್ಥಿತಿಯ ಸೂಚಿಯಾಗಿದೆ. ಅಂದ ಮೇಲೆ ಅಕ್ಷರ ಜ್ಞಾನ ಇಲ್ಲದಿರುವ ಸ್ಥಿತಿಯು ಬಡತನ, ಅಕ್ಷರಸ್ಥರ ಸಂಖ್ಯೆ – ಪ್ರಮಾಣ ಎಲ್ಲಿ ಕಡಿಮೆ ಇರುತ್ತದೋ, ಎಲ್ಲಿ ಅನಕ್ಷರಸ್ಥರ ಸಂಖ್ಯೆ ಮತ್ತು ಪ್ರಮಾಣ ಅಧಿಕವಾಗಿರುತ್ತದೊ ಅಲ್ಲಿ ಬಡತನವೂ ತೀವ್ರವಾಗಿರುತ್ತದೆ ಎಂದು ಹೇಳಬಹುದು. ಸಾಕ್ಷರತೆಯು ಜನರಿಗೆ ಸ್ವಾತಂತ್ರ್ಯವನ್ನು ಒದಗಿಸುವ ಒಂದು ಗುಣವಾಗಿದೆ. ಸಾಕ್ಷರತೆ ಎಂದರೆ ಸ್ವಾತಂತ್ರ್ಯವೆಂದೂ, ಸ್ವಾತಂತ್ರ್ಯವೆಂದರೆ ಅಭಿವೃದ್ಧಿಯೆಂದು ಪರಿಭಾವಿಸಬಹು ದಾಗಿದೆ.                    

ಅಮರ್ತ್ಯಸೇನ್ ಅವರು ‘ಸಾಕ್ಷರತೆಯೇ ಅಭಿವೃದ್ಧಿ’ ಎಂದು ಹೇಳುತ್ತಾರೆ. ಧಾರಣ ಶಕ್ತಿಯನ್ನು ಒದಗಿಸುವ ಗುಣ ಸಾಕ್ಷರತೆಗೆ ಇದೆ. ಧಾರಣ ಶಕ್ತಿಯೆಂದರೆ ಬದಕುವ ಅವಕಾಶಗಳನ್ನು ತನ್ನದಾಗಿಸಿಕೊಳ್ಳಲು ಅಗತ್ಯವಾದ ‘ಸಾಮರ್ಥ್ಯ’ ಹಾಗೂ ಹರಿದುಬರುವ ಅವಕಾಶಗಳಲ್ಲಿ ತನಗೆ/ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ಯ್ರ. ಈ ಧಾರಣ ಶಕ್ತಿಯು ಇಲ್ಲದಿರುವ ಸ್ಥಿತಿಯನ್ನೇ ಅಮರ್ತ್ಯಸೇನ್ ‘ಬಡತನ’ ಎಂದು ಕರೆದಿದ್ದಾರೆ. ಸಾಕ್ಷರತೆಯು ಧಾರಣ ಶಕ್ತಿಯನ್ನು ಸಂವರ್ಧಿಸುವ ಒಂದು ಶಕ್ತಿಯಾಗಿದೆ. ಸಾಕ್ಷರತೆಯು ಬದುಕನ್ನು ಉತ್ತಮಪಡಿಸಿಕೊಳ್ಳಲು ಅಗತ್ಯವಾದ ಅವಕಾಶಗಳನ್ನು ತನ್ನದಾಗಿಸಿಕೊಳ್ಳಬಲ್ಲ ‘ಸಾಮರ್ಥ್ಯ’ವನ್ನು ಒದಗಿಸುತ್ತದೆ ಮತ್ತು ಹರಿದು ಬರುವ ಅವಕಾಶಗಳಲ್ಲಿ ತನಗೆ/ತಮಗೆಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ‘ಸ್ವಾತಂತ್ರ್ಯವನ್ನು ಒದಗಿಸುತ್ತದೆ.

ನಮ್ಮ ಸಮಾಜದ ಸಂದರ್ಭದಲ್ಲಿ, ಚಾರಿತ್ರಿಕವಾಗಿ ಸಾಕ್ಷರತೆ – ಶಿಕ್ಷಣ ಮುಂತಾದವು ಪ್ರತಿಷ್ಠಿತ ವರ್ಗದ ಪ್ರತಿಷ್ಠಿತ ಸರಕುಗಳಾಗಿ ಬಿಟ್ಟಿದ್ದವು. ಸಮಾಜದ ಬಹು ಪಾಲು ಜನರು ಸಾಕ್ಷರತೆಯಿಂದ ವಂಚಿತರಾಗಿದ್ದರು. ನಮ್ಮ ಸಮಾಜದಲ್ಲಿ ‘ಸಾಕ್ಷರತೆಯೇ ಅಭಿವೃದ್ಧಿ’ ಎಂಬ ನಂಬಿಕೆ ಅಲಕ್ಷ್ಯಕ್ಕೆ ಗುರಿಯಾಗಿ – ಮೂಲೆಗೆ ಸರಿದು ಅದರ ಉಪಕರಣವಾದಿ ನೆಲೆಗಳು ಪ್ರಧಾನವಾಗಿಬಿಟ್ಟಿವೆ. ಅಮರ್ತ್ಯಸೇನ್, ಮೆಹಬೂಬ್‌ – ಉಲ್‌ ಹಕ್ ಅವರು ಸಾಕ್ಷರತೆ ವೈಫಲ್ಯವನ್ನು ಅಭಿವೃದ್ಧಿಯ ವೈಫಲ್ಯವೆಂದೆ ಪರಿಗಣಿಸಿದ್ದಾರೆ.

ಸಾಕ್ಷರತೆಯೇ ಅಭಿವೃದ್ಧಿ. ಸಾಕ್ಷರತೆಯು ಅಭಿವೃದ್ಧಿಯ ಸಾಧನವೂ ಹೌದು ಮತ್ತು ಅದರ ‘ಸಾಧ್ಯ’ವೂ ಹೌದು ಎಂಬ ವಿಚಾರಗಳನ್ನು ಒಳಗೊಂಡ ವಿಚಾರ ಪ್ರಣಾಳಿಕೆಯನ್ನು ‘ಮಾನವ ಅಭಿವೃದ್ಧಿ’ ಎಂದು ಕರೆಯಲಾಗಿದೆ. ಮೆಹಬೂಬ್ – ಉಲ್ – ಹಕ್ ಅವರು ಯುಎನ್‌ಡಿಪಿಗೆ ಸಿದ್ಧಮಾಡಿಕೊಟ್ಟ ‘ಮಾನವ ಅಭಿವೃದ್ಧಿ ವರದಿ (HDR)ಗಳಲ್ಲಿ ಅಭಿವೃದ್ಧಿಯನ್ನು ಅಳೆಯಲು ‘ಆರೋಗ್ಯ – ಸಾಕ್ಷರತೆ – ವರಮಾನ’ ಮೂರನ್ನೂ ಒಳಗೊಂಡ ಒಂದು ಸಂಯುಕ್ತ ಸೂಚ್ಯಂಕವನ್ನು ಬಳಸಿ ದ್ದಾರೆ. ಆ ಸೂಚ್ಯಂಕವನ್ನು ‘ಮಾನವ ಅಭಿವೃದ್ಧಿ ಸೂಚ್ಯಂಕ’ (HDI) ಎಂದು ಕರೆಯಲಾಗಿದೆ. ಈ ಸೂಚ್ಯಂಕದಲ್ಲಿ ಅರೋಗ್ಯಕ್ಕೆ ಮೊದಲ ಸ್ಥಾನವನ್ನು, ಸಾಕ್ಷರತೆಗೆ ಎರಡನೆಯ ಸ್ಥಾನವನ್ನು ಮತ್ತು ವರಮಾನಕ್ಕೆ ಮೂರನೆಯ ಸ್ಥಾನವನ್ನು ನೀಡಲಾಗಿದೆ. ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯ ಸಾಕ್ಷರತೆಯನ್ನು ಅಭಿವೃದ್ಧಿ ಸಾಧನೆಯೆಂದೂ, ಅಭಿವೃದ್ಧಿಯ ‘ಸಾಧ್ಯ’, ‘ಗುರಿ’ ಎಂದೂ ಪರಿಗಣಿಸುತ್ತದೆ. ಈ ವಿಚಾರ ಪ್ರಣಾಳಿಕೆಯು ಸಾಕ್ಷರತೆಯ ಉಪಕರಣವಾದಿ ನೆಲೆಗಳನ್ನು ಮತ್ತು ಅಂತಸ್ಥವಾದಿ ನೆಲೆಗಳನ್ನು ಸಮಾನವಾಗಿ ಕಾಣುತ್ತದೆ.

ಸಾಕ್ಷರತೆಯನ್ನು ಅದಕ್ಕೆ ಸಂಬಂಧಿಸಿದ ಸಿದ್ಧಿ – ಸಾಧನೆಗಳನ್ನು ಅಮರ್ತ್ಯಸೇನ್ ಅವರು ‘ರಾಜಕೀಯಾರ್ಥಿಕ’ ನೆಲೆ (Political Economy) ಯಿಂದ ಪರಿಭಾವಿಸುತ್ತಾರೆ. ಅವರ ಪ್ರಕಾರ ಅದೇನು ‘ಸ್ವಾಯತ್ತ’ ಸ್ವತಂತ್ರ್ಯ’ ಪ್ರಕ್ರಿಯೆಯೇನಲ್ಲ. ಅದು ಸಮಾಜವೊಂದರ ಸಂದರ್ಭದಲ್ಲಿ ಸಂಭವಿಸಬೇಕಾದ ಒಂದು ಪ್ರಕ್ರಿಯೆ. ಸಾಕ್ಷರತೆಯು ಸಮಾಜದ ಸ್ಥಿತಿಗತಿಗಳನ್ನು ಅಭಿವ್ಯಕ್ತಿಪಡಿಸುವ ಒಂದು ಸೂಚಿಯಾಗಿದೆ. ಸಾಮಾಜಿಕ ಚೌಕಟ್ಟಿನಿಂದ ‘ಅನ್ಯ’ವಾಗಿಸಿ, ಪ್ರತ್ಯೇಕಿಸಿ ಸಾಕ್ಷರತೆಯನ್ನು ಪರಿಭಾವಿಸುವುದು ಸಾಧ್ಯವಿಲ್ಲ. ಸಾಕ್ಷರತೆ – ಶಿಕ್ಷಣ ಎಂಬ ಸಂಗತಿಗಳೆಲ್ಲ ಮೌಲ್ಯ ನಿರಪೇಕ್ಷವಾದ ಸಂಗತಿಗಳೇನಲ್ಲ. ಆದ್ದರಿಂದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಸಾಕ್ಷರತೆ ಬಗ್ಗೆ ಒಂದು ನಿರ್ದಿಷ್ಟವಾದ ನಿಲವು ತಳೆಯುವುದು ತುಂಬಾ ಅವಶ್ಯಕ. ಸಾಕ್ಷರತೆ ಯಾರಿಗೆ ಸಿಗಬೇಕು? ಯಾರಿಗೆ ಸಿಗಬಾರದು? ಯಾರಿಗೆ ಎಷ್ಟು ದೊರೆಯಬೇಕು? ಈ ಸಂಗತಿಗಳನ್ನೆಲ್ಲ ಸಾಮಾಜಿಕ ವ್ಯವಸ್ಥೆ ನಿರ್ಧರಿಸುತ್ತದೆ. ಈ ಕಾರಣಕ್ಕಾಗಿಯೇ ನಮ್ಮ ಸಮಾಜದ ಸಂದರ್ಭದಲ್ಲಿ ಸಾಕ್ಷರತೆಗೆ ಸಂಬಂಧಿಸಿದಂತೆ ಲಿಂಗಭೇದ – ಜಾತಿಭೇದ – ವರ್ಗಭೇದಗಳು ತೀವ್ರ ವಾಗಿರುವುದನ್ನು ನೋಡಬಹುದು. ಜೀನ್ ಡ್ರೀಜ್ ಮತ್ತು ಅಮರ್ತ್ಯಸೇನ್ ಅವರುಗಳು ಇತ್ತೀಚೆಗೆ ಭಾರತವನ್ನು ಕುರಿತಂತೆ ಪ್ರಕಟಿಸಿರುವ (೧೯೯೫) ಒಂದು ಗ್ರಂಥದಲ್ಲಿ ಈ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ,

ಮಹಿಳೆಯರ ಸಾಕ್ಷರತೆಯು ಪುರುಷರ ಸಾಕ್ಷರತೆಗಿಂದ ಕಡಿಮೆ ಇದ್ದರೆ ಅದು ಕೇವಲ ಜೈವಿಕ ಸ್ವರೂಪದ ಫಲವಲ್ಲ. ಅದು ಸಮಾಜವು ಕಟ್ಡಿಕೊಟ್ಟಿರುವ ಒಂದು ಆರ್ಡರ್ (Order) ಪರಿಶಿಷ್ಟ ಜನರ ಸಾಕ್ಷರತೆ ಪ್ರಮಾಣವು ಪರಿಶಿಷ್ಟೇತರ ಜನರ ಸಾಕ್ಷರತೆ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ಅದು ಸಾಮಾಜಿಕ ವ್ಯವಸ್ಥೆಯಿಂದ ನಿಷ್ಪನ್ನವಾದ ಒಂದು ಪರಿಣಾಮ ವಾಗಿದೆ. ಸಾಕ್ಷರತೆಗೆ ಸಂಬಂಧಿಸಿದ ಸಿದ್ಧಿ – ಸಾಧನೆಗಳನ್ನು, ವೈಫಲ್ಯಗಳನ್ನು ವ್ಯಕ್ತಿಗತ ನೆಲೆಯಲ್ಲಿ ಅಥವ ಜೈವಿಕ – ನೈಸರ್ಗಿಕ – ಪ್ರಾಕೃತಿಕ ನೆಲೆಯಲ್ಲಿ ಪರಿಭಾವಿಸುವುದು ಸಾಧ್ಯವಿಲ್ಲ. ಇವೆಲ್ಲವೂ ಸಾಮಾಜಿಕ ವ್ಯವಸ್ಥೆಯು ರೂಪಿಸಿದ ಒಂದು ಸಂಗತಿಯಾಗಿದೆ. ಪ್ರಸ್ತುತ ಅಧ್ಯಾಯದಲ್ಲಿ ಗದಗ ಜಿಲ್ಲೆಯ ಸಾಕ್ಷರತೆ ಸಂಬಂಧಿ ಸಂಗತಿಗಳನ್ನು ಲಿಂಗಸಂಬಂಧಿ ನೆಲೆಯಲ್ಲಿ ಹಾಗೂ ಜಾತಿಸಂಬಂಧಿ ನೆಲೆಯಲ್ಲಿ ನೋಡಲು ಪ್ರಯತ್ನಿಸಲಾಗಿದೆ.

ಗದಗ ಜಿಲ್ಲೆಯಲ್ಲಿ ಸಾಕ್ಷರತೆ

ಕರ್ನಾಟಕದಲ್ಲಿ ಜಿಲ್ಲೆಗಳ ಪೂರ್ವವಿಂಗಡಣೆ ನಡೆಯುವ ಪೂರ್ವದಲ್ಲಿ, ೨೦ ಜಿಲ್ಲೆಗಳಿದ್ದಾಗ, ಧಾರವಾಡ ಜಿಲ್ಲೆಯು ಅವಿಭಜಿತ ಸ್ಥಿತಿಯಲ್ಲಿದ್ದಾಗ ಧಾರವಾಡ ಜಿಲ್ಲೆಯಲ್ಲಿನ ಸಾಕ್ಷರತೆ ಶೇ.೫೮.೬೮ರಷ್ಟಿತ್ತು. (೧೯೯೧). ಅಂದು ಧಾರವಾಡ ಜಿಲ್ಲೆಯ ಸ್ಥಾನ ರಾಜ್ಯದಲ್ಲಿ ೭ನೆಯದಾಗಿತ್ತು. ಧಾರವಾಡ ಜಿಲ್ಲೆಯನ್ನು ೧೯೯೭ರಲ್ಲಿ ವಿಭಜಿಸಿ ಹಾವೇರಿ ಮತ್ತು ಗದಗ ಜಿಲ್ಲೆಗಳನ್ನು ಹೊಸದಾಗಿ ರೂಪಿಸಲಾಗಿದೆ. ವಿಭಜನೆಯ ನಂತರ ಜಿಲ್ಲೆಗಳ ಸ್ಥಾನ ಮಾನವು ಬದಲಾವಣೆಗೆ ಒಳಗಾಗಿದೆ. ಇಂದು ರಾಜ್ಯದಲ್ಲಿ ೨೭ ಜಿಲ್ಲೆಗಳಿವೆ. ಈ ೨೭ ಜಿಲ್ಲೆಗಳಲ್ಲಿ ಸಾಕ್ಷರತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಸ್ಥಾನವು ೭ರಲ್ಲೇ ಇದೆ. ಆದರೆ ವಿಭಜಿತ ಧಾರವಾಡ ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ. ೬೭.೨೭ರಷ್ಟಾಗಿದೆ. ಆದರೆ ಗದಗ ಜಿಲ್ಲೆಯ ಸಾಕ್ಷರತಾ ಪ್ರಮಾಣವು ಶೇ. ೫೫.೮೮ರಷ್ಟಾಗಿದೆ. ಇದು ದಾರವಾಡ ಜಿಲ್ಲೆಯ ಸಾಕ್ಷರತಾ ಪ್ರಮಾಣಕ್ಕಿಂತ ಕಡಿಮೆ ಯಾಗಿದೆ. ಗದಗ ಜಿಲ್ಲೆಯು ಧಾರವಾಡ ಜಿಲ್ಲೆಯ ಭಾಗವಾಗಿದ್ದಾಗ ಗದಗ ಪ್ರದೇಶದ ಸಾಕ್ಷರತೆ ಪ್ರಮಾಣವು ಕಡಿಮೆ ಇದ್ದುದು ಸ್ಪಷ್ಟವಾಗುತ್ತದೆ. ಸಾಕ್ಷರತೆಯಲ್ಲಿ ಉತ್ತಮವಾದ ತಾಲ್ಲೂಕುಗಳೆಲ್ಲ ಧಾರವಾಡ ಜಿಲ್ಲೆಯಲ್ಲಿ ಉಳಿದುಕೊಂಡು ಬಿಟ್ಟಿವೆ. ಗದಗ ಜಿಲ್ಲೆಯ ತಾಲ್ಲೂಕುಗಳ ಸಾಕ್ಷರತೆ ಪ್ರಮಾಣವು ಸಾಪೇಕ್ಷವಾಗಿ ಕೆಳಮಟ್ಟದಲ್ಲಿ ಉಳಿದಿದೆ.

ಇಂದು ಸಾಕ್ಷರತೆಯಲ್ಲಿ ರಾಜ್ಯದಲ್ಲಿ ಗದಗ ಜಿಲ್ಲೆಯು ೧೩ನೆಯ ಸ್ಥಾನ ಪಡೆದಿದೆ. ರಾಜ್ಯಮಟ್ಟದ ಸಾಕ್ಷರತೆ ಪ್ರಮಾಣ ಕ್ಕಿಂತ (ಶೇ.೫೬.೦೪) ಗದಗ ಜಿಲ್ಲೆಯ ಸಾಕ್ಷರತೆ ಪ್ರಮಾಣವು ಕಡಿಮೆ ಇದೆ (ಶೇ.೫೫.೮೮). ಸಾಕ್ಷರತೆ ದೃಷ್ಟಿಯಿಂದ ಗದಗ ಜಿಲ್ಲೆಯ ಸ್ಥಾನವು ಮಧ್ಯಮ ಮಟ್ಟದ್ದಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ.೧.೯೧ರಷ್ಟು ಪಾಲು ಪಡೆದಿರುವ ಗದಗ ಜಿಲ್ಲೆಯ ರಾಜ್ಯದ ಅಕ್ಷರಸ್ಥರಲ್ಲಿ ಮಾತ್ರ ಜಿಲ್ಲೆ ಶೇ.೧.೯೯ ಪಾಲು ಪಡೆದಿದೆ. ಕರ್ನಾಟಕದಲ್ಲಿ ಕೇವಲ ೮ ಜಿಲ್ಲೆಗ ಳಲ್ಲಿ ಮಾತ್ರ ರಾಜ್ಯದ ಅಕ್ಷರಸಥರಲ್ಲಿನ ಜಿಲ್ಲೆಯ ಪಾಲು ಅದರ ರಾಜ್ಯದಲ್ಲಿನ ಜನಸಂಖ್ಯೆಯ ಪಾಲಿಗಿಂತ ಅಧಿಕವಾಗಿದೆ. ಉಳಿದ ೧೯ ಜಿಲ್ಲೆಗಳಲ್ಲಿ ಮಾತ್ರ ಅದು ಕಡಿಮೆ ಇದೆ. ರಾಜ್ಯದ ಜನಸಂಖ್ಯೆಯಲ್ಲಿ ಗದಗ ಜಿಲ್ಲೆಯ ಪಾಲು ಶೇ.೧.೯೧ ರಷ್ಟಾದರೆ ರಾಜ್ಯದ ಒಟ್ಟು ಅನಕ್ಷರಸ್ಥರಲ್ಲಿ ಗದಗ ಜಿಲ್ಲೆಯ ಪಾಲು ಶೇ.೧.೮೯. ಕೋಷ್ಟಕ ೬.೧ರಲ್ಲಿ ಗದಗ ಜಿಲ್ಲೆಯಲ್ಲಿನ ಅಕ್ಷರಸ್ಥರ ಸಂಖ್ಯೆ ಹಾಗೂ ಸಾಕ್ಷರತೆ ಪರಿಮಾಣವನ್ನು ತೋರಿಸಿದೆ.

ಕೋಷ್ಟಕ .೧: ಜನಸಂಖ್ಯೆ, ಅಕ್ಷರಸ್ಥರು ಮತ್ತು ಅನಕ್ಷರಸ್ಥರು

ಕ್ರ
ಸಂ

ವಿವರಗಳು

ರಾಜ್ಯ

ಗದಗ ಜಿಲ್ಲೆ

ರಾಜ್ಯದಲ್ಲಿ ಗದಗ ಜಿಲ್ಲೆಯ ಪಾಲು

೧೨

ಜನಸಂಖ್ಯೆಅಕ್ಷರಸ್ಥರು

ಅನಕ್ಷರಸ್ಥರು

ಸಾಕ್ಷರತೆ

ಅನಕ್ಷರತೆ

೪೪೯,೭೭,೨೦೧೨೧೦,೧೩,೧೯೩

೧೬೪,೮೬,೩೯೭

ಶೇ. ೫೬.೦೪

ಶೇ. ೪೩.೯೬

೮,೫೯,೦೪೨೩,೯೪,೭೫೮

೩,೧೧,೬೪೨

ಶೇ. ೫೫.೮೮

ಶೇ. ೪೪.೧೨

ಶೇ.೧.೯೧ಶೇ.೧.೮೮

ಶೇ.೧.೮೯

ಶೇ. ೯೯.೭೧

ಶೇ. ೧೦೦.೩೬

ಮೇಲಿನ ಕೋಷ್ಟಕದಲ್ಲಿ ಅನಕ್ಷರಸ್ಥರ ಮತ್ತು ಅನಕ್ಷರಸ್ಥರು ಸಂಖ್ಯೆಯು ಒಟ್ಟು ಜನಸಂಖ್ಯೆಗೆ ತಾಳೆಯಾಗುವುದಿಲ್ಲ. ಏಕೆಂದರೆ ಇಲ್ಲಿ ಸಾಕ್ಷರತೆಯು ಕೇವಲ ೭ ವರ್ಷ ಮತ್ತು ೭ ವರ್ಷಕ್ಕೂ ಅಧಿಕ ವಯೋಮಾನದ ಜನಸಂಖ್ಯೆಯನ್ನು ಮಾತ್ರ ಒಳಗೊಂಡಿದೆ.

ಸಾಕ್ಷರತೆ : ಅಖಂಡ ಸೂಚಿಯಲ್ಲ ?          

ಅಭಿವೃದ್ಧಿಗೆ ಸಂಬಂಧಿಸಿದ ಸೂಚಿಗಳನ್ನು ಅಖಂಡವಾಗಿ – ಇಡಿಯಾಗಿ ಪರಿಭಾವಿಸುವುದು ರೂಢಿಯಲ್ಲಿದೆ. ಸಾಕ್ಷರತೆಗೆ ಸಂಬಂಧಿಸಿದ ವಿವರಗಳನ್ನು ಅಖಂಡವಾಗಿ ನೋಡಿಕೊಂಡು ಬರಲಾಗಿದೆ. ಗದಗ ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ.೫೫.೮೮. ಇದು ಗದಗ ಜಿಲ್ಲೆಯ ಜನಸ್ತೋಮಕ್ಕೆ ಅನ್ವಯವಾಗುವ ಪರಿಮಾಣ. ಆದರೆ ಸಾಕ್ಷರತೆ ಪ್ರಮಾಣವು ಸಮಾಜದ ಎಲ್ಲ ಗುಂಪು – ವರ್ಗಗಳಿಗೂ ಸಮನಾಗಿರುವುದಿಲ್ಲ. ಏಣಿಶ್ರೇಣಿ ಮತ್ತು ಲಿಂಗಭೇದಗಳು ವ್ಯಾಪಕವಾಗಿ ಬೇರುಬಿಟ್ಟುಕೊಂಡಿರುವ ನಮ್ಮ ಸಮಾಜದ ಸಂದರ್ಭದಲ್ಲಿ ಅಖಂಡವಾದಿ ದೃಷ್ಟಿಕೋನವು ಸಾಕ್ಷರತೆಯ ನಿಜ ಸ್ವರೂಪವನ್ನು ತೋರಿಸಲು ಸಾಧ್ಯವಿಲ್ಲ. ಇಂತಹ ವಿಷಯದಲ್ಲಿ ಅಖಂಡವಾದಿ ದೃಷ್ಟಿಕೋನವು ಅನೇಕ ಬಗೆಯ ವಿಕೃತಗಳಿಗೆ ಹಾಗೂ ಅಪಾಯಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ನಮ್ಮ ಸಾಮಾಜಿಕ ವ್ಯವಸ್ಥೆ ಅಖಂಡವಾದುದಲ್ಲ. ವರ್ಣ, ವರ್ಗ, ಜಾತಿ, ಲಿಂಗ, ಪ್ರಾಂತ ಮುಂತಾದ ಬಗೆಯ ಛಿದ್ರ, ವಿಚ್ಚಿದ್ರಗಳು ಸಮಾಜದಲ್ಲಿ ಕ್ರಿಯಾಶೀಲವಾಗಿರುವಾಗ ಸಾಕ್ಷರತೆಗೆ ಸಂಬಂಧಿಸಿದ ಸೂಚಿಯು ಅಖಂಡವಾಗಿರಲು ಸಾಧ್ಯವಿಲ್ಲ.

ಸಾಕ್ಷರತೆಗೆ ಸಂಬಂಧಿಸಿದ ಸೂಚಿಯನ್ನು ಸಾಮಾಜಿಕ ವರ್ಗಗಳ ಮತ್ತು ಲಿಂಗಸಂಬಂಧಗಳ ನೆಲಯಲ್ಲಿ ಪರಿಭಾವಿಸುವ ಅಗತ್ಯವಿದೆ. ಒಟ್ಟು ಸಾಕ್ಷರತೆ ಪ್ರಮಾಣವನ್ನು ಬಿಡಿಸಿ ಅದರ ಸಾಮಾಜಿಕ ಸ್ವರೂಪವನ್ನು ಮತ್ತು ಲಿಂಗಸಂಬಂಧಿ ಸ್ವರೂಪವನ್ನು ಅನಾವರಣ ಮಾಡಬೇಕಾಗಿದೆ. ಗದಗ ಜಿಲ್ಲೆಯ ಸಾಕ್ಷರತೆಗೆ ಸಂಬಂಧಿಸಿದ ಸಾಧನೆಗಳನ್ನು – ಸಾಮಾಜಿಕ ವರ್ಗಗಳ ಹಾಗೂ ಲಿಂಗಸಂಭಂಧಗಳ ನೆಲೆಯಲ್ಲಿ, ಬಿಡಿಬಿಡಿಯಾಗಿ ಪರಿಶೀಲಿಸಲು ಇಲ್ಲಿ ಪ್ರಯತ್ನಿಸ ಲಾಗಿದೆ

ಸಾಕ್ಷರತೆಯ ಸಾಮಾಜಿಕ ನೆಲೆಗಳು

ಸಾಕ್ಷರತೆಗೆ ಸಂಬಂಧಿಸಿದ ಸಿಧ್ಧಿ – ಸಾಧನೆಗಳನ್ನು ಅಖಂಡವಾಗಿ ಇಡೀ ಜನಸಂಖ್ಯೆಗೆ ಅನ್ವಯಿಸುವುದರಿಂದ ನಮಗೆ ಹೆಚ್ಚು ಪ್ರಯೋಜನವಾಗುವುದಿಲ್ಲ. ಸಾಕ್ಷರತೆಯು ಸಮಾಜದ ವಿವಿಧ ವರ್ಗಗಳಲ್ಲಿ ಹೇಗೆ ಪ್ರವೇಶಿಸಿದೆ ಎಂಬುದು ಬಹಳ ಮುಖ್ಯ. ಪ್ರಸ್ತುತ ಭಾಗದಲ್ಲಿ ಗದಗ ಜಿಲ್ಲೆಯ ವಿವಿಧ ಸಾಮಾಜಿಕ ಗುಂಪುಗಳು ಸಾಧಿಸಿಕೊಂಡಿರುವ ಸಾಕ್ಷರತೆ ಪ್ರಮಾಣವನ್ನು ತುಲನಾತ್ಮಕವಾಗಿ ಪರಿಶೀಲಿಸಲಾಗಿದೆ.

ಗದಗ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟರ (ಪ.ಜಾತಿ + ಪ.ಪಂ) ಪ್ರಮಾಣ ಶೇ.೧೬.೨೩. ರಾಜ್ಯಮಟ್ಟದ ಪ್ರಮಾಣಕ್ಕಿಂತ (ಶೇ. ೨೦.೬೪) ಇದು ಕಡಿಮೆ ಇದೆ. ಏಣಿಶ್ರೇಣಿ ಹಾಗೂ ಜಾತಿ ವ್ಯವಸ್ಥೆಯಿಂದ ಕೂಡಿರುವ ನಮ್ಮ ಸಮಾಜದಲ್ಲಿ ಸತ್ಯಂತ ದಯನೀಯ ಬದುಕನ್ನು ಬದುಕುತ್ತಿರುವ ವರ್ಗ ಪರಿಶಿಷ್ಟ ಜನರಾಗಿದ್ದಾರೆ. ಈ ಸಾಮಾಜಿಕ ಗುಂಪು ಅಭಿವೃದ್ಧಿಯಲ್ಲಿ ಎಷ್ಟು ಪಾಲು ಪಡೆದಿದೆ ಎಂಬುದೇ ಅಭಿವೃದ್ಧಿ ಮೌಲ್ಯಮಾಪನದ ಮಾನದಂಡವಾಗಬೇಕು. ಗದಗ ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ.೧೬.೨೩ರಷ್ಟಿರುವ ಪರಿಶಿಷ್ಟ ಜನಸಂಖ್ಯೆಯು ಜಿಲ್ಲೆಯ ಅಕ್ಷರಸ್ತರಲ್ಲಿ ಎಷ್ಟು ಪಾಲು ಪಡೆದಿದೆ ಎಂಬುದು ಸದರಿ ಜಿಲ್ಲೆಯ ಅಭಿವೃದ್ಧಿಯ ಮೌಲ್ಯಮಾಪನದ ಅಳತೆಗೋಲಾಗಬೇಕು. ಗದಗ ಜಿಲ್ಲೆಯಲ್ಲಿನ ಒಟ್ಟು ಅಕ್ಷರಸ್ಥರ ಸಂಖ್ಯೆ ೩.೯೪,೭೫೮. ಇದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನರ ಸಂಖ್ಯೆ ೩೧,೨೭೮ (ಶೇ. ೭.೯೨) ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ಸಂಖ್ಯೆ ೭೫೨೧ (ಶೇ. ೧.೯೧) ಒಟ್ಟು ಪರಿಶಿಷ್ಟ (ಪ.ಜಾ + ಪ.ಪಂ) ಅಕ್ಷರಸ್ಥರ ಸಂಖ್ಯೆ ೩೮೭೯೯ (ಶೇ. ೯,೮೩).

ರಾಜಕೀಯಾರ್ಥಿಕತೆ (Political economy) ದೃಷ್ಟಿಯಿಂದ ಗದಗ ಜಿಲ್ಲೆಯ ವಿವಿಧ ಸಾಮಾಜಿಕ ಗುಂಪುಗಳು ಸಾಧಿಸಿ ಕೊಂಡಿರುವ ಸಾಕ್ಷರತೆ ಪ್ರಮಾಣವನ್ನು ಬಿಡಿ ಬಿಡಿಯಾಗಿ ನೋಡುವುದು ತುಂಬಾ ಮುಖ್ಯ. ಈ ಬಗೆಯ ಅಧ್ಯಯನಗಳ ಪಾಲಿಸಿ ಇಂಪ್ಲಿಕೇಷನ್‌ಗಳು ತೀವ್ರವಾಗಿರುತ್ತವೆ. ಸಾಕ್ಷರತೆಯ ಅಭಿವೃದ್ಧಿ ಎನ್ನುವುದಾದರೆ ಸಮಾಜದಲ್ಲಿ ಎಲ್ಲ ಸಾಮಾಜಿಕ ಗುಂಪುಗಳು ಏಕೆ ಸಮಾನವಾಗಿ ಅಭಿವೃದ್ಧಿಯಲ್ಲಿ ಪಾಲು ಪಡೆಯುತ್ತಿಲ್ಲ ? ನಮ್ಮ ಸಮಾಜದಲ್ಲಿ ಅನಾದಿ ಕಾಲದಿಂದಲೂ ಅಕ್ಷರ ಜ್ಞಾನವನ್ನು ಸಮಾಜದ ಒಂದು ಗುಂಪಿಗೆ ನಿಷೇದಿಸಲಾಗಿತ್ತು. ಅದರ ಪರಿಣಾಮವಾಗಿ ಇಂದಿಗೂ ನಮ್ಮ ಸಮಾಜದಲ್ಲಿ ಪರಿಆಶಿಷ್ಟ ಜನಸಂಖ್ಯೆಯ ಸಾಕ್ಷರತೆ ಪ್ರಮಾಣವು ಪರಿಶಿಷ್ಠೇತರ ಜನಸಂಖ್ಯೆಯ ಸಾಕ್ಷ ರತೆ ಪ್ರಮಾಣಕ್ಕಿಂತ ಕೆಳಮಟ್ಟದಲ್ಲಿದೆ. ಕೋಷ್ಟಕ ೬.೩ರಲ್ಲಿ ಗದಗ ಜಿಲ್ಲೆಯ ಪ.ಜಾತಿ ಮತ್ತು ಪ.ಪಂ ಗಳ ಸಾಕ್ಷರತೆ ಪ್ರಮಾಣವನ್ನು ಮತ್ತು ಕೋಷ್ಟಕ ೬.೪ರಲ್ಲಿ ಪರಿಶಿಷ್ಟ ಜನಸಂಖ್ಯೆ ಹಾಗೂ ಒಟ್ಟು ಜನಸಂಖ್ಯೆಯ ಸಾಕ್ಷರತೆ ಪ್ರಮಾಣಗಳನ್ನು ತೋರಿಸಿದೆ. ತುಲನಾತ್ಮಕ ಅಧ್ಯಯನಕ್ಕೆ ಅನುಕೂಲವಾಗುವಂತೆ ಕೋಷ್ಟಕಗಳನ್ನು ಇಲ್ಲಿ ಸಿದ್ಧಪಡಿಸಲಾಗಿದೆ.

ಕೋಷ್ಟಕ .: ಗದಗ ಜಿಲ್ಲೆಯ ಅಕ್ಷರಸ್ಥರ ಸಾಮಾಜಿಕ ಸ್ವರೂಪ .

ಒಟ್ಟು ಜನಸಂಖ್ಯೆಪರಿಶಿಷ್ಟರ ಜನಸಂಖ್ಯೆ

ಪರಿಶಿಷ್ಟೇತರರ ಜನಸಂಖ್ಯೆ

 ೮,೫೯,೦೪೨೧,೩೯,೩೮೪ (ಶೇ. ೧೬.೨೩)

೭,೧೯,೬೫೮ (ಶೇ. ೮೩.೭೨)

ಒಟ್ಟು ಅಕ್ಷರಸ್ಥರ ಸಂಖ್ಯೆಪರಿಶಿಷ್ಟ ಅಕ್ಷರಸ್ಥರ ಸಂಖ್ಯೆ

ಪರಿಶಿಷ್ಟೇತರ ಅಕ್ಷರಸ್ಥರ ಸಂಖ್ಯೆ

 ೩,೯೪,೭೫೮೩೮,೭೯೯ (ಶೇ. ೯.೮೩)

೩,೫೫,೯೫೯ (ಶೇ. ೯೦.೧೭)

ಜಿಲ್ಲೆಯ ಒಟ್ಟು ಸಾಕ್ಷರತೆಪರಿಶಿಷ್ಟರ ಸಾಕ್ಷರತೆ  ಶೇ. ೫೫.೮೮ಶೇ. ೩೫.೪೦

ಕೋಷ್ಟಕ .: ಗದಗ ಜಿಲ್ಲೆಯಲ್ಲಿ ಸಾಕ್ಷರತೆ : .ಜಾ. ಮತ್ತು .ಪಂ

ವಿವರ

ಪರಿಶಿಷ್ಟ ಜಾತಿ

ಪರಿಶಿಷ್ಟ ಪಂಗಡ

ಮ.

ಪು.

ಒಟ್ಟು

ಮ.

ಪು.

ಒಟ್ಟು

ಸಾಕ್ಷರತೆ ಒಟ್ಟು ೧೯.೧೮ ೪೮.೨೪ ೩೩.೮೯ ೨೭.೦೦ ೬೨.೨೩ ೪೫.೦೦

ಕೋಷ್ಟಕ ೬.೩ರಲ್ಲಿ ತೋರಿಸಿರುವಂತೆ ಪ.ಜಾ.ಗೆ ಸಂಬಂಧಿಸಿದ ಸಾಕ್ಷರತೆ ಪ್ರಮಾಣವು ಪ.ಪಂ ಕ್ಕೆ ಸಂಬಂಧಿಸಿದ ಸಾಕ್ಷರತೆ ಪ್ರಮಾಣಕ್ಕಿಂತ ಕಡಿಮೆ ಇದೆ. ಇದಕ್ಕೆ ಕಾರಣಗಳನ್ನು ಊಹಿಸುವುದು ಕಷ್ಟ. ಒಂದನ್ನು ಮಾತ್ರ ಗುರುತಿಸ ಬಹದು. ಸಾಂಪ್ರದಾಯಿಕವಾಗಿ ಪ.ಪಂ. ಗಳಲ್ಲಿ ಅಸ್ಪೃಶ್ಯತೆ ಅನುಭವಿಸಿದ ಜಾತಿಗಳ ಸಂಖ್ಯೆ ಕಡಿಮೆ. ಆದರೆ ಪ. ಜಾತಿಗಳಲ್ಲಿ ಅಸ್ಪೃಶ್ಯತೆ ಅನುಭವಿಸಿದ ಜಾತಿಗಳ ಸಂಖ್ಯೆ ಅಧಿಕ. ಪ.ಪಂ. ಗೆ ಸೇರಿದ ಜನಸಂಖ್ಯೆಯಲ್ಲಿ ಸಾಕ್ಷರತೆ ಪ್ರಮಾಣವು ಪ.ಜಾ.ಗೆ ಸೇರಿದ ಜನಸಂಖ್ಯೆಯ ಸಾಕ್ಷರತೆ ಪ್ರಮಾಣಕ್ಕಿಂತ ಅಧಿಕವಾಗಿರಲು ಇದೊಂದು ಕಾರಣ ವಾಗಿರುವ ಸಾಧ್ಯತೆ ಇದೆ.

ಗದಗ ಜಿಲ್ಲೆಯಲ್ಲಿ ಪರಿಶಿಷ್ಟರ ಸಾಕ್ಷರತೆ ಶೇ. ೩೫.೪೦. ಆದರೆ ಒಟ್ಟು ಜನಸಂಖ್ಯೆಯಲ್ಲಿ ಸಾಕ್ಷರತೆ ಪ್ರಮಾಣ ಶೇ. ೫೫.೮೮. ಪರಿಶಿಷ್ಟರ ಸಾಕ್ಷರತೆ ಪ್ರಮಾಣವು ಒಟ್ಟು ಸಾಕ್ಷರತೆ ಪ್ರಮಾಣಕ್ಕಿಂತ ಶೇ, ೨೦.೪೮ ಅಂಶಗಳಷ್ಟು ಕಡಿಮೆ ಇದೆ. ನಮ್ಮ ಸಾಮಾಜಿಕ ಸಂದರ್ಭದಲ್ಲಿ ಸಾಕ್ಷರತೆ ಎಲ್ಲ ವರ್ಗಗಳಿಗೂ ಸಮಾನವಾಗಿ ಲಭ್ಯವಾಗುತ್ತಿಲ್ಲ ಎಂಬುದು ಮೇಲಿನ ಚರ್ಚೆಯಿಂದ ಸ್ಪಷ್ಟವಾಗುತ್ತದೆ. ಸಮಾಜದಲ್ಲಿ ವಿವಿಧ ಸಾಮಾಜಿಕ ಗುಂಪುಗಳು ಯಾವ ಯಾವ ಸ್ಥಾನಮಾನ ಪಡದಿದ್ದಾವೋ ಅದೇ ರೀತಿಯಲ್ಲಿ ಅವು ಅಭಿವೃದ್ಧಿಯಲ್ಲಿ ಪಾಲು ಪಡೆಯುತ್ತಿವೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.

ಕೋಷ್ಟಕ .: ಗದಗ ಜಿಲ್ಲೆಯ ಸಾಕ್ಷರತೆ : ಪರಿಶಿಷ್ಟ ಜನಸಂಖ್ಯೆ ಮತ್ತು ಒಟ್ಟು ಜನಸಂಖ್ಯೆ

ವಿವರ

ಪರಿಶಿಷ್ಟ (ಪ.ಜಾ + ಪ.ಪಂ)

ಒಟ್ಟು ಜನ ಸಂಖ್ಯೆ

ಮ.

ಪು.

ಒಟ್ಟು

ಮ.

ಪು.

ಒಟ್ಟು

ಸಾಕ್ಷರತೆ (ಒಟ್ಟು) ೨೦.೩೬ ೫೦.೪೦ ೩೫.೪೦  ೩೯.೬೮ ೭೧.೬೨ ೫೫.೮೮

ಸಾಕ್ಷರತೆಯ ಲಿಂಗ ಸಂಬಂಧಿ ಆಯಾಮಗಳು

ಪ್ರಪಂಚದಲ್ಲಿ ಬೆರಳೆಣಿಕೆಯಷ್ಟು ದೇಶಗಳನ್ನು ಬಿಟ್ಟರೆ (೨೩ ದೇಶಗಳು ಎಚ್. ಡಿ. ಆರ್, ೧೯೯೭) ಉಳಿದಂತೆ ಮಹಿಳೆಯರ ಸಾಕ್ಷರತೆ ಪ್ರಮಾಣವು ಪುರುಷರ ಸಾಕ್ಷರತೆ ಪ್ರಮಾಣಕ್ಕಿಂತ ಕಡಿಮೆ ಇರುವುದು ಸಾರ್ವತ್ರಿಕ ಲಕ್ಷಣ ವಾಗಿದೆ. ಇದೊಂದು ಜಾಗತಿಕ ಸಂಗತಿಯಾಗಿದೆ. ಭಾರತದಲ್ಲಿ ಅನಾದಿ ಕಾಲದಿಂದಲೂ ಮಹಿಳೆಯರನ್ನು ಅಕ್ಷರ ಸಂಸ್ಕೃತಿಯಿಂದ ದೂರವೇ ಇಡಲಾಗಿತ್ತು. ನಮ್ಮ ಪರಂಪರೆಯಲ್ಲಿ ಮಹಿಳೆಯರಿಗೆ ಶಿಕ್ಷಣವನ್ನು ಒದಗಿಸುವುದು ಸಾಮಾಜಿಕ ಭದ್ರತೆ ದೃಷ್ಟಿಯಿಂದ ಅಪಾಯಕಾರಿ ಎಂದೇ ಭಾವಿಸಲಾಗಿತ್ತು. (ಅಮರ್ತ್ಯಸೇನ್, ೧೯೯೬). ಮಹಿಳೆಯರಿಗೆ ಸಾಕ್ಷರತೆಯನ್ನು ಆದ್ಯತೆ ಮೇಲೆ ಒದಗಿಸಬೇಕು ಎಂಬ ಮಹತ್ವ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಪ್ರಾಪ್ತವಾಯಿತು. ಸ್ವಾತಂತ್ರ್ಯಪೂರ್ವದಲ್ಲಿ ಮಹಿಳೆಯರಿಗೆ ಶಿಕ್ಷಣ ಒದಗಿಸುವ ಪ್ರಯತ್ನಗಳು ನಡೆದಿದ್ದವು. ಇಷ್ಟಾದರೂ ಸಾಕ್ಷರತೆಯಲ್ಲಿ ಲಿಂಗ ತಾರತಮ್ಯ ತೀವ್ರವಾಗಿ ಮುಂದುವರೆದಿದೆ. ಭಾರತದ ಸಂದರ್ಭದಲ್ಲಿ ಮಹಿಳಾ ಸಾಕ್ಷರತೆಗೆ ಸಂಬಂಧಿಸಿದಂತೆ ಭಾರತದ ಸಿದ್ಧಿ – ಸಾಧನೆಗಳು ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿಲ್ಲ. ಸಮಗ್ರವಾಗಿ ಸಾಕ್ಷರತೆಯ ಪ್ರಮಾಣವಾಗಿ ಏರಿಕೆಯಾಗಿದ್ದರು ಸಹ ಗ್ರಾಮೀಣ ಮಹಿಳೆಯರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರ ಸಾಕ್ಷರತೆ ಪ್ರಮಾಣವು ಸಾಪೇಕ್ಷವಾಗಿ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಭಾರತದ ೨೨ ರಾಜ್ಯಗಳ ಪೈಕಿ ಮಹಿಳೆಯರ ಸಾಕ್ಷರತೆಗೆ ಸಂಬಂಧಿಸಿದಂತೆ ಕರ್ನಾಟಕದ ಸ್ಥಾನ ೧೪ನೆಯದಾಗಿದೆ (೧೯೯೧). ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಪೈಕಿ ಕರ್ನಾಟಕದ ಮಹಿಳೆಯರ ಸಾಕ್ಷರತೆಯು ಅತ್ಯಂತ ಕಡಿಮೆಯಾಗಿದೆ. ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಮಹಿಳೆಯರ ಸಾಕ್ಷರತೆಯ ಪ್ರಮಾಣವು ಶೇ. ೫೦ಕ್ಕಿಂತ ಅಧಿಕವಿದೆ. ಆದರೆ ಕರ್ನಾಟ ಕದಲ್ಲಿ ಮಹಿಳೆಯರ ಸಾಕ್ಷರತೆ ಕೇವಲ ಶೇ. ೪೪.೩೪. ಈ ಕಾರಣಕ್ಕೆ ದಕ್ಷಿಣ ಭಾರತದಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣವು (ಶೇ. ೨೬.೭). ಉಳಿದೆಲ್ಲ ದಕ್ಷಿಣ ಭಾರತದ ರಾಜ್ಯಗಳಲ್ಲಿನ ಜನಸಂಖ್ಯೆಯ ಬೆಳವಣಿಗೆ ಪ್ರಮಾಣಕ್ಕಿಂತ ಅಧಿಕವಾಗಿದೆ.

ಮಹಿಳಾ ಸಾಕ್ಷರತಾ ಮಹತ್ವ

ಸಾಕ್ಷರತೆ ಪ್ರಮಾಣ ಹಾಗೂ ಜನನ ಪ್ರಮಾಣಗಳ ನಡುವೆ ಇರುವ ವಿಲೋಮ ಸಂಬಂಧವನ್ನು ಅನೇಕ ಅಧ್ಯಯನಗಳು ದೃಢಪಡಿಸಿವೆ. ಅದರಲ್ಲೂ ಮಹಿಳಾ ಸಾಕ್ಷರತೆಯು ಜನನ ಪ್ರಮಾಣದ ಮೇಲೆ ತೀವ್ರ ಪ್ರಭಾವ ಸಂಗತಿಯನ್ನು ಜೀನ್ ಡ್ರೀಜ್ ಅವರ ಒಂದು ಅಧ್ಯಯನವು ಸ್ವಪ್ಟವಾಗಿ ತೋರಿಸಿಕೊಟ್ಟಿದೆ. (ಡ್ರೀಜ್. ಜೆ. ೧೯೯೬).

ಅಕ್ಷರ ಜ್ಞಾನದಿಂದ ಸಶಕ್ತಳಾದ ಮಹಿಳೆಯು ಮತ್ತೆ ಮತ್ತೆ ಗರ್ಭಧರಿಸುವ ಪ್ರಯಾಸದ ಕೆಲಸಕ್ಕೆ ಒಳಗಾಗಲು ಬಯಸು ವುದಿಲ್ಲ. ಈ ಕಾರಣದಿಂದಾಗಿಯೇ ಮಹಿಳೆಯ ಸಾಕ್ಷರತೆ ಪ್ರಮಾಣವು ಉತ್ತಮಗೊಂಡಂತೆ ಜನನ ಪ್ರಮಾಣವು ಕಡಿಮೆ ಯಾಗುತ್ತಾ ಹೋಗುವುದನ್ನು ನೋಡಬಹುದಾಗಿದೆ. ಕರ್ನಾಟಕವನ್ನೇ ತೆಗೆದುಕೊಂಡರೆ ಮಹಿಳೆಯರ ಸಾಕ್ಷರತೆಯು ಯಾವ ಜಿಲ್ಲೆಗಳಲ್ಲಿ ಅಧಿಕವಾಗಿದೆಯೋ ಆ ಜಿಲ್ಲೆಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಹಾಗೂ ಜನನ ಪ್ರಮಾಣ ಗಳು ಕಡಿಮೆಯಿರುವುದನ್ನು ನೋಡಬಹುದು.

ಸಾಕ್ಷರತೆಯು ಮಹಿಳೆಯರನ್ನು ಸಶಕ್ತೀಕರಿಸುತ್ತದೆ. ಸಾಕ್ಷರತೆಯು ಮಹಿಳೆಯರಿಗೆ ಜನನ ಪ್ರಮಾಣದ ಮೇಲೆ, ಸಂತಾ ನೋತ್ಪತ್ತಿ ವಿಷಯದಲ್ಲಿ ಒಂದು ಬಗೆಯ ನಿಯಂತ್ರಣ ಒದಗಿಸುತ್ತದೆ. ವೈದ್ಯಕೀಯ ಸೌಲಭ್ಯವನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಸಾಕ್ಷರತೆ ಮಹಿಳೆಯರಿಗೆ ಒದಗಿಸುತ್ತದೆ. ಈ ದಿಶೆಯಲ್ಲಿ ಪುರುಷರ ಸಾಕ್ಷರತೆಗಿಂತ ಮಹಿಳೆಯರ ಸಾಕ್ಷರತೆಯ ಪಾತ್ರವು ತುಂಬಾ ನಿರ್ಣಾಯಕವಾದುದಾಗಿದೆ. ಸಾಕ್ಷರತೆ ಸಮಾಜದಲ್ಲಿ ಸ್ತ್ರೀ – ಪುರುಷರ ನಡುವಿನ ಶಕ್ತಿ ಸಂಬಂಧಗಳಲ್ಲಿ, ಅಧಿಕಾರಸಂಬಂಧಗಳಲ್ಲಿ ಆರೋಗ್ಯಕರವಾದ ಸ್ರ್ತೀ ಪರವಾದ ಬದಲಾವಣೆಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಪುರುಷಶಾಹಿತ್ವವನ್ನು ಲಿಂಗವಾದಿ ವಿಚಾರ ಪ್ರಣಾಳಿಕೆಯನ್ನು ನಿರ್ಮೂಲನ ಮಾಡುವ ದಿಶೆಯಲ್ಲಿ ಮಹಿಳೆಯರ ಸಾಕ್ಷರತೆ, ಮಹಿಳೆಯರ ಸಬಲೀಕರಣ ತುಂಬಾ ನಿರ್ಣಾಯಕವಾದುದಾಗಿದೆ. ಸಾಕ್ಷರತೆಯು ಮಹಿಳೆಯರಿಗೆ ಧಾರಣಶಕ್ತಿಯನ್ನು ಒದಗಿಸುತ್ತದೆ. ಬದುಕನ್ನು ಉತ್ತಮಪಡಿಸಿಕೊಳ್ಳಲು ಅಗತ್ಯವಾದ ಅವಕಾಶಗಳನ್ನು ತನ್ನದಾಗಿಸಿಕೊಳ್ಳಲು ಬೇಕಾದ ಸಾಮರ್ಥ್ಯವನ್ನು ಮತ್ತು ಅವಕಾಶಗಳಲ್ಲಿ ತನಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಸಾಕ್ಷರತೆಯು ಮಹಿಳೆಯರಿಗೆ ಒದಗಿಸುತ್ತದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆಯರು ಸಹಭಾಗಿಗಳಾಗಲು ಅವರಿಗೆ ಸಾಕ್ಷರತೆ ತುಂಬಾ ಅಗತ್ಯವಾದ ಒಂದು ಶಕ್ತಿಯಾಗಿದೆ. ಸಧ್ಯ ಅಸ್ತಿತ್ವದಲ್ಲಿರುವ ತಾರತಮ್ಯವಾದಿ ಲಿಂಗ ಸಂಬಂಧಗಳನ್ನು ಪರಿವರ್ತಿಸಲು, ಲಿಂಗ ಸಂಬಂಧಗಳಲ್ಲಿ ಇರುವ ಅಸೌಷ್ಠವವನ್ನು ಸರಿಪಡಿಸಲು ಮಹಿಳೆಯರಿಗೆ ಸಾಕ್ಷರತೆ ತುಂಬಾ ಅಗತ್ಯವಾಗಿದೆ.

ಮಹಿಳೆಯರು ಅಂತರ್ಗತ ಮಾಡಿಕೊಂಡಿರುವ ಲಿಂಗವಾದಿ ವಿಚಾರ ಪ್ರಣಾಳಿಕೆಯನ್ನು (Patriarchy) ಪರಹಿತವಾದಿ (altruistic) ಮನೋಭಾವವನ್ನು ಕುಟುಂಬ ಸಂಬಂಧಗಳಲ್ಲಿ ಸಂಘರ್ಷದ ಧೋರಣೆ ತಳೆಯುವುದಕ್ಕೆ ಪ್ರತಿಯಾಗಿ ಸಹಕಾರಿ ಧೋರಣೆ ತಳೆಯುವ ಪ್ರವೃತ್ತಿಯನ್ನು ಹತ್ತಿಕ್ಕುವ – ತೊಡೆದುಹಾಕುವ ದಿಶೆಯಲ್ಲಿ ಮಹಿಳಾ ಸಾಕ್ಷರತೆಗೆ ಮಹತ್ವದ ಪಾತ್ರವಿದೆ.

ಸಾಕ್ಷರತೆಗೆ ಸಂಬಂಧಿಸಿದ ಲಿಂಗವಾರು ಅಸಮಾನತೆಗಳು ಸಮಾಜದಲ್ಲಿ ಬೇರೂರಿರುವ ಮಹಿಳೆಯರ ನಿಕೃಷ್ಟೀಕರಣ ಹಾಗೂ ಲಿಂಗವಾದಿ ತಾರತಮ್ಯಗಳ ಅಭಿವ್ಯಕ್ತಿಯಾಗಿದೆ ಎಂಬ ವಿಚಾರವನ್ನು ಅಮರ್ತ್ಯಸೇನ್ ಪ್ರತಿಪಾದಿಸುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲು ಪುರುಷರ ಪಾಲಿಗೆ ಸಮನಾಗಿಲ್ಲ ಎಂಬುದಕ್ಕೆ ಸಾಕ್ಷರತೆಗೆ ಸಂಬಂಧಿಸಿದ ಲಿಂಗವಾರು ಅಸಮಾನತೆ ಒಂದು ಸ್ಪಷ್ಟ ನಿದರ್ಶನವಾಗಿದೆಯೆಂದು ಹೇಳಬಹುದು. ಸಾಕ್ಷರತೆಯಲ್ಲಿನ ಲಿಂಗವಾರು ಅಸಮಾನತೆಯನ್ನು ಅಭಿವೃದ್ಧಿಯಲ್ಲಿನ ಲಿಂಗವಾರು ಅಸಮಾನತೆಯ ‘ಪ್ರತಿರೂಪ’ವೆಂದೆ ಭಾವಿಸಬಹುದಾಗಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ.೪೮.೯೭ರಷ್ಟಿದೆ. ಆದರೆ ಜಿಲ್ಲೆಯಲ್ಲಿನ ಒಟ್ಟು ಅಕ್ಷರಸ್ಥರಲ್ಲಿ ಮಹಿಳೆಯರ ಪಾಲು ಕೇವಲ ಶೇ. ೩೮.೭೪. ಆದರೆ ಜಿಲ್ಲೆಯಲ್ಲಿ ಒಟ್ಟು ಅನಕ್ಷರಸ್ಥರಲ್ಲಿ ಮಹಿಳೆಯರ ಪಾಲು ಶೇ.೬೨.೦೦.

ಗದಗ ಜಿಲ್ಲೆಯಲ್ಲಿ ಮಹಿಳೆಯರ ಸಾಕ್ಷರತೆ

ಈ ಭಾಗದಲ್ಲಿ ಗದಗ ಜಿಲ್ಲೆಗೆ ಸಂಬಂಧಿಸಿದ ಲಿಂಗವಾರು ಸಾಕ್ಷರತಾ ಅಂತರ – ಅಸಮಾನತೆಗಳನ್ನು ವಿವರವಾಗಿ ಚರ್ಚಿಸಲಾಗಿದೆ. ಇದರ ಜೊತೆಗೆ ಸಾಕ್ಷರತೆ – ಜನನ ಪ್ರಮಾಣ – ಜನಸಂಖ್ಯೆಯ ಬೆಳವಣಿಗೆಗೆ, ಮಹಿಳೆಯರ ವಿವಾಹದ ವಯಸ್ಸು ಮುಂತಾದವುಗಳ ನಡುವಿನ ಸಂಬಂಧಗಳನ್ನು ಸೂಕ್ಷಮವಾಗಿ ಪರಿಶೀಲಿಸಲು ಪ್ರಯತ್ನಿಸಲಾಗಿದೆ. ಕರ್ನಾಟಕ ದಲ್ಲಿ ಸಾಕ್ಷರತೆ ಪ್ರಮಾಣವು ಶೇ.೪೦ಕ್ಕಿಂತ ಕಡಿಮೆ ಇರುವ ೧೩ ಜಿಲ್ಲೆಗಳ ಪೈಕಿ ಗದಗವೂ ಒಂದು. ಈ ಜಿಲ್ಲೆಯಲ್ಲಿ ಮಹಿಳಾ ಸಾಕ್ಷರತೆಯು ಶೇ. ೩೯.೬೮. ರಾಜ್ಯಮಟ್ಟದಲ್ಲಿ ಮಹಿಳೆಯರ ಸಾಕ್ಷರತೆ ಶೇ. ೪೪.೩೪ರಷ್ಟಿದೆ. ಗದಗ ಜಿಲ್ಲೆಯಲ್ಲಿನ ಮಹಿಳೆಯ ಸಾಕ್ಷರತೆಯು ರಾಜ್ಯಮಟ್ಟದ ಮಹಿಳೆಯರ ಸಾಕ್ಷರತೆ ಪ್ರಮಾಣಕ್ಕಿಂತ ಕಡಿಮೆ ಇದೆ. ಗದಗ ಜಿಲ್ಲೆಯ ಗ್ರಾಮೀಣ ಮಹಿಳೆಯರ ಸಾಕ್ಷರತೆ ಕೇವಲ ಶೇ. ೩೨.೬೫.

ಗದಗ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ. ೪೯.೨೧. ಆದರೆ ಜಿಲ್ಲೆಯ ಒಟ್ಟು ಅಕ್ಷರಸ್ಥರಲ್ಲಿ ಮಹಿಳಾ ಅಕ್ಷರಸ್ಥರ ಪ್ರಮಾಣ ಕೇವಲ ಶೇ. ೩೫.೦೦. ಆದರೆ ಜಿಲ್ಲೆಯಲ್ಲಿರುವ ಅನಕ್ಷರಸ್ಥರ ಸಂಖ್ಯೆಯಲ್ಲಿ ಮಹಿಳಾ ಅನಕ್ಷರಸ್ಥರ ಪ್ರಮಾಣ ಶೇ. ೬೭.೩೮. ಗದಗ ಜಿಲ್ಲೆಯಲ್ಲಿ ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬ ಮಹಿಳೆ ಮಾತ್ರ ಅಕ್ಷರಸ್ಥಳಾಗಿದ್ದಾಳೆ. ಆದರೆ ಪ್ರತಿ ಮೂವರು ಪುರುಷರಲ್ಲಿ ಇಬ್ಬರು ಸಾಕ್ಷರರಿದ್ದಾರೆ. (ಗ್ರಾಮೀಣ) ಸಾಕ್ಷರತೆಗೆ ಸಂಬಂಧಿ ಸಿದಂತೆ ಗದಗ ಜಿಲ್ಲೆಯು ತೀವ್ರ ಹಿಂದುಳಿದಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಮಹಿಳೆಯರ ಸಾಕ್ಷರತೆ ಪ್ರಮಾಣವು ಪುರುಷರ ಸಾಕ್ಷರತಾ ಪ್ರಮಾಣಕ್ಕಿಂತ ಕಡಿಮೆ ಇದೆ. ಸಾಕ್ಷರತೆಗೆ ಸಂಬಂಧಿಸಿದಂತೆ ತೀವ್ರ ತಾರತಮ್ಯವಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಗದಗ ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣ    

ಒಂದು ದೇಶ ಯಾ ಪ್ರದೇಶದ ಅಡಿಪಾಯವೆಂದರೆ ಪ್ರಾಥಮಿಕ ಶಾಲೆಗಳು. ಭಾರತದ ಸಂವಿಧಾನದ ೪೫ನೆಯ ಪರಿಚ್ಛೇದದಲ್ಲಿ ೬ ರಿಂದ ೧೪ ವರ್ಷಗಳ ವಯೋಮಾನದ ಮಕ್ಕಳಿಗೆ ಶಿಕ್ಷಣವನ್ಜು ಕಡ್ಡಾಯವನ್ನಾಗಿಯೂ ಉಚಿತ ವನ್ನಾಗಿಯೂ ಮಾಡಲಾಗಿದೆ. ಆದರೆ ವಾಸ್ತವಿಕ ಸಂಗತಿ ಇದಕ್ಕಿಂತ ಭಿನ್ನವಾಗಿದೆ. ಬಹಳಷ್ಟು ಮಟ್ಟಿಗ, ಬಹಳಷ್ಟು ಜನರಿಗೆ ಅದು ಉಚಿತವಾಗಿಲ್ಲ. ಕರ್ನಾಟಕದಲ್ಲಿ ಶಾಲೆಗಳನ್ನು ಪ್ರವೇಶಿಸದ ಮಕ್ಕಳ ಪ್ರಮಾಣ ಶೇ. ೨೭.೨೨. ಆದರೆ ಗದಗ ಜಿಲ್ಲೆಯಲ್ಲಿ ೬ರಿಂದ ೧೪ ವರ್ಷಗಳ ವಯೋಮಾನದಲ್ಲಿ ಶಾಲೆ ಪ್ರವೇಶಿಸದ ಮಕ್ಕಳ ಪ್ರಮಾಣ ಶೇ. ೩೧.೪೩. ಕರ್ನಾಟಕ ರಾಜ್ಯದಲ್ಲಿನ ೨೭ ಜಿಲ್ಲೆಗಳ ಪೈಕಿ ೧೪ ಜಿಲ್ಲೆಗಳಲ್ಲಿ ಶಾಲೆ ಪ್ರವೇಶಿಸದ ಮಕ್ಕಳ ಪ್ರಮಾಣ ರಾಜ್ಯ ಮಟ್ಟದ ಪ್ರಮಾಣಕ್ಕಿಂತ ಅಧಿಕವಾಗಿದೆ. (ಗದಗ ಜಿಲ್ಲೆಗೆ ಸಂಬಂಧಿಸಿದಂತೆ ಶಾಲೆ ಪ್ರವೇಶಿಸದ ಮಕ್ಕಳ ಪ್ರಮಾಣದ ಅಂಕಿ – ಸಂಖ್ಯೆ ದೊರೆಯುವುದಿಲ್ಲ. ಇದಕ್ಕಾಗಿ ಅವಿಭಜಿತ ಧಾರವಾಡ ಜಿಲ್ಲೆಯ ಶಾಲೆ ಪ್ರವೇಶಿಸದ ಮಕ್ಕಳ ಪ್ರಮಾಣವನ್ನೇ ಗದಗ ಜಿಲ್ಲೆಗೂ ಅನ್ವಯಿಸಿ ಬಳಸಲಾಗಿದೆ). ಶಾಲೆ ಪ್ರವೇಶಿಸದ ಮಕ್ಕಳಲ್ಲಿ ಹೆಚ್ಚಿನ ಪಾಲು ಬಾಲಕಿಯರಾಗಿರುತ್ತಾರೆ. ಗದಗ ಜಿಲ್ಲೆಯಲ್ಲಿ ಶಾಲೆ ಪ್ರವೇಶಿಸದ ಬಾಲಕರ ಪ್ರಮಾಣ ಶೇ. ೨೬.೬೯ ರಷ್ಟಾದರೆ ಬಾಲಕಿಯರದು ಶೇ. ೩೬.೩೧. ಹೀಗೆ ಸಾಕ್ಷರತೆ – ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ನೆಲೆಗಳಲ್ಲೂ ಲಿಂಗತಾರತಮ್ಯ ದಟ್ಟವಾಗಿರುವುದನ್ನು ನೋಡಬಹುದು.

ಶಾಲೆಗಳಲ್ಲಿ ಮಕ್ಕಳು : ಲಿಂಗ ತಾರತಮ್ಯ

ಕೋಷ್ಟಕ ೬.೫ರಲ್ಲಿ ೧೯೯೩ – ೯೪ರಲ್ಲಿ ಗದಗ ಜಿಲ್ಲೆಯಲ್ಲಿನ ಒಂದರಿಂದ ಏಳನೆಯ ತರಗತಿಯವರಗಿನ ಶಾಲಾ ಮಕ್ಕಳಸಂಖ್ಯೆಯ ವಿವರಗಳನ್ನು ನೀಡಲಾಗಿದೆ. ಒಂದನೆಯ ತರಗತಿಯಿಂದ ಅನುಕ್ರಮವಾಗಿ ಏಳನೆಯ ತರಗತಿ ಹಂತಕ್ಕೆ ಸಾಗಿದಾಗ ಶಾಲಾಮಕ್ಕಳಲ್ಲಿ ಬಾಲಕಿಯರ ಪ್ರಮಾಣ ಅವರೋಹಣ ಕ್ರಮದಲ್ಲಿ ಕಡಿಮೆಯಾಗುತ್ತಾ ಸಾಗುವುದನ್ನು ಕಾಣಬಹುದು. ಒಂದನೆಯ ತರಗತಿಯಲ್ಲಿ ಬಾಲಕಿಯರ ಪ್ರಮಾಣವು ಶೇ.೪೮.೫೦ರಷ್ಟಿದೆ. ಇದು ಸರಿಸುಮಾರು ಜನಸಂಖ್ಯೆಯಲ್ಲಿನ ಮಹಿಳೆಯ ಪ್ರಮಾಣಕ್ಕೆ (ಶೇ.೪೯.೨೧) ಅತ್ಯಂತ ಸನಿಹದಲ್ಲಿದೆ. ಆದರೆ ಏಳನೆಯ ತರಗತಿಯಲ್ಲಿನ ಮಕ್ಕಳ ಪ್ರಮಾಣದಲ್ಲಿ ಬಾಲಕಿಯರ ಪ್ರಮಾಣವು ಕೇವಲ ಶೇ.೪೦.೪೨ರಷ್ಟಿರುವುದನ್ನು ಕಾಣಬಹುದು.

ಕೋಷ್ಟಕ .೫: ಒಂದನೆಯ ತರಗತಿಯಿಂದ ಏಳನೆಯ ತರಗತಿವರೆಗೆ ಮಕ್ಕಳ ಸಂಖ್ಯೆ : ೧೯೯೩೯೪

ತರಗತಿಗಳು

ಹೆಣ್ಣು ಮಕ್ಕಳು

ಗಂಡು ಮಕ್ಕಳು

ಒಟ್ಟು ಮಕ್ಕಳು

ಹೆಣ್ಣು ಮಕ್ಕಳ ಪ್ರಮಾಣ

ಒಂದನೆಯಎರಡನೆಯ

ಮೂರನೆಯ

ನಾಲ್ಕನೆಯ

ಐದನೆಯ

ಆರನೆಯ

ಏಳನೆಯ

ಒಟ್ಟು

೧೨೯೮೮೧೨೮೪೨

೧೧೬೨೭

೯೮೨೯

೭೧೪೦

೫೦೪೧

೪೧೯೦

೬೩೬೫೭

೧೩೬೨೮೧೩೯೪೯

೧೩೪೦೩

೧೧೮೦೯

೯೬೮೭

೭೧೭೩

೬೧೭೫

೭೫೮೨೪

 

೨೬೬೧೬೨೬೭೯೧

೨೫೦೩೦

೨೧೬೩೮

೧೬೮೨೭

೧೨೨೧೪

೧೦೩೬೫

೧,೩೯,೪೮೧

ಶೇ. ೪೮.೫೦ಶೇ. ೪೭.೯೩

ಶೇ. ೪೬.೪೫

ಶೇ. ೪೫.೪೨

ಶೇ. ೪೨.೪೩

ಶೇ. ೪೧.೨೭

ಶೇ. ೪೦.೪೨

ಶೇ. ೪೫.೬೪

ಕೋಷ್ಟಕ ೬.೬ರಲ್ಲಿ ಒಂದರಿಂದ ಏಳನೆಯ ತರಗತಿವರೆಗಿನ ವರ್ಗಗಳಲ್ಲಿ ಒಟ್ಟು ಮಕ್ಕಳ ಸಂಖ್ಯೆಯನ್ನು ಎರಡು ಕಾಲ ಘಟ್ಟಗಳಿಗೆ ಸಂಬಂಧಿಸಿದಂತೆ ನೀಡಲಾಗಿದೆ. ೧೯೯೩ – ೯೪ರಲ್ಲಿ ಗದಗ ಜಿಲ್ಲೆಯಲ್ಲಿದ್ದ ಒಂದರಿಂದ ಏಳನೆಯ ತರಗತಿವರೆಗಿನ ವರ್ಗಗಳಲ್ಲಿನ ಒಟ್ಟು ಮಕ್ಕಳ ಪ್ರಮಾಣ ೧,೩೯,೪೮೧. ಇದು ೧೯೯೭ – ೯೮ರಲ್ಲಿ ೧,೭೧,೬೫೯ಕ್ಕೆ ಏರಿಕೆ ಯಾಗಿರುವುದನ್ನು ಕಾಣಬಹುದು. ಅದರಂತೆ ೧೯೯೩ – ೯೪ರಲ್ಲಿ ಪ್ರಾಥಮಿಕ ಶಾಲೆ ಹಂತದ ತರಗತಿಗಳಲ್ಲಿನ ಮಕ್ಕಳಲ್ಲಿ ಬಾಲಕಿಯರ ಪ್ರಮಾಣವು ಶೇ. ೪೫.೬೪ರಷ್ಟಿದ್ದು ೧೯೯೭ – ೯೮ರಲ್ಲಿ ಅದು ಶೇ. ೪೭.೬೮ಕ್ಕೆ ಏರಿಕೆಯಾಗಿರುವುದನ್ನು ಕಾಣಬಹುದು. ಇದೊಂದು ಆರೋಗ್ಯಕಾರಿಯಾದ, ಅಪೇಕ್ಷಣಿಯವಾದ ಬೆಳವಣಿಗೆಯಾಗಿದೆ. ಆದರೆ ಉನ್ನತ ತರಗತಿಗಳಿಗೆ ಸಾಗಿದಂತೆ ಬಾಲಕಿಯರ ಪ್ರಮಾಣವು ಕಡಿಮೆಯಾಗುತ್ತಿರುವುದನ್ನು ಕಾಣಬಹುದು. ಉದಾಹರಣೆಯಾಗಿ ೧೯೯೭ – ೯೮ರಲ್ಲಿ ಒಂದರಿಂದ ಏಳನೆಯ ತರಗತಿವರೆಗಿನ ವರ್ಗಗಳಲ್ಲಿ ಬಾಲಕಿಯರ ಪ್ರಮಾಣ ಶೇ. ೪೭.೬೯ರಷ್ಟಿದ್ದರೆ ೮ ರಿಂದ ೧೦ನೆಯ ತರಗತಿಯವರೆಗಿನ ವರ್ಗಗಳಲ್ಲಿನ ಬಾಲಕಿಯರ ಪ್ರಮಾಣ ಶೇ.೩೯.೨೬.

ಶಾಲೆಯನ್ನು ಪ್ರವೇಶಿಸಿದ ಸಮದರ್ಭದಲ್ಲಿ ಸ್ವಲ್ಪ ಪ್ರಮಾಣದಲ್ಲಿರುವ ಲಿಂಗತಾರತಮ್ಯವು ಉನ್ನತ ತರಗತಿಗಳಿಗೆ ಸಾಗಿದಂತೆ ಲಿಂಗ ತಾರತಮ್ಯವು ಅಧಿಕವಾಗುತ್ತಾ ನಡೆಯುವುದನ್ನು ನೋಡಬಹುದು. ಇದೇ ಪ್ರವೃತ್ತಿಯನ್ನು ಸಮಾಜದ ಉಳಿದ ಸಂಗತಿಗಳಿಗೆ ಸಂಬಂಧಿಸಿದಂತೆಯೂ ನೋಡಬಹುದಾಗಿದೆ. ಕರ್ನಾಟಕದಲ್ಲಿನ ಶಿಶುಗಳ ಮರಣ ಪ್ರಮಾಣಕ್ಕೆ ಸಂಬಂಧಿಸಿದಂತೆ ಲಿಂಗತಾರತಮ್ಯವು ಕೇವಲ ೭ ಜಿಲ್ಲೆಗಳಲ್ಲಿದ್ದರೆ ೫ ವರ್ಷದೊಳಗಿನ ಮಕ್ಕಳ ಮರಣಕ್ಕೆ ಸಂಬಂಧಿಸಿದಂತೆ ಲಿಂಗತಾರತಮ್ಯವು ೧೨ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಹೀಗೆ ಎಳೆ ಹರೆಯದ ಹೆಣ್ಣು ಮಕ್ಕಳು ವಯಸ್ಸಾದಂತೆ, ಬೆಳೆದಂತೆ ಅನೇಕ ಬಗೆಯ ತಾರತಮ್ಯಗಳನ್ನು ಅನುಭವಿಸಬೇಕಾಗುತ್ತದೆ.

ಕೋಷ್ಟಕ .: ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ : ೧೯೯೩೯೪ ಮತ್ತು ೧೯೯೭೯೮                    

ತರಗತಿಗಳು

ಬಾಲಕಿಯರು

ಬಾಲಕರು

ಒಟ್ಟು

೧ ರಿಂದ ೭ನೇ ತರಗತಿ ೧೯೯೩-೯೪೬೩.೬೫೭

(೪೫.೬೪)

೯೭-೯೮೮೧.೮೫

(೪೭.೬೮)

೯೩-೯೪೭೫೮೨೪

(೫೪.೩೬)

೯೭-೯೮೮೯೮೦೮

(೫೨.೩೨)

೧೯೯೩-೯೪೧೩೯೪೮೧

(೧೦೦.೦೦)

೯೭-೯೮೧೭೧೬೫೯

(೧೦೦.೦೦)

ಪರಿಶಿಷ್ಟ ಮಕ್ಕಳ ದಾಖಲಾತಿ                     

ಕೋಷ್ಟಕ ೬.೭ರಲ್ಲಿ ಗದಗ ಜಿಲ್ಲೆಯಲ್ಲಿನ ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಎಷ್ಟಿದೆ? ಮತ್ತು ಶಾಲಾ ದಾಖಲಾತಿ ಯಲ್ಲಿ ಪರಿಶಿಷ್ಟ ಮಕ್ಕಳ ಪ್ರಮಾಣ ಎಷ್ಟಿದೆ? ಎಂಬುದನ್ನು ತೋರಿಸಿದ್ದೇವೆ. ಅತ್ಯಂತ ಕುತೂಹಲದ ಸಂಗತಿಯೆಂದರೆ ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಎಷ್ಟಿದೆಯೋ ಅದಕ್ಕಿಂತ ಶಾಲಾ ದಾಖಲಾತಿಯಲ್ಲಿ ಅವರ ಪ್ರಮಾಣ ಅಧಿಕ ವಾಗಿದೆ. ಇದೊಂದು ಅತ್ಯಂತ ಆರೋಗ್ಯಕಾರಿ ಬೆಳವಣಿಗೆಯಾಗಿದೆ.

ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಶೇ. ೧೬.೨೩ರಷ್ಟಿದೆ. ಆದರೆ ಶಾಲಾ ದಾಖಲಾತಿಯಲ್ಲಿ ಪರಿಶಿಷ್ಟರ ಮಕ್ಕಳ ಪ್ರಮಾಣ ಶೇ. ೨೨.೦೦ರಷ್ಟಿದೆ. ಪರಿಶಿಷ್ಟ ಜನಸಂಖ್ಯೆಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂಬ ಜಾಗೃತಿ ಉಂಟಾಗಿರುವುದರ ಪರಿಣಾಮವಾಗಿ ಇಂತಹ ಬೆಳವಣಿಗೆ ಕಂಡು ಬರುತ್ತಿರಬಹುದು. ಸರ್ಕಾರವು ಪರಿಶಿಷ್ಟ ಜನಸಂಖ್ಯೆಗೆ ನೀಡುತ್ತಿರುವ ಸವಲತ್ತು – ಸೌಲಭ್ಯಗಳ ಪರಿಣಾಮವಾಗಿಯೂ ಇಂತಹ ಬೆಳವಣಿಗೆ ಉಂಟಾಗಿರಬಹುದು. ಕಾರಣ ಯಾವುದೇ ಇರಲಿ ಇದೊಂದು ಸ್ವಾಗತಾರ್ಹವೂ, ಪ್ರಗತಿಪರವೂ ಆದ ಬೆಳವಣಿಗೆಯಾಗಿದೆ.

ಗದಗ ಜಿಲ್ಲೆಯಲ್ಲಿ ಶಾಲಾ ದಾಖಲಾತಿಯ ಒಟ್ಟು ಸಂಖ್ಯೆಯಲ್ಲಿ ಬಾಲಕಿಯರ ಪ್ರಮಾಣ ಶೇ.೪೭.೬೮, ಇದೇ ರೀತಿ ಪ.ಜಾ., ಪ.ಪಂ. ಮತ್ತು ಅಲ್ಪ ಸಂಖ್ಯಾತರ ಮತ್ತು ಒಟ್ಟು ಉಳಿದ ಇತರ ವರ್ಗಗಳಲ್ಲಿ ಬಾಲಕಿಯರ ಪ್ರಮಾಣ ಶೇ.೪೭.೭೬. ಆದರೆ ಪ.ಜಾ.ಯಲ್ಲಿ ಶಾಲೆಯಲ್ಲಿ ದಾಖಲಾದ ಮಕ್ಕಳಲ್ಲಿ ಬಾಲಕಿಯರ ಪ್ರಮಾಣ ಶೇ.೪೫.೦೫ ಮತ್ತು ಪ.ಪಂ.ದಲ್ಲಿ ಇದರ ಪ್ರಮಾಣ ಶೇ.೪೪.೬೯. ಒಟ್ಟಾರೆಯಾಗಿ ಬಾಲಕಿಯರ ಪ್ರಮಾಣ ಕಡಿಮೆ ಇದೆ. ಪ.ಜಾ. ಮತ್ತು ಪ.ಪಂಗಳಲ್ಲಿ ಬಾಲಕಿಯರ ಪ್ರಮಾಣ ಸಾಪೇಕ್ಷವಾಗಿ ತುಂಬಾ ಕಡಿಮೆ ಇದೆ. ಈ ವ್ಯತ್ಯಯಗಳನ್ನು ಸರಿಪಡಿಸುವ ದಿಶೆಯಲ್ಲಿ ಇಂದು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಶಾಲಾ ದಾಖಲಾತಿಯಲ್ಲಿ ಕಂಡು ಬಂದಿರುವ ಆರೋಗ್ಯ ಕಾರಿ ಬೆಳವಣಿಗೆಯನ್ನು ಮತ್ತಷ್ಟು ಸದೃಢಗೊಳಿಸುವ ಅಗತ್ಯವಿದೆ.

ಕೋಷ್ಟಕ .: ಶಾಲಾ ದಾಖಲಾತಿ ಹಾಗೂ ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ೧೯೯೮೯೯

ವಿವರಗಳು

ಜನ ಸಂಖ್ಯೆಯಲ್ಲಿ ಪ್ರಮಾಣ

ಶಾಲಾ ದಾಖಲಾತಿಯಲ್ಲಿ ಪ್ರಮಾಣ

ಪರಿಶಿಷ್ಟ ಜಾತಿಪರಿಶಿಷ್ಟ ಪಂಗಡ

ಪರಿಶಿಷ್ಟರು (ಪಜಾ+ಪ.ಪಂ)

ಪರಿಶಿಷ್ಟೇತರರು

 ಶೇ. ೧೩.೮೪ಶೇ. ೨.೩೯

ಶೇ. ೧೬.೨೩

ಶೇ. ೮೩.೭೭

 ಶೇ. ೧೫.೦೪ಶೇ. ೬.೯೬

ಶೇ. ೨೨.೦೦

ಶೇ.೭೮.೦೦

ಕೋಷ್ಟಕ . – ಶಾಲಾ ದಾಖಲಾತಿ: ಲಿಂಗವಾರು ಪ್ರಮಾಣ       

ವಿವರಗಳು

ಶಾಲಾ ದಾಖಲಾತಿ

ಬಾಲಕಿಯರು

ಬಾಲಕರು

ಒಟ್ಟು

ಪರಿಶಿಷ್ಟ ಜಾತಿ
ಪರಿಶಿಷ್ಟ ಪಂಗಡ
ಅಲ್ಪ ಸಂಖ್ಯಾತರು
ಇತರೆ
ಒಟ್ಟು
 ೧೧೬೩೫(೪೫.೦೫)

೫೩೪೦

(೪೪.೬೯)

೪೩.೫೦

(೬೦.೬೬)

೬೦೫೨೬

(೪೭.೭೬)

೮೧೮೫೧

(೪೭.೬೮)

 ೧೪೧೯೦(೫೪.೯೫)

೬೬೧೦

(೫೫.೩೧)

೨೮೨೦

(೩೯.೩೪)

೬೬೧೮೮

(೫೨.೨೪)

೮೯೮೦೮

(೫೨.೩೨)

 ೨೫೮೨೫(೧೦೦.೦೦)

೧೧೯೫೦

(೧೦೦.೦೦)

೭೧೯೦

(೧೦೦.೦೦)

೧೨೬೭೧೪

(೧೦೦.೦೦)

೧೭೧೬೫೯

(೧೦೦.೦೦)

ಮಕ್ಕಳುಶಿಕ್ಷಕರ ಅನುಪಾತ

ಕೋಷ್ಟಕ ೬.೯ರಲ್ಲಿ ೧೯೯೩ – ೯೪ರಲ್ಲಿ ಗದಗ ಜಿಲ್ಲೆಯಲ್ಲಿದ್ದ ಒಟ್ಟು ಶಿಕ್ಷಕರ ಸಂಖ್ಯೆಯನ್ನು ವರ್ಗವಾರು ಹಾಗೂ ಲಿಂಗವಾರು ನೀಡಿದೆ.

ಕೋಷ್ಟಕ .: ಗದಗ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ: ೧೯೯೩೯೪       

ತಾಲ್ಲೂಕುಗಳು

ಶಿಕ್ಷಕರ ಸಂಖ್ಯೆ

ಪರಿಶಿಷ್ಟ ಜಾತಿ

ಪರಿಶಿಷ್ಟ ಪಂಗಡ

ಒಟ್ಟು

ಮ.

ಪು.

ಒಟ್ಟು

ಮ.

ಪು.

ಒಟ್ಟು

ಮ.

ಪು.

ಒಟ್ಟು

ಗದಗ (ಶಹರ)ಗದಗ (ತಾ.)

ಮುಂಡರಗಿ

ನರಗುಂದ

ರೋಣ

ಶಿರಹಟ್ಟಿ

ಒಟ್ಟು

೨೧
೦೯
೧೨
೦೫
೧೧
೦೮
೬೬
೧೫
೪೬
೩೬
೨೦
೩೨
೪೮
೧೯೭
೩೬೫೫

೪೮

೨೫

೪೩

೫೬

೨೬೩

೦೩
೦೫
೦೫
೦೧
೩೭
೦೨
೫೩
೧೪
೨೪
೧೨
೧೫
೮೧
೨೫
೧೭೧
೧೭೨೯

೧೭

೧೬

೧೧೮

೨೭

೨೨೪

೨೩೦
೬೪
೬೨
೨೫
೯೫
೯೭
೫೭೩
೨೪೬
೩೩೬
೧೯೨
೧೮೭
೬೧೯
೩೧೫
೧೮೯೫
೪೭೬೪೦೦

೨೫೪

೨೧೨

೭೧೪

೪೧೨

೨೪೬೮

(೧೦.೬೬)

(೯.೦೮)

೧೯೯೩ – ೯೪ರಲ್ಲಿ ಗದಗ ಜಿಲ್ಲೆಯಲ್ಲಿನ ಪ್ರಾಥಮಿಕ ಶಾಲಾ ಶಿಕ್ಕಕರ ಸಂಖ್ಯೆ ೨೪೬೮. ೧೯೯೩ – ೯೪ರಲ್ಲಿ ಜಿಲ್ಲೆಯಲ್ಲಿದ್ದ ಮಕ್ಕಳ ಸಂಖ್ಯೆ ೧,೩೯,೪೮೧. ೧೯೯೩ – ೯೪ರಲ್ಲಿ ಗದಗ ಜಿಲ್ಲೆಯಲ್ಲಿದ್ದ ಮಕ್ಕಳು – ಶಿಕ್ಷಕರ ನಡುವಿನ ಅನುಪಾತ ೫೬ ಅಂದರೆ ಗದಗ ಜಿಲ್ಲೆಯಲ್ಲಿ ಪ್ರತಿಯೊಬ್ಬ ಶಿಕ್ಷಕನೂ ಕನಿಷ್ಠ ಸರಾಸರಿ ೫೬ ಮಕ್ಕಳಿಗೆ ಕಲಿಸಬೇಕಾಗುತ್ತದೆ. ರಾಜ್ಯಮಟ್ಟ ದಲ್ಲಿ ಮಕ್ಕಳು – ಶಿಕ್ಷಕರು ನಡುವಿನ ಅನುಪಾತ ೫೦ ಇದೆ. ಗದಗ ಜಿಲ್ಲೆಯಲ್ಲಿ ಅನುಪಾತವು ರಾಜ್ಯಮಟ್ಟದಲ್ಲಿರುವುದ ಕ್ಕಿಂತ ಅಧಿಕವಿದೆ. ಇದನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು.

ಪರಿಶಿಷ್ಟ ಶಿಕ್ಷಕರ ಪ್ರಮಾಣ

ಕೋಷ್ಟಕ ೬.೯ರಲ್ಲಿ ಗದಗ ಜಿಲ್ಲೆಯಲ್ಲಿರುವ ಒಟ್ಟು ಶಿಕ್ಷಕರಲ್ಲಿ ಪರಿಶಿಷ್ಟರ ಪ್ರಮಾಣ ಎಷ್ಟಿದೆ ಮತ್ತು ಮಹಿಳಾ ಶಿಕ್ಷಕಿಯರ ಪ್ರಮಾಣವೆಷ್ಟಿದೆ ಎಂಬುದನ್ನು ತೋರಿಸಿದೆ. ಒಟ್ಟು ಪರಿಶಿಷ್ಟ (ಪ.ಜಾ+ಪ.ಪಂ) ಶಿಕ್ಷಕರ ಸಂಖ್ಯೆಯನ್ನು ತೆಗೆದುಕೊಂಡರೆ, ಅವರ ಪ್ರಮಾಣ ಶೇ.೧೯.೭೪ರಷ್ಟಿದೆ. ಜಿಲ್ಲೆಯ ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಕೇವಲ ೧೬.೨೩.ಅಂದ ಮೇಲೆ ಶಾಲಾ ಶಿಕ್ಷಕರಿಗೆ ಸಂಬಂಧಿಸಿದಂತೆ ಪರಿಶಿಷ್ಟ ಶಿಕ್ಷಕರ ಪ್ರಮಾಣವು ಅವರು ಜನಸಂಖ್ಯೆಯಲ್ಲಿ ಪಡೆದಿರುವ ಪರಿಮಾಣ ಕ್ಕಿಂತ ಅಧಿಕವಾಗಿದೆ.

ಆದರೆ ಪರಿಶಿಷ್ಟರನ್ನು ಪ.ಜಾ. ಮತ್ತು ಪ.ಪಂ.ಎಂದು ವಿಭಜಿಸಿದರೆ ಅಲ್ಲಿ ನಮಗೆ ವಿಚಿತ್ರ ಕಂಡುಬರುತ್ತದೆ. ಜಿಲ್ಲೆಯ ಜನ ಸಂಖ್ಯೆಯಲ್ಲಿ ಪ.ಜಾ. ಯವರ ಪ್ರಮಾಣ ಶೇ.೧೩.೮೪. ಆದರೆ ಶಿಕ್ಷಕರ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯವರ ಪ್ರಮಾಣ ಕೇವಲ ಶೇ.೧೦.೬೬. ಆದರೆ ಜಿಲ್ಲೆಯ ಜನಸಂಖ್ಯೆ.೨.೩೯ರಷ್ಟು ಪಾಲು ಪಡೆದಿರುವ ಪ.ಪಂ.ದವರು ಶಾಲಾಶಿಕ್ಷಕರಲ್ಲಿ ಶೇ.೯.೦೮ ಪಾಲು ಪಡೆದಿದ್ದಾರೆ. ಸಾಪೇಕ್ಷವಾಗಿ ಪ.ಪಂ ಗಳಿಗೆ ಸೇರಿದ ಶಿಕ್ಷಕರ ಪ್ರಮಾಣವು ಪ.ಜಾ.ಗಳಿಗೆ ಸೇರಿದ ಶಿಕ್ಷಕರ ಪ್ರಮಾಣಕ್ಕಿಂತ ಅಧಿಕವಿದೆ. ಇದಕ್ಕೆ ಅನೇಕ ಸಾಮಾಜಿಕ ಕಾರಣಗಳಿರಬಹುದು.ಪ.ಜಾ.ಗಳಲ್ಲಿ ಇರುವಂತೆ ಅಸ್ಪೃಶ್ಯತೆಯ ಸಮಸ್ಯೆಯು ಪ.ಪಂ.ಗಳಲ್ಲಿ ಇದ್ದಂತೆ ಕಾಣಲಿಲ್ಲ. ಇದರಿಂದಾಗಿ ಪ.ಪಂ.ಗಳಲ್ಲಿನ ಜನರ ಬೆಳವಣಿಗೆಯು ಪ.ಜಾ.ಗಳಲ್ಲಿನ ಜನರ ಬೆಳವಣಿಗೆಗಿಂತ ಉತ್ತಮವಾಗಿರುವ ಸಾಧ್ಯತೆ ಇದೆ.

ಕಳೆದ ೮ – ೧೦ ವರ್ಷಗಳಲ್ಲಿ ಶಾಲಾ ದಾಖಲಾತಿ ಹಾಗೂ ಶಾಲಾ ಶಿಕ್ಷಕರ ಸಂಖ್ಯೆ ಗಣನೀಯವಾಗಿ ಬೆಳೆದಿದೆ. ಶಿಕ್ಷಣ ಸೌಲಭ್ಯದ ವಿಸ್ತರಣೆ ನಡೆದಿದೆ. ಇದು ಇನ್ನು ಬೆಳೆಯಬೇಕು ಮತ್ತು ವಿಸ್ತರಣೆಯಾಗಬೇಕು. ಇದು ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಒಂದು ಮುಖ ಮಾತ್ರವಾಗಿದೆ. ಅದಕ್ಕೆ ಇನ್ನೊಂದು ಮುಖವಿದೆ. ಅದು ಶಿಕ್ಷಣದ ಗುಣಮಟ್ಟ. ಪ್ರಾಥಮಿಕ ಶಿಕ್ಷಣದ ಗಾತ್ರದಲ್ಲಿನ ವಿಸ್ತರಣೆ ಜೊತೆಗೆ ಅದರ ಗುಣಮಟ್ಟದ ಸುಧಾರಣೆಯೂ ನಡೆಯಬೇಕಾಗಿದೆ.ಪ್ರಾಥಮಿಕ ಶಾಲೆ ಗಳಲ್ಲಿ ಉನ್ನತ ತರಗತಿಗಳಿಗೆ ಸಾಗಿದಂತೆ ಬಾಲಕಿಯರ ಪ್ರಮಾಣವು ಕಡಿಮೆಯಾಗುತ್ತಿರುವುದನ್ನು ಹಿಂದೆ ತೋರಿಸ ಲಾಗಿದೆ. ಇದಕ್ಕೆ ಮುಖ್ಯ ಕಾರಣ ಶಾಲೆ ಪ್ರವೇಶಿಸಿದ ಮಕ್ಕಳಲ್ಲಿ ಹೆಚ್ಚಿನ ಬಾಲಕಿಯರಲ್ಲಿ ಉನ್ನತ ತರಗತಿಗಳಿಗೆ ಸಾಗಿದಂತೆ ಶಾಲೆ ಬಿಟ್ಟು ಬಿಡುವ ಪ್ರವೃತ್ತಿ ಅಧಿಕವಾಗಿದೆ. ಗದಗ ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಕೆಲವು ಸೂಕ್ಷ್ಮ ಹಾಗೂ ಸಂಕೀರ್ಣ ಸಂಗತಿಗಳ ಕಡೆಗೆ ಗಮನ ನೀಡಬೇಕಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿನ ಗುಣಮಟ್ಟದ ಸುಧಾರಣೆ ಕೆಲಸವು ಜಿಲ್ಲಾ ಮಟ್ಟದಲ್ಲಿ ನಡೆಯಬೇಕು. ಇದನ್ನು ರಾಜ್ಯಮಟ್ಟದಲ್ಲಿ ಯೋಜಿಸಲು ಸಾಧ್ಯವಿಲ್ಲ. ಏಕೆಂದರೆ ಶಿಕ್ಷಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪ್ರದೇಶವಿಶಿಷ್ಟವಾಗಿರುತ್ತದೆ. ಆದ್ದರಿಂದ ಪ್ರಾಥಮಿಕ ಶಿಕ್ಷಣದ ಗುಣಮಟ್ಟದ ಸುಧಾರಣೆಯು ಜಿಲ್ಲೆಯ ವಿಶಿಷ್ಟತೆಯನ್ನು ಗಮನದಲ್ಲಿಟ್ಟುಕೊಂಡು ನಡೆಯಬೇಕು. ‘ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯ ಕ್ರಮ’ ವೆಂಬ ಕಾರ್ಯಕ್ರಮವೇನೊ ರಾಜ್ಯದಲ್ಲಿ ಪ್ರಾರಂಭವಾಗಿದೆ. ಇದರ ಪರಿಣಾಮ ಏನಾಗಿದೆ ಎಂಬುದರ ಅಧ್ಯಯನ ನಡೆಯಬೇಕಾಗಿದೆ.