ಮಂಡ್ಯ ಎಂದರೆ ಇಂಡಿಯಾ” ಎನ್ನುವ ಮಾತೊಂದಿದೆ. ಇಂಡಿಯಾದ ಅನೇಕ ವೈಶಿಷ್ಯಗಳು, ವೈವಿಧ್ಯಗಳು ಮಂಡ್ಯದಲ್ಲಿವೆ. ಹೇಳಿ ಕೇಳಿ ಇದು ಬಯಲು ಸೀಮೆ. ೧೯೩೯ಕ್ಕೆ ಮುಂಚೆ ಮಂಡ್ಯ ಮೈಸೂರು ಜಿಲ್ಲೆಗೆ ಸೇರಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೃಪೆಯಿಂದ ಮಂಡ್ಯ ಪ್ರತ್ಯೇಕ ಅಸ್ತಿತ್ವಕ್ಕೆ ಬಂತು. ಅದಕ್ಕಾಗಿ ನಾಲ್ವಡಿಯವರಿಗೆ ನಮಿಸೋಣ.

ನಾಲ್ವಡಿಯವರು ಮಂಡ್ಯವನ್ನು ಪ್ರತ್ಯೇಕ ಜಿಲ್ಲೆ ಮಾಡುವುದಕ್ಕೆ ಮುಂಚೆಯೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಎಂಬಲ್ಲಿ ಕೃಷ್ಣರಾಜ ಜಲಾಶಯ ನಿರ್ಮಿಸಿದರು. ಮಂಡ್ಯಕ್ಕೆ ನೀರುಣಿಸಿದರು. ಮೈಸೂರು ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕಾರಣರಾದರು. ಸರ್.ಎಂ. ವಿಶ್ವೇಶ್ವರಯ್ಯನವರು ಎಂಜಿನಿಯರ್ ಆಗಿ, ದಿವಾನರಾಗಿ ಮೈಸೂರಿನ ನವಶಿಲ್ಪಿಯಾಗಿ ಕಂಗೊಳಿಸಿದರು. ಮಿರ್ಜಾಇಸ್ಮಾಯಿಲ್ ಅವರು ಜಿಲ್ಲೆಯನ್ನು ಸುಂದರಗೊಳಿಸಲು ನೆರವಾದರು. ಡಾ.ವೆಸ್ಲಿ ಸಿ.ಕೋರ್ಲ್ಮ ಜಿಲ್ಲೆಯ ಕಬ್ಬು ಬೆಳೆ-ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಕಾರಣರಾದರು.

ಮಂಡ್ಯಜಿಲ್ಲೆ ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿದೆ. ಉತ್ತರದಲ್ಲಿ ತುಮಕೂರು ದಕ್ಷಿಣ ಹಾಗೂ ನೈರುತ್ವದಲ್ಲಿ ಮೈಸೂರು, ಪೂರ್ವಕ್ಕೆ ರಾಮನಗರ, ವಾಯುವ್ಯಕ್ಕೆ ಹಾಸನ ಜಿಲ್ಲೆಗಳ ಗಡಿಗಳಿಂದ ಸುತ್ತುವರೆದಿದೆ. ಈ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೯೫೮ ಚದರ ಕಿ.ಮೀ.ಗಳು ಅಂದರೆ ೧೯೨೪ ಚದರ ಮೈಲಿ. ಸಮುದ್ರಮಟ್ಟಕ್ಕಿಂತ ಸುಮಾರು ೭೬೨ರಿಂದ ೯೧೪ಮೀಟರ್ ಎತ್ತರಕ್ಕಿದೆ. ಮಂಡ್ಯಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಿವೆ. ಅವು ಮಂಡ್ಯ, ಮದ್ದೂರು, ಮಳವಳ್ಳಿ, ಕೃಷ್ಣರಾಜಪೇಟೆ, ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳು ಸುಮಾರು ಒಂದೂವರೆ ಸಾವಿರ ಹಳ್ಳಿಗಳಿದ್ದು ಪ್ರಮುಖ ಕಸುಬು ಬೇಸಾಯ.

ಪೌರಾಣಿಕ ಹಿನ್ನಲೆ :

ಈ ಪ್ರದೇಶ ದಂಡಕಾರಣ್ಯ, ಮೃಗಪಕ್ಷಿಗಳ ಆಶ್ರಯಧಾಮ, ಮಾಂಡವ್ಯ, ಕದಂಬ, ಅಗಸ್ತ್ಯ, ಗೌತಮ, ಭೃಗು, ಕಣ್ವ, ಲಂಬಕರ್ಣರ ತಪೋಭೂಮಿ, ಪವಿತ್ರತೀರ್ಥ ಕ್ಷೇತ್ರಗಳು, ಕಾವೇರಿ, ಹೇಮಾವತಿ, ಲೋಕಪಾವನಿ, ವೀರವೈಷ್ಣವಿ ಹಾಗೂ ಶಿಂಷಾ ಎಂಬ ಐದು ನದಿಗಳು.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಮಂಡ್ಯಜಿಲ್ಲೆಗೆ ಸಂಬಂಧಿಸಿದಂತೆ ಒಂದು ಸಾವಿರಕ್ಕೂ ಹೆಚ್ಚು ಶಾಸನಗಳು ಲಭ್ಯವಾಗಿವೆ. ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ಇಲ್ಲಿವೆ. ಕೊಕ್ಕರೆಬೆಳ್ಳೂರು, ರಂಗನತಿಟ್ಟು, ಆದಿಚುಂಚನಗಿರಿ ನವಿಲು ಮುಂತಾದ ಪಕ್ಷಿಧಾಮಗಳು ಪ್ರವಾಸಿಗಳನ್ನು ಆಕರ್ಷಿಸುತ್ತಿವೆ. ವೀರಗಲ್ಲು-ಮಾಸ್ತಿಕಲ್ಲುಗಳ ಸಂಖ್ಯೆ ಗಣನೀಯವಾಗಿದೆ.

ಇಂತಹ ಭವ್ಯ ಪರಂಪರೆಯ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಇತಿಹಾಸವನ್ನು ತಿಳಿಯಬೇಕಾದರೆ, ಏಳು ತಾಲ್ಲೂಕುಗಳ ಪ್ರತ್ಯೇಕ ಪರಿಚಯ ಮಾಡಿಕೊಳ್ಳುವುದು ಅಗತ್ಯ.

ಮಂಡ್ಯ ತಾಲ್ಲೂಕು ದರ್ಶನ

ಗಾಂಧಿಭವನ

 

ಮಹಾತ್ಮ ಗಾಂಧಿ ಟ್ರಸ್ಟ್ ವತಿಯಿಂದ ಸುಮಾರು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ “ಗಾಂಧಿಭವನ” ತನ್ನದೇ ವೈಶಿಷ್ಟ್ಯ ಪಡೆದುಕೊಂಡಿದೆ. ಸಂಚಾರಿ ವಾಹನವಿದ್ದು ಹಳ್ಳಿ ಹಳ್ಳಿಗೆ ಉಚಿತವಾಗಿ ಸಾಕ್ಷ್ಯಚಿತ್ರ ತೋರಲು ಪ್ರತಿದಿನ ಹೊರಡುತ್ತದೆ. ಗಾಂಧಿಭವನದಲ್ಲಿ ಗಾಂಧಿ ಸ್ಥಿರಪಟಗಳು, ಗಾಂಧಿ ಬದುಕಿನ ಹೋರಾಟದ ಮಹತ್ವವನ್ನು ತಿಳಿಸುತ್ತವೆ. ಉಚಿತ ಹೊಲಿಗೆ ತರಬೇತಿ, ಮೇಣದಬತ್ತಿ ತಯಾರಿಕೆ, ಸೀಮೆಸುಣ್ಣ ತಯಾರಿಕೆ, ಉಚಿತ ವಾಚನಾಲಯ, ಪುಸ್ತಕ ಭಂಡಾರ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

 

ಮಂಡ್ಯ ಸಕ್ಕರೆ ಕಾರ್ಖಾನೆ

 

ಮಂಡ್ಯನಗರದಲ್ಲಿರುವ ಮೈಸೂರು ಸಕ್ಕರೆ ಕಾರ್ಖಾನೆ ಏಷ್ಯಾದಲ್ಲಿಯೇ ಅತಿ ದೊಡ್ಡ ಕಾರ್ಖಾನೆ. ಅನೇಕ ಏರಿಳಿತಗಳನ್ನು ಕಂಡು ಇದೀಗ ಚೇತರಿಸಿಕೊಳ್ಳುತ್ತಿದೆ. ಈ ಕಾರ್ಖಾನೆಯ ನಿರ್ಮಾಣಕ್ಕೆ ಕಾರಣರಾದವರು ನಾಲ್ವಡಿಯವರು, ಮಿರ್ಜಾ ಇಸ್ಮಾಯಿಲ್ ಹಾಗೂ ಕೆನಾಡಾದ ವೆಸ್ಲಿ .ಸಿ ಕೋಲ್ಮನ್ ಎಂಬ ವ್ಯವಸಾಯ ತಜ್ಞ. ಮಂಡ್ಯ ಜಿಲ್ಲೆಯ ಜೀವನಾಡಿ, ಆರ್ಥಿಕ ಸಂಪನ್ಮೂಲದ ಕಣಜ ಎಂದೇ ಖ್ಯಾತಿ ಪಡೆದಿದ್ದ ನಮ್ಮ ಈ ಕಾರ್ಖಾನೆ ಸ್ವಲ್ಪಸೊರಗಿ, ಇದೀಗ ಚೇತರಿಕೊಳ್ಳುತ್ತಿದೆ

 

ಬಸರಾಳು
ದೂರ ತಾಲ್ಲೂಕು ಕೇಂದ್ರದಿಂದ – ೨೪ ಕಿ.ಮೀ.

ಜಿಲ್ಲಾ ಕೇಂದ್ರದಿಂದ – ೨೪ ಕಿ.ಮೀ.


ಮಂಡ್ಯ ತಾಲ್ಲೂಕಿನ ಒಂದು ಹೋಬಳಿ ಮತ್ತು ಅದರ ಕೇಂದ್ರ ಸ್ಥಳ ಮಂಡ್ಯಕ್ಕೆ ಉತ್ತರದಲ್ಲಿ ೨೪ ಕಿ.ಮೀ. ದೂರದಲ್ಲಿರುವ ಈ ಗ್ರಾಮವು ಹೊಯ್ಸಳ ವಾಸ್ತುಶಿಲ್ಪಕ್ಕೆ ಹೆಸರಾದ ಸ್ಥಳ ಹೊಯ್ಸಳರ ಕಾಲದಲ್ಲಿ ಇದು ಬಸುರಿವಾಳ ಎಂಬ ಹೆಸರಿನ ಅಗ್ರಹಾರವಾಗಿತ್ತು. ಇಲ್ಲಿರುವ ಮಲ್ಲಿಕಾರ್ಜುನ ದೇವಾಲಯ ೧೨೩೪ರಲ್ಲಿ ಹೊಯ್ಸಳದೊರೆ ಎರಡನೆಯ ನರಸಿಂಹ ದಂಡನಾಯಕ ಹರಿಹರನಿಂದ ಸ್ಥಾಪಿಸಲ್ಪಟ್ಟಿತು. ಹರಿಹರ ಸೇವುಣರನ್ನು ಸೋಲಿಸಿ ಅದ್ರ ಸ್ಮರಣಾರ್ಥವಾಗಿ ಇದೇ ಗ್ರಾಮಕ್ಕೆ ಸೇರಿದವನಾದ ತನ್ನ ತಂದೆಯ ಹೆಸರಿನಲ್ಲಿ ಈ ದೇವಾಲಯ ಕಟ್ಟಿಸಿದ.