ದಿನಾಂಕ ೧೫-೧೦-೧೯೪೫ರಂದು ಮೈಸೂರಿನಲ್ಲಿ ಜನಿಸಿದ ಕೃಷ್ಣವೇಣಿಯವರಿಗೆ ಬಾಲ್ಯದಿಂದಲೇ ನೃತ್ಯ ಕಲೆಯ ಬಗ್ಗೆ ಅಪಾರ ಆಸಕ್ತಿ ಮೂಡಿತ್ತು. ಇವರು ತಮ್ಮ ಎಂಟನೆಯ ವಯಸ್ಸಿನಲ್ಲೇ ರಮಾಭಾಯಿ ಎಂಬುವರ ಬಳಿ ಕಥಕ್ಕಳಿ ನೃತ್ಯ ಕಲಿಯುವುದರ ಮೂಲಕ ನೃತ್ಯ ಶಿಕ್ಷಣಕ್ಕೆ ನಾಂದಿ ಹಾಡಿದರು. ಎರಡು ವರ್ಷಗಳ ಸತತ ಶಿಕ್ಷಣದ ನಂತರ ೧೯೪೫ರಲ್ಲಿ ಎಂ. ಚಂದ್ರಶೇಖರ ಅವರಿಂದ ಸ್ಥಾಪಿಸಲ್ಪಟ್ಟ “ಭಾರತ ಕಲಾ ನಿಕೇತನ್”ದಲ್ಲಿ ಅಲ್ಲಿನ ಅಧ್ಯಾಪಕಿಯಾಗಿದ್ದ ಡಾ. ಕೆ. ವೆಂಕಟಲಕ್ಷ್ಮಮ್ಮನವರಲ್ಲಿ ಭರತನಾಟ್ಯದ ಕಲಿಕೆ ಮುಂದುವರಿದು ಗುರುಕುಲ ವಾಸದ ಸಂಪ್ರದಾಯದಲ್ಲಿ ಇವರ ನಾಟ್ಯ ಶಿಕ್ಷಣ ನಡೆಯುತ್ತಿತ್ತು. ಕಠಿಣ ಶಿಕ್ಷಣ ಹಾಗೂ ಸತತ ಪರಿಶ್ರಮದ ಫಲವಾಗಿ ನೃತ್ಯ ಪ್ರದರ್ಶನದ ಹಂತಕ್ಕೆ ತಲುಪಿ ಹಾಸನ, ಬೆಂಗಳೂರು, ಮೈಸೂರು ದಸರಾ ವಸ್ತು ಪ್ರದರ್ಶನ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಇವರ ನೃತ್ಯ ಪ್ರದರ್ಶನ ನಡೆದು ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಇನ್ನೂ ಹೆಚ್ಚು ಹೆಚ್ಚು ಕಲಿಯಬೇಕೆಂಬ ಹಂಬಲದಿಂದ ಮುಂದೆ ಮೂಗೂರು ಚಿನ್ನಮ್ಮ, ಶಿವರಾಮ್‌ಸಿಂಗ್‌, ಎಂ.ಸಿ. ವೀರ್‌ರವರಲ್ಲಿ ನೃತ್ಯಾಭ್ಯಾಸ ಮಾಡಿ ತಮ್ಮ ೧೦ನೇ ವಯಸ್ಸಿನಲ್ಲಿಯೇ ಇಟಲಿಯ ಸಾಕ್ಷ್ಯ ಚಿತ್ರವೊಂದಕ್ಕೆ ಪ್ರಸಿದ್ದ ಸೋಮನಾಥ ದೇವಾಲಯದಲ್ಲಿ ನರ್ತನ ಮಾಡಿದರು. ತಮ್ಮ ೧೪ನೇಯ ವಯಸ್ಸಿನಲ್ಲಿ ಗೃಹಿಣಿಯಾಗಿ ಕಳಸದ ಜಮೀನ್ದಾರ್ ಜಿ. ರಂಗರಾವ್‌ರವರ ಕೈಹಿಡಿದು ಅವರ ಮನೆ ತುಂಬಿದರು. ಇವರ ಕಲಾ ಜೀವನಕ್ಕೆ ಯಾವ ಧಕ್ಕೆಯೂ ಇದರಿಂದ ಉಂಟಗಲಿಲ್ಲ. ಪತಿ ರಂಗರಾಯರು ಪತ್ನಿಯ ಕಲಾ ನೈಪುಣ್ಯಕ್ಕೆ ಮನಸೋತು ಒಳ್ಳೆಯ ಉತ್ತೇಜನ ನೀಡಿ ಸಹಕರಿಸಿದರು.

ವಿವಾಹಾ ನಂತರ ಆಸ್ಥಾನ ವಿದ್ವಾನ್ ಎಸ್.ಎನ್. ಮರಿಯಪ್ಪ ಹಾಗೂ ಶಿವಣ್ಣನವರಲ್ಲಿ ಶಾಸ್ತ್ರೀಯ ಸಂಗೀತ ಕಲಿಯುವುದರ ಜೊತೆಗೆ ಎಸ್.ಎಸ್.ಎಲ್‌.ಸಿ ಪರೀಕ್ಷೆಗೂ ಕುಳಿತು ತೇರ್ಗಡೆಯಾದರು. ನಟುವಾಂಗದಲ್ಲಿ ಸಾಕಷ್ಟು ಪರಿಶ್ರಮವಿದ್ದ ಇವರು ಈ ದಿಸೆಯಲ್ಲಿ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ. ಮೈಸೂರು, ಬೆಂಗಳೂರು, ಹಾಸನ ಮುಂತಾದ ಕಡೆ ಕಾರ್ಯಕ್ರಮ ನೀಡಿರುವುದೇ ಅಲ್ಲದೆ ಭಾರತ ಕಲಾನಿಕೇತನದ ಶಿಕ್ಷಕಿಯಾಗಿ ಸಹ ದುಡಿಯುತ್ತಿದ್ದಾರೆ.

ಮೈಸೂರಿನ ಪ್ರಸಿದ್ಧ “ವಸುಂಧರಾ ಪರ್‌ಫಾರ‍್ಮಿಂಗ್ ಆರ್ಟ್ಟ್” ವತಿಯಿಂದ ಗೌರವಿಸಿ ಸನ್ಮಾನಿಸಲ್ಪಟ್ಟಿರುವ ಕೃಷ್ಣವೇಣಿ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೨-೦೩ರ ಸಾಲಿನ “ಕರ್ನಾಟಕ ಕಲಾಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.