ಶ್ರೀ ಗಜಾನನ ರಾಮಚಂದ್ರ ನಿಂಬರಗಿಯವರು ಕರ್ನಾಟಕದ ಹೆಸರಾಂತ ಪಿಟೀಲು ವಾದಕರಲ್ಲೊಬ್ಬರು. ಸಂಗೀತ ಮನೆತನದಲ್ಲಿ ಹುಟ್ಟಿ ದೇಶದ ವಿಖ್ಯಾತ ಸಂಗೀತಗಾರರಿಗೆ ಪಿಟೀಲು ಸಾಥ್‌ ನೀಡಿ, ದೇಶದ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳಲ್ಲಿ ಪಿಟೀಲು ವಾದನ ಕಛೇರಿ ನೀಡಿ, ಮುಂಬೈ, ಧಾರವಾಡ ಆಕಾಶವಾಣಿ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿ, ಈಗ ನಿವೃತ್ತಿ ಹೊಂದಿ ವಿಶ್ರಾಂತ ಜೀವನ ಸಾಗಿಸುತ್ತಿರುವ ಶ್ರೀ ಜಿ.ಆರ್. ನಿಂಬರಗಿಯವರಿಗೆ ಸಂಗೀತವೇ ಸರ್ವಸ್ವ.

ಅವರು ಹುಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ೧೯೧೯ರ ಫೆಬ್ರುವರಿ ೯ ರಂದು. ಅವರ ಅಜ್ಜ ವಿಷ್ಣು ಪಂತರು ಜಮಖಂಡಿ ಸಂಸ್ಥಾನದ ಆಸ್ಥಾನ ರುದ್ರ ವೀಣಾ ವಾದಕರು. ತಂದೆ ರಾಮಚಂದ್ರರಾವ್‌ ಸಂಗೀತಾರಾಧಕರು. ಇಂತಹ ಪರಿಸರದಲ್ಲಿ ಜನಿಸಿದ ಶ್ರೀ ಜಿ.ಆರ್. ನಿಂಬರಗಿಯವರಿಗೆ ಎಳೆ ವಯಸ್ಸಿನಲ್ಲಿಯೇ ಸಹಜವಾಗಿ ಸಂಗೀತ ಆಕರ್ಷಿಸಿತು. ಅವರಿಗೆ ಮೊದಲ ಸಂಗೀತ ಶಿಕ್ಷಣ ದೊರೆತುದು ಗಾಯನದಲ್ಲಿ ಮುಂಬೈಯಲ್ಲಿ ನೆಲೆಸಿದ್ದ ಅವರ ಹಿರಿಯ ಅಣ್ಣಶ್ರೀ ದಾಮೋದರರಾವ್‌ ನಿಂಬರಗಿ ಅವರಿಂದ. ನಂತರ ಪಿಟೀಲಿನ ಶಿಕ್ಷಣ ದೊರೆತದು ದೇಶದ ವಿಖ್ಯಾತ ಪಿಟೀಲು ವಾದಕ ಮುಂಬೈಯ ಶ್ರೀ ಗಜಾನನರಾವ್‌ ಜೋಶಿಯವರಿಂದ. ಅಲ್ಪ ಸಮಯದಲ್ಲಿಯೇ ಪಿಟೀಲು ವಾದನದಲ್ಲಿ ಕಠಿಣ ಸಾಧನೆಗೈದು ಅವರು ಕೆಲವೇ ದಿನಗಳಲ್ಲಿ ಉತ್ತಮ ಪಿಟೀಲು ವಾದಕರೆಂಬ ಖ್ಯಾತಿ ಗಳಿಸಿದರು. ಅವರಿಗೆ ಶ್ರೀ ಹನುಮಂತರಾವ್‌ ವಾಳ್ವೇಕರ್, ಶ್ರೀ ಅನಂತ ಮನೋಹರ ಜೋಶಿಯವರಿಂದ ಸಂಗೀತ ಶಿಕ್ಷಣ ದೊರೆತುದು ತಮ್ಮ ಭಾಗ್ಯವೆಂದು ಅವರು ಸ್ಮರಿಸುತ್ತಾರೆ. ಪಿಟೀಲು ವಾದನದ ಜೊತೆಗೆ ತಬಲಾ ಹಾಗೂ ಗಾಯನದಲ್ಲೂ ಅವರಿಗೆ ಪರಿಣತಿಯುಂಟು. ಗಾಂಧರ್ವ ಮಹಾ ವಿದ್ಯಾಲಯದ ‘ಸಂಗೀತ ವಿಶಾರದ’ ಹಾಗೂ ‘ಸಂಗೀತ ಅಲಂಕಾರ’ ಪದವಿ ಪಡೆದಿದ್ದಾರೆ.

೧೯೪೭ರಲ್ಲಿ ಮುಂಬೈ ಆಕಾಶವಾಣಿಯಲ್ಲಿ ನಿಲಯದ ಪಿಟೀಲು ಕಲಾವಿದರಾಗಿ ವೃತ್ತಿಗೆ ಸೇರಿ ೩ ವರ್ಷ ಅಲ್ಲಿ ಸೇವೆ ಸಲ್ಲಿಸಿ, ೧೯೪೯ಕ್ಕೆ ಧಾರವಾಡ ಆಕಾಶವಾಣಿ ನಿಲಯಕ್ಕೆ ವರ್ಗವಾಗಿ ಸುದೀರ್ಘ ೩೦ ವರ್ಷಗಳ ಕಾಲ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿ ೧೯೭೯ರಲ್ಲಿ ನಿವೃತ್ತಿ ಹೊಂದಿ, ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಅವರಿಗೆ ಸಂಗೀತವೇ ಸರ್ವಸ್ವಾಗಿದೆ. ಅವರ ಪಿಟೀಲು ವಾದನ ಕರ್ಣ ಮಧುರ. ಆಲಾಪನೆ, ಮೀಂಡ್‌ ಹೃದಯವನ್ನು ನೇರ ತಟ್ಟಬಲ್ಲದು. ಪಿಟೀಲು ಸ್ವತಂತ್ರ ವಾದನ ಹಾಗೂ ಸಾಥ್‌ ಎರಡರಲ್ಲೂ ಅವರು ತುಂಬ ನಿಷ್ಣಾತರು. ಹಿಂದೂಸ್ಥಾನಿ ಸಂಗೀತದ ಜೊತೆಗೆ ಕರ್ನಾಟಕೀ ಸಂಗೀತವನ್ನು ನುಡಿಸಬಲ್ಲ ಅವರು ದೇಶದ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳಲ್ಲಿ ಪಿಟೀಲು ಕಛೇರಿ ನೀಡಿದ್ದಾರೆ. ಮುಂಬೈ, ಕರ್ಹಾಡ, ಕೋಲ್ಕತ್ತಾ, ಇಂದೋರ್, ಬೆಂಗಳೂರು, ಹೈದ್ರಾಬಾದ್‌, ದಿಲ್ಲಿ ಮುಂತಾದೆಡೆ ಸಂಗೀತ ಕಛೇರಿ ನೀಡಿದ್ದಾರೆ. ಮುಂಬೈ, ಜಲಂಧರ, ರಾಜಕೋಟ, ದಿಲ್ಲಿ, ಕೋಹಿಮಾ, ಅಹಮದಾಬಾದ, ನಾಗಪೂರ ಮತ್ತು ಜಳಗಾಂವ ಆಕಾಶವಾಣಿ ಕೇಂದ್ರಗಳಿಂದ ಇವರ ಪಿಟೀಲು ವಾದನ ಪ್ರಸಾರಗೊಂಡಿದೆ.   ಹಿಂದೂಸ್ಥಾನಿ ಸಂಗೀತದ ಶ್ರೇಷ್ಠ ಸಂಗೀತಗಾರರಾದ ಮಲ್ಲಿಕಾರ್ಜುನ ಮನಸೂರ, ಗಂಗೂಬಾಯಿಕ ಹಾನಗಲ್ಲ, ಬಸವರಾಜ ರಾಜಗುರು, ಶಿವರಾಮ ಬುವಾ ವಝೆ, ವಿ.ಎ. ಕಾಗಲಕರ, ಅಜಮತ ಹುಸೇನ್‌, ಕೃಷ್ಣರಾವ ಪಂಡಿತ, ಸರಾಫತ್‌ ಹುಸೇನ್‌, ಶ್ರೀಮತಿ ಬಾಯಿ ನಾರ್ವೇಕರ, ನಿಸ್ಸಾರ್ ಹುಸೇನ್‌, ಆರ್.ಎನ್‌. ಜೋಶಿ, ರೋಶನ್‌ ಅಲಿ, ಲತಾಫತ್‌ ಹುಸೇನ್‌, ಸರಸ್ವತಿ ರಾಣಿ – ಮುಂತಾದ ದಿಗ್ಗಜರಿಗೆ ಸಮರ್ಥವಾಗಿ ಪಿಟೀಲು ಸಾಥಿ ನೀಡಿದ್ದಾರೆ. ತಬಲಾ ದಿಗ್ಗಜ ಉಸ್ತಾದ್‌ ಅಹಮದ್‌ಜಾನ್‌ ತಿರಖವಾ ಅವರ ತಬಲಾ ಸ್ವತಂತ್ರ ವಾದನಕ್ಕೆ ಮೂರು ತಾಸು ಲೆಹೆರಾ ಸಾಥ್‌ ಮಾಡಿ ಅವರಿಂದಲೇ ಬೆನ್ನು ತಟ್ಟಿಸಿಕೊಂಡ ಅಗ್ಗಳಿಕೆ ಅವರದು. ಶ್ರೀ ಜಿ.ಆರ್. ನಿಂಬರಗಿ ಅವರಿಗೆ ಅನೇಕ ಪ್ರಶಸ್ತಿ ದೊರೆತಿವೆ. ಅವುಗಳಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ (೧೯೯೨-೯೩), ಕರ್ನಾಟಕ ಸರ್ಕಾರದ ಪಿಟೀಲು ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ೨೦೦೩-೦೪ ಉಲ್ಲೇಖನೀಯವಾಗಿವೆ. ಅವರ ಶಿಷ್ಯ ಸಂಪತ್ತು ಅಪಾರ. ಅವರ ಹಿರಿಯ ಮಗ ವಾದಿರಾಜ ಉದಯೋನ್ಮುಖ ಪಿಟೀಲು ಕಲಾವಿದ ಹಾಗೂ ಧಾರವಾಡ ಆಕಾಶವಾಣಿಯ ನಿಲಯದ ಕಲಾವಿದ, ಎರಡನೆ ಮಗ ಮಾಧವ ಹಾಸನ ಆಕಾಶವಾಣಿ ಕೇಂದ್ರದ ಸಂಗೀತ ಸಂಯೋಜಕ. ತಂದೆಯ ಹೆಸರನ್ನು ಎತ್ತರಕ್ಕೇರಿಸಬಲ್ಲವರಾಗಿದ್ದಾರೆ. ಅವರ ಶಿಷ್ಯರಲ್ಲಿ ರಾಘವೇಂದ್ರ ಮುನವಳ್ಳಿ ಬಿ.ಆರ್. ಪಾಟೀಲು, ರಾಮನಗೌಡ, ರಾಧಾ ಗದಗಕರ, ಡಾ. ಅಚ್ಯುತ ಗದಗಕರ, ದಿ. ಸಂಗಳದ, ಮಾಧುರಿ ಖೇರ, ಮಾಣಿಕ ಖೇರ, ಸಂಜೀವ ನಾಣ್ಣನವರ, ಚಿನ್ಮಯ ನಾಮಣ್ಣವರ, ನಾಗರಾಜ ಜಾಧವ, ಎಮ್‌.ಎಸ್‌. ತಟ್ಟಿ ಶಶಿಕಾಂತ ಕುಲಕರ್ಣಿ, ಶಬ್ಬೀರ ಅಹಮದ್‌, ಗೋಪಿ, ಆಶಾಜಂತ್ಲೆ, ಸುಜಾತಾ ಲಗಳಿ, ಕವಿತಾ ಪಪ್ಪು ಮುಂತಾದವರು ಪ್ರಮುಖರಾಗಿದ್ದಾರೆ.