ಕನ್ನಡಾಂಬೆಯ ಕಲಾ ಸಿರಿಮುಡಿಯಲ್ಲಿ ತುಮಕೂರು ಜಿಲ್ಲೆಗೊಂದು ವಿಶಿಷ್ಟ ಸ್ಥಾನವಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಸಂಗೀತ, ನಾಟಕ, ಶಿಲ್ಪಕಲೆ, ನೃತ್ಯಕಲೆಗಳಲ್ಲಿ ಮಿಂಚಿದ ಶ್ರೇಷ್ಠ ಕಲಾ ಕಲಾಕುಸುಮಗಳ ತೌರೂರು  ತುಮಕೂರು. ಜಗದ್ವಿಖ್ಯಾತ  ಶಿಲ್ಪಕಲೆಯ ಮೇರು ಜಕಣಾಚಾರ್ಯ, ಡಂಕಣಾಚಾರ್ಯ, ನಾಟಕ ಪಿತಾಮಹರೆನಿಸಿದ ಗುಬ್ಬಿ ವೀರಣ್ಣ, ಹರಿಕಥಾಂಬುಧಿ ಚಂದ್ರ ಟಿ.ಕೆ. ವೇಣುಗೋಈಪಾಲ ದಾಸರು, ವೆಂಕಣ್ಣದಾಸರು, ಶಿವಯ್ಯಶಾಸ್ತ್ರಿ, ಪದ್ಮಶ್ರೀ ಶಿವಮೂರ್ತಿ ಶಾಸ್ತ್ರಿಯಂಥವರು ಜನ್ಮ ಪಡೆದ ಜಿಲ್ಲೆ ತುಮಕೂರು. ಜಿಲ್ಲೆಯ ಜನತೆಯ ಕಲಾಭಿರುಚಿ, ಪ್ರೌಢಿಮೆಗಳ ಬಗ್ಗೆ ಇನ್ನೂ ಹೆಚ್ಚು ಹೇಳಬೇಕೆಂದರೆ, “ತುಮಕೂರಿನಲ್ಲಿ ಕಥೆಮಾಡಿ ಜೈಸಿದವನು, ನಾಟಕವಾಡಿ ಗೆದ್ದವನು, ಜಗತ್ತಿನ ಯಾವ ಭಾಗದಲ್ಲಿಯಾದರೂ ಜೈಸಿ ಬರಬಲ್ಲ” ಎಂದು ಕನ್ನಡಕ ಧೀಮಂಥ ಪರಿವರ್ತನಶೀಲ ನಾಟಕಕಾರರಾದ ಟಿ.ಪಿ. ಕೈಲಾಸಂ ಅವರು ಉದ್ಗರಿಸಿದ್ದಾರೆ.

ಕಲ್ಪತರು ಬೀಡಾದ ತಿಪಟೂರು ತಾಲ್ಲೂಕಿಗೆ ಸೇರಿದ ಗ್ರಾಮ ಗಂಗನಘಟ್ಟ. ಈ ಊರ ಹೆಸರು ಮೊದಲು ಗಂಗಸಮುದ್ರವೆಂದು. ಹೆಸರಿಗೆ ತಕ್ಕಂತೆ, ಊರಸುತ್ತಲೂ ಇರುವ ನಾಲ್ಕು ದೊಡ್ಡ ಕೆರೆಗಳು. ಇಲ್ಲಿಂದಲೇ ಶಿಂಷಾನದಿಯ ಉಗಮವಾಗುತ್ತದೆ. ಇಂಥಹ ಗ್ರಾಮದಲ್ಲಿ ಜನ್ಮ ತಳೆದ ಮತ್ತೊಬ್ಬ ಸುಪುತ್ರರೆಂದರೆ ಜಿ.ಆರ್. ರಂಗಪ್ಪದಾಸರು. ದಾಸಪರಂಪರೆಯಲ್ಲಿ ಶ್ರೇಷ್ಠರಾಗಿಕ ಬೆಳಗಿ ಕಣ್ಮರೆಯಾದ ಒಂದು ಪುಣ್ಯ ಚೇತನ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಒಂದು ಪುಟ್ಟ ಗ್ರಾಮ ದ್ಯಾವೇನಹಳ್ಳಿ. ಸುಮಾರು ಮೂವತ್ತು ವರ್ಷಗಳ ಹಿಂದೆ, ಗುಬ್ಬಿ ಕಂಪನಿಯಲ್ಲಿ ಪಿಯಾನೊ ವಾದಕರಾಗಿದ್ದ ಸಿ.ವಿ. ವೀರಭದ್ರಾಚಾರ್ಯರು ನನಗೆ ಪೌರಾಣಿಕ ನಾಟಕಗಳ ಹಾಡುಗಳನ್ನು ಅಭ್ಯಾಸ ಮಾಡಿಸುತ್ತಿದ್ದರು. ಸಮಯ ಸುಮಾರು ಸಂಜೆ ಆರು ಘಂಟೆ! ಪಕ್ಕದ ಬಾಗೂರಿನಿಂದ ಬಂದ ವ್ಯಕ್ತಿಯೊಬ್ಬರು.  “ಈ ದಿನ ಬಾಗೂರಿನ ಗಣಪತಿ ಪೆಂಡಾಲಿನಲ್ಲಿ ಗಂಗನ ಘಟ್ಟದ ರಂಗದಾಸರಿಂದ ಹರಿಕಥೆ ಇದೆ” ಎಂದು ತಿಳಿಸಿದರು. ತಕ್ಷಣ ವೀರಭದ್ರಾಚಾರ್ಯರು “ಹೌದೇ ಹಾಗಾದರೆ ನಾವೂ ಹೋಗೋಣ ನಡಿ” ಎಂದು ನನ್ನನ್ನೂ ಕರೆದುಕೊಂಡು ಹೊರಟರು. .ಬಾಗೂರು ಹೋಬಳಿ ಬಹಳ ದೊಡ್ಡ ಗ್ರಾಮ.  ಅಲ್ಲಿ ಬ್ರಾಹ್ಮಣ ಕುಟುಂಬಗಳೇ ಹೆಚ್ಚು. (ಕರ್ನಾಟಕದ ಖ್ಯಾತ ಸಾಹಿತಿ ಎಸ್‌.ಎಲ್‌.ಭೈರಪ್ಪನವರ ತಾಯಿಯ ತೌರು ಮತ್ತು ಅವರ ವಿದ್ಯಾಭ್ಯಾಸ ಇಲ್ಲಿಯೇ ನಡೆದಿದ್ದು).

ಅದ್ದೂರಿಯಾದ ವೇದಿಕೆ, ಹೂಗಳಿಂದ ಅಲಂಕರಿಸಲ್ಪಟ್ಟ ಗಣಪತಿ ಮಂಟಪದ ಪಕ್ಕದಲ್ಲಿ ವ್ಯವಸ್ಥೆಯಾಗಿತ್ತು. ಅಕ್ಕಪಕ್ಕದ ಊರುಗಳಿಂದ ಬಂದ ಜನಸಮೂಹದಿಂದ ತುಂಬಿ ತುಳುಕುತ್ತಿತ್ತು. ವೀರಭದ್ರಾಚಾರ್ಯರು  ನನ್ನನ್ನು ಅಲ್ಲಿಯೇ ಒಂದು ಕಡೆಕ ಕೂರಿಸಿ ತಾವು ದಾಸರನ್ನು ಕಾಣಲು ಹೋದರು, ಸುಮಾರು ಹತ್ತು ನಿಮಿಷಗಳು ಕಳೆದ ಮೇಲೆ, ಪಕ್ಕವಾದ್ಯದವರ ಸಹಿತ ದಾಸರು ವೇದಿಕೆಯ ಮೇಲೆ ಬಂದರು. ಕಡುಕೆಂಪು ವರ್ಣ, ಎತ್ತರವಾದ ನಿಲುವು, ತಕ್ಕಂತೆ ಮೈ ಕಟ್ಟು, ನೀಳವಾದ ಮೂಗು, ಕಾಂತಿಯುತವಾದ ಕಣ್ಣು, ವಿಶಾಲವಾದ ಹಣೆ, ತಿದ್ದಿ ತೀಡಿದ ಗಂಧ, ತಲೆಯಲ್ಲಿ ಬಿಳಿಯ  ಟೋಪಿ, ಬಿಳಿಯ ಜುಬ್ಬ, ಅದರ ಮೇಲೆ ಹಳದಿ ರೇಷ್ಮೆ ವಸ್ತ್ರವನ್ನು ಇಳಿಬಿಟ್ಟುಕೊಂಡು ನಿಂತಿದ್ದ ಗಾಂಭೀರ್ಯವನ್ನು ಕಂಡು, ಗುಜುಗುಡುತ್ತಿದ್ದ ಜನಜಂಗುಳಿ ಒಂದು ಕ್ಷಣ ನಿಶ್ಯಬ್ದವಾಯಿತು. ಕಥೆ ಪ್ರಾರಂಭವಾಯಿತು. ಅಂದಿನ ಕಥೆ ಸೀತಾ ಸ್ವಯಂವರ. ಪೀಠಿಕೆಯಿಂದಕ ಹಿಡಿದು ಕಥೆ ಮುಕ್ತಾಯದವರೆವಿಗೂ ಯಥೇಚ್ಚವಾಗಿ ಸಂಸ್ಕೃತ ಶ್ಲೋಕಗಳನ್ನೇ ಪ್ರಯೋಗಿಸಿದರೂ ಅವುಗಳ ಅರ್ಥವಿವರಣೆಗಳನ್ನು ಅತಿಸರಳವಾಗಿ ವಿವರಿಸಿ ಹೇಳುತ್ತಿದ್ದರು. ಮಧ್ಯೆ ಮಧ್ಯೆ ಉಪಕಥೆಗಳಿಗೂ ಶ್ಲೋಕಗಳನ್ನೇ ಹೇಳಿ ಜನರನ್ನು ನಗೆಗಡಲಿನಲ್ಲಿ ಮುಳುಗಿಸುತ್ತಿದ್ದರು. ಸೀತಾದೇವಿಯನ್ನು ಶ್ರೀರಾಮನ ಜೊತೆ ಕಳುಹಿಸಿಕೊಡುವ ಸಂದರ್ಭದಲ್ಲಿ ಜನರನ್ನು ಅಳಿಸಿ ತಾವೂ ಅತ್ತುಬಿಟ್ಟರು. ಅದೊಂದು ಹೃದಯಸ್ಪರ್ಶಿ ಸಂದರ್ಭ. ದಾಸರ ಅದ್ಭುತವಾದ ಪಾಂಡಿತ್ಯಕ್ಕೆ, ನೆರೆದಿದ್ದ ಪ್ರಾಜ್ಞರ ಸಮೂಹವೆಲ್ಲ ನಿಬ್ಬೆರಗಾಗಿಹೋಗಿತ್ತು. ಕಥೆ ಮುಕ್ತಾಯವಾದ ಮೇಲೆ ಬ್ರಾಹ್ಮಣ ಸಮೂಹ ದಾಸರನ್ನು ಸುತ್ತುವರೆದು ಮುತ್ತಿಕೊಂಡರು. ಅವರಲ್ಲಿ ಕಿಟ್ಟಣ್ಣ ಮಾಮಿ ಜೋಯಿಸರು, ಕೃಷ್ಣಾಚಾರ್ಯರು, ಸುಬ್ರಹ್ಮಣ್ಯ ಜೋಯಿಸರುಗಳು ಮುಕ್ತಕಂಠದಿಂದ ದಾಸರನ್ನು ಪ್ರಶಂಸಿಸುತ್ತಿದ್ದರು. ನಾನೂ ಕೂಡ ಜನರ ಮಧ್ಯೆ ನುಸುಳಿಕೊಂಡು  ಹೋಗಿ ದಾಸರಿಗೆ ನಮಸ್ಕರಿಸಿದೆನು. ವೀರಭದ್ರಾಚಾರ್ಯರು ನನ್ನನ್ನು ದಾಸರಿಗೆ ಪರಿಚಯಿಸಿದರು. ದಾಸರು, ತುಂಬು ಹೃದಯದಿಂದ ಆಶೀರ್ವದಿಸಿದರು. ಆಗ ನನಗಾದ ಆನಂದ ಅಷ್ಟಿಷ್ಟಲ್ಲ.

ದಾಸರ ಜನನ ಮತ್ತು ಬಾಲ್ಯ: ಶ್ರೀ ರಂಗಪ್ಪದಾಸರು ದಿನಾಂಕ ೧೯.೧೨.೧೯೨೩ರಂದು ರಂಗೇಗೌಡ, ಜವರಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ತಂದೆ ರಂಗೇಗೌಡರಿಗೆ, ಮೂರು ಜನ ಪತ್ನಿಯಿರು. ಏಳು ಜನ ಗಂಡುಮಕ್ಕಳು ಒಬ್ಬಳು ಹೆಣ್ಣು ಮಗಳು . ರಂಗಪ್ಪದಾಸರೇ ಹಿರಿಯವರು. ಹುಟ್ಟಿದಾಗ ಇಟ್ಟ ಹೆಸರು ಒಡ್ಡುಗಲ್ಲಪ್ಪ ಎಂದು. ಒಡ್ಡುಗಲ್ಲ ರಂಗನಾಥಸ್ವಾಮಿಕ ಇವರ ಕುಲದೈವವಾದ್ದರಿಮದ ಆ ಹೆಸರನ್ನು ಇಟ್ಟಿದ್ದರು. ಇವರ ತಾತ ದೊಡ್ಡ ಹೊಟ್ಟೆಪ್ಪಗೌಡರು. (ಒಡ್ಡಗಲ್ಲೇಗೌಡ) ತುಂಬಾ ಸಾತ್ವಿಕ ಜೀವಿಗಳು, ವಿಗ್ರಹಾರಾಧನೆ ಇಲ್ಲದೆ, ಆಧ್ಯಾತ್ಮದ ಶಿಖರವನ್ನೇರಿದವರು, ಯಾವಾಗಲೂ ಹರಿಭಕ್ತಿಸಾರ, ಭಾರತವಾಚನ ಅಮರಕೋಶಗಳನ್ನು ತಿರುಗಾಡುವಾಗಲೂ, ಪಠಿಸುತ್ತಾ ಇದ್ದರು. ಆ ಒಂದು ಪುಣ್ಯದ ಪ್ರಆವ ಶ್ರೀಯುತರ ಮೇಲಾಯಿತೆನ್ನಬಹುದು. ಶ್ರೀಯುತರ ವಿದ್ಯಾಭ್ಯಾಸ ಕೂಲಿಮಠದಲ್ಲಿ ಪ್ರಾರಂಭವಾಗಿ, ಪ್ರೈಮರಿ ಮೂರನೇ ತರಗತಿಗೆ ಮುಕ್ತಾಯವಾಯಿತು. ಕಾರಣ ಬೇಸಾಯದ ಕೆಲಸ ಕಾರ್ಯ ನೋಡಿಕೊಳ್ಳುವ ಭಾರ ಇವರ ಹೆಗಲ ಮೇಲೆ ಬಿತ್ತು. ಅನಕ್ಷರಸ್ಥರಾಗಿದ್ದ ಇವರ ತಂದೆ, ವಿದ್ಯೆಯ ವಿರೋಧಿಯೂ ಕೂಡ ಆಗಿದ್ದರು. ಬಾಲಕ ಒಡ್ಡುಗಲ್ಪಪ್ಪನಿಗೆಕ ತುಂಬಾ ಕಲಿಯಬೇಕೆಂಬ ಆಸೆ, ಆದರೆ ಕಡುಕೋಪಿಯಾಗಿದ್ದ ತಂದೆ ಇದಕ್ಕೆ ಅಡ್ಡಿ. ಬದುಕಿದ್ದಕ್ಕಿಷ್ಟು ಅನ್ನ ಸಂಪಾದಿಸಿಕೊಂಡು ತಿನ್ನಲು ಓದು ಏತಕ್ಕೆ ಬೇಇಕು ಎಂಬುದು ಅವರ ನಿಲುವಾಗಿತ್ತು. ಅವಿಭಕ್ತ ಕುಟುಂಬದ ತುಂಬು ಸಂಸಾರದಲ್ಲಿ ಬೇಸಾಯ ಮಾಡಿಕೊಂಡು ದಣಿದಿದ್ದರೂ, ದನಗಳನ್ನು ಕಟ್ಟುವ ಕೊಟ್ಟಿಗೆಯಲ್ಲಿ ರಾತ್ರಿ ಹೊತ್ತು ಇವರ ವ್ಯಾಸಂಗ ಮುಂದುವರೆಯುತ್ತಿತ್ತು. ಎಣ್ಣೆದೀಪದ ಮಂದಬೆಳಕು, ಬಾಗಿಲ ಕಿಂಡಿಯ  ಮೂಲಕ ಹಾದು ಎದುರು ಮನೆಯಲ್ಲಿರುವ ತನ್ನ ತಂದೆಗೆ ಕಾಣಿಸಬಾರದೆಂದು ಬಾಗಿಲ ಸಂದಿಗೆ ಬಟ್ಟೆ ತುರುಕಿ ಮರೆಮಾಡಿಕೊಂಡು ನಿಶ್ಯಬ್ದವಾಗಿ ಅಭ್ಯಾಸ ಮಾಡುತ್ತಿದ್ದರು. ಮಗ ಓದುತ್ತಿದ್ದಾನೆಂದು ತಂದೆಗೆ ಗೊತ್ತಾದರೆ ಬೆಳಿಗ್ಗೆ ದನಗಳನ್ನು ಬಾರಿಸುವ ಬಾರುಕೋಲಿನಿಂದ ಹೊಡೆತಗಳು ಗ್ಯಾರಂಟಿ. ಹೀಗೆಯೇ ಬಾಲ್ಯ ಕಳೆದು ಶ್ರೀಯುತರಿಗೆ ಇಪ್ಪತ್ತು ವರ್ಷ ತುಂಬಿತು.

ವಿವಾಹ: ಇವರಿಗೆ ಸ್ವಗ್ರಾಮದಲ್ಲಿನ ಗೌರಮ್ಮ ಎಂಬ ಹೆಣ್ಣನ್ನು ತಂದು ವಿವಾಹ ಮಾಡಿದರು. ವಿವಾಹವಾದ ಮೂರುನಾಲ್ಕು ವರ್ಷಕ್ಕೆ ತಂದೆ ರಂಗೇಗೌಡರು ತೀರಿಕೊಂಡರು. ದೊಡ್ಡ ಸಂಸಾರದ ಹೊಣೆಯೆಲ್ಲ ಹಿರಿಯ ಮಗನಾದ ಒಡ್ಡಗಲ್ಲನವರ ಮೇಲೆ ಬಿತ್ತು. ಸಾಕಷ್ಟು ಜಮೀನಿನ ವಕ್ಕಲುತನ. ಎಲ್ಲವನ್ನು ಇವರೊಬ್ಬರೇ ನಕೋಡಿಕೊಳ್ಳಬೇಕಿತ್ತು. ತಂದೆಯ ಮರಣ ಆಕಾಶದಲ್ಲಿ ಹಾರುವ ಹಕ್ಕಿಗೆ ಸ್ವಾತಂತ್ರ ಸಿಕ್ಕಷ್ಟು ಸಂತೋಷವನ್ನೇ ತಂದಿತ್ತು. ಎಷ್ಟೇ ಕಷ್ಟ ಕೋಟಲೆಗಳು ಬಂದರೂ, ತಾನಿನ್ನು ಓದಿಕೊಂಡು ಕಲಾಸೇವೆ ಮಾಡಬಹುದಲ್ಲ ಎಂದು. ಮದುವೆಯಾಗಿ ಬಹಳ ಕಾಲವಾದರು ಸಂತಾನ ಪ್ರಾಪ್ತಿಯಾಗಲಿಲ್ಲ. ಆ ಕೊರತೆಯನ್ನು ಬದಿಗೊತ್ತಿ ಪುರಾಣ, ಇತಿಹಾಸಗಳ ವ್ಯಾಸಂಗವನ್ನು ಮಾಡತೊಡಗಿದರು.

ಗುರುಪರಂಪರೆ: ಇವರ ಗ್ರಾಮಕ್ಕೆ ತಿಪಟೂರು ಹತ್ತು ಮೈಲುದೂರ. ದಿನವೂ ಸೈಕಲ್ಲಿನಲ್ಲಿ ತಿಪಟೂರಿಗೆ ಹೋಗಿ, ಪ್ರಸಿದ್ಧ ಗಮಕ ವಿದ್ವಾನ್‌ ಹೆಚ್‌.ಕೆ. ರಾಮಸ್ವಾಮಿಯವರಲ್ಲಿ ಒಡ್ಡಗಲ್ಲಪ್ಪನವರು ಗಮಕವನ್ನು ಅಭ್ಯಾಸ ಮಾಡುತ್ತಿದ್ದರು. ಹೀಗೆ ಸ್ವಲ್ಪ ವರ್ಷಗಳು ಕಳೆದವು. ಕಲ್ಪತರು ನಾಡಾದ ತಿಪಟೂರಿನಲ್ಲಿ ಪ್ರತಿ ವರ್ಷ ಗಣಪತಿ ಉತ್ಸವವನ್ನು ಅದ್ದೂರಿಯಿಂದ ಆಚರಿಸಲ್ಪಡುತ್ತಿತ್ತು. ರಾಜ್ಯದಲ್ಲೇ ಗೂಳೂರು ಗಣಪತಿ ಮೊದಲ ಸ್ಥಾನ ಪಡೆದರೆ ಎರಡನೇ ಸ್ಥಾನ ತಿಪಟೂರಿಗೆ. ಅತ್ಯಧಿಕ ಧನಿಕರಾದ ಭಕ್ತ ಮಹಾಶಯರುಗಳು, ರಾಜ್ಯದ ಮತ್ತು ಹೊರ ರಾಜ್ಯಗಳಿಂದ ಪ್ರಖ್ಯಾತ ವಿದ್ವಾಂಸರುಗಳನ್ನು ಕರೆಸಿ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಆ ಒಂದು ವರ್ಷದ ಕಾರ್ಯಕ್ರಮದಲ್ಲಿ ಹರಿಕಥಾ ಪ್ರವೀಣರಾದ ತಿರುಮಕೂಡಲು ನರಸೀಪುರದ ಎಸ್‌.ಕೃಷ್ಣಮೂರ್ತಿ ದಾಸರಿಂದ ಹರಿಕಥೆ ಏರ್ಪಾಡಾಗಿತ್ತು. ಕಥೆ ಶ್ರೀ ರಾಮಪಟ್ಟಾಭಿಷೇಕ. ಆದಿನ ಒಡ್ಡಗಲ್ಲಪ್ಪನವರೂ ಹೋಗಿದ್ದರು. ದಾಸರ ವಿದ್ವತ್‌ಪೂರ್ಣವಾದ ಕಥಾಕಾಲಕ್ಷೇಪವನ್ನು ಮನದಣಿಯೆ ಅನುಭವಿಸಿ ಆನಂದ ಪುಳಕಿತರಾದರು. ಆಗಲೇ ಅವರೊಳಗೆ ಸುಪ್ತವಗಿದ್ದ ಹರಿದಾಸ ಎಚ್ಚೆತ್ತುಕೊಂಡಿದ್ದ. ಕಥೆ ಪೂರ್ಣವಾಗುವವರೆವಿಗೂ ಕಾದಿದ್ದು, ಕಡೆಗೆ ದಾಸರನ್ನು ಕಂಡು ದೀರ್ಘದಂಡ ನಮಸ್ಕಾರ ಮಾಡಿ, ವಿನಮ್ರ ಪೂರ್ವಕವಾಗಿ ನಿವೇದಿಸಿಕೊಂಡರು. ಇವರ ಆಗ್ರಹ ಪೂರ್ವಕ ವಿನಂತಿಯನ್ನು ತಳ್ಳಿಹಾಕಲಾರದ

ದಾಸರು ರಾತ್ರಿ ತಾವು ಇಳಿದುಕೊಂಡಿದ್ದ ಸ್ಥಳಕ್ಕೆ ಕರೆದುಕೊಂಡು ಹೋದರು. ಅಂದು ಅವರ ವಾಸ್ತವ್ಯ ಗಣಪತಿ ಮಂಡಲಿ ವ್ಯವಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಎಂಎಲ್‌ಎ ಶ್ರೀ ಚಂದ್ರಶೇಖರಯ್ಯ ಅವರ ಮನೆಯಲ್ಲಿ. ರಾತ್ರಿ ಒಡ್ಡಗಲ್ಲಪ್ಪನವರನ್ನು ಪೂರ್ವಭಾವಿಯಾಗಿ ಪರೀಕ್ಷಿಸಿ ಸಂತೋಷದಿಂಧ ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ಪೂರ್ನ ಬ್ರಹ್ಮಚಾರಿಯಾಗಿದ್ದ ದಾಸರು ಬೆಳಿಗ್ಗೆ ತಮ್ಮ ಶಿಷ್ಯನೊಡಗೂಡಿ ಗಂಗನಘಟ್ಟಕ್ಕೆ ಬಂದು ನೆಲೆಸಿದರು . ಹರಿಕಥಾಭ್ಯಾಸ ಪ್ರಾರಂಭವಾಯಿತು.

ಮೊದಲೇ ಏಕಸಂಧಿಗ್ರಾಹಿಯಾಗಿದ್ದ ಒಡ್ಡಗಲ್ಲಪ್ಪನವರು, ಗುರುಗಳು ಹೇಳಿದ್ದನ್ನೆಲ್ಲಾ ಬಹು ಬೇಗ ಗ್ರಹಿಸುತ್ತಿದ್ದರು. ಗುರುಗಳೂ ಅಷ್ಟೇ. ಕೇವಲ ಹರಿಕಥೆಯನ್ನು ಹೇಳದೆ, ಕೀರ್ತನಕಾರ ಅನುಸರಿಸಬೇಕಾದ ನೀತಿ ನಿಯಮಗಳು, ಇತಿಹಾಸ ಪುರಾಣಗಳ ಆಳವಾದ ಅರಿವು, ಸಮಕಾಲೀನ ಸಮಸ್ಯೆಗಳ ಪ್ರಜ್ಞೆ ಮುಖ್ಯವಾಗಿ ಇರಬೇಕೆಂದು ತಿಳಿಸುತ್ತಿದ್ದರು. ಕೇವಲ ಮನೋರಂಜನೆ ಇರಬಾರದು. ಲೋಕಾನುಭವ ಪಡೆದುಕೊಂಡು ವಿಜ್ಞಾನದ ಯುಗದಲ್ಲಿ ತಾವೂ ಪರಿಶೀಲನವರ್ತರಾಗಿ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂದು, ವಿಶಿಷ್ಟವಾಗಿ ಬೋಧಿಸುತ್ತಿದ್ದರು. ಅವಿರತ ಅಭ್ಯಾಸದಿಂಧ ಶಿಷ್ಯ ಪ್ರಬುದ್ಧವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದ. ಅವನ ಪ್ರಗತಿಯನ್ನು ಮನಗಂಡ ಗುರುಗಳು ಶಿಷ್ಯನ ಪೂರ್ವಾಶ್ರಮದ ಒಡ್ಡಗಲ್ಲಪ್ಪ ಎಂಬ ಹೆಸರನ್ನು ಬದಲಿಸಿ ರಂಗದಾಸನೆಂದು ನಾಮಕರಣ ಮಾಡಿ ತುಂಬುಹೃದಯದಿಂದ ಆಶೀರ್ವದಿಸಿದರು.

ವೃತ್ತಿ ಆರಂಭ: ಗುರುಗಳು ತಮ್ಮ ಕಾರ್ಯಕ್ರಮಗಳಿಗೆಲ್ಲಾ ಶಿಷ್ಯನನ್ನು ಕರೆದೊಯ್ಯುತ್ತಿದ್ದರು. ಒಮ್ಮೆ ಚಿಕ್ಕಎರಗನಾಳು ಎಂಬ ಊರಿನಲ್ಲಿ ಗುರುಗಳ ಹರಿಕಥಾ ಕಾರ್ಯಕ್ರಮವಿತ್ತು. ಹರಿಕಥಾ ವೇಳೆಗೆ ಗುರುಗಳು ಅಸ್ವಸ್ಥರಾದರು. ಆದಿನ ಕಥೆ ಮಾಡುವ ಜವಾಬ್ದಾರಿಯನ್ನು ಶಿಷ್ಯ ರಂಗದಾಸರಿಗೆ ವಹಿಸಿ ಆಶೀರ್ವದಿಸಿದರು. ಗಣಪತಿ ಸಮಿತಿಯವರಿಗೂ ಅಪ್ಪಣೆ ಕೊಡಿಸಿದರು ರಂಗದಾಸರಿಗೆ ಒಮ್ಮೆಲೇ ಆಶ್ಚರ್ಯ ಆನಂದಗಳು ಒಮ್ಮೆಗೇ ದಿಗ್‌ಭ್ರಮೆ ಮೂಡಿಸಿದವು . ಶಿಷ್ಯ ಗುರುಗಳಿಗೆ ವಂದಿಸಿ, ವೇದಿಕೆ ಹತ್ತಿ ಕಥೆ ಪ್ರಾರಂಭಿಸಿದರು. ಅಂದಿನ ಕಥೆ ಸೀತಾ ಸ್ವಯಂವರ. ‘ರಾಮಾ’ ಎಂಬೆರಡಕ್ಷರದ ಶ್ಲೋಕಹಾಡಿ ನಾಮ ಮಹಿಮೆಯನ್ನು ಕೊಂಢಾಡಿ ಕಥಾಭಾಗಕ್ಕೆ ಬಂದರು. ಅದ್ವಿತೀಯ ವಿಚಾರಗಳು, ಶ್ಲೋಕಗಳು ಪುಂಖಾನು ಪುಂಖವಾಗಿ ಅವರ ಬಾಯಿಂದ ಹೊರಬೀಳುತ್ತಿದ್ದವು. ರಂಗದಾಸರ ವಾಗ್ಝರಿಯಿಂದ ತೇಲಿ ಹೋದ ಜನ ಮಂತ್ರಮುಗ್ಧರಾಗಿ ಕುಳಿತಿದ್ದರು. ಗುರುಗಳಂತೂ ಆನಂಧ ತುಂದಿಲರಾಗಿ, ಮೂಕ ವಿಸ್ಮಿತರಾಗಿಬಿಟ್ಟರು. ಗುರುವಿಗೆ ಮಿಂಚಿದ ಶಿಷ್ಯನೆಂದು ಮನದಲ್ಲೇ ವಂದಿಸಿ, ತಡೆಯಲಾರದೆ ಆನಂದ ಭಾಷ್ಪ ಸುರಿಸಿಬಿಟ್ಟರು. ಕಥೆ ಮುಗಿದ ಮೇಲೆ ಪುರೋಹಿತರು  ಗುರು ಶಿಷ್ಯರಿಬ್ಬರನ್ನೂ ನಿಲ್ಲಿಸಿ ಸ್ವಸ್ತಿವಾಚನ ಮಡಿ ಫಲತಾಂಬೂಲಗಳನ್ನಿತ್ತು  ಸಕಲ ಸನ್ಮಾನ ಮಾಡಿದರು.

ಆ ಊರಿನಲ್ಲಿ ಬ್ರಾಹ್ಮಣ ಕುಟುಂಬಗಳೇ ಜಾಸ್ತಿ. ಒಬ್ಬ ಬ್ರಾಹ್ಮಣ ಸದ್ಗೃಹಸ್ಥರೊಬ್ಬರು ಗುರು ಶೀಷ್ಯರು ಉಳಿದುಕೊಂಡಿದ್ದ ಬಿಡಾರಕ್ಕೆ ಬಂದು ಗುರುಗಳನ್ನು ಹೊರಕ್ಕೆ ಕರೆದರು. ಗುರುಗಳು ಹೊರಗಡೆ ಹೋಗಿ ಸಮಚಾರವೇನೆಂದು ಕೇಳಿದಾಗ, ಅವರು “ಸ್ವಾಮಿ ನನಗೆ ಇಪ್ಪತ್ತು ಎಕರೆ ತೆಂಗಿನ ತೋಟ, ಹತ್ತು ಎಕರೆ ತರಿ ಜಮೀನು ಇದೆ. ಒಬ್ಬಳೇ ಮಗಳು, ಸಂಗೀತವಾಗಿದೆ, ಸುಲಕ್ಷಣವಾಗಿದ್ದಾಳೆ. ಆದ್ದರಿಂದ ನಿಮ್ಮ ಶಿಷ್ಯನ ಜಾತಕವಿದ್ದರೆ ಕೊಡಿ” ಎಂದು ಕೇಳಿಕೊಂಡರು. ಆಗ ಗುರುಗಳು ನಕ್ಕು “ಅಯ್ಯೊ ಅವನು ವಕ್ಕಲಿಗ ಜಾತಿಯವನು, ಮೇಲಾಗಿ ಆತನಿಗೆ ಮದುವೆಯಾಗಿದೆ ಎಂದರಂತೆ”. ಪಾಪ ಬಂದ ವ್ಯಕ್ತಿ ನಿರಾಶರಾಗಿ ಹೊರಟುಹೋದರು.

ರಂಗಪ್ಪ ದಾಸರು ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಹೋದರು, ಸುತ್ತಮುತ್ತಲ ಹಳ್ಳಿಗಳಿಂದ ಆರಂಭವಾದ ಇವರ ಕಾರ್ಯಕ್ಷೇತ್ರ ಪಟ್ಟಣಗಳ ಕಡೆ ತಿರುಗಿತು, ಜಿಲ್ಲಾ ಮಟ್ಟ, ರಾಜ್ಯ ಮಟ್ಟದವರೆಗೆ, ವಿಸ್ತರಿಸತೊಡಗಿತು. ಹಾಸನದ ಗಣಪತಿಯ ಕಾರ್ಯಕ್ರಮ ಒಂದರಲ್ಲಿ, ಗುರುಶಿಷ್ಯರಿಬ್ಬರಿಂದ ವಾದವಾಗದ್ವಾದ ನಡೆಯಿತು. ಗುರುಗಳಾದ ಕೃಷ್ಣಮೂರ್ತಿದಾಸರು, ರಾಮನೇ ಹೆಚ್ಚೆಂದು ಒಂದು ಕಡೆ ವಾದಿಸಿದರೆ, ಶಿಷ್ಯರಂಗದಾಸರು. ರಾಮನಿಗಿಂತ ಕೃಷ್ಣನೇ ಹೆಚ್ಚು ಎಂದು ಮತ್ತೊಂದು ಕಡೆಯಿಂದ ವಾದ ಮಾಡತೊಡಗಿದರು. “ಕೃಷ್ಣ ಸ್ತ್ರೀ ಲೋಲನಾಗಿದ್ದು ಗೋಪಿಕೆಯಕ ಮಾನಹರಣ ಮಾಡುತ್ತಾ ಅವರ ಮನೆಗಳಲ್ಲಿ ಬೆಣ್ಣೆ ಕದ್ದು ತಿನ್ನುತ್ತಾ, ಅಣ್ಣ ತಮ್ಮಂದಿರಲ್ಲಿ ವಿಷ ಬೀಜಬಿತ್ತಿ ಅವರ ವಂಶನಾಶಕ್ಕೆಕ ಕಾರಣನಾದ” ಎಂದು ಗುರುಗಳ ವಾದ. “ನಿಮ್ಮ ಮರ್ಯಾದಾಪುರುಷೋತ್ತಮನಾದ ರಾಮ ನಿರ್ದಯಿಯಾಗಿ, ಗರ್ಭಿಣಿ ಸೀತೆಯನ್ನು ಕಾಡಿಗಟ್ಟಿದ, ಅಧರ್ಮವಾಗಿ ವಾಲಿಯನ್ನು ಹೇಡಿಯಂತೆ ಮರೆಯಲ್ಲಿ ನಿಂತು ಕೊಂದನಲ್ಲಾ” ಎಂದು ಶಿಷ್ಯ. ಹೀಗೆ ವಾಗ್ವಾದ ಮುಂದುವರೆಯುತ್ತಾ ವಾದದ ಬಿಸಿ ಪರಕಾಷ್ಟತೆಯನ್ನು ಮುಟ್ಟುತ್ತಿದ್ದಂತೆ, ರಂಗಪ್ಪ ದಾಸರು, “ರಾಮಕೃಷ್ಣರಿಗೆ ಹೋಲಿಕೆ ಕೊಡುತ್ತಾ, ಕೃಷ್ಣ ಸಾಕ್ಷಾತ್‌ ಭಗವಂತನೇ ಆಗಿದ್ದರೂ, ದೈವತ್ವದಿಂದ ಸಾಮಾನ್ಯ ಮಾನವತ್ವದ ಕಡೆಗೆ ಸಾಗುತ್ತಾನೆ, ರಾಮನಾದರೂ, ಸಾಮಾನ್ಯ ಮನುಷ್ಯನಾಗಿ ಹುಟ್ಟಿ ದೈವತ್ವವನ್ನು  ಪಡೆಯಲು, ಹೆಜ್ಜೆ ಹೆಜ್ಜೆಗೂ ಹೆಣಗುತ್ತಾನೆ. ಇನ್ನೂ ಸರಳವಗಿ ಹೇಳಬೇಕೆಂದರೆ, ರಾಮ ಎಷ್ಟೇ ದೊಡ್ಡವನಾದರೂ, ಪವಿತ್ರ ವಸ್ತುವನ್ನು ದೇವರಿಗೆ ಸಮರ್ಪಿಸುವಾಗ, ಯಾರೊಬ್ಬರೂ, ರಾಮಾರ್ಪಣಮಸ್ತು ಎನ್ನುವುದಿಲ್ಲ, ಕಡೆಯಲ್ಲಿ ಕೃಷ್ಣಾರ್ಪಣಮಸ್ತು” ಎನ್ನುತ್ತಾರೆ. ಆದ್ದರಿಂದ ರಾಮ ಕೃಷ್ಣನಿಗಿಂತೇನು ದೊಡ್ಡ ವ್ಯಕ್ತಿತ್ವ ಉಳ್ಳವನ್ನಲ್ಲಾ ಎಂದು ಪ್ರಬಲವಾಗಿ ವಾದಿಸಿ, ಅಂತಿಮವಾಗಿ ಗೆದ್ದುಬಿಟ್ಟರು. ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.

ಕರ್ನಾಟಕ ಎಲ್ಲ ಮೂಲೆ ಮೂಲೆಗಳಲ್ಲಿ ತಮ್ಮ ಹರಿಕಥೆ ನಡೆಸಿ, ಸರ್ವಜನ ಮನ್ನಣೆಗೆ, ಪಾತ್ರರಾದರು. ಸಮಯಕ್ಕೆ ತಕ್ಕಂತೆ ದೃಷ್ಟಾಂತಗಳು, ಭಾಷಾ ಛಂದಸ್ಸು, ವಿದ್ವತ್‌ ಪೂರ್ಣ ಪಾಂಡಿತ್ಯವೆಲ್ಲವೂ, ಪಂಡಿತರುಗಳನ್ನೆ ಬೆರಗುಗೊಳಿಸುತ್ತಿತ್ತು. ಅವರ ಕಥೆಗಳಿಗೆ ಪಾಮರರಷ್ಟೇ ಅಲ್ಲ, ಸ್ವತಃ ಹರಿಕಥೆ ದಾಸರುಗಳೇ, ಬರುತ್ತಿದ್ದರು. ಹಾಸನದಲ್ಲಿ ಅವರ ಕಥೆಗಳೆಂದರೆ, ನೂಕುನುಗ್ಗಲು, ಗೊರೂರು, ಹೊಳೆನರಸೀಪುರ, ದಾಸರಿಗೆ ಅಚ್ಚು ಮೆಚ್ಚು. ಕಾರಣ, ಅಲ್ಲಿಯ ಸುಸಂಸ್ಕೃತ ಪಾಂಡಿತ್ಯ ಪಡೆದ ಶ್ರೋತೃಗಳು. ಚಿಕ್ಕಮಗಳೂರಿನಲ್ಲಿ ಒಂದು ತಿಂಗಳು ರಾಮಾಯಣ ಕಥೆ, ಶಿವಮೊಗ್ಗದಲ್ಲಿ ಪ್ರತಿವರ್ಷ, ತಿಂಗಳುಗಳ ಕಾಲ ಮಹಾಭಾರತ ಹೀಗೆ ಅನೇಕ ಕಡೆಗಳಲ್ಲಿ ಭಾಗವತ ಪುರಾಣ ಪ್ರವಚನಗಳನ್ನು ನಡೆಸಿಕೊಡುತ್ತಿದ್ದರು. ಹೋದ ಕಡೆಗಳಲ್ಲಿ ಜನತೆ ಕಿವರ ಭಾಷಾಪಟುತ್ವ, ರಸಾಭಿಜ್ಞತೆಗೆ ಮಾರುಹೋಗುತ್ತಿದ್ದರು.

ಸಮಾಜ ಸೇವೆ: ಇವರ ಕಾರ್ಯವ್ಯಾಪ್ತಿ ಕೇವಲ ಹರಿಕಥೆಯ ಕಡೆಗೇ ಇರದೆ ಅವಿಭಕ್ತ ಕುಟುಂಬದ ಐವತ್ತು ಜನರ ಜವಾಬ್ದಾರಿ, ದೊಡ್ಡ ಜಮೀನಿನ ಬೇಸಾಯ ನಿರ್ವಹಣೆ ಜೊತೆಗೆ ರಾಜಕೀಯದಲ್ಲೂ ಕೈಯಾಡಿಸಿದ್ದರು. ಎರಡು ಮೂರು ಬಾರಿ ಗ್ರಾಮಪಂಚಾಯ್ತಿ ಸದಸ್ಯರಾಗಿದ್ದರು. ತಾಲೂಕು ಬೋರ್ಡ್‌ ಸದಸ್ಯರೂ, ಪಿ.ಎಲ್‌.ಡಿ. ಬ್ಯಾಂಕ್‌ ಡೈರಕ್ಟರೂ ಆಗಿದ್ದರು. ತಾವೇ ಮುಂದೆ ನಿಂತು ಹುಣಸೇ ಘಟ್ಟದಲ್ಲಿ ಕೇಂದ್ರ ವಿದ್ಯಾಸಂಸ್ಥೆಯನ್ನು ಕಟ್ಟಿ, ಕೆಲವುಕಾಲ ಅದರ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದಾರೆ. ಮಾಜಿ ಸಚಿವ ಟಿ.ಎಂ. ಮಂಜುನಾಥ ಅವರಿಗೆ ರಾಜಕೀಯ ಗುರುಗಳೂ ಆಗಿದ್ದರು. ಹೀಗೆ ಹಲವಾರು ಸಂಘ, ಸಂಸ್ಥೆಗಳಿಗೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಂತಾನವಿಲ್ಲವೆಂದು ಹಿರಿಯಧರ್ಮ ಪತ್ನಿಯವರ ಒತ್ತಾಸೆಗೆ ಎರಡನೇ ಲಗ್ನವಾದರೂ, ಅವರಿಗೂ ಸಂತಾನ ಭಾಗ್ಯವಿಲ್ಲದೆ ಹೋಯ್ತು. ಈ ಕೊರಗು ಇದ್ದರೂ ಸರ್ಕಾರದ ವತಿಯಿಂದ ಸಂತಾನ ಶಸ್ತ್ರ ಚಿಕಿತ್ಸಾ ಶಿಬಿರಗಳಲ್ಲಿ ತಾವೂ ಪಾಲ್ಗೊಂಡು, ದೇಶಕ್ಕೆ ದೊಡ್ಡ ಪಿಡುಗಾಗಿರುವ ಜನಸಂಖ್ಯಾ ಸ್ಪೋಟಗಳ ದುಷ್ಟರಿಣಾಮಗಳನ್ನು, ಶ್ರೀಯುತರು, ತಮ್ಮ ಹರಿಕಥೆಗಳಲ್ಲಿ ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಮುಗ್ಧ ಜನರ ಮನಮುಟ್ಟುಗವಂತೆ ಬಿತ್ತರಿಸುತ್ತಿದ್ದರು. ಆಕಾಶವಾಣಿಯಲ್ಲಿಯೂ ಶ್ರೀಯುತರ ಆಯ್ದ ಹತ್ತಾರು ಕಥೆಗಳು ಪ್ರಸಾರವಾಗಿವೆ.

ಇದಿಷ್ಟು ಸಾಲದೆಂಬಂತೆ, ಇವರ ಹರಿಕಥಾ ಧ್ವನಿ ಸುರುಳಿಗಳು ದೇಶ ವಿದೇಶಗಳಲ್ಲೂ ಮನೆಮಾತಾಗಿವೆ. ಪರಮ ಪೂಜ್ಯರಾದ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು, ಇವರ ಪ್ರೌಢಿಮೆ, ಧರ್ಮಗ್ರಂಥಗಳ ಅಂತರಾರ್ಥವನ್ನು ನಿರೂಪಿಸುತ್ತಿದ್ದ ಕೌಶಲ್ಯವನ್ನು ಮನಗಂಡು ವಿಶೇಷ ಸಂದರ್ಭಗಳಲ್ಲೆಲ್ಲಾ ಶ್ರೀಕ್ಷೇತ್ರದಲ್ಲಿ ಹರಿಕಥೆಗಳನ್ನು ಏರ್ಪಡಿಸುತ್ತಿದ್ದರು. ಈ ಸಂಪ್ರದಾಯ ಶ್ರೀಯುತರು ನಿಧನರಾಗುವವರೆವಿಗೂ ಅವಿಚ್ಛಿನ್ನವಾಗಿ ಸಾಗಿತ್ತು. ಇದರಿಂದ ಶ್ರೀಗಳವರ‍ ಅನುಗ್ರಹ ಇವರ ಮೇಲೆ ಸದಾ ಪ್ರವಹಿಸುತ್ತಿತ್ತು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪರಮ ಪೂಜ್ಯಸ್ವಾಮೀಜಿಯವರು ಅಮೆರಿಕ, ಇಂಗ್ಲೆಂಡ್‌ ಪ್ರವಾಸಕ್ಕೆ ಮುಂಚೆ, ಶ್ರೀರಂಗದಾಸರ, ಹರಿಕಥೆಯನ್ನು ಹದಿನೈದು ದಿನಗಳು ಏಕಪ್ರಕಾರವಾಗಿ ಏರ್ಪಡಿಸಿ, ಅದನ್ನು ಧ್ವನಿಮುದ್ರಿಸಿ ಪ್ರಚಾರಕ್ಕಾಗಿ ವಿದೇಶ ಕ್ಕೊಯ್ದಿದ್ದರು. ಒಟ್ಟಿನಲ್ಲಿ ಶ್ರೀಯುತರು ಶ್ರೀಕ್ಷೇತ್ರದಲ್ಲಿ ಆಸ್ಥಾನ ವಿದ್ವಾಂಸರ ಸ್ಥಾನಮಾನಗಳನ್ನು ಹೊಂದಿದ್ದರು.

ಸಂದ ಗೌರವ ಪ್ರಶಸ್ತಿಗಳು: ಸ್ವಂತ ವ್ಯಾಸಂಗ ಕಠಿಣ ಪರಿಶ್ರಮಗಳಿಂದ ಅಪಾರ ಜ್ಞಾನಸಂಪತ್ತು ಗಳಿಸಿದ್ದ ಶ್ರೀಯುತರಿಗೆ ಸಂಘ ಸಂಸ್ಥೆಗಳು ಪರಿಷತ್‌, ಅಕಾಡೆಮಿಗಳ, ಮಠ ಮಾನ್ಯಗಳ ಪ್ರಶಸ್ತಿ ಪ್ರಶಂಸೆಗಳು ಅಪರಿಮಿತ. ಸ್ಥೂಲವಾಗಿ ಹೇಳಬೇಕೆಂದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಗಮಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪ್ರಶಸ್ತಿ ಪ್ರದಾನ ೧೯೬೪ರಲ್ಲಿ. ಕನ್ನಡ ಸಾಹಿತ್ಯ ಪರಿಷತ್ತು ೧೯೭೨ರಲ್ಲಿ ನಡೆಸಿದ ಅಖಿಲ ಕರ್ನಾಟಕ ಕೀರ್ತನಕಾರರ ಸಮ್ಮೇಳನದ ಅಭಿನಂದನಾ ಪತ್ರ, ಅಧ್ಯಕ್ಷರಾಗಿದ್ದ ಜಿ. ನಾರಾಯಣರ ಪ್ರಶಂಸೆ.

ಅಖಿಲ ಭಾರತ ಹರಿದಾಸ ಸಮ್ಮೇಳನದ ಸಂದರ್ಭದಲ್ಲಿ ಉಡುಪಿಯಲ್ಲಿ ನಡೆದ ಶ್ರೀ ಅದಮಾರು ಮಠದ ಶ್ರೀಗಳಾದ ವಿಶ್ವಪ್ರಿಯ ತೀರ್ಥರು ಮತ್ತು ವಿಭುದೇಶತೀರ್ಥರ ಮುಕ್ತಕಂಠದ ಪ್ರಶಂಶೆ. ರಾಜ್ಯೋತ್ಸವ ಪ್ರಶಸ್ತಿ ೧೯೯೨ರಲ್ಲಿ. ಭಾರತೀಯ ಸರ್ವಧರ್ಮ ಸಮ್ಮೇಳನವು ಧಾರವಾಡ ಜಿಲ್ಲೆ ತಡಸದಲ್ಲಿ ೧೯೭೮ರಲ್ಲಿ ಜರುಗಿದಾಗ, ಉಪಸ್ಥಿತರಿದ್ದ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳು, ಮೂರು ಸಾವಿರ ಮಠ ಹುಬ್ಬಳ್ಳಿ, ಅವನಿ ಶೃಂಗೇರಿ ಜಗದ್ಗುರು ಶ್ರೀಮದಭಿನವೋದ್ದಂಡ ವಿದ್ಯಾರಣ್ಯ ಭಾರತೀ ಸ್ವಾಮಿಗಳು ಸೇರಿದ್ದ ಸಮ್ಮೇಳನದಲ್ಲಿ ಕೇವಲ ರಂಗದಾಸರೊಬ್ಬರ ಹರಿಕಥಾಕಾಲಕ್ಷೇಪ ಏರ್ಪಾಡಾಗಿತ್ತೆಂದರೆ, ಅವರ ಯೋಗ್ಯತೆ ಎಷ್ಟೆಂದು ಅಳೆಯಲು ಮತ್ತೊಂದು ಮಾನದಂಡ ಬೇಕಿಲ್ಲವೆನ್ನಬಹುದು. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗೆಡೆಯವರು ಹಲವಾರು ಬಾರಿ ರಂಗದಾಸರ ಹರಿಕಥಾ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದಲ್ಲಿ ಏರ್ಪಡಿಸಿ ಪ್ರಶಸ್ತಿಗಳನ್ನಿತ್ತು ಸನ್ಮಾನಿಸಿದ್ದಾರೆ. ಶ್ರೀಯುತರಿಗೆ ಕೀರ್ತನ ಭೂಷಣ, ಕೀರ್ತನ ಶಿರೋಮಣಿ, ಕೀರ್ತನ ವಿಚಕ್ಷಣ, ಸಂಸ್ಕೃತಭಾಷಾ ಸಾಮ್ರಾಟ, ಕಲಾಕಂಠೀರವ ಎಂಬೆಲ್ಲ ಬಿರುದು ಬಾವಲಿಗಳು ಸಂದಿವೆ.

ರಂಗದಾಸರ ತಂದೆ ಇವರು ಚಿಕ್ಕಂದಿನಲ್ಲಿ ಮಾಡುತ್ತಿದ್ದ ಚೇಷ್ಟೆ, ತುಂಟಾಟಗಳನ್ನು ಕಂಡು “ಲೋ ನೀನು ಉತ್ತಮ ಸಂಸಾರಸ್ಥ (ಬೇಸಾಯಗಾರ) ನಾಗಲಾರೆ ಹೋಗು, ನೀನೂ ಪುರಂದರದಾಸನಾಗಿ ಹೋಗುತ್ತೀಯಾ” ಎಂದು ಹಾಕಿದ ಶಾಪವೇ ವರವಾಗಿ ರಂಗದಾಸರು ಕಡೆಗೂ ದಾಸರಾಗಿಬಿಟ್ಟರು.

ಅವನ ಶರೀರ ಲಕ್ಷಣ ಹೇಗೆ ದ್ವಿಜನನ್ನು ಹೋಲುತ್ತಿತ್ತೋ ಅವರ ಅಂತರಂಗವೂ ಕೂಡ ದ್ವಿಜಲಕ್ಷಣಗಳನ್ನೇ ಹೊಂದಿತ್ತು ಎಂಬುದಕ್ಕೆ ಪ್ರಸಂಗವೊಂದನ್ನು ಇಲ್ಲಿ ಸ್ಮರಿಸಬಹುದು. ಸರ್ಕಾರಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಡಿ.ಐ.ಜಿ. ಅರಕಲಗೂಡು ಹುಲಿಕಲ್‌ ಕಸ್ತೂರಿರಂಗನ್‌ ಅವರ ಮನೆಗೆ ಒಮ್ಮೆ ರಂಗದಾಸರು ಅಕಸ್ಮಾತ್‌ ಭೇಟಿ ಇತ್ತಿದ್ದರು. ಶ್ರೀಯುತರನ್ನು ಮಗನಿಗೆ ಪರಿಚಯಿಸುತ್ತಾ ಹೇಳಿದರು ಇವರು ದೊಡ್ಡ ಮಹಾತ್ಮರು, ಪಾಂಡಿತ್ಯವುಳ್ಳವರು ಅವರ ಪಾದಗಳಿಗೆ ಬಿದ್ದು ಆಶೀರ್ವಾದ ಪಡೆದುಕೋ ಎಂದು ಆಜ್ಞಾಪಿಸಿದರಂತೆ. ಆಗ ಮಗ ದಾಸರಿಗೆ ದೀರ್ಘದಂಡ ನಮಸ್ಕಾರ ಮಾಡಿದರಂತೆ. ಹಾಗೆ ದಾಸರು ಶೂದ್ರರಾಗಿ ಹುಟ್ಟಿದ್ದರೂ ಸ್ವಯಂ ಪ್ರತಿಭೆಯಿಂದ ಉನ್ನತವಾಗಿ ಬೆಳೆದಿದ್ದರು.

ಬಹುಮುಖ ಪ್ರತಿಭೆಯುಳ್ಳ ಶ್ರೀಯುತರು ಉತ್ತಮ ಭಾಷಣಕಾರರು, ಚುಟುಕಗಳನ್ನು ರಚಿಸಿ ಸಮಯಕ್ಕೆಕ ತಕ್ಕಂತೆ ಪ್ರಯೋಗಿಸಿ ತಮ್ಮನ್ನೇ ಗೇಲಿ ಮಾಡಿಕೊಳ್ಳುತ್ತಿದದ ಆಶುಕವಿಗಳಾಗಿದ್ದರು. ಇನ್ನೂ ಅನೇಕ ಬರಹಗಳನ್ನು ರಚಿಸಿದ್ದರೂ ಅವುಗಳೆಲ್ಲ ಅಪ್ರಕಟಿತ ಸ್ಥಿತಿಯಲ್ಲಿ ಉಳಿದುಹೋದದ್ದು ದುರ್ದೈವ. ಶ್ರೀಯುತರು, ಇತ್ತೀಚಿನ ಸಾಮಾಜಿಕ ಅವ್ಯವಸ್ಥೆಯಿಂದ ಬೇಸತ್ತು, ತಮಗಿದ್ದ ಸಾಮಾಜಿಕ ಕಳಕಳಿಯನ್ನೇ ಸ್ಥಗಿತಗೊಳಿಸಿದ್ದರು. ವಿಶ್ರಾಂತ ಜೀವನ ನಡೆಸಿ ೨೧.೧೨.೧೯೯೭ರಲ್ಲಿ ಪಂಚಭೂತಗಳಲ್ಲಿ ಲೀನವಾದರು.