ಮೈಸೂರು ಜಿಲ್ಲೆಯ ಕೊಳ್ಳೆಗಾಲದಲ್ಲಿ  ೨೮-೨-೧೯೧೪ ರಂದು ಜನಿಸಿದ ನಟರಾಜನ್‌ ಅವರ ತಂದೆ ಹಾಗೂ ತಾತಂದಿರೂ ಪಿಟೀಲು ವಾದನವನ್ನು ಅಭ್ಯಾಸ ಮಾಡಿದವರಾಗಿ ಕಲೆಯಲ್ಲಿ ಅತ್ಯಂತ ಆಸಕ್ತಿ ಹೊಂದಿದವರಾಗಿದ್ದರು. ನಟರಾಜನ್‌ತಮ್ಮ ಸಂಗೀತ ಶಿಕ್ಷಣವನ್ನು ಎಂ.ಡಿ. ನಾರಾಯಣಸ್ವಾಮಿ ಮೊದಲಿಯರ್, ಪಾಲ್ಘಟಿನ ಕಲ್ಪಾತಿರಾಮ ಭಾಗವತರಿಂದ ಪಡೆದು ಉನ್ನತಾಭ್ಯಾಸಕ್ಕಾಗಿ ಟೈಗರ್ ವರದಾಚಾರ್ಯರಿಂದ ಮಾರ್ಗದರ್ಶನ ಹೊಂದಿದರು. ಸಂಗೀತಾಭ್ಯಾಸದೊಡನೆಯೇ ಲೌಕಿಕ ವಿದ್ಯಾಭ್ಯಾಸವನ್ನು ಮಾಡುತ್ತ ಬಿ.ಎ., ಬಿ.ಎಲ್‌., ಸಿ.ಎ.ಐ.ಐ.ಬಿ. ಪದವಿಗಳನ್ನು ಪಡೆದರು. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಮೈಸೂರು ಆಸ್ಥಾನ ಸಂಗೀತ ಆಯ್ಕೆಯ ಸಮಿತಿಯ ಸದಸ್ಯರಾಗಿದ್ದ ಅಂದಿನ ದಿಗ್ಗಜ ವಿದ್ವಾಂಸರ ಮುಂದೆ ಹಾಡಿ ಹತ್ತನೇ ವಯಸ್ಸಿನಲ್ಲಿಯೇ ನಾಲ್ವಡಿ ಕೃಷ್ಣರಾಜ ಒಡೆಯರ ಸಮ್ಮುಖದಲ್ಲಿ ಹಾಡುವ ಅವಕಾಶ ಪಡೆದರು. ನಂತರ ಶ್ರೀ ಜಯಚಾಮರಾಜೇಂದ್ರ ಒಡೆಯರ ಸನ್ನಿಧಿಯಲ್ಲಿ ಹಾಡಿ ಅವರ ಮೆಚ್ಚುಗೆ ಪಡೆದು ಆಸ್ಥಾನ ವಿದ್ವಾಂಸ ಪದವಿಗೂ ಏರಿದರು. ರವೀಂದ್ರನಾಥ ಠಾಗೂರ್, ಜವಹರಲಾಲ್‌ ನೆಹರು ಮುಂತಾದ ಗಣ್ಯರ ಸಮಕ್ಷಮದಲ್ಲಿಯೂ ಅನೇಕ ಪ್ರತಿಷ್ಠಿತ ಸಭೆ-ಸಂಸ್ಥೆಗಳಲ್ಲೂ, ನೆರೆ ರಾಜ್ಯಗಳ ಮುಖ್ಯ ವೇದಿಕೆಗಳಿಂದಲೂ ಇವರು ಗಾಯನ ಮಾಡಿದ್ದರು.

ಶ್ರೀ ಶೃಂಗೇರಿ ಜಗದ್ಗುರುಗಳಿಂದ ಸುವರ್ಣ ಪದಕವನ್ನೂ, ಅದರೊಡನೆ ಶಾರದಾ ಪೀಠದಲ್ಲಿ ನವರಾತ್ರಿಯ ಒಂಭತ್ತು ದಿನಗಳೂ ಸೇವೆ ಸಲ್ಲಿಸಿ ಆಶೀರ್ವಾದವನ್ನೂ ಪಡೆದಿದ್ದರು. ಚಿತ್ರದುರ್ಗ ಶ್ರೀ ಮುರುಗ ರಾಜೇಂದ್ರ ಜಗದ್ಗುರುಗಳಿಂದ ‘ಗಾನ ಕಲಾ ಪ್ರವೀಣ’, ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳನ್ನು ಹೊಂದಿದ ಶ್ರೀಯುತರು ಐಹಿಕವಾಗಿ ಮರೆಯಾಗಿದ್ದರೂ ವೃತ್ತಿ-ಪ್ರವೃತ್ತಿಗಳನ್ನು ಸರಿಯಾಗಿ ತೂಗಿಸಿದ ಯಶಸ್ವಿ ಗಾಯಕರೆಂದು ಸ್ಮರಿಸಲ್ಪಡುತ್ತಾರೆ.