ಮೈಸೂರು ಜಿಲ್ಲೆಯ ಕೊಳ್ಳೆಗಾಲದಲ್ಲಿ  ೨೮-೨-೧೯೧೪ ರಂದು ಜನಿಸಿದ ನಟರಾಜನ್‌ಅವರ ತಂದೆ ಹಾಗೂ ತಾತಂದಿರೂ ಪಿಟೀಲು ವಾದನವನ್ನು ಅಭ್ಯಾಸ ಮಾಡಿದವರಾಗಿ ಕಲೆಯಲ್ಲಿ ಅತ್ಯಂತ ಆಸಕ್ತಿ ಹೊಂದಿದವರಾಗಿದ್ದರು. ನಟರಾಜನ್‌ತಮ್ಮ ಸಂಗೀತ ಶಿಕ್ಷಣವನ್ನು ಎಂ.ಡಿ. ನಾರಾಯಣಸ್ವಾಮಿ ಮೊದಲಿಯರ್, ಪಾಲ್ಘಟಿನ ಕಲ್ಪಾತಿರಾಮ ಭಾಗವತರಿಂದ ಪಡೆದು ಉನ್ನತಾಭ್ಯಾಸಕ್ಕಾಗಿ ಟೈಗರ್ ವರದಾಚಾರ್ಯರಿಂದ ಮಾರ್ಗದರ್ಶನ ಹೊಂದಿದರು. ಸಂಗೀತಾಭ್ಯಾಸದೊಡನೆಯೇ ಲೌಕಿಕ ವಿದ್ಯಾಭ್ಯಾಸವನ್ನು ಮಾಡುತ್ತ ಬಿ.ಎ., ಬಿ.ಎಲ್‌., ಸಿ.ಎ.ಐ.ಐ.ಬಿ. ಪದವಿಗಳನ್ನು ಪಡೆದರು. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಮೈಸೂರು ಆಸ್ಥಾನ ಸಂಗೀತ ಆಯ್ಕೆಯ ಸಮಿತಿಯ ಸದಸ್ಯರಾಗಿದ್ದ ಅಂದಿನ ದಿಗ್ಗಜ ವಿದ್ವಾಂಸರ ಮುಂದೆ ಹಾಡಿ ಹತ್ತನೇ ವಯಸ್ಸಿನಲ್ಲಿಯೇ ನಾಲ್ವಡಿ ಕೃಷ್ಣರಾಜ ಒಡೆಯರ ಸಮ್ಮುಖದಲ್ಲಿ ಹಾಡುವ ಅವಕಾಶ ಪಡೆದರು. ನಂತರ ಶ್ರೀ ಜಯಚಾಮರಾಜೇಂದ್ರ ಒಡೆಯರ ಸನ್ನಿಧಿಯಲ್ಲಿ ಹಾಡಿ ಅವರ ಮೆಚ್ಚುಗೆ ಪಡೆದು ಆಸ್ಥಾನ ವಿದ್ವಾಂಸ ಪದವಿಗೂ ಏರಿದರು. ರವೀಂದ್ರನಾಥ ಠಾಗೂರ್, ಜವಹರಲಾಲ್‌ ನೆಹರು ಮುಂತಾದ ಗಣ್ಯರ ಸಮಕ್ಷಮದಲ್ಲಿಯೂ ಅನೇಕ ಪ್ರತಿಷ್ಠಿತ ಸಭೆ-ಸಂಸ್ಥೆಗಳಲ್ಲೂ, ನೆರೆ ರಾಜ್ಯಗಳ ಮುಖ್ಯ ವೇದಿಕೆಗಳಿಂದಲೂ ಇವರು ಗಾಯನ ಮಾಡಿದ್ದರು.

ಶ್ರೀ ಶೃಂಗೇರಿ ಜಗದ್ಗುರುಗಳಿಂದ ಸುವರ್ಣ ಪದಕವನ್ನೂ, ಅದರೊಡನೆ ಶಾರದಾ ಪೀಠದಲ್ಲಿ ನವರಾತ್ರಿಯ ಒಂಭತ್ತು ದಿನಗಳೂ ಸೇವೆ ಸಲ್ಲಿಸಿ ಆಶೀರ್ವಾದವನ್ನೂ ಪಡೆದಿದ್ದರು. ಚಿತ್ರದುರ್ಗ ಶ್ರೀ ಮುರುಗ ರಾಜೇಂದ್ರ ಜಗದ್ಗುರುಗಳಿಂದ ‘ಗಾನ ಕಲಾ ಪ್ರವೀಣ’, ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳನ್ನು ಹೊಂದಿದ ಶ್ರೀಯುತರು ಐಹಿಕವಾಗಿ ಮರೆಯಾಗಿದ್ದರೂ ವೃತ್ತಿ-ಪ್ರವೃತ್ತಿಗಳನ್ನು ಸರಿಯಾಗಿ ತೂಗಿಸಿದ ಯಶಸ್ವಿ ಗಾಯಕರೆಂದು ಸ್ಮರಿಸಲ್ಪಡುತ್ತಾರೆ.

 

 

ಎಂ.ಎಸ್‌. ಸುಬ್ರಹ್ಮಣ್ಯಂ

೧೨-೪-೧೯೨೦ ರಂದು ಮೈಸೂರಿನಲ್ಲಿ ಜನಿಸಿದ ಸುಬ್ರಹ್ಮಣ್ಯಂ ಅವರ ಮನೆತನದವರೆಲ್ಲ ಸಂಗೀತಗಾರರೇ. ಮೊದಲಿಗೆ ಸುಬ್ಬರಾಯಪ್ಪ ಮತ್ತು ಎಸ್‌. ವೆಂಕಟರಮಣಯ್ಯನವರಲ್ಲಿ ಪಿಟೀಲು ವಾದನದಲ್ಲಿ ತರಬೇತಿ ಪಡೆದರು. ನಂತರ ಡಾ|| ಬಿ. ದೇವೇಂದ್ರಪ್ಪನವರಲ್ಲಿ ಹೆಚ್ಚಿನ ವ್ಯಾಸಂಗ ನಡೆಸಿ ಗುರುಗಳೊಡನೆ ದಕ್ಷಿಣ ಭಾರತದಲ್ಲೆಲ್ಲಾ ಸಂಚರಿಸಿದರು. ಅನಂತರ ಬೆಂಗಳೂರಿನಲ್ಲಿ ಎಲ್.ಎಸ್‌. ನಾರಾಯಣ ಸ್ವಾಮಿ ಭಾಗವತರು, ಎಲ್‌.ಎಸ್‌. ಶೇಷಗಿರಿರಾಯರು, ಡಿ. ಸುಬ್ಬರಾಮಯ್ಯ, ಪಲ್ಲವಿ ಚಂದ್ರಪ್ಪನವರಲ್ಲಿ ಮಾರ್ಗದರ್ಶನ ಪಡೆದು ಸಂಗೀತದ ಮರ್ಮಗಳನ್ನು ಅರಿತರು.

೧೯೪೫ರಲ್ಲಿ ಟಿ. ಚೌಡಯ್ಯನವರ ಪ್ರೋತ್ಸಾಹದಿಂದ ಮದರಾಸಿನ ಆಕಾಶವಾಣಿ ನಿಲಯದ ಕಲಾವಿದರಾಗಿ ಸೇರಿ ಮುಂದೆ ಮೈಸೂರು ಹಾಗೂ ಬೆಂಗಳೂರು ನಿಲಯಗಳ ಕಲಾವಿದರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ರಾಜ್ಯದ ಹಾಗೂ ಹೊರ ರಾಜ್ಯಗಳ ಪ್ರತಿಷ್ಠಿತ ಸಭೆಗಳಲ್ಲೂ, ಸಂಸ್ಥೆಗಳಲ್ಲೂ ಉತ್ಸವಾದಿಗಳಲ್ಲೂ, ಹೆಸರಾಂತ ಕಲಾವಿದರಿಗೆ  ಪಕ್ಕವಾದ್ಯಗಾರರಾಗಿಯೂ ತನಿ ವಾದಕರಾಗಿಯೂ ಜನಪ್ರಿಯತೆ, ಕೀರ್ತಿಗಳನ್ನು ಪಡೆದುಕೊಂಡರು. ಇವರ ಪುತ್ರ ಎಂ.ಎಸ್‌. ಗೋವಿಂದಸ್ವಾಮಿಯವರೂ ಸೇರಿದಂತೆ ಹಲವಾರು ಉತ್ತಮ ವಯೋಲಿನ್‌ ವಾ ದಕರಾಗಿ ಶಿಕ್ಷಣವಿತ್ತು. ಕಾಯವಳಿದರೂ ಕೀರ್ತಿ ಉಳಿಯುವಂತಹ ಕೆಲಸಗಳನ್ನು ಮಾಡಿದ್ದಾರೆ.

ಸಹೃದಯತೆ, ವಿನಯಶೀಲತೆ, ಸಾಧು ಸಜ್ಜನತೆ ತುಂಬಿದ ಸ್ನೇಹ ಪರ ಸುಬ್ರಹ್ಮಣ್ಯಂ ಅವರಿಗೆ ಹಲವಾರು ಸಂಘ-ಸಂಸ್ಥೆಗಳ ಸನ್ಮಾನಗಳು ಪ್ರಾಪ್ತವಾದುವು. ಅವರ ಸೇವೆಯನ್ನು ಗುರುತಿಸಿ ಮೈಸೂರಿನ ಹನುಮಜ್ಜಯಂತಿ ಉತ್ಸವದಲ್ಲಿ ‘ಪಿಟೀಲು ವಾದ್ಯ ಪ್ರವೀಣ’, ಚಿಂತಾಮಣಿ ಸಂಗೀತ ಸಭೆಯಿಂದ ‘ಸುನಾದ ಪ್ರವೀಣ ’, ರಾಜಾಜಿನಗರ ಸಂಗೀತ ಸಭೆಯಿಂದ ‘ಕಲಾ ಸಿಂಧು’, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿಗಳನ್ನು  ನೀಡಲಾಗಿದೆ.

ಸಂತೃಪ್ತ ಮನಸ್ಕರಾಗಿದ್ದ ಸುಬ್ರಹ್ಮಣ್ಯಂ ೨೧-೧೦-೨೦೦೫ ರಂದು ಇಹ ಬಂಧನದಿಂದ ವಿಮುಕ್ತಿ ಹೊಂದಿದರು.