ಜಿ.ಎನ್. ಬಾಲಸುಬ್ರಹ್ಮಣ್ಯಂ — ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಇವರದು ಬಹು ದೊಡ್ಡ ಹೆಸರು. ಚಿಕ್ಕವಯಸ್ಸಿನಲ್ಲೆ ಖ್ಯಾತಿ ಗಳಿಸಿದರು. ಸಂಪ್ರದಾಯವನ್ನು ಬಿಡದೆ ಸ್ವಂತ ಶೈಲಿಯನ್ನು ರೂಪಿಸಿಕೊಂಡ ಪ್ರತಿಭಾವಂತರು. ಸ್ವತ: ಒಳ್ಳೆಯ ಹಾಡುಗಳನ್ನು ರಚಿಸಿದರು.

ಜಿ.ಎನ್. ಬಾಲಸುಬ್ರಹ್ಮಣ್ಯಂ

ಮದರಾಸಿನ ಮೈಲಾಪುರದಲ್ಲಿನ ಕಪಾಲೇಶ್ವರ ದೇವಸ್ಥಾನ. ಸಂಜೆಯ ಹೊತ್ತು; ಪ್ರಖ್ಯಾತ ಕರ್ನಾಟಕ ಸಂಗೀತ ವಿದ್ವಾಂಸರಾದ ಮುಸಿರಿ ಸುಬ್ರಹ್ಮಣ್ಯ ಅಯ್ಯರವರ ಸಂಗೀತ ಕಾರ್ಯಕ್ರಮ ಎಂಬ ಫಲಕ ಬಾಗಿಲ್ಲಿ ತೂಗಾಡುತ್ತಿದೆ. ಪ್ರಾಂಗಣವೆಲ್ಲ ಜನಸಮೂಹದಿಂದ ಕಿಕ್ಕಿರಿದಿದೆ. ಸಂಗೀತ ಕಚೇರಿ ಆರಂಭವಾಗ ಬೇಕಾಗಿದ್ದ ಸಮಯ ದಾಟಿದೆ. ಭವ್ಯವಾದ ವೇದಿಕೆ ಖಾಲಿಯಾಗಿಯೇ ಇದೆ. ಸಮಯ ಸರಿದಂತೆ ಸಭಾಸದರ ತಾಳ್ಮೆ ಕೆಡುತ್ತಿದೆ.  ಅಷ್ಟು ಹೊತ್ತಿಗೆ ವ್ಯವಸ್ಥಾಪಕರು ವೇದಿಕೆಯ ಮೇಲೆ ಕಾಣಿಸಿಕೊಂಡು ಹೇಳಿದರು:

“ಇಂದಿನ ಸಂಗೀತ ಕಾರ್ಯಕ್ರಮ ನಡೆಯಿಸಿ ಕೊಡಬೇಕಾಗಿದ್ದ ಪ್ರಸಿದ್ಧ ಸಂಗೀತ ವಿದ್ವಾಂಸರಾದ ಮುಸಿರಿ ಸುಬ್ರಹ್ಮಣ್ಯ ಅಯ್ಯರವರು ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ. ಸಂಗೀತ ಕಚೇರಿ ಕೇಳಲು ಬಂದು ಇಷ್ಟುಹೊತ್ತು ಕಾದು ಕುಳಿತ ತಾವು ಮನ್ನಿಸಬೇಕು. ನಾವು ಇಂದು, ಇನ್ನೊಂದು ಬದಲಿ ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದೇವೆ. ಈವರೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾಡದ ಎಳೆಯ ವಿದ್ವಾಂಸರೊಬ್ಬರನ್ನು ನಾವು ತಮಗೆ ಪರಿಚಯ ಮಾಡಿಸಲಿದ್ದೇವೆ. ತಿರುವಲ್ಲಿಕ್ಕೇಣಿ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾದ ಶ್ರೀ ಜಿ.ವಿ. ನಾರಾಯಣ ಸ್ವಾಮಿ ಅಯ್ಯರರು ತಮಗೆಲ್ಲ ಪರಿಚಿತರು. ಅವರ ಸುಪುತ್ರರಾದ ಜಿ.ಎನ್. ಬಾಲಸುಬ್ರಹ್ಮಣ್ಯಂ ಎಂಬ ಯುವಕನೇ ಇಂದಿನ ಗಾಯಕ; ಅಸಾಮಾನ್ಯ ಪ್ರತಿಭಾಶಾಲಿಯಾದ ಈ ತರುಣನ ಸಂಗೀತವನ್ನು ತಾವೆಲ್ಲ ಕೇಳಬೇಕು; ಪ್ರವರ್ಧಮಾನಕ್ಕೆ ಬರುವಂತೆ ಹಿರಿಯರೆಲ್ಲ ಹರಸಬೇಕು, ಕಿರಿಯರೆಲ್ಲ ಹಾರೈಸಬೇಕು ಎಂದು ನಮ್ಮ ಬಯಕೆ.”

ಬಹುಪಾಲು ಜನರಿಗೆ ಮುಖ್ಯೋಪಾಧ್ಯಾ ಯ ನಾರಾಯಣಸ್ವಾಮಿ ಅಯ್ಯರರು ಯಾರೆಂದು ತಿಳಿದಿತ್ತು. ಅವರ ಮಗನಂತೆ! ಆಗಲಿ, ಹೇಗೆ ಹಾಡುತ್ತಾನೋ ನೋಡೋಣ ಎಂದುಕೊಂಡರು.  ಸಭೆ ಚದುರದೆ ಕುಳಿತಿತು.

ಸುಂದರ ಯುವಕನೊಬ್ಬ ವೇದಿಕೆ ಯನ್ನೇರಿದ; ಜನಸಮೂಹಕ್ಕೆ ವಿನಯದಿಂದ ತಲೆಬಾಗಿ ನಮಿಸಿದ. ವೇದಿಕೆಯ ಮಧ್ಯೆ ಅಸೀನನಾದ; ಎಡಬದಿಯಲ್ಲಿ ಪೀಟಿಲುವಾದಕರಾದ ಮಧುರೈ ಸುಬ್ರಹ್ಮಣ್ಯ ಅಯ್ಯರರು ಕುಳಿತರು. ಬಲಬದಿಯಲ್ಲಿ ಮೃದಂಗ ವಾದನಕ್ಕೆ ರಾಮಾನುಜಂ ಸಿದ್ಧರಾದರು. ತಂಬೂರಿಯ ಶ್ರುತಿಗೆ ದನಿಗೂಡಿಸಿದ ಯುವಕ ಕ್ಷಣ ಹೊತ್ತು ಕಣ್ಣುಮುಚ್ಚಿ ತನ್ನ ಆರಾಧ್ಯ ದೈವವನ್ನು ನೆನೆದು ಕಾರ್ಯಕ್ರಮ ಆರಂಭಿಸಿದ.

ಸುಶ್ರಾವ್ಯವಾದ ಧ್ವನಿ ಗಾಯಕನ ಕಂಠದಿಂದ ಒಡಮೂಡುತ್ತಿದ್ದಂತೆ ಸಭಾಂಗಣದಲ್ಲಿ ಶಾಂತತೆ ನೆಲಸಿತು. ಕೆಲವೇ ಕ್ಷಣಗಳಲ್ಲಿ ಶ್ರೋತೃಗಳು ಗಾನದಲ್ಲಿ ತಲ್ಲೀನರಾದರು. ಹೊತ್ತು ಸರಿದಂತೆ ಯುವಕನ ವಿದ್ವತ್ತು, ಪ್ರತಿಭೆ ಅವರನ್ನು ಬೆರಗುಗೊಳಿಸಿತು. ರಾಗ ವಿಸ್ತಾರ, ಸ್ವರ ಪ್ರಸ್ತಾರಗಳಲ್ಲಿನ ನಾವೀನ್ಯ ಎಲ್ಲರನ್ನೂ ವಿಸ್ಮಯಗೊಳಿಸಿತು. ಕಂಠಸ್ವರದ ಶುದ್ಧತೆ, ಸಂಚಾರ ವೇಗಗಳು, ವಿನಿಯೋಗದಲ್ಲಿನ ನವೀನ ಕಲ್ಪನೆಗಳು ಶ್ರೋತೃಗಳ, ರಸಿಕರ ಮನವನ್ನು ಸೂರೆಗೊಂಡವು. ವಿಮರ್ಶಕರು ತಲೆದೂಗಿದರು. ಪ್ರತಿಯೊಂದು ರಾಗ ಕೃತಿಗಳನ್ನು ಪೂರೈಸಿದಾಗಲೂ ಕರತಾಡನದ ಮಹಾಘೋಷ! ಕಚೇರಿ ಮುಗಿದಾಗ ಶ್ಲಾಘನೆಗಳ ಸುರಿಮಳೆ! ಹಿರಿಯರಿಂದ ಹೃತ್ಪೂರ್ವಕ ಆಶೀರ್ವಾದ! ಎಳೆಯರಿಂದ ಸಂತೋಷದ ಬೆನ್ನು ಚಪ್ಪರಿಸುವಿಕೆ. ನೆರೆದವರೆಲ್ಲರೂ ಪರಿಚಿತರು ಅಪರಿಚಿತರು ಎನ್ನದೆ ತಂದೆ ನಾರಾಯಣ ಸ್ವಾಮಿಗಳನ್ನು ಸುತ್ತಿಕೊಂಡರು. ಇಂತಹ ಪುತ್ರನನ್ನು ಪಡೆದ ಅವರನ್ನು ಧನ್ಯರೆಂದರು. ತಂದೆಯ ಬಾಯಿಂದ ಮಾತುಗಳೇ ಹೊರಡಲಿಲ್ಲ. ಕಣ್ಣೀರು ತುಂಬಿದ ಅವರು ಎಲ್ಲರಿಗೂ ಕೈಜೋಡಿಸಿ ವಂದಿಸಿದರು.

ಇದೆ ಜಿ.ಎನ್. ಬಾಲಸುಬ್ರಹ್ಮಣ್ಯಂ  ಅವರ ಮೊದಲ ಸಂಗೀತ ಕಚೇರಿಯ ವೈಖರಿ!

ಜನನ, ಬಾಲ್ಯ

ಕರ್ನಾಟಕ ಸಂಗೀತಕ್ಷೇತ್ರದಲ್ಲಿ ಮಹಾತಾರೆಯಾಗಿ ಮೆರೆದು ಹಿರಿಯ ಕಿರಿಯರೆಲ್ಲರಿಂದಲೂ ಮನ್ನಣೆ ಗಳಿಸಿದ ಹಿರಿಯ ಸಂಗೀತ ವಿದ್ವಾಂಸರಾದ ಜಿ.ಎನ್. ಬಾಲಸುಬ್ರಹ್ಮಣ್ಯಂ ಅವರು ತಮಿಳುನಾಡಿನ ಮಾಯಾವರಂ ಸಮೀಪದ ಗುಡಲೂರು ಎಂಬ ಹಳ್ಳಿಯಲ್ಲಿ ೧೯೧೦ರ ಜನವರಿ ಆರರಂದು ಜನಿಸಿದರು. ತಂದೆ ಜಿ.ಪಿ. ನಾರಾಯಣಸ್ವಾಮಿ ಅಯ್ಯರರು ಉತ್ತಮ ಸಂಗೀತಗಾರರಾಗಿದ್ದರು. ಆದರೆ ಅವರು ಸಂಗೀತವನ್ನು ವೃತ್ತಿಯಾಗಿ ಇರಿಸಿಕೊಂಡವರಲ್ಲ. ಮದರಾಸಿನ ತಿರುವಲ್ಲಿಕ್ಕೇಣಿ ಹಿಂದೂ ಹೈಸ್ಕೂಲಿನಲ್ಲಿ ಹಲವು ವರ್ಷಗಳ ಕಾಲ ಅಧ್ಯಾಪಕರಾಗಿದ್ದರು. ಮುಂದೆ ಅದೇ ಶಾಲೆಯ ಮುಖ್ಯೋಪಾಧ್ಯಾಯರಾದರು.

ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಮುಖ್ಯೋ ಪಾಧ್ಯಾಯರಾಗಿದ್ದ ನಾರಾಯಣಸ್ವಾಮಿ ಅಯ್ಯರರು ಸಂಗೀತದಲ್ಲಿ ಅಸಾಮಾನ್ಯ ಪಾಂಡಿತ್ಯ ಪಡೆದಿದ್ದರು. ಅವರ  ಸಮಕಾಲೀನರಾಗಿದ್ದ ಎಲ್ಲ ಸುಪ್ರಸಿದ್ಧ ಸಂಗೀತಗಾರರ ಪರಮಾಪ್ತರೂ ಆಗಿದ್ದರು. ಶರಭ ಶಾಸ್ತ್ರಿ, ಪುಷ್ಪವನಂ. ಪೂಚಿ ಶ್ರೀನಿವಾಸ ಅಯ್ಯಂಗಾರ್, ಪಲ್ಲಡಂ ಸಂಜೀವರಾವ್, ಮುಸಿರಿ ಸುಬ್ರಹ್ಮಣ್ಯ ಅಯ್ಯರ್, ಕರೂರು ಚಿನ್ನಸ್ವಾಮಿ, ತಿರುಚಿ ಗೋವಿಂದಸ್ವಾಮಿ ಮೊದಲಾದ ಮಹಾ ವಿದ್ವಾಂಸ ಸಂಗೀತ ಕಲಾವಿದರೆಲ್ಲ ಮದರಾಸಿಗೆ ಬಂದಾಗೆ ನಾರಾಯಣಸ್ವಾಮಿ ಅಯ್ಯರರನ್ನು ಕಾಣದೆ ಹೋಗುತ್ತಿರಲಿಲ್ಲ. ಕೆಲವರು ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಹಾಗಾಗಿ ಮಹಾ ಸಂಗೀತ ವಿದ್ವಾಂಸರೆಲ್ಲರ ನಿಕಟಸಂಪರ್ಕ ಚಿಕ್ಕಂದಿನಲೇ ಬಾಲಸುಬ್ರಹ್ಮಣ್ಯನಿಗೆ ದೊರೆಯಿತು; ಮಾತ್ರವಲ್ಲ, ಅವರ ಸಂಗೀತವನ್ನೂ ಕೇಳುವ ಸದವಕಾಶವೂ ಸುಲಭವಾಗಿಯೇ ಆತನಿಗೆ ಲಭಿಸಿತು.

ಬಾಲಸುಬ್ರಹ್ಮಣ್ಯಂ ಚುರುಕಿನ ಹುಡುಗ. ಮನೆಯ ಸಂಗೀತ ವಾತಾವರಣ ಚಿಕ್ಕಂದಿನಲ್ಲೇ ಆತನ ಮೇಲೆ ಪ್ರಭಾವ ಬೀರಿತ್ತು. ಆರೇಳು ವರ್ಷಗಳ ಪ್ರಾಯವಾಗಿದ್ದಾಗಲೇ ಆತ ಸುಶ್ರಾವ್ಯವಾಗಿ ಹಾಡುತ್ತಿದ್ದ. ಶಾಲೆಯಲ್ಲಿ ನಾಟಕಗಳಿದ್ದಾಗಲೆಲ್ಲ ಅವನಿಗೊಂದು ಪಾತ್ರ ಮೀಸಲಾಗಿತ್ತು. ಹತ್ತು ವರ್ಷಗಳ ಬಾಲಸುಬ್ರಹ್ಮಣ್ಯಂ ಶಾಲೆಯಲ್ಲಿ ಅಭಿನಯಿಸಿದ ಧ್ರುವಚರಿತ್ರೆ ನಾಟಕದಲ್ಲಿ ಧ್ರುವ ಕುಮಾರನ ಪಾತ್ರವಹಿಸಿದ್ದ. ಆತನ ಹಾಡು, ಅಭಿನಯಗಳೆಲ್ಲ ಸಭಾಸದರ ಅಪಾರ ಮೆಚ್ಚುಗೆಗೆ ಪಾತ್ರವಾದವು.

ಶಾಲಾ ವಿದ್ಯಾಭ್ಯಾಸ

ಸಾಮಾನ್ಯವಾಗಿ ಹಿಂದಿನ ತಲೆಮಾರಿನ ಸಂಗೀತ ವಿದ್ವಾಂಸರು ಶಾಲಾ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಮುನ್ನಡೆದಿರುವುದು ಅಪೂರ್ವ. ಅವರ ಸಮಯವೆಲ್ಲವೂ ಗುರುಕುಲ ಕ್ರಮದ ಸಂಗೀತ ವಿದ್ಯಾಭ್ಯಾಸಕ್ಕೆ ವಿನಿಯೋಗವಾಗುತ್ತಿತ್ತು. ಆದುದರಿಂದ ಅವರಿಗೆ ಕ್ರಮಬದ್ಧವಾದ ಶಾಲಾ ಶಿಕ್ಷಣಕ್ಕೆ ಸಮಯ ಇರುತ್ತಿರಲಿಲ್ಲ. ಆದರೆ ಬಾಲಸುಬ್ರಹ್ಮಣ್ಯಂಗೆ ಹೀಗಾಗಲಿಲ್ಲ. ಆತ ಸಂಗೀತಾಭ್ಯಾಸಕ್ಕಾಗಿ ಹೆಚ್ಚು ಶ್ರಮಪಡಲಿಲ್ಲ ಎಂದರೂ ಸಲ್ಲುತ್ತದೆ. ಮುಖ್ಯೋಪಾಧ್ಯಾಯರ ಮಗನಾದುದರಿಂದ ಆತನಿಗೆ ಶಾಲಾ ವಿದ್ಯಾಭ್ಯಾಸಕ್ಕೆ ಯಾವ ತೊಂದರೆಯೂ ಬರಲಿಲ್ಲ. ಕ್ರಮವಾಗಿ ತರಗತಿಗಳಲ್ಲಿ ಉಚ್ಚ ಸ್ಥಾನದಲ್ಲೇ ತೇರ್ಗಡೆಯಾಗುತ್ತ ಬಂದು ಹೈಸ್ಕೂಲು ವಿದ್ಯಾಭ್ಯಾಸವನ್ನು ಪೂರೈಸಿದ. ೧೯೨೮ರಲ್ಲಿ ಸಾಹಿತ್ಯವನ್ನು ಆರಿಸಿಕೊಂಡು ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಇ(ಆನರ‍್ಸ್ಸ್) ತರಗತಿಗೆ ಸೇರಿದ.

ಆ ಕಾಲದಲ್ಲಿ ಸಭೇಶ ಅಯ್ಯರ್ ಎಂಬವರು ಚಿದಂಬರಂ ಸಂಗೀತ ಕಾಲೇಜಿನಲ್ಲಿ ಪ್ರಾಂಶುಪಾಲ ರಾಗಿದ್ದರು. ಅವರಿಗೆ ತನ್ನ ಸ್ನೇಹಿತನ ಮಗ ಬಾಲಸುಬ್ರಹ್ಮಣ್ಯಂ ಮೇಲೆ ಅಪಾರವಾದ ವಾತ್ಸಲ್ಯ. ಆತನನ್ನು ಸಂಗೀತ ಕ್ಷೇತ್ರದಲ್ಲಿ ಅಪ್ರತಿಮನನ್ನಾಗಿಸಬೇಕು ಎಂಬ ಹಂಬಲ. ಹಾಗಾಗಿ ಅವರು ಬಾಲಸುಬ್ರಹ್ಮಣ್ಯನನ್ನು ತಮ್ಮೊಂದಿಗೆ ಚಿದಂಬರಕ್ಕೆ ಕರೆದೊಯ್ದರು. ಅಲ್ಲಿ ವಿಶ್ವವಿದ್ಯಾಲಯದಲ್ಲಿ ಪದವಿ ತರಗತಿಗೆ ಸೇರಿಸಿದರು. ಜತೆಯಲ್ಲೇ ಅವಶ್ಯವಾದ ಶಾಲಾ ವೇಳೆಯ ಹೊಂದಿಕೆ ಮಾಡಿಕೊಂಡು ಅವನನ್ನು ತಮ್ಮ ಸಂಗೀತ ಕಾಲೇಜಿನ ತರಗತಿಗೂ ಸೇರಲು ಅವಕಾಶ ಕಲ್ಪಿಸಿಕೊಟ್ಟರು. ಆದರೆ ಚಿದಂಬರದ ಕಡು ಉಷ್ಣದ ವಾತಾವರಣ ಬಾಲಸುಬ್ರಹ್ಮಣ್ಯಂಗೆ ಅಸಹನೀಯವಾಯಿತು. ಪರಿಣಾಮ ವಾಗಿ ಆತ ಮದರಾಸಿಗೆ ಹಿಂದಿರುಗಿ ತನ್ನ ಅಭ್ಯಾಸವನ್ನು ಕ್ರಿಶ್ಚಿಯನ್ ಕಾಲೇಜಿನಲ್ಲಿ ಮುಂದುವರಿಸಬೇಕಾಯಿತು. ೧೯೩೧ರಲ್ಲಿ ಜಿ.ಎನ್.ಬಾಲಸುಬ್ರಹ್ಮಣ್ಯಂ ಅವರು ಬಿ.ಎ. (ಆನರ‍್ಸ್) ಪದವೀಧರರಾದರು.

ಬದಲಾದ ದಾರಿ

ಬಾಲಸುಬ್ರಹ್ಮಣ್ಯಂ ಅವರ ತಂದೆ ನಾರಾಯಣಸ್ವಾಮಿ ಅಯ್ಯರರಿಗೆ ತಮ್ಮ ಮಗ ವಕೀಲನಾಗಬೇಕು ಎಂಬ ಆಸೆಯಿತ್ತು. ಆಗಿನ ಕಾಲದಲ್ಲಿ ಪ್ರತಿಭಾವಂತ ತರುಣರೆಲ್ಲ ನ್ಯಾಯವಾದಿಗಳಾಗಿ ನ್ಯಾಯಾಧೀಶರಾಗಿ ಗಣ್ಯತೆ ಪಡೆಯುವ ಹಂಬಲ ತಾಳುತ್ತಿದ್ದರು. ಮದರಾಸಿನ ಉಚ್ಚ ನ್ಯಾಯಾಲಯದ ಘನ ವಿದ್ವಾಂಸರಾದ ನ್ಯಾಯಮೂರ್ತಿಗಳೂ, ನ್ಯಾಯವಾದಿ ಗಳೂ ಅವರಿಗೆ ಆದರ್ಶಪ್ರಾಯರಾಗಿದ್ದರು. ಆದರೆ ತಂದೆಯ ಆಸೆ ಈಡೇರಲಿಲ್ಲ. ಬಾಲಸುಬ್ರಹ್ಮಣ್ಯಂ ಲಾ ಕಾಲೇಜು ಸೇರಲಿಲ್ಲ. ಅನಿರೀಕ್ಷಿತವಾಗಿ, ಆದರೆ ಅಪೇಕ್ಷಿತವಾಗಿ ಅವರು ಸಂಗೀತ ಕಲಾವಿದರಾದರು.

ನ್ಯಾಯ ಕಲಾ ಶಾಲೆಯ ಬದಲಾಗಿ ಸಂಗೀತ ಕಲಾ ಶಾಲೆ ಸೇರಿದರು. ಮದರಾಸು ವಿಶ್ವವಿದ್ಯಾನಿಲಯ ಹೊಸದಾಗಿ ಆರಂಭಿಸಿದ ಸಂಗೀತ ಡಿಪ್ಲೊಮಾ ತರಗತಿಯನ್ನು ಸೇರಿದರು. ಆ ತರಗತಿಗೆ ಪ್ರಾಂಶುಪಾಲರಾಗಿದ್ದ ಟೈಗರ್ ವರದಾಚಾರ‍್ಯರ ಶಿಷ್ಯರಾದರು. ತರಗತಿಯಲ್ಲಿ ಪ್ರಶಸ್ತಿ ಗಳಿಸಿ ತೇರ್ಗಡೆಯಾದರು. ಬಾಲಸುಬ್ರಹ್ಮಣ್ಯಂ ಅವರಿಗೆ ಪದವಿ, ಗೌರವಗಳು ತಂದೆ ನಿರೀಕ್ಷಿಸಿದ ನ್ಯಾಯವಾದಿತನದಿಂದ ದೊರೆಯಲ್ಲಿಲ್ಲವೇನೋ ನಿಜ. ಆದರೆ ಅದಕ್ಕಿಂತಲೂ ಹತ್ತು ಪಾಲು ಹೆಚ್ಚಾದ ಘನತೆ, ಗೌರವ-ಮನ್ನಣೆಗಳು, ಅಪಾರ ಜನಮೆಚ್ಚುಗೆಗಳು, ಸಂಗೀತ ವಿದ್ವಾಂಸರಾಗಿ, ಕಲಾವಿದರಾಗಿ, ವಾಗ್ಗೇಯಕಾರರಾಗಿ ಲಭಿಸಿದುವು.

ಸಂಗೀತ ವಿದ್ಯಾಭ್ಯಾಸ

ಹಿಂದಿನ ತಲೆಮಾರಿನಲ್ಲಿ ಉತ್ತಮ ಸಂಗೀತ ವಿದ್ಯಾಭ್ಯಾಸಕ್ಕೆ ಗುರುಕುಲ ವಾಸವನ್ನು ಬಿಟ್ಟರೆ ಬೇರೆ ಮಾರ್ಗವಿರಲಿಲ್ಲ. ಮಹಾ ಸಂಗೀತ ವಿದ್ವಾಂಸರನ್ನು ಆಶ್ರಯಿಸಿ ಅವರ ಮನೆಯಲ್ಲೇ ಉಳಿದು, ಅವರ ಸೇವಾವೃತ್ತಿ ಮಾಡಿಕೊಂಡು, ಸಂಗೀತ ಕಲಿಯುತ್ತಿದ್ದ ಕಾಲ ಅದು. ಈಗಿನಂತೆ ಸಂಗೀತ ಶಿಕ್ಷಣಾಲಯಗಳಾಗಲಿ, ವೇತನ ಪಡೆದು ಸಂಗೀತ ಪಾಠ ಹೇಳುವ ಗುರುಗಳಾಗಲಿ ಅಂದು ಇರಲಿಲ್ಲ. ಸಂಗೀತ ಅಭ್ಯಾಸ ಎಂದರೆ ಅದೊಂದೇ ಆಗಬೇಕು; ಅದು ಏಕಾಗ್ರತೆಯ ತಪಸ್ಸು; ಪರಮ ಶ್ರದ್ಧೆ ಭಕ್ತಿಗಳಿಂದ ಗುರುಸೇವೆ ಮಾಡಿ ಅವರಿಂದ ಅನುಗ್ರಹರೂಪವಾಗಿ ಸಂಗೀತವನ್ನು ಪಡೆಯಬೇಕು. ಗುರುವಿನ ಪರಿಪೂರ್ಣ ಅನುಗ್ರಹ, ಆಶೀರ್ವಾದಗಳಿಲ್ಲದೆ ಸಂಗೀತ ವಿದ್ಯೆ ಲಭಿಸದು ಎಂಬ ನಂಬಿಕೆ ಅಂದು ಇತ್ತು.

ಶಿಷ್ಯರು ಗುರುಗಳನ್ನು ದೇವರೆಂದು ತಿಳಿಯುತ್ತಿದ್ದ ಕಾಲ ಅದು. ಗುರುಗಳ ಎಲ್ಲ ಸೇವೆಯನ್ನು ಶಿಷ್ಯರು ಮನಃಪೂರ್ವಕವಾಗಿ ಮಾಡುತ್ತಿದ್ದರು. ಅವರ ಹಾಡುವಿಕೆ ಯನ್ನು ಒಂದೇ ಮನಸ್ಸಿನಿಂದ ಗಮನವಿರಿಸಿ ಕೇಳುತ್ತಿದ್ದರು. ಪ್ರತಿದಿನವೂ ಗಂಟೆಗಟ್ಟಲೆ ಅಭ್ಯಾಸ ಮಾಡುತ್ತಿದ್ದರು. ಗುರುಗಳು ಹಾಡುವಾಗ ತಂಬೂರಿ ಶ್ರುತಿ ನುಡಿಸುತ್ತಿದ್ದರು. ಅವರು ಕೆಲವು ಕ್ಷಣ ತಮ್ಮ ಅಭ್ಯಾಸವನ್ನು ಗಮನಿಸಿದರೆ. ಒಂದು ಕೃತಿಯನ್ನು ಹೇಳಿಕೊಟ್ಟರೆ, ಒಂದು ರಾಗದ ಸ್ವರೂಪವನ್ನು ವಿವರಿಸಿದರೆ, ಹಾಡಿ ತೋರಿಸಿದರೆ, ಪರಮಾನುಗ್ರಹ ಎಂದು ಭಾವಿಸುತ್ತಿದ್ದರು. ಗುರುಗಳು ಶಿಷ್ಯವೃತ್ತಿ ಸಾಕು ಎಂದು ಹೇಳಿ ತಮ್ಮನ್ನು ಆಶೀರ್ವದಿಸಿ ಕಳುಹಿಸಿರೆಂದು ತಾವು ಕೃತಾರ್ಥರಾದೆವು- ಎಂದು ತಿಳಿದು ಕಣ್ಣೀರಿಳಿಸುತ್ತ ಗುರುಚರಣಗಳಿಗೆ ಎರಗಿ ಹೊರಡುತ್ತಿದ್ದರು. ಗುರುಗಳು ಕೂಡ ಶಿಷ್ಯರನ್ನು ತಮ್ಮ ಮಕ್ಕಳಂತೆಯೇ ಪ್ರೀತಿಯಿಂದ ಕಾಣುತ್ತಿದ್ದರು. ಅವರ ಅರ್ಹತೆಗಳನ್ನು ಹಲವು ವಿಧಗಳಲ್ಲಿ ಪರೀಕ್ಷಿಸುತ್ತಿದ್ದರು. ಸರ್ವವಿಧದಲ್ಲೂ ಯೋಗ್ಯ ಎಂದು ಕಂಡುಬಂದಲ್ಲಿ ನಿರ್ವಂಚನೆಯಿಂದ ಆತನಿಗೆ ಜ್ಞಾನಭಂಡಾರವನ್ನು ನೀಡುತ್ತಿದ್ದರು.

ಬಾಲಸುಬ್ರಹ್ಮಣ್ಯಂ ಅವರಿಗೆ ಸಂಗೀತಾಭ್ಯಾಸಕ್ಕಾಗಿ ಗುರುಕುಲ ವಾಸದ ಬವಣೆ ಪಡುವ ಅಗತ್ಯವೇ ಒದಗಲಿಲ್ಲ. ಅವರಿಗೆ ಸಂಗೀತದ ಪ್ರಾಥಮಿಕ ಅಭ್ಯಾಸ, ಸಾಧನೆಗಳೆಲ್ಲವೂ ತಮ್ಮ ತಂದೆಯವರಿಂದಲೇ ದೊರೆತವು. ಅಂತೆಯೇ ತಂದೆಯವರ ಆಪ್ತರಾಗಿದ್ದ, ಪಟ್ಣಂ ಸುಬ್ರಹ್ಮಣ್ಯ ಅಯ್ಯರರ ಶಿಷ್ಯರಾಗಿದ್ದ, ಗುರುಸ್ವಾಮಿ ಭಾಗವತರೂ, ಮಧುರೆ ಸುಬ್ರಹ್ಮಣ್ಯ ಅಯ್ಯರರೂ, ಟೈಗರ್ ವರದಾಚಾರ‍್ಯರೂ ಅವರಿಗೆ ಪಾಠ ಹೇಳಿದ ಗುರುಗಳು. ಅದರೆ ಬಾಲಸುಬ್ರಹ್ಮಣ್ಯಂ ಅವರು ತಾವು ಪಾಠದಿಂದ ಕಲಿತುದಕ್ಕಿಂತಲೂ, ಹೆಚ್ಚಾಗಿ ಕಲಿತುಕೊಂಡುದು ಹಲವು ಸಂಗೀತ ವಿದ್ವಾಂಸರ ನಿರೂಪಣೆಯನ್ನು ಗಮನವಿರಿಸಿ ಕೇಳಿ, ತಮ್ಮ ಸತತವಾದ ಅಭ್ಯಾಸದಿಂದ.

ಮಾಧುರ‍್ಯಪೂರ್ಣವಾಗಿದ್ದ ಬಾಲಸುಬ್ರಹ್ಮಣ್ಯಂ ಅವರ ಶಾರೀರ ಸತತಾಭ್ಯಾಸದಿಂದ ಬೇಕೆನಿಸಿದಂತೆ ನುಡಿಯಲು ಪ್ರಾರಂಭವಾಯಿತು. ಬಹುಶ: ದ್ರುತಕಾಲದ ಸಂಚಾರಗಳು ಅವರ ಶಾರೀರದಲ್ಲಿ ನುಡಿದಷ್ಟು ಸ್ಪಷ್ಟತೆ ಹಾಗೂ ನಿಖರತೆಗಳಿಂದ ಬೇರೆ ಯಾವ ಸಂಗೀತಗಾರರ ಶಾರೀರದಲ್ಲೂ ನುಡಿಯುತ್ತಿರಲಿಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ.

ಸಂಗೀತ ಶೈಲಿ

ತಮ್ಮ ಬುದ್ಧಿ ಪೂರ್ವಕವಾದ ಸಂಗೀತ ಶ್ರವಣ ಕ್ರಮದಿಂದ ಇತರ ವಿದ್ವಾಂಸರ ಸಂಗೀತದಲ್ಲಿನ ವಿಶಿಷ್ಟತೆಗಳನ್ನೂ ಮಿತಿಗಳನ್ನು ಚೆನ್ನಾಗಿ ಕಂಡುಕೊಂಡರು ಬಾಲಸುಬ್ರಹ್ಮಣ್ಯಂ. ಪರಿಣಾಮವಾಗಿ ತಮ್ಮದೇ ಆದ ಒಂದು ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡರು. ಇದು ಜಿ.ಎನ್.ಬಿ ಶೈಲಿ ಎಂದೇ ಪರಿಚಿತವಾಯಿತು.

ಸ್ವಂತಿಕೆ ಇರಬೇಕಾದುದು ಕಲಾವಿದನ ಮುಖ್ಯ ಲಕ್ಷಣ. ಅಭ್ಯಾಸದಿಂದ ಎಷ್ಟೇ ಪಾಂಡಿತ್ಯ ಸಾಧಿಸಿದ್ದರೂ ಅದು ಸ್ವಂತತನವಿಲ್ಲದಿದ್ದರೆ ಒಂದು ಬಗೆಯ ಅನುಕರಣೆ ಯಾಗಿಯೇ ಉಳಿಯುತ್ತದೆ. ಪ್ರತಿಯೊಬ್ಬ ಸಂಗೀತ ವಿದ್ವಾಂಸನ ಕಂಠಸ್ವರಧರ್ಮ, ಮನೋಧರ್ಮ, ಬುದ್ಧಿ ಬೇರೆ ಬೇರಾಗಿಯೇ ಇರುತ್ತದೆ. ಆದುದರಿಂದ ತಾವು ಇತರರ ಗಾಯನದಲ್ಲಿ ಕೇಳಿದುದನ್ನು ತಮ್ಮ ಕಂಠ ಸ್ವರಕ್ಕೆ, ಮನೋಧರ್ಮ ಬುದ್ಧಿಗಳಿಗೆ ಅನುಗುಣವಾಗಿ ಅಳವಡಿಸಿ ಕೊಳ್ಳಬೇಕಾಗುತ್ತದೆ. ಹೀಗೆ ಮಾಡುವುದೇ ಬುದ್ಧಿವಂತ ಕಲಾವಿದನ ಲಕ್ಷಣ. ಅಲ್ಲದೆ ತನ್ನ ಎಟುಕಿಗೆ ಆಳವಲ್ಲದ ಎಂದರೆ ತನ್ನ ಕಂಠಸ್ವರಕ್ಕೆ ಮನೋಧರ್ಮಕ್ಕೆ ಸರಿಹೊಂದದ ರೀತಿ-ವ್ಯವಹಾರಗಳನ್ನು ತಾನು ಸಾಧಿಸಿ ತೋರಿಸುತ್ತೇನೆ ಎಂದು ಹೊರಟಾಗ ಆತನಿಗೆ ಅದರಲ್ಲಿ ಸಿದ್ಧಿ ಒದಗುವುದಿಲ್ಲ.

ಸಂಗೀತ ವಿದ್ವಾಂಸನ ವಿಶಿಷ್ಟತೆಯನ್ನು ಆತನ ರಾಗ ವಿನ್ಯಾಸ ಕ್ರಮ ತೋರಿಸುತ್ತದೆ. ರಾಗವೆಂದರೆ ಅಥವಾ ರಾಗ ನಿರೂಪಣೆ ಎಂದರೆ ಆ ರಾಗದ ಸ್ವರಶ್ರೇಣಿಗಳನ್ನು ಅಥವಾ ಆರೋಹಣ ಅವರಾಹಣಗಳನ್ನು ಇಷ್ಟ ಬಂದಂತೆ ಜೋಡಿಸಿ ಹಾಡುವುದಲ್ಲ. ರಾಗಕ್ಕೆ ಶಾಸ್ತ್ರ ಸಮ್ಮತವಾಗಿ ಒದಗಿ ಬರುವ ಸ್ವರಗಳನ್ನು ಮಾತ್ರ ಆರೋಹಣ ಅವರೋಹಣಗಳು ಹೇಳುತ್ತವೆ. ಅವುಗಳನ್ನು ಕಲಾತ್ಮಕವಾಗಿ ವಿವಿಧ ರೀತಿ, ಗತಿಗಳನ್ನು ನೀಡಿ ಜೋಡಿಸಿದಾಗ ಮಾತ್ರ ಸುಂದರವಾದ ಒಂದು ನಾದಚಿತ್ರಣ ಮೂಡುತ್ತದೆ, ಆಗ ಅದು ರಾಗ ಎನ್ನಿಸುತ್ತದೆ. ಅಂದವಾದ ರಾಗಚಿತ್ರಣಕ್ಕೆ ಪರಂಪರೆಯೇ ಆಧಾರ. ಹಿಂದಿನಿಂದಲೂ ವಿದ್ವಾಂಸರು ಹಾಡಿಕೊಂಡು ಬಂದ ರೀತಿಗಳನ್ನು ಗುರು ಮುಖದಿಂದ ಸಂಗೀತ ವಿದ್ಯಾರ್ಥಿ ಅಭ್ಯಸಿಸುತ್ತಾನೆ. ಅವುಗಳನ್ನು ಆ ಪರಂಪರೆಯ ಮಿತಿಯಲ್ಲಿ ಹಾಡುತ್ತಾನೆ.

ಸ್ವಂತಿಕೆಯುಳ್ಳ ಕಲಾವಿದ ಹೀಗೆ ಮಾಡುವುದಿಲ್ಲ. ಪರಂಪರಾಗತವಾಗಿ ದೊರೆತುದನ್ನು ತನ್ನ ಬುದ್ಧಿಯ ಒರೆಗಲ್ಲಿಗೆ ಹಚ್ಚಿ, ತನ್ನ ಬುದ್ಧಿಶಕ್ತಿಯಿಂದ ಅದಕ್ಕೊಂದು ನವ್ಯರೂಪ ಕೊಡಲು ಪ್ರಯತ್ನಿಸುತ್ತಾನೆ. ಹಿಂದಿನವರು ಹೇಳಿದುದಕ್ಕಿಂತ, ತೋರಿಸಿದುದಕ್ಕಿಂತ ಹೆಚ್ಚಿನದನ್ನು ತಾನು ಸಾಧಿಸಬೇಕು ಎಂಬ ಛಲಕ್ಕೆ ತೀಕ್ಷ್ಣ ಬುದ್ಧಿಯ ಸಹಾಯ ದೊರೆತಾಗ ಶೈಲಿ ಇನ್ನಷ್ಟು ಮೋಹಕವಾಗುತ್ತದೆ. ಹೀಗೆ ಮಾಡುವಾಗ ಪರಂಪರೆ ಸಾಗಿಬಂದ ದಿಸೆಗೆ ವಿರುದ್ಧ ತಿರುಗಬಾರದು ಎಂಬುದು ಮುಖ್ಯ. ಪರಂಪರೆಯ ದಿಸೆಯಲ್ಲೇ ಸಾಗುತ್ತ ಹೊಸ ರೀತಿಗಳನ್ನು ಶಾಸ್ತ್ರ ಸಮ್ಮತವಾಗಿ ಇರುವಂತೆ ರೂಪಿಸಿಕೊಂಡು, ಮೋಹಕವಾದ ನವ್ಯತೆಯನ್ನು ಸಾಧಿಸಿದಾಗ ರಸಿಕರಿಗೆ ಮೆಚ್ಚುಗೆಯಾಗುವ, ವಿಮರ್ಶಕರಿಗೆ ಒಪ್ಪಿಗೆಯಾಗುವ ಹೊಸತೊಂದು ಶೈಲಿ ರೂಪಿಸಲ್ಪಡುತ್ತದೆ. ಇದನ್ನು ಸಾಧಿಸಿದವರು ಜಿ. ಎನ್.ಬಾಲಸುಬ್ರಹ್ಮಣ್ಯಂ. ಅವರ ಅಭ್ಯಾಸ, ತೀಕ್ಷ್ಣಬುದ್ಧಿ, ಸಂಗೀತ ಲಕ್ಷಣಗಳಲ್ಲಿನ ಗಾಢ ಪಾಂಡಿತ್ಯ ಇವುಗಳು ಅವರಿಂದ ಸಂಗೀತ ಶೈಲಿಗೆ, ಪರಂಪರೆಗೆ ಹೊಂದಿಕೆಯಾಗುವ ಹೊಸತನವನ್ನೂ ರೂಪಿಸಿದವು.

ಜನಾದರಣೆ

ಜಿ.ಎನ್.ಬಿ, ಅವರ ಸಂಗೀತ ಕಚೇರಿ ಎಂದೊ ಡನೆಯೇ ಸಭಾಂಗಣವೆಲ್ಲ ಕಿಕ್ಕಿರಿದು ತುಂಬುತ್ತಿತ್ತು. ದಕ್ಷಿಣದ ಸಂಗೀತ ಸಭೆಗಳೆಲ್ಲವೂ ಜಿ.ಎನ್. ಬಿ. ಸಂಗೀತ ಕಚೇರಿಯನ್ನು ಏರ್ಪಡಿಸಲು ಉತ್ಸುಕವಾಗಿದ್ದವು.

ಆರಂಭದಲ್ಲಿ ಹಿರಿಯರು ಅವರ ಗಾನವಿಧಾನವನ್ನು ಅಷ್ಟೊಂದು ಮೆಚ್ಚಿಕೊಳ್ಳಲಿಲ್ಲ. ಅವರಿಗೆ ಆ ತನಕ ತಾವು ಕೇಳುತ್ತಿದ್ದ ರೀತಿಗಿಂತ ಭಿನ್ನವಾದ ಸಂಗೀತ ರೀತಿಯನ್ನು ಕೇಳಲು, ಮೆಚ್ಚಲು, ಸ್ವಲ್ಪ ಕಷ್ಟವಾಗಿದ್ದಿರಬೇಕು. ಸಾಮಾನ್ಯವಾಗಿ ಕಲೆಯಲ್ಲಿಯೇ ಆಗಲಿ, ಇತರ ವಿಷಯಗಳಲ್ಲಿಯೇ ಆಗಲಿ, ಹೊಸ ಅವಿಷ್ಕಾರಗಳನ್ನು ಹಿರಿಯರು ಮೆಚ್ಚುವುದು ಸ್ವಲ್ಪ ನಿಧಾನಗತಿಯಿಂದಲೇ. ಆದರೆ ಇನ್ನೊಬ್ಬರ ಮೆಚ್ಚುಗೆಗಾಗಿ ಜಿ. ಎನ್. ಬಿ ತಮ್ಮ ಪಂಥದ ವಿಶಿಷ್ಟತೆಯನ್ನು ಕೈಬಿಡಲು ಸಿದ್ಧರಾಗಲಿಲ್ಲ. ಬಾಲಸುಬ್ರಹ್ಮಣ್ಯಂ ಅವರ ಸಂಗೀತವನ್ನು ಕೇಳಿದ ಹಿರಿಯರು ಹಾಗೂ ಕಿರಿಯರ ಪ್ರತಿಕ್ರಿಯೆಗಳು ಭಿನ್ನರೀತಿಯಲ್ಲಿ ಇರುತ್ತಿದ್ದವು.

“ಸಂಗೀತವೇನೋ ಸೊಗಸಾಗಿದೆ; ಶ್ರಾವ್ಯಗುಣ ಅತ್ಯಂತ ಉತ್ತಮವಾಗಿದೆ, ಆದರೆ ಮಾಧುರ‍್ಯ ಒಂದೇ ಸಂಗೀತದ ಎಲ್ಲ ಮುಖವೂ ಅಲ್ಲವಷ್ಟೆ! ಎಲ್ಲ ಸಂಗೀತ ವಿದ್ವಾಂಸರ ದಾರಿ ಒಂದು, ಈತನ ದಾರಿ ಇನ್ನೊಂದು ಎಂಬಂತಾಗಿದೆ! ಇದು ಅಷ್ಟೊಂದು ಸಮಂಜಸವಲ್ಲ. ಪೂರ್ವಕಾಲದಿಂದ ಪರಂಪರಾಗತವಾಗಿ ಸಂಪ್ರದಾಯ ಬದ್ಧವಾಗಿ ಬಂದ, ಸಾಮಗಾನವೇ ಮೂಲವಾದ ಈ ಮಹಾವಿದ್ಯೆಯನ್ನು ಗುರುಗಳು ಹೇಳಿಕೊಟ್ಟ ರೀತಿಯಲ್ಲೇ ಶುದ್ಧವಾಗಿ ವ್ಯವಸಾಯ ಮಾಡಬೇಕು. ಗುರುಮುಖದಿಂದ ಬಂದುದನ್ನು ತಮಗೆ ಬೇಕಾದಂತೆ ಬದಲಾಯಿಸುವ ಸ್ವಾತಂತ್ರ್ಯ ನಮಗೆ ಎಂದೂ ಇಲ್ಲ, ಹಾಗೆ ಮಾಡಿದರೆ ಸಂಗೀತದ ಪರಿಶುದ್ಧತೆಯು ಸರ್ವನಾಶವಾದೀತು.! ದಿನಕಳೆದಂತೆ ಸಂಗೀತ ಅಪಭ್ರಂಶವಾದೀತು! ರಾಗಗಳಾಗಲಿ, ಕೃತಿಗಳ ನಿರೂಪಣೆಯಾಗಲಿ ಪೂರ್ವ ಪಂಥವನ್ನು ಬಿಟ್ಟ್ಟಿರಲೇಬಾರದು. ತ್ಯಾಗರಾಜರಂಥವರೇ ಪರಂಪರೆ ಬಿಡಲಿಲ್ಲ! ನಾವು ಸಂಪ್ರದಾಯವನ್ನು ಬೇಡವೆಂದರೆ ಹೇಗೆ? ಸಂಗೀತದಲ್ಲಿ ಇಷ್ಟಬಂದಂತೆ ಹಾಡುವ ಸ್ವಚ್ಛಂದ ವೃತ್ತಿಯನ್ನು ನಾವು ಬೆಂಬಲಿಸಿದರೆ ಆ ದೈವೀಕಲೆ ಕುಲಗೆಟ್ಟು ಹೋದೀತು!“

ಹಿರಿಯರ ಪ್ರತಿಕ್ರಿಯೆ ಈ ರೀತಿ ಆದರೆ, ಕಿರಿಯರ ಪ್ರತಿಕ್ರಿಯೆ ಇದಕ್ಕೆ ನೇರ ವಿರುದ್ಧ ಗತಿಯಲ್ಲಿತ್ತು!

‘ಸಂಗೀತ ಎಂದರೆ ಜಿ.ಎನ್.ಬಿ. ಅವರದು! ಎಷ್ಟು ಮಾಧುರ‍್ಯ! ಎಷ್ಟು ರಂಜನೆ! ಎಂತಹ ಮನೋಧರ್ಮ! ಇತರ ಎಷ್ಟೋ ಮಂದಿ ವಿದ್ವಾಂಸರ ಸಂಗೀತ ಕೇಳಿದರೂ ಎಲ್ಲವೂ ಒಂದೇ ರೀತಿ! ರಾಗದಲ್ಲಿ, ಕೃತಿಗಳಲ್ಲಿ, ಸ್ವರ ನಿರೂಪಣೆಗಳಲ್ಲಿ ಸಾಮಾನ್ಯವಾಗಿ ವಿಶೇಷ ವಿಶಿಷ್ಟತೆ ಇಲ್ಲ. ಹಾಡುಗಾರರು ಬೇರೆ ಬೇರೆ, ಅವರ ಧ್ವನಿ, ಗಾತ್ರ, ವಿಶಿಷ್ಟತೆ ವ್ಯವಹಾರ ರೀತಿಗಳು ಬೇರೆ ಬೇರೆ, ಸಂಗೀತ ವಿನ್ಯಾಸ ಪದ್ಧತಿ ಮಾತ್ರ ಒಂದೇ ಎಂಬಂತಾಗಿದೆ. ಆದರೆ ನಮ್ಮ ಸಂಗೀತದಲ್ಲಿ ಅಷ್ಟೆಲ್ಲ ಕಷ್ಟಪಟ್ಟು ವರ್ಷಾನುಗಟ್ಟಲೆ ಅಭ್ಯಾಸ ಮಾಡಿದ್ದೇವೆ ಎಂದು ಹೇಳುವ ಈ ಮಹಾವಿದ್ವಾಂಸರು ತಮ್ಮ ಸ್ವಂತದ್ದು ಸ್ವಲ್ಪವಾದರೂ ಸಂಗೀತ ಕಲೆಗೆ ನೀಡಲು ಪ್ರಯತ್ನಿಸಬಾರದೆ? ಮಾತನಾಡಿದರೆ ಪರಂಪರೆ – ಸಂಪ್ರದಾಯ ಎನ್ನುತ್ತಾರೆ. ತ್ಯಾಗರಾಜರ, ದೀಕ್ಷಿತರ ಕಾಲಕ್ಕಿಂತ ಹಿಂದೆ ಸಂಗೀತ ಪದ್ಧತಿ ಬೇರೆಯೇ ಆಗಿತ್ತು ಎಂಬುದನ್ನು ಇವರು ಒಪ್ಪುವುದೇ ಇಲ್ಲ. ಆ ಹಿಂದಿನ ಹಳೆಯ ಪರಂಪರೆಯನ್ನು ತಮ್ಮ ಪ್ರತಿಭೆಯಿಂದ, ಕೌಶಲದಿಂದ ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜರು, ದೀಕ್ಷಿತರು ಶ್ಯಾಮಶಾಸ್ತ್ರಿಗಳು ಸಂಪೂರ್ಣವಾಗಿ ಬದಲಾಗುವಂತೆ ಮಾಡಿದರು ಎಂಬುದನ್ನು ಒಪ್ಪುವುದಿಲ್ಲ. ಹಿಂದಿನಿಂದಲೂ ಇಂದಿನವರೆಗೂ ಪರಂಪರೆ ಒಂದೇ ರೀತಿಯಲ್ಲಿ ಮುಂದುವರೆದಿದೆ ಎಂದು ಭಾವಿಸುವುದಾದರೆ ನಾವು ಇದು ತ್ಯಾಗರಾಜನ ಸಂಪ್ರದಾಯ, ಇದು ದೀಕ್ಷಿತರ ಸಂಪ್ರದಾಯ ಎಂದು ಏಕೆ ಹೇಳಬೇಕು?

“ಕಾಲ ಸರಿದಂತೆ, ದೇಶ ಪರಂಪರೆಗಳಿಗೆ ಅನುಗುಣವಾಗಿ ಕಲೆಯೂ ವಿಕಾಸಗೊಳ್ಳುತ್ತದೆ ಎಂಬುದನ್ನು ಹಿರಿಯರು ಮರೆತುಬಿಟ್ಟಿದ್ದಾರೆ. ಜಿ.ಎನ್.ಬಿ. ಅವರ ರಾಗ ನಿರೂಪಣಾ ಸಾಮರ್ಥ್ಯ ಅನುಪಮ! ಕೃತಿಗಳ ಹಾಡುವಿಕೆ ಭಾವಪೂರ್ಣ! ಸ್ವರ ವಿನ್ಯಾಸಕ್ರಮ ಕಲ್ಪನಾ ಪೂರ್ಣ. ಈತ ಯಾರನ್ನೂ ಕುರುಡಾಗಿ ಅನುಸರಿಸುವವರಲ್ಲ. ಅಭ್ಯಾಸ ಮಾಡಿದುದಕ್ಕೆ, ಕೇಳಿ ತಿಳಿದುದಕ್ಕೆ ತಮ್ಮ ಕಲ್ಪನೆಯ ಮೆರಗನ್ನು ನೀಡುತ್ತಾರೆ. ಹೊಸತನವನ್ನು ಶಾಸ್ತ್ರ ಸಮ್ಮತವಾಗಿ ಸಂಪ್ರದಾಯ ಸಮ್ಮತವಾಗಿ, ಮೂಡಿಸುತ್ತಾರೆ. ಸತತ ಅಭ್ಯಾಸದಿದ ಲಲಿತವಾಗಿಸಿಕೊಂಡ ಕಂಠಶ್ರೀಗೆ ಎಷ್ಟೊಂದು ಮಾಧುರ‍್ಯ! ಎಷ್ಟೊಂದು ವೇಗದ ಸಂಚಾರ ಸಾಧ್ಯತೆ! ಆ ವೇಗದಲ್ಲೂ ಎಷ್ಟೊಂದು ಶ್ರುತಿಶುದ್ಧತೆ! ಸ್ವರಸ್ಥಾನ ಶುದ್ಧತೆ ! ಪಕ್ಕ ವಾದ್ಯಗಾರರಿಗೆ ಅನುಸರಿಸಲು ಕಷ್ಟವಾಗುವಂತಹ ಕಲ್ಪನಾ ವೈವಿಧ್ಯ! ಶಹಭಾಸ್! ಸಂಗೀತವೆಂದರೆ ಹೀಗಿರಬೇಕು.’

ಹೀಗಿರುತ್ತಿತ್ತು, ಯುವಕರ ಪ್ರತಿಕ್ರಿಯೆ! ಕಿರಿ ವಯಸ್ಸಿನ ಸಂಗೀತ ವಿದ್ಯಾರ್ಥಿಗಳೆಲ್ಲ ಜಿ.ಎನ್.ಬಿ.ಯವರ ಗಾಯನ ಕ್ರಮವನ್ನು ಅನುಕರಿಸಸಲು ಪ್ರಯತ್ನಿಸುತ್ತಿದ್ದರು. ಯುವಜನಾಂಗಕ್ಕೆ ಜಿ.ಎನ್.ಬಿ. ಸಂಗೀತದ ಆರಾಧ್ಯ ಮೂರ್ತಿಯಾದರು. ಅವರ ಸಂಗೀತದಲ್ಲಿನ ಹೊಸತನ ದಿನಗಳೆದಂತೆ ಜನಾದರಣೆ ಪಡೆಯಿತು. ರಸಿಕರೂ, ವಿಮರ್ಶಕರೂ ಏಕರೀತಿಯಲ್ಲಿ ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಪಂಥವನ್ನು ಅನುಮೋದಿಸಿದರು.

ಜಿ.ಎನ್.ಬಿ. ಅವರ ಕಲ್ಯಾಣಿ, ಭೈರವಿ, ಸಿಂಹೇಂದ್ರ ಮಧ್ಯಮ, ಕಾಂಬೋಧಿ ಮತ್ತು ಮೋಹನ ರಾಗಗಳು ಶ್ರೋತೃಗಳ ಕಿವಿಗಳಿಗೆ ಹಬ್ಬವನ್ನೇ ಉಂಟುಮಾಡುತ್ತಿದ್ದವು. ಈ ರಾಗಗಳ ವಿನ್ಯಾಸ ಹಾಗೂ ಅವುಗಳಲ್ಲಿನ ಕೃತಿಗಳನ್ನು ಅವರು ಹಾಡಿದ ರೀತಿಯ ರಂಜನೆಯಿಂದ ಬಹುಶ: ಉಳಿದ ಯಾವ ಸಂಗೀತ ವಿದ್ವಾಂಸರೂ ಹಾಡಿರಲಾರರು. ರಾಗ ವಿನ್ಯಾಸದಲ್ಲಿ ಅವರ ಸಂಪೂರ್ಣ ಕಲ್ಪನಾ ಪ್ರತಿಭೆ ಮೂಡುವುದು ತಾರಸ್ಥಾಯಿಯಲ್ಲಿ ಹಾಡುವಾಗ, ಅವರ ಧ್ವನಿಗಾತ್ರವೂ ಈ ತೆರನ ಹಾಡುಗಾರಿಕೆಗೆ ವಿಶಿಷ್ಟವಾದ ಮೆರಗನ್ನು ಕೊಡುತ್ತಿತ್ತು. ಮೈಸೂರು ವಾಸುದೇವಾಚಾರ‍್ಯರ ಹಲವು ರಚನೆಗಳನ್ನು ಅವರು ಜನಪ್ರಿಯಗೊಳಿಸಿದರು. ಆಚಾರ‍್ಯರ ರಚನೆಯಾದ ಖಮಾಸು ರಾಗದ “ಬ್ರೊಚೇವಾರೆವರು” ಕೃತಿ ಜಿ,ಎನ್.ಬಿ. ಅವರ ಅತ್ಯಂತ ಪ್ರಿಯವಾದ ಕೃತಿಯಾಗಿತ್ತು. ಅವರ ರಾಗ-ಕೃತಿಗಳ ನಿರೂಪಣೆಯನ್ನು ಎಷ್ಟು ಕಟ್ಟುನಿಟ್ಟಾಗಿ ವಿಮರ್ಶೆ ಮಾಡುವ ಸಂಗೀತವಿಮರ್ಶಕರೂ ಹೊಗಳದೆ ಇರಲಾಗಲಿಲ್ಲ. ಅವರ ಗಾಯನ ಪಂಥವನ್ನು ‘ಜಿ.ಎನ್.ಬಿ.ಯವರ ಪಂಥ ಎಂದು ಪ್ರಸಿದ್ಧವಾಯಿತು.

ವ್ಯಕ್ತಿತ್ವ

ಜಿ.ಎನ್.ಬಿ. ಅವರದು ಸುಂದರ ರೂಪ, ಬಿಳಿಗೆಂಪು ಮೈಬಣ್ಣದ , ಸ್ಥೂಲವೂ ಅಲ್ಲದ ಕ್ಷೀಣವೂ ಅಲ್ಲದ ಸಮಪ್ರಮಾಣದ ದೇಹ, ದುಂಡಗಿನ ಮುಖ, ಮಿನುಗುತ್ತಿರುವ ಕಣ್ಣುಗಳು, ಸದಾ ಮುಗುಳ್ನಗೆ, ವಜ್ರದ ಒಂಟಿಗಳಿಂದ ಶೋಭಿಸುತ್ತಿದ್ದ ಕಿವಿಗಳು, ಹಣೆಯ ಮೇಲೆ ಕೆಂಪು ಬೊಟ್ಟು- ಇವುಗಳೆಲ್ಲ ಸಂಗೀತ ಕಚೇರಿಯ ಅವಕಾಶದಲ್ಲಾಗಲೀ ನಾಲ್ಕು ಜನಸೇರಿದ ಕೂಟದಲ್ಲಾಗಲಿ ಅವರನ್ನು ಎತ್ತಿ ತೋರಿಸು ವಂತಿದ್ದವು. ಬಾಹ್ಯರೂಪದಂತೆಯೇ ಅವರ ಅಂತರಂಗವೂ ನಿರ್ಮಲವಾಗಿತ್ತು. ಸಂಗೀತದಲ್ಲಿನ ವಿಶಿಷ್ಟತೆಯಂತೆಯೇ ಮಾತುಗಾರಿಕೆಯಲ್ಲೂ ಅವರ ವೈಶಿಷ್ಟ್ಯ ಒಡೆದು ಕಾಣುತ್ತಿತ್ತು. ನಿತ್ಯ ಜೀವನದಲ್ಲಾಗಲೀ, ಗೆಳೆಯರೊಡನೆ ಬೆರೆಯು ವಲ್ಲಾಗಲೀ, ಅಪರಿಚಿತರ ಕೂಟದಲ್ಲಾಗಲೀ ಎಲ್ಲರೊಡನೆ ಸಮರಸವಾಗಿ ಬೆರೆಯಲು ಅವರಿಗೆ ಏನೂ ಕಷ್ಟವೆನಿಸುತ್ತಿರಲಿಲ್ಲ. ಸಂಗೀತಕಚೇರಿಗಳಿಗೆ, ದೂರದ ಊರುಗಳಿಗೆ ಹೋದಾಗಲೆಲ್ಲ ಅವರನ್ನು ಗೆಳೆಯರೂ ಅಭಿಮಾನಿಗಳೂ ಅಕ್ಕರೆಯಿಂದ ಕಾಣುತ್ತಿದ್ದರು. “ಕರ್ನಾಟಕ ಸಂಗೀತ ಮನ್ಮಥ” ಎಂದೇ ಅವರು ಹೆಸರಾಗಿದ್ದರು.

ವಿನೋದ ಪ್ರವೃತ್ತಿ

ಸಂಭಾಷಣೆಯ ಅವಕಾಡದಲ್ಲಿ ಜಿ.ಎನ್.ಬಿ. ಅವರಂತೆ ಸಮಯಸ್ಫೂರ್ತಿಯ ಮಾತುಗಳನ್ನೂ, ವಿನೋದೋಕ್ತಿಗಳನ್ನೂ ಬಳಸುತ್ತಿದ್ದ ಸರಸಿ ಸಂಗೀತಗಾರರು ತೀರ ವಿರಳ. ಒಮ್ಮೊಮ್ಮೆ ಅವರ ವಿನೋದ ಸ್ವಭಾವ ವಿಚಿತ್ರ ರೀತಿಯಲ್ಲಿ ಪ್ರಕಟವಾಗುತ್ತಿತ್ತು. (ಅವರು ನಡೆದ ರೀತಿ ಎಂದು ನಾವಿಂದು ಹಾಗೆ ನಡೆಯುವಂತಿಲ್ಲ) ಒಮ್ಮೆ ಅವರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅವಶ್ಯ ವೆನಿಸಿದರೆ ನಿಲ್ಲಿಸಲು ಬಳಸುವ ಸರಪಣಿಯ ಪಕ್ಕದಲ್ಲಿ ಬರೆದಿದ್ದ ಸೂಚನಾಫಲಕವು ಅವರ ಗಮನವನ್ನು ಸೆಳೆಯಿತು. ಎದ್ದು ನಿಂತು ಸರಪಣಿಯನ್ನು ಎಳೆದೇಬಿಟ್ಟರು. ರೈಲು ನಿಂತಿತು. ಸರಪಣಿ ಎಳೆದು ರೈಲು ನಿಲ್ಲಿಸಿದವರಾರು? ವಿಷಯವೇನು? ಎಂದು ಕೇಳುತ್ತ ಗಾರ್ಡ್ iಹಾಶಯ ಬಂದೇಬಿಟ್ಟ.

“ಸರಪಣಿ ಎಳೆದವರಾರು?” ಎಂದು ಕೇಳಿದ.

“ನಾನು’ ಎಂದರು ಜಿ.ಎನ್. ಬಿ

“ಏಕೆ? ಏನಾಯಿತು?’ ಗಾರ್ಡನ ಪ್ರಶ್ನೆ.

“ಕಾರಣ ಏನೂ ಇಲ್ಲ; ಸುಮ್ಮನೆ ಎಳೆದೆ’.

“ಓಹೋ ! ಹಾಗೋ, ಸರಿ; ದಂಡದ ಹಣ ತೆಗೆಯಿರಿ!

“ದಂಡ? ನಾನೇಕೆ ಕೊಡಬೇಕು?”

“ಸರಪಣಿಯನ್ನು ಸರಿಯಾಗಿ ಉಪಯೋಗಿಸದೆ ಎಳೆದುದಕ್ಕೆ ’ ಎಂದು ಸಿಟ್ಟಿನಿಂದ ಉತ್ತರಿಸಿದ ಗಾರ್ಡ್.

“ನಾನು ಸರಿಯಾಗಿ ಉಪಯೋಗಿಸಿಲ್ಲವೆ?” ಎಂದು ಕೇಳಿದರು ಜಿ.ಎನ್.ಬಿ.

“ಮೇಲೆ ಹಾಕಿದ ಬೋರ್ಡ ಕಾಣಿಸುವುದಿಲ್ಲವೆ? ಓದಲು ಬರುವುದಿಲ್ಲವೆ?

“ಬೋರ್ಡೂ ಕಾಣಿಸುತ್ತದೆ, ಓದಲೂ ಬರುತ್ತದೆ. ಬೋರ್ಡನ್ನು ಸರಿಯಾಗಿ ಓದಿದ ಬಳಿಕವೇ ಸರಪಣಿ ಎಳೆದಿದ್ದೇನೆ ” ಎಂದು ಶಾಂತವಾಗಿ ಉತ್ತರಿಸಿದರು ಜಿ.ಎನ್.ಬಿ.

“ಹಾಗೆಂದರೆ? ತಮಾಷೆ ಮಾಡುತ್ತಿದ್ದೀರೋ? ಗಾರ್ಡ್ ಗುಡುಗಿದ.

“ನೀವೇ ಬೇಕಾದರೆ ಓದಿಕೊಳ್ಳಿ, ಸರಿಯಾಗಿ ಓದಿ ಕೊಳ್ಳಿ., ’ರೈಲು ನಿಲ್ಲಿಸಲು ಸರಪಣಿಯನ್ನು ಎಳೆಯಿರಿ, ಸರಿಯಾಗಿ ಉಪಯೋಗಿಸದಿದ್ದರೆ ಜುಲ್ಮಾನೆ’ ಎಂದಿದೆ ಅಲ್ಲವೆ? ಸರಿಯಾದ ಉಪಯೋಗ ಎಂದರೇನು? ರೈಲು ನಿಲ್ಲಿಸುವುದಷ್ಟೆ? ನಾನು ಸರಿಯಾಗಿತೇ ಎಳೆದಿದ್ದೇನೆ, ರೈಲು ಸರಿಯಾಗಿಯೇ ನಿಂತಿದೆ ! ನಾನೇನಾದರೂ ಆ  ಸರಪಣಿಯ ಮೇಲೆ ಬಟ್ಟೆ ಒಣಗಿಸಿದ್ದೇನೆಯೇ? ಮತ್ತೇನಾದರೂ ಮಾಡಿದ್ದೇನೆಯೆ? ’ ಎಂದು ಕೇಳಿದರು ಜಿ.ಎನ್.ಬಿ.

ಸಿಟ್ಟುಗೊಂಡ ಗಾರ್ಡ್ ಮಹಾಶಯನಿಗೆ ಈ ವಾದ ಸರಣಿ ಕೇಳಿ ನಗದಿರಲಾಗಲಿಲ್ಲ. “ಹಾಗಲ್ಲ; ಏನಾದರೂ ಅನಿರೀಕ್ಷಿತವಾದ ಅಪಾಯ ಸಂಭವಿಸಿದರೆ, ಚಲಿಸುತ್ತಿರುವ ರೈಲಿನಿಂದ ಏನಾದರೂ ಬೆಲೆ ಬಾಳುವ ವಸ್ತು ಹೊರಗೆ ಬಿದ್ದರೆ, ಸರಪಣಿ ಎಳೆದು ರೈಲು ನಿಲ್ಲಿಸಬಹುದು ಎಂದು ಆ ಸೂಚನೆಯ ಅರ್ಥ. ಸಿಗರೇಟು ಸೇದುತ್ತಿದ್ದೆ, ಬೆಂಕಿ ಪಟ್ಟಿಗೆ ಬಿದ್ದು ಹೋಯಿತು ಎಂಬ ಕಾರಣಕ್ಕಾಗಿ ಸರಪಣಿ ಎಳೆದು ರೈಲು ನಿಲ್ಲಿಸುವಂತಿಲ್ಲ” ಎಂದು ಹೇಳಿ “ಓದಿದವರಂತೆ ಕಾಣಿಸುತ್ತೀರಿ ! ನೀವು ಯಾರು? ಎಂದು ಕೇಳಿದ.

ಜತೆಯಲ್ಲಿದ್ದವರು ಗಾರ್ಡ್ ಮಹಾಶಯರಿಗೆ ಜಿ.ಎನ್.ಬಿ. ಅವರ ಪರಿಚಯ ಮಾಡಿಸಿದರು. ಆತನಿಗೆ ಆಶ್ಚರ್ಯ ವಾಯಿತು. “ಓಹೋ ! ಸಂಗೀತಗಾರರಲ್ಲೂ ಈ ರೀತಿಯ ವಿನೋದಪ್ರವೃತ್ತಿ, ಚಟುವಟಿಕೆಗಳಿಂದ ತುಂಬಿದವರು, ಚೆನ್ನಾಗಿ ಓದಿಕೊಂಡವರು ಇದಾರೆಯೆ? ಎಂದ.

“ಏಕೆ ಹಾಗೆನ್ನತ್ತೀರಿ? ಸಂಗೀತಗಾರರೇನು ಮನುಷ್ಯರಲ್ಲವೇ?” ಚಾಟಿಯಿಂದ ಹೊಡೆದಂತೆ ಬಂತು ಜಿ,ಎನ್,ಬಿ. ಅವರ ಉತ್ತರ.

ಗಾರ್ಡ್ ಮಹಾಶಯ, “ವಿದ್ವಾಂಸರಿಗೆ ನಮಸ್ಕಾರ’ ಎಂದು ಹೇಳಿ ಹೊರಟುಹೋದ.

ಕರ್ತವ್ಯ ನಿಷ್ಠೆ

ಒಪ್ಪಿಕೊಂಡ ಕಾರ್ಯಕ್ರಮವನ್ನೂ ಜಿ.ಎನ್.ಬಿ. ಕೈಬಿಡುತ್ತಿರಲಿಲ್ಲ. ಎಷ್ಟೇ ಅಸೌಖ್ಯವಿದ್ದರೂ. ಅನಾನುಕೂಲ ವಿದ್ದರೂ ಅವರು ಅದನ್ನು ಪೂರೈಸಿ ಕೊಡುತ್ತಿದ್ದರು. ಒಮ್ಮೆ ಮುಂಬಯಿಯ ಷಣ್ಮುಖಾನಂದ ಸಭಾಭವನದಲ್ಲಿ ಜಿ.ಎನ್.ಬಿ. ಅವರ ಸಂಗೀತ ಕಚೇರಿ ಏರ್ಪಾಡಾಗಿತ್ತು. ಆದರೆ ಮುಂಬಯಿ ತಲಪುವಾಗ ಅವರಿಗೆ ಜ್ವರ ಆರಂಭವಾಗಿತ್ತು. ಮೊದಲಿನ ಎರಡು ಸಂಗೀತಕಚೇರಿಗಳಲ್ಲಿ ಭಾಗವಹಿಸಲಿದ್ದ ವಿದ್ವಾಂಸರು ಅನಿರೀಕ್ಷಿತ ಕಾರಣಗಳಿಂದ ಬರಲು ಸಾಧ್ಯವಿಲ್ಲವೆಂದು ತಿಳಿಸಿದರು. ಕಾರ್ಯನಿರ್ವಾಹಕರಿಗೆ ಏನು ಮಾಡ ಬೇಕೆಂಬುದೇ ತಿಳಿಯದಾಯಿತು. ಜತೆಗ ಮುಂಬಯಿ ತಲುಪಿದ್ದ ಜಿ.ಎನ್.ಬಿ. ಅವರಿಗೆ ಜ್ವರ ಬರುತ್ತಿದ್ದುದನ್ನು ಕಂಡು ವ್ಯವಸ್ಥಾಪಕರು ಮತ್ತೂ ಅಧೀರರಾದರು. ಈ ದಿನದ ಕಾರ್ಯಕ್ರಮವೂ ನಡೆಯುವ ಹಾಗಿಲ್ಲ ಎಂದು ಭಾವಿಸಿದರು. ಆದರೆ ಹಾಗಾಗಲಿಲ್ಲ. ಸಮಯಕ್ಕೆ ಸರಿಯಾಗಿ, ಜ್ವರವೇರಿದ್ದರೂ ಜಿ.ಎನ್.ಬಿ. ಸಭಾಭವನಕ್ಕೆ ಬಂದರು. ಹೆಚ್ಚಿಗೆ ಮಾತುಗಳಿಲ್ಲದೆ ನೇರವಾಗಿ ವೇದಿಕೆಗೆ ತೆರಳಿದರು. ಪಕ್ಕವಾದ್ಯ ನುಡಿಸಲಿದ್ದ ಪಿಟೀಲು ಚೌಡಯ್ಯ ಮತ್ತು ಮೃದಂಗ ಮಣಿ ಅಯ್ಯರ್ ಅವರಿಗೆ ಆಶ್ಚರ್ಯವಾಯಿತು. ತನಗೆ ಸೌಖ್ಯವಿಲ್ಲ ಎಂಬುದನ್ನು ಕಿಂಚಿತ್ತೂ ತೋರಿಸಿಕೊಳ್ಳದೇ ಕಚೇರಿಯನ್ನು ಆರಂಭಿಸಿಯೇ ಬಿಟ್ಟರು. ಸಭಾಸದರಿಗೆ ನಿರಾಶೆಯಾಗಲಿಲ್ಲ. ಸಂಗೀತಕಚೇರಿ ಯಾವೊಂದು ಲೋಪದೋಷಗಳೂ ಇಲ್ಲದೆ ಅದ್ಭುತವಾಗಿ ಸಾಗಿತು. ಶೋತೃಗಳು ನಾಲ್ಕು ಗಂಟೆಗಳ ಕಾಲ ಸಂಗೀತವನ್ನು ಮೈಮರೆತು ಕೇಳಿದರು.

ತಿರುವೈಯ್ಯಾರಿನಲ್ಲಿ

ತಂಜಾವೂರಿನ ಸಮೀಪದ ತಿರುವೈಯ್ಯಾರಿನಲ್ಲಿ ಪ್ರತಿವರ್ಷವೂ ತ್ಯಾಗರಾಜರ ಆರಾಧನಾ ಉತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ಕರ್ನಾಟಕ ಸಂಗೀತ ವಿದ್ವಾಂಸರಲ್ಲಿ ಹೆಚ್ಚಿನವರು ಆ ಮಹಾನುಭಾವರ ಪುಣ್ಯಾರಾಧನೆಯಲ್ಲಿ ಭಾಗವಹಿಸುವುದು ರೂಢಿ.  ಜಿ.ಎನ್.ಬಿ. ಅವರು ಸಾಮಾನ್ಯವಾಗಿ ಪ್ರತಿವರ್ಷವೂ ಈ ಸಂಗೀತ ಉತ್ಸವಕ್ಕೆ ಹೋಗುತ್ತಿದ್ದರು. ಅಲ್ಲಿ ಹಿರಿಯ ವಿದ್ವಾಂಸರು ಹಾಡುತ್ತಿರುವಾಗ ವಿಮಮ್ರರಾಗಿ ಕುಳಿತಿರು ತ್ತಿದ್ದರು. ಆರಿಯಕುಡಿ ರಾಮಾನುಜ ಅಯ್ಯಂಗಾರರಲ್ಲಿ ಜಿ.ಎನ್.ಬಿ. ಅವರಿಗೆ ಅಪೂರ್ವವಾದ ಭಕ್ತಿ ಗೌರವಗಳಿದ್ದವು. ಅವರು ಹಾಡುತ್ತಿದ್ದಾಗ ತಾವೇ ಹಿಂಬದಿಯಲ್ಲಿ ಕುಳಿತು ತಂಬೂರಿ ನುಡಿಸುತ್ತಿದ್ದರು. ಹಾಗೆಯೇ ಮುಸಿರಿ ಸುಬ್ರಹ್ಮಣ್ಯ ಅಯ್ಯರ್, ಮಹಾರಾಜಪುರಂ ವಿಶ್ವನಾಥ ಅಯ್ಯರ್, ಚಂಬೈ ವೈದ್ಯನಾಥ ಭಾಗವತರ್, ಮಧುರೆ ಮಣಿ ಅಯ್ಯರ್, ಚೌಡಯ್ಯ, ಪಾಲ್ಘಾಟ್ ಮಣಿ ಅಯ್ಯರ್ ಮೊದಲಾದ ವಿದ್ವಾಂಸರನ್ನು ಗೌರವದಿಂದ ಕಾಣುತ್ತಿದ್ದರು.

ತಿರುವೈಯ್ಯಾರಿನಲ್ಲಿ ತ್ಯಾಗರಾಜರ ಸಮಾಧಿಯ ಎದಿರು ಕುಳಿತು ಹಾಡುತ್ತಿದ್ದಾಗ ಜಿ.ಎನ್.ಬಿ. ಮೈ ಮರೆಯುತ್ತಿದ್ದರು. ಅಂತೆಯೇ ಅವರು ಹಾಡುವ ವೇಳೆಗೆ ಸರಿಯಾಗಿ ಅಪಾರ ಜನ ಸಂದಣಿಯೂ ಸೇರುತ್ತಿತ್ತು. ಅವರ ಭಾವಪೂರ್ಣವಾದ ಭಕ್ತಿ ತಲ್ಲೀನತೆಯ ಹಾಡುಗಾರಿಕೆ ಮತ್ತು ಸಂಗೀತದ ಸೊಗಸಿನಿಂದ ಹರ್ಷ ಪುಲಕಿತರಾದ ಸಭಾಸದರು ಕರತಾಡನ ಘೋಷದಿಂದ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು.

ಪ್ರಶಸ್ತಿಗಳು

ಜಿ.ಎನ್.ಬಿ. ಅವರು ಪ್ರಶಸ್ತಿಗಳನ್ನು ಅರಸಿಕೊಂಡು ಹೋಗಲಿಲ್ಲ; ಪ್ರಶಸ್ತಿಗಳೇ ಅವರನ್ನು ಅರಸಿಕೊಂಡು ಬಂದುವು. ಕಲಾವಿದನಿಗೆ ಮುಖ್ಯವಾಗಿ ಬೇಕಾದದು ರಸಿಕರ ಪ್ರಶಸ್ತಿ; ಅದು ಅವರಿಗೆ ತಮ್ಮ ಮೊದಲ ಸಂಗೀತ ಕಚೇರಿಯಲ್ಲೇ ಲಭಿಸಿತ್ತು.

೧೯೩೭ರಲ್ಲಿ ೨೭ ರ ಹರಯದಲ್ಲಿ ಜಿ.ಎನ್.ಬಿ. ಮದರಾಸು ಸಂಗೀತ ಅಕಾಡೆಮಿಯ ಸಂಗೀತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದರು.

೧೯೫೮ರಲ್ಲಿ ಜಿ.ಎನ್. ಬಾಲಸುಬ್ರಹ್ಮಣ್ಯಂ ಅವರು ಮದರಾಸು ಸಂಗೀತ ಅಕಾಡೆಮಿಯ ವಾರ್ಷಿಕ ಸಂಗೀತ ಸಮ್ಮೇಳನದ ಅಧ್ಯಕ್ಷರಾದರು. “ಸಂಗೀತ ಕಲಾನಿಧಿ’ ಎಂಬ ಮಹಾ ಗೌರವದ ಪ್ರಶಸ್ತಿ ಗಳಿಸಿದರು. ಸಂಗೀರ ಸಮ್ಮೇಳನದಲ್ಲಿ ಅವರ ಅಧ್ಯಕ್ಷ ಭಾಷಣ ಅನುಭವ ಮತ್ತು ವಿಚಾರಪೂರಿತ ವಿಷಯಗಳಿಂದ ತುಂಬಿತ್ತು. ಇದು ವಿದ್ವಜ್ಜನರಿಂದ ಹಾಗೂ ರಸಿಕರಿಂದ ಮನ್ನಣೆ ಪಡೆಯಿತು. ಅದೇ ವರ್ಷ ಅವರಿಗೆ ರಾಷ್ಟ್ರಾಧ್ಯಕ್ಷರ ಪ್ರಶಸ್ತಿಯೂ ಲಭಿಸಿತು.

೧೯೩೯ರಲ್ಲಿ ಮೈಸೂರಿನ ಅರಸರು ನಾಲ್ವಡಿ ಕೃಷ್ಣರಾಜ ಒಡೆಯರವರು ಬಾಲಸುಬ್ರಹ್ಮಣ್ಯಂ ಅವರನ್ನು ತಮ್ಮ ಆಸ್ಥಾನಕ್ಕೆ ಕರೆಯಿಸಿಕೊಂಡರು. ಎರಡು ಕಚೇರಿಗಳನ್ನು ಮಾಡಿ ಖಿಲ್ಲತ್ತುಗಳನ್ನು ಯಥೇಷ್ಟ ಸಂಭಾವನೆಯನ್ನು ಕೊಟ್ಟು ಗೌರವಿಸಿದರು. ಅದೇ ವರ್ಷ ತಿರುವಾಂಕೂರು ಸಂಸ್ಥಾನದ ಆಸ್ಥಾನ ಸಂಗೀತ ವಿದ್ವಾಂಸರಾಗಿ ಅವರು ಮಹಾರಾಜರಿಂದ ನಿಯುಕ್ತರಾದರು. ಕೇಂದ್ರ ಸರಕಾರವು ಅವರ ಸಾಮರ್ಥ್ಯವನ್ನು ಗಮನಿಸಿ. ೧೯೫೫ ರಲ್ಲಿ ಅವರನ್ನು ಮದರಾಸು ಬಾನುಲಿ ಕೇಂದ್ರದಲ್ಲಿ ಸಂಗೀತ ನಿರ್ದೇಶಕರನ್ನಾಗಿ ನಿಯಮಿಸಿತು. ಕೆಲವು ವರ್ಷಗಳ ಕಾಲ ಅಲ್ಲಿ ಅವರು ಈ ಜವಾಬ್ದಾರಿಯ ಹುದ್ದೆಯಲ್ಲಿದ್ದು ಸಂಗೀತ ಕಲೆಯ ಪ್ರಗತಿಗೆ ಬಹುವಾಗಿ ಶ್ರಮಿಸಿದರು. ಹಲವಾರು ಅರ್ಹ ಎಳೆಯ ಕಲಾವಿದರಿಗೆ ಅವರಿಂದ ಅಪಾರವಾದ ಪ್ರೋತ್ಸಾಹ ಲಭಿಸಿತು.

ಸಿನಿಮಾರಂಗ

ಹಿಂದಿನ ತಲೆಮಾರಿನ ಸಂಗೀತ ಕಲಾವಿದರಿಗೆ, ಅಂದು ಸ್ವಲ್ಪ ನವೀನ ಎನ್ನಿಸಿದ ಸಿನಿಮಾಕ್ಷೇತ್ರದ ಮೇಲೆ ಆಸಕ್ತಿಯಿರುತ್ತಿತ್ತು. ಚಂಬೈ ವೈದ್ಯನಾಥ ಭಾಗವತರು, ಚೌಡಯ್ಯ, ಮಣಿ ಅಯ್ಯರ್, ದೇವೇಂದ್ರಪ್ಪ ಮೊದಲಾದ ಮಹಾನ್ ಕಲಾವಿದರೂ ಈ ಕ್ಷೇತ್ರದ ಕರೆಗೆ ಓಗೊಟ್ಟಿದ್ದರು.  ಜಿ.ಎನ್.ಬಿ.

ಅವರೂ ಸಿನಿಮಾರಂಗದ ಕರೆಯನ್ನು ಕಡೆಗಣಿಸಲಿಲ್ಲ. ಕೆಲವು ತಮಿಳು ಚಿತ್ರಗಳಲ್ಲಿ ಅವರು ಅಭಿನಯಿಸಿದರು. ’ಶಕುಂತಲಾ’ ಉದಯನ ವಾಸದತ್ತಾ ’ ಮೊದಲಾದ ಕೆಲವು ಚಿತ್ರಗಳು ಅವರಿಗೆ ಗಾಯಕನಟನೆಂದು ಸಾಕಷ್ಟು ಪ್ರಸಿದ್ಧಿಯನ್ನು ತಂದು ಕೊಟ್ಟವು. ಆದರೆ ಅವರು ಸಿನಿಮಾರಂಗದಲ್ಲೇ ಮುಂದುವರಿಯಲು ಬಯಸದಿದ್ದುದು ಶಾಸ್ತ್ರೀಯ ಸಂಗೀತ ಕ್ಷೇತ್ರದ ಭಾಗ್ಯ ಎನ್ನಬೇಕು. ಬಹುಬೇಗನೇ ಅವರಿಗೆ ಸಿನಿಮಾದ ರಾಜಕೀಯ ಬೇಸರವನ್ನೂ ಜಿಗುಪ್ಸೆಯನ್ನೂ ಉಂಟು ಮಾಡಿತು. ಮುಂದೆ ಅವರು ಆ ರಂಗದಿಂದ ದೂರವೇ ಉಳಿದರು.

ಶಿಷ್ಯಸಂಪತ್ತು

ಜಿ.ಎನ್.ಬಿ. ಅವರಿಗೆ ಬಹುಮಂದಿ ಶಿಷ್ಯರಿರಲಿಲ್ಲ. ಇದಕ್ಕೆ ಕಾರಣ ಅವರ ಅನುಕರಣೆಗೆ ಸುಲಭವಾಗಿ ಎಟುಕದ, ಕ್ಲಿಷ್ಟವಾದ ಹಾಗೂ ನವೀನವಾದ ಶೈಲಿಯೂ ಕಾರಣವಾಗಿದ್ದಿರ ಬಹುದು. ಶಿಷ್ಯರಿಗೆ ಅವರು ಪ್ರೀತಿ ವಿಶ್ವಾಸಗಳಿಂದ ಪಾಠ ಹೇಳುತ್ತಿದ್ದರು. ಆದರೆ ಗುರುಮುಖದ ಪಾಠಕ್ಕಿಂತಲೂ ಶಿಷ್ಯನು ಸ್ವಂತ ಅಭ್ಯಾಸ, ಶ್ರದ್ಧೆಯಿಂದ ಒಳ್ಳೆಯ ಸಂಗೀತವನ್ನು ಕೇಳುವುದು ಇವುಗಳಿಂದ ಸಂಗೀತ ಪಾರಂಗತನಾಗಬೇಕು ಎಂಬುದು ಅವರ ಮತವಾಗಿತ್ತು.

“ಗುರುವು ನಿಮಗೆ ತೋರಿಸುವುದು ಸರಿಯಾದ ದಿಕ್ಕನ್ನು ಮಾತ್ರ. ಆ ದಿಕ್ಕಿನಲ್ಲಿ ನೀವು ನಡೆದರೆ ಗುರಿಯನ್ನು ಸಾಧಿಸುತ್ತೀರಿ ಎಂದು ಆತ ಹೇಳಬಹುದು. ಆದರೆ ಆ ದಿಕ್ಕಿನಲ್ಲಿ ನಡೆಯುವವರು ನೀವಲ್ಲದೆ ಗುರುಗಳಲ್ಲ ಎಂದು ನೆನಪಿಡಿ. ರಸ್ತೆಯಿಲ್ಲದಲ್ಲಿ ಹೊಸ ಮಾರ್ಗ ನಿರ್ಮಿಸಿಕೊಂಡು, ದಾರಿಯಿಲ್ಲದಲ್ಲಿ ಮುಳ್ಳು ಪೊದೆಗಳನ್ನು ಕಡಿದು ದಾರಿ ಮಾಡಿಕೊಂಡು, ಕತ್ತಲಾದಲ್ಲಿ ದೀವಿಗೆ ಹಿಡಿದುಕೊಂಡು, ಬಿಸಿಲಿನ ಬೇಗೆ ಹೆಚ್ಚಾದಲ್ಲಿ ನೆರಳನ್ನು ಅರಸಿಕೊಂಡು, ನೀರಡಿಕೆಯಾದರೆ ನೀರಿನ ಬುಗ್ಗೆ ಹುಡುಕಿಕೊಂಡು, ದಾರಿ ವೆಚ್ಚಕ್ಕೆ ಬುತ್ತಿ ಕಟ್ಟಿಕೊಂಡು ಸಾಗಬೇಕಾದವರು ನೀವು. ಹಾಗೆ ಗುರಿ ಸಾಧಿಸಿದಾಗ ಮಾತ್ರ ನಡೆದ ದಾರಿ ನಿಮ್ಮ ಶೋಧನೆಯಾಗುತ್ತೆ. ಗುರುವೂ ನಿಮ್ಮೊಂದಿಗೆ ಬರಬೇಕು, ದಾರಿ ಹುಡುಕುತ್ತ ತೊಳಲಾಡಬೇಕು ಎಂದು ನೀವು ಬಯಸಿದರೆ ಆ ದಾರಿ ಗುರುವಿನದಾಗುತ್ತದೆಯೇ ಹೊರತು ನಿಮ್ಮದಾಗುವುದಿಲ್ಲ. ಸಂಗೀತಕಲಾ ಸಂಪತ್ತಿನ್ಲಲ್ಲಿ ಹೊಸ ಸಾಧ್ಯತೆಗಳು ಅಪಾರ. ಅವುಗಳಲ್ಲಿ ಕೆಲವನ್ನಾದರೂ ನೀವು ಸಾಧಿಸಿಕೊಳ್ಳಬೇಕು. ಅಂತಹ ಸಾಧನೆಗಳು ನಿಮ್ಮವು ಎಂದು ಹೇಳುವ ಸ್ಥಿತಿಗೆ ನೀವು ಬರಬೇಕು’ ಎನ್ನುತ್ತಿದ್ದವು.

ಹಾಗೆಯೇ “ಗುರುವು ಆಗಾಧವಾದ ಸಮುದ್ರದಂತೆ ನಿಮ್ಮೆದುರು ಕಾಣಿಸಿ ನಿಮ್ಮನ್ನು ನಿಬ್ಬೆರಗಾಗಿಸಬಹುದು. ಆದರೆ ಬರಿಯ ಬೆರಗು ಮೆಚ್ಚುಗೆಗಳಿಂದ ನಿಮಗೇನು ಲಭಿಸುವುದಿಲ್ಲ. ನೀವು ಸಮುದ್ರದಿಂದ ನೀರು ತರಬೇಕಾದರೆ ನಿಮ್ಮಲ್ಲಿ ತಕ್ಕಷ್ಟು ದೊಡ್ಡ ಪಾತ್ರೆಯೂ ಬೇಕು; ನೀರು ತುಂಬಿದ ಪಾತ್ರೆ ಹೊರಲು ಶಕ್ತಿಯೂ ಬೇಕು ಎಂಬುದು ಮುಖ್ಯ. ನೀವು ಕೊಂಡುಹೋದ ಪಾತ್ರೆಯ ಮಾನದಷ್ಟು ಮಾತ್ರ ನಿಮಗೆ ನೀರು ತರಲು ಸಾಧ್ಯ ಎಂಬುದನ್ನು ನೆನಪಿಡಬೇಕು” ಎಂದು ಹೇಳುತ್ತಿದ್ದರು.

ಜಿ.ಎನ್.ಬಿ. ಅವರ ಶಿಷ್ಯರಲ್ಲಿ ಎಸ್.ಬಾಲಸುಬ್ರಹ್ಮಣ್ಯಂ ದಿವಂಗತ ಟಿ.ಆರ್. ಬಾಲಸುಬ್ರಹ್ಮಣ್ಯಂ, ಶ್ರೀಮತಿ ಎಂ. ಎಲ್. ವಸಂತಕುಮಾರಿ, ಶ್ರೀಕಲ್ಯಾಣ ರಾಮನ್.  ವಿ. ರಾಮಚಂದ್ರನ್ ಮೊದಲಾದವರು ಸಂಗೀತಕ್ಷೇತ್ರದಲ್ಲಿ ಹೆಸರು ಗಳಿಸಿ ಪ್ರಸಿದ್ಧರಾದವರು.  ೧೯೬೫ರಲ್ಲಿ ತಿರುವಾಂಕೂರಿನ ಸಂಗೀತ ಕಲಾಶಾಲೆಯ ಪ್ರಾಂಶುಪಾಲರಾಗಿ ಕಾರ‍್ಯಕೈಗೊಂಡ ಅವರು ಇನ್ನಷ್ಟು ಕಾನ ಬದುಕಿ ಉಳಿದು ಅಲ್ಲಿಯೇ ಪ್ರವಚನ ಕಾರ್ಯ ಮುಂದುವರೆಸಿದ್ದರೆ, ಬಹುಶಃ ಅವರ ನಿಪುಣ ಮಾರ್ಗದರ್ಶನಲ್ಲಿ ಹಲವಾರು ಎಳೆಯ ಕಲಾವಿದರು ಸಮರ್ಥರಾಗಿ, ಪ್ರಸಿದ್ಧರಾಗಿರುತ್ತಿದ್ದರು. ಪರಿಣಾಮವಾಗಿ ಸಂಗೀತಕ್ಷೇತ್ರದಲ್ಲಿ ಒಂದು ಹೊಸ ಪಂಥವೇ ಬೆಳೆದು ಬರುತ್ತಿತ್ತೊ ಏನೋ !

ವಾಗ್ಗೇಯಕಾರ

ಸಂಗೀತದಲ್ಲಿ ಕೃತಿರಚನೆ ಮಾಡಿದವರನ್ನು ’ವಾಗ್ಗೇಯಕಾರ’ ಎನ್ನುತ್ತಾರೆ. ಕೃತಿಗಳ ಸಾಹಿತ್ಯ ಹಾಗೂ ಸಂಗೀತ ಎಂದರೆ ವರ್ಣಮಟ್ಟು ಎರಡೂ ಆತನಿಂದ ರಚನೆಯಾಗಿರಬೇಕು. ಕೆಲವು ವಾಗ್ಗೇಯಕಾರರು ಸಾಹಿತ್ಯ ರಚನೆಯಲ್ಲಿ ಪ್ರವೀಣರಾದರೆ, ಇನ್ನು ಕೆಲವರು ಸಂಗೀತ ರಚನೆಯಲ್ಲಿ ಪ್ರತಿಭಾವಂತರಾಗಿರುತ್ತಾರೆ. ಜಿ.ಎನ್.ಬಿ.ಅವರು ಸಂಗೀತ-ಸಾಹಿತ್ಯಗಳೆರಡರ ರಚನೆಯಲ್ಲೂ ಅಸಾಮಾನ್ಯ ಪ್ರಾವೀಣ್ಯ ಪಡೆದವರು. ಸಾಹಿತ್ಯವು ಛಂದೋ ನಿಯಮಗಳಿಗೆ ಅನುಸಾರವಾಗಿ ಯತಿ, ಪ್ರಾಸ, ಯಮಕಗಳೇ ಮೊದಲಾದ ಅಂಗಗಳಿಂದ ಶೋಭಾಯಮಾನವಾಗಿದ್ದರೆ ಸಂಗೀತದ ಬಂಧವು ಕೃತಿಯ ರಾಗದ ಜೀವಸತ್ವಗಳನ್ನೆಲ್ಲ ಕೂಡಿಕೊಂಡು, ಸ್ವರಾಕ್ಷರ ಚಿಟ್ಟೆ ಸ್ವರಗಳೇ ಮೊದಲಾದ ಅಲಂಕಾರಿಕ ಅಂಗಗಳಿಂದ ತುಂಬಿಕೊಂಡಿದ್ದು, ಕಲಾತ್ಮಕವಾಗಿ ಕಂಗೊಳಿ ಸುತ್ತದೆ. ಸಂಗೀತದ ಲಕ್ಷ್ಯ ಲಕ್ಷಣಗಳೆರಡರಲ್ಲೂ ಗಾಢವಾದ ಪಾಂಡಿತ್ಯವಿದ್ದವನಿಂದ ಮಾತ್ರ ಇಂತಹ ಸುಂದರ ಕೃತಿಗಳ ರಚನೆ ಸಾಧ್ಯ ಎಂಬುದನ್ನು ಅವರ ಕೃತಿಗಳು ತೋರಿಸಿಕೊಟ್ಟಿವೆ.

ಮೋಹನ ರಾಗದ ‘ಸದಾಪಾಲಯ’ ಕಾನಡಾ ರಾಗದ ‘ಪರಾಮುಖ ಮೇಲನಮ್ಮ’, ರಂಜನಿ ರಾಗದ ‘ರಂಜನೀ ನಿರಂಜನೀ’ ಭೈರವಿ ರಾಗದ “ಗತಿವೇರೆ’ ಮೊದಲಾದವು ಅವರ ಕೆಲವು ಉತ್ತಮ ರಚನೆಗಳು. ಅವರ ಹೆಚ್ಚಿನ ರಚನೆಗಳೆಲ್ಲ ದೇವೀಸ್ತುತಿಗಳು. ‘ಶಿವಶಕ್ತಿ’ ಮತ್ತು ’ಅಮೃತ ಬೇಹಾಗ್’ ಎಂಬೆರಡು ರಾಗಗಳನ್ನು ಜಿ.ಎನ್.ಬಿ. ಅವರು ರೂಪಿಸಿದರು. ಅವುಗಳಲ್ಲಿ ಎರಡು ಕೃತಿಗಳನ್ನು ರಚಿಸಿ ಅವುಗಳ ಲಕ್ಷಣಗಳನ್ನು ಖಚಿತಗೊಳಿಸಿದರು. ’ ಶ್ರೀ ಚಕ್ರರಾಜ ನಿಲಯೇ’ ಮತ್ತು ‘ಕಮಲಚರಣೇ’ ಎಂಬುವು ಆ ರಾಗಗಳಲ್ಲಿ ಅವರ ಸುಂದರ ರಚನೆಗಳು.

ಜಿ.ಎನ್.ಬಿ. ಅವರು ತಮ್ಮ ರಚನೆಗಳನ್ನು ತಾವೇ ಎಂದೂ ಹಾಡುತ್ತಿರಲಿಲ್ಲ. “ಅದೇಕೆ ಹಾಗೆ?’ ಎಂದು ಕೇಳಿದಾಗ “ಸ್ವಂತ ರಚನೆಗಳನ್ನು ನಾವೇ ಹಾಡಿ ತೋರಿಸಿ ಇತರರು ಮೆಚ್ಚಬೇಕು ಎಂದು ಬಯಸುವುದು ಸಂಗೀತಗಾರನ ಅಹಂಭಾವದ ಪರಮಾವಧಿಯನ್ನು ತೋರಿಸುತ್ತದೆ. ನಾನು ಕೆಲವು ಕೃತಿಗಳನ್ನು, ನನಗೆ ಸರಿಕಂಡಂತೆ ರಚಿಸಿರಬಹುದು. ಅವು ಕೇವಲ ನನ್ನ ಸಂತೋಷಕ್ಕಾಗಿ ಮಾಡಿದ ರಚನೆಗಳೇ ಹೊರತು, ನನ್ನ ಶ್ರೋತೃಗಳ ಮೇಲೆ ಹೊರಿಸುವ ಸಲುವಾಗಿ ಮಾಡಿದವುಗಳಲ್ಲ. ನನ್ನ ಶಿಷ್ಯರು, ಆತ್ಮೀಯರು ಅವುಗಳನ್ನು ಸಮಂಜಸವಾಗಿವೆ ಎಂದು ತಿಳಿದರೆ ಹಾಡಲಿ, ನನ್ನ ಕೃತಿಗಳು ಕಾಲಗತಿಯನ್ನು ಮೀರಿ ನಿಂತರೆ ಮುಂದೆ ಒಂದು ದಿನ ಸಂಗೀತ ಮಹಾಸಾಗರದಲ್ಲಿ ಕುಣಿಯುತ್ತಿರುವ ಸಣ್ಣ ಅಲೆಗಳಾಗಿ ಉಳಿಯಲಿ, ಇಲ್ಲವಾದರೆ ಮಹಾಅಲೆಗಳ ಅಘಾತದಿಂದ ತೊಡೆದುಹೋಗಲಿ, ನಾನೆಂದೂ ನನ್ನ ಕೃತಿಗಳನ್ನು ಒತ್ತಾಯದ ಬಳಕೆಗೆ ತರಲು ಯತ್ನಿಸಲಾರೆ’ ಎನ್ನುತ್ತಿದ್ದರು.

ಸಾಮಾನ್ಯವಾಗಿ ಕರ್ನಾಟಕ ಸಂಗೀತ ವಿದ್ವಾಂಸರಿಗೆ ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಆಸಕ್ತಿ ಇರುವುದಿಲ್ಲ ಈ ಮಾತಿಗೆ ಜಿ.ಎನ್.ಬಿ. ಹೊರತಾಗಿದ್ದರು. ಹಿಂದೂಸ್ತಾನಿ ಸಂಗೀತವನ್ನು ಅವರು ಆಸಕ್ತಿಯಿಂದ ಕೇಳುತ್ತಿದ್ದರು. ರಾಗ ವಿಸ್ತಾರದಲ್ಲಿನ ವಿಲಂಬ ಹಾಗೂ ದ್ರುತಗತಿಗಳು, ಶ್ರುತಿಬದ್ಧವಾದ ವಿಶ್ರಾಂತಿಯುತ ನಿರೂಪಣೆ. ಒಂದೊಂದೇ ಸ್ವರ ಸ್ಥಾನಗಳಲ್ಲಿ ವಿರಾಮವಾಗಿ ವಿಹರಿಸುವ ರೀತಿ, ಇವುಗಳನ್ನೆಲ್ಲ ಅವರು ಬಹುವಗಿ ಮೆಚ್ಚಿಕೊಂಡಿದ್ದರು. ತಾವು ಮೆಚ್ಚಿಕೊಂಡ ಅಂಶಗಳನ್ನು ಕರ್ನಾಟಕ ಸಂಗೀತ ಪದ್ಧತಿಗೆ ಅದರ ಶೈಲಿ ಕೆಡದಂತೆ ಅಳವಡಿಸುವುದರಲ್ಲಿ ಅವರು ಯಶಸ್ವಿಗಳಾಗಿದ್ದರು ಎಂಬುದಕ್ಕೆ ಅವರ ಕೃತಿಗಳೇ ಉದಾಹರಣೆಗಳಾಗಿವೆ.

ಕೊನೆಯ ದಿನಗಳು

ಜಿ.ಎನ್. ಬಾಲಸುಬ್ರಹಣ್ಯಂ ಅವರದು ಅಕಾಲಿಕ ನಿಧನ. ವಿಧಿವಶರಾದಾಗ ಅವರಿಗೆ ಕೇವಲ ೫೫ ವರ್ಷಗಳು. ಇಪ್ಪತ್ತೈದು ವರ್ಷಗಳ ಕಾಲ ಸಂಗೀತ ಸಾಮ್ರಾಜ್ಯದ ದೊರೆಯಂತೆ ವಿರಾಜಿಸಿದ ಅವರು ಅಷ್ಟು ಬೇಗನೇ ಇಹವನ್ನು ತೊರೆದಾರು ಎಂದು ಯಾರು ಭಾವಿಸಿರಲಿಲ್ಲ.

ಅವರ ಹಣಕಾಸಿನ ಸ್ಥಿತಿ ತೊಂದರೆ ಯದಾಗಿರಲಿಲ್ಲ. ಸಂಗೀತ ಕಚೇರಿಗಳಿಂದ ಸಾಕಷ್ಟು ವರಮಾನ ಬರುತ್ತಿತ್ತು. ಅಲ್ಲದೆ, ಪ್ರಾಂಶುಪಾಲ ಹುದ್ದೆಯ ವೇತನವೂ ತೃಪ್ತಿಕರವಾಗಿತ್ತು.

ಜಿ.ಎನ್.ಬಿ.ಅವರಿಗೆ ಅನುಕೂಲೆಯಾದ ಪತ್ನಿ ಮತ್ತು ಏಳು ಮಂದಿ ಮಕ್ಕಳಿದ್ದರು. ನಾಲ್ವರು ಗಂಡು ಮಕ್ಕಳು, ಮೂರು ಹೆಣ್ಣು ಮಕ್ಕಳು. ಈ ಮಕ್ಕಳಲ್ಲಿ ಯಾರೂ ವೃತ್ತಿಯಾಗಿ ಸಂಗೀತವನ್ನು ಆರಿಸಿಕೊಳ್ಳಲಿಲ್ಲ.

ಸ್ವಾತಿ ತಿರುನಾಳ್ ಸಂಗೀತ ಕಲಾಶಾಲೆಯಲ್ಲಿ ಪ್ರಾಂಶುಪಾಲತ್ವದ ದೆಸೆಯಿಂದಾಗಿ ಅವರು ೧೯೬೪ರಲ್ಲಿ ತಿರುವಾಂಕೂರಿಗೆ ಬಂದು ನೆಲೆಸಿದರು. ಅವರನ್ನು ಕೆಲವು ಕಾಲದಿಂದ ಕರುಳಿನ ವ್ರಣಬಾಧೆ ಪೀಡಿಸುತ್ತಿತ್ತು. ಅದೇ ಉಲ್ಬಣವಾಗಿ ಕೊನೆಗೆ ತಿರುವಾಂಕೂರು ಮಿಷನ್ ಆಸ್ಪತ್ರೆಗೆ ಸೇರಬೇಕಾಯಿತು. ಕಾಯಿಲೆ, ದಿನದಿಂದ ದಿನಕ್ಕೆ ವಿಷಮ ವಾಗುತ್ತ ಹೋಯಿತು. ಒಂದು ತಿಂಗಳಲ್ಲಿ ಅವರ ಸುದೃಢ ಶರೀರ ಜರ್ಝರಿತವಾಯಿತು. ಕೊನೆಯ ಗಳಿಗೆಯವರೆಗೂ ಪ್ರಜ್ಞೆ ಉಳಿದಿದ್ದು. ಆಪ್ತರೊಡನೆ, ಶಿಷ್ಯರೊಡನೆ, ಕಾಣಲು ಬರುತ್ತಿದ್ದ ಹಿರಿಯ-ಕಿರಿಯ ವಿದ್ವಾಂಸರೊಡನೆ ನಗುನಗುತ್ತಾ ಮಾತಾನಾಡುತ್ತಿದ್ದರು. ೧೯೬೫ನೇ ಮೇ ೧ ರಂದು ಜಿ.ಎನ್.ಬಿ. ಅವರು ತಮ್ಮ ಕೊನೆಯುಸಿರೆಳೆದರು.

ಕರ್ನಾಟಕ ಸಂಗೀತದ ಧ್ರುವತಾರೆಯೊಂದು ಅಕಾಲದಲ್ಲಿ ಅಸ್ತಂಗತವಾಯಿತು. ಸಂಗೀತಕ್ಷೇತ್ರ ತುಂಬ ಲಾರದ ಬಡತನವನ್ನು ಹೊಂದಿತು!