ತಬಲಾ ವಾದ್ಯದಲ್ಲಿ ಅಪಾರ ಸಾಧನೆಗೈದು, ಮೂರುವರೆ ದಶಕಗಳಿಗೂ ಮಿಕ್ಕಿ ಆಕಾಶವಾಣಿ ನಿಲಯದ ತಬಲಾ ಕಲಾವಿದರಾಗಿ ಸೇವೆ ಸಲ್ಲಿಸಿ, ಹೆಸರಾಂತ ಸಂಗೀತಗಾರರಿಗೆ ಸಾಥ್‌ ನೀಡಿ, ಸೋಲೊದಲ್ಲೂ ವಿಶೇಷ ಪರಿಣತಿ ಪಡೆದ ಶ್ರೀ ಜಿ.ಎನ್‌. ಪರ್ವತೀಕರ್. ಅವರು ದೇಶದ ಉತ್ತಮ ತಬಲಾ ವಾದಕರಲ್ಲೊಬ್ಬರು.

ಗಣಪತ್‌ ನೀಲಕಂಠ ಪರ್ವತೀಕರ್ ಅವರು ಜನಿಸಿದ್ದು ಗೋವಾ ರಾಜ್ಯದ ಪರ್ವತ ಎಂಬ ಗ್ರಾಮದಲ್ಲಿ: ೧೯೨೮ರ ಸೆಪ್ಟೆಂಬರ‍ ೧೭ ರಂದು. ಬಾಲ್ಯದಿಂದಲೇ ತಬಲಾ ವಾದ್ಯದ ಬಗ್ಗೆ ವಿಶೇಷ ಆಸಕ್ತಿ ತಳೆದ ಅವರು ತಮ್ಮ ೧೦ನೇ ವಯಸ್ಸಿನಲ್ಲಿ ಲಯಭಾಸ್ಕರ ಎಂದೇ ಖ್ಯಾತ ನಾಮರಾಗಿರುವ ಪಂ. ಕಾಪುರ ಮಾಮಾ ಪರ್ವತೀಕರ್ ಅವರಲ್ಲಿ ೫ ವರ್ಷ, ಪುಣೆಯ ಮೆಹಬೂಬಖಾನ್‌ ಮಿರಜಕರ ಅವರಲ್ಲಿ ೩ ವರ್ಷ ನಂತರ ಹುಬ್ಬಳ್ಳಿಯ ಎಸ್‌. ವಾಯ್‌. ನಾಗ್ವೇಕರ ಅವರಲ್ಲಿ ೧೫ ವರ್ಷ ನಿರಂತರ ತಬಲಾ ಅಧ್ಯಯನ ಮಾಡಿದ ಅವರು ಪ್ರಬುದ್ಧ ತಬಲಾ ವಾದಕರೆನಿಸಿದರು.

ಧಾರವಾಡ ಆಕಾಶವಾಣಿ ನಿಲಯದ ತಬಲಾ ವಾದಕರಾಗಿ ೩೮ ವರ್ಷಗಳ ಕಾಲ (೧೯೫೦-೧೯೮೮) ಸೇವೆ ಸಲ್ಲಿಸಿ ನಿವೃತ್ತರಾಗಿ ಶಿಷ್ಯರಿಗೆ ತಬಲಾ ಶಿಕ್ಷಣ ನೀಡುತ್ತಿದ್ದಾರೆ. ಆಕಾಶವಾಣಿಯ ‘ಎ’ ಗ್ರೇಡ್‌ ತಬಲಾ ಕಲಾವಿದರಾಗಿರುವ  ಅವರು ಹಿಂದುಸ್ಥಾನಿ ಸಂಗೀತದ ಖ್ಯಾತನಾಮರಾದ ಮಲ್ಲಿಕಾರ್ಜುನ ಮನಸೂರ, ಗಜಾನನರಾವ ಜೋಶಿ, ರಹಮಾನಮಾನ್‌, ಎಲಾಯತ ಹುಸೇನಖಾನ್‌, ಕಿಶೋರಿ ಅಮೋನ್‌ಕರ, ಹೀರಾಬಾಯಿ ಬಡೋದೇಕರ, ಬೇಗಮ್‌ ಅಖ್ತರ್, ಭೀಮಸೇನ ಜೋಶಿ ಮುಂತಾದ ಸಂಗೀತ ದಿಗ್ಗಜರಿಗೆ ತಬಲಾ ಸಾಥ್‌ ನೀಡಿದ್ದಾರೆ. ಕ್ಲಿಷ್ಟ ತಾಳಗಳ ನಿರೂಪಣೆಯಲ್ಲಿ ಅವರದು ವಿಶೇಷ ಪರಿಣತಿ. ದಶತಾಲಗಳ ಕುರಿತು ಅವರು ಬರೆದ ಸಂಗೀತ ಪುಸ್ತಕ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯ ಪ್ರಕಟಿಸಿದೆ. ಅವರು ಉತ್ತಮ ಸ್ವರ ಸಂಯೋಜಕರೂ ಆಗಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ಮಹಾ ವಿದ್ಯಾಲಯದಲ್ಲಿ ಕೆಲಕಾಲ ಗೌರ‍ವ ತಬಲಾ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರಿಗೆ ಕರ್ನಾಟಕ ನೃತ್ಯ ಅಕಾಡೆಮಿ “ಕರ್ನಾಟಕ ಕಲಾ ತಿಲಕ” (೧೯೯೩-೯೪) ಎಂಬ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.