ಕುವೆಂಪು ಪರಂಪರೆಯ ಉತ್ತರಾಧಿಕಾರಿಯೆನಿಸಿರುವ ಜಿಎಸ್ಸೆಸ್, ಕವಿಯಾಗಿ, ಕಾವ್ಯ ಮೀಮಾಂಸಕರಾಗಿ, ಅಧ್ಯಾಪಕರಾಗಿ ಹಾಗೂ ಸಾಹಿತ್ಯ ಆಡಳಿತಗಾರರಾಗಿ ಕನ್ನಡಿಗರಲ್ಲಿ ಸಾಹಿತ್ಯ – ಸಂಸ್ಕೃತಿಗಳ ಹೊಸ ರುಚಿ – ಅಭಿರುಚಿಗಳನ್ನು ಬೆಳೆಸಿದವರು. ಪಂಪ ಪ್ರಶಸ್ತಿ ವಿಜೇತರು. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು. ನವೆಂಬರ್ ೧,೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು. ಸುಮಾರು ಐದೂವರೆ ದಶಕಗಳಿಂದ ಕಾವ್ಯ ಕೃಷಿ ಮಾಡುತ್ತಿರುವ ಶಿವರುದ್ರಪ್ಪ,ಕವಿ ಮಾತ್ರವಲ್ಲ,ಬರಹಗಾರ,ವಿಮರ್ಶಕ,ವಿಶ್ಲೇಷಕ ಹಾಗೂ ನವೋದಯ ಮತ್ತು ನವ್ಯ ಪ್ರಕಾರಗಳೆರಡರಲ್ಲೂ ಕಾವ್ಯ ರಚನೆ ಮಾಡಿರುವ ಸಮರ್ಥರು.
ಡಾ.ಜಿ.ಎಸ್.ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಫೆಬ್ರುವರಿ ೭,೧೯೨೬ ರಂದು ಜನಿಸಿದರು. ತಂದೆ ಶಾಲಾ ಉಪಾಧ್ಯಾಯರು. ಪ್ರಾರಂಭದಲ್ಲಿ ಶಿಕಾರಿಪುರ ಹಾಗೂ ಹೊನ್ನಾಳಿ ಯಲ್ಲಿ ಮುಂದುವರಿದ ವ್ಯಾಸಂಗ ನಂತರ ಮೈಸೂರಿನಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಆನರ್ಸ್ (೧೯೪೯); ಎಂ.ಎ. (೧೯೫೩) ಪ್ರಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು. ಕುವೆಂಪುರವರ ಮೆಚ್ಚಿನ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು. ೧೯೬೫ರಲ್ಲಿ ತಮ್ಮ ಗುರುಗಳಾದ ಕುವೆಂಪುರವರ ಮಾರ್ಗದರ್ಶನದಲ್ಲಿ ಬರೆದ ‘ಸೌಂದರ್ಯ ಸಮೀಕ್ಷೆ’ ಎಂಬ ಗ್ರಂಥಕ್ಕೆ ಪಿಹೆಚ್‌ಡಿ ಪದವಿ ಪಡೆದರು.ತಾವು ಓದಿದ ಮೈಸೂರು ವಿಶ್ವವಿದ್ಯಾಲಯದಲ್ಲೇ ೧೯೪೯ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು ೧೯೬೩ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ಹೋಗಿ ೧೯೬೬ರ ವರೆವಿಗೂ ಅಲ್ಲಿ ಸೇವೆ ಸಲ್ಲಿಸಿದರು. ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ ೧೯೮೭ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು.ಈ ಅವಧಿಯಲ್ಲಿ ಶ್ರೀಯುತರು ಆಯೋಜಿಸಿದ ವಿಚಾರ ಸಂಕಿರಣಗಳು, ಸಾಹಿತ್ಯಕ ಕಾರ್ಯಚಟುವಟಿಕೆಗಳು ಅನುಕರಣೀಯವೆನಿಸಿ ಇವರ ವಿದ್ವತ್ಪ್ರತಿಭೆಯನ್ನು ಪ್ರಜ್ವಲಿಸುವಂತೆ ಮಾಡಿದವು. ಇವರು ಪ್ರಧಾನ ಸಂಪಾದಕರಾಗಿ ಸಾಹಿತ್ಯ ವಾರ್ಷಿಕದ ಹದಿನಾಲ್ಕು ಉದ್ಗ್ರಂಥ ರೂಪದ ಸಂಪುಟಗಳನ್ನು ಹೊರತಂದರು. ನಿವೃತ್ತಿಯ ನಂತರ ಸೋವಿಯತ್ ರಷ್ಯಾ, ಯುಎಸ್ಎ, ಇಂಗ್ಲೆಂಡ್, ಥಾಯ್ ಲ್ಯಾಂಡ್ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿದರಲ್ಲದೆ ಅಲ್ಲಿನ ಹಲವಾರು ವಿಶ್ವವಿದ್ಯಾನಿಲಯ ಹಾಗೂ ಸಂಘಸಂಸ್ಠೆಗಳಲ್ಲಿ ಉಪನ್ಯಾಸಗಳನ್ನು ನೀಡಿ ಗೌರವ ಗಳಿಸಿಕೊಂಡರು. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದು ಆ ಅವಧಿಯಲ್ಲಿ ಭಾರತೀಯ ಸಾಹಿತ್ಯ ಸಮೀಕ್ಷೆ ಯ ಸಂಪುಟ “ಸಾಲುದೀಪಗಳು” ಹೊರತಂದು ಮೆಚ್ಚುಗೆಗೆ ಪಾತ್ರರಾದರು.
ಇವರು ರಚಿಸಿದ ಜನಪ್ರಿಯ ಕೃತಿಗಳೆಂದರೆ “ಸಾಮಗಾನ”, “ಚೆಲುವು-ಒಲವು”,”ತೀರ್ಥವಾಣಿ”,”ಕಾರ್ತೀಕ”,”ಅನಾವರಣ”,”ತೆರೆದ ದಾರಿ”,”ನನ್ನ ನಿನ್ನ ನಡುವೆ”,”ದೀಪದ ಹೆಜ್ಜೆ” ಮುಂತಾದವು. ಜಿ.ಎಸ್. ಶಿವರುದ್ರಪ್ಪನವರು ಅನೇಕ ಭಾವಗೀತೆಗಳನ್ನೂ ರಚಿಸಿದ್ದು,’ಉಡುಗಣ ವೇಷ್ಟಿತ’, ‘ಎದೆ ತುಂಬಿ ಹಾಡಿದೆನು ಅಂದು ನಾನು’, ‘ಹಾಡು ಹಳೆಯದಾದರೇನು? ಭಾವ ನವನವೀನ’, ‘ಎಲ್ಲೋ ಹುಡುಕಿದೆ ಇಲ್ಲದ ದೇವರ’, ‘ವೇದಾಂತಿ ಹೇಳಿದನು’ ಮುಂತಾದವು ಅವರ ಅತ್ಯಂತ ಜನಪ್ರಿಯವಾಗಿರುವ ಭಾವಗೀತೆಗಳಾಗಿವೆ. ಶಿವರುದ್ರಪ್ಪನವರ ಪ್ರಥಮ ಒಲವು ಕವಿತೆ,ನಂತರ ಸಾಹಿತ್ಯಿಕ ವಿಮರ್ಶೆ. “ಕರ್ಮಯೋಗಿ” ಇವರು ರಚಿಸಿದ ಕಾದಂಬರಿ. “ವಿಮರ್ಶೆಯ ಪೂರ್ವ ಪಶ್ಚಿಮ”,”ಸೌಂದರ್ಯ ಸಮೀಕ್ಷೆ”,”ಕಾವ್ಯಾರ್ಥಚಿಂತನ”, ಪರಿಶೀಲನೆ”,”ಗತಿಬಿಂಬ” ಇವು ಅವರ ವಿಮರ್ಶಾ ಗಂಥಗಳು. ಅವರ ಗದ್ಯ ಕೃತಿ “ಕಾವ್ಯಾರ್ಥ ಚಿಂತನ” ಜಿ.ಎಸ್.ಎಸ್ ಅವರಿಗೆ ೧೯೮೪ರಲ್ಲಿ ‘ಕೇಂದ್ರ ಸಾಹಿತ್ಯ ಅಕಾಡೆಮಿ’ಯ ಪ್ರಶಸ್ತಿ ತಂದುಕೊಟ್ಟಿತು. ಸುವರ್ಣ ಕರ್ನಾಟಕ ವರ್ಷಾಚರಣೆಯ ಸವಿನೆನಪಿನಲ್ಲಿ ಕರ್ನಾಟಕ ಸರ್ಕಾರವು ೨೦೦೬ ನೇ ಸಾಲಿನಲ್ಲಿ “ರಾಷ್ಟ್ರಕವಿ” ಪ್ರಶಸ್ತಿಯನ್ನು ನೀಡಿ ಶ್ರೀಯುತರನ್ನು ಗೌರವಿಸಿದೆ.
ಪ್ರಶಸ್ತಿ / ಪುರಸ್ಕಾರಗಳು
ಕೇಂದ್ರ ಸಾಹಿತ್ಯ ಅಕಾಡೆಮಿ-೧೯೮೪
ಪಂಪ ಪ್ರಶಸ್ತಿ
ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ-೧೯೭೩
ದಾವಣಗೆರೆಯಲ್ಲಿ ನಡೆದ ೬೧ನೇ ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ
ರಾಷ್ಟ್ರಕವಿ ಪುರಸ್ಕಾರ-೨೦೦೬
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ೧೯೮೨
ನಾಡೋಜ ಕನ್ನಡ ವಿಶ್ವವಿದ್ಯಾಲಯ
ಗೌರವ ಡಾಕ್ಟರೇಟ್ : ಬೆಂಗಳೂರು ವಿ.ವಿ. ಮತ್ತು ಕುವೆಂಪು ವಿ.ವಿ.
“ರಾಷ್ಟ್ರಕವಿ” ಪ್ರಶಸ್ತಿ