ಕರ್ನಾಟಕದ ಹಿರಿಯ ತಲೆಮಾರಿನ ತಬಲಾ ವಾದಕರಲ್ಲೊಬ್ಬರಾಗಿರುವ ಪಂ. ಜಿ.ಎಸ್‌. ಹಿರೇಮಠರು ಕನ್ನಡನಾಡು ಕಂಡ ಅಪರೂಪದ ಕಲಾವಿದರು.

ಅವರು ಜನಿಸಿದು ೧೯೦೯ರಲ್ಲಿ ಹುಬ್ಬಳ್ಳಿ ತಾಲೋಕು ಮಂಟೂರು ಗ್ರಾಮದಲ್ಲಿ ಜನಿಸಿದರು. ಅವರ ಮಾವ ಶ್ರೀ ಮಲ್ಲಯ್ಯಸ್ವಾಮಿ ಹಿರೇಮಠ ಪ್ರಸಿದ್ಧ ಕರಡಿಮಜಲು ಕಲಾವಿದರು ಹಾಗೂ ಹಾರ್ಮೋನಿಯಂ ವಾದಕರು. ಪಂಚಾಕ್ಷರಿ ಗವಾಯಿಗಳಲ್ಲಿ ಹಾಗೂ ರೋಖಡಿಕರ ಬಾಳೂಬಾಯಿ ಅವರುಗಳಲ್ಲಿ ಸಂಗೀತ ಶಿಕ್ಷಣ ಪಡೆದರು. ಗಂಧರ್ವ ಮಹಾವಿದ್ಯಾಲಯದ ‘ಸಂಗೀತ ವಿಶಾರದ’ ಪರೀಕ್ಷೆಯಲ್ಲಿ ತೇರ್ಗಡೆ ಪಡೆದಿದ್ದಾರೆ. ತಬಲಾ ವಾದನದಲ್ಲಿ ಸ್ವತಂತ್ರ ವಾದನ (solo) ಹಾಗೂ ಪಕ್ಕವಾದ್ಯ ಕಛೇರಿಗಳನ್ನು ಕೊಟ್ಟಿದ್ದಾರೆ. ಪಂ. ಮಲ್ಲಿಕಾರ್ಜುನ ಮನಸೂರ, ಪಂ. ಬಸವರಾಜ ರಾಜ ಗುರು ಮುಂತಾದ ಸಂಗೀತ ದಿಗ್ಗಜರಿಗೆ ಅವರು ಸಮರ್ಥವಾಗಿ ತಬಲಾ ಸಾಥ್ ನೀಡಿದ್ದಾರೆ.

ಮೈಸೂರು ದಸರಾ ಉತ್ಸವ, ಇಂಪಾಲಾ, ಲಖನೌ, ಪೂನಾ, ಬೆಂಗಳೂರು ನಗರಗಳಲ್ಲಿ ನಡೆದ ಸಂಗೀತ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಎಚ್‌.ಎಂ.ವಿ. ಧ್ವನಿಮುದ್ರಣ ಕಂಪೆನಿಯಲ್ಲೂ ಕೊಂಚ ಕಾಲ ಕೆಲಸ ಮಾಡಿದ್ದಾರೆ. ಹಲವಾರು ನಾಟಕ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾರೆ. ಧಾರವಾಡ ಆಕಾಶವಾಣಿ ನಿಲಯ ಕಲಾವಿದರಾಗಿ ೧೮ ವರ್ಷಗಳ ಕಾಲ ಕೆಲಸ ಮಾಡಿ ಈಗ ನಿವೃತ್ತರಾಗಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೧೯೮೪-೮೫ನೇ ಸಾಲಿನ “ಕರ್ನಾಟಕ ಕಲಾತಿಲಕ” ಎಂಬ ಬಿರುದು ನೀಡಿ ಅವರನ್ನು ಗೌರವಿಸಿದೆ.

ಅವರ ಮಗಳು ಶ್ರೀಮತಿ ಅಕ್ಕಮಹಾದೇವಿ ಹಿರೇಮಠ ಹಾಗೂ ಅಳಿಯ ಪಂ.ಬಿ.ಎಸ್‌.ಮಠ (ಚಿತ್ತರಗಿ) ಆಕಾಶವಾಣಿ ಹಾಗೂ ದೂರದರ್ಶನದ ‘ಎ’ ಗ್ರೇಡ್‌ ಕಲಾವಿದರಾಗಿದ್ದು ಧಾರವಾಡ ಹಾಗೂ ಗೋವಾ ಆಕಾಶವಾಣಿ ನಿಲಯದ ಕಲಾವಿದರಾಗಿ ಕೆಲಸ ಮಾಡಿದ್ದಾರೆ.