ಕರ್ನಾಟಕದ ಆಗ್ರಾ ಘರಾಣೆಯ ಹೆಸರಾಂತ ಗಾಯಕ ಹಾಗೂ ವಿವಿಧ ವಾದ್ಯ ವಾದಕರಾಗಿರುವ ಶ್ರೀ ಜಿ.ಎಸ್‌. ಹೆಗಡೆ (ಬೆಳ್ಳೇಕೇರಿ) ಅವರು ತಾ. ೧೮-೮-೧೯೧೮ ರಂದು ಶಿರಸಿ ತಾಲ್ಲೂಕಿನ ಬೆಳ್ಳೇಕೇರಿಯಲ್ಲಿ ನಾಟಕ ಹಾಗೂ ಜಾನಪದ ಸಂಗೀತ ಹಿನ್ನೆಲೆಯುಳ್ಳ ಸುಬ್ರಾಯ ಹೆಗಡೆ ಹಾಗೂ ಮಹಾಲಕ್ಷ್ಮಿಯವರ ಸುಪುತ್ರರಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹೊಂದಿದ ಇವರಿಗೆ ಚಿಕ್ಕಂದಿನಿಂದಲೇ ಸಂಗೀತದ ಬಗ್ಗೆ ಉತ್ಕಟ ಅಭಿರುಚಿ, ಗುರುವನ್ನರಸುತ್ತ ಉಡುಪಿ, ಮುಂಬೈಗೆ ಪ್ರಯಾಣ ಮಾಡಿ ಅಲ್ಲಿ ಆಗ್ರಾ ಘರಾಣೆಯ ಅಂಧಗವಾಯಿ ಮೋಹನರಾವ್‌ ಚಿಕ್ಕರಮನೆಯಲ್ಲಿ ೨೦  ವರ್ಷಗಳ ಕಾಲ ಸೇವೆ ಹಾಗೂ ಸಂಗೀತಾಭ್ಯಾಸವನ್ನು ನಡೆಸಿದರು. ನಂತರ ಬರೋಡಾದ ಆಸ್ಥಾನ ವಿದ್ವಾನ್‌ ಉಸ್ತಾದ್‌ ಫೈಯಾಜ್‌ ಖಾನ್‌, ಉಸ್ತಾದ್‌ ಖಾದೀಂ, ಹುಸೇನ್‌ ಖಾನ್‌ ಹಾಗೂ ಉಸ್ತಾದ್‌ ವಿಲಾಯತ್‌ ಹುಸೇನ್‌ ಖಾನ್‌ರವರಲ್ಲಿ ವಿಶೇಷ ಅಧ್ಯಯನ. ಮುಂಬೈನ ವಿಘ್ನೇಶ್ವರ ಪಂಡಿತರಿಂದ ವಯೊಲಿನ್‌, ತೇಲಂಗ ಮಂಗೇಶರಾವ್‌ರವರಿಂದ ಸಿತಾರ್, ಪಂಡಿತ್‌ ಪನ್ನಾಲಾಲ್‌ ಘೋಷ್‌ ಹಾಗೂ ಹರಿಪ್ರಸಾದ ಚೌಧರಿಯವರಿಂದ ಬಾನ್ಸುರಿ (ಕೊಳಲು) ವಾದನದ ಶಿಕ್ಷಣವನ್ನು ಪಡೆದರು. ಉಸ್ತಾದ್‌ ಅಹಮ್ಮದ್‌ ಜಾನ್‌, ತಿರುವಾ ಇವರೇ ಮುಂತಾದವರಲ್ಲಿ ತಬಲಾ ಶಿಕ್ಷಣವನ್ನಲ್ಲದೆ ಅನೇಕ ಹಿರಿಯ ಸಂಗೀತ ಕಲಾವಿದರ ನಿಕಟ ಸಂಪರ್ಕವನ್ನು ಹೊಂದಿದ್ದರು.

೧೯೫೮ರಲ್ಲಿ ಶಿರಸಿಯಲ್ಲಿ ‘ಶಾಸ್ತ್ರೀಯ ಸಂಗೀತ ವಿದ್ಯಾಲಯ’ವನ್ನು ಸ್ಥಾಪಿಸಿ ಇದುವರೆಗೆ ಸುಮಾರು ೧೦೦೦ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನಿತ್ತಿದ್ದಾರೆ. ಅಲ್ಲದೆ ಮುಂಬೈ ಆಕಾಶವಾಣಿ, ಬರೋಡಾ, ಭದ್ರಾವತಿಯ ಆಕಾಶವಾಣಿ ಕೇಂದ್ರದಿಂದ ಗಾಯನ ಹಾಗೂ ವಾದನ ಮತ್ತು ಇತರೆಡೆ ಅತ್ಯುನ್ನತ ಕಾರ್ಯಕ್ರಮಗಳನ್ನಿತ್ತು ಎಲ್ಲರ ಪ್ರಶಂಸೆಗೆ ಒಳಗಾಗಿದ್ದಾರೆ. ಅವರು ‘ಹಿಂದುಸ್ಥಾನಿ  ಶಾಸ್ತ್ರೀಯ ಸಂಗೀತ’ ಎಂಬ ಒಂದು ಸಂಗೀತ ಗ್ರಂಥ ರಚನೆ ಮಾಡಿದ್ದಾರೆ.

೧೯೫೨ರಲ್ಲಿ ಇಂಡೋ-ರಷ್ಯನ್‌ ಸಮ್ಮೇಳನದಲ್ಲಿ (ಮುಂಬೈ) ಪ್ರಶಸ್ತಿ, ಭಾರತೀಯ ಸರ್ವಧರ್ಮ ಸಮ್ಮೇಳನ (ಶಿರಸಿ), ರೋಟರಿ ಕ್ಲಬ್‌ ಮುಂತಾದೆಡೆ ಸಂಗೀತ ಸಭಾ ಸಂಸ್ಥೆಗಳಿಂದ ಸನ್ಮಾನಗಳು ಅವರಿಗೆ ಸಂದಿವೆ.

ಅವರ ಶಿಷ್ಯ ಸಂಪತ್ತು ಅಪಾರ. ಅಂಥವರಲ್ಲಿ ಕಮಲಾಕರಭಟ್‌, ಪ್ರಭಾಕರಭಟ್‌, ಪ್ರೊ. ಶ್ರೀಮತಿ ಶೈಲಾ ಮಂಗಳೂರು, ವತ್ಸಲಾ ಶೇಟ್‌, ಕುಮುದಾ ಶರ್ಮಾ, ಜಿ.ಎನ್‌. ಹೆಗಡೆ, ಭಾರತಿ ಹೆಗಡೆ,  ವ್ಹಿ.ಎಸ್‌. ಹೆಗಡೆ,  ಮೋಹನ ಹೆಗಡೆ, ಎನ್. ಎಸ್‌. ದೇವ, ಡಿ.ಎನ್. ಹೆಗಡೆ, ಕೆ.ಸಿ. ಹೆಗಡೆ, ಯಶೋಧಾ ಹೆಗಡೆ ಮುಂತಾದವರು ಉಲ್ಲೇಖಾರ್ಹರು.

ನಾಲ್ಕು ದಶಕಗಳಿಂದಲೂ ಅವರು ಗೈದ ಅತ್ಯುತ್ತಮ ಸಾಧನೆ ಹಾಗೂ ವಾದನದ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಜಿ.ಎಸ್‌. ಹೆಗಡೆ ಬೆಳ್ಳೇಕೇರಿ ಅವರಿಗೆ ‘ಕರ್ನಾಟಕ ಕಲಾ ತಿಲಕ’ ಬಿರುದು ಹಾಗೂ ೧೯೯೪-೯೫ರ ಪ್ರಶಸ್ತಿಯನ್ನಿತ್ತು ಗೌರವಿಸಿದೆ.