ಪರಿಮಳ ಭರಿತ ಭರಿತ ಕುಸುಮವು ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಪರಿಮಳವನ್ನು ಸುತ್ತಲಿನ ಪರಿಸರಕ್ಕೆ-ಜನಸಮುದಾಯಕ್ಕೆ ಪಸರಿಸಿ ಕೃತಕೃತ್ಯತೆಯ ಪಡೆಯುತ್ತದೆ. ಇದೇ ಮಾದರಿಯ ಕಲಾಕುಸುಮವೇ ವಿದುಷಿ ಜಿ. ಚನ್ನಮ್ಮನವರು. ಎಲೆ ಮರೆಯ ಕಾಯಿಯಂತೆ ತನ್ನ ಕಾರ್ಯಗೌರವಗಳನ್ನು ನಿಷ್ಠೆಯಿಂದ ಸಾಂಗವಾಗಿ ನಡೆಸಿಕೊಂಡು ಬಂದ ಅಪೂರ್ವ ಹಾಗೂ ಧೀಮಂತ ಹೆಣ್ಣುಮಗಳು.

ಜನನ-ಬಾಲ್ಯ: ಚನ್ನಮ್ಮನವರು ದಿನಾಂಕ ೧೯.೪.೧೯೧೩ರಂದು ತುಮಕೂರಿನಲ್ಲಿ ಜನಿಸಿದರು. ಇವರ ತಂದೆ ರಾಷ್ಟ್ರಕ್ಕಾಗಿ ಹೋರಾಟ ಮಾಡಿದ ಗೌಡಗೆರೆ ಮಡಿವಾಳಯ್ಯ ಗುರುಬಸವಯ್ಯನವರು, ಇವರು ವೀರಶೈವ ಮತಸ್ಥರು ಹಾಗೂ ಅಚ್ಚಕನ್ನಡಿಗರು. ಇವರ ತಾಯಿ ವೀಣಾವಾದಕಿ ವಿದುಷಿ ರಾಜಮ್ಮ. ಇವರಿಬ್ಬರ ಪ್ರೇಮದ ಎರಡನೆಯ ಪುತ್ರಿಯೇ ಚನ್ನಮ್ಮ. ಚನ್ನಮ್ಮನಿಗೆ ಒಬ್ಬ ಅಕ್ಕ, ಒಬ್ಬ ಅಣ್ಣ, ಒಬ್ಬ ತಂಗಿ. ಎಲ್ಲರೂ ಸಂಗೀತ ಪ್ರೇಮಿಗಳು. ಚನ್ನಮ್ಮನಿಗೋ ಚಿಕ್ಕಂದಿನಿಂದಲೇ ಸಂಗೀತದಲ್ಲಿಕ ಅಪಾಋ ಆಸಕ್ತಿ, ಪ್ರೀತಿ, ಕಲಿಯಬೇಕೆಂಬ ತುಡಿತ. ಇದನ್ನರಿತ ಇವರ ತಾಯಿ ಚಿಕ್ಕ ವಯಸ್ಸಿಗೇ ಹಾಡಿಕೆ ಹಾಗೂ ವೀಣಾವಾದನದ ಪಾಟ ಆರಂಭಿಸಿದರು. ಸಂಗೀತಾಭ್ಯಾಸ ನಿರಂತರ ನಡೆಯುತ್ತಲೇ ಇತ್ತು. ಆದರೆ ವಿಧಿ ಇವರನ್ನು ಇನ್ನೊಂದೆಡೆಗೆ ಎಳೆಯಿತು, ಇವರ ತಂದೆ ತಾಯಿಗಳು ಅಂದಿನ ಕಾಲದಂತೆ ಇವರಿಗೆ ಚಿಕ್ಕವಯಸ್ಸಿಗೆ ಮದುವೆ ಮಾಡಿದರು. ಆದರೆ ಅವರ ವೈವಾಹಿಕ ಜೀವನ ಅಷ್ಟು ಸುಖಕರವಾಗಿರಲಿಲ್ಲ ಒಂದು ಬಗೆಯಲ್ಲಿ ದುರಂತವೇ ಎನ್ನಬಹುದು. ಸುಖದ ಸುಪ್ಪತ್ತಿಗೆಯಲ್ಲಿ ಸಂಗೀತದೊಂದಿಗೆ ಬಾಳಬೇಕಾದ ಹೆಣ್ಣುಮಗಳು ಕಷ್ಟಕೋಟಲೆಗೆ ಸಿಲುಕಿ ತೊಳಲಾಡಿದರು. ಈ ಕಾರಣದಿಂದಾಗಿಯೇ ಏನೋ ಮುಂದೆ ಇವರು ಸಂಗೀತವನ್ನು ಗಟ್ಟಿಯಾಗಿ ಹಿಡಿದರು. ಸಂಗೀತಕ್ಕೆ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಳ್ಳಲು ಹಾಗೂ ಸಂಗೀತ ಜ್ಞಾನವನ್ನು ವೃದ್ಧಿಸಿಕೊಳ್ಳಲು ಈಕೆ ಬೆಂಗಳೂರಿಗೆ ಬಂದು ನೆಲೆಸಿದರು.

ಚೆನ್ನಮ್ಮನವರು ಜನಿಸದ ಕಾಲ ಸ್ವತಂತ್ರಪೂರ್ವಕಾಲ, ಅದುವೆ ವಿದ್ವಾಂಸರೇ ಮೆರೆದ ಕಾಲ. ಹೆಣ್ಣು ಮಕ್ಕಳು ಸಂಗೀತ ಹಾಡುವುದಿರಲಿ. ಕಲಿಯುವ ಸೌಲಭ್ಯವೂ ಅಂದು ಕಡಿಮೆ ಇತ್ತು. ಇನ್ನು ವೇದಿಕೆ ಹತ್ತಿ ಕಾರ್ಯಕ್ರಮ ನೀಡುವ ಮಾತು ಬಲುದೂರವೇ ಸರಿ. ಸಂಗೀತಗಾರರ ಮನೆಯ ಹೆಣ್ಣುಮಕ್ಕಳು ಹಾಗೂ ಹೀಗೂ ಹಾಡುತ್ತಿದ್ದ ಕಾಲವದು. ಹೀಘಾಗಿ ವಿದುಷಿಯರು ಕೈಬೆರಳೆಣಿಸುವಷ್ಟಿದ್ದರು. ಸಭೆಯಲ್ಲೇನಾದರೂ ಒಬ್ಬ ಗಾಯಕಿ ಹಾಡಿದಳೆಂದರೆ ಅವಳನ್ನು ನೋಡುತ್ತಿದ್ದ ರೀತಿಯೇ ಬೇರೆ, ಅವಳೊಬ್ಬಳು ಜಾತಿ ಭ್ರಷ್ಟೆ ಎಂಬ ಹಳದಿ ಕಣ್ಣಿನ ನೋಟ. ಹೆಣ್ಣಿನ ಬಗೆಗೆ ವಿಪರೀತವಾದ ಸಂಕುಚಿತ ಮನೋಭಾವ ಹೊಂದಿದ್ದ ಕಾಲವದು. ಇಂತಹ ಪರಿಸ್ಥಿತಿಯಲ್ಲಿದ್ದ ಚನ್ನಮ್ಮನವರು ದೃಢಚಿತ್ತದಿಂದ ಅಂದಿನ ಸ್ಥಿತಿಗತಿಗಳನ್ನು  ಹಿಮ್ಮೆಟ್ಟಿನಿಂತು ಕೆಚ್ಚದೆಯಿಂದ ತಮ್ಮ ಜೀವನವನ್ನು ರೂಪಿಸಿಕೊಂಡರು. ಸಂಸಾರದ ನೋವನ್ನು ಹಗುರವಾಗಿ ಸ್ವೀಕರಿಸಿ ಸ್ಥಿತಪಜ್ಞೆಯಿಂದ ಸಂಗೀತದೆಡೆಗೆ ತಮ್ಮನ್ನು ಒಡ್ಡಿಕೊಂಡರು.

ವಿದ್ಯಾರ್ಜನೆ: ಚನ್ನಮ್ಮನವರ ಸಾಮಾನ್ಯ ಶಿಕ್ಷಣ ಎಸ್‌.ಎಸ್‌.ಎಲ್‌.ಸಿ. ಇವರು ದೈವಭಕ್ತರು, ಸರಳ ಸ್ವಭಾವದವರು, ತೀಕ್ಷ್ಮಮತಿಗಳು. ನಿರಾಡಂಬರ ಜೀವನ, ಶಿಸ್ತಿನ ಜೀವನ ಇವರದು. ಸದಾ ಹಸನ್ಮುಖಿ, ಕರುಣಾಮಯಿ. ಸಂಗೀತವನ್ನು ಚುರುಕಾಗಿಯೇ ಗ್ರಹಿಸುತ್ತಿದ್ದರು. ಇದನ್ನರಿತ ಸುಪ್ರಸಿದ್ಧ ವೈಣಿಕರಾದ ಹಾಗೂ ಗಾಯಕರಾದ ವೀಣಾಕೃಷ್ಣಮಾಚಾರ್ಯರು ಇವರಿಗೆ ಸಂಗೀತ ಪಾಠ ಹೇಳಿಕೊಡಲು ಒಪ್ಪಿ ಹಲವಾರು ವರ್ಷಗಳ ಕಾಲ ಸಕಲವಿದ್ಯೆಯನ್ನೂ ಇವರಿಗೆ ನಿಸ್ವಾರ್ಥವಾಗಿ ಧಾರೆ ಎರೆದರು. ತಾವು ರಚಿಸಿದ ರಚನೆಗಳನ್ನೂ ಇವರಿಗೆ ಪಾಠಮಾಡಿ ನಾನಾಕಡೆ ಹಾಡಿಸಿ ಸಂತೋಷಪಟ್ಟರು. ಚನ್ನಮ್ಮನವರಿಗಂತೂ ತಮ್ಮ ಗುರುಗಳ ಬಗ್ಗೆ ಅಪಾರ ಗೌರವವಿತ್ತು. ಚನ್ನಮ್ಮನ ಈ ಕಲಾ ಸೌರಭಕ್ಕೆ ಮೆಚ್ಚಿದ ಈಕೆಯ ತಂದೆಯ ಸ್ನೇಹಿತರಾಗಿದ್ದ ಹಾಗೂ ಡಿ.ಸಿ.ಪಿ ಹುದ್ದೆಯಲ್ಲಿದ್ದು ಕಲಾವಿದರೂ ಆಗಿದ್ದ ಶ್ರೀ ಎನ್‌.ಎಸ್‌. ಸುಬ್ಬರಾಯರು ಇವರಿಗೆ ಸಂಗೀತ ಕಲಿಯಲು ಹಣದ ಅಗತ್ಯತೆ ಇದೆ ಎಂಬುದನ್ನು ಮನಗಂಡು ಸರ್ಕಾರದಿಂದ ವಿದ್ಯಾರ್ಥಿವೇತನ ಲಭ್ಯವಾಗುವಲ್ಲಿ ಅನುವಾದರು. ಇದರಿಂದಾಗಿ ಸಂಗೀತ ಕಲಿಯುವಲ್ಲಿನ ಆರ್ಥಿಕ ಮುಗ್ಗಟ್ಟು ಪರಿಹಾರವಾಯಿತು. ಮುಂದೆ ಇವರಿಗೆ ಮೈಸೂರು ರಾಜ್ಯ ಸರ್ಕಾರದ ವಿದ್ಯಾರ್ಥಿವೇತನ ಲಭ್ಯವಾಯಿತು. ಈ ಸೌಲಭ್ಯದಿಂದಾಗಿ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದ ಚಿಂಬರಂಗೆ ಹೋಗಿ ಅಲ್ಲಿನ ಪ್ರಾಂಶುಪಾಲರಾಗಿದ್ದ ಪ್ರೊಫೆಸರ್ ಪೊನ್ನಯ್ಯಪಿಳ್ಳೆಯವರಲ್ಲಿ ಸಂಗೀತ ಉನ್ನತ ವ್ಯಾಸಂಗ ಮಾಡಲೆಂದು ಅವರ ಗುರುಗಳೇ ಕಳುಹಿಸಿಕೊಟ್ಟರು. ಅಂದಿನ ಕಾಲದಲ್ಲಿ ಹೆಂಗಸೊಬ್ಬಳು ಹೊರನಾಡಿಗೆ ಏಕಾಂಗಿಯಾಗಿ ಹೋಗಿ ಅಲ್ಲೇ ಇದ್ದು ವಿದ್ಯಾಭ್ಯಾಸ ಮಾಡುವುದು ಅಷ್ಟೇನೂ ಸುಲಭದ ಕೆಲಸವಾಗಿರಲಿಲ್ಲ. ಅದೊಂದು ಸಾಹಸವೇ ಸರಿ. ಅಲ್ಲಿ ಚನ್ನಮ್ಮನವರು ನಾನಾ ಬಗೆಯ ಕಷ್ಟಗಳನ್ನೆದುರಿಸಬೇಕಾಗಿ ಬಂದಿತು. ಚಿದಂಬರಂನಲ್ಲಿ ಇವರಿದ್ದ ಹಳೆಯ ಬಾಡಿಗೆ ಮನೆಯು ಒಂದು ದಿನ ಮಳೆಯಿಂದಾಗಿ ಕುಸಿದು ಬಿತ್ತು. ಚನ್ನಮ್ಮನವರಿಗೆ ದಿಕ್ಕೇ ತೋರದಾಯ್ತು. ಜ್ವರಪೀಡಿತರಾಗಿದ್ದ ಚನ್ನಮ್ಮ ನಿತ್ರಾಣರಾಗಿದ್ದರು. ಮಳೆಯ ನೀರು ಧಾರಾಕಾರವಾಗಿ ಸುರಿದು ಮನೆಯೊಳಗೆ ತುಂಬಲಾರಂಭಿಸಿತು. ಆ ಸಂದರ್ಭದಲ್ಲಿ ಸರ್ಪವೊಂದು ಗೋಡೆಯಿಂದ ಇಳಿದು ಬಂತು. ಅದನ್ನು ಮುಂಗುಸಿಯೊಂದು ಅಟ್ಟಿಸಿಕೊಂಡು ಬಂದಿತು. ಇದನ್ನು ಕಂಡ ಚನ್ನಮ್ಮನವರಿಗೆ ಪ್ರಜ್ಞೆ ತಪ್ಪಿತು. ಅವರಿಗೆ ಪ್ರಜ್ಞೆ ಬಂದಾಗ ಹಾವು ಮುಂಗುಸಿಗಳು ಕಾಣೆಯಾಗಿದ್ದವು. ದೈವ ಅನುಗ್ರಹವೋ ಏನೋ ಇವರಿಗೆ ಯಾವ ತೊಂದರೆಯೂ ಆಗಲಿಲ್ಲ. ಈ ಎಲ್ಲಾ ತೊಡಕುಗಳ ನಡುವೆಯೂ ಚನ್ನಮ್ಮನವರ ಸಂಗೀತಕಲಿಕೆಯ ಆಸಕ್ತಿ ಕಡಿಮೆಯಾಗಲಿಲ್ಲ. ಇದೆಲ್ಲಾ ಪರವಶಿವನ ಅನುಗ್ರಹವೆಂದು ಭಾವಿಸಿ ಸಹನೆಯಿಂದಲೇ ಕಷ್ಟಗಳನ್ನು ಸ್ವೀಕರಿಸಿ ಎದುರಿಸದರು ಸಹನಾಮಯಿ ಚನ್ನಮ್ಮ. ಈ ಕಷ್ಟಕಾಲಗಳಲ್ಲಿ ಸಹಾಯಹಸ್ತ ನೀಡುವವರ್ಯಾರು ಇವರಿಗಿರಲಿಲ್ಲ.

ಗುರುಪರಂಪರೆ: ಅಂದಿನ ಕಾಲದಲ್ಲಿ ಸಂಗೀತ ವಿದ್ವಾಂಸರಾಗಿ ವಿಜೃಂಭಿಸಿದ ಟೈಗರ್ ಎ.ವರದಾಚಾರ್‌, ಕೆ.ವಿ. ಶ್ರೀನಿವಾಸ ಅಯ್ಯಂಗಾರ್ ಮತ್ತು ವಿ. ಕೃಷ್ಣಮಾಚಾರ್ಯರು ಈ ಮೂವರೂ ಸಹೋದರರು ಅಲ್ಲದೆ ತ್ಯಾಗರಾಜರ ನೇರ ಶಿಷ್ಯರಾಗಿದ್ದ ಪಟ್ನಂಸುಬ್ರಹ್ಮಣ್ಯ ಐಯ್ಯರ್ ರವರ ಶಿಷ್ಯರು. ಇವರಲ್ಲಿ ಕೃಷ್ಣಮಾಚಾರ್ಯರು ಚನ್ನಮ್ಮನವರ ಗುರುಗಳು. ಇವರು ಹಾಡುಗಾರರೂ, ವೀಣಾವಾದಕರೂ, ಉತ್ತಮ ಸಾಹಿತಿಗಳೂ, ವಾಗ್ಗೇಯಕಾರರೂ ಆಗಿದ್ದರು. ಚನ್ನಮ್ಮನವರಿಗೆ ಇವರಲ್ಲಿ ಧೀರ್ಘಕಾಲ ಸಂಗೀತ ಶಿಕ್ಷಣ ಪಡೆಯುವ ಸುಯೋಗ ಒದಗಿ ಬಂದಿತು. ಇದರಿಂದಾಗಿಯೇ ಚನ್ನಮ್ಮನವರೂ ಗಾಯನ, ವಾದನ, ಬರವಣಿಗೆಯನ್ನು ತಮ್ಮಲ್ಲಿ ಮೈಗೂಡಿಸಿಕೊಂಡರು. ಚಿದಂಬರಂನಲ್ಲಿ ಇವರು ಪೊನ್ನಯ್ಯ ಪಿಳ್ಳೆಯವರಿಂದ ಸಂಗೀತದ ಉನ್ನತ ಶಿಕ್ಷಣ ಪಡೆಯುವಂತಾಯಿತು. ಪೊನ್ನಯ್ಯ ಪಿಳ್ಳೆಯವರು ದೀಕ್ಷಿತರ ಪರಂಪರೆಗೆ ಸೇರಿದವರು. ಈ ದಿಶೆಯಲ್ಲಿ ಚನ್ನಮ್ಮನವರಿಗೆ ತ್ಯಾಗರಾಜರ ಹಾಗೂ ದೀಕ್ಷಿತರ ಪರಂಪರೆಗಳನ್ನು ಹಾಗೂ ವಿಶಿಷ್ಟ ಶೈಲಿಗಳನ್ನು ಅರಿಯಲು, ಅಳವಡಿಸಿಕೊಳ್ಳಲು ಸಾಧ್ಯವಾಯಿತು. ಚನ್ನಮ್ಮನವರದು ಸಾಂಪ್ರದಾಯಿಕ ಬಿಕ್ಕಟ್ಟಿನ ಘನವಾದ ಗಾಯನ. ವೀಣಾವಾದನವೂ ಕೂಡ ಉತ್ತಮ ಮಟ್ಟದ್ದು, ಘನವಾದ ಮೀಟು ಇವರದು.

ನಡೆದು ಬಂದ ದಾರಿ: ಚಿದಂಬರಂನಿಂದ ಬೆಂಗಳೂರಿಗೆ ಹಿಂತಿರುಗಿ ಬಂದ ಚನ್ನಮ್ಮನವರಿಗೆ ಜೀವನದ ಕಷ್ಟಕೋಟಲೆಗಳು ಕೈ ಬಿಡಲೇ ಇಲ್ಲ. ತಂದೆಯ ಮರಣ, ಸಹೋದರನ ಮರಣ ಇವು ಇವರ ಜೀವನದ ಮೇಲೆ ಹೆಚ್ಚು ಪರಿಣಾಮವನ್ನುಂಟು ಮಾಡಿದವು. ಮಕ್ಕಳ ಕಷ್ಟ ಸುಖಗಳಿಗೆ ಆಸರೆಯಾಗಿದ್ದವರನ್ನು ಕಳೆದುಕೊಂಡ ಚೆನ್ನಮ್ಮ ದಿಕ್ಕೆಟ್ಟಂತಾದರು. ತಮ್ಮ ಇಬ್ಬರು ಹೆಣ್ಣುಮಕ್ಕಳ ಪಾಲನೆ ಪೋಷಣೆಯ ಜವಾಬ್ದಾರಿ ಇವರ ಮೇಲೆ ಬಿದ್ದಿತು. ಸಂಗೀತವನ್ನು ಬೋಧಿಸಿ ಹಣ ಸಂಪಾದನೆ ಮಾಡಬೇಕಾದ ಪರಿಸ್ಥಿತಿ ಅನಿವಾರ್ಯವಾದಾಗ ಇವರು ಎದೆಗುಂದಲಿಲ್ಲ. ಸಂಗೀತ ಪಾಠ ಹೇಳಿಕೊಡಲಾರಂಭಿಸಿದರು. ಈ ಹೊತ್ತಿನಲ್ಲಿ ಈಕೆಗೆ ಆಸರೆಯಾಗಿ ನಿಂತವರು ಇವರ ಹಿರಿಯ ಸಹೋದರಿ ಶ್ರೀಮತಿ ರತ್ನಮ್ಮ ಮತ್ತು ಕಿರಿಯ ಸಹೋದರಿಕ ಡಾ. ಲಲಿತಾ ಗುರುಬಸವಯ್ಯ. ಇವರು ತಮ್ಮ ಸಹೋದರಿಯ ಕಷ್ಟ ಸುಖಗಳಿಗೆ ಸ್ಪಂದಿಸಿ ಜೀವನ ಭಾರವನ್ನು ಹಗುರಗೊಳಿಸುವಲ್ಲಿ ಸಹಕರಿಸಿದರು ಹಾಗೂ ಚೆನ್ನಮ್ಮನನ್ನು ಒಬ್ಬ ಉತ್ತಮ ಕಲಾವಿದೆಯನ್ನಾಗಿ ರೂಪಿಸುವಲ್ಲಿಯೂ ಸಹಕರಿಸಿದರು. ಮುಂದೆ ಗಾನ ಮಂದಿರವೆಂಬ ಸಂಗೀತ ಶಾಲೆಯನ್ನೇ ಆರಂಭಿಸಿದರು.

ಸಂಗೀತ ಶಾಲೆಯ ಸ್ಥಾಪಕಿ, ಅಧ್ಯಾಪಕಿ: ಚನ್ನಮ್ಮನವರು ಗಾನ ಮಂದಿರ ಎಂಬ ಸಂಗೀತ ಶಾಲೆಯ ಸಂಸ್ಥಾಪಕರು. ೧೯೪೨ನೆಯ ಇಸವಿಯಲ್ಲಿ ಬಸವನ ಗುಡಿಯಲ್ಲಿ ಈ ಶಾಲೆ ಆರಂಭಗೊಂಡು ಚನ್ನಮ್ಮನವರ ಕಡೆಯ ಉಸಿರಿರುವತನಕ ಜ್ಞಾನ ವಿನಿಯೋಗ ಮಾಡಿತು. ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನ, ವಾದನಗಳಿಗೇ ಮೀಸಲಾಗಿದ್ದ ಈ ವಿದ್ಯಾಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ, ಸಂಗೀತ ಶಾಸ್ತ್ರಗಳ ಜ್ಞಾನಧಾರೆ ಸಮೃದ್ಧಿಯಾಗಿ ವಿನಿಯೋಗಗೊಂಡಿತು. ಇವರ ಗಾನಮಂದಿರ ಒಂದು ಬಗೆಯಲ್ಲಿ ದೇವ ಮಂದಿರವಾಗಿತ್ತು. ಬೆಳಿಗ್ಗೆ ೫ ಗಂಟೆಗಾಗಲೇ ಸ್ನಾನ ಮಾಡಿ ದೊಡ್ಡ ಕುಂಕುಮದ ಬೊಟ್ಟನ್ನು ಹಣೆಗಿಟ್ಟು, ದೇವರ ಪೂಜೆ ಮಾಡಿ ಪಾಠ ಪ್ರಾರಂಭಿಸುತ್ತಿದ್ದರು ಚೆನ್ನಮ್ಮ. ಪಾಠದ ವಿಚಾರದಲ್ಲಿ ಚನ್ನಮ್ಮನವರು ಬಹಳ ಕಠಿಣ; ವಿದ್ಯಾರ್ಥಿಗಳು ಪ್ರತಿದಿನ ತಪ್ಪದೆ ಸಂಗೀತ ಪಾಠಕ್ಕೆ ಬರಬೇಕು, ಸರಿಯಾಗಿ ಸಾಧನೆ ಮಾಡಬೇಕು. ಯಾವುದಾದರೊಂದು ದಿನ ವಿದ್ಯಾರ್ಥಿ ತರಗತಿಗೆ ಹಾಜರಾಗಲಿಲ್ಲವೆಂದರೆ ಬೆಳಿಗ್ಗೆ ಎದ್ದವರೇ ಆಟೋಮಾಡಿಕೊಂಡು ಅವರ ಮನೆಗೆ ಹೋಗಿ ಕಷ್ಟಸುಖ ವಿಚಾರಿಸಿ ಬರುತ್ತಿದ್ದರು. ಸಂಗೀತ ಪಾಠಕ್ಕೆ ಸಮಯದ ಕಟ್ಟಿರಲಿಲ್ಲ. ಹಲವಾರು ಗಂಟೆಗಳ ಪಾಠವೂ ವಿದ್ಯಾರ್ಥಿಗಳಿಗಾಗುತ್ತಿತ್ತು. ಸಹನಾಶೀಲೆ ಚನ್ನಮ್ಮನವರು ಮಕ್ಕಳಿಗೆ ಮನದಟ್ಟಾಗುವಂತೆ ಹಲವಾರು ಬಾರಿ ಹೇಳಿಕೊಡುತ್ತಿದ್ದರು. ಹೇಳಿಕೊಟ್ಟ ರಚನೆಗಳಿಗೆ ವಿದ್ಯಾರ್ಥಿಗಳೇ ಸ್ವರ ಲಿಪಿಯಲ್ಲಿ ಬರೆದು ತೋರಿಸಬೇಕಿತ್ತು. ಅದನ್ನು ತಾವೇ ಸ್ವತಃ ನೋಡಿ ತಪ್ಪು ನೆಪ್ಪುಗಳನ್ನು ತಿದ್ದಿ ತಿಳುವಳಿಕೆ ನೀಡುತ್ತಿದ್ದರು. ವೀಣೆ ಕಲಿಯುವವರು ಮೊದಲು ಸಾಹಿತ್ಯವನ್ನು ಬಾಯಿಪಾಠ ಮಾಡಿ ನಂತರ ನುಡಿಸಬೇಕಿತ್ತು. ಸಂಗೀತದ ಆರಂಭ ಪಾಠಗಳೆಲ್ಲವೂ ೫ ಕಾಲಗಳಲ್ಲಿಯೂ, ವೀಣೆಯಲ್ಲಿ ಲ೫ ಕಾಲ ಹಾಗೂ ೫ ಸ್ಥಾಯಿಗಳಲ್ಲಿ ನಡೆಯುತ್ತಿತ್ತು. ಒಟ್ಟಿನಲ್ಲಿ ಕಾಲೇಜಿನ ವೇಳೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ವೇಳೆಯಲ್ಲಿ ಚನ್ನಮ್ಮನವರು ಸಂಗೀತದ ಒಡನಾಟದಲ್ಲಿರುತ್ತಿದ್ದರು. ಯದುಕುಲಕಾಂಬೋಜಿ ರಾಗದಲ್ಲಿ ಅವರಿಗಿದ್ದ ಪ್ರಭುತ್ವವನ್ನು ಅವರ ಶಿಷ್ಯವೃಂದವು ನಾವಿನ್ನು ಮರೆತಿಲ್ಲ ಎನ್ನುತ್ತಾರೆ.

ಪ್ರಾಧ್ಯಾಪಕರು: ಚನ್ನಮ್ಮನವರು ಮೊದಲಿಗೆ ಬೊಂಬಾಯಿಯ ಸೌತ್‌ ಇಂಡಿಯನ್‌ ಮ್ಯೂಸಿಕ್‌ ಅಕಾಡೆಮಿಯ ನಿರ್ದೇಶಕರಾಗಿ ಕೆಲಕಾಲ ಸೇವೆ ಸಲ್ಲಿಸಿದರು. ಮುಂದೆ ಬೆಂಗಳೂರಿಗೆ ಬಂದ ಇವರು ಕಾಲೇಜು ಶಿಕ್ಷಣದಲ್ಲಿ ಸಂಗೀತವನ್ನು ಒಂದು ಪಠ್ಯವಿಷಯವನ್ನಾಗಿ ಮಾಡಬೇಕಾದುದು ಅನಿವಾರ್ಯ, ಅದನ್ನು ಆಗುಮಾಡಲೇ ಬೇಕು ಎಂಬ ದೃಢ ಮನಸ್ಸಿನಿಂದ ಅಂದಿನ ಹಿರಿಯ ಅಧಿಕಾರಿಗಳನ್ನು ಅನೇಕ ಬಾರಿ ಭೇಟಿಮಾಡಿ ಅವರೊಂದಿಗೆ ಚರ್ಚಿಸಿ ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಸಂಗೀತ ವಿಷಯವನ್ನು ೧೯೪೨ರಲ್ಲಿ ಆರಂಭಿಸಿ, ಸಂಗೀತ ಶಿಕ್ಷಣನೀಡಲು ಆರಂಭಿಸಿದರು. ಕಾಲೇಜಿನಲ್ಲಿ ಸಂಗೀತ ವಿಷಯವನ್ನು  ಆರಂಭಿಸುವಲ್ಲಿ ತಗುಲುವ ವೆಚ್ಚವನ್ನು ಸರ್ಕಾರ ಭರಿಸಲಾಗದೆ ಚನ್ನಮ್ಮನವರೇ ತಮ್ಮ ಮನೆಯ ತಂಬೂರಿ, ವೀಣೆ, ಹಾರ್ಮೋನಿಯಂ, ಜಮಖಾನಗಳನ್ನು ತಂದಿಟ್ಟು, ಲಭ್ಯವಾಗುವ ಕೊಠಡಿಗಳಲ್ಲಿ ಇಲ್ಲವೇ ಮರದ ಕೆಳಗೆ ಹೀಗೆ ಬಹು ಕಷ್ಟದಿಂದ, ಮುಖ್ಯವಾಗಿ ಯಾವ ಸಂಬಳವನ್ನೂ ನಿರೀಕ್ಷಿಸದೆ ಸಂಗೀತ ಪಾಠ ಆರಂಭಿಸಿದರು. ಈ ಬಗೆಯ ಕಾರ್ಯ ಗೌರವದ ದಾಷ್ಟಿಕೆಯ ಹಿರಿಮೆ ಚನ್ನಮ್ಮನವರಿಗೆ ಸಲ್ಲುತ್ತದೆ. ಮುಂದೆ ೧೯೫೧ರಲ್ಲಿ ಸಂಗೀತ ವಿಷಯವು ಚನ್ನಮ್ಮನವರ ಸಾಹಸದ ಫಲವಾಗಿ ಒಂದು ಐಚ್ಛಿಕ ವಿಷಯವಾಗಿ ಪರಿಗಣಿಸಲ್ಪಟ್ಟು ಕಾಲೇಜು ಶಿಕ್ಷಣದಲ್ಲಿ ಸಂಗೀತದ ಕ್ರಮಬದ್ಧ ಪಾಠ ಪ್ರವಚನಗಳು ಆರಂಭಗೊಂಡವು. ಈ ದೃಷ್ಠಿಯಿಂದ ಕಾಲೇಜಿನ ಸಂಗೀತ ಶಿಕ್ಷಣ ಇತಿಹಾಸದಲ್ಲಿ ಚನ್ನಮ್ಮನವರು ದೊಡ್ಡ ಮೈಲಿಗಲ್ಲಾಗಿ ನಿಲ್ಲುತ್ತಾರೆ. ಈಕೆ ಚಟುವಟಿಕೆಯ ಚಿಲುಮೆ. ಅಂದಿನ ಅನೇಕ ಸರ್ಕಾರಿ, ಖಾಸಗಿ ಕಾರ್ಯಕ್ರಮಗಳಿಗೆ ವಿಶ್ವವಿದ್ಯಾಲಯದ ಸಭೆ, ಸಮಾರಂಭಗಳಿಗೆ ವಿದ್ಯಾರ್ಥಿನಿಯರನ್ನು ತರಬೇತಿಗೊಳಿಸಿ ಕಾರ್ಯಕ್ರಮ ನೀಡಿಸುತ್ತಿದ್ದರು. ರಾಷ್ಟ್ರದ ಮುಖಂಡರು ಬೆಂಗಳೂರಿಗೆ ಆಗಮಿಸಿದರೆಂದರೆ ಚನ್ನಮ್ಮನವರ ಮಾರ್ಗದರ್ಶನದಲ್ಲಿಯೇ ವಿದ್ಯಾರ್ಥಿನಿಯರು ಹಾಡುತ್ತಿದ್ದುದು. ಹೀಗೆ ಅವರ ಉತ್ತಮ ಅಧ್ಯಾಪನ ಕಾರ್ಯದಿಂದಾಗಿ ಸಂಗೀತ ವಿದ್ಯಾರ್ಥಿನಿಯರ ಸಂಖ್ಯೆ ವೃದ್ಧಿಗೊಂಡಿತು. ಈಕೆ ೧೯೫೧ರಿಂದ ೧೯೬೯ರವರೆಗೆ ಸಂಗೀತ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ನಿಸ್ವಾರ್ಥ ಸೇವೆ ಸಲ್ಲಿಸಿದರು. ಸಂಗೀತ ಶಾಸ್ತ್ರವನ್ನು ಚೆನ್ನಾಗಿ ತಿಳಿದು ಪಾಠ ಹೇಳಿದ ಪ್ರಥಮ ಮಹಿಳಾ ಪ್ರಾಧ್ಯಾಪಕಿ ಎಂದೆನಿಸಿಕೊಂಡರು.

ಕಚೇರಿ ಸಾಧನೆ: ಚನ್ನಮ್ಮನವರು ಅಂದಿನ ಹಲವಾರು ಸಂಗೀತ ಸಭೆ ಹಾಗೂ ಸಂಘ ಸಂಸ್ಥೆಗಳಲ್ಲಿ ಅಲ್ಲದೆ ತ್ಯಾಗರಾಜರ ಆರಾಧನೆ, ಶ್ರೀ ರಾಮನವಮಿ ಇತ್ಯಾದಿ ಅನೇಕ ಸಮಾರಂಭಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಗಾಯನ ಸಮಾಜ, ಕರ್ನಾಟಕ ಗಾನ ಕಲಾಪರಿಷತ್ ಗಳಲ್ಲಿ ಮೈಸೂರು ಮಹಾರಾಜರ ಸಮ್ಮುಖದಲ್ಲಿ, ಸರ್ಕಾರದ ಕಾರ್ಯಕ್ರಮಗಳಲ್ಲಿ ಇವರು ತಮ್ಮ ಸಂಗೀತ ಸುಧೆ ಹರಿಸಿದ್ದಾರೆ. ಓಡಿಇಯನ್‌ ರೆಕಾರ್ಡಿಂಗ್‌ ಕಂಪೆನಿಯವರ ಹಾಗೂ ಯೂರೋಪ್‌ ಪ್ರತಿನಿಧಿ ಶ್ರೀ ಜಾನ್‌ ಅವರ ಇಚ್ಛೆಯಂತೆ ಇವರು ತಮ್ಮ ಗಾಯನ, ವಾದನಗಳ ಧ್ವನಿ ಮುದ್ರಿಕೆಯನ್ನು ನೀಡಿದ್ದಾರೆ. ಸುಮಧುರವಾದ ಕಂಠಸಿರಿಯನ್ನು ಹೊಂದಿದ್ದ ಇವರು “ಮಗನೆಂದು ಆಡಿಸಿದಳು ಮೊಗ ನೋಡಿ ನಗುವಳು” ಎಂಬ ಕನಕದಾಸರ ರಚನೆಯನ್ನು  ಮಿಶ್ರಕಾಪಿ ರಾಗದಲ್ಲಿ ಅತ್ಯಂತ ಸುಶ್ರಾವ್ಯವಾಗಿ ಹಾಡುತ್ತಿದ್ದುದನ್ನು ಅಂದಿನ ಜನರು ನೆನೆಯುತ್ತಾರೆ. ಸಂಗೀತ ರಚನೆಗಳಿಗೆ (ವಚನ-ದೇವರನಾಮ) ಪೂರ್ವಿ, ಜೋನ್‌ಪುರಿ, ಅಸಾವೇರಿ, ಚರ್ಬಾರೀಕಾನಡ ಮುಂತಾದ ಆಕರ್ಷಕ ಹಿಂದೂಸ್ಥಾನಿ ರಾಗಗಳನ್ನು ಅಳವಡಿಸಿ ಸಾಹಿತ್ಯದ ಸಮಂಜಸತೆಗೆ ಸರಿಯಾಗಿ ಒಗ್ಗುವಂತೆ ಅನುಭವಿಸಿ ಪ್ರಸ್ತುತ ಪಡಿಸುತ್ತಿದ್ದುದನ್ನು ಜನತೆ ಮರೆತಿಲ್ಲ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳನ್ನರಿತಿದ್ದ ಇವರು ರಚನೆಗಳ ಅರ್ಥವನ್ನು ಅಂತರಾರ್ಥವನ್ನು ಅರಿತು ಹಾಡುತ್ತಿದ್ದರು. ಇದರಿಂದಾಗಿ ಶ್ರೋತೃಗಳ ಮನಸ್ಸನ್ನು ಸೂರೆಗೊಳ್ಳುತ್ತಿದ್ದರು. ಹೀಗಾಗಿ ಚನ್ನಮ್ಮನವರ ಹೆಸರು ಮನೆಮಾತಾಯಿತು. ರಾಜ್ಯವಲ್ಲದೆ ಹೊರ ರಾಜ್ಯಗಳಿಂದಲೂ ಇವರಿಗೆ ಆಹ್ವಾನ ಬಂದು ಅಲ್ಲೆಲ್ಲಾ ತಮ್ಮ ಸಂಗೀತ ಸುಧೆ ನೀಡಿ ಬಂದರಿವರು.

ಸೇವೆ: ಚನ್ನಮ್ಮನವರು ಕರ್ನಾಟಕ ಸರ್ಕಾರದ ಪ್ರೌಢಶಿಕ್ಷಣ ಮಂಡಳಿಯ ವಿಶೇಷ ಸಂಗೀತ ಪರೀಕ್ಷೆಯ ವಿದ್ವತ್‌ಗ್ರೇಡಿನ ಮುಖ್ಯಸ್ಥರಾಗಿಯೂ, ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ಮಂಡಳಿಯ ಮುಖ್ಯಸ್ಥರಾಗಿಯೂ,; ದೆಹಲಿಯ ಅಖಿಲಭಾರತ ಸಂಗೀತ ನೃತ್ಯ ನಾಟಕ ಸಂಸ್ಥೆಗಳ ಪರವಾಗಿ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ಗಾಯನ ಸಮಾಜ ಮತ್ತು ಕರ್ನಾಟಕ ಗಾನಕಲಾಪರಿಷತ್ತಿನ ತಜ್ಞರ ಸಮಿತಿಯ ಸದಸ್ಯರಾಗಿಯೂ ಆಕಾಶವಾಣಿ ಆಡಿಷನ್‌ ಬೋರ್ಡಿನ ಸದಸ್ಯರಾಗಿಯೂ ಮೈಸೂರು ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಎಕ್ಸಿಕ್ಯೂಟಿವ್‌ ಕಮಿಟಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಹೆಣ್ಣುಮಕ್ಕಳ ಏಳಿಗೆಗಾಗಿ: ತಾವು ಜೀವನದಲ್ಲಿ ಎದುರಿಸಿದ ಕಷ್ಟ ಕೋಟಲೆಗಳು ಬೇರೆಯ ಹೆಣ್ಣುಮಕ್ಕಳಿಗೆ ಬರಬಾರದು. ಹೆಣ್ಣುಮಕ್ಕಳು ಜ್ಞಾನವಂತರೂ, ತಿಳುವಳಿಕೆಯುಳ್ಳವರೂ, ಸದೃಢರೂ, ಧೈರ್ಯವಂತರೂ ಆಗಬೇಕು. ತಮ್ಮ ಜೀವನವನ್ನು ತಮ್ಮ ಗಳಿಕೆಯಿಂದಲೇ ನಡೆಸುವಷ್ಟು ಪ್ರಭಲರಾಗಬೇಕು ಎಂದು ಆಶಿಸಿದ ಚನ್ನಮ್ಮನವರು ಈ ನಿಟ್ಟಿನಲ್ಲಿ ನಾನಾ ಬಗೆಯ ಪ್ರಯತ್ನಗಳನ್ನು ಮಾಡಿ ಸಫಲರಾದರು. ಅಂದು ಪ್ರೌಢ ಶಿಕ್ಷಣ ಮಂಡಳಿಯ ಸಂಗೀತ ಪರೀಕ್ಷೆಗಳಿಗೆ ಗಂಡಸರು ಮಾತ್ರವೇ ಪರೀಕ್ಷಕರಾಗುತ್ತಿದ್ದರು. ಇದಕ್ಕೆ ಮರುದನಿ ಎತ್ತಿದ ಚನ್ನಮ್ಮನವರು ಹೆಣ್ಣು ಮಕ್ಕಳು ಪರೀಕ್ಷಕರಾಗುವಂತಾಗಿಸಿದರು. ತಮ್ಮ ಕಲಾಮಂದಿರದಲ್ಲಿ ಹೆಣ್ಣುಮಕ್ಕಳು ಸಂಗೀತ ಕಲಿಯುವಲ್ಲಿ ಪ್ರೋತ್ಸಾಹಿಸಿದರು. ವಿಧವೆಯರಿಗೆ, ಅಂಗವಿಕಲರಿಗೆ, ಅಲ್ಪ ಬುದ್ಧಿ ಭ್ರಮಣೆಯಾದವರಿಗೆ ಬಸ್‌ ಪ್ರಯಾಣದ ಹಣವನ್ನು ತಮ್ಮ ಕೈಯಿಂದಲೇ ನೀಡಿ ಉಚಿತವಾಗಿ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಅನೇಕ ವೇಳೆ ಉಚಿತವಾಗಿ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಅನೇಕ ವೇಳೆ ಇವರಿಂದ ಶಿಷ್ಯರಿಗೆ ಕಾಫಿ, ತಿಂಡಿ, ಊಟಗಳ ಸಮಾರಾಧನೆ ನಡೆಯುತ್ತಿತ್ತು. ಸಂಸಾರದಲ್ಲಿ ದುರಂತವನ್ನು ಕಂಡು ಕಂಗಾಲಾದ ಹೆಣ್ಣುಮಕ್ಕಳಿಗೆ ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಪಾಠ ಹೇಳುವುದಲ್ಲದೆ ಅವರಿಗೆ ತಾಯಿಯ ಸ್ಥಾನದಲ್ಲಿದ್ದು ಮಾರ್ಗದರ್ಶನ, ಮನಃ ಶಾಂತಿಗಳನ್ನು ನೀಡುತ್ತಿದ್ದರು. ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಕರುಣಾಮಯಿ ಚನ್ನಮ್ಮನವರು ಅತ್ಯಂತ ಸಹನಾಶೀಲರು, ಸ್ನೇಹಪರರು, ಹಸನ್ಮುಖಿ. ಅಬಲಾಶ್ರಮದ ಮಕ್ಕಳಿಗೆ, ಅಬಲೆಯರಿಗೆ, ಬಡಮಕ್ಕಳಿಗೆ ದೇವತಾ ಪ್ರಾರ್ಥನೆ, ಭಜನೆಗಳನ್ನು ಕಲಿಸುತ್ತಿದ್ದರು. ವಿದ್ಯಾರ್ಜನೆಗಗಿ ತಾವು ಮೈಲಿಗಟ್ಟಳೆ ನಡೆದು, ಜನರ ಕಟುಮಾತುಗಳಿಗೆ ಗುರಿಯಾಗಿ ಪಟ್ಟ ಕಷ್ಟವನ್ನು ಇತರ ಹೆಣ್ಣು ಮಕ್ಕಳು ಪಡಬಾರದೆಂದು ಶಿಷ್ಯರಿಗೆ ತಮ್ಮ ಅನುಭವದ ಕಿವಿಮಾತುಗಳನ್ನು ಹೇಳಿ ಧೈರ್ಯ ತುಂಬುತ್ತಿದ್ದರು. ಒಟ್ಟಿನಲ್ಲಿ ಹೆಣ್ಣುಮಕ್ಕಳ ಜೀವನೋಪಾಯಕ್ಕೆ ದಾರಿಮಾಡಿ ಕೊಡುವಲ್ಲಿ ಅತ್ಯಂತ ಕಾಳಜಿ ವಹಿಸುತ್ತಿದ್ದರು. ಈ ನಿಟ್ಟಿನಲ್ಲಿ ನೂರಾರು ಮಹಿಳೆಯರು ಇಂದಿಗೂ ಇವರನ್ನು ಸ್ಮರಿಸುವಂತಹ ಸಾರ್ಥಕ ಕಾರ್ಯ ಇವರಿಂದಾಗಿದೆ.

ದೇಶ ಪ್ರೇಮ, ಸ್ವತಂತ್ರ ಚಳುವಳಿ: ಚನ್ನಮ್ಮನವರಿಗೆ ತಮ್ಮ ತಂದೆಯವರಂತೆ ರಾಷ್ಟ್ರದ ಬಗೆಗೆ ಅಪರಿಮಿತ ಪ್ರೇಮ. ನಾಡಿಗಾಗಿ ಸೇವೆ ಸಲ್ಲಿಸುವ , ತ್ಯಾಗ ಮಾಡುವ, ದೇಶಭಕ್ತಿ ಸಾರುವ ಮನೋಭಾವವುಳ್ಳವರಾದ ಇವರು ಗಾಂಧೀಜಿಯವರ ನಿಷ್ಠಾವಂತ ಅನುಯಾಯಿಯಾಗಿದ್ದರು. ಈ ಹಿನ್ನೆಲೆಯಿದ್ದ ಇವರು ಚಿಕ್ಕ ವಯಸ್ಸಿನಿಂದ ಆರಂಭಗೊಂಡು ಅವರ ಕಡೆಗಾಲದವರೆಗೂ ಖಾದಿಯ ಉಡುಪನ್ನೇ ಧರಿಸುತ್ತಿದ್ದರು. ಸ್ವತಂತ್ರ ಚಳುವಳಿಯ ನೂರಾರು ಸಭೆಗಳಲ್ಲಿ ಇವರು ತಮ್ಮಲ ದೇಶಭಕ್ತಿಗೀತೆಗಳ ಗಾಯನ ಸುಧೆಯನ್ನು ಹರಿಸಿ ದೇಶಪ್ರೇಮವನ್ನು ಸಾರಿದರು. ಮಹಾತ್ಮ ಗಾಂಧಿಯವರ ಮುಂದೆ ದೇಶಭಕ್ತಿ ಗೀತೆಗಳನ್ನೂ ವಂದೇಮಾತರಂ ಎಂಬ ಗೀತೆಯನ್ನು ಹಾಡಿದಾಗಕ ಗಾಂಧಿಯವರು ಇವರ ಶಿರಮುಟ್ಟಿ ಹರಸಿದರು. ರಾಷ್ಟ್ರ ರಕ್ಷಣಾನಿಧಿಗೆ ಸಹಾಯ ಹಸ್ತ ನೀಡುವ ಸಲುವಾಗಿ ಇವರು ತಮ್ಮ ಆಭರಣಗಳನ್ನು ಹಾಗೂ ಹಣವನ್ನು ಸ್ವಪ್ರೇರಣೆಯಿಂದ ದಾನ ಮಾಡಿ ದೇಶಪ್ರೇಮವನ್ನು ಸಾರಿದರು. ಇವರು ತುಮಕೂರಿನಲ್ಲಿದ್ದಾಗ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿ ಪೋಲೀಸರಿಂದ ಲಾಠಿ ಏಟು ತಿಂದು ಸೆರೆಮನೆ ವಾಸ ಮಾಡಿದರು.

ಬಿರುದು ಸನ್ಮಾನ: ಚನ್ನಮ್ಮನವರ ಗಾಯನ ವಾದನ ಸೌರಭಕ್ಕೆ ನಾಡಿನ ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ಮಂಗಳೂರಿನಲ್ಲಿ ನಡೆದ ಶಿಕ್ಷಣ ಸಪ್ತಾಹ ಸಮ್ಮೇಳನದಲ್ಲಿ ಗಾನ ಕೋಗಿಲೆ ಎಂಬ ಬಿರುದು, ೧೯೫೭ ರಲ್ಲಿ ಡಾ.ಶ್ರೀ ಜ.ಚ.ನಿ. ಮಹಾಸ್ವಾಮಿಗಳಿಂದ ಸಂಗೀತ ಶಾರದೆ ಎಂಬ ಬಿರುದು, ೧೯೭೩ ರಲ್ಲಿ ಸಂಗೀತಾಭಿಮಾನಿಗಳಿಂದ ವೀಣಾಗಾನ ವಿದ್ಯಾವಾರಿಧಿ ಎಂಬ ಬಿರುದು, ೧೯೭೪ರಲ್ಲಿ ಇವರ ಉನ್ನತ ಸಂಗೀತ ಸೇವೆಗಾಗಿ ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯ ಪ್ರಶಸ್ತಿ, ೧೯೭೫ರಲ್ಲಿ ಬೆಂಗಳೂರು  ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಸಂಗೀತ ಕಲಾರತ್ನ ಎಂಬ ಬಿರುದು, ೧೯೭೭ರಲ್ಲಿ ರಂಭಾಪುರಿ ಜಗದ್ಗುರುಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ಸಂಗೀತ ಕಲಾ ಚೂಡಾಮಣಿ ಎಂಬ ಬಿರುದು ಹೀಗೆ ಅನೇಕ ಬಿರುದುಗಳು ಇವರಿಗೆ ಸಂದಾಯವಾಗಿವೆ.

ಕೊಡುಗೈ ದಾನಿ: ಚನ್ನಮ್ಮನವರು ಜೀವನದಲ್ಲಿ ಹಣಕಾಸಿನ ತೊಂದರೆ ಎಷ್ಟರ ಮಟ್ಟಿನದೆಂಬುದನ್ನು ಅರಿತವರಾಗಿದ್ದ ಕಾರಣದಿಂದಲೋ ಏನೋ ಅವರು ಆರ್ಥಿಕವಾಗಿ ಸೌಖ್ಯದಿಂದಿರುವ ಸಮಯದಲ್ಲಿ ನಾನಾ ಕಡೆಗೆ ತಮ್ಮ ಧನ ಸಹಾಯ ಹಸ್ತ ನೀಡಿರುವುದು ಕಂಡು ಬರುತ್ತದೆ. ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನಕಲಾಪರಿಷತ್ತು, ಬಸವ ಸಮಿತಿ, ಬೆಂಗಳೂರು ಮಹಾರಾಣಿ ಕಲಾ ಕಾಲೇಜು ಮುಂತಾದೆಡೆಗಳಲ್ಲಿ ದತ್ತಿನಿಧಿಯನ್ನು ಸ್ಥಾಪಿಸಿ ಸಂಗೀತ ಮತ್ತು ಸಾಹಿತ್ಯಗಳ ಬೆಳವಣಿಗೆಗೆ ದಾರಿ ಮಾಡಿ ಕೊಟ್ಟಿದ್ದಾರೆ. ಬೆಂಗಳೂರಿನ ಎನ್‌.ಎಂ.ಕೆ.ಆರ್.ವಿ. ಕಾಲೇಜಿನಲ್ಲಿ ಸಂಗೀತವನ್ನು ಕಾಲೇಜಿನ ಒಂದು ಪಠ್ಯ ವಿಷಯವನ್ನಾಗಿಸಲು ಸಹಾಯಕವಾಗುವಂತೆ ಚನ್ನಮ್ಮನವರು ತಮ್ಮಲ್ಲಿದ್ದ ಅನೇಕ ವಾದ್ಯಗಳನ್ನೂ ನೂರಾರು ಪುಸ್ತಕಗಳನ್ನೂ ದಾನ ಮಾಡಿದ್ದಾರೆ.

ಪುಸ್ತಕ ಪ್ರಕಟಣೆ: ಚನ್ನಮ್ಮನವರು ಬಿ.ಎ. ಸಂಗೀತದ ಪಠ್ಯ ವಿಷಯಗಳನ್ನಾಧರಿಸಿ ಗಾನಕಲಾ ಬೋಧಿನಿ ಎಂಬ ಪುಸ್ತಕವನ್ನು ಸಂಪಾದಿಸಿದ್ದಾರೆ. ಅದನ್ನು ಬೆಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿಸಿದೆ. ಉತ್ತಮ ವಾಗ್ಮಿಯಾಗಿದ್ದ ಚನ್ನಮ್ಮನವರು ಅನೇಕ ಉಪನ್ಯಾಸ ಕಾರ್ಯಕ್ರಮಗಳನ್ನೂ ನೀಡಿದ್ದಾರೆ. ಬುಕ್‌ಲೆಟ್‌ ಮಾದರಿಯಲ್ಲಿ ಮೂರು ಪುಸ್ತಕಗಳನ್ನು ಬರೆದಿದ್ದಾರೆ.

ಶಿಷ್ಯ ವೃಂದ: ಚನ್ನಮ್ಮನವರು ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳಿ ಕೊಟ್ಟಿದ್ದಾರೆ. ಇವರಲ್ಲಿ ಕೆಲವರು ದೇಶದಲ್ಲಿ ಮತ್ತೆ ಕೆಲವರು ವಿದೇಶದಲ್ಲಿ ನೆಲೆಸಿದ್ದಾರೆ. ಇವರಲ್ಲಿ ಪ್ರಮುಖರಾದವರೆಂದರೆ ವಿದುಷಿಯರಾದ ಇ.ಪಿ.ಅಲಮೇಲು, ಜಿ.ಇಂದಿರಮ್ಮ, ಕಾಂತಿಮತಿ, ಲಕ್ಷ್ಮಿ, ಪ್ರಭ, ಸೇತು, ವಿಜಯ, ಕೃಷ್ಣಮೂರ್ತಿ ಮುಂತಾದವರು.

ನಾದೈಕ್ಯರು-ಲಿಂಗೈಕ್ಯರು: ಚನ್ನಮ್ಮನವರು ತಮ್ಮ ಅಂತ್ಯದ ದಿನದವರೆಗೂ ಚಟುವಟಿಕೆಯಿಂದ ಇದ್ದವರು. ದಿನಾಂಕ ೨೦.೧.೧೯೮೬ರಂದು ಪ್ರತಿದಿನದಂತೆ ಬೆಳಗಿನ ಜಾವಕ್ಕೆ ಎದ್ದು ಸ್ನಾನ ಪೂಜಾದಿಗಳನ್ನು ಮುಗಿಸಿ ನಂತರ ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಮಾಡಿ ಅನಂತರ ಊಟ ಮುಗಿಸಿ ಸುಖ ಸಾವನ್ನಪ್ಪಿದರು. ಲಿಂಗದಲ್ಲಿ, ನಾದಲಿಂಗದಲ್ಲಿ ಲೀನವಾದರು. ದೀಪವು ಎಲ್ಲರಿಗೆ ಬೆಳಕು ನೀಡಿ ತಾನೇ ಕ್ರಮೇಣ ಕರಗಿ ಹೋಗುವಂತೆ ಚನ್ನಮ್ಮನವರು ಸಂಗೀತಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡು ಪರಹಿತದ ಸಾರ್ಥಕ ಬದುಕನ್ನು ಸ್ವೀಕರಿಸಿ ಅಪೂರ್ವ ಮಹಿಳೆಯಾಗಿ ಕಂಗೊಳಿಸಿದ್ದಾರೆ. ಚನ್ನಮ್ಮನವರೊಂದು ಆದರ್ಶವಾದ ನೈಜ ಬದುಕು. ಈ ಬದುಕು ಚಿರಕಾಲ ಮಹಿಳಾ ಲೋಕಕ್ಕೆ ಮಾದರಿಯಾಗಿದೆ.

 

ಸಹಾಯಕ ಗ್ರಂಥ: ಸಂಗೀತ ಕಲಾರತ್ನ ಶ್ರೀಮತಿ ಜಿ. ಚನ್ನಮ್ಮ, ಲೇಖಕಿ: ವೀಣಾ ವಾಣಿ, ಇ.ಪಿ. ಅಲಮೇಲು

ಮಾಹಿತಿ ನೆರವು: ಡಾ. ಸುಶೀಲ, ಜಿ. ಚನ್ನಮ್ಮನವರು ಮಗಳು.