ಕೋಲಾರ ಜಿಲ್ಲೆಯ ಸಣ್ಣಹಳ್ಳಿಯೊಂದರಲ್ಲಿ ೧೯೨೪ರಲ್ಲಿ ಜನಿಸಿದವರು ತಿಮ್ಮಪ್ಪಯ್ಯ. ಕರ್ನಾಟಕ ಸಂಗೀತ, ಗಮಕ, ಯೋಗ ವಿಭಾಗಗಳೆಲ್ಲದರಲ್ಲೂ ಪರಿಣತರು. ಮುಡಿಯನೂರು ರಂಗಪ್ಪ, ನಂಜುಂಡ ಶಾಸ್ತ್ರಿ ಅನಂತ ನಾರಾಯಣರಾಯರು, ಬೆಳಕವಾಡಿ ವರದರಾಜ ಅಯ್ಯಂಗಾರ್, ಡಿ. ಸುಬ್ಬರಾಮಯ್ಯ, ಚಿಂತಲಪಲ್ಲಿ ರಾಮಚಂದ್ರರಾಯರಂತಹ ದಿಗ್ಗಜಗಳ ಮಾರ್ಗದರ್ಶನ ಪಡೆದ ಅದೃಷ್ಟಶಾಲಿ. ಸಾಧನೆಯ ಮೂಲಕ ಗಾಯಕರಾದ ತಿಮ್ಮಪ್ಪಯ್ಯ ಕೋಲಾರದ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡಿದರು. ನಂತರ ಬ್ರಹ್ಮ ಚೈತನ್ಯ ಗಾನಕಲಾ ಪರಿಷತ್ತು ಎಂಬ ತಮ್ಮದೇ ಸಂಸ್ಥೆಯನ್ನು ಸ್ಥಾಪಿಸಿ ತನ್ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ. ಇವರಿಂದ ತರಬೇತಿ ಪಡೆದ ಅನೇಕರು ಕ್ಷೇತ್ರದಲ್ಲಿ ಇಂದು ಭರವಸೆ ಮೂಡಿಸುವವರಾಗಿದ್ದಾರೆ.

ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನಿತರಾದ ಶ್ರೀಯುತರಿಗೆ ‘ಗಾನ ಯೋಗಿ’, ‘ಗಾಯಕ ಶಿಖಾಮಣಿ’, ‘ಸಂಗೀತ ಭೂಷಣ’ ಬಿರುದುಗಳೊಡನೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯು ನೀಡಿದ ‘ಕರ್ನಾಟಕ ಕಲಾಶ್ರೀ’ ಸಹ ಸೇರಿದೆ.

ಕೋಲಾರದ ಜನತೆಯ ಅಭಿಮಾನ ಗಳಿಸಿರುವ ತಿಮ್ಮಪ್ಪಯ್ಯನವರು ಈಗಲೂ ಸಂಗೀತವನ್ನು ಆಲಿಸುತ್ತ ನೆಮ್ಮದಿಯ ಜೀವನ ಕ್ರಮಿಸುತ್ತಿದ್ದಾರೆ.