ಅಂದು ಭಾನುವಾರ. ಬೆಳಿಗ್ಗೆ ಕಿಟ್ಟು ಸರಸರನೆ ಹೋಗುತ್ತಿದ್ದ. ಕೈಯಲ್ಲಿ ನೋಟುಬುಕ್ಕು, ಒಂದೆರಡು ಪುಸ್ತಕಗಳು. ದಾರಿಯಲ್ಲಿ ಪುಟ್ಟು ಸಿಕ್ಕಿದ.

“ಲೋ ಕಿಟ್ಟು ಯಾಕೋ ಇಷ್ಟು ಅವರಸರಲ್ಲಿ ಓಡತಿದೀಯಾ?” ಅಂದ.

“ಇವತ್ತು ಭಾನುವಾರ ಅಲ್ಲವೇನೋ ! ಕತೆ ಕ್ಲಾಸು ಗಾಂಧಿ ಸಾಹಿತ್ಯ ಸಂಘದಲ್ಲಿ. ಕತೆ ಹೇಳಿಕೊಡತಾರೆ. ನಮ್ಮ ಕೈಲೂ ಹೇಳಸ್ತಾರೆ. ಪದ್ಯ, ಶ್ಲೋಕ ಎಲ್ಲ ಹೇಳಿ ಕೊಡತಾರೆ. ನಮಗೆಲ್ಲ ಆಗಲೇ ಗುರುಸ್ತುತಿ, ಶ್ರೀರಾಮನ ಮಂಗಳ, ಗಣೇಶ ಸ್ತುತಿ ಎಲ್ಲ ಬರುತ್ತೆ” ಅಂದ ಕಿಟ್ಟು.

ಪುಟ್ಟೂಗೆ ಕುತೂಹಲ. ಅವನೂ ಹೋದ. ಇಬ್ಬರೂ ಮಲ್ಲೇಶ್ವರದ ಗಾಂಧೀ ಸಾಹಿತ್ಯ ಸಂಘಕ್ಕೆ ಹೋಗುವಾಗ, “ಕ್ಲಾಸಿಗೆ ಟೀಚರ್‌ ಯಾರೋ?” ಪುಟ್ಟು ಕೇಳಿದ.

ಮಕ್ಕಳೊಡನೆ ರಾಜರತ್ನಂ

“ಜೆ.ಪಿ. ರಾಜರತ್ನಂ ಕಣೊ. ತುತ್ತೂರಿ, ಕಡಲೆಪುರಿ ಪದ್ಯ ಬರೆದಿಲ್ಲವಾ, ಅವರೇ !” ಅಂದ ಕಿಟ್ಟು.

ಮಕ್ಕಳ ಪ್ರಾರ್ಥನೆಯಾದ ಮೇಲೆ ಜಿ.ಪಿ. ರಾಜರತ್ನಂ ಪಾಠ ಮಾಡಿದರು. ಬಿಳಿ ದಟ್ಟಿ ಪಂಚೆ, ಜುಬ್ಬಾ, ಮೇಲೊಂದು ವಸ್ತ್ರ ಅವರ ಉಡುಪು, ಎಲ್ಲ ಖಾದಿಯದು, ಬೊಚ್ಚು ಬಯಿ, ಮೋಟು ಬಿಳೀ ಕ್ರಾಪು. ಅಗಲವಾದ ಎದೆ. ಮುಖದಲ್ಲಿ ಮಕ್ಕಳ ಹಾಗೆ ನಗು.

ಕ್ಲಾಸು  ಒಂದು ಗಂಟೆ ನಡೆಯಿತು. ಹಿಂದೆ ಹೇಳಿಕೊಟ್ಟಿದ್ದ ಶ್ಲೋಕಗಳನ್ನು ಹೇಳಿಸಿದರು. ಹೊಸದು ನಾಲ್ಕು ಹೇಳಿಕೊಟ್ಟರು. ಪುಟಾಣಿ ರಂಗನಿಂದ ಪಂಚತಂತ್ರದ ಕಾಕೋಲೋಕೀಯ (ಕಾಗೆ-ಗೊಬೆ ಕತೆ) ಹೇಳಿಸಿದರು. ಕಷ್ಟವಾದ ಪದಗಳನ್ನು ಬೋರ್ಡಿನ ಮೇಲೆ ಬರೆದು ತೋರಿಸಿದರು. ಕಿಟ್ಟುವೂ ಪದ್ಯ ಹೇಳಿದ.

“ನಾನು ಒಂದು ಹೇಳತೀನಿ ಸಾರ್‌” ಅಂದ ಪುಟ್ಟು. ನಿಂತುಕೋ, ಹೇಳು” ಅಂದರು. ಪುಟ್ಟುವಿನ ಹೆಸರು, ಶಾಲೆ ತರಗತಿ ಎಲ್ಲ ವಿಚಾರಿಸಿದರು. ಅವನು ಪದ್ಯ ಹೇಳಿದ ಮೇಲೆ ಬೆನ್ನು ತಟ್ಟಿದರು.

“ನೋಡಿ ಮುಂದಿನ ವಾರ ಮಾರ್ಚಿ ಹನ್ನೊಂದು ನಾನು ಇರೊಲ್ಲ. ಅದರ ಮುಂದಿನ ವಾರನೂ ಅಷ್ಟೆ. ಆದ್ದರಿಂದ ೨೫ನೆಯ ತಾರೀಖು ಬನ್ನಿ,” ಅಂದರು. ” ಶ್ರೀರಾಮ” ಅನ್ನುತ್ತ ಹೊರಟರು.

ಅಲ್ಲಿದ್ದ ಸಂಘದ ಕೆಲಸಗಾರರು “ಸಾರ್‌ ಬಿಸಿಲು ಆಟೋ ತರಿಸೋಣವಾ?” ಅಂದರು.

“ಆಟೋ ಯಾಕೆ? ರಸ್ತೆ ಮರದ ನೆರಳಲ್ಲಿ ಮೆಲ್ಲಗೆ ಹೋಗತ್ತೇನೆ ಸ್ವಲ್ಪ ಜ್ವರ ಬಂದಿತ್ತು. ಆಯಾಸ ಅಷ್ಟೆ” ಅಂದರು

“ಹಾಗಿದ್ದರೆ ಮನೇಲಿ ಇರಬಹುದಾಗಿತ್ತಲ್ಲ ಸಾರ್‌?” ಅಂದರು ಕೆಲಸಗಾರರು

’ಉಂಟೇ? ಇಲ್ಲಿ ಮಕ್ಕಳು ಬಂದು ಕಾದು ಕೊಂಡಿರುತ್ತಾರೆ ! ನಾನು ಚಕ್ಕರ್‌ಹಾಕೋದೆ? ಅಲ್ಲದೆ ನನಗೂ ಬೇರೆ ಕೆಲಸ ಮಾಡಿ ಸುಸ್ತು ಬೇಜಾರು ಆಗಿರೋವಾಗ ಮಕ್ಕಳ ಜೊತೇಲಿ ಒಂದು  ಗಂಟೆ ಕಳೆದರೆ ಎಷ್ಟೋ ಖುಷಿ ಬರತೇನೆ” ಅಂತ ಅವರು ಕೊಡೆ ಕೈಚೀಲ ಎತ್ತಿಕೊಂಡು ಹೊರಟರು.

ಮಕ್ಕಳೆಂದರೆ ಇಷ್ಟು ಪ್ರೀತಿ, ರಾಜರತ್ನಂ ಅವರಿಗೆ. ಅವರಿದ್ದರೆ ಮಕ್ಕಳ ಮುಖಗಳೂ ಮನಸ್ಸುಗಳೂ ಅರಳಿಬಿಡುವುವು.

ಪಂಡಿತರ ವಂಶದ ಹುಡುಗ

ರಾಜರತ್ನಂ ಹುಟ್ಟಿದು ೧೯೦೮ನೆಯ ಇಸವಿ ಡಿಸೆಂಬರ ಎಂಟನೆಯ ತಾರೀಖು. ಅಂದು ಹುಣ್ಣಿಮೆ. ಅವರದು ಶ್ರೀವೈಷ್ಣವ ಮನೆತನ. ಅವರಿಗೆ ಆ ಹುಣ್ಣಿಮೆ ವಿಶೇಷ. ಆನೆ ಹಬ್ಬ ಅಂತ. ರಾಜರತ್ನಂ ಹುಟ್ಟಿದ್ದು ಅಂತಹ ದಿನ.

ತಂದೆ ಜಿ. ಪಿ. ಗೋಪಾಲ ಕೃಷ್ಣಯ್ಯಂಗಾರ,  ಅಣ್ಣ ಗೋವಿಂದರಾಜ ಅಯ್ಯಂಗಾರ ಸಹಾ ಉಪಾಧ್ಯಾಯರೇ, ಅವರ ವಂಶವೇ ಪಂಡಿತರ ವಂಶ. ಮೈಸೂರಿನ ತೆರಕಣಾಂಬಿ ಊರಿನ ಹತ್ತಿರದ ಗುಂಡ್ಲು ಗ್ರಾಮದಲ್ಲಿ ನೆಲೆಸಿದ್ದ ವಂಶ. ಗುಂಡ್ಲು ಪಂಡಿತರ ವಂಶ ಅಂತಲೇ ಹೆಸರು ಪಡೆದಿತ್ತು. ಅದೇ ಇಂಗ್ಲೀಷಿನಲ್ಲಿ ಜಿ.ಪಿ. ಆಯಿತು. ಆ ವಂಶದ ಹಿರಿಯರು ಮೈಸೂರು ರಾಜರ ಆಸ್ಥಾನದಲ್ಲಿ ಪಂಡಿತರಾಗಿದ್ದರು. ಅವರಲ್ಲಿ ಕೇವಲ ಕೆಲವರು ಆಯುರ್ವೇದ ಪಂಡಿತರು.

ಇಂತಹ ಪಂಡಿತರ ವಂಶದಲ್ಲಿ ಹುಟ್ಟಿದರು ರಾಜರತ್ನಂ. ವಂಶಕ್ಕೆ ತಕ್ಕ ಹಾಗೆ ಅವರೂ ದೊಡ್ಡ ಪಂಡಿತರಾದರು. ಗುರುಗಳಾದರು.

ರಾಜರತ್ನಂ

ರಾಜರತ್ನಂ ಅವರಿಗೆ ನಾಲ್ಕು ವರ್ಷ ಆಗಿದ್ದಾಗಲೇ ತಾಯಿ ತೀರಿಹೋದರು. ಅಜ್ಜಿಯೇ ಸಾಕಿ ಬೆಳೆಸಿದ್ದು. ಬಾಲ್ಯದ ವಿದ್ಯಾಭ್ಯಾಸ ಮೊದಲು ಕೊಳ್ಳೆಗಾಲದಲ್ಲಿ. ಆಮೇಲೆ ಮೈಸೂರಿನಲ್ಲಿ ಮುಂದುವರೆಯಿತು. ಮುಂದೆ ತಂದೆಯ ಜೊತೆಗೇ ಅವರ ತರಗತಿಗಳಿಗೆ ಹೋಗಿ ಕೂತಿರುತ್ತಿದ್ದ ಹುಡುಗ.

ತಂದೆ ತರಗತಿಯಲ್ಲಿ ಹಳಗನ್ನಡ ಪದ್ಯಗಳನ್ನು ಸೊಗಸಾಗಿ  ಹೇಳಿಕೊಡುತ್ತಿದ್ದುದು ರತ್ನನಿಗೆ ತುಂಬಾ ಹಿಡಿಸಿತ್ತು. ತಾನೂ ಅಭಿನಯ ಮಾಡುತ್ತ ಆ ಪದ್ಯಗಳನ್ನು ಸ್ಪಷ್ಟವಾಗಿ ಹೇಳುವುದನ್ನು ಕಲಿತರು. ಹೈಸ್ಕೂಲು ದಾಟಿ ಕಾಲೇಜಿಗೆ ಬಂದರು.

“ರಾಜರತ್ನಂ” ಅಂತ ಹೆಸರು ಬಂದದ್ದೇ ಒಂದು ಕತೆ.

ಅವರಿಗೆ ತಾಯಿ ಇಟ್ಟ ಹೆಸರು “ರಾಜ” ಅಂತ. ಶಾಲೆಯಲ್ಲಿ ಜೆ.ಪಿ. ರಾಜಯ್ಯಂಗಾರ್ ಅಂತ್ ಬರೆಸಿದ್ದರು. ಲೋಯರ್ ಸೆಕೆಂಡರಿಯಲ್ಲಿ, (ಅಂದರೆ ಈಗಿನ ಏಳನೆಯ ತರಗತಿಯಲ್ಲಿ) ಓದುತ್ತಿದ್ದಾಗ ಒಂದು ಸಲ ಇಂಗ್ಲೀಷು  ಮೇಷ್ಟು ಒಂದು ಪಾಠವನ್ನು ತಪ್ಪಾಗಿ ಹೇಳಿದರು. ರಾಜರತ್ನಂ ಅದನ್ನು ತೋರಿಸಿದರು. ಮುಖ್ಯೋಪಾಧ್ಯಾಯರು ಆ ಮೇಷ್ಟ್ರನ್ನು ತರಾಟೆಗೆ ತೆಗೆದುಕೊಂಡರು. ಆತ ಮತ್ತೆ ಕೆಲಸಕ್ಕೆ ಬರಲಿಲ್ಲ. ಆತನ ಬದಲಿಗೆ ಬಂದವರು ಈ ಕತೆ ಕೇಳಿ “ಆಹಾ ರತ್ನಗಳು !” ಅಂತ ಹಂಗಿಸುತ್ತಿದ್ದರು. ಈ ಮೇಷ್ಟ್ರಿಗೆ ಚಳ್ಳೆಹಣ್ಣು ತಿನ್ನಿಸಬೇಕು ಅಂತ ರಾಜರತ್ನಂ ಅವರು ಗುಮಾಸ್ತರ ಹತ್ತಿರ ಹೋಗಿ ಸಲಾಮು ಹಾಕಿ ತನ್ನ ಹೆಸರನ್ನು ಜಿ.ಪಿ. ರಾಜರತ್ನಂ ಅಯ್ಯಂಗಾರ್‌ ಅಂತ ತಿದ್ದಿಸಿದರು. ಮೇಷ್ಟ್ರು ಕಕ್ಕಾವಿಕ್ಕಿ ಆದರು. ಮುಂದೆ ಕಾಲೇಜಿನಲ್ಲಿ ಇಂಗ್ಲಿಷು ಪ್ರೊಫೆಸರರು ಈ ಹೆಸರು ಉದ್ದವೆಂದು ಬರೀ ಜಿ.ಪಿ. ರಾಜರತ್ನಂ ಅಂತಲೇ ಕರೆಯುತ್ತಿದ್ದರು. ಆ ಹೆಸರೇ ಪ್ರಸಿದ್ಧವಾಯಿತು.

ಸಾಹಿತ್ಯದಲ್ಲಿ ಒಲವು

ಕಾಲೇಜಿನಲ್ಲಿ  ಕನ್ನಡ ಓದುತ್ತಿದ್ದಾಗ ಮಹಾಕವಿ  ರನ್ನನ “ಗದಾಯುದ್ಧ” ಕಾವ್ಯದ ಸಿಡಿಲಿನಂಥ ಮಾತುಗಳು ರತ್ನರ ಮನ ಸೆಳೆದವು. ಅದು ತುಂಬ ಸತ್ವಯುತವಾದ ಕಾವ್ಯ. ಅದನ್ನು ಸೊಗಸಾಗಿ ಪಾಠ ಮಾಡುತ್ತಿದ್ದವರು ಎ. ಆರ್‌. ಕೃಷ್ಣಶಾಸ್ತ್ರಿಗಳು. ಆಗಲೇ ರಾಜರತ್ನಂ ತೀರ್ಮಾಣಿಸಿದರು ಕನ್ನಡ ಎಂ. ಎ. ಓದಬೇಕು ಅಂತ.

ಅ ವೇಳೆಗೆ ಅವರಿಗೆ ವಿ. ಸೀತಾರಾಮಯ್ಯನವರ ಪರಿಚಯ ಆಯಿತು. ಅವರು  ದೊಡ್ಡ ವಿದ್ವಾಂಸರು ಪದ್ಯಗಳನ್ನು ಚೆನ್ನಾಗಿ ಅರ್ಥ ಆಗುವ ಹಾಗೆ ಓದುವುದನ್ನು ಅವರಿಂದ ಕಲಿತರು ರಾಜರತ್ನಂ. ಹಾಗೆಯೇ ತಾವೂ ಬರೆದರು. ಅದಕ್ಕೆ ವಿ. ಸೀತಾರಾಮಯ್ಯ, ಎ. ಆರ್‌. ಕೃಷ್ಣಶಾಸ್ತ್ರಿ, ಆಲೂರು ವೆಂಕಟರಾಯರು ಮುಂತಾದ ದೊಡ್ಡವರ ಪ್ರೊತ್ಸಾಹವೂ ಸಿಕ್ಕಿತು. ಆ ಕಾಲವೇ ಹಾಗೆ. ಹಿರಿಯರು ಕಿರಿಯರ ಬರವಣಿಗೆಯನ್ನು ಓದಿಸಿ ಕೇಳಿ ಪ್ರೋತ್ಸಾಹಿಸುತ್ತಿದ್ದರು. ಅವು ಅಚ್ಚಾಗಲು ಸಹಾಯ ಮಾಡುತ್ತಿದ್ದರು. ಅಚ್ಚಾದಾಗ ತಮ್ಮದೇ ಲೇಖನ ಆದ ಹಾಗೆ ಸಂತೋಷ ಪಡುತ್ತಿದ್ದರು. ಇದರಿಂದ ಕಿರಿಯರು ಮುಂದುವರಿಯಲು ತುಂಬಾ ಪ್ರೋತ್ಸಾಹ ಸಿಗುತ್ತಿತ್ತು.

ರಾಜರತ್ನಂ ಪದ್ಯ ಬರೆದರು. ಅವರ ಮೊದಲನೆಯ ಕವನ ಧಾರವಾಡದ ‘’ಜಯ ಕರ್ನಾಟಕ’ ’ ಪತ್ರಿಕೆಯಲ್ಲಿ  ಪ್ರಕಟವಾಯಿತು. ಆ ಸಮಾಚಾರ ಬಂದಾಗ ರಾಜರತ್ನಂ ಸಿನಿಮಾಕ್ಕೆ ಹೋಗಿದ್ದರು. ಅರ್ಧದಲ್ಲೇ ಬಿಟ್ಟು ಓಡಿದರಂತೆ ಪತ್ರಿಕೆ ನೊಡಲು – ಅಷ್ಟು ಖುಷಿ ! ಹೀಗೆ ವಿದ್ಯಾರ್ಥಿ ಆಗಿದ್ದಾಗಲೇ ಅವರ ಬರವಣಿಗೆ ಶುರು ಆಗಿತ್ತು.

ಕನ್ನಡ ಎಂ. ಎ.  ಕಲಿಯಲು ಮೈಸೂರಿಗೆ ಹೋದರು ರತ್ನಂ. ಅಲ್ಲಿ ಬಿ. ಎ. ಶ್ರೀಕಂಠಯ್ಯ, ಟಿ. ಎಸ್. ವೆಂಕಣ್ಣಯ್ಯ ಎಂಬ ಗುರುಗಳ ಕಣ್ಣಿಗೆ ಬಿದ್ದರು. ಬುದ್ದಿವಂತರಾದ ಹುಡುಗರನ್ನು ಮುಂದೆ ತರುವಲ್ಲಿ ಆ ಇಬ್ಬರದೂ ಎತ್ತಿದ ಕೈ. ಅವರು ರಾಜರತ್ನಂ ಅವರ ಬರವಣಿಗೆಗೆ ತುಂಬ ಬೆಂಬಲ ಕೊಟ್ಟರು.

ರತ್ನಂ ಒಂದು ಪದ್ಯ ಬರೆದರು. ’ತಾರೆ’ ಅಂತ. ಬೆಕ್ಕಿನ ಬಾಯಿಗೆ ಸಿಕ್ಕ ಸತ್ತ ಹಕ್ಕಿಯ ಕಥೆ. ಒಳ್ಳೆಯ ಕನ್ನಡ ಪದ್ಯ ಬರೆದವರಿಗೆ ಚಿನ್ನದ  ಪದಕ ಕೊಡಲು ಬಿ.ಎಂ. ಶ್ರೀಕಂಠಯ್ಯನವರು ಏರ್ಪಡಿಸಿದ್ದರು. ಆ ವರ್ಷದ ಪದಕ ರಾಜರತ್ನಂ ಅವರ ’ತಾರೆ’ ಪದ್ಯಕ್ಕೆ ಬಂದಿತು.

ಹೀಗೆ ಪದ್ಯ, ಕತೆ ಬರೆದರು. ’ಹನಿಗಳು’ ಎನ್ನುವ ಪುಟ ಲೇಖನಗಳನ್ನು ಬರೆದರು. ೧೯೩೧ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾದರು. ಆದರೆ ಕೆಲಸ ಆಗಲಿಲ್ಲ.

ಗಂಡುಗೊಡಲಿ

ನಮ್ಮ ದೇಶದಲ್ಲಿ ಎಲ್ಲೆಲ್ಲೊ ಸ್ವಾತಂತ್ರ್ಯ ಹೋರಾಟದ ಹುರುಪು ಹರಡಿದ್ದ ಕಾಲ. ಎಲ್ಲೆಲ್ಲೂ ಗಾಂಧೀಜಿ ನೆಹರೂಜಿ ಮಾತೇ. ರತ್ನಂಗೂ ಅದರಲ್ಲಿ ಆಸಕ್ತಿ. ತಾವೇ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗದಿದ್ದರೂ, ದೇಶದ ಗುಲಾಮಗಿರಿಯೂ ಹೋಗಬೇಕು. ಗಾಂಧೀಜಿಯ ಸತ್ಯಾಗ್ರಹ ಗೆಲ್ಲ ಬೇಕು ಅನ್ನುವ ವಿಚಾರ ಅವರಲ್ಲಿ ತುಂಬಿತ್ತು. ಗಾಂಧೀಜಿ ಹೇಳಿದಂತೆಯೇ ಖಾದಿ ಬಟ್ಟೆಯನ್ನು ಹಾಕಿಕೊಳ್ಳತೊಡಗಿದರು.

ಒಂದು ಸಲ ಕೆಲಸ ಹುಡುಕಿಕೊಂಡು ಹೈದರಾಬಾದಿಗೆ ಹೋದರು. ಅಲ್ಲಿ ಆಗ ನಿಜಾಮರ ದರ್ಬಾರು. ಖಾದಿ ಕಂಡರೆ ಕೋಪ. ರತ್ನಂ ಅವರಲ್ಲಿ ಬೇರೆ ಬಟ್ಟೆ ಇರಲಿಲ್ಲ. ಕೆಲಸ ಸಿಗದೆ ವಾಪಸು ಬಂದರು.

ಪಂಡಿತ ಜವಹರಲಾಲ ನೆಹರು ಬೆಂಗಳೂರಿಗೆ ಬಂದರು. ಅವರ ಭಾಷಣ ರತ್ನಂ ಅವರ ಮನಸ್ಸನ್ನು ತುಂಬಿತು.

ಹಿಂದೆ ಕಾರ್ತವೀರ್ಯಾರ್ಜುನ ಅನ್ನುವ ದರ್ಪದ ದೊರೆಯ ವಿರುದ್ಧವಾಗಿ ಪರಶುರಾಮ ವೀರತನದಿಂದ ಹೋರಾಡಿದ್ದು ನೆನಪಾಯಿತು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ರಾಜರತ್ನಂ ‘’ಗಂಡುಗೊಡಲಿ’’ ನಾಟಕ ಬರೆದರು. ನಾಟಕ ತುಂಬ ಜನಪ್ರಿಯವಾಯಿತು. ರಾಜರತ್ನಂ ಅವರೇ ಅದನ್ನು ಓದುವುದನ್ನು ಕೇಳಬೇಕಾಗಿತ್ತು ಮೈ ಜುಂ ಅನ್ನಿಸುತ್ತಿತ್ತು.

ನಮ್ಮ ಮನೆಯಲ್ಲಿ ನಮಗೆ ಸ್ವಾತಂತ್ರ್ಯವಿಲ್ಲವೋ?
ಈ ದಾಸ್ಯದಿಂದೆಮಗೆ ಉದ್ಧಾರವಿಲ್ಲವೇನು ?
ಮನೆ ಮಠವನಾಪ್ತರನು ಇದರಿಂದ ಉಳಿಸಲಿಕೆ
ಹಳಸಿಹುದು ಸೈರಣೆ – ಇರುವುದೊಂದೇ ಕೊಡಲಿ

ಮಾತುಗಳು ಎಷ್ಟು ಸುಲಭವಾಗಿವೆ. ಆದರೆ ಸ್ವಾತಂತ್ರ್ಯವಿಲ್ಲದ  ಜನರ ಬೇಯುವ ಹೃದಯದ ದುಃಖ ರೋಷಗಳನ್ನು ಎಷ್ಟು ಚೆನ್ನಾಗಿ ವ್ಯಕ್ತಪಡಿಸುತ್ತದೆ ಅಲ್ಲವೆ?

ಮಸೆಯಲಿ ಕ್ರಾಂತಿಯ ಕ್ರೂರ ಕುಠಾರಂ
ನೆಲಸಮವಾಗಲಿ ವೈರಿ ವಠಾರಂ
ನಗೆಯನು ಹೊಂದಲಿ ಆಶ್ರಮದಾಸ್ಯಂ
ಇಂದೇ ಮುಗಿಯಲಿ ಹಾಳೀ ದಾಸ್ಯಂ
ನಾಡಿನ ಪೀಡೆಯಲಿ ದೂಡಲಿ ಕಾವು
ಕ್ರಾಂತಿಯ ತರಬೇಕಿಲ್ಲವೆ ಸಾವು

ಕೊಡಲಿಯನ್ನು ಉಜ್ಜಿ ಹರಿತಮಾಡುತ್ತಾ ಹೇಳುವ ಈ ಸಾಲುಗಳಲ್ಲಿ ಎಷ್ಟು ಶಕ್ತಿ ತುಂಬಿದೆ, ಅಲ್ಲವೆ ? ರಾಜರತ್ನಂ ಬರೆದ ’ಗಂಡುಗೊಡಲಿ’ ನಾಟಕದಲ್ಲಿ, ಕಾರ್ತವೀರ್ಯಾರ್ಜುನನ ದಬ್ಬಾಳಿಕೆಯನ್ನು ಕೊನೆಗಾಣಿಸುತ್ತೇನೆಂದು ಹೊರಟ ಪರಶುರಾಮ ಆಡುವ ಮಾತುಗಳಿವೆ.  ಬ್ರಿಟಿಷರ ಮುಷ್ಠಿಯಲ್ಲಿ ಸಿಕ್ಕು ದಾಸ್ಯದಲ್ಲಿ ತೊಳಲುತ್ತಿದ್ದ  ಭಾರತೀಯರ ಕೋಪ, ಪ್ರತಿಜ್ಞೆಗಳು ಈ ಮಾತುಗಳಲ್ಲಿ ರೂಪ ಕಂಡವು. ನಾಟಕದಲ್ಲಿ ಪರಶುರಾಮ ಪ್ರಜೆಗಳ ಸ್ವಾತಂತ್ರ್ಯವನ್ನು ತುಳಿದ ಕಾರ್ತವೀರ್ಯಾರ್ಜುನನ್ನು ಧ್ವಂಸ ಮಾಡುತ್ತಾನೆ. ಬ್ರಿಟಿಷರ ಪ್ರತಿನಿಧಿ ಕಾರ್ತವೀರ್ಯಾರ್ಜುನ, ಭಾರತೀಯರ ಪ್ರತಿನಿಧಿ ಪರಶುರಾಮ.

೧೯೩೧ರಲ್ಲಿ ಲಲಿತಮ್ಮ ಎಂಬುವರೊಡನೆ ರಾಜರತ್ನಂ ಅವರ ಮದುವೆ ಆಯಿತು.

ಓದುಬರಹಕ್ಕೆ ಮುಡಿಪು

೧೯೩೨ರಿಂದ ರಾಜರತ್ನಂಗೆ ತುಂಬ ಕಷ್ಟದ ಕಾಲ. ಕೆಲಸ ಇರಲಿಲ್ಲ. ಅಣ್ಣ ಬೇರೆ ತೀರಿಕೊಂಡರು. ಹೆಂಡತಿಗೆ ಕಾಯಿಲೆ. ಬರವಣಿಗೆಯಿಂದಲೇನೋ ಹೆಸರು ಬಂದಿತ್ತು. ಆದರೆ ಜೀವನ ಸಾಗಬೇಕಲ್ಲ ?

ಒಂದು ಸಲ ಅವರು ಗುಮಾಸ್ತೆ ಕೆಲಸ ಕೇಳುವುದಕ್ಕೆ ಬೆಂಗಳೂರಿಗೆ  ಹೋದರು. ಅಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಎಂಬುವರನ್ನು ಕಂಡರು. ಅವರು ಸರ್ಕಾರದಲ್ಲಿ ದೊಡ್ಡ ಅಧಿಕಾರಿಗಳು, ದೊಡ್ಡ ಸಾಹಿತಿಗಳು. ಕನ್ನಡದಲ್ಲಿ ಸಣ್ಣ ಕಥೆಗಳ ಜನಕ  ಎಂದು ಹೆಸರಾದವರು.

ರಾಜರತ್ನಂಗೆ ಸಾಹಿತ್ಯ ಸಮ್ಮೇಳನದಲ್ಲಿ ಅವರ ಪರಿಚಯ ಆಗಿತ್ತು. ಅವರು “ನಾನು ನಿಮ್ಮ ಯೋಗಕ್ಷೇಮ ನೋಡಿಕೊಳ್ಳುತ್ತೇನೆ. ಏನಾದರೂ ಓದಿ, ಬರೆಯಿರಿ” ಅಂದರು. ರತ್ನಂ ಖುಷಿಯಾಗಿ ಒಪ್ಪಿದರು.

ಹಿಂದಿನ ಕಾಲದಿಂದ ಚೀನಾದೇಶದಿಂದ ಫಾಹಿಯಾನ್‌,  ಹ್ಯು ಎನ್‌ತ್ಸಾಂಗ ಮುಂತಾದ ಬೌದ್ಧ ಯಾತ್ರಿಕರು ನಮ್ಮ ದೇಶಕ್ಕೆ ಬಂದಿದ್ದರು. ಅವರ ಅನುಭವಗಳನ್ನೆಲ್ಲ ಓದಿದರು ರತ್ನಂ. ಕನ್ನಡದಲ್ಲಿ ಬರೆದರು. ಅದೇ ’‘ಚೀನಾ ದೇಶದ ಬೌದ್ಧ  ಯಾತ್ರಿಕರು’ ಪುಸ್ತಕ ಆಯಿತು. ಅವರ ಮೊದಲನೆಯ ಪುಸ್ತಕ. ಅದಕ್ಕೆ ೧೯೩೩ರಲ್ಲಿ ಮೈಸೂರು ಸರ್ಕಾರದ ದೇವರಾಜ ಬಹದ್ದೂರ ಬಹುಮಾನ ಬಂತು.

ಮಕ್ಕಳಿಗಾಗಿ ಸಾಹಿತ್ಯ

ಈ ನಡುವೆ ಅವರ ತಂದೆಯವರ ಆರೋಗ್ಯ ತಪ್ಪಿತು. ಕೆಲಸ ಮಾಡಲು ಆಗುತ್ತಿರಲಿಲ್ಲ. ಅವರ ಬದಲಿಗೆ ಪಾಠ ಹೇಳಲು ರಾಜರತ್ನಂ ಹೋಗಬೇಕಾಯಿತು. ಮಿಡ್ಲ್ ಸ್ಕೂಲಿನ ಮಕ್ಕಳಿಗೆ ಪಾಠ. ಆಗ ಎಳೆಯ ಮಕ್ಕಳಿಗೂ ಕಠಿಣವಾದ ಹಳಗನ್ನಡ ಪದ್ಯಗಳನ್ನೇ ಕಲಿಸುತ್ತಿದ್ದರು. ಬಾಯಿ ತಿರುಗದಂಥ ಭಾಷೆ. ಅರ್ಥವಂತೂ ಯಾರಿಗೂ ಆಗದು. ಕನ್ನಡ ಪದ್ಯ ಅಂದರೆ ಮಕ್ಕಳಿಗೆ ಹೆದರಿಕೆ ಆಗುತ್ತಿತ್ತು.

ಮಕ್ಕಳು ಸರಾಗವಾಗಿ ಹೇಳುವಂತೆ, ಸುಲಭವಾಗಿ ತಿಳಿದುಕೊಳ್ಳುವಂತೆ ಪದ್ಯ ಬರೆಯಬೇಕು  ಅನ್ನಿಸಿತು ರತ್ನಂಗೆ. ಅಂತಹ ಪದ್ಯ ಕೆಲಸವನ್ನು ಆಗಲೇ ಹೊಯಿಸಳ, ಪಂಜೆ ಮಂಗೇಶರಾವ್‌ ಮುಂತಾದವರು ಬರೆದಿದ್ದರು. ರಾಜರತ್ನಂ ಅವರೂ ಬರೆದರು.

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ

ಕನ್ನಡ ನಾಡಿನ ಮಕ್ಕಳಲ್ಲಿ ಬಹುಮಂದಿ ಹಾಡಿ ನಕ್ಕು ನಲಿಯುವಂತೆ ಮಾಡಿರುವ ಕವನ ಇದು. ಕಾಸಿನ ತುತ್ತೂರಿ ಕೊಂಡ ಕಸ್ತೂರಿಗೆ ಜಂಬವೋ ಜಂಬ.

ತನಗೇ ತುತ್ತೂರಿ ಇದೆ ಎಂದ
ಬೇರಾರಿಗು ಅದು ಇಲ್ಲೆಂದ

ತುತ್ತೂರಿಯನ್ನು ಊದಿದ್ದು ಊದಿದ್ದೇ. ಸಂಜೆ ಕೊಳದ ಹತ್ತಿರ ನಡೆದ  ಕಸ್ತೂರಿ ತನ್ನ ತುತ್ತೂರಿಯನ್ನು ಊದುತ್ತ ತುತ್ತೂರಿ ನೀರಿಗೆ ಬಿತ್ತು. ಬಣ್ಣದ ತುತ್ತೂರಿ ಬೋಳಾಯ್ತು. ಜಂಬದ ಕೋಳಿಗೆ ಗೋಳಾಯ್ತು. ಇದು ಮೊದಲನೆ ಕವನ

ಈ ಕವನ ಜಂಬ ಪಡಬಾರದು ಅನ್ನು ನೀತಿ  ಕಲಿಸುತ್ತದೆ.

“ತುತ್ತೂರಿ” ಕನ್ನಡ ನಾಡಿನಲ್ಲೆಲ್ಲ ಹೆಸರುವಾಸಿಯಾಯಿತು. ಅನಂತರ ಕಡಲೆಪುರಿ, ಚುಟಕ, ಕಲ್ಲುಸಕ್ಕರೆ, ಗುಲಗಂಜಿ, ತುಂಟ ಗಣಪತಿ, ಮುದ್ದು ಕೃಷ್ಣ ಎನ್ನುವ ಪುಸ್ತಕಗಳನ್ನು ಬರೆದರು. ಕಂದನ  ಕಾವ್ಯಮಾಲೆ ಎಂದು ಪ್ರಕಟಿಸಿದರು. ಪುಟ್ಟ ಮಕ್ಕಳು ಹಾಡಿಕೊಂಡು ನಲಿಯಲು  ಬೇಕಾದ ಪದ್ಯಗಳನ್ನು ರಚಿಸಿಕೊಟ್ಟರು. ಆಗಾರ ರಾಜರತ್ನಂ ಶಿಶುವಿಹಾರಗಳಲ್ಲೂ ಕೆಲಸ ಮಾಡುತ್ತಿದ್ದರು. ಅಲ್ಲೂ ಮಕ್ಕಳಿಗೆ ಈ ಪದ್ಯಗಳನ್ನೆಲ್ಲ ಕಲಿಸುತ್ತಿದ್ದರು.

ಬೌದ್ಧ ಸಾಹಿತ್ಯ

ಬೌದ್ಧ ಯಾತ್ರಿಕರ ವಿಷಯ ತಿಳಿದುಕೊಳ್ಳುವಾಗ ರಾಜರತ್ನಂ ಗಮನ ಭಗವಾನ್‌ ಬುದ್ಧನ ಕಡೆಗೂ ಬುದ್ದನ ಕಡೆಗೂ ಹರಿಯಿತು. ಆತನ ಭೋಧೆಯನ್ನು ಚೆನ್ನಾಗಿ ಅಭ್ಯಾಸ ಮಾಡಿದರು. ‘ಧರ್ಮದಾನಿ ಬುದ್ದ’ ಅನ್ನುವ ಪುಸ್ತಕ ಬರೆದರು. ಬುದ್ಧಬೋಧನೆಗಳ ಪುಸ್ತಕ ’ಧರ್ಮ ಪದ’  ನಮ್ಮ ಭಗವದ್ಗೀತೆಯ ಹಾಗೆ. ರಾಜರತ್ನಂ ಅದನ್ನು ಕನ್ನಡದಲ್ಲಿ  ಬರೆದರು. ಬುದ್ಧನ ಬೋಧೆ ಇರುವುದು ಪಾಲಿ ಭಾಷೆಯಲ್ಲಿ. (ಅದು ಒಂದು ರೀತಿಯ ಹಳೆ ಸಂಸ್ಕೃತದಂತೆ) ಬೌದ್ಧರ ಮೂಲಗ್ರಂಥಗಳನ್ನೇ ಓದಬೇಕು ಎನ್ನುವುದು ರಾಜರತ್ನಂ  ಹಟ. ಅದಕ್ಕಾಗಿ ಪಾಲಿಯನ್ನೇ ಕಲಿತರು.

ಬೆಳಗ್ಗೆ ಓದು. ಮಧ್ಯಾಹ್ನ ಶಾಲೆ ಕೆಲಸ. ಸಂಜೆ  ಆಸ್ಪತ್ರೆಗೆ ಓಡಾಟ, ರಾತ್ರಿ ಓದು. ಹೀಗೆ ಕೆಲಸ ಮಾಡಿ ಬುದ್ಧನ ಬೋಧನೆಯನ್ನೆಲ್ಲ ತಿಳಿದುಕೊಂಡರು.

ಆಸ್ಪತ್ರೆಯ ದಾರಿಯಲ್ಲಿ ಒಂದು ಹೆಂಡದ ಅಂಗಡಿ, ಅಲ್ಲಿ ದಿನವೂ ಸಂಜೆ ಬೇಕಾದಷ್ಟು  ಜನ ಹೆಂಡ ಕುಡಿದು ಅಮಲು ಏರಿಬಾಯಿಗೆ ಬಂದ ಹಾಗೆ ಹರಟುತ್ತ ತೂರಾಡುತ್ತಾ ಇರುತ್ತಿದ್ದರು. ಸಾಮಾನ್ಯವಾಗಿ ಅವರೆಲ್ಲ ಬಡವರೇ. ಬಡವರಾದರೂ ಕುಡುಕರಾದರೂ ಅವರ ಮಾತಿನಲ್ಲೂ ಎಷ್ಟೋ ನೀತಿ ಧಾರಾಳತನ ವಿಶ್ವಾಸ ದೇವರಲ್ಲಿ ನಂಬಿಕೆ ದೊಡ್ಡವರಲ್ಲಿ ಗೌರವ ಸತ್ಯವಂತಿಕೆ ಇರುತ್ತಿತ್ತು.

ಯೆಂಡ್ಕುಡ್ಕ ರತ್ನ

ದಿನವೂ ರಾತ್ರಿ ಆ ದಾರಿಯಲ್ಲಿ ಬರುವಾಗ ರಾಜರತ್ನಂ ಕುಡುಕರ ಮಾತು ಕೇಳಿಸಿಕೊಳ್ಳುತ್ತಿದ್ದರು. ಅವರ ನೀತಿ ನಡವಳಿಕೆ ಎಲ್ಲವನ್ನೂ ಗಮನಿಸುತ್ತಿದ್ದರು. ಆ ಕುಡುಕರ ಮಾತಿನಲ್ಲೇ ಕೆಲವು ಪದ್ಯ ಬರೆದರು. ’‘ಯೆಂಡ್ಕುಡ್ಕ ರತ್ನ’’ ಎಂದು ಪುಸ್ತಕ ರೂಪದಲ್ಲಿ ಅವು ಪ್ರಕಟವಾಗಿವೆ. ಕುಡಕರ ನೀತಿ ನಿಯತ್ತು, ಹೆಂಡದಂಗಡಿಯ ಒಡೆಯ ಮುನಿಯನ ಜಿಪುಣತನ, ಬಡವರಲ್ಲೂ ಇರುವ ಸತ್ಯವಂತಿಕೆ, ಸಾಹುಕಾರರ ಮೋಸಗಾರಿಕೆ ಎಲ್ಲವನ್ನೂ ಸೊಗಸಾಗಿ ಬರೆದರು. ಈ ಪುಸ್ತಕದಲ್ಲಿ  ಮಾತನಾಡುವವನು ಹೆಂಡ ಕುಡಿಯುವ ರತ್ನ ಎನ್ನುವವನು. ಪದ್ಯಗಳಲ್ಲಿ ಒಳ್ಳೆ ಅರಳು ಹುರಿದ ಹಾಗೆ ಮಾತು. ಹಳ್ಳಿಯವರ ಭಾಷೆ ! ವಿಚಿತ್ರವಾಗಿದ್ದವು.  ಬಹು ಬೇ ಎಲ್ಲರ ಬಾಯಲ್ಲೂ ನಲಿದವು.

ಉದಾಹರಣೆಗೆ, ’ಕನ್ನಡ ಪದಗಳು’ ಎನ್ನುವ ಕವನದ ಪ್ರಾರಂಭದ ಈ ಸಾಲುಗಳನ್ನು ನೋಡಿ:

ಹೆಂಡ ಯೆಡ್ತಿ ಕನ್ನಡ ಪದಗೋಳ್‌
ಅಂದ್ರೆ ರತ್ನಂಗ ಪ್ರಾಣ!
ಬುಂಡೇನ್‌ ಎತ್ತಿ ಕುಡದ್ಬುಟ್ಟಾಂದ್ರೆ-
ತಕ್ಕೋ ! ಪದಗೊಳ್  ಬಾಣ !

ಹೆಂಡ, ಹೆಂಡ್ತಿ, ಕನ್ನಡ ಪದಗಳು ಮೂರನ್ನೂ ಪ್ರಾಣದಂತೆ ಪ್ರೀತಿಸುವ ಯೆಂಡ್ಕುಡ್ಕ ರತ್ನ ಈ ಕವನದ ಕಡೆಯಲ್ಲಿ ಹೇಳುತ್ತಾನೆ:

ಯೆಂಡ ಓಗ್ಲಿ ! ಯೆಡ್ತಿ ಓಗ್ಲಿ !
ಎಲ್ಲಾ ಕೊಚ್ಕಂಡ್‌ ಓಗ್ಲಿ!
ಪರ್ಪಂಚ್ ಇರೋತನಕ ಮುಂದೆ
ಕನ್ನಡ ಪದಗೊಳ್‌ ನುಗ್ಲಿ!

ಅಧ್ಯಾಪಕ ಸಾಹಿತಿ

ಈ ಪದ್ಯಗಳನ್ನು ಅಚ್ಚು ಮಾಡಿಸಲು ರತ್ನರಿಗೆ ಆಸೆ, ಆದರೆ ಹಣ ಇಲ್ಲ. ತಮಗೆ ಬಂದಿದ್ದ ಚಿನ್ನದ ಪದಕವನ್ನೇ ಒತ್ತೆ ಇಟ್ಟು ಸಾಲ ಮಾಡಿ ಅಚ್ಚು ಮಾಡಿಸಿದರು.

೧೯೩೧ರಲ್ಲಿ ಮಡಕೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಅಲ್ಲಿ ರತ್ನಂ ಈ ಪದ್ಯಗಳನ್ನು ಓದಿದರು. ಕೇಳಿದವರಿಗೆಲ್ಲ ಹುಚ್ಚು ಹಿಡಿಸಿತು ಆ ವಾಚನ. ಆಗಿನಿಂದ ಕರ್ನಾಟಕದಲ್ಲೆಲ್ಲ ಆ ಪದ್ಯಗಳು ಪ್ರಖ್ಯಾತವಾದವು. ಎಲ್ಲರ ಬಾಯಲ್ಲೂ ಹೆಂಡ ಕುಡುಕನ ಪದಗಳೇ.

ರಾಜರತ್ನಂ ಅವರ ಹೆಂಡತಿ ಲಲಿತಮ್ಮನವರು ಕಾಯಿಲೆಯಿಂದ ಹುಷಾರಾಗಲೇ ಇಲ್ಲ. ಹೋಗಿಬಿಟ್ಟರು. ರತ್ನರಿಗೆ ತುಂಬ ಸಂಕಟ. ‘’ನಂಜಿ’’ ಅಂತ ಹೆಸರು ಇಟ್ಟು  ಅವರ ಮೇಲೆ ಕೆಲವು ಪದ್ಯ ಬರೆದರು. ಈ ಪುಟ್ನಂಜಿ ಪದಗಳೂ ತುಂಬ ಚೆನ್ನಾಗಿದ್ದವು. ‘’ಯೆಂಡ್ಕುಡ್ಕ ರತ್ನ’’, ’‘ಪುಟ್ನಂಜಿ ಪದಗಳು’’ ಎರಡು ಸೇರಿ ‘’ರತ್ನನ ಪದಗಳು’’ ಅಂತ ಪುಸ್ತಕವಾಗಿ ಬಂತು.

ಮುಂದೆ ೧೯೫೨ರಲ್ಲಿ ಇದೇ ತರದ ’ನಾಗನ ಪದಗಳು’ ಅನ್ನುವ ಪುಸ್ತಕ ಬರೆದರು. ನಾಗ-ಮಲ್ಲಿ ಅನ್ನುವ ಬಡಕೂಲಿಗಳ ಸಂಸಾರದ ಪದ್ಯಗಳು ಅವೂ ಬಹಳ ಪ್ರಸಿದ್ದಿ ಪಡೆದವು.

ಲಲಿತಮ್ಮನವರು ಕಣ್ಮರೆಯಾದ ಸ್ವಲ್ಪ ಕಾಲದಲ್ಲೇ ಸೀತಮ್ಮ ಎಂಬುವರೊಡನೆ ಮದುವೆ ಆಯಿತು. ಆಕೆ ಗೋಪಾಲಕೃಷ್ಣಯ್ಯಂಗಾರ ಎನ್ನುವ ನ್ಯಾಯಾಧೀಶರ ಮಗಳು. ಆ ಮಾವನವರ ಸಹಾಯದಿಂದ ಸೀತಮ್ಮನವರ ಸಹಕಾರದಿಂದ ರಾಜರತ್ನಂ  ಅವರ ಸಾಹಿತ್ಯದ ಕೆಲಸ ಹಿಮಾಲಯದ ಹಾಗೆ ಬೆಳೆಯಿತು.

ಬರಹದ ಕ್ಷೇತ್ರ ವಿಸ್ತರಿಸಿತು

ಪುಟಾಣಿಗಳಿಗೆ ಪದ್ಯ ಬರೆದಿದ್ದರಲ್ಲ, ಹಾಗೆಯೇ ಬೆಳೆದ ಮಕ್ಕಳಿಗೆ ಓದಲು ತಕ್ಕ ಕತೆಗಳನ್ನೂ ಜೀವನ ಚರಿತ್ರೆಗಳನ್ನೂ ಬರೆದರು. ಗೌತಮ ಬುದ್ಧ, ಶ್ರೀಹರ್ಷ, ಅಶೋಕಮೌರ್ಯ, ಯೇಸುಕ್ರಿಸ್ತ, ಅಲ್ಲಮ ಪ್ರಭು, ಶ್ರೀರಾಮಚಂದ್ರ ಇವುಗಳನ್ನೆಲ್ಲ ಬರೆದರು.

ಇದರಿಂದ ನಾಲ್ಕು ಕಾಸು ಸಿಕ್ಕಿತು. ಸ್ವಲ್ಪ ನೆಮ್ಮದಿ ಆಯಿತು. ಬೌದ್ಧ ಸಾಹಿತ್ಯವನ್ನು ಇನ್ನೂ ಹೆಚ್ಚು ಬರೆಯೋಣ ಅಂತ ಅವರು ’ಶಾಕ್ಯ ಸಾಹಿತ್ಯ ಮಂಟಪ’ ಆರಂಭಿಸಿದರು. ಬುದ್ಧ ಶಾಕ್ಯವಂಶದವನು. ಅದಕ್ಕೇ ಆ ಹೆಸರು.

ಕನ್ನಡದಲ್ಲಿ ಬೌದ್ಧ ಸಾಹಿತ್ಯ ಇದ್ದುದು ಕಡಿಮೆ. ರಾಜರತ್ನಂ ಆ ಕೊರತೆಯನ್ನು ತುಂಬಿದರು. ’ಬುದ್ಧ ವಚನ ಪರಿಚಯ’ ’ಮಿಲಿಂದ ಪ್ರಶ್ನೆ’, ’ಪಾಲಿ ಪಜ್ಜ ಪುಷ್ಪಂಜಲಿ’ ಎನ್ನುವ ಪುಸ್ತಕಗಳನ್ನು ಬರೆದರು. ಮೊದಲನೆಯದರಲ್ಲಿ ಬುದ್ಧನ ಬೋಧೆಯ ವಚನಗಳಿವೆ. ’ಮಿಲಿಂದ ಪ್ರಶ್ನೆ’ಯಲ್ಲಿ ಮಿಲಿಂದರಾಜನಿಗೂ ನಾಗಸೇನ ಮುನಿಗೂ ನಡೆದ ಧರ್ಮದ ಚರ್ಚೆ ಇದೆ. ‘’ಪಾಲಿ ಪಜ್ಜ ಪುಷ್ಪಂಜಾಲಿ’ಯಲ್ಲಿ ಕೆಲವು ಪಾಲಿ ಭಾಷೆಯ ಪದ್ಯಗಳ ಕನ್ನಡ ಅನುವಾದ ಇದೆ.

ಈ ‘ಬುದ್ದ ವಚನ ಪರಿಚಯ’ ಹಾಗೂ ‘ರತ್ನನ ಪದಗಳು’’ ಪುಸ್ತಕಗಳಿಗೂ ದೇವರಾಜ ಬಹದ್ದೂರ್ ಬಹುಮಾನ ಬಂತು. ಹೀಗೆ ಮೂರು ಸಲ ಆ ಬಹುಮಾನ ಪಡೆದವರು ರಾಜರತ್ನಂ ಒಬ್ಬರೇ.

ಹೀಗೆಯೇ ಅವರು ಜೈನಧರ್ಮವನ್ನೂ ಚೆನ್ನಾಗಿ ಅಭ್ಯಾಸ ಮಾಡಿದರು. ಮಹಾವೀರನ ಮಾತುಕತೆ, ಶ್ರೀ ಗೋಮಟೇಶ್ವರ, ಭಗವಾನ್‌ ಮಹಾವೀರ, ಭಗವಾನ್ ಪಾರ್ಶ್ವನಾಥ ಮುಂತಾದ ಜೈನ ಸಾಹಿತ್ಯವನ್ನೂ ರಚಿಸಿದರು.

ಪುರುಷ ಸರಸ್ವತಿ

’ಶ್ರೀ ಮಹಾಕವಿ ಪುರುಷ ಸರಸ್ವತಿ’ ಅನ್ನುವುದು ರಾಜರತ್ನಂರ ಇನ್ನೊಂದು ಹೆಸರುವಾಸಿಯಾದ ಪುಸ್ತಕ. ವಿದ್ವಾಂಸರು ಎಷ್ಟೋ ಸಲ ಸಣ್ಣ  ವಿಷಯಕ್ಕೆಲ್ಲ ವಾದ ಮಾಡುವುದು. ಹಳೆಯ ಕಾಲದ ಪಂಡಿತರು ಸಂಸ್ಕೃತ ತೂಮಬಿದ ಬಾಷೆಯಲ್ಲಿ ಬರೆಯುತ್ತಿದ್ದುದು, ಕರ್ನಾಟಕ ಸರಿಯೋ ಕರ್ಣಾಟಕ ಸರಿಯೋ ಎಂದು ನಡೆದ ಚರ್ಚೆ ಇದನ್ನೆಲ್ಲ ಲೇವಡಿ ಮಾಡಿ ರಾಜರತ್ನಂ ಈ ’ಪುರಷ ಸರಸ್ವತಿ’ ಪದ್ಯಗಳನ್ನು ಬರೆದರು. ಹಳೆಯ ಕಾಲದ ಧಾಟಿಯಲ್ಲೇ  ಇರುವ ಇವುಗಳಲ್ಲಿ  ಹಾಸ್ಯ, ಟೀಕೆ ತುಂಬಿದೆ. ಇಂಗ್ಲಿಷ್ ಪದಗಳನ್ನೂ  ಬರೆದರು. ಹಳೆಯ ಕಾಲದ  ಧಾಟಿಯಲ್ಲೇ ಇರುವ ಇವುಗಳಲ್ಲಿ ಹಾಸ್ಯ, ಟೀಕೆ ತುಂಬಿದೆ. ಇಂಗ್ಲಿಷ್ ಪದಗಳನ್ನೂ ಸಮೃದ್ಧವಾಗಿ ಬೆರೆಸಿದರು. ಈ ಕೃತಿಯಲ್ಲಿ ಸರಸ್ವತಿಗೆ ಪ್ರಾರ್ಥನೆ:

ಸ್ಟ್ಯಾಲುಟೇಷನ್ಸ್ ವಾಣಿ ನಿನ್ನಯ
ವ್ಯಾಲ್ಯುಬಲ್‌ ಕೋ-ಆಪ ನೆಚ್ಚಿಯೆ
ವ್ಯಾಲ್ಯುಬಲ್‌ ನೆನಪ್ಪೆನೆಂಬೀಯಾಂಬಿಷನ್ನೆನಗೆ ||
ಸ್ಟಿಲ್ಯು ಮೇ ನಾಟ್‌ಕೇರ‍್ಪು ಏಡ್ಮೀ
ಸಿಲ್ಲಿ ಫಿಯರಿದು- ಅಲ್ಲ ವರದೇ
ವಿಲ್ಯು ಹೆಲ್ಮೀ ಯುವಿಲ್‌ ಥ್ಯಾಂಕ್ಯೂ ಫಾರ್ದಿ ಅಷ್ಯೂರೆನ್ನ ||

(ಸ್ಪ್ಯಾಲ್ಯುಟೇಷ್‌ನ್ಸ (ನಮಸ್ಕಾರ) ವಾಣಿ, ನಿನ್ನಯ ವ್ಯಾಲ್ಯುಬಲ್‌ ಕೋ ಆಪ (ಬಹುಬೆಲೆ ಬಾಳುವ ಸಹಕಾರವನ್ನು) ನೆಚ್ಚಿಯೆ ವ್ಯಾಲ್ಯುಬಲ್‌ (ಬೆಲೆ ಬಾಳುವಂತಹವನು) ನಾನು ಆಗುತ್ತೇನೆ ಎಂಬ ಈ ಆಂಬಿಷನ್‌ (ಆಕಾಂಕ್ಷೆ) ಎನಗೆ. ಸ್ಪಿಲ್‌ ಯು ಮೇ ನಾಟ್‌ ಕೇರ್ ಟು ಏಡ್‌ ಮಿ (ಆದರೂ ನೀನು ನನಗೆ ಸಹಾಯ ಆಡಲು ಮನಸ್ಸು ಮಾಡದೆ ಇರಬಹುದು). ಇದು ಸಿಲ್ಲಿ ಫಿಯರ (ಇದು ಮೂರ್ಖ ಹೆದರಿಕೆ) ಅಲ್ಲ ವರದೇ? ವಿಲ್ಯು ಹೆಲ್ಪ್ ಮಿ ( ನನಗೆ ಸಹಾಯ ಮಾಡುತ್ತೀಯ?) ಯು ವಿಲ್‌ (ಮಾಡುತ್ತಿ, ಅಲ್ಲ?) ಥ್ಯಾಂಕ್ಯೂ ಫಾರ್‌ ದಿ ಅಷ್ಯೂರೆನ್ಸ್ (ನಿನ್ನ ಭರವಸೆಗೆ ವಂದನೆಗಳು).

ಮಕ್ಕಳು’ ‘ತುತ್ತೂರಿ’ಯ’ ಕವನಗಳನ್ನು ಓದಿ ಖುಷಿಪಟ್ಟಂತೆ ದೊಡ್ಡವರು ‘’ಪುರುಷ ಸರಸ್ವತಿ’’ ಓದಿ ಸಂತೋಷಪಟ್ಟರು.

ಕನ್ನಡ ಆಧ್ಯಾಪಕರು

ಒಂಬತ್ತು ವರ್ಷ ಕೆಲಸವಿಲ್ಲದೆ ಅಲೆದಾಟ. ಕೊನೆಗೆ ೧೯೩೮ರಲ್ಲಿ  ರಾಜರತ್ನಂ ಅವರಿಗೆ ಕಾಲೇಜಿನಲ್ಲಿ ಕನ್ನಡ ಪಂಡಿತರ ಕೆಲಸ ಸಿಕ್ಕಿತು. (ಆಗಿನ ಕಾಲದಲ್ಲಿ ಭಾರತೀಯ ಭಾಷೆಗಳ  ಪಾಠ ಹೇಳುವವರಿಗೆ ಕಾಲೇಜುಗಳಲ್ಲೂ ’ಪಂಡಿತರು’ ಎಂದೇ ಹೆಸರು ! ಇಂಗ್ಲೀಷ, ಚರಿತ್ರೆ ಇತ್ಯಾದಿ ವಿಷಯಗಳ ಪಾಠ ಹೇಳಿದರೆ ’ಅಧ್ಯಾಪಕರು’ !) ೪೦ ರೂ. ಸಂಬಳ. ಮೈಸೂರು, ತುಮಕೂರು, ಬೆಂಗಳೂರು ಮುಂತಾದ ಕಾಲೇಜುಗಳಲ್ಲಿ ಕನ್ನಡ ಪಾಠ ಹೇಳಿದರು. ಕನ್ನಡ ಅಂದರೆ  ಅವರಿಗೆ ಪ್ರಾಣ. ಅದರಲ್ಲೂ ಪಂಪ, ರನ್ನ, ನಾಗಚಂದ್ರ ಮೊದಲಾದ ಹಳಗನ್ನಡ ಕವಿಗಳ ಮೇಲೆ ವಿಶೇಷ ಅದರ, ಹೊಸಗನ್ನಡದಲ್ಲೂ ಆಸಕ್ತಿ, ಮೇಲಾಗಿ  ವಿದ್ಯಾರ್ಥಿಗಳ ಮೇಲೆ ತುಂಬ ಪ್ರೀತಿ. ಎಷ್ಟೇ ದೊಡ್ಡ ಕೊಠಡಿಯನ್ನು ತುಂಬುವ ಕಂಚಿನ ಕಂಠ ಒಳ್ಳೆ ಮಾತುಗಾರಿಕೆ. ವಿದ್ಯಾರ್ಥಿಗಳಿಗೆ ಎಲ್ಲಿ ಕಷ್ಟವಾಗಬಹುದು ಎಂದು ಅರ್ಥ ಮಾಡಿಕೊಂಡು ವಿಷಯವನ್ನು ಸ್ಪಷ್ಟವಾಗಿ ವಿವರಿಸುವ ಸಾಮರ್ಥ್ಯ. ಇದೆಲ್ಲದರಿಂದ ಅವರು ತುಂಬ ಜನಪ್ರಿಯ ಉಪಾಧ್ಯಾಯರಾದರು. ರಾಜರತ್ನಂ ಪಾಠ ಎಂದರೆ ಹುಡುಗರಿಗೆ ಅಚ್ಚು ಮೆಚ್ಚು. ಬೇರ ತರಗತಿಗಳವರೂ ಅವರ ಪಾಠ ಕೇಳಲು ಬರುತ್ತಿದ್ದರು. ಪಾಠ ಹೇಳುವವನು ಮೊದಲು ತಾನು ಚೆನ್ನಾಗಿ ತಿಳಿದುಕೊಳ್ಳಬೇಕು. ಹಾಗೆ ತಿಳಿದುಕೊಂಡಿದ್ದನ್ನು ವಿದ್ಯಾರ್ಥಿಗಳಿಗೆ ಚೆನ್ನಾಗಿ ಹೇಳಿ ಕೊಡಬೇಕು. ಒಳ್ಳೆ ದಾರಿ ತೋರಿಸಬೇಕು. ವಿದ್ಯಾರ್ಥಿಗಳಲ್ಲಿ ಇರುವ ಸಾಮರ್ಥ್ಯ ಬೆಳೆಯಲು ಸಹಾಯ ಮಾಡಬೇಕು ಅನ್ನುವುದು ರಾಜರತ್ನಂ ವಿಚಾರ. ಹಾಗೆಯೇ ಶ್ರದ್ಧೆಯಿಂದ ಪಾಠ ಹೇಳುತ್ತಿದ್ದರು.

ಚಿಕ್ಕ ವಯಸ್ಸಿನ ಬರಹಗಾರರಿಗೆ ಪ್ರೋತ್ಸಾಹ ಕೊಡುವುದು ರಾಜರತ್ನಂ ಅವರಿಗೆ ರಕ್ತದಲ್ಲಿ ಬೆರೆತು ಹೋಗಿದ್ದ ಗುಣ. ಜೊತೆಗೆ ವಿದ್ಯಾರ್ಥಿಗಳಿಂದಲೇ ಲೇಖನ ಬರೆಸುತ್ತಿದ್ದರು. ಆ ಲೇಖನಗಳನ್ನು ಸೇರಿಸಿ ’ನಮ್ಮ ನಮ್ಮವರು’ ಅನ್ನುವ ಪುಸ್ತಕ ಮಾಡಿದರು. ಅದರಿಂದ ವಿದ್ಯಾರ್ಥಿಗಳಿಗೆ ತುಂಬ ಉತ್ತೇಜನ ಸಿಕ್ಕಿತು.

ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಇದ್ದಾಗ ಅಲ್ಲಿನ ಕರ್ನಾಟಕ ಸಂಘದಲ್ಲಿ ಹೀಗೆಯೇ ಹಲವು ಪುಸ್ತಕಗಳನ್ನು ವಿದ್ಯಾರ್ಥಿಗಳಿಂದಲೇ ಬರೆಸಿದರು. ತೋಟಗಾರ ಗಿಡಗಳಿಗೆ ಪಾತಿ ಮಾಡಿ ಕಳೆ ಕಿತ್ತು, ನೀರ ಹಾಕಿ ಗೊಬ್ಬರ ಹಾಕಿ ಬೆಳೆಸುವುದಿಲ್ಲವೇ ಹಾಗೆ ರಾಜರತ್ನಂ ವಿದ್ಯಾರ್ಥಿಗಳ ಸಾಹಿತ್ಯ ಶಕ್ತಿಯನ್ನು ಬೆಳೆಸಿದರು. ಈಗ ಹೆಸರು ಪಡೆದಿರುವ ಎಷ್ಟೋ ಸಾಹಿತಿಗಳು ಅವರ ಶಿಷ್ಯರೇ.

ರಾಜರತ್ನಂ ತಮ್ಮ ಬದುಕಿನ ಮೂವತ್ತು ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿದರು. ೧೯೬೩ ರಲ್ಲಿ ನಿವೃತ್ತಿ ಆದರು. ಆದರೆ ಕೆಲಸ ನಿಲ್ಲಿಸಲಿಲ್ಲ. ಕೆಲವು ವರ್ಷ ಕಾಲೇಜುಗಳಲ್ಲಿ ಪಾಠ ಹೇಳಿದರು. ಹಲವು ಶಾಲಾ ಕಾಲೇಜುಗಳಲ್ಲಿ ಇತರ ಸಂಸ್ಥೆಗಳಲ್ಲಿ ನೀತಿ, ಧರ್ಮ ನಡತೆಗಳನ್ನು ಹೇಳಿ ಕೊಟ್ಟು ಪಾಠ ಮಾಡಿದರು. ಭಾಷಣಗಳಿಗಂತೂ ಲೆಕ್ಕವೇ ಇಲ್ಲ.

ಚಿಂತನೆಯ ಕಣಜ

ಬರವಣಿಗೆಯೂ ಬಿಡುವಿಲ್ಲದೆ ನಡೆದಿತ್ತು. ಹಳಗನ್ನಡ ಕಾವ್ಯಗಳ ವಿವರಣೆಗಳು. ಪಂಪ ರನ್ನರ ಮೇಲೆ ಪುಸ್ತಕಗಳು, ಗಾಂಧೀಜಿ ಬಗ್ಗೆ ಏಳೆಂಟು ಪುಸ್ತಕಗಳು, ನಾಟಕದ ಕೈಲಾಸಂ ಮೇಲೆ ಪುಸ್ತಕಗಳು, ಸ್ತೋತ್ರಗಳಿಗೆ ವಿವರಣೆಗಳು, ಜೈನರ ಕತೆ, ಬೌದ್ಧರ ಕತೆ, ಸತ್ಯಸಾಯಿ ಕತೆ ಹೀಗೆ ಬೇಕಾದಷ್ಟು ಬರೆದರು. ಸುಧಾ ವಾರಪತ್ರಿಕೆಯಲ್ಲಿ ವಿಚಾರರಶ್ಮಿ ವಿಭಾಗಕ್ಕೆ ’ಭ್ರಮರ’ ಎಂಬ ಹೆಸರಿನಿಂದ ಲೇಖನ ಬರೆಯುತ್ತಿದ್ದರು. ಆ ಲೇಖನಗಳು ವಿಚಾರಪೂರಿತವಾಗಿರುತ್ತಿದ್ದವು. ಜೇನುನೊಣ ತೋಟದಲ್ಲೆಲ್ಲ ಹಾರಾಡಿ ಹೂವಿನ ರಸ ತಂದು ಜೇನುತುಪ್ಪ ಮಾಡಿ ಕೊಡುವುದಿಲ್ಲವೇ, ಹಾಗೆ ರಾಜರತ್ನಂ ಪ್ರಪಂಚದ ಎಲ್ಲ ಕಡೆಗಳಿಂದಲೂ ವಿಷಯವನ್ನು ಕಲಿತು ಸ್ವಾರಸ್ಯವಾಗಿ ನಮಗೆ ತಿಳಿಸುತ್ತಿದ್ದರು. ಸುಧಾ ಪತ್ರಿಕೆಯಲ್ಲಿ ಭ್ರಮರ ಅಂದರೆ ಜೇನುನೊಣ ಅನ್ನುವ ಹೆಸರನ್ನೇ ಇಟ್ಟುಕೊಂಡು ಈ ರಸದ ಹನಿಗಳನ್ನು ಕೊಡುತ್ತಿದ್ದರು. ಅವುಗಳನ್ನು ಒಟ್ಟುಗೂಡಿಸಿ ’ವಿಚಾರ ರಶ್ಮಿ’ ಅನ್ನುವ ಪುಸ್ತಕವನ್ನು ಪ್ರಕಟಿಸಿದರು. ಅದು ಚಿಂತನೆಯ ಕಣಜ !

೧೯೬೭ರಲ್ಲಿ  ಸೀತಮ್ಮನವರು ಕಾಲವಾದರು. ಮುಂದಿನ ವರ್ಷ ರಾಜರತ್ನಂಗೂ ಕಾಲುಗಾಯ ಆಗಿ ತುಂಬ ನೆರಳಿಂದ ದೇವರ ದಯೆಯಿಂದ ಬದುಕಿಕೊಂಡರು. ಆಗ ಅರವತ್ತು ವರ್ಷ ಅವರಿಗೆ. ಬೆಂಗಳೂರಿನ ಕೆಲವು ಮಿತ್ರರು ಶಿಷ್ಯರು ಸೇರಿ ಅವರ ಪುಸ್ತಕಗಳನ್ನು ಊರೂರಲ್ಲೂ ಮಾರಿ ಹದಿನೆಂಟು ಸಾವಿರ ರೂಪಾಯಿ ನಿಧಿ ಅರ್ಪಿಸಿದರು. ಒಬ್ಬನೇ ಕವಿಯ ಪುಸ್ತಕಗಳು ಒಂದೇ ಸಲ ಇಷ್ಟೊಂದು ಮಾರಾಟ ಆದದ್ದು ಒಂದು ವಿಶೇಷ !

ಸನ್ಮಾನ

೧೯೩೭ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ೧೯೪೫ ರಲ್ಲಿ ರಬಕವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜರತ್ನಂ ಗೋಷ್ಠಿಗಳ ಅಧ್ಯಕ್ಷರಾಗಿದ್ದರು.

೧೯೬೯ರಲ್ಲಿ ರಾಜರತ್ನಂರನ್ನು ಕರ್ನಾಟಕದ ಸಾಹಿತ್ಯ ಅಕಾಡೆಮಿ ಸನ್ಮಾನಿಸಿತು. ಮುಂದಿನ ವರ್ಷ ಸರ್ಕಾರದ ರಾಜ್ಯೋತ್ಸವ ಸನ್ಮಾನವೂ ಬಂತು. ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಡಾಕ್ಟರ್‌ ಆಫ್‌ ಲಿಟರೇಚರ್‌ ಗೌರವ ಪದವಿ ಅರ್ಪಿಸಿತು.

೧೯೭೮ರಲ್ಲಿ ನಮ್ಮ ದೇಶದ  ರಾಜಧಾನಿ ದೆಹಲಿಯಲ್ಲಿ ಐವತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಅದಕ್ಕೆ ರಾಜರತ್ನಂ ಅಧ್ಯಕ್ಷರು. ೧೯೭೯ರ ಮಾರ್ಚಿಯಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೂ  ಹೋಗಿದ್ದರು. ಮಕ್ಕಳ ಸಾಹಿತ್ಯದ ಮೇಲೆ ಸೊಗಸಾಗಿ ಮಾತಾಡಿದರು. ಎಲ್ಲಕ್ಕಿಂತ ಹೆಚ್ಚಾಗಿ ರಾಜರತ್ನಂಗೆ ನಮ್ಮ ಜನರ ಪ್ರೀತಿ ಗೌರವ ಬೇಕಾದಷ್ಟು ಸಿಕ್ಕಿತು. ಅದೇ ಅವರ ಆಸ್ತಿ. ರಾಜರತ್ನಂ ಭಾಷಣ, ವಾಚನ ಕಾರ್ಯಕ್ರಮ ಅಂದರೆ ಜನಕ್ಕೆ ಸುಗ್ಗಿ. ಅವರ ಮಾತು ಅಷ್ಟು ಚೆನ್ನ. ಅವರು ಹೇಳುತ್ತಿದ್ದ ಮಾತು. ಚಿಂತನ ಇವೆಲ್ಲ ತುಂಬ ಜನಪ್ರಿಯ.

ದೆಹಲಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು

ರಾಜರತ್ನಂ ಇನ್ನಿಲ್ಲ

ಇತ್ತೀಚಿನ ವರ್ಷಗಳಲ್ಲಿ  ರಾಜರತ್ನಂ ಅವರ ಆರೋಗ್ಯ ಸರಿಯಾಗಿರಲಿಲ್ಲ. ಆದರೆ ಅವರ ಉತ್ಸಾಹ ಕುಗ್ಗಿರಲಿಲ್ಲ. ೧೯೭೯ರ ಮಕ್ಕಳ ವರ್ಷದಲ್ಲಿ  ವಿಶೇಷವಾಗಿ ಕೆಲಸ ಮಾಡಬೇಕು ಅಂದುಕೊಂಡಿದ್ದರು.

ರಾಜರತ್ನಂಗೆ ದೇವರಲ್ಲಿ ಬಹಳ ಭಕ್ತಿ. ಅವರು ಕಾಯಿಲೆ ಮಲಗಿದ್ದಾಗ ಯಾವಾಗಲೂ ಸ್ತೋತ್ರ ಹೇಳುತ್ತಿದ್ದರು. ಮೈಮೇಲೆ ಜ್ಞಾನ ಇಲ್ಲದೆ ಇರುವಾಗಲೂ ಬಾಯಲ್ಲಿ ಶ್ಲೋಕವೇ? ’‘ದೇವ್ರ್‌ ಏನ್‌ ಕೊಡಲಣ್ಣ, ಕೊಡದಿದ್ರೆ ಬುಡಲಣ್ಣ ನಾವೆಲ್ಲ ಅವ್ನೀಗೆ ಬಚ್ಚ’’ ಎನ್ನುವ ಅವರ ಪದ ಇದೆ. ದೇವರು ನಮಗೆ ಏನೇ ಕೊಡಲಿ ಬಿಡಲಿ, ನಾವು ಅವನ ಮಕ್ಕಳು, ಅವನು ನಡೆಸಿದ ಹಾಗೆ ನಡೆದುಕೊಳ್ಳಬೇಕು ಎನ್ನುತ್ತಿದ್ದರು.

೧೯೭೯ ಮಾರ್ಚ ಎಂಟನೆಯ ತಾರೀಖು ರಾಜರತ್ನಂ ಧರ್ಮಸ್ಥಳಕ್ಕೆ ಹೋದರು. ಸಾಹಿತ್ಯ ಸಮ್ಮೇಳನದಲ್ಲಿ ಮಾತಾಡಿದರು. ಗೋಮಟೇಶ್ವರ ದರ್ಶನ ಮಾಡಿದರು. ಹನ್ನೊಂದನೆಯ ತಾರೀಖು ಭಾನುವಾರ ಬೆಂಗಳೂರಿಗೆ ಬಂದರು. ಹದಿಮೂರನೆಯ ತಾರೀಖು ಮಂಗಳವಾರ ಮಧ್ಯಾಹ್ನ ಎದೆನೋವು ಎಂದು ಮಲಗಿದರು. ಏಳಲೇ ಇಲ್ಲ. ಇನ್ನೊಬ್ಬರಿಗೆ ಏನೂ ಕಷ್ಟವಾಗದಂತೆ, ದೇವರ ಹೆಸರನ್ನು ಹೇಳಿಕೊಂಡು ದೇವರ ಪಾದ ಸೇರಿಕೊಂಡರು.

ಬುದ್ಧದೇವ ಹುಟ್ಟಿದ್ದು, ಜ್ಞಾನ ಪಡೆದದ್ದು, ನಿರ್ಯಾಣವಾದದ್ದೂ ಹುಣ್ಣಿಮೆ ದಿನವೇ. ಹಾಗೆಯೇ ರಾಜರತ್ನಂ ಹುಟ್ಟಿದ್ದು ಕಾಲವಾದದ್ದು ಹುಣ್ಣಿಮೆ ದಿನವೇ.

ಮಕ್ಕಳ ಗೆಳೆಯ

ಮಕ್ಕಳು ಅಂದರೆ ರಾಜರತ್ನಂಗೆ ಪ್ರಾಣ. ಅವರ ಜೊತೆಯಲ್ಲಿ ತಾವೂ ಮಕ್ಕಳೇ ಆಗಿರುತ್ತಿದ್ದರು. ಅವರ ‘’ನಾಯಿ ಮರಿ  ನಾಯಿ ಮರಿ ತಿಂಡಿ ಬೇಕೆ’’ ಪದ್ಯ ಕೇಳದ ಮಕ್ಕಳಿಲ್ಲ ಅವರನ್ನು ನೋಡಿದ್ದರೂ ಅವರ  ಹೆಸರು ಎಲ್ಲರಿಗೂ ಗೊತ್ತಿತ್ತು.

ಒಂದು ಸಲ ರಾಜರತ್ನಂ ಮೈಸೂರಿನಿಂದ ಬೆಂಗಳೂರಿಗೆ ಬರಲು ರಯಲು ಹತ್ತಿದರು. ಆಮೇಲೆ ಕೆಲವು ಸ್ಕೌಟ್‌ ಹುಡುಗರು ಬಂದು “ಇದು  ರಿಸರ್ವ ಗಾಡಿ. ನೀವು ಆಚೆ ಹೋಗಿ’ ಅಂದರು. “ನಾನು ಬಂದಾಗ ರಿಸರ್ವ ಅಂತ ಹಾಕಿರಲಿಲ್ಲ. ಈಗ ನಾನು ಹೋಗಲಿ’ ಅಂದರು ರಾಜರತ್ನಂ. ಹುಡುಗರು ಎಷ್ಟು ಸತಾಯಿಸಿದರೂ ಜಗ್ಗಲಿಲ್ಲ. ರಯಲು ಹೊರಟಿತು. ಮದ್ದೂರು ಬಂತು ತಿಂಡಿಗಾಗಿ ಎಲ್ಲರೂ  ಇಳಿದರು. ಇಳಿದರೆ ಜಾಗ ಹೋದೀತು ಎಂದು ರಾಜರತ್ನಂ ಮೊದಲು ಯೋಚಿಸಿದರು. ಆಮೇಲೆ ಪರವಾಗಿಲ್ಲ, ಯಾಕೆ ಹೆದರಬೇಕು ಎಂದು ಇಳಿದರು. ವಾಪಸು ಬಂದಾಗ ಅವರ ಸೀಟು ಪೂರಾ ಖಾಲಿ. ಹುಡುಗರೆಲ್ಲ ದೂರ ಕೂತಿದ್ದರು ತೆಪ್ಪೆಗೆ ರಾಜರತ್ನಂ ಕೂತರು. ಹುಡುಗರು ಬಂದು ನಮ್ಮಸ್ಕಾರ ಮಾಡಿ ’ಕ್ಷಮಿಸಬೇಕು ಸಾರ್‌, ನೀವು ರಾಜರತ್ನಂ ಅಂತ ತಿಳಿಯಲಿಲ್ಲ. ತಲೆ ಹರಟೆ ಮಾಡಿದೆವು. ನೀವು ಓದುತ್ತಿದ್ದು ಇಲ್ಲಿ ಇಟ್ಟು  ಹೋಗಿದ್ದ ಪುಸ್ತಕದಲ್ಲಿ ನಿಮ್ಮ ಹೆಸರು ಬರೆದಿರುವುದನ್ನು ನೋಡಿದಾಗ ಗೊತ್ತಾಯಿತು. ಯೆಂಡಕುಡುಕ ರತ್ನ ಬರೆದವರು ನೀವೇನಾ ಸಾರ್‌? ತಪ್ಪಾಯಿತು” ಅಂದರು.

“ಒಳ್ಳೆಯದು, ನೀವು ಸ್ಕೌಟುಗಳು ಹೀಗೆ ಇನ್ನೊಬ್ಬರಿಗೆ ತೊಂದರೆ ಕೊಡಬಾರದು’ ಅಂದರು  ರಾಜರತ್ನಂ. ಮುಂದೆ ಎಲ್ಲರೂ ಗೆಳೆಯರಾದರು. ರಾಜರತ್ನಂ ಕತೆ ಪದ್ಯ ಹೇಳಿ ಎಲ್ಲರನ್ನೂ ನಗಿಸಿದರು.

ಇನ್ನೊಂದು ಸಲ ಒಂದು ಶಾಲೆಯಲ್ಲಿ ಒಬ್ಬ ಹುಡುಗನಿಗೆ ಜೈನ ಧರ್ಮದ ಮೇಲೆ ಮಾತಾಡಲು ಹೇಳಿದರು ಮೇಷ್ಟ್ರು. ಚಿಕ್ಕ ಹುಡುಗ. ಬುದ್ದಿವಂತ. ಅದೂ ಇದೂ ಓದಿ ವಿಷಯ ಸೇರಿಸಿ ಲೇಖನ ಬರೆದ, ತಂದೆಗೆ ತೋರಿಸಿದ. ಅವರು “ಜೈನಧರ್ಮ ರಾಜರತ್ನಂ ಅವರಿಗೆ ಚೆನ್ನಾಗಿ ಗೊತ್ತು. ಅವರನ್ನು ಕೇಳಿ ತಿಳಿದುಕೊ” ಅಂದರು. ಹುಡುಗ ರಾಜರತ್ನಂ ಮನೆ ಹುಡುಕಿಕೊಂಡು ಹೋದ. ಅವರು ಇರಲಿಲ್ಲ. ಎರಡು ಮೂರು ಸಲ ಹೋದರೂ ಸಿಗಲಿಲ್ಲ. ಬೇಜಾರು ಮಾಡಿಕೊಳ್ಳದೆ ಮತ್ತೆ ಹೋದ. ಸಿಕ್ಕಿದರು. ವಿಚಾರಿಸಿದರು. ತಮಗೆ ಬಿಡುವೇ ಇರಲಿಲ್ಲವಾದರೂ ಹುಡುಗನ ಲೇಖನ ಓದಿಸಿ ಕೇಳಿದರು. “ಮಗು, ನಿನ್ನ ವಯಸ್ಸಿಗೆ ಇಷ್ಟು ಸಾಕು, ಚೆನ್ನಾಗಿದೆ. ದೊಡ್ಡವನಾದ ಮೇಲೆ  ಹೆಚ್ಚು ತಿಳಿದುಕೊಳ್ಳತೀಯತಂತೆ” ಎಂದು ಬೆನ್ನು ತಟ್ಟಿದರು. ತಮ್ಮ ಒಂದೆರಡು ಪುಸ್ತಕಗಳನ್ನು ಕೊಟ್ಟು ಆಶೀರ್ವಾದ ಮಾಡಿದರು. ಹುಡುಗನಿಗೆ ಆಶ್ಚರ‍್ಯ, ಸಂತೋಷ ! ಶಾಲೆಯಲ್ಲಿ ಬಹುಮಾನವೂ ಸಿಕ್ಕಿತು.

ರಾಜರತ್ನಂಗೆ ಕನ್ನಡ ಅಂದರೆ ತುಂಬ ಅಭಿಮಾನ. ಸಾಹಿತ್ಯದ ಮೇಲೂ ಅಷ್ಟೆ. ದೇಶಭಕ್ತೀನೂ ತುಂಬ. ಅವುಗಳಿಗೆ ಏನಾದರೂ ಅಪಮಾನ ಆದರೆ ಸಹಿಸುತ್ತಿರಲಿಲ್ಲ. ಧೈರ‍್ಯದಿಂದ ವಿರೋಧಿಸುತ್ತಿದ್ದರು. ಅವರಿಗೆ ತುಂಬ ಧೈರ‍್ಯ, ಕೆಚ್ಚು.

ಸೇವೆ, ಶಿಸ್ತು

ನಮಗೆ ಅನ್ನ, ಬಟ್ಟೆಯ ಹಾಗೆಯೇ ಜ್ಞಾನವೂ ಅಗತ್ಯ, ಪುಸ್ತಕ ಅಗತ್ಯ, ನಾವು ಪುಸ್ತಕವನ್ನು ಕೊಂಡುಕೊಂಡು ಓದಬೇಕು. ಇದರಿಂದ ಸಾಹಿತ್ಯ ಬೆಳೆಯುತ್ತೆ ಎನ್ನುವುದು ಅವರ ವಿಚಾರ. ಹೋದ ಕಡೆಯಲ್ಲೆಲ್ಲ ಇದನ್ನು ಹೇಳುತ್ತಿದ್ದರು. ತಮ್ಮ ಪುಸ್ತಕಗಳನ್ನು ಹೊತ್ತುಕೊಂಡು ಓಡಾಡಿ ಮಾರಿ ಪ್ರಚಾರ ಮಡುತ್ತಿದ್ದರು. ಇದೆಲ್ಲ ಸಾಹಿತ್ಯ ಪರಿಚಾರಕೆ ಎನ್ನುತ್ತಿದ್ದರು.

ರಾಜರತ್ನಂ ತುಂಬ ಸರಳರು. ಊಟ ಬಟ್ಟೆಯಲ್ಲಿ ಮನೆಯಲ್ಲೂ ಅಷ್ಟೆ. ಹಾಗೆಯೇ ವಿಶ್ವಾಸಿಗಳು. ಗಂಭೀರವಾದವರು. ತುಂಬ ಶಿಸ್ತಿನ  ಮನುಷ್ಯ. ಕಾಲೇಜಿನಲ್ಲಿ ಕಟ್ಟುನಿಟ್ಟಾಗಿ ಶಿಸ್ತು ಪಾಲಿಸುತ್ತಿದ್ದರು. ಹುಡುಗರಿಗೂ ಶಿಸ್ತು ಕಲಿಸುತ್ತಿದ್ದರು. ಕಾಲಕ್ಕೆ ಸರಿಯಗಿ ಕೆಲಸ  ಮಾಡುವುದು ಅವರ ಗುಣ. ಭಾಷಣದಲ್ಲೂ ಹಾಗೆಯೇ ಅಚ್ಚುಕಟ್ಟು, ಕಟ್ಟುನಿಟ್ಟು,

ತಮಗೆ ಬಂದ ಗೌರವ ನಿಧಿಗಳ ಹಣವನ್ನು ಅವರು ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡಲು ದಾನ ಮಾಡಿದ್ದರು. ಬುದ್ದಿವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಬಡಹುಡುಗರಿಗೆ ವಿದ್ಯಾರ್ಥಿವೇತನ ಕೊಡಲು ನಿಧಿ ಏರ್ಪಡಿಸಿದ್ದರು. ಉಪನ್ಯಾಸ ನಡೆಸಲು ಸಂಸ್ಥೆಗಳಿಗೆ ನಿಧಿ ಕೊಟ್ಟಿದ್ದರು. ಆದರೆ ಇದೆಲ್ಲ ಕೃಷ್ಣಶಾಸ್ತ್ರಿ, ವೆಂಕಣ್ಣಯ್ಯ, ಗೋವಿಂದಪೈ, ಕೈಲಾಸಂ. ಅ.ನ. ಕೃಷ್ಣರಾವ್‌ ಮೊದಲಾದ ತಮ್ಮ ಗುರುಗಳ ಮಿತ್ರ ಹೆಸರಿನಲ್ಲಿ ಹಾಗೂ ತಮ್ಮ ಹೆಂಡತಿಯರ ಹೆಸರಿನಲ್ಲಿ ಮಾತ್ರ. ತಮ್ಮ ಹೆಸರು ಎಲ್ಲೂ ಹಾಕಿಸಲಿಲ್ಲ.

ರಾಜರತ್ನಂಗೆ ಗುರುಗಳ ಮೇಲೆ ಹೇಗೆ ಭಕ್ತಿಯೋ ಶಿಷ್ಯರಲ್ಲೂ ಹಾಗೆಯೇ ಪ್ರೀತಿ. ಎಷ್ಟೋ ಸಲ ಬಡ ವಿದ್ಯಾರ್ಥಿಗಳಿಗೆ ಹಣ ಕೊಟ್ಟು ಸಹಾಯ ಮಾಡಿದ್ದುಂಟು

ಬೆಳಕು ಎಲ್ಲಿಂದ ಬಂದರೂ ಬೇಕು

ರಾಜರತ್ನಂ ತಮ್ಮ ಧರ್ಮವನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ರಾಮಾಯಣ, ಮಹಾಭಾರತ, ಭಗವದ್ಗೀತೆ ಇಂತಹ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿದ್ದರು. ವೇದವ್ಯಾಸರು, ಶ್ರೀಕೃಷ್ಣ, ರಾಮಾನುಜಾಚಾರ್ಯರು ಇಂತಹ ಹಿರಿಯರಲ್ಲಿ ಅವರಿಗೆ ಅಪಾರ ಭಕ್ತಿ. ಆದರೆ ಅವರು ಎಲ್ಲ ಕಡೆಯಿಂದ ಬರುವ ಬೆಳಕನ್ನು ಕಣ್ಣು ತುಂಬ, ಹೃದಯದ ತುಂಬ ತುಂಬಿಕೊಳ್ಳುವ ವಿಶಾಲ ಹೃದಯದವರು. ನಮ್ಮ ’ಜನಗಣ ಮನ” ಗೀತೆಯ ಎರಡನೆಯ ನುಡಿಯಲ್ಲಿ ’ಹಿಂದು  ಬೌದ್ಧ ಸಿಖ ಜೈನ ಪಾರಸಿಕ ಮುಸಲ್ಮಾನ ಕ್ರಿಸ್ತಾನಿ’ ಎನ್ನುವ ಸಾಲು ಬರುತ್ತದೆ. ಈ ಏಳು ಧರ್ಮಗಳೂ ನಮ್ ದೇಶದಲ್ಲಿವೆ. ಏಳು ಬಣ್ಣ ಸೇರಿ ಕಾಮನ ಬಿಲ್ಲು ಅದ ಹಾಗೆ. ನಾವು ಈ ಎಲ್ಲವನ್ನೂ ಗೌರವಿಸಬೇಕು. ತಿಳಿದುಕೊಳ್ಳಬೇಕು, ಬೇರೆ ಬೇರೆ ಮತಗಳವರು ಜಗಳವಾಡದೆ ಪ್ರೀತಿಯಿಂದ ಇರಬೇಕು ಎನ್ನುವುದು ಅವರಿಗೆ ಇಷ್ಟವಾದ ವಿಚಾರ. ಹಾಗೆಯೇ ಅವರು ಎಲ್ಲವನ್ನೂ  ತಿಳಿದುಕೊಂಡಿದ್ದರು. ಗೌರವಿಸುತ್ತಿದ್ದರು. ತಿಳಿಸುತ್ತಿದ್ದರು.  ಯೇಸುವಿನ ಮೇಲೆ, ಮಹಮ್ಮದ್‌ ಪೈಗಂಬರರ ಮೇಲೆ, ಬುದ್ಧನ ಮೇಲೆ, ಮಹಾವೀರನ ಮೇಲೆ ಎಷ್ಟು ಬರೆದರು, ಎಷ್ಟು ಕಡೆ ಮಾತನಾಡಿದರು ! ಎಷ್ಟೋ ವರ್ಷಗಳ ಹಿಂದೆ ಶ್ರವಣಬೆಳಗೊಳದ ಗೋಮಟೇಶ್ವರನ ಮಹಾಮಸ್ತಕಾಭಿಷೇಕವನ್ನು ಅವರು ಬಾನುಲಿಯಲ್ಲಿ ವರ್ಣಿಸಿದುದನ್ನು ಕೇಳಿದವರು ಇಂದೂ ನೆನಪಿಸಿಕೊಂಡು ಸಂತೋಷ ಪಡುತ್ತಾರೆ.

ರಾಜರತ್ನಂ ಎಳೆಯ ಮಕ್ಕಳಿಂದ ಹಿಡಿದು ಮುಪ್ಪಿನವರವರೆಗೆ ಎಲ್ಲರಿಗೆ ಪ್ರಿಯವಾಗುವಂತಹ, ಮನಸ್ಸನ್ನು ಬೆಳೆಸುವಂತಹ ಪುಸ್ತಕಗಳನ್ನು ಬರೆದರು. ಬದುಕು ಹಸನಾಗಬೇಕು, ಸಾರ್ಥಕವಾಗಬೇಕು, ಇಡೀ ಸಮಾಜದ ಜೀವನವೂ ಹಸನಾಗಬೇಕು, ಸಾರ್ಥಕವಾಗಬೇಕು. ಇದಕ್ಕೆ ದಾರಿ ಯಾವುದು ? ಮನಸ್ಸು ಹೇಗೆ ಸಿದ್ಧವಾಗಬೇಕು.  ಇದಕ್ಕೆ  ದಾರಿ ಯಾವುದು ? ಮನಸ್ಸು ಹೇಗೆ ಸಿದ್ಧವಾಗಬೇಕು ? ಈ ಪ್ರರ್ಶನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಹಲವು ಧರ್ಮಗಳ ಗ್ರಂಥಗಳನ್ನು ಓದಿದರು. ವಿಜ್ಞಾನದ ಪುಸ್ತಕಗಳನ್ನು  ಓದಿದರು, ತತ್ವಜ್ಞಾನದ ಪುಸ್ತಕಗಳನ್ನು  ಓದಿದರು, ಚರಿತ್ರೆ ಓದಿದರು, ಓದಿದುದನ್ನು ಅರಗಿಸಿಕೊಂಡರು, ಅದರ ಜೊತೆಗೆ ಸ್ವತಃ ಚಂತನೆ ಮಾಡಿದರು. ತಾವು ಕಂಡ ಮಾರ್ಗವನ್ನು ಇತರರಿಗೂ ತೋರಿಸಿದರು. ಭಾಷಣಗಳ ಮೂಲಕ. ’ವಿಚಾರ ರಶ್ಮಿ’ ಲೇಖನ ಧಾರೆಯ ಮೂಲಕ ತಾವು ಕಂಡ ಮಂಗಳ ಪಥವನ್ನು ಇತರರಿಗೆ ತೋರಿಸಿಕೊಟ್ಟರು. ಹೀಗಾಗಿ, ಅವರ ತರಗತಿಯಲ್ಲಿ ಕುಳಿತು ಪಾಠ ಕೇಳಿ ಸಾವಿರಾರು ಜನ ಅವರ ಶಿಷ್ಯರಾದರು. ಅವರ ತರಗತಿಯಲ್ಲಿ ಕುಳಿತುಕೊಳ್ಳದೆಯೇ ಅವರಿಂದ  ಪಾಠ ಕಲಿತು ಹತ್ತಾರು ಸಾವಿರ ಜನ ಶಿಷ್ಯರಾದರು.

ರಾಜರತ್ನಂ  ಸುಮಾರು ಎತ್ತರದ ದೃಢ ಮೈಕಟ್ಟಿನ ವ್ಯಕ್ತಿ. ಅವರಂತೆ ಸಭಾಮಂದಿರವನ್ನೂ ತುಂಬಬಲ್ಲ. ನಾಲ್ಕೇ ಜನನೊಡನೆ ಮಾತನಡಿದರೂ ಒಲಿಸಬಲ್ಲ ಕಂಠ ಪಡೆದವರು ವಿರಳ. ಅಧ್ಯಾಪಕರಾದ ಹೊಸದರಲ್ಲಿ ಷರಾಯಿ, ಕೋಟು ಧರಿಸುತ್ತಿದ್ದರು. ಅನಂತರ ಪಂಚೆ, ಜುಬ್ಬ, ಒಂದು ಶಲ್ಯ  ಇಷ್ಟನ್ನೇ ಧರಿಸಲಾರಂಭಿಸಿದರು. ಅವರ ಮಾತು ಬಹು ಶಕ್ತುವಾದದ್ದು, ನೇರವಾಗಿ ಮನಸ್ಸನ್ನು  ಹೋಗುವಂತಹುದು ಯಾವ ವ್ಯಕ್ತಿಯನ್ನೂ ಅವರು ಹಿಂದೆ ಟೀಕಿಸುವವರಲ್ಲ, ಅವರಿಗೇ ತಮ್ಮ ಆಕ್ಷೇಪಣೆಯನ್ನು ಹೇಳುವವರು, ತಮ್ಮ ಹಿಂದೆ ಯಾರಾದರೂ ತಮ್ಮನ್ನು ಟೀಕಿಸಿದರು ಎಂದು ತಿಳಿದರೆ ಮತ್ತೆ ಕಂಡಾಗ, ’ಹೀಗೆ ನೀವೆಂದರಂತೆ, ಹೌದೆ ? ಎನ್ನುವರು ” ಅವರ ನಡೆ-ನುಡಿಯಲ್ಲಿ ಮುಚ್ಚುಮರೆಯಿಲ್ಲ.

ಕಾರ್ಯಶೀಲ ಕನ್ನಡಾಭಿಮಾನ

ಅವರದು ಅಸಾಧಾರಣ ಕನ್ನಡ ಪ್ರೇಮ, ಕಾರ್ಯ ಮುಖವಾದ ಕನ್ನಡ ಪ್ರೇಮ, ಪುಸ್ತಕಗಳನ್ನು ಬರೆದರು, ಭಾಷಣ ಮಾಡಿದರು. ಕನ್ನಡ ಪಾಠ ಹೇಳಿದರು, ಕನ್ನಡದ ಹಿಂದಿನ ಕವಿಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ಪುಸ್ತಕಗಳನ್ನು ಬರೆದರು. ಅಷ್ಟೇ ಅಲ್ಲ, ತಾವು ಓದಿದ ಒಳ್ಳೆಯ ಕನ್ನಡ ಪುಸ್ತಕಗಳನ್ನು ಕುರಿತು ಲೇಖನಗಳನ್ನು ಬರೆದರು. ಭಾಷಣ ಮಾಡಿದರು, ’ಇವನು ಓದಿ’ ಎಂದು ಮತ್ತೆ ಮತ್ತೆ ಹೇಳಿದರು. ಈ ಕೆಲಸವನ್ನು ಅವರು  ’ಕನ್ನಡದ ಪರಿಚಾರಿಕೆ’ ಎಂದು ಕರೆದರು. ಒಳ್ಳೆಯ ಪುಸ್ತಕಗಳು ಬೇಕೆಂದು ಹಂಬಲಿಸಿದರೆ ಸಾಲದು, ಪ್ರಕಟವಾದ ಪುಸ್ತಕಗಳನ್ನು ಕನ್ನಡಿಗರು ಹಣ ಕೊಟ್ಟು ಕೊಂಡು ಓದದೆ ಇದ್ದರೆ ಪುಸ್ತಕವನ್ನು ಪ್ರಕಟಿಸುವವರು ಹೇಗೆ ಪ್ರಕಟಿಸಬೇಕು. ಬರೆಯುವವರು ಉಹೇಗೆ ಬರೆಯಬೇಕು ಎಂದು ಮತ್ತೆ ಮತ್ತೆ ಕನ್ನಡಿಗರನ್ನು ಎಚ್ಚರಿಸಿದರು.

ರತ್ನವಾಣಿ

ಅವರೇ ಹೇಳಿದ ಕೆಲವು ಮಾತುಗಳನ್ನು ಸ್ಮರಿಸೋಣ.
ನರಕಕ್ ಇಳ್ಸಿ ಸೀಳ್ಸಿ
ಬಾಯ್‌ ಒಲಿಸಾಕಿದ್ರೂನೆ
ಮೂಗ್ನಲ್‌ ಕನ್ನಡ್‌ ಪದವಾಡ್ತೀನಿ
ನನ್ ಮನ್ಸನ್  ನೀ ಕಾಣೆ !
’ಬಡತನ ಗಿಡತನ
ಏನಿದ್ರೇನ್ ? ನಡತೇನ
ಚೆಂದಾಗ್‌ ಇಟ್ಕೊಳ್ಳಾದೆ ಅಚ್ಚ !”
ಅಂದ್ಕೊಂಡಿ ಸುಕವಾಗಿ
ಕಸ್ಟಕ್‌ ನೆಗಮೊಕವಾಗಿ
ನೆಗ್ಚೋದೆ ರತ್ನನ್‌ಪರ್ಪಂಚ !

ದೊಡ್ಡ ಕುದುರೇ ಮೇಲೆ ನಾವು ಹತ್ತಿದೆವು ಅಂದಾಕ್ಷಣವೇ, ಯಾವಾಗಲಾದರೂ ಕೆಳಗಿನ ನೆಲಕ್ಕೆ ಇಳೀಬೇಕಾಗುತ್ತದೆ ಅನ್ನೋದನ್ನ ಮರೀಬಾರದು.

ಹೆದರಿಸುವ ಅಧಿಕಾರ ಆತ (ದೇವರು) ಒಬ್ಬನಿಗೆ ಮಾತ್ರ. ನಾವು ಹೆದರಬೇಕಾದದ್ದೂ ಅವನೊಬ್ಬನಿಗೆ ಮಾತ್ರ. ಏಕೆಂದರೆ ಅವನು ಅಮೃತ, ನಾವು ಅಮೃತದ ಮಕ್ಕಳು.

ಮನುಷ್ಯ ತನ್ನ ಸುತ್ತಿನ ಸಮಾಜದೊಡನೆಯೂ ಬದುಕಬೇಕು, ತನಗೋಸ್ಕರವಾಗಿಯೂ ಬದುಕಬೇಕು.

ಪ್ರತಿ ವರ್ಷದ ಆಗಸ್ಟ್ ೧೫ ನಮಗೆ ಆತ್ಮ ಪರೀಕ್ಷೆ ದಿನ, ಪಶ್ಚಾತ್ತಾಪದ ದಿನ, ದೀಕ್ಷಾಗ್ರಹಣದ ದಿನ ಆಗಬೇಕು.

ವಿದ್ಯೆ ಬರಿ ಮನಸಿನ ಸರಕಲ್ಲ, ಬುದ್ಧಿಯ ಸರಕಲ್ಲ, ಅದು ಅಂತಃಕರಣಕ್ಕೆ ಸಂಬಂಧಪಟ್ಟ ಸರಕು, ದಯೆ, ಕರುಣೆ, ಮರುಕ, ಅನುಕಂಪ- ಇವೆಲ್ಲ ಸದ್ಭುದ್ಧಿಯ ಸಂತಾನ.