ಜೋಶಿಯವರು ಧಾರವಾಡ ಜಿಲ್ಲೆಯ ಗದಗ ತಾಲ್ಲೂಕಿನ ಹೊಂಬಳದಲ್ಲಿ ೧೯೦೪ ರಲ್ಲಿ ಜನಿಸಿದರು. ಧಾರವಾಡದಲ್ಲಿ ದ.ರಾ ಬೇಂದ್ರೆಯವರ ನೇತೃತ್ವದಲ್ಲಿ ಸ್ಥಾಪಿತವಾಗಿದ್ದ ಗೆಳೆಯರ ಗುಂಪಿನ ಸದಸ್ಯರೂ ಆಗಿದ್ದ ಜಡಭರತರು ಕವನ, ಕಾದಂಬರಿ, ಸ್ವಪ್ನಕಥನ, ನಾಟಕ ಕೃತಿಗಳನ್ನೂ ರಚಿಸಿದ್ದಾರೆ. ಮುಖ್ಯವಾಗಿ ಜೀವಫಲ ಕವನಸಂಕಲನದಲ್ಲಿಭಾವುಕತೆಯೇ ಪ್ರಧಾನವಾಗಿರುವುದನ್ನು ಗಮನಿಸಬಹುದು. ದೈವಕೃಪೆಯ ಬಗ್ಗೆ ದೈನ್ಯ ಭಾವದ ಯಾಚನೆ ತಾಯಿ ಪ್ರೀತಿಯ ಧಾರೆ, ಸ್ನೇಹನೀಡುವ ಚೈತನ್ಯ ಬಾಳಿನ ಆಸೆ ನಿರಾಸೆಗಳು ಇಲ್ಲಿನ ಕವನಗಳ ಬಹು ಮುಖ್ಯ ವಸ್ತುವಾಗಿವೆ. ಜೋಶಿಯವರು ಮೂಕಬಲಿ, ಕದಡಿದನೀರು, ಸತ್ತವರನೆರಳು, ನಾನೇಜ್ಜುಳ ಹಾಗೂ ಪರಿಮಳದವರು ಎಂಬ ನಾಟಕಗಳನ್ನು ರಚಿಸಿದ್ದಾರೆ. ಸ್ವಾತಂತ್ರೋತ್ತರ ಭಾರತದ ಬಹುಮುಖ್ಯ ಸಮಸ್ಯೆಗಳಲ್ಲಿ ಒಂದಾದ ನಗರೀಕರಣ ಮತ್ತು ಗ್ರಾಮ ಜೀವನಗಳ ನಡುವಣ ಸಂಘರ್ಷವನ್ನೂ, ಒಂದು ಮತ್ತೊಂದರ ಮೇಲೆ ಬೀರುವ ದುಷ್ಪರಿಣಾಮಗಳನ್ನೂ, ಅಬಿವ್ಯಕ್ತಿಗೊಳಿಸುತ್ತಿರುವ ಮೂಕಬಲಿರು.

ನಾಟಕದಲ್ಲಿ ನಾಗರಕೋಟೆಯು ನಡೆಸುವ ಶೋಷಣೆ ಸರ್ವವ್ಯಾಪಕವಾಗಿದ್ದು ಬಹುಸೂಷ್ಮವಾಗಿದೆ. ವ್ಯಕ್ತಿ ಮತ್ತು ಸಮಾಜಕ್ಕೆ ಸಂಬಂದಿಸಿದ ಹದಗೆಟ್ಟ ಸ್ಥಿತಿಗತಿಗಳನ್ನು ಸ್ವಾತಂತ್ರೋತ್ತರ ಭಾರತದ ಗ್ರಾಮೀಣ ಬದುಕಿನ ಹಿನ್ನೆಲೆಯಲ್ಲಿ ನಿರೂಪಿಸಿರುವ ಕದಡಿದನೀರು, ನಾಟಕದ ಮುಖ್ಯ ಉದ್ದೇಷವಾಗಿದೆ. ಸತ್ತವರನೆರಳು, ಮುಖ್ಯವಾಗಿ ಧರ್ಮದ ಸಾಂಸ್ಥಿಕ ನೆಲೆಯ ಅವ್ಯವಹಾರಗಳನ್ನು ಅನಾವರಣ ಗೊಳಿಸುವ ನಾಟಕವಾಗಿದೆ.ಧರ್ಮಸೆರೆ, ಎಂಬ ಕೃತಿಯಲ್ಲಿ ಬದುಕುವುದಕ್ಕಾಗಿ ಹೋರಾಟ ನಡೆಸುವ ಪ್ರತಿಕೂಲ ಪರಿಸ್ಥಿತಿಯ ಎದುರಲ್ಲಿ ಮುಖಾಮುಖಿಯಾಗಿ ಸಲ್ಲುವ ಹೆಣ್ಣಿನ ದಿಟ್ಟತನವನ್ನು ಕಾಣಿಸುವ ಪ್ರಯತ್ನವಿದೆ. ವನಮಾಲಿ ಮೂಕಳಾದರೂ ಪ್ರತಿಕೂಲ ಪರಿಸ್ಥಿತಿಯ ಎದುರು ಧ್ವನಿ ಎತ್ತುವ ದಿಟ್ಟತನವನ್ನು ಹೊಂದಿರುತ್ತಾಳೆ.

ಜಡಭರತರ ಪ್ರಥಮ ಪ್ರಕಟಿತ ಕೃತಿ ‘ಧರ್ಮಸೆರೆ, ಯಿಂದ ಹಿಡಿದು ‘ಪರಿಮಳದವರು, ವರೆಗೆ ಒಟ್ಟು ಕೃತಿಗಳಲ್ಲಿ ಮುಖ್ಯವಾಗಿ ಸ್ವಾತಂತ್ರೋತ್ತರದ ಸ್ಥಿತಿಗತಿಗಳು, ಕುಸಿಯುತ್ತಿರುವ ಮೌಲ್ಯವ್ಯವಸ್ತೆ, ನಶಿಸಿಹೋಗುತ್ತಿರುವ ಗ್ರಾಮೀಣಜೀವನ, ಧರ್ಮದ ಸಾಂಸ್ಕೃತಿಕ ನೆಲೆಯ ಅವ್ಯವಹಾರಗಳು, ಹೀನಸಮಕಾಲೀನ ಮನುಷ್ಯ ಜೀವನದ ವಿಕೃತಗತಿಯ ಹಲವು ಮುಖಗಳನ್ನು ಮನಗಾಣಬಹುದಾಗಿದೆ. ಮುಖ್ಯವಾಗಿ ನಾಟಕಕಾರನಾಗಿಯೇ ಹೆಸರು ಮಾಡಿರುವ ಜಡಭರತರು ೧೯೮೨ ರಲ್ಲಿ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿಯನ್ನು ೧೯೮೯ ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡಮಿಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.