೧೯೪೮ ರಲ್ಲಿ ದೆಹಲಿಯಲ್ಲಿ ಜನಿಸಿದ ಶ್ರೀ ಜಿ. ರಾಜನಾರಾಯಣ್ ಅವರ ತಂದೆ ವೇಣು ಹಾಗೂ ಪಿಟೀಲು ವಾದಕರು, ತಾಯಿ ಗಾಯಕರು ಮತ್ತು ವೈಣಿಕರು. ಇಂತಹ ಹಿನ್ನೆಲೆಯ ಕುಟುಂಬದಿಂದ ಬಂದ ಶ್ರೀಯುತರಿಗೆ ವಿದ್ವಾನ್ ಎಂ. ಆರ್.ದೊರೆಸ್ವಾಮಿ ಅವರಿಂದ ವೇಣು ವಾದನದಲ್ಲಿ ಶಿಕ್ಷಣವಾಯಿತು. ತಾಯಿ ಸುಗಂಧಾ ರಾಮನ್ ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ಶೈಲಿಗಳೆರಡರಲ್ಲೂ ಶಿಕ್ಷಣ ನೀಡಿದರು. ಪ್ರಾರಂಭದಲ್ಲಿ ಮದ್ರಾಸ್, ಬೆಂಗಳೂರು, ದೆಹಲಿ, ಕಾನ್ಮುರ, ಹೈದರಾಬಾದ್ ಇತ್ಯಾದಿ ನಗರಗಳು ಮತ್ತು ಪ್ಯಾರಿಸ್, ಆಮ್‌ಸ್ಟರ‍್ಡ್ ಡ್ಯಾಮ್ ಮುಂತಾದ ವಿದೇಶಿ ಪಟ್ಟಣಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ ರಾಜನಾರಾಯಣ್ ಅವರ ವೇಣುವಾದನ ಕಾರ್ಯಕ್ರಮ ಆಕಾಶವಾಣಿ ಹಾಗೂ ದೂರದರ್ಶನದಲ್ಲೂ ಪ್ರಸಾರವಾಗಿದೆ.

ಮುಂಬಯಿಯ ಸುರ ಸಿಂಗಾರ್ ಸಂಸದ್‌ನಿಂದ ಸುರಮಣಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಅನನ್ಯ ಪ್ರಶಸ್ತಿಗಳು ಶ್ರೀಯುತರಿಗೆ ಲಭಿಸಿವೆ.

ಶ್ರೀ ಜಿ. ರಾಜನಾರಾಯಣ್ ಅವರ ಆವಿಷ್ಕಾರವಾದ ಎಲೆಕ್ಟ್ರಾನಿಕ್ ತಂಬೂರಿ, ಶೃತಿಪೆಟ್ಟಿಗೆ, ತಾಳೋಮೀಟರ್, ತಬಲ್ ಮತ್ತು ಲೆಹರಾ ದೇಶ ವಿದೇಶಗಳಲ್ಲಿ ರಾಡೆಲ್ ಎಲೆಕ್ಟ್ರಾನಿಕ್ ಸಂಗೀತ ಉಪಕರಣಗಳಾಗಿ ಪ್ರಖ್ಯಾತವಾಗಿವೆ. ೧೯೭೯ ರಲ್ಲಿ ಸ್ಥಾಪನೆಯಾದ ರಾಡಲ್ ಸಂಸ್ಥೆ ಎಲೆಕ್ಟ್ರಿಕ್ ಸಂಗೀತ ಉಪಕರಣಗಳ ನಿರ್ಮಾಣಕ್ಕೆ ದೇಶದ ಏಕೈಕ ಮಾದರಿಯಾಗಿದೆ. ಈ ಉಪಕರಣಗಳು ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞಾನವಲ್ಲದೆ, ಅದೇ ಮಟ್ಟದ ಕ್ವಾಲಿಟಿ ಕಂಟ್ರೋಲೂ ಹೊಂದಿವೆ. ರಾಡೆಲಿನ ಸಮರ್ಥ ತಂತ್ರಜ್ಞರು ಪ್ರತಿಯೊಂದು ಉಪಕರಣವನ್ನು ಪರೀಕ್ಷಿಸಿ ದೋಶರಹಿತಗೊಳಿಸುತ್ತಾರೆ. ಸಂಪೂರ್ಣ ಸ್ವದೇಶಿಯಾದ ರಾಡೆಲ್ ಸಂಗೀತ ಉಪಕರಣಗಳು ವಿದೇಶಗಳಲ್ಲೂ ಜನಪ್ರಿಯವಾಗಿರುವುದು ಹೆಮ್ಮೆಯ ವಿಷಯ. ಇವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೨೦೦೦-೦೧ರ “ಕರ್ನಾಟಕ ಕಲಾಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.