೬-೧೨-೧೯೩೩ರಲ್ಲಿ ಮೈಸೂರಿನಲ್ಲಿ ಜನಿಸಿದ ರಂಗನಾಯಕಮ್ಮ ಸಂಗೀತದ ಮನೆತನಕ್ಕೆ ಸೇರಿದವರು. ಇವರ ಮುತ್ತಾತ ವೆಂಕಟವರದ ಅಯ್ಯಂಗಾರ್ ಅವರ ಪಿಟೀಲು ವಿದ್ವಾಂಸರಾಗಿದ್ದರು. ಹಾಡುತ್ತ ವೀಣೆ ನುಡಿಸುವ ಸಂಪ್ರದಾಯಕ್ಕೆ ಸೇರಿದ ಶ್ರೀಮತಿಯವರು ಗಾಯನದಲ್ಲಿ ಟಿ. ಪುಟ್ಟಸ್ವಾಮಯ್ಯ, ಎಂ.ಎಸ್‌. ಶೆಲ್ವಪುಳ್ಳೆ ಅಯ್ಯಂಗಾರ್, ರಾಳ್ಲಪಲ್ಲಿ, ಅನಂತ ಕೃಷ್ಣಶರ್ಮ, ಆರ್.ಕೆ. ಶ್ರೀಕಂಠನ್‌ ಅವರುಗಳಲ್ಲೂ ವೀಣೆಯಲ್ಲಿ ವಿ. ವೆಂಕಟಸುಬ್ಬರಾವ್‌ ಹಾಗೂ ಆರ್.ಎನ್‌. ದೊರೆಸ್ವಾಮಿಯವರಲ್ಲೂ  ಶಿಕ್ಷಣ ಪಡೆದರು.

ಬೆಂಗಳೂರಿನ ಎಲ್ಲಾ ಪ್ರತಿಷ್ಠಿತ ಸಂಘ-ಸಂಸ್ಥೆ-ಸಭೆಗಳಲ್ಲೂ, ಇವರ ಕಾರ್ಯಕ್ರಮ ನಡೆದಿದೆ. ಮುಂಬಯಿಯ ಕರ್ನಾಟಕ ಸಂಘದಿಂದಲೂ ಕಛೇರಿ ನೀಡಿದ್ದಾರೆ. ಆಕಾಶವಾಣಿಯ ಮೂಲಕ ಇವರ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಮೈಸೂರು ಚೌಡಯ್ಯನವರಂತಹ ಹಿರಿಯರ ಪ್ರಶಂಶೆ ಗಳಿಸಿದ ಕೀರ್ತಿ ಇವರದು. ಶ್ರೀ ರಾಜಾಜಿಯವರಿಂದ ‘ಗಾನ ಸರಸ್ವತಿ’ ಎಂದು ಪ್ರಶಂಸೆ ಪಡೆದಿರುವ ಶ್ರೀಮತಿಯವರು ವೆಂಕಟಮಖಿದಾಸರ ಕೀರ್ತನೆಗಳನ್ನು ಸಂಗೀತಕ್ಕೆ ಅಳವಡಿಸಿ ಹಾಡಿ ಧ್ವನಿಸುರುಳಿಯ ಮೂಲಕ ದಾಖಲಿಸಿದ್ದಾರೆ. ಸರ್.ಎಂ. ವಿಶ್ವೇಶ್ವರಯ್ಯನವರ ಶತಮಾನೋತ್ಸವ ಸಮಾರಂಭದಲ್ಲಿ ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

ತಿರುಪತಿಯ ದೇವಾಲಯದಲ್ಲಿ ಇವರು ವೀಣೆ ನುಡಿಸಿಕೊಂಡು ಗಾಯನ ಮಾಡಿದ್ದು ಇಂದಿಗೂ ಆಲಿಸಿದವರ ಮನದಲ್ಲಿ ಉಳಿದಿರುವ ಸಂಗತಿಯಾಗಿದೆ. ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿರುತ್ತಾರೆ.

ಇವರ ತಂದೆ ವೇದಾಂತ ಅಯ್ಯಂಗಾರರು ೧೯೫೫ರಲ್ಲಿ ಸ್ಥಾಪಿಸಿದ ಶ್ರೀರಾಮ ಲಲಿತಕಲಾ ಮಂದಿರದ ಮುಖ್ಯಸ್ಥರಾಗಿ, ಅನೇಕ ಶಿಷ್ಯರಿಗೆ ಗುರುವಾಗಿ, ಹಲವಾರು ವಾದ್ಯವೃಂದಗಳನ್ನೂ, ಸಮೂಹ ಗಾಯಕರನ್ನೂ ನಿರ್ದೇಶಿಸಿ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಸಂಸ್ಥೆಗಳಿಂದ ಸನ್ಮಾನಿತರಾಗಿರುವ ಶ್ರೀಮತಿಯವರಿಗೆ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೂ ಲಭಿಸಿದೆ.