ಮದರಾಸಿನ ಜನ ‘ಹಿಂದೂ’ ಪತ್ರಿಕೆಯಲ್ಲಿ ನೋಡುವವರೆಗೂ ಯಾವ ಸುದ್ದಿಯನ್ನು ನಂಬುವುದಿಲ್ಲ ಎಂಬ ಒಂದು ಪ್ರತೀತಿ ಇದೆ. ಆ ಪತ್ರಿಕೆ ಅಲ್ಲಿನ ಜನಜೀವನದಲ್ಲಿ ಎಂತಹ ಮಹತ್ತರ ಪಾತ್ರ ವಹಿಸಿದೆ ಎನ್ನುವುದನ್ನು ಇದು ತೋರಿಸುತ್ತದೆ. ಮದರಾಸಿನ ಹೊರಗೂ ‘ಹಿಂದೂ’ ಪ್ರಭಾವ ಕಡಮೆಯಾದುದಲ್ಲ. ಉದ್ದಾಮ ರಾಜನೀತಿ ಶಾಸ್ತ್ರಜ್ಞ ಸರ್ ತೇಜ್‌ಬಹದ್ದೂರ್ ಸಪ್ರು ಅವರು ಒಮ್ಮೆ ಮಾತನಾಡುತ್ತ, “ಉತ್ತರ ಭಾರತದಲ್ಲಿ ನಾವು ಯಾವುದೇ ಸಾರ್ವಜನಿಕ ಸಮಸ್ಯೆಯ ಬಗ್ಗೆ ಯೋಚಿಸುವಾಗಲೂ ಜನನಾಡಿಯ ಪ್ರತಿನಿಧಿಯಾದ ‘ಹಿಂದೂ’ ಆ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಮೊದಲು ಗಮನಿಸುತ್ತೇವೆ” ಎಂದಿದ್ದರು.

ಈ ಮಹಾಸಂಸ್ಥೆಯನ್ನು ನೂರು ವರ್ಷಗಳ ಹಿಂದೆ ಸ್ಥಾಪಿಸಿ ಬೆಳೆಸಿದವರಲ್ಲಿ ಜಿ. ಸುಬ್ರಹ್ಮಣ್ಯ ಅಯ್ಯರ್ ಅವರೂ ಒಬ್ಬರು. ಆದರೆ ಅವರ ಖ್ಯಾತಿ ಕೇವಲ ಒಂದು ರಾಷ್ಟ್ರೀಯ ಪತ್ರಿಕೆಯನ್ನು ಸ್ಥಾಪಿಸಿದುದರ ಮೇಲೆ ನಿಂತಿಲ್ಲ. ಅವರೊಬ್ಬ ಉತ್ಕಟ ದೇಶಪ್ರೇಮಿಯಾಗಿದ್ದರು, ಬ್ರಿಟಿಷರನ್ನು ಭಾರತದಿಂದ ಓಡಿಸಲು ಹೋರಾಡಿದವರಲ್ಲಿ ಒಬ್ಬರಾಗಿದ್ದರು. ಹಿಂದೂ ಸಮಾಜವನ್ನು ಸುಧಾರಿಸಲು ಶ್ರಮಿಸಿದವರಾಗಿದ್ದರು, ಮೇಲಾಗಿ, ನುಡಿದಂತೆ ನಡೆವ ಅಪರೂಪದ ಪುರುಷರಲ್ಲೊಬ್ಬರಾಗಿದ್ದರು.

ಬಾಲ್ಯ

ತಂಜಾವೂರು ದಕ್ಷಿಣ ಭಾರತದ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದು. ಆ ಜಿಲ್ಲೆಯ ತಿರುವಯ್ಯಾರ್ ಸುಪ್ರಸಿದ್ದ ವಾಗ್ಗೇಯಕಾರ ತ್ಯಾಗರಾಜರ ಜನ್ಮಸ್ಥಳ. ಸುಬ್ರಹ್ಮಣ್ಯ ಅಯ್ಯರ್ ಅವರ ಹುಟ್ಟೂರೂ ಇದೇ. ಅವರ ಜನನ ೧೮೫೫ ರ ಜನವರಿ ೧೯ ರಂದು. ನಮ್ಮ ಹಲವಾರು ರಾಷ್ಟ್ರೀಯ ನಾಯಕರಂತೆಯೇ ಸುಬ್ರಹ್ಮಣ್ಯ ಅಯ್ಯರವರು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ತಂದೆ ಗಣಪತಿ ಅಯ್ಯರವರು ವಕೀಲರು. ಕಟ್ಟಾ ಸಂಪ್ರದಾಯವಾದಿಗಳು. ತಾಯಿ ಧರ್ಮಾಂಬಾಳ್‌. ದೇವರು, ಗುರುಹಿರಿಯರ ಬಗ್ಗೆ ತುಂಬ ಶ್ರದ್ಧೆಯುಳ್ಳವರು. ಅವರದು ಒಂದು ಹೆಣ್ಣು ಮತ್ತು ಏಳು ಗಂಡು ಮಕ್ಕಳ ತುಂಬು ಸಂಸಾರ.

ಸುಬ್ರಹ್ಮಣ್ಯ ಅಯ್ಯರ್ ಅವರಿಗೆ ಹದಿಮೂರು ವರ್ಷವಾಗಿದ್ದಾಗ ಅವರ ತಂದೆ ತೀರಿಕೊಂಡರು. ಇಡ ಈ ಸಂಸಾರದ ಜವಾಬ್ದಾರಿ ತಾಯಿಯ ಮೇಲೆ ಬಿತ್ತು. ಆಕೆ ಅದನ್ನು ಧೈರ್ಯದಿಂದ ಯಶಸ್ವಿಯಾಗಿ ನಿರ್ವಹಿಸಿದರು. ಸುಬ್ರಹ್ಮಣ್ಯ ಅಯ್ಯರ್ ೧೮೭೪ ರಲ್ಲಿ ಉಪಾಧ್ಯಾಯರ ತರಬೇತಿ ಶಾಲೆಯನ್ನು ಸೇರಿ ಉತ್ತೀರ್ಣರಾದರು. ಇಪ್ಪತ್ತನೆಯ ವಯಸ್ಸಿನಲ್ಲಿ ಮದರಾಸಿಗೆ ಬಂದು ಚರ್ಚ್ ಆಫ್‌ಸ್ಕಾಟ್‌ಲೆಂಡ್‌ಶಾಲೆಯಲ್ಲಿ ಉಪಾಧ್ಯಾಯರಾಗಿ ಕೆಲಸಕ್ಕೆ ಸೇರಿದರು . ಸಂಬಳ ತಿಂಗಳಿಗೆ ೪೫ ರೂಪಾಯಿ. ಆ ಕಾಲಕ್ಕೆ ಅದೇ ಹೆಚ್ಚು. ಆದರೆ ಪ್ರತಿಭಾವಂತರಾದ ಇವರು ಅನಂತರ ಸಹಜವಾಗಿಯೇ ಇನ್ನೂ ಉನ್ನತ ಹುದ್ದೆ ಆರಸಿದರು. ಅದರಲ್ಲಿ ಸಫಲರೂ ಆದರು. ಹೆಸರಾಂತ ಪಚ್ಚಯಪ್ಪ ಕಾಲೇಜ್‌ನಲ್ಲಿ ಉಪನ್ಯಾಸಕರಾದರು. ಅಲ್ಲಿ ಕೆಲಸದಲ್ಲಿದ್ದುಕೊಂಡೇ ಮದರಾಸು ವಿಶ್ವವಿದ್ಯಾನಿಲಯದ ಬಿ.ಎ. ಪರೀಕ್ಷೆಗೆ ಓದಿ ತೇರ್ಗಡೆಯಾದರು. ಇದರ ಪರಿಣಾಮವಾಗಿ ತಮ್ಮ ಇಪ್ಪತ್ತೈದನೆಯ ವಯಸ್ಸಿಗೇ ಟ್ರಿಪ್ಲಿಕೇನ್‌ನ ಆಂಗ್ಲೋ-ವರ್ನಾಕ್ಯುಲರ್ ಶಾಲೆಯ ಮುಖ್ಯೋಪಾಧ್ಯಾಯರಾಗಿ ನೇಮಕ ಹೊಂದಿದರು. ಆದರ್ಶ ಶಿಕ್ಷಕನೆಂದು ಹೆಸರು ಗಳಿಸಿದರು.

ಪಚ್ಚಯಪ್ಪ ಕಾಲೇಜಿನಲ್ಲಿದ್ದುದು ಸುಬ್ರಹ್ಮಣ್ಯ ಅಯ್ಯರ್ ಅವರ ಬಾಳಿನ ಒಂದು ಮಹತ್ವದ ಘಟ್ಟ. ಏಕೆಂದರೆ ಅಲ್ಲಿರುವಾಗಲೇ ಅವರಿಗೆ ಸಹ ಉಪನ್ಯಾಸಕ ವೀರ ರಾಘವಾಚಾರಿಯಾರ್ ಅವರ ಗೆಳೆತನವಾದದ್ದು. ಇಬ್ಬರೂ ಅತ್ಯಲ್ಪ ಕಾಲದಲ್ಲೇ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಾದರು.

ಸಾಹಿತ್ಯ ಸಂಘ

ಕಾಲೇಜು ಉಪನ್ಯಾಸಕರಾಗಿರುವಂತೆಯೇ ಸುಬ್ರಹ್ಮಣ್ಯ ಅಯ್ಯರ್ ಮತ್ತು ವೀರರಾಘವಾಚಾರಿಯಾರ್ ಇಬ್ಬರೂ ವಿಚಾರವಾದಿಗಳ ಕೂಟವೊಂದಕ್ಕೆ ಸದಸ್ಯರಾದರು. ‘ದಿ ಟ್ರಿಪ್ಲಿಕೇನ್‌ಲಿಟರರಿ ಸೊಸೈಟಿ’ ಎಂದು ಅದರ ಹೆಸರು. ಉದ್ದೇಶ: ನಾಡಿನ ರಾಜಕೀಯ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಜನಾಭಿಪ್ರಾಯ ರೂಪಿಸುವುದು.

ಈ ಸಮಯದಲ್ಲಿ ಸಂಭವಿಸಿದ ಒಂದು ಸಣ್ಣ ಘಟನೆಯೇ ಸುಬ್ರಹ್ಮಣ್ಯ ಅಯ್ಯರ್ ಅವರ ಜೀವನದಲ್ಲಿ ಮಹತ್ವದ ಮಾರ್ಪಾಟು ಮಾಡಿದುದು. ಸೋಜಿಗವೆಂದರೆ ಅದು ಅವರಿಗೆ ನೇರವಾಗಿ ಸಂಬಂಧಿಸಿದುದೂ ಅಲ್ಲ. ಮದರಾಸು ಹೈಕೋರ್ಟಿಗೆ ಟಿ. ಮುತ್ತುಸ್ವಾಮಿ ಅಯ್ಯರ್ ಎಂಬುವರನ್ನು ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ಇದನ್ನು ಅಲ್ಲಿನ ಬ್ರಿಟಿಷ್‌ಮಾಲಕತ್ವದ ಪತ್ರಿಕೆಗಳು ವಿನಾಕಾರಣ ಟೀಕಿಸಿದವು. ಆದರೆ ಅದನ್ನು ಖಂಡಿಸಿ ಪ್ರತ್ಯುತ್ತರ ನೀಡಲು ಭಾರತೀಯ ಪತ್ರಿಕೆಯೊಂದೂ ಅಲ್ಲಿರಲಿಲ್ಲ.

ಕಾಲೇಜು ಉಪನ್ಯಾಸಕ ಸುಬ್ರಹ್ಮಣ್ಯ ಅಯ್ಯರಲ್ಲಿ ರಾಷ್ಟ್ರಾಭಿಮಾನದ ಕಿಡಿ ಹತ್ತಲು ಇದೇ ಪ್ರಬಲ ಕಾರಣವಾಯಿತು. ಟ್ರಿಪ್ಲಿಕೇನ್‌ಸಾಹಿತ್ಯ ಕೂಟದ ಆರು ಮಂದಿ ಸದಸ್ಯರು ಒಂದೆಡೆ ಸಭೆ ಸೇರಿ ಚರ್ಚಿಸಿದರು. ಎಲ್ಲರಲ್ಲೂ ಏರುಪ್ರಾಯದ ಕೆಚ್ಚು. ಕೂಡಲೇ ಸ್ವಂತ ಪತ್ರಿಕಿಯೊಂದನ್ನು ಸ್ಥಾಪಿಸಿ ಬ್ರಿಟಿಷರ ಅನ್ಯಾಯದ ಟೀಕೆಗೆ ಉತ್ತರ ನೀಡಬೇಕೆಂದು ಸರ್ವಾನುಮತದಿಂದ ನಿರ್ಧರಿಸಿದರು.

ಈ ನಿರ್ಧಾರ ಕೈಗೊಂಡಾಗ ಅಲ್ಲಿದ್ದವರಲ್ಲಿ ಯಾರಿಗೂ ಪತ್ರಿಕೆಯೊಂದರಲ್ಲಿ ನಡೆಸುವುದು ಹೇಗೆ ಎಂಬುದರ ಬಗ್ಗೆ ಏನೇನೂ ಅರಿವು ಇರಲಿಲ್ಲ. ಇಂತಹ ಚಟುವಟಿಕೆಗಳಿಗೆಲ್ಲ ವಿಶೇಷವಾಗಿ ಖರ್ಚುಮಾಡಲು ಅವರಲ್ಲಿ ಹಣವೂ ಇರಲಿಲ್ಲ. ಆರು ಮಂದಿಯೂ ಚಂದಾ ಎತ್ತಿ ಒಂದೂ ಮುಕ್ಕಾಲು ರೂಪಾಯಿ ಸೇರಿಸಿ ‘ಹಿಂದೂ’ ಪತ್ರಿಕೆಯ ಮೊದಲ ಸಂಚಿಕೆಯ ೮೦ ಪ್ರತಿಗಳನ್ನು ಮುದ್ರಿಸಿದರು. ಹೈಕೋರ್ಟ್‌ನ್ಯಾಯಾಧೀಶರಾಗಿ ಮುತ್ತುಸ್ವಾಮಿ ಅಯ್ಯರ್ ಅವರ ನೇಮಕ ಸರಿ ಎಂದು ಅದರಲ್ಲಿ ವಾದಿಸಲಾಗಿತ್ತು. ಆಂಗ್ಲೋ-ಇಂಡಿಯನ್‌ಪತ್ರಿಕೆಗಳ ಧೋರಣೆಯನ್ನು ತರ್ಕಬದ್ಧವಾಗಿ ಖಂಡಿಸಲಾಗಿತ್ತು.

೧೮೭೮ರ ಸೆಪ್ಟೆಂಬರ್ ೨೦ರಂದು ‘ಹಿಂದೂ’ ಪತ್ರಿಕೆ ಸ್ಥಾಪಿತವಾದದ್ದು ಹೀಗೆ. ಅದರ ಮೊದಲ ಸಂಪಾದಕರು ಜಿ. ಸುಬ್ರಹ್ಮಣ್ಯ ಅಯ್ಯರ್. ಪತ್ರಿಕೆಯ ಮೊದಲ ಸಂಚಿಕೆ ಪ್ರಕಟವಾದದ್ದು ಮದರಾಸಿನ ಜಾರ್ಜ್‌ಟೌನಿನ ಮಿಂಟ್‌ರಸ್ತೆಯ ಶ್ರೀನಿಧಿ ಮುದ್ರಣಾಲಯದಲ್ಲಿ. ಬಿಡಿ ಪ್ರತಿಯೊಂದರ ಬೆಲೆ ನಾಲ್ಕು ಆಣೆ (ಈಗಿನ ೨೫ಪೈಸೆ).

ಅಧ್ಯಾಪಕ ವೃತ್ತಿ ಬಿಟ್ಟು ಪತ್ರಿಕಾ ಸಂಪಾದಕರಾಗಲು ಸುಬ್ರಹ್ಮಣ್ಯ ಅಯ್ಯರ್ ಅವರಿಗೆ ಇದ್ದ ಧೈರ್ಯವಾದರೂ ಏನು? ಟ್ರಿಪ್ಲಿಕೇನ್‌ಸಾಹಿತ್ಯ ಕೂಟದ ಸದಸ್ಯರಾಗಿ ಅವರು ಹಲವಾರು ಸಾಮಾಜಿಕ ವಿಷಯಗಳ ಮೇಲೆ ‘ಮದರಾಸ್‌ಮೇಲ್‌’ ಪತ್ರಿಕೆಗೆ ಆಗಿಂದಾಗ್ಗೆ ‘ವಾಚಕರ ಪತ್ರ’ ಬರೆಯುತ್ತಿದ್ದರು. ಇವುಗಳ ಪ್ರಕಟನೆಯೇ ಅವರಿಗೆ ತಾವು ಒಬ್ಬ ಉತ್ತಮ ಬರಹಗಾರನಾಗಬಲ್ಲೆನೆಂಬ ಆತ್ಮವಿಶ್ವಾಸ ಮೂಡಿಸಿದ್ದು. ಸಾಹಿತ್ಯ ಕೂಟದ ಸದಸ್ಯರು ಅವರನ್ನು ‘ಹಿಂದೂ’ ಸಂಪಾದಕರನ್ನಾಗಿ ನೇಮಿಸಲೂ ಇದೇ ಕಾರಣ.

‘ಹಿಂದೂ’ ಪತ್ರಿಕೆ ಸ್ಥಾಪಿತವಾದ ಸಮಯದಲ್ಲಿ ಮದರಾಸಿನಲ್ಲಿ ಇನ್ನೆರಡು ಪತ್ರಿಕೆಗಳು ಮಾತ್ರ ಪ್ರಮುಖವಾಗಿದ್ದವು-‘ಮದರಾಸ್‌ಮೇಲ್‌’ ಮತ್ತು ‘ಮದರಾಸ್‌ಟೈಮ್ಸ್‌’. ಆದರೆ ಇವೆರಡೂ ಅಲ್ಲಿನ ಯುರೋಪಿಯನ್‌ಸಮುದಾಯದ ಹಿತಾಸಕ್ತಿ ರಕ್ಷಣೆಯನ್ನೇ ಮುಖ್ಯ ಗುರಿಯನ್ನಾಗಿಟ್ಟುಕೊಂಡಿದ್ದವು.

ಧ್ಯೇಯ

ಸುಬ್ರಹ್ಮಣ್ಯ ಅಯ್ಯರ್ ಅವರು ತಮ್ಮ ಪತ್ರಿಕೆಯ ಧ್ಯೇಯಧೋರಣೆಗಳನ್ನು ಮೊದಲ ಸಂಪಾದಕೀಯದಲ್ಲಿಯೇ ಸ್ಪಷ್ಟವಾಗಿ ವಿವರಿಸಿದರು:

ಅವರ ದಾರಿದೀಪಗಳು

“ನಾವು ಅನುಸರಿಸುವ ತತ್ವಗಳು ನಿಷ್ಪಕ್ಷಪಾತ ಮತ್ತು ನ್ಯಾಯ. ನಮ್ಮ ಗುರಿಯೆಂದರೆ ಆಳುವವರು ಮತ್ತು ಆಳಿಸಿಕೊಳ್ಳುವವರ ನಡುವೆ ಪರಸ್ಪರ ವಿಶ್ವಾಸ ಬೆಳೆಸುವುದು ಹಾಗೂ ನಮ್ಮ ದೇಶಬಾಂಧವರಲ್ಲಿ ಏಕತಾ ಭಾವವನ್ನು ಮೂಡಿಸುವುದು. ಧಾರ್ಮಿಕ ವಿಷಯಗಳ ಬಗ್ಗೆ ಹೇಳುವುದಾದರೆ, ಇತ್ತೀಚಿನ ದಿನಗಳಲ್ಲಿ ಒಂದು ವರ್ಗದ ಮತ ಪ್ರಚಾರಕರ ನಡವಳಿಕೆಯ ಬಗ್ಗೆ ಸಂಶಯ ಹುಟ್ಟಿರುವುದಾದರೂ ನಮ್ಮ ಮಟ್ಟಿಗೆ ಪೂರ್ನ ಅಲಿಪ್ತ ಧೋರಣೆಯನ್ನು ಅನುಸರಿಸುವೆವು. ವರ್ಗ ವೈಷಮ್ಯಕ್ಕೆ ನಮ್ಮ ಕಾಲಮುಗಳಲ್ಲಿ ಸ್ಥಳವಿಲ್ಲ. ಆದರೆ ಧಾರ್ಮಿಕ ಪ್ರಶ್ನೆಗಳು ಯಾವುದೇ ರಾಜಕೀಯ ಅಥವಾ ಸಾಮಾಜಿಕ ರೂಪ ತಳೆದಾಗ ಮಾತ್ರ ನಾವು ವಿವೇಚನಾಯುತ ಟೀಕೆ ಟಿಪ್ಪಣಿಗಳಿಗೆ ಅವಕಾಶ ನೀಡುವೆವು.”

ಪತ್ರಿಕೆಯ ಎರಡನೆಯ ಸಂಚಿಕೆಗೆ ಐನೂರು ಪ್ರತಿಗಳ ಬೇಡಿಕೆ ಬಂತು.

ಆರಂಭದಲ್ಲಿ ಪತ್ರಿಕೆ ಪ್ರತಿ ಬುಧವಾರ ಪ್ರಕಟವಾಗುತ್ತಿತ್ತು. ಅನಂತರ ಸರ್ಕಾರಿ ಪ್ರಕಟನೆಗಳಿಗೆ ಸ್ಥಳ ನೀಡುವ ಸಲುವಾಗಿ ಗುರುವಾರಕ್ಕೆ ಬದಲಾವಣೆಯಾಯಿತು. ಮೊದಲ ಐದು ವರ್ಷಗಳೂ ಟ್ರಿಪ್ಲಿಕೇನ್‌ನ ವೀರರಾಘವ ಮುದಲಿ ರಸ್ತೆಯಲ್ಲಿನ ಸುಬ್ರಹ್ಮಣ್ಯ  ಅಯ್ಯರ್ ಅವರ ಮನೆಯೇ ಪತ್ರಿಕೆಯ ವಿಳಾಸ. ವೀರ ರಾಘವಾಚಾರಿಯಾರ್ ಅವರನ್ನುಳಿದು ಪತ್ರಿಕೆಯ ಇತರ ನಾಲ್ವರು ಸಂಸ್ಥಾಪಕರು ಸ್ವಲ್ಪ ಕಾಲದಲ್ಲಿಯೇ ಬೇರೆ ಬೇರೆ ನೌಕರಿಗಳ ಮೇಲೆ ಹೊರಟು ಹೋದುದರಿಂದ ಪತ್ರಿಕೆಯನ್ನು ನಡೆಸುವ ಪೂರ್ಣಭಾರ ಇವರಿಬ್ಬರ ಮೇಲೆಯೇ ಬಿತ್ತು. ಎಂಟು ರೂಪಾಯಿ ವಾರ್ಷಿಕ ಚಂದಾ ಅಥವಾ ಎರಡು ರೂಪಾಯಿ ತ್ರೈಮಾಸಿಕ ಚಂದಾ ವಸೂಲು ಮಾಡಲು ಇವರೇ ಖುದ್ದಾಗಿ ಪ್ರಯತ್ನ ನಡೆಸಬೇಕಾಗುತ್ತಿತ್ತು.

ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ದೃಷ್ಟಿಯಿಂದ ಪತ್ರಿಕೆಗೆ ‘ಹಿಂದೂ’ ಎಂದು ಹೆಸರಿಟ್ಟರೂ ಅದರ ಆರಂಭದ ದಿನಗಳಲ್ಲಿ ವಿಶೇಷ ಸಹಾಯ ನೀಡಿದವರು ಒಬ್ಬ ಪ್ರಮುಖ ಮುಸ್ಲಿಂ ಬಾಂಧವರೇ ಎಂಬುದು ಗಮನಾರ್ಹ. ಅವರು ಟೀಪು ಸುಲ್ತಾನನ ವಂಶಸ್ಥರಾದ ನವಾಬ್‌ಹುಮಾಯೂನ್‌ಜಾ ಬಹದ್ದೂರ್. ಮುಸ್ಲಿಂ ಸಮುದಾಯ ಮೊದಲಿನಿಂದಲೂ ‘ಹಿಂದೂ’ ಪತ್ರಿಕೆಯ ಬಗ್ಗೆ ಆದರಾಭಿಮಾನ ತಳೆಯಲು ಇವರು ಮುಖ್ಯ ಕಾರಣರಾಗಿದ್ದರು.

ದಿನಪತ್ರಿಕೆ

ಅಯ್ಯರ್-ಆಚಾರಿಯಾರ್ ಇವರುಗಳ ಸತತ ಪರಿಶ್ರಮದಿಂದ ಪತ್ರಿಕೆಯು ೧೮೮೩ ರ ಅಕ್ಟೋಬರ್ ಒಂದರಿಂದ ವಾರಕ್ಕೆ ಮೂರು ದಿನ, ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಪ್ರಕಟವಾಗಲಾರಂಭಿಸಿತು. ಪುಟಗಳು ಎಂಟು. ಅದೇ ವರ್ಷದ ಡಿಸೆಂಬರ್ ೩ ರಂದು ಪತ್ರಿಕೆಯ ಕಚೇರಿ ಮತ್ತು ಸ್ವಂತ ಮುದ್ರಣಾಲಯ ಮೌಂಟ್‌ರಸ್ತೆಯಲ್ಲಿನ ಸ್ವಂತ ಕಟ್ಟಡದಲ್ಲಿ ಸ್ಥಾಪಿತವಾಯಿತು. ಇದು ಮುಂದಿನ ೫೫ ವರ್ಷಗಳ ಕಾಲ ಪತ್ರಿಕೆಯ ನಿವಾಸ. ಇದಕ್ಕೆ ನೆರವು ನೀಡಿದ ಮುಖ್ಯರಲ್ಲೊಬ್ಬರು ವಿಜಯನಗರಮ್‌ನ ಮಹಾರಾಜರು.

೧೮೮೯ರ ಏಪ್ರಿಲ್‌೧ ರಂದು ‘ಹಿಂದೂ’ ದಿನ ಪತ್ರಿಕೆಯಾಗಿ ಪರಿವರ್ತಿತವಾಯಿತು. “ನಮ್ಮ ಪತ್ರಿಕೆಯ ಧ್ಯೇಯ ಧೋರಣೆಗಳು ಎಂದಿನಂತೆಯೇ ಮುಂದುವರಿಯುವವು, ಪ್ರಗತಿಯೇ ನಮ್ಮ ಜೀವನಮಂತ್ರ. ನಮ್ಮ ಜೀವನದಲ್ಲಿ ಸಾಮರಸ್ಯ ಉಂಟು ಮಾಡಲು ಅತ್ಯಗತ್ಯವಾದ ಸಾಮಾಜಿಕ ಸುಧಾರಣೆಗಳನ್ನು ನಾವು ಸ್ವಾಗತಿಸುವೆವು” ಎಂದು ಸುಬ್ರಹ್ಮಣ್ಯ ಅಯ್ಯರ್ ಬರೆದರು.

‘ಹಿಂದೂ’ ಪತ್ರಿಕೆಯನ್ನು ನಡೆಸುವಾಗ ಸುಬ್ರಹ್ಮಣ್ಯ ಅಯ್ಯರ್ ನಿರ್ಭಯವಾಗಿ ನಡೆದುಕೊಂಡರು. ದೇಶಕ್ಕೆ ಒಳ್ಳೆಯದಾಗುವುದೇ ಮುಖ್ಯ ಗುರಿಯಾಗಿಟ್ಟುಕೊಂಡರು. ಅಧಿಕಾರಿಗಳ ತಪ್ಪನ್ನು ನಿರ್ಭಯವಾಗಿ ಎತ್ತಿ ತೋರಿಸಿದರು. ಅವರ ಒಳ್ಳೆಯ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದರು. ಬ್ರಿಟಿಷ್‌ಸರ್ಕಾರದ ಪರವಾಗಿ ಭಾರತವನ್ನು ಆಳುತ್ತಿದ್ದ ವೈಸ್‌ರಾಯ್‌ಸಹ ‘ಜನರ ಅಭಿಪ್ರಾಯ ತಿಳಿಯಲು ‘ಹಿಂದೂ’ ನೋಡಬೇಕು’ ಎಂದು ತಮ್ಮ ಅಧಿಕಾರಿಗಳಿಗೆ ಹೇಳುತ್ತಿದ್ದರಂತೆ. ಒಂದು ವರ್ಷ ಚಿಂಗಲ್‌ಪೆಟ್‌ನ ಬಡ ರೈತರು ಕಂದಾಯ ಕೊಡಲು ತಡ ಮಾಡಿದರು. ಅಲ್ಲಿನ ತಹಸಿಲ್ದಾರನೊಬ್ಬ ತುಂಬ ಒರಟಾಗಿ ನಡೆದುಕೊಂಡು ಜನರಿಗೆ ತೊಂದರೆ ಕೊಟ್ಟ. ಆ ರೈತರು ದೂರಿತ್ತರು. ಸರ್ಕಾರ ವಿಚಾರಣೆ ಮಾಡಿದ ಶಾಸ್ತ್ರಮಾಡಿ ತಹಸಿಲ್ದಾರನು ತಪ್ಪು ಮಾಡಿಲ್ಲ ಎಂದು ತೀರ್ಮಾನಿಸಿತು. ಮದರಾಸ್‌ಪ್ರಾಂತದ ಗವರ್ನರ್ ಗ್ಯ್ರಾಂಟ್‌ಡಫ್‌ನನ್ನು ರೈತರ ಪ್ರತಿನಿಧಿಗಳು ನೋಡಿದಾಗ ಅವನು ಅವರನ್ನು ತಿರಸ್ಕಾರದಿಂದ ಕಂಡ. ಆ ಹಳ್ಳಿಯ ಮುನ್ಷಿಯೊಬ್ಬ ತಹಸಿಲ್ದಾರನು ಮಾಡಿದ್ದು ತಪ್ಪೆಂದು ಹೇಳಿದನೆಂದು ಆತನನ್ನು ಕೆಲಸದಿಂದ ತೆಗೆದು ಹಾಕಿ ಹದಿನೆಂಟು ತಿಂಗಳ ಕಠಿಣ ಶಿಕ್ಷೆ ವಿಧಿಸಿ ಸೆರೆಮನೆಗೆ ನೂಕಲಾಯಿತು!

‘ಹಿಂದೂ’ ಪತ್ರಿಕೆ ಬಡ ರೈತರ ಪರವಾಗಿ ಹೋರಾಟ ಪ್ರಾರಂಭಿಸಿತು. ಚಂದಾ ಎತ್ತಿ ಅವರಿಗೆ ಹಣವನ್ನು ಕೂಡಿಸಿಕೊಟ್ಟಿತು. ದುಷ್ಟ ಅಧಿಕಾರಿಗಳ ರೀತಿಗಳನ್ನು ಬಯಲಿಗೆಳೆಯಿತು. ಕಡೆಗೆ ತಹಸಿಲ್ದಾರನೇ ಜೈಲಿಗೆ ಹೋಗಬೇಕಾಯಿತು.

ಸೇಲಂನಲ್ಲಿ ಎರಡು ಮತಗಳವರಿಗೆ ಜಗಳವಾದಾಗ ಸರ್ಕಾರ ವೈಮನಸ್ಸವನ್ನು ಪರಿಹಾರ ಮಾಡುವುದನ್ನು ಬಿಟ್ಟು, ಕೆಲವರು ಸರ್ಕಾರದ ವಿರುದ್ಧ ದಂಗೆ ಎದ್ದರು ಎಂದು ಮೊಕದ್ದಮೆ ಹೂಡಿತು. ಅನೇಕರನ್ನು ಸುಳ್ಳು ಆಪಾದನೆಗಳ ಮೇಲೆ ಸೆರೆಮನೆಗೆ ತಳ್ಳಿತು. ಡಾಕ್ಟರ್ ಮಾಣಿಕ್ಯಂ ಪಿಳ್ಳೆ ಎಂಬ ಕ್ರಿಶ್ಚಿಯನ್‌ಸಂಭಾವಿತರನ್ನು ಅಂಡಮಾನಿನಲ್ಲಿ ಸೆರೆಗೆ ಹಾಕಿತು. ಸಿ. ರಾಘವಾಚಾರ್ಯರೆಂಬ ಹಿರಿಯ ಮುಖಂಡರಂತಹವರ ಮೇಲೆ ಮೊಕದ್ದಮೆ ಹೂಡಿತು. ಸರ್ಕಾರದ ಈ ಭಂಡಾಟಕ್ಕೆ ‘ಹಿಂದೂ’ ಸವಾಲು ಹಾಕಿತು. ಸೇಲಂನಲ್ಲಿ ನಡೆದ ಘಟನೆಗಳನ್ನು ತನ್ನ ವರದಿಗಾರರಿಂದ ತನಿಖೆ ಮಾಡಿಸಿ ಪ್ರಕಟಿಸಿತು. ಸೇಲಂನಲ್ಲಿದ್ದ ಮ್ಯಾಜಿಸ್ಟ್ರೇಟನು-ಆತ ಇಂಗ್ಲಿಷರವನು-ಸೇಲಂನಲ್ಲಿ ಗಲಭೆ ನಡೆಯುತ್ತಿದ್ದಾಗ ಬೆಂಗಳೂರಿನಲ್ಲಿ ಕುದುರೆ ಓಟದ ಪಂದ್ಯ ನೋಡಲು ಹೊರಟುಹೋದ ಎಂಬ ಸುದ್ದಿಯನ್ನು ಪ್ರಕಟಿಸಿತು. ಇದೆಲ್ಲದರ ಪರಿಣಾಮ ಎಂದರೆ ಲಂಡನಿನಲ್ಲಿದ್ದ ಲಾರ್ಡ್ ರಿಪ್ಪನ್‌ಮೊದಲಾದವರು ಇಡೀ ಪ್ರಸಂಗದ ಸತ್ಯಾಂಶಗಳನ್ನು ಬಯಲಿಗೆಳೆಯುವುದಾಗಿ ನಿರ್ಧರಿಸಿದ್ದು. ಭಾರತ ಸರ್ಕಾರ, ಮದರಾಸು ಸರ್ಕಾರ ಆಗ ಎಚ್ಚೆತ್ತವು. ಈ ಹೋರಾಟ ಎರಡು ವರ್ಷ ಕಾಲ ನಡೆಯಿತು.

ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ, ಭಾರತೀಯರನ್ನು ತುಳಿಯುತ್ತಿದ್ದ ಇಂಗ್ಲೆಂಡಿನಲ್ಲಿ ಹುಟ್ಟಿಬಂದು ಇಲ್ಲಿ ಮರೆಯುತ್ತಿದ್ದ ಅಧಿಕಾರಿಗಲ ವಿರುದ್ಧ ‘ಹಿಂದೂ’ ಇಷ್ಟು ದಿಟ್ಟ ಹೋರಾಟ ನಡೆಸುತ್ತಿತ್ತು. ಆದರೆ ಅದರ ಹೋರಾಟವೆಲ್ಲ ಆ ವಿದೇಶೀ ಸರ್ಕಾರದ ಮತ್ತು ಅಧಿಕಾರಿಗಳ ವಿರುದ್ಧ. ವೈಯಕ್ತಿಕವಾಗಿ ಅಧಿಕಾರಗಳ ವಿರುದ್ಧ ಪತ್ರಿಕೆ ಛಲ ಸಾಧಿಸುತ್ತಿರಲಿಲ್ಲ. ಮಾತ್ರವಲ್ಲ, ಅವರಿಗೆ ಅಗತ್ಯವಾದಾಗ ನೆರವಾಗುತ್ತಿತ್ತು. ಮಧುರೆಯ ಜಿಲ್ಲೆಯ ಕಲೆಕ್ಟರ್ ಕ್ರೋಲ್‌ಎಂಬವರ ವಿರುದ್ಧ ಸರ್ಕಾರ ಸುಲ್ಲು ಆಪಾದನೆಗಳನ್ನು ಮಾಡಿತು. ಆತನ ವಿಚಾರಣೆಯನ್ನು ‘ಇನ್‌ಕ್ಯಾಮೆರ’ (ಗುಟ್ಟಾಗಿ, ಸಾರ್ವಜನಿಕರಿಗೆ ಪ್ರವೇಶ ಇಲ್ಲದಂತೆ) ನಡೆಸಿತು. ಸರ್ಕಾರ ಮಾಡಿದ ಆಪಾದನೆಗಳು ನಿಜವಾಗಿದ್ದರೆ ಈ ರಹಸ್ಯವೇಕೆ? ‘ಹಿಂದೂ’ ಪತ್ರಿಕೆ, ಬೇರೆ ಯಾರಿಗೂ ವಿಚಾರಣೆ ನಡೆಯುವ ಕಟ್ಟಡಕ್ಕೆ ಪ್ರವೇಶವಿಲ್ಲ ಎಂದು ಸರ್ಕಾರ ಸಾರಿದ್ದರೂ, ತನ್ನ ಒಬ್ಬ ವರದಿಗಾರನನ್ನು ಕಳುಹಿಸಿತು. ಏನು ನಡೆಯಿತು ಎಂಬುದರ ವರದಿಯನ್ನು ಪ್ರತಿ ದಿನವೂ ಪ್ರಕಟಿಸಲಾರಂಭಿಸಿತು! ಇದರಿಂದ, ಅಧಿಕಾರಿಗೆ ಅನ್ಯಾಯವಾಗಿದೆ ಎಂದು ಜನರಿಗೆ ಮನವರಿಕೆಯಾಯಿತು. ಸಾರ್ವಜನಿಕ ಅಭಿಪ್ರಾಯ ಬಲವಾಗಿ, ಅಧಿಕಾರಿ ಆಪಾದನೆಗಳಿಂದ ಬಿಡುಗಡೆಯಾದ.

ಪತ್ರಿಕೋದ್ಯಮದ ಅವಿರತ ದುಡಿಮೆಯ ಸಮಯದಲ್ಲೂ ಸುಬ್ರಹ್ಮಣ್ಯ ಅಯ್ಯರ್ ಅವರು ತಮ್ಮ ಶಿಕ್ಷಕ ದಿನಗಳನ್ನು ಮರೆಯಲಿಲ್ಲ. ಜಾತಿ, ಮತ, ಅಂತಸ್ತುಗಳ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ದೊರೆಯಬೇಕೆಂಬ ಧ್ಯೇಯ ಹೊಂದಿದ್ದ ಅವರು ೧೮೮೮ರಲ್ಲಿ ಟ್ರಿಪ್ಲಿಕೇನ್‌ನಲ್ಲಿ ಆರ್ಯನ್‌ಪ್ರೌಢಶಾಲೆಯನ್ನು ಸ್ಥಾಪಿಸಿದರು. ಇಲ್ಲಿ ಮೇಲ್ವರ್ಗದ ಹಿಂದುಗಳ ಜತೆಯಲ್ಲೇ ಮುಸ್ಲಿಮರು ಹಾಗೂ ಹರಿಜನರು ಸರಿಸಮಾನರಾಗಿ ಕೂರುತ್ತಿದ್ದರು. ಮುಂದೆ ಇದೇ ಕೆಲ್ಲೆಟ್‌ಹೈಸ್ಕೂಲ್‌ಆಗಿ ಬೆಳೆಯಿತು.

ಕಾಂಗ್ರೆಸ್‌ ಜನನ

ಸುಬ್ರಹ್ಮಣ್ಯ ಅಯ್ಯರ್ ಅವರು ‘ಹಿಂದು’ ಪತ್ರಿಕೆಯ ಪ್ರವರ್ತಕರಲ್ಲೊಬ್ಬರಾಗಲು ಮುಖ್ಯ ಕಾರಣ ಅವರ ಉತ್ಕಟ ರಾಷ್ಟ್ರಪ್ರೇಮ. ಪತ್ರಿಕೆಯ ಆರಂಭ ದಿಸೆಯಿಂದಲೇ ಅವರು ತಮ್ಮ ಸಂಪಾದಕೀಯಗಳಲ್ಲಿ ಅಂದು ಭಾರತೀಯರಲ್ಲಿ ಕಂಡುಬರುತ್ತಿದ್ದ ನಿರಭಿಮಾನ ನಿರುತ್ಸಾಹಗಳನ್ನು ತೀವ್ರವಾಗಿ ಖಂಡಿಸಿದ್ದರು. ‘ಭಾರತೀಯರ ಔದಾಸೀನ್ಯಕ್ಕೆ ಮುಖ್ಯ ಕಾರಣವೆಂದರೆ ಅವರಿಗೆ ಸಾಕಷ್ಟು ಆಡಳಿತಾವಕಾಶಗಳು ಇಲ್ಲದಿರುವುದೇ’ ಎಂದು ವಿಶ್ಲೇಷಿಸಿದ್ದರು. ಆದರೆ ಆ ವೇಳೆಗಾಗಲೇ ವಸಾಹತುಷಾಹಿಯ ಕಾರ್ಮೋಡಗಳ ನಡುವೆ ರಜತರೇಖೆಯೊಂದು ಕಾಣಿಸಿಕೊಂಡಿತ್ತು. ದಬ್ಬಾಳಿಕೆಗೆ ಹೆಸರಾಗಿದ್ದ ವೈಸರಾಯ್‌ಲಾರ್ಡ್ ಲಿಟ್ಟನ್ನನ ಅನಂತರ ದೆಹಲಿಗೆ ಬಂದ ಲಾರ್ಡ್ ರಿಪ್ಪನ್‌ತನ್ನ ಆಳ್ವಿಕೆಯ ಕಾಲದಲ್ಲಿ ಹಲವಾರು ಉದಾರವಾದಿ ಧೋರಣೆಗಳನ್ನು ಅನುಸರಿಸಿದ. ಸ್ಥಳೀಯ ಸಂಸ್ಥೆಗಳೇ ಮುಂತಾದವುಗಳ ಮೂಲಕ ಭಾರತೀಯರಿಗೆ ನಾಡಿನ ಆಡಳಿತದಲ್ಲಿ ಹೆಚ್ಚುಹೆಚ್ಚಾಗಿ ಪಾಲ್ಗೊಳ್ಳಲು ಅವಕಾಶ ನೀಡಿದ. ೧೯೯೪ರ ಅಕ್ಟೋಬರ್ ನಲ್ಲಿ ಆತ ನಿರ್ಗಮಿಸಿ ಲಾರ್ಡ್‌ಡಫರಿನ್‌ಅಧಿಕಾರವಹಿಸಿಕೊಳ್ಳುವ ವೇಳೆಗೆ ಭಾರತೀಯರಲ್ಲಿ ಸಾಕಷ್ಟು ರಾಜಕೀಯ ಪ್ರಜ್ಞೆಯೂ ಬೆಳೆದಿತ್ತು.

ಈಗ ಸಮಸ್ತ ಭಾರತೀಯರ ರಾಜಕೀಯ ಆಶೋತ್ತರಗಳನ್ನು ಸಮರ್ಥವಾಗಿ ಪ್ರತಿನಿಧಿಸಬಲ್ಲ ರಾಷ್ಟ್ರೀಯ ಪಕ್ಷವೊಂದು ರೂಪುಗೊಳ್ಳಬೇಕಾಗಿದೆ ಎಂದು ಸುಬ್ರಹ್ಮಣ್ಯ ಅಯ್ಯರ್ ಅವರು ಸಂಪಾದಕೀಯ ಬರೆದರು.

ಮರುವರ್ಷವೇ ಅವರ ಬಯಕೆ ಈಡೇರಿತು. ಅವರ ಕನಸಿನ ರಾಷ್ಟ್ರೀಯ ಪಕ್ಷದ ಬಗ್ಗೆ ‘ಹಿಂದೂ’ ಪತ್ರಿಕೆಯಲ್ಲಿನ ಪ್ರತಮ ಪ್ರಕಟನೆ ೧೮೮೫ರ ಡಿಸೆಂಬರ್ ೧೨ರಂದು ಬಂತು. ಡಬ್ಲ್ಯು. ಸಿ. ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿನ ಐತಿಹಾಸಿಕ ಅಧಿವೇಶನಕ್ಕೆ ಮುಂಬಯಿ, ಮದರಾಸು, ಬಳ್ಳಾರಿ, ಕಾನ್ಪುರ, ಕೊಯಮತ್ತೂರು ಮುಂತಾದ ಹಲವಾರು ಕೇಂದ್ರಗಳಿಂದ ಒಟ್ಟು ೭೨ಮಂದಿ ಪ್ರತಿನಿಧಿಗಳು ಬಂದಿದ್ದರು. ಭಾರತ ಮತ್ತು ಇಂಗ್ಲೆಂಡಿನಲ್ಲಿನ ಆಡಳಿತ ವ್ಯವಸ್ಥೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಪ್ರಭುತ್ವವು ಆಯೋಗವೊಂದನ್ನು ನೇಮಿಸಬೇಕೆಂಬ ಹಾಗೂ ಯಾವುದೇ ಸುಧಾರಣೆಯನ್ನು ಕೈಗೊಳ್ಳುವ ಮುನ್ನ ಇಂಡಿಯಾ ಕೌನ್ಸಿಲ್ಲನ್ನು ರದ್ದು ಮಾಡಬೇಕೆಂಬ ಎರಡು ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮ ಅಧಿವೇಶನದ ಪ್ರಥಮ ನಿರ್ಣಯವನ್ನು ಮಂಡಿಸಿದವರು ಜಿ.ಸುಬ್ರಹ್ಮಣ್ಯ ಅಯ್ಯರ್ ಅವರೇ. ಅಂದಿನ ಕಾಲದಲ್ಲಿ ದೇಶಾಭಿಮಾನಿ ಭಾರತೀಯನೊಬ್ಬನಿಗೆ ಇದಕ್ಕಿಂತ ಹೆಚ್ಚಿನ ಗೌರವ ಇದ್ದಿರಲಾರದು.

‘ಭಾರತದಲ್ಲಿ ಪತ್ರಿಕೋದ್ಯಮ ಸಾರ್ವಜನಿಕ ಹಿತಸಾಧನೆಗೆ ದಾರಿ’

ವಿರಸ

‘ಹಿಂದೂ’ ಪತ್ರಿಕೆಯನ್ನು ಸ್ಥಾಪಿಸಿದ ಇಪ್ಪತ್ತನೆಯ ವರ್ಷದಲ್ಲಿ ಸುಬ್ರಹ್ಮಣ್ಯ ಅಯ್ಯರ್ ಅವರು ಆ ಸಂಸ್ಥೆಯಿಂದ ಬೇರ್ಪಟ್ಟರು. ಅದಕ್ಕೆ ತಕ್ಷಣದ ಕಾರಣ ಟ್ರಿಪ್ಲಿಕೇನ್‌ಕ್ಷೇತ್ರದಿಂದ ಮದರಾಸು ಕಾರ್ಪೊರೇಷನ್‌ಗೆ ಚುನಾವಣೆಯ ಸಂಬಂಧದಲ್ಲಿ ಸುಬ್ರಹ್ಮಣ್ಯ ಅಯ್ಯರ್ ಹಾಗೂ ವೀರ ರಾಘವಾಚಾರಿಯಾರ್ ಅವರು ಕ್ರಮವಾಗಿ ಪರಸ್ಪರ ಎದುರಾಳಿಗಳಾದ ಇಯರ್ಡ್ಲಿ ನಾರ್ಟನ್‌ಮತ್ತು ಲೋಡ್‌ಗೋವಿಂದದಾಸ್‌ಅವರನ್ನು ಬೆಂಬಲಿಸಿದುದು. ನಾರ್ಟನ್‌ಸಮರ್ಥ ಕಾರ್ಯಕರ್ತನೆಂದು ಸುಬ್ರಹ್ಮಣ್ಯ ಅಯ್ಯರ್ ಅವರಿಗೆ ಆತನ ಬಗ್ಗೆ ಅಭಿಮಾನ. ಗೋವಿಂದದಾಸ್‌ಅಪ್ಪಟ ಭಾರತೀಯನೆಂದು ಆತನಿಗೆ ವೀರರಾಘವಾಚಾರಿಯಾರ್ ಬೆಂಬಲ. ನಾರ್ಟನ್‌ಗೆದ್ದ; ಎರಡು ತಿಂಗಳಲ್ಲಿಯೇ ಸುಬ್ರಹ್ಮಣ್ಯ ಅಯ್ಯರ್ ಪತ್ರಿಕೆಯಿಂದ ಹೊರಬಂದರು.

ಆಂಗ್ಲ ಆಡಳಿತವನ್ನು ತೀವ್ರವಾಗಿ ವಿರೋಧಿಸಿದರೂ ಸುಬ್ರಹ್ಮಣ್ಯ ಅಯ್ಯರ್ ಅವರಿಗೆ ಆಂಗ್ಲೇಯರ ಶಿಸ್ತು, ಕ್ರಿಯಾಶೀಲತೆ ಮುಂತಾದವುಗಳ ಬಗ್ಗೆ ಪೂರ್ಣ ಮೆಚ್ಚುಗೆಯಿತ್ತು.

ಆದರೆ ಪತ್ರಿಕೆಯ ಇಬ್ಬರು ಸಂಸ್ಥಾಪಕರ ನಡುವಣ ವಿರಸಕ್ಕೆ ಇನ್ನೂ ಹೆಚ್ಚಿನ ಕಾರಣಗಳಿದ್ದವು. ಹಿಂದೂ ಸಮಾಜದಲ್ಲಿ ತೀವ್ರ ಸುಧಾರಣೆ ತರಬಯಸಿದ ಸುಬ್ರಹ್ಮಣ್ಯ ಅಯ್ಯರ್ ಅವರು ತಮ್ಮ ಪತ್ರಿಕೆಯಲ್ಲಿ ಅನೇಕಾನೇಕ ಸಂಪ್ರದಾಯ ವಿರೋಧಿ ಬರವಣಿಗೆಗಳಿಗೆ ಮುಕ್ತಪ್ರವೇಶ ನೀಡಿದರು. ವಿಧವಾ ವಿವಾಹ, ಜಾತಿಪದ್ಧತಿ ನಿರ್ಮೂಲನ, ಬಾಲ್ಯವಿವಾಹಕ್ಕೆ ಬಹಿಷ್ಕಾರ, ಹರಿಜನೋದ್ಧಾರ ಮುಂತಾದ ಹಲವಾರು ಪ್ರಗತಿಪರ ಕ್ರಮಗಳಿಗೆ ಅವರ ಬೆಂಬಲ ಸಮಾಜದ ಮೇಲೆ ತೀವ್ರ ಪರಿಣಾಮ ಮಾಡಿದರೂ ಪತ್ರಿಕೆಯ ಆರ್ಥಿಕ ಸ್ಥಿತಿಗೆ ಕೊಡಲಿಯೇಟು ಹಾಕಿತು. ವೀರರಾಘವಾಚಾರಿಯರ್ ಅವರಿಗೆ ಇನ್ನು ಮುಂದೆ ಸುಬ್ರಹ್ಮಣ್ಯ ಅಯ್ಯರ್ ಅವರೊಂದಿಗೆ ಹೊಂದಿಕೊಂಡಿರುವುದು ಸಾಧ್ಯವಿರಲಿಲ್ಲ.

೧೮೮೫ರಲ್ಲಿ ಮದರಾಸಿನಲ್ಲಿ ಸುಬ್ರಹ್ಮಣ್ಯ ಅಯ್ಯರ್ ಮತ್ತು ವೀರರಾಘವಾಚಾರಿಯರ್ ಅವರನ್ನು ಭೇಟಿ ಮಾಡಿದ ಲಾರ್ಡ್ ರಿಪ್ಪನ್‌ತನ್ನ ದಿನಚರಿಯಲ್ಲಿ ಹೀಗೆ ಬರೆದುಕೊಂಡಿದ್ದ: “ಸ್ಥಳೀಯ ‘ಹಿಂದೂ’ ಪತ್ರಿಕೆಯ ಸಂಪಾದಕರು; ಅವರ ಹೆಸರುಗಳು: ಜಿ. ಸುಬ್ರಹ್ಮಣ್ಯ ಅಯ್ಯರ್ ಮತ್ತು ಎಂ. ವೀರರಾಘವಾಚಾರಿಯಾರ್; ಬುದ್ಧಿವಂತರು; ನಿಖರವಾಗಿ ಯೋಚಿಸಬಲ್ಲವರು; ಲಂಡನ್ನಿನ ಅವರ ವೃತ್ತಿಬಾಂಧವರೊಂದಿಗೆ ಸರಿಸಮನಾಗಿ ನಿಲ್ಲಬಲ್ಲವರು.”

ಪತ್ರಿಕೆಯ ಆರಂಭದ ದಿನಗಳಲ್ಲಿ ಇವರ ಪರಸ್ಪರ ವಿರುದ್ಧ ಗುಣಗಳು ಒಂದಕ್ಕೊಂದು ಪೂರಕವಾಗಿದ್ದವು. ಆದರೆ ಸಂಸ್ಥೆ ಬೆಳೆದು ಕಾರ್ಯಕ್ಷೇತ್ರ ವಿಸ್ತಾರವಾದಂತೆ ಭಿನ್ನಾಭಿಪ್ರಾಯಗಳೂ ಹೆಚ್ಚಿದವು. ಕಡೆಗೆ ಸುಬ್ರಹ್ಮಣ್ಯ ಅಯ್ಯರ್ ಅವರು ‘ಹಿಂದೂ’ ಪತ್ರಿಕೆಯನ್ನು ಬಿಡಲು ನಿಶ್ಚಯಿಸಿದರು. ೧೮೯೮ರ ಅಕ್ಟೋಬರ್ ೩ರ ಸಂಚಿಕೆಯಲ್ಲಿ ವೀರರಾಘವಾಚಾರ್ಯರೆ ಪತ್ರಿಕೆಯ ಮಾಲೀಕರು ಎಂದು ಪ್ರಕಟಿಸಲಾಯಿತು.

ಆದರೆ ‘ಹಿಂದೂ’ ಮತ್ತು ಸುಬ್ರಹ್ಮಣ್ಯ ಅಯ್ಯರ್ ನಡುವಣ ಆದರಾಭಿಮಾನ ಎಂದೂ ತಗ್ಗಲಿಲ್ಲ. ೧೯೦೩ರಲ್ಲಿ ಪತ್ರಿಕೆಯ ರಜತಮಹೋತ್ಸವದಲ್ಲಿ ಭಾಗವಹಿಸಿದ ಅವರು, ತಾವು ಮತ್ತು ತಮ್ಮ ಸ್ನೇಹಿತರು ಬಿತ್ತಿದ ಬೀಜ ಹೆಮ್ಮರವಾಗಿ ಬೆಲೆದ ಬಗ್ಗೆ ಅಪಾರ ಆನಂದ ವ್ಯಕ್ತಪಡಿಸಿದರು. ಅಂತರರಾಷ್ಟ್ರೀಯ ಹಿರಿಮೆಗಳಿಸಿರುವ ಈ ಪತ್ರಿಕೆ ಈಗ ದಿನವೊಂದಕ್ಕೆ ಸುಮಾರು ಮೂರು ಲಕ್ಷ ಪ್ರತಿಗಳಷ್ಟು ಮುದ್ರಿತವಾಗುತ್ತಿದೆ. ಮೌಂಟ್‌ರೋಡ್‌ನಲ್ಲಿನ ಸ್ವಂತ ಕಾರ್ಯಾಗಾರ. ‘ಕಸ್ತೂರಿ ಬಿಲ್ಡಿಂಗ್ಸ್‌’ ನಲ್ಲಿ ಸುಬ್ರಹ್ಮಣ್ಯ ಅಯ್ಯರ್ ಅವರ ಮಿಶ್ರಲೋಹ ಪ್ರತಿಮೆ ಇದೆ. ಪತ್ರಿಕೆ ಮದರಾಸು, ಬೆಂಗಳೂರು, ಹೈದರಾಬಾದು, ಮಧುರೆ, ಕೊಯಮತ್ತೂರುಗಳಿಂದ ಪ್ರಕಟವಾವಾಗುತ್ತಿದೆ.

ಸುಬ್ರಮಣ್ಯ ಅಯ್ಯರ್-ವೀರರಾಘವಾಚಾರ್ಯರ ನಡುವಣ ಎರಡು ದಶಕಗಳಿಗೂ ಹೆಚ್ಚು ಕಾಲದ ಸ್ನೇಹ ಮುರಿಯಲು ಒಂದು ರೀತಿಯಲ್ಲಿ ನಡೆ-ನುಡಿ ಪರೋಕ್ಷವಾಗಿ ಕಾರಣರಾದ ನಾರ್ಟನ್‌ಅವರೇ ಇಬ್ಬರಿಗೂ ಸಮರ್ಪಕವಾಗುವ ರೀತಿಯಲ್ಲಿ ಪ್ರತ್ಯೇಕತಾ ಪತ್ರವನ್ನು ರೂಪುಗೊಳಿಸಿದರು.

ನಡೆ-ನುಡಿ

ಸುಬ್ರಹ್ಮಣ್ಯ ಅಯ್ಯರ್ ಅವರು ನುಡಿದಂತೆ ನಡೆದ ವ್ಯಕ್ತಿ. ಅದಕ್ಕೆ ಒಂದು ಉದಾಹರಣೆಯೆಂದರೆ ಅವರ ಮಗಳು ಶಿವಪ್ರಿಯಾಮ್ಮಾಳ್‌ಅವರ ಮರುವಿವಾಹ. ಆಕೆಗೆ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿತ್ತು. ಅನಂತರ ಒಂದು ವರ್ಷಕ್ಕೆ ಗಂಡ ತೀರಿಕೊಂಡ. ಆ ಕಾಲದಲ್ಲಿ ವಿಧವೆ ಮತ್ತೆ ಮದುವೆಯಾಗುವುದೆಂದರೆ ಮಹಾ ಪಾಪ. ಆದರೆ ಸುಬ್ರಹ್ಮಣ್ಯ ಅಯ್ಯರ್ ಧೈರ್ಯದಿಂದ ಎಳೆವಯಸ್ಸಿನ ಮಗಳಿಗೆ ಮತ್ತೆ ಮದುವೆ ಮಾಡಲು ತೀರ್ಮಾನಿಸಿದರು. ೧೮೮೯ರಲ್ಲಿ ಮುಂಬಯಿಯಲ್ಲಿ ಕಾಂಗ್ರೆಸ್‌ಅಧಿವೇಶನದ ಸಮಯದಲ್ಲಿಯೇ ನಡೆದ ಈ ವಿವಾಹ ಸಮಾರಂಭಕ್ಕೆ ಧೀಮಂತ ರಾಷ್ಟ್ರನಾಯಕ ಮಹದೇವ ಗೋವಿಂದ ರಾನಡೆ ಅವರೂ ಆಗಮಿಸಿದ್ದು ವಧೂವರರನ್ನು ಆಶೀರ್ವದಿಸಿದರು.

ಮೊದಲ ಮಗಳ ಮರುವಿವಾಹದ ನಾಲ್ಕು ತಿಂಗಳಲ್ಲೇ ಸುಬ್ರಹ್ಮಣ್ಯ ಅಯ್ಯರ್ ಅವರ ಪ್ರೀತಿಯ ಪತ್ನಿ ಮೀನಾಕ್ಷಿ ನಿಧನರಾದರು. ಸುಬ್ರಮಣ್ಯ ಅಯ್ಯರ್ ಅವರಿಗೆ ಇದೊಮದು ಭಾರಿ ಪೆಟ್ಟು..

ಈ ಮಧ್ಯೆ ಸುಬ್ರಹ್ಮಣ್ಯ ಅಯ್ಯರ್ ಅವರ ಸಾಮಾಜಿಕ ಚಟುವಟಿಕೆಗಳು ಮುಂದುವರಿಯುತ್ತಿದ್ದವು. ರಘುನಾಥರಾವ್‌ಎಂಬ ಸ್ನೇಹಿತರ ಸಕ್ರಿಯ ಬೆಂಬಲದಿಂದ ಅವರು ಹಿಂದೂ ಧರ್ಮ ಸುಧಾರಣಾ ಸಂಘವೊಂದನ್ನು ಸ್ಥಾಪಿಸಿದರು. ಇದರ ಮೂಲಕ ವಿಧವಾ ವಿವಾಹ ಹಾಗೂ ಬಾಲ್ಯವಿವಾಹ ನಿಷೇಧದ ಬಗ್ಗೆ ಪ್ರಚಾರ ನಡೆಸುತ್ತಿದ್ದರು.

ತಮಗೆ ಸರಿಯೆನಿಸದ, ಸಮಾಜದ ಆರೋಗ್ಯಕ್ಕೆ ಹಿತವಲ್ಲದ, ಯಾವುದೇ ಸಂಪ್ರದಾಯವಾದರೂ ಅದರ ವಿರುದ್ಧ ಬಹಿರಂಗವಾಗಿ ಸಿಡಿದೇಳುತ್ತಿದ್ದುದು ಸುಬ್ರಹ್ಮಣ್ಯ ಅಯ್ಯರ್ ಅವರ ಸಹಜ ಪ್ರವೃತ್ತಿ. ಇದಕ್ಕೆ ಇನ್ನೂ ಒಂದು ನಿದರ್ಶನ. ಸತ್ತವರ ಬಗ್ಗೆ ತಕ್ಷಣದ ಬರಹಗಳಲ್ಲಿ ಒಳ್ಲೆಯದನ್ನೇ ಉಲ್ಲೇಖಿಸಬೇಕು ಎಂಬ ಸಾಮಾನ್ಯ ಪತ್ರಿಕಾ ನೀತಿಯಿದೆ. ಆದರೆ ಸುಬ್ರಹ್ಮಣ್ಯ ಅಯ್ಯರ್ ಅವರು ನಿಧನದ ಸುದ್ದಿಯೊಂದಿಗೆ ಆಯಾ ವ್ಯಕ್ತಿಯ ಗುಣಾವಗುಣಗಳನ್ನು ಮುಚ್ಚುಮರೆಯಿಲ್ಲದೆ ವಿಮರ್ಶಿಸುತ್ತಿದ್ದರು. ಸತ್ತವರಿಗೆ ನಾವು ಬರೆದುದು ತಟ್ಟುವುದಿಲ್ಲ, ಆದರೆ ಬದುಕಿರುವವರು ಅದರಿಂದ ಪಾಠ ಕಲಿತುಕೊಳ್ಳಬಹುದು ಎಂಬುದು ಅವರ ವಾದವಾಗಿರುತ್ತಿತ್ತು.

ಆದರೆ ಬಂಡಾಯತನದ ಇಷ್ಟೆಲ್ಲ ಲಕ್ಷಣಗಳಿದ್ದರೂ ಸುಬ್ರಹ್ಮಣ್ಯ ಅಯ್ಯರ್ ಅವರು ಮೂಲತಃ ಅತ್ಯಂತ ಧಾರ್ಮಿಕ ಪ್ರವೃತ್ತಿಯವರೂ ಆಗಿದ್ದರು. ಪ್ರತಿದಿನ ಬೆಳಿಗ್ಗೆ ದೇವರ ಪೂಜೆ ಮಾಡುತ್ತಿದ್ದರು. ರಾಮಾಯಣ ಮತ್ತು ಕುರುಳ್‌ತಪ್ಪದೆ ಓದುತ್ತಿದ್ದರು. ಅಂದಿನ ಕಾಲದ ಬ್ರಾಹ್ಮಣರ ಪದ್ಧತಿಯಂತೆ ತಲೆಕೂದಲನ್ನು ಹಿಂಭಾಗದಲ್ಲಿ ಸಣ್ಣಗೆ ಗಂಟು ಹಾಕುತ್ತಿದ್ದರು.

ಇಂಗ್ಲೆಂಡ್‌ ಪ್ರವಾಸ

‘ಹಿಂದೂ’ ಪತ್ರಿಕೆಯೊಂದಿಗೆ ಸಂಬಂಧ ಕಡಿದುಕೊಳ್ಳುವ ಮುನ್ನ ಸುಬ್ರಹ್ಮಣ್ಯ ಅಯ್ಯರ್ ಅವರ ಜೀವಿತದಲ್ಲಿನ ಇನ್ನೊಂದು ಮಹತ್ವದ ಘಟನೆಯೆಂದರೆ ೧೮೯೭ರ ಮಾರ್ಚ್ ೧೯ ರಂದು ರಾಯಲ್‌ಕಮಿಷನ್‌ಮುಂದೆ ಭಾರತದ ಆರ್ಥಿಕ ಸ್ಥಿತಿಯ ಬಗ್ಗೆ ಸಾಕ್ಷ್ಯ ನೀಡುವ ಸಲುವಾಗಿ ಇಂಗ್ಲೆಂಡ್‌ಪ್ರವಾಸಕ್ಕೆ ಆಹ್ವಾನ ಪಡೆದುದು. ಆರು ಮಂದಿ ಸದಸ್ಯರ ಈ ನಿಯೋಗದಲ್ಲಿ ಆಧುನಿಕ ಭಾರತದ ವಿಭೂತಿ ಪುರುಷರಲ್ಲೊಬ್ಬರಾದ ಗೋಪಾಲ ಕೃಷ್ಣ ಗೋಖಲೆ ಅವರೂ ಇದ್ದರು.

ಇಂಗ್ಲೆಂಡಿಗೆ ಹೋದ ಹೊಸದರಲ್ಲಿ ಸುಬ್ರಹ್ಮಣ್ಯ ಅಯ್ಯರ್ ಅವರು ಸ್ವದೇಶಕ್ಕೆ ಬರೆದ ಪತ್ರವೊಂದು ಮಹತ್ವ ಪೂರ್ಣವಾದುದು.

“ಇಲ್ಲಿನ ಜೀವನ ವೆಚ್ಚ ಬಹಳ ಹೆಚ್ಚು, ನನ್ನ ಸ್ನೇಹಿತರ ಮಾತಿನ ಮೇಲೆ ನಾನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು. ಬ್ರಿಟಿಷ್‌ರಾಣಿಯ ವಜ್ರಮಹೋತ್ಸವದ ವೇಳೆಗೆ ನಾನು ಇಲ್ಲಿರುವೆನೋ ಇಲ್ಲವೊ, ಹೇಳಲಾರೆ. ಆಕೆಯ ಮೆರವಣಿಗೆ ಹೋಗುವ ರಸ್ತೆಯ ಬದಿಗಳಲ್ಲಿರುವ ಒಂದೊಂದು ಕಿಟಕಿಗೂ ಅಪಾರ ಹಣ ಕೊಡುವ ಜನರಿದ್ದಾರೆ. ಕಿಟಕಿಗಳು ಕೊಠಡಿಗಳು ಹಾಗಿರಲಿ, ಇಡಿ ಮನೆಗಳನ್ನೇ ಸಹಸ್ರಾರು ಪೌಂಡ್‌ತೆತ್ತು ಬಾಡಿಗೆಗೆ ಪಡೆಯುತ್ತಾರೆ. ಅಂದು ಬಹುಶಃ ನನಗೆ ಏನನ್ನೂ ನೋಡಲು ಸಾಧ್ಯವಾಗಲಾರದು. ಹಾಗಿದ್ದ ಮೇಲೆ ಇನ್ನು ಇಲ್ಲಿದ್ದೇನು ಪ್ರಯೋಜನ?”

ರಾಯಲ್‌ಕಮಿಷನ್‌ಮುಂದೆ ಅವರು ನೀಡಿದ ಸಾಕ್ಷ್ಯ ಅತ್ಯಂತ ವಿಚಾರಪೂರ್ಣವಾಗಿತ್ತು. ವಿದೇಶೀ ಮಾರುಕಟ್ಟೆಗಳಿಂದ ಭಾರಿ ಹಣವನ್ನು ಸಾಲವಾಗಿ ಪಡೆದು ಭಾರತಾದ್ಯಂತ ರೈಲ್ವೆ ಮಾರ್ಗಗಳನ್ನು ಹಾಕುವುದನ್ನು ಬಲವಾಗಿ ವಿರೋಧಿಸಿದ ಅವರು, ಇದರಿಂದ ಸ್ವದೇಶಿ ಉದ್ಯಮಗಳಿಗೆ ಹೊಡೆತ ಬೀಳುತ್ತಿದೆಯೆಂದು ವಾದಿಸಿದರು. ಹೊರಗಿನ ಸಾಲದ ಹೊರೆ ಮಾತ್ರವೇ ಅಲ್ಲದೆ, ಆಮದಾದ ವಿದೇಶೀ ಬಟ್ಟೆಗಳ ಚಲಾವಣೆಯಿಂದ ಗ್ರಾಮೀಣ ಭಾರತದ ಕೈಮಗ್ಗದ ಉದ್ಯಮ ಕುಸಿದು ರಾಷ್ಟ್ರದ ಆರ್ಥಿಕ ವ್ಯವಸ್ಥೆ ಹದಗೆಡುವುದೆಂದು ಹೇಳಿದರು. ಅಂದರೆ ಸುಬ್ರಹ್ಮಣ್ಯ ಅಯ್ಯರ್ ಅವರು ರೈಲ್ವೆ ವ್ಯವಸ್ಥೆಯನ್ನೇ ಪೂರ್ಣವಾಗಿ ವಿರೋಧಿಸಿದರೆಂದಲ್ಲ. ಸಮಗ್ರ ದೃಷ್ಟಿಯಿಲ್ಲದ ಅತಿ ವೇಗದ ಪ್ರಗತಿ ತನ್ನ ಮೂಲ ಉದ್ದೇಶಕ್ಕೆ ಮಾರಕಪ್ರಾಯವಾಗುವುದೆಂಬುದು ಅವರ ಮಾತಿನ ಅರ್ಥವಾಗಿತ್ತು. ಅವರ ಸ್ವತಂತ್ರ ಚಿಂತನೆ ಯಾವ ಮಟ್ಟದಲ್ಲಿತ್ತೆಂಬುದು ಇದರಿಂದ ಗೊತ್ತಾಗುವುದು.

ಸುಬ್ರಹ್ಮಣ್ಯ ಅಯ್ಯರ್ ಅವರ ಪ್ರಖರ ಪಾಂಡಿತ್ಯ, ಮೇರು ವ್ಯಕ್ತಿತ್ವವನ್ನು ಗಮನಿಸಿ ಲಂಡನಿನ ರಾಯಲ್‌ಏಷ್ಯಾಟಿಕ್‌ಸೊಸೈಟಿಯು ಗೌರವ ಸದಸ್ಯತ್ವ ನೀಡಿತು.

ಹೆಮ್ಮೆ

ಭಾರತೀಯರ ಬಗ್ಗೆ, ಭಾರತೀಯತೆಯ ಬಗ್ಗೆ ಹೆಮ್ಮೆ ಸುಬ್ರಹ್ಮಣ್ಯ ಅಯ್ಯರ್ ಅವರ ರಕ್ತಗತ ಗುಣವಾಗಿತ್ತು. ಅದೇ ವರ್ಷವೇ ಅವರು ಸಭೆಯೊಂದರಲ್ಲಿ ಭಾರತೀಯ ಹಾಗೂ ಇಂಗ್ಲಿಷ್‌ಪತ್ರಿಕೆಗಳ ಪರಸ್ಪರ ಗುಣದೋಷಗಳ ಬಗ್ಗೆ ಮಾತನಾಡುತ್ತ, “ಇಂಗ್ಲೀಷರಿಗೆ ಪತ್ರಿಕೋದ್ಯಮ ಒಂದು ವ್ಯಾಪಾರ, ಆದರೆ ಭಾರತೀಯರಿಗೆ ಅದು ಸಾರ್ವಜನಿಕ ಸೇವೆಗೆ ಒಂದು ಸಾಧನ. ಭಾರತೀಯ ಪತ್ರಿಕೆಗಳು ಇನ್ನೂ ಶೈಶವಾಸ್ಥೆಯಲ್ಲಿವೆ ನಿಜ, ಆದರೆ ಉಷ್ಣವಲಯದಲ್ಲಿನ ಇತರ ಯಾವುದೇ ಗಿಡಗಳಂತೆ ಇವೂ ತೀವ್ರಗತಿಯಲ್ಲಿ ಬೆಳೆದಿವೆ” ಎಂದರು.

ಸ್ವದೇಶ ಮಿತ್ರನ್‌

ಆಂಗ್ಲ ಭಾಷಾ ಪತ್ರಿಕೋದ್ಯಮದ ಪ್ರಥಮ ಶ್ರೇಣಿಯಲ್ಲಿದ್ದರೂ ಮಾತೃಭಾಷೆಯ ಮೇಲಿನ ಮಮತೆಯನ್ನು ಬಿಡದ ಸುಬ್ರಹ್ಮಣ್ಯ ಅಯ್ಯರ್ ಅವರು, ತಾವು ‘ಹಿಂದೂ’ ಸಂಪಾದಕರಾಗಿದ್ದಾಗಲೇ ‘ಸ್ವದೇಶ ಮಿತ್ರನ್‌’ ತಮಿಳು ವಾರಪತ್ರಿಕೆಯನ್ನು ಸ್ಥಾಪಿಸಿದ್ದರು. ಹಿಂದೂ ಪತ್ರಿಕೆಯೊಡನೆ ಸಂಬಂಧ ಕಡಿದಮೇಲೆ ಅವರಿಗೆ ಈ ಪತ್ರಿಕೆಯ ಅಭಿವೃದ್ಧಿಗೆ ಹೆಚ್ಚು ಕಾಲ ವಿನಿಯೋಗಿಸುವುದು ಸಾಧ್ಯವಾಯಿತು. ಅದಮ್ಯ ಕ್ರಿಯಾಶಾಲಿಯಾದ ಅವರು ಕೆಲವೇ ದಿನಗಳಲ್ಲೇ ‘ಸ್ವದೇಶ ಮಿತ್ರನ್‌’ ಸಾಪ್ತಾಹಿಕವನ್ನು ದಿನಪತ್ರಿಕೆಯನ್ನಾಗಿ ಪರಿವರ್ತಿಸಿದರು. ಜತೆಗೆ ‘ಮದರಾಸ್‌ಸ್ಟಾಂಡರ್ಡ್’ ದಿನ ಪತ್ರಿಕೆಯ ಸಂಪಾದಕರಾಗಿಯೂ ಅಧಿಕಾರ ವಹಿಸಿಕೊಂಡರು. ಇಷ್ಟೇ ಸಾಲದೆಂಬಂತೆ ‘ಯುನೈಟೆಡ್‌ಇಂಡಿಯ’ ಎಂಬ ಆರ್ಥಿಕ ಪತ್ರಿಕೆಯೊಂದನ್ನು ಸ್ಥಾಪಿಸಿದರು.

‘ಹಿಂದೂ’ ಪತ್ರಿಕೆಯನ್ನು ಬಿಟ್ಟ ಒಂಬತ್ತು ವರ್ಷಗಳ ನಂತರ ಒಮ್ಮೆ ಸುಬ್ರಹ್ಮಣ್ಯ ಅಯ್ಯರ್ ಅವರು ಅದರಲ್ಲಿ ಪತ್ರವೊಂದನ್ನು ಬರೆದರು. ಅದು ಲಾಲಾ ಲಜಪತ ರಾಯ್‌ಅವರ ವಿರುದ್ಧ ಬ್ರಿಟಿಷರು ಕೈಗೊಂಡ ಗಡಿಪಾರು ಕ್ರಮದ ಬಗ್ಗೆ ಉಗ್ರ ಟೀಕೆಯಾಗಿತ್ತು. ಸಾಮಾನ್ಯವಾಗಿ ಬ್ರಿಟಿಷರ ಬಗ್ಗೆ ಅಭಿಮಾನದ ಲೇಪವೂ ಇರುತ್ತಿದ್ದ ಅವರ ಹಿಂದಿನ ಬರಹಗಳೆಲ್ಲದಕ್ಕಿಂತ ಇದು ಕಟುವಾಗಿತ್ತು. ಬ್ರಿಟಿಷರ ಜತೆ ಯಾವುದೇ ರೀತಿಯ ಸಂಧಾನ ಕ್ರಮವೂ ಸಾಧ್ಯವಿಲ್ಲ ಎಂಬುದು ಅವರ ಆಖೈರು ಅಭಿಪ್ರಾಯವಾದಂತಿತ್ತು.

ಇದೇ ಸಮಯದಲ್ಲಿಯೇ ಅವರು ಬ್ರಿಟಿಷ್‌ವಸ್ತುಗಳ ಬಹಿಷ್ಕಾರ, ಅವರ ಪದವಿ ಪ್ರಶಸ್ತಿಗಳಿಗೆ ತಿರಸ್ಕಾರ ಮುಂತಾದ ಕ್ರಮಗಳನ್ನೂ ಉತ್ಸಾಹದಿಂದ ಬೆಂಬಲಿಸಿದರು. ಇದು ಬ್ರಿಟಿಷ್‌ಜನರ ವಿರುದ್ಧ ದ್ವೇಷದ ಕ್ರಮವಲ್ಲ, ಅವರ ಸಾಮ್ರಾಜ್ಯಷಾಹಿ ಸರ್ಕಾರದ ಮೇಲಿನ ಸಮರ ಎಂದು ಸ್ಪಷ್ಟಪಡಿಸಿದ್ದರು.

೧೯೦೮, ಸುಬ್ರಹ್ಮಣ್ಯ ಅಯ್ಯರ್ ಅವರ ಜೀವನದಲ್ಲಿ ನೋವಿನ ವರ್ಷ. ‘ಸ್ವದೇಶ ಮಿತ್ರನ್‌’ ಪತ್ರಿಕೆಯಲ್ಲಿ ಅವರು ಬರೆದ ರಾಷ್ಟ್ರಾಭಿಮಾನದ ಕೆಲವು ಲೇಖನಗಳು ಬ್ರಿಟಿಷ್‌ಪ್ರಭುತ್ವದ ಕಣ್ಣಿಗೆ ದೇಶದ್ರೋಹದ ಸಾಹಿತ್ಯವಾಗಿ ಕಂಡಿತು. ಅಲ್ಪ ವಿಶ್ರಾಂತಿಗಾಗಿ ಕೂರ್ತಲಮ್‌ನಲ್ಲಿದ್ದ ಅವರನ್ನು ಸರ್ಕಾರ ಬಂಧಿಸಿತು. ಇದರ ಬಗ್ಗೆ ದೇಶಾದ್ಯಂತ ಉಗ್ರ ಪ್ರತಿಭಟನೆ ವ್ಯಕ್ತವಾಯಿತು. ಸುಮಾರು ಎರಡು ವಾರಗಳಲ್ಲಿಯೇ ಅವರ ಬಿಡುಗಡೆಯಾಯಿತು. ಇದಕ್ಕೆ ಆಂಗ್ಲ ಸರ್ಕಾರ ಕೊಟ್ಟ ಮುಖ್ಯಕಾರಣ: ಸುಬ್ರಹ್ಮಣ್ಯ ಅಯ್ಯರ್ ಅವರ ವಯಸ್ಸು ಮತ್ತು ದೇಹಸ್ಥಿತಿ. ಬಿಡುಗಡೆಗೆ ಮುನ್ನ ಸರ್ಕಾರವು ಅವರಿಂದ ಒಂದು ಮುಚ್ಚಳಿಕೆ ಬರೆಸಿ ಕೊಂಡಿತು. ಇದನ್ನು ಅವರು ಇಷ್ಟವಿಲ್ಲದೆಯೇ, ಪರಿಸ್ಥಿತಿಯ ಒತ್ತಡದಿಂದ ಬರೆದುಕೊಟ್ಟರು.

ಅನಾರೋಗ್ಯ

ಆದರೆ ಎರಡು ವಾರಗಳ ಸೆರೆವಾಸದ ನಂತರ ಸುಬ್ರಹ್ಮಣ್ಯ ಅಯ್ಯರ್ ಅವರ ಆರೋಗ್ಯ ಇನ್ನಷ್ಟು ಕೆಟ್ಟಿತು. ಜತೆಗೆ ಅವರು ಕುಷ್ಠರೋಗ ಪೀಡಿತರಾಗಿದ್ದರು. ಬಲವಂತದ ಮೇಲೆ ತಾವು ಬರೆದುಕೊಡಬೇಕಾಗಿ ಬಂದ ಸದ್ವರ್ತನೆಯ ಮುಚ್ಚಳಿಕೆ ಅವರ ಮಾನಸಿಕ ಸ್ಥೈರ್ಯವನ್ನು ಬಲವಾಗಿ ಅಲುಗಾಡಿಸಿತ್ತು. ‘ಸ್ವದೇಶ ಮಿತ್ರನ್‌’ ನಲ್ಲಿನ ಅವರ ಬರವಣಿಗೆಗಳು ಎಂದಿನ ಓಜಸ್ಸನ್ನು ಕಳೆದುಕೊಂಡಿದ್ದವು.

ಒಮ್ಮೆ ತಮ್ಮ ಆಪ್ತಮಿತ್ರರೊಬ್ಬರೊಂದಿಗೆ ಮಾತನಾಡುತ್ತ ಅವರು, ಒಂದು ವೇಳೆ ಬ್ರಿಟಿಷ್‌ಸರ್ಕಾರ ತಮ್ಮನ್ನು ಗಲ್ಲಿಗೇರಿಸುವ ನಿರ್ಧಾರ ಕೈಗೊಂಡಿದ್ದರೆ ತಾವು ಹರ್ಷದಿಂದ ಅದನ್ನು ಸ್ವಾಗತಿಸುತ್ತಿದ್ದುದಾಗಿ ಹೇಳಿದರು. ತೀವ್ರ ಸಾಮಾಜಿಕ ವಿರೋಧ ಎದುರಿಸಿ ತಾವು ವಿವಾಹ ಮಾಡಿದ್ದ ಹಾಗೂ ತಮ್ಮ ಬಲಗೈನಂತಿದ್ದ ಹಿರಿಯ ಮಗಳು ಶಿವಪ್ರಿಯ ಅದೇ ವರ್ಷವೇ ಕೇವಲ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ನಿಧನರಾದದ್ದು ಅವರ ನಿರಾಶಾಭಾವನೆಯನ್ನು ಇನ್ನೂ ಆಳಗೊಳಿಸಿತು.

“ಮಾನವನ ಪ್ರಗತಿಗೆ ಸಹಾಯ ಮಾಡುವ ಬಯಕೆ ಹೊಂದಿದವರಿಗೆ ಹೆಚ್ಚು ನೋವು ಕೊಡುವುದು ದೈವ ನಿಯಮವೇನೋ. ಆದರೆ ಸುಬ್ರಹ್ಮಣ್ಯ ಅಯ್ಯರ್ ಅವರಿಗೆ ತಮ್ಮೆಲ್ಲ ಕಷ್ಟವನ್ನೂ, ಗೊಣಗದೆ, ಕುಗ್ಗದೆ ಸಹಿಸಿಕೊಳ್ಳುವ ಶಕ್ತಿಯನ್ನೂ ಅದೇ ದೈವ ಕೊಟ್ಟಿದೆ. ಈತ ತಾಳಬಲ್ಲ, ಆದ್ದರಿಂದ ಕಟ್ಟಬಲ್ಲ. ನೋವನ್ನು ಅನುಭವಿಸಬಲ್ಲ, ಆದ್ದರಿಂದ ಉನ್ನತಿಗೇರಬಲ್ಲ” ಎಂದು ತಮಿಳು ಸಾಹಿತ್ಯ ಕ್ಷೇತ್ರದಲ್ಲಿ ಪ್ರಾತಃಸ್ಮರಣೀಯರಾದ ಸುಬ್ರಮಣ್ಯ ಭಾರತಿ ಅವರು ೧೯೧೪ರಲ್ಲಿ ಪಾಂಡಿಚೇರಿಯಿಂದ ‘ಹಿಂದೂ’ ಪತ್ರಿಕೆಗೆ ಪತ್ರ ಬರೆದರು.

ಇಷ್ಟಾದರೂ ಅವರಿಂದ ಹಗಲಿರುಳೂ ರಾಷ್ಟ್ರಚಿಂತನ ಮಾತ್ರ ನಿಂತಿರಲಿಲ್ಲ. ತಮ್ಮ ಎದುರಿಗೆ ನಿಂತಿರುವವರನ್ನು ಗುರುತಿಸಲಾಗದಷ್ಟರ ಮಟ್ಟಿಗೆ ಕಣ್ಣುಗಳು ಕೆಟ್ಟಿದ್ದವು. ಆದರೂ ಪ್ರತಿನಿತ್ಯ ಬೆಳಗ್ಗೆ ತಮ್ಮ ಪತ್ರಿಕೆಗೆ ಎರಡು ಸಂಪಾದಕೀಯ ಲೇಖನಗಳನ್ನು ಬರೆಸುತ್ತಿದ್ದರು. ಇಂತಹ ಸ್ಥಿತಿಯಲ್ಲಿ ಅವರನ್ನು ನೋಡಿದ ಮಿತ್ರರೊಬ್ಬರು “ಅವರು ಅಜೇಯ ಮಾನವ ಚೇತನದ ಸಾಕಾರದಂತಿದ್ದಾರೆ” ಎಂದರು.

ಮದರಾಸಿನಲ್ಲಿ ಪ್ರತಿದಿನ ಸಂಜೆ ಸುಬ್ರಹ್ಮಣ್ಯ ಅಯ್ಯರ್ ಅವರು ಸೈಕಲ್‌ರಿಕ್ಷಾದಲ್ಲಿ ಮರಿನಾ ಬೀಚ್‌ಗೆ ವಾಯುಸೇವನೆಗೆ ಹೋಗುತ್ತಿದ್ದರು. ಇಲ್ಲಿನ ಸುಂದರ ಉದ್ಯಾನವನವನ್ನು ರೂಪಿಸಿದವನು ‘ಹಿಂದೂ’ ಸ್ಥಾಪಿತವಾದ ಹೊಸದರಲ್ಲಿ ಮದರಾಸಿನ ಗವರ್ನರ್ ಆಗಿ ಸುಬ್ರಹ್ಮಣ್ಯ ಅಯ್ಯರರ ಪ್ರಥಮ ಎದುರಾಳಿಯಾಗಿದ್ದ ಗ್ರಾಂಟ್‌ಡಫ್‌ಎಂಬುದು ಇಲ್ಲಿ ಕುತೂಹಲಕರ ವಿಷಯ. ಒಮ್ಮೆ ಹೀಗೆ ಹೋಗಿದ್ದಾಗ ಭಾರತೀಯ ವಕೀಲನೊಬ್ಬ ಅಲ್ಲಿನ ಪುಷ್ಪಕುಂಜವೊಂದನ್ನು ಹೊಲಸು ಮಾಡಿದುದನ್ನು ಸಹಿಸಲಾಗದೆ ಅತ್ಯುಗ್ರ ಸಂಪಾದಕೀಯ ಲೇಖನ ಬರೆದರು.

ಗಾಂಧೀಜಿಯವರೊಡನೆ

ವಾಸ್ತವವಾಗಿ ಸುಬ್ರಹ್ಮಣ್ಯ ಅಯ್ಯರ್ ಅವರಿಗೆ ದುಡಿಮೆಯೇ ಜೀವನವಾಗಿತ್ತು. ಭಾರತದ ಪ್ರಗತಿಗೆ ಮಾರಕ ಪ್ರಾಯವಾಗಿದ್ದ ಬರಡು ವೇದಾಂತದ ಬಗ್ಗೆ ಇವರಿಗೆ ಅಸಹನೆ ಹಾಗೂ ಪಾಶ್ಚಿಮಾತ್ಯರ ಶಿಸ್ತಿನ ಜೀವನದ ಬಗ್ಗೆ ಅಪಾರ ಮೆಚ್ಚುಗೆ ಇತ್ತು. ಜೀವನದ ಉನ್ನತ ಮೌಲ್ಯಗಳ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು. ಭಾರತೀಯರ ಅತಿ ದೊಡ್ಡ ದೌರ್ಬಲ್ಯವೆಂದರೆ ಸೋಮಾರಿತನ ಎಂದು ಅಯ್ಯರ್ ಅವರು ಅನೇಕ ಬಾರಿ ಹೇಳುತ್ತಿದ್ದರು.

ವೃದ್ಧಾಪ್ಯ ಮತ್ತು ರೋಗದಿಂದ ದೇಹ ಜರ್ಝರಿತವಾಗಿದ್ದ ಸಮಯದಲ್ಲೂ ಸುಬ್ರಹ್ಮಣ್ಯ ಅಯ್ಯರ್ ಅವರು ದಕ್ಷಿಣ ಭಾರತದಲ್ಲಿ ಕೈಗಾರಿಕೆಗಳು ಸಾಕಷ್ಟು ಇಲ್ಲದಿದ್ದುದನ್ನು ಗಮನಿಸಿ ಮದರಾಸಿನಲ್ಲಿ ರಾಷ್ಟ್ರೀಯ ಕೈಗಾರಿಕಾ ನಿಧಿಯೊಂದನ್ನು ಸ್ಥಾಪಿಸಿದರು. ತರುಣ ಹಾಗೂ ಬುದ್ಧಿವಂತ ತಂತ್ರಜ್ಞರನ್ನು ಹಾಗೂ ಕೈಗಾರಿಕೋದ್ಯಮಿಗಳನ್ನು ಉನ್ನತ ತರಬೇತಿಗಾಗಿ ಇಂಗ್ಲೆಂಡಿಗೆ ಕಳುಹಿಸುವುದು ಈ ನಿಧಿಯ ಉದ್ದೇಶವಾಗಿತ್ತು.

ಪತ್ರಿಕೋದ್ಯಮಿಯಾದ ಅವರಿಗೆ ಸಹಜವಾಗಿಯೇ ಅಂತರರಾಷ್ಟ್ರೀಯ ಇತಿಹಾಸದ ಬಗ್ಗೆ ವಿಶೇಷ ಆಸಕ್ತಿಯಿತ್ತು. ಇದರ ಫಲವೇ ಇವರು ತಮಿಳಿನಲ್ಲಿ ಬರೆದ ‘ಜಪಾನಿನ ಕಿರುಚರಿತ್ರೆ’. ಇದಲ್ಲದೆ ಅವರು ಭಾರತದಲ್ಲಿ ಬ್ರಿಟಿಷ್‌ಆಡಳಿತದ ಆರ್ಥಿಕ ಪರಿಣಾಮಗಳನ್ನು ವಿಶ್ಲೇಷಿಸುವ ಪುಸ್ತಕವೊಂದನ್ನು ಬರೆದರು. ಇವೆರಡೂ ಉತ್ತಮ ಕೃತಿಗಳೆಂದು ಮನ್ನಣೆ ಪಡೆದಿವೆ. ಅವರು ಸಮರ್ಥ ವಾಗ್ಮಿಯೂ ಆಗಿದ್ದರು.

ಮಹಾತ್ಮರೊಡನೆ ಭೇಟಿ

೧೯೧೫ ರ ಏಪ್ರಿಲ್‌ನಲ್ಲಿ ಸುಬ್ರಹ್ಮಣ್ಯ ಅಯ್ಯರ್ ಅವರು ಮಹಾತ್ಮ ಗಾಂಧಿಯವರನ್ನು ಭೇಟಿ ಮಾಡಿದರು. ಆಗ ಅವರ ಜೊತೆಯಲ್ಲಿ ವಿ.ಎಸ್‌. ಶ್ರೀನಿವಾಸ ಶಾಸ್ತ್ರಿಗಳು ಇದ್ದರು. ಇವರಿಬ್ಬರ ಭೇಟಿ ಒಂದು ಪೀಳಿಗೆ ಇನ್ನೊಂದು ಪೀಳಿಗೆಯನ್ನು ಬೀಳ್ಕೊಡುವಂತಿತ್ತು ಎಂದು ಅನಂತರ ಶ್ರೀನಿವಾಸ ಶಾಸ್ತ್ರಿ ಸ್ಮರಿಸಿದ್ದಾರೆ. ದೇಹಶಕ್ತಿ ಕ್ಷೀಣಿಸಿ ತಮ್ಮಿಂದ ಇನ್ನು ಸಮಾಜಸೇವೆ ಮಾಡಲಾಗದಿದ್ದ ಬಗ್ಗೆ ಸುಬ್ರಹ್ಮಣ್ಯ ಅಯ್ಯರ್ ಅವರು ಕಂಬನಿ ಸುರಿಸಿದಾಗ ತಮ್ಮ ಕೈಯಿಂದಲೇ ಅವರ ಕಣ್ಣೊರೆಸಿ, “ತಮ್ಮಿಂದ ಎಷ್ಟು ಸೇವೆ ಆಗಬೇಕಿತ್ತೋ ಅದಕ್ಕಿಂತ ಹೆಚ್ಚಾಗಿ ಆಗಿದೆ” ಎಂದು ಗಾಂಧೀಜಿ ಸಮಾಧಾನ ಪಡಿಸಿದರು.

ಕೊನೆಗಾಲದಲ್ಲಿ ಸುಬ್ರಹ್ಮಣ್ಯ ಅಯ್ಯರ್ ಅವರು ಪ್ರತಿ ಬೇಸಿಗೆಯಲ್ಲೂ ಬೆಂಗಳೂರಿಗೆ ಬಂದು ಅವರ ಗೆಳೆಯ ದಿವಾನ್‌ವಿ.ಪಿ. ಮಾಧವರಾವ್‌ಅವರ ಮನೆಯಲ್ಲಿ ತಂಗುತ್ತಿದ್ದರು. ಇಲ್ಲಿನ ಪ್ರಶಾಂತ ವಾತಾವರಣ ಮತ್ತು ತಂಪು ಹವೆಯಿಂದ ಬಹಳವಾಗಿ ಆಕರ್ಷಿತರಾದ ಅವರು ಇಲ್ಲಿಯೇ ಮನೆಕಟ್ಟಿಕೊಂಡು ವಿಶ್ರಾಂತ ಜೀವನ ನಡೆಸುವ ಹಂಬಲದಿಂದ ನಿವೇಶನವೊಂದನ್ನು ಕೊಂಡರು.. ಆದರೆ ಅವರ ಈ ಅಂತಿಮ ಬಯಕೆ ಈಡೇರಲಿಲ್ಲ.

೧೯೧೬ರ ಏಪ್ರಿಲ್‌೧೮ ರಂದು ಸುಬ್ರಹ್ಮಣ್ಯ ಅಯ್ಯರ್ ಅವರು ವಿಧಿವಶರಾದರು. ಆಗ ಅವರಿಗೆ ೬೧ ವರ್ಷ ವಯಸ್ಸಾಗಿತ್ತು. ಆಗ ಅವರಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು ಇದ್ದರು.

“ಆಧುನಿಕ ಭಾರತದ ನಿರ್ಮಾಪಕರಲ್ಲಿ ಜಿ. ಸುಬ್ರಹ್ಮಣ್ಯ ಅಯ್ಯರ್ ಅವರಿಗಿಂತ ದೊಡ್ಡ ಹೆಸರಿಲ್ಲ” ಎಂದು ‘ಹಿಂದೂ’ ಪತ್ರಿಕೆ ಅಗ್ರಲೇಖನ ಬರೆದು ಅವರಿಗೆ ಅಂತಿಮ ಗೌರವ ಸಲ್ಲಿಸಿತು.

ಸುಬ್ರಹ್ಮಣ್ಯ ಅಯ್ಯರ್ ಅವರು ತಮ್ಮ ಪ್ರಥಮ ಸಂಪಾದಕೀಯದಲ್ಲಿ ವ್ಯಕ್ತಪಡಿಸಿದ ಧ್ಯೇಯಗಳು ಹಲವಾರು ದಶಕಗಳ ನಂತರವೂ ಚಾಚೂತಪ್ಪದೆ ಪರಿಪಾಲನೆಯಾಗಿ ಪತ್ರಿಕೆಗೆ ಯಾವ ರೀತಿಯಲ್ಲಿ ಅಂತರರಾಷ್ಟ್ರೀಯ ಹಿರಿಮೆಯನ್ನು ಗಳಿಸಿಕೊಟ್ಟವೆಂಬುದಕ್ಕೆ ೧೯೬೮ರಲ್ಲಿ ಪತ್ರಿಕೆಯು ಅಮೆರಿಕದ ವೃತ್ತಪತ್ರಿಕಾ ಪ್ರಕಾಶಕರ ಸಂಘದ ಪ್ರತಿಷ್ಠಾನದಿಂದ ಮೆಚ್ಚುಗೆ ಪಡೆಯಿತೆಂಬುದೇ ಸಾಕ್ಷಿ. ಮೆಚ್ಚುಗೆ ಪತ್ರದಲ್ಲಿ ಅಮೆರಿಕದ ಸಂಘ ಹೇಗೆ ಹೇಳಿತು:

“ಭಾವಪ್ರಧಾನತೆಗಿಂತ ಹೆಚ್ಚಿನದಾದ ವಿವೇಚನಾ ಶೀಲತೆಯನ್ನು ಮೆರೆಸಿದುದಕ್ಕಾಗಿ, ಟೀಕೆ ಹಾಗೂ ಜನ ವಿರೋಧವನ್ನೆದುರಿಸಿಯೂ ತತ್ವಕ್ಕೆ ಕಟ್ಟುಬಿದ್ದಿರುವುದಕ್ಕಾಗಿ, ಭವಿಷ್ಯದ ಬಗ್ಗೆ ಅದರ ಭರವಸೆಗಾಗಿ, ಪತ್ರಿಕೆಯು ತನ್ನ ಸಮುದಾಯದ, ದೇಶದ ಹಾಗೂ ಜಗತ್ತಿನ ಗೌರವ ಪಡೆದಿದೆ. ಈ ಆದರ್ಶಗಳು ಹಾಗೂ ಸಾಧನೆಗಳನ್ನು ಗಮನಿಸಿ ಅಮೆರಿಕ ವೃತ್ತಪತ್ರಿಕಾ ಪ್ರಕಾಶಕರ ಸಂಘದ ಪ್ರತಿಷ್ಠಾನವು ‘ಹಿಂದೂ’ ಪತ್ರಿಕೆಯನ್ನು ೧೯೬೮ರ ವಿಶ್ವ ಪತ್ರಿಕಾ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿದೆ”.

೧೮೭೮ರಲ್ಲಿ ಸುಬ್ರಹ್ಮಣ್ಯ ಅಯ್ಯರ್ ಅವರು ಬರೆದ ಪ್ರಥಮ ಸಂಪಾದಕೀಯದಲ್ಲಿನ ವಾಕ್ಯಗಳಿಗೂ ತೊಂಬತ್ತು ವರ್ಷಗಳನಂತರದ ಈ ಪ್ರಶಸ್ತಿಪತ್ರದ ಸಾಲುಗಳಿಗೂ ಹೋಲಿಸಿ ನೋಡಿದರೆ, ಅವರು ಪತ್ರಿಕೆಯನ್ನು ಎಂತಹಯ ಪರಮ ಆದರ್ಶದ ಭದ್ರ ಬುನಾದಿಯ ಮೇಲೆ ನಿಲ್ಲಿಸಲು ಬಯಸಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಮಹಾಪುರುಷರ ಹಿರಿಮೆ ವ್ಯಕ್ತವಾಗುವುದು ಅವರು ತಮ್ಮ ಕಾಲದಲ್ಲಿ ಎಷ್ಟರಮಟ್ಟಿಗೆ ಪ್ರಸಿದ್ಧರಾಗಿದ್ದರು ಎಂಬುದರಿಂದಲ್ಲ. ಅನೇಕರು ಕೆಲವು ವರ್ಷ ಜನರ ಕಣ್ಣಿನಲ್ಲಿದ್ದು ಆಮೇಲೆ ಜನರ ಮನಸ್ಸಿನಿಂದ ಸಂಪೂರ್ಣವಾಗಿ ಮರೆಯಾಗಿ ಹೋಗುತ್ತಾರೆ. ಆದರೆ ನಿಜವಾಗಿ ಹಿರಿಯರಾದವರು ಮಾಡಿದ ಕೆಲಸ ಅವರ ನಂತರದ ಹಲವು ದಶಕಗಳಲ್ಲಿ ಬೆಳೆದು ಒಳ್ಳೆಯ ಪರಿಣಾಮವನ್ನುಂಟು ಮಾಡುತ್ತದೆ. ಸುಬ್ರಹ್ಮಣ್ಯ ಅಯ್ಯರ್ ಅವರ ವ್ಯಕ್ತಿತ್ವವನ್ನು ಈ ಮಾನದಂಡದಿಂದ ಅಳೆದಾಗ ಅವರು ಭಾರತದ ಒಬ್ಬ ಮಹಾಪುರುಷರು ಎಂಬುದರಲ್ಲಿ ಸಂದೇಹವಿಲ್ಲ.

ಭಾರತದ ಭವಿಷ್ಯದ ಬಗ್ಗೆ ಮಾತನಾಡುತ್ತ ಅವರು ಒಮ್ಮೆ ಹೇಳಿದ ಈ ವಾಕ್ಯಗಳು ಇಂದಿಗೂ, ಎಂದಿಗೂ ಕಿರಿಯರಿಗೆ ಮಾರ್ಗದರ್ಶಕ:

“ಭವಿಷ್ಯದ ಬಗ್ಗೆ ನಮಗಿರುವುದು ಒಂದೇ ಒಂದು ಆಶಾಕಿರಣ. ಪಾಶ್ಚಾತ್ಯ ರಾಷ್ಟ್ರಗಳ ಹಿಡಿತದಲ್ಲಿರುವ ಅನೇಕ ವಸ್ತು ವಿಶೇಷಗಳಲ್ಲಿ ನಾವು ಅತ್ಯಂತ ಬಡವರಾಗಿದ್ದರೂ, ದೈವಕೃಪೆಯಿಂದ ನಮ್ಮಲ್ಲಿ ಇನ್ನೂ ಒಂದು ಶಕ್ತಿಮೂಲ ಉಳಿದಿದೆ. ಅಪಾರ ಕರುಣಾಳುವಾದ ದೇವರು ಅನೇಕ ವರ್ಷಗಳ ಯಾತನೆ ಹಾಗೂ ಗುಲಾಮಗಿರಿಯ ನಂತರವೂ ನಮ್ಮ ಬುದ್ಧಿಶಕ್ತಿಯನ್ನು ಮಾತ್ರ ಮುಕ್ಕಾಗದಂತೆ ಉಳಿಸಿದ್ದಾನೆ. ಪಾಶ್ಚಾತ್ಯ ಜನಾಂಗದ ಅತ್ಯುತ್ತಮ ಪ್ರತಿನಿಧಿಗಳನ್ನು ಇಂಗ್ಲೆಂಡ್‌, ಅಮೆರಿಕ,ಜರ್ಮನಿಯಿಂದ ಭಾರತಕ್ಕೆ ಕರೆಸಿರಿ. ಅದೇ ತರಬೇತಿ, ಅದೇ ಸೌಲಭ್ಯಗಳು ಹಾಗೂ ಅದೇ ಅವಕಾಶಗಳನ್ನು ಭಾರತೀಯರಿಗೂ ನೀಡಿರಿ. ಈ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಭಾರತೀಯನು ಆಡಳಿತಗಾರನಾಗಿ, ನ್ಯಾಯಮೂರ್ತಿಯಾಗಿ ಅಥವಾ ಎಂಜಿನಿಯರನಾಗಿ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಳ್ಳುವನು. ಸಮನಾದ ಅವಕಾಶಗಳು ದೊರೆತಲ್ಲಿ ಜೀವನದ ಯಾವುದೇ ಕ್ಷೇತ್ರದಲ್ಲೂ ಭಾರತೀಯನು ಅಗತ್ಯ ಗುಣಮಟ್ಟ ತಲಪದಿರಲಾರ. ನಮ್ಮ ರಾಷ್ಟ್ರೀಯ ಪ್ರಗತಿಗೆ ಸದ್ಯದಲ್ಲಿ ನಮ್ಮಲ್ಲಿರುವ ಉಪಕರಣ ಇದೊಂದೇ. ಇದರ ಮೇಲೆಯೇ ಭವಿಷ್ಯತ್ತಿನ ಬಗ್ಗೆ ನನ್ನ ಎಲ್ಲ ಭರವಸೆಯೂ ನಿಂತಿದೆ.”

ಸುಬ್ರಹ್ಮಣ್ಯ ಅಯ್ಯರ್ ಅವರ ಈ ಮಾತುಗಳನ್ನು ಅವರ ಜೀವನ ಹಾಗೂ ಸಾಧನೆಯೇ ಅತ್ಯಂತ ಪರಿಣಾಮಕಾರಿಯಾಗಿ ಸಮರ್ಥಿಸಿವೆ. ೧೮೯೭ ರಲ್ಲಿ ಅವರು ಮದರಾಸಿನ ಶೀಘ್ರಲಲಿಪಿ ಬರಹಗಾರರ ಸಂಘದಲ್ಲಿ ಮಾತನಾಡುತ್ತ, “ಭಾರತದಲ್ಲಿ ಪತ್ರಿಕೋದ್ಯಮ ಸಾರ್ವಜನಿಕ ಹಿತ ಸಾಧನೆಯ ದಾರಿ” ಎಂದರು. ಹಾಗೆಯೇ ಬದುಕಿದ ಹಿರಿಯರು ಅವರು.