ಎನ್.ಟಿ. ಆಯೋಗ್ಯ ಮತ್ತು ಅಜ್ಞಾನಿ ಅಧ್ಯಾಪಕನೆಂದು ಇವರಿಗೂ ಗೊತ್ತಿತ್ತು. ಸಣ್ಣ ಮನಸ್ಸಿನವ. ಸಾಮಾನ್ಯ ಮನುಷ್ಯರಲ್ಲಿರುವುದಕ್ಕಿಂತ ತುಸು ಹೆಚ್ಚಾಗಿಯೇ ದ್ವೇಷಾಸೂಯೆ ಅವನಲ್ಲಿದ್ದವು. ತಾನು ಕಂಡ ಯಾರ ಬಗ್ಗೆಯೂ ಆತ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡವನಲ್ಲ. ಸದಾ ಏನಾದರೊಂದು ಚಾಡಿ ಹೇಳುತ್ತ ಕಂಗೆಡುತ್ತ ಗೋಗೆರವಾತ. ಗಂಟೆಗಟ್ಟಳೆ ಬೇಕಾದರೆ ಆತ ಒಬ್ಬರ ಬಗ್ಗೆಯೇ ಚಾಡಿ ಹೇಳಬಲ್ಲವನಾಗಿದ್ದ.  ಒಮ್ಮೆ ಇವ ‘ವಿಧ್ಯೆ, ವಿಧ್ಯಾರ್ಥಿ’ ಎಂದು ಬೋರ್ಡಿನ ಮೇಲೆ ಬರೆದು ಹಾಸ್ಯಸ್ಪದನಾಗಿದ್ದ. ಹುಡುಗರಿಂದ ಇದು ಗೊತ್ತಾಗಿ ಜೀಕೆ ಕರೆದು ಕೇಳಿದರೆ ‘ಇಲ್ಲರಿ ಸರ, ಬ್ರಾಮಣ ಹುಡುಗರಿಗೆ ನನ್ನ ಕಂಡರ ಆಗಾಣಿಲ್ಲರಿ; ಅದಕ್ಕs ಹಿಂಗ ಹೆಳ್ಯಾರ್ರಿ’ ಎಂದು ಏನೇನೋ ತೊದಲಿದ. ಜೀಕೆ ಹುಬ್ಬೆರಿಸಿ ‘ಅಯೋಗ್ಯ ನಿನ್ನ ಯೋಗ್ಯತೆ ನನಗ್ಗೊತ್ತಿಲ್ಲೇನು? ನಾಳೆಯಿಂದ ದಿನಾ ಹತ್ತು ಪುಟ ಕನ್ನಡ ಕಾಂಪೊಜಿಶನ್ ಬರದ ತೋರಿತು’ ಎಂದು ಗದರಿದ್ದರು. ಆಶ್ಚರ್ಯವೆಂದರೆ ಮಾರನೇ ದಿನ ಅವ ಗಂಭೀರವಾಗಿ ಹತ್ತು ಪುಟ ಬರೆದುಕೊಂಡು ಜೀಕೆ ಹತ್ತಿರ ಹೋಗಿ ಬೈಸಿಕೊಂಡಿದ್ದ. ಅವನ ಪಾಠಗಳೆಂದರೆ ಭಾರೀ ಬೋರು. ಇದು ತಿಳಿದು ಹುಡುಗರು ಅವನನ್ನು ಎನ್ಟಿ ಅನ್ನುವುದುರ ಬದಲು ಎಮ್ಟಿ ಎಂದು ಮೂಡು ಬಂದರೆ ‘ಎಮ್ಟಿ ಎಮ್ಟಿ ಫೋರಟ್ವೆಂಟಿ’ ಎಂದು ಗೇಲಿ ಮಾಡುತ್ತಿದ್ದರು. ಇದನ್ನು ಕೇಳಿ ಕೇಳಿ ಅವನ ಕಿವಿ ಎಷ್ಟು ದಡ್ಡು ಬಿದ್ದಿದ್ದವೆಂದರೆ ಸರಿಕರೆದುರು ಇದು ಕೇಳಿಸಿದಾಗಲೂ ಅವನಿಗೆ ಸಿಟ್ಟೇ ಬರುತ್ತಿರಲಿಲ್ಲ.

ತನ್ನ ಈ ಐಬುಗಳನ್ನೆಲ್ಲ ಆತ ಚಾಡಿ ಹೇಳುವುದರಿಂದ ತುಂಬಿಕೊಳ್ಳುತ್ತಿದ್ದ. ಮತ್ತು ಆ ಮೂಲಕವಾದರೂ ಜೀಕೆ ಫೆವರ್ ಗಳಿಸಲು ಪ್ರಯತ್ನಿಸುತ್ತಿದ್ದ. ಚಾಡಿಯೆಂದರೆ ದುರುದ್ದೇಶವುಳ್ಳ ಅತಿಶಯೋಕ್ತಿ ಇಲ್ಲವೆ ಸುಳ್ಳು ತಾನೆ? ಪ್ರತಿ ಮಾತಿಗೂ ಹಸ್ತಾಭಿನಯ ಮುಖಾಭಿಯನ ಮಾಡುವುದು ಅವನ ರೂಢಿ. ಮತ್ತು ಆ ಅಭಿನಯವೋ ಎದುರಿನವರು ತನ್ನ ಮಾತನ್ನು ನಂಬುತ್ತಿಲ್ಲವೆಂದು ಅದನ್ನು ಸಾಧ್ಯವಾದಷ್ಟು ರೀತಿಯಿಂದ ನಂಬಿಸಲೇಬೇಕೆಂದು ಪ್ರಯತ್ನ ಮಾಡುತ್ತಿದ್ದ ಹಾಗಿರುತ್ತಿತ್ತು. ಜೀಕೆ ಸ್ವಭಾವ ಗೊತ್ತಿದ್ದವರಿಗೆ ಈಗ ಅಶ್ಚರ್ಯವಾಗಬಹುದು. ಯಾಕೆಂದರೆ ಈ ಹಿಂದೆ ಅವರೆಂದೂ ಒಬ್ಬರ ವಿಚಾರವಾಗಿ ಯಾರನ್ನು ಕೇಳಿದರೂ ಎನ್‌ಟಿಯನ್ನು ಕೇಳಿದವರಲ್ಲ.

ಸಿಂಗಪ್ಪನ ಜೊತೆ ಎನ್‌ಟಿ ಗಾಬರಿಯಲ್ಲೇ ಜೀಕೆ ಛೇಂಬರಿಗೆ ಬಂದ. ತನ್ನ ವಿರುದ್ಧ ಏನು ದೂರಿದೆಯೋ ಎಂದು ಆತಂಕಗೊಂಡಿದ್ದವನಿಗೆ ಗಿರೆಪ್ಪನ ಬಗ್ಗೆ ಕೇಳಿದಾಗ, ಮನಸ್ಸು ಹಗುರಾಗಿ, ಇನ್ನಷ್ಟು ಉತ್ಸಾಹದಿಂದ, ಇನ್ನಷ್ಟು ಅತಿಶಯೋಕ್ತಿ ಬೆರಸಿ, ಗಿರೆಪ್ಪನ ಪೂರ್ವಾಪರ ಹೇಳಿ,-

‘ಸರ, ಅವನ ಭಾಳ ಹಲಕಟ್ಟಿದ್ದಾನ್ರಿ. ಆ ಕ್ರಿಶ್ಚಿನ್ ಹುಡುಗಿ ರೋಜಾ ಇದ್ದಾಳಲ್ಲರಿ, ಆಕೀನ್ನ ಇಟ್ಟಕೊಂಡಾನವ.’

– ಎಂದ. ಜೀಕೆ ಹುಬ್ಬು ಗಂಟುಹಾಕಿ ಏರಿಸಿದರು. ನಂಬಲಿಲ್ಲವೆಂದು ಅನುಮಾನವಾಗಿ,

‘ಅಂದರ ಅವ ಮತ್ತ ಆಕಿ ಯಾವತ್ತೂ ಕೂಡಿಕೊಂಡs ಇರತಾರರಿ.’

– ಎಂದ. ಜೀಕೆ ಹಾಗೇ ಹುಬ್ಬೇರಿಸಿಕೊಂಡೇ ಇವನನ್ನು ನೋಡುತ್ತಿದ್ದರು.

ಮತ್ತೆ,

‘ಅಂದರ ಅವ ಯಾವತ್ತೂ ಆಕಿ ಎಡಬಲಾ ಓಡ್ಯಾಡತಾನ್ರಿ.’

– ಎಂದ. ಅವನು ಹೇಳುವ ತನಕ ನಡುವೆ ಬಾಯಿ ಹಾಕದೆ, ಹಾಹೂ ಎನ್ನದೆ, ಮುಖದಲ್ಲಿ ಯಾವ ಭಾವನ್ನೂ ತೋರಿಸದೆ ಕೇಳಿದರು. ಕೇಳಿ, ‘ಆಯ್ತು ನೀ ಹೋಗು’ ಎಂದರು. ಅಂದರೆ ಅವನು ಅಷ್ಟರಲ್ಲಿ ಹೋಗಿದ್ದ.