ಎಷ್ಟೂ ತಪ್ಪದೆ ಅಂತ್ಯಕ್ರಿಯೆ, ಅದರ ನಂತರದ ಕ್ರಿಯೆಗಳನ್ನು ಮಾಡಿದರು. ಜೀಕೆ ಆಮೇಲೆ ಆಳಾಗಲೇ ಇಲ್ಲ. ಹೆಂಡಿಯ ಸಾವಿಗೆ ತಾನೇ ಕಾರಣನೆಂದು, ಅದು ಸಾವಲ್ಲ ಕೊಲೆ ಎಂದು ಬಹಳಷ್ಟು ಬಾರಿ ಚಿಂತೆ ಮಾಡಿದರು. ಆಳವಾದ ಶೂನ್ಯತೆ ಅವರನ್ನಾವರಿಸಿಬಿಟ್ಟಿತ್ತು. ರೋಜಾಳ ಮೋಹದಲ್ಲಿ ಹೆಂಡತಿಯ ಬಗೆಗಿನ ಕರ್ತವ್ಯಕ್ಕೆ ಎರವಾಗಿದ್ದರು. ಬದುಕಿದ್ದಾಗ ಗಿರಿಜಮ್ಮನ ಜೊತೆ ಇವರ ಸಂಬಂಧ ಅಷ್ಟೊಂದು ನಿಕಟವಾಗಿರಲಿಲ್ಲವೆನ್ನುವುದು ನಿಜ. ಇಬ್ಬರಿಗೂ ಮಕ್ಕಳಿಲ್ಲದ ಚಿಂತೆ ಇತ್ತು. ಇದ್ದೊಬ್ಬ ಮಗ ಸತ್ತಾಗಿನಿಂದ ಆಕೆ ಸದಾ ಒಂದಿಲ್ಲೊಂದು ರೋಗದಿಂದ ನರಳುತ್ತಿದ್ದಳು. ಆದ್ದರಿಂದಲೇ ಆಕೆಯ ಬಗ್ಗೆ ಇವರಿಗೆ ಅನುಕಂಪೆಯಿತ್ತು. ಅನೇಕ ಬಾರಿ ಮರುಮದುವೆಗೆ ಇವರನ್ನು ಆಕೆ ಒತ್ತಾಯಪಡಿಸಿದ್ದರೂ ಇವರೇ ಒಪ್ಪಿರಲಿಲ್ಲ. ಆದರಿದು ನಿಜ. ರೋಜಾಳ ಸನಿಹದಲ್ಲಿ ಸಿಕ್ಕ ತೀವ್ರ ಪ್ರೀತಿಯ ಅನುಭವ ಅವರಿಗೆ ಯಾವ ಹೆಣ್ಣಿನಿಂದಲೂ ಸಿಕ್ಕಿರಲಿಲ್ಲ. ಗಿರಿಜಮ್ಮ ತಮ್ಮ ಕರ್ತವ್ಯದ ಭಾಗವಾಗಿದ್ದಳೇ ಹೊರತು ರೋಜಾಳ ಹಾಗೆ ಹುಚ್ಚು ಹತ್ತಿಸಿರಲಿಲ್ಲ. ತಮ್ಮ ಕಟ್ಟುನಿಟ್ಟಿನ ವ್ಯಕ್ತಿತ್ವ ಆಳದಲ್ಲಿ ಇಷ್ಟು ತೀವ್ರವಾದ, ಉತ್ಕಟವಾದ ಪ್ರೀತಿ ಅಡಗಿದ್ದನ್ನ ಅದರ ಸಾಧ್ಯತೆಗಳನ್ನ ತೋರಿಸಿಕೊಟ್ಟವಳೇ ರೋಜಾ. ಮತ್ತು ಈ ಅನುಭವಕ್ಕೆ ತಾವೇ ಮೂಕವಿಸ್ಮಿತರಾಗಿದ್ದರು. ಆದರೂ ಪಾಪ ಪುಣ್ಯ ಎಂಬುದಿರುತ್ತದಲ್ಲ. ಗಿರಿಜಮ್ಮನಿಗೆ ಗೊತ್ತಿಲ್ಲದೆ ಅನುಮತಿಯನ್ನು ಆರಂಭದಲ್ಲೇ ಪಡೆದಿದ್ದರೆ ಚೆನ್ನಾಗಿತ್ತು. ಆದರವಳು ಆ ಸಂದರ್ಭದಲ್ಲಿ ಒಪ್ಪುತ್ತಿದ್ದಳೋ ಇಲ್ಲೋ. ಜಾತಿಯಲ್ಲಿ ಅವಳು ಕ್ರಿಶ್ಚಿಯನ್ ಹುಡುಗಿ. ಅವಳ ಹುಚ್ಚಿನಲ್ಲಿ ತಾವೇನೂ ಜಾತಿ ವ್ಯವಸ್ಥೆಯನ್ನು ಪರಿಗಣಿಸಿರಲಿಲ್ಲ. ಅಷ್ಟೆ.

ಕಟ್ಟುನಿಟ್ಟಿನ ಕಣ್ಣಪಟ್ಟಿ ಕಟ್ಟಿಕೊಂಡು ಹೆರವರ ಮೆಚ್ಚಗೆಗಾಗಿ ಸದಾ ಚಡಪಡಿಸುವ ತಮ್ಮ ಹಳೆಯ ವ್ಯಕ್ತಿತವ ಎಲ್ಲಿ? ಹುಡುಗರಂತೆ ಹುಡುರಾಗಿ ಸೀಮೆಯಿಂದ ಸೀಮೆಗೆ ಹಾರಿ ಹೊಸ ಹೊಸ ಭಾವನೆಗಳಿಗೆ ಹಸಿದ ಈಗಿನ ವ್ಯಕ್ತಿತ್ವ  ಎಲ್ಲಿ? ರೋಜಾಳಿಂದ ತಾವು ಎಷ್ಟೆಷ್ಟೋ ದಾಟಿ ಬಂದಿದ್ದರೂ, ಗಿರಿಜಮ್ಮನಿಗೆ ಈ ಅವಕಾಶ ಇರಲಿಲ್ಲ. ಮದುವೆಯಾದ ಹೊಸದರಲ್ಲಿ ತಮ್ಮ ಕಟ್ಟುನಿಟ್ಟಿನ ಜೀವನದ ಜೊತೆ ಒಮ್ಮೆ ಹೊಂದಾಯಿಕೆ ಮಾಡಿಕೊಂಡಾದ ಮೇಲೆ, ಅವೆಲ್ಲ ಹೊಂದಾಣಿಕೆಗಳಿಗೆ ಉಕ್ಕಿನ ಫ್ರೇಮು ಸಾಕಿಬಿಟ್ಟಳು. ಆದರೂ ತಾವೂ ತಿಳಿಸಿ ಹೇಳಿದ್ದರೆ ಆ ಫ್ರೇಮು ಮುರಿಯಲು ಸಿದ್ಧಲಾಗಬಹುದಿತ್ತು. ಅಥವಾ ಮಕ್ಕಳ ಬಯಕೆಯಿಂದಾದರೂ ರೋಜಾಳನ್ನು ಒಪ್ಪಿತ್ತಿದ್ದಳು. ಅಥವಾ ಒಪ್ಪುತ್ತಿರಲಿಲ್ಲ. ಪ್ರೇಮಪತ್ರ ಓದಿದಳೆಂದು ತೋರತ್ತದೆ. ಗಂಡ ದ್ರೋಹ ಮಾತಡುತ್ತಿದ್ದಾನೆ, ತಾನಿದ್ದು ಯಾಕೆ ಅವನ ಸುಖಕ್ಕೆ ಅಡ್ಡಗಾಲು ಹಾಕಬೇಕೆಂದಳೋ ಏನೋ? ಅಥವಾ ತನ್ನ ಆಸೆ ಈಡೇರಿತೆಂದೋ ದ್ರೋಹದ ನೋವಿನಂದಲೋ ಅಂತೂ ಶಿವನ ಪಾದ ಸೇರಿದ್ದಳು. ಕಟ್ಟುನಿಟ್ಟೆಂದು ಮಗನನ್ನು ಕಳೆದುಕೊಂಡಾಯಿತು. ಈಗ ರೋಜಾ ಎಂದು ಹೇಳಿ ಹೆಂಡಿಯನ್ನ ಕಳೆದುಕೊಂಡೆ. ತಾನು ಒಟ್ಟಾರೆ ಪಾಪಿ ಎನ್ನಿಸಿತು. ಆಗಲೇ ಅವರ ತಲೆಯಲ್ಲಿ ಶಿವಲಿಂಗದೇವರು ಇಣಿಕಿಹಾಕಿದ್ದು. ಹಳೇಲಿಂಗವನ್ನು ಮಚ್ಚಿಟ್ಟ ಕರಡಿಗೆಯಿಂದ ತೆಗೆದು ಅಂಗೆಯಲ್ಲಿಟ್ಟುಕೊಂಡು ಚಿತ್ತವನ್ನು ಏಕಾಗ್ರಗೊಳಿಸಲು ಪ್ರಯತ್ನಿಸಿದರು. ಆಗಲಿಲ್ಲ. ತಾನು ದೇವರಿಗೆ ಲಾಯಖ್ಕಾಗಲಿಲ್ಲ ಎಂರು.

ಈ ಮಧ್ಯೆ ಊರಿನವರೆಲ್ಲ ಬಂದು ಅವರಿಗೆ ಸಹಾನುಭೂತಿ ಸೂಚಿಸಿ ಹೋದರು. ಜೀಕೆ ನಿರ್ಭಾವದಿಂದ್ದರು. ಕಾಲೇಜಿಗೂ ಹೋಗಲಿಲ್ಲ. ತುಂಬ ಅಗತ್ಯವಾದದ್ದು ಏನಾದರೂ ಇದ್ದರೆ ಎಂಟಿ ಇಲ್ಲಿಗೇ ತಂದು ಸಹಿ ಹಾಕಿಸಿಕೊಂಡು ಹೋಗುತ್ತಿದ್ದ. ಹೀಗೆ ಹದಿನೈದಿಪ್ಪತ್ತು ದಿನ ಕಳೆಯಿತು. ಬಿ.ಎ. ರಿಸಲ್ಟು ಶುಕ್ರವಾರ ಪ್ರಕಟವಾಗುವುದೆಂದು ಪತ್ರಿಕೆಗಳಲ್ಲಿ ಕಾಣಿಸದ್ದೇ – ಚುರುಕಾದರು. ಎದ್ದು ಕಾಲೇಜಿನ ಕಡೆಗೂ ಹೋಗಿ ಬಂದರು. ಹುಬ್ಬಳ್ಳಿಗೆ ಹೋಗಿ ರೋಜಾಳನ್ನು ಕಂಡು ಮಾತಾಡಿ ಬರಬಹುದಲ್ಲ, ಮದುವೆಯ ವಿಚಾರ ಆಮೇಲೆ ನೋಡಿಕೊಂಡರಾಯಿತು. ಅಥವಾ ಇರಲಿ ಎಂದು ಬ್ಯಾಂಕಿಗೆ ಹೋಗಿ ಇದ್ದ ಹತ್ತು ಸಾವಿರ ರೂಪಾಯಿಗಳನ್ನು ತಕ್ಕೊಂಡರು. ಹುಬ್ಬಳ್ಳಿಯ ಬಸ್ ಹತ್ತಿದರು.