ನಾಳೆ ದಶಮಾನೋತ್ಸವ ಇದೆಯೆಂದರೆ ಇಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮೂಡಿತ್ತು. ಗಿರೆಪ್ಪ ಖುದ್ದಾಗಿ ಯೂನಿಯನ್ ಸದಸ್ಯರಿಗೆ ಕೆಲಸ ಹಂಚಿ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದ. ಆಮಂತ್ರಣ ಪತ್ರಿಕೆ ಹಂಚಿಕೆ ಆಗಿತ್ತು. ಪೆಂಡಾಲ್ ಹಾಕಿಯಾಗಿತ್ತು. ಗಿರೆಪ್ಪ ಮಿಂಚಿನಂತೆ ಸಂಚರಿಸಿ ಕೆಲಸ ನಿರ್ವಹಿಸುತ್ತಿದ್ದ ರೀತಿ ನೋಡಿ ಜೀಕೆ ಕೂಡ ಆಶ್ಚರ್ಯಪಟ್ಟರು. ಮತ್ತು ಆತನ ಬಗೆಗಿನ ತಮ್ಮ ಮುಂಚಿನ ಅಭಿಪ್ರಾಯವನ್ನು ತಿದ್ದಿಕೊಳ್ಳಬೇಕೆಂದಿದ್ದರು. ಪೆಂಡಾಲನ್ನು ರೋಜಾಳ ನೇತೃತ್ವದ ಹುಡುಗ ಹುಡುಗಿಯರ ತಂಡ ಹೂಮಾಲೆಗಳಿಂದ ಸಿಂಗರಿಸುತ್ತಿದ್ದರು. ಆಕೆ ಆಗಾಗ ತಮ್ಮ ಕಡೆ ಕದ್ದು ನೋಡಿದ್ದನ್ನು, ನೋಡಿ ಮಂದ ಹಾಸ ಬೀರಿದ್ದನ್ನು ಜೀಕೆ ವಿಶೇಷವಾಗಿ ಗಮನಿಸಿದರು. ಜೀಕೆಗೆ ಆಗ ಎಷ್ಟು ಆನಂದವಾಯಿತೆಂದರೆ ಕೆಲಸ ಮಾಡುತ್ತಿದ್ದ ಎಲ್ಲರಿಗೂ ಕರದಂಟು ಉಪ್ಪಿಟ್ಟು ಚಹಾ ಕೊಡಿಸಬೇಕೆಂದು ಎಂಟಿಗೆ ಆಜ್ಞೆ ಮಾಡಿದರು. ಆದರೆ ಗಿರೆಪ್ಪ ಲವಲವಿಕೆಯಿಂದ ಹುಡುಗಿಯರ ಆಸುಪಾಸಿನಲ್ಲೇ ಸುಳಿದಾಡುತ್ತಿದ್ದದ್ದು ಹುಡುಗಿಯರು ಅಂದರೆ ರೋಜಾಳಂಥವರು ಆತನ ಬಗ್ಗೆ ಅನಗತ್ಯ ಉತ್ಸಾಹ ತೋರಿಸುತ್ತಿದ್ದದ್ದು, ಆತನ ನೆರವು ಕೇಳುತ್ತಿದ್ದದ್ದು, ಅವ ಮಾಡುತ್ತಿದ್ದದ್ದು ಇವೆಲ್ಲ ಜೀಕೆಗೆ ಸರಿಬರಲಿಲ್ಲ. ಅವನನ್ನು ಕರೆದು ಏನೋ ಒಂದು ಕೆಲಸ ಹೇಳಿ ಬೇರೆ ಕಡೆ ಕಳಿಸಿದರು. ಆಮೇಲೆ ನಿರುಮ್ಮಳರಾಗಿ ದೇಖರೇಖಿ ನೋಡಿಕೊಳ್ಳುವ ನೆಪದಲ್ಲಿ – ಈಗ ಗಿರೆಪ್ಪ ಇರಲಿಲ್ಲವಲ್ಲ, ಬೇಕಾದರೆ ತನ್ನ ಸಹಾಯವನ್ನೇ ಕೇಳಲೆಂದು ಹುಡುಗಿಯರ ಹತ್ತಿರ ಹೋದರು. ಅವರ‍್ಯಾರೂ ಕೇಳಲಿಲ್ಲ. ಆದರೆ ರೋಜಾ ಒಂದರೆಡು ಬಾರಿ ನೋಡಿದ್ದರಿಂದ ಸಮಾಧಾನಗೊಂಡರು.

ಇಷ್ಟಾಯಿತಲ್ಲ, ಮಧ್ಯಾಹ್ನದ ವಿಶ್ರಾಂತಿಯ ನಂತರ ಕೆಲವು ಕ್ಲಾಸುಗಳು ಪ್ರಾರಂಭವಾದವು. ಯೂನಿಯನ್ ಸದಸ್ಯರಿಗೆ ಕ್ಲಾಸಿಗೆ ಹಾಜರಾಗದಿರುವ ವಿನಾಯಿತಿ ಸಿಕ್ಕಿದ್ದರಿಂದ ಅವರು ನಾಳೆಯ ಕೆಲಸ ನೋಡಿಕೊಳ್ಳುತ್ತಿದ್ದರು. ಕಾರ್ಯಕ್ರಮದಲ್ಲಿ, ಪ್ರಾರ್ಥನೆ ಮಾಡಲಿದ್ದ ವಿದ್ಯಾರ್ಥಿನಿಯರು ಪೆಂಡಾಲ್ ಪಕ್ಕದ ಜಮಖಾನ ಹಾಲಿನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು. ಅತಿಥಿಗಳು ಟ್ರೇನಿನಿಂದ ಹೊರಟ ಬಗ್ಗೆ ಟೆಲಿಗ್ರಾಮ್ ಬಂದಿತ್ತು. ಜೀಕೆ ಅದನ್ನು ಇತಿಹಾಸದ ಅಧ್ಯಾಪಕರಿಗೆ ತೋರಿಸಿ ನಾಳೆ ಅವರ ವ್ಯವಸ್ಥೆ ಮಾಡಬೇಕಾಗಿ ಹೇಳಿದ್ದರು. ಎಲ್ಲವೂ ತಾವು ಬಯಸಿದಂತೆಯೇ ನಡೆಯುತ್ತಿದ್ದುದಕ್ಕೆ ಸಮಾಧಾನಪಟ್ಟುಕೊಂಡು ತಾವು ಸ್ವಾಗತ ಭಾಷಣ ಮಾಡಬೇಕಿತ್ತಲ್ಲ; ಅದನ್ನು ಬರೆಯುವುದಕ್ಕೆ ಕೂತರು. ಕೂತಿನ್ನು ‘ಸನ್ಮಾನ್ಯ ಅತಿಥಿಗಳೇ, ಅಧ್ಯಕ್ಷರೇ’ ಆಗಿರಲಿಲ್ಲ ಎಂಟಿ ತೇಗುತ್ತ ಓಡಿಬಂದು “ಸರs’’ ಎಂದು. ಮುಖ ಮೇಲೆತ್ತಿ ನೋಡಿದರು. ಅಗಲವಾಗಿ ಕಣ್ಣು ತೆರೆದುಕೊಂಡು ಆ ಕೃಶಾಂಗಿ ಗಡಗಡ ನಡುಗುತ್ತ ತಲೆ ಕೆದರಿ ನಿಂತಲ್ಲಿ ನಿಲ್ಲದೆ ಚಡಪಡಿಸುತ್ತಿದ್ದ.

‘ಏನು?’ ಅಂದರೆ,

‘ಸರ, ಘಾತಾಗೇತ್ರಿ! ಗಿರೆಪ್ಪ ರೋಜಾಗ ಮುದ್ದು ಕೊಟ್ಟರಿ!’

‘ಏನು, ಬರೋಬರಿ ಬೊಗಳು.’

‘ಜಮಖಾನ ಹಾಲಿನಾಗ ಹುಡಿಗೇರು ಹಾಡ ಪ್ರಾಕ್ಟೀಸ ಮಾಡುತ್ತಿದ್ದರ್ರಿ. ಗಿರೆಪ್ಪ, ರೋಜಾ ಪೆಂಡಾಲದಾಗ ಇದ್ದರ್ರಿ. ಅದೇನೇನ ಜಗಳಾಡಿದರೋ ರೋಜಾ ಓಡಕ್ಹತ್ತಿದಳ್ರಿ. ಗಿರೆಪ್ಪ ಬೆನ್ನ ಹತ್ತಿದ. ಆಕಿ ಓಡಿ ಓಡಿ ಜಮಖಾನಾ ಹಾಲಿನಾಗ ಹುಡಗೀರ ನಡುವ ಅಡಗಾಕ ಹೋದಳ್ರಿ. ಗಿರೆಪ್ಪ ಬಂದವನ ಆಕೀನ್ನ ಹಿಡಕೊಂಡು ಎತ್ತಿ ಕೆಳಗ ಒಗೆದ. ಒಗೆದವನ ಮ್ಯಾಲ ಬಿದ್ದು ಮುದ್ದುಕೊಟ್ಟ!’

ವಿಚಿತ್ರ ಭಾವನೆಗಳಿಂದ ಜೀಕೆ ಕಣ್ಣು ಫಳ್ಳನೆ ಹೊಳೆದವು. ಒಂದು ಕ್ಷಣ ತಲೆ ಹಿಡಿದು ಕೂತರು.

‘ಖರೆ ಹೇಳು’ ಎಂದು ಮುಷ್ಟಿ ಹಿಡಿದು ಮೇಜಿನ ಮೇಲೆ ಗುದ್ದಿದರು.

‘ಖರೆ, ಖರೇನರಿ! ಬೇಕಾದರೆ ಎಮ್ಮೆಸ್ ಅಲ್ಲೇ ಇದ್ರು. ಅವರನ್ನ ಕೇಳ್ರಿ.’

ಜೀಕೆ ಕಿಚ್ಚಿನೊಳಗಿನ ಕೀಟದ ಹಾಗೆ ಮೈಯಾದ್ಯಂತ ಉರಿದರು. ಈ ರೀತಿ ಒಬ್ಬ ಹುಡುಗ ಒಬ್ಬ ಹುಡುಗಿಯನ್ನು ಅದೂ ಕಾಲೇಜಿನ ಆವರಣದಲ್ಲಿ ಅದೂ ತಾವಿರುವ ಕಾಲೇಜಿನ ಆವರಣದಲ್ಲಿ ಮುದ್ದಿಡುವುದೆಂದರೇನು? ಕಣ್ಣ ಕಳಚಿ ಬೀಳುವ ಹಾಗೆ ಖೆಕ್ಕರಿಸಿ ಎಂಟಿಯನ್ನೊಮ್ಮೆ ನೋಡಿ ಅಕ್ಷರಶಃ ಶರವೇಗದಲ್ಲಿ ಜಮಖಾನ ಹಾಲಿನತ್ತ ನಡೆದರು.

ಹುಡುಗ ಹುಡುಗಿಯರಾಗಲೇ ಅಲ್ಲಲ್ಲಿ ಗುಂಪು ಗುಂಪಾಗಿ ಮಾತಾಡುತ್ತಿದ್ದರು. ಹುಡುಗಿಯರು ಗಾಬರಿಗೊಂಡ ಮಕ್ಕಳಂತೆ ದೊಡ್ಡದಾಗಿ ಕಣ್ಣುಬಾಯಿ ತೆರೆದು ಮಾತಿಗೊಮ್ಮೆ ಉದ್ದಗಲ ಕೈಬೀಸುತ್ತ ಯಾರ್ಯಾರನ್ನೋ ನಿರ್ದೇಶಿಸುತ್ತಿದ್ದರು. ಜೀಕೆ ಬರುತ್ತಿದ್ದುದನ್ನು ನೋಡಿದೊಡನೆ ಪೆಂಡಾಲ್ ಬಳಿಯ ಹುಡುಗರ ಗುಂಪು ಚದುರಿತು. ಅವರ ಮಧ್ಯೆ ಇದ್ದ ಗಿರೆಪ್ಪ ಮಾತ್ರ ಅಚಲನಾಗಿ ಹಾಗೆ ನಿಂತಿದ್ದ. ಇವರನ್ನು ಕಂಡೊಡನೆ ಏನೋ ಕೆಲಸ ಮಾಡುವವರಂತೆ, ಕೆಲಸದಲ್ಲಿ ಇವರನ್ನು ಕಾಣಲಿಲ್ಲವೆಂಬಂತೆ ಒಳಗೆ ಹೆದರಿದ್ದರೂ ಹೊರಗೆ ದಿಮಾಕಿನ ಪೋಜು ಕೊಡುತ್ತಾ ನಿಂತಿದ್ದ. ಜೀಕೆಯವರನ್ನು ನೋಡಿ ಕೆಲವು ಹುಡುಗಿಯರು ಓಡಿ ಮರೆಯಾದರು. ಕೆಲವರಿಗೆ ಓಡಲು ಧೈರ್ಯಸಾಲದೆ ಅಲ್ಲಿಯೇ ನಿಂತರು. ಜೀಕೆ ಅಲ್ಲಿಗೇ ಹೋಗಿ,

‘ಏನ ನಡೀತಿಲ್ಲಿ?’ ಎಂದು ಕೇಳಿದರು, ಹುಡುಗಿಯರ್ಯಾರು ಬಾಯಿ ಬಿಡಲಿಲ್ಲ. ಪರಸ್ಪರ ಮುಖ ನೋಡಿಕೊಳ್ಳಲೂ ಆಗದೆ ದೊಡ್ಡ ಕಣ್ಣುಗಳಿಂದ ಪ್ರಿನ್ಸಿಪಾಲರನ್ನೇ ನೋಡುತ್ತ ನಿಂತರು.

‘ರೋಜಾ ಎಲ್ಲಿ?’ ಎಂದರು ಮತ್ತೆ. ಆಗಲೂ ಅವರು ಸುಮ್ಮನಿದ್ದಾಗ ಇನ್ನೂ ಎತ್ತರದ ದನಿಯಲ್ಲಿ ‘ಹೇಳಿದ್ದು ಕೇಳಸಲಿಲ್ಲ? ಎಲ್ಲಿ ರೋಜಾ?’ ಎಂದು ಗುಡುಗಿದರು. ಹುಡುಗಿಯೊಬ್ಬಳು ‘ಮನೀಗೆ ಹೋದಳ್ರಿ’ ಎಂದು ಗಾಬರಿಯ ಎತ್ತರದ ದನಿಯಲ್ಲಿ, ಊರಕಡೆ ಕೈ ಮಾಡಿ ತೋರಿಸಿ ಹೇಳಿದಳು. ಈಗ ಜೀಕೆ ದೃಷ್ಟಿ ಗಿರೆಪ್ಪನತ್ತ ತಿರುಗಿತು. ಆತ ನಿಂತಿರಲಾರದೆ ಇವರ ಕಡೆ ಬೆನ್ನು ಮಾಡಿ ಅಲ್ಲೇ ಇದ್ದ ಕುರ್ಚಿಯೊಂದರಲ್ಲಿ ಕೂಡ, ಎಲ್ಲಿದ್ದರೋ ಇತಿಹಾಸದ ಅಧ್ಯಾಪಕರೂ ಬಂದರು. ಎಂಟಿ ಓಡುತ್ತ ಅವರನ್ನು ಸೇರಿಕೊಂಡ. ಆದರೆ ರಾವು ಹೊಡೆಯುತ್ತಿದ್ದ ಜೀಕೆ ಮುಖ ನೋಡಿ ಇಬ್ಬರಿಗೂ ಏನೂ ಮಾತಾಡಲಿಕ್ಕೇ ಆಗಲಿಲ್ಲ. ಇವರ ಪರದಾಟ ನೋಡುತ್ತ ನಿಂತಿರದೆ ಜೀಕೆ ಗಿರೆಪ್ಪ ಕೂತಲ್ಲಿಗೆ ಹೋದರು.

ಗಿರೆಪ್ಪ ಎದ್ದು ನಿಂತ. ಅವನನ್ನು ಹರಿದು ತಿನ್ನುವ ಹಾಗೆ ಹುಬ್ಬು ಗಂಟಿಕ್ಕಿ ದೃಷ್ಟಿಯನ್ನು ಚೂಪುಗೊಳಿಸಿ ನೋಡುತ್ತ,

‘ಇಷ್ಟ ಸೊಕ್ಕ ಬಂತೇನೊ ನಿನಗ?’ ಎಂದರು. ಗಿರೆಪ್ಪ ಮುಗ್ಧನಂತೆ ‘ಏನ ಸರ?’ ಅಂದ.

‘ಏನ ಮಾಡಿದಿ ಗೊತ್ತಿಲ್ಲ ನಿನಗ?’

‘ಗೊತ್ತಿಲ್ಲರಿ ಸರ’

‘ಬಾಯಾಗ ಬೆರಳಿಟ್ಟರ ಕಚ್ಚಾಕ ಬರಾಣಿಲ್ಲ ಅಲ್ಲ?’ ಎಂದು ಅಣಿಗಿಸುತ್ತ ‘ಏಯ್ ಎಂಟಿ ಹೇಳವಗ’ ಎಂದು ಉಕ್ಕಿ ಬರುತ್ತಿದ್ದ ಸಿಟ್ಟನ್ನು ನಿಯಂತ್ರಿಸಿಕೊಂಡರು. ಎಂಟಿ ಈ ತನಕ ಮಾತಾಡುವಾಗ ಮಾತ್ರ ಅಭಿನಯ ಮಾಡುತ್ತಿದ್ದವನು ಈಗ ಮಾತಿಲ್ಲದೆ ಕೈಬಾಯಿ ಮಾಡತೊಡಗಿದ. ಈ ಅರೆಗೊಡ್ಡಿತನ ನೋಡಲಾರದೆ,

‘ರೋಜಾಗ ಏನ ಮಾಡಿದಿ?’

– ಎಂದರು. ಗಿರೆಪ್ಪ ಸುಮ್ಮನಿದ್ದ. ಅವನು ಸಿಕ್ಕುಬಿದ್ದನೆಂದೇ ತಾನು ಮಾಡಿದ್ದನ್ನು ಓಪ್ಪಿಕೊಂಡನೆಂದೇ ಭಾವಿಸಿದರು. ಆದರೂ ಅವನ ಬಾಯಿಂದ ಹೊರಡಿಸಬೇಕೆಂದು,

‘ನಿನಗೂ ರೋಜಾಗೂ ಏನ ಸಂಬಂಧ?

– ಎಂದು ವದರಿದ ಹಾಗೆ ಮಾತಾಡಿದರು.

‘ಸರ ನೀವು ನನ್ನ ಖಾಸಗಿ ವ್ಯವಹಾರಕ್ಕೆ ಕೈಹಾಕಬಾರದು’ ಎಂದು ತಣ್ಣಗೆ ಹೇಳಿ ಗಿರೆಪ್ಪ ಕತ್ತಿನ ಕಾಲರ್ ಝಾಡಿಸಿ ತೀಡಿಕೊಳ್ಳುತ್ತ ಹೋಗಿಬಿಟ್ಟ.

ಮೊದಲಿನ ಕೋಪಕ್ಕೆ ಈಗಿನ ಅವಮಾನವೂ ಸೇರಿ ಮುಖ ಮುಚ್ಚಿಕೊಳ್ಳುವಂತಾಯಿತು ಜೀಕೆಗೆ. ಕುದಿಯುವ ನೀರಿನ ಹಾಗೆ ನಡುಗುತ್ತಿದ್ದರು. ದೂರದಲ್ಲಿ ಚದುರಿ ನಿಂತಿದ್ದ ಹುಡುಗರು ಇವರನ್ನೇ ನೋಡುತ್ತಿದ್ದರು. ದಾಪುಗಾಲು ಹಾಕುತ್ತ ಛೇಂಬರಿಗೆ ಹೋದರು, ಕುರ್ಚಿಯಲ್ಲಿ ಕುಕ್ಕರಿಸಿ ಕೈಕೈ ಹಿಸುಕಿಕೊಂಡರು. ತಕ್ಷಣ ಏನು ಹೊಳೆಯಿತೊ, ಗಿರೆಪ್ಪನನ್ನು ಕಾಲೇಜಿನಿಂದ ಡಿಸ್‌ಮಿಸ್ ಮಾಡಿದ್ದಾಗಿ ಕಾಗದಲ್ಲಿ ಗೀಚಿ ಕರೆಗಂಟೆ ಬಾರಿಸಿದರು.

ವ್ಯವಹಾರ ಜ್ಞಾನವುಳ್ಳ ಯಾವ ಪ್ರಿನ್ಸಿಪಾಲನೂ ಮಾಡದ ಕೆಲಸವನ್ನು ಜೀಕೆ ಮಾಡಿದ್ದರು. ನಾಳೆ ಎಂದರೆ ನಾಳೆಯೇ ದಶಮಾನೋತ್ಸವವಿದೆ. ಕಾಲೇಜ್ ಯೂನಿಯನ್ ಉದ್ಘಾಟನೆಯಿದೆ. ಆಮಂತ್ರಣ ಪತ್ರಿಕೆ ಹಂಚಿಯಾಗಿದೆ. ಅದ್ದೂರಿ ತಯಾರಿಯಾಗಿದೆ. ಸಂದರ್ಭ ಹೀಗಿದ್ದಾಗ ಯೂನಿಯನ್ ಅದ್ಯಕ್ಷನನ್ನು ಡಿಸ್‌ಮಿಸ್ ಮಾಡುವುದು ಕಲ್ಲೆತ್ತಿ ಕಾಲಿನ ಮೇಲೆ ಚೆಲ್ಲಿಕೊಂಡಂತೆ. ಇದನ್ನು ಜೀಕೆ ಮಾಸ್ತರರಂಥ ಅನುಭವಿಗಳಿಗೆ ಯಾರು ಹೇಳಬೇಕು? ಮಾರನೇ ದಿನ ಅನಿರೀಕ್ಷಿತವಾದ ಅಘಾತ ಕಾದಿತ್ತು.