ಜೀಕೆ ಅಕ್ಷರಶಃ ಆನಂದಿಂದ ಉನ್ಮತ್ತರಾದರು. ಬೆಳಗಿನ ಕಾರ್ಯಕ್ರಮದಲ್ಲಿ ಅವಮಾನವಾಗಿತ್ತಲ್ಲ ಅದರ ಯಾವ ಗುರುತೂ ಅವರ ನಡಿಗೆಯಲ್ಲಿರಲಿಲ್ಲ. ಬದುಲು ಗೆದ್ದವರಂತೆ ಕತ್ತೆತ್ತಿ ನಡೆಯುತ್ತ ಮನೆಗೆ ಹೋದರು. ನಿಜ ಹೇಳಬೇಕೆಂದರೆ ಒಳಗೊಳಗೇ ನಗುತ್ತಿದ್ದರು. ಮತ್ತು ಆ ನಗೆಯನ್ನು ಬಹು ಪ್ರಯಾಸದಿಂದ ತಡೆ ಹಿಡಿದಿದ್ದರು. ಮನೆಗೆ ಬಂದರೆ ಗಿರಿಜಮ್ಮ ಜ್ವರ ಬಂದು ಮಲಗಿದ್ದಳು. ಇವರು ಹೋಗುವುದರೊಳಗೆ ಡಾಕ್ಟರ್‌ಗೆ ತೋರಿಸಿ ಔಷಧಿ ನುಂಗಿ ಮಲಗಿದ್ದಳು. ಜೀಕೆ ಹೆಂಡತಿಗೆ ಗಂಜಿ ಕುಡಿಸಿದರು. ಅವಳು ‘ಅದೇನು ಕೈಸುಡುತ್ತಾವಲ್ಲ, ನಿಮಗೂ ಜ್ವರ ಬಂದಿರಬೇಕು. ಡಾಕ್ಟರಿಗೆ ತೋರಿಸಬಾರದ?’ ಎಂದಳು. ‘ಖರೆ’ ಎಂದು ಮನಸ್ಸಿನಲ್ಲೆ ಹೇಳಿಕೊಂಡರು.

ಊಟದ ಶಾಸ್ತ್ರ ಮಾಡಿದರು. ಹೆಂಡತಿ ಮಲಗಿದ್ದು ಖಾತ್ರಿಯಾದೊಡನೆ ಸ್ಟಡಿ ರೂಮಿಗೆ ಹೋಗಿ ಆ ಪತ್ರ ತೆಗೆದರು. ನಾಕೈದು ಬಾರಿ ಓದಿದರು. ಹೆಂಡತಿ ಎದ್ದು ಬರುವುದಿಲ್ಲವೆಂದು ಗೊತ್ತಿದ್ದರೂ ನಡುನಡುವೆ ಬಾಗಿಲ ಕಡೆ ಕಳ್ಳ ನೋಟ ಬೀರುತ್ತಿದ್ದರು. ಮತ್ತೆ ಓದಿ ಬಂದು ಮಲಗಿದರು. ನಿದ್ದೆಯಲ್ಲಿ ಬಂದೀತು? ಆ ದಿನದ ಘಟನೆಯನ್ನು ಅಂದರೆ ರೋಜಾ ಬಂದಿದ್ದರಿಂದ ಹಿಡಿದು ಮತ್ತೆ ಅವಳು ಮರೆಯಾದವರೆಗಿನ ಘಟನೆಯನ್ನು ವಿವರವಾಗಿ ನೆನೆದರು. ಮತ್ತೆ ಓದಬೇಕೆನಿಸಿ ಎದ್ದು ಹೋಗಿ ಪತ್ರ ಓದಿದರು. ಆ ಪತ್ರದ ‘ನಿಮ್ಮೊಲವಿನ ರೋಜಾ’ ಎಂದಿದ್ದಲ್ಲಿ ತುಟಿ ಒತ್ತಿದರು. ಪತ್ರವನ್ನು ಜತನವಾಗಿ ಕೋಟಿನ ಜೇಬಿನಲ್ಲಿಟ್ಟು ಬಂದು ಮಲಗಿದರು.

ಹೆಂಡತಿಗೆ ತಾನು ದ್ರೋಹ ಬಗೆದಂತಲ್ಲವೇ ಎಂದು ಅಂದುಕೊಂಡರು. ಆದರೆ ಈ ಸುಡುವ ಸುಖದ ಮುಂದೆ ದ್ರೋಹ ಕ್ಷುದ್ರವಾಗಿ ಕಂಡಿತು. ಈಗ ತಮ್ಮ ದೇಹದ ಗುಂಟ ರೋಜಾ ಕೂಡ ಮಲಗಿದ ಹಾಗೆ ಚಿತ್ರಿಸಿಕೊಂಡರು. ಮತ್ತು ಆ ಕಲ್ಪನೆಯ ರೋಜಾ ತಮ್ಮನ್ನು ತಬ್ಬಿಕೊಂಡಿರುವಂತೆ ಮಾಡಿ ಮೆಲ್ಲಗೆ ಅವಳಿಗೂ ಹೊದಿಸಿದ ಹಾಗೆ ಹೊದಿಕೆ ಹೊದ್ದುಕೊಂಡರು. ಅವಳ ಮೈಯ ಏರಿಳಿವುಗಳ ಮಧುರವಾದ ಬಿಸಿಯನ್ನನುಭವಿಸುತ್ತ ತೇಲುಗಣ್ಣು ಮೇಲುಗಣ್ಣಾಗಿ ಬಿದ್ದುಕೊಂಡರು. ರೇಷ್ಮೆಯಂಥ ಮೈ ಅವಳದು. ಈಗೊಂದು ತಾಸಿನ ಹಿಂದೆ ಮುತ್ತಿಟ್ಟಳಲ್ಲ ಅದನ್ನು ಮತ್ತೆ ಮತ್ತೆ ರಿಪೀಟ್ ಮಾಡಿ ಬೆವರಿದರು. ಮನಸ್ಸಿನಲ್ಲೇ ನರಳಿದರು. ಇಬ್ಬರೂ ಅರ್ಥವಿಲ್ಲದ ಏನೇನೋ ಮಾತಾಡಿಕೊಂಡರು ಕೂಡ.

ಈಗ ಗಿರ್ಯಾ ಮಗ ಏನು ಮಾಡುತ್ತಿರಬಹುದು? ಮಲಗಿದ್ದಾನೋ ಅವನಿದ್ದಲ್ಲಿಗೆ ಹೋಗಿ ಎಬ್ಬಿಸಿ, ಈ ದಿನ ನಡೆದದ್ದನ್ನೆಲ್ಲ ಹೇಳಿ ಅವನು ಅಸೂಯೆಪಡುವ ಹಾಗೆ ಮಾಡಬೇಕು ಎನ್ನಿಸಿತು. ‘ಲೇ ಗಿರ್ಯಾ ಮಗನ, ಇಕಾ ಇಲ್ಲಿ ನೋಡಲೆ; ರೋಜಾ ನನ್ನನ್ನು ತಬ್ಬಿಕೊಂಡು ಹೆಂಗ ಬಿದ್ದಾಳ ನೋಡು. ಏನೇನೋ ಮಾಡಕ ಹತ್ಯಾಳಲೇ! ಛೇ, ನನಗ ಆನಂದ ತುಳುಕಿ ತುಳುಕಿ ಅಳೋ ಹಾಂಗ ಆಗತೈತಿ, ಹಗಲಿ ರಾತ್ರಿ ಬರಿ ಹಿಂಗ ಇರಬೇಕನಸತೈತಿ. ಏಳಲೇಮಗನ ಗಿರ್ಯಾ, ಎದ್ದ ಬಾ, ರೋಜಾನ ಬಗ್ಗೆ ಮಾತಾಡೋಣ. ನೀನೂ ಹೇಳು ನಾನೂ ಹೇಳತೀನಿ. ಆದರ ನನಗ ಈ ಹೊತ್ತ ಅಧಾಂಗ ನಿನಗ ಆಗಿಲ್ಲಬಿಡು. ಯಾಕಂದರ ನೀ ಬರೀ ಆಕೀನ್ನ ಮುಟ್ಟಿದ್ದೀ ಆದೀತು, ಆದರ ನನಗೆ ಕೊಟ್ಟಳಲ್ಲ ಅಂಥ ಕಿಸ್ ನಿನಗ ಕೊಟ್ಟ ಇಲ್ಲ ಬಿಡು. ಬೇಕಾದರ ಆಣೀ ಮಾಡಿ ಹೇಳತೀನಿ….’ ಎಂದೇನೇನೋ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿರುವಂತೆ ಪಕ್ಕದಲ್ಲಿ ತುಂಟಾಟ ಮಾಡುತ್ತಿದ್ದ ರೋಜಾಳ ಕಾಲ್ಪನಿಕ ರೂಪ ಮತ್ತೆ ಕಣ್ಣಿಗೆ ಕಟ್ಟಿತು. ಇವರ ಮೈತುಂಬ ಅವಳ ಬಾಯಿ ಆಡಿದಂತೆನಿಸಿ ಸುಖದ ಅಮಲಿನಲ್ಲಿ ಬಿದ್ದುಕೊಂಡರು.