ಇದಾಯಿತಲ್ಲ, ಗಿರೆಪ್ಪನ ಬಗ್ಗೆ ಜೀಕೆ ಕೃತಜ್ಞರಾಗಿರುವುದು ಬೇಡ ಅವನ ಬಗೆಗಿನ ಅಸೂಯೆಯನ್ನಾದರೂ ಕಡಿಮೆ ಮಾಡಿಕೊಂಡಾರೆಂಬ ಊಹೆ ಹುಸಿಯಾಯಿತು. ಅವನ ಹೆಸರು ಕಿವಿಗೆ ಬಿದ್ದರೇ ಉರಿದು ಬೀಳುತ್ತಿದ್ದರು. ಆತ ಯಾವುದಾದರೂ ತಪ್ಪಿನಲ್ಲಿ ಸಿಕ್ಕು ಬಿದ್ದರೆ ನಿಂತ ಕಾಲ ಮೇಲೆ ಡಿಸ್‌ಮಿಸ್ ಮಾಡಲು ಸಿದ್ದರಿದ್ದರು. ರೋಜಾ ಅವನ ಜೊತೆ ಮಾತಾಡಿದಳೆಂದು ಎಂಟಿ ವರದಿ ಮಾಡಿದರೆ ಇಡೀ ರಾತ್ರಿ ನಿದ್ದೆಯಿಲ್ಲದೆ ಒದ್ದಾಡುತ್ತಿದ್ದರು. ಒಮ್ಮೆಯಂತೂ ಅವಳು ಬಂದಾಗ ನಿನ್ನನ್ನು ಆತನ ಜೊತೆ ಕಂಡರೆ ಅದೇ ದಿನ ತಾನು ಆತ್ಮಹತ್ಯೆ ಮಾಡಿಕೊಂಡು ಸಾಯುವುದಾಗಿ ಭಾವುಕರಾಗಿ ಅಳು ಧ್ವನಿಯಲ್ಲಿ ಹೇಳಿಬಿಟ್ಟರು. ಮೊದಮೊದಲು ರೋಜಾಳ ಪ್ರೇಮದ ವಿಷದಿಂದ ನೋಯುತ್ತಿದ್ದವರು ಈಗ ಗಿರೆಪ್ಪನ ಅಸೂಯೆಯ ವಿಷದಿಂದಲೂ ನರಳುವಂತಾದರು.

ಈ ಮಧ್ಯೆ ಪರೀಕ್ಷೆಗಳು ಮುಗಿದವು. ಈಗಂತೂ ಇದ್ದದ್ದೂ ಗಂಭೀರವಾದರು. ಇದು ರೋಜಾಳ ಅಂತಿಮ ವರ್ಷ, ಪರೀಕ್ಷೆ ಮುಗಿದ ಮೇಲೆ ಮಧ್ಯ ಒಮ್ಮೆ ಬರುವುದಾಗಿ ಹೇಳಿ ಹಳ್ಳಿಗೆ ಹೋದಳು. ಈ ಸಲ ಅವಳು ಬಂದಾಗ ತಮ್ಮ ಮುಂದಿನ ಬದುಕಿನ ಬಗ್ಗೆ ಮಾತಾಡಿ ಒಂದು ತೀರ್ಮಾನಕ್ಕೆ ಬರಲೇಬೇಕಾಗಿತ್ತು. ಅವಳು ಬಹುಶಃ ಇನ್ನು ಮೇಲೆ ಬರಲಾರಳೆಂದು ಒಮ್ಮೊಮ್ಮೆ ಸಂಶಯಪಟ್ಟರು. ಆದರೆ ಅವಳನ್ನು ಹಿಡಿದು ಸೆಳೆಯುವ ಮಂತ್ರವೊಂದಿತ್ತು. ಬಿ.ಎ. ಪರೀಕ್ಷೆಯ ಸಂಸ್ಕೃತದ ಉತ್ತರ ಪತ್ರಿಕೆ ತನಗೇ ಬರಲಿವೆಯೆಂದು ಹೇಳಿದ್ದರಿಂದ ಬಂದರೂ ಬಂದಾಳೆಂಬ ಆಸೆಯಿತ್ತು.

ಉತ್ತರ ಪತ್ರಿಕೆಗಳು ಬಂದವು. ಹೇಳಿ ಕಳಿಸಿದ ಹಾಗೆ ರೋಜಾ ಬಂದಳು. ಕಾಲೇಜಿನಲ್ಲೇ ಪ್ರೇಮಿಗಳ ಭೇಟಿ ಆಯಿತು. ಉತ್ತರ ಪತ್ರಿಕೆ ಮನೆಯಲ್ಲಿದೆಯೆಂದೂ ಸಂಜೆ ಏಳು ಗಂಟೆ ಮನೆಗೆ ಬಾ ಎಂದೂ ಹೇಳಿದರು. ಇವರ ಕಣ್ಣಿನೊಳಗಿದ್ದ ಚಂಚಲವಾದ ಹನಿಮೂನು ರೋಜಾಳಿಗೂ ಅರ್ಥವಾಯಿತು. ಬರಹೇಳಿದ್ದೇನೋ ಆಯಿತಲ್ಲ. ಉಪಾಯ ಸರಿಹೋಯಿತೇ ಎಂದು ಯೋಚನೆ ಮಾಡಿದರು. ಸುತ್ತ ಮನೆಗಳಿಲ್ಲದ್ದರಿಂದ, ಅವಳು, ಬರುವುದು ಕತ್ತಲಾದ್ದರಿಂದ ಅಪಾಯವಿಲ್ಲ ಎಂದೆನಿಸಿತು. ಗಿರಿಜಾ ಹಾಸಿಗೆ ಬಿಟ್ಟು ಏಳುವುದಿಲ್ಲ. ಸ್ಟಡಿ ರೂಮಿನಲ್ಲಿ ಏನು ನಡೆದರೂ ಅವಳಿಗೆ ಆಸಕ್ತಿ ಇರುವುದಿಲ್ಲ. ರೋಜಾ ಜೊತೆಬೇಕಾದಷ್ಟು ಮಾತಾಡಬಹುದಿತ್ತು. ಮತ್ತು ಏನೇನೋ ಮಾಡಬಹುದು. ಈ ತನಕ ತಮ್ಮ ಸಂಬಂಧ ಬರೀ ಪತ್ರ ವ್ಯವಹಾರದಲ್ಲಿತ್ತೇ ಹೊರತು ಅದಕ್ಕಿಂತ ಆಳಕ್ಕೆ ಹೋಗಿರಲಿಲ್ಲ. ಈಗ ಅದಕ್ಕೊಂದು ನಿಶ್ಚಿತ ರೂಪ ಕೊಡಬೇಕೆಂದು ಅಂದುಕೊಂಡರು.

ಸಂಜೆ ಆರೂವರೆಗೇ ಕತ್ತಲಾಗಿತ್ತು. ಏಳು ಗಂಟೆಗೆ ಜೀಕೆ ವರಾಂಡ ಮತ್ತು ಮನೆಮುಂದಿನ ಲೈಟ್ ಆರಿಸಿ, ಹೆಂಡತಿಗೆ ಗಂಜಿ ಕುಡಿಸಿ ಮಲಗಿಸಿ ಗೇಟಿನಲ್ಲಿ ಕಾಯುತ್ತ ನಿಂತರು. ಬಹಳ ಹೊತ್ತನ ತರುವಾಯ ರೋಜಾ ಬಂದಳು. ಗೆಲುವಾಗಿದ್ದಳು. ಬಂದವಳು ಮಂದಹಾಸ ಬೀರಿ ‘ಸ್ಸಾರಿ ಸರ, ಬಹಳ ಹೊತ್ತ ಕಾದಿರೇನ?’ ಎಂದಳು. ಅವಳ ಕೈಹಿಡಿದು ಕಿವಿಯಲ್ಲಿ ‘ಮೆಲ್ಲಗೆ ಮಾತಾಡು’ ಎಂದು ತುಂಟತನದಿಂದ ಹೇಳಿ ಒಳಗೆ ಕರೆದೊಯ್ದರು. ಮುಂದಿನ ಬಾಗಿಲಿಕ್ಕಿ ಮೆಲ್ಲಗೆ ಸ್ಟಡಿ ರೂಮಿಗೆ ಹೋದರು. ಸಂಭ್ರಮದಿಂದ ಅವಳ ಎರಡೂ ಕೈಹಿಡಿದು ತಾವು ಕೂರುತ್ತಿದ್ದ ಟೇಬಲ್ ಬಳಿಯ ಕುರ್ಚಿಯಲ್ಲಿ ಕೂರಿಸಿ, ಎದುರಿನ ಕುರ್ಚಿಯಲ್ಲಿ ತಾವು ಕೂತರು. ಆನಂದದಿಂದ ಕಣಿರು ಬಂತು. ‘ಇನ್ನಿವಳು ತನ್ನವಳೇ, ತನ್ನವಳು ಮಾತ್ರ’ ಎಂದುಕೊಂಡು ನಡುಗುವ ಕೈಗಳಿಂದ ಅವಳ ಎರಡೂ ಕೈಗಳನ್ನು ಹಿಡಿದು ಹಿಸುಕಿ ಬಾಗಿ ಮುದ್ದಿಟ್ಟರು. ತದೇಕ ದೃಷ್ಟಿಯಿಂದ ಅವಳನ್ನೇ ನೋಡುತ್ತ ತಮ್ಮ ಹೃದಯದಲ್ಲಿ ಗುಟ್ಟಾದದ್ದು ಏನಿದೆಯೋ, ತುಂಬ ಆತ್ಮೀಯವಾದದ್ದು ಏನಿದೆಯೋ ಅದನ್ನೆಲ್ಲ ಅವಳ ವಶಕ್ಕೆ ಅರ್ಪಿಸಿದವರಂತೆ ಧನ್ಯಭಾವನೆಯಲ್ಲಿ ಕುಳಿತರು.

ರೋಜಾ ಇದನ್ನೆಲ್ಲ ಸಂತೋಷಿಸುತ್ತಿದ್ದಳು. ಜೀಕೆ ಮಾಸ್ತರರಲ್ಲಿ ಈ ಪರಿ ವೈವಿಧ್ಯಯದ ಭಾವನೆಗಳನ್ನು ಸೃಷ್ಟಿಸಿದ ತನ್ನ ರೂಪರಾಶಿಯ ಬಗೆಗೆ ಒಳಗೊಳಗೇ ಹೆಮ್ಮೆಪಟ್ಟಳು. ಅವರು ಹಾಗೆ ನೋಡುತ್ತಿದ್ದರೆ ನಾಚಿ ದೃಷ್ಟಿ ತಪ್ಪಿಸುವ ರೂಮ್ ನೋಡಿದಳು. ಟೇಬಲ್ ನೋಡಿದಳು. ನೋಡಿ, ‘ಸರ ಪೇಪರ್ ಎಲ್ಲಿ ಅದಾವ್ರಿ?’ ಎಂದಳು. ಆಕೆ ಕೇಳುವುದು ಹೆಚ್ಚೊ ಇವರು ಕೊಡುವುದು ಹೆಚ್ಚೊ? ಅವಳು ಮನೆಗೆ ಬಂದದ್ದೇ ಹೆಚ್ಚಾಗಿ ಇವಳನ್ನು ಹ್ಯಾಗೆ ಸಂತೋಷಪಡಿಸಬೇಕೆಂದು ತಿಳಿಯದೆ ಚಡಪಡಿಸುತ್ತಿದ್ದರು. ಈಗ ಬಾಯಿ ಬಿಟ್ಟು ಕೇಳಿದರೆ ಹ್ಯಾಗಾಗಬೇಡ? ಅವಳು ಪ್ರಾಣ ಕೇಳಿದ್ದರೂ ಈಗ ಕೊಡುತ್ತಿದ್ದರು. ಉತ್ಸಾಹದಿಂದೆದ್ದು ಬೀರುವಿನಲ್ಲಿದ್ದ ಪೇಪರ್ ಬಂಡಲನ್ನು ತಂದು ಭಕ್ತಿಯಿಂದ ಅವಳ ಮುಂದಿಟ್ಟರು. ಮತ್ತೆ ಅವಳ ಮುಖವನ್ನೇ ನೋಡುತ್ತ ‘ನಿನ್ನ ಪೇಪರ ತಗಿ’ ಎಂದರು. ಆಕೆ ತನ್ನ ಪೇಪರ್ ತೆಗೆದು ಅವರ ಮುಂದಿಟ್ಟು ಮಾದಕವಾದ ಮಂದಹಾಸ ಬೀರಿದಳು. ಜೀಕೆ ಪರವಶರಾದರು. ಅವಳನ್ನೇ ನೋಡುತ್ತ ‘ಎಷ್ಟು ಬೇಕೋ ಅಷ್ಟು ಮಾರ್ಕ್ಸ್ ನೀನೇ ಹಾಕಿಕೋ’ ಎಂದರು. ಇಷ್ಟು ಸವಲತ್ತು ಸಿಕ್ಕದ್ದೇ ಆಕೆ ತಾನಿದರ ಪ್ರಯೋಜನ ತನಗಾಗಿ ತಕ್ಕೊಳ್ಳುತ್ತಿಲ್ಲ, ಕೇವಲ ನಿಮ್ಮ ಖುಷಿಗಾಗಿ ಮಾಡುತ್ತಿದ್ದೇನೆಂಬಂತೆ ಗಂಭೀರವಾಗಿ ಪ್ರತಿ ಪ್ರಶ್ನೆಗೆ ತನಗೆ ಬೇಕಾದಷ್ಟು ಮಾರ್ಕ್ಸ್ ಹಾಕಿಕೊಂಡು ಬೇರೀಜು ಮಾಡಿಟ್ಟು ಸಹಿಗಾಗಿ ಇವರ ಮುಂದೆ ಚಾಚಿದಳು. ಜೀಕೆ ತಪ್ಪಿಕೂಡ ಅವಳ ಮುಖದಿಂದ ದೃಷ್ಟಿ ತೆಗೆದಿರಲಿಲ್ಲ. ಹೇಳಿದಲ್ಲಿ ಸಹಿ ಹಾಕಿ ಮತ್ತೆ ಅವಳ ಮುಖವನ್ನೇ ಲವಲವಿಕೆಯಿಂದ ನೋಡುತ್ತಾ ಕೂತರು. ಅವಳು ‘ತನ್ನ ಗೆಳತಿಯ ಪೇಪರೊಂದನ್ನು ನೋಡಲಾ?’ ಎಂದು ಹೇಳಿ ಉತ್ತರಕ್ಕೂ ಕಾಯದೆ ಅದಕ್ಕೂ ಹಾಗೆ ಮಾರ್ಕ್ಸ್ ಹಾಕಿ ಸಹಿ ಮಾಡಿಸಿದರು.

‘ತೃಪ್ತಿ ಆಯಿತಾ?’ ಎಂದರು ಜೀಕೆ.

‘ನೀವು ಸಮೀಪ ಇದ್ದರ ನನಗ ಯಾವಾಗಲೂ ತೃಪ್ತಿ’ ಅಂದಳು.

ಜೀಕೆ ಆನಂದದಿಂದ ಎದ್ದು ಮುಂದೆ ಬಂದರು. ತಮ್ಮ ಎರಡೂ ಕೈಗಳನ್ನು ಅವಳ ಭುಜದ ಮೇಲಿಟ್ಟು,

‘ಹೇಳು ರೋಜಾ, ಯಾವಾಗ ಮದುವೆ ಆಗೋಣ?’ ಎಂದರು.

‘ಸರಿ, ರಿಸಲ್ಟ ಇದ್ದ ದಿನಾ ನಾ ಹುಬ್ಬಳ್ಳಿಗೆ ಬರತೀನಿ, ನೀವೂ ಬರ್ರಿ. ಅಶೋಕ ಹೋಟಲದಾಗ ಇರ‍್ತೀನಿ. ಅಲ್ಲೇ ಮಾತಾಡೋಣ. ಬರೋಬರೀನಾ?’ – ಎಂದು ಕತ್ತು  ಕೊಂಕಿಸಿದಳು. ಅದೂ ಸರಿಯೆ, ಒಳಗೆ ಹೆಂಡತಿಯನ್ನಿಟ್ಟುಕೊಂಡು ಮದುವೆ ವಿಚಾರ ಮಾತಾಡೋದು ಅಷ್ಟು ಸರಿಯಾಗಲಿಕ್ಕಿಲ್ಲ. ‘ಆಗಲಿ’ ಎಂದರು. ತುಟಿಗೆ ಬೆರಳಿಟ್ಟುಕೊಂಡು ಮುದ್ದು ಕೊಡುವಂತೆ ಕಳ್ಳ ಸೂಚನೆ ಕೊಟ್ಟರು. ಅವಳು ‘ಥೂ’ ಎಂದು ನಾಚಿ ಮುಖ ಮುಚ್ಚಿಕೊಂಡಳು. ಈಗಲೂ ಅವಳು ಎಷ್ಟು ಸುಂದರಿಯಾಗಿ ಕಾಣುವಳಲ್ಲ ಎಂದು ಬೆರಗಾಗಿ ನೋಡುತ್ತ ನಿಂತರು. ಅವಳ ಮೈಯ ವಕ್ರತೆಗಳ ಮೇಲೆಲ್ಲ ಕಣ್ಣಾಡಿಸಿದರು. ಬೆನ್ನಿನ ಮೇಲೆ ಕೈಯಿಟ್ಟು ಕೈಯಾಡಿಸುತ್ತ ಕಂಕುಳಕ್ಕೂ ಅದರೊಳಗಿಂದ ಎದೆಗೂ ಬರುತ್ತಿರುವಾಗ ರೋಜಾ ಗೊಳ್ಳನೆ ನಕ್ಕು ಎದ್ದುಬಿಟ್ಟಳು. ತಕ್ಷಣ ಅಲ್ಲೇ ಟೇಬಲ್ ಮೇಲಿದ್ದ ಹಾವಿನ ಡಬ್ಬಿ ತಗೊಂಡು ಅದರೊಳಗಿನ ರಬ್ಬರ್ ಹಾವನ್ನು ಅವರ ಮೇಲೆ ಹಿಡಿದುಕೊಂಡು ಅವಳ ಮೇಲೆ ಎಸೆಯುವಷ್ಟರಲ್ಲಿ ಅವಳು ಹೊರಗೋಡಿ ಬಾಗಿಲು ತೆಗೆದು ಕತ್ತಲೆಯಲ್ಲಿ ಮರೆಯಾದಳು.

ಆ ಕ್ಷಣ ಜೀಕೆಗೆ ನಿರಾಶೆಯಾಯಿತಾದರೂ ಮನಸ್ಸಿನ ಹುರುಪು ಮಾಸಿರಲಿಲ್ಲ. ಒಳಗೆ ಹೋಗಿ ಗಿರಿಜಮ್ಮನ್ನು ನೋಡಿದರು. ಯಾಕೆಂದರೆ ಮದುವೆಯ ವಿಚಾರವನ್ನವರು ತಮ್ಮ ಸಹಜವಾದ ನಗಾರಿ ದನಿಯಲ್ಲೇ ಹೇಳಿದ್ದರಿಂದ ಅವಳೇನಾದರೂ ಕೇಳಿಕೊಂಡಳೇ ಎಂಬ ಅನುಮಾನವಿತ್ತು. ಆಕೆ ಮಲಗಿದ್ದಳು. ನೆಮ್ಮದಿಯ ನಿಟ್ಟುಸಿರುಬಿಟ್ಟು ಬಂದು ಕುರ್ಚಿಯಲ್ಲಿ ಕೂತರು. ಆ ಘಟನೆಯನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡರು. ಊಟ ಬೇಕಿರಲಿಲ್ಲ. ಲೈಟ್ ಆರಿಸಿ ಹಾಸಿಗೆಯಲ್ಲಿ ಬಿದ್ದುಕೊಂಡರು. ನಿದ್ದೆ ಬರಲೊಲ್ಲದು. ಎದ್ದು ಹಾಗೇ ಕತ್ತಲಲ್ಲೇ ಆ ರಬ್ಬರ್ ಹಾವನ್ನು ಕೈಯಾಡಿಸಿ ಹುಡುಕಿ ತಂದರು. ರೋಜಾಳ ಚಿತ್ರವನ್ನು ಮೂಲೆಯಲ್ಲಿ ಕಲ್ಪಿಸಿ ಆ ಚಿತ್ರದ ಮೇಲೆ ಹಾವನ್ನು ನೆಗೆಸಿದರು. ಅವಳು ಗಾಬರಿಗೊಂಡದ್ದನ್ನ, ತಡವರಿಸಿ ಜಿಗಿದಾಡಿದ್ದನ್ನು ಚಿತ್ರಿಸಿಕೊಂಡು ನಕ್ಕರು. ಮತ್ತು ಚಿತ್ರದಲಿಲ್ನ ರೋಜಾಳ ಸೆರಗು ಜಾರಿಸಿ ಅವಳ ಎದೆಯನ್ನು ನೋಡಿದರು. ಅವರ ದೃಷ್ಟಿ ಅಲ್ಲಿರುವುದನ್ನು ಗಮನಿಸಿ ರೋಜಾ ಎದೆ ಮುಚ್ಚಿಕೊಂಡಳು. ಆಕೆ ಅಷ್ಟೊಂದು ಸುಂದರವಾಗಿ ಹೆದರಿದ್ದಕ್ಕೆ ಭಾರೀ ಖುಷಿಪಟ್ಟರು. ಮತ್ತು ಅವಳನ್ನು ಮತ್ತೆ ಮತ್ತೆ ಆ ಭಂಗಿಯಲ್ಲಿ ನೋಡಬೇಕೆನಿಸತು. ಮತ್ತೆ ಕತ್ತಲಲ್ಲಿ ತಡಕಾಡಿ ಹಾವನ್ನು ಹಿಡಿದು ತಂದರು. ಮತ್ತೆ ಮೂಲೆಯ ರೋಜಾಳ ಮೇಲೆಸೆದರು. ಅವಳು ಇನ್ನಷ್ಟು ಗಾಬರಿಯಾದಳು. ಇವರು ಇನ್ನಷ್ಟು ನಕ್ಕರು. ಮತ್ತೆ ಮತ್ತೆ ಅದನ್ನೇ ರಿಪೀಟ್ ಮಾಡಿ ಆಟ ಆಡತೊಡಗಿದರು. ಇವರೊಬ್ಬರೇ ಹೋ ಎಂದು ನಗುವುದು, ಕತ್ತಲಲ್ಲಿ ಈ ಪರಿ ತಡಕಾಡುವುದು, ರಬ್ಬರ್ ಹಾವೆಸೆಯುವುದು ಹ ಹ್ಹಾ ಎನ್ನುವುದು ಇದನ್ನೆಲ್ಲ ಬೇರೆ ಯಾರಾದರೂ, ಯಾರೋ ಏನು ಗಿರಿಜಮ್ಮ ನೋಡಿದ್ದರೂ ಇವರಿಗೆ ಹುಚ್ಚ ಹತ್ತಿತ್ತೆಂದು ಗಾಬರಿಯಾಗುತ್ತಿದ್ದಳು.

ಹೀಗೆ ಮಕ್ಕಳಂತೆ ಆಟ ಆಡಿ ದಣಿದು ಯಾವಾಗ ಮಲಗಿದ್ದರೋ ಮುಂಜಾನೆ ಎಚ್ಚೆತ್ತಾಗ ಆಗಲೇ ಸೂರ್ಯೋದಯವಾಗಿತ್ತು. ಹಾವು ಎದೆಯ ಮೇಲೆ ಹಾಗೆ ಇತ್ತು. ಆದರೆ ಎಸೆದಾಡಿದ್ದರಿಂದ ಅದರ ಕಣ್ಣುಗಳು ಕಳೆದು ಹೋಗಿದ್ದವು. ಹೆಡೆಯ ಕಲರ್ ಮಸುಕಾಗಿತ್ತು. ಮಡದಿಯ ನೆನಪಾಗಿ ಎದ್ದು ಬಂದರು. ಔಷಧಿ ತಗೊಂಡು ಗಿರಿಜಮ್ಮನ ಹತ್ತಿರ ಹೋದರೆ ಆಕೆ ಯಾವಾಗಲೋ ಶಿವನ ಪಾದ ಸೇರಿದ್ದಳು. ಅವಳ ಕೈಯಲ್ಲಿ ರೋಜಾ ಬರೆದ ಪ್ರೇಮಪತ್ರವಿತ್ತು. ನೋಡಿ ಎದೆ ಧಸ್ ಎಂದು ಕುಸಿದರು.