ಮಾರನೇ ದಿನದ ದಿಪತ್ರಿಕೆಯಲ್ಲಿ ಜೀಕೆ ಮಾಸ್ತರರು ರೈಲು ಹಳಿಯಲ್ಲಿ ಸಿಕ್ಕು ಸತ್ತರೆಂಬ ಸುದ್ದಿ ಬಂತು. ಹೆಣ ಜಿಬ್ಬಿಜಿಬ್ಬಿಯಾದ್ದರಿಂದ ಗುರುತು ಸಿಗುತ್ತಿರಲಿಲ್ಲ. ಕೋಟಿನಲ್ಲಿದ್ದ ಅವರ ವಿಳಾಸ, ಸೆಸರಿನ ಡೈರಿ ನೋಡಿ ಅವರೇ ಸತ್ತರೆಂದು ಪೇಪರಿನಲ್ಲಿ ಬಂತು. ಅದನ್ನುನಂಮಿ ಆ ಊರಿನವರು ದೊಡ್ಡ ಸಭೆ ಕರೆದು ಅವರ ಆತ್ಮಕ್ಕೆ ಶಾಂತಿ ಕೋರಿದ್ದಲ್ಲದೆ ಕಾಲೇಜಿಗೆ ಜೀಕೆ ಮಾಸ್ತರರ ಹೆಸರನ್ನಿಟ್ಟರು. ಮತ್ತು ಅವರ ಪ್ರಿಯ ಚೇಲಾ ಎಂಟಿ ಅದರ ಪ್ರಿನ್ಸಿಪಾಲನಾದ.

ರೋಜಾ ಮತ್ತು ಗಿರೆಪ್ಪ ಪ್ರೀತಿಸಿದ್ದರೇನೋ ನಿಜ. ಆದರೆ ಇಬ್ಬರೂ ಬಡವರು ಮತ್ತು ಅನಾಥರು. ಎಷ್ಟು ಅಲೆದಾಡಿದರೂ ಗಿರೆಪ್ಪನಿಗೆ ನೌಕರಿ ಸಿಗಲಿಲ್ಲ. ಅವನು ಇದೆಲ್ಲಾ ಜೀಕೆ ಮಾಸ್ತರರನ್ನು ನೋಯಿಸಿದ್ದರ ಫಲವೆಂದು ಪಶ್ಚಾತ್ತಾಪ ಪಡುತ್ತ ಕೂಳಿಗೆ ಪಿರಿಯಾಗಿ ಅಲೆದಾಡುತ್ತಿದ್ದ. ರೋಜಾ ಹುಟ್ಟಿನಲ್ಲಿ ವೇಶ್ಯೆಯರ ಕುಲದವಳು. ಆದರೂ ಇಬ್ಬರೂ ಮದುವೆಯಾಗಿ ಸಂಸಾರ ಹೂಡಬೇಕೆಂದು ಕನಸು ಕಂಡಿದ್ದರು. ಆದರೆ ಅವಳಿಗೂ ಕೆಲಸ ಸಿಕ್ಕಲಿಲ್ಲವಾದ್ದರಿಂದ ಇದೆಲ್ಲ ಜೀಕೆ ಮಾಸ್ತರರ ಶಾಪವಾಗಿರಬೇಕೆಂದು ಪಶ್ಚಾತ್ತಾಪಪಡುತ್ತ ಕುಲಕಸುಬಿಗೇ ಹಿಂದುರುಗಿದಳು. ಆದರೂ ಆಗಾಗ ಇಬ್ಬರೂ ಕೂಡುತ್ತಿದ್ದರು. ತಮ್ಮ ಕನಸುಗಳನ್ನು ಮೆಲುಕು ಹಾಕುತ್ತಿದ್ದರು.

ಒಂದು ದಿನ ಸಂಜೆ ಇಬ್ಬರೂ ಹುಬ್ಬಳ್ಳಿಯಲ್ಲಿ ಸ್ಟೇಷನ್ ರೋಡಿನ ಗುಂಟ ನಡೆದಿದ್ದರು. ಇಬ್ಬರ ಬಳಿಯೂ ಹಣ ಇರಲಿಲ್ಲ. ಇದ್ದಕ್ಕಿದ್ದಂತೆ ಯಾರೋ ‘ಗಿರೆಪ್ಪ, ಏ ರೋಜಾ’ ಎಂದು ಕೂಗಿದರು. ಇವರು ಹಿಂದುರುಗಿ ನೋಡಿದರು. ಗುರುತಿದ್ದವರು ಯಾರೂ ಕಾಣಿಸಲಿಲ್ಲ. ಮತ್ತೆ ಮುಂದುವರೆಸಿದರು. ಅಷ್ಟರಲ್ಲಿ ಅಸ್ತವ್ಯಸ್ತೆ ಬಟ್ಟೆಯ ಎತ್ತರದ ಆಸಾಮಿಯೊಂದು ಹೊಳೆವ ಕಣ್ಣುಗಳಿಂದ ಇವರನ್ನೇ ನೋಡುತ್ತ, ಇವರ ಕಡೆಗೇ ಧಾವಿಸಿ ಬರುತ್ತಿತ್ತು. ತುಸು ಹೊತ್ತು ಗೊಂದಲದಲ್ಲಿ ನಿಂತರು. ಗುರುತು ಸಿಕ್ಕಂತಾಯಿತು. ಸಿಕ್ಕ ತಕ್ಷಣ ಇಬ್ಬರ ಜಂಘಾಬಲ ಉಡುಗಿ ಮೈ ತುಂಬ ನಡುಕ ಬಂತು. ತಲೆ ಸುತ್ತಿ ರೋಜಾ ಮೂರ್ಛೆ ಬೀಳುತ್ತಿದ್ದಳು. ಅಷ್ಟರಲ್ಲಿ ಆ ವ್ಯಕ್ತಿಯೇ ಬಂದು ಅವಳನ್ನು ಹಿಡಿದುಕೊಂಡ. ಗಿರೆಪ್ಪನಿಗೆ ಭಯ. ಮಾತು ಹೊರಡಲ್ಲೊಲ್ಲದು. ಸುತ್ತ ಜನ ಓಡಾಡುತ್ತಿದ್ದರು ನಿಜ. ಆದರೂ ಎದುರು ಕಾಣುತ್ತಿದ್ದದು ಕನಸೋ ಭ್ರಮೆಯೋ ಹಳವಂಡವೋ – ಈ ಜನ ಸುಳ್ಳೋ ನಿಜವೋ ಇಬ್ಬರೂ ಅಕ್ಷರಶಃ ತತ್ತರಿಸಿಬಿಟ್ಟರು. ಬಂದವರು ‘ಯಾಕ ಮೈಯಾಗ ಹುಷಾರಿಲ್ಲೇನು?’ ಅಂದರು. ಆಗಲೂ ಮಾತಾಡಲೊಲ್ಲರು. ಪಿಳಿಪಿಳಿ ಕಣ್ಣುಬಿಟ್ಟು ಅವರನ್ನೇ ನೋಡುತ್ತಿದ್ದರು. ಆಮೇಲೆ ಅವರೇ ಏನೇನೋ ಮಾತಾಡಿದ ಮೇಲೆ ತುಸು ನಿಜದ ಪ್ರಜ್ಞೆ ಬಂದ ಹಾಗಾಯಿತು. ಇಬ್ಬರ ಮೈಯಿಂದ ಬಿಸಿನೀರಿನ ಬೆವರಿಳಿಯುತ್ತಿತ್ತು.

‘ಸರ, ನೀವು ಸತ್ತಿರಂತ…. ಪೇಪರದಾಗ….’

‘ಹೌಂದಪ ನಿಮ್ಮ ಜೀಕೆ ಮಾಸ್ತರ ಸತ್ತಾನಂತ ಬಂದಿತ್ತು. ಅದs ಹೌಂದಲ್ಲೋ?’

ಇಬ್ಬರೂ ಹೌಂದೆಂದು ತಲೆಯಲ್ಲಾಡಿಸಿದರು. ‘ಎಲ್ಲಾ ಹೇಳತೇನ ಬರ್ರಿ’ ಎಂದು ಅವರನ್ನು ಕರೆದುಕೊಂಡು ವಿರುದ್ಧ ದಿಕ್ಕಿನತ್ತ ನಡೆದರು. ಸತ್ತವನೊಬ್ಬ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾದರೆ ಹ್ಯಾಗಿರುತ್ತದೆ? ಆದರೆ ಅವರ ಕೈಯ್ಯ ಪ್ರತ್ಯಕ್ಷ ಸ್ಪರ್ಶ ಮತ್ತು ಸುತ್ತ ಪ್ರತ್ಯಕ್ಷ ಕಾಣುತ್ತಿದ್ದ ಜನ ಮತ್ತು ಸ್ವಂತ ಪಂಚೇದ್ರಿಯಗಳ ಅನುಭವದಿಂದ ಇದು ಭೂತವಲ್ಲ ಎಂಬ ನಂಬಿಕೆ ನಿಧಾನವಾಗಿ ಬಂದು, ಇವರು ಜೀವಂತ ವ್ಯಕ್ತಿಯೆ ನಮ್ಮ ಜೀಕೆ ಮಾಸ್ತರರೇ ಎಂದು ಖಾತ್ರಿಯಾಗಿ, ಆದರೂ ಅರೆಬರೆ ಹೆದರಿಕೆಯಲ್ಲಿ ಕುರಿಯಂತೆ ಅವರ ಬೆನ್ನುಹತ್ತಿದರು.

ಮತ್ತೆ ಅಶೋಕ ಹೋಟೆಲಿಗೇ ಬಂದರು. ಒಂದು ರೂಮು ತಗೊಂಡು ಒಳಗೆ ಕುಳಿತರು. ಚಹಾ ತರಿಸಿ ಕುಡಿದರು. ಜೀಕೆ ಮಾಸ್ತರ್ ತಾವು ಆ ದಿನ ಇಲ್ಲಿಂದ ಹೊರಟಿದ್ದರಿಂದ ಹಿಡಿದು ಚಳಿಯಲ್ಲಿ ನಡುಗುತ್ತಿದ್ದವನಿಗೆ ಕೋಟು ಕೊಟ್ಟುದನ್ನು ಹೇಳಿ ಅವ ಸತ್ತು ತಾವೇ ಸತ್ತವೆಂಬ ಸುದ್ದಿ ಹ್ಯಾಗೆ ಬಂತೆಂದು ಹೇಳಿದರು. ಗಿರೆಪ್ಪನಿಗೆ ಹೊಯ್ಕಾಯಿತು.

‘ಅಲ್ಲರಿ ಸರ ಆಮೇಲಾದ್ರೂ ನೀವು ಪತ್ರ ಬರೆದು ತಿಳಿಸಬಹುದಿತ್ತಲ್ಲ’ ಎಂದ.

‘ಇಲ್ಲ, ನಾ ಸತ್ತದ್ದs ಒಳ್ಳೇದಾಯ್ತು. ಆ ಜನ್ಮ ನನಗ ಸಾಕಾಗಿತ್ತು. ಹೊಸ ಮನುಷ್ಯ ಆಗೇನಿ. ಆ ಹೆಸರಿಗೆ ಎಷ್ಟೊಂದು ಬಂಧನ ಎಷ್ಟೊಂದ ಕಟ್ಟುನಿಟ್ಟಿದ್ದವು. ಈಗ ನೋಡು ನಾ ಸ್ವತಂತ್ರ. ಎಲ್ಲಿ ಬೇಕಲ್ಲಿ ಅಡ್ಡಾಡತೀನಿ, ನೋಡತೀನಿ, ಹುಡಕತೀನಿ…. ಯಾರಿಗೂ ನನ್ನ ಗುರುತಿಲ್ಲ, ಹಿಂದಿನ ಹೆಸರಿಲ್ಲ. ಆದರ ನಿಮ್ಮಿಬ್ಬರ ಬಗ್ಗೆ ತುಸು ಜವಾಬ್ದಾರಿ ಇತ್ತು. ಅದಕ್ಕs ನಿಮ್ಮನ್ನ ಹುಡುಕುತ್ತಿದ್ದೆ. ಆ ದಿನ ನೀವಿಬ್ಬರೂ ಅತ್ತಿರಿ. ಕರೆದಿರಿ, ಕಾಲ ಹಿಡಿದಿರಿ, ಮಕ್ಕಳಂತ ತಿಳಿದ ತಪ್ಪ ಮಾಫಿ ಮಾಡಲಿ ಅಂತ ಹೇಳದ್ರಿ. ಆದರ ಜೀಕೆ ಮಾಸ್ತರಗ ಅದ್ಯಾವುದೂ ಕಾಣಿಸಲಿಲ್ಲ. ಕೇಳಿಸಲಿಲ್ಲ. ಖರೆ ಹೇಳಬೇಕೆಂದರ ಆ ದಿನ ನಿಮಗ ಮನಸ್ಸಿನಾಗ ಬಹಳ ಶಾಪ ಹಾಕಿದೆ. ಆಮ್ಯಾಲ ಎಲ್ಲೆಲ್ಲೋ ಅಡ್ಡಾಡಿದೆ. ತಿರುಗಿದೆ. ಮನಸ್ಸು ಶಾಂತ ಆಗಲಿಲ್ಲ. ಏನೋ ಹುಡುಕುತ್ತಿದ್ದೆ. ಏನಂತ ಗೊತ್ತಾಗಿರಲೇ ಇಲ್ಲ. ಶಿವನಿಂಗನ ದ್ಯಾನ ಮಾಡಿದೆ. ಒಂದು ಮನಸ್ಸು ಬರಲೇ ಇಲ್ಲ. ಒಂದು ದಿನ ಯಾವುದೋ ಕಾಡಿನಾಗ ಬಿದ್ದುಕೊಂಡಿದ್ದೆ. ಕನಸಿನಾಗ ಒಬ್ಬ ಎಳೀ ಹುಡುಗ ಕಾಣಿಸಿಕೊಂಡ. ಕರ್ರಗಿದ್ದ. ನಿಲೀಕಣ್ಣು, ದಾಳಂಬರಿ ಬೀಜಧಾಂಗ ಹಲ್ಲ, ದನಾ ಕಾಯುವರ‍್ಹಾಂಗ ಕೈಯಾಗ ಕೋಲ ಹಿಡಿದಿದ್ದ. ಕತ್ತಿಗೆ ಲಿಂಗ ಕಟ್ಟಿದ್ದ ಸೊಂಟದಾಗ ಒಂದು ಮಿಡಿ ನಾಗರಹಾವಿತ್ತು. ನಿಮ್ಮ ಕ್ಲಾಸಿನಾಗ ಆಟ ಆಡಿದ್ದಿರಲ್ಲ, ಅದಲ್ಲ, ಖರೆ ಖರೆ ಹಾವು! ಹುಡುಗ ಭಲೆ ಹುರುಪಿನವ. ಹಾಡಿಕೊಂಡ. ನನ್ನ ಮೈಮ್ಯಾಲೆ ಥೈ ಥೈ ನವಿಲಿನ್ಹಾಂಗ ಕುಣೀತಿದ್ದ. ಕುಣೀತ ಕೆಳಗ ಜಿಗಿದ. “ಸಿಕ್ಕಿಯೋ ಶಿವ!’’ ಅಂತ ಅವನ ಕುಣಿಯೋ ಕಲಾ ಗಟ್ಟಿಯಾಗ ಹಿಡಕೊಂಡುಬಿಟ್ಟೆ. ಹುಡುಗ ಕುಲುಕುಲು ನಗ್ತಾ ಕತ್ತಲಾಗ ಕರಗಿಬಿಟ್ಟ! ನಿಮಗಿಬ್ಬರಿಗೂ ದೇವರು ದಿಂಡಿರೊಳಗ ನಂಬಿಗಿ ಐತೇನು?’ ಇಬ್ಬರು ಇಲ್ಲವೆಂಬಂತೆ ಕತ್ತು ಹಾಕಿದರು.

‘ಇರಾಕ ಬೇಕಂತಿಲ್ಲ. ಆದರ ನನಗೆ ಆಗೀಗ ಅಷ್ಟೋ ಇಷ್ಟೋ ನಂಬಿಕೆ ಬರತೈತಿ. ಎಚ್ಚರಾಯಿತಲ್ಲ. ಆಮ್ಯಾಲ ನೆನಪು ಮಾಡಿಕೊಂಡೆ. ಈ ಹುಡಗನ್ನ ಎಲ್ಲೋ ನೋಡಿಧಾಂಗೈತಲ್ಲ. ನನ್ನ ಸತ್ತ ಮಗ ಇರಬೇಕೇನೊ? ಅಲ್ಲ, ಅಲ್ಲ. ಇನ್ಯಾರಿದ್ದೀತು? ಭಾಳ ಪ್ರಯತ್ನ ಮಾಡಿದಾಗ ಗುರುತಾ ಸಿಕ್ತು.’

– ಎಂದು ಹೇಳಿ ಜೀಕೆ ತುಸು ಸುಮ್ಮನಾದರು. ಈಗವರ ಕಣ್ಣುಗಳಲ್ಲಿ ಮೊದಲಿನ ಚಂಚಲತೆ ಇರಲಿಲ್ಲ. ಶಾಂತವಾದ ಸ್ನೇಹಮಯವಾದ ಪ್ರಕಾಶದಿಂದ ಅವು ಹೊಳೆಯುತ್ತಿದ್ದವು. ಯಾವುದೋ ಒಂದು ದೊಡ್ಡ ಗುಟ್ಟನ್ನು ಅತಿ ಪ್ರಯಾಸದಿಂದ ಕಂಡ ತೃಪ್ತಿ ಮತ್ತು ಇನ್ನೂ ಕಾಣಬೇಕೆಂಬ ಅತೃಪ್ತಿ ಅವುಗಳಲ್ಲಿತ್ತು. ಜೀಕೆ ಇಬ್ಬರ ಬೆನ್ನುಗಳ ಮೇಲೆ ಭಾವಪೂರ್ಣವಾಗಿ ಕೈಯಾಡಿಸಿ ತೃಪ್ತಿಯಾದ ಮೇಲೆ,

‘ಆ ಹುಡುಗ ಹೆಂಗಿದ್ದ ಅಂದರೆ ಥೇಟ್ ನಿನ್ಹಾಂಗ ಇದ್ದ!’

– ಎಂದು ಗಿರೆಪ್ಪನ ಕಡೆ ನೋಡಿದರು. ಅವರ ಮಾತುಗಳಲ್ಲಿ ಮುಂಚೆ ಇಲ್ಲದ ವಿಚಿತ್ರ ಮಾಂತ್ರಿಕ ಶಕ್ತಿಯೊಂದು ಇದ್ದು ಅದೇನೆಂದು ತಿಳಿಯಲಾರದಷ್ಟು ಗಿರೆಪ್ಪ ಇವರಿಂದ ಆಕರ್ಷಿತನಾಗಿದ್ದ. ಕನಸಿನ ಹುಡುಗ ತನ್ನಂತಿದ್ದ ಎಂದು ಕೇಳಿದೊಡನೆ ಸಂಕೋಚವಾಯಿತು. ತನಗೇ ಗೊತ್ತಿಲ್ಲದೆ ವಿನಯದಿಂದ ಕೈ ಮುಗಿದ.

‘ನಿನಗ ಗೊತ್ತಿಲ್ಲಪ್ಪ, ಮನುಷ್ಯನೊಳಗ ಅಗಾಧ ಶಕ್ತಿ ಐತಿ. ನಾವು ನಮನಮಗ ಅನುಕೂಲವಾದ ಸಣ್ಣ ಭಾವನೆ ಹಿಡಕೊಂಡು ಅದರಾಗ ಉರಳಾಡತೀವಿ. ನೋಡು ರೋಜಾನ ಭೇಟಿ ಆಗೋತನಕ ಪ್ರೀತಿ ಅಂಬೋದs ನನಗೆ ಗೊತ್ತಿರಲಿಲ್ಲ. ನಿನ್ನ ನೋಡೋ ಮುಂಚೆ ಮತ್ಸರ ಗೊತ್ತಿರಲಿಲ್ಲ. ಅಥವಾ ಅದೇನೋ ಭಾವನೆಗಳು ಅಂತ ಹೇಳಿದೆನಲ್ಲ ಅವನ್ನಾದರೂ ನಾನು ಬರೋಬರಿ ತಿಳಕೊಂಡಿದ್ದೀನೋ ಇಲ್ಲೋ ಗೊತ್ತಿಲ್ಲ. ಅಥವಾ ನನ್ನ ಹಸಿ ಭಾವನೆಗಳನ್ನ ದೇವರೊಬ್ಬನೇ ಬಲ್ಲ. ಅದರ ನನಗೆ ಆಗೇತಿ, ನಿಮ್ಮಲ್ಲರ ದಯದಿಂದ ನಾ ಇನ್ನೊಂದ ಜನ್ಮ ತಾಳೇನಿ. ನನಗೀಗ ಏನು ಆಸೆ ಗೊತ್ತ? ಮಕ್ಕಳಾಸೆ!’

– ಎಂದು ಹೇಳಿದೊಡನೆ ಫಳಕ್ಕನೆ ಅವರ ಕಣ್ಣಿಂದ ಆನಂದದ ಕಣಿರು ಉದುರಿದವು. ಆನಂದದ ತೀವ್ರ ಅನುಭವದಲ್ಲಿ ಅವರೀಗ ನಡುಗುತ್ತಿದ್ದರು.

‘ಯಾವ ಎಳೆಯ ಮಕ್ಕಳನ್ನು ನೋಡಿದರೂ ತಬ್ಬಿಕೊಳ್ಳೋಣ ಅಂತ ಅನಿಸತೈತಿ. ಈ ಸಂಬಂಧ ಅಂತೀವಲ್ಲ ಇದಾರಾಗೇನೋ ದೊಡ್ಡದೈತಪ್ಪ. ನನಗದು ಖಾತ್ರಿ ಆಗೇತಿ ಖರೆ. ಆದರೆ ಹೇಳಲಿಕ್ಕೆ ಬರಲೊಲಲ್ಲದು. ಆ ದೊಡ್ಡದನ್ನ ಕಾಣ್ಬೇಕು. ಅದರ ಗಣಿತ ಬೇರೆ. ಇಲ್ಲದಿದ್ದರ ನಾ ಯಾರು? ರೋಜಾ ಯಾರು? ನೀ ಯಾರು?… ಅದೇನೋ ದೊಡ್ಡದೈತಿ. ನಾ ಬಿಡು ಪಾಪಿ, ನನಗದು ಕಾಣಿಸೋದಿಲ್ಲ. ಆದರೆ ನನಗ ಅದನ್ನ ಕಾಣಬೇಕಂತ ಹಟ ಐತಿ. ಹಿಂದಿನ ಹಿರೇರು ಆ ದೊಡ್ಡದಕ್ಕ ಶಿವನಿಂಗಸ್ವಾಮಿ ಅಂದರೇನೋ! – ಅದಕ್ಕ ಅನಾಥ ಮಕ್ಕಳ ಸೇವಾ ಮಾಡಾಕ ಒಂದ ಅವಕಾಶ ಸಿಕ್ಕೈತಿ. ಒಪ್ಪಿಕೊಂಡೆನಿ’ ಎಂದು ಹೇಳುತ್ತ ಮಾತು ಅತಿಯಾಯಿತೆಂಬಂತೆ ಬೂಟಾಟಿಕೆಯೂ ಯಾಕಾಗಿರಬಾರದೆಂದು ಅನ್ನಿಸಿ ನಮ್ರರಾದರು. ‘ಬೋರ್ ಮಾಡಿದೆನೇನು?’ ಎಂದರು.

‘ಇಲ್ಲ ಹೇಳ್ರಿ ಸರ…’ ಎಂದಳು ರೋಜಾ. ಅವಳಾಗಲೇ ಕಣ್ಣೀರು ಮಿಡಿಯುತ್ತಿದ್ದಳು.

‘ಏನಿಲ್ಲ ಬಿಡು. ಅಷ್ಟು ದೊಡ್ಡ ಮಾತಾಡುವಷ್ಟು ದೊಡ್ಡ ಮನುಷ್ಯ ನಾನಲ್ಲ. ಬಾಯಿ ಚಪಲ. ಅದಿರಲಿ. ಅದ್ಯಾಕೆ ನೀವು ಈ ಥರ ಇದ್ದೀರಿ?’ ಎಂದು ಕೇಳಿದರು.

– ಗಿರೆಪ್ಪ ತನ್ನ ಕೆಲಸವಿಲ್ಲದ ಸ್ಥಿತಿ, ರೋಜಾ ತಾನು ಸೂಳೆಯಾಗಬೇಕಾದ ಸ್ಥಿತಿ ತೋಡಿಕೊಂಡರು. ಅದನ್ನೆಲ್ಲ ಕೇಳುತ್ತ ಏನೇನೋ ಲೆಕ್ಕ ಹಾಕುತ್ತ ಜೀಕೆ ಮೌನ ತಳೆದರು.

ಎರಡು ದಿನ ಇಬ್ಬರನ್ನೂ ತಮ್ಮಲ್ಲಿಯೇ ಉಳಿಸಿಕೊಂಡರು. ಮಕ್ಕಳನ್ನು ಕಳೆದುಕೊಂಡ ತಂದೆ ಅವರು ಪುನಃ ಸಿಕ್ಕಾಗ ಸಂತೋಪಡುವಂತೆ ಆನಂದವಾಗಿದ್ದರು. ಅವರಿಬ್ಬರೂ ಈಗಲೂ ಮದುವೆಯಾಗಲೂ ಸಿದ್ಧರಿದ್ದುದನ್ನು ತಿಳಿದು ಸಂತೋಷಪಟ್ಟರು. ಕೊನೆಗೆ ಹೇಳಿದರು.

‘ಈಗ ನಿಮಗೆ ನನ್ನಿಂದ ಸ್ವಲ್ಪ ಸಹಾಯ ಆಗಬಹುದು ಅಂತ ಅನಸತೈತಿ. ನೋಡ ಗಿರೆಪ್ಪ ಮುನಿಸಿಪಾಲಿಟಿ ಛೇರ್ಮನ್ನರಿಗೆ ಹಳೆಯ ತಾರೀಖು ಹಾಕಿ ಒಂದು ಪತ್ರ ಕೊಡತೀನಿ. ಅವರು ನನ್ನ ಹಳೆ ಶಿಷ್ಯರು. ನನ್ನ ಮಾತನ್ನು ತೆಗೆದು ಹಾಕಲಾರರು. ನನ್ನ ಪತ್ರ ಅವರಿಗೆ ತೋರಿಸಿದರ ನಿನಗೊಂದು ನೌಕರಿ ಕೊಟ್ಟೇ ಕೊಡತಾರ. ಇಬ್ಬರೂ ಅಲ್ಲೇ ಇರಬಹುದಲ್ಲ.’

ಇಬ್ಬರಿಗೂ ಸರಿ ಎನ್ನಿಸಿತು.

ಮಾರನೇ ದಿನ ಅವರು ಹೋಗುವುದಕ್ಕೆ ಸಿದ್ಧರಾಗಿ ಸ್ಟೇಷನ್ನಿಗೆ ಬಂದರು. ಜೀಕೆ ಮಾಸ್ತರ ಅಥವಾ ಅವರೀಗ ಯಾರೊ… ಅಲ್ಲಿಗೂ ಹೋಗಿದ್ದರು. ಇನ್ನೇನು ಟ್ರೇನು ಬಿಡುತ್ತದೆ ಎಂದಾಗ ತಮ್ಮ ಬಳಿ ಉಳಿದಿದ್ದ ಹಣವನ್ನೂ ಒಂದು ಕವರನ್ನೂ ಕೊಟ್ಟರು. ಕವರಿನಲ್ಲಿ ತಮ್ಮ ಮನೆಯನ್ನು ಗಿರೆಪ್ಪ ಮತ್ತು ರೋಜಾಳ ಹೆಸರಿಗೆ ಮಾಡಿದ ಉಯಿಲಿತ್ತು. ಟ್ರೇನು ಬಿಟ್ಟೊಡನೆ ಎರಡೂ ಕೈ ಎತ್ತಿ ‘ಆಗಲಿ ಮಕ್ಕಳೆ ನಿಮ್ಮ ಪವಿತ್ರವಾದ ಆಸೆಗಳು ಏನಿವೆಯೋ ಅವನ್ನೆಲ್ಲ ಶಿವಲಿಂಗಸ್ವಾಮಿ ಈಡೇರಿಸಲಿ’ ಎಂದು ಹರಿಸಿ ಅದೇನೋ ದೊಡ್ಡದೆಂದರಲ್ಲ, ಅದನ್ನು ಹುಡುಕಿಕೊಂಡು ಕತ್ತಲಲ್ಲಿ ಮರೆಯಾದರು.