ಜೀಕೆ ಮಾಸ್ತರ ಮನೆಗೆ ಬಂದಾಗ ಮಡದಿ ಗಿರಿಜಮ್ಮ ಉಪ್ಪಿಟ್ಟು ಮಾಡಿ ಕಾಯುತ್ತಿದ್ದಳು. ಎಂದಿನಂತೆ ಮೌನವಾಗಿಯೇ ಕೋಟು ಕಳಚಿ ಮುಖ ತೊಳೆದುಕೊಂಡು ಬಂದು ಕೂತರು. ಗಂಡನಿಗೆ ಕೊಟ್ಟು ತಾನೂ ನೀಡಿಕೊಂಡು ಇವರ ಎದುರಿನಲ್ಲೇ ಕೂತಳು.

‘ಏನೋ ಡಬ್ಬಿ ತಂದೀರಲ್ಲ. ಚಾಕಲೇಟೇನು?’ ಎಂದಳು.

‘ಅಲ್ಲ.’

ಗಿರಿಜಮ್ಮ ಮತ್ತೆ ಮಾತನ್ನು ಮುಂದುವರಿಸಲಿಲ್ಲ.

‘ಏನೈತಿ, ತಗದ ನೀನ ನೋಡು.’

– ಎಂದರು. ಮತ್ತೆ ತಾವೇ. ಗಿರಿಜಮ್ಮ ಹೋಗಿ ಡಬ್ಬಿ ತಂದಳು. ಇನ್ನೇನು ಅದರ ಮುಚ್ಚಳ ತೆಗೆಯಬೇಕೆನ್ನುವಷ್ಟರಲ್ಲಿ ಜೀಕೆ ಹೇಳಿದರು.

‘ಹುಷಾರ್, ಅದರಾಗೊಂದು ಹಾವೈತಿ.’

ಗಿರಿಜಮ್ಮ ನಂಬಲಿಲ್ಲ. ಮುಚ್ಚಳ ತೆಗೆದಳು. ತೆಗೆದುದೇ ತಡ ಹೆಡೆ ತೆಗೆದು ರಬ್ಬರ್ ಹಾವು ಟಣ್ಣನೆ ಹಾರಿ ಟೇಬಲ್ ಮೇಲೆ ಬಿದ್ದಿತು. ಗಿರಿಜಮ್ಮ ಹೌಹಾರಿ ಹಿಂದೆ ವಾಲಿ ‘ಅವ್ವಯ್ಯ’ ಎಂದು ಕಿರಿಚಿದಳು. ಜೀಕೆ ಹ ಹ್ಹ ಹ್ಹಾ ಎಂದು ನಗತೊಡಗಿದರು. ಬಿದ್ದ ಹಾವು ಟಾಪಲಾಗದೆ ಬ್ಯಾಲೆನ್ಸ್ ಸರಿದೂಗಿಸಿ ಹೆಡೆಯನ್ನು ಎಡಬಲ ಆಡತೊಡಗಿತು. ಬೇರೆ ಸಂದರ್ಭದಲ್ಲಾಗಿದ್ದರೆ ಗಂಡ ಈ ರೀತಿ ನಗೋದನ್ನು ಗಿರಜಮ್ಮ ಮನಸಾರೆ ಮೆಚ್ಚುತ್ತಿದ್ದಳು. ಆದರೀಗ ಎದುರಿಗೆ ಹಾವು ಆಡತೊಡಗಿತ್ತು. ಜೀಕೆ ನಗುತ್ತಿದ್ದುದರಿಂದ ಇದು ನಿಜವಾದ ಹಾವಾಗಿರಲಿಕ್ಕಿಲ್ಲವೆಂದು ಈ ಪರಿ ಮೋಸ ಮಾಡಿದ್ದಕ್ಕೆ ಗಂಡನೆ ಮೇಲೆ ಸಿಟ್ಟು ಮಾಡಿದಳು. ಈ ದೃಶ್ಯ ಕ್ಲಾಸಿನಲ್ಲಿ ಹ್ಯಾಗೆ ನಡೆದಿರಬಹುದೆಂದು ಜೀಕೆ ಊಹಿಸಿದರು. ಹುಡುಗನೊಬ್ಬ ಹುಡುಗಿಯರ ಗುಂಪಿನಲ್ಲಿ ಈ ಹಾವನ್ನು ನೆಗೆಯಬಿಟ್ಟನೆನ್ನುವ, ಹುಡುಗಿಯರು ಕಿರಿಚುತ್ತಾರೆ. ಹಿಂದೆ ಹಾರುತ್ತಾರೆ. ಈ ಸಲ ರೋಜಾಳ ಮೇಲೆ ಹಾರಿತೆನ್ನುವ! ಅವಳೂ ಕಿರಿಚಿ ಹಾರುವುದನ್ನು ಕಲ್ಪಿಸಿಕೊಂಡರು ಸೆರಗು ಸಾರಿ ಉಡುಪು ಅಸ್ತವ್ಯವಸ್ತವಾಗಿ ಅವಳ ಹರೆಯದ ಗುಟ್ಟಿನ ಉಬ್ಬುಗಳು ಎದ್ದು ಕಾಣುತ್ತವೆ. ಈ ಅಪರೂಪ ದೃಶ್ಯದಿಂದ ಹುಡುಗರು ಹುರುಪುಗೊಂಡು ಮತ್ತೆ ಮತ್ತೆ ಅವಳ ಮೇಲೆ ಹಾವನ್ನು ಹರಿಯಬಿಡುತ್ತಾರೆ. ಮತ್ತೆ ಮತ್ತೆ ಅವಳ ಅಸ್ಯವವ್ಯಸ್ತವಾಗಿ ಆದರೆ ಒಂದು ಥರದ ಸ್ಟೈಲಿನಲ್ಲಿ ಕಿರಿಚುತ್ತಾಳೆ. ಈ ನೆಪದಲ್ಲಿ ತನ್ನ ಮೈಮಾಟವನ್ನು ತೋರಿಸಿಕೊಳ್ಳುವುದು ಅವಳಿಗೂ ಇಷ್ಟವೇ. ಈ ಹಾವು ರಬ್ಬರಿನದೆಂದು ಅಪಾಯಕಾರಿ ಅಲ್ಲವೆಂದು ತಿಳಿದೂ ಗಾಬರಿಯನ್ನು ಅಭಿನಯಿಸುತ್ತಾಳೆ. ಕೈಯೆತ್ತಿ ಹಿಂದೆ ವಾಲಿ ಎದೆ ತೋರಿಸುತ್ತಾಳೆ. ನರ್ತನದ ಭಂಗಿಯಲ್ಲಿ ನಿಂತು ಹಿಂದೆ ಸರಿದು ಸೊಂಟದ ವಕ್ರಗಳನ್ನು, ನಿತಂಬದ ದುಂಡು ಸೊಕ್ಕನ್ನು ತೋರಿಸುತ್ತಾಳೆ. ಹುಡುಗರ ಹೃದಯಗಳಿಗೆ ಬೆಂಕಿಯಿಡುತ್ತಾಳೆ.

ವಾಸ್ತವಕ್ಕೆ ಬಂದಾಗ ಗಿರಿಜಮ್ಮ ಆ ಹಾವನ್ನು ಕೈಯಲ್ಲಿ ಹಿಡಿದು ನೋಡುತ್ತಿದ್ದಳು. ಪ್ರಥಮ ಬಾರಿ ಎಂಬಂತೆ ಜೀಕೆ ಮಡದಿಯನ್ನು ನೋಡಿದರು; ಗಿರಿಜಮ್ಮ ಆಗಲೇ ಮುದುಕಿಯಾಗಿದ್ದಳು. ತಲೆತುಂಬ ಬಿಳಿಕೂದಲು, ಹೆಬ್ಬೆರಳು ಗಾತ್ರ ಬೈತಲೆ – ಮಕ್ಕಳಿಲ್ಲದ ಚಿಂತೆ ಮುಖದಲ್ಲಿ ಬಗೆಬಗೆಯ ಗೆರೆಗಳಾಗಿ ಮೂಡಿತ್ತು. ಯಾವುದೇ ಆಶೋತ್ತರಗಳಿಲ್ಲದ ಕಣ್ಣು ಕಳೆಯಿಲ್ಲದೆ, ಸಾಲದ್ದಕ್ಕೆ ಸುತ್ತು ಗುಳಿಬಿದ್ದುದರಿಂದ ತಳದಲ್ಲಿ ನೀರಿಲ್ಲದ ಆಳ ಬಾವಿಯನ್ನು ಜ್ಞಾಪಿಸುತ್ತಿದ್ದವು. ನೋಡಿದವರ ಮೇಲೆ ಯಾವುದೇ ಪರಿಣಾಮ ಬೀರಲಾರದ ಅಥವಾ ಬಹಳ ಪರಿಚಯವಾದರೆ ಮಾತ್ರ ನೆನಪಿನಲ್ಲಿಡಬಹುದಾದ ವ್ಯಕ್ತಿತ್ವ ಅವಳದು, ಅದು ಸರಿ, ಅದ್ಯಾಕೆ ಎಂದಿಲ್ಲದ ಈ ದಿನ ತಾನು ಈ ಪರಿ ಯೋಚನೆ ಮಾಡುತ್ತಿದೆನೆ ಎಂದುಕೊಂಡು ಜೀಕೆ ಆಶ್ಚರ್ಯಪಟ್ಟರು. ಸಲ್ಲದೆಂದೂ ಅಂದುಕೊಂಡರು.

ಮಾರನೇ ದಿನ ಮಧ್ಯಾಹ್ನದವರೆಗೆ ಜೀಕೆ ನಾರ್ಮಲ್ಲಾಗೇ ಇದ್ದರು. ಮಧ್ಯಾಹ್ನ ಆ ಹುಡುಗಿ, ಅದೇ ರೋಜಾ ಎಂಬವಳು ಬಂದು ತನಗೆ ತಿಳಿಯದ ಪಠ್ಯದ ಭಾಗಗಳನ್ನು ವಿವರಿಸಬೇಕೆಂದು ಕೇಳಿದ್ದೇ ಆಯಿತು. ಜೀಕೆ ಮಾಸ್ತರರು ಹೌಹಾರಿ ಮೈಮರೆತು ಬಿಟ್ಟರು. ಅವಳು ಕೇಳಿದ್ದು ವಿಕ್ರಮೋರ್ವಶೀಯದ ಯಾವುದೋ ಒಂದು ಸಾಮಾನ್ಯ ಪದ್ಯದ ಒಂದು ಸಾಲಿನ ಅರ್ಥವನ್ನ. ಅವನ್ನಿವರು ಒಂದು ನಿಮಿಷದಲ್ಲಿ ಹೇಳಿಬಿಡಬಹುದಿತ್ತು. ಅದು ಬಿಟ್ಟು ಆ ಸಾಲಿನ ನೆಪದಲ್ಲಿ ತಮಗೆ ಅಸಹಜವಾದ ಎತ್ತರದ ದನಿಯಲ್ಲಿ ಕಾಳಿದಾಸನ ವಂಶಾವಳಿಯನ್ನ ವರದಿ ಇಡೀ ಸಂಸ್ಕೃತ ಸಾಹಿತ್ಯದ ತಳಬುಡವನ್ನೆಲ್ಲ ಸೀಸುತ್ತ ನಿರರ್ಗಳ ಭಾಷಣ ಮಾಡತೊಡಗಿದರು. ಅಲ್ಲಿರುವೆಲ್ಲ ಪವಿತ್ರವಾದ ಜ್ಞಾನವನ್ನು ಅವಳಿಗೆ ತಿಳಿಸಲೇಬೇಕೆಂದು, ಅವಳು ತಿಳಿಯಲೇಬೇಕೆಂದು ಮತ್ತು ಅವಳು ಮಾತ್ರ ತಿಳಿಯಬಲ್ಲಳೆಂದು ಮತ್ತು ಈ ಜ್ಞಾನದಾನದ ಪವಿತ್ರ ಮುಹೂರ್ತ ಇನ್ನೊಮ್ಮೆ ಬರಲಾರದೆಂದು – ಅವರು ತಿಳಿದಂತಿತ್ತು. ಮಾತಿಗೊಮ್ಮೆ ಹಸ್ತಾಭಿನಯ ಮಾಡುತ್ತಿದ್ದರು. ಮುದುಕ ಭಾರೀ ಕೆಟ್ಟ ನಟ. ವಿಚಿತ್ರವಾಗಿ ಮತ್ತು ಅನಿರೀಕ್ಷಿತವಾಗಿ ಕಣ್ಣುಗಳನ್ನು ಮುಚ್ಚಿಬಿಚ್ಚಿ, ವಿಚಾರಗಳನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಮಾತಾಡುವ ಮಾತುಗಳಿಗೂ ಅಭಿನಯಕ್ಕೂ ತಾಳೆಯೇ ಆಗುತ್ತಿರಲಿಲ್ಲ.

ಛೇಬರಿನ ಹೊರಗಿದ್ದವರಿಗೆ ಪ್ರಿನ್ಸಿಪಾಲರು ಯಾರ ಮೇಲೋ ರೇಗಿ ಬೈಯುತ್ತಿದ್ದರೆಂದೇ ಅನ್ನಿಸುತ್ತಿತ್ತು. ಸಿಪಾಯಿ ಸಿಂಗಪ್ಪ ಒಂದೆರಡು ಬಾರಿ ಇಣುಕಿ ನೋಡಿ ರೇಗುತ್ತಿಲ್ಲವೆಂದು ಖಾತ್ರಿ ಮಾಡಿಕೊಂಡು ಹೊರಗೆ ಕೂತ. ಆದರೂ ಅವನಿಗೆ ಆಶ್ಚರ್ಯವಾಗಿತ್ತು. ಯಾಕೆಂದರೆ ಜೀಕೆ ಹೀಗೆಂದೂ ಛೇಂಬರಿನಲ್ಲಿ ಒಬ್ಬರ ಅನುಮಾನಗಳನ್ನು ಬಗೆಹರಿಸದವರಲ್ಲ. ಅವರನ್ನು ಕೇಳುವ ಧೈರ್ಯವಾದರೂ ಯಾರಿಗಿತ್ತು? ರೋಜಾ ಮಾತ್ರ ಜೀಕೆ ಮಾಸ್ತರರ ಒಂದೊಂದು ಮಾತಿಗೂ ‘ಅಬ್ಬ ಎಂಥ ಅಪರೂಪದ ಜ್ಞಾನವಿದು!’ ಎಂಬಂತೆ ಆಶ್ಚರ್ಯವನ್ನೂ ಅದು ತನಗೆ ಮಾತ್ರ ಸಿಕ್ಕಿತಲ್ಲ ಎಂಬ ಆನಂದವನ್ನೂ ಅಭಿನಯಿಸುತ್ತಿದ್ದಳು. ಕಿವಿಯಿಂದ ಜ್ಞಾನವನ್ನೂ ಅಗಲವಾಗಿ ತೆರೆದ ಕಣ್ಣುಗಳಿಂದ ಅವರ ಭಾವಭಂಗಿಗಳ ಅಪರೂಪ ರೂಪವನ್ನೂ ಈಂಟುತ್ತಿದ್ದಳು. ಜೀಕೆಯವರ ಆರ್ಭಟ ಕೇಳಿಸಿಕೊಂಡ ಒಬ್ಬಿಬ್ಬರು ಅಧ್ಯಾಪಕರು ಏನೋ ಅನಾಹುತವಾಗಿದೆಯೆಂದು ಸ್ಟಾಫ್ ರೂಮಿನಿಂದ ಜೀಕೆ ಛೇಂಬರಿನತ್ತ ಧಾವಿಸಿ ಬಂದು ಸಿಂಗಪ್ಪನಿಂದ ವಿಷಯ ತಿಳಿದು ಆಶ್ಚರ್ಯಭರಿತರಾಗಿ ಹೋದರು. ಮುಂದೆ ಗಂಟೆಯಾದಾಗಲೇ ಜೀಕೆ ಭೂಲೋಕಕ್ಕೆ ಬಂದರು. ರೋಜಾ ವಿನಯದಿಂದ ಕೃತಜ್ಞತೆ ಹೇಳಿ ಹೊರಟಾಗ ‘ಮುಂದೆ ಏನಾರ ತಿಳೀದಿದ್ದರ ಬರ‍್ತಾ ಇರು’ ಎಂದು ಹೇಳುವುದನ್ನು ಮರೆಯಲಿಲ್ಲ.

ತಮಗೇ ಗೊತ್ತಿಲ್ಲದಂತೆ ಜೀಕೆ ಆ ದಿನ ಭರ್ಜರಿ ಮೂಡಿನಲ್ಲಿದ್ದರು. ಸಿಪಾಯಿ ಸಿಂಗಪ್ಪನಿಂದ ಚಹಾ ತರಿಸಿ ಅವನಿಗೂ ಕುಡಿಯ ಹೇಳಿದ್ದಲ್ಲದೆ ಅವನ ಯೋಗಕ್ಷೇವನ್ನೂ ವಿಚಾರಿಸಿದರು. ಎಂಟಿಯಂಥ ಎಂಟಿಯ ಬಗೆಗೂ ಸಹಾನುಭೂತಿ ತೋರಿದ್ದಲ್ಲದೆ ‘ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳನ್ನ ತಪ್ಪದೇ ಓದಿದರೆ ನಿನ್ನ ಕನ್ನಡ ಸುಧಾರಿಸುತ್ತದೆ’ ಎಂದು ಸಲಹೆ ಕೂಡ ಮಾಡಿದರು. ಏನಾದರೂ ಕೆಲಸವಿದ್ದಾಗ ಅಧ್ಯಾಪಕರನ್ನು ತಮ್ಮ ಛೇಂಬರಿಗೇ ಕರೆಸುವುದು ರೂಢಿ. ಆದರೆ ಆ ದಿನ ತಾವೇ ಸ್ಟಾಫ್ ರೂಮಿಗೆ ಹೋಗಿ ದಶಮಾನೋತ್ಸವದ ತಯಾರಿಯ ಬಗ್ಗೆ ಚರ್ಚಿಸಿದರು.