ಪ್ರೇಮಕ್ಕೆ ದಿವ್ಯಶಕ್ತಿಯನ್ನಿತ್ತು ಅದನ್ನು ಮಾನವ ಹೃದಯದಲ್ಲಿಟ್ಟ ಶಿವಲಿಂಗ ದೇವರ ಮಹಿಮೆಗೆ ಶರಣು ಹೇಳೋಣ. ಒಣ ನೆಲದಲ್ಲಿ ನೀರು ಚಿಮ್ಮೋದನ್ನು, ಉಸುಕಿನಲ್ಲಿ ಹುಸಿರಾಡೋದನ್ನು, ಕಲ್ಲು ಕರಗುವದನ್ನು ನಾವು ಪವಾಡ ಎನ್ನುತ್ತೇವೆ. ಜೀಕೆ ಮಾಸ್ತರರ ಹೃದಯದಲ್ಲಿ ಅದು ಅಂಥ ವಯಸ್ಸಾದ ಹೃದಯದಲ್ಲಿ ಪ್ರೇಮ ಪಲ್ಲವಿಸಿದ್ದನ್ನು ಅದು ಹಾಹಾ ಅನ್ನುವುದರೊಳಗೆ ಹಬ್ಬಿ ಹೂ ಬಿಟ್ಟಿದ್ದನ್ನು ಪವಾಡವೇ ಎಂದು ನಾವು ಹೇಳಬಯಸುತ್ತೇವೆ. ನಾವು ಪವಾಡದ ನೆಪದಲ್ಲಿ ಕೊಟ್ಟ ಉಪಮೆ ಈಗಿನ ಅವರ ಸ್ಥಿತಿಗೆ ಹೆಚ್ಚಿನಿಸೀತು. ಆದ್ದರಿಂದ ರೋಜಾ ಅವರ ಹಣೆಯ ಮೇಲೆ ತುಟಿಯೂರಿದಳಲ್ಲ, ತುಟಿಯೂರಿದಳೆನ್ನುವುದಕ್ಕಿಂತ ಹೆಡೆಯೂರಿದಳೆನ್ನುವುದು ಸದ್ಯಕ್ಕೆ ಹೆಚ್ಚು ಸಮಂಜಸವೆಂದು ನಮ್ಮ ಭಾವನೆ. ಅದು ಅವರ ಅಂಗಾಲಿನಿಂದ ನೆತ್ತಿಯ ತನಕ ವಿಷ ಆವರಿಸುವಂತೆ ಮಾಡಿತು. ಮತ್ತು ಯಾವಾಗೆಂದರೆ ಆವಾಗ ಅದು ಮೈಯ ಎಲ್ಲೆಲ್ಲಿಂದಲೋ ಆನಂದವಾಗಿ ಚಿಮ್ಮುತ್ತಿತ್ತು. ಅವರ ಕಣ್ಣುಗಳಲ್ಲೀಗ ಈ ತನಕ ಅಪರಿಚತವಾದ ಚಂಚಲವಾದ ಬೆಳಕೊಂದು ಆಗಾಗ ಮಿಂಚಿ ಮಾಯವಾಗುತ್ತಿತ್ತು. ಮತ್ತು ಅದರ ಬೆಳಕಿನಲ್ಲಿ ಜಗತ್ತು ಎಂದಿಗಿಂತ ಹೆಚ್ಚು ಉದಾರವಾಗಿರುವಂತೆ ಆನಂದಮಯವಾಗಿರುವಂತೆ ತೋರುತ್ತಿತ್ತು. ಆದರೆ ಆ ಬೆಳಕು ಕೆಲವು ಸಂಗತಿಗಳಿಗೆ ಕುರುಡಾಗಿತ್ತು. ಎನ್ನುವುದನ್ನು ಒಪ್ಪಬೇಕು. ಉದಾ : ಜ್ವರದಿಂದ ನರಳುತ್ತಿದ್ದ ಗಿರಿಜಮ್ಮ ಅವರಿಗೆ ಕಾಣಲಿಲ್ಲ. ಈ ತನಕ ಯಾವ ವ್ಯವಸ್ಥೆಯ ಭಾಗವಾಗಿದ್ದರೋ ಆ ವ್ಯವಸ್ಥೆಗೆ ತಾವು ಹಾಸ್ಯಾಸ್ಪದರಾಗಬಹುದಾದ್ದೂ ಕಾಣಲಿಲ್ಲ. ಅವರ ಈಗಿನ ಇರುವಿಕೆಗೂ ದಶಮಾನೋತ್ಸವದ ಹಿಂದಿನದಕ್ಕೂ ಎಷ್ಟು ವ್ಯತ್ಯಾಸವಾಯಿತೆಂದರೆ ಅದನ್ನವರ ಪರ್ವಾಶ್ರಮ ಎಂದು ಕರೆಯಬಹುದಾದಷ್ಟು.

ಉದಾಹರಣೆಗೆ ಗಿರೆಪ್ಪನನ್ನು ಡಿಸ್‌ಮಿಸ್ ಮಾಡಿದ್ದ ಆರ್ಡರನ್ನು ವಾಪಸ್ ತೆಗೆದುಕೊಂಡರು. ಇದರಲ್ಲಿ ಔದಾರ್ಯ ಮತ್ತು ರೋಜಾಳ ಒತ್ತಾಯವಿದ್ದದ್ದು ನಿಜ. ಜೊತೆಗೇ ಹ್ಯಾಗೂ ಇದು ಅವನ ಅಂತಿಮ ವರ್ಷ. ಮಗ ನನ್ನನ್ನು ಸೋಲಿಸಬೇಕೆಂದನಲ್ಲ, ಈಗ ನನ್ನ ಗೆಲವು ಕಂಡು ಅಸೂಯೆಯಾಗಲಿ ಎಂಬ ಕೊಳಕು ಬುದ್ದಿಯೂ ಹಿನ್ನಲೆಗಿತ್ತು. ಜೀಕೆ ಪಾಠಗಳಲ್ಲಿ ಈಗ ವಾಚಾಳಿತನ ಹೆಚ್ಚಿತು. ಅಗತ್ಯ ಇರಲಿ ಇಲ್ಲದಿರಲಿ ತಮಗೆ ಗೊತ್ತಿದ್ದುದನ್ನೆಲ್ಲ ಜನಪ್ರಿಯ ಅಧ್ಯಾಪಕರು ಹೇಳುವಂಥ ಜೋಕು ಸಮೇತ ಹೇಳುತ್ತಿದ್ದರು. ಹೇಳಿ ಆಗಾಗ ರೋಜಾ ಕಡೆ ನೋಡುತ್ತಿದ್ದರು. ಒಂದೇ ದಿನ ರೋಜಾ ಕಾಣಿಸದಿದ್ದರೆ ಚಡಪಡಿಸುತ್ತಿದ್ದರು. ಅವರ ಸಂಸ್ಕೃತ ಕ್ಲಾಸಿದ್ದದ್ದು ವಾರಕ್ಕೆ ಮೂರು ಗಂಟೆ ಮಾತ್ರ. ದಿನಕ್ಕೊಮ್ಮೆಯಾದರು ಆ ಕ್ಲಾಸಿಗೆ ಹೋಗುವ ಅವಕಾಶವಿದ್ದರೆ ಎಷ್ಟು ಚೆನ್ನಾಗಿತ್ತಲ್ಲ ಎಂದು ಹಾರೈಸುತ್ತಿದ್ದರು. ಆ ಕ್ಲಾಸಿನ ಯಾವನಾದರೂ ಅಧ್ಯಾಪಕ ಅಬ್ಸೆಂಟ್ ಆದರೆ ಅದನ್ನೂ ತಾವೇ ತೆಗೆದುಕೊಳ್ಳುತ್ತಿದ್ದರು. ಚೆಕ್ ಮಾಡುವ ನೆಪದಲ್ಲಿ ಲೈಬ್ರರಿಗೂ ಹೋಗಿ ಆ ಮೂಲಕ ರೋಜಾಳತ್ತ ದೃಷ್ಟಿ ಬೀರಿ ಬರುತ್ತಿದ್ದರು. ಆಕೆ ಆಗಾಗ ತನಗೆ ಬಾರದ ವಿಷಯ ತಿಳಿಯುವ ನೆಪದಲ್ಲಿ ಇವರ ಛೇಂಬರಿಗೆ ಬಂದು ರಸವತ್ತಾದ ಪ್ರೇಮಪತ್ರಗಳನ್ನು ಕೊಟ್ಟು ಹೋಗುತ್ತಿದ್ದಳು. ಇವರು ಅದನ್ನು ಸಿಪಾಯಿ ಸಿಂಗಪ್ಪನಿಗೂ ಕಾಣಿಸದಂತೆ ಟೇಬಲ್ ಕೆಳಗೆ ಹಿಡಿದು ಓದಿ ರೋಮಾಂಚಿತರಾಗುತ್ತಿದ್ದರು. ಅವಳು ಬಳಿಯಿದ್ದಾಗ ಒಂದು ಕುಡಿನೋಟ ಬೀರಿದರೆ ಸಾಕು ಪರವಶರಾಗಿ ಬಿಡುತ್ತಿದ್ದರು. ಜೋರಾಗಿ ಮಾತಾಡಿದರೆ ಅವಳೆಲ್ಲಿ ನೊಂದುಕೊಳ್ಳುವಳೋ ಎಂದು ತಮ್ಮ ನಗಾರಿ ಧ್ವನಿಯನ್ನು ತಗ್ಗಿಸಿ ಮೃದುವಾಗಿ ಮಾತಾಡುತ್ತಿದ್ದರು. ಸಿಪಾಯಿ ಸಿಂಗಪ್ಪನಿಗೆ ಕೇಳೀಸೀತೆಂಬ ಭಯವೂ ಇದ್ದಿತೆನ್ನುವ, ಆಕೆ ಹೋದಾಗ ಮಾತ್ರ ನಿರುತ್ಸಾಹದ ಆಳ ಸ್ಥಿತಿಗಿಳಿಯುತ್ತಿದ್ದರು. ನಿಟ್ಟಿಸಿರು ಬಿಡುತ್ತ ಕೂರುತ್ತಿದ್ದರು.

ಹಂತಹಂತವಾಗಿ ಜೀಕೆ ಮಾಸ್ತರರ ಉಡುಪು ಬದಲಾಯಿತು. ಈಗ ನೀಟಾಗಿ ಬುಷ್‌ಷರ್ಟು ಪ್ಯಾಂಟ್ ಹಾಕಿ ತಲೆಬಾಚಿಕೊಂಡು ಬರುತ್ತಿದ್ದರು. ಮತ್ತು ಒಂದು ಬಾಚಣಿಕೆ ಸದಾ ಅವರ ಜೇಬಿನಲ್ಲಿರುತ್ತಿತ್ತು. ಈ ಬದಲಾವಣೆಗೆ ಅರ್ಧ ರೋಜಾಳ ಪ್ರೇಮ ಕಾರಣವಾಗಿದ್ದರೆ ಇನ್ನರ್ಧ ಗಿರೆಪ್ಪನ ಬಗೆಗಿನ ಆಸೂಯೆ ಕಾರಣವಾಗಿತ್ತು. ಅನಗತ್ಯವಾಗಿ ಆತನೊಂದಿಗೆ ಸ್ಪರ್ಧೆಗಿಳಿದಂತಿತ್ತು ಜೀಕೆ. ಈ ಬದಲಾವಣೆಯನ್ನು ಜನ ಗಮನಿಸದೇ ಇರಲಿಲ್ಲ. ಈ ಮುದುಕನಿಗೇನು ಎಡಪ್ರಾಯ ಬಂದಿದೆಯೇ ಎಂದು ಅಧ್ಯಾಪಕರು ಕದ್ದು ಆಡಿಕೊಂಡರು. ಮುದಿ ಹುಚ್ಚಿರಬೇಕೆಂದು ಹುಡುಗರಾಡಿಕೊಂಡರು. ಆದರೆ ಇವರೆಲ್ಲ ಉಡುಪಿನ ಬದಲಾವಣೆಯನ್ನು ಕಂಡವರೇ ಹೊರತು ರೋಜಾ ಮತ್ತು ಜೀಕೆಯವರ ಮಧ್ಯೆ ಸಂಬಂಧವಿದೆಯೆಂಬುದನ್ನು ಪತ್ತೆ ಹಚ್ಚಲಾಗಲಿಲ್ಲ. ಗಿರೆಪ್ಪನಿಗೆ ತಿಳಿದಿತ್ತೇನೋ ಅವನು ಯಾರ ಮುಂದೂ ಬಾಯಿ ಬಿಟ್ಟಿರಲಿಲ್ಲ. ಅಥವಾ ಅವನಿಗೂ ಇದರ ಸುಳಿವು ಹತ್ತಿರಲಿಕ್ಕಿಲ್ಲ. ಇನ್ನೇನು ರಿಟೈರಾಗುವ ಕಾಲ ಬಂತಲ್ಲ ಇದ್ದಷ್ಟು ದಿನ ಮಜಾ ಮಾಡಿ ಹೋಗೋಣವೆಂದಿರಬೇಕು ಎಂಬುದೇ ಎಲ್ಲರ ತರ್ಕವಾಗಿತ್ತು. ಆದರೆ ಎಂಟಿಗೆ ಮಾತ್ರ ಇದು ಗೊತ್ತಿತ್ತು.

ಇದೇ ನೆಪದಲ್ಲಿ ಎಂಟಿ ಜೀಕೆಮಾಸ್ತರರ ಆಪ್ತನಾಗಿಬಿಟ್ಟ. ಎಂಟಿ ವಿಚಾರಗೊತ್ತಿದ್ದೂ ಅವನನ್ನು ಸಮೀಪಕ್ಕೆ ಬಿಟ್ಟುಕೊಳ್ಳಲು ಕಾರಣ ಜೀಕೆ ಹೊರಗೆ ಧೈರ್ಯಸ್ಥರಂತೆ ಕಾಣುತ್ತಿದ್ದರೂ ಒಳಗೊಳಗೆ ತಮ್ಮಲ್ಲೇ ಅಪನಂಬಿಕೆ ತಳೆದಿದ್ದರು.  ಅಂಥ ಪುಟ್ಟ ಹುಡುಗಿಯ ಜೊತೆ ಅವಳ ತಂದೆಯಂತೆ ಕಾಣುತ್ತಿದ್ದ ತಾವು ಸಂಬಂಧ ಹೊಂದಿರುವುದು ತಪ್ಪೆಂಬ, ಸಮಾಜ ಇದನ್ನು ಕಂಡು ನಗಬಹುದೆಂಬ ಭಾವನೆ ಅವರೆಷ್ಟೇ ಇದಕ್ಕೆ ವಿರುದ್ಧವಾಗಿ ಆಲೋಚಿಸಿದರೂ ಆಳದಲ್ಲಿತ್ತು. ಅಲ್ಲದೆ ಆ ದುಷ್ಟ ಗಿರೆಪ್ಪ ರೋಜಾಳನ್ನು ಗೆದ್ದುಬಿಟ್ಟಾನೆಂಬ ಭಯವೂ ಅವರಿಗಿತ್ತು. ಅವಳನ್ನು ಕಾಯಲು, ಅವಳ ಚಲನವಲನಗಳನ್ನು ಗಮನಿಸುತ್ತಿರಲು ಒಬ್ಬ ಚೇಲನ ಅವಶ್ಯಕತೆಯಿತ್ತು. ಎಂಟಿ ಇಂಥದಕ್ಕೆ ಹೇಳಿ ಮಾಡಿಸಿದವ. ಡೀಕೆ ತರುವಾಯ ತಾನೇ ಪ್ರಿನ್ಸಿಪಾಲನಾಗುವ ಹವಣಿಕೆಯುಳ್ಳ ಆತ ಇಂಥ ಅವಕಾಶನ್ನು ಹೇಗೆ ಬಿಟ್ಟಾನು? ಪ್ರಿನ್ಸಿಪಾಲರ ಬದಲಾದ ಯಾವ ಉಡುಪನ್ನೂ ಆತ ಹೊಗಳುತ್ತಿದ್ದ. ರೋಜಾ ಎಲ್ಲಿರುವಳೆಂದು ತಿಳಿದುಬಂದು ಹೇಳುತ್ತಿದ್ದ. ಆಕೆ ಆಯಾ ದಿನ ಯಾರ ಜೊತೆಗಿದ್ದಳು. ಸಾಧ್ಯವಾದರೆ ಏನೇನು ಮಾತಾಡಿದಳೆಂದೂ ವರದಿಯೊಪ್ಪಿಸುತ್ತಿದ್ದ. ವೀರ‍್ಯವೃದ್ಧಿಯಾಗುವ ಆಯುರ್ವೇದೀಯ ಟಾನಿಕ್‌ಗಳನ್ನೂ ತಂದುಕೊಡುತ್ತಿದ್ದ, ಆಶ್ಚರ್ಯವೆಂದರೆ ಈ ಬಗ್ಗೆ ಆತ ಇನ್ನೊಬ್ಬರೆದುರಿಗೆ ನಿಜವಾಗಿಯೂ ಬಾಯಿ ಬಿಟ್ಟಿರಲಿಲ್ಲ. ಯಾಕೆಂದರೆ ಅದೇನಾದರು ಜೀಕೆಗೆ ಗೊತ್ತಾದರೆ ಪ್ರಿನ್ಸಿಪಾಲನಾಗುವುದಿರಲಿ ತಾನು ಕೆಲಸದಲ್ಲಿರುವುದೂ ಶಕ್ಯವಿಲ್ಲವೆಂದು ಅವನಿಗೆ ಗೊತ್ತಿತ್ತು.

ಜೀಕೆ ಈಗ ಹುಡುಗರ ಬಗೆಗೆ ಹೆಚ್ಚು ಉದಾರಿಯಾಗಿದ್ದರು. ಹುಡುಗರೊಮ್ಮೆ ಯೂನಿಯನ್ ವತಿಯಿಂದ ಕೂಡಲಸಂಗಮಕ್ಕೆ ಒಂದು ದಿನದ ಟ್ರಿಪ್ಪು ತೆಗೆಯಬೇಕೆಂದರು. ಗಿರೆಪ್ಪ ಹೋಗಿ ಜೀಕೆ ಮಾಸ್ತರರನ್ನು ಕೇಳಿದ. ಅವರು ಒಪ್ಪಲಿಲ್ಲ. ಕೊನೆಗೆ ರೋಜಾ ಬಂದು ಹೇಳುತ್ತಲೂ ಒಪ್ಪಿಕೊಂಡರು. ಮತ್ತು ಆಶ್ಚರ್ಯವೆಂದರೆ ತಾವೂ ಬರುವುದಾಗಿ ಹೇಳಿದರು. ಆಯಿತು. ಅಲ್ಲಿಯೇ ಟಿ.ಬಿ.ಯಲ್ಲಿ ಒಂದು ದಿನದ ವಾಸವೆಂದೂ ವನಭೋಜನ ಮಾಡಿಕೊಂಡು ಮಾರನೇ ದಿನ ಬರುವುದೆಂದೂ ಆಯಿತು. ಜೀಕೆ ಇದ್ದಲ್ಲಿ ಎಂಟಿ ಇರಬೇಕಲ್ಲ. ಅವನೇ ಬಸ್ಸಿನ ವ್ಯವಸ್ಥೆಯನ್ನೂ ಮಾಡಿದ. ಪ್ರಿನ್ಸಿಪಾಲರು ತಮ್ಮ ಜೊತೆ ಬರುವುದು ಅನೇಕರಿಗೆ ಇಷ್ಟವಾಗಲಿಲ್ಲ. ಆದರೇನು ಮಾಡುವುದು. ಆಡುವ ಹಾಗಿಲ್ಲ. ಕೆಲವು ಹುಡುಗರಂತೂ ಆ ಮುದಿ ಜೀಕೆ ಜೊತೆಗೆ ಅದೇನು ಮಜವೆಂದು ಟ್ರಿಪ್ಪಿಗೆ ಬರಲೇ ಇಲ್ಲ. ಅಂತೂ ಇಂತೂ ಮುಕ್ಕಾಲು ಬಸ್ಸಿನ ಜನ ಆದರು. ಬಸ್ಸು ಹೊರಟಿತು.

ಲೆಕ್ಕಾಚಾರದಲ್ಲಿ ಅದು ಚಳಿಗಾಲ. ಆದರೆ ಆ ಭಾಗದಲ್ಲಿ ಚಳಿಗಾಲ ಎಲ್ಲಿ ಬರುತ್ತದೆ? ಅದು ಬೇಸಿಗೆಗೆ ಜಮಾ ಎನ್ನಬೇಕಷ್ಟೆ. ಜೊತೆಗೆ ಜೀಕೆ ಇದ್ದರಲ್ಲ, ಹುಡುಗರು ತುಟಿ ಬಿಗಿದುಕೊಂಡು ಕೂತಿದ್ದರು. ಜೀಕೆಗಿದು ಗೊತ್ತಾಗಿ ಯಾರಾದರೂ ಹಾಡಬಹುದಲ್ಲ ಎಂದು ಸೂಚಿಸಿದರು. ಸದ್ಯ  ಅನೇಕರು ಹಾಡಿದರು. ಜೀಕೆ ಒತ್ತಾಯಮಾಡಿ ರೋಜಾಳಿಂದಲೂ ಹಾಡಿಸಿದರು. ಕೊನೆಗೆ ಎಲ್ಲರೂ ಸೇರಿ ‘ಸರ ನೀವೂ ಒಂದ ಹಾಡರಿ’ ಎಂದು ಜೀಕೆಗೇ ಒತ್ತಾಯ ಮಾಡಿದರು.  ಜೀಕೆ ಸಿಟ್ಟಿಗೇಳುತ್ತಾರೆಂದು ಎಂಟಿ ಭಾವನೆ. ಆದರೆ ಜೀಕೆ ಬಾಯಿ ತೆರೆದೇಬಿಟ್ಟರು! ಅದೇ ನಗಾರಿ ಧ್ವನಿಯಲ್ಲಿ ಹಿಂದಿ ಸಿನಿಮಾ ಗೀತೆಯೊಂದನ್ನು (ಅದೂ ಪ್ರೇಮಗೀತೆ) ಗಟ್ಟಿಯಾಗಿ ಹಾಡತೊಡಗಿದರು. ಅವರ ಹಾಡುಗಾರಿಕೆ ಹ್ಯಾಗಿತ್ತೆಂದರೆ ಹುಡುಗರು ಬಾಯಿ ಬಿಡದೆ ಹೊಟ್ಟೆಹಿಡಿದುಕೊಂಡು ಸೀಟಿನ ಮರೆಯಲ್ಲಿ ಬಿದ್ದು ಬಿದ್ದು ನಕ್ಕರು. ಹುಡುಗಿಯರಂತು ಹೊಟ್ಟೆಹಣ್ಣಾಗುವಂತೆ ನಕ್ಕರು. ಜೀಕೆಗಿದು ಗೊತ್ತಾಗುವಂತಿರಲಿಲ್ಲ. ಯಾಕೆಂದರೆ ಹಾಡುವಾಗ ಕಣ್ಣು ಮುಚ್ಚಿ ಚೆನ್ನಾಗಿ ಹಾಡುತ್ತಿದ್ದೇನೆಂಬ ಭ್ರಮೆಯಲ್ಲೇ ಹಾಡಿದ್ದರು. ಅದೇನಾದರೂ ಇದ್ದಿರಲಿ ಹುಡುಗರಿಗೆ ಮಾತ್ರ ಇದರಿಂದಷ್ಟು ಮನರಂಜನೆ ಸಿಕ್ಕಿತೆಂದರೆ ಮುಂದೆ ಟಿ.ಬಿ. ಬರುವವರೆಗೂ ಈ ಬಗ್ಗೆ ಕದ್ದು ಮಾತಾಡಿ ಅಣಗಿಸಿ ನಕ್ಕರು.

ಟಿ.ಬಿ.ಗೆ ಮುಟ್ಟಿದಾಗ ಮಧ್ಯಾಹ್ನ ಹನ್ನೆರಡು ಗಂಟೆ. ಬಸ್ಸಿನ ಧೂಳು, ಬಿಸಿಲಿನ ಸೆಕೆಯಿಂದಾಗಿ ವಿದ್ಯಾರ್ಥಿಗಳಿಗೆ ಆಯಾಸವಾಗಿತ್ತು. ಅವರ ಮುಖಗಳ ಮೇಲೆ ಕಳೆ ಬಂದದ್ದು ತುಂಬಿ ಹರಿಯುವ ನದಿಯನ್ನು ನೋಡಿದಾಗಲೇ. ಹುಡಗರಂತೂ ಜೀಕೆ ಮಾಸ್ತರರು ಮರೆಯಾಗುವುದನ್ನೇ ಕಾಯುತ್ತಿದ್ದರು. ಅವರೊಮ್ಮೆ ಬಾತ್‌ರೂಮಿಗೆ ಹೋದರೋ, ಅವರನ್ನಲ್ಲೇ ಬಿಟ್ಟು ಎಂಟಿಯ ತಾಕೀತನ್ನು ತಿರಸ್ಕರಿಸಿ ನದಿಗೆ ಓಡಿಬಿಟ್ಟರು. ಜೀಕೆ ಹೊರಗೆ ಬಂದು ನೋಡಿದರೆ ಎಂಟಿ ಒಬ್ಬನೇ ಮಿಕ ಮಿಕ ಕೂತಿದ್ದ. ‘ಹುಡುಗರೆಲ್ಲಿ?’ ಎಂದರು. ‘ಹೊಳೀಗಿ ಹೋಗ್ಯಾರ್ರಿ ಸರ’ ಎಂದು ‘ರೋಜಾನೂ ಅವರ ಜೋಡಿ ಹೋಗ್ಯಾಳ್ರಿ’ ಎಂದು ಹೇಳಿದ. ‘ಎಬಡಾ, ನೀ ಯಾಕ ಇಲ್ಲಿ ಕುಂತಿ? ನೀರ ಭಾಳ ಆಳೈತಿ, ಹುಡುಗರೇನಾದರೂ ಈಜಿಗೀಜಾಕ ಹೋದಾರು ನಡಿನಡಿ’ ಎಂದು ತಾವೂ ಜೊತೆಗೇ ಬಂದರು.

ಬಂದು ನೋಡಿದರೆ ಹುಡುಗಾಗಲೇ ನೀರಿಗಿಳಿದು ಹಾ ಹೋ ಕೇಕೆ ಹಾಕುತ್ತ ಈಜಾಡುತ್ತಿದ್ದರು. ಸದ್ಯ ಹುಡುಗಿಯರು ಈಜಾಡುತ್ತಿರಲಿಲ್ಲ. ಕಾಲುಗಳನ್ನು ನೀರಿಗಿಳಿಬಿಟ್ಟು ದಂಡೆಯ ಕಲ್ಲುಗಳ ಮೇಲೆ ಕೂತಿದ್ದರು. ಜೀಕೆ ಬಂದದ್ದನ್ನು ಹುಡುಗರು ನೋಡಿದರಾದರೂ ಯಾರೂ ಹೊಳೆ ಬಿಟ್ಟು ಹೊರಬರಲಿಲ್ಲ. ತಮ್ಮ ಪಾಡಿಗೆ ತಾವು ಬಗೆಬಗೆಯಾಗಿ ಈಜುತ್ತ ನೀರು ಗೊಜ್ಜಾಡುತ್ತ ಜಲಕ್ರೀಡೆಯಲ್ಲಿ ತೊಡಗಿದ್ದರು. ಹುಡುಗಿಯರಂತೂ ಜೀಕೆ ಮಾಸ್ತರರನ್ನು ಗಮನಿಸಲೇ ಇಲ್ಲ. ಗಿರೆಪ್ಪ ಎಲ್ಲ ಹುಡುಗರಿಗಿಂತ ದೂರದಲ್ಲಿದ್ದ. ಅಷ್ಟು ದೂರ ಹೋಗಲು ಇವರ‍್ಯಾರಿಗೂ ಧೈರ್ಯವಾಗಿರಲಿಲ್ಲ. ಆತ ಥರಾವರಿ ನೀರಾಟಗಳನ್ನು ತೋರಿಸುತ್ತಿದ್ದರಿಂದ ಹುಡುಗಿಯರು, ರೋಜಾ ಕೂಡ ಅವನನ್ನೇ ಮೆಚ್ಚುಗೆಯಿಂದ, ಹೊಳೆಯುವ ಕಣ್ಣುಗಳಿಂದ ನೋಡುತ್ತಿದ್ದಳು. ಆತ ಲೀಲಾಜಾಲವಾಗಿ ಈಜುತ್ತಿದ್ದ. ಇಲ್ಲಿ ಮುಳುಗಿ ಅಲ್ಲಿ ಏಳುತ್ತಿದ್ದ. ಆತ ಮುಳುಗಿದೊಡನೆ ಹುಡುಗಿಯರು ‘ಅಕಾ ಅಲ್ಲಿ ಏಳತಾನ, ಇಕಾ ಇಲ್ಲಿ ಏಳತಾನ’ ಎಂದು ಅಂದಾಜು ಕಟ್ಟುತ್ತಿದ್ದರೆ ಆತ ಇನ್ನೆಲ್ಲೋ ಎದ್ದು ಇವರನ್ನು ಬೆರಗುಗೊಳಿಸುತ್ತಿದ್ದ. ಅವ ಎದ್ದೊಡನೆ ಹುಡುಗಿಯರು ತಮ್ಮ ಅಂದಾಜು ಸರಿ ಅಥವಾ ತಪ್ಪಾದುದಕ್ಕೆ ಚಪ್ಪಾಳೆ ತಟ್ಟಿ ನಗುತ್ತಿದ್ದರು. ಕೆಲವರು ಆವ ಎಷ್ಟು ಹೊತ್ತು ಮುಳುಗುತ್ತಾನೆಂದು ಗಡಿಯಾರ ನೋಡಿ ಬೆಟ್‌ಕಟ್ಟುತ್ತಿದ್ದರು. ಹುಡುಗಿಯರು ಅಂದರೆ ರೋಜಾಳ ಲಕ್ಷ್ಯವನ್ನು ತನ್ನೆಡೆಗೆ ಸೆಳೆಯುವುದು ಹೇಗೆಂದು ಜೀಕೆಗೆ ಹೊಳೆಯದಾಯಿತು. ಕೂಗಿ ‘ಏ ಗಿರೆಪ್ಪ, ಇನ್ನ ಸಾಕು, ಹೊರಗೆ ಬಾ’ ಎಂದರು. ಅವನ ಕಿವಿಗೆ ಈ ಮಾತು ತಲುಪಲೇ ಇಲ್ಲ. ತನ್ನ ಪಾಡಿಗೆ ತಾನು ಈಜುತ್ತಿದ್ದ, ಮುಳುಗುತ್ತಿದ್ದ, ಏಳುತ್ತಿದ್ದ, ಪ್ರತಿದ್ವನಿಯಾಗುವ ಹಾಗೆ ಠುಮ್ಕಿ ಹೊಡೆಯುತ್ತಿದ್ದ.

ಛೇ, ಇವರೆಂದೂ ಈಜೋದನ್ನು ಕಂಡಿಲ್ಲವೇ? ಈ ಪರಿ ಈಜು ನಾನರಿಯದ್ದೇ? ಗಿರ‍್ಯಾನ ಅಜ್ಜನ ಹಾಗೆ ನಾನು ಈಜಬಲ್ಲೆ ಎಂದು ಅಂದುಕೊಂಡು ಶರ್ಟು ಕಳಚಿ ಧೋತರ ಕಚ್ಚೆ ಎತ್ತಿ ಕಟ್ಟಿಕೊಂಡು ಜೀಕೆ ನೀರಿಗಿಳಿದೇ ಬಿಟ್ಟರು. ಹುಡುಗ ಹುಡುಗಿಯರೆಲ್ಲ ತಬ್ಬಿಬ್ಬಾದರು. ಹುಡುಗಿಯರು ಬೆರಗಿನಿಂದ ಎದ್ದು ನಿಂತರೆ ಇಷ್ಟರಲ್ಲೇ ಈಜುತ್ತಿದ್ದ ಹುಡುಗರು ದಂಡೆಗೆ ಬಂದು ಜೀಕೆ ಮಾಸ್ತರರನ್ನೆ ಹೊಯ್ಕಿನಿಂದ ನೋಡುತ್ತ ನಿಂತರು. ಗಿರೆಪ್ಪ ಗಮನಿಸಿದನಾದರೂ ಈ ಕಡೆ ಬರಲಿಲ್ಲ.

ಜೀಕೆ ಮಾಸ್ತರರಿಗೆ ಈಜು ಗೊತ್ತಿದ್ದದ್ದೇ. ವಯಸ್ಸಿನಲ್ಲಿ ಈಜಾಡಿದ್ದರು ಕೂಡ, ಗಿರೆಪ್ಪ ಎಲ್ಲಿ ಈಜುತ್ತಿದ್ದನೋ ಅಲ್ಲಿಗೇ ಬೀಸು ಕೈಚಾಚಿ ಈಜುತ್ತಾ ಹೊರಟರು. ಅವನು ಮಾಡುವ ಆಟಗಳಿಗಿಂತ ಭಿನ್ನವಾದ ಮತ್ತು ಇನ್ನೂ ವಿಚಿತ್ರವಾದ ಅನೇಕ ಆಟಗಳು ಅವರಿಗೆ ಗೊತ್ತಿದ್ದವು. ಅವನ್ನೆಲ್ಲ ಈ ಮುಗ್ಧೆಯರಿಗೆ, ರೋಜಾಳಿಗೆ ತೋರಿಸಿ ಬೆರಗಿನಿಂದ ಅವರ ಕಣ್ಣು ಫಳಫಳ ಹೊಳೆಯುವ ಹಾಗೆ ಮಾಡುವೆನೆಂದುಕೊಂಡರು. ಇವರು ಬರುತ್ತಿರುವುದನ್ನು ನೋಡಿ ಗಿರೆಪ್ಪ ಇನ್ನಷ್ಟು ದೂರ ಹೋದ. ಇವರೇನು ಕಮ್ಮಿ? ವೇಗವನ್ನು ಇನ್ನೂ ಜಾಸ್ತಿ ಮಾಡಿದರು. ಕೈಗಳನ್ನು ಒಂದಾದ ಮೇಲೊಂದರಂತೆ ರೆಕ್ಕೆಯ ಹಾಗೆ ಬೀಸಿ ನೀರಿಗೆಸೆಯುತ್ತಾ ಈಜಿದರು. ಗಿರೆಪ್ಪ ತಾನೂ ಜೋರಿನಿಂದೀಸಿದ. ಇಬ್ಬರೂ ಸ್ಪರ್ಧೆಗಿಳಿದರೆಂದು ದಂಡೆಯಲ್ಲಿ ನಿಂತಿದ್ದವರಿಗೆ ಗೊತ್ತಾಯಿತು. ಮತ್ತು ಯಾರು ಗೆಲ್ಲುತ್ತಾರೆ ನೋಡೋಣವೆಂದು ಅವರ ಆಸಕ್ತಿ ಕೆರಳಿತು. ಗಿರೆಪ್ಪ ಸಿಗಲೊಲ್ಲ, ಇವರು ಬಿಡಲೊಲ್ಲರು. ಇನ್ನೇನು ಸಿಕ್ಕನೆಂದಾಗ ಇನ್ನೊಂದು ಮಾರು ದೂರದಲ್ಲಿರುತ್ತಿದ್ದ. ದಂಡೆಯಲ್ಲಿ ಹುಡುಗಿಯರು ಕೇಕೆ  ಹಾಕತೊಡಗಿದರು. ರೋಜಾ ‘ಬಕಪ್ ಸರ ಬಕಪ್ ಸರ!’ ಎಂದು ಕೂಗಿ ಹುರುಪು ಕೊಟ್ಟಳು. ತಾನು ಗಿರೆಪ್ಪನನ್ನು ಸೋಲಿಸುವುದು ರೋಜಾಳಿಗೆ ಇಷ್ಟ, ತಾನು ಇಷ್ಟರಲ್ಲೇ ತೋರಿಸುತ್ತೇನೆ ಎಂದು ಅಂದುಕೊಂಡರು. ಆದರೆ ಗಿರೆಪ್ಪನಿಗೂ ಇವರಿಗೂ ಮೊದಲಿದ್ದ ಅಂತರವೇ ಮುಂದುವರಿಯಿತು. ಸ್ವಲ್ಪದರಲ್ಲೇ ಹೆಚ್ಚು ಆಯಿತು. ಆತ ಮೊಸಳೆಯ ಹಾಗೆ ಮುಖ ಮೇಲೆ  ಮಾಡಿ ಕೈ ಬೀಸಿದಾಗೊಂದು ಮಾರು ಮುಂದೆ ಹೋಗುತ್ತಿದ್ದ. ಮತ್ತು ಎಷ್ಟು ಸಹಜವಾಗಿ ಈಜುತ್ತಿದ್ದನೆಂದರೆ ನೋಡಿದವರಿಗೆ ಅವನು ನೀರಿನಲ್ಲೇ ಹುಟ್ಟಿದವನೆಂಬ ಭಾವನೆ ಬರುತ್ತಿತ್ತು. ಜೀಕೆ ಮಾಸ್ತರ ಪ್ರಯತ್ನಪೂರ್ವಕವಾಗಿ ಈಜುತ್ತಿರುವಂತೆ, ಒಮ್ಮೊಮ್ಮೆ ಅನಗತ್ಯವಾಗಿ ಒದ್ದಾಡಿದಂತೆ ಕಾಣಿಸುತ್ತಿತ್ತು. ಆದರೂ ಹುಡುಗ ಹುಡುಗಿಯರು ಕೇಕೆ ಹಾಕಿ ಹುರುಪು ಕೊಡುತ್ತಿದ್ದರು. ಒಬ್ಬರೂ ಗಿರೆಪ್ಪನನ್ನು ಪ್ರೋತ್ಸಾಹಿಸುವ ಮಾತು  ಕೂಗಲಿಲ್ಲ. ಗಿರೆಪ್ಪನನ್ನು ಹಿಂದೆ ಹಾಕುವದಿರಲಿ ಅವನ ತನಕ ಹೋಗುವುದೂ ತನಗೆ ಸಾಧ್ಯವಾಗದು ಎನಿಸಿತು. ಇದ್ದಕ್ಕಿದ್ದಂತೆ ಕೈಕಾಲು ಸೋಲುತ್ತಿರುವ ಅನುಭವವಾಯಿತು. ತಿರುಗಿ ನೋಡಿದರೆ ದಂಡೆ ಬಿಟ್ಟು ಬಹುದೂರ ಬಂದಿದ್ದರು. ತಿರುಗಿ ಇಷ್ಟು ದೂರ ಈಜುವುದು ಸಾಧ್ಯವೇ ಎಂದುಕೊಂಡರು. ಹುಡುಗಿಯರು ಕೈಬೀಸಿ ಕೂಗುತ್ತಿದ್ದರು. ತಿರುಗಿ ನೋಡಿದರೆ ಗಿರೆಪ್ಪ ಬಹಳ ದೂರ ಹೋಗಿದ್ದ. ಇನ್ನು ಸಾಧ್ಯವಿಲ್ಲ ಎನ್ನಿಸಿತು. ‘ಅವನವ್ವನ’ ಎಂದು ಮನಸ್ಸಿನಲ್ಲೇ ಬೈದರು. ಕೈಕಾಲಲ್ಲಿ ಶಕ್ತಿ ಉಳಿದಿರಲೇ ಇಲ್ಲ. ಯಾಕಾದರೂ ನೀರಿಗಿಳಿದೆನೋ ಎನ್ನಿಸಿತು. ಸೋಲುವುದಿರಲಿ, ಜೀವ ಉಳಿದರೆ ಸಾಕೆನ್ನಿಸಿತು. ದಂಡೆ ಕಡೆ ತಿರುಗಿದರು.

ಕೈಕಾಲಿನಾಟ ನಿಂತಿತು. ಮೆಲ್ಲಗೆ ಕೈಬೀಸುವುದೂ ಸಾಧ್ಯವಾಗದಾಯಿತು. ಸಮ ಉಸಿರಾಟ ಸಾಗದಾಯಿತು. ನೀರು ಕುಡಿದರು. ಇವರು ಹಿಂದಿರುಗಿದ್ದನ್ನು ನೋಡಿ ಗಿರೆಪ್ಪ ತಾನೂ ವಾಪಸ್ಸು ಬಂದ. ಬರುವಾಗಲೂ ಇವರನ್ನು ಹಿಂದೆ ಹಾಕಿದ. ಜೀಕೆ ಭಾರೀ ಪರಿಶ್ರಮ ಪಡುತ್ತಿದ್ದಾರೆಂದೂ, ಕೈಸಾಗದೆ ನೀರು ಕುಡಿಯುತ್ತಿದ್ದಾರೆಂದೂ ದಂಡೆಯಲ್ಲಿದ್ದ ಹುಡುಗರಿಗೆ ಗೊತ್ತಾಯಿತು. ಒಬ್ಬಿಬ್ಬರಾಗಲೆ ಸಮೀಪ ಬಂದಿದ್ದ ಗಿರೆಪ್ಪನಿಗೆ ‘ಗಿರೆಪ್ಪಾ’ ಎಂದು ಕೂಗಿ ತಮ್ಮ ಆತಂಕ ಭಯಗಳನ್ನು ಸೂಚಿಸಿದರು. ಗಿರೆಪ್ಪ ತಿರುಗಿ ನೋಡಿದರೆ ಜೀಕೆ ‘ಅಯ್ಯೋ’ ಎಂದು ಅರೆಬರೆ ಕೂಗಿ ಒಂದೆರಡು ಬಾರಿ ಹತಾಶರಾಗಿ ಕೈಬಡಿದು ಮುಳುಗಿಬಿಟ್ಟರು. ದಂಡೆಯಲ್ಲಿದ್ದವರು ಹೋ ಎಂದು ಕಿರುಚಾಡತೊಡಗಿದರು. ಗಿರೆಪ್ಪ ತಡಮಾಡದೆ ಸರ್ರನೆ ಅವರು ಮುಳುಗಿದ್ದಲ್ಲಿಗೇ ನುಗ್ಗಿ ತಾನೂ ಮುಳುಗಿದ. ನಿಸ್ಸಹಾಯಕರಾಗಿ ತಬ್ಬಬಂದ ಜೀಕೆಯನ್ನು ದೂಕಿ ಅವರ ಜುಟ್ಟು ಹಿಡಿದು ರಭಸದಿಂದ ಈಜುತ್ತ ದಂಡೆಗೆ ಬಂದ. ಹೆಣದ ಹಾಗೆ ಜೀಕೆ ತೇಲುತ್ತ ಬಂದಾಗ ಹುಡಗಿಯರು ಕಿರುಚಿಕೊಂಡರು. ಗಿರೆಪ್ಪ ಹುಡುಗರ ಸಹಾಯದಿಂದ ಅವರನ್ನು ಹೊತ್ತು ನೀರ ಹೊರಗೆ ತಂದು ಮಲಗಿಸಿ ಹೊಟ್ಟೆಯ ಮೇಲೆ ಭಾರಹಾಕಿ ಕುಡಿದ ನೀರು ಹೊರತೆಗೆದ. ಸದ್ಯ ಜೀವವಿತ್ತು. ಗಾಳಿ ಬೀಸಿದರು. ತುಸು ಹೊತ್ತಾಗ ಬಳಿಕ ಟಿ.ಬಿ.ಗೆ ತಂದು ಹಾಸಿಗೆಯ ಮೇಲೆ ಒರಗಿಸಿ ಕಾಫೀ ಕೊಟ್ಟರು. ಜೀಕೆ ಮುಖ ಅಸಹಾಯತೆ ಮತ್ತು ಅವಮಾನಗಳಿಂದ ಚಿಕ್ಕದಾಗಿತ್ತು ಮತ್ತು ಕರ್ರಗಾಗಿತ್ತು.

ಅವರು ಕಣ್ಣು ತೆರೆದಾಗ ತಮ್ಮ ಹಾಸಿಗೆಯ ಬಳಿ ರೋಜಾ ಅಳುತ್ತ ಕೂತಿರುತ್ತಾಳೆ ಎಂದುಕೊಂಡಿದ್ದರು. ಬದಲು ಎಂಟಿ ಕೂತಿದ್ದ. ನಿರಾಶೆಯಿಂದ ಅವನನ್ನು ಸಮೀಪ ಕರೆದು ಅವಳೆಲ್ಲಿ ಎಂಬಂತೆ ಸನ್ನೆ ಮಾಡಿದರು.

‘ಎಲ್ಲರೂ ಹೊರಗ ಕುಂತಾರ್ರಿ ಸರ, ಯಾರೂ ಊಟ ಮಾಡಿಲ್ಲ’ ಎಂದ.

‘ಆಕಿ ಎಲ್ಲಿ? ಗಿರ‍್ಯಾನ ಜೋಡಿ ಕುಂತಾಳೇನು?’

‘ಇಲ್ಲರಿ, ಹುಡುಗೀರು ಬ್ಯಾರೆ ಹುಡುಗರು ಬ್ಯಾರೆ ಕುಂತಾರ್ರಿ.’

ತುಸು ಸಮಾಧಾನವಾಯಿತು. ಊಟ ಮಾಡಿ ಅದೇ ದಿನ ವಾಪಸ್ ಬಂದರು.