ಅತಿಥಿಗಳು ಬಂದಿದ್ದರು. ಊರಿನ ಆಮಂತ್ರಿತರು ಹೆಂಡತಿ ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಬಂದು ಕೂತಿದ್ದರು. ಆದರೆ ಪೆಂಡಾಲ್ ಬಳಿ ಒಬ್ಬ ವಿದ್ಯಾರ್ಥಿಯೂ ಇರಲಿಲ್ಲ. ಅಧ್ಯಾಪಕರ ಗೋಳು ಹೇಳತೀರದು. ಯಾವನಾದರೂ ವಿದ್ಯಾರ್ಥಿ ಸಮೀಪದಲ್ಲಿ ಕಂಡರೂ ಸಾಕು ಕೈಹಿಡಿದು ಕರೆತರಲು ಸಿದ್ಧರಾಗಿದ್ದರು. ಪೆಂಡಾಲ್ ಬಳಿ ಅತ್ತಿತ್ತ ಸುಳಿದಾಡುತ್ತಿದ್ದರು. ನಿರಾಶರಾಗಿ ಮತ್ತೆ ಒಳಗೆ ಬರುತ್ತಿದ್ದರು. ಕೆಲವರು ಗಿರೆಪ್ಪನನ್ನು ಹುಡುಕಿಕೊಂಡು ಹೋಗಿದ್ದರು. ಕಾರ್ಯಕ್ರಮ ರದ್ದುಪಡಿಸುವುದಂತೂ ಸಾಧ್ಯವೇ ಇರಲಿಲ್ಲ. ಜೀಕೆ ಒಳಗೊಳಗೇ ಅಳ್ಳಕಾಗಿದ್ದರು. ಮುಖದಲ್ಲಿ ಹಿಂದಿನ ತೇಜಸ್ಸಿರಲಿಲ್ಲ. ಹುಬ್ಬುಗಂಟಿಕ್ಕಿ ಬಂದದ್ದನ್ನು ಎದುರಿಸಿಯೇ ತೀರಬೇಕೆಂಬ ಹಟತೊಟ್ಟಂತಿದ್ದರು. ಊರಿನ ಕೆಲವರು ವಿದ್ಯಾರ್ಥಿಗಳಿಲ್ಲದ್ದನ್ನು ಗಮನಿಸಿದ್ದರು. ಗಿರೆಪ್ಪನ್ನು ಡಿಸ್‌ಮಿಸ್ ಮಾಡಿದ್ದು ಅನೇಕರಿಗೆ ತಿಳಿದಿತ್ತು. ಮತ್ತು ಅದು ಸರಿಯಾದ ಕ್ರಮವೆಂದು ಎಲ್ಲರೂ ಒಪ್ಪಿಕೊಂಡರು. ಆದರೆ ಹುಡುಗರ ಸ್ಟ್ರೈಕ್ ನೋಡಿ ಈ ಸಂದರ್ಭದಲ್ಲಿ ಜೀಕೆ ಹಾಗೆ ಮಾಡಿದ್ದು ತಪ್ಪೆಂದೂ ಅಂದುಕೊಂಡರು. ಜೀಕೆಯವರ ಕಟ್ಟಾಭಿಮಾನಿಗಳಿಗೆ ಮಾತ್ರ ಆ ಎಸ್.ಸಿ. ಹುಡುಗನ ಪೊಗರಿನ ಬಗ್ಗೆ ಸಿಟ್ಟುಬಂದಿತ್ತು. ಆದರೆ ಯಾರೂ ಜೀಕೆಗೆ ತಮ್ಮ ಅಸಮಾಧಾನವನ್ನು ಹೇಳಲಿಲ್ಲ. ಗುಜುಗುಜು ಮಾತಾಡಿಕೊಂಡರಷ್ಟೆ. ಈ ತನಕ ಅತಿಥಿಗಳೊಂದಿಗೆ ಮಾತಾಡುತ್ತಿದ್ದ ಮುನಿಸಿ ಪಾಲಿಟಿ ಅಧ್ಯಕ್ಷರು ಪ್ರಿನ್ಸಿಪಾಲರನ್ನು ನೋಡಿ ‘ಯಾಕ್ರೀ ಸರ, ನಿಮ್ಮ ಶಿಷ್ಯರಾರೂ ಇದ್ದಾಂಗಿಲ್ಲಲ್ಲ?’ ಎಂದರು. ಅವರು ಸುಮ್ಮನಿದ್ದುದಕ್ಕೆ ತಾವು ಮಾಡಿದ್ದು ತಪ್ಪೆಂಬ ಅರಿವಾಗಿ ತಾವೂ ಉಮ್ಮನಾಗಿ ‘ಕಾರ್ಯಕ್ರಮ ಸುರು ಮಾಡೊಣೇನ್ರಿ?’ ಅಂದರು.

ಅಂತೂ ಕಾರ್ಯಕ್ರಮ ಮುಗಿಯಿತು. ಸಾಯಂಕಾಲದ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಬಂದ ಅತಿಥಿಗಳನ್ನು ಅದೇ ದಿನ ಇಳಿ ಹೊತ್ತಿನಲ್ಲಿ ಸಾಗುಹಾಕಲಾಯಿತು. ರಜಾ ಘೋಷಿಸಿದ್ದರಿಂದ ಕಾಲೇಜಿನಲ್ಲಿ ಯಾರೂ ಇರಲಿಲ್ಲ. ಸಿಪಾಯಿ ಸಿಂಗಪ್ಪನನ್ನೂ ಮನೆಗೆ ಕಳಿಸಿದ್ದರು. ಜೀಕೆ ಮಾತ್ರ ಛೇಂಬರಿನಲ್ಲಿ ಕುರ್ಚಿಗೆ ಒರಗಿ ಶೂನ್ಯಮನಸ್ಕರಾಗಿ ಕೂತಿದ್ದರು. ಸೋಲು ಅವರ ಮನಸ್ಸಿನ ಮೇಲೆ ಭಾರಿ ಆಘಾತ ಮಾಡಿತ್ತು. ಇಡೀ ಜೀವಮಾನದಲ್ಲಿ ಇಂಥದನ್ನವರು ಅನುಭವಿಸಿರಲಿಲ್ಲ. ಕಾಲೇಜನ್ನು ಕಟ್ಟಿ ಇಷ್ಟು ದಿನ ಶಿಸ್ತಿನಿಂದ ನಡೆಸಿಕೊಂಡು ಬಂದು ಈಗ ಗಿರೆಪ್ಪನಂಥ ಒಬ್ಬ ಯಃಕಶ್ಚಿತ್ ಬಾಲಕನಿಂದ ಸೋಲನ್ನು ಅನುಭವಿಸಬೇಕಾಯಿತೇ? ಈ ಭಾಗ ಹುಡುಗರು ಉಚ್ಚಶಿಕ್ಷಣ ಪಡೆಯಲಿಕ್ಕೆ ಬೆಳಗಾವಿಗೆ ಹೋಗುವುದರ ಬದಲು ಇಲ್ಲೇ ಕಲಿಯಲೆಂಬ, ಅಷ್ಟು ದೂರ ಮತ್ತು ತುಟ್ಟಿಯ ಊರಿಗೆ ಹೋಗಿ ಕಲಿಯುವುದು ಬಡವರಿಗೆಲ್ಲಿ ಸಾಧ್ಯವೆಂಬ ಘನವಾದ ಉದ್ದೇಶದಿಂದ ಕಾಲೇಜನ್ನು ಕಟ್ಟಿದ್ದರು. ಮತ್ತು ಅವರ ಉದ್ದೇಶ ಈಡೇರಿದ್ದೂ ನಿಜ. ಆದರೆ ಆ ಹುಡುಗರ್ಯಾರೂ ತನ್ನನ್ನು ಈ ದಿನ ಗುರುತಿಸಿರಲಿಲ್ಲ. ಗಿರೆಪ್ಪನಂಥ ಒಬ್ಬ ಹಲ್ಕಟ್ಟನ ಮಾತಿಗೆ ಬೆಲೆ ಕೊಟ್ಟರೇ ಹೊರತು ತನ್ನ ಮಾನ ಮರ್ಯಾದೆಯ ಬಗ್ಗೆ ಕಾಳಜಿಯ ಮಾಡಲಿಲ್ಲ. ತನ್ನ ಸ್ಥಳದಲ್ಲಿ ಇನ್ನ ಯಾರಿದ್ದರೂ ಗಿರೆಪ್ಪನನ್ನು ಡಿಸ್‌ಮಿಸ್ ಮಾಡುತ್ತಿದ್ದರು. ಬಹುಶಃ ಒಂದು ದಿನ ತಡಮಾಡಿ. ಇವರಿಗೆ ನ್ಯಾಯಾನ್ಯಾಯಗಳ ಪರಿವೆಯೇ ಬೇಡ. ತಾನೀವರೆಗೂ ಸ್ವಂತ ಕಾಳಜಿ ಬಿಟ್ಟು ಹೊಟ್ಟೆ ಕಟ್ಟಿ ಕಟ್ಟು ನಿಟ್ಟು ಅಂದದ್ದು ದಂಡವೆಂದಾಯಿತು. ಸ್ಪಷ್ಟವಾಗಿ ನಮಗೆ ಗಿರೆಪ್ಪ ಬೇಕು, ಬೇಡ ಎಂದು ಸೂಚಿಸಿದರೆಂದಾಯಿತು. ಅರ್ಥಾತ್ ಸ್ಪರ್ಧೆ ಇದ್ದದ್ದು ಗಿರೆಪ್ಪ ಮತ್ತು ಜೀಕೆ ಮಧ್ಯೆ. ಸ್ವಚ್ಛಂದತೆ ಮತ್ತು ಶಿಸ್ತುಗಳ ಮಧ್ಯೆ. ಅಂದರೆ ಇವರಿಗೆ ಶಿಸ್ತು ಬೇಡ, ಸ್ವಚ್ಛಂದತೆ ಬೇಕು ಎಂದಾಯಿತು. ಈ ಯೋಚನೆ ತಲೆಗೆ ಸೇರುತ್ತಲೂ ಜೀಕೆಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುಃಖವಾಯಿತು. ತನಗೆ ವಯಸ್ಸಾಗಿದೆ ಎಂದುಕೊಂಡರು. ಇಂದಿನ ಸಭೆಯ ಜನ ದೃಷ್ಟಿಗಳಿಂದ ತಮ್ಮನ್ನು ತಿವಿಯುತ್ತಿದ್ದುನ್ನು ನೆನೆಸಿಕೊಂಡರು. ಅವರೀಗಲೂ ತಮ್ಮ ಬಗ್ಗೆ ಮಾತಾಡಿಕೊಳ್ಳುತ್ತಿರಬಹುದು. ಗಿರೆಪ್ಪ ವಿದ್ಯಾರ್ಥಿಗಳೊಂದಿಗೆ ತನ್ನ ವಿಜಯೋತ್ಸವ ಆಚರಿಸುತ್ತಿರಬಹುದು. ಈ ತನಕ ಹತ್ತು ಮಂದಿಗೆ ಬೇಕಾಗಿ ಬದುಕಿದವರು ಬೇಡವೆಂದಾದ ಮೇಲೆಯು ಅವರ ಮಧ್ಯೆ ಬದುಕುವುದು ನಾಚಿಕೆಗೇಡು. ಸಾಕಲ್ಲ ಈತನಕ ತಾನು ನಂಬಿದ್ದಂತೆ ನಡೆದಾಯಿತು. ಹಿರಿಯರು ಹಾಕಿಕೊಟ್ಟ ದಾರಿ ತುಳಿದಾಯಿತು. ಇನ್ನುಳಿದಂತೆ ಮನೆಯಲ್ಲಿದ್ದು ಶಿವಲಿಂಗಾ ಎಂದುಕೊಂಡಿದ್ದರಾಯಿತು. ಇದೇ ಸರಿಯೆಂದು ನಿಶ್ಚಯಿಸಿ ರಾಜೀನಾಮೆ ಬರೆಯಲು ಸಿದ್ಧರಾದರು. ಈ ಯೋಚನೆಗಳ ಮಧ್ಯೆ ತಾವು ಕಗ್ಗತ್ತಲಲ್ಲೇ ಕೂತಿರುವುದು ಗೊತ್ತಾಗಿರಲಿಲ್ಲ. ಲೈಟು ಹಾಕಿ ಕಾಗದ ಪೆನ್ನು ತಕ್ಕೊಂಡರು. ಮುನಿಸಿಪಾಲ್ಟಿಯ ಅದ್ಯಕ್ಷರ ವಿಳಾಸ ಬರೆದು, – ಅಂದ ಹಾಗೆ ತಮ್ಮ ರಾಜೀನಾಮೆಯಿಂದ ಯಾರ್ಯಾರು ಏನೇನು ಅಂದುಕೊಂಡಾರು – ಎಂದು ಧೇನಿಸಿದರು. ಬಹುಶಃ ಎಲ್ಲರಿಗೂ ಅಘಾತವಾಗಬಹುದು. ಗಿರೆಪ್ಪ ಇದನ್ನು ನಿರೀಕ್ಷಿಸಿರಲಾರ. ಕೆಲವು ಹುಡುಗರಾದರೂ ತನ್ನ ಪಕ್ಷಪಾತಿಗಳಿರಬಹುದಲ್ಲ. ಅವರು ಗಿರೆಪ್ಪನಿಗೆ ಉಗಿದು ತನ್ನ ರಾಜೀನಾಮೆ ವಾಪಸ್ ತಗೋಬೇಕೆಂದು ಸಂಘ ಹೂಡಿಯಾರು ಅಥವಾ ಹೂಡಲಿ ಬಿಡಲಿ ತನಗೇನಾಗಬೇಕಾಗಿದೆ? – ಎಂದು ಗಟ್ಟಿಯಾಗಿ ರಾಜೀನಾಮೆ ಬರೆಯತೊಡಗಿದರು. ವಾಕ್ಯವಾಕ್ಯವನ್ನೂ ಅಳೆದು ತೂಕ ಮಾಡುತ್ತಿದ್ದುದರಿಂದ ಅವರಿಗೆ ಬೇರೆ ಪರಿವೆಯೇ ಇರಲಿಲ್ಲ.

ಬರೆಯುತ್ತಿದ್ದಾಗಲೇ ‘ಮೇ ಐ ಕಮಿನ್ ಸರ’ ಎಂದೊಂದು ಹೆಣ್ಣು ದನಿ ಕೇಳಿಸಿತು. ಕತ್ತೆತ್ತಿ ನೋಡಿದರು. ರೋಜಾ ಬಂದಿದ್ದಳು. ಇವರ ಎಸ್ಸಿಗೂ ಕಾಯದೆ ಒಳಬಂದು ಕೂತುಕೋ ಎಂದು ಹೇಳಿಸಿಕೊಳ್ಳದೆ ತಾನೇ ಕುರ್ಚಿಯೊಂದನ್ನು ಅವರ ಪಕ್ಕಕ್ಕೆ ಸರಿಸಿಕೊಂಡು ಕೂತೇ ಬಿಟ್ಟಳು. ಸರಿಯಾಗಿ ಆಶ್ಚರ್ಯಪಡಲಿಕ್ಕೂ ಆಗದೆ ಅವಳನ್ನೇ ನೋಡುತ್ತಿದ್ದಂತೆ ಆಕೆ ಅವರ ಟೇಬಲ್ ಮೇಲಿನ ಎಡಗೈ ಮೇಲೆ ತನ್ನ ಕೋಮಲವಾದ ಹಸ್ತ ಊರಿ, ‘ಸರ, ದಯಮಾಡಿ ಗಿರೆಪ್ಪನ್ನ ವಾಪಸ್ ತಗೊಳ್ರಿ’ ಎಂದಳು. ಕೈಸ್ಪರ್ಶ ಬೇರೆ ಸಂದರ್ಭದಲ್ಲಾಗಿದ್ದರೆ ಏನಂದುಕೊಳ್ಳುತ್ತಿದ್ದರೋ, ಈಗ ಮೆಲ್ಲಗೆ ಅವಳ ಹಸ್ತದಲ್ಲಿದ್ದ ತಮ್ಮ ಕೈಯನ್ನು ವಾಪಸ್ ತಗೊಂಡು ಎರಡೂ ಕೈಬೆರಳು ಹೆಣೆದು ಹಿಂದೆ ಒರಗಿ ಇವಳನ್ನೇ ನೋಡಿದರು. ತಾವು ರಾಜೀನಾಮೆ ಕೊಡುತ್ತಿದ್ದುದು ಒಂದರ್ಥದಲ್ಲಿ ಇವಳಿಗೋಸ್ಕರ ಅಲ್ಲವೇ? ಆದರೆ ಆ ಯಾವ ಭಾವನೆಯೂ ಅವಳ ಮುಖದಲ್ಲಿರಲಿಲ್ಲ. ಅವಮಾನವಾದದ್ದು ಇವಳಿಗೆ. ಆದದ್ದು ಗಿರೆಪ್ಪನಿಂದ. ಈಗ ಇವಳೇ ಅದೇ ಗಿರೆಪ್ಪನನ್ನು ವಾಪಸ್ ಕಾಲೇಜಿಗೆ ತಕ್ಕೊಳ್ಳಲು ಹೇಳುತ್ತಿದ್ದಾಳೆ! ಅವ ಇವಳ ಮಿಂಡನೇನೊ! ಆಯಿತು. ತನಗಿದೆಲ್ಲ ಯಾಕೆ? ಆದರೂ ಆಟ ಆಡಬಹುದೆನ್ನಸಿತು.

‘ಯಾಕ ತಗೋಬೇಕು’

‘ಯಾಕಂದ್ರ ಆತನಿಗೆ ಹೆಂಗೂ ಗೊತ್ತಾಗೇತ್ರಿ.’

‘ಗೊತ್ತಾಗೋದೇನು?’

‘ನಾ ಬ್ಯಾರೆದವರನ್ನು ಪ್ರೀತಿಮಾಡೋದು’ – ಎಂದು ಹೇಳಿ ಬೆರಳಿನಿಂದ ಟೇಬಲ್ ಉಜ್ಜುತ್ತ ಮುಖ ಕೆಳಗೆ ಮಾಡಿದಳು. ಜೀಕೆಗದು ಅರ್ಥವಾಗಲಿಲ್ಲ. ‘ಅಂದರ?’ ಎಂದರು.

‘ಅವ ನನ್ನ ಪ್ರೀತಿ ಮಾಡತೇನಂತ ಐದಾರು ಕಾಗದ ಬರೆದಿದ್ದ. ನಾ ಸುಮ್ಮಕಿದ್ದೆ. ನಾ ಯಾರಿಗೊ ಒಂದು ಪ್ರೇಮಪತ್ರ ಬರೆದು ನೋಟ ಬುಕ್ಕಿನಾಗ ಇಟ್ಟಕೊಂಡಿದ್ದೆ. ಅಲ್ಲೇ ಕುರ್ಚಿ ಮಾಲಿಟ್ಟು ನಾ ಪೆಂಡಾಲದಾಗ ಮಾಲೀ ಕಟ್ಟತಿದ್ದೆ. ಅವ ಆ ಪತ್ರ ನೋಡಿದ. ಹೊಟ್ಟೆಕಿಚ್ಚಿನಿಂದ ಉರಿದ. ಮರೀಗಿ ನನ್ನ ಕರೆದು ‘ಇದು ಖರೆ ಏನು?’ ಅಂದ. ‘ಹೌದು’ ಅಂದೆ. ಅದಕ್ಕ ನನ್ನ ಹಿಡಕೊಂಡು ಅವಮಾನ ಮಾಡಾಕ ಬಂದ. ನಾ ಓಡಿದೆ. ಇಷ್ಟs ನಡೆದದ್ದು.

ಕೇಳಿ ಜೀಕೆ ಮಾಸ್ತರರೊಳಗೆ ಚೇತರಿಕೆ, ಕಚಗುಳಿ ಇಟ್ಟಂತಾಯಿತು. ತಗ್ಗಿದ ದನಿಯಲ್ಲಿ

‘ಅಂದರೆ ಅವ ಕಿಸ್ ಮಾಡ್ಲಿಲ್ಲ’ ಎಂದು

‘ಇಲ್ಲರಿ’

ತುಸು ನೆಮ್ಮದಿಯಾಯಿತು. ಓಹೋ ಇಷ್ಟೇನೋ ನಡೆದದ್ದು. ಆದರೆ ಎಂಟಿ ಹೇಳಿದ್ದೇ ಬೇರೆ. ಥೂ ಅಯೋಗ್ಯ. ಅವನ ಮಾತನ್ನ ನಂಬಿದೆನಲ್ಲ. ನಾನೆಂಥ ಮೂರ್ಖ. ಹೋಗಲಿ, ಖರೆ ಏನೆಂದು ಎಮ್ಮೆಸ್‌ನನ್ನಾದರೂ ವಿಚಾರಿಸಬಹುದಿತ್ತು. ಆದರೇನು ಕಿಸ್ ಮಾಡಿರಲಿ ಮಾಡಿಲ್ಲದಿರಲಿ ಹೀಗೆಲ್ಲ ಹುಡಿಗೇರನ್ನ ಬೇಕಾಬಿಟ್ಟಿ ಛೇಡಿಸೋದೆಂದರೆ? ಇದೂ ಡಿಸ್‌ಮಿಸ್ ಮಾಡೋದಕ್ಕೆ ಲಾಯಖ್ಖಾದ ಅವ್ಯವಹಾರವೆ. ಎದೆಯಲ್ಲಿ ಅಸೂಯೆಯೊಂದು ಬೆರಳಾಡಿಸಿದಂತಾಯಿತು. ತಗ್ಗಿದ ದನಿಯಲ್ಲಿ,

‘ನೀ ಬ್ಯಾರೆದವರನ್ನು ಪ್ರೀತಿ ಮಾಡತೇನಂದ್ಯಲ್ಲ, ಯಾರದು?’

– ಎಂದರು. ಆದರೆ ಇಷ್ಟು ನೇರವಾಗಿ ಕೇಳಿದ್ದು ತಪ್ಪೆಂದು ತಕ್ಷಣ ಹೊಳೆದು,

‘ನೋಡು ಪ್ರಿನ್ಸಿಪಾಲ ಆಗಿ ನಾ ಭಾಳ ಎಚ್ಚರದಿಂದ ಇರಬೇಕಾಗ್ತದ. ಅವ ಹಾಂಗೆ ಮಾಡಿದ್ದು ಜಲಸಿಯಿಂದ. ನಾಳೆ ಇಬ್ಬರಿಗೂ ಜಗಳ ಆಗಬಹುದು. ಏನೇನೋ ಅನಾಹುತ ಆಗಬಹುದು. ನಾವು ಮುನ್ನೆಚ್ಚರಿಕೆ ತಗೋಬೇಕ ನೋಡು ಅದಕ್ಕೆ ಕೇಳಿದೆ.

ರೋಜಾ ಮಾತಾಡಲಿಲ್ಲ. ನಾಚಿಕೊಂಡು ಮುಖ ಕೆಳಗೆ ಹಾಕಿದಳು. ಕೆನ್ನೆ ಕೆಂಪೇರಿದ್ದವು. ಅವಳ ಮೈಮಾಟವನ್ನು ಜೀಕೆ ಮನಸಾರ ನೋಡಿದರು. ತುಸು ಹೊತ್ತು ಕಣ್ಣಿನಿಂದ ಅವಳ ಅಂಗಾಂಗಳನ್ನು ತೀಡಿ ತೀಡಿ, ಕೊನೆಗೆ ಮಾತಿಲ್ಲದೆ ಬಹಳ ಹೊತ್ತು ಕೂತಿರಬಾರದಲ್ಲ ಎಂದು ಮತ್ತೆ ‘ಯಾರದು, ನೀ ಪ್ರೀತಿಸಿದ್ದು ಯಾರನ್ನ?’ ಎಂದರು. ಆಕೆ ಮೆಲ್ಲಗೆ ತನ್ನ ಬ್ಯಾಗಿನಿಂದ ಒಂದು ಮಡಿಸಿದ ಕಾಗದ ತೆಗೆದು ಅವರ ಮುಂದಿಟ್ಟಳು. ‘ನಾ ಓದಲಾ?’ ಎಂದರು. ಅವಳು ‘ಹ್ಞೂ’ ಎಂಬಂತೆ ಕತ್ತು ಹಾಕಿದೊಡನೆ ತನಗಿದರಲ್ಲಿ ಆಸಕ್ತಿ ಇಲ್ಲ, ಆದರೇನು ಮಾಡುವುದು, ಡ್ಯೂಟಿ ನೋಡು ಎಂಬಂತೆ ನಿರ್ಲಕ್ಷ್ಯದಿಂದ ಕಾಗದ ಬಿಚ್ಚಿ ನೋಡಿದರು. ‘ಪ್ರಿಯ ಜೀಕೆ ಎಂದು ಸುರುವಾಗಿತ್ತು. ತಕ್ಷಣ ಮೈಗೆ ವಿದ್ಯುತ್ ಅಘಾತವಾಗಿ ಒರಗಿದ್ದವರು ಮುಂದೆ ಬಂದು ಕೆಳಗಿನ ಸಹಿ ನೋಡಿದರು. “ನಿಮ್ಮೊಲವಿನ ರೋಜಾ’’ ಎಂದಿತ್ತು. ನಡುಗುವ ಕೈಗಳಲ್ಲಿ ಕಾಗದ ಹಿಡಿದು ಸರಸರ ಓದಿದರು. ನಿಮ್ಮನ್ನು ತೀವ್ರವಾಗಿ ಪ್ರೀಸುತ್ತೇನೆಂದೂ ಇಂಥ ಐದಾರು ಪ್ರೇಮಪತ್ರಗಳನ್ನು ಬರೆದು ನಿಮಗೆ ಕೊಡಲಾರದೆ ಹರಿದು ಹಾಕಿದ್ದೇನೆಂದೂ ಬರೆದಿದ್ದಳು. ‘ಪ್ರೇಮಕ್ಕೆ ಕಣ್ಣಿಲ್ಲವೆಂದು ಸಾಹಿತಿಗಳೂ ಹೇಳುತ್ತಾರೆ. ನನಗೂ ಹಾಗೆ ಆಗಿದೆ ನಿಮಗೆ ಆಗಲೇ ಮದುವೆಯಾಗಿದೆ. ಇಬ್ಬರ ಮಧ್ಯೆ ಸಾಕಷ್ಟು ವಯಸ್ಸಿನ ಅಂತರವಿದ್ದರೂ ನೀವು ನನ್ನ ಹೃದಯವನ್ನು ತುಂಬಿದ್ದೀರಿ. ಈ ನಿಮ್ಮ ಪ್ರೇಮದಿಂದ ಪಾರಾಗುವುದಕ್ಕೆ ಈ ಮೂರು ವರ್ಷಗಳಿಂದಲೂ ಪ್ರಯತ್ನಿಸಿ ವಿಫಲಳಾಗಿದ್ದೇನೆ. ಈಗ ನೀವು ನನ್ನ ಪ್ರೇಮವನ್ನು ಸ್ವೀಕರಿಸಲೇಬೇಕೆಂದು ಕಳಕಳಿಯಿಂದ ತ್ರಿಕರಣಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇನೆ. ಇಂತೀ ನಿಮ್ಮೊಲವಿನ ರೋಜಾ’ ಎಂದಿತ್ತು. ಜೀಕೆ ತಮ್ಮ ಕಣ್ಣುಕಿವಿಗಳನ್ನು ಮತ್ತು ರೋಜಾಳನ್ನು ನಂಬದಾದರು. ಇನ್ನೊಮ್ಮೆ ಓದಿ ಅವಳ ಕಡೆ ನೋಡಿದರು. ಮೈಕಾವೇರಿ ನಾಳಗಳ ನೆತ್ತರು ವಿರುದ್ಧ ದಿಕ್ಕಿನಲ್ಲಿ ಹರಿದಂತಾಯಿತು. ಮಾತಾಡಬೇಕೆಂದರೆ ಗಂಟಲೊಣಗಿತ್ತು. ತೊದಲುತ್ತ ಏನೋ, ಬಹುಶಃ ರೋಜಾ ಎಂದು ಹೇಳುವಷ್ಟರಲ್ಲಿ ಕರೆಂಟು ಹೋಯಿತು. ಕತ್ತಲೆಯಲ್ಲಿ ಬೆಳಕಿಗಾಗಿ ಎಂಬಂತೆ ಟೇಬಲ್ ಮೇಲೆ ಕೈಯಾಡಿಸುತ್ತಿದ್ದಾಗ ಅವಳ ಕೈಸಿಕ್ಕಿತು. ಕೈಕೈ ಮಿಲಾಯಿಸಿತು. ಕೈ ತೋಳಿನಗುಂಟ ಹರಿದು ಅವಳ ಬೆನ್ನಿನ ಇಳಿಜಾರಿಗಿಳಿಯತೊಡಗಿತು. ಏನಾಯಿತಯೆಂದು ತಿಳಿಯುವಷ್ಟರಲ್ಲಿ ಯಾವುದೋ ಶಕ್ತಿಯ ಸೆಳೆತಕ್ಕೆ ಸಿಕ್ಕಂತಾಗಿ ರೋಜಾಳನ್ನು ತಬ್ಬಿಕೊಂಡು ಮುತ್ತಿಟ್ಟರು. ಅವಳು ಅವರ ಕತ್ತನ್ನು ತೋಳುಗಳಿಂದ ಬಳಸಿ ಅವರ ಸುಡುವ ಹಣೆಯ ಮೇಲೆ ತಣ್ಣಗಿನ ತುಟಿ ಒತ್ತಿ ಕಿವಿಯಲ್ಲಿ ‘ಸರ ಆಯ್ ಲವ್ ಯೂ’ ಎಂದು ಪಿಸುಗುಟ್ಟಿದಳು. ಅಷ್ಟರಲ್ಲಿ ಲೈಟ್ ಬಂತು.

ರೋಜಾ ಸರ್ರನೆ ಹೊರಗೋಡಿ ಮರೆಯಾದಳು. ಜೀಕೆ ನೆಲಕ್ಕಿಳಿದರು. ಮೈ ಜ್ವರದಿಂದೆಂಬಂತೆ ಸುಡುತ್ತಿತ್ತು. ಕೈಕಾಲಲ್ಲಿಯ ಶಕ್ತಿ ಉಡುಗಿದೆ ಎನ್ನಿಸಿತು. ಥರಥರ ನಡುಗುತ್ತಿದ್ದರು. ತನಗೇ ತಿಳಿಯದ ತನ್ನ ಹೃದಯದ ಗುಟ್ಟನ್ನು ಪ್ರಥಮಬಾರಿ ಕಂಡು ಭೀತರಾದಂತಿದ್ದರು. ಅವಸರದಿಂದ ಟೇಬಲ್ ಮೇಲಿನ ಅವಳ ಪತ್ರ ತಗೊಂಡು ಜೇಬಿಗಿಳಿಬಿಟ್ಟು ಬಾಗಿಲಿಗೋಡಿ ಹೊರಗೆ ನೋಡಿದರು. ದೂರದಲ್ಲಿ ಪೆಂಡಾಲ್‌ನಲ್ಲಿ ಮಾತ್ರ ಯಾರೋ ಹುಡುಗ ಸುಳಿದಾಡುತ್ತಿದ್ದ ಹಾಗಿತ್ತು. ಯಾರದು, ಅರೆ ಗಿರೆಪ್ಪ! ಜೀಕೆ ಕಣ್ಣು ಭಗ್ಗನೆ ಹೊತ್ತಿಕೊಂಡವು. ಗಟ್ಟಿಯಾಗಿ ನಿಂತರು. ತುಸು ಹೊತ್ತು ಮತ್ಸರದಿಂದ ನೋಡಿ ‘ಗೆದ್ದವನು ನೀನಲ್ಲೊ ಮಗನ, ನಾನು! ನಾನು ಗೆದ್ದವನು’ ಎಂದು ಹೇಳಿ ತೊಡೆ ತಟ್ಟಿಕೊಂಡ, ತಟ್ಟಿಕೊಂಡು! ತಕ್ಷಣ ಹಾಗೆ ತಟ್ಟಿಕೊಂಡದ್ದು ಅನಾಗರಿಕವೆನ್ನಿಸಿ, ಸದ್ಯ ಯಾರೂ ನೋಡಲಿಲ್ಲವೆಂದು ಸಮಾಧಾನದಿಂದ ಹಿಂದಿರುಗಿದರು.