ಆ ದಿನ ಜೀಕೆ ಕಳಕಳಿಯಿಂದಲೇ ಕ್ಲಾಸಿಗೆ ಹೋದರು. ಕ್ಲಾಸಿನ ತುಂಬ ಒಮ್ಮೆ ಕಣ್ಣಾಡಿಸಿ ಹಾಜರಿ ಬುಕ್ಕನ್ನು ಕೈಗೆತ್ತಿಕೊಂಡರು. ವಿದ್ಯಾರ್ಥಿಗಳ ಹೆಸರು ಕೂಗುತ್ತ ‘ರೋಜಾ’ ಎಂದರು. ‘ಎಸ್ಸರ್’ ಎಂದೊಂದು ಹೆಣ್ಣಿನ ದನಿ ಕೇಳಿದೊಡನೆ ತಲೆ ಎತ್ತಿ ದನಿ ಬಂದ ಕಡೆ ನೋಡಿದರು. ಇಬ್ಬರ ಕಣ್ಣು ಕೂಡಿದವು. ಒಂದು ಕ್ಷಣ ಹಾಗೆ ನೋಡಿ ಮತ್ತೆ ಮುಂದಿನ ಹೆಸರಿಗೆ ಹೋದರು. ಸ್ಪೆಶಲ್ಲಾಗಿ ಆಕೆಯನ್ನು ಗಮನಿಸಿದರಲ್ಲ, ಓಹೊ, ಅವಳ ವ್ಯವಹಾರ ಪ್ರಿನ್ಸಿಪಾಲರವರೆಗೆ ಹೋಗಿದೆಯೆಂದು, ಅವಳಿಗೇನೋ ಕಾದಿದೆಯೆಂದು ಹುಡುಗರು ಆಡಿಕೊಂಡರು. ಆಯ್ತು, ಜೀಕೆ ಕಾಳಿದಾಸನ ವಿಕ್ರಮೋರ್ವಶೀಯವನ್ನ ಅದೇ ತಮ್ಮ ನಗಾರಿ ದನಿಯಲ್ಲಿ ಸುರು ಮಾಡಿದರು. ಓದಿ ವಿವರಿಸುವಾಗ ಕದ್ದು ಕದ್ದು ಅವಳ ಕಡೆ ನೋಡಿದರು. ಆದರೆ ಹಾಳಾದ ಆ ಹುಡುಗಿ ಇವರಿಗಿಂತ ಮೊದಲೇ ಬಹುಶಃ ಭಯದಿಂದ ಅಗಲವಾಗಿ ತೆರೆದ ತನ್ನ ಬಟ್ಟಲುಗಣ್ಣುಗಳಿಂದ ಇವರನ್ನೇ ನೋಡುತ್ತಿದ್ದಳು. ತಪ್ಪು ಮಾಡಿದವರಂತೆ ತಕ್ಷಣ ದೃಷ್ಟಿಯ ಗುರಿ ಬದಲಿಸಿ ಮತ್ತೆ ಪುಸ್ತಕದತ್ತ ಇಲ್ಲವೆ ಬೇರೆಯವರತ್ತ ನೋಡುತ್ತಾ ಪಾಠ ಮಾಡುತ್ತಿದ್ದರು.

ಇದಕ್ಕಿದ್ದಂತೆ ಹುಡುಗರೆಲ್ಲ ಪಾಠದ ಕಡೆ ಗಮನ ನೀಡದೆ ತಮ್ಮನ್ನು ಮತ್ತು ಆ ಹುಡುಗಿಯನ್ನು ಮಾತ್ರ ವಿಶೇಷವಾಗಿ ಗಮನಿಸುತ್ತಿದ್ದಾರೆಂದು ಅನ್ನಿಸಿತು. ತಕ್ಷಣ ಅದೇನು ಚಾತುರ್ಯವೋ ಸಿದ್ಧಬುದ್ಧಿಯೋ ಅವಳ ಕಡೆ ನೋಡದೆ ಊರ್ವಶಿಯ ರೂಪಲಾವಣ್ಯವನ್ನು ಆವೇಶಭರಿತರಾಗಿ ಚಮತ್ಕಾರದ ಅಲಂಕಾರಿನ ಭಾಷೆಯಲ್ಲಿ ವರ್ಣಿಸತೊಡಗಿದರು. ತುಂಬ ಸೂಕ್ಷ್ಮಗ್ರಾಹಿ ಹುಡುಗರು ಅವರ ದನಿ, ಅವರಿಗೆ ಅಸಹಜವಾದ ರೀತಿಯಲ್ಲಿ ತಾರಕಕ್ಕೇರಿದ್ದನ್ನು ಗಮನಿಸಿದರು. ಜೀಕೆ ಮುಖದಲ್ಲಿ ಬೆವರೊಡೆದಿತ್ತು ಎಂದರೆ ಅವರು ಹ್ಯಾಗೆ ಮತ್ತು ಎಷ್ಟು ಭಾವಪೂರಿತರಾಗಿದ್ದರೆಂಬುದನ್ನು ಊಹಿಸಬಹುದು. ಇನ್ನೇನು ಅವರು ವಿವರಿಸುತ್ತಿದ್ದ ಪದ್ಯ ಮುಗಿದು ಇನ್ನೊಂದು ಪದ್ಯ ಓದಬೇಕು; ಮತ್ತು ಆಗಲಾದರೂ ಅವರು ತಮ್ಮ ಸಹಜ ನಗಾರಿ ದನಿಗೆ ಬಂದಾರೆಂದು ಹುಡುಗರು ಹಾರೈಸುತ್ತಿದ್ದಾಗ, ಆ ಹುಡುಗಿ, ಅದೇ ರೋಜಾ ಎಂಬವಳು ತೇಲಗಣ್ಣು ಮೇಲುಗಣ್ಣಾಗಿ ಬವಳಿ ಬಂದು ಪಕ್ಕದ ವಿದ್ಯಾರ್ಥಿನಿಯ ಮೇಲೆ ಮೂರ್ಛೆ ಬಿದ್ದಳು. ಬಿದ್ದ ಸಪ್ಪಳಕ್ಕೆ ವಿದ್ಯಾರ್ಥಿಗಳಲ್ಲಿ ಗಲಿಬಿಲಿಯಾಗಿ ಜೀಕೆ ಪಾಠ ನಿಲ್ಲಿಸಿ ಮನುಷ್ಯರೊಳಗೆ ಬಂದರು. ಅಕ್ಕಪಕ್ಕದ ವಿದ್ಯಾರ್ಥಿಗಳಾಗಲೇ ಅವಳ ಸುತ್ತ ಮುಕರಿದ್ದರು. ಹುಡುಗಿಯೊಬ್ಬಳು ಪುಸ್ತಕದಿಂದ ಗಾಳಿ ಬೀಸುತ್ತಿದ್ದಳು. ಅಷ್ಟರಲ್ಲಿ ಸಿಪಾಯಿ ಸಿಂಗಪ್ಪ ನೀರು ತಂದು ರೋಜಾಳ ನೆತ್ತಿಗೆ ಬಡಿದು ಮುಖಕ್ಕೆ ಸಿಂಪಡಿಸಿದ. ಡಾಕ್ಟರಿಗೆ ಫೋನ್ ಮಾಡಲು ಒಬ್ಬ ಓಡಿದ. ಪಕ್ಕದ ಕ್ಲಾಸಿನಲ್ಲಿದ್ದ ಒಬ್ಬಿಬ್ಬರು ಅಧ್ಯಾಪಕರೂ ಬಂದರು. ಒಟ್ಟಿನಲ್ಲಿ ಅದೊಂದು ದೃಶ್ಯವೆ ಆಯ್ತು. ತುಸು ಹೊತ್ತಾದ ಮೇಲೆ ಹುಡುಗಿ ಮೆಲ್ಲಗೆ ಕಣ್ಣು ತೆರೆದಳು. ಸದ್ಯ ಜೀವ ಬಂತಲ್ಲ ಎಂದುಕೊಂಡು ಜೀಕೆ ಮೆಲ್ಲನೆ ತುಟಿ ಪಿಟಕ್ಕೆನ್ನದೆ, ಯಾರ ಕಡೆಗೂ ನೋಡದೆ ತಮ್ಮ ಛೇಂಬರಿಗೆ ಹೋದರು.

ತಮ್ಮ ಕ್ಲಾಸುಗಳಲ್ಲಿ ಹಿಂದೆಂದೂ ಹೀಗೆ ಆಗಿರಲಿಲ್ಲವಲ್ಲ, ಜೀಕೆ ತುಸು ಚಿಂತೆ ಮಾಡಿದರು. ಮುಖ ಕಪ್ಪಿಟ್ಟಿತು. ಕರ್ಚೀಫಿನಿಂದ ಒರೆಸಿಕೊಂಡರು. ಅವರಿಗೆ ಆಶ್ಚರ್ಯವಾದದ್ದು ಆ ಹುಡುಗಿ ಮೂರ್ಚೆ ಬಿದ್ದದ್ದಕ್ಕಲ್ಲ; ಬಿದ್ದಿದ್ದಾಳು, ಮೈಯಲ್ಲಿ ಹುಜಾರಿರಲಿಕ್ಕಿಲ್ಲ, ಇಲ್ಲಾ ನಿದ್ದೆಗೆಟ್ಟಿದ್ದಾಳು. ಆದರೆ ತನ್ನ ದನಿ ಈ ದಿನ ಅಸ್ವಾಭಾವಿಕ ರೀತಿಯಲ್ಲಿ ಏರಿದ್ದಿತ್ತಲ್ಲ, ಅದಕ್ಕೆ. ಯಾಕೆ ಹೀಗಾಯ್ತೆಂದು ಕಾರಣ ತಿಳಿಯಲು ನೋಡಿದರು, ಬಗೆಹರಿಯಲಿಲ. ಎಂದು ಹೊರಗೆ ಹೋಗಿ ದೂರದಲ್ಲಿ ಗುಂಪು ಗುಂಪಾಗಿ ನಿಂತಿದ್ದ ಹುಡುಗರನ್ನು ಮತ್ತೆ ಕ್ಲಾಸಿಗೆ ಕಳಿಸಿ, ಕ್ಲಾಸುಗಳು ಯಥಾಪ್ರಕಾರ ನಡಯುವ ತನಕ ಅಲ್ಲೇ ನಿಂತರು. ಹುಡುಗರಲ್ಲಿ ಗಿರೆಪ್ಪನೂ ನಿಂತಿದ್ದ. ಈಗ ಅವರ ತಲೆಯಲ್ಲಿ ಮತ್ತೆ ಎಂಟಿ ಹೇಳಿದ ಮಾತು ನುಸುಳಿದವು. ಮೂರ್ಛೆ ಬಿದ್ದ ಹುಡುಗಿಯನ್ನು ಜ್ಞಾಪಿಸಿಕೊಂಡರು. ಹುಡುಗಿಯೇನೋ ಚೆಲುವೆಯೇ. ಬಿಳಿ ಹುಡುಗಿ. ಆ ವಯಸ್ಸಿಗೆ ತುಸು ಹೆಚ್ಚೆನಿಸುವಂತೆ ಬೆಳೆದಿದ್ದಳು. ದಟ್ಟಕೂದಲಿನ, ಕತ್ತಿ ಧಾರೆಯಂಥ ಎಡಬೈತಲೆಯ ಪುಟ್ಟತಲೆ, ಸುಂದರವಾಗಿ ಬಾಗಿದ ಹುಬ್ಬು, ಮೂಗು ನೀಳವಾಗಿ ಅಂತ್ಯದಲ್ಲಿ ತುಸು ಚಪ್ಪಟೆಯಾಗಿ ಅವಳ ಸೌಂದರ್ಯವನ್ನು ಹೆಚ್ಚಿಸಿತ್ತೆನ್ನಬಹುದು. ತೆಳುದುಟಿಯ ಪುಟ್ಟಬಾಯನ್ನು ಅರೆ ತೆರದಿದ್ದಳಾದರೂ ಸಹಜವಾಗಿ ಸಖಿಯ ಆಲಿಂಗನದಲ್ಲಿ ನಿದ್ದೆ ಹೋಗಿದ್ದಾಳೆನಿಸುತ್ತಿತ್ತೇ ಹೊರತು ಮೂರ್ಛೆ ಬಿದ್ದಿದ್ದಾಳೆಂದು ಅನಿಸುತ್ತಲೇ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಮೆಚ್ಚಿದ್ದು ಅವಳ ಮುಖಭಾವವನ್ನ, ಅದು ಮಗುವಿನಂತೆ ಮುಗ್ಧವಾಗಿತ್ತು ಮತ್ತು ಸರಳವಾಗಿತ್ತು. ಇಂಥವಳು ಗಿರೆಪ್ಪನನ್ನು ಮೆಚ್ಚವಳೆ? ಆತ ಸೊಕ್ಕಿನ ಕಾಡುಕೋಣದಂತಿದ್ದ. ಆ ಕಾಡು ಪ್ರಾಣಿಗೂ ಈ ಹೂ ಮುಗ್ದೆಗೂ ಎಲ್ಲಿಯ ಸಂಬಂಧ ಸಾಧ್ಯ? ಎಲ್ಲೋ ಮಾತಾಡಿದ್ದಾರಾದೀತು. ಅವನೇನೋ ಅಂಥವನೇ. ತಾನೇ ಮ್ಯಾಲೆಬಿದ್ದು ಹಲ್ಲುಗಿಂಜಿ ಮಾತಾಡಿಸಿದ್ದಾನು. ಅವ ಏನೆಂದನೋ, ಇವಳೇನಂದಳೋ, ಅಷ್ಟಕ್ಕೇ ಕೈಕಾಲು ಮೂಡಿಸಿ ಕಥೆ ಕಟ್ಟಿದ್ದಾರಾದೀತು. ಕಥೆಯೇ ಅನ್ನೋದಾದರೆ ಇಂಥ ಎಷ್ಟನ್ನು ತಾನು ಕೇಳಿಲ್ಲ? ಇದೂ ಅಂಥದೇ ಒಂದು ಎಂದು ಮನಸ್ಸಿನಿಂದ ಆ ವಿಚಾರ ತಳ್ಳಿಹಾಕಿ ಹಿಂದಿರುಗಿದರು.