ಕಾಲೇಜು ಸುರುವಾಗಿ ಹತ್ತುವರ್ಷ ಪೂರ್ತಿಯಾಗಿತ್ತಲ್ಲ. ಆ ಅವಧಿಯಲ್ಲಿ ಕಾಲೇಜು ಸಾಧಿಸಿದ ಪ್ರಗತಿ ಅಸಾಮಾನ್ಯವಾಗಿತ್ತು. ಮೂರು ಬಾರಿ ಬಿ.ಎ. ರ‍್ಯಾಂಕುಗಳು, ಡಿಬೇಟಿನ ರಾಜ್ಯಮಟ್ಟದ ಆರು ಷೀಲ್ಡುಗಳು, ಕಬಡ್ಡಿ ಷೀಲ್ಡುಗಳು… ಸ್ಥಳೀಯ ಮತ್ತು ವೈಯಕ್ತಿಕ ಪ್ರಶಸ್ತಿಗಳು ಇಷ್ಟನ್ನೇ ಲೆಕ್ಕಕ್ಕೆ ಹಿಡಿದರೆ ಒಟ್ಟು ಪ್ರಶಸ್ತಿಗಳೇ ನೂರು ಚಿಲ್ಲರೆ ಆದಾವು. ಈ ಹತ್ತೂ ವರ್ಷಗಳ ರಿಜಲ್ಟು ಕೂಡ ಶೇಕಡಾ ಐವತ್ತಕ್ಕಿಂತ ಕಮ್ಮಿ ಇಳಿದಿದ್ದಿಲ್ಲ. ಸದರಿ ಕಾಲೇಜಿನ ಶೀಘ್ರ ಯಶಸ್ಸಿನ ಖ್ಯಾತಿ ಆ ಭಾಗದ ದಿನಪತ್ರಿಕೆಯಲ್ಲಿ ಮೂರು ಲೇಖನಗಳಲ್ಲಿ ಮೊಳಗಿತ್ತು. ಆ ಮೂರರ ಪೈಕಿ ಒಂದರಲ್ಲಂತೂ ಫೋಟೋ ಸಮೇತ ಜೀಕೆ ಮಾಸ್ತರರ ಸಂದರ್ಶನ ಪ್ರಕಟವಾಗಿ ಅದರಲ್ಲಿ ವಿಶೇಷವಾಗಿ ಅವರ ಕಟ್ಟುನಿಟ್ಟು ಶಿಸ್ತು ಸಂಯಮಗಳನ್ನು ಹೊಗಲಿ ಅವರನ್ನು ಆಧುನಿಕ ದ್ರೋಣಾಚಾರ್ಯನೆಂದು ಪ್ರಶಂಸಿಸಲಾಗಿತ್ತು. ಮುನ್ಸಿಪಾಲ್ಟಿ ಮೆಂಬರರಂತೂ ಕಾಲೇಜಿನ ಬಗ್ಗೆ,  ತಮ್ಮ ಗುರುಗಳಾದ ಜೀಕೆ ಬಗ್ಗೆ ಎಷ್ಟು ಹೆಮ್ಮೆ ತಳೆಯುತ್ತಿದ್ದರೆಂದರೆ ತಮ್ಮ ಯಾವುದೇ ಭಾಷಣವನ್ನ ಜೀಕೆ ಹೆಸರೆತ್ತದೆ ಮುಗಿಸುತ್ತಿರಲಿಲ್ಲ. ಜೀಕೆ ಏನೇ ಯೋಜನೆ ಕೊಡಲಿ, ಎಷ್ಟೇ ಹಣ ಕೇಳಲಿ ಇಲ್ಲವೆನ್ನುವ ಧೈರ್ಯ ಯಾರಲ್ಲೂ ಇರಲಿಲ್ಲ. ಇಷ್ಟೆಲ್ಲಾ ಸಾಧನಗಳಿರುವಾಗ ಕಾಲೇಜಿನ ದಶಮಾನೋತ್ಸವ ಮಾಡಬಹುದಲ್ಲಾ ಎಂದು ಜೀಕೆ ಯೋಚನೆ ಮಾಡಿದರು. ಇನು ಕೇಳಬೇಕೆ, ಅವರ ಯೋಚನೆ ಮತ್ತು ಕಾರ್ಯಗಳಲ್ಲಿ ವ್ಯತ್ಯಾಸವೇ ಉಳಿಯಲಿಲ್ಲ. ದಶಮಾನೋತ್ಸವದ ಸಿದ್ಧತೆ ಭರದಿಂದ ನಡೆಯಿತು. ಜೀಕೆ ತಮ್ಮ ಸಹೋದ್ಯೋಗಿಗಳನ್ನು ಕರೆದು ಯಾರ್ಯಾರು, ಯಾವ್ಯವ ಕೆಲಸ ಮಾಡಬೇಕೆಂದು ಹೇಳಿ ಹಂಚಿದರು. ಇದರಲ್ಲಿ ವಿದ್ಯಾರ್ಥಿಗಳ ತೊಡಗುವಿಕೆಯೂ ಇರಬೇಕಲ್ಲ. ಮುಖ್ಯ ತೊಂದರೆ ಬಂದದ್ದೇ ಅಲ್ಲಿ.

ಕಾಲೇಜು ಯೂನಿಯನ್ನಿನ ಅಧ್ಯಕ್ಷ ಗಿರೆಪ್ಪ ಎಂಬ ಅಂತಿಮ ವರ್ಷದ ವಿದ್ಯಾರ್ಥಿ. ಪ್ರಾರಂಭದ ವರ್ಷಗಳಲ್ಲಿ ಅವ ಸರಿಕರಲ್ಲಿ ಬೆಳೆದಿದ್ದಾನಾದೀತು. ಇಲ್ಲದಿದ್ದರೆ ಯೂನಿಯನ್ ಅಧ್ಯಕ್ಷನಾಗೋದು ಹ್ಯಾಗೆ ಸಾಧ್ಯ? ಭೇಟಿಯಾದಾಗ ಮಾತ್ರ ಅವನ ನಾಗರಿಕವಾಗೇ ನಡೆದುಕೊಂಡಿದ್ದ.

ಆದರೆ ಹೊರಗೆ ಚಿಗರಿಕೊಂಡಿದ್ದ. ಆತನ ಬಗ್ಗೆ ಅಧ್ಯಾಪಕರ್ಯಾರೂ ಹಿತಕರವಾದ ಮಾತಾಡಿರಲಿಲ್ಲ. ಆತ ಹುಡುಗರ ಗ್ಯಾಂಗ್ ಕಟ್ಟಿ ಹುಡುಗಿಯರನ್ನು ಛೇಡಿಸುತ್ತಾನೆಂದು, ಬೇರೆ ಕ್ಲಾಸುಗಳಿಗೆ ನುಗ್ಗಿ ಧಾಂದಲೆ ಮಾಡುತ್ತಾನೆಂದು ಅಧ್ಯಾಪಕರ ದೂರಿತ್ತು. ಆದರೆ ಜೀಕೆ ಅವನನ್ನು ಗಮನಿಸಿದ್ದು ಹೋದ ಬಾರಿ ವಿದ್ಯಾರ್ಥಿಗಳು ಪಿಕ್‌ನಿಕ್ ಹೋಗಿ ಬಂದಮೇಲೆ. ಅಲ್ಲಿ ಈ ಗಿರೆಪ್ಪ ಮತ್ತು ಅವನ ಕ್ಲಾಸಿನವಳೇ ಆದ ರೋಜಾ ಎಂಬ ಕ್ರಿಶ್ಚಿಯನ್ ಹುಡುಗಿ ಎಲ್ಲರಿಂದ ಮರೆಯಾದವರು ಕೊನೆಗೆ ಬಸ್ಸು ವಾಪಸ್ಸು ಹೊರಟಾಗಲೂ ಬಂದಿರಲಿಲ್ಲವಂತೆ. ಕಾದು ಕಾದು ಇನ್ನೇನು ಅವರನ್ನು ಬಿಟ್ಟೇ ಹೋಗೋಣವೆಂದು ಅಧ್ಯಾಪಕರು ನಿರ್ಧರಿಸಿ ಹೊರಟಾಗ ಇಬ್ಬರೂ ಹಾಜರಾದರಂತೆ. ಅಂದಿನಿಂದ ಅವರಿಬ್ಬರ ಹೆಸರುಗಳು ಕಾಲೇಜಿನ ಗೋಡೆಗಳನ್ನು ಜೊತೆಜೊತೆಯಾಗಿ ಅಲಂಕರಿಸಿದ್ದವು. ಕಟ್ಟುನಿಟ್ಟು ಶಿಸ್ತು ಸಂಯಮದ ಜೀಕೆ ಇಂಥದನ್ನೆಲ್ಲ ಸಹಿಸುವುದು ಸಾಧ್ಯವೇ ಇರಲಿಲ್ಲ. ಆ ಬಾರಿ ಅವನನ್ನು ಕರೆದು ತಾಕೀತು ಮಾಡಿದ್ದರು. ಆಗಲೂ ಅವ ಮೆತ್ತಗಿದ್ದ. ಯೂನಿಯನ್ ಅದ್ಯಕ್ಷನಾಗಿದ್ದನಲ್ಲ. ಈಗ ಅವನನ್ನು ದಶಮಾನೋತ್ಸವ ಸಮಿತಿಯ ಮೀಟಿಗೆಗೆ ಕರೆಯಲೇಬೇಕಾಯ್ತು, ಕರೆದರು.

ಜೀಕೆ ಛೇಂಬರಿನಲ್ಲೇ ಸದಸ್ಯರು ಸೇರಿದ್ದರು. ಅಲ್ಲಿಗೆ ಗಿರೆಪ್ಪ ಬಂದ. ಅವನ ಮುಖ ಹೊಸ ಪ್ರಾಯದ ಠೀವಿಯನ್ನ, ಅವರ ಅಸಡ್ಡೆಯನ್ನ ಸೂಚಿಸುತ್ತಿತ್ತು. ದಟ್ಟ ಬಣ್ಣಗಳ ಪ್ಯಾಂಟು ಶರ್ಟು ಹಾಕಿದ್ದ. ಕೈವಸ್ತ್ರವನ್ನು ಕತ್ತಿಗೆ ಸುತ್ತಿಕೊಂಡಿದ್ದ. ಮೀಸೆ ಹುರಿಮಾಡಿ ಕುಹಕವೆಂಬಂಥ ನಗೆ ನಗುತ್ತಿದ್ದ. ಆ ಅಹಂಕಾರೀ ಕರೀ ಮುಖ ಬದುಕಿನ ಬಗೆಗೆ ಕಾಳಜಿ ಇದ್ದವರಿಗೆ ಅಸಹ್ಯಕರವಾಗಿ, ಆದರೆ ಆ ವಯಸ್ಸಿನ ಹುಡುಗರಿಗೆ ಅದರಲ್ಲೂ ಹುಡುಗಿಯರಿಗೆ ಬಹುಶಃ ಮೋಹಕವಾಗಿ ಕಾಣಿಸಬಹುದಿತ್ತು. ದಟ್ಟವಾದ ಹುಲ್ಲುಮೆದೆಯ ಹಾಗಿದ್ದ ಹುಬ್ಬಿನ ಮೇಲೆ ಬಿದ್ದ ತನ್ನ ಗುಂಗುರು ಕೂದಲಿನ ಮೇಲೊಮ್ಮೆ ಠೀವಿಯಿಂದ ಕೈಯಾಡಿಸಿಕೊಂಡು ಸುತ್ತ ನೋಡಿದ. ಎಲ್ಲರೂ ಅವನನ್ನೇ ವಿಶೇಷವಾಗಿ ನೋಡುತ್ತಿದ್ದರು. ಕೆಲವು ಅಧ್ಯಾಪಕರಿಗಾಗಲೇ ಅಸಮಾಧಾನವಾಗಿತ್ತು. ಜೀಕೆ ಮುಖವನ್ನೇ ನೋಡುವುದರ ಮೂಲಕ ಅದನ್ನು ಅಭಿವ್ಯಕ್ತಿಸಿದರು. ಕೈವಸ್ತ್ರ ಕತ್ತಿಗೆ ಸುತ್ತಿಕೊಳ್ಳುತ್ತಾನಾ? ಛೇಂಬರಿನ ಹೊರಗೆ ಸುತ್ತಿಕೊಳ್ಳಲಿ. ಪ್ರಿನ್ಸಿಪಾಲರೆದುರಿಗೂ ಇವನ ಠೀವಿಯೇ? ಹೋಗಲಿ, ಬಂದವನು ಕೂತವರಿಗೆ ಬೇಡ, ಪ್ರಿನ್ಸಿಪಾಲರಿಗಾದರೂ ನಮಸ್ಕಾರ ಮಾಡಿದನ? ಇಲ್ಲ, ಹೋಗಲಿ, ಕೂತನಲ್ಲ, ಮುದ್ದೆಯಾಗಿ ವಿನಯದಿಂದ ಕೂತನ? ಇಲ್ಲ, ಎರಡೂ ಕೈ ಟೇಬಲ್ ಮೇಲಿರಿಸಿ ತನ್ನನ್ನೇ ಇರಿಯುತ್ತಿದ್ದ ಜೀಕೆ ದೃಷ್ಟಿಯನ್ನು ನಾನಿದಕ್ಕೆ ಕೇರ್ಮಾಡೋದಿಲ್ಲವೆಂಬಂತೆ ನಿವಾರಿಸಿ ಕೂತನೇ! ಆಗಲೇ ಜೀಕೆ ಮೂಡು ಔಟಾಗಿತ್ತು. ನಿಯಂತ್ರಿಸಿಕೊಂಡು ದಶಮಾನೋತ್ಸವದ ಪೀಠಿಕೆ ಮಾತಾಡಿದರು, ‘ಯಾರನ್ನು ಮುಖ್ಯ ಅತಿಥಿಯನ್ನಾಗಿ ಕರೆಸೋಣ?’ ಎಂದು ಎಲ್ಲರ ಮುಖ ನೋಡಿದರು. ಒಬ್ಬ ಅಧ್ಯಾಪಕರು ಮಂತ್ರಿಯೊಬ್ಬನ ಹೆಸರು ಹೇಳಿದರು. ಇನ್ನೊಬ್ಬರು ಮೈಸೂರಿನ ಸಾಹಿತಿಯೊಬ್ಬರ ಹೆಸರು ಹೇಳಿದರು. ಅದಾಗದೆಂದು ಗಿರೆಪ್ಪ ಒಬ್ಬ ಜನಪ್ರಿಯ ಸಿನಿಮಾ ನಟನ ಹೆಸರು ಹೇಳಿದ. ಕೊನೆಗೆ ಸಾಹಿತಿಗಳನ್ನೇ ಕರೆಸುವುದೆಂದು ತೀರ್ಮಾನಿಸಿದರು.

ಈ ವರ್ಷದ ಯೂನಿಯನ್ ಉದ್ಘಾಟನೆ ಆಗಬೇಕಿತ್ತಲ್ಲ. ದಶಮಾನೋತ್ಸವದೊಂದಿಗೇ ಅದೂ ಆಗಲೆಂದು ಜೀಕೆ ಸೂಚಿಸಿದರು. ಎಲ್ಲರೂ ಒಪ್ಪಿಕೊಂಡರು. ಗಿರೆಪ್ಪ ಈಗ ಬಾಯಿ ಹಾಕಿದ.

‘ಸರ್, ಹಾಂಗ ಮಾಡಾಕ ಆಗಾಣಿಲ್ಲರಿ. ಎರಡೂ ಬ್ಯಾರೆ ಬ್ಯಾರೆ ಆಗಲಿ.’

‘ಹೌಂದಪಾ, ಎರಡೂ ಕಾಲೇಜಿನ ಕಾರ್ಯಕ್ರಮ. ಎರಡೂ ಕಾರ್ಯಕ್ರಮ ಬ್ಯಾರೆ ಬ್ಯಾರೆ ಆದರೆ ಹುಚ್ಚುಚ್ಚಾರ ಖರ್ಚ ಆಗತೈತಿ, ಅದಕ್ಕೆರಡ ದಿನ, ಇದಕ್ಕೆರಡ ದಿನ ಅಂದರ ಹುಡ್ರ ಅಭ್ಯಾಸ ಹಾಳ ಆಗತೈತಿ’ – ಎಂದು ಮುನ್ಸಿಪಾಲ್ಟಿ ಚೇರ್‌ಮನ್ ಹೇಳಿದರು. ಹೇಳಿ ಜೀಕೆ ಮುಖ ನೋಡಿದರು. ಜೀಕೆ ಹೌದೆಂದು ತಲೆ ಹಾಕಿದರು. ಗಿರೆಪ್ಪ ಥಟ್ಟನೆ ಎದ್ದು ನಿಂತು,

‘ಇದಕ್ಕೆ ಹುಡುಗರು ಒಪ್ಪೋಹಾಂಗ ಕಾಣ್ಸಿಲ್ಲರಿ’ ಎಂದ.

‘ಒಪ್ಪದಿದ್ದರ ಹೆಂಗಪಾ, ನೀ ಯೂನಿಯನ್ ಅಧ್ಯಕ್ಷ, ಒಪ್ಪಸಬೇಕಪಾ.’

– ಎಂದೊಬ್ಬ ಅಧ್ಯಾಪಕರೆಂದರು. ತನ್ನನ್ನಿವರು ಬರೀ ನಾಮಕಾವಾಸ್ತೆ ಕರೆಸಿದ್ದಾರೆನ್ನಿಸಿತು ಗಿರೆಪ್ಪನಿಗೆ.

‘ನಾ ಹೇಳಿದ ಮಾತ ಒಂದೂ ನಡ್ಯಾಣಿಲ್ಲಂದ ಮ್ಯಾಲ ಅಧೆಂಗ ಒಪ್ಪಾಕಾದೀತ್ರಿ ಸರ್? ನಮ್ಮ ಮಾತ ನಡ್ಯಾಣಿಲ್ಲಂದ ಮ್ಯಾಲ ನಮ್ಮನ್ಯಾಕ ಕರಿಸಿದಿರಿ? ನೀವs ಮಾಡಿಕೊಳ್ರಿ.’

– ಎಂದು ಹೇಳಿ ಸರ್ರನೆ ಹೋಗಿಬಿಟ್ಟ.

– ಜೀಕೆ ಮಾಸ್ತರ ಇದನ್ನು ನಿರೀಕ್ಷಿಸಿರಲಿಲ್ಲ. ಒಳಗವರು ಉರಿಯುತ್ತಿದ್ದರೆಂಬುದನ್ನು ಅವರ ಕಣ್ಣುಗಳಿದಲೇ ಯಾರೂ ಊಹಿಸಬಹುದಿತ್ತು. ಕೈ ಕೈ ಹಿಸುಕಿಕೊಂಡು ತನ್ನನ್ನೇ ನೋಡುತ್ತಿದ್ದ ಎಲ್ಲರ ದೃಷ್ಟಿಗಳನ್ನು ನಿವಾರಿಸಿ ಏನೋ ಕಾಗದ ಹುಡುಕುವಂತೆ ಫೈಲುಗಳಲ್ಲಿ ಕೈ ಹಾಕಿದರು. ಆದರೆ ಸಹಾನುಭೂತಿಯ ದೃಷ್ಟಿಗಳನ್ನು ಎಲ್ಲರೂ ತನ್ನ ಮೈಯಲ್ಲಿ ನೆಟ್ಟದ್ದಾರೆ – ಎನ್ನಿಸಿತು. ಈಗ ಮೀಟಿಂಗಿಗೆ ಒಂದು ಮುಕ್ತಾಯ ಕೊಡಬೇಕಾದವರು ತಾವೇ ಎಂದುಕೊಂಡು ‘ಆಯ್ತು, ಡೇಟಗೀಟ ನೋಡಿಕೊಂಡು ನಿಮಗೆ ತಿಳಿಸ್ತೀವಿ’ ಎಂದು ಮುನ್ಸಿಪಾಲ್ಟಿ ಅಧ್ಯಕ್ಷರತ್ತ ನೋಡಿದರು. ಅವರಿಗಿದು ‘ಎದ್ದು ಹೊರಡು’ ಎಂಬಂತೆ ಕೇಳಿಸಿ ಸಪ್ಪಳ ಮಾಡದೆ ಹೋದರು. ಉಳಿದವರೂ ಮರೆಯಾದರು.

ಜೀಕೆ ಇದನ್ನು ನಿಜವಾಗಿಯೂ ನಿರೀಕ್ಷಿಸಿರಲಿಲ್ಲ. ಹಾಲಿ ವಿದ್ಯಾರ್ಥಿಗಳು ಮುಂಚಿನಂತಿಲ್ಲವೆಂಬ ಸಂಗತಿ ಅವರ ಅರಿವಿಗೆ ಬಾರದ್ದೇನಲ್ಲ. ನಮ್ಮ ನಿಮ್ಮಂಥವರಿಗೆ ಜೀಕೆ ಅದ್ಯಾಕಿಷ್ಟು ತಲೆಕಡೆಸಿಕೊಂಡರೆಂದೂ ಅನ್ನಿಸೀತು, ಹಾಗೆ ನೋಡಿದರೆ. ಅಂದರೆ ನಾವು ನೋಡವ ಈಚಿನ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಗಿರೆಪ್ಪ ತುಂಬ ಅಸಭ್ಯವಾಗೇನೂ ವರ್ತಿಸಿರಲಿಲ್ಲ. ಆದರೆ ಕಟ್ಟುನಿಟ್ಟಿಗೆ ಹೆಸರಾದ ಜೀಕೆಗೆ ಇಷ್ಟು ಸಾಕಯ್ತು. ಇದೂ ನಿಜ. ಅವರ ಅಧ್ಯಾಪಕ ವೃತ್ತಿಯಲ್ಲೇ ಇಂಥ ಅವಿಧೇಯತೆಯನ್ನು ಅವರು ಎದುರಿಸಿರಲಿಲ್ಲ. ಕಮಿಟಿ ಸದಸ್ಯರು ಹೋದುದಷ್ಟೇ ತಡ, ಟ್ರಿಣ್ಣೆಂದು ಗಂಟೆ ಬಾರಿಸಿದರು. ಸಿಂಗಪ್ಪ ಬಂದ, ಇನ್ನೇನು ‘ಕರಿ ಆ ಗಿರ‍್ಯಾನ’ ಎಂದು ಹೇಳುವವರಿದ್ದರು ಅದ್ಯಾಕೋ ತಡೆದು ಎನ್ಟೀನ್ನ ಕರಿ’ ಅಂದರು.