ಅದಾಗಿ ಐದಾರು ದಿನ ಮಹತ್ವದ್ದೇನೂ ಘಟಿಸಲಿಲ್ಲ. ದಶಮಾನೋತ್ಸವದ ತಯಾರಿ ತನ್ನ ಪಾಡಿಗೆ ತಾನು ನಡೆಯುತ್ತಿತ್ತು. ಎಲ್ಲರಿಗೂ ಕೆಲಸ ಹಂಚಿದ್ದರಿಂದ ಅವರವರು ತಂತಮ್ಮ ಕೆಲಸ ನೋಡಿಕೊಳ್ಳುತ್ತಿದ್ದರು. ಮೈಸೂರಿನ ಸಾಹಿತಿಗಳೊಬ್ಬರು ಮುಖ್ಯ ಅತಿಥಿಗಳಾಗಿ ಬರಲು ಒಪ್ಪಿದ್ದು ಅವರನ್ನು ಕರೆತರು, ಇಳಿಸುವ ಏರ್ಪಾಡುಗಳಾಗಿದ್ದವು. ಯಾರು ಸ್ವಾಗತಿಸಬೇಕು, ಯಾರು ವರದಿವಾಚನ ಮಾಡಬೇಕು, ಯಾರು ವಂದನಾರ್ಪಣೆ ಮಾಡಬೇಕು – ಇವೆಲ್ಲ ನಿರ್ಧಾರವಾಗಿಬಿಟ್ಟಿದ್ದವು. ಅಂದಿನ ಮೀಟಿಂಗಿನಿಂದ ಅಸಮಾಧಾನಗೊಂಡು ಹೋದ ಗಿರೆಪ್ಪನೂ ಜೀಕೆ ಮಾಸ್ತರರನ್ನು ಎದುರುಹಾಕಿಕೊಳ್ಳದೆ ದಾರಿಗೆ ಬಂದಿದ್ದ. ಈ ಮಧ್ಯೆ ಜೀಕೆ ಮೂರು ಬಾರಿ ರೋಜಾಳ ಕ್ಲಾಸಿಗೆ ಹೋಗಿದ್ದರು. ಮೊದಲೆರಡು ದಿನ ಅವಳು ಕ್ಲಾಸಿಗೆ ಬಂದಿರಲಿಲ್ಲ. ಮೂರನೇ ದಿನ ಬಂದಿದ್ದಳಾದರೂ ನಾಚಿಕೊಂಡು ಹುಡುಗಿಯರಲ್ಲಿ ಹುದುಗಿಕೊಂಡೇ ಪಾಠ ಕೇಳಿದ್ದಳು. ಎಲ್ಲರೆದುರಿನಲ್ಲಿ, ಅದೂ ಪ್ರಿನ್ಸಿಪಾಲರ ಕ್ಲಾಸಿನಲ್ಲಿ ಮೂರ್ಛೆ ಬಿದ್ದುದರಿಂದ ಹುಡುಗಿ ನಾಚಿ ನೀರಾಗಿರಲೂ ಸಾಕು. ಅವಳ ಸಂಕೋಚವನ್ನಾದರೂ ದೂರ ಮಾಡುವುದು ಒಳ್ಳೆಯದೆಂದು ಏನಿಲ್ಲದಿದ್ದರೂ ಕರೆದು ಆರೋಗ್ಯ ವಿಚಾರಿಸೋಣವೆಂದು ಲೇಡೀಸ್ ರೂಮಿಗೆ ಸಿಂಗಪ್ಪನನ್ನು ಕಳಿಸಿದರು.

ಈ ಹುಡುಗಿ ಛೇಂಬರಿಗೆ ಬಂದಾಗ ಇವರ ಲೆಕ್ಕಾಚಾರ ತಲೆಕೆಳಗಾದದ್ದು ನಿಜ. ನಾಚಿಕೆಯಾಗಲಿ ಭಯವಾಗಲಿ ಅವಳ ಮುಖದಲ್ಲಿರಲೇ ಇಲ್ಲ. ಮಾತ್ರವಲ್ಲ, ಒಳಗೊಳಗೇ ನಗುತ್ತಿದ್ದಳೆಂದು ಮತ್ತು ತುಳುಕುವ ಆ ನಗೆಯನ್ನು ಪ್ರಯತ್ನಪೂರ್ವಕ ನಿಯಂತ್ರಿಸಿದ್ದಾಳೆಂದು ಅವಳ ಕಣ್ಣು ತುಟಿಗಳಿಂದ ತಿಳಿಯುತ್ತಿತ್ತು. ಅವಳು ಧರಿಸಿದ್ದ ಉಡುಪಿನಲ್ಲಿ ಕೂಡ ಒಂದು ಸ್ಪಷ್ಟವಾದ ಉದ್ದೇಶವಿದ್ದಂತಿತ್ತು. ತನ್ನ ಅಂಗಸೌಷ್ಠವದ ಕೆಲವು ಉದ್ರೇಕಕಾರಿ ಪ್ರದೇಶಗಳ ಮೇಲೆ ಒತ್ತುಕೊಡುವುದಕ್ಕಾಗಿ, ಅಂದರೆ ಅವು ಒಡೆದು ಕಾಣುವುದಕ್ಕಾಗಿ ಜೀನ್ಸ್ ಪ್ಯಾಂಟು ಮತ್ತು ಟೀಷರ್ಟು ಧರಿಸಿದ್ದಳು. ನಿಷ್ಕಾಳಜಿಯಿಂದ ಇಲ್ಲವೆ ಅಂಕ ಮೀರಿ ಎಂಬಂತೆ ಕೂದಲು ಕೆನ್ನೆ ಹಣೆಗಳ ಮೇಲೆ ಸ್ವಚ್ಛಂದವಾಗಿ ಹರಿದಾಡುತ್ತಿದ್ದು ಅದನ್ನು ಎಡಗೈ ಕಿರಿಬೆರಳಿನಿಂದ ಹಿಂದೆ ಸರಿಸಿಕೊಳ್ಳುವಲ್ಲಿ ಒಂದು ಮಾದ ಸ್ಟೈಲಿತ್ತು.

ಭಾವೀ ಪ್ರಜೆಗಳ ಬಗ್ಗೆ ಜೀಕೆ ಅಸಮಾಧಾನಗೊಂಡರು. ಇನ್ನು ಮೇಲೆ ದೇಶ ಹಾಳಾಗುವುದರ ಬಗ್ಗೆ ಅವರಿಗೆ ಸಂಶಯವೇ ಉಳಿಯಲಿಲ್ಲ. ಅವರ ಹಳೆ ಥಿಯರಿ ಈಗ ಗೆಲುವಾಯಿತು. ಕೆಳಜಾತಿ ಮುಂಡೇದು. ಒಂದು ನೀತಿಯೇ, ಒಂದು ನಿಯಮವೇ? ಚಿಗುರು ಮೊಲೆ ಮೂಡಿದರೆ ಎದುರು ಕಾಣುವುದಿಲ್ಲ; ಇನ್ನು ಇಷ್ಟು ದೊಡ್ಡ ಮೊಲೆ ಮೂಡಿದರೆ ನನ್ನಂಥವನೇನು, ಇಡೀ ದೇಶವೇ ಕಾಣಿಸೋದಿಲ್ಲ. ಎದುರು ನಿಂತವಳಿಗೆ ಏನಾದರೂ ಹೇಳಬೇಲ್ಲ. ಮೊದಲಿನ ಸಹಾನುಭೂತಿಯ ಮಾತುಗಳು ಹಾರಿಹೋಗಿದ್ದವು. ಹಾಗೇ ಕಳಿಸಿದರೆ ಯಾಕೆ ಕರೆಸಿದ್ದು ಎಂದು ಸಂಶಯ ಬರಬಹುದಲ್ಲ. ತಾತ್ಸಾರಭರಿತ ವ್ಯಂಗ್ಯದ ದನಿಯಲ್ಲಿ ‘ಕೂತುಕೋ’ ಎಂದರು. ಕೂತಳು. ‘ಛೇ, ಕೂರು ಎಂದೊಡನೆ ಕೂತೇಬಿಡೋದೆ? ಅದೂ ಹಿರಿಯರೆದುರಿಗೆ! ಅದೇ ಅದೇ, ಹೀನ ಜಾತಿಗೆ ಹೇಳಿ ಮಾತಡಿಸಿದ್ದಲ್ಲ ಸಂಸ್ಕೃತಿ ಎಂದರೆ, ಅದಕ್ಕೆ ಸಂಸ್ಕಾರ ಬೇಕು’ – ಎಂದೇನೋ ಮನಸ್ಸಿನಲ್ಲಿ ವಟಗುಟ್ಟಿ,

‘ಈಗ ಹೆಂಗ ಆರಾಮಿದ್ದಿ ಹೌಂದಲ್ಲೋ?’ ಎಂದರು.

‘ಹೂಂನ್ರಿ ಸರ್.’

ನಿಜ ಹೇಳಬೇಕೆಂದರೆ ಜೀಕೆ ಮಾಸ್ತರರಿಗೆ ಮಾತಾಡುವ ಮನಸ್ಸೇ ಇರಲಿಲ್ಲ. ನಿರಾಶೆಯಾಗಿತ್ತು. ಅವಳೊಬ್ಬ ಕೇವಲ ಹೂ ಮುಗ್ಧೆ ಎಂದು ಕಲ್ಪಿಸಿಕೊಂಡು ಸಮಾಧಾನ ಮಾಡೋಣವೆಂದು ಕರೆಸಿದರೆ ಇಲ್ಲಿ ಹಾವಭಾವ ಉಡುಪುಗಳಲ್ಲಿ ಹರೆಯದ ಚೂರಿಗಳನ್ನಿಟ್ಟುಕೊಂಡ ಪರಿಣತ ವಯಸ್ಸಿನ ಚದುರಿ ನಿಂತಿದ್ದಳು. ಇಂಥವಳು ಗಿರೆಪ್ಪನಂಥ ಕೋತಿಗೆ ಒಲಿಯುವಳೆ? ಆದರೆ ಆ ಕೋತಿ ಇವಳನ್ನು ಕಂಡು ಹುಚ್ಚನಾದದ್ದು ಹೆಚ್ಚಲ್ಲ – ಎನ್ನಿಸಿತು. ಆಯಿತು. ಏನಾದರೂ ಮಾತಾಡಿ ಅವಳನ್ನೀಗ ಸಾಗುಹಾಕಬೇಕಲ್ಲ.

‘ಆಯಿತು, ಇನ್ನಮ್ಯಾಲ ಹಂಗೆಲ್ಲ ಕ್ಲಾಸಿನಾಗ ಮೂರ್ಛೆ ಗೀರ್ಛೆ ಬೀಳಬ್ಯಾಡ’ ಎಂದರು.

ಹುಡುಗಿ ಫಕ್ಕನೆ ಮಾದಕ ನಗೆ ನಕ್ಕು, ನಕ್ಕದ್ದು ತಪ್ಪಾಯಿತೇನೋ ಎಂಬಂತೆ ಕೈಯಿಂದ ಹೊಳೆವ ಹಲ್ಲುಗಳನ್ನು ಮುಚ್ಚಿಕೊಂಡು ಬಟ್ಟಲುಗಣ್ಣುಗಳ ನೇರದೃಷ್ಟಿಯೊಂದನ್ನು ಜೀಕೆ ಮಾಸ್ತರರತ್ತ ಬೀರಿ ಹೊರಟುಹೋದಳು. ನಕ್ಕಳಲ್ಲ ಹಲ್ಲು ಫಳ್ಳನೇ ಫ್ಲಾಷ್ ಲೈಟಿನಂತೆ ಹೊಳೆದು ಜೀಕೆ ಮಾಸ್ತರರ ಹೃದಯ ಅವಳ ಭಂಗಿಯನ್ನು ಚೂಟಿ ಕೆಮರಾದಂತೆ ಸೆರೆ ಹಿಡಿದುಕೊಂಡಿತು. ಅನೀರೀಕ್ಷಿತವಾಗಿ ಮೈಕಾವೇರಿ ತತ್ತರಿಸಿ ತನ್ನ ಜೀವಮಾನದಲ್ಲಿ ಎಂದೆದೂ ಅನುಭವಿಸಿಲ್ಲದಂಥ ಬಿಸಿನೀರಿನ ಪ್ರವಾಹದಲ್ಲಿ ತಾನು ಕೊಚ್ಚಿಹೋಗುತ್ತಿರುವಂತೆ, ಬಚಾವಾಗಲಿಕ್ಕೆ ತನ್ನಲ್ಲಿ ಶಕ್ತಿಯೇ ಇಲ್ಲದಂತೆ ಅನ್ನಿಸಿ ಹತಾಶರಾಗಿ ಹಾಗೆಯೇ ಹಿಂದಕ್ಕೆ ಒರಗಿದರು.

ಯಾರೋ ಸಾಮಾನ್ಯರಾದರೆ ಅದು ಬೇರೆ ಮಾತು. ಜೀಕೆಯಂಥವರು ವಿವಶರಾಗುವುದು ನಿಜವಾಗಿಯೂ ಆಶ್ಚರ್ಯಕರವೇ. ಕಾರಣ ತಿಳಿಯಲು ಅವರು ಪಟ್ಟು ಹಿಡಿದು ಕೂತುಬಿಟ್ಟರು. ಅವಳ ಆಕರ್ಷಣೆಗೆ ಒಳಗಾದೆನೆ? ಇರಲಾರದು. ತನ್ನ ಈವರೆಗಿನ ಅನುಭವದಲ್ಲಿ ಎಷ್ಟು ಚೆಲುವೆರನ್ನ, ಎಷ್ಟು ಜನ ವಿದ್ಯಾರ್ಥಿನಿಯರನ್ನು ಕಂಡಿಲ್ಲ? ಅವರಲ್ಲಿಲ್ಲದ ವಿಶೇಷ ಇವಳಲ್ಲೇನಿದೆ? ಅಥವಾ ಅವಳೇ ತನ್ನ ಮೇಲೆ ಮೋಡಿ ಮಾಡಿದಳೆ? ಅದೂ ಇರಲಾರದು, ಯಾಕೆಂದರೆ ಅವಳು ಮಾಡಿದ್ದೇನು? ತನ್ನ ಮಾತಿಗೆ ನಕ್ಕಳಷ್ಟೆ. ‘ಇನ್ನು ಮೇಲೆ ಮೂರ್ಛೆ ಬೀಳಬೇಡ’ ಎಂದು ಹೇಳಿದ್ದರೆ ಎದುರಿಗಿದ್ದ ಯಾರೂ ನಗಲೇಬೇಕಾದ ಮಾತು. ಅಷ್ಟಕೆ ಅಲ್ಲಸಲ್ಲದ ಅರ್ಥಹಚ್ಚಿ ತಾನು ಗಡಿಬಿಡಿಗೊಂಡಿದ್ದು ತಪ್ಪು – ಎಂದೇ ತೀರ್ಮಾನಿಸಿದರು. ಹೀಗೆ ಎಷ್ಟು ಹೊತ್ತು ಕೂತಿದ್ದರೋ, ಅಷ್ಟರಲ್ಲಿ ದೂರದ ಕ್ಲಾಸೊಂದರಲ್ಲಿ ಗಲಾಟೆಯಾಗುತ್ತಿರುವಂತೆ ಕೇಳಿಸಿತು. ಗಡಬಡಿಸಿ ಎದ್ದು ಹೊರಗೆ ಬಂದರು.

ಮೂಲೆಯ ಕ್ಲಾಸ್ ರೂಮಿನಲ್ಲಿ ಹುಡುಗಿಯರು ಅರಚುತ್ತಿದ್ದರು. ಹುಡುಗರು ಹೋ ಎಂದು ಕೇಕೆ ಹಾಕಿ ಚಪ್ಪಾಳೆ ತಟ್ಟಿ ನಗುತ್ತಿದ್ದರು. ಅಕ್ಕಪಕ್ಕದ ಕ್ಲಾಸಿನಿಂದಲೂ ವಿದ್ಯಾರ್ಥಿಗಳು ಏನಾಯಿತೆಂದು ನೋಡಬರುತ್ತಿದ್ದಂತೆ ಜೀಕೆ ತಡಮಾಡದೆ ದಾಪುಗಾಲು ಹಾಕುತ್ತ ಆ ಕಡೆ ನಡೆದರು. ಒಂದರೆಡು ಹೆಜ್ಜೆ ಇಡುವಷ್ಟರಲ್ಲಿ ಎಂಟಿ ಪುಟಿದು ಹಿಂದಕ್ಕೆ ನೆಗೆವ ಚೆಂಡಿನಂತೆ ಕ್ಲಾಸ್ ರೂಮಿನಿಂದ ಸಿಡಿದು ಹುಚ್ಚರ ಹಾಗೆ ಓಡುತ್ತ ತನ್ನ ಕಡೆ ಬಂದ. ಹಾಸ್ಯಾಸ್ಪದನಾಗಿದ್ದ ಅವನನ್ನು ನೋಡಲು ಕೆಲವು ಹುಡುಗರೂ ಹೊರಬಂದರು. ಅಷ್ಟರಲ್ಲಿ ಜೀಕೆ ತಮ್ಮ ಕಡೆಗೇ ಬರುತ್ತಿರುವುದೂ ಗೊತ್ತಾದೊಡನೆ ಒಲ್ಲದ ಮನಸ್ಸಿನಿಂದ ತಮ್ಮ ತಮ್ಮ ಕ್ಲಾಸುಗಳಿಗೆ ನುಗ್ಗಿದರು. ಎಂಟಿ ಓಡಿಬಂದವನೇ ‘ಸರ್!’ ಎಂದ. ಏನು ಎಂಬಂತೆ ದುರುಗುಟ್ಟಿ ನೋಡಿದರು. ಅವನ ಬಾಯಿಂದ ಮಾತೇ ಬರಲೊಲ್ಲದು. ಅವ ಬೆವರಿದ್ದ, ಬೆದರಿದ್ದ, ತೇಗುತ್ತಿದ್ದ. ಆದ್ದರಿಂದ ಬಾಯಿ ಬಾಯಿ ಬಿಡುತ್ತಿದ್ದ. ಈಗ ತನ್ನನ್ನು ಇಡಿಯಾಗಿ, ಹಸಿಹಸಿಯಾಗಿ ಹಾಗೆಯೇ ನುಂಗುವಂತೆ ನೋಡುತ್ತಿದ್ದ ಪ್ರಿನ್ಸಿಪಾಲರ ದೃಷ್ಟಿ ಎದುರಿಸಲಾರದೆ ಕಂಗಾಲಾದ. ಅವನ ಅವಸ್ಥೆಯನ್ನು ನೋಡುತ್ತ ನಿಲ್ಲದೆ ಜೀಕೆ ಇನ್ನಷ್ಟು ವೇಗದಿಂದ ಕ್ಲಾಸಿನತ್ತ ನಡೆದರು.

ಹೋಗಿ ನೋಡಿದರೆ, ಗುಲ್ಲು ಗದ್ದಲ ಏನೇನಿರಲಿಲ್ಲ. ಈಗಷ್ಟೆ ಒಂದು ಕ್ಲಾಸು ಮುಗಿದು ಇನ್ನೊಂದಕ್ಕೆ ಕಾಯುತ್ತಿರುವಂತೆ ಹುಡುಗರು ಶಿಸ್ತು ಮತ್ತು ಆಯಾಸದಲ್ಲಿರುವವರಂತೆ ಕೂತಿದ್ದರು. ಜೀಕೆ ಎಲ್ಲರನ್ನೂ ದುರುಗುಟ್ಟಿ ನೋಡಿದರು. ‘ಏನಿದು ಗದ್ದಲ?’ ಎಂದು ಗುಡುಗಿದರು. ಯಾರೂ ಮಾತಾಡಲಿಲ್ಲ. ಇವರ ಕಣ್ಣುಗಳನ್ನು ನೇರ ಎದುರಿಸಲೂ ಇಲ್ಲ. ಹಾಗೆ ಕೆಳಮುಖ ಮಾಡಿ ಕೂತವರಲ್ಲಿ ರೋಜಾ ಕೂಡ ಇದ್ದಳು. ಮುಖ ಕೆಳಗಿದ್ದರೂ ಕಣ್ಣು ನೆತ್ತಿಗೇರಿಸಿ ಹುಬ್ಬಿನ ಗುಂಟ ಇವರನ್ನೇ ನೋಡುತ್ತಿದ್ದಳು. ಅವಳಕೆ ಕಡೆ ಕೈ ಮಾಡಿ ‘ನೀ ಹೇಳು, ಏನಿದು ಗದ್ದಲ?’ ಆಕೆ ಗಕ್ಕನೆ ಎದ್ದು ಮಾತುಬಾರದೆ ತಡಬಡಿಸಿ ಫಕ್ಕನೆ ಬಾಗಿಲ ಕಡೆ ಕೈಮಾಡಿ ತೋರಿಸಿದಳು. ಅಲ್ಲಿ ಎಂಟಿ ಕುರಿಯ ಹಾಗೆ ನಿಂತಿದ್ದ. ತೋರುಬೆರಳಿಗೆ ಗುರಿಯಾದದ್ದೇ, – ಸರಕ್ಕನೆ ಒಳಬಂಧು ‘ಸರ, ಇದರಾಗೊಂದು ರಬ್ಬರ್ ಹಾವೈತ್ರಿ….’ ಎಂದು ತೊದಲಿದ. ಟೇಬಲ್ಲಿನ ಮೇಲೊಂದು ಸಣ್ಣ ಡಬ್ಬಿ ಇತ್ತು. ತಗೊಂಡು ನಡುಗವ ಬೆರಳುಗಳಿಂದ ಅದರ ಮುಚ್ಚಳ ತೆಗೆದ. ತೆಗೆದೊಡನೆ ಒಂದು ರಬ್ಬರ್ ಹಾವು ಟಣ್ಣನೆ ‘ಅಗೋ’ ನೆಗೆದು ಹುಡುಗಿಯರಲ್ಲೇ ಬಿತ್ತು. ಹಾವಿನಂತಯೇ ಹುಡುಗಿಯರಿಬ್ಬರು ನೆಗೆದು ಆಯ್ ಎಂದು ಕಿರುಚಿಕೊಂಡರು. ಹುಡುಗರು ತಡೆಯದೆ ಮತ್ತೆ ಹೋ ಎಂದು ನಕ್ಕು ಜೀಕೆ ಮಾಸ್ತರರನ್ನು ನೋಡಿ ಸರಿಹೋಗಲಿಲ್ಲವೆಂದು ಸುಮ್ಮನಾದರು. ಒಳಗೆ ಮಾತ್ರ ನಗುತ್ತಲೇ ಇದ್ದರು. ಹಾವಿನ ನೆಗೆತಕ್ಕೆ ಎಂಟಿ ಕೂಡ ಹಿಂದೆ ಸರಿದ. ಜೀಕೆ ಮಾತ್ರ ಸುಮ್ಮನೆ ಇದ್ದರು. ದುರ್ದೈವದಿಂದ ರೋಜಾ ಅದೇ ಮಾದ ನಗೆಯನ್ನ, ಅಂದರೆ ಇವರ ಛೇಂಬರಿನಲ್ಲಿ ನಕ್ಕಿದ್ದಳಲ್ಲ, ಇವರು ಕ್ಲಿಕ್ ಮಾಡಿಕೊಂಡಿದರಲ್ಲ – ನಕ್ಕಳು. ಜೀಕೆ ಒಳಗಿನ ಉದ್ವೇಗ ಉಕ್ಕಿಬಿಟ್ಟಿತು. ಅದನ್ನು ಹತ್ತಿಕ್ಕುವಂತೆ ತುಟಿ ಬಿಗಿಹಿಡಿದರು. ಉಕ್ಕಿದ ಉದ್ವೇಗ ಕೆಂಪಾಗಿದ್ದಿತೆಂಬುದನ್ನು ಅವರ ಕಣ್ಣುಗಳಿಂದಲೇ ತಿಳಿಯಬಹುದಿತ್ತು. ಕ್ಲಾಸಿನಲ್ಲಿ ಯಾಕೆ ಗದ್ದಲವಾಯಿತೆಂದು ತಿಳಿಯತಲ್ಲ. ಎಂಟಿ ಆ ಹಾವನ್ನು ಮತ್ತೆ ಡಬ್ಬಿಯೊಳಗೆ ಹಾಕುವ ತನಕ ಸುಮ್ಮನಿದ್ದು, ಹಾಕಿದ ಮೇಲೆ ‘ಇಲ್ಲಿ ಕೊಡು’ ಎಂಬಂತೆ ಕೈ ನೀಡಿದರು. ಎಂಟಿ ಕೊಟ್ಟ. ಇಡೀ ಕ್ಲಾಸಿನಲ್ಲಿ ಗೋರಿಯಲ್ಲಿರುವಂಥ ಮೌನ ಆವರಿಸಿತು. ತುಸು ಹೊತ್ತು ಎಲ್ಲರನ್ನೂ ಮತ್ತು ವಿಶೇಷವಾಗಿ ರೋಜಾಳನ್ನು ನೋಡಿ ‘ಇದನ್ನು ಯಾರು ತಂದದ್ದು?’ ಎಂದರು. ಯಾರು ಹೇಳುತ್ತಾರೆ? ಹಾಗೇ ಬಿಗಿದ ಮುಖದಲ್ಲೇ ಡಬ್ಬಿ ತಗೊಂಡೇ ಎಂಟಿ ಕಡೆ ಕೂಡ ನೋಡದೆ ‘ಇನ್ನ ಕ್ಲಾಸ್ ತಗೋ’ ಎಂದು ಹೇಳಿ ಬಾಗಿಲು ದಾಟಿದರು. ಯಾರು ತಂದದ್ದೆಂದು ಸಮ ವಿಚಾಸದೆ ಡಬ್ಬಿ ತಗೊಂಡು ಬಿಮ್ಮನೆ ಹೋದದ್ದಕ್ಕೆ ಹುಡುಗರಿಗೆ ಆಶ್ಚರ್ಯವಾಯಿತು.