ಛತ್ರಪತಿ ಶಿವಾಜಿ ಮಹಾರಾಜರ ಅಮರ ಹೆಸರನ್ನು ಕೇಳದವರು ಭಾರತ ದೇಶದಲ್ಲಿ ಸಿಕ್ಕುವುದು ಸಾಧ್ಯವೇ? ಅವರ ಜಾಜ್ವಲ್ಯಮಾನ ಕಥೆ ಭಾರತೀಯರಿಗೆ ಅಂದಿಗೂ ಇಂದಿಗೂ ಮುಂದೂ ಸದಾ ಸ್ಪೂರ್ತಿ ನೀಡುವ ಸಲೆಯಂತಿದೆ. ರಾಷ್ಟ್ರವೈಭವವನ್ನೇ ನಿರ್ಮಾಣ ಮಾಡಿದವರ ಕಥೆ ಎಲ್ಲರೂ ಬಲ್ಲರು. ಅವರ ಮಾತೆಯರ ಅಜ್ಞಾತ ಇತಿಹಾಸವು ಅಷ್ಟೇ ಚೈತನ್ಯಮಯವಾಗಿರುತ್ತದೆ.  ಅಂತಹ ಮಹಾಪುರುಷರ ಜೀವನಕ್ಕೆ ಆಧಾರ ರೂಪವಾಗಿ ಸಂಸ್ಕಾರ ಕೊಟ್ಟು, ತ್ಯಾಗ ಮಾಡಿ, ವೀರ ವೃತ್ತಿಯನ್ನು ಜಾಗೃತಗೊಳಿಸಿ, ಇತಿಹಾಸ ನಿರ್ಮಾಣ ಮಾಡುವ ಕಾರ್ಯದಲ್ಲಿ ಮಾತೆಯ ಸ್ಥಾನ ಯಾವಾಗಲೂ ಹಿರಿದಾಗಿರುತ್ತದೆ. ಯುಗಪುರುಷ ಶಿವಪ್ರಭುವಿನ ವೀರಮಾತೆ ಜೀಜಾಬಾಯಿಯ ಪಾತ್ರವೂ ಅಷ್ಟೇ ಅದ್ಭುತ ರಮ್ಯವಾದುದು. ಪರಮ ಪವಿತ್ರವಾದುದು.

ಒಂದು ರಂಗ ಪಂಚಮಿ :

ಮಹಾರಾಷ್ಟ್ರದ ಸಿಂಧಖೇಡ್ ಎಂಬ  ಊರಿನಲ್ಲಿ ಲಖೂಜೀ ಜಾಧವರಾವ ಎಂಬ ಮರಾಠಾ ಸರದಾರನ ಮನೆಯಲ್ಲಿ ಜೀಜಾಬಾಯಿ ಜನ್ಮವಾಯಿತು. ತಂದೆ ಜಾಧವರಾವ ಹಾಗೂ ತಾಯಿ ಮಾಳಸಾಬಾಯಿಯ ಮುದ್ದು ಮಗಳಾಗಿ ಬೆಳೆದಳು.

ಒಂದು ರಂಗ ಪಂಚಮಿಯ ದಿನ ಅವರ ಮನೆಯಲ್ಲಿ ಒಂದು ಘಟನೆಯ ನಡೆಯಿತು.

“ಏನೇ ಆದರೂ ಸರದಾರನ ಕನ್ಯೆ ಶಿಲೇದಾರನ ಸೊಸೆಯಾಗುವುದು ಸಾಧ್ಯವೇ ಇಲ್ಲ”. ಲಖೂಜೀ ಜಾಧವ ರಾವ್ ಎಂದ.

ಕೂಡಲೇ ಒಬ್ಬ ತೇಜಸ್ವಿ ಮರಾಠಾ ವೀರ ಸಿಟ್ಟಿನಿಂದ ಎದ್ದು ನಿಂತ.

“ಮರಾಠಾ ವೀರ ಯಾವಾಗಲೂ ವಚನಕ್ಕೆ ಬದ್ಧನಾಗಿರುತ್ತಾನೆ. ನಿಮ್ಮ ಮಾತು ನಮ್ಮ ನಿಮ್ಮ ಭೇಟಿ ನಮ್ಮಿಬ್ಬರ ಯೋಗ್ಯತೆಗೆ ತಕ್ಕಂತೆಯೇ ಆಗುತ್ತದೆ. ಆ ಯೋಗ್ಯತೆಯನ್ನು ಪಡೆಯುವವರೆಗೆ ನಾನು ನಿಮ್ಮ ಮನೆಯ ಮೆಟ್ಟಲನ್ನು ಹತ್ತುವುದಿಲ್ಲ” ಎಂದವನೇ ಅವನು ದಿವಾಖಾನೆಯಿಂದ ಹೊರಬಿದ್ದ. ಅವನ ದೃಢಸಂಕಲ್ಪದ ಸ್ವಭಾವ ಹಾಗೂ ರೋಷ ಮುಖದ ಮೇಲೆ  ಎದ್ದು ಕಾಣುತ್ತಿತ್ತು.

ಲಖೂಜೀ ಜಾಧವರಾವ ನಿಜಾಮಶಾಹಿಯ ಆಡಳಿತದಲ್ಲಿ ಮೊದಲನೆ ದೊಡ್ಡ ಸರದಾರ. ಅತ್ಯಂತ ಶೂರನೆಂದು ಖ್ಯಾತಿಯಿತ್ತು. ಆಗ ಹಲವು ಮರಾಠಾ ಸರದಾರರು ತಮ್ಮದೇ ಆದ ಸಣ್ಣ ಸಣ್ಣ ಸೈನ್ಯಗಳನ್ನಿಟ್ಟುಕೊಂಡು ನಿಜಾಮಶಾಯಿ ನೌಕರಿ ಮಾಡಹತ್ತಿದರು.ಅವರವರ ಯೋಗ್ಯತೆಗೆ ತಕ್ಕಂತೆ ಸ್ಥಾನಮಾನ ಹಾಗೂ ಜಹಗೀರುಗಳನ್ನು ನಿಜಾಮನಿಂದ ದೊರಕಿಸಿಕೊಂಡು ಅವನ ಸೇವೆ ಮಾಢುವುದರಲ್ಲಿಯೇ ಕೃತಾರ್ಥರಾಗುತ್ತಿದ್ದರು. ಅದೇ ಮರಾಠಾ ಸರದಾರರಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗಾಗುತ್ತಿರಲಿಲ್ಲ. ತಮ್ಮ ಕುಲದೊಂದಿಗೆ ಶತ್ರುತ್ವ, ಆದರೆ ನಿಜಾಮನ ಬಗ್ಗೆ ಮಾತ್ರ ಏಕನಿಷ್ಠೆಯಿಂದ ಸೇವೇ ಮಾಡುವುದರಲ್ಲಿ ಪೈಪೋಟಿ. ಇದು ಅಂದಿನ ಸ್ಥಿತಿಯಾಗಿತ್ತು.

ಏಕೆ ಕಹಿ :

ಒಂದು ವರ್ಷದ ಫಾಲ್ಗುಣ  ಮಾದ ಹೋಲಿ ಉತ್ಸವ. ಜಾಧವರಾನ ದಿವನಖಾನೆಯಲ್ಲಿ ರಂಗು ಪಂಚಮಿಯ ಉತ್ಸವ ನಡೆಯದಿತ್ತು. ಸರದಾರ, ದರಕದಾರ, ಶಿಲೇದಾರ್, ಬಾರ್ಗೀರ್, ಭಾಲದಾರ್, ಚೋಪದಾರ್ ಹೀಗೆ ಅನೇಕರು ದಿವಾನಖಾನೆಯಲ್ಲಿ ನೆರೆದಿದ್ದರು. ವೇರೂಳ ಬಾಬಜಿ ಪಟೇಲರ ಪುತ್ರ ಮಾಲೋಜಿ ಶಿಲೆದಾರನೂ ಈ ರಂಗಪಂಚಮಿಯ ಉತ್ಸವಕ್ಕೆ ಬಂದಿದ್ದನು.

ಲಖೂಜೀ ಜಾಧವರಾವ ವೈಭವ ಪ್ರಸಿದ್ಧವಾಗಿತ್ತು. ಮಧ್ಯದಲ್ಲಿ ಸರದಾರ ಜಾಧವರಾವ ಅಸೀನನಾಗಿದ್ದ. ಸುತ್ತಲೂ ನಿಂತವರೆಲ್ಲ ತಮ್ಮ ತಮ್ಮ ಅಂತಸ್ತಿನ ಪ್ರಕಾರ ಕುಳಿತ್ತಿದ್ದರು. ಸಮಾರಂಭ ಮುಗಿಯಿತು. ಆನಂತರ ಒಬ್ಬರ ಮೇಲೊಬ್ಬರು ಗುಲಾಲ್ ಚೆಲ್ಲಿ ಹೋಲಿ ಉತ್ಸವ ಆಚರಿಸತೊಡಗಿದರು. ಅಷ್ಟರಲ್ಲಿ ಜಧವರಾವ್ ಸುಂದರ ಬಾಲಕಿ ಜೀಜಾ ಕೈಯಲ್ಲಿ ಗುಲಾಲ್ ಹಿಡಿದು ಮನೆಯಿಂದ ಹೊರಬಂದಳು. ಮಾಲೋಜಿಯ ತೊಡೆಯ ಮೇಲೆ ಅವನ ಕಿರು ವಯಸ್ಸಿನ ಮಗ ಶಾಹಜಿ ಕುಳಿತ್ತಿದ್ದ. ಜೀಜಾ ನೇರವಾಗಿ ಶಹಾಜಿಯ ಮೇಲೆ ಗುಲಾಲ್ ಚೆಲ್ಲತೊಡಗಿದಳು. ಹಾಹಜಿ ಸುಮ್ಮನಿರಿವನೇ?ಅವನೂ ಜೀಜಾಳ ಮೇಲೆ ಗುಲಾಲ್ ಚೆಲ್ಲಲು ಪ್ರಾರಂಭಿಸಿದ.

ಶಾಹಜಿ ಗೌರವರ್ಣದ ಸುಂದರ ರಾಜಪುತ್ರನಂತಿದ್ದ. ಜಾಧವರಾವ್ ಗೆ ಶಾಹಜಿ ಬಹಳ ಮೆಚ್ಚಿಕೆಯಾಗಿದ್ದ. ಆತ ಆ ಬಾಲಕನನ್ನು ಪ್ರೀತಿಯಿಂದ ತಮ್ಮ ಕಡೆ ಎಳೆದು ಅಕ್ಕಪಕ್ಕ  ಕುಳಿತವರ ಮುಂದೆ, “ಜೀಜಾ- ಶಾಹಾಜಿ ಜೋಡಿ ಎಷ್ಟು ಚೆನ್ನಾಗಿ ಒಪುತ್ತದಲ್ಲವೇ?” ಎಂದು ಹಾಸ್ಯ ಮಾಡಿದ. ಎಲ್ಲರೂ “ಭಲೆ, ಸುಂದರ ಜೋಡಿ” ಎಂದು ತಲೆ ಅಲ್ಲಾಢಿಸಿದರು. ಇದೆಲ್ಲವನ್ನೂ ಮಾಲೋಜಿ ನೋಡುತ್ತಿದ್ದ. ಅವನಲ್ಲಿ ವಾತ್ಸಲ್ಯದ ಭಾವನೆಯ ಉದ್ದೀಪನೆಯಾಯಿತು.

“ಸರದಾರರೇ, ನಮ್ಮ ಸರದಾರ್ ಜಾಧವರಾವ್ ಹೇಳಿದ್ದನ್ನು ಕೇಳಿದ್ದೀರಲ್ಲವೇ? ಇಂದಿನಿಂದ ನಾವು ಅವರೂ ಬೀಗರು. ಜೀಜಾ ನಮ್ಮ ಸೊಸೆ” ಎಂದು ಹೇಳೀದ. ಸ್ವಂತ ಸ್ಥಾನಮಾನದ ಬಗ್ಗೆ ತುಂಬಾ ಅಭಿಮಾನ ತಳೆದಿದ್ದ ಜಾಧವರಾವ್ಗೆ ಇದು ರುಚಿಸಲಿಲ್ಲ. ಕೇವಲ ವಿನೋದಕ್ಕೆ ಮಾತನಾಡಿದರೆ ಅದರ ಅರ್ಥ ಬೀಗರಾಗಬೇಕೆಂದೇ? “ನನ್ನ ಮಗಳು ಓರ್ವ ಶಿಲೇದಾರನ ಸೊಸೆಯಾಗಉವುದು ಎಂದೆಂದಿಗೂ ಸಾಧ್ಯವಿಲ್ಲ” ಎಂದು ಕಠೋರವಾಗಿ ನುಡಿದ.

ಸ್ವಾಭಿಮಾನಿ ಮಾಲೋಜಿ ಇದನ್ನು ಕೇಳಿ ಸಿಟ್ಟಿನಿಂದ ಸಿಡಿದೆದ್ದ. ತಕ್ಷಣವೇ ತನ್ನ ನೌಕರಿ ತ್ಯಜಿಸಿ, ಇದೊಂದು ತನಗೆ ಜಾಧವರಾವ ತೊಟ್ಟ ಅಹ್ವಾನವೆಂದೇ ಸಾರಿ ಪಣತೊಟ್ಟು ಹೊರಬಿದ್ದ.

ಮಾಲೋಜಿಯ ಚಿಂತೆ :

ಜಾಧವರಾವನ ನೌಕರಿ ಬಿಟ್ಟು ಮಾಲೋಜಿ ನೇರವಾಗಿ ತನ್ನೂರಾಧ ವೇರೂಳಿಗೆ ಹೋದ. ಆದರೆ ಅವನ ಮನಸ್ಸು ತೀರ ಅಸ್ವಸ್ಥವಾಗಿತ್ತು. ಸದಾ ವನ ಮನಸ್ಸು ಯೋಚನೆಯಲ್ಲಿಯೇ ತಲ್ಲೀನವಾಗಿರುತ್ತಿತ್ತು. ಹೀಗೆ ಕೆಲವು ದಿನಗಳು ಉರುಳಿದವು. ಒಂದು ರಾತ್ರಿ ಊಟದ ನಂತರ ಮಾಲೋಜಿ  ಮನೆಯ ಮುಂದಿನ ಜಗುಲಿಯ ಮೇಲೆ ಮಲಗಿದ್ದ. ಅವನ ಮನಸಿನಲ್ಲಿ ನಾನಾ ಪ್ರಕಾರದ ವಿಚಾರಗಳ ಸಂಘರ್ಷವೇ ನಡೆದಿತ್ತು. ಜಾಧವರಾವರ್ ಮನೆಯಲ್ಲಿ ತನಗಾದ ಅವಮಾನದಿಂದ ಅವನ ಮನಸ್ಸಿನ ಶಾಂತಿ ಪೂರ್ಣ ಕದಡಿತು.  ಹೀಗೆ ವಿಚಾರ ಮಾಡುತ್ತಿರುವಾಗಲೇ ಅವನಿಗೆ ಗಾಢ ನಿದ್ರೆ ಹತ್ತಿತ್ತು. ಪ್ರಾತಃಕಾಲ ನಾಲ್ಕು ಗಂಟೆಯ ನಂತರ ಪ್ರಶಾಂತ ಸಮಯ.

ಆಗ ಒಂದು ವಿಶೇಷ ಸಂಗತಿ ನಡೆಯಿತು ಎಂದು ಹೇಳುತ್ತಾರೆ.

ಮಾಲೋಜಿಗೆ ಒಂದು ಸ್ವಪ್ನ ಬಿದ್ದಿತು. ಅತ್ಯಂತ ಸುಂದರ ಮಹಾ ತೇಜಸ್ವಿ ದೇವಿಯ ದರ್ಶನವಾಯಿತು. ಕೈಯಲ್ಲಿ ಶಂಖ, ಚಕ್ರ , ಪದ್ಮ, ತ್ರೀಶೂಳಗಳನ್ನು ಹಿಡಿದ ದೇವಿ, “ಮಗೂ ಮಾಲೋಜಿ ಎದ್ದೇಳೂ. ನಾನು ಯಾರು ಎಂದು  ತಿಳಿದಿರುವೆ? ನಾನು ನಿನ್ನ  ಕುಲಸ್ವಾಮಿನಿ. ನಿನ್ನ ಕುಲದಲ್ಲಿ ಒಬ್ಬ ಮಹಾನ್ ಶತಕಕರ್ತ ಪುರುಷನ ಜನ್ಮವಾಗಲಿದೆ. ಅವನ ಕೀರ್ತಿ ದಿಗ್ದಂತಗಳಲ್ಲಿ ಪಸರಿಸಲಿದೆ . ಏಳು, ಈಗ ತಡಮಾಡಬೇಡ,. ಕಾರ್ಯಮಗ್ನನಾಗು. ನಿನಗೆ ನನ್ನ ಪೂರ್ಣ ಅಶೀರ್ವಾದವಿದೆ” ಎಂದು ಹೆಳಿ ಅಂತರ್ಧಾನಳಾದಳೂ. ಮಾಲೋಜಿಗೆ ಎಚ್ಚರವಾಯಿತು. ಸುತ್ತ ಮುತ್ತ ನೋಡಿದ. ಅವನಿಗೆ ಯಾರೂ ಕಾಣಲಿಲ್ಲ. ಅವನ ಶರೀರದಲ್ಲಿ ಹೊಸ ಶಕ್ತಿ, ಚೈತನ್ಯಗಳು ವಿದ್ಯುತ್ ಸಂಚಾರವಾದಂತಾಯಿತು.

ದೇವಿಯ ಕೃಪೆ :

ದೇವಿಯ ಕೃಪೆಯ ಮರುದಿನವೇ ಅವನಿಗೆ ಲಭ್ಯವಾಯಿತು ಎಂದು ಹೆಳುತ್ತಾರೆ,

ಮಾರನೆಯ ದಿನ ತನ್ನ ತಮ್ಮ ವಿಠೋಜಿಯ ಜೊತೆಗೆ ಮಾಲೋಜಿ ಬಂಡಿ ಕಟ್ಟಿಕೊಂಡು ತನ್ನ ಗದ್ದೆಯ ಕಡೆಗೆ ನಡೆದ. ಬೆಳದಿಂಗಳ ಬೆಳಕಿನಲ್ಲಿ ಗದ್ದೆಯಲ್ಲಿಯ ಪಸಲನ್ನು ಕಾಯವುದು ಅವರ ಉದ್ದೇಶವಾಗಿತ್ತು. ಮಧ್ಯರಾತ್ರಿಯಾಯಿತು. ವಿಠೋಜಿ ನಿದ್ರೇಹೋದ. ಆಧರೆ ಮಾಲೋಜಿಗೆ ಮಾತ್ರ ನಿದ್ರೆ ಬರಲಿಲ್ಲ. ಅವನ ಕಣ್ಮುಂದೆ ಸ್ವಪ್ನದಲ್ಲಿ ಕಂಡ ದೇವಿಯ ಚಿತ್ರವೇ ಕಾಡುತ್ತಿತ್ತು. ಮನಸ್ಸಿನಲ್ಲಿ ಜಾಧವರಾವರ‍ ಚುಚ್ಚುನುಡಿಗಳು ಇಳಿಯುತ್ತಿದ್ದವು.  ಒಂದು ತರಹದ ಅಸ್ವಸ್ಥತೆ ಅವನ್ನಾವರಿಸಿತು. ಕುಳಿತ ಸ್ಥಳದಿಂದ ಎದ್ದು ಕೈಯಲ್ಲಿ ಗುದ್ದಲಿಯನುನ  ತೆಗೆದುಕೊಂಡು ಮೇಲ್ಬಾಗದ ಗದ್ದೆಯ  ಒಡ್ಡನ್ನು ಸರಿಮಾಡಲು ಅಗೆಯತೊಡಗಿದ. ರಭಸದಿಂದ ಆಗೆಯುತ್ತಿರುವಾಗ ಗುದ್ದಲ್ಲಿ ಯಾವುದೋವಸ್ತುವಿಗೆ ತಗುಲಿ “ಠಣ್ ” ಎಂದು ಶಬ್ದವಾಯಿತು.  ಮಾಲೋಜಿ ಕುತೂಲದಿಂದ ಅದರ ಅಕ್ಕಪಕ್ಕದ ಮಣ್ಣನ್ನು ನೋಡುತ್ತಾನೆ. ಒಂದು ದೊಡ್ಡ ಹಂಡೆ ಚಂದ್ರಪಕಾಶದಲ್ಲಿ ಹೊಳೆಯುತ್ತಿತ್ತು.  ಅದರ ಕಂಠದವರೆಗೆ ಚಿನ್ನದ ಮೊಹರುಗಳು ತುಂಬಿದ್ದು. ಮಾಲೋಜಿಯ ಕಣ್ಣಲ್ಲಿ ಆನಂದಾಶ್ರು ಉಕ್ಕಿತು. ಭಯಭಕ್ತಿಯಿಂದ ಕುಲಸ್ವಾಮಿನಿಯನ್ನು ಮನಸ್ಸಿನಲ್ಲಿಯೇ ವಂದಿಸಿದ.  ಬೆಳಕು ಹರಿಯುವುದರೊಳಗಾಗಿ ಈ ಧನವನ್ನು ಮನೆಗೆ ಮುಟ್ಟಿಸಬೇಕಾಗಿತ್ತು. ತಮ್ಮ ವಿಠೋಜಿಯನ್ನು ಎಬಬಿಸಿದ. ಪೀಠೋಜಿ ಈ ದ್ರವ್ಯ ಸಂಪತ್ತನ್ನು ನೋಡಿ ಆನಂದದಿಂದ ಹುಚ್ಚಾಗಿ ಕುಣಿದ.  ಇಬ್ಬರೂ ಆ ಹಂಡೆಗಳನ್ನು ಬಂಡಿಗೇರಿಸಿ ಬೆಳಗಾಗುವದರೊಳಗೆ ಮನೆ ತಲುಪಿದರು. ಮನೆಯಲ್ಲಿ ಸಂಭ್ರಮದಿಂದ ಈ ದ್ರವ್ಯ ಲಕ್ಷ್ಮೀಗೆ ಪೂಜೆ ಮಾಡಿದರು.

ಜೀಜಾಬಾಯಿ ಮಾಲೋಜಿಯ ಸೊಸೆ:

ಕೈಯಲ್ಲಿ ಅಪಾರ ಹಣ ಸಂಚಯವಾದೊಡನೆಯೇ ಮಾಲೋಜಿ ಮುಂದಿನ ವಿಚಾರ ಮಾಡತೊಡಗಿದ. ಶೇಷೋವಾ ಎಂಬ ಒಬ್ಬ ವರ್ತಕ ಸ್ನೇಹಿತನಿಂದ ಒಂದು ಸಹಸ್ರ ಒಳ್ಳೆಯ ಕುದುರೆಗಳನ್ನು ಕೊಂಡುಕೊಂಡ. ಸಹಸ್ರ ಸವಾರರ ಬಲಿಷ್ಠ ಸೇನೆಯನ್ನು ಕಟ್ಟಿದ. ಅಕ್ಕ ಪಕ್ಕದಲ್ಲಿ ಮಾಲೋಜಿಯ ವರ್ಚಸ್ಸು ಬೆಳೆಯತೊಡಗಿತು. ಮಾಲೋಜಿಯನ್ನು ಭಯ ಭಕ್ತಿಯಿಂದ ಆದರಿಸುವ ಗ್ರಾಮಗಳ ಸಂಖ್ಯೆ ಬೆಳೆಯಿತು.  ಮಾಲೋಜಿ ಈ ಅಪಾರ ಧನದಿಂದ ಶ್ರೀಮಂತವಾಗಿ  ಸುಖವಾಗಿರಬಹುದಾಗಿತ್ತು. ಆವನಿಂದ ಮಹಾ ಕಾರ್ಯವಾಗಬೇಕಿತ್ತು. ಜಗತ್ತಿನಲ್ಲಿ ಸ್ವಾರ್ಥಿಗಳಿಗೆ ಮಾನವಿರುವುದಿಲ್ಲವೆಂದು ಅವನಿಗೆ ಗೊತ್ತಿತ್ತು. ಪರೋಪಕಾರದಲ್ಲಿ ತನುಮನ ಧನ ಸುರಿಯುವವೆಗೆ ಜನಮಾನ್ಯತೆ ಸಿಕ್ಕುತ್ತದೆ. ಇದು ಮಾಲೋಜಿಗೆ ಗೊತ್ತಿತ್ತು. ಅವನು ಈ ಹಣದ ಸದ್ವಿನಿಯೋಗ ಮಾಡತೊಡಗಿದ. ಭಾವಿ, ಧರ್ಮಶಾಲೆಗಳನ್ನು ಕಟ್ಟಿಸಿದ. ಮಠ ಮಂದಿರಗಳ ಜೀರ್ಣೋದ್ದಾರ ಮಾಡಿ ಬಡವರಿಗೆ ಅನ್ನಛತ್ರಗಳನ್ನು ನಿರ್ಮಿಸಿದ. ವೇರೂಳದ ಸಮೀಪದ ಪ್ರಸಿದ್ಧ ಘೃಷ್ಣೇಶ್ವರ ಮಂದಿರದ ಪುನನಿರ್ಮಾಣ ಮಾಡಿದ. ಶಿಂಗಣಪುರದ ದೊಡ್ಡ ಕೆರೆಯನ್ನು ಕಟ್ಟಿಸಿದ. ಹೀಗಾಗಿ ಎಲ್ಲರ ಬಾಯಲ್ಲಿ ಮಾಲೋಜಿಯ ಸ್ಥುತಿಯಾಗತೊಡಗಿತು.

ಮಾಲೋಜಿಯ ಕೀರ್ತಿ ಜಾಧವರಾವನಿಗೂ ತಿಳಿಯಿತು. ಅವನ ಹೆಂಡತಿ ಮಾಳಸಾಬಾಯಿಗೆ ಮಾಲೋಜಿಯ ವ್ಯಕ್ತಿತ್ವ – ಶೌರ್ಯದ ಬಗ್ಗೆ ಮೆಚ್ಚುಕೆಯಿತ್ತು. ಅವನ  ಈ ಧರ್ಮ ಕಾರ್ಯದಿಂದ ಅವನ ಬಗ್ಗೆ ಇನ್ನೂ ಆದರ ಹೆಚ್ಚಿತು.

ಜಾಧವರಾವ್ ಬಹು ಸ್ವಾಭಿಮಾನಿ. ತನ್ನ ಅಂತಸ್ತಿನ ಬಗ್ಗೆ ಅವನಲ್ಲಿದ್ದ ಗರ್ವ ಕಡಿಮೆಯಾಗಿರಲಿಲ್ಲ. ಮಾಲೋಜಿ ಎರಡು ಸಾವಿರ ಅಶ್ವದಳವನ್ನು ಕೊಂಡುಕೊಂಡ. ಹೀಗೆ ಮೂರು ಸಾವಿರ ಅಶ್ವದಳ ಹಾಗೂ ಸೈನಿಕರನ್ನು ಕೂಡಿಸಿ ಮಾಲೋಜಿ ಜಾಧವರಾವ್ ನಿಗೆ ಉಪಟಳ ಕೊಡಲು ಪ್ರಾರಂಭಿಸಿದ. ನಿಜಾಮಶಾಹಿಯಲ್ಲೂ ಅವನು ತನ್ನ ಪ್ರಹಾರ ಪ್ರಾರಂಭಿಸಿದ. ಬರುಬರುತ್ತ ಮಾಲೋಝಿಯ ಶಕ್ತಿ ಬೆಳೆಯತಡೊಗಿತು. ಅವನ ಶೌರ್ಯ , ಶಕ್ತಿಗಳ ಕಲ್ಪನೆ ನಿಜಾಮನಿಗೂ ಇತ್ತು. ಹೇಗಾದರೂ ಮಾಡಿ ಮಾಲೋಜಿಯನ್ನು ತನ್ನ  ರಾಜ್ಯದಲ್ಲಿ ಸರದಾರನನ್ನಾಗಿ ಮಾಡಿ ರಾಜ್ಯವನ್ನು ಭದ್ರ  ಮಾಡಿಕೊಳ್ಳಳು ನಿಜಾಮ ಹಂಚಿಕೆ ಹಾಕಿದ. ಮಾಲೋಜಿಗೆ ಹನ್ನೆರಡು ಸಾವಿರ “ಮಾನಸಬ್ ದಾರಿ ರಾಜೆ” ಎಂಬ ಬಿರುದು ಕೊಟ್ಟು ಶಿವನೇರಿ ಚಾಕಣ ಕಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳ ಪ್ರದೇಶಕ್ಕೆ ಸರದಾರನನ್ನಾಗಿ ಮಾಢಿದ. ಈಗ ಮಾಲೋಜಿ “ಸರದಾರ ಮಾಲೋಜಿರಾಜೆ ಭೋಸಲೆ” ಆದ. ಕೊನೆಗೆ ನಿಜಾಮ ನು ಜಾಧವರಾವ್ ಸರದಾರನ ಮೇಲೆ ಒತ್ತಾಯ ತಂದು ಅವನ ಮಗಳು ಜೀಜಾಳನ್ನು ಮಾಲೋಜಿಯ ಮಗ ಶಾಹಜಿಗೆ ಲಗ್ನ ಮಾಡಿಸಿದ.  ಮಾಲೋಜಿ ತೊಟ್ಟ ಪಣವನ್ನೇನೋ ಗೆದ್ದ.  ಆದರೆ ಸರದಾರ ಜಾಧವರಾವ್ ಮಾಥ್ರ ತನ್ನ ಸಿಟ್ಟನ್ನು ಮರೆಯಲಿಲ್ಲ.  ಮಾಲೋಝಿಯ ಕೀರ್ತಿ ಸಾಹಸಗಳಿಂದ ಮತ್ತಷ್ಟು ಮತ್ಸರ ಬೆಳೆಯಿತು.

ಮಾಲೋಜಿಗೆ ೭೦ ವರ್ಷ ವಯಸ್ಸಾಗಿದ್ದಾಗಿ ತೀರಿಕೊಂಡ. ತಂದೆಯ ನಂತರಶಾಹಜಿರಾಜೆ ಭೋಸಲೆ ತಂದೆಯ ಸ್ಥಾನದಲ್ಲಿ ಸರದಾರನಾದ. ನಿಜಾಮಶಾಹಿಯ ಸೇವೆಯನ್ನು ಮುಂದುವರೆಸಿದ.

 

ನಾನು ವೀರ ಪತ್ನಿಯಾಗಿ ಮಡಿಯುವೆ:

ಹೃದಯದಲ್ಲಿ ಬೆಂಕಿ

 

ಶಾಹಜಿರಾಜೆ ಭೋಸಲೆ ತಂದೆಯೆಂತೆ ಅತ್ಯಂತ ಶೂರ, ಮುತ್ಸದ್ದಿ ಹಾಗೂ ಪಳಗಿದ ರಾಜಕಾರಣಿ ಯೋಧನೆಂದು ಹೆಸರುವಾಸಿಯಾಗಿದ್ದ. ಜೀಜಾಳ ಜೊತೆಗೆ ಲಗ್ನವಾಗಿದ್ದರೂ ಕೂಡ ಮಾವ- ಆಳಿಯನ ಸಂಬಂಧ ಎಂದೂ ಸುಧಾರಿಸಲಿಲ್ಲ. ಎರಡೂ ಮನೆತನಗಳಲ್ಲಿ ಶತ್ರತ್ವವೇ ಬೆಳೇಯಿತು. ಅಳಿಯನ ಏಳೀಗೆ ಜಾಧವರಾವಗೆ ಎಂದೂ ಸೇರಲಿಲ್ಲ. ಕೊನೆ ಕೊನೆಗೆ ಅಳಿಯನ ಮೇಲೆ ಸೇಡು ತೀರಿಸಿಕೊಳ್ಳಲು ನಿಜಾಮಶಾಹಿ ಬಿಟ್ಟು ಮೊಗಲರನ್ನು ಕೂಡಿಕೊಂಡ. ಅವನ ಆಯುಷ್ಯವೆಲ್ಲ ಅಳಿಯನ ಮೇಲೆ ಸೇಡು ತೀರಿಸಿಕೊಳ್ಳುವುದರಲ್ಲಿಯೇ ಖರ್ಚಾಯಿತು. ಜೀಜಾಗೆ ತನ್ನ ತವರು ಮನೆಯ ಶತ್ರುತ್ವದ ದುಃಖ ಒಂದು ಕಡೆಯಾದರೆ ತನ್ನ ತವರು ಮನೆಯವರು ಹಾಗೂ ಪತಿ ಆಯುಷ್ಯವೆಲ್ಲ ಮುಸಲ್ಮಾನರ ಸರದಾರರಾಗಿ ಸೇವೆ ಸಲ್ಲಿಸುತ್ತಿರುವ ದುಃಖ ಮತ್ತೊಂದು ಕಡೆ, ಜೀಜಾ ಸುಪ್ತ ಜ್ವಾಲಾಮುಖಿಯಾಗಿದ್ದಳು. ಅವಳದು ತೀವ್ರ ಸ್ವಾತಂತ್ರ್ಯ ಪ್ರೇಮ. ಮರಾಠಾ ಯೋಧರಿಗೆ ನಿಜಾಮನ ಅಥವಾ ಮೊಗಲ ಬಾದಷನ ಕೃಪೆಯೇ ಚಿನ್ನದ ಬೇಡಿಯಾಗಿತ್ತು. ಸ್ವತಃ ತನ್ನ ಪತಿಯೇ ಅವರಲ್ಲೊಬ್ಬ. ಈ ಹತಾಶ ದೈನ್ಯಾವಸ್ಥೆಯನ್ನು ನೋಡಿ ಅವಳ ಹೃದಯದಲ್ಲಿ ರೋಷಾಗ್ನಿ ಪ್ರಜ್ವಲಿಸುತ್ತಿತ್ತು. ಆದರೇನನೂ ಮಾಡುವಂತಿರಲಿಲ್ಲ. ಆದರ್ಶ ಗೃಹಿಣಿಯಾಗಿ ಹೊರಗೆ ಶಾಂತರೂಪ ದಾರಣೆ ಮಾಡಲೇಬಾಕಾಗಿತ್ತು. ಪತ್ನಿಯ ಈ ಅಸಂತೋಷ ಶಾಹಜಿಗೆ ತಿಳಿಯುತ್ತಿರಲಿಲ್ಲವೆಂದಲ್ಲ. ಆದರೆ ಒಬ್ಬ ಶಾಹಜಿ ಏನು ಮಾಡುವಂತಿರಲಿಲ್ಲವೆಂದಲ್ಲ.  ಪರಿಸ್ಥಿತಿಗೆ ತಲೆಬಾಗಿ ಏಕನಿಷ್ಠೆಯಿಂದ ಸೇವೆ ಮಾಡುವುದೇ ಅವನ ಮುಂದಿನ ಮಾರ್ಗವಾಗಿತ್ತು.

ತಂದೆ ಸೆರೆಯಾಳು !

ಇದೇ ಕಾಲದಲ್ಲಿ ದಿಲ್ಲಿಯ ಮೊಗಲ್ ಚಕ್ರವರ್ತಿ ಷಹಾಜಾನ್ ನಿಜಾಮನ ವಿರುದ್ಧ ದಂಡೆತ್ತಿ ಬಂದ. ಆಗ ನಿಜಾಮನ ಕಡೆಯ ಇಬ್ಬರೇ ಪರಾಕ್ರಮ ಶಾಲಿ ಸರದಾರರಿದ್ದರು.  ಮಲಿಕ್ ಅಂಬರ್ ಹಾಗೂ ಶಾಹಜಿಯರಾಜೆ ಭೋಸಲೆ, ಅದೇ ಸಮಯದಲ್ಲಿ ಮಲಿಕ್ ಅಂಬರ ತೀರಿಕೊಂಡಿದ್ದರಿಂದ ಎಲ್ಲಾ ಹೊಣೆ ಶಾಹಜಿಯ ಮೇಲೆ ಬಿತ್ತು. ಆಗ ಶಹಾಜಿ ಮಾಹುಲಿ ಕಿಲ್ಲೆಯಲ್ಲಿದ್ದ. ಇದೇ ಸಮಯ ಸಾಧಿಸಿ ಜಾಧವರಾವ್ ನಿಜಾಮನ ವಿರುದ್ಧ ಮೊಗಲ್ ಸೈನ್ಯದೊಡನೆ ಸೇರಿಕೊಂಡು ಮಾಹುಲಿ ಕಿಲ್ಲೆಯನ್ನು ಮುತ್ತಿದ. ಆರು ತಿಂಗಳು ಶಾಹಜಿ ವೀರತನದಿಂದ ಕಾದು   ಕಿಲ್ಲೆಯನ್ನು ರಕ್ಷಿಸಿದ. ಪ್ರತ್ಯೇಕ್ಷ ಮಾವನೇ ಅಳಿಯನ ನಿರ್ನಾಮ ಮಾಡಲು ಹೊರಟಿದ್ದ. ಆಗ ಜೀಜಾಬಾಯಿ ಕೂಡ ಮಾಹುಲಿ ಕಿಲ್ಲೆಯಲ್ಲಿಯೇ ಇದ್ದಳು. ಈ ಮಧ್ಯೆ ನಿಜಾಮಶಾಹಿಯಲ್ಲಿ ಶಾಹಜಿಯ ವಿರುದ್ಧ ಸಂಚು ನಡೆಯುತ್ತಿತ್ತು. ಕಿಲ್ಲೆಗೆ ಸಮಯಕ್ಕೆ ಸರಿಯಾಗಿ ಯಾವ ಸಹಾಯವೂ ದೊರಕಲಿಲ್ಲ. ಕೊನೆಗೆ ಶಾಹಜಿ ನಿರೂಪಾಯನಾಗಿ ಕಿಲ್ಲೆಯಿಂದ ಗುಪ್ತವಾಗಿ ಜೀಜಾಬಾಯಿಯೊಡನೆ ಹೊರಬಿದ್ದ. ಶಾಹಜಿ ಕಿಲ್ಲೆಯಿಂದ ಪಾರಾದ ಸುದ್ಧಿ ಜಾಧವರಾವ್ ಗೆ ತಿಳಿದೊಡನೆ ಅವನು ಶಾಹಜಿಯ ಬೆನ್ನು ಹತ್ತಿದ. ಆಗ ಜೀಜಾಬಾಯಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಕುದುರೆಯ ಮೇಲೆ ಅತಿ ದುರ್ಗಮವಾದ ರಸ್ತೆಯಲ್ಲಿ ವೇಗದಿಂದ ಓಡುತ್ತಿರುವಾಗ ಜೀಜಾಬಾಯಿಗೆ ಅತೀವ ತೊಂದರೆಯಾಯಿತು. ಆಗ ಆಕೆಯ ಕುದುರೆಯಿಂದಿಳೀದು, “ಮಹಾರಾಜ, ಶತ್ರು ತೀರ ಸಮೀಪದಲ್ಲಿ ಬಂದಿದ್ದಾನೆ. ನನ್ನಿಂದ ಮುಂದೆ ಹೋಗಲು ಸಾಧ್ಯವಿಲ್ಲ. ಈ ವೇಗದಿಂದ ಹೋದರೆ ಘಾತವಾದೀತು. ನೀವು ನನ್ನನ್ನು ಇಲ್ಲಿಯೇ ಬಿಟ್ಟು ಮುಂದೆ ನಡೆಯಿತಿ. ನನ್ನ ಚಿಂತೆ ಮಾಡಬೇಡಿ: ಎಂದು ಬೇಡಿಕೊಂಡಳು. ಪರಿಸ್ಥಿತಿಯ ಗಂಭೀರತೆಯನ್ನು  ಅರಿತ ಶಾಹಜಿ ಕುದುರೆಯನ್ನೇರಿ ಮುಂದೆ ಸಾಗಿದ.

ಸ್ವಲ್ಪ ಸಮದಯದಲ್ಲಿಯೇ ಜೀಜಾಬಾಯಿ ತಂದೆಯ ಕೈಯಲ್ಲಿ ಸಿಕ್ಕಬಿದ್ದಳು. ಎಷ್ಟಾದರೂ ಮಗಳೂ. ಅದರಲ್ಲಿಯೂ ಗರ್ಭಿಣಿ. ಅವಳ  ಈ ಅವ್ಯವಸ್ಥೆಯನ್ನು ನೋಡಿ ಜಾಧವರಾವ್, “ಮಗೂ ಜೀಜು, ಏಕೆ ಈ ವನವಾಸ ಅನುಭವಿಸುತ್ತಿರುಗೆ? ನೀನು ಈಗಲೇ ತವರು ಮನೆ ಸಿಂಧಖೇಡಿಗೆ ನಡೆದ. ನಾನು ಮೇಣೆಯ ವ್ಯವಸ್ಥೆ ಮಾಡುತ್ತೇನೆ” ಎಂದು ಹೇಳಿದ.

ಜೀಜಾಬಾಯಿ ವೀರಪತ್ನಿ.ತಂದೆಯ ಈ ಸಲಹೆ ಅವಳಿಗೆ ಹೇಗೆ ರುಚಿಸಬೇಕು? ಆಕೆ ವೀರಾವೇಶದಿಂದ ಉತ್ತರಿಸಿದಳು: “ಬಾಬಾ ಸಾಹೇಬ್, ನಿಮಗೆ ಬೋಸಲೆ ಮನೆತನದ ಮೇಲೆ ಸೇಡು ತೀರಿಸಿಕೊಳ್ಳುವುದಿದೆಯಲ್ಲವೇ? ಇಗೋ, ನಾನು ನಿಮ್ಮ ಮುಂದೆ ನಿಂತಿದ್ದೇನೆ. ನಿಮ್ಮ ಇಚ್ಛೆ ಪೂರ್ತಿಮಾಡಿಕೊಳ್ಳಿ. ಈಗ ನನಗೆ ನಿಮ್ಮ ಮನೆಯಲ್ಲಿ ಏನು ಕೆಲಸ? ಎಂದು ಲಗ್ನವಾಗಿ ನಿಮ್ಮ ಮನೆಯ ಹೊಸ್ತಿಲನ್ನು ದಾಟಿ ಆ ಮನೆ ಸೇರಿದೇನೋ ಅಂದೇ ನಿಮ್ಮ ಕುಲಕ್ಕೆ ಹೊರತಾದೆ. ಈಗ ನಾನು ಭೋಸಲೆ ಮನೆತನದ ವೀರ ಸೊಸೆ.  ನಿಮ್ಮ ಮನೆಯ ಮುತ್ತಿನ ರೊಟ್ಟಿಗಿಂತ ನನ್ನ ಪತಿಯ ಮನೆ ಹೊಟ್ಟಿನ ರೊಟ್ಟಿಯೇ ನನಗೆ ಪ್ರೀತಿ. ನಾನು ಭೋಸಲೆ ಮನೆತನದ ಸೊಸೆಯಾಗಿ ವೀರಪತ್ನಿಯಾಗಿ ನುಡಿಯುವೆ.

ಇದನ್ನು ಕೇಳಿ ತಂದೆ ಜಾಧವರಾವ ಸಂತಪ್ತನಾದ. “ಜೀಜು, ನೀನು ಯಾರ ಮುಂದೆ ಬಡಬಡಿಸುತ್ತಿರುವೆ ಎಂಬುವುದರ ಕಲ್ಪನೆ ಇದೆಯೇ”? ಎಂದು ಗರ್ಜಿಸಿದ.

ಜೀಜಾ ಅಷ್ಟೇ ನಿರ್ಧಾರದಿಂದ, “ಹೌದು ಗೊತ್ತಿದೆ, ನನ್ನ ಬಡಬಡಿತ ಮೊಗಲರ ಪಕ್ಷಪಾತಿ, ಮರಾಠರ ಶತ್ರು ಹಾಗೂ ನನ್ನ ಪತಿಯ ಕಟ್ಟಾವೈರಿಯ ಮುಂದೆ ನಡೆದಿದೆ.  ತಂದೆ,  ನಿಮಗೇನನಿಸುತ್ತದೆ? ನಿಮ್ಮ ಜೀಜೂ ಇನ್ನೂ ಸಣ್ಣ ಮಗುವೆಂದು ತಿಳಿದಿರುವಿರಾ? ಮರಾಠಾ ಸ್ತ್ರೀ ಪತಿಯನ್ನು ಬಿಟ್ಟು ಯಾರಿಗೂ ಹೆದರುವುದಿಲ್ಲ. ಹೋಗಿ ನಿಮ್ಮ ಶಿಕಾರಿಯನ್ನು ಹಿಡಿಯಿರಿ. ಮೊಗಲರಿಂದ ಇನಾಮು ಪಡೆಯಿರಿ. ನಿಮಗೆ ಜೀವನದಲ್ಲಿ ಇದೇ ಮಹಾಭೂಷಣವಲ್ಲವೇ? ಏಕೆ ಸುಮ್ಮನೆ ನಿಂತಿರುವಿರಿ? ನನಗೆ ನಿಮ್ಮ ಆಸರೆ ಬೇಕಿಲ್ಲ. ಅದೋ  ನೋಡಿ ಶಿವನೇರಿಕಿಲ್ಲೆ. ಅದು ನನ್ನ ಮನೆ. ಅಲ್ಲಿ ಜಗದಂಬೆಯ ಸೇವೆ ಮಾಡಿಕೊಂಡಿರುತ್ತೇನೆ” ಎಂದು ಮುಖ ಮುರಿಯುವಂತೆ ಉತ್ತರಿಸಿದಳು. ಜೀಜಾಬಾಯಿಯ ಈದುರ್ಗಾವತಾರ ನೋಡಿ ತಂದೆ ನಿರುತ್ತರನಾದ. ಇನ್ನು ಅಲ್ಲಿ ನಿಲ್ಲುವುದರಲ್ಲಿಯೇ ಅರ್ಥವಿಲ್ಲವೆಂದು ಮುಂದೆ ಸಾಗಿದ.

ಶಿವಾಜಿ ಸಿಂಹಾಸನವನ್ನೇರುವ ಮೊದಲು ತಾಯಿಗೆ ನಮಸ್ಕರಿಸಿದ.

ಸ್ವತಂತ್ರ್ಯ ಸಾಮ್ರಾಟನನ್ನು ನೋಡಬೇಕು :

ಶಾಹಜಿ ಜೀಜಾಬಾಯಿಯನ್ನು ಬಿಟ್ಟು ಹೊರಡುವಾಗ ತನ್ನ ಒಬ್ಬ ಆತ್ಮೀಯ ಸೈನಿಕ ಶ್ರೀನಿವಾಸರಾವ್‌ನನ್ನು  ಈ ಆಪ್ತ ವ್ಯಕ್ತಿ ಜೀಜಾಬಾಯಿಯನ್ನು ಶಿವನೇರಿಗೆ ಸುರಕಿಷತವಾಗಿ ತಲುಪಿಸಿದ.

ಜೀಜಾಬಾಯಿ ಎಂದರೆ ಆತ್ಮಗೌರವದ ಮೂರ್ತಿ. ಎಂತಹ ಕಷ್ಟಗಳೇ ಬರಲಿ ಎದೆಗುಂದದೇ ಪ್ರಸಂಗವನ್ನು ಎದುರಿಸುವ ಧೈರ್ಯ ಅವಳಲ್ಲಿ ಇತ್ತು. ಸುತ್ತಲೂ ಪವಿತ್ರ ತೀರ್ಥಕ್ಷೇತ್ರಗಳ, ಮಂದಿರಗಳ ದೈನ್ಯಾವಸ್ಥೆಯನ್ನು ನೋಡಿ ಉದ್ವಿಗ್ನಳಾಗಿದ್ದಳು. ಮುತ್ತು ರತ್ನಗಳು, ಸುವ್ಯವಸ್ಥಿತ ವಾಸಕ್ಕೆ ವಿಶಾಲವಾಧ ವಾಡೆ, ನೌಕರ ಚಾಕರರು, ಆನೆ ಕುದುರೆ ಮೇಣೆಗಳೂ. ಸಂಪತ್ತ ಎಲ್ಲವೂ ಅವಳಿಗಿದ್ದವು.  ಆದರೆ  ಇದಾವುದರಲ್ಲಿಯೂ ಅವಳಿಗೆ ಆಸಕ್ತಿ ಇರಲಿಲ್ಲ.

ಸದಾ ಜಗದಂಬೆಯ ಮುಂದೆ ಕುಳಿರುತ್ತಿದ್ದಳು. “ರುದ್ರಾಂಬೆ, ನನಗೆ ನಿನ್ನ ಒಂದು ಕೈಯ ಬಲ ಕೊಡು. ಮರಾಠರು ಇತರರ ಸೇವೆಯಲ್ಲಿ ಹೆಮ್ಮೆ ಪಟ್ಟುಕೊಂಡು ಬಾಳುವುದನ್ನು ತಪ್ಪಿಸು. ತನ್ನ ಧ್ವಜ, ತನ್ನ ಸೈನ್ಯಗಳಿಂದ ಬೆಳಗುವ ಸ್ವತಂತ್ರ್ಯ ಸಾಮ್ರಾಟವನ್ನು ನಾನು ನೋಡಬೇಕು” ಎಂದು ಬೇಡುತ್ತಿದ್ದಳು.

ಎಂತಹ ಕಲ್ಪನೆ! ಇಂತಹ ಒಬ್ಬ ಹೆಂಗಸು ತನ್ನ ರಾಜ್ಯದಲ್ಲಿ ಒಂದು ಮನೆಯಲ್ಲಿರುವಳೆಂದು ನಿಜಾಮನಿಗೆ ತಿಳಿದಿದ್ದರೆ ಅವನು ಆ ಮನೆಯನ್ನು ಮಾತ್ರವಲ್ಲ ಊರನ್ನೇ ಸುಟ್ಟುಬಿಡುತ್ತಿದ್ದ. ನಿಜಾಮನ ರಾಜ್ಯದಲ್ಲಿಯೇ ಸ್ವತಂತ್ರ್ಯ ಹಿಂದೂ ಸಿಂಹಾಸನವೇ? ಎಂಥ ಆಶಕ್ಯ ಕಲ್ಪನೆ!

ಆದರೆ, ಜೀಜಾಬಾಯಿ ಅಸಂತುಷ್ಟಳಾಗಿದ್ದಳು. ಮರಾಠ ಜಹಾಗಿರದಾರರು,ಸರದಾರರ ಬಗ್ಗೆ ಅವಳಲ್ಲಿ ಸಿಟ್ಟು ಉಕ್ಕೇರುತ್ತಿತ್ತು. ಇವರಿಗೆ ಸ್ವಾಭಿಮಾನವೇ ಇಲ್ಲವೆ? ಧರ್ಮ ಸಂಸ್ಕೃತಿಯ ಅರಿವೂ ಇಲ್ಲ: ಅಪಮಾನದ ಬಗ್ಗೆ ರೊಚ್ಚಿಲ್ಲ. ತಮ್ಮ ದೇಶ ಹಾಗೂ ಧರ್ಮಗಳನ್ನು ರಕ್ಷಿಸಲಾರದ ಇವರು ಎಂತಹ ಸರದಾರರು!

ಶೂರ ಆದರೆ ಅಜ್ಞಾನಿ ಮರಾಠಾ ಮಾವಳೆ ವೀರರನ್ನು ಸಂಘಟಿಸಿ ಸುಲ್ತಾನನ ವಿರುದ್ಧ ಹೋರಾಡುವ ಶ್ರೀರಾಮನಂತಹ ಪ್ರತಾಪಶಾಲಿ ಪುರುಷ ಬೇಕಾಗಿತ್ತು. ಇಂತಹ ಪ್ರತಾಪ ಶಾಲಿ ಪುರುಷ ಜನ್ಮ ತಾಳಿದರೆ… ?

ಜೀಜಾಬಾಯಿಗೆ ರಾಮಾಯಣ ಮಹಾಭಾರತಗಳೆಂದರೆ ತುಂಬ ಸೇರುತ್ತಿತ್ತು. ದ್ರೌಪದಿ, ಕುಂತಿ, ವಿದುಲಾ ಇವರ ಕಥೆಗಳನ್ನು ಕೇಳುವಗ ಅವಳ ಮನಸ್ಸಿನ ಮೇಲೆ ವಿಲಕ್ಷಣ ಪರಿಣಾಮವಾಗುತ್ತಿತ್ತು. ಭೀಮಾರ್ಜುನರಂತಹ ಒಬ್ಬ ಮಗ ತನ್ನ ಹೊಟ್ಟೆಯಲ್ಲಿ ಹುಟ್ಟಬಾರದೇ? ತಾನೆಷ್ಟು ಧನ್ಯೆ! ತುಳಜಾಭವಾನಿ ತನ್ನ ಈ ಬಯಕೆ ಈಡೇರಿಸಬಲ್ಲಳೆ?

ಶಾಹಜಿ ನಿಜಾಮನ ಸೇವೆ ಮಾಡುವುದು ಜೀಜಾಬಾಯಿಗೆ ತೀರ ದುಃಖದ ಸಂಗತಿ. ಆದರೆ ಅವಳು ಇದರಿಂದ ಅವನಲ್ಲಿ ಪ್ರೀತಿಯನ್ನು ಕಡಿಮೆ ಮಾಡಲಿಲ್ಲ. ಎಲ್ಲಾ ರೀತಿಗಳಲ್ಲಿ ಅವನ ಮನೆಯನ್ನು ಬೆಳಗುವ ಪನಿಯಾಗಿದ್ದಳು.  ಆದರೆ ಮರಾಠರ ದಾಸ್ಯ ಹೋಗಬೇಕು ಎಂದು ಮನಸ್ಸು ಕುದಿಯುತ್ತಿತು.

ವೀರನ ಮಾತೇಯಾಗಬೇಕು :

ಜೀಜಾಬಾಯಿ ವೃದ್ಧ ಅನುಭಿ ರಾಜಕಾರಣಿಗಳ, ಕಾರಭಾರಿಗಳ ಸಹವಾಸದಲ್ಲಿ ರಾಜಕಾರಣದ ಅತ್ಯಂತ ಜಟಿಲ ಸಮಸ್ಯೆಗಳ ಅಭ್ಯಾಸ ಮಾಡುತ್ತಿದ್ದಳು. ದೇಶಸ್ಥಿತಿ, ಲೋಕಸ್ಥಿತಿಯ ಆಳವಾದ ಪರಿಚಯ ಮಾಡಿಕೊಂಡಿದ್ದಳು.  ಬಡ ಶೂರ ಮರಾಠಾ ಮಾವಳೆ ಜನ ಸುಲ್ತಾನಶಾಹಿಯ ದಬ್ಬಾಳಿಕೆಗೆ ತತ್ತರಿಸಿ ಹೋಗಿರುವುದು ಅವಳಿಗೆ ಕಾಣುತ್ತಿತ್ತು.  ಇವರೆಲ್ಲರನ್ನೂ ಒಟ್ಟು ಗೂಡಿಸಬಲ್ಲ ಶಕ್ತಿಶಾಲಿ ವ್ಯಕ್ತಿ ನನ್ನ ಮಗನಾಗಲಿ ಎಂಬುವದೊಂದೆ ಅವಳ ಹಂಬಲ.

ಗರ್ಭೀಣಿ ಜೀಜಾಬಾಯಿಯ ಸೇವೆಯಲ್ಲಿ ಯಾವ ಕುಂದು ಕೊರತೆ ಬಾರದಂತೆ ಸರ್ವ ವ್ಯವಸ್ಥೆಯಾಗಿತ್ತು. ಗರ್ಭೀಣಿಯ ಬಯಕೆ ಪೂರೈಸಲು ಸರ್ವರೂ ಆತುರರಾಗಿದ್ದರು. ಆದರೆ ಅವಳ ಬಯಕೆಯೇ ವಿಲಕ್ಷಣ, ಆಕೆಗೆ ಸಿಹಿ ತಿಂಡಿ ಬೇಕಿರಲಿಲ್ಲ. ಸುಗಂಧ ಪೇಯಗಳು ಬೇಕಿರಲಿಲ್ಲ. ಮೃಷ್ಣಾನ ಭೋಜನ ಬೇಕಿರಲಿಲ್ಲ. ದುರ್ಗಗಳನ್ನೇರುವುದು, ಖಡ್ಗಗಳನ್ನು ತಿರುಗಿಸುವುದು, ಕಠಿಣ ರಾಜಕೀಯ ಚರ್ಚಿಸುವುದು, ಮೈಮೇಲೆ ಕವಚನ ಹಕ್ಕಿ ಕುದುರೆ ಏರುವುದು ಇಂತಹ ಬಯಕೆಯಾಗ ತೊಡಗಿತು. ಅತ್ಯಂತ ವಿಸ್ಮಯದ ಸಂಗತಿಯೆಂದರೆ ಶಸ್ತ್ರಾಸ್ತ್ರ ಹಿಡಿದು ಹುಲಿಯಡೊಎನ ಕಾದುವ ಬಯಕೆಯಾಗತೊಡಗಿತು.

ತವರು ಮನೆ ಬೂದಿಯಾಯಿತು :

ಈ ಮಧ್ಯೆ ಅತ್ಯಂತ ಉದ್ವೇಗಜನಕ ಸುದ್ಧಿಯೊಂದು ಸಿಡಿಲೆರಗಿದಂತೆ ಶಿವನೇರಿಗೆ ತಲುಪಿತು. ಜೀಜಾಬಾಯಿಯ ತವರು ಮನೆ ಧ್ವಂಸವಾಯಿತು. ಮೊಗಲರೊಡನೆ ಸಖ್ಯ ಬೆಳೆಸಿದ ಲಖೂಜಿ ಜಾಧವರಾವ್ ಪುನಃ ನಿಜಾಮ ಶಾಹಿಯ ಸೇವೆಗೆ ಹಿಂದಿರುಗಲು ತೀರ್ಮಾನಿಸಿದ. ಅವನೂ ಅವನ ಮೂವರು ಗಂಡು ಮಕ್ಕಳೂ ನಿಜಾಮನನ್ನು ಭೇಟಿಯಾಗಿ ಮುಜುರೆ ಮಾಡಿದರು. ಮೊದಲೇ ಪೂರ್ವ ತಯಾರಿಯಲ್ಲಿದ್ದ ನಿಜಾಮನ ಸರದಾರರು ಮುಜುರೆಗಾಗಿ ಬಗ್ಗಿದಾಗಲೇ ಅವರೆಲ್ಲರ ರುಂಡಗಳನ್ನು ಕತ್ತರಿಸಿ ಒಗೆದರು. ಕ್ಷಣಾರ್ಧದಲ್ಲಿ ಜೀಜಾಬಾಯಿಯ ವಂಶವೇ ನಾಶವಾಯಿತು.

ಜೀಜಾಬಾಯಿಯ ಮಾತೆ ಮಾಳಾಸಾಬಾಯಿ ಹಾಗೂ ಅಣ್ಣಂದಿರ ಹೆಂಡತಿಯರು ಸತಿಹೋದರು. ಈ ಭಯಂಕರ ಘಟನೆಗಳಿಂದ ಜೀಜಾಬಾಯಿಗೆ ಕರುಳು ಸುಟ್ಟಂತೆ ಆಯಿತು. ದಿಲ್ಲಿಯ ಮೊಗಲ್ ಬಾಧಷಹ ದಕ್ಷಿಣಕ್ಕೆ ರಾಜಾ ಜಯಸಿಂಹನನ್ನು ದೊಡ್ಡ ಸೈನ್ಯದೊಂದಿಗೆ ಕಳಿಸಿದ್ದ.  ಶಾಹಜಿರಾಜೆ ಭೋಸಲೆಯ ಮೇಲೂ ನಿಜಾಮಶಾಹಿಗೆ ವಿಶ್ವಾಸವಿರಲಿಲ್ಲ. ಯಾವ ಸಮುಯದಲ್ಲಿ ಯಾವ ಕುತ್ತು ಕಾದಿದೆಯೋ ಹೇಳುವಂತಿರಲಿಲ್ಲ. ಶಾಹಜಿ ಚಾಣಾಕ್ಷನಿದ್ದ. ಪರಿಸ್ಥಿತಿ ಕೈಮೀರುವುದರೊಳಗೆ ಎಚ್ಚರಗೊಂಡ. ಅವನೂ ಮೊಗಲಶಾಹಿಯನ್ನು ಸೇರಿಕೊಂಡ. ಆದರೆ ಮೊಗಲರು ಶಾಹಜಿಯನ್ನು ಸಹ್ಯಾದ್ರಿಯಿಂದ ದೂರವಿಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಕರ್ನಾಟಕದ ಜಹಗೀರಿಗೆ ಸರದಾರನನ್ನಾಗಿ ಮಾಡಿ  ಕಳುಹಿಸಿದರು. ಬೆಂಗಳೂರೇ ಅವನ ಜಹಗೀರಾಯಿತು.

ಇತ್ತ ಶಿವನೇರಿಗೆ ನಿಜಾಮಶಾಹಿಯ ದೌರ್ಜನ್ಯದ ಕಥೆಗಳು ಒಂದರ  ಹಿಂದೊಂದು ಬರುತ್ತಿದ್ದವು. ಹಳ್ಳಿಗಳು, ಬಡ ಮರಾಠರ ಸಂಸಾರಗಳು ನಾಶವಾಗುತ್ತಿದ್ದವು. ಶಾಹಜಿರಾಜೆ ಭೋಸಲೆಯ ತರುಣ ಬಂಧು ವೀರ ವೇಳೋಜಿರಾವ್ ನ ಸುಂದರ ತರುಣ ಪತ್ನಿಯನ್ನು ಗೋದಾವರಿ ತಟದಲ್ಲಿ ಸ್ನಾನ ಮಾಡುತ್ತಿರುವಾಗ ಸರದಾರ್ ಮಹಬ್ಬತ ಖಾನ್ ಬಲಾತ್ಕಾರದಿಂದ ಅಪಹರಿಸಿಕೊಂಡು ಹೋದ. ಪ್ರಸಿದ್ಧ ಭೋಸಲೆ ಮನೆತನದ ಸೊಸೆಯ  ಅವಸ್ಥೆಯೇ ಹೀಗಾದರೆ ಬಡ ಮರಾಠರ ಅವಸ್ಥೆ ಕೇಳಬೇಕೆ? ಈ ಸುದ್ಧಿ ತಿಳಿದ ನಂತರ ಜೀಜಾಬಾಯಿ ಕೆಂಡದಂತಾದಳು.

ತೊಡೆಯ ಮೇಲೆ ಶಿವಾಜಿ :

ದಸರಾ, ದೀಪಾವಳಿ, ಸಂಕ್ರಾಂತಿ ಹಿಂದೆ ಸರಿದವು. ಜೀಜಾಬಾಯಿ ತಾಯಿಯಾಗುವ ದಿನ ಹತ್ತಿರಹತ್ತಿರ ಬರುತ್ತಿತ್ತು. ಒಂದು ದಿನ ಆಕೆಗೆ ನೋವು ಕಾಣಿಸಿಕೊಂಡಿತು. ವಿಘ್ನೇಶ್ವರ ಹಾಗೂ ಜಗದಂಬೆಗೆ ಮಂಗಳಾರ್ಚನೆ ಮಾಡಿಸಿದರು. ಶಾಲಿವಾಹನ ಶತ ೧೫೫೧ರ ಶುಕ್ಲನಾಮ ಸಂವತ್ಸರದ ಫಾಲ್ಗುಣ ಮಾಸದ ಬಹುಳ ತೃತೀಯ ಶುಕ್ರವಾರ (೧೬೩೦ನೆಯ ಇಸವಿ ಫೆಬ್ರವರಿ ೧೯ ರಂದು) ಜೀಜಾಬಾಯಿ ಗಂಡು ಮಗುವನ್ನು ಹೆತ್ತಳು. ಶಿವನೇರಿಯ ಜನರಿಗೆಲ್ಲ ಸಂತೋಷವೇ ಸಂತೋಷ. ಸಂಭ್ರಮವೇ ಸಂಭ್ರಮ.

ಹನ್ನೆರಡನೇ ದಿವಸ ಉದಯಿಸಿತು. ಜೀಜಾಮಾತೆ ಹಳದಿಬಣ್ಣದ ಚಿನ್ನದಂಚಿನ ಸೀರೆಯನ್ನುಟ್ಟು ಸರ್ವ ಅಲಂಕಾರದಿಂದ ಮಗುವನ್ನು ತೊಡೆಯ ಮೇಲೆ ತೆಗೆದುಕೊಂಡು ಕುಳಿತಳು. ಸುವಾಸಿನಿಯರು ಆ ಮಹಾಮಾತೆಗೆ ಆರತಿ ಬೆಳಗಿದರು. ಹುಡುಗನ ಹೆಸರು ಏನಿಡುವುದು? ಎಲ್ಲರ ಲಕ್ಷ್ಯ ಜೀಜಾಮಾತೆಯ ಕಡೆ. ಜೀಜಾಮಾತೆ ಜಗದಂಬೆಗೆ ವಂಧಿಸಿ ಗಂಭೀರಳಾಗಿ ನುಡಿದಳು-“ಶಿವಾಜಿ” ತೊಟ್ಟಿಲು ತೂಗಿತು. ಈ ಮೂರಕ್ಷರದ ಹೆಸರಿನ ಬಾಲಕನಲ್ಲಿ ಭಾರತದ ಇತಿಹಾಸ  ನಿರ್ಮಿಸುವ ಚಿರಂಜೀವ ಸಾಮರ್ಥ್ಯ ತುಂಬಿತ್ತು.

ಸ್ವಾತಂತ್ರ್ಯ ಮೂರ್ತಿಯನ್ನು ಕಡೆಯುವ ಶಿಲ್ಪಿ.

ಮರಾಠರ ಲಜ್ಜೆಗೇಡಿತನದ ಜೀವನವನ್ನು ಸಾಕು ಮಾಡಿ ಆತ್ಮಗೌರವದ ಅಧ್ಯಾಯವನ್ನು ಪ್ರಾರಂಭಿಸುವ ವೀರ ತನ್ನ ಮಗನಾಗಬೇಕೆಂದು ಜೀಜಾಬಾಯಿ ಹಂಬಲಿಸುತ್ತಿದ್ದಳು. ಈಗ ಅವಳ ಹೊಟ್ಟೆಯಲ್ಲಿ ಮಗ ಹುಟ್ಟಿದ್ದ. ಅವನ ಸ್ವಭಾವವನ್ನು ರೂಪಿಸಿ ಅವನನ್ನು ನಾಡಿನ ಭಾಗ್ಯವನ್ನಾಗಿ ಮಾಡುವ ಕಾರ್ಯ ಅವಳದಾಯಿತು. ಆ ಕಷ್ಟದ, ಪವಿತ್ರವಾದ ಕಾರ್ಯಕ್ಕೆ ಹೇಳಿ ಮಾಡಿಸಿದಂತಿದ್ದವು ಅವಳ ಆತ್ಮಗೌರವ, ಉಕ್ಕಿನ ಮನಸ್ಸು, ಧರ್ಮನಿಷ್ಠೆ.

ಶಾಹಜಿ ದಾದಾಜಿ ಕೊಂಡದವರ ಜೊತೆಗೆ ಜೀಜಾಮಾತೆ ಹಾಗೂ ಶಿವಾಜಿಯನ್ನು ಪುಣೆಗೆ ಕಳಿಸುವ ವ್ಯವಸ್ಥೆ ಮಾಡಿದ. ಪುಣೆ ಆಗ ಸಣ್ಣ ಹಳ್ಳೀ. ನಿಜಾಮಶಹಿ, ಅದಿಲಶಾಹಿ ಹಾಗೂ ಮೊಗಲಶಾಹಿಗಳ ಹೊಡೆತದಿಂದ ನಿರ್ನಾಮವಾಗಿತ್ತು. ಒಂದು ಮಂದಿರವೂ ಅಸ್ತಿತ್ವದಲ್ಲಿರಲಿಲ್ಲ. ಎಲ್ಲ ಮೂರ್ತಿಗಳೂ ಧ್ವಂಸವಾಗಿದ್ದವು. ದಾದಾಜಿಯವರ ಚಾಣಾಕ್ಷ ಆಡಳಿತದಲ್ಲಿ ಪುಣೆ ಪುನನಿರ್ಮಾಣವಾಯಿತು. ದಾದಾಜಿಯವರು ಜೀಜಾಬಾಯಿಗೆ ಸಹಾಯಕರಾಗಿ  ನಿಂತಿದ್ದು ಸುದೈವದ ಸಂಗತಿ. ಭ್ರಷ್ಟಾಚಾರ ತುಂಬಾ ಕಾಲದಲ್ಲಿ ಪ್ರಾಮಾಣಿಕ ಅಧಿಕಾರಿಗಳೆನಿಸಿಕೊಂಡರು ಅವರು ಪ್ರತಿಷ್ಠಿತರನ್ನೆಸಿ ಕೊಂಡವರೂ ಅಪಮಾನಗಳನ್ನು ನುಂಗಿಕೊಳ್ಳುತ್ತಿದ್ದ ಕಾಲದಲ್ಲಿ ಸಾಮಾನ್ಯ ಜನಕ್ಕೂ ರಕ್ಷಣೆಯನ್ನು ಒದಗಿಸಿದರು. ಜೊತೆಗೆ, ಭಾರತದ ಹಿಂದಿನ ಹಹಿರಿಮೆಯನ್ನು ವೀರರ ಸಾಹಸಗಳನ್ನೂ ಮನಸ್ಸಿನ ಮೇಲೆ ಅಚ್ಚೊತ್ತಿದಂತೆ ಬಾಲಕ ಶಿವಾಜಿಗೆ ನಿರೂಪಿಸಿದರು.

ಜೀಜಾಮಾತೆಯ ಆಜ್ಞೆಯ ಪ್ರಕಾರ ಪುಣೆಯಲ್ಲಿ ಹಲವಾರು ಮಂದಿರಗಳು ಎದ್ದವು. ಶಿವಾಜಿಯ ವಿದ್ಯಾಭ್ಯಾಸ ಬಹುಮಟ್ಟಿಗೆ ಜೀಜಾಬಾಯಿಯ ಕೈಯಲ್ಲಿ ಉಳಿಯಿತು. ರಾಮಾಯಣ, ಮಹಾಭಾರತ, ಭಾಗವತ ಗ್ರಂಥಗಳಿಂದ ಆಯ್ದ ಹೊಸ ಹೊಸ ಕಥೆಗಳನ್ನು ತಾಯಿಯ ಬಾಯಿಂದ  ಕೇಳೂವುದು ಎಳೆಯ  ಶಿವಾಜಿಗೆ ದಿನನಿತ್ಯದ ಪಾಠವಾಯಿತು. ರಾಮ, ಹನುಮಂತ, ಕೃಷ್ಣ, ಅಭಿಮನ್ಯು, ಭೀಮ, ಅರ್ಜುನರ ಸಾಹಸಕಥೆಗಳಿಂದ ಶಿವಾಜಿಗೆ ಕಣ್ಣೆದುರು ಗದೆ, ಧನಸ್ಸು, ಬಾಣಗಳೇ ಕಣತೊಡಗಿದವು. ಪುಣೆಗೆ ಪೂಜ್ಯರಾದ ಸಾಧು ಸಂತರು ಯಾರೇ ಬರಲಿ ಜೀಜಾಮಾತೆ ಶಿವಾಜಿಯ ಕೈಯಿಂದ ಅವರ ಸತ್ಕರ ಮಾಡಿಸುತ್ತಿದ್ದಳು. ಅವರ ಭವ್ಯಸಂಸ್ಕಾರ, ಉಪದೇಶ, ಆಶಿರ್ವಾದಗಳಿಂದ ಶಿವಾಜಿಯ ಮೈಯಲ್ಲಿ ಹೊಸ ಚೈತನ್ಯ ನಿರ್ಮಾಣವಾಗತೊಡಿತು. ದಾದಾಜಿಯ ಆಡಳಿತದಲ್ಲಿ, ಜೀಜಾಮಾತೆಯ ಮಾತೃ ಸಂಸ್ಕೃತಿಯ ಛತ್ರಛಾಯೆಯಡಿ ಶಿವಾಜಿಯಲ್ಲಿ ದಿವ್ಯ ಶಕ್ತಿಯು ಸಂಚಯವಾಗತೊಡಗಿತು. ಮಾವಳೆ ಬಾಲಕರು ಶಿವಾಜಿಯ ಗೆಳೆಯರಾದರು. ಬಡವರಾದರೂ ನಿಷ್ಠರಾದ ಇವರೊಂದಿಗೆ ಆತ್ಮೀಯತೆ ಬೆಳೆಯಿತು. ಅವರೊಡನೆ ಕೋಟೆಗಳನ್ನು ಕಟ್ಟಿ ಹಲ್ಲೆ ಮಾಡುವ ಆಟವಾಡತೊದಿದ. ಜೀಜಾಮಾತೆಯ ಅತ್ಯಂತ ಕಟ್ಟುನಿಟ್ಟಿನ ಶಿಸ್ತು, ನ್ಯಾಯ ನಿಷ್ಠೆ ಶಿವಾಜಿಯ ಉಸಿರಾದವು.  ಬಾಲಕ ಶಿವಾಜಿ ಗೋಹತ್ಯೆ ಮಾಡಿದ ಪಾಪಿಯ ಕೈ  ಕಡಿದುಹಾಕುವ ಆಜ್ಞೆ ನೀಡಿದ. ಪರಸ್ತ್ರೀಯ ಅಪಮಾನ ಮಾಡಿದವನಿಗೆ ಮರಣದಂಡನೆ ನೀಡಿದ.

ಪುಣೆಯ ಸ್ವರೂಪವೇ ಜೀಜಾಮಾತೆಯ ಆಗಮನದಿಂದ ಬದಲಾಯಿತು.  ಅಕ್ಕ ಪಕ್ಕದ ಹಳ್ಳಿಗಳಲ್ಲಿ ಸುವ್ಯವಸ್ಥಿತ ಕಾರಭಾರದಿಂದ ಅಭಿವೃದ್ಧಿಯ ನಾಂದಿಯನ್ನು ಹಾಕಿದಳು. ದರ್ಭಾರಿನಲ್ಲಿ ನ್ಯಾಯ ನಿಷ್ಕರ್ಷೆಗಳನ್ನು ಸ್ವತಃ ಜೀಜಾಮಾತೆ ನಡೆಸುತ್ತಿದ್ದಳು. ಆಗ ಶಿವಾಜಿ ಬದಿಯಲ್ಲಿರುತ್ತಿದ್ದ.  ಆಸಕ್ತಿ  ವಹಿಸಿ ಮಾತೆಯೊಡನೆ ಚರ್ಚಿಸುತ್ತಿದ್ದ. ಆಸಕ್ತಿ ವಹಿಸಿ ಮಾತೆಯೊಡನೆ ಚರ್ಚಿಸುತ್ತಿದ್ದ. ರಾಜಕಾರಣದಲ್ಲಿ ವಿಶೇಷ ಆಸಕ್ತಿಯಿಂದ ತಾಯಿಯ ಜೊತೆಗೆ ವಿಚಾರ ವಿನಿಮಯ ಮಾಡುತ್ತಿದ್ದ.  ದಾದಾಜಿ ಕೊಂಡದೇವರ ಕಾರ್ಯದಲ್ಲಿ ಅವರೊಡನಿದ್ದು ಎಲ್ಲವನ್ನೂ ಗ್ರಹಿಸುತ್ತಿದ್ದ.

ಶಕುಂತಲೆಸೀತೆಯರಂತೆ :

ಜೀಜಾಮಾತೆಯ ಮೇಲೆ ಆಪತ್ತಿನ ಪರಂಪರೆಗಳೇ ಬಂದವು. ಶಾಹಜಿ ರಾಜೆ ಬೆಂಗಳೂರಿನಲ್ಲಿ ೧೬೩೦ರಲ್ಲಿ ತುಕಾಬಾಯಿ ಎಂಬುವಳೊಡನೆ ಎರಡನೆಯ ಲಗ್ನವಾದರು. ಇದರ ನಂತರ ಅವರು ಯಾವಾಗಲಾದರೊಮ್ಮೆ ಜೀಜಾಬಾಯಿಯನ್ನೂ ಮಗನನ್ನೂ ನೋಡುತ್ತಿದ್ದರು, ಅಷ್ಟೇ. ಅವರ ಸಮಯವೆಲ್ಲ ತುಕಾಬಾಯಿ ಮತ್ತು ಅವಳ ಮಗ ಇವರೊಂದಿಗೆ ಕಳೆಯಿತು. ಆದರೆ ಜೀಜಾಬಾಯಿ ದೃತಿಗೆಡಲಿಲ್ಲ. ತನ್ನೆಲ್ಲ ಸಮಯವನ್ನು ಶಿವಾಜಿಯ ಶಿಕ್ಷಣಕ್ಕಾಗಿ ವ್ಯಯ ಮಾಡತೊಡಗಿದಳು. ಶಾಹಜಿ ಶೂರನೇನೋ ನಿಜ. ಆದರೆ ಅವನಲ್ಲಿ ಸ್ವಾತಂತ್ರ್ಯ ಪ್ರೇಮ ಬತ್ತಿಹೋಗಿತ್ತು.  ಇತರರ ಸೇವೆಗೆ  ಸೊಂಟಕಟ್ಟಿದ. ಅವನೊಂದಿಗೆ ಬಾಲಕ ಶಿವಾಜಿ ನಿಂತರೆ ತನ್ನ ಧ್ಯೇಯ ಸಾಧನೆಯಾಗುವುದಿಲ್ಲ ಎಂದು ಜೀಜಾಬಾಯಿ ತಿಳಿದಿದ್ದಳು.

ಚಾಣಾಕ್ಷ ಜೀಜಾಮಾತೆ ತಂದೆಯು ದೂರವಾದನೆಂದು ಮಗನಿಗೆ ಬೇಸರವಾಗಲಿ ನೋವಾಗಲಿ ಆಗದಂತೆ ಅವನನ್ನು ಬೆಳೆಸಿದಳು. ಸ್ವದೇಶ, ಸ್ವಧರ್ಮ, ಸ್ವರಾಜ್ಯ ಹಾಗೂ ಸತ್ಕಾರ್ಯ ಇವುಗಳ ಆಸ್ತಿಭಾರದ ಮೇಲೆ ಶಿವಾಜಿಯ ಜೀವನದ ಭವ್ಯ ಮಂದಿರ ಕಟ್ಟಿದಳು. ಶಕುಂತಲೆ ಭರತನಿಗೆ ಕಲಿಸಿದಂತೆ, ಸೀತಾಮಾತೆ ಲವಕುಶಲರನ್ನು ನಿರ್ಮಿಸಿದಂತೆ, ತನ್ನ ಮಾತೃತ್ವದ ಛಾಯೆಯಲ್ಲಿ ಭಾವೀ ಸ್ವತಂತ್ರ್ಯ ಸಾರ್ವಭೌಮನನ್ನು ನಿರ್ಮಾಣ ಮಾಡುವ ಮಹತ್ಕಾರ್ಯವನ್ನು ಮಾಡಿದಳು.

ವಿಶ್ವಾಸದ್ರೋಹ :

ಜೀಜಾಮಾತೆ ಪುಣೆಯಲ್ಲಿದ್ದಾಗ ಒಂದು ಘಟನೆ ಜರುಗಿತು. ಹಿಂದೆ ಶಾಹಜಿಯ ನಿಕಟವರ್ತಿಯಾಗಿದ್ದ ಮಾಲದಾರ ಖಾನ್ ಪುಣೆಗೆ ಬಂದ. ಶಾಹಜಿ ನಿಜಾಮಶಾಹಿಯನ್ನು ತ್ಯಜಿಸಿ ಮೊಗಲಶಹಿಯ ಸರದಾರನಾಗಿ ಬೆಂಗಳೂರಿನಲ್ಲಿದ್ದನಷ್ಟೆ. ಅವನಿಗೆ ಪುನಃ ನಿಜಾಮ ಶಾಹಿಯಲ್ಲಿ ದೊಡ್ಡ ಹುದ್ದೆ ಕೊಟ್ಟು ಮತ್ತೇ ನಿಜಾಮನತ್ತ ಕರೆದುಕೊಳ್ಳುವ ಪ್ರಯತ್ನ ಮಾಡುವ ನೆಪದಲ್ಲಿ ಅವನು ಬಂದ. ಜೀಜಾಮಾತೆಯ ಭೇಟಿಗಾಗಿ ಪ್ರಯತ್ನ ಮಾಡತೊಡಗಿದ. ಜೀಜಾಮಾತೆಗೆ ಖಾನನ ಪರಿಚಯವಿತ್ತು.  ಆಕೆ ಅವನನ್ನು ಭೇಟಿಯಾಗಲು ಒಪ್ಪಿದಳು. ಸಮಯ ಸಾಧಿಸಿ ಮಾಲ್ ದಾರ ಖಾನ್ ವಿಶ್ವಾಸ ಘಾತ ಮಾಡಿದ. ಜೀಜಾಬಾಯಿಯನ್ನು ಪನ್ನಾಳಗಡದಲ್ಲಿ ಬಂಧಿಸಿಟ್ಟ. ಈ ಸುದ್ಧಿ ಜಗದೇವರಾವ್ ಸರದಾರನಿಗೆ ತಿಳೀದು ಅವನು ಸಿಟ್ಟಿನಿಂದ ಬೆಂಕಿಯಾದ.  ಸುದೈವದಿಂದ ಶಿವಾಜಿ ಆಗ ಶಿವಪುರಿಯಲ್ಲಿದ್ದುದರಿಂದ ಪಾರಾದ. ಜಗದೇವರಾವ್ ಗೆ ನಿಜಾಮನ ಜೊತೆ ಸಖ್ಯವಿತ್ತು. ಜಗದೇವರಾವ್ ಸಿಟ್ಟಿನಿಂದ ಬಂಡೆದ್ದು ಮೊಗಲರನ್ನು ಸೇರಬಹುದೆಂದು ಹೆದರಿ, ಅವನನ್ನು ಸಂತೋಷಗೊಳಿಸಲು ನಿಜಾಮ ಜೀಜಾಮಾತೆಯನ್ನು ಮುಕ್ತಮಾಡಲು ಒಪ್ಪಿಕೊಂಡ. ಜಗದವರಾವ್ ಜೀಜಾಮಾತೆಯನ್ನು ಪನ್ನಾಳಗಡದಿಂದ ಬಿಡಿಸಿ ಗುಂಡಾಪುರದಲ್ಲಿ ಸುರಕ್ಷಿತವಾಗಿದ್ದ. ಜೀಜಾಮಾತೆ ಮಹಾಸ್ವಾಭಿಮಾನಿ ಹಾಗೂ ದೃಢನಿಶ್ಚಯದ ವೀರಮಾತೆ. ಈ ಘಟನೆ ಅವಳ ಮನಸ್ಸಿನ ಮೇಲೆ ಬಹಳ ಪರಿಣಾಮ ಮಾಡಿತು. ಶಾಹಜಿಗೆ ಈ ವಿಷಯ ತಿಳಿದ ನಂತರ ದಾದಾಜಿ ಕೊಂಡದೇವ ಮತ್ತು ವಿಶ್ವಾಸರಾವ್ ಅವರ ಪ್ರಯತ್ನದಿಂದ ಪುಣೆಯ ಜಹಗೀರು ಪುನಃ ಜೀಜಾಕೈಗೆ ಬಂತು. ಪುಣೆಯ ಮೇಲೆ ಬಂದ ಆಪತ್ತು ನೀಗಿತು.

 

ಶತ್ರುಗಳಿಂದ ಸಿಂಹಗಡವನ್ನು ಬಿಡಿಸಿದೆ ಎಂದರೆ ನೀನು ಶಿವಾಜಿಯ ತಮ್ಮ

ದೂರದೃಷ್ಟಿ :

ಜೀಜಾಮಾತೆ ಅತ್ಯಂತ ದೂರದೃಷ್ಟಿಯ ಹೆಂಗಸಾಗಿದ್ದಳು. ಅದಕ್ಕೆ ಉದಾಹರಣೆಯೆಂದರೆ ಸ್ವಧರ್ಮವನ್ನು ತೊರೆದು ಮುಸ್ಲಿಮ್ ಮತಕ್ಕೆ ಹ ಓಗಿದ್ದ ವೀರಸಂರದಾರರಾಗಿದ್ದ ಬಜಾಜಿ ನಿಂಬಾಳಕರ್ ಹಾಗೂ ನೇತಾಜಿ ಪಾಲಕರನ್ನು ಹಿಂದೂ ಧರ್ಮಕ್ಕೆ ಪುನಃ ಸ್ವೀಕರಿಸುವುದರಲ್ಲಿ ಆಕೆ ಬಹು ದೊಡ್ಡ ಪಾತ್ರ ವಹಿಸಿದ್ದು, ಇಬ್ಬರೂ ವೀರ ಸೇನಾನಿಗಳು. ಅಂಥ ಸೇನಾನಿಗಳನ್ನು ಶತ್ರು ಪಕ್ಷದಲ್ಲಿಡುವುದೆಂದರೆ ಸ್ವರಾಜ್ಯದ ಶಕ್ತಿಗೆ ಕುಂದು ಮಾಡುವುದು. ನೇತಾಜಿ ಪಾಲಕರ್ ಎಂದರೆ ಪ್ರತಿಶಿವಾಜಿಯೆಂದು ಪ್ರಸಿದ್ಧನಾಗಿದ್ದ. ಆ ಕಾಲದಲ್ಲಿ ಬಹು ಜನ ಇಂತಹ ಕ್ರಮಕ್ಕೆ ವಿರುದ್ಧವಾಗಿದ್ದರು. ಹಿಂದುವಾದವನು ಒಮ್ಮೆ ಬೇರೆ ಮತಕ್ಕೆ ಹೋದರೆ ಮತ್ತೇ ಹಿಂದುವಾಗುವಂತಿಲ್ಲ ಎಂದು ಅವರ ವಾದ. ಬೇರೆ ಮತಕ್ಕೆ ಹೋದವರು ಮತ್ತೆ ಹಿಂದು ಧರ್ಮಕ್ಕೆ ಬರಲು ಬಯಸಿದರೆ ಅವರನ್ನು ಬರಮಾಡಿಕೊಳ್ಳಬೇಕು ಎಂದು ಹೇಳಲು ಆಗಿನ ದಿನಗಳಲ್ಲಿ ತುಂಬ ಧೈರ್ಯ ಅಗತ್ಯವಾಗಿತ್ತು. ಜೀಜಾಮಾತೆ ಎಲ್ಲರನ್ನೂ ಒಪ್ಪಿಸಿ ತನ್ನ ಕಾರ್ಯದ ಸುಸಂಗತಿಯ ಬಗ್ಗೆ ಮನವೊಲಿಸಿದಳು. ಅಷ್ಟೇ ಅಲ್ಲ, ನಿಂಬಾಳಕರನ ಶುದ್ಧೀಕರಣ ಮಾಡಿದನಂತರ ಶಿವಾಜಿಯ ಮಗಳು ಸಖೂಬಾಯಿಯನ್ನು ಬಜಾಜಿಯ ಮಗ ಮಹದಾಜಿಗೆ ಕೊಟ್ಟು ಲಗ್ನ ಮಾಡಿದಳು. ಎಂತಹ ಧರ್ಮಾಭಿಮಾನ ಹಾಗೂ ವಿಶಲ ದೃಷ್ಟಿ!

ಹೋರಾಟಕ್ಕೆ ಸ್ಫೂರ್ತಿ :

ಶಿವಾಜಿ ದೊಡ್ಡವನಾಗಿ ಸ್ವಾತಂತ್ರ್ಯದ ಹೋರಾಟವನ್ನು ಪ್ರಾರಂಭಿಸಿದ. ಹದಿನಾರನೆಯ ವಯಸ್ಸಿಗೆ ತೋರಣಗಡ ಕೋಟೆಯನ್ನು ವಶಮಾಡಿಕೊಂಡ. ಜೀಜಾಬಯಿಗೆ ಹಿಡಿಸಲಾರದಷ್ಟು ಸಂತೋಷ. ಶಿವಾಜಿ ಯಾಔ ಮುಖ್ಯ ನಿರ್ಣಯ ಮಾಡಿದರೂ  ತಾಯಿಯನ್ನು ಕೇಳೀಯೇ ಮಾಡುವರು.

ಜೀಜಾಬಾಯಿ ಮತ್ತೆ ಮತ್ತೆ ಕಷ್ಟದ ಪ್ರಸಂಗಗಳನ್ನು ಎದುರಿಸಬೇಕಾಯಿತು. ಬಿಜಾಪೂರದ ಸುಲ್ತಾನ ಶಾಹಜಿಯನ್ನು ಸೆರೆಹಿಡಿದ. ಶಿವಾಜಿ ಉಪಾಯದಿಂದ ಅವನನ್ನು ಬಿಡಿಸಿಕೊಂಡ.ಹಿಂದೆಯೇ ಬಿಜಾಪೂರದ ಸರದಾರ ಅಫಜಲಖಾನ ಎಂಬುವನು ಸೈನ್ಯ ತೆಗೆದುಕೊಂಡು ಶಿವಾಜಿಯನ್ನು ಉಜ್ಜಿ ಹಾಕುವೆನೆಂದು ಬಂದ. ಏಳಡಿ ಎತ್ತರದ ಬಂಡೆಯಂತಹ ಗಟ್ಟಿ ದೇಹದ ದೈತ್ಯ ಅವನು. ಶಿವಾಜಿಯ ಕುಲದೇವತೆ ತುಳಜಾಭವಾನಿಯ ಮೂರ್ತಿಯನ್ನು ನುಚ್ಚು ನೂರು ಮಾಡಿದ. ಇರ ದೇವಾಲಯಗಳನ್ನು ಕೆಡವಿದ. ಹೀಗೆ ಮಾಡಿದರೆ ಶಿವಾಜಿ ಬಯಲು ಪ್ರದೇಶಕ್ಕೆ ಬರುತ್ತಾನೆ, ತನ್ನ ಬಲವಾದ ಸೈನ್ಯದಿಂದ ಅವನನ್ನು ಸೋಳಿಸಬಹುದು ಎಂದೇ ಅವನ ಲೆಕ್ಕ. ಇಂತಹ ಪರೀಕ್ಷೆಯ ಗಳಿಗೆಯಲ್ಲಿ ಶಿವಾಜಿ ತನ್ನ ಆಪ್ತ ಗೆಳೆಯರು ಮಾತ್ರವಲ್ಲ, ಜೀಜಾಮಾತೆಯೊಂದಿಗೂ ಸಮಾಲೋಚನೆ ಮಾಡಿದ.  ಖಾನನ ಭೇಟಿ ಎಂದರೆ ಅಪಾಯ, ಅವನಿಂದ ದೂರವಿರುವುದು ಉತ್ತಮ ಎಂದು ಹಲವರು ಅಭಿಪ್ರಾಯಪಟ್ಟರು.  ಅಪಾಯಕ್ಕೆ ಹೆದರಬಾರದು, ಖಾನನನ್ನು ಭೇಟಿ ಮಾಡಬೇಕು ಎಂದು ಹಳಿದವರಲ್ಲಿ ಜೀಜಾಮಾತೆ “ಒಬ್ಬಳು.  ಅಫಜಲಖಾನನ್ನು ಕಾಣಲು ಹೊರಟ ಶಿವಾಜಿಗೆ “ಜಯಶಾಲಿಯಾಗು” ಎಂದು ಆಶಿರ್ವದಿಸಿ ಕಳುಹಿಸಿದಳು.

ಶಿವಾಜಿಯ ಸಹಚರರಿಗೆಲ್ಲ ಜೀಜಾಬಾಯಿ ತಾಯಿಯಂತೆ ಸ್ಫೂರ್ತಿ ನೀಡುವಳು. ತನ್ನ ಮಗನಂತೆಯೇ ಅವರನ್ನು ಪ್ರೀತಿಯಿಂದ ಕಾಣುವಳು. ಒಬ್ಬರ ನಂತರ ಒಬ್ಗರೂ ಶೂರ ಸೇನಾನಿಗಳು ಸ್ವರಾಜ್ಯಕ್ಕಾಗಿ ಕಲಿತನದಿಂದ ಹೋರಾಡಿ ಪ್ರಾಣದ ಆಹುತಿಕೊಟ್ಟಾಗ ಮಾತೃಹೃದಯದ ದುಃಖದಿಂದ ಜೀಜಾಬಾಯಿ ದುಃಖಿಸಿದಳು. ತಾನಾಜಿ ಮಾಲಸುರೆ ಎಂದರೆ ಧೀರೋದಾತ್ತ ಸಿಂಹ ಶಕ್ತಿಯ ಸೇನಾನಿ. ಸಿಂಹಗಡವನ್ನು ಶಿವಾಜಿ ಮೊಗಲರಿಗೆ ಬಿಟ್ಟು ಕೊಟ್ಟಿದ್ದ. ಇಂತಹ ಕೋಟೆ ಅವನ ಕೈಯಲ್ಲಿರಬೇಕು ಎಂದು ಜೀಜಾಬಾಯಿಅಯ ಹಠ. “ನೀಚ ಶತ್ರುಗಳಿಂದ ಸಿಂಹಗಡವನ್ನು ಬಿಡಿಸಿದೆ ಎಂದರೆ ನೀನು ಶಿವಾಜಿ ತಮ್ಮನಂತೆಯೇ: ಎಂದಳು. ತಾನಾಜಿಗೆ ಜೀಜಾಬಾಯಿ. ಮರುಜದಿನ ಬೆಳಗಾಗುವುದರೊಳಗಾಗಿ ಜೀಜಾಬಾಯಿ. ಮರುದಿನ ಬೆಳಗಾಗುವುದರೊಳಗಾಗಿ ಸಿಂಹಗಡವನ್ನು ಜಯಿಸುವ ಪಣತೊಟ್ಟು ತಾನಾಜಿ ಹೊರಟ. ಸಿಂಹಗಡ ಅತ್ಯಂತ ದುರ್ಗಮವಾದ ಕಿಲ್ಲೆ. ಆ ಕಿಲ್ಲೆಯನ್ನು ಉದಯಭಾನು ರಾಠೋಡ್ ಎಂಬ ರಜಪೂತ ಶೂರ ರಕ್ಷಿಸುತ್ತಿದ್ದ. ಅಂತಹ ಅದ್ಭುತವಾದ ಕಿಲ್ಲೆಯನ್ನು ಕರಾಳ ಮಧ್ಯರಾತ್ರಿಯಲ್ಲಿ ಏರಿ ತಾನೀಜಿ ಸಿಂಹ ಪರಾಕ್ರಮದಿಂದ ಉದಯಭಾನುವಿನೊಡನೆ ಹೋರಾಡಿ ಶತ್ರುವನ್ನು ಕೊಂದ, ತಾನೂ ವೀರಮರಣವನ್ನಪ್ಪಿದ. ಬೆಳಗಾಗುವದರಲ್ಲಿ ಸಿಂಹಗಡದ ಮೇಲೆ ಭಗವಾಧ್ವಜ ಹಾರತೊಡಗಿತು. ರಾತ್ರಿ ಇಡೀ ಸಿಂಹಗಡದ ಕಡೆ ದೃಷ್ಟಿಯಿಟ್ಟು ಶಿವನೇರಿಯ ಮೇಲೆ ಜೀಜಾಮಾತೆ ಕುಳಿತಿದ್ದಳು. ಸಿಂಹಗಡದ ಮೇಲೆ ಭಗವಾಪತಾಕೆ ಹಾರುವುದನ್ನು ಕಂಡು ಅವಳ ಕಣ್ಣಲ್ಲಿ ಆನಂದಾಶ್ರು ತುಂಬಿತ್ತು. ಆನಂದಾತೀಶಯದಿಂದ ಮೈಮರೆತ ಜೀಜಾಮಾತೆಗೆ ತಾನಾಜಿಯ ವೀರಮರಣದ ಸುದ್ಧಿ ತಲುಪಿದಾಗ ಅಷ್ಟೇ ದುಃಖದಿಂದ ಬೆಂದು ಹೋದಳು. ಶಿವ ಪ್ರಭುವನ್ನು ರಕ್ಷಿಸಲು ಪಾವನಖಿಂಡಿಯಲ್ಲಿ ರೌದ್ರವತಾರ ತಾಳಿ ಭೀಕರ ರೊಚ್ಚಿನಿಂದ ಹೋರಾಡಿದ. ಆ ಮಣ್ಣಿನಲ್ಲಿ ತನ್ನ ರಕ್ತದಿಂದ ಹುಲಿಯಾಡಿದವನು ವೀರಪುರುಷಸಿಂಹ ಬಾಜಿಪ್ರಭು. ಆತನ ಸಾಹಸದಿಂದ ಶಿವಾಜಿ ಪಾರಾದ ಬಗ್ಗೆ ಸಮಾಧಾನ ಪಡುವ ಈ ತಾಯಿ ತನ್ನ ಮಗುವನ್ನು ಕಳಕೊಂಡಂತೆ ಅತ್ತಳು.

ರಾಜಮಾತೆ :

ಮಗನನ್ನು ನಾಡಿನ ಮತ್ತು ಧರ್ಮದ ರಕ್ಷಣೆಗೆ ಮುಡಿಪಿಟ್ಟು ಜೀಜಾಬಾಯಿ ಉಂಡ ನೋವುಗಳು ಒಂದೊಂದಲ್ಲ. ಗಂಡನಂತೂ ದೂರವಾದ. ಪ್ರೀತಿಯ ಮಗ ಶಿವಾಜಿ ಸದಾ ಗಂಡಾಂತರಗಳ ದವಡೆಯಲ್ಲಿಯೆ. ಶಿವಾಜಿ ಮೊಗಲ ಬಾದಷಹ ಔರಂಗಜೇಬನನ್ನು ಕಾಣಲು ಆಗ್ರಾಕ್ಕೆ  ಹೊರಡಲೆಬೇಕಾಯಿತು. ಔರಂಗಜೇಬನ ಮುಷ್ಟಿಯಲ್ಲಿ ಸಿಕ್ಕ ಶಿವಾಜಿಗೆ ಏನಾದೀತು ಎಂದು ಹೇಳುವುದು ಕಷ್ಟ. ತಾನು ಘೋರ ಅಪಾಯದ ಗವಿಯನ್ನು ಹೋಗುತ್ತಿದ್ದೆನೆ ಎಂದು ಶಿವಾಜಿಗೂ ತಿಳಿದಿತು. ಅವನು ಹಿಂದಿರುಗುವವರೆಗೂ ರಾಜ್ಯದ ಆಡಳಿತವನ್ನು ನೋಡಿಕೊಳ್ಳುವವರು ಯಾರು? ಏನೇ ಕಷ್ಟ ಬಂದರೂ ನಿಧಾನವಾಗಿ ಯೋಚಿಸಿ ತೀರ್ಮಾನ ಮಾಡುವವರು ಯಾರು? ಮಗ ಮೃತ್ಯುವಿನ ದವಡೆ ಹೋಗುತ್ತಿದ್ದಾನೆ ಎಂದು ಜೀಜಾಬಾಯಿಗೂ ತಿಳಿದಿತ್ತು. ಇಂತಹ ವಿಷಮ ಗಳಿಗೆಯಲ್ಲಿ ಶಿವಾಜಿ ರಾಜ್ಯದ ಹೊಣೆಯನ್ನು ತಾಯಿಯ ಕೈಯಲ್ಲಿಟ್ಟ. ಶಿವಾಜಿ ಹಾಗು ಅವನ ಮಗ ಸಂಭಾಜಿ ಕ್ರೂರ ಮೊಗಲಶಾಹಿಯ ದವಡೆಯಲ್ಲಿ ಆಗ್ರಾದಲ್ಲಿ ಸೆರಮನೆವಾಸ ಅನುಭವಿಸುತ್ತಿದ್ದ. ಕಾಲದಲ್ಲಿ ಈ ಮಾತೃಹೃದಯ ಎಂತಹ ಅಸಹನೀಯ ಯಾತನೆಗಳನ್ನು ಅನುಭವಿಸಿರಬೇಕು! ಆದರೂ ಶಿವಾಜಿ ಹಿಂದಿರುಗುವವರೆಗೆ ರಾಜ್ಯದ ಆಡಳಿತ ಸುಗಮವಾಗಿ ಸಾಗಿತು. ಜೀಜಾಬಾಯಿ ಪತಿಯಿಂದ ಸತತ ಅನೇಕ ವರ್ಷ ದೂರವಿರುವ ಕಹಿಕಾಲವನ್ನು ನುಂಗಿ ಶಿವಪ್ರಭುವಿನ ಸ್ವರಾಜ್ಯ ಕಾರ್ಯದ ಯಜ್ಞ ಕುಂಡದಲ್ಲಿ  ತನ್ನ  ಜೀವನವನ್ನು ಅರ್ಪಿಸಿದಳು.

೧೬೬೪ರ ಜನೆವರಿಯಲ್ಲಿ ಶಾಹಜಿ ರಾಜರು ಶಿಕಾರಿಗೆ ಹೋದಾಗ ಕುದುರೆಯಿಂದ ಬಿದ್ದು ಮರಣ ಹೊಂದಿದ್ದು. ಜೀಜಾಮಾತೆ ಹಾಗೂ ಶಿವಾಜಿಗೆ ಈ ಸುದ್ಧಿಯಿಂದ ಸಿಡಿಲೆರಗಿದಂತಾಯಿತು. ದುಃಖದ ಭರದಲ್ಲಿ ಜೀಜಾಮಾತೆಗೆ ಸತಿಹೋಗಲು ನಿರ್ಧರಿಸಿದಳು. ಆಧರೆ ಶಿವಾಜಿ ಆಕೆಯನ್ನು ಬೇಡಿ ಉಳಿಸಿಕೊಂಡ. ಸ್ವರಾಜ್ಯದ ಸ್ಥಾಪನೆ ಸಮೀಪವಾಗಿರುವಾಗ ಈ ಇಡೀ ಕಾರ್ಯದ ಮಾತೃ ಸ್ವರೂಪ ಸ್ಫೂರ್ತಿ ಸ್ಥಾನದಲ್ಲಿರುವ ಜೀಜಾಮಾತೆ ಸತಿ ಹೋದರೆ ಸ್ವರಾಜ್ಯದ ಗತಿಯೇನು?

ತ್ಯಾಗವು ಬೆಳಗಿ ಇಡೀ ದೇಶಕ್ಕೆ ಮಂಗಳವಾಗುವ ಶುಭ ದಿನ ಬಂದಿತು. ಜೀಜಾಬಾಯಿ ಮಗ ಸಿಂಹಾಸನವನ್ನೆದುರಿದುದನ್ನು ಕಣ್ಣಾರೆ ಕಂಡಳು.

ಆನಂದನಾಮ ಸಂವತ್ಸರ ಜೇಷ್ಟ್ಯ ಶುದ್ಧ ತ್ರಯೋದಶಿಯಂದು (೧೬೭೪) ರಾಯಗಡದಲ್ಲಿ ಶಿವಾಜಿ ತಾಯಿಯ ಪಾದಗಳಿಗೆ ನಮಸ್ಕರಿಸಿ, ಅವಳ ಆಶಿರ್ವಾದವನ್ನು ಪಡೆದು, ಚಿನ್ನದ ಸಿಂಹಾಸನವನ್ನು ಏರಿದ.

ಈ ಆನಂದದಲ್ಲೂ ಜೀಜಾಮಾತೆಯ ಹೃದಯದಲ್ಲಿ ಒಂದೆಡೆ ದುಃಖದ ಶಲ್ಯ ತಿವಿಯುತ್ತಿತ್ತು. ಸ್ವರಾಜ್ಯಕ್ಕಾಗಿ ಸರ್ವಸ್ವವನ್ನೂ ಬಲಿದಾನ ಮಾಡಿದ ತಾನಾಜಿ, ಬಾಜಿ ಪ್ರಭು, ಸೂರ್ಯಾಜಿ ಹೀಗೆ ನೂರಾರು ವೀರರ ನೆನಪು ಅವಳೀಗೆ ವೇದನೆ ಕೊಡುತ್ತಿತ್ತು.

ಜೀಜಾಮಾತೆ ರಾಜಮಾತೆಯಾದಳು. ಆದರೆ ವಿಧಿಕಯ ದುರ್ವಿಲಾಸ. ರಾಜ್ಯಾಭಿಷೇಕದ ನಂತರ ೧೨ ನೇ ದಿನ ಈ ಮಹಾತಾಯಿಯ ಮಹಾನಿರ್ವಾಣವಾಯಿತು. ದೀಪ ಆರಿತು. ಶಿವಪ್ರಭು ಅನಾಥ ಶಿಶುವಿನಂತೆ ಅತ್ತ.

ರಾಯಗಡ ಇಂದಿಗೂ ಪುಣ್ಯ ಕ್ಷೇತ್ರ. ಅಲ್ಲಿ ಜೀಜಾಮಾತೆ, ಬಾಲ ಶಿವಾಜಿಯ ಭವ್ಯ ಪ್ರತಿಮೆಗಳಿವೆ. ನಮ್ಮದೇಶದ ತರುಣರು, ಬಾಲಕರು ರಾಯಗಡದ ಕಿಲ್ಲೆ ಏರಬೇಕು. ಆ ದಿವ್ಯ ಮೂರ್ತಿಯ ದರ್ಶನದಿಂದ ಸ್ಪೂರ್ತಿ ಪಡೆಯಬೇಕು.