ಹೌದು. ನೈಸರ್ಗಿಕ ಹೊರೆಯಾಗಿ ಬಂದ ಅನುವಂಶೀಯ ಖಾಯಿಲೆಗಳ ಚಿಕಿತ್ಸೆ ಇನ್ನಷ್ಟು ಸಮೀಪವಾಗಿದೆ. ಮಾನವನಿಗೆ ಸಮೀಪ ಬಂಧುಗಳೆನ್ನಿಸಿದ ಮಂಗಗಳಲ್ಲಿ ಅನುವಂಶೀಯವಾಗಿ ಬದಲಾವಣೆಗಳನ್ನು ಉಂಟು ಮಾಡಬಹುದು ಎಂದು ಸುಪ್ರಸಿದ್ಧ ವಿಜ್ಞಾನ ಪತ್ರಿಕೆ ನೇಚರ್ನಲ್ಲಿ ಪ್ರಕಟವಾಗಿರುವ ಸಂಶೋಧನೆಯೊಂದು ತಿಳಿಸಿದೆ. ಜಪಾನಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಎಕ್ಸ್ಪೆರಿಮೆಂಟಲ್ ಅನಿಮಲ್ಸ್ ಸಂಸ್ಥೆಯ ಎರಿಕಾ ಸಸಾಕಿ ಮತ್ತು ಸಂಗಡಿಗರು ಮಾರ್ಮೊಸೆಟ್ ಕೋತಿಗಳಲ್ಲಿ ಹುದುಗಿಸಿದ ಮೀನುಗಳ ಪ್ರೊಟೀನ್ ಕೋತಿಗಳ ಮಕ್ಕಳಲ್ಲಿಯೂ ಕಂಡು ಬಂದಿದೆ. ಅರ್ಥಾತ್, ಮೀನಿನ ಗುಣವನ್ನು ಮಂಗಗಳಿಗೆ ಅನುವಂಶಿಕವಾಗಿ ನೀಡಲಾಗಿದೆ.

ಮೀನಿನ ಪ್ರೊಟೀನ್ನ್ನು ಮಂಗಗಳಿಗೆ ಕೂಡಿಸುವ ಅವಶ್ಯಕತೆ ಏನಿತ್ತು ಎನ್ನುವ ನಿಮ್ಮ ಪ್ರಶ್ನೆ ಸಹಜವಾದದ್ದೇ! ಜೀವ ವಿಜ್ಞಾನಿಗಳು ಇಂತಹ ಹಲವು ಕಸರತ್ತುಗಳನ್ನು ಮಾಡುತ್ತಲೇ ಇರುತ್ತಾರೆ. ಮಾನವನಲ್ಲಿ ಕಾಣಬರುವ ಖಾಯಿಲೆ, ರೋಗಗಳನ್ನೇ ಅಣಕಿಸುವ ರೋಗ, ಖಾಯಿಲೆಗಳುಂಟಾಗುವ ಪ್ರಯೋಗಪಶುಗಳ ಸೃಷ್ಟಿ ಅವರ ಉದ್ದೇಶ. ಇವುಗಳನ್ನು ಜೀವವಿಜ್ಞಾನಿಗಳು ಕಮಾಡೆಲ್ಕಿಗಳು ಎನ್ನುತ್ತಾರೆ. ರಂಗಮಂಚದ ಮೇಲೆ ಬಳುಕುವ ಲಲನೆಯರಂತಲ್ಲ ಈ ಮಾಡೆಲ್ಗಳು. ಇವು ರೋಗಮಾದರಿಗಳು, ಪ್ರಾಣಿಗಳು. ಡಯಾಬಿಟೀಸ್ ಬರುವ ಇಲಿ, ನಾಯಿ; ಗೂರಲು ರೋಗ, ಕ್ಷಯರೋಗವಿರುವ ಕೋತಿಗಳು, ರೋಗ ರೋಧಕತೆಯೇ ಇಲ್ಲದ ಇಲಿ, ಬೊಜ್ಜು ಮೈಯ ಹೆಗ್ಗಣ ಇತ್ಯಾದಿ ನೂರಾರು ಮಾಡೆಲ್ಗಳು ಪ್ರಪಂಚದ ವಿವಿಧ ಪ್ರಯೋಗಶಾಲೆಗಳಲ್ಲಿ ಬೆಳೆಯುತ್ತಿವೆ. ಈ ಪ್ರಾಣಿಗಳನ್ನು ಬೆಳೆಸಿ, ಅವುಗಳ ಮೇಲೆ ವಿವಿಧ ಔಷಧಗಳನ್ನು ಪ್ರಯೋಗಿಸಿ, ರೋಗಚಿಕಿತ್ಸೆ ಹೇಗಾಗುತ್ತದೆಂದು ಪರೀಕ್ಷಿಸಬಹುದು.

ಇದುವರೆವಿಗೂ, ಮನುಷ್ಯನಲ್ಲಿ ಇರುವ ರೋಗಗಳ ಲಕ್ಷಣಗಳನ್ನೇ ಹೋಲುವ ಲಕ್ಷಣಗಳನ್ನು ಬೆಳೆಸಿಕೊಳ್ಳುವ ಪ್ರಾಣಿಗಳನ್ನು ಬೇರ್ಪಡಿಸಿ, ಅವುಗಳ ವಂಶಾಭಿವೃದ್ಧಿ ಮಾಡಿ, ಹೊಸ ಮಾದರಿ ತಳಿಗಳನ್ನು ರೂಪಿಸುತ್ತಿದ್ದರು.  ಮೂಳೆ ಸವೆತ, ರಕ್ತದೊತ್ತಡ ಮುಂತಾದ ಖಾಯಿಲೆಗಳಿಗೆ ಇಂತಹ ವಿಧಾನ ಬಳಸಿ ಮಾದರಿಗಳನ್ನು ಹುಟ್ಟಿಸಿದ್ದಾರೆ. ಕ್ಷಯ, ಕುಷ್ಠಗಳಂತಹ ಸೋಂಕು ರೋಗಗಳು ಹಾಗೂ ಡಯಾಬಿಟೀಸ್, ರಕ್ತದೊತ್ತಡಗಳಂತಹ ಖಾಯಿಲೆಗಳಿಗೂ ಮಾದರಿಗಳಿವೆ. ಇವುಗಳನ್ನು ಬಳಸಿ ವಿವಿಧ ಔಷಧಗಳ ಸಾಮಥ್ರ್ಯವನ್ನು ಪರೀಕ್ಷಿಸಲಾಗಿದೆ.

ಆದರೆ ಸ್ನಾಯುಸವೆತ (ಮಸ್ಕುಲಾರ್ ಡಿಸ್ಟ್ರೋಫಿ), ಆಲ್ಜೀಮರ್ನ ಖಾಯಿಲೆ, ಮುಂತಾದ ಮನುಷ್ಯನಲ್ಲಿ ಕಾಣುವ ಅನುವಂಶೀಯ ರೋಗಗಳ ಮಾಡೆಲ್ಗಳು ವಿಜ್ಞಾನಿಗಳಿಗೆ ಇನ್ನೂ ಕನಸಿನ ಕೂಸು. ಏಕೆಂದರೆ ಇಂತಹ ಖಾಯಿಲೆಗಳಿಗೆ ಮನುಷ್ಯರಲ್ಲಿರುವ ಕೆಲವು ಜೀನ್ಗಳಲ್ಲಿನ ದೋಷಗಳು ಕಾರಣ. ಜೀನ್ಗಳು ಎಂದರೆ ಜೀವಕೋಶಗಳಲ್ಲಿ ಇರುವ ಡಿಎನ್ಎ ಎನ್ನುವ ರಾಸಾಯನಿಕದ ವಿನ್ಯಾಸ ಅನ್ನುವುದು ತಿಳಿದಿದೆಯಷ್ಟೆ. ಈ ರಾಸಾಯನಿಕದ ರಚನೆಯಲ್ಲಿನ ದೋಷಗಳು ಅನುವಂಶೀಯ ರೋಗಗಳಾಗಿ ಕಾಣಿಸುತ್ತವೆ.  ಚಿಕಿತ್ಸೆಯ ಫಲವಾಗಿ ಮುಂದಿನ ಪೀಳಿಗೆಗಳಲ್ಲಿ ಆ ರೋಗ ಕಾಣುವುದಿಲ್ಲ ಎನ್ನುವುದೂ ಖಚಿತವಾಗಬೇಕು.

ರೋಗಮಾದರಿಗಳ ತಯಾರಿಕೆ ಇತ್ತೀಚೆಗೆ ಹೊಸ ಜಾಡು ಹಿಡಿದಿದೆ. ಹಲವಾರು ರೋಗಗಳಿಗೆ ಡಿಎನ್ಎಯಲ್ಲಿನ ದೋಷಗಳೇ ಕಾರಣ ಎನ್ನುವುದು ತಿಳಿದಾಗಿನಿಂದ, ಅಂತಹ ದೋಷಪೂರ್ಣ ಡಿಎನ್ಎಯನ್ನು ಪ್ರಾಣಿಗಳಲ್ಲಿ ಹುದುಗಿಸಿ ಕುಲಾಂತರಿ ಮಾದರಿಗಳನ್ನು ತಯಾರಿಸುವ ಪ್ರಯತ್ನಗಳು ನಡೆದಿವೆ. ಮಾನವನಲ್ಲಿಯಷ್ಟೆ ತೋರ್ಪಡುವ ರೋಗಗಳಿಗೆ ಔಷಧಿಗಳನ್ನು ರೂಪಿಸಲು ಇಂತಹ ಕುಲಾಂತರಿ ಮಾಡೆಲ್ಗಳು ನೆರವಾದಾವು ಎನ್ನುವುದೇ ಆಶಯ. ಉದಾಹರಣೆಗೆ, ಮಸ್ಕುಲಾರ್ ಡಿಸ್ಟ್ರೋಫಿ ಎನ್ನುವ ಸ್ನಾಯುಸವೆತ ರೋಗಕ್ಕೆ ಇಲಿಯ ಮಾಡೆಲ್ ಅನ್ನು ರೂಪಿಸಲಾಗಿದೆ. ಈ ರೋಗಕ್ಕೆ ಈಡಾದವರ ಸ್ನಾಯುಗಳು ನಿಧಾನವಾಗಿ ಸವೆಯುತ್ತ, ಬೆರಳನ್ನಾಡಿಸುವುದೂ ಮಹತ್ತರ ಸಾಹಸವಾಗುತ್ತದೆ. ಕೆಲವು ರೋಗಿಗಳು ಬಾಲ್ಯ ಮುಗಿಯುವ ಮುನ್ನವೇ ಸಾಯಬಹುದು. ಇನ್ನು ಕೆಲವರಲ್ಲಿ ಮಧ್ಯವಯಸ್ಸಾಗುತ್ತಿದ್ದಂತೆ ರೋಗ ಕಾಣಿಸಿಕೊಳ್ಳಬಹುದು. ಇವು ಸೋಂಕಲ್ಲವಾದ್ದರಿಂದ ಚಿಕಿತ್ಸೆಯೂ ಕಷ್ಟವೇ. ಏನಿದ್ದರೂ ಸ್ನಾಯುಗಳಲ್ಲಿ ಕಾಣುವ ದೋಷಗಳನ್ನು ತಿದ್ದಿದಲ್ಲಿ ಮಾತ್ರ ರೋಗ ತರುವ ಕಷ್ಟಗಳನ್ನು ಕಡಿಮೆ ಮಾಡಬಹುದು.  ಮಾನವ ಡಿಎನ್ಎಯಲ್ಲಿನ ಕೆಲವು ದೋಷಗಳು ಈ ರೋಗವನ್ನುಂಟು ಮಾಡುತ್ತವೆ ಎನ್ನುವುದು ಸ್ಪಷ್ಟವಾಗಿದೆ. ಇಂತಹ ಡಿಎನ್ಎಯನ್ನು ಪ್ರಾಣಿಗಳಿಗೆ ಕೂಡಿಸಿ, ಕುಲಾಂತರಿ ಮಾಡೆಲ್ಗಳನ್ನು ಸೃಷ್ಟಿ ಮಾಡಬಹುದಲ್ಲವೇ?

ಮಸ್ಕುಲಾರ್ ಡಿಸ್ಟ್ರೋಫಿ ರೋಗಕ್ಕೆ ಕುಲಾಂತರಿ ಇಲಿಯ ಮಾಡೆಲ್ ಈಗಾಗಲೇ ಇದೆ. ಆದರೆ ಮಾನವನದ್ದೇ ದೋಷಪೂರ್ಣ ಡಿಎನ್ಎ ಇದರಲ್ಲಿ ಇದ್ದರೂ, ಮಾನವನಲ್ಲಿ ತೋರ್ಪಡುವ ಎಲ್ಲ ರೋಗಲಕ್ಷಣಗಳನ್ನೂ ಈ ಮಾಡೆಲ್ ತೋರುವುದಿಲ್ಲ. ಉದಾಹರಣೆಗೆ ರೋಗಿಯಲ್ಲಿ ತೋರುವ ಶ್ವಾಸಕೋಶದ ತೊಂದರೆಗಳು ಕುಲಾಂತರಿ ಇಲಿಯಲ್ಲಿ ಕಾಣುವುದಿಲ್ಲ. ಇಲಿಗಿಂತಲೂ ಮಾನವನಿಗೆ ಹತ್ತಿರದ ಸಂಬಂಧಿ ಎನ್ನಿಸಿದ ಮಂಗಗಳು ಮತ್ತು ವಾನರಗಳ ಮಾಡೆಲ್ ತಯಾರಾದರೆ ಪರಿಪೂರ್ಣ ಚಿಕಿತ್ಸೆಗೆ ಪ್ರಯೋಗಗಳನ್ನು ನಡೆಸಬಹುದು ಎನ್ನುವುದು ತರ್ಕ.

ಈ ಪ್ರಯತ್ನಗಳೂ ನಡೆದಿವೆ. ಮಂಗಗಳಿಗೆ ಮಾನವನ ಡಿಎನ್ಎಯನ್ನು ಹುದುಗಿಸಿ ಕುಲಾಂತರಿ ಮಂಗಗಳನ್ನು ಕೆಲವು ವರ್ಷಗಳ ಹಿಂದೆ ಸೃಷ್ಟಿಸಿದ್ದಾರೆ. ಇದಕ್ಕಾಗಿ ಮೊದಲಿಗೆ ಮಂಗಗಳ ಅಂಡಾಶಯಗಳನ್ನು ಹೊರತೆಗೆದು, ಅವುಗಳೊಳಗೆ ಡಿಎನ್ಎ ಚುಚ್ಚಿ, ಆ ಅಂಡಗಳನ್ನು ಮತ್ತೊಂದು ಕಬಾಡಿಗೆ ತಾಯಿಕಿ ಮಂಗದ ಗರ್ಭಾಶಯದೊಳಗೆ ಬೆಳೆಸುತ್ತಾರೆ. ಅಂದರೆ ಹತ್ತು ಮಾಡೆಲ್ಗಳು ಬೇಕು ಎಂದಲ್ಲಿ, ಹತ್ತು ಬಾರಿ ಇಂತಹ ಸಾಹಸ ಅನಿವಾರ್ಯ. ಸಾಸಾಕಿಯವರು ನಡೆಸಿರುವ ಪ್ರಯೋಗ ಇದನ್ನು ಸುಲಭವಾಗಿಸಿದೆ. ಒಮ್ಮೆ ಕುಲಾಂತರಿ ಮಾಡೆಲ್ ಸೃಷ್ಟಿಯಾದರೆ ಸಾಕು ಅನಂತರ ಅದರ ಪೀಳಿಗೆಗಳೆಲ್ಲವೂ ಮಾಡೆಲ್ಗಳಾಗಿಯೇ ಹುಟ್ಟಲಿವೆ. ಅರ್ಥಾತ್, ಈ ಕುಲಾಂತರಿ ಮಾಡೆಲ್ಗಳ ಅಂಡಗಳು ಅಥವಾ ವೀರ್ಯಾಣುಗಳಲ್ಲಿಯೂ ಅನ್ಯ-ಡಿಎನ್ಎ ಇರುತ್ತದೆ. ಮೀನುಗಳಲ್ಲಿ ಹೊಳೆಯುವ ಪ್ರೋಟೀನ್ ತಯಾರಿಸುವ ಜೀನ್ನ ಡಿಎನ್ಎಯನ್ನು ಚುಚ್ಚಿ ಕುಲಾಂತರಿ ಮಾರ್ಮೊಸೆಟ್ಗಳನ್ನು ಸಸಾಕಿ ತಂಡ ಸೃಷ್ಟಿಸಿದೆ. ಈ ಕುಲಾಂತರಿಯ ಮಕ್ಕಳ ದೇಹದಲ್ಲಿಯೂ ಮೀನಿನ ಪ್ರೊಟೀನ್ ಹೊಳೆಯುವುದು ಕಂಡು ಬಂದಿದೆ.

ಮಂಗಗಳಲ್ಲಿ ಕುಲಾಂತರಿ ಪೀಳಿಗೆಯನ್ನು ಸೃಷ್ಟಿಸಿರುವುದು ಇದುವೇ ಮೊದಲು. ಇದೇ ತಂತ್ರವನ್ನು ಬಳಸಿ, ಕುಲಾಂತರಿ ಮಾನವ ಭ್ರೂಣಗಳನ್ನೂ ತಯಾರಿಸುವುದು ಸಾಧ್ಯ ಎನ್ನುವುದು ಪರಿಣತರ ಅಭಿಪ್ರಾಯ.  ಅದುವೇ ಈ ಪ್ರಯೋಗ ಸುದ್ದಿ ಮಾಡಲು ಕಾರಣ. ಈ ತಂತ್ರದಿಂದ ಜೀನ್ಥೆರಪಿ ಅರ್ಥಾತ್ ಅನುವಂಶೀಯ ರೋಗಗಳ ಚಿಕಿತ್ಸೆ ಸಾಧ್ಯ ಎನ್ನುವುದು ಆಶೆ. ಅದರೊಟ್ಟಿಗೇ, ಈ ತಂತ್ರವನ್ನು ಬಳಸಿ, ಶಿಶುಗಳನ್ನು ತಮಗಿಷ್ಟ ಬಂದಂತೆ ತಿದ್ದಿ ಬೆಳೆಸುವ ದುರಾಸೆಯೂ ಹುಟ್ಟದಿರದೇ ಎನ್ನುವುದು ಉಳಿದವರ ಆತಂಕ. ಕಾಲವೇ ಇದಕ್ಕೆ ಉತ್ತರ ಹೇಳಬೇಕು.

1 Erika Sasaki et. al., Generation of Transgenic non-human primates with germline transmission; Nature Vol 459, Pp 523-527, 2009  (DOI:10.1038/nature08090