ಜೀವಜಾತ್ರೆಯಲಿ
ಪ್ರಾಣಪಾತ್ರೆಯಲಿ – ತುಂಬಿ ಬಾ
ರಸದುಂಬಿ ಬಾ, ಮೈದುಂಬಿ ಬಾ-
ಮಿಂದು ಮಡಿಯುಟ್ಟು ಬಾ,
ನಿಂದು ಕೈಮುಗಿದು ಬಾ,
ಹೃದಯಪ್ರಣತಿಯಲಿ ಭಕ್ತಿತೈಲವನು ತುಂಬಿ ಬಾ :
ಮಂಗಳದಾರತಿ ಬೆಳಗಿ
ಮಂತ್ರಘೋಷಗಳ ಮೊಳಗಿ
ಜೇವರಥವ ಮುಂದೆಳೆಯೆ ಬಾ.

ಬಾಳ ಬಾನಿನಲಿ
ಚಂದ್ರಯಾನದಲಿ – ತೇಲಿಬಾ,
ಹೊಳೆ ಹೊಳೆದು ಬಾ, ಬೆಳಬೆಳಗಿ ಬಾ-
ದುಗುಡಮೋಡಗಳ ತೂರಿ ಬಾ,
ಮುಗಿಲ ಸಾಗರವ ಈಸಿ ಬಾ,
ತಿರೆಯ ನಾಡಿಯಲಿ ಶಾಂತಿ ಕಾಂತಿಯನು ತುಂಬಿ ಬಾ ;
ಮನೆ ಮನಗಳ ಬೆಳಗಿ
ಆನಂದದ ಹಾಲ್ ತುಳುಕಿ
ರಜತರಜನಿಯಲಿ ರಾಜನಾಗಿ ಬಾ

ಬಾಳರಂಗದಲಿ
ಘೋರ ಕದನದಲಿ – ಸಾಗಿಬಾ,
ಕುದುರೆ ಹತ್ತಿ ಬಾ, ಖಡ್ಗ ಹಿಡಿದು ಬಾ-
ಎಡರುತೊಡರುಗಳ ಹಾದು ಬಾ
ಘೋರ ಸಮರದಲಿ ಹೋರಿ ಬಾ
ಕಯ್ಯಕತ್ತಿಯಲಿ ಶತ್ರುಸೇನೆಯನು ತರಿದು ಬಾ-
ವರವೀರನಾಗಿ
ಧುರತೇಜನಾಗಿ
ವಿಜಯಹಾರವನು ಧರಿಸು ಬಾ.

ಹಿರಿಯರೂರಿನಲಿ
ಕಿರಿಯರೂರಿನಲಿ – ಬೆರೆದು ಬಾ,
ತಿಳಿತಿಳಿದು ಬಾ, ತಿಳಿಯಾಗಿ ಬಾ –
ಸುಗುಣಗಣಗಳನು ತುಂಬಿ ಬಾ,
ಸದ್ಗುರು ಒಬ್ಬನ ನಂಬಿ ಬಾ,
ವಿನಯಸೇವೆಯಲಿ ಬೋಧಸಾರವನು ಹೀರಿ ಬಾ.
ಹತ್ತು ಜನರ ಕಣ್ ಬಿಡಿಸಿ
ಅವರೆದೆ ತಂತಿಯ ನುಡಿಸಿ
ವಿಶ್ವಗಾನವನು ಹಾಡು ಬಾ.