ಕಡಕೋಳ ಮಡಿವಾಲೇಶ್ವರ ಮಠ          

ತಾ. ಜೇವರ್ಗಿ
ದೂರ ೪೬ ಕಿ.ಮೀ.

ತಾಲೂಕಾ ಕೇಂದ್ರ ಜೇವರ್ಗಿಯಿಂದ ನೈಋತ್ಯಕ್ಕೆ ೪೬ ಕಿ.ಮೀ. ಯಡ್ರಾಮಿಯಿಂದ ವಾಯುವ್ಯಕ್ಕೆ ೬ ಕಿ.ಮೀ. ಚಿಣಗೇರಿ ಹೊಳೆಯ ಎಡದಂಡೆಯ ಮೇಲಿರುವ ಧಾರ್ಮಿಕ ಕೇಂದ್ರಮಾಗಿದೆ. ಶರಣ ಬಸವೇಶ್ವರರ ಸಮಕಾಲೀನರಾದ ಕಡಕೋಳ ಮಡಿವಾಳಪ್ಪನವರ ಮಠದಿಂದಾಗಿ ಈ ಊರು ಪ್ರಸಿದ್ಧವಾಗಿದೆ.  ಕಲ್ಬುರ್ಗಿ ತಾಲೂಕಿನ ಬಿದನೂರಿನಲ್ಲಿ ಜನಿಸಿದ ಮಡಿವಾಳಪ್ಪ ಶರಣ ಬಸವೇಶ್ವರರ ಪ್ರಭಾವದಿಂದ ಅರಳಗುಂಡಿಗೆಯಲ್ಲಿ ಸ್ವಲ್ಪಕಾಲ ಇದ್ದು ನಂತರ ಕಾರಣಾಂತರದಿಂದ ಕಡಕೋಳಕ್ಕೆ ಬಂದು ನೆಲೆಸಿ ಅಲ್ಲೆ ಐಕ್ಯರಾದರು.  ಇವರ ಸಮಾಧಿಯು ಇಲ್ಲಿದ್ದು ಮಡಿವಾಳಪ್ಪ ಮಠವೆಂದು ರೂಡಿಯಲ್ಲಿದೆ.  ಮಡಿವಾಳೇಶ್ವರ ಮಠ ಪ್ರಾಚೀನ ಕಟ್ಟಡವಾಗಿದ್ದು ವಿಶಾಲವಾದ ಪ್ರಾಕಾರದಲ್ಲಿರುವ ಗುಡಿಯಲ್ಲಿ ವೇದಿಕೆಯ ಮೇಲೆ ಮಡಿವಾಳಪ್ಪ ಹಾಗೂ ಶಿಷ್ಯನ ಗದ್ದುಗೆಯು ಇರುವ ಭೀಮಾಶಂಕರನ ಗುಡಿ ಇದೆ. ವಚನಕಾರರಾಗಿದ್ದ ಮಡಿವಾಳಪ್ಪನವರು “ಕೈವಲ್ಯ ವಾಕ್ಯಾಮೃತ” ಎಂಬ ವಚನ ಕೃತಿಯನ್ನು ರಚಿಸಿದ್ದು ಹಲವಾರು ತತ್ವ ಪದಗಳನ್ನು ರಚಿಸಿದ್ದಾರೆ.

 

ಮಳ್ಳಿ   

ತಾ. ಜೇವರ್ಗಿ
ದೂರ ೫೦ ಕಿ.ಮೀ.

ತಾಲೂಕಾ ಕೇಂದ್ರ ಜೇವರ್ಗಿಯಿಂದ ನೈಋತ್ಯಕ್ಕೆ ೫೦ ಕಿ.ಮೀ. ದೂರದಲ್ಲಿರುವ ಮಳ್ಳಿಯು ನೆರೆಯ ಕುಳಗೇರಿ ಗ್ರಾಮದ ಶಾಸನದಲ್ಲಿ “ಮಣಳಿ” ಎಂದೇ ಪ್ರಖ್ಯಾತವಾದ ಈ ಗ್ರಾಮ ಚೌಡೇಶ್ವರಿಯ ಜಾತ್ರೆಯಿಂದಾಗಿ ಮಹತ್ವ ಪಡೆದಿದೆ. ಊರಿನಲ್ಲಿ ಚದುರಿಕೊಂಡಿರುವ ಅವಶೇಷಗಳ ಆಧಾರದ ಮೇಲೆ ಇದರ ಪ್ರಾಚೀನತೆಯನ್ನು ಸುಮಾರು ೧೦-೧೧ನೇ ಶತಮಾನ ಎಂದು ಗುತುತಿಸಬಹುದಾಗಿದೆ. ಮೊದಲ ದಿನ ಚೌಡೇಶ್ವರಿಯ ಎರಡು ಬೆಳ್ಳಿಯ ಮುಖವಾಡಗಳನ್ನು ಪೂಜಿಸಿ ರಾತ್ರಿ ಊರಲ್ಲಿ ಮೆರೆಸುತ್ತಾರೆ.  ಎರಡನೆಯ ದಿನ ಜಾತ್ರೆಯಲ್ಲಿ ದೇವಿಯರ ಮುಖವಾಡವನ್ನು ಧರಿಸಿ ಬಡಿಗೆಯಾಟ ಆಡುವರು. ಶಿವರಾತ್ರಿ ಹಬ್ಬದೊಂದಿಗೆ ಜಾಗರಣೆಗೆ ಹೊಂದಿಕೊಳ್ಳುವಂತೆ ಊರಲ್ಲಿ ಹನುಮಂತ, ಚೌಡಮ್ಮ, ಮರಗಮ್ಮನ ಗುಡಿಗಳಿದ್ದು. ಗಾಂಧೀಜಿಗೆಂದೇ ನಿರ್ಮಿಸಿದ ಗಾಂಧೀಗುಡಿ ಇರುವುದು ವಿಶಿಷ್ಟವಾಗಿದೆ. ಅಲ್ಲದೆ ಇಲ್ಲಿರುವ ಸಕ್ಕರೆ ಕಾರ್ಖಾನೆಯು ಪ್ರಸಿದ್ಧವಾಗಿದೆ.

 

ಚನ್ನಬಸಪ್ಪ ಕುಳಗೇರಿ  

                             

ಜೇವರ್ಗಿ ತಾಲೂಕಿನ ಕುರಳಗೇರಿ ಗ್ರಾಮದಲ್ಲಿ ಜನಿಸಿದ ಚನ್ನಬಸಪ್ಪನವರು ಸುರಪೂರದ ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ದೇಶಭಕ್ತಿಯ ಸಂಸ್ಕಾರ ಪಡೆದು ಅನ್ಯಾಯದ ವಿರುದ್ಧ ಹೋರಾಡುವ ಸಂಘರ್ಷಮಯ ಜೀವನದಲ್ಲಿ ಕಾಲಿಟ್ಟರು. ಇಪ್ಪತ್ತರ ಹರೆಯದಲ್ಲಿದ್ದಾಗಲೇ ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ಯೋಚಿಸುತ್ತಾ ಸಮಾಜಕ್ಕೆ ತಮ್ಮದೆ ಆದ ಸೇವೆ ಸಲ್ಲಿಸಬೇಕೆಂದು ಸಂಕಲ್ಪ ಮಾಡಿದರು.

ಸ್ವತಂತ್ರ ಪ್ರವೃತಿಯವರಾಗಿದ್ದ ಚನ್ನಬಸಪ್ಪನವರು ಮುಸ್ಲಿಂ ಮುಖಂಡರ ಸೊಕ್ಕಿನ ನಡತೆಯನ್ನು ಹಾಗೂ ಹಿಂದೂಗಳ ಮೇಲೆ ರಜಾಕಾರರು ಎಸಗುತ್ತಿದ್ದ ದೌರ್ಜನ್ಯವನ್ನು ಕಂಡು ರೋಸಿ ಹೋಗಿ ಹೋರಾಟಕ್ಕಿಳಿದರು. ಹಿಂದೂಗಳನ್ನು ರಜಾಕಾರರ ಹಿಂಸಾಕೃತ್ಯಗಳಿಂದ ರಕ್ಷಿಸಲೆಂದು ಬಂದೂಕನ್ನು ಕೈಗೆತ್ತಿಕೊಂಡರು. ಸ್ವಾಮಿ ರಮಾನಂದ ತೀರ್ಥ ಜಗನ್ನಾಥರಾವ್ ಚಂಡ್ರಕಿ, ಭೀಮರಡ್ಡಿ ಮುಂತಾದವರೊಂದಿಗೆ ಸಂಪರ್ಕ ಬೆಳೆಸಿಕೊಂಡು ರಜಾಕಾರರ ವಿರುದ್ಧ ಸಶಸ್ತ್ರ ಸುಸಜ್ಜಿತ ಬಂಡಾಯ ಪ್ರಾರಂಭಿಸಿದರು.

ಚಾಣಾಕ್ಷಮಿತಿಗಳೂ ಆದ ಚನ್ನಬಸಪ್ಪನವರು ರಜಾಕಾರರಿಂದ ಜರುಗಬಹುದಾಗಿದ್ದ ಅನೇಕ ದುರ್ಘಟನೆಗಳನ್ನು ಹಿಂಸಾಕೃತ್ಯಗಳನ್ನು ತಪ್ಪಿಸಿದ್ದಾರೆ.  ಅವರು ತಮ್ಮ ಜೀವನ ಪೂರ್ತಿ ತೋರಿದ ಸಾಹಸ ಕಾರ್ಯ ತ್ಯಾಗಗಳು ನಾಡಿನ ಯುವ ಪೀಳಿಗೆಗೆ ಪ್ರೇರಣೆ ಒದಗಿಸುತ್ತವೆ.

 

ಸರ್ದಾರ ಶರಣಗೌಡ ಇನಾಂದಾರ

ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಕ್ಕೆ ಜೇವರ್ಗಿಯ ಅನೇಕ ನಾಯಕರು ಬೆಂಬಲ ವ್ಯಕ್ತಪಡಿಸಿದರು. ಅವರಲ್ಲಿ ಪ್ರಮುಖರಾದವರು ಸರ್ದಾರ ಶರಣಗೌಡರು.  ಸಾವಿರಾರು ಅಹಿಂಸಾವಾದಿಗಳು ಮಾಡಲಾರದ ಕೆಲಸವನ್ನು ಇವರೊಬ್ಬರೆ ಮಾಡಿದ್ದಾರೆ. ಕೈಯಲ್ಲಿ ಬಂದೂಕು ಹಿಡಿದು ರಜಾಕಾರರ ಉಪ್ಪಟಳದಿಂದ ಹಿಂದೂಗಳನ್ನು ರಕ್ಷಿಸಿದ್ದು ಇವರ ದೊಡ್ಡ ಸಾಹಸವಾಗಿದೆ.  ಸಿಂದಗಿ ಕ್ಯಾಂಪಿನಲ್ಲಿ ಅನೇಕ ಹಿಂದೂ ಯುವಕರಿಗೆ ಸೈನಿಕ ತರಬೇತಿಯನ್ನು ಕೊಟ್ಟು ನಿಜಾಮ ರಾಜ್ಯದ ಗಡಿಭಾಗದಲ್ಲಿ ಶರಣಗೌಡರು ರಜಾಕಾರರ ಪಡೆಗಳನ್ನು ಧೂಳಿಪಟ ಮಾಡಿದರು.

ವಿದ್ಯಾರ್ಥಿ ದೆಸೆಯಿಂದಲೇ ಸರ್ದಾರ ಶರಣಗೌಡರು ಸ್ವತಂತ್ರ ಪ್ರವೃತಿಯವರಾಗಿದ್ದು ಧಾರ್ಮಿಕ ಹಕ್ಕುಗಳಿಗಾಗಿ ನಿಜಾಮನ ವಿರುದ್ಧ ಹೋರಾಡಿದ್ದಾರೆ.  ನಿರ್ಭಯಮೂರ್ತಿಯಾಗಿದ್ದ ಸರ್ದಾರ ಶರಣಗೌಡರು ನಿಜಾಮನ ಪೋಲಿಸರೊಂದಿಗೆ ನಿರಂತರ ಸಂಘರ್ಷದಿಂದಾಗಿ ಅವರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.  ಇವರನ್ನು ಹಿಡಿದುಕೊಟ್ಟವರಿಗೆ ೨೦ ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿ ನಿಜಾಮ ಸರ್ಕಾರ ಘೋಷಿಸಿತ್ತು.  ಆದರೆ ಅವರನ್ನು ಹಿಡಿಯುವ ಗುಂಡಿಗೆಯವರು ಯಾರೂ ಇರಲ್ಲಿಲ್ಲ.

ಸರ್ದಾರ ಶರಣಗೌಡ ಇನಾಂದಾರರು ಮಾಡಿದ ಕಾರ್ಯ ಸಾಧನೆ ಅಪಾರವಾದುದು ಅವರು ಒಬ್ಬ ವ್ಯಕ್ತಿ ಎನ್ನುವದಕ್ಕಿಂತ ಮಹಾನ್ ಶಕ್ತಿ ಎಂದರೆ ತಪ್ಪಲ್ಲ.