ತ್ರಿವಿಕ್ರಮ ಮತ್ತು ವಾಮನರಿಬ್ಬರೂ ಬೆರಗಿನ ವಸ್ತುಗಳೇ! ಇದು ಪ್ರಾಣಿಸಂಗ್ರಹಾಲಯಕ್ಕೆ ಹೋಗಿರುವ ಎಲ್ಲರ ಅನುಭವ. ದೊಡ್ಡ ಆನೆಯನ್ನು ಬೆರಗಿನಿಂದ ನೋಡುವ ಕಣ್ಣುಗಳೇ, ಪುಟ್ಟ ಚಿಟ್ಟೆಯನ್ನು ನೋಡಿ ಅರಳುತ್ತವೆ. ಮಾನವನ ಕೌತುಕವನ್ನು ಕೆಣಕುವ ಪ್ರಾಣಿಲೋಕದ ರಹಸ್ಯಗಳಲ್ಲಿ ಪ್ರಾಣಿಗಳ ಗಾತ್ರವೂ ಒಂದು. ಕಣ್ಣಿಗೇ ಕಾಣದ ಪುಟ್ಟ ಜೀವಕೋಶವೊಂದರಿಂದ ಹಿಡಿದು ಸಮುದ್ರದಾಳದೊಳಗೆ ಹತ್ತಾರು ಆನೆಗಳನ್ನು ನುಂಗಿ ನೀರು ಕುಡಿಯಬಲ್ಲ ತಿಮಿಂಗಲದವರೆಗೂ ಪ್ರಾಣಿಗಳ ಗಾತ್ರವೈವಿಧ್ಯವಿದೆ. ಇನ್ನು ಇದರ ಜೊತೆಗೆ ನಿತ್ಯ ಹಸಿರು ಕಾಡಿನಲ್ಲಿರುವ ಮುಗಿಲು ಮುಟ್ಟುವ ಎತ್ತರೆತ್ತರದ ಸಸ್ಯಗಳನ್ನೂ ಕೂಡಿಸಿಕೊಂಡು ನೋಡಿ!  ಇವೆಲ್ಲವೂ ಕಣ್ಣಿಗೆ ಕಾಣದ ಪುಟ್ಟ ಜೀವಕೋಶದಿಂದ ಮೊಳೆತ ವೈವಿಧ್ಯ ಎಂದರೆ ನಂಬುವುದು ತುಸು ಕಷ್ಟ. ಆದರೆ ಇದು ನಿಜವೂ ಹೌದು.

ಹಾಗಿದ್ದರೆ, ಆನೆ-ತಿಮಿಂಗಿಲಗಳಿಗಿಂತಲೂ ದೊಡ್ಡದಾದ ಜೀವಿಗಳು ಬೆಳೆಯಬಹುದೇ ಎಂದಿರಾ? ಬೆಳೆಯಬಹುದೇ ಅನ್ನುವ ಅನುಮಾನವೇಕೆ. ಈ ಹಿಂದೆಯೂ ಅಂತಹ ಜೀವಿಗಳು ಭೂಮಿಯ ಮೇಲಿದ್ದುವು. ಸುಮಾರು 15 ಕೋಟಿವರ್ಷಗಳಿಂದ 20 ಕೋಟಿ ವರ್ಷಗಳ ಹಿಂದೆ ಜೀವಿಸಿದ್ದ ಡೈನೊಸಾರ್ಗಳು ತಿಮಿಂಗಿಲಗಳ ದೊಡ್ಡಣ್ಣನೆನ್ನಿಸಿಕೊಳ್ಳಬಲ್ಲುವು. ಇಂತಹ ದೊಡ್ಡಣ್ಣಗಳು ಇನ್ನು ಮುಂದೆಯೂ ಬಂದಾವೇ? ಅಥವಾ ಜೀವಿಗಳ ಗಾತ್ರಕ್ಕೆ ಒಂದು ಮಿತಿ ಇದೆಯೇ? ಜೀವಿಗಳ ಗಾತ್ರ ಏರುಗತಿಯಲ್ಲಿ ವಿಕಾಸವಾಗಲು ಕಾರಣವೇನು? ಇಳಿಗತಿಯಲ್ಲಿ ಕುಗ್ಗಲು ಕಾರಣವೇನು? ಎಲ್ಲ ಜೀವಿಗಳ ಗಾತ್ರದಲ್ಲಿಯೂ ಏರುಗಾತ್ರದ ಬದಲಾವಣೆಗಳಾಗಿವೆಯೋ ಅಥವಾ ಕೆಲವೇ ಜೀವಿಗಳಲ್ಲಿಯೋ?

ಹೀಗೆ ಹಲವು ಪ್ರಶ್ನೆಗಳು ಕಾಡತೊಡಗುತ್ತವೆ. ಇತ್ತೀಚೆಗೆ ಬಂದು ಸುದ್ದಿ: ವಿಕಾಸದ ಹಾದಿಯಲ್ಲಿ ಜೀವಿಗಳು ಎರಡು ಬಾರಿ ಅಂದಿನ ಜೀವಿಗಳ ಸರಾಸರಿ ಗಾತ್ರಕ್ಕಿಂತಲೂ ಸಹಸ್ರಾರು ಪಟ್ಟು ದೊಡ್ಡದಾಗಿ ವಿಕಾಸವಾದುವಂತೆ. ಇದು ಕ್ರಮೇಣ ಆದ ಬದಲಾವಣೆ ಅಲ್ಲ. ಕಾಲಟ್ಟದಲ್ಲಿ ಇದ್ದಕ್ಕಿದ್ದಂತೆ ಆದ ಹಾಗೆ ತೋರುವ ಟನೆ ಎನ್ನುತ್ತದೆ ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆಯ ಜನವರಿ 6ರ ಸಂಚಿಕೆಯಲ್ಲಿ ಪ್ರಕಟವಾದ ಒಂದು ಸಂಶೋಧನೆ. ವಿವಿಧ ಜೀವಿಬಗೆಗಳಲ್ಲಿ ಹಾಗೂ 400 ಕೋಟಿ ವರ್ಷಗಳ ಹಿಂದಿನಿಂದ ಇಂದಿನವರೆಗಿನ ವಿವಿಧ ಕಾಲಟ್ಟದಲ್ಲಿ ಕಂಡು ಬಂದ ಅತಿ ದೊಡ್ಡ ಜೀವಿಯ ಗಾತ್ರವೆಷ್ಟಿತ್ತು ಎನ್ನುವುದನ್ನು ಕಾಲದ ಜೊತೆಗೆ ತಾಳೆ ಹಾಕಿ ಅಮೆರಿಕೆಯ ಸ್ಟಾನ್ಫರ್ಡ್ ವಿಶ್ವವಿದ್ಯಾನಿಲಯ ಜೀವಶಾಸ್ತ್ರಜ್ಞ ಜೊನಾಥನ್ ಪೈನ್ ಮತ್ತು ಸಂಗಡಿಗರು ವಿಶ್ಲೇಷಿಸಿದ್ದಾರೆ. ಇವರ ಪ್ರಕಾರ, ಎಲ್ಲ ಜೀವಿ ಪ್ರಕಾರಗಳಲ್ಲಿಯೂ ತ್ಯಾಕಾರದ ಜೀವಿಗಳು ವಿಕಾಸವಾಗಿ, ಡೈನೋಸಾರ್ಗಳಂತೆ ಮರೆಯಾಗಿ ಬಿಟ್ಟಿವೆ!

ಭೂಮಿಯ ಮೇಲೆ ಜೀವದ ಹುಟ್ಟು ಸುಮಾರು 350 ಕೋಟಿ ವರ್ಷಗಳ ಹಿಂದೆ ಆಯಿತು ಎನ್ನುವ ಅಂದಾಜಿದೆ. ಅಂದು ಹುಟ್ಟಿದ್ದು ಒಂದು ಪುಟ್ಟ, ಕಣ್ಣಿಗೆ ಕಾಣದ ರಾಸಾಯನಿಕದ ಚೀಲ! ನಾವು ಇಂದು ಜೀವಕೋಶ ಎನ್ನುವ ಅಂಗಾಂಶದ ಪೂರ್ವಜ. ಅದರ ಗಾತ್ರಕ್ಕೆ ಹೋಲಿಸಿದರೆ ಅಮೆರಿಕದ ಕಾಡುಗಳಲ್ಲಿ ನಾವು ಇಂದು ಕಾಣುವ ಸೆಕ್ವೋಯಿ ಮರಗಳು ಗಾತ್ರದಲ್ಲಿ ಸುಮಾರು 10000000000000000 ಪಟ್ಟು ದೊಡ್ಡವು. ಆದರೆ ಈ ಗಾತ್ರವರ್ಧನೆ ಒಂದೇ ವೇಗದಲ್ಲಿ ಆಗಲಿಲ್ಲ. ಅಂದರೆ ಯಾವುದೋ ಒಂದು ಕಾಲದಲ್ಲಿ ಇದ್ದಕ್ಕಿದ್ದ ಹಾಗೆ ದೊಡ್ಡ, ದೊಡ್ಡ ಜೀವಿಗಳು ವಿಕಾಸವಾದುವು ಎಂದರ್ಥ. ಗಾತ್ರವರ್ಧನೆಯಲ್ಲಿ ಇಂತಹದೊಂದು ಜಿಗಿತ ಸುಮಾರು 190 ಕೋಟಿ ವರ್ಷಗಳ ಹಿಂದೆ ಆಯಿತೆಂದು ಇವರು ಗುರುತಿಸಿದ್ದಾರೆ. ಆಗಿದ್ದ ಜೀವಿಗಳಿಗಿಂತಲೂ ಲಕ್ಷ ಪಟ್ಟು ದೊಡ್ಡದಾದ ಜೀವಿಗಳು ಉದ್ಭವಿಸಿದುವು.  ಇದಾದ ಅನಂತರ ಸುಮಾರು 45ರಿಂದ 65 ಕೋಟಿ ವರ್ಷಗಳ ಹಿಂದೆ ಮತ್ತೊಮ್ಮೆ ಗಾತ್ರವೈಭವವುಂಟಾಯಿತು. ಭೂಮಿಯ ಒಟ್ಟಾರೆ ವಯಸ್ಸಿನ ಐದರಲ್ಲೊಂದು ಭಾಗದಷ್ಟು ಕಾಲಾವಧಿಯಲ್ಲಿ ಈ ಮಹತ್ತರ ಬದಲಾವಣೆ ಜರುಗಿದೆ ಎನ್ನುತ್ತಾರೆ ಪೈನ್.

ಇದರಲ್ಲಿ ಮೊದಲ ನೆಗೆತವಾದದ್ದು ಜೀವಕೋಶಗಳು ಯುಕಾರ್ಯೋಟಾಗಳಾಗಿ ವಿಕಾಸವಾದಾಗ. ಅದುವರೆವಿಗೂ ಜೀವಕೋಶಗಳಲ್ಲಿ ತಳಿವಸ್ತು ನಿರ್ದಿಷ್ಟ ಸ್ಥಾನದಲ್ಲಿ ಇರುತ್ತಿರಲಿಲ್ಲ. ಆದರೆ ಯೂಕಾರ್ಯೋಟಗಳಲ್ಲಿ, ಜೀವಕೋಶದ ಕೇಂದ್ರಭಾಗದಲ್ಲಿರುವ ಕೋಶಕೇಂದ್ರ (ನ್ಯೂಕ್ಲಿಯಸ್)ನಲ್ಲಿ ತಳಿವಸ್ತು ಒಟ್ಟಾಗಿದ್ದು ಕಾಣಬರುತ್ತದೆ. ಯೂಕಾರ್ಯೋಟಗಳಲ್ಲಿ ಅತ್ಯಂತ ಪ್ರಾಚೀನವಾದ ಜೀವಿ ಗ್ರೈಪಾನಿಯ ಸ್ಪೈರಾಲಿಸ್. ಭಾರತದ ವಿಂಧ್ಯಪರ್ವತಗಳಲ್ಲಿ ಕಾಣಬರುವ, ಸುಮಾರು 160 ಕೋಟಿ ವರ್ಷಗಳ ಹಿಂದೆ ರೂಪುಗೊಂಡ ಶಿಲೆಗಳಲ್ಲಿ ಇದರ ಪಳೆಯುಳಿಕೆಗಳು ದೊರೆತಿವೆ. ಇದು ಅಂದು ಇದ್ದ ಏಕಕೋಶ ಜೀವಿಗಳ ಸರಾಸರಿ ಗಾತ್ರಕ್ಕೆ ಹೋಲಿಸಿದರೆ ಸುಮಾರು ಹತ್ತು ಲಕ್ಷ ಪಟ್ಟು ದೊಡ್ಡದು. ಅಷ್ಟೇ ಅಲ್ಲ. ಅಂದು ಗ್ರೈಪಾನಿಯದಂತೆಯೇ ಇನ್ನೂ ಹಲವು ತ್ಯ ಕೋಶಗಳಿದ್ದುವು.  ಗ್ರೈಪಾನಿಯ ಅವುಗಳಲ್ಲೆಲ್ಲ ಅತಿ ದೊಡ್ಡದು ಅಷ್ಟೆ. ಅದಾದ ಅನಂತರ ಇನ್ನು 100 ಕೋಟಿ ವರ್ಷಗಳವರೆಗೆ ಜೀವಕೋಶಗಳ ಒಟ್ಟಾರೆ ಗಾತ್ರದಲ್ಲಿ ಅಂತಹ ಬದಲಾವಣೆಯೇನೂ ಕಂಡು ಬರಲಿಲ್ಲ ಎನ್ನುತ್ತಾರೆ ಪೈನ್.

ಜೀವಿಗಳ ಗಾತ್ರದ ಧಿಢೀರ್ ವರ್ಧನೆ ಎರಡನೆಯ ಬಾರಿಗೆ ಸುಮಾರು 63ರಿಂದ 54 ಕೋಟಿ ವರ್ಷಗಳ ಹಿಂದೆ (ಎಡಿಯಾಕಾರನ್ ಕಾಲ) ಕಂಡು ಬರುತ್ತದೆ. ಇಂದು ಅಸ್ತಿತ್ವದಲ್ಲೇ ಇಲ್ಲದ ವೆಂಡೊಬಯಾಂಟ್ ಎನ್ನುವ ಜೀವಿ ವರ್ಗ ಅಂದಿನ ತ್ಯಜೀವಿಗಳಲ್ಲಿ ಪ್ರಮುಖವಾಗಿತ್ತು. ಅದಾದ ಅನಂತರ 54 ಕೋಟಿ ವರ್ಷಗಳಿಂದ 48 ಕೋಟಿ ವರ್ಷಗಳ ಹಿಂದಿನ ಅವಧಿಯಲ್ಲಿ (ಕೇಂಬ್ರಿಯನ್ ಕಾಲ) ಅತಿ ದೊಡ್ಡ ಆತ್ರ್ರೊಪಾಡ್ಗಳು (ಜೇಡ, ಇರುವೆ, ಜಿರಲೆಗಳ ಕುಟುಂಬ) ಕಂಡು ಬಂದವು. ಸ್ಕ್ವಿಡ್ಗಳ ಕುಟುಂಬಕ್ಕೆ ಸೇರಿದ ತ್ಯಜೀವಿಗಳು, ತ್ಯ ನಾಟಿಲಸ್ ಜೀವಿ (ಇದರ ಪಳೆಯುಳಿಕೆಗಳನ್ನು ಸಾಲಿಗ್ರಾಮವೆಂದು ಪೂಜಿಸುವುದೂ ಉಂಟು)ಗಳು ಸುಮಾರು 48ರಿಂದ 44 ಕೋಟಿ ವರ್ಷಗಳ ಹಿಂದೆ (ಆರ್ಡೊವೀಶಿಯನ್ ಕಾಲ) ಕಂಡು ಬಂದವು. ಇವು ಎಡಿಯಾಕಾರನ್ ಕಾಲದಲ್ಲಿದ್ದ ಸ್ಕ್ವಿಡ್ಗಳಿಗಿಂತ ಹತ್ತು ಲಕ್ಷ ಪಟ್ಟು ದೊಡ್ಡವಾಗಿದ್ದುವು.  ಅರ್ಥಾತ್ 63ರಿಂದ 44 ಕೋಟಿ ವರ್ಷಗಳ ಹಿಂದೆ ವಿವಿಧ ವರ್ಗಗಳಲ್ಲಿ ತ್ಯ ಜೀವಿಗಳು ಹುಟ್ಟಿದುವು.

ಅಂದಿನಿಂದ ಇಂದಿನವರೆಗೆ ಜಲ, ನೆಲ ಜೀವಿಗಳಲ್ಲಿ ವೈವಿಧ್ಯತೆ ಹೆಚ್ಚಾಗುತ್ತಲೇ ಇದೆ. ಆದರೆ ಗಾತ್ರದಲ್ಲಿ ಅಂತಹ ಬದಲಾವಣೆಯೇನೂ ಆಗಿಲ್ಲ. ಆರ್ಡೊವೀಶಿಯನ್ ಕಾಲದ ಅನಂತರ ಕೆಲವು ಜೀವಿಗಳಲ್ಲಿ ಅತಿ ಹೆಚ್ಚೆಂದರೆ 150 ಪಟ್ಟು ಗಾತ್ರ ಹೆಚ್ಚಾಗಿರುವುದು ಕಂಡು ಬರುತ್ತದೆ.  ಅತಿ ದೊಡ್ಡ ಜೀವಿಯೆಂದು ಖ್ಯಾತಿಯಾದ ನೀಲಿತಿಮಿಂಗಿಲದ ಗಾತ್ರವೂ ಅಷ್ಟೇನೂ ಹೆಚ್ಚೆನ್ನಿಸುವುದಿಲ್ಲವಂತೆ.  ಸೆಕ್ವೋಯಿ ಮರವೂ ಅಷ್ಟೆ. ಆರ್ಡೊವೀಶಿಯನ್ ಕಾಲದಲ್ಲಿ ಜೀವಿಸಿದ್ದ ಅತಿ ದೊಡ್ಡ ಸ್ಕ್ವಿಡ್ ಜಾತಿಯ ಜೀವಿಗಿಂತ ಒಂದು ಸಾವಿರ ಪಟ್ಟು ದೊಡ್ಡದಷ್ಟೆ!  ಅರ್ಥಾತ್ ಜೀವಿಗಳ ಗಾತ್ರದಲ್ಲಿನ ಬೆಳೆವಣಿಗೆ ಕೆಲವು ಕಾಲಾವಧಿಯಲ್ಲಿಯಷ್ಟೆ ಆಗಿದೆ. ಇದ್ದಕ್ಕಿದ್ದ ಹಾಗೆ ತ್ಯ ಜೀವಿಗಳು ಕಾಣಿಸಿಕೊಂಡಿವೆ ಎನ್ನುತ್ತಾರೆ ಪೈನ್. ಹೀಗೇಕೆ? ಅದಕ್ಕೂ ವಿವರಣೆ ಇದೆ. ಜೀವಿಗಳ ವಿಕಾಸದಲ್ಲಿನ ಒಂದು ತಿರುವಿನ ಟ್ಟದಲ್ಲಿ ಅಥವಾ ತಿರುವಿನ ಅನಂತರ ಗಾತ್ರದಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಉದಾಹರಣೆಗೆ, ಏಕಕೋಶಜೀವಿಯಲ್ಲಿ ಕೋಶಕೇಂದ್ರದ ಉಗಮ. ಅಂತೆಯೇ ಏಕಕೋಶಜೀವಿಗಳು ಬಹುಕೋಶ ಜೀವಿಗಳಾಗಿ ಸಂಟಿತವಾದ ಅನಂತರ ಎರಡನೆಯ ಬಾರಿಗೆ ತ್ಯ ಜನನ ಕಂಡು ಬರುತ್ತದೆ. ಬಹುಶಃ ಇಂತಹ ವಿನೂತನ ಅಂಗ ವಿಕಾಸದ ಜೊತೆಗೆ ಪರಿಸರದಲ್ಲಿನ ಬದಲಾವಣೆಗಳೂ ಕೂಡಿ, ಇದ್ದಕ್ಕಿದ್ದಹಾಗೆಯೇ ಜೀವಿಗಳ ಗಾತ್ರ ಹೆಚ್ಚಾಗುವುದಕ್ಕೆ ಅನುಕೂಲವಾಗಿದ್ದಿರಬೇಕು ಎಂದು ಪೈನ್ ತರ್ಕಿಸಿದ್ದಾರೆ.

Two Phase increase in the maximum size of life over 3.5 billion years reflects biological innovation and environmental opportunity, JL Payne et al.,  PNAS Vol. 106, No. 1, Pp 24-27, 2009 (6 January 2009)