ನಮ್ಮ ಅಸ್ತಿತ್ವಕ್ಕೆ, ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶಗಳನ್ನು, ಶಕ್ತಿಯನ್ನು  (Calories) ಪೂರೈಸುವ ವಿವಿಧ ಘಟಕಗಳನ್ನು ನಾವು ಸೇವಿಸುವ ಆಹಾರದಿಂದ ಪಡೆಯುತ್ತೇವೆ. ಶಕ್ತಿ ಪೂರೈಕೆಯನ್ನು ಪಿಷ್ಟ-ಸಕ್ಕರೆ (carbohydrates), ಸಸಾರಜನಕಗಳು (proteins) ಮತ್ತು ಎಣ್ಣೆ-ಕೊಬ್ಬುಗಳು (oils and fats) ಒದಗಿಸುತ್ತವೆ. ದಿನಂಪ್ರತಿ ನಮಗೆ ಆಹಾರದಿಂದ ಲವಣಗಳು (minerals), ಜೀವಸತ್ವಗಳು (vitamins), ಆಹಾರ ತಂತು ಅಥವಾ ನಾರಿನಂಶ (dietary fibre) ಮತ್ತು ನೀರು ದೊರೆಯುವದು ಅವಶ್ಯವಾಗಿದೆ.

ಪಿಷ್ಟ-ಸಕ್ಕರೆಗಳು ದವಸ ಧಾನ್ಯಗಳಿಂದ (ಉದಾ: ಜೋಳ, ಅಕ್ಕಿ, ಗೋದಿ), ಗಡ್ಡೆ-ಗೆಣಸುಗಳಿಂದ (ಬಟಾಟೆ, ಗೆಣಸು ಇತ್ಯಾದಿ) ಹಣ್ಣು-ಕಾಯಿಗಳಿಂದ (ಬಾಳೆ ಹಣ್ಣು, ಮಾವಿನ ಹಣ್ಣು, ದ್ರಾಕ್ಷಿ ಹಣ್ಣು ಇತ್ಯಾದಿ) ದೊರೆಯುತ್ತವೆ.

ಸಸಾರಜನಕಗಳು (ಪ್ರೊಟೀನುಗಳು) ಬೇಳೆ ಕಾಳುಗಳು (ಉದಾ: ತೊಗರೆ ಬೇಳೆ, ಕಡಲೆ, ಹೆಸರು ಬೇಳೆ,) ತತ್ತಿ, ಮೀನು, ಮಾಂಸಗಳಿಂದ ದೊರೆಯುತ್ತವೆ.

ಎಣ್ಣೆ-ಕೊಬ್ಬುಗಳು ಎಲ್ಲ ಬಗೆಯ ಸೇವಿಸಲರ್ಹ ಎಣ್ಣೆ ಪದಾರ್ಥಗಳಿಂದ (ಕುಸುಬೆ ಎಣ್ಣೆ, ನೆಲಗಡಲೆ ಎಣ್ಣೆ, ಸೂರ್ಯಪಾನ ಎಣ್ಣೆ, ಎಳ್ಳೆಣ್ಣೆಗಳು) ತತ್ತಿ, ಮೀನು, ಮಾಂಸಗಳಿಂದ, ಕರಟಕಾಯಿಗಳಿಂದ (nuts) ದೊರೆಯುತ್ತವೆ.

ನಾರಿನಂಶ ಅಥವಾ ಅಹಾರ ತಂತು (dietary fibre) ಕಾಯಿ ಪಲ್ಲೆ, ಹಣ್ಣುಗಳು, ದವಸ ಧಾನ್ಯಗಳಿಂದ ದೊರೆಯುತ್ತವೆ. ಇದು ಸಸ್ಯಾಹಾರದಲ್ಲಿ ಮಾತ್ರ ದೊರೆಯಬಲ್ಲದು.

ಕ್ಯಾಲ್ಸಿಯಂ, ಪೊಟ್ಯಾಸಿಯಂ, ಕಬ್ಬಿಣ, ಮ್ಯಾಗ್ನೇಸಿಯಂ ಇತ್ಯಾದಿ ಲವಣಗಳು ಹಣ್ಣು, ಕಾಯಿಪಲ್ಲೆ, ಕರಟಕಾಯಿಗಳು, ತತ್ತಿ, ಮೀನು, ಮಾಂಸ, ಹಾಲು, ಗಿಣ್ಣುಗಳಿಂದ ದೊರೆಯುತ್ತವೆ.

ಜೀವಸತ್ವಗಳು ವಿಶಿಷ್ಟ ಬಗೆಯ ರಾಸಾಯನಿಕಗಳು. ಇವು ನಮಗೆ ದಿನಂಪ್ರತಿ ಆಹಾರದಿಂದ ದೊರೆಯುವದು ಅವಶ್ಯ. ಇವುಗಳ ಅಭಾವದಿಂದ ಆರೋಗ್ಯಕ್ಕೆ ಅಪಾಯ. ಇವು ಜೀವಕೋಶಗಳ ರಕ್ಷಣೆ, ಪೋಷಣೆ, ಅವುಗಳ ಸುಗಮ ಕಾರ್ಯಕ್ಕೆ ಅತ್ಯವಶ್ಯವಾಗಿರುವದರಿಂದ ಜೀವಸತ್ವಗಳೆಂಬ ಹೆಸರು ಕೊಡಲಾಯಿತು. ಇವು ನಮಗೆ ದಿನಂಪ್ರತಿ ಅತ್ಯಲ್ಪ ಪ್ರಮಾಣದಲ್ಲಿ ಅವಶ್ಯವಿರುತ್ತವೆ.

ನಮ್ಮ ದೇಹವು ಕೋಟ್ಯಾವಧಿ ಸೂಕ್ಷ್ಮ ಜೀವಕೋಶಗಳಿಂದ ರಚಿತವಾಗಿದೆ. ಬರಿಗಣ್ಣಿಗೆ ಈ ಜೀವ ಕೋಶಗಳು ಕಾಣಲಾರವು. ಆದರೆ ಜೀವ ಕೋಶಗಳ ಸಂಗ್ರಹವು ಅಂಗಗಳಾಗಿ ನಮ್ಮ ಬರಿಗಣ್ಣಿಗೆ ಕಾಣುತ್ತವೆ. ಈ ಜೀವಕೋಶಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳಲ್ಲಿ ಜೀವಸತ್ವಗಳು ಭಾಗವಹಿಸುತ್ತವೆ.

ಜೀವಕೋಶಗಳ ರಕ್ಷಣೆ, ಪೋಷಣೆ ಮತ್ತು ಬೆಳವಣಿಗೆಗೆ ಅತ್ಯವಶ್ಯವಿರುವ ಜೀವಸತ್ವಗಳಲ್ಲಿ ಹಲವಾರು ಪ್ರಕಾರಗಳಿವೆ. ಅವುಗಳ ರಾಸಾಯನಿಕ ಹೆಸರುಗಳಲ್ಲದೇ ಇಂಗ್ಲಿಷ್ ವರ್ಣಮಾಲೆಯ ಅಕ್ಷರಗಳಿಂದ ಕರೆಯುವದೂ ಸಾಮಾನ್ಯವಾಗಿದೆ.

ಎ, ಬಿ, ಸಿ, ಡಿ, ಈ ಮತ್ತು ಕೆ ಎಂದು ಜೀವಸತ್ವಗಳಿಗೆ ಹೆಸರುಗಳಿವೆ. ಇವುಗಳಲ್ಲಿ ಎ, ಡಿ, ಈ ಮತ್ತು ಕೆ ಜೀವಸತ್ವಗಳು ನೀರಿನಲ್ಲಿ ಕರಗಲಾರವು. ಎಣ್ಣೆಕೊಬ್ಬಿನಲ್ಲಿ ಕರಗುತ್ತವೆ. ಆದ್ದರಿಂದ ಆಹಾರದಲ್ಲಿರುವ ಈ  ನಾಲ್ಕು ಜೀವಸತ್ವಗಳನ್ನು ಕರುಳಿನಿಂದ ಹೀರಿಕೊಳ್ಳಲು ಆಹಾರದಲ್ಲಿ ಕೊಬ್ಬಿನಂಶ ಇರುವದು ಅವಶ್ಯ. ಬಿ ಮತ್ತು ಸಿ ಜೀವಸತ್ವಗಳು ನೀರಿನಲ್ಲಿ ಕರಗುತ್ತವೆ. ಆಹಾರದಲ್ಲಿರುವ ಇವುಗಳನ್ನು ಕರುಳಿನಿಂದ ಹೀರಿಕೊಳ್ಳಲು ಕೊಬ್ಬಿನಂಶದ ಅವಶ್ಯಕತೆ ಇಲ್ಲ. ನೀರಿನಲ್ಲಿ ಕರಗುವ ಬಿ ಮತ್ತು ಸಿ ಜೀವಸತ್ವಗಳು ನಮ್ಮ ದೇಹದಲ್ಲಿ ಬಹುಕಾಲ ಶೇಖರಣೆ ಆಗಲಾರವು.  ಮೂತ್ರ ಮತ್ತಿತರ ಮುಖಾಂತರ ಇವು ದೇಹದಿಂದ ಹೊರಹಾಕಲ್ಪಡುತ್ತವೆ. ಆದರೆ ಕೊಬ್ಬಿನಲ್ಲಿ ಕರಗುವ ಎ, ಡಿ, ಈ ಮತ್ತು ಕೆ ಜೀವಸತ್ವಗಳು ದೇಹದಲ್ಲಿ ಹೆಚ್ಚುಕಾಲ ಶೇಖರಣೆಯಾಗಿರಬಲ್ಲವು.

ಜೀವಕೋಶಗಳಲ್ಲಿ ವಿವಿಧ ರಾಸಾಯನಿಕಗಳ ಉತ್ಪತ್ತಿಯಾಗುತ್ತಿರುತ್ತದೆ. ಆದರೆ ನಮ್ಮ ದೇಹವು ಜೀವಸತ್ವಗಳನ್ನು ಆಹಾರದಿಂದಲೇ ಪಡೆಯಬೇಕು. ಜೀವ ಸತ್ವಗಳ ಅಭಾವದಿಂದ ಹಲವಾರು ರೋಗಗಳು ಬರುತ್ತವೆ. ಜೀವಸತ್ವಗಳ ಶೋಧವಾಗುವದಕ್ಕೆ ಕೆಲವು ಶತಮಾನಗಳಷ್ಟು ಮೊದಲೇ ವೈದ್ಯರು ಜೀವಸತ್ವಗಳ ಅಭಾವದಿಂದ ಬರುವ ರೋಗಗಳನ್ನು ಗುರುತಿಸಿದ್ದರು. ಆದರೆ ಮೊದಲಿಗೆ ಈ ರೋಗಗಳ ಸರಿಯಾದ ಕಾರಣ ತಿಳಿಯದ್ದರಿಂದ ತಕ್ಕ ಚಿಕಿತ್ಸೆ ತಿಳಿದಿರಲಿಲ್ಲ. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಸಂಶೋಧನೆಗಳಿಂದ ಜೀವಸತ್ವಗಳ ಸ್ವರೂಪ, ಅವುಗಳ ಅಭಾವದಿಂದ ಅಂಗಾಂಗಗಳ ಮೇಲೆ ಆಗುವ ದುಷ್ಪರಿಣಾಮಗಳು ಇತ್ಯಾದಿಯಾಗಿ ಗುರುತಿಸಲ್ಪಟ್ಟಿವೆ. ಉದಾಹರಣೆಗೆ ಒಸಡು ಬಾತುಕೊಳ್ಳುವ, ಒಸಡಿನಿಂದ ರಕ್ತಸ್ರಾವ ಮಾಡುವ ಸ್ಕರ್ವಿ ಎಂಬ ರೋಗವನ್ನು ವೈದ್ಯರು  ತಿಂಗಳಾನುಗಟ್ಟಲೆ ಸಮುದ್ರಯಾನ ಮಾಡುತ್ತಿದ್ದ ನಾವಿಕರಲ್ಲಿ ಹೆಚ್ಚಾಗಿ ಗುರುತಿಸಿದ್ದರು. ಅಲ್ಲದೇ ನಾವಿಕರು ಲಿಂಬೆ ಹಣ್ಣು ತಿಂದರೆ ಅದನ್ನು ತಡೆಗಟ್ಟಬಹುದೆಂದು ಕಂಡುಕೊಂಡಿದ್ದರು. ಆ ಸಮಯದಲ್ಲಿ ಜೀವಸತ್ವಗಳ ಶೋಧವೇ ಇನ್ನೂ ಆಗಿರಲಿಲ್ಲ. ವೈಜ್ಞಾನಿಕ ಶೋಧಗಳಿಂದ ರೋಗದ ನಿಜವಾದ ಕಾರಣ ಸಿ ಜೀವಸತ್ವದ ಅಭಾವವೆಂದು ಕೆಲವು ಶತಮಾನಗಳ ನಂತರ ತಿಳಿದು ಬಂದಿತು.

ವಿವಿಧ ಜೀವಸತ್ವಗಳು ಬೇರೆ ಬೇರೆ ಕಾಲದಲ್ಲಿ ಶೋಧಗೊಂಡವು. ಶೋಧವಾದ ಸಮಯದಲ್ಲಿ ತಜ್ಞರು ಅವುಗಳಿಗೆ ಒಂದಾದನಂತರ ಒಂದರಂತೆ ವರ್ಣಮಾಲೆಯ ಅಕ್ಷರಗಳಿಂದ ಹೆಸರಿಸಿದ್ದರು. ಆದರೆ ಹೆಚ್ಚಿನ ಸಂಶೋಧನೆಗಳಾದಾಗ ಈ ಮೊದಲು ಅವರು ತಿಳಿದ ಕೆಲವು ರಾಸಾಯನಿಕಗಳು ಜೀವಸತ್ವಗಳಲ್ಲವೆಂದು ಗುರುತಿಸಿದರು. ಮತ್ತೆ ಕೆಲವು ಜೀವಸತ್ವಗಳನ್ನು ಪುನರ್ ವಿಂಗಡಣೆಗೊಳಪಡಿಸಲಾಯಿತು. ಇದರಿಂದಾಗಿ ಜೀವಸತ್ವಗಳ ಹೆಸರಿನಲ್ಲಿ ಕೆಲವು ಅಕ್ಷರಗಳ ಹೆಸರಿನ ಜೀವಸತ್ವಗಳಿಲ್ಲವೆಂದು ನೀವು ಕಾಣಬಹುದು. ಹೀಗೆ ಈಗ ಎ, ಬಿ, ಸಿ, ಡಿ, ಈ ಮತ್ತು ಕೆ ಎಂಬ ಜೀವಸತ್ವಗಳಿವೆ. (ಎಫ್, ಜಿ, ಎಚ್. ಆಯ್, ಜೆ ಎಂಬ ಹೆಸರಿನ ಜೀವಸತ್ವಗಳಿಲ್ಲ!)

ಬಿ ಜೀವಸತ್ವದಲ್ಲಿ ಎಂಟು ಬಗೆಯ ಜೀವಸತ್ವಗಳಿವೆ. ಇವುಗಳಿಗೆ ತಮ್ಮದೇ ಆದ ರಾಸಾಯನಿಕ ಹೆಸರುಗಳಿದ್ದರೂ ಮತ್ತೆ ಅವುಗಳನ್ನು ವರ್ಣಮಾಲೆಯ ಅಕ್ಷರದೊಂದಿಗೆ ಅಂಕೆಗಳಿಂದ ಗುರುತಿಸುವದೂ ಸಾಮಾನ್ಯ ( ಉದ್ದವಾದ ರಾಸಾಯನಿಕ ಹೆಸರು ಹೇಳುವದಕ್ಕಿಂತ ವರ್ಣಮಾಲೆಯ ಒಂದೇ ಅಕ್ಷರ ಮತ್ತು ಅಂಕೆ ಬಳಸಿ ಹೇಳಲು ಸುಲಭ!)

ಜೀವಸತ್ವಗಳ ಪ್ರಮುಖ ಕಾರ್ಯಗಳು

ಜೀವಸತ್ವ  (vitamin – A): ಇದು ಜೀವಕೋಶಗಳ ರಚನೆ, ರಕ್ಷಣೆ ಮತ್ತು ಅಂಗಾಂಗಗಳ ಸರ್ವಾಂಗೀಣ ಬೆಳವಣಿಗೆಗೆ ಅವಶ್ಯ. ಕಣ್ಣು, ಶ್ವಾಸನಾಳ, ಶ್ವಾಸಕೋಶ, ಮೂತ್ರನಾಳ, ಮೂತ್ರಪಿಂಡಗಳ ಒಳ ಆವರಣದ ಜೀವಕೋಶಗಳ ರಕ್ಷಣೆಗೆ ಅವಶ್ಯ.

ಇದರ ಅಭಾವದಿಂದ ಕಣ್ಣಿಗೆ ಅಪಾಯವಾಗಬಲ್ಲದು. ಸಂಜೆಗತ್ತಲಿನ ದೃಷ್ಟಿಮಾಂದ್ಯತೆ, ಕಣ್ಣು ಉರಿತ, ಕಣುಗುಡ್ಡೆಯ ಮುಂಭಾಗದಲ್ಲಿರುವ ಪಾರದರ್ಶಕ ಕಾರ್ನಿಯಾ ಪರದೆಯ ಉರಿತ  (cornea) ಅಂಧತ್ವಗಳು ಉಂಟಾಗಬಹುದು.

ಡಿಜೀವಸತ್ವ  (vitamin – D) :ಕ್ಯಾಲ್ಸಿಯಂ ಲವಣ ಮೂಳೆಗಳಲ್ಲಿ ಕೇಂದ್ರಿತವಾಗಿದೆಯಾದರೂ, ಎಲ್ಲ ಜೀವಕೋಶಗಳಲ್ಲಿ ಇದೆ. ಎಲ್ಲ ಜೀವಕೋಶಗಳ ಕಾರ್ಯಕ್ಕೆ ಇದು ಅವಶ್ಯ. ಆಹಾರದಲ್ಲಿರುವ ಕ್ಯಾಲ್ಸಿಯಂ ಲವಣವನ್ನು ಕರುಳಿನಿಂದ ಹೀರಿಕೊಳ್ಳುವ ಮತ್ತು ಮೂಳೆಗಳಲ್ಲಿ ಅದು ನೆಲೆಯೂರುವ ಹಾಗು ಅದರ ಚಯಾಪಚಯ ಕ್ರಿಯೆಗಳಿಗೆ ಸಹಾಯಮಾಡುವದು ಡಿ ಜೀವಸತ್ವದ  ಕಾರ್ಯವಾಗಿದೆ. ರಕ್ತದಲ್ಲಿ ಮತ್ತು ಅಂಗಾಂಶಗಳಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್‍ಗಳ ಸಮತೋಲನ ಕಾಯ್ದುಕೊಳ್ಳುವಲ್ಲಿ ಡಿ ಜೀವಸತ್ವ ಕೆಲಸ ಮಾಡುತ್ತದೆ. ಡಿ ಜೀವಸತ್ವದ ಅಭಾವದಿಂದ ಬೆಳೆಯುತ್ತಿರುವ ಮಕ್ಕಳಲ್ಲಿ ರಿಕೆಟ್ಸ್ (rickets) ಮತ್ತು ವಯಸ್ಕರಲ್ಲಿ ಮೆದುಮೂಳೆಗಳು (osteomalacia) ಎಂಬ ರೋಗಗಳು ಬರುತ್ತವೆ.

ಜೀವಸತ್ವ  (vitamin – E): ಕೆಲವು ಕಿಣ್ವಗಳ (enzymes) ಕಾರ್ಯಕ್ಕೆ, ಕೆಂಪು ರಕ್ತ ಜೀವಕೋಶಗಳ ಉತ್ಪಾದನೆಗೆ, ಜೀವಕೋಶಗಳ ರಚನೆಗೆ ಮತ್ತು ಜೀವಕೋಶಗಳಲ್ಲಿ ಉತ್ಪಾದಿತವಾಗುವ ಕೆಲವು ಅಪಾಯಕಾರಿ ರಾಸಾಯನಿಕಗಳಿಂದ (free radicals) ಜೀವಕೋಶಗಳನ್ನು ರಕ್ಷಿಸಲು (antioxidant) ಇದು ಮಹತ್ವದ ಪಾತ್ರವಹಿಸುವದು.

ಕೆಜೀವಸತ್ವ  (vitamin – K): ಗಾಯವಾದ ಸಂದರ್ಭಗಳಲ್ಲಿ ರಕ್ತನಾಳಗಳಿಂದ ರಕ್ತಸ್ರಾವವಾಗುವದನ್ನು ತಡೆಗಟ್ಟಲು ರಕ್ತದಲ್ಲಿ ಹಲವಾರು ರಾಸಾಯನಿಕ ಘಟಕಗಳಿವೆ. ಈ ವಿಶಿಷ್ಟ ಘಟಕಗಳು ಕಾರ್ಯ ಮಾಡಲು ಕೆ ಜೀವಸತ್ವ ಅತ್ಯವಶ್ಯವಾಗಿದೆ.

ಸಿಜೀವಸತ್ವ  (vitamin – C): ಆಹಾರದಲ್ಲಿರುವ ಕಬ್ಬಿಣವನ್ನು ಕರುಳಿನಲ್ಲಿ ಹೀರಿಕೊಳ್ಳಲು (ಕಬ್ಬಿಣ ಕೆಂಪು ರಕ್ತ ಜೀವಕೋಶಗಳಲ್ಲಿರುವ ಹೀಮೋಗ್ಲೋಬಿನ್ ತಯಾರಿಕೆಗೆ ಅತ್ಯವಶ್ಯ), ವಸಡು ಹಲ್ಲುಗಳ ರಕ್ಷಣೆಗೆ, ಹಲವಾರು ಕಿಣ್ವಗಳ ತಯಾರಿಕೆಗೆ, ಗಾಯಗಳನ್ನು ವಾಸಿಮಾಡಲು, ಮೂಳೆಗಳ ಪೋಷಣೆಗೆ ಸಿ ಜೀವಸತ್ವ ಅತ್ಯಂತ ಅವಶ್ಯವಾಗಿದೆ. ಸಿ ಜೀವಸತ್ವದ ಅಭಾವದಿಂದ ಸ್ಕರ್ವಿ (scurvy) ಎಂಬ ರಕ್ತಸ್ರಾವ ಮಾಡುವ ರೋಗ ಬರುತ್ತದೆ.

ಬಿಜೀವಸತ್ವ  (vitamin – B): ಬಿ ಜೀವಸತ್ವದಲ್ಲಿ ಎಂಟು ಬಗೆಯ ಜೀವಸತ್ವಗಳಿವೆ. ಆದ್ದರಿಂದ ಈ ಗುಂಪಿಗೆ ಬಿ ಜೀವಸತ್ವಗಳ ಸಂಕೀರ್ಣ (B-complex) ಎನ್ನುವದುಂಟು.  ಇದರಲ್ಲಿ ಥಯಮೀನ್, ರೈಬೋಫ್ಲಾವಿನ್, ಸಯನೋಕೊಬಾಲಮೀನ್ ಇತ್ಯಾದಿಗಳು ಕೆಳಗೆ  ಅನುಕ್ರಮವಾಗಿ ಹೆಸರಿಸಲಾಗಿದೆ.

ಥಯಮೀನ್   (B -1, Thiamine): ಇದು ಪಿಷ್ಟ- ಸಕ್ಕರೆಗಳ ಬಳಕೆಗೆ,  ಕಿಣ್ವಗಳ ತಯಾರಿಕೆಗೆ, ಸ್ನಾಯು ನರಮಂಡಲಗಳ ಸುಗಮ ಕಾರ್ಯಕ್ಕೆ, ಹೃದಯದ ಸ್ನಾಯುವಿನ ಕಾರ್ಯಕ್ಕೆ ಅವಶ್ಯ. ಇದರ ಅಭಾವದಿಂದ ಬೆರಿ ಬೆರಿ (beri beri) ಎಂಬ ರೋಗ ಬರುತ್ತದೆ

ರೈಬೋಫ್ಲೇವಿನ್ ( B-2, Riboflavin): ಕಿಣ್ವಗಳ ತಯಾರಿಕೆಗೆ, ಪಿಷ್ಟ – ಸಕ್ಕರೆಗಳ ಚಯಾಪಚಯಕ್ಕೆ, ಕೆಲವು ಬಗೆಯ ಚೋದಕಗಳ (hormones) ಉತ್ಪತ್ತಿಗೆ ಇದು ಅವಶ್ಯ. ಇದರ ಅಭಾವದಿಂದ ನಾಲಗೆ ಉರಿತ, ತುಟಿ ಉರಿತ, ಬಾಯಿ ಮೂಲೆಯ ಉರಿತ, ದೃಷ್ಟಿಯಲ್ಲಿ ಕುಂದುಗಳಾಗಬಹುದು.

ನಿಯಾಸಿನ್  ( B-3, Niacin): ನಿಕೋಟಿನಾಮ್ಲ ಮತ್ತು ನಿಕೊಟಿನಮೈಡ್ ಎಂಬ ರಾಸಾಯನಿಕಗಳಿರುವ ಬಿ-೩ ಜೀವಸತ್ವ ನರಮಂಡಲದ, ಪಚನಾಂಗಗಳ, ತ್ವಚೆಯ ಜೀವಕೋಶಗಳ ರಕ್ಷಣೆ, ಪೋಷಣೆಗೆ ಸಹಾಯಮಾಡುತ್ತದೆ. ಲೈಂಗಿಕ ಚೋದಕಗಳ ಉತ್ಪತ್ತಿ, ಕಿಣ್ವಗಳ ಉತ್ಪತ್ತಿ ಇದರ ಕಾರ್ಯಗಳಲ್ಲಿ ಒಂದು. ಈ ಜೀವಸತ್ವದ ಅಭಾವದಿಂದ ಪೆಲಾಗ್ರಾ (pellagra) ಎಂಬ ರೋಗ ಬರುತ್ತದೆ

ಪ್ಯಾಂಟೋಥೀನಿಕ್ ಆಮ್ಲ  ( B-5, Pantothenic acid): ಕಿಣ್ವಗಳ ತಯಾರಿಕೆಗೆ, ಪಿಷ್ಟ ಸಕ್ಕರೆಗಳ ಚಯಾಪಚಯಕ್ಕೆ, ಇತರ  ಜೀವಸತ್ವಗಳ ಬಳಕೆಗೆ ಇದು ಸಹಾಯಕವಾಗುತ್ತದೆ.

ಪಿರಿಡಾಕ್ಸಿನ್  (B-6, Pyridoxine): ಇದು ಕೆಂಪು ರಕ್ತ ಜೀವಕೋಶಗಳ ಉತ್ಪಾದನೆಗೆ, ನರಮಂಡಲ, ತ್ವಚೆಯ ಜೀವಕೋಶಗಳ ರಕ್ಷಣೆಗೆ, ಪಿಷ್ಟ ಸಕ್ಕರೆಗಳ ಚಯಾಪಚಯಕ್ಕೆ ಅವಶ್ಯವಾಗಿದೆ. ಇದರ ಅಭಾವದಿಂದ ತುಟಿಯುರಿತ, ನಾಲಗೆಯುರಿತ, ರಕ್ತಹೀನತೆಗಳುಂಟಾಗಬಹುದು.

ಬಯೋಟಿನ್ ( B-7, Biotin): ಪಿಷ್ಟ ಸಕ್ಕರೆ ಮತ್ತು ಎಣ್ಣೆ ಕೊಬ್ಬುಗಳ ಚಯಾಪಚಯಕ್ಕೆ ಇದು ಸಹಾಯಕ.

ಫೋಲಿಕ್ ಆಮ್ಲ  (B-9, Folic acid, folate): ರಕ್ತ ಜೀವಕೋಶಗಳುತ್ಪತ್ತಿ ಅವುಗಳ ಸರಿಯಾದ ಬೆಳವಣಿಗೆಗೆ ಇದು ಅತ್ಯವಶ್ಯ. ಜೀವಕೋಶಗಳ ಕೇಂದ್ರದಲ್ಲಿ (nucleus) ಇರುವ ವರ್ಣತಂತುಗಳು (chromosomes) ಡಿ. ಎನ್. ಎ. (DNA- deoxyribonucleic acid) ಎಂಬ ಅತ್ಯಂತ ಮಹತ್ವದ ಘಟಕದಿಂದ ರಚಿತವಾಗಿದ್ದು, ಡಿ.ಎನ್.ಎ. ಜೀವಕೋಶಗಳ ಕಾರ್ಯಕ್ಕೆ ಅತ್ಯವಶ್ಯ. ಫೋಲಿಕ್ ಆಮ್ಲ ಜೀವಸತ್ವವು  ಡಿ.ಎನ್.ಎ. ಘಟಕದ ಸರಿಯಾದ ಕಾರ್ಯ ನಿರ್ವಹಣೆಗೆ ಅತ್ಯವಶ್ಯಕವಾಗಿದೆ. ಇದರ ಕೊರತೆಯಿಂದ ರಕ್ತಹೀನತೆ, ಹಾಗು ಜೀವಕೋಶಗಳ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಯವಾಗುವದು.

ಸಯನೋಕೊಬಾಲಮೀನ್, ಕೊಬಾಲಮೀನ್  ( B-12, Cyanocobalamin, Cobalamin, Hydroxycobalamin)

ನರಮಂಡಲದ ಕಾರ್ಯಕ್ಕೆ, ಫೋಲಿಕ್ ಆಮ್ಲದ ಬಳಕೆಗೆ, ಜೀವಕೋಶಗಳಲ್ಲಿರುವ ಡಿ. ಎನ್.ಎ. ಘಟಕದ ಉತ್ಪಾದನೆ ಮತ್ತು ಸರಿಯಾದ ಕಾರ್ಯ ನಿರ್ವಹಣೆಗೆ ಇದು ಅವಶ್ಯವಾಗಿದೆ. ಇದರ ಕೊರತೆಯಿಂದ ರಕ್ತಹೀನತೆ, ನರಮಂಡಲದ ಕೆಲವು ರೋಗಗಳು ಬರುತ್ತವೆ.

ಜೀವಸತ್ವಗಳ ಆಹಾರ ಮೂಲಗಳು

ಎಲ್ಲ ಜೀವಸತ್ವಗಳು ಎಲ್ಲ ಆಹಾರ ಪದಾರ್ಥಗಳಲ್ಲಿ ನಮಗೆ ದೊರೆಯಲಾರವು. ಕೆಲವು ಆಹಾರಗಳು ಕೆಲವೊಂದು ಜೀವಸತ್ವಗಳನ್ನು ಹೆಚ್ಚಿಗೆ ಪಡೆದಿರುತ್ತವೆ. ಎಲ್ಲ ಬಗೆಯ ಆಹಾರ ಪದಾರ್ಥಗಳನ್ನು ಸೇವಿಸುವದೇ ಈ ಎಲ್ಲ ಜೀವಸತ್ವಗಳನ್ನು ಪಡೆಯುವ ಮಾರ್ಗವಾಗಿದೆ.

ಜೀವಸತ್ವ ಆಹಾರದ ಮೂಲಗಳು
ಎ- ಜೀವಸತ್ವ ಗಜ್ಜರಿ (ಬೀಟಾ ಕೆರೋಟೀನ್), ತರಕಾರಿ ತೊಪ್ಪಲುಪಲ್ಲೆ, ತತ್ತಿ, ಹಾಲು, ಮೀನು, ಮಾಂಸ, ಯಕೃತ್ತು ಇತ್ಯಾದಿಗಳು
ಡಿ- ಜೀವಸತ್ವ ತ್ವಚೆಯಲ್ಲಿ ಸೂರ್ಯಪ್ರಕಾಶದಲ್ಲಿನ ನೇರಿಳಾತೀತ ಕಿರಣಗಳು ಡಿ ಜೀವಸತ್ವ ತಯಾರಿಸುತ್ತವೆ. ತತ್ತಿ, ಮೀನು, ಯಕೃತ್ತು ಇತ್ಯಾದಿ.
ಈ – ಜೀವಸತ್ವ ಎಣ್ಣೆಗಳು, ಹಸಿರು ಪಲ್ಲೆ, ದವಸಧಾನ್ಯಗಳು, ಕರಟಕಾಯಿಗಳು ಮೀನು ಮಾಂಸಗಳು ಇತ್ಯಾದಿ.
ಕೆ – ಜೀವಸತ್ವ ಹಸಿರು ತರಕಾರಿ, ಮೀನು ಮಾಂಸಗಳು ಇತ್ಯಾದಿ.
ಸಿ – ಜೀವಸತ್ವ ಹಣ್ಣುಗಳು. ಲಿಂಬೆ, ಕಿತ್ತಳೆ , ಮೋಸಂಬಿ, ಪೇರಲ, ಹಸಿರು ತರಕಾರಿ
ಬಿಜೀವಸತ್ವಗಳು:  
ಥಯಾಮೀನ್ (B-1) ಅಕ್ಕಿ, ಗೋದಿ, ಅವರೆ, ಕರಟಕಾಯಿಗಳು, ತತ್ತಿ, ಮೀನು ಇತ್ಯಾದಿ.
ರೈಬೋಫ್ಲೇವಿನ್ (B-2) ಗೋದಿ, ಹಾಲು, ತತ್ತಿ, ಯಕೃತ್ತು ಇತ್ಯಾದಿ
ನಿಯಾಸಿನ್ (B-3,) ಗೋದಿ, ಬಟಾಟೆ, ಕರಟಕಾಯಿಗಳು, ತತ್ತಿ, ಮೀನು, ಮಾಂಸಗಳು
ಪ್ಯಾಂಟೋಥೀನಿಕ್ ಆಮ್ಲ(B-5) ದವಸಧಾನ್ಯಗಳು, ತರಕಾರಿ, ತತ್ತಿ, ಮೀನು, ಮಾಂಸ ಇತ್ಯಾದಿ
ಪಿರಿಡಾಕ್ಸಿನ್ (B-6) ಬಾಳೆ ಹಣ್ಣು, ಬಟಾಟೆ, ಗೋದಿ, ಅವರೆಗಳು, ಮಾಂಸ, ತತ್ತಿ ಇತ್ಯಾದಿ
ಬಯೋಟಿನ್ ( B-7) ಬಾಳೆ ಹಣ್ಣು, ಅವರೆಗಳು, ನೆಲಗಡಲೆ, ಅಣಬೆಗಳು, ಕರಟಕಾಯಿಗಳು ತತ್ತಿ, ಯಕೃತ್ತು ಇತ್ಯಾದಿ
ಫೋಲಿಕ್ ಆಮ್ಲ (B-9) ಹಸಿರು ತೊಪ್ಪಲು ಪಲ್ಲೆ, ತರಕಾರಿಗಳು, ಗೋದಿ, ಕರಟಕಾಯಿಗಳು, ಯಕೃತ್ತು ಇತ್ಯಾದಿ
ಸಯನೋಕೊಬಾಲಮೀನ್ ( B-12) ಹಾಲು, ತತ್ತಿ, ಮೀನು, ಮಾಂಸ, ಯಕೃತ್ತು ಇತ್ಯಾದಿ

ಡಿ ಜೀವಸತ್ವವು (vitamin D) ಮುಖ್ಯವಾಗಿ ಆಹಾರದಿಂದ ನಮಗೆ ದೊರೆಯುವದು.  ಡಿ ಜೀವಸತ್ವದ ಒಂದು ಬಗೆಯನ್ನು ತ್ವಚೆಯ ಜೀವಕೋಶಗಳು ಸೂರ್ಯಪ್ರಕಾಶದಲ್ಲಿನ ನೇರಿಲಾತೀತ ಕಿರಣಗಳ ಪ್ರಚೋದನೆಯಿಂದ ತಯಾರಿಸುತ್ತವೆ. ತ್ವಚೆಯನ್ನು ಹೊಂಬೆಳಕಿನಲ್ಲಿ ಸೂರ್ಯಪ್ರಕಾಶಕ್ಕೆ ತೆರೆದು ಒಡ್ಡಿರುವದು ಆರೋಗ್ಯಕರ.

ಕೆ – ಜೀವಸತ್ವವು (vitamin K) ನಮಗೆ ಆಹಾರದಿಂದಲೇ ದೊರೆಯುತ್ತದೆ. ನಮ್ಮ ಕರುಳಿನಲ್ಲಿ ವಸತಿಮಾಡಿರುವ ಕೆಲವು ಜೀವಾಣುಗಳೂ (bacteria) ಕೆ – ಜೀವಸತ್ವ ಉತ್ಪಾದಿಸುತ್ತವೆ. (ಈ ಜೀವಾಣುಗಳು ರೋಗಜನಕವಲ್ಲ) ಆದರೆ ಇಂಥ ಜೀವಸತ್ವ ಬಳಸಿಕೊಳ್ಳಲು ನಮ್ಮ ದೇಹ ಪೂರ್ತಿ ಸಮರ್ಥವಾಗಿಲ್ಲ.

ಗಜ್ಜರಿಯಲ್ಲಿ ಇರುವ ಬೀಟಾ ಕೆರೋಟೀನ್ (beta carotene) ನಮ್ಮ ದೇಹದಲ್ಲಿ ಎ – ಜೀವಸತ್ವವಾಗಿ ಪರಿವರ್ತಿತವಾಗುತ್ತದೆ.

ಕೆಲವೊಂದು ಕೊರತೆಯ ರೋಗಗಳಲ್ಲಿ, ಪೌಷ್ಟಿಕಾಂಶಗಳ ಅಭಾವದ ಸಂದರ್ಭದಲ್ಲಿ ಮತ್ತು ಕೆಲವು ರೋಗದ ಗಂಭೀರ ಸ್ಥಿತಿಗಳಲ್ಲಿ ವೈದ್ಯರು ರೋಗಿಗೆ ಜೀವಸತ್ವಗಳ ಮಾತ್ರೆ, ಚುಚ್ಚುಮದ್ದು ಕೊಡುತ್ತಾರೆ. ಆದರೆ ಆರೋಗ್ಯವಂತ ವ್ಯಕ್ತಿಯು ಜೀವಸತ್ವಗಳ ಮಾತ್ರೆಗಳನ್ನು ನುಂಗುವದಕ್ಕಿಂತ ಆಹಾರದ ಮೂಲಕ ಎಲ್ಲ ಜೀವಸತ್ವಗಳನ್ನು ಪಡೆಯುವದೇ ಉತ್ತಮ ಎಂದು ತಜ್ಞರು ಹೇಳುತ್ತಾರೆ. ವೈವಿಧ್ಯಮಯ, ಪೌಷ್ಟಿಕ ಆಹಾರ  ಸೇವಿಸುವದು ಆರೋಗ್ಯದಾಯಕ.

ಜೀವಸತ್ವಗಳ ದುಷ್ಪರಿಣಾಮಗಳು:

ಆಹಾರ ಮೂಲದಿಂದ ದೊರೆಯುವ ಜೀವಸತ್ವಗಳ ಪ್ರಮಾಣ ದೇಹಕ್ಕೆ ಹಾನಿಕರವಾಗಿರಲಾರದು. ಆದರೆ ಕೆಲವರು ಅನವಶ್ಯಕವಾಗಿ ಜೀವಸತ್ವಗಳ ಮಾತ್ರೆಗಳನ್ನು ಅತಿಯಾಗಿ ಸೇವಿಸಿ, ಜೀವಸತ್ವಗಳ ದುಷ್ಪರಿಣಾಮಕ್ಕೆ ಬಲಿಯಾಗುತ್ತಾರೆ. (hypervitaminosis).