ವಾಸಿಸಲು ಹಿತಕರವಾದ ಸ್ಥಿತಿಗತಿಗಳು ಭೂಮಿಯ ಮೇಲಿರುವುದರಿಂದ ಜೀವಿಗಳು ಭೂಮಿಯಲ್ಲಿವೆ. ಇತರ ಗ್ರಹಗಳಲ್ಲಿ ಹೀಗಲ್ಲ.

ಸೂರ್ಯನಿಗೆ ಸಮೀಪವಿರುವ ಗ್ರಹ ಬುಧ.  ಇಲ್ಲಿಯವರೆಗಿನ ಸಂಶೋಧನೆಗಳಿಂದ ಬುಧಗ್ರಹದಲ್ಲಿ ವಾತಾವರಣವಿಲ್ಲ ಎಂದು ತಿಳಿದುಬಂದಿದೆ.

ಬುಧ ಗ್ರಹದಲ್ಲಿ ಹಗಲುಹೊತ್ತು ಉಷ್ಣತೆ 400° ಸೆಂಟಿಗ್ರೇಡ್ ಗಿಂತ ಹೆಚ್ಚಾಗಿರುತ್ತದೆ. ರಾತ್ರಿಹೊತ್ತು ಅದು –127° ಸೆ.ಗಿಂತ ಕಡಿಮೆ. ಅಲ್ಲಿ ಜೀವಿಗಳ ವಾಸಕ್ಕೆ ಈ ಸ್ಥಿತಿಗಳು ವಿರೋಧಿ.

ಸೂರ್ಯನಿಗೆ ಹತ್ತಿರವಿರುವ ಎರಡನೆ ಗ್ರಹ ಶುಕ್ರ. ಇದು ಸೂರ್ಯನಿಗೆ 108 ಮಿಲಿಯ ಕಿ.ಮೀ. ದೂರದಲ್ಲಿದೆ. ಗಾತ್ರ, ಸಾಂದ್ರತೆಗಳೆರಡರಲ್ಲೂ ಇದು ಹೆಚ್ಚು ಕಡಿಮೆ ಭೂಮಿಯನ್ನೇ ಹೋಲುತ್ತದೆ. ಶುಕ್ರಗ್ರಹದ ವಾತಾವರಣದಲ್ಲಿ 95%ರಷ್ಟು ಕಾರ್ಬನ್‌ಡೈಆಕ್ಸೈಡ್ ಇದೆಯೆಂದು ಅಂದಾಜು. ಅಲ್ಲಿನ ಸರಾಸರಿ ಉಷ್ಣತೆ 480° ಸೆಂಟಿಗ್ರೇಡ್. ಆದ್ದರಿಂದ ಈ ಗ್ರಹದಲ್ಲೂ ಜೀವಿಗಳು ವಾಸಿಸಲು ಸಾಧ್ಯವಿಲ್ಲ.

ಸೂರ್ಯನ ಮೂರನೆ ಗ್ರಹ ಭೂಮಿ. ಇದು ಸೂರ್ಯನಿಂದ 147 ಮಿಲಿಯನ್ ಕಿ.ಮೀ. ದೂರದಲ್ಲಿದೆ. ಭೂಮಿಯ ಮೇಲಿನ ಸರಾಸರಿ ಉಷ್ಣತೆ 58° ಸೆ. ಗಾಳಿ, ನೀರು, ಬೆಳಕು, ಭೂಮಿಯ ಮೇಲ್ಪದರು ಇವೆಲ್ಲ ಜೀವಿಗಳಿಗೆ ಅನುಕೂಲಕರವಾಗಿವೆ. ಜೀವಿಗಳು ವಾಸಿಸುವ ಸೂರ್ಯ ಮಂಡಲದ ಏಕೈಕ ಗ್ರಹವೂ ಇದುವೇ.

ಸೂರ್ಯನ ನಾಲ್ಕನೆ ಗ್ರಹ ಮಂಗಳ. ಸೂರ್ಯನಿಂದ 249 ಮಿಲಿಯನ್ ಕಿ.ಮೀ. ದೂರದಲ್ಲಿದೆ. ಇದು ಭೂಮಿಗಿಂತ ಬಹಳ ತಂಪು. ಸರಾಸರಿ ಉಷ್ಣತೆ ಹಗಲು ವೇಳೆ 5 ರಿಂದ 15° ಸೆ. ಅದರ ವಾತಾವರಣ ಭೂಮಿ ವಾತಾವರಣಕ್ಕಿಂತ ತೆಳುವಾಗಿದೆ. ಮಂಗಳ ಗ್ರಹದ ವಾತಾವರಣದಲ್ಲಿ ಆರ್ಗನ್ ಸೇಕಡ 1 ರಿಂದ 2, ನೈಟ್ರೊಜನ್ ಸೇಕಡ 2 ರಿಂದ 3 ಮತ್ತು ಸೇಕಡ 95 ರಷ್ಟು ಕಾರ್ಬನ್‌ಡೈಆಕ್ಸೈಡ್ ಇವೆ. ಸೇಕಡ 0.3 ರಷ್ಟು ಮಾತ್ರವೇ ಆಕ್ಸಿಜನ್. ಇಲ್ಲಿಯೂ ಜೀವಿಗಳಿರುವ ಸೂಚನೆಗಳು ಕಂಡುಬಂದಿಲ್ಲ.

ಸೌರ ಕುಟುಂಬದ ಐದನೇ ಸದಸ್ಯ ಗುರು. ಇದು ಸೌರಮಂಡಲದಲ್ಲಿಯೇ ಅತ್ಯಂತ ದೊಡ್ಡ ಅನಿಲ ಗ್ರಹ. ಇದು ಭೂಮಿಯಿಂದ ಕನಿಷ್ಠ 590 ಮಿಲಿಯನ್ ಕಿ.ಮೀ. ದೂರದಲ್ಲಿದೆ. ಇದಕ್ಕೆ ಘನ ಮೇಲ್ಮೈ ಇಲ್ಲ. ಸುತ್ತುವ ಅನಿಲ ಮೋಡಗಳಿಂದ ಈ ಗ್ರಹವು ಮೇಲ್ನೋಟಕ್ಕೆ ಪಟ್ಟಿಗಳಂತೆ ಕಾಣುತ್ತದೆ. ಇಲ್ಲಿಯೂ ಯಾವುದೇ ಜೀವಿಗಳು ವಾಸಿಸುತ್ತಿಲ್ಲ.

ಇನ್ನು ದೂರದ ಶನಿ, ಯುರೇನಸ್, ನೆಪ್ಚೂನ್ ಗ್ರಹಗಳಲ್ಲಿಯೂ ಹವಾಮಾನ ವೈಪರೀತ್ಯದಿಂದ ಜೀವಿಗಳಿಗೆ ಅನುಕೂಲವಾಗುವ ವಾತಾವರಣಗಳಿಲ್ಲ. ನಮ್ಮನ್ನೂ ಒಳಗೊಂಡ ಜೀವಕೋಟಿಗೆ ಇರುವುದೊಂದೇ ಭೂಮಿ. ಅದನ್ನು ಜೀವಿಪರವಾಗಿ ಇಡಲು ಸಂರಕ್ಷಿಸಬೇಕು.